ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ಇಂದು (ಏಪ್ರಿಲ್ 12) ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ನಿನ್ನೆಯಷ್ಟೆ ಅವರು ತೀವ್ರ ಉಸಿರಾಟದ ಸಮಸ್ಯೆ ಮತ್ತೆ ಎದೆನೋವಿನಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಇಂದು ಮಧ್ಯಾಹ್ನದ ವೇಳೆಗೆ ನಿಧನ ಹೊಂದಿದ್ದಾರೆ.
ನವದೆಹಲಿ, ಏಪ್ರಿಲ್ 12: ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸಂಸದೀಯ ಪಕ್ಷಗಳ ನಾಯಕರಿಗೆ ಪತ್ರ ಬರೆದು ನಾರಿ ಶಕ್ತಿ ವಂದನಾ ಕಾಯ್ದೆ(ಮಹಿಳಾ ಮೀಸಲಾತಿ ಕಾಯ್ದೆ) ತಿದ್ದುಪಡಿಗೆ ಸಂಪೂರ್ಣ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ. ಈ ಪತ್ರದಲ್ಲಿ ಪ್ರಧಾನಿ ಮೋದಿ ಅವರು ಏಪ್ರಿಲ್ 16ರಂದು ಪ್ರಾರಂಭವಾಗುತ್ತಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಐತಿಹಾಸಿಕ ತಿದ್ದುಪಡಿಯನ್ನು ಸರ್ವಾನುಮತದಿಂದ ಅಂಗೀಕರಿಸಬೇಕೆಂದು ಕರೆ ನೀಡಿದ್ದಾರೆ. ಇದಲ್ಲದೆ, ಬಿಜೆಪಿ ತನ್ನ ಎಲ್ಲಾ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಏಪ್ರಿಲ್ 16,17,18ರಂದು ಸದನದಲ್ಲಿ ಹಾಜರಿರುವಂತೆ ನಿರ್ದೇಶಿಸಿದೆ.
ನಾರಿ ಶಕ್ತಿ ವಂದನಾ ಕಾಯ್ದೆಯಲ್ಲಿ ಪೂರ್ಣ ಉತ್ಸಾಹದಲ್ಲಿ ಜಾರಿಗೆ ತರುವ ಸಮಯ ಬಂದಿದೆ. 2029ರ ಲೋಕಸಭಾ ಚುನಾವಣೆಗಳು ಮತ್ತು ಮುಂಬರುವ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೆ ತರುವುದು ಸೂಕ್ತ.
ಏಪ್ರಿಲ್ 16ರಿಂದ ದೇಶದ ಸಂಸತ್ತಿನಲ್ಲಿ ನಾರಿ ಶಕ್ತಿ ವಂದನಾ ಕಾಯ್ದೆಯ ಕುರಿತು ಐತಿಹಾಸಿಕ ಚರ್ಚೆ ನಡೆಯಲಿದೆ. ಈ ವಿಶೇಷ ಸಭೆಯು ನಮ್ಮ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಲು ಒಂದು ಅವಕಾಶವಾಗಿದೆ. ಎಲ್ಲರನ್ನೂ ಜತೆಗೆ ಕರೆದೊಯ್ಯುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಲು ಇದು ಒಂದು ಅವಕಾಶ. ಈ ಉತ್ಸಾಹ ಮತ್ತು ಉದ್ದೇಶದಿಂದ ನಾನು ನಿಮಗೆ ಪತ್ರ ಬರೆಯುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಪತ್ರದಲ್ಲಿ ಬರೆದಿದ್ದಾರೆ.
ಮಹಿಳೆಯರಿಗೆ ಮುನ್ನಡೆಯಲು , ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಸಿಕ್ಕಾಗ ಮಾತ್ರ ಯಾವುದೇ ಸಮಾಜ ಪ್ರಗತಿ ಹೊಂದುತ್ತದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ದೇಶದ ಸಂಕಲ್ಪವನ್ನು ಸಾಧಿಸಲು ಮಹಿಳಾ ಶಕ್ತಿಯು ಈ ಪ್ರಯಾಣದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವುದು ಮುಖ್ಯ.
ಸಾರ್ವಜನಿಕ ಜೀವನದಲ್ಲಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ಬಾಹ್ಯಾಕಾಶದಿಂದ ಕ್ರೀಡೆವರೆಗೆ, ಸಶಸ್ತ್ರ ಪಡೆಗಳಿಂದ ಸ್ಟಾರ್ಟ್ ಅಪ್ಗಳವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ತಮ್ಮ ದೊಡ್ಡ ದೃಷ್ಟಿಕೋನ ಮತ್ತು ಉತ್ಸಾಹದಿಂದ ಅವರು ಶ್ರಮಿಸುತ್ತಾರೆ ಮತ್ತು ತಮ್ಮನ್ನು ತಾವು ಸಾಬೀತುಪಡಿಸುತ್ತಾರೆ.
PM @narendramodi writes to floor leaders of all parties in the Lok Sabha and Rajya Sabha seeking support for the passage of a bill to amend the Women’s Reservation Act, 2023. The amendments will be brought for introduction, consideration and passing between April 16-18 in an… pic.twitter.com/z7t2gZOAQA
ದಶಕಗಳಿಂದ ಏಶದ ಸಂಸತ್ತು ಮತ್ತು ಶಾಸಕಾಂಗ ಸಭೆಗಳಲ್ಲಿ ಮಹಿಳಾ ಮೀಸಲಾತಿ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಪ್ರಧಾನಿ ನೆನಪಿಸಿಕೊಂಡಿದ್ದಾರೆ. 2023ರಲ್ಲಿ, ಎಲ್ಲಾ ಪಕ್ಷಗಳ ಸಂಸದರು ನಾರಿ ಶಕ್ತಿ ವಂದನಾ ಕಾಯ್ದೆಯನ್ನು ಬೆಂಬಲಿಸಲು ಸಂಸತ್ತಿನಲ್ಲಿ ಒಗ್ಗೂಡಿದ್ದರು. ಇದು ನಮ್ಮ ಇದು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಮರೆಯಲಾಗದ ಸಂದರ್ಭವಾಗಿತ್ತು. ಸಂಸತ್ತಿನ ಎಲ್ಲಾ ಸದಸ್ಯರು ನಾರಿ ಶಕ್ತಿ ವಂದನ ಕಾಯ್ದೆಯ ಚರ್ಚೆಗೆ ಕೊಡುಗೆ ನೀಡಿದರು .
ಆ ಸಮಯದಲ್ಲಿ, ಹೊಸ ಕಾನೂನಿನ ನಿಬಂಧನೆಗಳನ್ನು ಸಾಧ್ಯವಾದಷ್ಟು ಬೇಗ ಜಾರಿಗೆ ತರಬೇಕು ಎಂದು ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡರು. ಎಲ್ಲಾ ಪಕ್ಷಗಳ ನಾಯಕರು ಈ ವಿಚಾರವನ್ನು ಬಲವಾಗಿ ಬೆಂಬಲಿಸಿದರು. ಕಳೆದ ಕೆಲವು ವರ್ಷಗಳಿಂದ, ನಾವು ಈ ವಿಷಯದ ಬಗ್ಗೆ ತಜ್ಞರೊಂದಿಗೆ ಚರ್ಚಿಸಿದ್ದೇವೆ.
ಸರ್ಕಾರವು 2029 ರ ಲೋಕಸಭಾ ಚುನಾವಣೆಗಳನ್ನು ಮಹಿಳಾ ಮೀಸಲಾತಿ ಗುರಿಯಾಗಿಟ್ಟುಕೊಂಡು ನಡೆಸಬೇಕೆಂದು ತೀರ್ಮಾನಿಸಿದೆ. ಇದು ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಪ್ರಾತಿನಿಧ್ಯದ ಆಕಾಂಕ್ಷೆಯನ್ನು ಈಡೇರಿಸುತ್ತದೆ. ಈ ಅವಕಾಶವು ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಯನ್ನು ಮೀರಿಸುತ್ತದೆ ಎಂದರು.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಕೊನೆಗೂ ಸಿಹಿ ಸಿಕ್ಕಿದೆ. ಶ್ರೀಲಂಕಾದ ಸ್ಟಾರ್ ವೇಗಿ ಮಥೀಶ ಪತಿರಾಣ ಅವರಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಅಂತಿಮವಾಗಿ 'ನಿರಕ್ಷೇಪಣಾ ಪತ್ರ' (NOC) ನೀಡಿದ್ದು, ಅವರು ಶೀಘ್ರದಲ್ಲೇ ಕೆಕೆಆರ್ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಟಿ20 ವಿಶ್ವಕಪ್ ವೇಳೆ ಹ್ಯಾಮ್ಸ್ಟ್ರಿಂಗ್ ಗಾಯಕ್ಕೆ ತುತ್ತಾಗಿದ್ದ ಮಥೀಶ ಪತಿರಾಣ, ಐಪಿಎಲ್ನ ಆರಂಭಿಕ ಪಂದ್ಯಗಳಿಂದ ವಂಚಿತರಾಗಿದ್ದರು. ಶ್ರೀಲಂಕಾದಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದ ಅವರು ಈಗ ಸಂಪೂರ್ಣ ಫಿಟ್ ಆಗಿದ್ದು, ಮಂಡಳಿಯಿಂದ ಐಪಿಎಲ್ ಆಡಲು ಹಸಿರು ನಿಶಾನೆ ಪಡೆದಿದ್ದಾರೆ.
ಅದರಂತೆ ಇಂದು (ಏಪ್ರಿಲ್ 12) ಅವರು ಶ್ರೀಲಂಕಾದಿಂದ ನೇರವಾಗಿ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ ಕೆಕೆಆರ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇತ್ತ ಮಥೀಶ ಪತಿರಾಣ ಅವರ ಆಗಮನವು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬಲವನ್ನು ಹೆಚ್ಚಿಸಲಿದೆ. ಏಕೆಂದರೆ ಈ ಬಾರಿಯ ಟೂರ್ನಿಯಲ್ಲಿ ಕೆಕೆಆರ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ಬೌಲಿಂಗ್ ವೈಫಲ್ಯದಿಂದಾಗಿ ಸತತ ಮೂರು ಪಂದ್ಯಗಳನ್ನು ಸೋತಿದೆ.
ಇದೀಗ ಡೆತ್ ಓವರ್ ಸ್ಪೆಷಲಿಸ್ಟ್ ಆಗಿರುವ ಮಥೀಶ ಪತಿರಾಣ ಅವರ ಆಗಮನವು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲಿಂಗ್ ಬಲವನ್ನು ಹೆಚ್ಚಿಸಲಿದೆ. ಇತ್ತ ಏಪ್ರಿಲ್ 14 ರಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧಕ್ಕಾಗಿ ಕೆಕೆಆರ್ ಸಿದ್ಧತೆಗಳನ್ನು ಆರಂಭಿಸಿದ್ದು, ಈ ಪಂದ್ಯದ ಮೂಲಕ ಮಥೀಶ ಪತಿರಾಣ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಪಾದಾರ್ಪಣೆ ಮಾಡಲಿದ್ದಾರಾ ಕಾದು ನೋಡಬೇಕಿದೆ.
ಬೆಂಗಳೂರು, ಏಪ್ರಿಲ್ 12: ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಕ್ಷಣ ಸ್ಪಂದಿಸಿ ಮಾನವೀಯ ನೆರವು ನೀಡಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಹಾಸನಕ್ಕೆ ತೆರಳುತ್ತಿದ್ದ ಕುಮಾರಸ್ವಾಮಿ, ಬೆಂಗಳೂರು-ಹಾಸನ ಹೆದ್ದಾರಿಯಲ್ಲಿ ಆಟೋ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತವನ್ನು ಗಮನಿಸಿದ್ದಾರೆ. ಈ ಅಪಘಾತದಲ್ಲಿ ವಿಕ್ರಂ ಎಂಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಸುಮಾರು ಅರ್ಧ ಗಂಟೆಯಿಂದ ರಸ್ತೆಯಲ್ಲೇ ಬಿದ್ದಿದ್ದರು. ಸಚಿವರು ಕೂಡಲೇ ಕಾರ್ಯಪ್ರವೃತ್ತರಾಗಿ, ಗಾಯಾಳುವನ್ನು ಪೊಲೀಸ್ ವಾಹನದಲ್ಲಿ ಆದಿಚುಂಚನಗಿರಿ ಆಸ್ಪತ್ರೆಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ, ಆಸ್ಪತ್ರೆಯ ವೈದ್ಯರಿಗೆ ದೂರವಾಣಿ ಕರೆ ಮಾಡಿ, ವಿಕ್ರಂಗೆ ತಕ್ಷಣವೇ ಸೂಕ್ತ ಮತ್ತು ತುರ್ತು ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಕೇಂದ್ರ ಸಚಿವರ ಈ ಸಮಯೋಚಿತ ಮತ್ತು ಮಾನವೀಯ ಕಾರ್ಯವು ಸ್ಥಳೀಯರಿಂದ ಮತ್ತು ಸಾರ್ವಜನಿಕರಿಂದ ಪ್ರಶಂಸೆಗೊಳಗಾಗಿದೆ.
ನವದೆಹಲಿ, ಏಪ್ರಿಲ್ 12: ಕೆಲ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ರಫ್ತು ಸುಂಕವನ್ನು (Exports Duty) ಗಣನೀಯವಾಗಿ ಹೆಚ್ಚಿಸಿದೆ. ಆಂತರಿಕವಾಗಿ ಈ ಇಂಧನ ಲಭ್ಯತೆ ಕಡಿಮೆ ಆಗದಂತೆ ನೋಡಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಡೀಸಲ್ ಮತ್ತು ಜೆಟ್ ಇಂಧನದ ಮೇಲಿನ ಸುಂಕ ಹೆಚ್ಚಿದೆ. ಅಚ್ಚರಿ ಎಂಬಂತೆ ಪೆಟ್ರೋಲ್ ಮೇಲೆ ಯಾವುದೇ ರಫ್ತು ಸುಂಕ ಹಾಕಲಾಗಿಲ್ಲ.
ಡೀಸಲ್ ಮೇಲಿನ ರಫ್ತು ಸುಂಕವನ್ನು ಲೀಟರ್ಗೆ 34 ರೂಗಳಷ್ಟು ಏರಿಸಲಾಗಿದೆ. 21.5 ರೂ ಇದ್ದ ಇದರ ರಫ್ತು ಸುಂಕವನ್ನು 55.5 ರೂಗೆ ಹೆಚ್ಚಿಸಲಾಗಿದೆ. ಹಾಗೆಯೇ, ಎಟಿಎಫ್ (ಏವಿಯೇಶನ್ ಟರ್ಬೈನ್ ಫುಯೆಲ್) ಅಥವಾ ಜೆಟ್ ಇಂಧನದ ಮೇಲಿನ ರಫ್ತು ಸುಂಕವನ್ನು 12.5 ರೂಗಳಷ್ಟು ಹೆಚ್ಚಿಸಲಾಗಿದೆ. 29.5 ರೂ ಇದ್ದ ಇದರ ಬೆಲೆಯನ್ನು 42 ರೂಗೆ ಏರಿಸಲಾಗಿದೆ.
ಪೆಟ್ರೋಲ್ ಮೇಲಿನ ರಫ್ತು ಸುಂಕವನ್ನು ಸರ್ಕಾರ ಹೆಚ್ಚಿಸಿಲ್ಲ. ಸದ್ಯ ಈ ವ್ಯಾಪಕ ಬಳಕೆಯ ಇಂಧನಕ್ಕೆ ಸರ್ಕಾರ ಶೂನ್ಯ ಸುಂಕ ಹಾಕುತ್ತಿದೆ. ಈ ಕ್ರಮ ಮುಂದುವರಿಯುತ್ತದೆ.
ಇದೇ ವೇಳೆ, ಆಂತರಿಕವಾಗಿ ಕೆಲ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಹಾಗು ಸೆಸ್ ಅನ್ನು ಪರಿಷ್ಕರಿಸಲಾಗಿದೆ. ಹೈಸ್ಪೀಡ್ ಡೀಸಲ್ ಅಥವಾ ಪ್ರೀಮಿಯಮ್ ಡೀಸಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಸ್ಎಇಡಿ) ಲೀಟರ್ಗೆ 24 ರೂಗೆ ಏರಿಸಲಾಗಿದೆ. ರಸ್ತೆ ಮತ್ತು ಮೂಲಸೌಕರ್ಯ ಸೆಸ್ ದರವನ್ನು 36 ರೂಗೆ ಹೆಚ್ಚಳಗೊಳಿಸಲಾಗಿದೆ.
ಅತಿಹೆಚ್ಚು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನ ಪಡೆಯುತ್ತದೆ. ಕಚ್ಚಾ ತೈಲವನ್ನು ಆಮದು ಮಾಡಿಕೊಂಡು, ಅದನ್ನು ಸಂಸ್ಕರಿಸಿ, ಪೆಟ್ರೋಲ್, ಡೀಸಲ್, ಜೆಟ್ ಫುಯಲ್ ಇತ್ಯಾದಿ ವಿವಿಧ ಪೆಟ್ರೋಲಿಯಂ ಉತ್ಪನ್ನಗಳಾಗಿ ತಯಾರಿಸುತ್ತದೆ. ಆಂತರಿಕ ಬಳಕೆ ಬೇಕಾಗುವಷ್ಟು ಇಟ್ಟುಕೊಂಡು, ಉಳಿದವನ್ನು ರಫ್ತು ಮಾಡಲು ಅವಕಾಶ ಕೊಡಲಾಗುತ್ತದೆ.
ವಾಷಿಂಗ್ಟನ್, ಏಪ್ರಿಲ್ 12: ಅಮೆರಿಕದಲ್ಲಿ ಸ್ವಾಮಿ ವಿವೇಕಾನಂದರ ಮೊದಲ ಪೂರ್ಣ ಪ್ರತಿಮೆಯನ್ನು ಸಿಯಾಟಲ್‌ನಲ್ಲಿ ಸ್ಥಾಪಿಸಲಾಗಿದೆ. ಸಿಯಾಟಲ್‌ನ ಡೌನ್‌ಟೌನ್‌ನಲ್ಲಿರುವ ಜನನಿಬಿಡ ವೆಸ್ಟ್‌ಲೇಕ್ ಚೌಕದಲ್ಲಿ ಈ ಕಂಚಿನ ಪ್ರತಿಮೆ ನಿರ್ಮಿಸಲಾಗಿದೆ.ಭಾರತೀಯ ಕಲಾವಿದ ನರೇಶ್ ಕುಮಾರ್ ಕುಮಾವತ್ ರಚಿಸಿದ ಈ ಪ್ರತಿಮೆಯನ್ನು ಶನಿವಾರ ಸಿಯಾಟಲ್ ಮೇಯರ್ ಕೇಟೀ ವಿಲ್ಸನ್ ಮತ್ತು ಸಿಯಾಟಲ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಪ್ರಕಾಶ್ ಗುಪ್ತಾ ಜಂಟಿಯಾಗಿ ಅನಾವರಣಗೊಳಿಸಿದರು. 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಐತಿಹಾಸಿಕ ಭಾಷಣ ಮಾಡಿದರು, ಅದರ ಮೂಲಕ ಅವರು ಜಾಗತಿಕ ಪ್ರೇಕ್ಷಕರಿಗೆ ಹಿಂದೂ ತತ್ವಶಾಸ್ತ್ರವನ್ನು ಪರಿಚಯಿಸಿದರು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ರಾಜನಾದ ಸೂರ್ಯನು ಏಪ್ರಿಲ್ 14 ರಂದು ತನ್ನ ಉಚ್ಛ ರಾಶಿಯಾದ ಮೇಷ ರಾಶಿಗೆ ಸಂಚರಿಸಲಿದ್ದಾನೆ. ಸೂರ್ಯನ ಈ ಸಂಚಾರವು ಕೆಲವು ರಾಶಿಯವರಿಗೆ ಅದೃಷ್ಟ ತಂದರೆ, ಇನ್ನು ಕೆಲವು ರಾಶಿಯವರಿಗೆ ಸವಾಲುಗಳನ್ನು ತರಲಿದೆ. ವಿಶೇಷವಾಗಿ ವಾಹನ ಚಾಲನೆ ಮತ್ತು ಪ್ರಯಾಣದ ವಿಷಯದಲ್ಲಿ ಕೆಲವು ರಾಶಿಯವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜ್ಯೋತಿಷ್ಯ ತಜ್ಞರು ಎಚ್ಚರಿಸಿದ್ದಾರೆ.
ಆ ರಾಶಿಗಳು ಯಾವುವು ಮತ್ತು ಯಾವ ರೀತಿಯ ಜಾಗ್ರತೆ ವಹಿಸಬೇಕು ಎಂಬ ವಿವರ ಇಲ್ಲಿದೆ:
ಮೇಷ ರಾಶಿ (Aries): ಸಂಘರ್ಷಗಳಿಂದ ದೂರವಿರಿ
ಸೂರ್ಯನು ಮೇಷ ರಾಶಿಯಲ್ಲೇ ಸಂಚರಿಸುವುದರಿಂದ ಈ ರಾಶಿಯವರ ಮೇಲೆ ಪ್ರಭಾವ ಹೆಚ್ಚಿರುತ್ತದೆ. ಈ ಅವಧಿಯಲ್ಲಿ ಅನಗತ್ಯ ಜಗಳ ಮತ್ತು ವಾದವಿವಾದಗಳು ಉಂಟಾಗುವ ಸಾಧ್ಯತೆ ಇದೆ. ವಿಶೇಷವಾಗಿ ದಾಂಪತ್ಯ ಜೀವನದಲ್ಲಿ ಸಂಗಾತಿಯೊಂದಿಗೆ ಸಮಾಧಾನದಿಂದ ವರ್ತಿಸಿ. ಹೊಸ ವ್ಯವಹಾರ ಅಥವಾ ಹೂಡಿಕೆಗಳನ್ನು ಮಾಡಲು ಇದು ಸೂಕ್ತ ಸಮಯವಲ್ಲ. ಯಾವುದೇ ದೊಡ್ಡ ನಿರ್ಧಾರಗಳನ್ನು ಸ್ವಲ್ಪ ಕಾಲ ಮುಂದೂಡುವುದು ಉತ್ತಮ.
ಕನ್ಯಾ ರಾಶಿ (Virgo): ಪ್ರಯಾಣದಲ್ಲಿ ಎಚ್ಚರ:
ಕನ್ಯಾ ರಾಶಿಯವರಿಗೆ ಈ ಸೂರ್ಯ ಸಂಚಾರವು ಮಿಶ್ರ ಫಲ ನೀಡಿದರೂ, ಸುರಕ್ಷತೆಯ ದೃಷ್ಟಿಯಿಂದ ಕೆಲವು ಕಠಿಣ ಸವಾಲುಗಳಿವೆ. ಅಪಘಾತಗಳ ಭಯವಿರುವುದರಿಂದ ದೂರದ ಪ್ರಯಾಣವನ್ನು ಸಾಧ್ಯವಾದಷ್ಟು ಮುಂದೂಡುವುದು ಒಳ್ಳೆಯದು. ವಾಹನ ಚಾಲನೆ ಮಾಡುವಾಗ ಅತೀವ ಜಾಗರೂಕತೆ ಇರಲಿ.ಅನಿವಾರ್ಯ ಪ್ರಯಾಣವಿದ್ದರೆ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮತ್ತು ವಿದ್ವಾಂಸರ ಸಲಹೆಯಂತೆ ಮುಂಜಾಗ್ರತೆ ವಹಿಸಿ.
ಮೀನ ರಾಶಿ (Pisces): ಆರೋಗ್ಯ ಮತ್ತು ಹಣಕಾಸಿನ ಬಗ್ಗೆ ಗಮನಹರಿಸಿ:
ಸೂರ್ಯನ ಬದಲಾವಣೆಯು ಮೀನ ರಾಶಿಯವರ ದೈನಂದಿನ ಜೀವನದ ಮೇಲೆ ಪ್ರಭಾವ ಬೀರಲಿದೆ. ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಕಾಡಬಹುದು. ಅದರೊಂದಿಗೆ ಆರ್ಥಿಕ ಏರಿಳಿತಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಮಾನಸಿಕ ಶಾಂತಿ ಕಾಪಾಡಿಕೊಳ್ಳಲು ಯೋಗ ಮತ್ತು ಧ್ಯಾನದ ಮೊರೆ ಹೋಗುವುದು ಉತ್ತಮ. ಆರ್ಥಿಕ ವ್ಯವಹಾರಗಳಲ್ಲಿ ಜಾಗರೂಕರಾಗಿರಿ.
ಗಮನಿಸಿ: ಗ್ರಹಗತಿಗಳ ಫಲವು ವ್ಯಕ್ತಿಯ ಜನ್ಮ ಕುಂಡಲಿ ಮತ್ತು ದೆಸೆಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರದ ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಂಗಳೂರು, ಏಪ್ರಿಲ್ 12: ಮೂಡುಶೆಡ್ಡೆಯ ಎದುರುಪದವು ನಿವಾಸಿ ಮಹಮ್ಮದ್ ಆಶಿಕ್(22) ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರೀತಿಸಿದ ಯುವತಿಯ ಕಿರುಕುಳವೇ ಸಾವಿಗೆ ಕಾರಣ ಎನ್ನಲಾಗಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಯುವತಿ ಮತ್ತು ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ ಮಂಗಳೂರಿನ (Mangaluru) ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 21ರಂದು ಈದ್ ಹಬ್ಬದ ದಿನವೇ ಆಶಿಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಯಾವುದೋ ಕಾರಣಕ್ಕೆ ಮನನೊಂದು ಆಶಿಕ್ ಈ ನಿರ್ಧಾರ ಕೈಗೊಂಡಿರಬಹುದು ಎಂದು ಭಾವಿಸಲಾಗಿತ್ತಾದರೂ, ಮೊಬೈಲ್ ಪರಿಶೀಲನೆ ವೇಳೆ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ.
ಕಾಲೇಜು ಸಹಪಾಠಿಯಾಗಿದ್ದ ಉಳ್ಳಾಲ ಮೂಲದ ಯುವತಿಯನ್ನು ಆಶಿಕ್ ಪ್ರೀತಿಸುತ್ತಿದ್ದರು. ಸಾಲದ್ದಕ್ಕೆ ಇವರಿಬ್ಬರು ಕ್ಲೋಸ್ ಆಗಿರುವ ವಿಚಾರ ಬಗ್ಗೆ ಎರಡೂ ಕುಟುಂಬಕ್ಕೆ ಗೊತ್ತಿತ್ತು. ಈ ನಡುವೆ ಕೆಲ ಸಮಯದಿಂದ ಆಶಿಕ್ನಿಂದ ಯುವತಿ ದೂರವಾಗತೊಡಗಿದ್ದಳು. ಹೀಗಾಗಿ ಸಾವಿಗೂ ಮುನ್ನ ನೀನು ನನಗೆ ಮೋಸ ಮಾಡುತ್ತಿದ್ದೀಯಾ ಎಂಬ ಬಗ್ಗೆ ಆಶಿಕ್ ಆಕೆಯನ್ನು ಕೇಳಿದ್ದು, ಈ ವೇಖೆ ನೀನು ಎಲ್ಲಿಯಾದರೂ ಸತ್ತು ಹೋಗು. ನಾನು ಮತ್ತು ನನ್ನ ಗೆಳೆಯರು ನಿನ್ನ ಮೃತದೇಹದ ಕೂದಲನ್ನು ತೆಗೆಯಲು ಬರುತ್ತೇವೆ ಎಂದು ಯುವತಿ ಹೇಳಿದ್ದಳು ಎಂಬ ಆರೋಪವೀಗ ಕೇಳಿಬಂದಿದೆ. ಈ ಬಗ್ಗೆ ಸಾವಿಗೂ ಮುನ್ನ ನಡೆದಿರುವ ಮಾತುಕತೆಗಳು ವಾಟ್ಸ್ಯಾಪ್ ಚಾಟ್ನನಲ್ಲಿ ಬಹಿರಂಗವಾಗಿದೆ ಎನ್ನಲಾಗಿದ್ದು, ಸಾವಿಗೂ ಮುನ್ನ ವಿಡಿಯೋ ಕಾಲ್ನಲ್ಲಿ ಇಬ್ಬರು ಮಾತನಾಡಿದ್ದರು ಎಂಬುದೂ ಗೊತ್ತಾಗಿದೆ.
ಆಶಿಕ್ ಜೊತೆ ಮಾತನಾಡುವ ವೇಳೆ ಅವಾಚ್ಯ ಶಬ್ದಗಳಿಂದ ಯುವತಿ ನಿಂದಿಸಿದ್ದು, ಇದರಿಂದ ಆಶಿಕ್ ಮಾನಸಿಕವಾಗಿ ನೊಂದು ಅದೇ ದಿನ ರಾತ್ರಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವತಿ ಪ್ರೀತಿಯ ನಾಟಕವಾಡಿ ಹಲವಾರು ಉಡುಗೊರೆ ಪಡೆದು ಖರ್ಚು ವೆಚ್ಚ ಮಾಡಿಸಿದ್ದಲ್ಲದೆ, ಮಾನಸಿಕವಾಗಿಯೂ ಆಶಿಕ್ಗೆ ಹಿಂಸೆ ನೀಡಿದ ಆರೋಪವೀಗ ಕೇಳಿಬಂದಿದೆ. ಹೀಗಾಗಿ ಯುವತಿ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುವಕನ ತಂದೆ ನೀಡಿದ್ದ ದೂರಿನ ಅನ್ವಯ ಕಾವೂರು ಠಾಣೆ ಪೊಲೀಸರು BNS 108, 352,351(3),3(5) ಸೆಕ್ಷನ್ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಮೇರುನಟ ಡಾ. ರಾಜ್ಕುಮಾರ್ ಅವರ ಪುಣ್ಯಸ್ಮರಣೆ (Death Anniversary) ಪ್ರಯುಕ್ತ ಇಂದು (ಏಪ್ರಿಲ್ 12) ಕುಟುಂಬದವರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳು ಕೂಡ ಅಪಾರ ಸಂಖ್ಯೆಯಲ್ಲಿ ಬಂದು ಅಣ್ಣಾವ್ರಿಗೆ ನಮಿಸಿದ್ದಾರೆ. ರಾಜ್ಕುಮಾರ್ (Dr Rajkumar) ನಿಧನರಾಗಿ 20 ವರ್ಷಗಳು ಕಳೆದಿವೆ. ಆ ಬಗ್ಗೆ ರಾಘವೇಂದ್ರ ರಾಜ್ಕುಮಾರ್ ಅವರು ಮಾತನಾಡಿದ್ದಾರೆ. ‘20 ವರ್ಷ ಆಯ್ತು ಅಂತ ನಂಬೋಕೆ ಆಗುತ್ತಿಲ್ಲ. ಅವರು ನಮ್ಮ ಜೊತೆ ಇನ್ನೂ ಇದ್ದಾರೆ ಅಂತ ಅಂದುಕೊಂಡಿದ್ದೇವೆ. ಅವರು ಸಂಪಾದನೆ ಮಾಡಿದ್ದು ಅಭಿಮಾನಿಗಳನ್ನು ಮಾತ್ರ. ಇಷ್ಟು ವರ್ಷ ಆದರೂ ಜನರು ಬಂದು ನಮಸ್ಕಾರ ಮಾಡುತ್ತಿದ್ದಾರೆ. ಅವರ ಸಿನಿಮಾಗಳಿಗೆ ಸಾವಿಲ್ಲ. ಅವೆಲ್ಲ ಲೈಬ್ರರಿ ಇದ್ದಂತೆ. ಯಾವಾಗಲೂ ಜನರು ನೋಡುತ್ತಾ ಇರುತ್ತಾರೆ. ಎಷ್ಟು ವರ್ಷ ಕಳೆದರೂ ಜನರು ಹೀಗೆ ಬರುತ್ತಾ ಇರುತ್ತಾರೆ. ಇದು ಆ ರೀತಿಯ ಸ್ಥಳ ಆಗಿದೆ’ ಎಂದು ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಹೇಳಿದ್ದಾರೆ.
ಚೆನ್ನೈ, ಏಪ್ರಿಲ್ 12: ತಮಿಳುನಾಡಿನ ಅಂಬೂರಿನ ಕುಡಪ್ಪನಮೂಡಿನಲ್ಲಿರುವ ಕುಳುವಲ್ವತ್ತಂ ಶ್ರೀ ಭಗತಿ ದೇವಸ್ಥಾನ(Temple)ದಲ್ಲಿ ಶನಿವಾರ ಬೆಳಗ್ಗೆ ಒಂದು ವಿಚಿತ್ರ ದೃಶ್ಯ ಕಂಡುಬಂದಿದೆ. ದೇವಸ್ಥಾನದ ಕಚೇರಿಗೆ ಕನ್ನ ಹಾಕಿ ಹಣ ಕದ್ದ ಕಳ್ಳನೊಬ್ಬ, ಅಲ್ಲಿಂದ ಪರಾರಿಯಾಗುವ ಬದಲು ಸುಸ್ತಾಗಿ ಅಲ್ಲೇ ಗಾಢ ನಿದ್ರೆಗೆ ಜಾರಿದ್ದ. ದಿನದಂತೆ ಶನಿವಾರ ಬೆಳಗ್ಗೆ 5.30ಕ್ಕೆ ದೇವಸ್ಥಾನದ ಸಮಿತಿ ಸದಸ್ಯರು ಕಚೇರಿಗೆ ಬಂದಾಗ, ಬಾಗಿಲು ಮುರಿದಿರುವುದನ್ನು ಕಂಡು ಆತಂಕಕ್ಕೊಳಗಾದರು. ಯಾವುದೋ ದೊಡ್ಡ ಕಳ್ಳತನವಾಗಿದೆ ಎಂದು ಒಳಗೆ ಹೋಗಿ ನೋಡಿದವರಿಗೆ ಆಶ್ಚರ್ಯ ಕಾದಿತ್ತು. ಕಚೇರಿಯ ಹಣದ ಪೆಟ್ಟಿಗೆಯಿಂದ ನಗದು ಮಾಯವಾಗಿತ್ತು, ಆದರೆ ಕಳ್ಳ ಮಾತ್ರ ಪಕ್ಕದಲ್ಲೇ ಅತ್ಯಂತ ಆರಾಮವಾಗಿ ಗೊರಕೆ ಹೊಡೆಯುತ್ತಾ ಮಲಗಿದ್ದ.
ಪೊಲೀಸರ ತನಿಖೆಯ ಪ್ರಕಾರ, ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಸೆಂಥಿಲ್ (40) ಎಂದು ಗುರುತಿಸಲಾಗಿದೆ. ಈತ ಹಳೇ ಕಳ್ಳನಾಗಿದ್ದು, ಈಗಾಗಲೇ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ನಡೆದಿದ್ದು ಹೇಗೆ?
ಶುಕ್ರವಾರ ತಡರಾತ್ರಿ ದೇವಸ್ಥಾನದ ಕಚೇರಿಯ ಬಾಗಿಲು ಒಡೆದು ಒಳನುಗ್ಗಿದ ಸೆಂಥಿಲ್, ಅಲ್ಲಿದ್ದ 8,500 ರೂಪಾಯಿ ನಗದನ್ನು ಕದ್ದಿದ್ದಾನೆ. ಕಳ್ಳತನದ ನಂತರ ಅಲ್ಲಿಂದ ಓಡಿಹೋಗುವ ಬದಲು, ಬಹುಶಃ ಹಗಲಿಡೀ ಅಲೆದಾಡಿ ಸುಸ್ತಾಗಿದ್ದ ಸೆಂಥಿಲ್‌ಗೆ ಆ ತಂಪಾದ ಕಚೇರಿಯ ಒಳಗೆ ಕಣ್ಣು ಮುಚ್ಚಿದ ತಕ್ಷಣ ನಿದ್ರೆ ಹತ್ತಿದೆ.
ಬೆಳಗ್ಗೆ ದೇವಸ್ಥಾನದ ಸಿಬ್ಬಂದಿ ಬರುವವರೆಗೂ ಈತ ತಾನು ಕದ್ದ ಹಣದ ಮೇಲೆ ಕೈಯಿಟ್ಟುಕೊಂಡು ಗಾಢ ನಿದ್ರೆಯಲ್ಲೇ ಇದ್ದ. ದೇವಸ್ಥಾನದ ಸಿಬ್ಬಂದಿ ತಕ್ಷಣ ವೆಲ್ಲರಡ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ನಿದ್ರೆಯಲ್ಲಿದ್ದ ಸೆಂಥಿಲ್‌ನನ್ನು ಎಬ್ಬಿಸಿ ಕೈಕೋಳ ತೊಡಿಸಿದ್ದಾರೆ. ಕದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
“ಮಾಡಿದ್ದುಣ್ಣೋ ಮಹಾರಾಯ” ಎನ್ನುವಂತೆ, ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಸೆಂಥಿಲ್ ತಾನು ಎಸ್ಕೇಪ್ ಆಗುವ ಪ್ಲಾನ್ ಮರೆತು ನಿದ್ರೆಗೆ ಜಾರಿದ್ದು ಈಗ ಅಂಬೂರಿನಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಪೊಲೀಸರ ಪಾಲಿಗೆ ಇದು ಅತ್ಯಂತ ಸುಲಭವಾದ ಇನ್ವೆಸ್ಟಿಗೇಷನ್ ಎನಿಸಿಕೊಂಡಿದೆ.