Love Mocktail 3 Review: ನಗಿಸುತ್ತಾ ಅಳಿಸುವ ತಂದೆ-ಮಗಳ ಎಮೋಷನಲ್ ಕಹಾನಿ

Love Mocktail 3 Review: ನಗಿಸುತ್ತಾ ಅಳಿಸುವ ತಂದೆ-ಮಗಳ ಎಮೋಷನಲ್ ಕಹಾನಿ

ಡಾರ್ಲಿಂಗ್ ಕೃಷ್ಣ ಅವರು ನಟಿಸಿ, ನಿರ್ದೇಶನ ಮಾಡಿದ ‘ಲವ್ ಮಾಕ್ಟೇಲ್’ ಚಿತ್ರಕ್ಕೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಇದರ ಮೂರನೇ ಇನ್​ಸ್ಟಾಲ್​ಮೆಂಟ್ ಈಗ ಬಿಡುಗಡೆ ಆಗಿದೆ. ಹೌದು, ಮಾರ್ಚ್ 19ರಂದು ‘ಲವ್ ಮಾಕ್ಟೇಲ್ 3’ (Love Mocktail 3) ತೆರೆಕಂಡಿದೆ. ಟ್ರೇಲರ್​​ನಲ್ಲಿ ಕಥೆಯ ಬಗ್ಗೆ ಹೆಚ್ಚೇನೂ ಬಿಟ್ಟುಕೊಟ್ಟಿರಲಿಲ್ಲ. ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರಿಗೆ ಅಪ್ಪ-ಮಗಳ ಎಮೋಷನಲ್ ಕಹಾನಿ ಕಾಣಿಸುತ್ತದೆ. ಎಮೋಷನಲ್ ದೃಶ್ಯಗಳ ಜೊತೆಗೆ ಕಾಮಿಡಿಗೂ ಕೊರತೆ ಮಾಡಿಲ್ಲ. ‘ಲವ್ ಮಾಕ್ಟೇಲ್ 3’ ವಿಮರ್ಶೆ (Love Mocktail 3 Movie Review) ಇಲ್ಲಿದೆ..

ಯಾವುದೇ ಸಿನಿಮಾಗೆ ಸೀಕ್ವೆಲ್ ಮಾಡಿದಾಗ ಸೇಮ್ ಶೈಲಿಯನ್ನು ಮುಂದುವರಿಸುವುದು ಸಹಜ. ಆದರೆ ಡಾರ್ಲಿಂಗ್ ಕೃಷ್ಣ ಅವರು ಪ್ರತಿ ಸೀಕ್ವೆಲ್ ಮಾಡಿದಾಗಲೂ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತಾರೆ. ‘ಲವ್ ಮಾಕ್ಟೇಲ್’ ಚಿತ್ರದ ಕಥೆ ‘ಲವ್ ಮಾಕ್ಟೇಲ್ 2’ ಸಿನಿಮಾದಲ್ಲಿ ಮುಂದುವರಿಯಿತು. ಆದರೆ ಸ್ವಲ್ಪ ಗಂಭೀರತೆಯನ್ನು ಪಡೆದುಕೊಂಡಿತ್ತು. ಈಗ ‘ಲವ್ ಮಾಕ್ಟೇಲ್ 3’ ಚಿತ್ರದಲ್ಲಿ ಕೂಡ ಕಥೆ ಮತ್ತು ಪಾತ್ರಗಳು ಮುಂದುವರಿದಿವೆ. ಈ ಬಾರಿ ಪ್ರೇಕ್ಷಕರಿಗೆ ಬೇರೆಯದೇ ಫೀಲ್ ನೀಡಲು ಡಾರ್ಲಿಂಗ್ ಕೃಷ್ಣ ಅವರು ಪ್ರಯತ್ನಿಸಿದ್ದಾರೆ.

ಪತ್ನಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ಆದಿ, ಒಂದು ಹೆಣ್ಣು ಮಗುವನ್ನು ದತ್ತು ಪಡೆದುಕೊಳ್ಳುವಲ್ಲಿಗೆ ‘ಲವ್ ಮಾಕ್ಟೇಲ್ 2’ ಕಥೆ ಮುಗಿದಿತ್ತು. ನಂತರ ಆದಿ ಬದುಕಿನಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದನ್ನು ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ತೋರಿಸಲಾಗಿದೆ. ಇಡೀ ಸಿನಿಮಾದಲ್ಲಿ ತಂದೆ-ಮಗಳ ಪ್ರೀತಿಯೇ ಹೈಲೈಟ್ ಆಗಿದೆ. ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ಹುಡುಗಾಟಿಕೆ ಮಾಡುತ್ತಿದ್ದ ಆದಿ ಪಾತ್ರ ‘ಲವ್ ಮಾಕ್ಟೇಲ್ 3’ ಬರುವ ವೇಳೆಗೆ ತುಂಬಾ ಮಾಗಿದೆ. ಹೆಣ್ಣು ಮಗುವಿನ ತಂದೆಯಾಗಿ ನೋಡುಗರ ಕಣ್ಣುಗಳನ್ನು ತೇವವಾಗಿಸುವ ಆದಿ, ಈ ಬಾರಿ ಫ್ಯಾಮಿಲಿ ಪ್ರೇಕ್ಷಕರಿಗೆ ಹೆಚ್ಚು ಇಷ್ಟ ಆಗುತ್ತಾನೆ.

‘ಲವ್ ಮಾಕ್ಟೇಲ್ 3’ ಸಿನಿಮಾದ ಮೊದಲಾರ್ಧಕ್ಕೂ ದ್ವಿತೀಯಾರ್ಧಕ್ಕೂ ಬಹಳ ವ್ಯತ್ಯಾಸ ಇದೆ. ಫಸ್ಟ್ ಹಾಫ್​ನಲ್ಲಿ ಮಗಳ ತರಲೆ, ತುಂಟತನ, ತಮಾಷೆಗಳೇ ತುಂಬಿಕೊಂಡಿವೆ. ಈ ಪಾತ್ರವನ್ನು ಬಾಲನಟಿ ಸಂವೃತಾ ನಿಭಾಯಿಸಿದ್ದಾಳೆ. ಆಕೆಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ಆಕೆಯ ಪಾತ್ರಕ್ಕೆ ಎರಡು ಹೆಸರಿದೆ. ಒಂದು ನಿಧಿಮಾ, ಇನ್ನೊಂದು ರಮ್ಯಾ. ಸಿನಿಮಾದಲ್ಲಿ ಎಲ್ಲಿಯವರೆಗೆ ಆ ಪಾತ್ರ ನಿಧಿಮಾ ಆಗಿರುತ್ತದೋ ಅಲ್ಲಿಯವರೆಗೂ ಪ್ರೇಕ್ಷಕ ನಗುತ್ತಾನೆ. ಆ ಪಾತ್ರದ ಹೆಸರು ರಮ್ಯಾ ಎಂದು ಬದಲಾಗುವ ಸಮಯ ಬಂದಾಗ ಪ್ರೇಕ್ಷಕ ಎಮೋಷನಲ್ ಆಗುತ್ತಾನೆ! ಯಾಕೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ತಿಳಿಯಬೇಕು.

ಮೊದಲಾರ್ಧ ಸ್ವಲ್ಪ ಜಾಳು ಎನಿಸಿದರೂ ದ್ವಿತೀಯಾರ್ಧವನ್ನು ಬಿಗಿಯಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಡಾರ್ಲಿಂಗ್ ಕೃಷ್ಣ. ಫ್ಲ್ಯಾಶ್​ಬ್ಯಾಕ್ ತೆರೆದುಕೊಂಡಾಗ ಕಥೆಯ ಗಂಭೀರತೆ ಹೆಚ್ಚುತ್ತದೆ. ಅಪ್ಪ, ಮಗಳು, ಶಾಲೆ, ಸ್ನೇಹಿತರ ನಡುವೆ ತಮಾಷೆಯಾಗಿ ಸುತ್ತುತ್ತಿದ್ದ ಕಥೆ ಏಕಾಏಕಿ ಕೋರ್ಟ್ ಕಟಕಟೆಗೆ ಬಂದು ನಿಲ್ಲುತ್ತದೆ. ಈಗಾಗಲೇ ಎಲ್ಲವನ್ನೂ ಕಳೆದುಕೊಂಡಿರುವ ಆದಿ ಈಗ ಮಗಳನ್ನೂ ಕಳೆದುಕೊಳ್ಳುತ್ತಾನಾ ಎಂಬ ಪ್ರಶ್ನೆ ಮೂಡುತ್ತದೆ. ಮುಂದೇನಾಗಬಹುದು ಎಂಬ ಕುತೂಹಲದಿಂದಾಗಿ ಈ ಸಿನಿಮಾ ಕೊನೆವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.

ಇದನ್ನೂ ಓದಿ: ಇದನ್ನು ನಿರೀಕ್ಷಿಸಿರಲಿಲ್ಲ; ‘ಲವ್ ಮಾಕ್ಟೇಲ್ 3’ ಸಿನಿಮಾ ಸೂಪರ್ ಎಂದ ಸೆಲೆಬ್ರಿಟಿಗಳು

ಯಾವುದೇ ಗೊಂದಲ ಇಲ್ಲದೇ ಕೆಲವೇ ಕೆಲವು ಪಾತ್ರಗಳ ಮೂಲಕ ಡಾರ್ಲಿಂಗ್ ಕೃಷ್ಣ ಅವರು ಕಥೆ ಹೇಳಿ ಮುಗಿಸಿದ್ದಾರೆ. ‘ಲವ್ ಮಾಕ್ಟೇಲ್’ ಪ್ರಪಂಚಕ್ಕೆ ಒಂದೆರಡು ಹೊಸ ಪಾತ್ರಗಳು ಕೂಡ ಎಂಟ್ರಿ ನೀಡಿವೆ. ಈ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಸಂದೇಶ ನೀಡುವ ಪ್ರಯತ್ನವನ್ನೂ ಡಾರ್ಲಿಂಗ್ ಕೃಷ್ಣ ಮಾಡಿದ್ದಾರೆ. ಬಾಲ ನಟಿ ಸಂವೃತಾ ಹೆಚ್ಚು ಇಷ್ಟ ಆಗುತ್ತಾಳೆ. ಕೆಲವು ಕಡೆಗಳಲ್ಲಿ ಆ ಪಾತ್ರದ ವಯಸ್ಸಿಗೂ ಮೀರಿದ ಸಂಭಾಷಣೆ ಮತ್ತು ದೃಶ್ಯಗಳಿಂದಾಗಿ ಸ್ವಲ್ಪ ಅಸಹಜ ಎನಿಸುತ್ತದೆ.

ಒಟ್ಟಾರೆಯಾಗಿ ಫ್ಯಾಮಿಲಿ ಪ್ರೇಕ್ಷಕರನ್ನು ‘ಲವ್ ಮಾಕ್ಟೇಲ್ 3’ ಸಿನಿಮಾ ಸೆಳೆದುಕೊಳ್ಳುತ್ತದೆ. ಮೊದಲಾರ್ಧವನ್ನು ಇನ್ನಷ್ಟು ಉತ್ತಮವಾಗಿಸುವ ಅವಕಾಶ ನಿರ್ದೇಶಕರಿಗೆ ಇತ್ತು ಎನಿಸುತ್ತದೆ. ಆ ಬಗ್ಗೆ ಗಮನ ಹರಿಸಬಹುದಿತ್ತು. ಸಂಗೀತ, ಸಂಕಲನ, ಛಾಯಾಗ್ರಹಣ ಮುಂತಾದ ತಾಂತ್ರಿಕ ವಿಭಾಗಗಳಲ್ಲಿ ಈ ಸಿನಿಮಾ ಅಚ್ಚುಕಟ್ಟಾಗಿದೆ. ಮಿಲನಾ ನಾಗರಾಜ್ ಅವರು ಹೀಗೆ ಬಂದು ಹಾಗೆ ಮಾಯವಾಗುತ್ತಾರೆ. ಅವರ ಅಭಿಮಾನಿಗಳಿಗೆ ಇದೊಂದು ಕೊರತೆ ಎನಿಸಹುದು. ಜಗ್ಗ ಮಮ್ಮಿ ಎಂಬ ಪಾತ್ರ ಮಾಡಿರುವ ಜಗದೀಶ್ ಅವರು ಹೆಚ್ಚು ನಗಿಸುತ್ತಾರೆ. ಅವರಿಗೆ ಅಭಿಲಾಷ್ ಮತ್ತು ಸಂವೃತಾ ಚೆನ್ನಾಗಿ ಸಾಥ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *