Karnataka Rains: ರಾಜ್ಯಾದ್ಯಂತ ಮಳೆ ಅಬ್ಬರಕ್ಕೆ ಹತ್ತಾರು ಅವಾಂತರ, 6 ಮಂದಿ ಸಾವು – Kannada News | Rain Fury in Karnataka: Six Dead in Vijayapura, Davanagere Heavy Damages Reported Across Districts

ವಿಜಯಪುರದ ಮೊರಗಟಿ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಕುಸಿದಿರುವುದುImage Credit source: tv9

ಬೆಂಗಳೂರು, ಮೇ 15: ಕರ್ನಾಟಕದ (Karnataka) ಹಲವೆಡೆ ಗುರುವಾರ ಮಳೆ ಆರ್ಭಟ ಜೋರಾಗಿತ್ತು. ಗುಡುಗು-ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಕರುನಾಡು ತತ್ತರಿಸಿ ಹೋಗಿದೆ. ದಾವಣಗೆರೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಳೆಗೆ ಆರು ಮಂದಿ ಬಲಿಯಾಗಿದ್ದು, ಹಲವೆಡೆ ಮನೆಗಳ ಮೇಲ್ಛಾವಣಿ ಹಾರಿಹೋಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿರುಗಾಳಿಯ ಆರ್ಭಟಕ್ಕೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ.

ಮುಖ್ಯಾಂಶಗಳು

  • ದಾವಣಗೆರೆಯಲ್ಲಿ ಸಿಡಿಲು ಬಡಿದು 19 ವರ್ಷದ ಕುರಿಗಾಹಿ ಬಲಿ, ವಿಜಯಪುರದಲ್ಲಿ ಮರ ಬಿದ್ದು ವೃದ್ಧ ಸಾವು.
  • ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ‌ ಮೊರಗಟಿ ಗ್ರಾಮದಲ್ಲಿ ಮನೆ ಮೇಲ್ಚಾವಣಿ ಕುಸಿದು ನಾಲ್ವರು ಸಾವು
  • ಮಂಗಳೂರಿನಲ್ಲಿ ಹವಾಮಾನ ವೈಪರೀತ್ಯ: ಲ್ಯಾಂಡಿಂಗ್​ಗೆ ಪರದಾಡಿದ ಎರಡು ವಿಮಾನಗಳು.

ಭಾರಿ ಮಳೆ ಗಾಳಿಗೆ ಮನೆ ಮೇಲ್ಚಾವಣಿ, ಗೋಡೆ ಕುಸಿದು ನಾಲ್ವರು ಸಾವು

ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ‌ ಮೊರಗಟಿ ಗ್ರಾಮದಲ್ಲಿ ಭಾರಿ ಗಾಳಿ ಮಳೆಗೆ ಮನೆಯ ಮೇಲ್ಚಾವಣಿ ಹಾಗೂ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಮತಪಟ್ಟಿದ್ದಾರೆ. ಮೋರಟಗಿ ಗ್ರಾಮದ ಗುರುನಾಥ ಬಡಿಗೇರ(35), ಜ್ಯೋತಿ ಬಡಿಗೇರ(28), ಮಕ್ಕಳಾದ ಕಾಳಮ್ಮ ಬಡಿಗೇರ(13), ಕೀರ್ತಿ ಬಡಿಗೇರ(9) ಮೃತ ದುರ್ದೈವಿಗಳಾಗಿದ್ದಾರೆ.

ಜಿಲ್ಲಾವಾರು ಮಳೆ ಹಾನಿಯ ವಿವರ

ದಾವಣಗೆರೆ ಜಿಲ್ಲೆಯ ಜರೇಕಟ್ಟೆ ಗ್ರಾಮದ ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದ ಅಜಿತ್ (19) ಎಂಬ ಯುವಕ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿಯಲ್ಲಿ ಬಿರುಗಾಳಿಗೆ ಬೃಹತ್ ಮರವೊಂದು ಉರುಳಿ ಬಿದ್ದು ವೃದ್ಧರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೂರಣಕಿ ಗ್ರಾಮದಲ್ಲಿ ಶಾಲೆಯ ಮೇಲ್ಛಾವಣಿ ಹಾರಿಹೋಗಿದ್ದು, ಅದೃಷ್ಟವಶಾತ್ ರಜೆ ಇದ್ದ ಕಾರಣ ಮಕ್ಕಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಅಥಣಿಯ ಸಂಬರಗಿಯಲ್ಲಿ ಬಿರುಗಾಳಿಗೆ ಐದು ಮನೆಗಳ ಮೇಲ್ಛಾವಣಿ ಕುಸಿದು ದವಸ ಧಾನ್ಯಗಳು ನಾಶವಾಗಿವೆ.

ಮಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ರನ್‌ವೇ ಸ್ಪಷ್ಟವಾಗಿ ಕಾಣಿಸದ ಕಾರಣ ಬೆಂಗಳೂರಿನಿಂದ ಬಂದಿದ್ದ ಏರ್ ಇಂಡಿಯಾದ ಎರಡು ವಿಮಾನಗಳು ಸುಮಾರು ಹೊತ್ತು ಆಗಸದಲ್ಲೇ ಗಿರಕಿ ಹೊಡೆದವು. ಹಾವೇರಿ ಜಿಲ್ಲೆಯ ಇಜಾರಿಲಕಮಾಪುರದಲ್ಲಿ ಅಲೆಮಾರಿಗಳ ಗುಡಿಸಲುಗಳು ಗಾಳಿಗೆ ಹಾರಿಹೋಗಿವೆ. ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮರ ಬಿದ್ದು ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಉತ್ತರ ಕನ್ನಡದ ಭಟ್ಕಳ ಮತ್ತು ಹೊನ್ನಾವರದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಕರ್ನಾಟಕ ಹವಾಮಾನ ಮುನ್ಸೂಚನೆ

ಭಾರತೀಯ ಹವಾಮಾನ ಇಲಾಖೆಯ (IMD) ವರದಿಯ ಪ್ರಕಾರ, ರಾಜ್ಯದಲ್ಲಿ ಮೇ 17ರವರೆಗೆ ಮಳೆಯ ಅಬ್ಬರ ಮುಂದುವರಿಯಲಿದೆ. ಬೆಂಗಳೂರು ನಗರ, ಗ್ರಾಮಾಂತರ, ಚಿತ್ರದುರ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲೂ ಮಳೆಯ ಮುನ್ಸೂಚನೆ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *