ಬೆಂಗಳೂರು, ಜೂನ್ 17: ಭಾರತೀಯ ಹವಾಮಾನ ಇಲಾಖೆಯ (IMD) ವರದಿಯ ಪ್ರಕಾರ, ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ (Weather) ಸಾಧ್ಯತೆಯಿದೆ. ಇದರೊಂದಿಗೆ ಕೆಲವು ಭಾಗಗಳಲ್ಲಿ ಬಲವಾದ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಲಾಗಿದೆ.
ಮುಖ್ಯಾಂಶಗಳು
- ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
- ಉತ್ತರ ಒಳನಾಡಿನಲ್ಲಿ ಗಂಟೆಗೆ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದೆ.
- ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಮುನ್ಸೂಚನೆ ಇದೆ.
ಎಲ್ಲೆಲ್ಲಿ ಮಳೆ?
ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸುವ ನಿರೀಕ್ಷೆಯಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಕಲ್ಬುರ್ಗಿ, ಬೀದರ್, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ಆದರೆ, ಬಿರುಗಾಳಿಯ ತೀವ್ರತೆ ಇಲ್ಲಿ ಹೆಚ್ಚಿರಲಿದ್ದು, ವಿಜಯಪುರ, ಕಲ್ಬುರ್ಗಿ, ಬೆಳಗಾವಿ, ಧಾರವಾಡ, ಗದಗ್, ರಾಯಚೂರು, ಬೀದರ್ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಈ ಭಾಗದ ಸಾರ್ವಜನಿಕರು ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಸಾಧಾರಣ ಮಳೆ
ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ಇದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಇದಲ್ಲದೆ ಚಿಕ್ಕಬಳ್ಳಾಪುರ, ಶಿವಮೊಗ್ಗ, ಬಳ್ಳಾರಿ, ಮೈಸೂರು, ದಾವಣಗೆರೆ, ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ.
ಬಿರುಗಾಳಿ ಮತ್ತು ಮಳೆಯ ಮುನ್ಸೂಚನೆ ಇರುವುದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಸಂಚರಿಸುವಾಗ ಜಾಗರೂಕರಾಗಿರಬೇಕು. ವಿಶೇಷವಾಗಿ ಹಳೆಯ ಕಟ್ಟಡಗಳು ಅಥವಾ ಮರಗಳ ಕೆಳಗೆ ಆಶ್ರಯ ಪಡೆಯದಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
