ಬೆಂಗಳೂರು ಚಿತ್ರೋತ್ಸವ: ಫೆ.3ರಂದು ವೀಕ್ಷಿಸಬಹುದಾದ 10 ಬೆಸ್ಟ್ ಸಿನಿಮಾಗಳಿವು.. – Kannada News | Watch these 10 movies on Feb 3 in Bengaluru International Film Festival

ಹಲವು ದೇಶಗಳ ಸಿನಿಮಾಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFFes) ಪ್ರದರ್ಶನ ಮಾಡಲಾಗುತ್ತಿದೆ. ಸುಚಿತ್ರಾ ಫಿಲ್ಮ್ ಸೊಸೈಟಿ, ಲುಲು ಮಾಲ್ ಹಾಗೂ ಕಲಾವಿದರ ಸಂಘದಲ್ಲಿ ಸಿನಿಮಾಗಳ ಪ್ರದರ್ಶನ ಆಗುತ್ತಿದೆ. ‘ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂಬ ಥೀಮ್​​ನಲ್ಲಿ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಯಾವ ಸಿನಿಮಾ ನೋಡಬೇಕು ಎಂಬ ಗೊಂದಲ ಇದ್ದವರಿಗೆ ಉಪಯುಕ್ತ ಮಾಹಿತಿ ಇಲ್ಲಿದೆ..

1. ಡೆಡ್ ಡಾಗ್ – ಲೆಬನಾನ್/ ಫ್ರಾನ್ಸ್. (ಸಮಯ: ಮಧ್ಯಾಹ್ನ 3:10, ಸ್ಕ್ರೀನ್ 1). ವಿವರ: ಸಾರಾ ಫ್ರಾನ್ಸಿಸ್ ನಿರ್ದೇಶನದ ಈ 2025ರ ಅರೇಬಿಕ್ ಚಿತ್ರವು ಸಮಕಾಲೀನ ಸಂಬಂಧಗಳ ಸಂಕೀರ್ಣತೆಯನ್ನು ತೆರೆದಿಡುತ್ತದೆ. 92 ನಿಮಿಷಗಳ ಅವಧಿಯ ಈ ಸಿನಿಮಾ ಅಂತರಾಷ್ಟ್ರೀಯ ವಿಭಾಗದಲ್ಲಿ ಗಮನ ಸೆಳೆದಿದೆ.

2. ದ ಪೋರ್ಚುಗೀಸ್ ಹೌಸ್ – ಸ್ಪೇನ್ (ಸಮಯ: ಬೆಳಗ್ಗೆ 10:10, ಸ್ಕ್ರೀನ್ 2). ವಿವರ: ಅವೆಲಿನಾ ಪ್ರಾಟ್ ನಿರ್ದೇಶನದ ಈ ಸ್ಪ್ಯಾನಿಷ್ ಚಿತ್ರವು ಮಾನವ ಸಂಬಂಧಗಳ ಸೂಕ್ಷ್ಮತೆಯನ್ನು ಕಟ್ಟಿಕೊಡುತ್ತದೆ. ಇದು 114 ನಿಮಿಷಗಳ ಭಾವನಾತ್ಮಕ ಪ್ರಯಾಣವಾಗಿದೆ.

3. ಆ್ಯಶಸ್ ಆ್ಯಂಡ್ ಡೈಮಂಡ್ಸ್ – ಪೋಲೆಂಡ್ (ಸಮಯ: ಬೆಳಗ್ಗೆ 9:50, ವಿಐಪಿ ಸ್ಕ್ರೀನ್ 3). ವಿವರ: ಆಂಡ್ರೆಜ್ ವಾಜ್ದಾ ನಿರ್ದೇಶನದ 1958ರ ಈ ಸಿನಿಮಾ ವಿಶ್ವ ಚಿತ್ರರಂಗದ ಸರ್ವಕಾಲಿಕ ಶ್ರೇಷ್ಠ ಕೃತಿಗಳಲ್ಲಿ ಒಂದು. ಪೋಲಿಷ್ ಭಾಷೆಯ ಈ ಚಿತ್ರವು ಯುದ್ಧದ ನಂತರದ ಪರಿಸ್ಥಿತಿಯನ್ನು ಅದ್ಭುತವಾಗಿ ಚಿತ್ರಿಸುತ್ತದೆ.

4. ಮದರ್ ಟಂಗ್ – ಚೀನಾ (ಸಮಯ: ಮಧ್ಯಾಹ್ನ 12:00, ಸ್ಕ್ರೀನ್ 3). ವಿವರ: ಜಾಂಗ್ ಲು ನಿರ್ದೇಶನದ ಈ ಮ್ಯಾಂಡರಿನ್ ಭಾಷೆಯ ಚಿತ್ರವು ಭಾಷೆ ಮತ್ತು ಸಂಸ್ಕೃತಿಯ ನಡುವಿನ ಕೊಂಡಿಯನ್ನು ವಿವರಿಸುತ್ತದೆ. 122 ನಿಮಿಷಗಳ ಈ ಚಿತ್ರವು ಸಿನಿಮಾ ಪ್ರೇಮಿಗಳಿಗೆ ಉತ್ತಮ ಆಯ್ಕೆ.

5. ದ ನೇಚರ್ ಆಫ್ ಇನ್ವಿಸಿಬಲ್ ಥಿಂಗ್ಸ್- ಬ್ರೇಜಿಲ್ (ಸಮಯ: ಸಂಜೆ 6:00, ಸುಚಿತ್ರಾ ಫಿಲ್ಮ್ ಸೊಸೈಟಿ). ವಿವರ: ರಾಫೆಲಾ ಕ್ಯಾಮೆಲೊ ನಿರ್ದೇಶನದ ಈ 2025ರ ಪೋರ್ಚುಗೀಸ್ ಚಿತ್ರವು ವಿಭಿನ್ನ ಕಥಾವಸ್ತುವನ್ನು ಹೊಂದಿದೆ. ಕಲಾತ್ಮಕ ಸಿನಿಮಾಗಳನ್ನು ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದಂತಿದೆ.

6. ಚಾಪಿನ್, ಎ ಸೋನಾಟಾ ಇನ್ ಪ್ಯಾರಿಸ್ – ಪೋಲೆಂಡ್ (ಸಮಯ: ಬೆಳಗ್ಗೆ 10:10, ಸ್ಕ್ರೀನ್ 4). ವಿವರ: ಮೈಕಲ್ ಕ್ವಿನ್ಸಿನ್ಸ್ಕಿ ನಿರ್ದೇಶನದ ಈ ಪೋಲಿಷ್ ಸಿನಿಮಾ ಸಂಗೀತ ಪ್ರೇಮಿಗಳಿಗೆ ಇಷ್ಟವಾಗಲಿದೆ. 133 ನಿಮಿಷಗಳ ಸುದೀರ್ಘ ಕಥಾಹಂದರವನ್ನು ಇದು ಹೊಂದಿದೆ.

ಇದನ್ನೂ ಓದಿ: ಬೇರೆ ದೇಶಗಳ ಸಿನಿಮಾ ಯಾಕೆ ನೋಡಬೇಕು? ವಿವರಿಸಿದ ಸಿಎಂ ಸಿದ್ದರಾಮಯ್ಯ

7. ಭವನಿ ಭವಾಯಿ – ಗುಜರಾತಿ (ಸಮಯ: ರಾತ್ರಿ 8:10, ವಿಐಪಿ ಸ್ಕ್ರೀನ್ 3). ವಿವರ: ಕೇತನ್ ಮೆಹ್ತಾ ನಿರ್ದೇಶನದ 1980ರ ಈ ಕ್ಲಾಸಿಕ್ ಚಿತ್ರವು ಜಾನಪದ ಶೈಲಿಯಲ್ಲಿದೆ. ಜಾತಿ ಪದ್ಧತಿಯ ವಿಡಂಬನೆ ಮಾಡುವ ಈ ಸಿನಿಮಾ ಭಾರತೀಯ ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದು.

8. ವಾಸ್ತುಹಾರ – ಮಲಯಾಳಂ (ಸಮಯ: ರಾತ್ರಿ 8:30, ವಿಐಪಿ ಸ್ಕ್ರೀನ್ 2). ವಿವರ: ಜಿ. ಅರವಿಂದನ್ ನಿರ್ದೇಶನದ ಈ 1991ರ ಸಿನಿಮಾ ಬಂಗಾಳದ ವಿಭಜನೆಯ ಸಂದರ್ಭದ ನಿರಾಶ್ರಿತರ ಕಥೆಯನ್ನು ಹೇಳುತ್ತದೆ. ಇದು ಬಹಳ ಗಂಭೀರವಾದ ಮತ್ತು ಅರ್ಥಪೂರ್ಣವಾದ ಸಿನಿಮಾ.

9. ಎ ಪೋಯೆಟ್ – ಕೊಲಂಬಿಯಾ/ ಸ್ಪೇನ್ (ಸಮಯ: ರಾತ್ರಿ 8:00, ಸ್ಕ್ರೀನ್ 5). ವಿವರ: ಸಿಮೋನ್ ಮೆಸಾ ಸೊಟೊ ನಿರ್ದೇಶನದ ಈ ಸ್ಪ್ಯಾನಿಷ್ ಚಿತ್ರವು ಕವಿ ಮತ್ತು ಅವನ ಬದುಕಿನ ಸುತ್ತ ಸಾಗುತ್ತದೆ.

10. ಎ ಪ್ರೆಗ್ನೆಂಟ್ ವಿಡೋ – ಮಲಯಾಳಂ (ಸಮಯ: ಮಧ್ಯಾಹ್ನ 3:10, ಸ್ಕ್ರೀನ್ 2). ವಿವರ: ಉಣ್ಣಿ ಕೆ.ಆರ್. ನಿರ್ದೇಶನದ ಈ ಹೊಸ ಚಿತ್ರವು ಸಮಕಾಲೀನ ಕೇರಳದ ಸಾಮಾಜಿಕ ಚಿತ್ರಣವನ್ನು ನೀಡುತ್ತದೆ. 125 ನಿಮಿಷಗಳ ಈ ಸಿನಿಮಾ ಗಂಭೀರ ಚರ್ಚೆಗೆ ಹಾದಿ ಮಾಡಿಕೊಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೋಲಾರ್ ಪ್ಲಾಂಟ್ ಹೆಸರಲ್ಲಿ ಗುಡ್ಡ ಅಗೆದು ಮರಗಳ ಮಾರಣಹೋಮ: ಇದರ ಹಿಂದೆ ‘ಲಕ್ಷ್ಮೀ’ ಕೃಪಾಕಟಾಕ್ಷ? – Kannada News | Belagavi Forest Destruction: Illegal Sandalwood Felling for Solar Plant Outrages Locals

ಬೆಳಗಾವಿ, ಫೆಬ್ರವರಿ 02: ಅದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರ ತವರು ಕ್ಷೇತ್ರ. ಸಂಗೊಳ್ಳಿ ರಾಯಣ್ಣ ಕೂಡ ಈ ಕೌರಿ ಗುಡ್ಡದಲ್ಲಿ ಉಳಿದಿದ್ದ ಅನ್ನೋದು ಇತಿಹಾಸ. ಈ ಗುಡ್ಡದಲ್ಲಿ ಶ್ರೀಗಂಧದ ಮರ ಸೇರಿದಂತೆ ಹಲವು ಬಗೆಯ ಗಿಡಗಳು, ಪ್ರಾಣಿ-ಪಕ್ಷಿಗಳು ವಾಸವಾಗಿವೆ. ಆದರೆ ಇದೀಗ ಸೋಲಾರ್ ಪ್ಲಾಂಟ್ ಹೆಸರಿನಲ್ಲಿ  ಗುಡ್ಡವನ್ನೇ ಅಗೆಯಲಾಗಿದ್ದು, ಸಾವಿರಾರು ಮರಗಳ (tree) ಮಾರಣಹೋಮವೇ ನಡೆದಿದೆ. ಸದ್ಯ ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ತಾಲೂಕಿನ ಬಡಲಾ ಅಂಕಲಗಿ ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿಂದ ನಿರಂತರವಾಗಿ ಗುಡ್ಡ ಅಗೆಯುವ ಹಾಗೂ ಮರಗಳನ್ನ ಕಟ್ ಮಾಡುವ ಕೆಲಸ ನಡೆಯುತ್ತಿದೆಯಂತೆ. ವಿಚಾರ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ತಡೆಯುವ ಕೆಲಸ ಮಾಡಿದ್ದು, ಅವರಿಗೂ ಬೆದರಿಕೆ ಹಾಕಿ ಕೆಲಸ ಮುಂದುವರೆಸಿದ್ದಾರೆ. ಯಾವಾಗ ರೈತರು ವಿರೋಧ ವ್ಯಕ್ತಪಡಿಸಿದರೂ ಆಗ ಜೆಸಿಬಿ ಸಮೇತ ಕಾಲ್ಕಿತ್ತಿದ್ದಾರೆ. ಈವರೆಗೂ 40 ಎಕರೆಗೂ ಹೆಚ್ಚು ಪ್ರದೇಶವನ್ನ ಅಗೆದು ಹಾಳು ಮಾಡಲಾಗಿದೆ.

ಸಚಿವೆ ಕುಮ್ಮಕ್ಕು ಆರೋಪ

ಶ್ರೀಗಂಧದ, ತೇಗು ಮತ್ತು ವಿವಿಧ ಹಣ್ಣಿನ ಗಿಡಗಳು, ರಾಷ್ಟ್ರೀಯ ಪಕ್ಷಿ ನವಿಲು ಸೇರಿದಂತೆ ಹಲವು ಪ್ರಾಣಿ ಪಕ್ಷಿಗಳು ಈ ಜಾಗದಲ್ಲಿ ವಾಸಿಸುತ್ತಿದ್ದವು. ಸೋಲಾರ್ ಪ್ಲಾಂಟ್ ನಿರ್ಮಾಣದ ಹೆಸರಿನಲ್ಲಿ ಈ ರೀತಿ ಮರಗಿಡಗಳನ್ನ ಕಟಾವು ಮಾಡಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮರಗಳ ಮಾರಣಹೋಮ ನಡೆಯುತ್ತಿದ್ರೂ ಅವರಿಗೆ ಈ ವಿಚಾರ ಗೊತ್ತಿಲ್ಲವಾ ಅಥವಾ ಅವರ ಕುಮ್ಮಕ್ಕಿನಿಂದ ಈ ರೀತಿ ಆಗಿದೆ ಅಂತಾನೂ ರೈತರು ಆರೋಪ ಮಾಡುತ್ತಿದ್ದಾರೆ.

ಇದನ್ನೂ ಓದಿ: Belagavi: ಅಕ್ರಮ ಗಣಿಗಾರಿಕೆ ನಿಲ್ಲಿಸದ್ದಕ್ಕೆ ರಣಚಂಡಿಯಾದ ಮಹಿಳಾ ಅಧಿಕಾರಿ

ಇನ್ನು ಟಿವಿ9 ಮರಗಳ ಮಾರಣಹೋಮ ಕುರಿತು ವಿಸ್ತೃತವಾದ ಸುದ್ದಿ ಬಿತ್ತರಿಸುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದರು. ಅಷ್ಟೇ ಅಲ್ಲದೆ ಹೆಸ್ಕಾಂ ಅಧಿಕಾರಿಗಳು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆಗೆ ಸೇರಿರುವ ಸರ್ವೇ ನಂಬರ್ 359ರ ಗೈರಾಣು ಜಾಗದಲ್ಲಿ 67ಎಕರೆ ಜಮೀನು ಪ್ರದೇಶದಲ್ಲಿ ಸೊಲಾರ್ ಪ್ಲಾಂಟ್ ಮಾಡಲು ತಹಶಿಲ್ದಾರ್​ ಬಸವರಾಜ್ ನಾಗರಾಳ ಅನುಮತಿ ನೀಡಿದ್ದಾರೆ. ಇದು ಹೆಸ್ಕಾಂ ಇಲಾಖೆಗೆ ಕಳುಹಿಸಿದ್ದು, ಇಂಧನ ಇಲಾಖೆಯಿಂದ ಈ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ.

ಪಿಎಂ ಕುಸುಮ ಪೀಡರ್ ಲೇವಲ್ ಸೊಲ್ ರೈಸೇಷನ್ ಯೋಜನೆಯಡಿ ಸೌರಘಟಕ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಗೈರಾಣು ಜಾಗವಿದ್ರೂ ಅರಣ್ಯ ಇರುವ ಕಾರಣಕ್ಕೆ ಅರಣ್ಯ ಇಲಾಖೆಗೆ ಹೆಸ್ಕಾಂ ಇಲಾಖೆಯಿಂದ ಪತ್ರ ಕೂಡ ಬರೆದಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಪತ್ರ ಬರೆದಿದ್ದು, ಅನುಮತಿ ನೀಡಿಲ್ಲ. ಅರಣ್ಯ ಇಲಾಖೆಯಿಂದ ಅನುಮತಿ ಸಿಗದಿದ್ರೂ ಮರಗಳನ್ನ ಕಟ್ ಮಾಡಲಾಗಿದೆ. ಈ ಬಗ್ಗೆ ಸ್ಥಳಕ್ಕೆ ಬಂದ ಹೆಸ್ಕಾಂ ಅಧಿಕಾರಿಗಳನ್ನ ಕೇಳಿದರೆ ಮೌಖಿಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದು, ಹೀಗಾಗಿ ಕೆಲಸ ಆರಂಭಿಸಿದ್ದೇವೆ ಅಂತಾ ಹೇಳಿದ್ದಾರೆ.

ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡ ರೈತರು

ಸ್ಥಳಕ್ಕೆ ಬಂದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹೆಸ್ಕಾಂ ಎಇಇ ಅಣ್ಣಪ್ಪ ಅವರ ಮಾತು ಕೇಳ್ತಿದ್ದಂತೆ ತರಾಟೆಗೆ ತೆಗೆದುಕೊಂಡರು. ಎಸಿಎಫ್ ನಾಗರಾಜ್ ಅವರೇ ತರಾಟೆಗೆ ತೆಗೆದುಕೊಂಡು ದಿಕ್ಕು ತಪ್ಪಿಸದಂತೆ ಹೇಳಿದರು. ಇದೇ ವೇಳೆ ರೈತರು ಎರಡು ಇಲಾಖೆಯ ಅಧಿಕಾರಿಗಳನ್ನ ತರಾಟೆ ತೆಗೆದುಕೊಂಡರು. ಮರಗಳನ್ನ ಕಟ್ ಮಾಡಿರುವ ಅಧಿಕಾರಿ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸಿಎಫ್ ನಾಗರಾಜ್, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಜೀರೋ ಹೆಸರಿನಲ್ಲಿ ಭೂ ಹಗರಣ: ವಾರಸುದಾರರಿಲ್ಲದ ಭೂಮಿ ಲಪಟಾಯಿಸಿದ ಪ್ರಭಾವಿಗಳು

ಸದ್ಯ ಪ್ರಕರಣವನ್ನ ಬೆಳಗಾವಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಕೂಡ ಗಂಭೀರವಾಗಿ ತೆಗೆದುಕೊಂಡಿದ್ದು ಅನುಮತಿ ಇಲ್ಲದೇ ಮರಗಳನ್ನ ಕಟ್ ಮಾಡಿರುವುದೇಕೆ ಅನ್ನೋ ನಿಟ್ಟಿನಲ್ಲಿ ತನಿಖೆ ಆಗುತ್ತಿದೆ. ಇನ್ನೊಂದು ಕಡೆ ಶ್ರೀಗಂಧದ ಮರಗಳಿರುವ ಕಾಡನ್ನ ತರಾತುರಿಯಲ್ಲಿ ಯಾರ ಗಮನಕ್ಕೆ ತರದೇ ಕಟ್ ಮಾಡಿರುವುದೇಕೆ ಇದರ ಹಿಂದೆ ಯಾರಿದ್ದಾರೆ ಅನ್ನೊದು ಕೂಡ ಹೊರಬರಬೇಕಿದೆ. ಸದ್ಯ ಸಾವಿರಾರು ಮರಗಳ ಮಾರಣಹೋಮ ನಡೆದಿದ್ದು, ಇದಕ್ಕೆ ಹೊಣೆ ಯಾರು, ತಪ್ಪಿತಸ್ಥರ ವಿರುದ್ದ ಕ್ರಮವಾಗುತ್ತಾ ಅನ್ನೋದನ್ನ ಕೂಡ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾತ್ರಿ ಮಲಗುವ ಮುನ್ನ ಮಾಡುವ ಈ ತಪ್ಪುಗಳು ನಿಮ್ಮ ನಿದ್ರಗೆ ಭಂಗ ತರಬಹುದು ಎಚ್ಚರ! – Kannada News | Never make these mistakes before going to bed at night

ದೇಹಾರೋಗ್ಯಕ್ಕೆ ಆಹಾರದಂತೆ ನಿದ್ರೆಯೂ (sleep) ಅತೀ ಅವಶ್ಯಕ. ಅದರಲ್ಲೂ ಪ್ರತಿಯೊಬ್ಬ ವ್ಯಕ್ತಿಯೂ ಕನಿಷ್ಟ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು. ನಾವು ಸಾಕಷ್ಟು ನಿದ್ರೆ ಮಾಡಿದಾಗ, ನಮ್ಮ ದೇಹವು ದಿನದ ಆಯಾಸದಿಂದ ಚೇತರಿಸಿಕೊಳ್ಳುತ್ತದೆ ಮತ್ತು ಮನಸ್ಸು ಉಲ್ಲಾಸಗೊಳ್ಳುತ್ತದೆ. ಅದೇ ಏಳೆಂಟು ಗಂಟೆ ನಿದ್ರೆ ಮಾಡಲು ಸಾಧ್ಯವಾಗದಿದ್ದರೆ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವುದಲ್ಲದೆ, ದೈನಂದಿನ ಚಟುವಟಿಕೆಯ ಮೇಲೂ ಇದು ಪರಿಣಾಮ ಬೀರುತ್ತದೆ. ಹೀಗೆ ಸರಿಯಾಗಿ ನಿದ್ರೆ ಬಾರದಿರಲು, ನಿದ್ರಾಹೀನತೆ ನಾವು ಮಾಡುವ ಕೆಲವು ತಪ್ಪುಗಳು ಸಹ ಕಾರಣವಂತೆ. ಹಾಗಿದ್ರೆ ನಿದ್ರೆಗೆ ಭಂಗ ತರುವ ಆ ತಪ್ಪುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ನಿದ್ರೆಗೆ ಭಂಗ ತರುವ ಅಭ್ಯಾಸಗಳಿವು:

ಮಲಗುವ ಮುನ್ನ ಮೊಬೈಲ್ ಮತ್ತು ಲ್ಯಾಪ್‌ಟಾಪ್ ನೋಡುವುದು: ಇದು ನಾವು ಮಾಡುವ ಅತ್ಯಂತ ಸಾಮಾನ್ಯ ತಪ್ಪು. ಮೊಬೈಲ್, ಲ್ಯಾಪ್‌ಟಾಪ್ ಪರದೆಗಳಿಂದ ಹೊರಸೂಸುವ ನೀಲಿ ಬೆಳಕು ನಮ್ಮ ದೇಹದಲ್ಲಿ ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಯನ್ನು ಪ್ರತಿಬಂಧಿಸುತ್ತದೆ. ಮೆಲಟೋನಿನ್ ನಮ್ಮ ನಿದ್ರೆ-ಎಚ್ಚರ ಚಕ್ರವನ್ನು ನಿಯಂತ್ರಿಸುವ ಹಾರ್ಮೋನ್ ಆಗಿದ್ದು, ಇದಕ್ಕೆ ಅಡಿಯುಂಟಾದಾಗ, ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ. ಆದ್ದರಿಂದ, ಮಲಗುವ ಸಮಯಕ್ಕೆ ಕನಿಷ್ಠ ಒಂದು ಗಂಟೆ ಮೊದಲು ಎಲ್ಲಾ ಗ್ಯಾಜೆಟ್‌ಗಳಿಂದ ದೂರವಿರಿ.

ಮಲಗುವ ಮುನ್ನ ಭಾರವಾದ ಅಥವಾ ಮಸಾಲೆಯುಕ್ತ ಆಹಾರ ಸೇವಿಸವುದು: ರಾತ್ರಿ ಊಟ ಹಗುರವಾಗಿರಬೇಕು ಮತ್ತು ಸುಲಭವಾಗಿ ಜೀರ್ಣವಾಗಬೇಕು. ಮಲಗುವ ಮುನ್ನ ಹುರಿದ ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಆಮ್ಲೀಯತೆ ಮತ್ತು ಅಜೀರ್ಣ ಉಂಟಾಗುತ್ತದೆ. ಮತ್ತು ರಾತ್ರಿಯ ಸಮಯ ದೇಹವು ಆಹಾರವನ್ನು ಜೀರ್ಣಿಸಿಕೊಳ್ಳುವುದರಲ್ಲಿಯೇ ನಿರತವಾಗಿರುತ್ತದೆ, ಇದು ವಿಶ್ರಾಂತಿ ಪಡೆಯುವುದನ್ನು ತಡೆಯುತ್ತದೆ ಮತ್ತು ನಿದ್ರೆಗೂ ಅಡ್ಡಿಪಡಿಸುತ್ತದೆ. ಅಷ್ಟೇ ಅಲ್ಲದೆ ಈ ತಪ್ಪಿನಿಂದ  ಬೊಜ್ಜು ಮತ್ತು ಇತರ ಜೀರ್ಣಕಾರಿ ಅಸ್ವಸ್ಥತೆಗಳ ಅಪಾಯ ಉಂಟಾಗುವ ಸಾಧ್ಯತೆಯೂ ಇದೆ.

ಕೆಫೀನ್ ಮತ್ತು ಮದ್ಯ ಸೇವನೆ: ಮಲಗುವ ಮುನ್ನ ಕಾಫಿ, ಟೀ, ತಂಪು ಪಾನೀಯಗಳು ಅಥವಾ ಮದ್ಯಪಾನ ಸೇವನೆ ಮಾಡುವ ಅಭ್ಯಾಸವು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮಲಗುವ ಮುನ್ನ ಈ ಪಾನೀಯಗಳನ್ನು ಸೇವನೆ ಮಾಡಬೇಡಿ.

ಇದನ್ನೂ ಓದಿ: ಒತ್ತಡ, ಆಯಾಸವಿಲ್ಲದೆ ನೆಮ್ಮದಿಯಿಂದ ನಿದ್ರೆ ಮಾಡಲು ರಾತ್ರಿ ವೇಳೆ ಅಭ್ಯಾಸಗಳನ್ನು ಪಾಲಿಸಿ

ಒಳ್ಳೆಯ ನಿದ್ರೆ ಪಡೆಯುವುದು ಹೇಗೆ?

ರಾತ್ರಿಯ ಉತ್ತಮ ನಿದ್ರೆ ಪಡೆಯಲು, ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಮೊದಲಿಗೆ ಮಲಗುವ ಸಮಯವನ್ನು ನಿಗದಿಪಡಿಸಿ ಮತ್ತು ಪ್ರತಿದಿನ ಆ ಸಮಯದಲ್ಲಿಯೇ ಮಲಗಲು ಪ್ರಯತ್ನಿಸಿ. ಮಲಗುವ ಮುನ್ನ ಕೋಣೆಯನ್ನು ಕತ್ತಲೆಯಾಗಿಡಿ. ಶಾಂತ ಮತ್ತು ಆರಾಮದಾಯಕ ವಾತಾವರಣವನ್ನು ರಚಿಸಿ. ಮಲಗುವ ಮುನ್ನ ಪುಸ್ತಕ ಓದುವುದು ಸಹ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಉತ್ತಮ ನಿದ್ರೆಗಾಗಿ ನೀವು ಮಲಗುವ ಮುನ್ನ ಧ್ಯಾನವನ್ನೂ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೀರೋಗೆ ಕಾಂಡೋಮ್ ಕೊಡ್ತಾರೆ ಎಂದ ಚಂದ್ರಚೂಡ್ ಮಾತಿಗೆ ಕೆ. ಮಂಜು ಗರಂ – Kannada News | Producer K Manju reaction on Chakravarthy Chandrachud controversy

ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಅವರು ಇತ್ತೀಚೆಗೆ ನಿರ್ಮಾಪಕರ ಬಗ್ಗೆ ಮಾತನಾಡಿದ್ದು ವಿವಾದಕ್ಕೆ ಕಾರಣ ಆಗಿದೆ. ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಕೊಡುತ್ತಾರೆ ಅಂತ ಚಂದ್ರಚೂಡ್ ಹೇಳಿದ್ದಾರೆ. ಅದನ್ನು ‘ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ’ ಖಂಡಿಸಿದೆ. ಅಲ್ಲದೇ, ಚಂದ್ರಚೂಡ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಬಗ್ಗೆ ಹಿರಿಯ ನಿರ್ಮಾಪಕ ಕೆ. ಮಂಜು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಚಂದ್ರಚೂಡ್ ಹೇಳಿಕೆಗೆ ಕೆ. ಮಂಜು (Producer K Manju) ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

‘ನಿನ್ನೆ ಸಂಜೆ ನಿರ್ಮಾಪಕರ ಸಂಘದಿಂದ ತುಂಬಾ ನಿರ್ಮಾಪಕರು ಕರೆ ಮಾಡಿದರು. ಈ ವಿಡಿಯೋ ನೋಡಿದ್ರಾ ಅಂತ ಕೇಳಿದರು. ಪೂರ್ತಿ ವಿಡಿಯೋ ನೋಡಿದೆ. ಕೆವಿಎನ್ ಸಂಸ್ಥೆ ಬಗ್ಗೆ ಚಂದ್ರಚೂಡ್ ಮಾತನಾಡಿದ್ದಾರೆ. ಅದನ್ನೆಲ್ಲ ಮಾತನಾಡೋಕೆ ಚಂದ್ರಚೂಡ್ ಯಾರು? ಸೆನ್ಸಾರ್ ಮಂಡಳಿ ಬಗ್ಗೆ, ನ್ಯಾಯಾಲಯದ ಬಗ್ಗೆ ಕೂಡ ಚಂದ್ರಚೂಡ್ ಮಾತನಾಡಿದ್ದಾರೆ. ಗೊತ್ತಿಲ್ಲದೇ ಏನೇನೋ ಮಾತನಾಡಬಾರದು. ಹೀರೋಗೆ ನಿರ್ಮಾಪಕರು ಕಾಂಡೋಮ್ ಕೊಟ್ಟಿದ್ದಾರೆ ಅಂತ ಚಂದ್ರಚೂಡ್ ಹೇಳಿದ್ದಾರೆ. ಅದನ್ನು ಇವರು ನೋಡಿದ್ದಾರಾ? ಅಂಥ ನಿರ್ಮಾಪಕ ಯಾರು ಅನ್ನೋದು ಹೇಳಿದರೆ ಅಂಥವರನ್ನು ನಾವು ದೂರ ಇಡುತ್ತೇವೆ’ ಎಂದಿದ್ದಾರೆ ಕೆ. ಮಂಜು.

‘ಇದು ಚಂದ್ರಚೂಡ್ ಅವರ ದುರಹಂಕಾರದ ಪರಮಾವಧಿ. ತಮ್ಮ ಯೂಟ್ಯೂಬ್​​ನಲ್ಲಿ ನೋಡುಗರ ಸಂಖ್ಯೆ ಜಾಸ್ತಿ ಮಾಡಿಕೊಳ್ಳಲು ಹೇಳಿರಬಹುದು. ಆ ರೀತಿ ಆಗಬಾರದು. ನಿರ್ಮಾಪಕರ ಕಷ್ಟ ಏನು ಎಂಬುದು ನಿರ್ಮಾಪಕರಿಗೆ ಮಾತ್ರ ಗೊತ್ತು. ಕಳೆದ 3 ತಿಂಗಳಿಂದ ಸುಮಾರು 200 ಕೋಟಿ ರೂಪಾಯಿ ನಷ್ಟ ಆಗಿದೆ. ಇನ್ನು 9 ತಿಂಗಳು ಲೆಕ್ಕ ಹಾಕಿಕೊಳ್ಳಿ. ನಿರ್ಮಾಪಕರು ಸಂಕಷ್ಟದಲ್ಲಿ ಇದ್ದಾರೆ. ನೀವು ಯಾಕೆ ಈ ರೀತಿ ಮಾತನಾಡುತ್ತೀರಿ’ ಎಂದು ಕೆ. ಮಂಜು ಪ್ರಶ್ನಿಸಿದ್ದಾರೆ.

‘ಚಿತ್ರರಂಗಕ್ಕೆ ಏನು ಒಳ್ಳೆಯದು ಮಾಡಬೇಕು ಎಂಬ ಬಗ್ಗೆ ಆಲೋಚನೆ ಮಾಡೋಣ. ಒಳ್ಳೆಯ ಕಥೆ ಕ್ರಿಯೇಟ್ ಮಾಡೋಣ. ಬಂದ ತಕ್ಷಣ ದುಡ್ಡು ಬೇಕು ಎಂದರೆ ನಿರ್ಮಾಪಕ ಎಲ್ಲಿಂದ ತರುತ್ತಾನೆ. ಅಲ್ಲದೇ ಈ ರೀತಿ ನಿಂದನೆ ಯಾಕೆ ಮಾಡಬೇಕು? ಚಿತ್ರರಂಗಕ್ಕೆ ಚಂದ್ರಚೂಡ್ ಕೊಡುಗೆ ಏನು? ಯಾರೂ ಕೂಡ ಇನ್ಮುಂದೆ ಈ ರೀತಿ ಮಾತನಾಡಬಾರದು ಎಂಬ ಉದ್ದೇಶದಿಂದ ಕ್ರಿಮಿನಲ್ ಕೇಸ್ ದಾಖಲಿಸಿದ್ದೇವೆ’ ಎಂದು ಕೆ. ಮಂಜು ಅವರು ಹೇಳಿದ್ದಾರೆ.

ಇದನ್ನೂ ಓದಿ: ಚಕ್ರವರ್ತಿ ಚಂದ್ರಚೂಡ್ ವಿರುದ್ಧ ದೂರು ನೀಡಿದ ನಿರ್ಮಾಪಕರ ಸಂಘ

ಸುದೀಪ್ ಜೊತೆ ಚಂದ್ರಚೂಡ್ ಇದ್ದಾರೆ. ಆ ಬಗ್ಗೆ ಕೂಡ ಕೆ. ಮಂಜು ಮಾತನಾಡಿದ್ದಾರೆ. ‘ಸುದೀಪ್ ಅವರಿಗೆ ಇಂಥದ್ದೆಲ್ಲ ಗೊತ್ತಿರಲ್ಲ. ಈ ರೀತಿ ಆದರೆ ಇಂಥವರನ್ನು ಅವರು ಹತ್ತಿರಕ್ಕೆ ಸೇರಿಸಿಕೊಳ್ಳಲ್ಲ. ಯಾಕೆಂದರೆ ಸುದೀಪ್ ಅವರು ಕ್ಲೀನ್ ವ್ಯಕ್ತಿ’ ಎಂದು ಕೆ. ಮಂಜು ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್ – Kannada News | CM Siddaramaiah Reacts on BJP Leader Alleged about Karnataka Governmnet

ಬೆಂಗಳೂರು, ಫೆಬ್ರವರಿ 2): ವಿಧಾನಸಭೆ ಅಧಿವೇಶನದಲ್ಲಿ (Karnataka Assembly Session) ಇಂದು (ಫೆಬ್ರವರಿ 02) ಕಾಂಗ್ರೆಸ್ ಅಧಿಕಾರ ಹಂಚಿಕೆ ಬಗ್ಗೆಯೂ ಸಹ ಪ್ರಸ್ತಾಪವಾಗಿದ್ದು, ಈ ಬಗ್ಗೆ ಆಸಕ್ತಿಕರ ಚರ್ಚೆ ನಡೆದಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಭಾರೀ ಚರ್ಚೆಯಾಗಿದೆ. ಇನ್ನೂ ಇದೇ ವೇಲೆ ವಿರೋಧ ಪಕ್ಷದ ನಾಯಕ ಅಶೋಕ್ ಅವರು ಮಾತನಾಡಿ ರಾಜ್ಯದಲ್ಲಿ ಕಾನುನು ಸುವ್ಯವಸ್ಥೆ ಹದಗೆಟ್ಟಿದೆ. ಸಿಎಂ ಸಹ ಅಸಹಾಯಕರಾಗಿದ್ದಾರೆ ಎಂದರು.

ಇದಕ್ಕೆ ಸಿದ್ದರಾಮಯ್ಯ  (Siddaramaiah) ಪ್ರತಿಕ್ರಿಯಿಸಿ, ಕಾನೂನು ಹದಗೆಟ್ಟಿಲ್ಲ. ಸರ್ಕಾರ ಹಾದಿನೂ ತಪ್ಪಿಲ್ಲ. ನಾನು ಅಸಹಾಯಕ ಸಿಎಂ ಅಲ್ಲ ಎಂದು ಖಡಕ್ ಆಗಿ ಹೇಳಿದರು. ಈ ಮೂಲಕ ವಿರೋಧಿಗಳಿಗೆ ಹೊಸ ಸಂದೇಶ ರವಾನಿಸಿದ್ದಾರೆ. ಸಿದ್ದರಾಮಯ್ಯ ಹೇಗೆಲ್ಲಾ ಖಡಕ್ ಆಗಿ ಉತ್ತರಿಸಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚಿಕ್ಕಬಳ್ಳಾಪುರದಲ್ಲಿ ಹೆಲಿಕಾಪ್ಟರ್ ಮೂಲಕ ಚಿನ್ನ ನಿಕ್ಷೇಪ ಹುಡುಕಾಟ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಸಿ – Kannada News | Chikkaballapur: GSI Aerial Survey for gold deposits by helicopter; DC reveals explosive information

ಹೆಲಿಕಾಪ್ಟರ್ ಮೂಲಕ ಶೋಧImage Credit source: tv9 kannada

ಚಿಕ್ಕಬಳ್ಳಾಪುರ, ಫೆಬ್ರವರಿ 02: ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಹೆಲಿಕಾಪ್ಟರ್ (Helicopter survey) ಮೂಲಕ ಬಂಗಾರ ಸೇರಿದಂತೆ ಭೂಗರ್ಭದಲ್ಲಿರುವ ನಿಧಿ-ನಿಕ್ಷೇಪಗಳ ಶೋಧಕಾರ್ಯ ನಡೆಯುತ್ತಿದೆ. ಇದರಿಂದ ಸ್ಥಳೀಯರಲ್ಲಿ ಕುತೂಹಲ ಹೆಚ್ಚಾಗಿದೆ. ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (ಜಿಎಸ್‌ಐ) ವತಿಯಿಂದ ಈ ಏರಿಯಲ್ ಸರ್ವೆ ನಡೆಸಲಾಗುತ್ತಿದೆ. ಹೆಲಿಕಾಪ್ಟರ್ ಹಾಗೂ ಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳನ್ನು ಬಳಸಿ ಭೂಗರ್ಭದ ಖನಿಜ ಸಂಪತ್ತಿನ ಕುರಿತು ಸಮಗ್ರ ಶೋಧ ಕಾರ್ಯ ಕೈಗೊಳ್ಳಲಾಗಿದೆ.

ಕೆ.ಜಿ.ಎಫ್. ಗೋಲ್ಡ್ ಮೈನಿಂಗ್ ಬೆಟ್ಟದ ಸಾಲಿಗೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಶೋಧಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಬೀಚಗಾನಹಳ್ಳಿ ಕ್ರಾಸ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಹಾಗೂ ಟೇಕಾಫ್ ಸಹಿತವಾಗಿ ಏರಿಯಲ್ ಸರ್ವೆ ನಡೆಸಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಅಗತ್ಯ ಅನುಮತಿ ಪಡೆಯಲಾಗಿದೆ.

ದಿಢೀರ್​ ಶೋಧಕಾರ್ಯ ಏಕೆ?

ಈ ಹಿಂದೆ ಕೂಡ ಜಿಲ್ಲೆಯಲ್ಲಿ ಬಂಗಾರದ ಕಣಗಳು ಪತ್ತೆಯಾಗಿತ್ತು. ಬಾಗೇಪಲ್ಲಿ ಹಾಗೂ ಗುಡಿಬಂಡೆ ತಾಲೂಕಿನ ಕೆಲ ರೈತರ ಜಮೀನುಗಳ ಮಣ್ಣಿನಲ್ಲೇ ಬಂಗಾರದ ಕಣಗಳು ಕಂಡುಬಂದಿದ್ದವು. ಇದೇ ಹಿನ್ನೆಲೆಯಲ್ಲೇ ಇದೀಗ ಹೆಲಿಕಾಪ್ಟರ್ ಮೂಲಕ ಭೂಗರ್ಭ ನಿಧಿ-ನಿಕ್ಷೇಪಗಳ ಶೋಧಕಾರ್ಯ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಮೇ 31ರವರೆಗೂ ಸರ್ವೆ ನಡೆಯುತ್ತೆ: ಜಿಲ್ಲಾಧಿಕಾರಿ ಜಿ.ಪ್ರಭು 

ಈ ಬಗ್ಗೆ ಟಿವಿ9ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಜಿ.ಪ್ರಭು ಪ್ರತಿಕ್ರಿಯಿಸಿದ್ದು, ಜಿಲ್ಲೆಯಲ್ಲಿ 2019-2020ರಲ್ಲಿ ಸರ್ವೆ ಕಾರ್ಯ ನಡೆದಿತ್ತು. ಆ ಸರ್ವೆ ಆಧರಿಸಿ ಈಗ ಆಳ ಅಧ್ಯಯನ ನಡೆದಿದೆ. ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ಭೌಗೋಳಿಕ ಮಾಹಿತಿ ವ್ಯವಸ್ಥೆ ವಿಭಾಗ ಹಾಗೂ ರಿಮೋಟ್ ಸೆನ್ಸಿಂಗ್ ವಿಭಾಗದಿಂದ ಸರ್ವೆ ನಡೆಯುತ್ತಿದೆ ಎಂದರು.

ಇದನ್ನೂ ಓದಿ: ಗುಡಿಬಂಡೆ ಬಳಿ ಇದೆಯಾ ಚಿನ್ನದ ನಿಕ್ಷೇಪ? ಹೆಲಿಕಾಪ್ಟರ್ ಮೂಲಕ ನಡೆಯಿತು ಶೋಧಕಾರ್ಯ

ಮೂಲ ಲೋಹಗಳು ಸೇರಿದಂತೆ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಸೇರಿದಂತೆ ಲೋಹಗಳ ಇರುವಿಕೆಯ ಬಗ್ಗೆ ಸರ್ವೆ ಮಾಡಲಾಗುತ್ತಿದ್ದು, ಮೇ 31ರವರೆಗೂ ಸರ್ವೆ ನಡೆಯುತ್ತೆ. ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸರ್ವೆ ನಡೆಯಲಿದ್ದು, ಹೆಲಿಕಾಪ್ಟರ್ ತೀರ ಕೆಳ ಹಂತದಲ್ಲಿ ಸಂಚಾರ ಮಾಡಲಿದೆ. ಹೀಗಾಗಿ ಸಾರ್ವಜನಿಕರು ಭಯ ಬೀಳದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಎಸ್​​ಪಿ ಕುಶಲ್ ಚೌಕ್ಸೆ ಹೇಳಿದ್ದಿಷ್ಟು 

ಇನ್ನು ಚಿಕ್ಕಬಳ್ಳಾಪುರ ಎಸ್​​ಪಿ ಕುಶಲ್ ಚೌಕ್ಸೆ ಮಾತನಾಡಿದ್ದು, ಸುಮಾರು 15 ದಿನಗಳ ಹಿಂದೆಯೇ ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಹೆಲಿಕಾಪ್ಟರ್ ಹಾರಾಟ ಮತ್ತು ಶೋಧ ಕಾರ್ಯ ನೋಡಲು ಸ್ಥಳೀಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:06 pm, Mon, 2 February 26

Source link

ಪಿಲಿಕುಳ ಝೂ ಅವ್ಯವಸ್ಥೆಗೆ ಹೈಕೋರ್ಟ್​​ ಗರಂ: ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದ ಪೀಠ – Kannada News | Pilikula Zoo Neglect: Karnataka High Court Angry with Government Over Poor Maintenance

ಪಿಲಿಕುಳ ಜೈವಿಕ ಉದ್ಯಾನವನImage Credit source: Google

ಮಂಗಳೂರು, ಫೆಬ್ರವರಿ 02: ಕರಾವಳಿಗರ ಮೆಚ್ಚಿನ ತಾಣ ಪಿಲಿಕುಳ ಝೂ‌‌ ಕಳೆದ ಕೆಲ ವರ್ಷಗಳಿಂದ ಅವ್ಯವಸ್ಥೆಯ ಆಗರವಾಗಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ಇಲ್ಲಿಯ ಸ್ಥಿತಿ ಕಂಡು ಸ್ವತಃ ಹೈಕೋರ್ಟ್ ನ್ಯಾಯಾಧೀಶರೇ ಶಾಕ್ ಆಗಿದ್ದಾರೆ. ವನ್ಯಜೀವಿ ಸಂರಕ್ಷಕ ಭುವನ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಪ್ರಾಣಿಗಳು ನರಳುತ್ತಿರೋ ಫೋಟೋಗಳನ್ನು ನೋಡಿ ನ್ಯಾಯಪೀಠ ಗರಂ ಆಗಿದೆ. ಅವುಗಳನ್ನು ಸರಿಯಾಗಿ ನೋಡಿಕೊಳ್ಳಲು ಆಗದಿದ್ರೆ ತಕ್ಷಣ ಬಂದ್ ಮಾಡಿ ಎಂದು ಸರ್ಕಾರಕ್ಕೆ ಖಡಕ್ ವಾರ್ನಿಂಗ್ ಕೊಟ್ಟಿದೆ.

ಮಂಗಳೂರು ಹೊರ ವಲಯದ ಪಿಲಿಕುಳ ಝೂ, ಸುಮಾರು 370 ಎಕರೆಗಳಷ್ಟು ವಿಶಾಲವಾಗಿರುವ ಪ್ರದೇಶದಲ್ಲಿರುವ ನಿಸರ್ಗಧಾಮ. ಪಶ್ಚಿಮ ಘಟ್ಟಗಳಲ್ಲಿ ಅಳಿವಿನಂಚಿನಲ್ಲಿರೋ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿರೋ ಪಿಲಿಕುಳ ವಿದ್ಯಾರ್ಥಿಗಳ, ಪ್ರವಾಸಿಗರ ನೆಚ್ಚಿನ ತಾಣ. ಅಂತಹ ಸುಂದರ ತಾಣ ಇಂದು ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ತುಕ್ಕು ಹಿಡಿದ ಪಂಜರ, ಕಲುಷಿತ ನೀರು, ಮೇಲಿಂದ ಮೇಲೆ ಮೃತಪಡುತ್ತಿರುವ ಪ್ರಾಣಿಗಳು, ಅಶುಚಿ ವಾತಾವರಣ ಪಿಲಿಕುಳ ಮೃಗಾಲಯದ ಸದ್ಯದ ಸ್ಥಿತಿ. ಮತ್ತೊಂದು ದುರಂತ ಅಂದ್ರೆ ಜನಮನ್ನಣೆ ಪಡೆದ ಈ ಪಾರ್ಕ್‌ ಲೈಸೆನ್ಸ್ ಅವಧಿ 2025ರ ಡಿಸೆಂಬರ್ 1ಕ್ಕೇ ಮುಕ್ತಾಯವಾಗಿದೆ. ಆದರೂ ಯಾವುದೇ ಪರವಾನಗಿ ಇಲ್ಲದೆ ಪಿಲಿಕುಳ ಮೃಗಾಲಯ ನಡೀತಿದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಕೇಂದ್ರ ಪ್ರಾಣಿ ಸಂಗ್ರಹಾಲಯ ಪ್ರಾಧಿಕಾರ 2023 ಮತ್ತು 2025ರಲ್ಲಿ ಶೋಕಾಸ್ ನೋಟಿಸ್ ನೀಡಿದ್ದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಂಡಿಲ್ಲ. ಮಲಿನಗೊಂಡ ನೀರು ಕುಡಿದು, ಸರಿಯಾದ ಚಿಕಿತ್ಸೆ ಸಿಗದೆ ಮೂಕ ಪ್ರಾಣಿಗಳು ಸಾವು-ಬದುಕಿನ ನಡುವೆ ಹೋರಾಟ ಮಾಡ್ತಿವೆ ಅನ್ನೋದು ಅರ್ಜಿದಾರರ ಗಂಭೀರ ಆರೋಪ.

ಇದನ್ನೂ ಓದಿ: ಪಿಲಿಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ, ತಾತ್ಕಾಲಿಕವಾಗಿ ಮುಚ್ಚಲು ಪಿಐಎಲ್

ಇನ್ನುಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಅದು ಪರಿಶೀಲನೆಯಲ್ಲಿದೆ‌ ಎಂದು ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ. ಅಲ್ಲದೆ ಆರೋಪಗಳ ಕುರಿತು ಉತ್ತರಿಸಲು ಸಮಯಾವಕಾಶ ಕೇಳಿದ್ದಾರೆ. ಆದರೆ ನ್ಯಾಯಾಲಯ ಮಾತ್ರ ಪ್ರಾಣಿಗಳಿಗೆ ರಕ್ಷಣೆ ನೀಡಲು ಸಾಧ್ಯವಾಗದಿದ್ರೆ ಅದನ್ನು ಮುಚ್ಚಿಬಿಡಿ ಎಂದು ಸರ್ಕಾರಕ್ಕೆ ಎಚ್ಚರಿಸಿ, ಫೆಬ್ರವರಿ 5ಕ್ಕೆ ವಿಚಾರಣೆ ಮುಂದೂಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಜೆಟ್ 2026: ಸರ್ಕಾರಕ್ಕೆ ಎಲ್ಲೆಲ್ಲಿಂದ ಆದಾಯ; ಎಲ್ಲೆಲ್ಲಿಗೆ ಖರ್ಚು? ಇಲ್ಲಿದೆ ಆಯ ಮತ್ತು ವ್ಯಯಗಳ ಲೆಕ್ಕ – Kannada News | Union budget 2026 of over Rs 53 trillion size, where govt gets money, where it spends, details here

2026ರ ಫೆಬ್ರುವರಿ 1ರಂದು ನಿರ್ಮಲಾ ಸೀತಾರಾಮನ್ ಅವರು 53.47 ಲಕ್ಷ ಕೋಟಿ ರೂ ಮೊತ್ತದ ಬಜೆಟ್ (Union Budget 2026) ಮಂಡಿಸಿದ್ದಾರೆ. ಇದೂವರೆಗಿನ ಅತಿದೊಡ್ಡ ಗಾತ್ರದ ಬಜೆಟ್ ಇದಾಗಿದೆ. ಕೆಲ ಪ್ರಮುಖ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಯಶಸ್ವಿಯಾದ ಅನೇಕ ಹಳೆಯ ಯೋಜನೆಗಳನ್ನು ಮುಂದುವರಿಸಲಾಗಿದೆ. ನೀತಿ ಸ್ಥಿರತೆಯಿಂದ ಈ ಬಜೆಟ್ ಗಮನ ಸೆಳೆದಿದೆ. ಭವಿಷ್ಯದ ದೃಷ್ಟಿಯಲ್ಲಿ ರೂಪುಗೊಂಡ ಬಜೆಟ್ ಎಂದು ಹಲವು ವಿಶ್ಲೇಷಕರು ಹೇಳುತ್ತಿದ್ದಾರೆ.

ಸರ್ಕಾರಕ್ಕೆ ಆದಾಯ ಎಲ್ಲೆಲ್ಲಿಂದ?

  • ಸಾಲಗಳು ಮತ್ತು ಹೊಣೆಗಾರಿಕೆಗಳು: ಶೇ. 24
  • ಆದಾಯ ತೆರಿಗೆ: ಶೇ. 21
  • ಕಾರ್ಪೊರೇಟ್ ತೆರಿಗೆ: ಶೇ. 18
  • ಜಿಎಸ್​ಟಿ ಮತ್ತಿತರ ತೆರಿಗೆ: ಶೇ. 15
  • ಕೇಂದ್ರ ಅಬಕಾರಿ ಸುಂಕ: ಶೇ. 6
  • ಕಸ್ಟಮ್ಸ್: ಶೇ. 4
  • ತೆರಿಗೆಯೇತರ ಆದಾಯ: ಶೇ. 10
  • ಸಾಲಯೇತರ ಬಂಡವಾಳ ಆದಾಯ: ಶೇ. 2

ಸರ್ಕಾರದ ಹಣ ಎಲ್ಲೆಲ್ಲಿಗೆ ಹೋಗುತ್ತೆ?

  • ರಾಜ್ಯಗಳ ತೆರಿಗೆ ಪಾಲು: ಶೇ. 22
  • ಸಾಲಕ್ಕೆ ಬಡ್ಡಿ ಪಾವತಿ: ಶೇ. 20
  • ಕೇಂದ್ರ ವಲಯ ಯೋಜನೆಗಳು: ಶೇ. 17
  • ರಕ್ಷಣೆ: ಶೇ. 11
  • ಕೇಂದ್ರ ಪ್ರಾಯೋಜಿತ ಯೋಜನೆಗಳು: ಶೇ. 8
  • ಹಣಕಾಸು ಆಯೋಗ ಮತ್ತಿತರ ವರ್ಗಾವಣೆ: ಶೇ. 7
  • ಪ್ರಮುಖ ಸಬ್ಸಿಡಿಗಳು: ಶೇ. 6
  • ನಾಗರಿಕರ ಪಿಂಚಣಿ: ಶೇ. 2

ಇದನ್ನೂ ಓದಿ: ತತ್​ಕ್ಷಣದ ಪರಿಹಾರ ಮತ್ತು ಭವಿಷ್ಯದ ಪ್ರಗತಿ ಮಧ್ಯೆ ನೀತಿ ಸೇತುವಾಗಿರುವ ಬಜೆಟ್ 2026

ಅತಿಹೆಚ್ಚು ಅನುದಾನ ಪಡೆದ ಇಲಾಖೆಗಳು

  • ಸಾರಿಗೆ: 5.98 ಲಕ್ಷ ಕೋಟಿ ರೂ
  • ರಕ್ಷಣೆ: 5.94 ಲಕ್ಷ ಕೋಟಿ ರೂ
  • ಗ್ರಾಮೀಣಾಭಿವೃದ್ಧಿ: 2.73 ಲಕ್ಷ ಕೋಟಿ ರೂ
  • ಗೃಹ ವ್ಯವಹಾರಗಳು: 2.55 ಲಕ್ಷ ಕೋಟಿ ರೂ
  • ಕೃಷಿ ಹಾಗೂ ಪೂರಕ ಚಟುವಟಿಕೆ: 1.62 ಲಕ್ಷ ಕೋಟಿ ರೂ
  • ಶಿಕ್ಷಣ: 1.39 ಲಕ್ಷ ಕೋಟಿ ರೂ
  • ಇಂಧನ: 1.09 ಲಕ್ಷ ಕೋಟಿ ರೂ
  • ಆರೋಗ್ಯ: 1.04 ಲಕ್ಷ ಕೋಟಿ ರೂ
  • ನಗರಾಭಿವೃದ್ಧಿ: 85,522 ಕೋಟಿ ರೂ
  • ಐಟಿ, ಟೆಲಿಕಾಂ: 74,560 ಕೋಟಿ ರೂ
  • ವಾಣಿಜ್ಯ ಮತ್ತು ಕೈಗಾರಿಕೆ: 70,296 ಕೋಟಿ ರೂ
  • ಸಾಮಾಜಿಕ ಕಲ್ಯಾಣ: 62,362 ಕೋಟಿ ರೂ
  • ವೈಜ್ಞಾನಿಕ ವಿಭಾಗಗಳು: 55,756 ಕೋಟಿ ರೂ
  • ತೆರಿಗೆ ಆಡಳಿತ: 45,500 ಕೋಟಿ ರೂ
  • ವಿದೇಶಾಂಗ ವ್ಯವಹಾರಗಳು: 22,119 ಕೋಟಿ ರೂ
  • ಹಣಕಾಸು: 20,649 ಕೋಟಿ ರೂ
  • ಈಶಾನ್ಯ ರಾಜ್ಯಗಳ ಅಭಿವೃದ್ಧಿ: 6,812 ಕೋಟಿ ರೂ
  • ಇತರೆ ವೆಚ್ಚಗಳು: ಶೇ. 7

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಜಲಮಂಡಳಿ ನಿರ್ಲಕ್ಷ್ಯಕ್ಕೆ 14 ವರ್ಷದ ಬಾಲಕ ಬಲಿ: ಕೊಳೆತ ಸ್ಥಿತಿಯಲ್ಲಿ ಮತದೇಹ ಪತ್ತೆ – Kannada News | 14 Year Old Boy Dies After Falling into BWSSB Pipeline Sump in Bengaluru

ಬೆಂಗಳೂರು, ಫೆಬ್ರವರಿ 02:  ತಾಳಗುಣಿ ಸಮೀಪ ಜಲಮಂಡಳಿ (BWSSB) ಕಾಮಗಾರಿ ವೇಳೆ ಇಲಾಖೆ ನಿರ್ಲಕ್ಷ್ಯಕ್ಕೆ ಬಾಲಕನೋರ್ವ ಬಲಿಯಾಗಿರುವ ಘಟನೆ ನಡೆದಿದೆ. ಕನಕಪುರ ರಸ್ತೆಯ ಪೈಪ್ಲೈನ್ ರೋಡ್​​ನಲ್ಲಿ ಕಾಮಗಾರಿ ವೇಳೆ ಮುಚ್ಚಳವಿಲ್ಲದೆ ತೆರೆದಿದ್ದ ಸಂಪಿಗೆ ಬಿದ್ದು ಪ್ರೀತಂ (14) ಮೃತಪಟ್ಟಿದ್ದಾನೆ. ತಾಳಗುಣಿಯ ನಿವಾಸಿ ರಮೇಶ್ ಅವರ ಪುತ್ರ ಪ್ರೀತಂ, ಜನವರಿ 28ರಂದು ನಾಪತ್ತೆಯಾಗಿದ್ದ. ಮೂರು ದಿನಗಳ ಕಾಲ ಕುಟುಂಬಸ್ಥರು ಬಾಲಕನ ಹುಡುಕಾಟ ನಡೆಸಿದ್ದರು. ಜನವರಿ 29ರಂದು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ಕೊಳೆತ ವಾಸನೆ ಬಂದ ಹಿನ್ನೆಲೆಯಲ್ಲಿ  ಪರಿಶೀಲಿಸಿದಾಗ ಪ್ರೀತಂ ಮೃತದೇಹ ಪತ್ತೆಯಾಗಿದೆ. ಸದ್ಯ ಮೃತದೇಹವನ್ನು ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಘಟನೆಗೆ BWSSB ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ: ಸದನದಲ್ಲಿ ಅಶೋಕ್‌-ಸಿದ್ದರಾಮಯ್ಯ ಕಾಮಿಡಿ – Kannada News | CM Siddaramaiah Taunts To R Ashok In Assembly Session about beer Price

ಬೆಂಗಳೂರು, (ಫೆಬ್ರವರಿ 02): ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯನವರು ಇಂದು (ಫೆಬ್ರವರಿ 02) ಅಧಿವೇಶನದಲ್ಲಿ ಉತ್ತರ ನೀಡಿದರು. ಈ ವೇಳೆ ಸಿದ್ದರಾಮಯ್ಯ ಬಿಯರ್ ಬಗ್ಗೆ ಮಾತನಾಡಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮದ್ಯದ ದರ ಏರಿಕೆ ಸಂಬಂಧ ವಿಪಕ್ಷ ನಾಯಕ ಅಶೋಕ್ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ, ನೀನು ಕುಡಿದಿದ್ದೀಯೆನಯ್ಯ? ನೀನು ಕುಡಿದಿದ್ರೆ ತಾನೇ ಗೊತ್ತಾಗೋದು. ಕಿಂಗ್ ಪಿಶರ್ 225 ರೂ ಇದೆ. ತೆಲಂಗಾದಲ್ಲಿ 125  ರೂಪಾಯಿ ಇದೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version