Mana Jampal: 9ನೇ ವಯಸ್ಸಿನಲ್ಲೇ Python ಕಲಿತು, 12ನೇ ವಯಸ್ಸಿನಲ್ಲಿ AI ಕಂಪನಿ ಸ್ಥಾಪಿಸಿದ ಬಾಲಕಿ – Kannada News | 12 Year Old Girl Founds AI Startup Voxa After Learning Python at Just 9

ನವದೆಹಲಿ: ಸಾಮಾನ್ಯವಾಗಿ 12ನೇ ವಯಸ್ಸಿನಲ್ಲಿ ಮಕ್ಕಳು ಶಾಲೆಗೆ ಹೋಗುವುದು, ಸ್ನೇಹಿತರೊಂದಿಗೆ ಆಟವಾಡುವುದು, ಟಿವಿ ನೋಡುವುದು ಸೇರಿದಂತೆ ತಮ್ಮದೇ ಆದ ಪ್ರಪಂಚದಲ್ಲಿ ತೊಡಗಿರುತ್ತಾರೆ. ಆದರೆ ಮನ ಜಂಪಲ್​(Mana Jampal) ಎಂಬ ಬಾಲಕಿ ಮಾತ್ರ ಈ ವಯಸ್ಸಿನಲ್ಲೇ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾಳೆ. ಕೇವಲ 12ನೇ ವಯಸ್ಸಿನಲ್ಲೇ AI ಆಧಾರಿತ ಸ್ಟಾರ್ಟ್ಅಪ್‌ ಒಂದನ್ನು ಸ್ಥಾಪಿಸಿರುವ ಆಕೆ, ತಂತ್ರಜ್ಞಾನ ಲೋಕದಲ್ಲಿ ಅನೇಕರ ಗಮನ ಸೆಳೆದಿದ್ದಾಳೆ.

9ನೇ ವಯಸ್ಸಿನಲ್ಲೇ Python ಕಲಿಕೆ:

ಮನ ಜಂಪಲ್​​ನ ತಂತ್ರಜ್ಞಾನದ ಪ್ರಯಾಣ ಬಹಳ ಚಿಕ್ಕ ವಯಸ್ಸಿನಲ್ಲೇ ಆರಂಭವಾಯಿತು. ಆಕೆ ಕೇವಲ 9ನೇ ವಯಸ್ಸಿನಲ್ಲೇ Python ಕೋಡಿಂಗ್ ಕಲಿಯಲು ಆರಂಭಿಸಿದಳು. 10ನೇ ವಯಸ್ಸಿಗೆ ತಂತ್ರಜ್ಞಾನದ ಹಲವು ವಿಷಯಗಳಲ್ಲಿ ಪರಿಣತಿ ಪಡೆಯಲು ಮುಂದಾದಳು. 11ನೇ ವಯಸ್ಸಿನಲ್ಲಿ AI ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಆರಂಭಿಸಿ, ಇದೀಗ ತಮ್ಮದೇ ಆದ ‘Voxa’ ಎಂಬ AI ಸ್ಟಾರ್ಟ್ಅಪ್‌ ಅನ್ನು ಸ್ಥಾಪಿಸಿದ್ದಾಳೆ.

ತಂದೆಯ ಕಚೇರಿಯಿಂದ ಹುಟ್ಟಿದ AI ಕಂಪನಿ:

ಮನ AI ಕಂಪನಿಯ ಹಿಂದಿನ ಕಲ್ಪನೆಯೂ ಕುತೂಹಲಕಾರಿಯಾಗಿದೆ. ತಮ್ಮ ತಂದೆಯ ಕಚೇರಿಗೆ ಭೇಟಿ ನೀಡುತ್ತಿದ್ದ ವೇಳೆ, ಅಲ್ಲಿನ ಉದ್ಯೋಗಿಗಳು ಗ್ರಾಹಕರ ಕರೆಗಳಿಗೆ ಉತ್ತರಿಸುವುದು, ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದು ಮತ್ತು ಇತರ ಕೆಲಸಗಳಲ್ಲಿ ನಿರತರಾಗಿರುವುದನ್ನು ಅವರು ಗಮನಿಸಿದರು. ಕೆಲಸದ ಒತ್ತಡದಿಂದಾಗಿ ಸಿಬ್ಬಂದಿಗೆ ಪ್ರತಿಯೊಂದು ಫೋನ್ ಕರೆಯನ್ನು ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಕೆಲವು ಗ್ರಾಹಕರು ಸರಿಯಾದ ಸಮಯದಲ್ಲಿ ಸೇವೆ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಗೆ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಈ ಹುಡುಗಿ ಯೋಚಿಸಿದಳು. ಈ ಆಲೋಚನೆಯಿಂದಲೇ Voxa ಹುಟ್ಟಿಕೊಂಡಿತು.

24 ಗಂಟೆಯೂ ಕೆಲಸ ಮಾಡುವ AI ಸ್ವಾಗತಕಾರ:

Voxa ಒಂದು AI ಆಧಾರಿತ ವರ್ಚುವಲ್ ರಿಸೆಪ್ಷನಿಸ್ಟ್ ಆಗಿ ಕಾರ್ಯನಿರ್ವಹಿಸುತ್ತದೆ. ಗ್ರಾಹಕರ ಫೋನ್ ಕರೆಗಳಿಗೆ ದಿನದ 24 ಗಂಟೆಯೂ ಉತ್ತರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದು ಕೇವಲ ಕರೆ ಸ್ವೀಕರಿಸುವುದಷ್ಟೇ ಅಲ್ಲ. ಗ್ರಾಹಕರಿಗೆ ಅಗತ್ಯವಿರುವ ಮಾಹಿತಿಯನ್ನು ನೀಡುವುದು, ಅಪಾಯಿಂಟ್‌ಮೆಂಟ್‌ಗಳನ್ನು ಬುಕ್ ಮಾಡುವುದು, ರೆಸ್ಟೋರೆಂಟ್‌ಗಳಲ್ಲಿ ಆರ್ಡರ್‌ಗಳನ್ನು ಸ್ವೀಕರಿಸುವುದು ಹಾಗೂ ಗ್ರಾಹಕರೊಂದಿಗೆ ಫಾಲೋ-ಅಪ್ ಮಾಡುವುದು ಸೇರಿದಂತೆ ಹಲವು ಕೆಲಸಗಳನ್ನು ನಿರ್ವಹಿಸಬಹುದು. ಇದರಿಂದ ಉದ್ಯಮಗಳಿಗೆ ಗ್ರಾಹಕರ ಸೇವೆಯನ್ನು ನಿರಂತರವಾಗಿ ಮುಂದುವರಿಸಲು ಸಾಧ್ಯವಾಗುತ್ತದೆ.

ಕೆನಡಾ, ಭಾರತ, ಕಾಂಬೋಡಿಯಾದಲ್ಲೂ ಸೇವೆ:

ಈ AI ಸ್ಟಾರ್ಟ್ಅಪ್ ಈಗಾಗಲೇ ಹಲವು ದೇಶಗಳ ವ್ಯವಹಾರಗಳ ಗಮನ ಸೆಳೆದಿದೆ. ಕೆನಡಾ, ಭಾರತ ಮತ್ತು ಕಾಂಬೋಡಿಯಾ ಸೇರಿದಂತೆ ವಿವಿಧ ದೇಶಗಳಲ್ಲಿನ ಕೆಲವು ವ್ಯವಹಾರಗಳು Voxa ಸೇವೆಗಳನ್ನು ಬಳಸುತ್ತಿವೆ ಎಂದು ತಿಳಿದುಬಂದಿದೆ. ಸಣ್ಣ ಹಾಗೂ ಮಧ್ಯಮ ಪ್ರಮಾಣದ ವ್ಯವಹಾರಗಳಿಗೆ ಗ್ರಾಹಕರ ಕರೆಗಳನ್ನು ನಿರ್ವಹಿಸುವುದು ಮತ್ತು ದೈನಂದಿನ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುವಲ್ಲಿ ಈ ತಂತ್ರಜ್ಞಾನ ನೆರವಾಗುತ್ತಿದೆ.

ChatGPT, Claude ಬಳಸಿ ಕೋಡಿಂಗ್ ಕಲಿಕೆ:

ತನ್ನ AI ಉತ್ಪನ್ನವನ್ನು ಅಭಿವೃದ್ಧಿಪಡಿಸುವಾಗ ಮನ ಯಾರನ್ನೂ ಸಂಪೂರ್ಣವಾಗಿ ಅವಲಂಬಿಸಿರಲಿಲ್ಲ. ChatGPT ಮತ್ತು Claude ಸೇರಿದಂತೆ AI ಪರಿಕರಗಳ ಸಹಾಯದಿಂದ ಸಣ್ಣ ಸಣ್ಣ ಕೋಡ್‌ಗಳನ್ನು ಬರೆಯುತ್ತಿದ್ದಳು. ಬಳಿಕ ಅವುಗಳನ್ನು ಸ್ವತಃ ಪರೀಕ್ಷಿಸಿ, ಕಂಡುಬಂದ ದೋಷಗಳನ್ನು ಸರಿಪಡಿಸುತ್ತಿದ್ದಳು. ಸಾಫ್ಟ್‌ವೇರ್ ಅಭಿವೃದ್ಧಿಯ ವಿವಿಧ ಹಂತಗಳನ್ನು ಸ್ವತಃ ಕಲಿಯುವ ಮೂಲಕ ತಮ್ಮ ತಾಂತ್ರಿಕ ಜ್ಞಾನವನ್ನು ವಿಸ್ತರಿಸಿಕೊಂಡಿದ್ದಾಳೆ. ಇದರಿಂದ AI ಪರಿಕರಗಳನ್ನು ಕೇವಲ ಬಳಸುವುದಕ್ಕಿಂತ, ಅವುಗಳ ಸಹಾಯದಿಂದ ಹೊಸ ಉತ್ಪನ್ನಗಳನ್ನು ಹೇಗೆ ನಿರ್ಮಿಸಬಹುದು ಎಂಬುದನ್ನು ಆಕೆ ಕಲಿತಿದ್ದಾಳೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

‘Voxa Agents’ ಎಂಬ ಹೊಸ ಪ್ರಯತ್ನ:

ಮನ ಇದೀಗ ‘Voxa Agents’ ಎಂಬ ಮತ್ತೊಂದು AI ವೈಶಿಷ್ಟ್ಯದ ಅಭಿವೃದ್ಧಿಯಲ್ಲೂ ತೊಡಗಿಸಿಕೊಂಡಿದ್ದಾಳೆ. ಇದರ ಉದ್ದೇಶ ಕೋಡಿಂಗ್ ಜ್ಞಾನವಿಲ್ಲದವರಿಗೂ AI ಏಜೆಂಟ್‌ಗಳನ್ನು ರಚಿಸಲು ಅವಕಾಶ ನೀಡುವುದು. ಸರಳ ಇಂಗ್ಲಿಷ್‌ನಲ್ಲಿ ತಮಗೆ ಬೇಕಾದ ಕೆಲಸವನ್ನು ವಿವರಿಸಿದರೆ, ಆ ಕಾರ್ಯವನ್ನು ನಿರ್ವಹಿಸುವ ಸ್ವಾಯತ್ತ AI ಏಜೆಂಟ್‌ಗಳನ್ನು ಸುಲಭವಾಗಿ ರಚಿಸಲು ಸಾಧ್ಯವಾಗುವಂತೆ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ವಯಸ್ಸು ಸಾಧನೆಗೆ ಅಡ್ಡಿಯಲ್ಲ:

ಈ ಹುಡುಗಿಯ ಕಥೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಪೀಳಿಗೆಯ ಸಾಧ್ಯತೆಗಳನ್ನು ತೋರಿಸುತ್ತದೆ. AI ಕ್ರಾಂತಿ ಕೇವಲ ಅನುಭವಿ ತಂತ್ರಜ್ಞಾನ ತಜ್ಞರಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಅವರ ಪ್ರಯತ್ನಗಳು ತೋರಿಸಿವೆ. ಕುತೂಹಲ, ಕಲಿಯುವ ಆಸಕ್ತಿ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮನೋಭಾವ ಇದ್ದರೆ ವಯಸ್ಸು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಈ ಬಾಲಕಿಯ ಪ್ರಯಾಣ ಸಾರುತ್ತದೆ. ಚಿಕ್ಕ ವಯಸ್ಸಿನಲ್ಲೇ ಹೊಸ ಆಲೋಚನೆಯೊಂದಿಗೆ ಮುನ್ನಡೆದು AI ಕ್ಷೇತ್ರದಲ್ಲಿ ಹೆಜ್ಜೆ ಗುರುತು ಮೂಡಿಸಿರುವ ಈಕೆಯ ಕಥೆ, ತಂತ್ರಜ್ಞಾನ ಕಲಿಯಲು ಬಯಸುವ ಯುವಜನರಿಗೆ ಸ್ಫೂರ್ತಿಯಾಗಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *