ಪ್ರಾಚೀನ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಕರ ರಾಶಿಯು ಕುಜನ ಉಚ್ಚ ರಾಶಿ. ಅಂದರೆ ಇಲ್ಲಿ ಕುಜನು ಅತ್ಯಂತ ಬಲಿಷ್ಠನಾಗಿರುತ್ತಾನೆ. ಮಕರ ರಾಶಿಯ ಉತ್ತರಾಷಾಢ ನಕ್ಷತ್ರದಲ್ಲಿ ಕುಜನು ಸಂಚರಿಸುವಾಗ ಉಂಟಾಗುವ ಶುಭ-ಅಶುಭ ಫಲಗಳ ವಿವರ ಇಲ್ಲಿದೆ. ಇನ್ನು ಉತ್ತರಾಷಾಢ ನಕ್ಷತ್ರದಲ್ಲಿ ಜನವರಿ 28 ರಬರೆಗೆ ಕುಜನು ಇರಲಿದ್ದು ಇದರ ಅಧಿಪತಿ ಸೂರ್ಯ. ಕುಜ ಮತ್ತು ಸೂರ್ಯ ಮಿತ್ರ ಗ್ರಹಗಳಾದ್ದರಿಂದ, ಈ ನಕ್ಷತ್ರದಲ್ಲಿ ಕುಜನಿರುವುದು ಸಾಮಾನ್ಯವಾಗಿ ಆಡಳಿತಾತ್ಮಕ ಕೆಲಸಗಳಲ್ಲಿ ಇರುವವರಿಗೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ತುಂಬಾ ಒಳ್ಳೆಯದು. ಇದು ದೃಢ ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಶುಭ ಫಲಗಳನ್ನು ಪಡೆಯುವ ರಾಶಿಗಳು ಕುಜನು ಮಕರ ರಾಶಿಯಲ್ಲಿರುವಾಗ ಈ ಕೆಳಗಿನ ರಾಶಿಯವರಿಗೆ ಹೆಚ್ಚಿನ ಲಾಭ ಮತ್ತು ಪ್ರಗತಿ ಕಂಡುಬರುತ್ತದೆ.
ಮೇಷ ರಾಶಿ:
ನಿಮ್ಮ ರಾಶ್ಯಾಧಿಪತಿಯಾದ ಕುಜನು ದಶಮ ಸ್ಥಾನದಲ್ಲಿ ಇರುವುದರಿಂದ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ಹೊಸ ಉದ್ಯೋಗ ಅಥವಾ ಬಡ್ತಿ ಸಿಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ:
ತೃತೀಯ ಸ್ಥಾನದಲ್ಲಿ ಕುಜನಿರುವುದರಿಂದ ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೈಗೊಂಡ ಕಾರ್ಯಗಳಲ್ಲಿ ವಿಜಯ ಲಭಿಸುತ್ತದೆ. ಸಣ್ಣ ಪ್ರಯಾಣಗಳಿಂದ ಲಾಭವಾಗಲಿದೆ.
ಕನ್ಯಾ ರಾಶಿ:
ಪಂಚಮ ಸ್ಥಾನದಲ್ಲಿ ಕುಜನಿರುವುದು ಆರ್ಥಿಕವಾಗಿ ಲಾಭದಾಯಕ. ಹಳೆಯ ಹೂಡಿಕೆಗಳಿಂದ ಆದಾಯ ಬರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗುತ್ತದೆ.
ಮೀನ ರಾಶಿ:
ಲಾಭ ಸ್ಥಾನದಲ್ಲಿ ಕುಜನಿರುವುದರಿಂದ ಹಣಕಾಸಿನ ಹರಿವು ಉತ್ತಮವಾಗಿರುತ್ತದೆ. ಸ್ನೇಹಿತರಿಂದ ಮತ್ತು ಹಿರಿಯ ಸಹೋದರರಿಂದ ಬೆಂಬಲ ಸಿಗಲಿದೆ.
ಮಿಶ್ರ ಫಲ:
ಮಕರ ರಾಶಿ:
ಕುಜನು ನಿಮ್ಮದೇ ರಾಶಿಯಲ್ಲಿದ್ದಾಗ ಅಧಿಕಾರ ಮತ್ತು ಶಕ್ತಿ ನೀಡುತ್ತಾನೆ, ಆದರೆ ಅತಿಯಾದ ಆತುರ ಮತ್ತು ಕೋಪ ಉಂಟಾಗಬಹುದು. ರಕ್ತದೊತ್ತಡ ಅಥವಾ ಸಣ್ಣಪುಟ್ಟ ಗಾಯಗಳ ಬಗ್ಗೆ ಎಚ್ಚರವಿರಲಿ.
ಕರ್ಕಾಟಕ ರಾಶಿ:
ಏಳನೇ ಮನೆಯಲ್ಲಿ ಕುಜನಿರುವುದರಿಂದ ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಪಾಲುದಾರಿಕೆ ವ್ಯವಹಾರದಲ್ಲಿ ಜಾಗರೂಕತೆ ಅಗತ್ಯ.
ಅಶುಭ ಫಲ:
ಮಿಥುನ ರಾಶಿ:
ಎಂಟನೇ ಮನೆಯಲ್ಲಿ ಕುಜನಿರುವುದು ಅನಿರೀಕ್ಷಿತ ಅಡೆತಡೆಗಳನ್ನು ತರಬಹುದು. ಆರೋಗ್ಯದ ಕಡೆ ಗಮನವಿರಲಿ ಮತ್ತು ವಾಹನ ಚಾಲನೆ ಮಾಡುವಾಗ ಜಾಗ್ರತೆ ವಹಿಸಿ.
ಧನು ರಾಶಿ:
ಎರಡನೇ ಮನೆಯಲ್ಲಿ ಕುಜನಿರುವುದರಿಂದ ಮಾತಿನಲ್ಲಿ ಕಠೋರತೆ ಬರಬಹುದು. ಇದು ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.
ಕುಜನ ಪ್ರಭಾವದಿಂದ ತೊಂದರೆ ಆಗುತ್ತಿದ್ದರೆ ಪ್ರತಿದಿನ ಹನುಮಾನ್ ಚಾಲೀಸಾ ಪಠಿಸುವುದು ಅಥವಾ ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಮಾಡುವುದು ಉತ್ತಮ.
– ಲೋಹಿತ ಹೆಬ್ಬಾರ್
