MI vs LSG: ಅಪರೂಪಕ್ಕೆ ಸಿಕ್ಕಿತ್ತು ವಿಕೆಟ್; ಬುಮ್ರಾ ಮಾಡಿದ್ರ ಎಡವಟ್ಟು..! ವಿಡಿಯೋ ನೋಡಿ – Kannada News | IPL 2026: Jasprit Bumrah’s Poor Form & No Balls Cost Mumbai Indians Dearly

2026 ರ ಐಪಿಎಲ್‌ನಲ್ಲಿ (IPL 2026) ಮುಂಬೈ ತಂಡದ ಕಳಪೆ ಪ್ರದರ್ಶನಕ್ಕೆ ಬ್ಯಾಟಿಂಗ್‌ ವಿಭಾಗದ ಪಾತ್ರ ಎಷ್ಟಿದೆಯೋ, ಬೌಲಿಂಗ್ ವಿಭಾಗದ್ದು ಅಷ್ಟೇ ಕೊಡುಗೆ ಇದೆ. ಅದರಲ್ಲೂ ಮುಂಬೈ ತಂಡದ ಬೌಲಿಂಗ್ ವಿಭಾಗದ ಜೀವಾಳ ಎನಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ಈ ಆವೃತ್ತಿಯಲ್ಲಿ ವಿಕೆಟ್ ಬರ ಎದುರಿಸುತ್ತಿದ್ದಾರೆ. ಇದು ಮುಂಬೈ ತಂಡದ ಕಳಪೆ ಪ್ರದರ್ಶನಕ್ಕೆ ಪ್ರಮುಖ ಕಾರಣ ಎನ್ನಬಹುದು. ಇದುವರೆಗೆ ಬುಮ್ರಾ ಈ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದ್ದಾರೆ. ಈ 10 ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ.

ನೋ ಬಾಲ್ ಎಸೆದ ಬುಮ್ರಾ

ಇಂದು ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಪವರ್‌ಪ್ಲೇನಲ್ಲಿ ಎರಡು ಓವರ್​ಗಳನ್ನು ಬೌಲ್ ಮಾಡಿದ ಬುಮ್ರಾ ದುಬಾರಿಯಾಗಿದ್ದರು. ಇದರ ಜೊತೆಗೆ ವಿಕೆಟ್ ಕೂಡ ಪಡೆದಿರಲಿಲ್ಲ. ಆ ನಂತರ ಡೆತ್ ಓವರ್​ನಲ್ಲಿ ಬೌಲಿಂಗ್​ಗೆ ಬಂದ ಬುಮ್ರಾಗೆ ವಿಕೆಟ್ ಪಡೆಯುವ ಅವಕಾಶ ಸಿಕ್ಕಿತು. ಲಕ್ನೋ ಪರ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ಹಿಮ್ಮತ್ ಸಿಂಗ್, ಬುಮ್ರಾ ಬೌಲ್ ಮಾಡಿದ 14ನೇ ಓವರ್​ನಲ್ಲಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿದರು. ಆದರೆ ದುರಾದೃಷ್ಟವೆಂಬಂತೆ ಬುಮ್ರಾ ಆ ಎಸೆತವನ್ನು ನೋ ಬಾಲ್ ಮಾಡಿದ್ದರು. ಹೀಗಾಗಿ ಹಿಮ್ಮತ್​ಗೆ ಜೀವದಾನ ಸಿಕ್ಕಿತು.

 2 ರನ್​ಗೆ ಸಿಕ್ಕಿತು ಜೀವದಾನ

ಹಿಮ್ಮತ್​ಗೆ ಜೀವದಾನ ಸಿಕ್ಕಾಗ ಅವರು ಕೇವಲ 2 ರನ್ ಮಾತ್ರ ಗಳಿಸಿದ್ದರು. ನೋ ಬಾಲ್ ಎಸೆದು ಎದುರಾಳಿ ಬ್ಯಾಟರ್​ಗೆ ಜೀವದಾನ ಮಾಡಿದ್ದು ಮಾತ್ರವಲ್ಲದೆ ಬುಮ್ರಾ, ಅದೇ ಓವರ್​ನಲ್ಲಿ ಎರಡನೇ ನೋ ಬಾಲ್ ಮಾಡಿದರು. ಒಟ್ಟಾರೆ ಈ ಪಂದ್ಯದಲ್ಲಿ ಬುಮ್ರಾ ಬರೋಬ್ಬರಿ 3 ನೋ ಬಾಲ್​ಗಳನ್ನು ಎಸೆದರು. ಮಾತ್ರವಲ್ಲದೆ ಬುಮ್ರಾ ಈ ಆವೃತ್ತಿಯಲ್ಲಿ ಈಗಾಗಲೇ ಒಂಬತ್ತು ನೋ-ಬಾಲ್‌ಗಳನ್ನು ಎಸೆದಿದ್ದಾರೆ. ಬುಮ್ರಾ ಈ ರೀತಿಯಾಗಿ ಲಯ ತಪ್ಪಿರುವುದನ್ನು ನೋಡುವುದು ತುಂಬಾ ವಿರಳ ಆದರೆ ಪ್ರಸ್ತುತ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಬುಮ್ರಾ ಲಯ ಕಳೆದುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

40 ರನ್ ಬಾರಿಸಿದ ಹಿಮ್ಮತ್

ಇನ್ನು ಬುಮ್ರಾರಿಂದ ಜೀವದಾನ ಪಡೆದ ಹಿಮ್ಮತ್ 31 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 40 ರನ್​ಗಳ ಇನ್ನಿಂಗ್ಸ್ ಆಡಿದರು. ಇದರ ಜೊತೆಗೆ ಮಾರ್ಕ್ರಾಮ್ ಅವರೊಂದಿಗೆ 6ನೇ ವಿಕೆಟ್​ಗೆ ಅಜೇಯ ಅರ್ಧಶತಕದ ಜೊತೆಯಾಟವನ್ನು ಕಟ್ಟಿ ಲಕ್ನೋ ತಂಡವನ್ನು 228 ರನ್​ಗಳಿಗೆ ಕೊಂಡೊಯ್ದರು. ಅಂದರೆ ಬುಮ್ರಾ ಮಾಡಿದ ಎಡವಟ್ಟು ಮುಂಬೈ ತಂಡಕ್ಕೆ 38 ರನ್​ಗಳ ದಂಡವಾಗಿ ಪರಿಣಮಿಸಿತು.

MI vs LSG: 6,6,6,6,6,6,6.. 2ನೇ ವೇಗದ ಅರ್ಧಶತಕ ಬಾರಿಸಿದ ಪೂರನ್

ಬುಮ್ರಾಗೆ ವಿಕೆಟ್ ಬರ

ನಿರ್ಣಾಯಕ ವಿಕೆಟ್ ಟೇಕಿಂಗ್ ಪ್ರದರ್ಶನಕ್ಕೆ ಹೆಸರುವಾಸಿಯಾದ ಜಸ್ಪ್ರೀತ್ ಬುಮ್ರಾ ಈ ಆವೃತ್ತಿಯಲ್ಲಿ ವಿಕೆಟ್ ಪಡೆಯಲು ಕಷ್ಟಪಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಆಡಿರುವ 10 ಪಂದ್ಯಗಳಲ್ಲಿ ಕೇವಲ ಮೂರು ವಿಕೆಟ್‌ಗಳನ್ನು ಪಡೆದಿದ್ದಾರೆ, 100 ಕ್ಕಿಂತ ಹೆಚ್ಚು ಬೌಲಿಂಗ್ ಸರಾಸರಿ ಹೊಂದಿದ್ದಾರೆ. ತವರು ಮೈದಾನವಾದ ವಾಂಖೆಡೆಯಲ್ಲಿ, ಬುಮ್ರಾ ತಮ್ಮ ಮೊದಲ ಆರು ಪಂದ್ಯಗಳಲ್ಲಿ ಕೇವಲ ಒಂದು ವಿಕೆಟ್ ಪಡೆದಿದ್ದಾರೆ. ಈ ಆವೃತ್ತಿಯಲ್ಲಿ ಬುಮ್ರಾ ಅವರ ಎಕಾನಮಿ ರೇಟ್​ ಕೂಡ ಪ್ರತಿ ಓವರ್‌ಗೆ ಸುಮಾರು 9 ರನ್‌ಗಳಷ್ಟಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:07 pm, Mon, 4 May 26

Source link

Leave a Reply

Your email address will not be published. Required fields are marked *