ತನಿಷಾ ಕುಪ್ಪಂಡ ಅವರು ಕಿರಣ್ ರಾಜ್ ನಟನೆಯ ‘ಶೇರ್’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಈ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತನಿಷಾ ಕುಪ್ಪಂಡ ಅವರು, ‘ಈ ಸಿನಿಮಾ ನನ್ನ ಕರಿಯರ್ಗೆ ಟ್ವಿಸ್ಟ್ ಕೊಟ್ಟಿದೆ’ ಎಂದರು. ಅದಕ್ಕೆ ಕಾರಣವನ್ನೂ ನೀಡಿದರು. ಈಗಾಗಲೇ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದ್ದಾರೆ.
ಹುಬ್ಬಳ್ಳಿ, ಏಪ್ರಿಲ್ 21: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದ್ದು, ರಸ್ತೆಯಲ್ಲಿ ನಡೆದು ಹೋಗುವ ಯುವತಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇತ್ತೀಚೆಗೆ ಪ್ಲೈಯಿಂಗ್ ಕಿಸ್ ನೀಡುವ ಮೂಲಕ ಸುದ್ದಿಯಾಗಿದ್ದ ರೋಡ್ ರೋಮಿಯೋಗಳು, ಈಗ ಒಂದು ಹೆಜ್ಜೆ ಮುಂದೆ ಹೋಗಿ ಹಾಡಹಗಲೇ ಯುವತಿಯರ ಅಂಗಾಂಗ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಪುಂಡರ ಕೃತ್ಯ
ಹುಬ್ಬಳ್ಳಿ ನಗರದ ದೇಶಪಾಂಡೆ ನಗರದಲ್ಲಿ ಇಂತಹದ್ದೇ ಒಂದು ಆಘಾತಕಾರಿ ಘಟನೆ ನಡೆದಿದೆ. ರಸ್ತೆಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿಕೊಂಡು ಬೈಕ್‌ನಲ್ಲಿ ಬಂದ ಮೂವರು ಯುವಕರು, ಯುವತಿಯ ಹಿಂಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿ ವೇಗವಾಗಿ ಪರಾರಿಯಾಗಿದ್ದಾರೆ. ಈ ಇಡೀ ಕೃತ್ಯವು ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪೊಲೀಸರ ಕಣ್ತಪ್ಪಿಸಿ ಓಡಾಟ
ಈ ಘಟನೆಯು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಗಳು ಲಭ್ಯವಿದ್ದರೂ, ಕೃತ್ಯವೆಸಗಿದ ಕಾಮುಕರು ಇನ್ನೂ ಪತ್ತೆಯಾಗಿಲ್ಲ. ಸಾರ್ವಜನಿಕ ರಸ್ತೆಯಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಮಹಿಳೆಯರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಕೂಡಲೇ ಇಂತಹ ಪುಂಡರನ್ನು ಮಟ್ಟಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 21: ರಾಜ್ಯದ ಏರ್ ಕ್ವಾಲಿಟಿಯಲ್ಲಿ ಕಳೆದ ಕೆಲ ದಿನಗಳಿಂದ ಸುಧಾರಣೆ (Bengaluru Air Quality) ಕಂಡು ಬಂದಿದೆ. ದೇಶದ ಉಳಿದ ಯಾವುದೇ ಮೆಟ್ರೋ ಸಿಟಿಗಳಿಗೆ ಹೋಲಿಸಿದರೂ ಬೆಂಗಳೂರಿನ ವಾಯು ಗುಣಮಟ್ಟ ಉತ್ತಮವಾದದ್ದಾಗಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 127ಕ್ಕೆ ತಲುಪಿದೆ. ಕಲಬುರ್ಗಿ ಮತ್ತು ಉಡುಪಿಯ AQI 100ಕ್ಕಿಂತ ಕಡಿಮೆಯಿದ್ದು, ಇಷ್ಟು ದಿನ ಮಾರಕವಾಗಿದ್ದ ಗಾಳಿ ಇಂದು ಉಸಿರಾಟಕ್ಕೆ ಯೋಗ್ಯವಾಗಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
ಸ್ಟಾರ್ ನಾಯಕಿ ರಾಶಿ ಖನ್ನಾಗೆ ಕಹಿ ಅನುಭವ ಆಗಿದೆ. ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಕಳ್ಳರು ಕ್ಯಾರವಾನ್‌ಗೆ ನುಗ್ಗಿದ್ದಾರೆ. ನಾಯಕಿಯ ಪರ್ಸ್‌ನಿಂದ 50 ಸಾವಿರ ರೂಪಾಯಿಗಳನ್ನು ಕದ್ದಿದ್ದಾರೆ. ರಾಶಿ ಶೂಟಿಂಗ್‌ಗೆ ಹೋಗುವ ದಾರಿಯಲ್ಲಿ ಈ ಘಟನೆ ನಡೆದಿದೆ. ಕ್ಯಾರವಾನ್‌ನಲ್ಲಿ ಕಳ್ಳತನ ನಡೆದಿರುವುದನ್ನು ಗಮನಿಸಿದ ರಾಶಿ ಖನ್ನಾ, ಮ್ಯಾನೇಜರ್‌ಗೆ ತಿಳಿಸಿದ್ದರಿಂದ ಸೆಟ್‌ಗೆ ಬೀಗ ಹಾಕಿ ಕಳ್ಳನನ್ನು ಹುಡುಕಲಾಗಿದೆ.
ಕಳ್ಳ ಯಾರು ಎಂದು ಹುಡುಕಾಟ ನಡೆಸಿದಾಗ, ಕ್ಯಾರವಾನ್ ಚಾಲಕನು ರಾಶಿ ಖನ್ನಾ ಅವರ ಪರ್ಸ್‌ನಿಂದ ಹಣವನ್ನು ಕದ್ದಿದ್ದಾನೆ ಎಂದು ತಿಳಿದುಬಂದಿದೆ. ಚಾಲಕನಿಗೆ ಎಚ್ಚರಿಕೆ ನೀಡಿ ಕ್ಯಾರವಾನ್ ಕಂಪನಿಗೆ ಮಾಹಿತಿ ನೀಡಿ ಸೆಟ್‌ನಿಂದ ಹೊರಗೆ ಕಳುಹಿಸಲಾಗಿದೆ.
ಸಾಮಾನ್ಯವಾಗಿ ನಾಯಕಿಯರು ತಮ್ಮ ಪರ್ಸ್‌ನಲ್ಲಿ ಅಷ್ಟು ಹಣವನ್ನು ಕೊಂಡೊಯ್ಯುವುದಿಲ್ಲ. ಆದರೆ, ರಾಶಿಗೆ ಅನಿವಾರ್ಯತೆ ಇದ್ದಿದ್ದರಿಂದ ತೆಗೆದುಕೊಂಡು ಹೋದರು ಎನ್ನಲಾಗಿದೆ. ಕಳ್ಳನನ್ನು ಹಿಡಿಯಲಾಯಿತು ಮತ್ತು ಹಣವನ್ನು ರಾಶಿ ಖನ್ನಾಗೆ ಹಿಂತಿರುಗಿಸಲಾಯಿತು. ಕಳ್ಳತನವು ಸಿನಿಮಾ ಸೆಟ್‌ನಲ್ಲಿರುವ ಸಿಬ್ಬಂದಿಯನ್ನು ಚಿಂತೆಗೀಡು ಮಾಡಿತು. ಚಿತ್ರದ ಚಿತ್ರೀಕರಣವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಯಿತು. ಇಂತಹ ಘಟನೆಗಳು ಚಿತ್ರರಂಗಕ್ಕೆ ಅವಮಾನ ಎಂದು ಚಿತ್ರತಂಡ ಕಳವಳ ವ್ಯಕ್ತಪಡಿಸಿತು.
ರಾಶಿ ಖನ್ನಾ ಬಹುಭಾಷಾ ನಟಿ. ಈ ವರ್ಷ, ಅವರು ಉಸ್ತಾದ್ ಭಗತ್ ಸಿಂಗ್ ಸಿನಿಮಾ ಮಾಡಿದ್ದಾರೆ. ಈ ಚಿತ್ರ ಸಾಧಾರಣ ಎನಿಸಿಕೊಂಡಿದೆ. ಅವರು ವೆಬ್ ಸರಣಿಗಳಲ್ಲಿಯೂ ನಟಿಸುತ್ತಿದ್ದಾರೆ. ರಾಶಿ ಪ್ರಸ್ತುತ ಅನೀಸ್ ಬಾಜ್ಮಿ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು ಅಕ್ಷಯ್ ಕುಮಾರ್ ಮತ್ತು ವಿದ್ಯಾ ಬಾಲನ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.
ರಾಶಿ ‘ಫರ್ಜಿ 2’ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾಹಿದ್ ಕಪೂರ್ ಇದಕ್ಕೆ ಹೀರೋ. ರಾಜ್ ಹಾಗೂ ಡಿಕೆ ನಿರ್ದೇಶನ ಇರುವ ಈ ಸರಣಿ ಶೀಘ್ರವೇ ತೆರೆಗೆ ಬರಲಿದೆ. ರಾಶಿ ಖನ್ನಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ಬೋಲ್ಡ್ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ.
ಬರ್ಲಿನ್, ಏಪ್ರಿಲ್ 21: ಜರ್ಮನಿಯ ಮೋರ್ಸ್ ನಗರದ ಡ್ಯೂಸ್ಬರ್ಗ್ನಲ್ಲಿರುವ ಗುರುದ್ವಾರದಲ್ಲಿ ಹಿಂಸಾತ್ಮಕ ಘರ್ಷಣೆ ನಡೆದಿದೆ. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ. ಗುರುದ್ವಾರವು ಭಕ್ತರ ಪ್ರಾರ್ಥನೆಯಿಂದ ಸದಾ ಶಾಂತವಾಗಿರುತ್ತದೆ. ಆದರೆ ಸೋಮವಾರ ಮಾತ್ರ ಅಲ್ಲಿ ಶಾಂತಿಯ ಬದಲು ಶಸ್ತ್ರಾಸ್ತ್ರಗಳ ಸದ್ದು ಕೇಳಿಸಿತು. ಎರಡು ಗುಂಪುಗಳ ನಡುವಿನ ಅಧಿಕಾರದ ಹಪಾಹಪಿ ಪವಿತ್ರ ಆವರಣವನ್ನು ರಕ್ತಸಿಕ್ತಗೊಳಿಸಿತು. ಧಾರ್ಮಿಕ ಸಭೆ ಪ್ರಾರಂಭವಾಗುವ ಕೆಲವೇ ಕ್ಷಣಗಳ ಮೊದಲು ಈ ಘಟನೆ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಇದು ಆಕಸ್ಮಿಕವಾಗಿ ನಡೆದ ಜಗಳವಲ್ಲ, ಬದಲಾಗಿ ಒಂದು ವ್ಯವಸ್ಥಿತ ಸಂಚು. ಸುಮಾರು 40 ಜನರು ಈ ಭೀಕರ ಘರ್ಷಣೆಯಲ್ಲಿ ಭಾಗಿಯಾಗಿದ್ದರು.
ದಾಳಿಕೋರರು ಇದ್ದಕ್ಕಿದ್ದಂತೆ ಪೆಪ್ಪರ್ ಸ್ಪ್ರೇ ಬಳಸಿ ಎದುರಾಳಿಗಳ ಕಣ್ಣು ಕಾಣಿಸದಂತೆ ಮಾಡಿದರು. ಆ ಕ್ಷಣದಲ್ಲೇ ಬಂದೂಕಿನ ಗುಂಡು ಹಾರುವ ಸದ್ದು ಕೇಳಿಸಿತು. ಚಾಕುಗಳಿಂದ ಹತ್ತಿರದಲ್ಲಿದ್ದವರ ಮೇಲೆ ದಾಳಿ ಮಾಡಲು ಬಳಕೆಯಾದವು. ಇದು ಭೀಕರವಾಗಿತ್ತು. ದಾಳಿ ನಡೆಯುತ್ತಿದ್ದಂತೆ ಜನ ಭಯಭೀತರಾಗಿ ಹೊರಕ್ಕೆ ಓಡತೊಡಗಿದರು ಎಂದು ಸಭೆಯ ಸದಸ್ಯರೊಬ್ಬರು ಆ ಕರಾಳ ಕ್ಷಣವನ್ನು ನೆನೆಯುತ್ತಾರೆ.
ಈ ರಕ್ತಸಿಕ್ತ ಘರ್ಷಣೆಗೆ ಮೂಲ ಕಾರಣವೆಂದರೆ ಗುರುದ್ವಾರದ ಹೊಸ ನಿರ್ದೇಶಕ ಮಂಡಳಿಯ ಚುನಾವಣೆ. ಹಿಂದಿನ ಮಂಡಳಿ ಮತ್ತು ಪ್ರಸ್ತುತ ಸದಸ್ಯರ ನಡುವೆ ಗುರುದ್ವಾರದ ನಿಧಿ ಹಾಗೂ ಆಡಳಿತದ ಮೇಲಿನ ಹಿಡಿತಕ್ಕಾಗಿ ದೀರ್ಘಕಾಲದಿಂದ ಸಂಘರ್ಷ ನಡೆಯುತ್ತಿತ್ತು. ಅಧಿಕಾರದ ಆಸೆ ಹೇಗೆ ಧಾರ್ಮಿಕ ಚೌಕಟ್ಟನ್ನು ಮೀರಿ ಮನುಷ್ಯರನ್ನು ಹಿಂಸೆಯತ್ತ ತಳ್ಳುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಇದ್ದರು. ಅವರು ಸಿನಿಮಾಗಳನ್ನು ಮಾಡಿ ಗಮನ ಸೆಳೆದರು. ಅವರು ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದರು. ಅವರು ಅನೇಕ ಬಾರಿ ಆರೋಗ್ಯ ಕಾಪಾಡಿಕೊಳ್ಳಲು ಟಿಪ್ಸ್ ನೀಡುತ್ತಿದ್ದರು. ಈಗ ಅವರ ಒಂದು ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದರಲ್ಲಿ ಅವರು ಆರೋಗ್ಯದ ಬಗ್ಗೆ ಟಿಪ್ಸ್ ನೀಡಿದ್ದರು ಅನ್ನೋದು ವಿಶೇಷ. ಆ ಸಂದರ್ಭದ ವಿವರ ಇಲ್ಲಿದೆ.
‘ಆರೋಗ್ಯಕ್ಕೆ ಹಿಂದಿನದವರು ಪ್ರಾಮುಖ್ಯತೆ ಕೊಡುತ್ತಿದ್ದರು. ಹೊರಗೆ ಚೆನ್ನಾಗಿ ಇಟ್ಟುಕೊಂಡಷ್ಟೇ ಒಳಗೂ ಚೆನ್ನಾಗಿಟ್ಟುಕೊಳ್ಳಬೇಕು. ಅಜ್ಞಾನದಿಂದ ದುಃಖ, ದುಃಖದಿಂದ ರೋಗ, ರೋಗದಿಂದ ಭಯ. ಭಯ ಬಂದಾಗ ಇಡೀ ದೇಹ ವಿಷ ಆಗುತ್ತದೆ’ ಎಂದು ವಿಷ್ಣುವರ್ಧನ್ ಹೇಳಿದ್ದರು.
‘ನಿಸರ್ಗವನ್ನು ನಾವು ನಾಶ ಮಾಡಿದ್ದೇವೆ. ನಾವು ನಮ್ಮ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಿದೆ. ನಾವು ತಿನ್ನುವ ಆಹಾರ, ಆಡುವ ಮಾತು ಎಲ್ಲವೂ ಚೆನ್ನಾಗಿರಬೇಕು. ಆಯುರ್ವೇದವನ್ನು ವಿದೇಶದವರು ಫಾಲೋ ಮಾಡುತ್ತಿದ್ದಾರೆ. ಧ್ಯಾನ, ಪ್ರಾಣಾಯಾಮ ಎಲ್ಲವೂ ಮನಸ್ಸಿಗೆ ವ್ಯಾಯಾಮ ನೀಡುತ್ತದೆ’ ಎಂದು ಅವರು ಹೇಳಿದ್ದರು.
‘ಒಳ್ಳೆಯವರ ಸಹವಾಸ ಮಾಡಬೇಕು. ಎಲ್ಲರೂ ಒತ್ತಡದಲ್ಲೇ ಇರುತ್ತಾರೆ. ಅವರು ಓಡುತ್ತಿದ್ದಾರೆ ಎಂದು ನಾವು ಓಡುತ್ತಿದ್ದೇವೆ. ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ಆದರೆ, ಅದು ಯಾರಿಗೂ ಇಲ್ಲ. ಎಲ್ಲರೂ ನಿತ್ಯ ಮಂತ್ರ-ಶ್ಲೋಕ ಹೇಳಬೇಕು. ಆಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ವಿಜ್ಞಾನ-ಜ್ಞಾನ ಎಲ್ಲವೂ ಇಲ್ಲಿಂದಲೇ ಹೋಗಿದ್ದು’ ಎಂದು ಅವರು ಹೇಳಿದ್ದರು.
‘ದೇಹದ ಬಗ್ಗೆ ಜ್ಞಾನ ಬೇಕು. ನಡೆ-ನುಡಿ ಎಲ್ಲವೂ ಚೆನ್ನಾಗಿರಬೇಕು. ಪ್ರಾಣಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ಮನುಷ್ಯರ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ರಾಜಸ್ಥಾನದ ಆಹಾರ ಇಲ್ಲಿ ಸೆಟ್ ಆಗಲ್ಲ. ಆದರೆ, ಆಹಾರ ಕ್ರಮದಲ್ಲಿ ಬದಲಾಗಿದೆ’ ಎಂದು ವಿಷ್ಣುವರ್ಶನ್ ಅವರು ಹೇಳಿದ್ದರು.
ಬೆಂಗಳೂರು, ಏಪ್ರಿಲ್ 21: ಕರ್ನಾಟಕದಲ್ಲಿ ಉಷ್ಣ (Heat Wave) ಅಲೆಯ ಆಘಾತದ ನಡುವೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕಾಲಿಕ ಮಳೆ (Karnataka Rains) ರೌದ್ರಾವತಾರ ತಾಳಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಬಿರುಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಗೆ ಮನೆಗಳು ಜಖಂಗೊಂಡಿದ್ದು, ಹಾಸನದಲ್ಲಿ ಸಿಡಿಲು ಬಡಿದು ವೃದ್ಧೆಯೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಸೋಮವಾರ ನಡೆದಿದೆ.
ಹಾಸನ: ಸಿಡಿಲಿಗೆ ಬಲಿಯಾದ ವೃದ್ಧೆ
ಹಾಸನ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಹುಲಕುಂದ ಗ್ರಾಮದ ಎಸ್ಟೇಟ್ ಬಳಿ ಸಿಡಿಲು ಬಡಿದು ನೀಲಮ್ಮ ಎಂಬ ವೃದ್ಧೆ ಸಾವನ್ನಪ್ಪಿದ್ದಾರೆ. ಮಳೆ ಬರುತ್ತಿದ್ದ ಕಾರಣ ಆಶ್ರಯ ಪಡೆಯಲು ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಬಿರುಗಾಳಿಗೆ ಕಾಲೇಜು ಮತ್ತು ಅಂಗಡಿಗಳ ಶೀಟ್‌ಗಳು ಹಾರಿ ಹೋಗಿವೆ. ಮರದ ಕೊಂಬೆಗಳು ಬಿದ್ದು ಎರಡು ಕಾರುಗಳು ಜಖಂಗೊಂಡಿವೆ.
ಮನೆಯ ಮೇಲ್ಚಾವಣಿ ಹಾರಿರುವುದು
ಚಿಕ್ಕಮಗಳೂರು: ಮರ ಬಿದ್ದು ಮನೆಗಳಿಗೆ ಹಾನಿ
ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಜಿಲ್ಲೆಯ ಗಾಳಿಗುಂಡಿಯಲ್ಲಿ ಬೃಹತ್ ಮರ ಬಿದ್ದು ಐದು ಮನೆಗಳ ಮೇಲ್ಚಾವಣಿ ಪುಡಿಪುಡಿಯಾಗಿದೆ. ಕಳಸ ಪಟ್ಟಣದಲ್ಲಿ ಲಾಡ್ಜ್ ಒಂದರ ಮೇಲ್ಭಾಗದ ತಗಡಿನ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ. ಮೂಡಿಗೆರೆ ತಾಲೂಕಿನ ಅಮ್ತಿ ಗ್ರಾಮದಲ್ಲಿ ಮರ ಬಿದ್ದು ಬಾಳೂರು-ಕಳಸ ಸಂಪರ್ಕ ಕಡಿತಗೊಂಡಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಕೊಪ್ಪ ಮತ್ತು ಎನ್.ಆರ್.ಪುರ ಭಾಗದಲ್ಲಿಯೂ ಆಲಿಕಲ್ಲು ಮಳೆ ಆರ್ಭಟಿಸಿದೆ.
ಹಾವೇರಿ: ಕೆರೆಯಂತಾದ ರಸ್ತೆಗಳು
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ. ನಗರದ ದುರ್ಗಾ ಸರ್ಕಲ್ ಬಳಿ ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಯಿತು.
ಅಂಬಾನಿ ಕುಟುಂಬ ಭಾರತದ ಶ್ರೀಮಂತ ಮನೆತನಗಳಲ್ಲಿ ಒಂದು. ಅವರ ಮನೆಯ ಮದುವೆಯಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಬ್ಯಾಕ್ ಡ್ಯಾನ್ಸರ್ಗಳಾಗಿ ನೃತ್ಯ ಮಾಡುತ್ತಾರೆ. ಇನ್ನು, ಅವರ ಮನೆಯಲ್ಲಿ ಊಟ ಬಡಿಸೋಕೂ ಸೆಲೆಬ್ರಿಟಿಗಳು ರೆಡಿ ಇರುತ್ತಾರೆ. ಇತ್ತೀಚಿಗಿನ ಅವಾರ್ಡ್ ಫಂಕ್ಷನ್ ಅಲ್ಲಿ ನೀತಾ ಅಂಬಾನಿ ಅವರು ಆಲಿಯಾಗೆ ಅವಮಾನ ಮಾಡಿದ್ದಾರೆ ಎಂಬ ವಿಡಿಯೋ ವೈರಲ್ ಆಗಿತ್ತು. ಆದರೆ, ಇದು ಎಡಿಟ್ ಮಾಡಿದ ವಿಡಿಯೋ ಅನ್ನೋದು ಸ್ಪಷ್ಟವಾಗಿದೆ.
ಆಲಿಯಾ ಭಟ್ ಅವರು ಇತ್ತೀಚೆಗೆ ‘ಸ್ಕ್ರೀನ್ ಅವಾರ್ಡ್’ ಫಂಕ್ಷನ್ ಅನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮಕ್ಕೆ ನೀತಾ ಅಂಬಾನಿ ಅವರನ್ನು ವೇದಿಕೆಯ ಮೇಲೆ ಕರೆಯಬೇಕಿತ್ತು. ಆ ಸಂದರ್ಭದಲ್ಲಿ ಆಲಿಯಾ ಭಟ್ ಅವರು ಭಾಭಿ (ಅತ್ತಿಗೆ) ವೇದಿಕೆ ಮೇಲೆ ಬನ್ನಿ ಎಂದರು. ಆಗ ನೀತಾ, ‘ಹೆಲ್ಲೋ ಆಲಿಯಾ’ ಎಂದರು. ಆಗ ಆಲಿಯಾ ಭಟ್ ಅವರು ‘ಥ್ಯಾಂಕ್ ಯೂ ನೀತಾ ಮ್ಯಾಮ್’ ಎಂದರು. ನೀತಾ ಅಂಬಾನಿ ಹೆಲ್ಲೋ ಎಂದು ಹೇಳುವ ಧಾಟಿ ಆಲಿಯಾನ ಭಯ ಬೀಳಿಸಿತು ಎಂಬ ರೀತಿಯಲ್ಲಿ ವಿಡಿಯೋ ವೈರಲ್ ಆಗಿದೆ. ಆದರೆ, ಇದರ ಅಸಲಿಯತ್ತು ಬೇರೆಯೇ ಇದೆ.
ಅಸಲಿಗೆ ಅಲ್ಲಿ ನಡೆದಿದ್ದೇ ಬೇರೆ. ಆಲಿಯಾ ಭಟ್ ಅವರು ಆರಂಭದಲ್ಲಿ ನೀತಾ ಮುಕೇಶ್ ಅಂಬಾನಿ ಎಂದೇ ಕರೆದರು ಮತ್ತು ಅವರು ಯಾರು ಎಂಬುದನ್ನು ವಿವರಿಸಿದರು. ನಂತರ ನೀತಾ ಅವರನ್ನು ವೇದಿಕೆ ಮೇಲೆ ಕರೆಯುವಾಗ, ‘ಬಾಭಿ ವೇದಿಕೆಯ ಮೇಲೆ ಬನ್ನಿ’ ಎಂದರು. ವೇದಿಕೆ ಮೇಲೆ ಬಂದ ನೀತಾ, ‘ಹೆಲ್ಲೋ ಆಲಿಯಾ’ ಎಂದರು. ಇದಕ್ಕೆ ಪ್ರತಿಯಾಗಿ ಆಲಿಯಾ ಮುದ್ದಾಗಿ ನಕ್ಕರು. ಇಲ್ಲಿಗೆ ಇವರ ಸಂಭಾಷಣೆ ಕೊನೆಯಾಗಿದೆ. ನಂತರ ಅವಾರ್ಡ್ ನೀಡುವ ಕೆಲಸ ಆಗಿದೆ. ಕೊನೆಯಲ್ಲಿ ಆಲಿಯಾ ಭಟ್ ಅವರು ‘ಥ್ಯಾಂಕ್ ಯೂ ಸೋ ಮಚ್ ನೀತಾ ಮ್ಯಾಮ್’ ಎಂದಿದ್ದಾರೆ. ಇದೆಲ್ಲವನ್ನೂ ತಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ಆಲಿಯಾಗೆ ಕೆಟ್ಟ ಹೆಸರು ಬರುವ ರೀತಿಯಲ್ಲಿ ಮಾಡಲಾಗಿದೆ.
ನೀತಾ ಹಾಗೂ ಆಲಿಯಾ ಮಧ್ಯೆ ಒಳ್ಳೆಯ ಸಂಬಂಧ ಇದೆ. ಆಲಿಯಾ ಹಿರಿಯ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಮಗಳು. ಹೀಗಾಗಿ, ಆಲಿಯಾ ಅವರನ್ನು ನೀತಾ ಅವರು ಸಣ್ಣ ವಯಸ್ಸಿನಿಂದ ನೋಡುತ್ತಾ ಬರುತ್ತಿದ್ದಾರೆ. ಹೀಗಾಗಿ, ಆಲಿಯಾ ಪ್ರೀತಿಯಿಂದ ಭಾಭಿ ಎಂದು ಕರೆದಿದ್ದಕ್ಕೆ ಅವರಿಗೆ ಯಾವುದೇ ವಿರೋಧ ಇಲ್ಲ. ಸದ್ಯ ಎಡಿಟ್ ಮಾಡಲಾದ ವಿಡಿಯೋ ವೈರಲ್ ಆಗುತ್ತಿದೆ.
ಮಣಿಪುರ, ಏಪ್ರಿಲ್ 21: ಮಣಿಪುರ(Manipur)ದಲ್ಲಿ ಇಂದು ಬೆಳಗಿನ ಜಾವ ಭೂಮಿ ಕಂಪಿಸಿದೆ, ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ ದಾಖಲಾಗಿದೆ. ಸೋಮವಾರ ಮತ್ತು ಮಂಗಳವಾರದ ಅವಧಿಯಲ್ಲಿ ಭೂಮಿಯ ಅಂತರಾಳದಲ್ಲಿ ಉಂಟಾದ ಚಲನವಲನಗಳು ಏಷ್ಯಾದ ಎರಡು ಪ್ರಮುಖ ಭಾಗಗಳಲ್ಲಿ ಆತಂಕ ಮೂಡಿಸಿವೆ. ಮಣಿಪುರದ ಬೆಟ್ಟಗುಡ್ಡಗಳಲ್ಲಿ ಭೂಮಿ ನಡುಗಿದರೆ, ಜಪಾನ್‌ನ ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಸಮುದ್ರ ಅಲೆಗಳು ಸುನಾಮಿಯ ಮುನ್ನೆಚ್ಚರಿಕೆ ನೀಡಿವೆ.
ಮಂಗಳವಾರ ಬೆಳಗ್ಗೆ 5.59 ರ ಸುಮಾರಿಗೆ, ಮಣಿಪುರದ ಕಾಮ್ಜಾಂಗ್ ಜಿಲ್ಲೆಯ ನಿವಾಸಿಗಳು ಗಾಢ ನಿದ್ರೆಯಲ್ಲಿದ್ದಾಗ ಭೂಮಿ ಜೋರಾಗಿ ಕಂಪಿಸಿತು. ರಿಕ್ಟರ್ ಮಾಪಕದಲ್ಲಿ 5.9 ತೀವ್ರತೆ ದಾಖಲಾದ ಈ ಭೂಕಂಪವು ಜನರನ್ನು ಬೆಚ್ಚಿಬೀಳಿಸಿತು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ (NCS) ಪ್ರಕಾರ, ಭೂಮಿಯ 62 ಕಿಲೋಮೀಟರ್ ಆಳದಲ್ಲಿ ಈ ಕಂಪನ ಉಂಟಾಗಿದೆ. ಅದೃಷ್ಟವಶಾತ್, ಸದ್ಯಕ್ಕೆ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ವರದಿಯಾಗಿಲ್ಲ. ಆದರೂ, ಅಧಿಕಾರಿಗಳು ಮುನ್ನೆಚ್ಚರಿಕೆಯಾಗಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಜಪಾನ್: 7.5 ತೀವ್ರತೆಯ ಭೂಕಂಪ ಮತ್ತು ಸುನಾಮಿ ಅಬ್ಬರ
ಮತ್ತೊಂದೆಡೆ, ಜಪಾನ್‌ನ ಉತ್ತರ ಕರಾವಳಿಯು ಸೋಮವಾರ ಸಂಜೆ ಭೀಕರ ಅನುಭವಕ್ಕೆ ಸಾಕ್ಷಿಯಾಯಿತು. ಸ್ಯಾನ್ರಿಕು ಕರಾವಳಿಯ ಸಮುದ್ರತಳದಲ್ಲಿ ಸಂಭವಿಸಿದ 7.5 ತೀವ್ರತೆಯ ಪ್ರಬಲ ಭೂಕಂಪವು ಸುನಾಮಿ ಎಚ್ಚರಿಕೆಗೆ ಕಾರಣವಾಯಿತು.
ಇವಾಟೆ ಪ್ರಾಂತ್ಯದ ಕುಜಿ ಬಂದರಿನಲ್ಲಿ ಈಗಾಗಲೇ 80 ಸೆಂಟಿಮೀಟರ್ ಎತ್ತರದ ಅಲೆಗಳು ಅಪ್ಪಳಿಸಿವೆ. ಅಧಿಕಾರಿಗಳು 3 ಮೀಟರ್‌ವರೆಗೂ ಅಲೆಗಳು ಏಳಬಹುದು ಎಂದು ಎಚ್ಚರಿಸಿದ್ದು, ಸಮುದ್ರ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಜಪಾನ್ ಪಾಲಿಗೆ ಇದು ಸಾಮಾನ್ಯ ಘಟನೆಯಲ್ಲ. 2011ರ ಟೊಹೊಕು ವಿನಾಶಕಾರಿ ಸುನಾಮಿ ಸುಮಾರು 22,000 ಜನರನ್ನು ಬಲಿಪಡೆದ ನೆನಪು ಇಂದಿಗೂ ಹಸಿರಾಗಿದೆ. ಆ ಕರಾಳ ಇತಿಹಾಸ ಮರುಕಳಿಸದಿರಲಿ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ.
ಮುನ್ನೆಚ್ಚರಿಕೆ ಮತ್ತು ಸಿದ್ಧತೆ
ಜಪಾನ್ ಹವಾಮಾನ ಸಂಸ್ಥೆಯು ಮುಂದಿನ ಒಂದು ವಾರದವರೆಗೆ ಇಂತಹ ಕಂಪನಗಳು ಮರುಕಳಿಸಬಹುದು ಎಂದು ಎಚ್ಚರಿಸಿದೆ. ಇವಾಟೆ ಪ್ರಾಂತ್ಯದ 11 ಪಟ್ಟಣಗಳಿಗೆ ಸ್ಥಳಾಂತರದ ಸಲಹೆ ನೀಡಲಾಗಿದೆ. ಮಿಯಾಗಿ ಮತ್ತು ಫುಕುಶಿಮಾ ಭಾಗಗಳಲ್ಲೂ ಜಾಗರೂಕರಾಗಿರಲು ಸೂಚಿಸಲಾಗಿದೆ.
ಪ್ರಕೃತಿಯ ಈ ಮುನಿಸು ಮಾನವಕುಲಕ್ಕೆ ಸನ್ನದ್ಧತೆಯ ಪಾಠವನ್ನು ಮತ್ತೊಮ್ಮೆ ನೆನಪಿಸಿದೆ. ಮಣಿಪುರದ ಶಾಂತತೆ ಮತ್ತು ಜಪಾನ್‌ನ ಸುರಕ್ಷತೆಗಾಗಿ ಇಡೀ ವಿಶ್ವವೇ ಪ್ರಾರ್ಥಿಸುತ್ತಿದೆ.
ಬೆಂಗಳೂರು, ಏಪ್ರಿಲ್ 21: ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ (Karnataka Weather) ಹೆಚ್ಚಾಗಿದ್ದು, ಮುಂದಿನ 2 ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈಗಾಗಲೇ ಕರಾವಳಿ ಹಾಗೂ ಕಲ್ಯಾಣ ಕರ್ನಾಟಕವು ಬಿಸಿಲಿನ ಬೇಗೆ ತತ್ತರಿಸಿದ್ದು, ಮುಂಬರುವ ದಿನಗಳಲ್ಲಿ ಈ ಭಾಗಗಳ ತಾಪಮಾನ 45 ಡಿಗ್ರಿ ಸೆಲ್ಸಿಯಸ್ಗೆ ಏರುವ ಸಾಧ್ಯತೆಯಿದೆ. ಹೀಗಾಗಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಅನಗತ್ಯವಾಗಿ ಹೊರಗೆ ಬರಬೇಡಿ, ಹೆಚ್ಚು ನೀರು ಸೇವಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಹೀಟ್ ವೇವ್ ಜೊತೆಗೆ ಗುಡುಗು ಸಹಿತ ಮಳೆ
ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇಂದೂ ಉಷ್ಣ ಅಲೆ ಇರಲಿದ್ದು, ಹೀಟ್ ವೇವ್ ಅಲರ್ಟ್ ನೀಡಲಾಗಿದ್ದು, ಜೊತೆಗೆ ಗುಡುಗು ಸಹಿತ ಮಳೆಯೂ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ವಿಜಯಪುರ, ಕಲಬುರ್ಗಿ, ಯಾದಗಿರಿ, ಬೆಳಗಾವಿ ಮತ್ತು ಧಾರವಾಡ ಗುಡುಗು ಸಹಿತ ಮಳೆಯಾಗಲಿದ್ದು, ಉಳಿದೆಡೆ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿಯೂ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಉಷ್ಣಾಘಾತದಿಂದ ರಕ್ಷಣೆ ಹೇಗೆ?
ಮುಂಬರುವ ದಿನಗಳಲ್ಲಿ ರಾಜ್ಯದೆಲ್ಲೆಡೆ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಅವಶ್ಯಕತೆ ಇಲ್ಲದೆ ಮನೆಯಿಂದ ಹೊರಬರುವುದನ್ನು ತಪ್ಪಿಸುಂತೆ ಹೇಳಲಾಗಿದೆ. ಬೇಸಿಗೆ ರಜೆಯಲ್ಲಿ ಮಕ್ಕಳು ಬಿಸಿಲಲ್ಲಿ ಆಟವಾಡುವುದನ್ನು ಆದಷ್ಟು ನಿಯಂತ್ರಿಸುವಂತೆ ಸೂಚಿಸಲಾಗಿದೆ.
ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ. ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ. ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ. ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.
ಇನ್ನೂ 5 ದಿನ ಇದೇ ವಾತಾವರಣ
ಏಪ್ರಿಲ್ 22 ರವರೆಗೆ ಕರ್ನಾಟಕದ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಅಂತೆಯೇ ದಕ್ಷಿಣ ಒಳನಾಡಿನಲ್ಲಿಯೂ ಗುಡುಗು ಸಹಿತ ಮಳೆಯೊಂದಿಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನಗಳವರೆಗೆ ಕರಾವಳಿ ಪ್ರದೇಶಗಳಲ್ಲಿ ಉಷ್ಣ ಅಲೆ ಇರಲಿದ್ದು, ಮುನ್ನೆಚ್ಚರಿಕಾ ಕ್ರಮವಹಿಸುವಂತೆ ಇಲಾಖೆ ತಿಳಿಸಿದೆ. ಜೊತೆಗೆ ಏಪ್ರಿಲ್ 21ರ ವರೆಗೆ ಉತ್ತರ ಒಳನಾಡಿನಲ್ಲಿ ಆಲಿಕಲ್ಲು ಮಳೆಯಾಗುವ ಸಂಭವವಿದೆ ಎಂದು ಹೇಳಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ