ಬೆಂಗಳೂರು, ಫೆಬ್ರವರಿ 24: ನಗರದ ಮೆಟ್ರೋ (Namma Metro) ಸಂಚಾರದಲ್ಲಿ ಉಂಟಾಗುತ್ತಿರುವ ತೀವ್ರ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಿಶೇಷವಾಗಿ ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಲ್ಲಿ ಪ್ರಯಾಣಿಕರು ತೀವ್ರ ಅಸೌಕರ್ಯ ಅನುಭವಿಸುತ್ತಿದ್ದಾರೆ. ವಾರದಲ್ಲಿ ಸರಾಸರಿ ಪ್ರಯಾಣಿಕರ ಸಂಖ್ಯೆ 10 ಲಕ್ಷದ ಗಡಿಯನ್ನು ದಾಟಿದೆ ಎನ್ನಲಾಗಿದೆ. ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಮೇ–ಜೂನ್ ವೇಳೆಗೆ ಮೂರು ಹೊಸ ರೈಲುಗಳನ್ನು ಸೇವೆಗೆ ಸೇರಿಸುವ ಯೋಜನೆ ರೂಪಿಸಲಾಗಿದೆ.
ಇನ್ನೆರಡೇ ತಿಂಗಳಲ್ಲಿ ಟೀಟಾಘರ್ನಿಂದ ರೈಲು ಪೂರೈಕೆ
ಪಶ್ಚಿಮ ಬಂಗಾಳ ಮೂಲದ ಟೀಟಾಘರ್ನಿಂದ(ಟಿಆರ್‌ಎಸ್‌ಎಲ್) ಫೆಬ್ರವರಿ 18ರಂದು ಪರ್ಪಲ್ ಮತ್ತು ಗ್ರೀನ್ ಮಾರ್ಗಗಳಿಗೆ ಮೀಸಲಾಗಿರುವ 20 ಡಿಟಿಜಿ (ಡಿಸ್ಟೆನ್ಸ್-ಟು-ಗೋ) ರೈಲುಗಳಲ್ಲಿ ಮೊದಲನೆಯ ರೈಲನ್ನು ರವಾನಿಸಲಾಗಿದೆ. ಈ ರೈಲು ಫೆಬ್ರವರಿ ಅಂತ್ಯದೊಳಗೆ ಪೀಣ್ಯ ಡಿಪೋಗೆ ತಲುಪಲಿದ್ದು, ಅಲ್ಲಿಗೆ ತಲುಪಿದ ಬಳಿಕ ಆರು ಕೋಚ್‌ಗಳನ್ನು ಜೋಡಿಸಿ ಸಂಪೂರ್ಣ ರೈಲಾಗಿ ರೂಪಿಸಲಾಗುತ್ತದೆ. ನಂತರ ಸ್ಥಿರ ಹಾಗೂ ವಿದ್ಯುತ್ ವಲಯ ಪರೀಕ್ಷೆಗಳು ನಡೆಯಲಿದ್ದು, ಬಳಿಕ ಮುಖ್ಯ ಮಾರ್ಗದಲ್ಲಿ ರಾತ್ರಿ ವೇಳೆ 750 ಕಿಲೋಮೀಟರ್ ಪ್ರಯೋಗಾತ್ಮಕ ಸಂಚಾರ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
2019ರಲ್ಲಿ ಚೀನಾದ ಸರ್ಕಾರಿ ಕಂಪನಿ ರೂ.1,578 ಕೋಟಿ ಮೌಲ್ಯದ ಒಪ್ಪಂದದಡಿ ಒಟ್ಟು 36 ರೈಲುಗಳನ್ನು ಪೂರೈಕೆ ಮಾಡುವ ಹೊಣೆ ಹೊತ್ತಿತ್ತು. ಇದರಲ್ಲಿ 15 ರೈಲುಗಳು ಯೆಲ್ಲೋ ಲೈನ್‌ಗೆ ಮತ್ತು 21 ರೈಲುಗಳು ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಿಗೆ ಮೀಸಲಾಗಿದ್ದವು. ಎರಡು ಪ್ರೋಟೋಟೈಪ್ ರೈಲುಗಳನ್ನು ಈಗಾಗಲೇ ಪೂರೈಸಲಾಗಿದ್ದು, ಉಳಿದ ರೈಲುಗಳನ್ನು ಟಿಆರ್‌ಎಸ್‌ಎಲ್ ನಿರ್ಮಿಸುತ್ತಿದೆ. ಇದುವರೆಗೆ ಯೆಲ್ಲೋ ಲೈನ್‌ಗೆ ಎಂಟು ರೈಲುಗಳನ್ನು ಮಾತ್ರ ವಿತರಿಸಲಾಗಿದೆ.
ಚಾಲಕರಿಲ್ಲದೇ ಸಂಚರಿಸುವ ಸೌಲಭ್ಯ
ಯೆಲ್ಲೋ ಲೈನ್‌ನಲ್ಲಿ ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್ (CBTC) ವ್ಯವಸ್ಥೆ ಜಾರಿಯಲ್ಲಿದ್ದು, ಚಾಲಕರಿಲ್ಲದೇ ಸಂಚರಿಸುವ ಸೌಲಭ್ಯವಿದೆ. ಆದರೆ ಪರ್ಪಲ್ ಮತ್ತು ಗ್ರೀನ್ ಮಾರ್ಗಗಳಲ್ಲಿ ಡಿಟಿಜಿ ಸಿಗ್ನಲಿಂಗ್ ವ್ಯವಸ್ಥೆ ಇರುವುದರಿಂದ ಲೋಕೋಪೈಲಟ್ ಅಗತ್ಯವಿದೆ. ಜನವರಿ 2025ರಲ್ಲಿ ಪರ್ಪಲ್ ಲೈನ್ ಪ್ರೋಟೋಟೈಪ್ ರೈಲು ಲಭಿಸಿದ್ದರೂ, ಬಿಎಂಆರ್‌ಸಿಎಲ್ ಇನ್ನೂ ವಾಣಿಜ್ಯ ಸಂಚಾರಕ್ಕೆ ಅಗತ್ಯವಾದ 37 ಕಾನೂನು ಅನುಮತಿಗಳನ್ನು ಸಂಪೂರ್ಣವಾಗಿ ಪಡೆಯಬೇಕಿದೆ. ಸದ್ಯ ಸಿಗ್ನಲಿಂಗ್ ಸಾಫ್ಟ್‌ವೇರ್ ಪರೀಕ್ಷೆ ಮತ್ತು ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಲ್ಟಿ-ಟ್ರೈನ್ (ಆಂಟಿ-ಕೋಲಿಷನ್) ಪರೀಕ್ಷೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಪರೀಕ್ಷೆಗಳು ಪೂರ್ಣಗೊಂಡಿವೆ ಎಂದು ಮೂಲಗಳು ತಿಳಿಸಿವೆ.
ಮಾರ್ಚ್ ಅಂತ್ಯದೊಳಗೆ ಮೂರನೇ ಡಿಟಿಜಿ ರೈಲು ರವಾನೆಯಾಗುವ ಸಾಧ್ಯತೆ ಇದ್ದು, ಬಳಿಕ ಯೆಲ್ಲೋ ಲೈನ್‌ಗೆ ಉಳಿದ ಸಿಬಿಟಿಸಿ ರೈಲುಗಳು ಹಾಗೂ ಪರ್ಪಲ್-ಗ್ರೀನ್ ಮಾರ್ಗಗಳಿಗೆ ಅಂತಿಮ ಹಂತದ ರೈಲುಗಳನ್ನು ಹಂತ ಹಂತವಾಗಿ ಪೂರೈಸುವ ಯೋಜನೆ ಇದೆ. ಕಾರ್ಯಾಚರಣಾ ಅಗತ್ಯತೆ ಆಧರಿಸಿ ಮೇ–ಜೂನ್ ವೇಳೆಗೆ ಮೂರು ಡಿಟಿಜಿ ರೈಲುಗಳನ್ನು ಸೇವೆಗೆ ಸೇರಿಸಿದರೆ, ಪೀಕ್ ಅವರ್ ಜನಸಂದಣಿ ಸಮಸ್ಯೆಗೆ ಭಾಗಶಃ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
