ಐಪಿಎಲ್ 2026 (IPL 2026) ರ 50 ನೇ ಲೀಗ್ ಪಂದ್ಯವು ಲಕ್ನೋದ ಎಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ರಜತ್ ಪಟಿದಾರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಲಕ್ನೋ ತಂಡ ತನ್ನ ತವರಿನಲ್ಲಿ ಮೊದಲು ಬ್ಯಾಟಿಂಗ್ ಮಾಡಲಿದೆ. ಟಾಸ್ ಜೊತೆಗೆ ಉಭಯ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಆರ್‌ಸಿಬಿ ತಂಡದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಆದರೆ ಲಕ್ನೋ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಅದರಲ್ಲಿ ಕಳೆದ ಪಂದ್ಯದಲ್ಲಷ್ಟೇ ಐಪಿಎಲ್ ಅಂಗಳಕ್ಕಿಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಜೋಶ್ ಇಂಗ್ಲಿಸ್ ಕೂಡ ಸೇರಿದ್ದಾರೆ.
ಲಕ್ನೋ ತಂಡಕ್ಕೆ ಆಘಾತ
ಲಕ್ನೋ ವೇಗದ ಬೌಲರ್ ಮೊಹ್ಸಿನ್ ಖಾನ್ ಗಾಯದ ಕಾರಣದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಅವರ ಬದಲಿಗೆ ಮಯಾಂಕ್ ಯಾದವ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ನಿರೀಕ್ಷೆಯಿದೆ. ಮೇಲೆ ಹೇಳಿದಂತೆ ಜೋಶ್ ಇಂಗ್ಲಿಸ್ ಕೂಡ ಗಾಯಗೊಂಡಿದ್ದು, ಅವರ ಸ್ಥಾನದಲ್ಲಿ ಅರ್ಶಿನ್ ಕುಲಕರ್ಣಿ ಆಡುತ್ತಿದ್ದಾರೆ. ಮಣಿಮಾರನ್ ಸಿದ್ಧಾರ್ಥ್ ಬದಲಿಗೆ ಶಹಬಾಜ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದಾಗ್ಯೂ ಜೋಶ್ ಇಂಗ್ಲಿಸ್ ಅವರ ಗಾಯವು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
8.6 ಕೋಟಿ ರೂ. ಖರೀದಿ
ಈ ಆವೃತ್ತಿಯಲ್ಲಿ ಜೋಶ್ ಇಂಗ್ಲಿಸ್ ಲಕ್ನೋ ಸೂಪರ್ ಜೈಂಟ್ಸ್ ಪರ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದಾರೆ. ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೈದಾನಕ್ಕಿಳಿದಿದ್ದ ಇಂಗ್ಲಿಸ್ ಆ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಇನ್ನು ಈ ಪಂದ್ಯಕ್ಕೂ ಮೊದಲು ಇಂಗ್ಲಿಸ್ ತಮ್ಮ ಮದುವೆಯ ಕಾರಣ ನೀಡಿ ಐಪಿಎಲ್ ಮೊದಲಾರ್ಧಕ್ಕೆ ಲಭ್ಯವಿರಲಿಲ್ಲ. ಐಪಿಎಲ್ ಹರಾಜಿನ ಮೊದಲು ಇಂಗ್ಲಿಸ್ ತಮ್ಮ ವಿವಾಹದ ಕಾರಣದಿಂದಾಗಿ ತಮ್ಮ ಸೀಮಿತ ಲಭ್ಯತೆಯ ಬಗ್ಗೆ ಫ್ರಾಂಚೈಸಿಗೆ ತಿಳಿಸಿದ್ದರು. ಆದರೆ ಈಗ, ಕೇವಲ ಒಂದು ಪಂದ್ಯವನ್ನು ಆಡಿದ ನಂತರ, ಅವರು ಗಾಯಗೊಂಡಿದ್ದಾರೆ. ಹರಾಜಿನಲ್ಲಿ ಇಂಗ್ಲಿಸ್ ಅವರನ್ನು ಖರೀದಿಸಲು ಲಕ್ನೋ ಮತ್ತು ಹೈದರಾಬಾದ್ ನಡುವೆ ತೀವ್ರ ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಲಕ್ನೋ 8.6 ಕೋಟಿ ರೂ. ನೀಡಿ ಇಂಗ್ಲಿಸ್ ಅವರನ್ನು ಖರೀದಿಸಿತ್ತು.
ಉಭಯ ತಂಡಗಳ ಪ್ಲೇಯಿಂಗ್ 11
ಲಕ್ನೋ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಅರ್ಶಿನ್ ಕುಲಕರ್ಣಿ, ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಮ್, ರಿಷಭ್ ಪಂತ್ (ವಿಕೆಟ್ ಕೀಪರ್/ನಾಯಕ), ಅಕ್ಷತ್ ರಘುವಂಶಿ, ಹಿಮ್ಮತ್ ಸಿಂಗ್, ಶಹಬಾಜ್ ಅಹ್ಮದ್, ದಿಗ್ವೇಶ್ ಸಿಂಗ್ ರಥಿ, ಮೊಹಮ್ಮದ್ ಶಮಿ, ಪ್ರಿನ್ಸ್ ಯಾದವ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ರೊಮಾರಿಯೋ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಾಶ್ ಶರ್ಮಾ, ರಾಸಿಖ್ ಸಲಾಮ್ ದಾರ್, ಜೋಶ್ ಹೇಜಲ್‌ವುಡ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 7:57 pm, Thu, 7 May 26
