ನವದೆಹಲಿ, ಫೆಬ್ರುವರಿ 24: ನೀತಿ ಆಯೋಗ್ಗೆ ಹಂಗಾಮಿ ಸಿಇಒ ಆಗಿ ಹಿರಿಯ ಐಎಎಸ್ ಅಧಿಕಾರಿ ನಿಧಿ ಛಿಬ್ಬರ್ (Nidhi Chhibber) ಅವರನ್ನು ಸರ್ಕಾರ ನೇಮಕ ಮಾಡಿದೆ. ಹಾಲಿ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರ ವಿಸ್ತೃತ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮುಂದಿನ ಸಿಇಒ ನೇಮಕವಾಗುವವರೆಗೂ ಹಂಗಾಮಿ ಸ್ಥಾನಕ್ಕೆ ನಿಧಿ ಅವರನ್ನು ಕೂರಿಸಲಾಗಿದೆ.
ನಿಧಿ ಛಿಬ್ಬರ್ ಅವರು ನೀತಿ ಆಯೋಗ್ನಲ್ಲಿ ಅಭಿವೃದ್ಧಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕಚೇರಿಯಲ್ಲಿ ಮಹಾನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಸೇವೆಯ ಜೊತೆಗೆ ಹೆಚ್ಚುವರಿಯಾಗಿ ಸಿಇಒ ಹೊಣೆಗಾರಿಕೆಯನ್ನು ಅವರಿಗೆ ವಹಿಸಲಾಗಿದೆ. ಇವರ ನೇಮಕಾತಿ ಆದೇಶವನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ನೀಡಿದೆ.
ನಿಧಿ ಛಿಬ್ಬರ್ ಅವರು ನೀತಿ ಆಯೋಗ್ನ ಸಿಇಒ ಸ್ಥಾನವನ್ನು ನಿಭಾಯಿಸಲಿರುವ ಎರಡನೇ ಮಹಿಳೆಯಾಗಿದ್ದಾರೆ. 2015ರಲ್ಲಿ ರಚನೆಯಾದ ನೀತಿ ಆಯೋಗ್ನ ಮೊದಲ ಸಿಇಒ ಸ್ಥಾನಕ್ಕೆ ಸಿಂಧುಶ್ರೀ ಖುಲ್ಲರ್ ಅವರನ್ನು ನೇಮಕ ಮಾಡಲಾಗಿತ್ತು. ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು ನೀತಿ ಆಯೋಗ್ನ ನಾಲ್ಕನೇ ಸಿಇಒ ಆಗಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 8.1 ಹಿಗ್ಗಿರುವ ಸಾಧ್ಯತೆ: ಎಸ್ಬಿಐ ವರದಿಯಲ್ಲಿ ಅಂದಾಜು
ನೀತಿ ಆಯೋಗ್ನ ಸಿಇಒಗಳಿವರು…
- ಸಿಂಧುಶ್ರೀ ಖುಲ್ಲರ್: 2015-16
- ಅಮಿತಾಭ್ ಕಾಂತ್: 2016-22
- ಪರಮೇಶ್ವರನ್ ಅಯ್ಯರ್: 2022-23
- ಬಿ.ವಿ.ಆರ್. ಸುಬ್ರಹ್ಮಣ್ಯಂ: 2023-26
ನೀತಿ ಆಯೋಗ್ನ ಸಿಇಒ ಸ್ಥಾನ ಒಂದು ವರ್ಷದ ಅವಧಿಯದ್ದಿರುತ್ತದೆ. ಸುಬ್ರಹ್ಮಣ್ಯಂ ಅವರ ಅವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿತ್ತು. ಅದು ಫೆಬ್ರುವರಿ 24ಕ್ಕೆ ಮುಗಿದಿದೆ. ಅವರ ಅವಧಿಯನ್ನು ಮತ್ತಷ್ಟು ವಿಸ್ತರಿಸಲಾಗಿಲ್ಲ.
ಇದನ್ನೂ ಓದಿ: ಭಾರತ್ ಟ್ಯಾಕ್ಸಿಗೆ 500 ರೂ ನೀಡಿದರೆ ನೀವೇ ಡ್ರೈವರ್, ನೀವೇ ಮಾಲೀಕರು; ಈ ಕಂಪನಿಯ ಬ್ಯುಸಿನೆಸ್ ಮಾಡಲ್ ಹೇಗೆ?
ಏನಿದು ನೀತಿ ಆಯೋಗ್?
ಇದು ಸರ್ಕಾರದ ಅತ್ಯುನ್ನತ ಮಟ್ಟದ ಚಿಂತನಾ ವೇದಿಕೆ. ಸರ್ಕಾರದ ಆರ್ಥಿಕ ನೀತಿ ವಿಚಾರದಲ್ಲಿ ಸಲಹೆ ನೀಡುವ ಗುಂಪಿದು. ಈ ಹಿಂದೆ ಇದ್ದ ಯೋಜನಾ ಆಯೋಗವನ್ನು ರದ್ದು ಮಾಡಿ ಈ ಸರ್ಕಾರ ನೀತಿ ಆಯೋಗ್ ರಚಿಸಿದೆ. ಈ ನೀತಿ ಆಯೋಗ್ಗೆ ಪ್ರಧಾನಿಗಳು ಛೇರ್ಮನ್ ಆಗಿರುತ್ತಾರೆ. ಸದ್ಯ ವೈಸ್ ಛೇರ್ಮನ್ ಆಗಿ ಸುಮನ್ ಕೆ ಬೆರಿ ಅವರಿದ್ದಾರೆ. ಡಾ. ವಿ.ಕೆ. ಸಾರಸ್ವತ್, ಡಾ. ವಿ.ಕೆ. ಪೌಲ್, ಡಾ. ರಾಜೀವ್ ಗೌಬಾ, ರಮೇಶ್ ಚಂದ್ ಮತ್ತು ಅರವಿಂದ್ ವಿರ್ಮಾನಿ ಅವರು ನೀತಿ ಆಯೋಗ್ನ ಪೂರ್ಣ ಸದಸ್ಯರಾಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
