Toxic Teaser: ಹಾಲಿವುಡ್​ ರೇಂಜ್​​​ನಲ್ಲಿದೆ ‘ಟಾಕ್ಸಿಕ್​’ ಟೀಸರ್; ಎಲ್ಲರಿಗೂ ಇದೇ ವಾರ್ನಿಂಗ್ – Kannada News | Yash Birthday, Rocking Star Rocks in Toxic Teaser Toxic Teaser Review Yash In Rocking Look

‘ಟಾಕ್ಸಿಕ್’ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಯಶ್ ನಟನೆಯ ಈ ಚಿತ್ರಕ್ಕೆ ಗೀತು ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ. ಅದಕ್ಕೂ ಮೊದಲು ಚಿತ್ರದ ಟೀಸರ್ ರಿಲೀಸ್ ಆಗಿದೆ. ಯಶ್ ಬರ್ತ್​ಡೇ (ಜನವರಿ 8) ಪ್ರಯುಕ್ತ ಸರಿಯಾಗಿ 10 ಗಂಟೆ 10 ನಿಮಿಷಕ್ಕೆ ಟೀಸರ್ ಬಿಡುಗಡೆ ಕಂಡಿದೆ. ಸಿನಿಮಾ ಹೇಗಿರಬಹುದು ಎಂಬುದಕ್ಕೆ ಕ್ಲ್ಯಾರಿಟಿ ಸಿಕ್ಕಂತೆ ಆಗಿದೆ.

‘ಟಾಕ್ಸಿಕ್’ ಸಿನಿಮಾ ತಂಡ ಇತ್ತೀಚೆಗೆ ಯಶ್ ಅವರ ಪೋಸ್ಟರ್ ರಿಲೀಸ್ ಮಾಡಿತು. ಆ ಬಳಿಕ ಸಿನಿಮಾದಲ್ಲಿ ನಟಿಸಿದ ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಎಲ್ಲಾ ಹೀರೋಯಿನ್​​ಗಳ ಪೋಸ್ಟರ್ ಬಿಡುಗಡೆ ಮಾಡಿತ್ತು. ಈಗ ತಂಡ ಟೀಸರ್ ರಿಲೀಸ್ ಮಾಡಿ ಸಿನಿಮಾದ ಪ್ರಚಾರಕ್ಕೆ ಮುನ್ನುಡಿ ಬರೆದಿದೆ.

‘ಟಾಕ್ಸಿಕ್’ ಸಿನಿಮಾಗೆ ಕೆವಿಎನ್ ಸಂಸ್ಥೆ ಬಂಡವಾಳ ಹೂಡಿದೆ. ದೊಡ್ಡ ಬಜೆಟ್​​ನ ಚಿತ್ರಕ್ಕೆ ಖರ್ಚು ಮಾಡಲಾಗಿದೆ. ಟೀಸರ್ ನೋಡಿದವರಿಗೆ ಅದ್ದೂರಿತನ ಸ್ಪಷ್ಟವಾಗಿ ಕಾಣಿಸಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​​ದಾಸ್ ಅವರು ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿಬರುತ್ತಿದೆ. ಗೀತು ಜೊತೆ ಯಶ್ ಕೂಡ ಸಿನಿಮಾಗೆ ಕಥೆ ಬರೆದಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’: ಯಾರ ಬಗ್ಗೆ ಎಚ್ಚರಿಸಿದ್ದರೋ ಅವನೇ ಎದುರು ಬರುತ್ತಿದ್ದಾನೆ

‘ಟಾಕ್ಸಿಕ್’ ಚಿತ್ರ ‘ಧುರಂಧರ್ 2’ ವಿರುದ್ಧ ತೆರೆಗೆ ಬರುತ್ತಿದೆ. ಈಗಾಗಲೇ ಹಿಂದಿಯಲ್ಲಿ ‘ಧುರಂಧರ್’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಇದರ ಸೀಕ್ವೆಲ್ ಆಗಿ ‘ಧುರಂದರ್ 2’ ರಿಲೀಸ್ ಆಗುತ್ತಿದೆ. ಈ ಕಾರಣದಿಂದ ‘ಟಾಕ್ಸಿಕ್​​’ಗೆ ದೊಡ್ಡ ಸ್ಪರ್ಧೆ ಏರ್ಪಡುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ಎದುರಿಸಲು ಎಲ್ಲ ರೀತಿಯ ಸಿದ್ಧತೆ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 10:16 am, Thu, 8 January 26

Source link

ಮೈಸೂರು ಬಿಜೆಪಿಯಲ್ಲಿ ಭಿನ್ನಮತದ ಕಿಡಿಹಚ್ಚಿದ ಪ್ರತಾಪ್ ಸಿಂಹ ಆ ಒಂದು ಹೇಳಿಕೆ! – Kannada News | Mysuru BJP Infighting Erupts as Pratap Simha and L Nagendra Clash Over Chamaraja Ticket

ಎಲ್.ನಾಗೇಂದ್ರ v/s ಪ್ರತಾಪಸಿಂಹ ಜಟಾಪಟಿ

ಬೆಂಗಳೂರು, ಜನವರಿ 8: ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗುತ್ತಿರುವ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಬಹಿರಂಗ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜಪಿಯ (BJP) ಮೈಸೂರು ಘಟಕದಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಸುಳಿವು ಗೋಚರಿಸಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಶಾಸಕ, ಹಾಲಿ ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ ನಡುವೆ ಜಟಾಪಟಿ ಏರ್ಪಡುವ ಎಲ್ಲ ಲಕ್ಷಣ ಕಾಣಿಸಿದೆ. ಚಾಮರಾಜ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವೇ ಈ ಜಟಾಪಟಿಗೆ ಮೂಲ ಕಾರಣವಾಗಿದ್ದು, ಇದೀಗ ಪ್ರತಾಪ್ ಸಿಂಹಗೆ ಬಹಿರಂಗವಾಗಿಯೇ ಎಲ್. ನಾಗೇಂದ್ರ ಟಾಂಗ್ ಕೊಟ್ಟಿದ್ದಾರೆ.

ಜನವರಿ 5ರಂದು ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಆಯೋಜಿಸಿದ್ದ ಸ್ನೇಹ ಬಳಗದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಬಳಿಕ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣದತ್ತ ಹೆಜ್ಜೆ ಇಡುವುದಾಗಿ ಪರೋಕ್ಷವಾಗಿ ಹೇಳಿದ್ದ ಪ್ರತಾಪ್ ಸಿಂಹ, ‘ಚಾಮರಾಜ ಕ್ಷೇತ್ರ ಹಣದ ಪ್ಯಾಕೇಟ್ ಕೊಟ್ಟು ಗೆಲ್ಲುವ ಕ್ಷೇತ್ರ ಅಲ್ಲ. ಇಲ್ಲಿ ಮತದಾರರು ಕೆಲಸ ನೋಡಿ ಬೆಂಬಲಿಸುವ ಪ್ರಜ್ಞಾವಂತರು’ ಎಂದು ಹೇಳಿಕೆ ನೀಡಿ ಚಾಮರಾಜ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಒಲವು ವ್ಯಕ್ತಪಡಿಸಿದ್ದರು. ಈ ಹೇಳಿಕೆಯೇ ಇದೀಗ ಮೈಸೂರು ಬಿಜೆಪಿಯಲ್ಲಿ ಭಿನ್ನಮತದ ಕಿಡಿಹಚ್ಚಿದೆ.

ಕೋರ್ಟ್‌ನಿಂದ ಯಾವ ಸ್ಟೇ ಕೂಡ ತಂದಿಲ್ಲ: ಪ್ರತಾಪ್ ಸಿಂಹಗೆ ನಾಗೇಂದ್ರ ಟಾಂಗ್

ಪ್ರತಾಪ್ ಸಿಂಹ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಎಲ್. ನಾಗೇಂದ್ರ, ‘ಚಾಮರಾಜ ಕ್ಷೇತ್ರದ ಟಿಕೆಟ್ ಯಾರಿಗೆ ಕೊಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಈ ಮೂಲಭೂತ ವಿಚಾರ ಪ್ರತಾಪ್ ಸಿಂಹಗೆ ಗೊತ್ತಿರಬೇಕಿತ್ತು. ಅವರು ಯಾವ ಕಾರಣಕ್ಕೆ ಆ ರೀತಿ ಹೇಳಿಕೆ ನೀಡಿದರು ಗೊತ್ತಿಲ್ಲ’ ಎಂದು ಹೇಳಿದ್ದಾರೆ. ನಾನು ಪಕ್ಷದ ಸಂಘಟನೆಗಾಗಿ ದುಡಿಯುತ್ತಿದ್ದೇನೆ, ನನ್ನ ವಿರುದ್ಧ ಯಾವುದೇ ಆಪಾದನೆಗಳಿಲ್ಲ. ನಾನು ಕೋರ್ಟ್‌ನಿಂದ ಯಾವ ಸ್ಟೇ ಕೂಡ ತಂದಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಪಾರ್ಲಿಮೆಂಟ್ ಟಿಕೆಟ್ ವಿಚಾರವನ್ನೂ ಎತ್ತಿಹಿಡಿದ ನಾಗೇಂದ್ರ, ‘ಆ ಸಮಯದಲ್ಲೂ ಅವರಿಗೆ ಟಿಕೆಟ್ ಯಾಕೆ ಸಿಗಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಕಡಿಮೆ ಅಂತರದಲ್ಲಿ ಸೋತಿದ್ದೇನೆ. ನನ್ನ ಕ್ಷೇತ್ರದ ಜೊತೆಗೆ ಇನ್ನೂ ನಾಲ್ಕು ಕ್ಷೇತ್ರಗಳನ್ನು ಗೆಲ್ಲಿಸುವ ಗುರಿ ಇದೆ. ನಮ್ಮ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ’ ಎಂದು ಹೇಳಿದರು. ಪಕ್ಷದ ಇತಿ-ಮಿತಿಯನ್ನು ಮೀರಿ ಯಾರೂ ವರ್ತಿಸಬಾರದು, ಸಾರ್ವಜನಿಕರಿಗೆ ಗೊಂದಲ ಮೂಡಿಸಬಾರದು ಎಂದೂ ಎಚ್ಚರಿಕೆ ನೀಡಿದ್ದಾರೆ.

2028ರ ಟಿಕೆಟ್​ಗೆ ಈಗಲೇ ಶುರುವಾಯ್ತು ಕಲಹ

‘ಕಳೆದ ಬಾರಿ ಅವರು (ಪ್ರತಾಪ್ ಸಿಂಹ) ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಪ್ರಚಾರಕ್ಕೂ ಬಂದಿರಲಿಲ್ಲ. ಯದುವೀರ್ ಅವರಿಗೆ ನಾವು 56,500 ಮತ ದೊರಕಿಸಿಕೊಟ್ಟಿದ್ದೇವೆ. ಅವರು (ಪ್ರತಾಪ್ ಸಿಂಗ ಉದ್ದೇಶಿಸಿ) ಈಗ ರಾಜ್ಯ ನಾಯಕರಾಗಿ ಬೆಳೆದಿದ್ದಾರೆ. ಅವರು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿ. ಅವರು ಬೇರೆ ಊರಿನಿಂದ ಬಂದವರು, ನಾನು ಇದೇ ಊರಿನವನು. ನನ್ನ ಹುಟ್ಟೂರಲ್ಲೇ ನನ್ನ ಹೋರಾಟ’ ಎಂದು ನಾಗೇಂದ್ರ ಹೇಳಿದ್ದಾರೆ. ಅಲ್ಲದೆ, 2028ರಲ್ಲೂ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಮಂಡಲ ಅಧ್ಯಕ್ಷರು ಯಾರ ಪರ ಇದ್ದಾರೆ ಎಂದು ಕೇಳಿದರೆ ಸ್ಪಷ್ಟವಾಗುತ್ತದೆ ಎಂದು ಹೇಳಿದ ನಾಗೇಂದ್ರ, ‘ನನಗೆ ಅವರಿಗಿಂತ ನೂರು ಪಟ್ಟು ಹೆಚ್ಚು ಕಾರ್ಯಕರ್ತರು ಜೊತೆಗಿದ್ದಾರೆ. ನನ್ನ ಸಂಬಂಧಿಕರು, ಸ್ನೇಹಿತರು ಎಲ್ಲರೂ ನನ್ನ ಜೊತೆ ಇದ್ದಾರೆ. ಬಿಜೆಪಿಯಲ್ಲಿದ್ದು ‘ಕವರ್ ಸಂಸ್ಕೃತಿ’ ಬಗ್ಗೆ ಮಾತನಾಡಬಾರದಿತ್ತು. ಮುಂದಿನ ದಿನಗಳಲ್ಲಿ ಅವರ ವರ್ತನೆ ಬದಲಿಸಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ರಾಜ್ಯ ರಾಜಕಾರಣಕ್ಕೆ ಪ್ರತಾಪ್ ಸಿಂಹ ಅಧಿಕೃತ ಎಂಟ್ರಿ: ಕ್ಷೇತ್ರ ಯಾವುದು ಗೊತ್ತಾ?

ಒಟ್ಟಿನಲ್ಲಿ, ಪ್ರತಾಪ್ ಸಿಂಹ ರಾಜ್ಯ ರಾಜಕಾರಣದ ಬಗ್ಗೆ ಹಾಗೂ ಮುಂದಿನ ಚುನಾವಣೆ ಬಗ್ಗೆ ಬಹಿರಂಗವಾಗಿ ಮಾತನಾಡಿದ ಬೆನ್ನಲ್ಲೇ ಮೈಸೂರು ಬಿಜೆಪಿಯಲ್ಲಿ ಅಸಮಾಧಾನ ತೀವ್ರಗೊಂಡಿಡದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಆಸ್ಟ್ರೇಲಿಯಾ ಆಟಗಾರ

Source link

Viral Video: ಕೆಟ್ಟ ಅಭ್ಯಾಸಗಳಿಗೆ ಅಪ್ಪನ ಹಣವೆಲ್ಲಾ ಖರ್ಚು ಮಾಡಿ, ತಂದೆಯನ್ನೇ ನಿರ್ದಯಿಯಾಗಿ ಥಳಿಸಿದ ಮಗಳು – Kannada News | Viral Video Shows Family Dispute Turning Violent, Police Take Note

ತನ್ನೆಲ್ಲಾ ಕಷ್ಟ-ಸುಖಗಳೆರಡನ್ನೂ ಬದಿಗಿಟ್ಟು, ಮಗಳೇ ಸರ್ವಸ್ವವೆಂದು ಬದುಕಿದ ತಂದೆ(Father)ಗೆ ಇದೆಂಥಾ ಪರಿಸ್ಥಿತಿ ತಂದಿಟ್ಟಿದ್ದಾಳೆ ಈ ಪ್ರೀತಿಯ ಮಗಳು. ಸಂಸಾರದಲ್ಲಿ ಕೋಪ-ತಾಪ, ಪ್ರೀತಿ, ಜಗಳ ಎಲ್ಲವೂ ಸಾಮಾನ್ಯ ಆದರೆ ತಾನು ಮಾಡಿದ ತಪ್ಪಿಗೆ ತಂದೆಗೆ ಮನಸೋ ಇಚ್ಛೆ ಥಳಿಸುವುದೆಂದರೆ ಸಾಮಾನ್ಯನಾ, ಇಷ್ಟು ವರ್ಷ ಪ್ರೀತಿಯಿಂದ ಸಾಕಿದ ಮಗಳ ವರ್ತನೆ ನೋಡಿ ತಂದೆ ಹತಾಶರಾಗಿ ಕುಳಿತಿರುವ ವಿಡಿಯೋ ವೈರಲ್ ಆಗಿದೆ.

ಆ ವಿಡಿಯೋದಲ್ಲಿ ಮಗಳೊಬ್ಬಳು ತಂದೆಯೊಂದಿಗೆ ಜಗಳವಾಡುತ್ತಿದ್ದಾಳೆ, ಅಷ್ಟೇ ಅಲ್ಲದೆ ಮಗಳು ಆವಾಚ್ಯ ಶಬ್ದಗಳಿಂದ ತಂದೆಯನ್ನು ನಿಂದಿಸಿ ಅವರ ಮೇಲೆ ಹಲ್ಲೆ ನಡೆಸಿರುವ ಮಾಡುತ್ತಿರುವ ಆಘಾತಕಾರಿ ವೈರಲ್ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.

ತಂದೆ ಕಷ್ಟಪಟ್ಟು ದುಡಿದ 18 ಲಕ್ಷ ಹಣವನ್ನು ತನ್ನ ದರಭ್ಯಾಸಗಳಿಗೆ ಖರ್ಚು ಮಾಡಿದ್ದೂ ಅಲ್ಲದೆ, ತಂದೆಯನ್ನೇ ನಪುಂಸಕನೆಂದು ನಿಂದಿಸಿರುವ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ತಂದೆ ಹತಾಶರಾಗಿ ಕೂತಲ್ಲೇ ಕುಳಿತಿರುವುದು ಕಣ್ಣಂಚಲ್ಲಿ ನೀರು ತರಿಸದೇ ಇರದು.

ಮತ್ತಷ್ಟು ಓದಿ: ಹುಟ್ಟಿಸಿದ ಮಗನ ಬಲಿ ಪಡೆದ ತಂದೆ: ಅಪ್ಪನ ಚಟಕ್ಕೆ ಹೋಯ್ತು ಪುತ್ರನ ಪ್ರಾಣಪಕ್ಷಿ

ಆಕೆಯ ನಿರ್ದಯ ಮಾತು, ಆಕ್ರೋಶ, ಕೋಪ, ಹಲ್ಲೆ ತಂದೆಯನ್ನು ಮಾನಸಿಕವಾಗಿ ಕುಗ್ಗಿಸಿದೆ.ಹಣದ ವಿವಾದದಿಂದ ಆರಂಭವಾದ ಜಗಳ ಅವಮಾನವಾಗಿ ಬದಲಾಯಿತು. ಈ ವಿಡಿಯೋ ಲಕ್ಷ ವೀಕ್ಷಣೆಗಳನ್ನು ಪಡೆದಿದೆ. ಹಲವರು ಈ ವಿಡಿಯೋ ಕುರಿತು ಕಮೆಂಟ್ ಮಾಡಿದ್ದಾರೆ.

ವಿಡಿಯೋ

ಮಹಿಳಾ ಸಬಲೀಕರಣ ಎಂದರೆ ಇದೇನಾ ಎಂದು ಒಬ್ಬರು ಮಾತನಾಡಿದರೆ, ಇನ್ನೊಬ್ಬರು ಇದನ್ನು ನೋಡಲಾಗುತ್ತಿಲ್ಲ ಎಂದಿದ್ದಾರೆ, ಮತ್ತೊಬ್ಬರು ಭವಿಷ್ಯದಲ್ಲಿ ಆಕೆಯ ಗಂಡನ ಗತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ.ಇನ್ನೊಬ್ಬರು ಆಕೆ ಮದುವೆಯಾಗುವುದಕ್ಕಿಂತ ಒಂಟಿಯಾಗಿರುವುದೇ ಒಳಿತು ಎಂದಿದ್ದಾರೆ. ಆಕೆ ಕುಟುಂಬದವರ ಜತೆ ಬದುಕಲು ಅರ್ಹಳಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: 2026ರ ವರ್ಷ ಪೂರ್ತಿ ಈ 4 ರಾಶಿಯ ಮಹಿಳೆಯರಿಗೆ ಅದೃಷ್ಟದ ಸುರಿಮಳೆ – Kannada News | Astrological Forecast 2026: Unveiling Luck for Women of Specific Zodiac Signs

2026ರ ಹೊಸ ವರ್ಷ ಪ್ರಾರಂಭವಾಗಿದೆ. ಈ ವರ್ಷ 12ರಾಶಿಗಳಲ್ಲಿ ಪ್ರಮುಖವಾಗಿ ಈ 4 ರಾಶಿಯ ಮಹಿಳೆಯರಿಗೆ ಭಾರೀ ಅದೃಷ್ಟದ ವರ್ಷವಾಗಲಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಗ್ರಹಗಳ ಯಾವುದೇ ಸಂಚಾರವಿದ್ದರೂ, ಈ ವರ್ಷವು ಮೂರು ನಿರ್ದಿಷ್ಟ ರಾಶಿಗಳ ಮಹಿಳೆಯರಿಗೆ ವರ್ಷಪೂರ್ತಿ ಅದೃಷ್ಟವನ್ನು ತರಲಿದೆ. ಇದರ ಜೊತೆಗೆ, ಇನ್ನೊಂದು ರಾಶಿಗೂ ಸಹ ಒಂದಷ್ಟು ಅದೃಷ್ಟ ಕೂಡಿಬರಲಿದೆ. ಹೀಗೆ ಒಟ್ಟಾರೆ ಮೂರು ಪ್ರಮುಖ ರಾಶಿಗಳು ಮತ್ತು ಒಂದು ಅತೀ ಕಡಿಮೆ ಲಾಭ ಪಡೆಯುವ ರಾಶಿ, ಅಂದರೆ ಒಟ್ಟು ನಾಲ್ಕು ರಾಶಿಗಳ ಮಹಿಳೆಯರಿಗೆ 2026 ಅತ್ಯಂತ ಶುಭ ವರ್ಷವಾಗಲಿದೆ.

ಈ ವರ್ಷ ಗ್ರಹಗಳ ಸ್ಥಿತಿಗತಿಗಳು ಮಹಿಳೆಯರ ಜೀವನದ ಮೇಲೆ ವಿಶೇಷ ಪ್ರಭಾವ ಬೀರಲಿವೆ. ಜೂನ್ 2ರಂದು ಗುರು ಗ್ರಹ ಬದಲಾವಣೆಯಾಗುತ್ತದೆ. ಶನಿ ಗ್ರಹವು ವರ್ಷಪೂರ್ತಿ ಮೀನ ರಾಶಿಯಲ್ಲಿಯೇ ನೆಲೆಸಿರುತ್ತದೆ. ಡಿಸೆಂಬರ್ 5ರಂದು ರಾಹು-ಕೇತು ಗ್ರಹಗಳು ತಮ್ಮ ಸ್ಥಾನಗಳನ್ನು ಬದಲಿಸುತ್ತವೆ. ಇವುಗಳ ಪ್ರಭಾವದ ಜೊತೆಗೆ, ಬುಧ, ಮಂಗಳ, ಶುಕ್ರ, ಗುರು ಗ್ರಹಗಳ ಧನಾತ್ಮಕ ಪ್ರಭಾವವು ಈ ಅದೃಷ್ಟವಂತ ರಾಶಿಗಳ ಮಹಿಳೆಯರಿಗೆ ಅಭೂತಪೂರ್ವ ಯಶಸ್ಸನ್ನು ತರಲಿದೆ. 2025 ಈಗಾಗಲೇ ಮುಗಿದ ಅಧ್ಯಾಯ. 2026ರ ಈ ವರ್ಷ ಹೊಸದಾದ, ಶುಭ ಸುದ್ದಿಗಳ ವರ್ಷವಾಗಿದೆ.

ನಮ್ಮ ಸಂಸ್ಕೃತಿಯಲ್ಲಿ ಸ್ತ್ರೀಯರನ್ನು ಪ್ರಕೃತಿ, ತಾಯಿ, ದೇವಿಗೆ ಹೋಲಿಸಲಾಗುತ್ತದೆ. ನೀರನ್ನು ಗಂಗೆ ಎಂದೂ, ಆಹಾರವನ್ನು ಅನ್ನಪೂರ್ಣೇಶ್ವರಿ ಎಂದೂ ಪೂಜಿಸುತ್ತೇವೆ. ಅದೇ ರೀತಿ, ಈ ವರ್ಷ ಕೆಲವು ರಾಶಿಗಳ ಮಹಿಳೆಯರಿಗೆ ಅದೃಷ್ಟದ ಯೋಗವಿದೆ. ನೀವು ಸಾಡೇಸಾತಿ ಅಥವಾ ಇನ್ನಾವುದೇ ಗ್ರಹದೋಷದ ಬಗ್ಗೆ ಚಿಂತಿಸಬೇಕಾಗಿಲ್ಲ. ತಾಳ್ಮೆ, ಸಹನೆ, ಯೋಚನಾ ಲಹರಿ, ಮತ್ತು ಆತುರದ ನಿರ್ಧಾರಗಳನ್ನು ತ್ಯಜಿಸಿ, ಸರಿಯಾದ ಯೋಜನೆಗಳೊಂದಿಗೆ ಮುನ್ನಡೆದರೆ ಈ ವರ್ಷವು ನಿಮಗೆ ಪವಾಡ ಸದೃಶ ಫಲಗಳನ್ನು ನೀಡಲಿದೆ. ಕಷ್ಟ ಪಡುವುದರ ಜೊತೆಗೆ ಅದೃಷ್ಟವೂ ಇರಬೇಕು. ಆ ಅದೃಷ್ಟ 2026ರಲ್ಲಿ ಈ ಕೆಳಗಿನ ರಾಶಿಗಳಿಗೆ ಇರಲಿದೆ.

ಕರ್ಕಾಟಕ ರಾಶಿ (Cancer):

ಚಂದ್ರನು ಅಧಿಪತಿಯಾಗಿರುವ ಕರ್ಕಾಟಕ ರಾಶಿಯ ಮಹಿಳೆಯರಿಗೆ ಈ ವರ್ಷದಲ್ಲಿ ಅವರ ಅನಿಸಿಕೆಗಳಿಗೆ ಮತ್ತು ಯೋಜನೆಗಳಿಗೆ ವಿಶೇಷ ಮನ್ನಣೆ ಸಿಗಲಿದೆ. ಕೀರ್ತಿ ಪ್ರತಿಷ್ಠೆಗಳಿಗೆ ಭಾಜನರಾಗುವಿರಿ. ಆರೋಗ್ಯವು ಉತ್ತಮವಾಗಿರುತ್ತದೆ. ಮನೆ ಯೋಗ, ಉದ್ಯೋಗ ಮತ್ತು ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಮಕ್ಕಳು, ಗಂಡ, ಕುಟುಂಬದ ವಿಚಾರಗಳಲ್ಲಿ ಶುಭ ಫಲಗಳು ದೊರೆಯುತ್ತವೆ. ವಿವಾಹದ ವಿಷಯದಲ್ಲಿಯೂ ಯಶಸ್ಸು ದೊರೆಯುವ ಸಾಧ್ಯತೆಗಳಿವೆ.

ಸಿಂಹ ರಾಶಿ (Leo):

ರವಿಯ ಅನುಗ್ರಹವನ್ನು ಹೊಂದಿರುವ ಸಿಂಹ ರಾಶಿಯ ಮಹಿಳೆಯರಿಗೆ ಉದ್ಯೋಗ ಪ್ರಾಪ್ತಿ, ರಾಜಕೀಯವಾಗಿ ಪ್ರಗತಿ, ಮತ್ತು ಸ್ಥಾನಮಾನ ಲಭಿಸುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಬಡ್ತಿ ದೊರೆಯಬಹುದು. ಬಹುದಿನಗಳಿಂದ ಕಾಡುತ್ತಿದ್ದ ನೋವುಗಳಿಗೆ ಪರಿಹಾರ ಸಿಗಲಿದೆ. ಇದು ಸಿಂಹ ರಾಶಿಯ ಮಹಿಳೆಯರಿಗೆ ಬಹಳ ಶುಭ ವರ್ಷವಾಗಿದೆ.

ಕುಂಭ ರಾಶಿ (Aquarius):

ಶನಿ ಅಧಿಪತಿಯಾಗಿರುವ ಕುಂಭ ರಾಶಿಯ ಮಹಿಳೆಯರಿಗೆ ಈ ವರ್ಷ ಸಾಹಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಸವಾಲುಗಳನ್ನು ಎದುರಿಸಿ ಗುರಿ ಮುಟ್ಟಲು ಅನುಕೂಲಕರ ವಾತಾವರಣವಿದೆ. ಬಂಗಾರದ ಯೋಗ, ಭೂಮಿ ಯೋಗಗಳು ಕೂಡಿಬರಲಿವೆ. ಆಸ್ತಿ ಕಲಹಗಳು ಇತ್ಯರ್ಥವಾಗುತ್ತವೆ. ತವರು ಮನೆಯಿಂದ ಉಡುಗೊರೆಗಳು ಸಿಗಬಹುದು. ಗಂಡನ ಜೊತೆ ಅನ್ಯೋನ್ಯತೆ ಹೆಚ್ಚಲಿದೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಮೀನ ರಾಶಿ (Pisces):

ಗುರು ರಾಶ್ಯಾಧಿಪತಿಯಾಗಿದ್ದರೂ, ಶನಿ ಗ್ರಹವು ಅಲ್ಲೇ ಇದ್ದರೂ ಸಹ ಮೀನ ರಾಶಿಯ ಮಹಿಳೆಯರಿಗೆ ಈ ವರ್ಷ ನಿಧಾನವಾದರೂ ಪ್ರಧಾನವಾದ ಪ್ರಗತಿ ಇರಲಿದೆ. ತಡವಾದರೂ ಒಳ್ಳೆಯ ಫಲಿತಾಂಶಗಳು ದೊರೆಯಲಿವೆ. ಸಾಕಷ್ಟು ಅದೃಷ್ಟಗಳು ಈ ವರ್ಷ ಮೀನ ರಾಶಿಯವರ ಪಾಲಿಗೆ ಬರಲಿವೆ.

ಹೀಗೆ ಕರ್ಕಾಟಕ, ಸಿಂಹ, ಕುಂಭ, ಮೀನ ರಾಶಿಯ ಮಹಿಳೆಯರಿಗೆ, ಕನ್ಯೆಯರಿಗೆ, ಹೆಣ್ಣುಮಕ್ಕಳಿಗೆ 2026 ಅತ್ಯಂತ ಅದೃಷ್ಟದ ವರ್ಷವಾಗಿದೆ. ಯಾವುದೇ ಸಣ್ಣ ದುರಂತ ನಡೀತು ಎಂದು ತಲೆ ಮೇಲೆ ಕೈಯಿಟ್ಟುಕೊಂಡು ಕೂರಬಾರದು. ವಿದ್ಯಾರ್ಥಿಗಳು ಸರಿಯಾಗಿ ಪ್ರಯತ್ನ ಪಟ್ಟರೆ ಒಳ್ಳೆಯ ವಿದ್ಯಾ ಯೋಗವಿದೆ. ಕುಟುಂಬದಲ್ಲಿ ಗಂಡ-ಹೆಂಡತಿಯರ ಕಲಹಗಳು ಇತ್ಯರ್ಥವಾಗುತ್ತವೆ. ಕಾನೂನು ವಿಷಯಗಳಲ್ಲಿ ಜಯ ಸಿಗಲಿದೆ. ಭೂಮಿ ಯೋಗ ಮತ್ತು ಉದ್ಯೋಗ ಯೋಗಗಳು ಈ ರಾಶಿಗಳ ಮಹಿಳೆಯರಿಗೆ ಶುಭವನ್ನು ತರಲಿವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾಕ್ ದಾಂಡಿಗನ ವಿಶ್ವ ದಾಖಲೆಯನ್ನೇ ಉಡೀಸ್ ಮಾಡಿದ ವೈಭವ್ – Kannada News | Vaibhav Suryavanshi Breaks Pakistan Batter’s World Record

ಯೂತ್ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ (Vaibhav suryavanshi) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ ಪಾಕಿಸ್ತಾನದ ದಾಂಡಿಗ ಅಹಮದ್ ಶೆಹಝಾದ್ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

Source link

ಬೆಂಕಿ ಬೌಲಿಂಗ್ …. ವಿಂಡೀಸ್ ದಿಗ್ಗಜರ ನಡುವೆ ಕನ್ನಡಿಗನ ವಿಶ್ವ ದಾಖಲೆ – Kannada News | Vasuki Koushik Creates World Record in List A Cicket

ಕರ್ನಾಟಕದ ವೇಗಿ ವಾಸುಕಿ‌ ಕೌಶಿಕ್ ಲಿಸ್ಟ್ ಎ (ಏಕದಿನ) ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ಅದು ಸಹ ತನ್ನ ಕರಾರುವಾಕ್ ದಾಳಿ ಮೂಲಕ. ಈ ದಾಳಿಯೊಂದಿಗೆ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಸರಾಸರಿ ಹೊಂದಿರುವ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.

Source link

ಮಹಿಳೆಯರ ಉದ್ಯೋಗ, ವಾಸಕ್ಕೆ ಬೆಂಗಳೂರೇ ಬೆಸ್ಟ್! ಸಿಲಿಕಾನ್ ಸಿಟಿ ದೇಶದಲ್ಲೇ ನಂ.1 ಎಂದ ಸಮೀಕ್ಷೆ – Kannada News | Bengaluru Ranked No 1 City in India for Working Women and Living, Says Survey

ಬೆಂಗಳೂರು, ಜನವರಿ 8: ಮಹಿಳೆಯರಿಗೆ ಉದ್ಯೋಗ ಹಾಗೂ ವಾಸಕ್ಕೆ ಅತ್ಯಂತ ಅನುಕೂಲಕರ ನಗರವಾಗಿ ಬೆಂಗಳೂರು ಹೊರಹೊಮ್ಮಿರುವುದು ಸಮೀಕ್ಷೆಯೊಂದರಿಂದ ತಿಳಿದುಬಂದಿದೆ. ಉತ್ತಮ ಹವಾಮಾನದಿಂದ ದೇಶದ ಇತರ ಭಾಗಗಳ ಜನರನ್ನು ಆಕರ್ಷಿಸುತ್ತಿದ್ದ ಬೆಂಗಳೂರು (Bangalore) ಇದೀಗ ಮಹಿಳಾ ಸ್ನೇಹಿ ಉದ್ಯೋಗದ ವಾತಾವರಣದಲ್ಲಿಯೂ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ. ಅವತಾರ್ ಗ್ರೂಪ್ (Avtar Group) ಎಂಬ ವರ್ಕ್​​ಪ್ಲೇಸ್ ಕಲ್ಚರ್ ಕನ್ಸಲ್ಟಿಂಗ್ ಫರ್ಮ್ ಬಿಡುಗಡೆ ಮಾಡಿದ ‘ಟಾಪ್ ಸಿಟೀಸ್ ವಿಮೆನ್ ಇನ್ ಇಂಡಿಯಾ’ ವರದಿಯಲ್ಲಿ, ಮಹಿಳೆಯರು ಕೆಲಸ ಮಾಡಲು ಹೆಚ್ಚು ಇಚ್ಛಿಸುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಚೆನ್ನೈ, ಪುಣೆ, ಹೈದರಾಬಾದ್, ಮುಂಬೈ, ಗುರುಗ್ರಾಮ್, ಕೊಲ್ಕತ್ತಾ, ಅಹಮದಾಬಾದ್, ತಿರುವನಂತಪುರಂ ಹಾಗೂ ಕೊಯಮತ್ತೂರು ಕೂಡ ಸ್ಥಾನ ಪಡೆದಿವೆ.

125 ನಗರಗಳ ಪೈಕಿ ಬೆಂಗಳೂರೇ ಟಾಪ್!

ದೇಶದಾದ್ಯಂತ 125 ನಗರಗಳನ್ನು ಅಧ್ಯಯನ ಮಾಡಿ, ಹಿಂದಿನ ವರ್ಷಗಳ ಮಾಹಿತಿಯೊಂದಿಗೆ ಹೋಲಿಕೆ ನಡೆಸಿ ಈ ವರದಿ ಸಿದ್ಧಪಡಿಸಲಾಗಿದೆ. ನಗರಗಳಲ್ಲಿ ಮಹಿಳೆಯರ ಉದ್ಯೋಗ ಪಾಲ್ಗೊಳ್ಳುವಿಕೆ, ಸುರಕ್ಷತೆ, ವೃತ್ತಿ ಅಭಿವೃದ್ಧಿ, ಹಾಗೂ ಸಾಮಾಜಿಕ–ಆರ್ಥಿಕ ಸೌಲಭ್ಯಗಳನ್ನು ಆಧರಿಸಿ ‘ಸಿಟಿ ಇನ್‌ಕ್ಲೂಷನ್ ಸ್ಕೋರ್’ ನೀಡಲಾಗಿದೆ.

ಸೋಷಿಯಲ್ ಇನ್​ಕ್ಲೂಶನ್ (ಸಾಮಾಜಿಕ ಒಳಗೊಳ್ಳುವಿಕೆ) ಅಂಕಗಳಲ್ಲಿ ನಗರಗಳ ವಾಸಯೋಗ್ಯತೆ, ಸುರಕ್ಷತೆ, ಮಹಿಳೆಯರ ಉದ್ಯೋಗ ಪ್ರತಿನಿಧಿತ್ವ ಮತ್ತು ಸಬಲೀಕರಣವನ್ನು ಪರಿಗಣಿಸಲಾಗಿದೆ. ಕೈಗಾರಿಕಾ ಒಳಗೊಳ್ಳುವಿಕೆಯಲ್ಲಿ ಮಹಿಳಾ ಸ್ನೇಹಿ ಉದ್ಯಮಗಳು, ವೃತ್ತಿ ಸಹಾಯಕ ವ್ಯವಸ್ಥೆಗಳು ಹಾಗೂ ಲಿಂಗ ಸಮಾನತೆಯನ್ನು ಉತ್ತೇಜಿಸುವ ಸಂಸ್ಥೆಗಳ ಉಪಸ್ಥಿತಿಯನ್ನು ಗಮನಿಸಲಾಗಿದೆ.

ಬೆಂಗಳೂರಿಗೆ ಪ್ಲಸ್ ಪಾಯಿಂಟ್ ಆಗಿದ್ದೇನು?

2025ರ ವರದಿಯಲ್ಲಿ ಬೆಂಗಳೂರು 53.29 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಮಹಿಳೆಯರಿಗೆ ಅನುಕೂಲಕರ ಉದ್ಯೋಗ ಪರಿಸರ, ತಂತ್ರಜ್ಞಾನ ಹಾಗೂ ಸೇವಾ ಕ್ಷೇತ್ರಗಳಲ್ಲಿ ಹೆಚ್ಚಾದ ಅವಕಾಶಗಳು ಬೆಂಗಳೂರಿಗೆ ಸಂಬಂಧಿಸಿದ ಮುಖ್ಯ ಅಂಶಗಳಾಗಿವೆ. ಚೆನ್ನೈ 49.86 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದರೆ, ಪುಣೆ (46.27), ಹೈದರಾಬಾದ್ (46.04) ಹಾಗೂ ಮುಂಬೈ (44.49) ಮುಂದಿನ ಸ್ಥಾನಗಳಲ್ಲಿವೆ.

ಗುರುಗ್ರಾಮ್, ನೋಯ್ಡಾ ಹಾಗೂ ದೆಹಲಿ ಕೈಗಾರಿಕಾ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿದ್ದರೂ, ಸುರಕ್ಷತೆ, ಸಾರಿಗೆ ಹಾಗೂ ಜೀವನ ವೆಚ್ಚದಂತಹ ಸಾಮಾಜಿಕ ಅಂಶಗಳಲ್ಲಿ ಹಿನ್ನಡೆಯಲ್ಲಿವೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಇದರಿಂದ, ಕೇವಲ ಕೈಗಾರಿಕಾ ಅಭಿವೃದ್ಧಿ ಮಾತ್ರ ಮಹಿಳಾ ಸ್ನೇಹಿ ನಗರ ನಿರ್ಮಾಣಕ್ಕೆ ಸಾಕಾಗುವುದಿಲ್ಲ ಎಂಬ ಅಂಶ ಬಹಿರಂಗವಾಗಿದೆ.

ಸಮೀಕ್ಷಾ ವರದಿಯ ಪ್ರಕಾರ ತಿರುವನಂತಪುರಂ, ಶಿಮ್ಲಾ ಹಾಗೂ ತಿರುಚಿರಾಪಳ್ಳಿ ಸಾಮಾಜಿಕ ಒಳಗೊಳ್ಳುವಿಕೆಯಲ್ಲಿ ಉತ್ತಮ ಸಾಧನೆ ತೋರಿದ್ದರೂ, ದೊಡ್ಡ ಮಟ್ಟದ ಉದ್ಯೋಗಾವಕಾಶಗಳ ಕೊರತೆಯನ್ನು ಎದುರಿಸುತ್ತಿವೆ. ಹೈದರಾಬಾದ್, ಕೊಲ್ಕತ್ತಾ ಮತ್ತು ಪುಣೆಗಳು ಸಾಮಾಜಿಕ ಹಾಗೂ ಕೈಗಾರಿಕಾ ಒಳಗೊಳ್ಳುವಿಕೆಯಲ್ಲಿ ಸಮತೋಲನ ಸಾಧಿಸಿರುವ ನಗರಗಳಾಗಿ ಗುರುತಿಸಿಕೊಂಡಿವೆ.

ಇದನ್ನೂ ಓದಿ: ಕೋಗಿಲು ಲೇಔಟ್: ಅಕ್ರಮ ಮನೆಗೆ 1 ರಿಂದ 2 ಲಕ್ಷ ರೂ. ವಸೂಲಿ, ಸರ್ಕಾರಿ ಭೂಮಿ ಕಬಳಿಸಿ ತನ್ನದೇ ಹೆಸರಿಟ್ಟಿದ್ದ ಆರೋಪಿ!

ಒಟ್ಟಿನಲ್ಲಿ, ಮಹಿಳೆಯರ ವೃತ್ತಿ ಬೆಳವಣಿಗೆ ಮತ್ತು ಸುರಕ್ಷಿತ ಜೀವನಕ್ಕೆ ಬೆಂಗಳೂರು ದೇಶದಲ್ಲೇ ಮಾದರಿ ನಗರವಾಗಿ ಹೊರಹೊಮ್ಮಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳಾ ಸ್ನೇಹಿ ನೀತಿಗಳು ಹಾಗೂ ಮೂಲಸೌಕರ್ಯಗಳು ರೂಪುಗೊಳ್ಳಬಹುದೆಂಬ ನಿರೀಕ್ಷೆಯನ್ನು ಈ ವರದಿ ಮೂಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಾಝ್​ ಬಾಲ್​ ಬೌಲ್ಡ್​… ಆ್ಯಶಸ್ ಗೆದ್ದ ಆಸ್ಟ್ರೇಲಿಯಾ – Kannada News | Australia retain the Ashes 4 1

ಬಾಝ್ ಬಾಲ್ ತಂತ್ರದೊಂದಿಗೆ 15 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಆ್ಯಶಸ್ ಸರಣಿ ಗೆಲ್ಲುವ ಧ್ಯೇಯದೊಂದಿಗೆ ಬಂದಿದ್ದ ಇಂಗ್ಲೆಂಡ್ ತಂಡವು 4 ಸೋಲುಗಳೊಂದಿಗೆ ಮತ್ತೊಮ್ಮೆ ಮಂಡಿಯೂರಿದೆ. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದ್ದ ಆಸ್ಟ್ರೇಲಿಯಾ ತಂಡವು ಮೂರನೇ ಪಂದ್ಯದಲ್ಲಿ 82 ರನ್​ಗಳ ಜಯ ಸಾಧಿಸಿತ್ತು. ಈ ಮೂಲಕ ಆ್ಯಶಸ್ ಸರಣಿಯನ್ನು ವಶಪಡಿಸಿಕೊಂಡಿದ್ದರು.

ಇದಾಗ್ಯೂ ನಾಲ್ಕನೇ ಮ್ಯಾಚ್​ನಲ್ಲಿ ಕಂಬ್ಯಾಕ್ ಮಾಡಿದ್ದ ಇಂಗ್ಲೆಂಡ್ ತಂಡವು ಆತಿಥೇಯರಿಗೆ 4 ವಿಕೆಟ್​ಗಳ ಸೋಲುಣಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಐದನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಮ್ಮೆ ಆಂಗ್ಲ ಪಡೆಗೆ ಸೋಲಿನ ರುಚಿ ತೋರಿಸುವಲ್ಲಿ ಆಸ್ಟ್ರೇಲಿಯನ್ನರು ಯಶಸ್ವಿಯಾಗಿದ್ದಾರೆ.

ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪ್ರಥಮ ಇನಿಂಗ್ಸ್​ನಲ್ಲಿ 384 ರನ್ ಕಲೆಹಾಕಿದ್ದರು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ತಂಡ ಪೇರಿಸಿದ್ದು ಬರೋಬ್ಬರಿ 567 ರನ್​ಗಳು.

183 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ ಪರ ಜೇಕಬ್ ಬೆಥೆಲ್ 154 ರನ್​ಗಳ ಭರ್ಜರಿ ಇನಿಂಗ್ಸ್ ಆಡಿದ್ದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಇಂಗ್ಲೆಂಡ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 342 ರನ್​ಗಳಿಸಿ ಆಲೌಟ್ ಆಗಿದೆ.

ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 160 ರನ್​ಗಳ ಸುಲಭ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಆಂಗ್ಲ ಬೌಲರ್​ಗಳು ಯಶಸ್ವಿಯಾಗಿದ್ದರು. ಇದಾಗ್ಯೂ ಆಸ್ಟ್ರೇಲಿಯಾ ತಂಡ 31.2 ಓವರ್​ಗಳಲ್ಲಿ 161 ರನ್​ಗಳಿಸಿ 5 ವಿಕೆಟ್​ಗಳ ವಿಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಐದು ಪಂದ್ಯಗಳ ಆ್ಯಶಸ್ ಸರಣಿಯನ್ನು ಆಸ್ಟ್ರೇಲಿಯಾ ತಂಡ 4-1 ಅಂತರದಿಂದ ಗೆದ್ದುಕೊಂಡಿದೆ. ಅತ್ತ ಆಕ್ರಮಣಕಾರಿ ಆಟದೊಂದಿಗೆ (ಬಾಝ್ ಬಾಲ್ ಕ್ರಿಕೆಟ್) ಆ್ಯಶಸ್ ಸರಣಿ ಗೆಲ್ಲುವ ತಂತ್ರದೊಂದಿಗೆ ಆಗಮಿಸಿದ್ದ ಇಂಗ್ಲೆಂಡ್ ತಂಡವು ಈ ಬಾರಿ ಒಂದು ಗೆಲುವಿನೊಂದಿಗೆ ಮರಳಿರುವುದು ಸಮಾಧಾನಕರ.

ಏಕೆಂದರೆ ಇದು ಆಸ್ಟ್ರೇಲಿಯಾದಲ್ಲಿ 14 ವರ್ಷಗಳ ಬಳಿಕ ಇಂಗ್ಲೆಂಡ್ ತಂಡ ಸಾಧಿಸಿದ ಮೊದಲ ಗೆಲುವಾಗಿದೆ. ಅಂದರೆ 2011 ರಲ್ಲಿ ನಡೆದ ಆ್ಯಶಸ್ ಸರಣಿಯ  ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಇನ್ನಿಂಗ್ಸ್ ಮತ್ತು 83 ರನ್‌ಗಳಿಂದ ಸೋಲಿಸಿದ ಬಳಿಕಆಂಗ್ಲ ಪಡೆ ಒಮ್ಮೆಯೂ ಕಾಂಗರೂನಾಡಿನಲ್ಲಿ ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ. ಆದರೆ ಈ ಬಾರಿ ಒಂದು ಗೆಲುವಿನೋಂದಿಗೆ ಸೋಲಿನ ಸರಪಳಿಯನ್ನು ಕಳಚಿಕೊಂಡಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಜೇಕ್ ವೆದರಾಲ್ಡ್​, ಮಾರ್ನಸ್ ಲ್ಯಾಬುಶೇನ್, ಉಸ್ಮಾನ್ ಖ್ವಾಜಾ, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಬ್ಯೂ ವೆಬ್‌ಸ್ಟರ್, ಮೈಕೆಲ್ ನೇಸರ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್.

ಇದನ್ನೂ ಓದಿ: IPL 2026: ಬೆಂಕಿ ಬೌಲಿಂಗ್ …. ವಿಂಡೀಸ್ ದಿಗ್ಗಜರ ನಡುವೆ ಕನ್ನಡಿಗನ ವಿಶ್ವ ದಾಖಲೆ

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಬ್ರೈಡನ್ ಕಾರ್ಸ್, ಮ್ಯಾಥ್ಯೂ ಪಾಟ್ಸ್, ಜೋಶ್ ಟಂಗ್.

Source link

ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ್ – Kannada News | Gilli Bigg Boss: Fans Fulfill Actor’s 1M Instagram Follower Wish

ಬಿಗ್ ಬಾಸ್ ಕನ್ನಡ ಸೀಸನ್ 12ರ (BBK 12) ರೇಸ್​​ನಲ್ಲಿ ಗಿಲ್ಲಿ ನಟ ಕಠಿಣ ಸ್ಪರ್ಧೆಯನ್ನೇ ನೀಡುತ್ತಿದ್ದಾರೆ. ಅವರು ಗೆಲ್ಲಬೇಕು ಎಂಬ ಪ್ರಾರ್ಥನೆಯನ್ನು ಫ್ಯಾನ್ಸ್ ಮಾಡುತ್ತಿದ್ದಾರೆ. ಹೀಗಿರುವಾಗಲೇ ಗಿಲ್ಲಿ ನಟ ಇಟ್ಟ ಒಂದು ಬೇಡಿಕೆಯನ್ನು ಫ್ಯಾನ್ಸ್ ಹೊರಗೆ ಈಡೇರಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಗಿಲ್ಲಿ ಆಸೆ ಪೂರ್ಣಗೊಳ್ಳಲಿದೆ. ಹಾಗಾದರೆ, ಗಿಲ್ಲಿ ಇಟ್ಟ ಕೋರಿಕೆ ಏನು? ಆ ಬಗ್ಗೆ ಇಲ್ಲಿದೆ ವಿವರ.

ಜನಪ್ರಿಯತೆ ಹೆಚ್ಚಾದಂತೆಲ್ಲ ಇನ್​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತದೆ. ಇದು ಕೆಲವರಿಗೆ ಪ್ರತಿಷ್ಠೆ ಕೂಡ ಹೌದು. ಈ ಕಾರಣದಿಂದಲೇ ಬಹುತೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಪೋಸ್ಟ್​​ಗಳನ್ನು ಹಂಚಿಕೊಂಡು ಫಾಲೋವರ್ಸ್ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಈಗ ಗಿಲ್ಲಿ ನಟ ಅವರ ಇನ್​​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಒಂದು ಮಿಲಿಯನ್ (10 ಲಕ್ಷ) ಗಡಿ ತಲುಪುತ್ತಿದೆ. ಇದಕ್ಕೆ ಅವರ ಅಭಿಮಾನಿಗಳು ಆರಂಭಿಸಿದ ಆಂದೋಲನವೇ ಕಾರಣ.

ಗಿಲ್ಲಿ ನಟ ಅವರು ಇತ್ತೀಚೆಗೆ ಕಾವ್ಯಾ ಬಳಿ ಮಾತನಾಡುತ್ತಾ, ‘ಇನ್​​ಸ್ಟಾಗ್ರಾಮ್​​ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಆಗಿರಬೇಕಿತ್ತು’ ಎಂದು ಹೇಳಿಕೊಂಡರು. ಇದನ್ನು ಅವರ ಅಭಿಮಾನಿಗಳು ಗಂಭೀರವಾಗಿ ಸ್ವೀಕರಿಸಿದ್ದಾರೆ. ಸದ್ಯ (ಜನವರಿ 8 ಬೆಳಿಗ್ಗೆ 9 ಗಂಟೆ) ಅವರ ಫಾಲೋವರ್ಸ್ ಸಂಖ್ಯೆ 9.36 ಲಕ್ಷ ಇದೆ. ಅನಾಯಾಸವಾಗಿ ಅವರ ಹಿಂಬಾಲಕರ ಸಂಖ್ಯೆ ಮಿಲಿಯನ್ ತಲುಪಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಧ್ರುವಂತ್-ಅಶ್ವಿನಿ ಮಧ್ಯೆಯೇ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ

ಗಿಲ್ಲಿ ಅವರು ಬಿಗ್ ಬಾಸ್​​ಗೆ ಬಂದಾಗ ಅವರ ಇನ್​ಸ್ಟಾ ಹಿಂಬಾಲಕರ ಸಂಖ್ಯೆ 1.69 ಲಕ್ಷ ಮಂದಿ ಇದ್ದರು. ಈಗ ಅದು ಮಿಲಿಯನ್ ತಲುಪುತ್ತಿದೆ. ಮತ್ತೊಂದು ವಿಶೇಷ ಎಂದರೆ ಕೆಲವೇ ದಿನಗಳ ಹಿಂದೆ ಅವರ ಇನ್​​ಸ್ಟಾ ಫಾಲೋವರ್ಸ್​ ಸಂಖ್ಯೆ 6 ಲಕ್ಷ ಇತ್ತು. ಈಗ ಅಭಿಮಾನಿಗಳ ಕ್ಯಾಂಪೇನ್ ಬಳಿಕ ಆ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಫಿನಾಲೆ ಪೂರ್ಣಗೊಳ್ಳುವ ವೇಳೆಗೆ ಅವರ ಹಿಂಬಾಲಕರ ಸಂಖ್ಯೆ ಎಷ್ಟಾಗಿರುತ್ತದೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version