ಸತ್ತವರ ಹೆಸರಿನಲ್ಲಿ ಕೋಟ್ಯಂತರ ರೂ. ಅಕ್ರಮ! ತಾಲೂಕು ಪಂಚಾಯಿತಿಯ ಸಿಬ್ಬಂದಿ ಅಮಾನತು

ಸತ್ತವರ ಹೆಸರಿನಲ್ಲಿ ಕೋಟ್ಯಂತರ ರೂ. ಅಕ್ರಮ! ತಾಲೂಕು ಪಂಚಾಯಿತಿಯ ಸಿಬ್ಬಂದಿ ಅಮಾನತು

ತುಮಕೂರು, ಏಪ್ರಿಲ್ 11: ನಿವೃತ್ತಿ ಹಾಗೂ ಮರಣ ಹೊಂದಿದ ಸರ್ಕಾರಿ ನೌಕರರ ಹೆಸರನ್ನು ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ಅಕ್ರಮ ನಡೆಸಿದ ಪ್ರಕರಣ ತುಮಕೂರು (Tumkur) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಧುಗಿರಿ ತಾಲ್ಲೂಕು ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಸೌಮ್ಯ ಅವರನ್ನು ಅಮಾನತು ಮಾಡಲಾಗಿದೆ.

ಆಡಿಟ್ ವೇಳೆ ಸತ್ಯ ಬಯಲು

ಪಂಚಾಯಿತಿ ವ್ಯಾಪ್ತಿಯ ನಿವೃತ್ತಿ ಮತ್ತು ಮರಣ ಹೊಂದಿದ ನೌಕರರ ಗಳಿಕೆ ರಜೆ ನಗದೀಕರಣ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನ ಮೊದಲಿಗೆ ಮೂಡಿತ್ತು. ಬಳಿಕ ಬೆಂಗಳೂರಿನ ಕೇಂದ್ರ ಕಚೇರಿಯಿಂದ ನಡೆದ ಆಡಿಟ್ ವೇಳೆ ದಾಖಲೆಗಳಲ್ಲಿ ವ್ಯತ್ಯಾಸ ಪತ್ತೆಯಾಯಿತು. ಈ ಮಾಹಿತಿ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಅಶ್ವಿಜಾ ಅವರಿಗೆ ತಲುಪಿದ ನಂತರ ಸಮಗ್ರ ಪರಿಶೀಲನೆ ಕೈಗೊಳ್ಳಲಾಯಿತು.

ತನಿಖೆಯಲ್ಲಿ ನೌಕರರ ರೆಸಿಪಿಯಂಟ್ ಐಡಿ ಮತ್ತು ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆದಾರರ ಹೆಸರಿನಲ್ಲಿ ವ್ಯತ್ಯಾಸ ಕಂಡುಬಂದಿದೆ. ಒಟ್ಟು 21 ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ, 18 ನಿವೃತ್ತ ಹಾಗೂ 3 ಮರಣ ಹೊಂದಿದ ನೌಕರರ ಹೆಸರನ್ನು ಬಳಸಿಕೊಂಡು ಅಕ್ರಮ ನಡೆದಿದೆ ಎಂಬುದು ಬಹಿರಂಗವಾಗಿದೆ.

ಇದನ್ನೂ ಓದಿ ಕೆಜಿಗಟ್ಟಲೆ ಚಿನ್ನ, 14 ಕೋಟಿ ರೂ. ಅಕ್ರಮ ಆಸ್ತಿ: ದಿನಗೂಲಿ ನೌಕರ ಕೋಟಿ ಕುಬೇರನಾಗಿದ್ದೇ ರೋಚಕ!

5 ವರ್ಷಗಳಿಂದ ಅವ್ಯವಹಾರ

ಕಳೆದ ಐದು ವರ್ಷಗಳಲ್ಲಿ 29 ಬ್ಯಾಂಕ್ ಖಾತೆಗಳ ಮೂಲಕ 118 ವ್ಯವಹಾರಗಳ ಮೂಲಕ ಸುಮಾರು 4.24 ಕೋಟಿ ರೂಪಾಯಿ ಸೌಮ್ಯ ಮತ್ತು ಆಕೆಯ ಕುಟುಂಬದ ಐದು ಸದಸ್ಯರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಣವನ್ನು ಹಂತ ಹಂತವಾಗಿ ವರ್ಗಾಯಿಸಿ ಅಂತಿಮವಾಗಿ ಕುಟುಂಬದ ಖಾತೆಗಳಿಗೆ ಸೇರಿಸಲಾಗಿದೆ.

ಈ ಪ್ರಕರಣದಲ್ಲಿ ಇತರ ಅಧಿಕಾರಿಗಳ ಭಾಗವಿರುವ ಸಾಧ್ಯತೆಯೂ ಇದ್ದು, ಅದರ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಸದ್ಯ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Wedding Invitations: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಲೇಬಾರದು ಯಾಕೆ ಗೊತ್ತಾ?

ಹಿಂದೂ ಸಂಪ್ರದಾಯದಲ್ಲಿ ಮದುವೆಯ ಆಮಂತ್ರಣ ಪತ್ರಿಕೆಗೆ ವಿಶೇಷ ಮಹತ್ವವಿದೆ. ಅದು ಕೇವಲ ಆಮಂತ್ರಣ ಪತ್ರವಲ್ಲ, ಬದಲಾಗಿ ಹೊಸ ಜೀವನದ ಆರಂಭವನ್ನು ಘೋಷಿಸುವ ಮೊದಲ ಅಧಿಕೃತ ಸಂದೇಶವಾಗಿದೆ. ಇತ್ತೀಚಿನ ದಿನಗಳಲ್ಲಿ ಮದುವೆಯ ಆಮಂತ್ರಣ ಪತ್ರಿಕೆಗಳು ಕೇವಲ ಮಾಹಿತಿಯ ಮೂಲವಾಗಿ ಉಳಿದಿಲ್ಲ, ಅವು ಒಂದು ಶೈಲಿಯ ಸಂಕೇತವಾಗಿವೆ. ಡಿಜಿಟಲ್ ಯುಗದಲ್ಲಿ ಅನೇಕರು ತಮ್ಮ ಮದುವೆಯ ಕಾರ್ಡ್‌ಗಳಲ್ಲಿ ವಧು-ವರರ ಸುಂದರ ಫೋಟೋಗಳನ್ನು ಮುದ್ರಿಸುವುದು ಈಗಿನ ಟ್ರೆಂಡ್. ಆದರೆ, ಈ ರೀತಿ ಮಾಡುವುದು ವಾಸ್ತು ಶಾಸ್ತ್ರ ಮತ್ತು ಹಿರಿಯರ ನಂಬಿಕೆಯ ಪ್ರಕಾರ ಎಷ್ಟು ಸರಿ? ಆಮಂತ್ರಣ ಪತ್ರಿಕೆಯಲ್ಲಿ ಫೋಟೋ ಬಳಸಬಾರದು ಎಂದು ಯಾಕೆ ಹೇಳಲಾಗುತ್ತದೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ.

ದೃಷ್ಟಿ ದೋಷದ ಆತಂಕ (Evil Eye):

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, “ಕಣ್ಣಿನ ದೃಷ್ಟಿ” ಅಥವಾ ದೃಷ್ಟಿ ದೋಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮದುವೆಯ ಕಾರ್ಡ್‌ಗಳನ್ನು ನೂರಾರು ಜನರಿಗೆ ಹಂಚಲಾಗುತ್ತದೆ. ಈ ಕಾರ್ಡ್‌ಗಳು ಎಲ್ಲರ ಕೈಗೂ ಹೋಗುತ್ತವೆ. ವಧು-ವರರ ಫೋಟೋವನ್ನು ಎಲ್ಲರೂ ಒಂದೇ ರೀತಿಯ ಪ್ರೀತಿಯಿಂದ ನೋಡುವುದಿಲ್ಲ. ಕೆಲವರ ನಕಾರಾತ್ಮಕ ಆಲೋಚನೆಗಳು ಅಥವಾ ಅಸೂಯೆಯ ದೃಷ್ಟಿ ಹೊಸ ಜೋಡಿಯ ಮೇಲೆ ಬೀಳಬಹುದು, ಇದು ಮದುವೆಯ ಕಾರ್ಯಕ್ರಮ ಅಥವಾ ಅವರ ಭವಿಷ್ಯದ ಜೀವನದ ಮೇಲೆ ಪ್ರಭಾವ ಬೀರಬಹುದು ಎಂಬ ನಂಬಿಕೆ ಇದೆ.

ಕಾರ್ಡ್‌ಗಳ ವಿಲೇವಾರಿ:

ಮದುವೆ ಮುಗಿದ ನಂತರ ಆಮಂತ್ರಣ ಪತ್ರಿಕೆಗಳನ್ನು ಯಾರೂ ಜೋಪಾನವಾಗಿ ಇಟ್ಟುಕೊಳ್ಳುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಆ ಕಾರ್ಡ್‌ಗಳು ಕಸದ ಬುಟ್ಟಿಗೆ ಸೇರುತ್ತವೆ ಅಥವಾ ಕಾಲ ಕೆಳಗೆ ಬೀಳುತ್ತವೆ. ವಧು-ವರರ ಫೋಟೋ ಇರುವ ಪತ್ರಿಕೆಗಳು ಈ ರೀತಿ ಕಸಕ್ಕೆ ಬಿದ್ದಾಗ ಅಥವಾ ಕಾಲಿನ ತುಳಿತಕ್ಕೆ ಒಳಗಾದಾಗ, ಅದು ಆ ವ್ಯಕ್ತಿಗಳಿಗೆ ಮಾಡುವ ಅಪಚಾರ ಎಂದು ಪರಿಗಣಿಸಲಾಗುತ್ತದೆ. ಇದು ದಂಪತಿಗಳ ಮೇಲೆ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು ಎನ್ನಲಾಗುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ವಾಸ್ತು ಶಾಸ್ತ್ರದ ಮಿತಿಗಳು:

ವಾಸ್ತು ಶಾಸ್ತ್ರವು ಮಂಗಳ ಕಾರ್ಯದ ಆಮಂತ್ರಣವು ಸರಳ ಮತ್ತು ಪವಿತ್ರವಾಗಿರಬೇಕು ಎಂದು ಹೇಳುತ್ತದೆ. ಮದುವೆಯ ಪತ್ರಿಕೆಯಲ್ಲಿ ಗಣೇಶ ಅಥವಾ ಕುಲದೈವದ ಚಿತ್ರವಿರುವುದು ಶುಭದ ಸಂಕೇತ. ಆದರೆ ಜೀವಂತ ವ್ಯಕ್ತಿಗಳ (ವಧು-ವರರ) ಚಿತ್ರಗಳನ್ನು ಮುದ್ರಿಸುವುದು ವಾಸ್ತು ಪ್ರಕಾರ ಆಮಂತ್ರಣದ ಗಾಂಭೀರ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಅನಗತ್ಯ ದೋಷಗಳಿಗೆ ಆಹ್ವಾನ ನೀಡಿದಂತೆ ಎಂಬುದು ತಜ್ಞರ ಅಭಿಪ್ರಾಯ.

ಆಧುನಿಕ ಸವಾಲುಗಳು:

ಇಂದಿನ ಕಾಲದಲ್ಲಿ ಮದುವೆ ಕಾರ್ಡ್‌ಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಇದು ವೈಯಕ್ತಿಕ ಗೌಪ್ಯತೆಗೂ (Privacy) ಧಕ್ಕೆ ತರಬಹುದು. ಅಪರಿಚಿತರ ಕೈಗೆ ನಿಮ್ಮ ಫೋಟೋಗಳು ಸಿಗುವುದು ಸುರಕ್ಷತೆಯ ದೃಷ್ಟಿಯಿಂದಲೂ ಅಷ್ಟೊಂದು ಸಮಂಜಸವಲ್ಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಜಿಗಟ್ಟಲೆ ಚಿನ್ನ, 14 ಕೋಟಿ ರೂ. ಅಕ್ರಮ ಆಸ್ತಿ: ದಿನಗೂಲಿ ನೌಕರ ಕೋಟಿ ಕುಬೇರನಾಗಿದ್ದೇ ರೋಚಕ!

ಬೆಳಗಾವಿ, ಏಪ್ರಿಲ್ 11: ಬೆಳಗಾವಿಯ (Belagavi) ನಗರಾಭಿವೃದ್ಧಿ ಕೋಶದ (DUDC) ಎಇಇ ಅಜಯಸಿಂಗ್ ರಜಪೂತ್ (Ajay Singh Rajput) ಮೇಲೆ ನಡೆದ ಲೋಕಾಯುಕ್ತ ದಾಳಿಯ (Lokayukta Raid) ತನಿಖೆ ಮುಂದುವರಿದಂತೆ ಬೆಚ್ಚಿಬೀಳಿಸುವ ಸತ್ಯಗಳು ಹೊರಬರುತ್ತಿವೆ. ಬರೋಬ್ಬರಿ 14 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿರುವ ಈ ಪ್ರಕರಣದಲ್ಲಿ, ಒಬ್ಬ ಸಾಮಾನ್ಯ ದಿನಗೂಲಿ ನೌಕರ ಕೋಟಿ ಕುಬೇರನಾಗಿ ಬೆಳೆದ ಹಾದಿ ಸಿನಿಮೀಯವಾಗಿದೆ.

ದಿನಗೂಲಿ ಟು ಕೋಟಿ ಕುಬೇರ!

ಅಜಯಸಿಂಗ್ ರಜಪೂತ್ ಅವರ ವೃತ್ತಿಜೀವನ ಆರಂಭವಾಗಿದ್ದು 1992ರಲ್ಲಿ ಒಬ್ಬ ಸಾಮಾನ್ಯ ದಿನಗೂಲಿ ನೌಕರನಾಗಿ. 1992ರಿಂದ 2006ರವರೆಗೆ ಸತತ 14 ವರ್ಷಗಳ ಕಾಲ ಇವರು ದಿನಗೂಲಿ ನೌಕರನಾಗಿಯೇ ಕಾರ್ಯನಿರ್ವಹಿಸಿದ್ದರು. ಆದರೆ, 2006ರಲ್ಲಿ ಪೌರಾಡಳಿತ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕಾಯಂ ನೇಮಕಾತಿ ಪಡೆದ ನಂತರ ಇವರ ಅದೃಷ್ಟದ ಬಾಗಿಲು ತೆರೆಯಿತು. ಐದು ವರ್ಷಗಳಲ್ಲೇ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಬಡ್ತಿ ಪಡೆದ ಇವರು, ನಗರಾಭಿವೃದ್ಧಿ ಕೋಶಕ್ಕೆ ಎಇಇ ಆಗಿ ವರ್ಗಾವಣೆಗೊಂಡ ನಂತರ ಅಕ್ರಮ ಆಸ್ತಿಯ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ.

ವಜ್ರದ ಹಾರ, ಕೆಜಿಗಟ್ಟಲೆ ಚಿನ್ನದ ಗಟ್ಟಿ!

ಅಜಯಸಿಂಗ್ ಅವರು ಕೇವಲ ಭೂಮಿಯ ಮೇಲೆ ಮಾತ್ರವಲ್ಲದೆ ಬ್ಯಾಂಕ್ ಲಾಕರ್‌ಗಳಲ್ಲೂ ಸಂಪತ್ತನ್ನು ಅಡಗಿಸಿಟ್ಟಿದ್ದರು. ಹೆಂಡತಿ ಮತ್ತು ಅತ್ತೆಯ ಹೆಸರಿನಲ್ಲಿರುವ ಎಸ್‌ಬಿಐ ಲಾಕರ್‌ಗಳನ್ನು ಅಧಿಕಾರಿಗಳು ತೆರೆದಾಗ ಕಣ್ಣು ಕೋರೈಸುವ ಆಭರಣಗಳು ಪತ್ತೆಯಾಗಿವೆ.

  • ವಜ್ರದ ನಕ್ಲೇಸ್: 25 ಲಕ್ಷ ರೂ. ಮೌಲ್ಯದ ಡೈಮಂಡ್ ನೆಕ್ಲೆಸ್ ಹಾಗೂ ವಜ್ರದ ಹರಳಿನ ಉಂಗುರಗಳು.
  • ಚಿನ್ನದ ರಾಶಿ: 5.96 ಕೆಜಿ ಚಿನ್ನ. ಇದರಲ್ಲಿ ಒಂದೂವರೆ ಕೆಜಿಯಷ್ಟು ಹಾಲ್‌ಮಾರ್ಕ್ ಚಿನ್ನದ ಗಟ್ಟಿಗಳು ಸೇರಿವೆ.
  • ಬೆಳ್ಳಿಯ ಸಂಪತ್ತು: ಸುಮಾರು 5 ಕೆಜಿ ಬೆಳ್ಳಿಯ ಆಭರಣ ಮತ್ತು ಗಟ್ಟಿಗಳು.
  • ಸ್ಥಿರಾಸ್ತಿ: ಹುಬ್ಬಳ್ಳಿ, ಸವದತ್ತಿ, ಹುಕ್ಕೇರಿ, ಗೋಕಾಕ್ ಮತ್ತು ಬೆಳಗಾವಿಯಲ್ಲಿ ಬರೋಬ್ಬರಿ 18 ನಿವೇಶನಗಳು.
  • ನಗದು: ಬ್ಯಾಂಕ್‌ಗಳಲ್ಲಿ 3.12 ಕೋಟಿ ರೂ. ಮೊತ್ತದ ಫಿಕ್ಸೆಡ್ ಡೆಪಾಸಿಟ್.

ಇದನ್ನೂ ಓದಿ: 6 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 14 ಕೋಟಿ ರೂ. ಅಕ್ರಮ ಆಸ್ತಿ! ಬೆಳಗಾವಿ ನಗರಾಭಿವೃದ್ಧಿ ಇಂಜಿನಿಯರ್ ಆಸ್ತಿ ಕಂಡು ಲೋಕಾಯುಕ್ತರೇ ಶಾಕ್

ಸುಳ್ಳು ಆದಾಯದ ಮೂಲಗಳನ್ನು ತೋರಿಸಿ ಇಷ್ಟೊಂದು ಬೃಹತ್ ಪ್ರಮಾಣದ ಆಸ್ತಿ ಸಂಪಾದಿಸಿರುವ ಅಜಯಸಿಂಗ್ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆಂಜನೇಯ ನಗರದ ಮನೆಯಲ್ಲೇ ಅರ್ಧ ಕೆಜಿ ಚಿನ್ನ ಪತ್ತೆಯಾಗಿದ್ದರೆ, ವಿವಿಧ ಬ್ಯಾಂಕ್‌ಗಳ ಲಾಕರ್‌ನಲ್ಲಿ ಕೆಜಿಗಟ್ಟಲೆ ಚಿನ್ನದ ಬಿಸ್ಕೇಟ್‌ಗಳು ದೊರೆತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಜನ ನಾಯಗನ್’ ಈ ಸ್ಥಿತಿಗೆ ಕಾರಣ ಯಾರು? ಸಿಕ್ಕಿತು ಉತ್ತರ

ಇಷ್ಟು ದಿನ ರಿಲೀಸ್ ಆದ ಸಿನಿಮಾಗಳಿಗೆ ಪೈರಸಿ ಆಗುತ್ತಿದೆ ಎಂದು ನಿರ್ಮಾಪಕರು ಒದ್ದಾಡುತ್ತಿದ್ದರು. ಆದರೆ, ಕೆವಿಎನ್ ಸಂಸ್ಥೆ ನಿರ್ಮಾಣದ ‘ಜನ ನಾಯಗನ್’ ಚಿತ್ರಕ್ಕೆ ರಿಲೀಸ್​​ಗೂ ಮೊದಲೇ ಪೈರಸಿ ಕಾಟ ತಟ್ಟಿದೆ. ಈ ಸಿನಿಮಾದ ಥಿಯೇಟರ್​ ರಿಲೀಸ್ ನಾನಾ ಕಾರಣಗಳಿಂದ ವಿಳಂಬ ಆಗುತ್ತಿದೆ. ಈ ಮಧ್ಯೆ ‘ಜನ ನಾಯಗನ್’ ಸಿನಿಮಾದ ದೃಶ್ಯಗಳು ಲೀಕ್ ಆಗಿರುವುದು ಕೇವಲ ತಂಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದ ಕೋಪಕ್ಕೆ ಕಾರಣ ಆಗಿದೆ. ಎಲ್ಲರೂ ವಿಜಯ್ ಬೆಂಬಲಕ್ಕೆ ನಿಂತಿದ್ದಾರೆ. ಈ ಎಲ್ಲಾ ಬೆಳವಣಿಗೆಗೆ ಸೆನ್ಸಾರ್ ಮಂಡಳಿ ಕಾರಣ ಎಂದು ಕಮಲ್ ಹಾಸನ್ ಅವರು ಆರೋಪಿಸಿದ್ದಾರೆ.

‘ಜನ ನಾಯಗನ್’ ಸಿನಿಮಾ ಜನವರಿಯಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಸಿನಿಮಾದಲ್ಲಿನ ಕೆಲ ವಿಷಯಗಳಿಗೆ ಅಪಸ್ವರ ತೆಗೆಯಿತು. ಇದನ್ನು ಮುಂಬೈನ ಪುನರ್ ಪರಿಶೀಲನಾ ಸಮಿತಿಗೆ ಸಲ್ಲಿಕೆ ಮಾಡುವ ಸೂಚನೆ ನೀಡಿತು. ಈ ವೇಳೆ ತಂಡ ಕೋರ್ಟ್ ಮೆಟ್ಟಿಲೇರಿತು. ಒಂದು ತಿಂಗಳಾದರೂ ಕೋರ್ಟ್​​ನಲ್ಲಿ ಪ್ರಕರಣ ಇತ್ಯರ್ಥ ಆಗದ ಕಾರಣ ಸಿನಿಮಾ ತಂಡದವರು ಪ್ರಕರಣ ಹಿಂಪಡೆದು ಪುನರ್ ಪರಿಶೀಲನಾ ಸಮಿತಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇಲ್ಲಿ ಸಿನಿಮಾನ ಇನ್ನಷ್ಟೇ ವೀಕ್ಷಿಸಬೇಕಿದೆ.

ಹೀಗಿರುವಾಗಲೇ ‘ಜನ ನಾಯಗನ್’ ದೃಶ್ಯ ಲೀಕ್ ಆಗಿದೆ. ಇದನ್ನು ಕಮಲ್ ಹಾಸನ್ ಖಂಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗೆ ಸೆನ್ಸಾರ್ ಮಂಡಳಿ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಲೀಕ್ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರಿಸದೆ ಹೋದ ದಳಪತಿ ವಿಜಯ್

‘ಜನ ನಾಯಗನ್ ಅಚಾನಕ್ಕಾಗಿ ಲೀಕ್ ಆಗಿದ್ದಲ್ಲ. ಇದು ನಮ್ಮ ವ್ಯವಸ್ಥೆಯ ವೈಫಲ್ಯದಿಂದ ಆಗಿದೆ. ಒಂದೊಮ್ಮೆ ಎಲ್ಲಾ ಪ್ರಕ್ರಿಯೆಗಳು (ಸೆನ್ಸಾರ್ ಪ್ರಕ್ರಿಯೆ) ನಡೆದರೆ ನಾವು ಇಂದು ಇಲ್ಲಿ ಇರುತ್ತಿರಲಿಲ್ಲ. ಸೆನ್ಸಾರ್ ಪ್ರಮಾಣಪತ್ರ ಪ್ರಕ್ರಿಯೆಗೆ ಅತಿಯಾದ ವಿಳಂಬ ಮಾಡಿದ್ದು ಇದಕ್ಕೆಲ್ಲ ಕಾರಣ. ಕಾನೂನು ತನ್ನ ಕೆಲಸ ನಿಲ್ಲಿಸಿದಾಗ ಕಾನೂನುಬಾಹಿರ ಚಟುವಟಿಕೆಗಳು ಮೇಲುಗೈ ಸಾಧಿಸುತ್ತವೆ’ ಎಂದಿದ್ದಾರೆ ಕಮಲ್ ಹಾಸನ್. ಈ ಮೂಲಕ ಸೆನ್ಸಾರ್ ಮಂಡಳಿ ವಿರುದ್ಧ ಗುಡುಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲಿಗೆ ಸಿಕ್ತು ಗ್ರೀನ್ ಸಿಗ್ನಲ್!

ಬೆಂಗಳೂರು, ಏಪ್ರಿಲ್ 11: ದೇಶದ ಪ್ರಮುಖ ನಗರಗಳಾದ ಬೆಂಗಳೂರು ಮತ್ತು ಮುಂಬೈ ನಡುವಿನ ರೈಲು ಸಂಪರ್ಕಕ್ಕೆ ಮಹತ್ವದ ಉತ್ತೇಜನ ದೊರೆತಿದ್ದು, ಈ ಮಾರ್ಗದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು (Vande Bharath Sleeper train) ಸೇವೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಹೊಸ ರೈಲು ಕೆಎಸ್ಆರ್ ಬೆಂಗಳೂರು ಮತ್ತು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಡುವೆ ಚಲಿಸಲಿದೆ.

ಪಿ ಸಿ ಮೋಹನ್ ನಿರಂತರ ಪ್ರಯತ್ನ

ಈ ಹಿಂದೆ ಈ ವಿಷಯವನ್ನು ಮುನ್ನೆಲೆಗೆ ತಂದಿದ್ದ ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಅವರ ನಿರಂತರ ಪ್ರಯತ್ನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಡಿಸೆಂಬರ್ 2 ರಂದು ನೈಋತ್ಯ ರೈಲ್ವೆ (SWR) ಸ್ಥಾಯಿ ಸಮಿತಿಯ ಅಧ್ಯಯನ ಭೇಟಿಯ ಸಂದರ್ಭದಲ್ಲಿ, ಮೋಹನ್ ವಂದೇ ಭಾರತ್ ಸ್ಲೀಪರ್ ರೈಲನ್ನು ಪರಿಚಯಿಸಲು ಒತ್ತಾಯಿಸಿದ್ದರು. ಅಲ್ಲದೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್​ ಅನ್ನು ಮೂಲ ಅಥವಾ ಮುಕ್ತಾಯ ನಿಲ್ದಾಣವೆಂದು ಸೂಚಿಸಿದ್ದರು.

ಹೊಸ ರೈಲಿನಿಂದ ಪ್ರಯಾಣದ ಸಮಯ ಕಡಿಮೆಯಾಗುವ ನಿರೀಕ್ಷೆ

ಪ್ರಸ್ತುತ ಈ ಮಾರ್ಗದಲ್ಲಿ ಡಜನ್‌ಗಟ್ಟಲೆ ರೈಲುಗಳು ಸಂಚರಿಸುತ್ತಿದ್ದರೂ, ಉದ್ಯಾನ್ ಎಕ್ಸ್‌ಪ್ರೆಸ್ ಮಾತ್ರ ನೇರ ಸಂಪರ್ಕ ಕಲ್ಪಿಸುತ್ತಿದೆ. ಸುಮಾರು 1,136 ಕಿಮೀ ದೂರವನ್ನು ಈ ರೈಲು 23ರಿಂದ 24 ಗಂಟೆಗಳ ಅವಧಿಯಲ್ಲಿ ಸಾಗುತ್ತದೆ. ಹೊಸ ವಂದೇ ಭಾರತ್ ಸ್ಲೀಪರ್ ರೈಲು ಪರಿಚಯದಿಂದ ಪ್ರಯಾಣ ಸಮಯವು ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದ್ದು, ಪ್ರಯಾಣಿಕರಿಗೆ ಹೆಚ್ಚು ಆರಾಮದಾಯಕ ಮತ್ತು ವೇಗದ ಸೇವೆ ಲಭ್ಯವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

Raj Panchak Rajyoga 2026: ಶೀಘ್ರದಲ್ಲೇ ರೂಪುಗೊಳ್ಳಲಿರುವ ಪ್ರಭಾವಶಾಲಿ ರಾಜಯೋಗ; ಈ 4 ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸಂಚಾರ ಮತ್ತು ಸಂಯೋಜನೆಯಿಂದಾಗಿ ಕಾಲಕಾಲಕ್ಕೆ ಶುಭ ಯೋಗಗಳು ನಿರ್ಮಾಣವಾಗುತ್ತವೆ. ಅದರಂತೆ, ಶೀಘ್ರದಲ್ಲೇ ಅತ್ಯಂತ ಪ್ರಭಾವಶಾಲಿ ‘ರಾಜ ಪಂಚಕ ರಾಜಯೋಗ’ ರೂಪುಗೊಳ್ಳುತ್ತಿದೆ. ಈ ರಾಜಯೋಗದ ಪ್ರಭಾವದಿಂದಾಗಿ ನಾಲ್ಕು ರಾಶಿಚಕ್ರದ ವ್ಯಕ್ತಿಗಳಿಗೆ ಆರ್ಥಿಕ ಅಭಿವೃದ್ಧಿ ಮಾತ್ರವಲ್ಲದೆ, ಕೋಟ್ಯಾಧಿಪತಿಗಳಾಗುವ ಸುವರ್ಣ ಅವಕಾಶ ದೊರೆಯಲಿದೆ ಎಂದು ಹೇಳಲಾಗುತ್ತಿದೆ.

ಆ ಅದೃಷ್ಟದ ನಾಲ್ಕು ರಾಶಿಗಳು ಯಾವುವು ಎಂಬ ವಿವರ ಇಲ್ಲಿದೆ:

ಮೇಷ ರಾಶಿ (Aries): ಆಸೆಗಳ ಈಡೇರಿಕೆಯ ಸಮಯ

ರಾಜ ಪಂಚಕ ರಾಜಯೋಗವು ಮೇಷ ರಾಶಿಯವರಿಗೆ ಅದ್ಭುತ ಫಲಿತಾಂಶಗಳನ್ನು ತರಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಸದೃಢವಾಗಲಿದೆ. ದೀರ್ಘಕಾಲದಿಂದ ಮನೆ ಅಥವಾ ಆಸ್ತಿ ಖರೀದಿಸಬೇಕು ಎಂಬ ಕನಸು ಹೊಂದಿರುವವರಿಗೆ ಈಗ ಕಾಲ ಕೂಡಿ ಬರಲಿದೆ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವ ಯುವಕರಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ.

ಮಿಥುನ ರಾಶಿ (Gemini): ದ್ವಿಗುಣಗೊಳ್ಳಲಿದೆ ಆದಾಯ:

ಮಿಥುನ ರಾಶಿಯವರಿಗೆ ಈ ಯೋಗವು ಅತ್ಯಂತ ಅದೃಷ್ಟಶಾಲಿಯಾಗಿರಲಿದೆ. ನಿಮ್ಮ ಆದಾಯವು ನಿರೀಕ್ಷೆಗಿಂತಲೂ ಹೆಚ್ಚಾಗಿ ದ್ವಿಗುಣಗೊಳ್ಳುವ ಸಂಭವವಿದೆ. ಆರ್ಥಿಕ ಸುಧಾರಣೆಯಿಂದಾಗಿ ಜೀವನದಲ್ಲಿ ಸಂತೋಷ ನೆಲೆಸಲಿದೆ. ಬಹಳ ದಿನಗಳಿಂದ ವಿವಾಹ ವಿಳಂಬವಾಗುತ್ತಿರುವವರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿ ಬರಲಿದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಕರ್ಕಾಟಕ ರಾಶಿ (Cancer): ಗೌರವ ಮತ್ತು ಬಡ್ತಿ:

ಕರ್ಕಾಟಕ ರಾಶಿಯವರಿಗೆ ಈ ರಾಜಯೋಗವು ಅನಿರೀಕ್ಷಿತ ತಿರುವುಗಳನ್ನು ನೀಡಲಿದೆ. ಉದ್ಯೋಗದಲ್ಲಿರುವವರಿಗೆ ಶೀಘ್ರದಲ್ಲೇ ಬಡ್ತಿ (Promotion) ಮತ್ತು ವೇತನ ಹೆಚ್ಚಳವಾಗುವ ಸೂಚನೆಗಳಿವೆ. ಕೆಲಸದಲ್ಲಿ ಎದುರಿಸುತ್ತಿದ್ದ ಎಲ್ಲಾ ವಿಘ್ನಗಳು ದೂರವಾಗಿ ಸುಗಮ ಹಾದಿ ನಿರ್ಮಾಣವಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಮನ್ನಣೆ ಹೆಚ್ಚಾಗಲಿದೆ.

ವೃಶ್ಚಿಕ ರಾಶಿ (Scorpio): ಅನಿರೀಕ್ಷಿತ ಧನಲಾಭ:

ವೃಶ್ಚಿಕ ರಾಶಿಯವರಿಗೆ ರಾಜ ಪಂಚಕ ರಾಜಯೋಗವು ಧನಲಕ್ಷ್ಮಿಯ ಕೃಪೆಯನ್ನು ತರಲಿದೆ. ಅನಿರೀಕ್ಷಿತ ಮೂಲಗಳಿಂದ ಸಂಪತ್ತು ಹರಿದು ಬರಲಿದ್ದು, ಆರ್ಥಿಕವಾಗಿ ನೀವು ಅತ್ಯಂತ ಬಲಿಷ್ಠರಾಗಲಿದ್ದೀರಿ. ಕೇವಲ ಹಣ ಮಾತ್ರವಲ್ಲದೆ, ಜೀವನದ ಎಲ್ಲಾ ರಂಗಗಳಲ್ಲೂ ನಿಮಗೆ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ.

ಗಮನಿಸಿ: ಈ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರದ ನಂಬಿಕೆಗಳು ಮತ್ತು ಗ್ರಹಗತಿಗಳ ಮೇಲೆ ಆಧಾರಿತವಾಗಿದೆ. ವೈಯಕ್ತಿಕ ಜಾತಕ ಮತ್ತು ಗ್ರಹಗಳ ಸ್ಥಿತಿಗತಿಗಳಿಗೆ ಅನುಗುಣವಾಗಿ ಫಲಿತಾಂಶಗಳು ವ್ಯತ್ಯಾಸವಾಗಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಫೈರೋಜ್ ಪಠಾಣ್​ ಕೊಲೆ ಬಗ್ಗೆ ಸ್ಫೋಟಕ ಮಾಹಿತಿ ಬಯಲು! ಸಂಬಂಧಿಕರು ಹೇಳಿದ್ದೇನು ನೋಡಿ

ಧಾರವಾಡ, ಏಪ್ರಿಲ್ 11: ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ರನ್ನು ಧಾರವಾಡದ ಹಾಶ್ಮಿ ನಗರದಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ಇನ್ನೇನು 15 ದಿನಗಳಲ್ಲಿ ಅವರ ಮದುವೆಯೂ ನಿಗದಿಯಾಗಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಫೈರೋಜ್ ಪಠಾಣ್ ಆಪ್ತರೊಬ್ಬರು ‘ಟಿವಿ9’ ಜತೆ ಮಾತನಾಡಿದ್ದು, ಘಟನೆ ವೇಳೆ ಮನೆಗೆ ನುಗ್ಗಿದ್ದವರಲ್ಲಿ ಮೊಹಮ್ಮದ್ ಶಾ ಎಂಬಾತ ಇದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಕಾಣಿಸಿಕೊಂಡಿದ್ದಾನೆ. ಆತನೊಂದಿಗೆ ಇನ್ನೂ ನಾಲ್ವರು ಇದ್ದರು ಎಂದು ಆಪ್ತರು ತಿಳಿಸಿದ್ದಾರೆ. ಫೈರೋಜ್ ಮತ್ತು ಮೊಹಮ್ಮದ್ ಶಾ ನಡುವೆ ಮೊದಲಿನಿಂದಲೂ ಜಗಳವಿತ್ತು. ರಾಜಕೀಯ ಮುಖಂಡರ ಕೈವಾಡವೂ ಇದೆ ಎಂದು ಆರೋಪಿಸಲಾಗಿದೆ.

ರಾತ್ರಿ ಮನೆಗೆ ಬಂದಿದ್ದ ಆರೋಪಿಗಳು, ಫೈರೋಜ್‌ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಕುಟುಂಬದ ಸದಸ್ಯರಾದ ತಂಗಿ ಮತ್ತು ತಾಯಿಗೂ ಹಲ್ಲೆ ನಡೆಸಲಾಗಿದೆ. ಇದೀಗ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ವೈಯಕ್ತಿಕ ಹಾಗೂ ರಾಜಕೀಯ ಉದ್ದೇಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ. ಮದುವೆ ನಿಶ್ಚಿತವಾಗಿದ್ದ ಫೈರೋಜ್ ಹತ್ಯೆಯಿಂದ ಧಾರವಾಡ ಬೆಚ್ಚಿಬಿದ್ದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅನನ್ಯಾಗಾಗಿ ಅದ್ಭುತವಾಗಿ ಹಾಡು ಹೇಳಿದ ಅಂಕಿತಾ ಅಮರ್

ಅಂಕಿತಾ ಅಮರ್ ಅವರು ಸಿನಿಮಾಗಳನ್ನು ಮಾಡಿದ್ದಾರೆ. ಅವರ ಸಹೋದರಿ ಅನನ್ಯಾ ಅಮರ್ ಅವರು ರಿಯಾಲಿಟಿ ಶೋಗಳ ಭಾಗ ಆಗುತ್ತಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್​ ಶೋನಲ್ಲಿ ಅನನ್ಯಾ ಭಾಗಿ ಆಗಿದ್ದರು. ಈ ಶೋನ ಫಿನಾಲೆಯಲ್ಲಿ ಅನನ್ಯಾಗಾಗಿ ಅಂಕಿತಾ ಹಾಡನ್ನು ಹೇಳಿದ್ದಾರೆ. ‘ಎಲ್ಲೋ ಜೋಗಪ್ಪ ನಿನ್ ಅರಮನೆ’ ಎಂದು ಅದ್ಭುತ ಕಂಠದಿಂದ ಹಾಡನ್ನು ಹೇಳಿದ್ದಾರೆ. ಶನಿವಾರ (ಏಪ್ರಿಲ್ 11) ಹಾಗೂ ಭಾನುವಾರ (ಏಪ್ರಿಲ್ 12) ಫಿನಾಲೆ ಎಪಿಸೋಡ್ ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಪ್ಪಳ: ಬಸ್‌ನಲ್ಲಿ ಅರಳಿದ ಪ್ರೇಮ, ದೇವಸ್ಥಾನದಲ್ಲಿ ಮದುವೆಯಾದ ಜೋಡಿಗೆ ಈಗ ಜೀವಭಯ!

ಕೊಪ್ಪಳ, ಏಪ್ರಿಲ್ 11: ‘ಪ್ರೀತಿ ಕುರುಡು’ ಎನ್ನುತ್ತಾರೆ. ಹಾಗೆಯೇ ‘ಪ್ರೀತಿಗೆ ಧರ್ಮದ ಹಂಗಿಲ್ಲ’ ಎಂಬುದನ್ನು ಕೊಪ್ಪಳದ (Koppal) ಜೋಡಿಯೊಂದು ಸಾಬೀತುಮಾಡಿದೆ. ಆದರೆ, ಅದುವೇ ಈಗ ಅವರ ಜೀವಭಯಕ್ಕೂ ಕಾರಣವಾಗಿದೆ. ಬಸ್​​ನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿರುವ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿಯ ನವಜೋಡಿ ಈಗ ರಕ್ಷಣೆಗಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿ ಮೆಟ್ಟಿಲೇರಿದ್ದಾರೆ.

ಬಸ್ ಪ್ರಯಾಣದಿಂದ ದೇವಸ್ಥಾನದಲ್ಲಿ ಮದುವೆ ವರೆಗೆ…

ಕನಕಗಿರಿ ತಾಲೂಕಿನ ಹುಲಿಹೈದರ್ ನಿವಾಸಿ ಕೇಶವ್ ಹಾಗೂ ಗಂಗಾವತಿ ತಾಲೂಕಿನ ಸುಳೇಕಲ್ ಗ್ರಾಮದ ತಸ್ಲೀಮಾ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಬಸ್‌ನಲ್ಲಿ ಓಡಾಡುವಾಗ ಇವರ ಪರಿಚಯವಾಗಿತ್ತು. ಇತ್ತ ತಸ್ಲೀಮಾ ಮನೆಯಲ್ಲಿ ಆಕೆಗೆ ಬೇರೆಯವರ ಜೊತೆ ಮದುವೆ ಮಾಡಲು ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ, ಈ ಜೋಡಿ ಕನಕಗಿರಿಯ ಲಕ್ಷ್ಮೀ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಮದುವೆಯ ನಂತರ ಮುಸ್ಲಿಂ ಯುವತಿ ತಸ್ಲೀಮಾ ಹಣೆಗೆ ಕುಂಕುಮ ಇಟ್ಟು, ಅರಿಶಿಣ ಕೊಂಬು ಕಟ್ಟಿಕೊಂಡು ಹಿಂದೂ ಧರ್ಮದ ಸಂಪ್ರದಾಯದಂತೆ ಕೇಶವ್ ಕೈ ಹಿಡಿದಿದ್ದಾರೆ.

ರಕ್ಷಣೆಗಾಗಿ ಎಸ್ಪಿ ಮೊರೆ

ಮದುವೆಯಾದ ಬೆನ್ನಲ್ಲೇ ತಮಗೆ ಕುಟುಂಬದವರಿಂದ ತೊಂದರೆಯಾಗಬಹುದು ಎಂಬ ಭೀತಿಯಲ್ಲಿರುವ ಈ ಜೋಡಿ, ವಕೀಲರೊಂದಿಗೆ ಕೊಪ್ಪಳ ಎಸ್ಪಿ ಕಚೇರಿಗೆ ಬಂದು ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ‘ನಮ್ಮ ಮನೆಯವರಿಂದ ಏನಾದರೂ ತೊಂದರೆಯಾಗಬಹುದು ಎಂಬ ಭಯವಿದೆ. ಯಾರೂ ನಮಗೆ ಏನೂ ಮಾಡಬಾರದು, ನಮ್ಮ ಪಾಡಿಗೆ ನಮ್ಮನ್ನು ಬದುಕಲು ಬಿಡಬೇಕು’ ಎಂದು ತಸ್ಲೀಮಾ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ನವ ವಿವಾಹಿತೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​: ಮುಸ್ಲಿಂ ಯುವಕನ ಜೊತೆ ಯುವತಿ ಪತ್ತೆ; ಪೊಲೀಸ್​​ ಠಾಣೆಯಲ್ಲಿ ಹೈಡ್ರಾಮಾ

ಲವ್ ಜಿಹಾದ್‌ನಂತಹ ಪ್ರಕರಣಗಳ ಕುರಿತು ಭಾರಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಈ ಅನ್ಯ ಕೋಮಿನ ವಿವಾಹ ನೆರವೇರಿದ್ದು, ಕೊಪ್ಪಳದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್​ಗೆ ಸೌತ್ ಆಫ್ರಿಕಾ ಆಲ್​ ರೌಂಡರ್ ಎಂಟ್ರಿ..!

Source link

Exit mobile version