ಬೆಂಗಳೂರು, ಜೂನ್ 23: ಕೆಎಂಎಫ್‌ನ (KMF) ಹೆಮ್ಮೆಯ ಬ್ರ್ಯಾಂಡ್ ನಂದಿನಿ ಸ್ಟ್ರಾಬೆರಿ ಫ್ಲೇವರ್ ಹಾಲು ಕೃತಕ ಮತ್ತು ನಕಲಿ ಎಂದು ಇನ್‌ಸ್ಟಾಗ್ರಾಮ್ ರೀಲ್ಸ್ (Instagram Reels) ಮಾಡಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಬೆಂಗಳೂರಿನ ವೈದ್ಯೆ ಡಾ. ಶರಣ್ಯ ಪದ್ಮ ಅವರಿಗೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ತಮ್ಮ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ತನಿಖೆಗೆ ತಡೆ ನೀಡಬೇಕೆಂದು ಕೋರಿ ವೈದ್ಯೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮುಖ್ಯಾಂಶಗಳು
- ನಂದಿನಿ ಸ್ಟ್ರಾಬೆರಿ ಹಾಲು ನಕಲಿ ಎಂದಿದ್ದ ವೈದ್ಯೆಗೆ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
- ಸಾರ್ವಜನಿಕರಲ್ಲಿ ಅನಗತ್ಯವಾಗಿ ಆತಂಕ ಮೂಡಿಸಲು ಇನ್‌ಸ್ಟಾಗ್ರಾಮ್ ಇರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
- ವೈದ್ಯೆ ವಿರುದ್ಧದ ಪೊಲೀಸ್ ಎಫ್‌ಐಆರ್ ತನಿಖೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಇನ್‌ಸ್ಟಾಗ್ರಾಮ್ ಇರೋದು ಸಾರ್ವಜನಿಕರಲ್ಲಿ ಆತಂಕ ಮೂಡಿಸೋಕಲ್ಲ!
ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ವೈದ್ಯೆಯ ಪರ ವಕೀಲರಿಗೆ ಪ್ರಶ್ನೆಗಳನ್ನು ಹಾಕಿದೆ. ಹಾಲು ನಕಲಿ, ಸ್ಟ್ರಾಬೆರಿ ಫ್ಲೇವರ್ ಒಳ್ಳೆಯದಲ್ಲ ಎಂದು ಈ ರೀತಿ ಸಾರ್ವಜನಿಕರಲ್ಲಿ ಅನಗತ್ಯವಾಗಿ ಆತಂಕ ಸೃಷ್ಟಿಸಲು ಸಾಧ್ಯವಿಲ್ಲ. ನಿಮಗೆ ಇಷ್ಟವಿಲ್ಲದಿದ್ದರೆ ಕುಡಿಯಬೇಡಿ, ಅದನ್ನು ಬಿಟ್ಟು ಇಂತಹ ಹೇಳಿಕೆಗಳನ್ನು ನೀಡುವ ಅಗತ್ಯವೇನಿತ್ತು? ನಿಮಗೇನಾದರೂ ಹಾಲಿನ ಗುಣಮಟ್ಟ ಪರೀಕ್ಷಿಸಲು ಸರ್ಕಾರ ಜವಾಬ್ದಾರಿ ನೀಡಿತ್ತೇ? ಸುಮ್ಮನೆ ಸಣ್ಣ ವಿಷಯಗಳಿಗೂ ಇಂತಹ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸಬೇಡಿ. ಇನ್‌ಸ್ಟಾಗ್ರಾಮ್ ಇರುವುದು ಇಂತಹ ಕೆಲಸಗಳಿಗಲ್ಲ ಎಂದು ನ್ಯಾಯಾಲಯ ಮೌಖಿಕವಾಗಿ ತರಾಟೆಗೆ ತೆಗೆದುಕೊಂಡಿದೆ.
ವೈದ್ಯೆಯ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಕೇವಲ ಸ್ಟ್ರಾಬೆರಿ ಫ್ಲೇವರ್ ಬಗ್ಗೆ ಮಾತನಾಡಿದ್ದಾರೆಯೇ ಹೊರತು, ಒಟ್ಟಾರೆ ನಂದಿನಿ ಹಾಲಿನ ಉತ್ಪನ್ನಗಳ ಬಗ್ಗೆ ಅಲ್ಲ. ಈಗಾಗಲೇ ಅವರು ಈ ರೀಲ್ಸ್ ಕುರಿತು ಕ್ಷಮೆಯನ್ನೂ ಯಾಚಿಸಿದ್ದಾರೆ ಎಂದು ಕೋರ್ಟ್‌ಗೆ ತಿಳಿಸಿ ತನಿಖೆಗೆ ಮಧ್ಯಂತರ ತಡೆ ನೀಡುವಂತೆ ಕೋರಿದ್ದರು. ಆದರೆ, ಕೋರ್ಟ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ.
ಕ್ಯಾನ್ಸರ್ ಬರುತ್ತದೆ ಎಂದಿದ್ದ ವೈದ್ಯೆ
ಸುಮಾರು ಒಂದು ತಿಂಗಳ ಹಿಂದೆ ಡಾ. ಶರಣ್ಯ ಪದ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ನಂದಿನಿ ಹಾಲಿನ ಉತ್ಪನ್ನಗಳು, ವಿಶೇಷವಾಗಿ ಸ್ಟ್ರಾಬೆರಿ ಫ್ಲೇವರ್ ಹಾಲು ಅಸಲಿ ಅಲ್ಲ, ಅದು ಕೇವಲ ಕೃತಕ ಫ್ಲೇವರ್ ಮಾತ್ರ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಈ ಉತ್ಪನ್ನಗಳ ಬಳಕೆಯಿಂದಾಗಿ ಮನುಷ್ಯರಲ್ಲಿ ಆಟೋಇಮ್ಯೂನ್ ಕಾಯಿಲೆಗಳು ಮತ್ತು ಕ್ಯಾನ್ಸರ್ (Cancer) ಬರುವ ಸಾಧ್ಯತೆ ಇದೆ ಎಂದು ಗಂಭೀರ ಆರೋಪ ಮಾಡಿದ್ದರು.
ಇದನ್ನೂ ಓದಿ ಹೊಸ ಟೆಕ್ನಾಲಜಿ ಮೊರೆ ಹೋದ KMF: ನಕಲಿ, ಕಲಬೆರಕೆ ನಂದಿನಿ ಉತ್ನನ್ನ ಕಂಡುಹಿಡಿಯುವುದಿನ್ನು ಸುಲಭ
ಈ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕೆಎಂಎಫ್ (KMF) ನಿರ್ದೇಶಕಿ ಆರ್. ಪದ್ಮಾವತಿ, ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 353(1)(b) ಅಡಿಯಲ್ಲಿ ಸಾರ್ವಜನಿಕರಲ್ಲಿ ಸುಳ್ಳು ಸುದ್ದಿ ಹರಡಿ ದಾರಿ ತಪ್ಪಿಸಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದರು.
ಪ್ರಸ್ತುತ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ ಪೊಲೀಸ್ ಹಾಗೂ ದೂರುದಾರೆ ಪದ್ಮಾವತಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಮುಂದೂಡಿದೆ. ಅಲ್ಲಿಯವರೆಗೆ ಪೊಲೀಸ್ ತನಿಖೆ ಮುಂದುವರಿಯಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 11:04 am, Tue, 23 June 26
