NHAI Local Pass: ಟೋಲ್ ಪ್ಲಾಜಾದಿಂದ 20 ಕಿ.ಮೀ ಒಳಗೆ ವಾಸವಿದ್ದೀರಾ, ಇನ್ಮುಂದೆ ಮೊಬೈಲ್​ನಲ್ಲೇ ಲೋಕಲ್ ಟೋಲ್ ಪಾಸ್ ಪಡೀಬಹುದು – Kannada News | Rajmargyatra: NHAI Digital Local Pass, Get Toll Pass on Mobile within 20km Radius

ನವದೆಹಲಿ, ಜುಲೈ 22: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ಸ್ಥಳೀಯ ನಿವಾಸಿಗಳಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸಿಹಿ ಸುದ್ದಿ ನೀಡಿದೆ. ಟೋಲ್ ಪ್ಲಾಜಾಗಳಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರು ಇನ್ಮುಂದೆ ಟೋಲ್ ಕಚೇರಿಗೆ ಅಲೆಯುವ ಅಗತ್ಯವಿಲ್ಲದೆ, ತಮ್ಮ ಮೊಬೈಲ್‌ನಲ್ಲೇ ಡಿಜಿಟಲ್ ಲೋಕಲ್ ಪಾಸ್ ಪಡೆಯುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಎನ್​ಎಚ್​ಎಐನ ಅಧಿಕೃತ ‘ರಾಜಮಾರ್ಗಯಾತ್ರ’ (Rajmargyatra) ಮೊಬೈಲ್ ಆ್ಯಪ್ ಮೂಲಕವೇ ನಿಮಿಷಗಳಲ್ಲಿ ಈ ಪಾಸ್ ಅನ್ನು ಖರೀದಿಸಿ, ತಿಂಗಳಿಡೀ ಆಯಾ ಟೋಲ್ ಪ್ಲಾಜಾದಲ್ಲಿ ಅನಿಯಮಿತ ಪ್ರಯಾಣ ಮಾಡಬಹುದಾಗಿದೆ.

ಡಿಜಿಟಲ್ ‘ಲೋಕಲ್ ಪಾಸ್’ ಪಡೆಯುವುದು ಹೇಗೆ?

ಹಿಂದೆ ಸ್ಥಳೀಯ ಪಾಸ್ ಪಡೆಯಲು ಸಾರ್ವಜನಿಕರು ಆಧಾರ ಕಾರ್ಡ್, ಆರ್‌ಸಿ ಬುಕ್ ಹಿಡಿದುಕೊಂಡು ಟೋಲ್ ಪ್ಲಾಜಾ ಕಚೇರಿಗೆ ನೇರವಾಗಿ ಹೋಗಬೇಕಿತ್ತು. ಆದರೆ ಹೊಸ ವ್ಯವಸ್ಥೆಯಲ್ಲಿ ಏನೇನಿದೆ ನೋಡೋಣ.

ಆಟೋಮ್ಯಾಟಿಕ್ ಪರಿಶೀಲನೆ: ಆ್ಯಪ್ ನಿಮ್ಮ ಡಿಜಿಲಾಕರ್ ಮತ್ತು ವಾಹನ್ (VAHAN) ಪೋರ್ಟಲ್ ಜೊತೆ ಲಿಂಕ್ ಆಗಿರುವುದರಿಂದ, ನಿಮ್ಮ ವಿಳಾಸ ಮತ್ತು ಫಾಸ್ಟ್‌ಟ್ಯಾಗ್ (FASTag) ವಿವರಗಳನ್ನು ಸ್ವಯಂಚಾಲಿತವಾಗಿ ಪಡೆದುಕೊಳ್ಳುತ್ತದೆ.

ಜಿಐಎಸ್ (GIS) ತಂತ್ರಜ್ಞಾನ: ನಿಮ್ಮ ಮನೆ ಟೋಲ್ ಪ್ಲಾಜಾದಿಂದ 20 ಕಿ.ಮೀ ವ್ಯಾಪ್ತಿಯಲ್ಲಿದೆಯೇ ಎಂಬುದನ್ನು ಜಿಪಿಎಸ್ ಅಥವಾ ಜಿಐಎಸ್ ತಂತ್ರಜ್ಞಾನದ ಮೂಲಕ ಆ್ಯಪ್ ತಕ್ಷಣವೇ ದೃಢಪಡಿಸುತ್ತದೆ.

ಮೊದಲ ಚಾಲನೆ: ಈ ಡಿಜಿಟಲ್ ಪಾಸ್ ಸೌಲಭ್ಯವನ್ನು ದೆಹಲಿಯ ಅರ್ಬನ್ ಎಕ್ಸ್‌ಟೆನ್ಶನ್ ರಸ್ತೆ-II (UER-II) ನಲ್ಲಿರುವ ‘ಮುಂಡ್ಕಾ – ಬಕ್ಕರ್‌ವಾಲಾ’ ಟೋಲ್ ಪ್ಲಾಜಾದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಶೀಘ್ರದಲ್ಲೇ ದೇಶಾದ್ಯಂತ ವಿಸ್ತರಿಸಲಾಗುವುದು.

ಮತ್ತಷ್ಟು ಓದಿ: ಬೆಂಗಳೂರಲ್ಲಿ ಟ್ರಾಫಿಕ್​​ ಸಮಸ್ಯೆ ನಿವಾರಣೆಗೆ ಕ್ರಮ: ಸಿಗ್ನಲ್​​ ಸಮೀಪವಿರುವ ಬಸ್​​ ನಿಲ್ದಾಣಗಳ ತೆರವಿಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ

22 ಭಾಷೆಗಳಲ್ಲಿ ನೆರವು ನೀಡುವ ಡಿಜಿಟಲ್ ಸಹಾಯಕ

ಸ್ಥಳೀಯ ಪಾಸ್ ಜೊತೆಗೆ ಎನ್​ಎಚ್​ಎಐ ‘ರಾಜಮಾರ್ಗಯಾತ್ರ’ ಆ್ಯಪ್‌ನಲ್ಲಿ ‘ಮಾರ್ಗ್‌ಮಿತ್ರ’ ಎಂಬ ಹೊಸ ಎಐ (AI) ಆಧಾರಿತ ಸಹಾಯ ಕೇಂದ್ರವನ್ನು ಪರಿಚಯಿಸಿದೆ. ಪ್ರಯಾಣಿಕರು ತಮ್ಮ ಸಂಶಯಗಳು ಅಥವಾ ದೂರುಗಳನ್ನು ಕನ್ನಡ ಸೇರಿದಂತೆ 22 ಭಾರತೀಯ ಭಾಷೆಗಳಲ್ಲಿ ಟೈಪ್ ಮಾಡಿ ಅಥವಾ ಧ್ವನಿ ಮೂಲಕ ಕೇಳಬಹುದು. ಫಾಸ್ಟ್‌ಟ್ಯಾಗ್ ರೀಚಾರ್ಜ್, ಕೆವೈಸಿ ಸ್ಥಿತಿ, ಹಣ ಮರುಪಾವತಿ ಮತ್ತು ಹೆದ್ದಾರಿಯಲ್ಲಿ ವಾಹನ ಕೆಟ್ಟುನಿಂತರೆ ತಕ್ಷಣದ ನೆರವು ಪಡೆಯಲು ಮಾರ್ಗ್‌ಮಿತ್ರ ನೆರವಾಗುತ್ತದೆ.

ಲೈವ್ ದೂರು ನಿರ್ವಹಣೆ: ಹೆದ್ದಾರಿ ಸಮಸ್ಯೆಗಳ ಕುರಿತು ದೂರು ನೀಡಿದರೆ, ಸಂಬಂಧಪಟ್ಟ ಇಲಾಖೆಗೆ ತಕ್ಷಣವೇ ರವಾನೆಯಾಗುತ್ತದೆ. ಆ ದೂರಿನ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.

ಅಪಘಾತ ಅಥವಾ ತುರ್ತು ಸಂದರ್ಭಗಳಲ್ಲಿ ಆ್ಯಪ್ ಮೂಲಕ ತಕ್ಷಣವೇ 1033 (NHAI ತುರ್ತು ಸಂಖ್ಯೆ) ಗೆ ಸಂಪರ್ಕಿಸಿ ಆಂಬ್ಯುಲೆನ್ಸ್ ಅಥವಾ ಕ್ರೇನ್ ಸಹಾಯ ಪಡೆಯಬಹುದು. ನಿಮ್ಮ ಮಾರ್ಗದಲ್ಲಿ ಬರುವ ಪೆಟ್ರೋಲ್ ಬಂಕ್‌ಗಳು, ಸುಸಜ್ಜಿತ ಶೌಚಾಲಯಗಳು, ಢಾಬಾ, ಹೋಟೆಲ್‌ಗಳು ಮತ್ತು ಆಸ್ಪತ್ರೆಗಳ ನಿಖರ ಜಾಗವನ್ನು ಆ್ಯಪ್ ತೋರಿಸುತ್ತದೆ.

ಹೆದ್ದಾರಿಯಲ್ಲಿ ಗುಂಡಿಗಳು ಬಿದ್ದಿದ್ದರೆ ಅಥವಾ ಕಸ,ಆಕ್ರಮಣಗಳಿದ್ದರೆ ಫೋಟೋ ತೆಗೆದು ಆ್ಯಪ್ ಮೂಲಕವೇ ಆಡಳಿತ ಮಂಡಳಿಗೆ ನೇರ ದೂರು ನೀಡಬಹುದು. ಈಗಾಗಲೇ ಈ ಆ್ಯಪ್ ಮೂಲಕ 80 ಲಕ್ಷಕ್ಕೂ ಹೆಚ್ಚು ಹೆದ್ದಾರಿ ‘ವಾರ್ಷಿಕ ಪಾಸ್’ಗಳು ಮಾರಾಟವಾಗಿವೆ ಎಂದು ಎನ್​ಎಚ್​ಎಐ ತಿಳಿಸಿದೆ. ಆಂಡ್ರಾಯ್ಡ್ ಮತ್ತು ಐಒಎಸ್ (iOS) ಬಳಕೆದಾರರು ಪ್ಲೇಸ್ಟೋರ್‌ನಿಂದ ‘ರಾಜಮಾರ್ಗ’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಈ ಸೌಲಭ್ಯಗಳನ್ನು ಬಳಸಿಕೊಳ್ಳಬಹುದಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *