Lakshmi Puja: ಶುಕ್ರವಾರ ಹೀಗೆ ಮಾಡಿ; ಲಕ್ಷ್ಮಿ ದೇವಿಯ ಕೃಪೆಯಿಂದ ಐಶ್ವರ್ಯ ಮತ್ತು ಸಮೃದ್ಧಿ ನಿಮ್ಮದಾಗುವುದು ಖಚಿತ!

ಸನಾತನ ಧರ್ಮದಲ್ಲಿ ಶುಕ್ರವಾರಕ್ಕೆ ಅತ್ಯಂತ ವಿಶೇಷವಾದ ಮಹತ್ವವಿದೆ. ಈ ದಿನವನ್ನು ಧನ, ಐಶ್ವರ್ಯ ಮತ್ತು ಸೌಭಾಗ್ಯದ ದೇವತೆಯಾದ ಲಕ್ಷ್ಮಿ ದೇವಿಗೆ ಪ್ರೀತಿಪಾತ್ರವಾದ ದಿನವೆಂದು ನಂಬಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು ನಿಯಮಗಳ ಪ್ರಕಾರ, ಶುಕ್ರವಾರದಂದು ಮಾಡುವ ಕೆಲವು ಸರಳವಾದ ಪೂಜೆ ಮತ್ತು ಪರಿಹಾರಗಳು ನಮ್ಮ ಜೀವನದಲ್ಲಿ ಅದ್ಭುತವಾದ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತವೆ.

ವಿಶೇಷವಾಗಿ ಮನೆಯಲ್ಲಿನ ಆರ್ಥಿಕ ಸಂಕಷ್ಟಗಳು ದೂರವಾಗಿ, ಸಂಪತ್ತು ವೃದ್ಧಿಯಾಗಬೇಕೆಂದು ಬಯಸುವವರು ಶುಕ್ರವಾರದಂದು ಭಕ್ತಿಶ್ರದ್ಧೆಗಳಿಂದ ದೇವಿಯನ್ನು ಆರಾಧಿಸಿದರೆ ಶೀಘ್ರದಲ್ಲೇ ಉತ್ತಮ ಫಲಿತಾಂಶಗಳು ಸಿಗುತ್ತವೆ. ಹಾಗಾದರೆ, ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಲು ಶುಕ್ರವಾರದಂದು ಏನೇನು ಮಾಡಬೇಕು ಮತ್ತು ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ.

ಮನೆ ಹಾಗೂ ಪೂಜಾ ಕೋಣೆಯ ಸ್ವಚ್ಛತೆ:

ಲಕ್ಷ್ಮಿ ದೇವಿಯು ಯಾವಾಗಲೂ ಸ್ವಚ್ಛತೆ ಇರುವಲ್ಲಿ ಮಾತ್ರ ನೆಲೆಸುತ್ತಾಳೆ. ಆದ್ದರಿಂದ, ಶುಕ್ರವಾರದಂದು ಸೂರ್ಯೋದಯಕ್ಕೂ ಮುನ್ನವೇ ಎದ್ದು ಮನೆ ಸ್ವಚ್ಛಗೊಳಿಸಬೇಕು. ಮನೆಯ ಮುಖ್ಯ ದ್ವಾರಕ್ಕೆ ಅರಿಶಿನ-ಕುಂಕುಮ ಇಟ್ಟು, ಸುಂದರವಾದ ರಂಗೋಲಿಯನ್ನು ಬಿಡಿಸಬೇಕು. ನಂತರ ಪೂಜಾ ಕೋಣೆಯಲ್ಲಿರುವ ದೇವತೆಗಳ ಫೋಟೋ ಮತ್ತು ವಿಗ್ರಹಗಳನ್ನು ಸ್ವಚ್ಛಗೊಳಿಸಿ, ತಾಜಾ ಹೂವುಗಳಿಂದ ಅಲಂಕರಿಸಬೇಕು.

ಪೂಜಾ ಕೋಣೆಯಲ್ಲಿ ಇಡಬೇಕಾದ ವಿಶೇಷ ವಸ್ತುಗಳು:

ಶಾಸ್ತ್ರಗಳ ಪ್ರಕಾರ, ಪೂಜಾ ಕೋಣೆಯಲ್ಲಿ ಕೇವಲ ದೇವರ ಫೋಟೋಗಳಷ್ಟೇ ಅಲ್ಲದೆ, ಲಕ್ಷ್ಮಿ ದೇವಿಗೆ ಪ್ರಿಯವಾದ ಕೆಲವು ವಿಶೇಷ ವಸ್ತುಗಳನ್ನು ಇಡುವುದರಿಂದ ದೇವಿಯು ನಿಮ್ಮ ಮನೆಯಲ್ಲೇ ಶಾಶ್ವತವಾಗಿ ನೆಲೆಸುತ್ತಾಳೆ. ಲಕ್ಷ್ಮಿ ದೇವಿಗೆ ಕವಡೆಗಳೆಂದರೆ ಅಪಾರ ಪ್ರೀತಿ. ಪೂಜಾ ಕೋಣೆಯಲ್ಲಿ 6 ಅಥವಾ 9 ಹಳದಿ ಬಣ್ಣದ ಕವಡೆಗಳನ್ನು ಇಟ್ಟರೆ ಧನಲಾಭ ಉಂಟಾಗುತ್ತದೆ. ಇದಲ್ಲದೇ ಪೂಜಾ ಕೋಣೆಯಲ್ಲಿ ಕಾಮಧೇನು (ಹಸು ಮತ್ತು ಕರು ಒಟ್ಟಿಗಿರುವ) ವಿಗ್ರಹ ಅಥವಾ ಚಿತ್ರಪಟವನ್ನು ಇಡುವುದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗಿ ಐಶ್ವರ್ಯ ವೃದ್ಧಿಯಾಗುತ್ತದೆ. ಇದಲ್ಲದೇ ಒಂದು ಸಣ್ಣ ಪಾತ್ರೆಯಲ್ಲಿ ಅಥವಾ ಡಬ್ಬಿಯಲ್ಲಿ ಪಚ್ಚಕರ್ಪೂರ, 9 ಏಲಕ್ಕಿ ಮತ್ತು 9 ಲವಂಗಗಳನ್ನು ಒಟ್ಟಿಗೆ ಇಡಿ. ಇದರಿಂದ ಹೊರಹೊಮ್ಮುವ ದಿವ್ಯ ಸುಗಂಧವು ಲಕ್ಷ್ಮಿ ದೇವಿಯನ್ನು ಆಕರ್ಷಿಸುತ್ತದೆ. ಪಾದರಸದ ಶಿವಲಿಂಗ ಅಥವಾ ಗುಳಿಕೆಯನ್ನು ಶ್ರೀಗಂಧದ ತುಂಡಿನೊಂದಿಗೆ ಪೂಜಾ ಕೋಣೆಯಲ್ಲಿ ಇಡುವುದರಿಂದ ಶಿವ ಮತ್ತು ಲಕ್ಷ್ಮಿ ಇಬ್ಬರ ಅನುಗ್ರಹವೂ ಏಕಕಾಲದಲ್ಲಿ ದೊರೆಯುತ್ತದೆ. ಪೂಜಾ ಕೋಣೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ನವಗ್ರಹ ದೋಷಗಳು ನಿವಾರಣೆಯಾಗಿ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿ (ನೆಗೆಟಿವ್ ಎನರ್ಜಿ) ನಾಶವಾಗುತ್ತದೆ.

ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?

ಶುಕ್ರವಾರ ಮಾಡಬೇಕಾದ ವಿಶೇಷ ಪೂಜಾ ವಿಧಾನ:

  • ದೀಪಾರಾಧನೆ: ಶುಕ್ರವಾರ ಸಾಯಂಕಾಲದ ಪ್ರದೋಷ ಕಾಲದಲ್ಲಿ (ಸೂರ್ಯಾಸ್ತದ ಸಮಯ) ಮನೆಯ ಮುಖ್ಯ ದ್ವಾರದ ಬಳಿ ಮತ್ತು ಪೂಜಾ ಕೋಣೆಯಲ್ಲಿ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಬೇಕು. ಇದು ಮನೆಯೊಳಗೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಅರ್ಚನೆ ಮತ್ತು ಪಾರಾಯಣ: ಸಾಧ್ಯವಾದರೆ ಲಕ್ಷ್ಮಿ ದೇವಿಯ ವಿಗ್ರಹಕ್ಕೆ ಅಥವಾ ಶ್ರೀಚಕ್ರಕ್ಕೆ ಅರಿಶಿನ ಮಿಶ್ರಿತ ಅಕ್ಷತೆ ಅಥವಾ ಬೆಳ್ಳಿಯ ಹೂವುಗಳಿಂದ ಅರ್ಚನೆ ಮಾಡಬೇಕು. ಮುತ್ತೈದೆಯರು ಕುಂಕುಮಾರ್ಚನೆ ಮಾಡುವುದು ಶ್ರೇಷ್ಠ. ಈ ದಿನ ‘ಕನಕಧಾರಾ ಸ್ತೋತ್ರ’, ‘ಶ್ರೀಸೂಕ್ತ’ ಅಥವಾ ‘ಲಕ್ಷ್ಮಿ ಅಷ್ಟೋತ್ತರ’ವನ್ನು ಪಠಿಸಬೇಕು.
  • ನೈವೇದ್ಯ: ದೇವಿಗೆ ಹಾಲಿನ ಪಾಯಸ (ಕ್ಷೀರಾನ್ನ) ಅಥವಾ ಪಚ್ಚಕರ್ಪೂರ ಹಾಕಿದ ಸಿಹಿಯನ್ನು ನೈವೇದ್ಯವಾಗಿ ಸಮರ್ಪಿಸಬೇಕು.

ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ:

  • ಶುಕ್ರವಾರದ ದಿನ ಯಾರಿಗೂ ಸಾಲವನ್ನು ನೀಡಬಾರದು ಮತ್ತು ಯಾರಿಂದಲೂ ಸಾಲವನ್ನು ಪಡೆಯಬಾರದು. ಹೀಗೆ ಮಾಡುವುದರಿಂದ ಕೈಯಲ್ಲಿರುವ ಲಕ್ಷ್ಮಿ ದೂರವಾಗುತ್ತಾಳೆ ಎಂಬ ನಂಬಿಕೆಯಿದೆ.
  • ಸಾಯಂಕಾಲದ ಸಮಯದಲ್ಲಿ ಮನೆಯನ್ನು ಕತ್ತಲಾಗಿ ಇಡಬಾರದು. ಕನಿಷ್ಠ ಪಕ್ಷ ಒಂದು ಸಣ್ಣ ದೀಪವನ್ನಾದರೂ ಹಚ್ಚಬೇಕು.
  • ಶುಕ್ರವಾರದಂದು ಮನೆಯಲ್ಲಿ ಜಗಳವಾಡುವುದು, ಕಿರುಚಾಡುವುದು ಅಥವಾ ಯಾರನ್ನಾದರೂ ನಿಂದಿಸುವುದನ್ನು ಮಾಡಬಾರದು. ಕೋಪ ಮತ್ತು ಅಶಾಂತಿ ಇರುವ ಜಾಗದಿಂದ ಲಕ್ಷ್ಮಿ ದೇವಿ ಹೊರಟುಹೋಗುತ್ತಾಳೆ.

ಪೂರ್ಣ ನಂಬಿಕೆ ಮತ್ತು ಭಕ್ತಿಯಿಂದ ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಆರಾಧಿಸಿ, ಈ ಸರಳ ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುವುದರ ಜೊತೆಗೆ ಅಷ್ಟೈಶ್ವರ್ಯಗಳು ನಿಮ್ಮದಾಗುವುದು ಖಂಡಿತ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *