ಬೆಂಗಳೂರು, ಆಗಸ್ಟ್ 11: ಬೆಂಗಳೂರಿನ ಸಂಚಾರ ದಟ್ಟಣೆಗೆ ಬಹುದೊಡ್ಡ ಬ್ರೇಕ್ ಹಾಕಲಿರುವ ‘ನಮ್ಮ ಮೆಟ್ರೋ’ದ (Namma Metr0) ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಗಳಿಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಮಂಡಳಿಯಿಂದ ಅತ್ಯಂತ ಪ್ರಮುಖ ಹಾಗೂ ಮಹತ್ವದ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಇನ್ಮುಂದೆ ಈ ಮಾರ್ಗಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮೆಟ್ರೋ ರೈಲುಗಳು ಸಂಚರಿಸಲಿದ್ದು, ಇದಕ್ಕೆ ಬೇಕಾದ ರೈಲು ನಿಯಂತ್ರಣ ವ್ಯವಸ್ಥೆಗೆ ಹಸಿರು ನಿಶಾನೆ ಸಿಕ್ಕಿದೆ. ಮೆಟ್ರೋದ ಪಿಂಕ್ ಹಾಗೂ ಬ್ಲೂ ಲೈನ್ ಮಾರ್ಗಗಳ ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್ (CBTC) ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ವ್ಯವಸ್ಥೆಗೆ ರೈಲ್ವೆ ಮಂಡಳಿಯು ತಾತ್ವಿಕ ಅನುಮೋದನೆ ನೀಡಿದೆ.
ಯಾವ ಯಾವ ಮಾರ್ಗಗಳಿಗೆ ಈ ಹೊಸ ಅನುಮೋದನೆ ಅನ್ವಯ?
- ಗುಲಾಬಿ ಮಾರ್ಗ: ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಇದು ಪ್ರಮುಖ ಮೈಲಿಗಲ್ಲಾಗಿದೆ.
- ನೀಲಿ ಮಾರ್ಗ: ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (KIA) ಸಂಪರ್ಕಿಸುವ ಇಡೀ ಮಾರ್ಗಕ್ಕೆ ಈ ತಾಂತ್ರಿಕ ಅನುಮೋದನೆ ಅನ್ವಯಿಸುತ್ತದೆ.
ವಿಶೇಷವೆಂದರೆ, ಬ್ಲೂ ಲೈನ್‌ನಲ್ಲಿ ರೈಲು ಸಂಚಾರ ಅಧಿಕೃತವಾಗಿ ಆರಂಭವಾಗುವುದಕ್ಕೂ ಮುನ್ನವೇ ಈ ತಾಂತ್ರಿಕ ಒಪ್ಪಿಗೆ ಸಿಕ್ಕಿರುವುದರಿಂದ, ಮುಂದಿನ ದಿನಗಳಲ್ಲಿ ಅಗತ್ಯ ಪರೀಕ್ಷೆಗಳು ಹಾಗೂ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆಗಳನ್ನು ಯಾವುದೇ ವಿಳಂಬವಿಲ್ಲದೆ ಸಕಾಲದಲ್ಲಿ ಕೈಗೊಳ್ಳಲು ಬಿಎಂಆರ್‌ಸಿಎಲ್‌ಗೆ ಹಾದಿ ಸುಗಮವಾದಂತಾಗಿದೆ.
ವಾಣಿಜ್ಯ ಸಂಚಾರಕ್ಕೆ ಭರದಿಂದ ಸಾಗುತ್ತಿದೆ ಅಂತಿಮ ಸಿದ್ಧತೆ
ಸದ್ಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಪಿಂಕ್ ಲೈನ್ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ಕೊನೆಯ ಹಂತದ ಪ್ರಕ್ರಿಯೆಗಳು ಬಾಕಿ ಇವೆ. ಈ ಹೊಸ ಅನುಮೋದನೆಯ ಬೆನ್ನಲ್ಲೇ ಬಿಎಂಆರ್‌ಸಿಎಲ್ ಮುಂದಿನ ಹಂತದ ಕಾರ್ಯಗಳಿಗೆ ಸಜ್ಜಾಗಿದೆ.
ಆರ್‌ಡಿಎಸ್‌ಒ (RDSO) ಸಂಸ್ಥೆಯಿಂದ ಮಧ್ಯಂತರ ವೇಗ ಪ್ರಮಾಣೀಕರಣ ಪಡೆಯುವುದು, ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತಾಲಯದ (CCRS) ಮೂಲಕ ರೈಲುಗಳ ಸೂಕ್ಷ್ಮ ಪರಿಶೀಲನೆ ನಡೆಸುವುದು ಹಾಗೂ ಪ್ರಾಯೋಗಿಕ ಸಂಚಾರ (Trial Runs) ನಡೆಸಿ ಅಂತಿಮವಾಗಿ ಪ್ರಯಾಣಿಕರ ಸೇವೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ತಯಾರಿ ನಡೆಸುತ್ತಿದೆ.
ಯಾವಾಗ ಓಪನ್ ಆಗಲಿವೆ ಈ ಮಾರ್ಗಗಳು?
ಬೆಂಗಳೂರಿಗರು ಕಾತರದಿಂದ ಕಾಯುತ್ತಿರುವ ಈ ಎರಡು ಮೆಟ್ರೋ ಮಾರ್ಗಗಳಿಗೆ ಕೇಂದ್ರ ಸರ್ಕಾರ ಒಂದೊಂದೇ ಅಧಿಕೃತ ಒಪ್ಪಿಗೆಗಳನ್ನು ನೀಡುತ್ತಾ ಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಬರುವ ಮುಂದಿನ ತಿಂಗಳಿನಲ್ಲಿಯೇ ಪಿಂಕ್ ಲೈನ್ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದ್ದು, ಮುಂದಿನ ವರ್ಷದ ವೇಳೆಗೆ ಏರ್‌ಪೋರ್ಟ್ ಸಂಪರ್ಕಿಸುವ ಬ್ಲೂ ಲೈನ್ ಓಪನ್ ಆಗಬಹುದು ಎಂದು ಅಂದಾಜಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
