ಬೆಂಗಳೂರಿನಲ್ಲಿ ಎಬಿವಿಪಿ ಭಾರೀ ಪ್ರತಿಭಟನೆImage Credit source: tv9
ಬೆಂಗಳೂರು, ಜುಲೈ 30: ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿಗಳಲ್ಲಿ ನಡೆದಿರುವ ಅಕ್ರಮಗಳನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರು ಬೆಂಗಳೂರಿನಲ್ಲಿ ಗುರುವಾರ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಪಿಎಸ್ಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಶು ವೈದ್ಯಾಧಿಕಾರಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ನೇಮಕಾತಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು.
ಬೆಂಗಳೂರಿನ ಕೆಪಿಎಸ್ಸಿ ಕಚೇರಿಯ ಮುಂದೆ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಪರಿಸ್ಥಿತಿಯನ್ನು ನಿಯಂತ್ರಿಸಲು 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಪ್ರತಿಭಟನಾಕಾರರು ಕಚೇರಿ ಪ್ರವೇಶಿಸುವುದನ್ನು ತಡೆಯಲು ಪೊಲೀಸರು ರಸ್ತೆಗೆ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ತಳ್ಳಾಟ ಹಾಗೂ ನೂಕಾಟ ಸಂಭವಿಸಿದೆ. ಮುತ್ತಿಗೆ ಯತ್ನದ ನಂತರ, ಪೊಲೀಸರು ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಎಬಿವಿಪಿ ಪ್ರತಿಭಟನೆಯ ವಿಡಿಯೋ
ಈ ನೇಮಕಾತಿ ಹಗರಣಗಳು ರಾಜ್ಯಮಟ್ಟದಲ್ಲಿ ದೊಡ್ಡ ಚರ್ಚೆಗೆ ಒಳಗಾಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ. ಪ್ರಸ್ತುತ ಈ ಕುರಿತು ತನಿಖೆ ನಡೆಯುತ್ತಿದೆ. ಇದೇ ಸಂದರ್ಭಲ್ಲಿ, ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆಗೆ ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಕೆಪಿಎಸ್ಸಿ ನೇಮಕಾತಿಗಳಲ್ಲಿ ಪದೇ ಪದೇ ಅಕ್ರಮಗಳು ನಡೆಯುತ್ತಿರುವುದು ವಿದ್ಯಾರ್ಥಿ ಸಮುದಾಯದಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕೆಪಿಎಸ್ಸಿ ಕಚೇರಿಯ ಸುತ್ತ ಬಿಗಿ ಭದ್ರತೆ
ಮತ್ತೊಮ್ಮೆ ಮುತ್ತಿಗೆ ಹಾಕುವ ಸಾಧ್ಯತೆಗಳನ್ನು ಮನಗಂಡ ಪೊಲೀಸರು ಕೆಪಿಎಸ್ಸಿ ಕಚೇರಿಯ ಮುಂಭಾಗದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ವಿಧಾನಸೌಧದ ಸಮೀಪವಿರುವ ಕೆಪಿಎಸ್ಸಿ ಕಚೇರಿಯಿಂದ ಸಿಐಡಿ ಕಚೇರಿಗೆ ಹೋಗುವ ದ್ವಾರದವರೆಗೂ ಸಂಪೂರ್ಣವಾಗಿ ಬ್ಯಾರಿಕೇಡ್ಗಳನ್ನು ಹಾಕಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕಚೇರಿಯ ಸಿಬ್ಬಂದಿಗಳಿಗೆ ಹಾಗೂ ಅನಿವಾರ್ಯ ಕೆಲಸದ ನಿಮಿತ್ತ ಬಂದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.
ಕೆಪಿಎಸ್ಸಿ ಅಕ್ರಮ: ರಾಜ್ಯಾದ್ಯಂತ ವ್ಯಾಪಕ ಆಕ್ರೋಶ
ರಾಜ್ಯಾದ್ಯಂತ ಕೆಪಿಎಸ್ಸಿ ನೇಮಕಾತಿ ಅಕ್ರಮಗಳ ವಿಚಾರವಾಗಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಹೋರಾಟಗಳು ಮತ್ತು ಪ್ರತಿಭಟನೆಗಳು ನಡೆಯುತ್ತಿವೆ. ಈ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸುತ್ತಿವೆ. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರೂ, ಮುಂಜಾಗ್ರತಾ ಕ್ರಮವಾಗಿ ಕೆಪಿಎಸ್ಸಿ ಕಚೇರಿ ಮತ್ತು ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಮುಂದುವರಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ