ದೇಶದ ಅಭಿವೃದ್ಧಿ ಹಳ್ಳಿಗಳಿಂದಲೇ ಆರಂಭವಾಗಬೇಕು. ಗ್ರಾಮಕ್ಕೆ ಧಕ್ಕೆ ಬಂದರೆ ಇಡೀ ಭಾರತಕ್ಕೆ ಧಕ್ಕೆ ಬರಬಹುದು ಎನ್ನುವ ಗಾಂಧೀಜಿಯವರ ಮಾತಿದೆ. ಹೀಗಾಗಿ ಒಂದು ದೇಶವು ಅಭಿವೃದ್ಧಿಯತ್ತ ಸಾಗಬೇಕಾದರೆ ಹಳ್ಳಿಗಳ ಅಭಿವೃದ್ಧಿಯು ಮುಖ್ಯ. ಈ ಗ್ರಾಮಗಳ ಅಭಿವೃದ್ಧಿಗೆ ಪಂಚಾಯತ್ ರಾಜ್ ವ್ಯವಸ್ಥೆ ಬಹಳ ಮುಖ್ಯವಾದದ್ದಾಗಿದೆ. ಗ್ರಾಮ ಪಂಚಾಯತ್ ಪಾತ್ರವನ್ನು ಗುರುತಿಸುವುದು ಹಾಗೂ ಹಳ್ಳಿಗಳ ಅಭಿವೃದ್ಧಿ ಹೆಚ್ಚು ಒತ್ತು ನೀಡುವುದಾಗಿದೆ. ಈ ವ್ಯವಸ್ಥೆ ಜಾರಿಗೆ ಬಂದ ಸವಿ ನೆನಪಿಗಾಗಿ ಪ್ರತಿ ವರ್ಷ ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು (National Panchayati Raj Day) ಆಚರಿಸಲಾಗುತ್ತದೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಇತಿಹಾಸವೇನು?
ಗ್ರಾಮೀಣ ಮಟ್ಟದಲ್ಲಿ ಅಧಿಕಾರ ವಿಕೇಂದ್ರೀಕರಣ, ಪಂಚಾಯತ್ ರಾಜ್ನ 1992ರ ಸಂವಿಧಾನ ತಿದ್ದುಪಡಿಯು (73ನೇ ತಿದ್ದುಪಡಿ) 1993ರ ಏಪ್ರಿಲ್ 24ರಂದು ಜಾರಿಗೆ ಬಂದವು. ಹೀಗಾಗಿ ಪಂಚಾಯತ್ ರಾಜ್ ಸಚಿವಾಲಯವು ಪ್ರತಿವರ್ಷ ಏಪ್ರಿಲ್ 24ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸಲಾಗುತ್ತಿದೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಮಹತ್ವ, ಆಚರಣೆ ಹೇಗೆ?
ಪಂಚಾಯತ್ ರಾಜ್ ವ್ಯವಸ್ಥೆಯು ಗ್ರಾಮಗಳ ಅಭಿವೃದ್ಧಿಯತ್ತ ಹೆಚ್ಚು ಗಮನ ಹರಿಸುತ್ತದೆ. ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಗ್ರಾಮೀಣ ಪ್ರಜೆಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಜಾರಿಗೆ ತಂದ ವ್ಯವಸ್ಥೆಯಾಗಿದೆ. ಗ್ರಾಮೀಣ ಭಾರತದಲ್ಲಿ ಪ್ರಜಾಪ್ರಭುತ್ವದ ತಳಹದಿಯನ್ನು ಬಲಪಡಿಸುವುದು, ಗ್ರಾಮ ಪಂಚಾಯತ್ಗಳ ಪಾತ್ರವನ್ನು ಗುರುತಿಸುವುದು, ಪಂಚಾಯತ್ ರಾಜ್ ಸಂಸ್ಥೆಗಳು ಹಳ್ಳಿಗಳ ಅಭಿವೃದ್ಧಿಗೆ ಇನ್ನಷ್ಟು ಕೆಲಸ ಮಾಡುವಂತೆ ಪ್ರೋತ್ಸಾಹಿಸುವುದು ಈ ದಿನದ ಉದ್ದೇಶವಾಗಿದೆ.
ಇದನ್ನೂ ಓದಿ: ನಮ್ಮ ಬದುಕಿಗೆ ಇರುವುದೊಂದೇ ಪೃಥ್ವಿ; ಭೂಮಿ ತಾಯಿಯ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಈ ವಿಶೇಷ ದಿನದಂದು ಕೇಂದ್ರ ಸರಕಾರವು ಪ್ರಮುಖವಾಗಿ ನ್ಯಾನ್ಜಿ ದೇಶಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ್, ದೀನ್ ದಯಾಳ್ ಉಪಾಧ್ಯಾಯ್ ಪಂಚಾಯತ್ ಸಶಕ್ತೀಕರಣ ಪುರಸ್ಕಾರ, ಮಕ್ಕಳ ಸ್ನೇಹಿ ಗ್ರಾಮ ಸಭಾ ಪುರಸ್ಕಾರ, ಗ್ರಾ. ಪಂ. ಅಭಿವೃದ್ಧಿ ಯೋಜನಾ ಪುರಸ್ಕಾರವನ್ನು ನೀಡಿ ಉತ್ತಮವಾಗಿ ಕೆಲಸ ಮಾಡುವ ಗ್ರಾಮ ಪಂಚಾಯತ್ ನ್ನು ಗುರುತಿಸಿ ಗೌರವಿಸುತ್ತವೆ. ಈ ದಿನದಂದು ವಿವಿಧ ಜಾಗೃತಿ ಕಾರ್ಯಕ್ರಮಗಳು ಚಟುವಟಿಕೆಗಳು, ವಿಚಾರ ಸಂಕಿರಣಗಳು, ಕಾರ್ಯಗಾರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ