ದೆಹಲಿ, ಜನವರಿ 25: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 2026ರ ಮೊದಲ ಮನ್ ಕಿ ಬಾತ್ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಜನತೆಗೆ ಗಣರಾಜ್ಯೋತ್ಸವ ಮತ್ತು ರಾಷ್ಟ್ರೀಯ ಮತದಾರರ ದಿನಾಚರಣೆಯ ಶುಭಾಶಯ ತಿಳಿಸಿದರು. ಮತದಾನ ಮಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದ 130ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿ ಮತದಾನಕ್ಕೆ ಅರ್ಹರಾಗುವ ಯುವಜನರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವಿಕೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ, ಯುವ ನಾಗರಿಕರು ಮತದಾರರಾಗುವ ಕ್ಷಣವನ್ನು ಸಮುದಾಯಗಳಲ್ಲಿ ಸಂಭ್ರಮಿಸುವಂತೆ ಸಲಹೆ ನೀಡಿದರು.
ಹುಟ್ಟುಹಬ್ಬಗಳನ್ನು ಸಂಭ್ರಮದಿಂದ ಆಚರಿಸುವಂತೆ, ಯುವಕ ಅಥವಾ ಯುವತಿ ಮೊದಲ ಬಾರಿ ಮತದಾರರಾಗುವ ಸಂದರ್ಭದಲ್ಲೂ ಸಂಪೂರ್ಣ ನೆರೆಹೊರೆಯವರು, ಗ್ರಾಮ ಅಥವಾ ನಗರ ಒಂದಾಗಿ ಅವರನ್ನು ಅಭಿನಂದಿಸಿ ಸಿಹಿ ಹಂಚಬೇಕು. ಇದರಿಂದ ಮತದಾನದ ಬಗ್ಗೆ ಜಾಗೃತಿ ಹೆಚ್ಚುವುದರ ಜೊತೆಗೆ, ಮತದಾರರ ಮಹತ್ವ ಮತ್ತಷ್ಟು ಬಲವಾಗುತ್ತದೆ ಎಂದರು.
ಭಾರತದ ಆರ್ಥಿಕತೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜೈವಿಕ ತಂತ್ರಜ್ಞಾನದಲ್ಲಿ ಸಾಕಷ್ಟು ಸ್ಟಾರ್ಟ್ ಅಪ್ಗಳು ಆರಂಭವಾಗಿವೆ. ಭಾರತವು ವಿಶ್ವದಲ್ಲೇ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಹಬ್ ಆಗಿ ಹೊರಹೊಮ್ಮುತ್ತಿದೆ. ಹತ್ತು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗದ ಹಲವು ಕ್ಷೇತ್ರಗಳಲ್ಲಿ ಇಂದು ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಕೃತಕ ಬುದ್ಧಿಮತ್ತೆ, ಬಾಹ್ಯಾಕಾಶ, ಅಣುಶಕ್ತಿ, ಸೆಮಿಕಂಡಕ್ಟರ್‌ಗಳು, ಮೊಬೈಲಿಟಿ, ಹಸಿರು ಹೈಡ್ರೋಜನ್ ಹಾಗೂ ಜೈವಿಕ ತಂತ್ರಜ್ಞಾನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.
ಸ್ವಂತ ಸ್ಟಾರ್ಟ್‌ಅಪ್ ಆರಂಭಿಸಲು ಮುಂದಾಗುವ ಯುವಜನತೆಗೆ ಅಭಿನಂದಿಸಿದ ಪ್ರಧಾನಿ ಮೋದಿ, ನಾವು ತಯಾರಿಸುವ ಪ್ರತಿಯೊಂದು ಉತ್ಪನ್ನದ ಗುಣಮಟ್ಟವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಂಕಲ್ಪ ಮಾಡುವಂತೆ ಕರೆ ನೀಡಿದರು. ಅದು ವಸ್ತ್ರೋದ್ಯಮವಾಗಲಿ, ತಂತ್ರಜ್ಞಾನವಾಗಲಿ, ಎಲೆಕ್ಟ್ರಾನಿಕ್ಸ್ ಅಥವಾ ಪ್ಯಾಕೇಜಿಂಗ್ ಆಗಲಿ, ಭಾರತೀಯ ಉತ್ಪನ್ನ ಎಂದರೆ ‘ಅತ್ಯುತ್ತಮ ಗುಣಮಟ್ಟ’ ಎಂಬ ಅರ್ಥ ಮೂಡಿಬರಬೇಕು. ಶ್ರೇಷ್ಠತೆಯನ್ನೇ ನಮ್ಮ ಮಾನದಂಡವಾಗಿಸೋಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ.
