ದೇವನಹಳ್ಳಿ, ಏಪ್ರಿಲ್ 10: ಬೆಂಗಳೂರುನಲ್ಲಿ ಸುರಿದ ಭಾರಿ ಮಳೆ ಪರಿಣಾಮ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿದ್ದ ವಿಮಾನ ಲ್ಯಾಂಡ್ ಆಗಲು ಸಾಧ್ಯವಾಗದೇ ಮಂಗಳೂರುಗೆ ವಾಪಸ್ ತೆರಳಿರುವಂತಹ ಘಟನೆ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಸಂಜೆ 5:45ಕ್ಕೆ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಮಳೆ ಹಿನ್ನೆಲೆ ಲ್ಯಾಂಡಿಂಗ್ಗೆ ಕ್ಲಿಯರೆನ್ಸ್ ಇಲ್ಲದ ಕಾರಣ ಮಂಗಳೂರು ವಾಪಸ್ ಆಗಿದೆ.
2026 ರ ಐಪಿಎಲ್ನಲ್ಲಿ ತವರಿನಿಂದ ಹೊರಕ್ಕೆ ಮೊದಲ ಪಂದ್ಯವನ್ನಾಡಿದ ಆರ್ಸಿಬಿ, ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಿತ್ತು. ಮಳೆ ಪೀಡಿತ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಪವರ್ಪ್ಲೇನಲ್ಲಿ ಅಂದರೆ ಮೊದಲ 6 ಓವರ್ಗಳಲ್ಲಿ 60 ರನ್ ಕಲೆಹಾಕಿತ್ತಾದರೂ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡಿತು.
ಎಂದಿನಂತೆ ಆರ್ಸಿಬಿ ಪರ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರು. ಇತ್ತ ರಾಜಸ್ಥಾನ್ ಪರ ಬೌಲಿಂಗ್ ಆರಂಭಿಸಿದ ಚೋಫ್ರಾ ಆರ್ಚರ್ ಮೊದಲ ಎಸೆತದಲ್ಲೇ ಫಿಲ್ ಸಾಲ್ಟ್ ಅವರ ವಿಕೆಟ್ ಪಡೆದರು. ಆರ್ಚರ್ ಎಸೆದ ಬೌನ್ಸರ್ಗೆ ಸಾಲ್ಟ್ ಬಳಿ ಉತ್ತರವಿರಲಿಲ್ಲ. ಹೀಗಾಗಿ ಸಾಲ್ಟ್ ಕೀಪರ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು.
ಸಾಲ್ಟ್ ವಿಕೆಟ್ ಬಳಿಕ ಬಂದ ದೇವದತ್ ಪಡಿಕ್ಕಲ್ ಎಂದಿನಂತೆ ಕೊಹ್ಲಿ ಜೊತೆಗೂಡಿ ಉತ್ತಮ ಜೊತೆಯಾಟ ಕಟ್ಟುತ್ತಿದ್ದರು. ಹೀಗಾಗಿ ಮೊದಲ ಓವರ್ನಲ್ಲಿ ವಿಕೆಟ್ ಬಿದ್ದರೂ ಈ ಜೋಡಿ 2 ಓವರ್ಗಳ ಅಂತ್ಯಕ್ಕೆ 32 ರನ್ ಕಲೆಹಾಕಿತ್ತು. ಆರ್ಚರ್ ಎಸೆದ 3ನೇ ಓವರ್ನಲ್ಲೂ 13 ರನ್ ಬಂದಿತ್ತಾದರೂ, ಕೊನೆಯ ಎಸೆತದಲ್ಲಿ ಪಡಿಕ್ಕಲ್ ವಿಕೆಟ್ ಉರುಳಿತು.
ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ಪಡಿಕ್ಕಲ್ ಈ ಪಂದ್ಯದಲ್ಲಿ 14 ರನ್ ಬಾರಿಸಿ ಔಟಾದರು. ಆರಂಭಿಕ ಎರಡು ವಿಕೆಟ್ ಪತನದ ಬಳಿಕ ಕೊಹ್ಲಿ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿತ್ತು. ಅದರಂತೆ ಬ್ಯಾಟ್ ಬೀಸಿದ ಕೊಹ್ಲಿ 16 ಎಸೆತಗಳಲ್ಲಿ 32 ರನ್ ಕಲೆಹಾಕಿದರು. ಆದರೆ ಬಿಷ್ಣೋಯಿ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಹೀಗಾಗಿ ಆರ್ಸಿಬಿ ಪವರ್ ಪ್ಲೇ ಅಂತ್ಯಕ್ಕೆ 61 ರನ್ ಕಲೆಹಾಕಿತ್ತಾದರೂ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡಿತು. ಕೊಹ್ಲಿ ವಿಕೆಟ್ ಬಿದ್ದ ಬಳಿಕ ಬ್ಯಾಟಿಂಗ್ನಲ್ಲಿ ಬಡ್ತಿ ಪಡೆದು ಬಂದಿದ್ದ ಕೃನಾಲ್ ಪಾಂಡ್ಯ ಹೆಚ್ಚು ಪರಿಣಾಮಕಾರಿಯಾಗದೆ ಕೇವಲ 1 ರನ್ಗೆ ಪೆವಿಲಿಯನ್ ಸೇರಿಕೊಂಡರು. ಜಿತೇಶ್ ಶರ್ಮಾ ಕೂಡ ಹೆಚ್ಚು ಹೊತ್ತು ನಿಲ್ಲದೆ ಕೇವಲ 5 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಪ್ರಿಯಾಂಕಾ ಉಪೇಂದ್ರ, ವಿಷ್ಣುವರ್ಧನ್ ನಟನೆಯ ‘ಕೋಟಿಗೊಬ್ಬ’ (Kotigobba) ಸಿನಿಮಾ ಮರು ಬಿಡುಗಡೆ ಆಗಿದೆ. ಈ ಸಿನಿಮಾವನ್ನು ಇಂದು (ಏಪ್ರಿಲ್ 10) ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಅಭಿಮಾನಿಗಳ ಜೊತೆ ಕುಳಿತು ವೀಕ್ಷಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ತಮ್ಮ ಖುಷಿಯನ್ನು ಹಂಚಿಕೊಂಡರು. ‘ತುಂಬಾ ಖುಷಿ ಆಗುತ್ತಿದೆ. 25 ವರ್ಷಗಳ ಹಿಂದೆ ಈ ಚಿತ್ರವನ್ನು ನಾನು ಅಭಿಮಾನಿಗಳ ಜೊತೆ ನೋಡಲು ಸಾಧ್ಯವಾಗಿರಲಿಲ್ಲ. ಈಗ ಆ ಅವಕಾಶ ಸಿಕ್ಕಿದೆ. ಈಗಲೂ ಅಭಿಮಾನಿಗಳಿಂದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ವಿಷ್ಣು ಸರ್ ಮ್ಯಾಜಿಕ್ ಇದು. ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತೇನೆ. ಇಂದಿಗೂ ಈ ಸಿನಿಮಾ ಮತ್ತು ಹಾಡುಗಳು ಎಷ್ಟು ಫ್ರೆಶ್ ಆಗಿದೆ. ವಿಷ್ಣುವರ್ಧನ್ (Vishnuvardhan) ಅವರು ಎವರ್ಗ್ರೀನ್. ಇಂದು ನಾನು ಕೂಡ ಅವರಿಗೋಸ್ಕರವೇ ಬಂದಿದ್ದೇನೆ’ ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.
ಬೆಳಗಾವಿ, (ಏಪ್ರಿಲ್ 10): ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅಂತ್ಯವಾಗಿದ್ದು, ಫಲಿತಾಂಶಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ಕ್ಷೇತ್ರದಲ್ಲಿ ಸೋಲು ಗೆಲುವಿನ ಬಗ್ಗೆ ಚರ್ಚೆ ಜೋರಾಗಿವೆ ನಡೆದಿವೆ. ಇನ್ನೊಂದೆಡೆ ರಾಜಕೀಯ ನಾಯಕರು ಸಹ ಲೆಕ್ಕಾಚಾರ ಹಾಕುತ್ತಿದ್ದಾರೆ. ಇದರ ನಡುವೆ ದಾವಣಗೆರೆಯಲ್ಲಿ ಮುಸ್ಲಿಂ ಮತಗಳು ಕೈಕೊಟ್ಟಿರುವ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಅಲ್ಪಸಂಖ್ಯಾತ ಮುನಿಸು ಲೀಡ್ ಮೇಲೆ ಪರಿಣಾಮ ಬೀರಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳಿ, ದಾವಣಗೆರೆಯಲ್ಲಿ ಶೇಕಡಾ 20ರಷ್ಟು ಕಮ್ಮಿ ಆಗಲಿದೆ. ಅಲ್ಪಸಂಖ್ಯಾತ ಮುನಿಸು ಲೀಡ್ ಮೇಲೆ ಪರಿಣಾಮ ಬೀರಲಿದೆ. ಡ್ಯಾಮೆಜ್ ಅನ್ನು ಸಚಿವರಾದ ಮಲ್ಲಿಕಾರ್ಜುನ ಸರಿಪಡಿಸಬೇಕು. ಅವರು ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಮೈಸೂರು, ಏಪ್ರಿಲ್ 10: ನಂಜನಗೂಡಿನ ಪುಟ್ಟ ಹಳ್ಳಿಯೊಂದರಲ್ಲಿ ವಿಧಿಯ ಅಟ್ಟಹಾಸಕ್ಕೆ ಸಿಲುಕಿ ಇಡೀ ಕುಟುಂಬವೇ ಬೀದಿಗೆ ಬಿದ್ದಿತ್ತು. ಮಾರಕ ಕಾಯಿಲೆಯಿಂದ ಎರಡು ಕಾಲು ಕಳೆದುಕೊಂಡ ಪೂಜಾ ಎಂಬಾಕೆಯ ಬದುಕು ಅಂಧಕಾರದಲ್ಲಿತ್ತು. ಅತ್ತ ಪತಿಗೂ ಅಪಘಾತ, ಇತ್ತ ಕೈಯಲ್ಲಿ ಹಣವಿದಲ್ಲ ಸ್ಥಿತಿ. ಈ ಕಣ್ಣೀರಿನ ಕಥೆ ಕೇಳಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy), ಇಂದು ಆ ಬಡ ಕುಟುಂಬಕ್ಕೆ ಸಾಕ್ಷಾತ್ ದೇವರಾಗಿ ಬಂದಿದ್ದರು. ಹಳೆಯ ಲೀಸ್ ಹಣ ತೀರಿಸುವ ಭರವಸೆ ಜೊತೆಗೆ, ಮನೆಯ ಮಗನಂತೆ ಆ ಕುಟುಂಬಕ್ಕೆ ಧೈರ್ಯ ತುಂಬಿದರು.
ಬರೋಬ್ಬರಿ 11 ಶಸ್ತ್ರಚಿಕಿತ್ಸೆ
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ 24 ವರ್ಷದ ಪೂಜಾ ಮಾರಕ ಕಾಯಿಲೆಗೆ ತುತ್ತಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಲ್ಲಿಯೇ ನೆಲೆಸಿರುವ ಈ ಕುಟುಂಬಕ್ಕೆ ವಿಧಿ ಒಂದಾದ ಮೇಲೊಂದರಂತೆ ಕಷ್ಟಗಳನ್ನ ನೀಡಿದೆ. ಮಾರಕ ಕಾಯಿಲೆಗೆ ತುತ್ತಾದ ಪೂಜಾ, ಬರೋಬ್ಬರಿ 11 ಶಸ್ತ್ರಚಿಕಿತ್ಸೆಗಳನ್ನ ಎದುರಿಸಿದ್ದಾರೆ. ಅಂತಿಮವಾಗಿ ತನ್ನ ಎರಡೂ ಕಾಲುಗಳನ್ನೇ ಕಳೆದುಕೊಂಡು ಇಂದು ಹಾಸಿಗೆ ಹಿಡಿದಿದ್ದಾರೆ.
ನನ್ನ ಸಂಕಷ್ಟವನ್ನ ಕುಮಾರಣ್ಣನಿಗೆ ತಲುಪಿಸಿ
ಪೂಜಾಗೆ ಗಾಯದ ಮೇಲೆ ಬರೆ ಎಳೆದಂತೆ ಪತಿ ರವಿ ಕೂಡ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪುಟ್ಟ ಮಕ್ಕಳನ್ನ ಕಟ್ಟಿಕೊಂಡು ಜೀವನ ನಡೆಸಲು ದಾರಿಯೇ ಇಲ್ಲದಂತಾದಾಗ, ಪೂಜಾ ಮನವಿ ಮಾಡಿದ್ದು ಕುಮಾರಣ್ಣನಿಗೆ. “ನನ್ನ ಸಂಕಷ್ಟವನ್ನ ಹೇಗಾದರೂ ಮಾಡಿ ಅವರಿಗೆ ತಲುಪಿಸಿ” ಎಂದು ಬೇಡಿಕೊಂಡಿದ್ದರು. ಪೂಜಾರ ಕೂಗು ಕುಮಾರಸ್ವಾಮಿ ಅವರಿಗೆ ತಲುಪಿದೆ. ಹಾಗಾಗಿ ಇಂದು ನಂಜನಗೂಡು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅವರು, ನೇರವಾಗಿ ಪೂಜಾರ ಮನೆಗೆ ಭೇಟಿ ನೀಡಿದ್ದಾರೆ.
ಹಾಸಿಗೆಯಲ್ಲಿ ಮಲಗಿದ್ದ ಪೂಜಾರನ್ನ ಕಂಡು ಮರುಗಿದ ಹೆಚ್ಡಿ ಕುಮಾರಸ್ವಾಮಿ, ಕುಟುಂಬದ ಪರಿಸ್ಥಿತಿಯನ್ನ ಆಲಿಸಿದರು. ಪೂಜಾ ತಂದೆ ಕುಮಾರ ಮತ್ತು ತಾಯಿ ಶೀಲಾರಿಗೆ ಧೈರ್ಯ ತುಂಬಿದರು. ಸ್ಥಳದಲ್ಲೇ ವೈಯಕ್ತಿಕವಾಗಿ ಧನಸಹಾಯ ಮಾಡಿದರು. ಅಷ್ಟೇ ಅಲ್ಲ, ಕುಟುಂಬದ ದೊಡ್ಡ ತಲೆನೋವಾಗಿದ್ದ ಮನೆಯ ಲೀಸ್ ಹಣವನ್ನ ತಾವೇ ಪಾವತಿಸುವುದಾಗಿ ಭರವಸೆ ನೀಡುವ ಮೂಲಕ ಕುಟುಂಬಕ್ಕೆ ಆಸರೆಯಾದರು. ಪತಿ ರವಿ ಅಪಘಾತದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಜೊತೆ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸುವಂತೆ ಸೂಚನೆ ನೀಡಿದರು.
ಇನ್ನು ಈ ವೇಳೆ ಹೆಚ್ಡಿ ಕುಮಾರಸ್ವಾಮಿಗೆ ಶಾಸಕ ಹರೀಶ್ ಗೌಡ, ಎಂಎಲ್ಸಿ ಮಂಜೇಗೌಡ ಸೇರಿದಂತೆ ಜೆಡಿಎಸ್ ಪ್ರಮುಖ ಮುಖಂಡರು ಸಾಥ್ ನೀಡಿದರು. ಒಟ್ಟಿನಲ್ಲಿ, ರಾಜಕೀಯ ಜಂಜಾಟಗಳ ನಡುವೆಯೂ ಕೇಂದ್ರ ಸಚಿವರು ತೋರಿದ ಈ ಮಾನವೀಯತೆ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಧಿಯ ಆಟಕ್ಕೆ ಸೋತಿದ್ದ ಪೂಜಾ ಕುಟುಂಬಕ್ಕೆ ಕುಮಾರಸ್ವಾಮಿ ನೀಡಿದ ಭರವಸೆ ಹೊಸ ಜೀವನದ ಕಿರಣ ಮೂಡಿಸಿದೆ.
ವಾಷಿಂಗ್ಟನ್, ಏಪ್ರಿಲ್ 10: ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ (JD Vance) ಇಂದು ಇರಾನ್ ಜೊತೆ ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ (Pakistan) ತೆರಳಿದ್ದಾರೆ. ಈ ವೇಳೆ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಜೆಡಿ ವ್ಯಾನ್ಸ್, “ನಾವು ಮಾತುಕತೆಯನ್ನು ಎದುರು ನೋಡುತ್ತಿದ್ದೇವೆ. ಅದು ಸಕಾರಾತ್ಮಕವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದಂತೆ ಇರಾನಿಯನ್ನರು ಉತ್ತಮ ನಂಬಿಕೆಯಿಂದ ಮಾತುಕತೆ ನಡೆಸಲು ಸಿದ್ಧರಿದ್ದರೆ ನಾವು ಖಂಡಿತವಾಗಿಯೂ ಮುಕ್ತವಾಗಿ ಕೈ ಚಾಚಲು ಸಿದ್ಧರಿದ್ದೇವೆ. ಆದರೆ, ಅಮೆರಿಕದ ಜೊತೆ ಆಟವಾಡಿದರೆ ನಾವು ಸುಮ್ಮನಿರುವುದಿಲ್ಲ” ಎಂದು ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೋಲಾರ, ಏಪ್ರಿಲ್ 10: ಅರಣ್ಯ ಭೂಮಿ ಒತ್ತುವರಿ (Land Encroachment) ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಭೂಮಿಯನ್ನು ಬಿಟ್ಟುಕೊಡುವಂತೆ ಮೇಲ್ಮನವಿ ಪ್ರಾಧಿಕಾರ ಮತ್ತು ಅರಣ್ಯ ಸಂರಕ್ಷಾಧಿಕಾರಿಗಳ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಆ ಮೂಲಕ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ಗೆ ಹಿನ್ನಡೆಯಾಗಿದೆ. ಜೊತೆಗೆ ಅವರು ಸಲ್ಲಿಸಿದ ಮೇಲ್ಮನವಿಗೆ ಅರ್ಹತೆ ಇಲ್ಲವೆಂದು ವಜಾಗೊಳಿಸಲಾಗಿದೆ.
ಅರಣ್ಯ ಇಲಾಖೆಗೆ ಭೂಮಿ ಬಿಟ್ಟುಕೊಡುವಂತೆ ಆದೇಶ
ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ಕುಮಾರ್ ಸಲ್ಲಿಸಿದ ಮೇಲ್ಮನವಿ ಅಜಿ ವಿಚಾರಣೆ ಮಾಡಿದ ನ್ಯಾಯಾಲಯ, ಅರಣ್ಯ ಇಲಾಖೆಗೆ ಭೂಮಿ ಬಿಟ್ಟುಕೊಡುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಕಾಯ್ದೆಯ 64(A) ವಿಧಿಯಡಿ ಒತ್ತುವರಿ ತೆರವುಗೊಳಿಸಲು ನ್ಯಾಯಾಲಯ ನಿರ್ದೇಶನ ನೀಡಿದೆ. 2025ರ ಜನವರಿ 15 ಮತ್ತು 16ರಂದು ನಡೆಸಿದ ಜಂಟಿ ಸಮೀಕ್ಷೆಯ ವರದಿ ಆಧರಿಸಿ ಈ ಆದೇಶ ನೀಡಲಾಗಿದೆ.
ಆದೇಶವನ್ನು ಸ್ವೀಕರಿಸಿದ ದಿನಾಂಕದಿಂದ 30 ದಿನಗಳೊಳಗೆ ಅತಿಕ್ರಮಣ ಮಾಡಲಾದ ಭೂಮಿಯನ್ನು ಶಾಂತಿಯುತವಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಸೂಚಿಸಲಾಗಿದೆ. ನಿಗದಿತ ಅವಧಿಯಲ್ಲಿ ಆದೇಶ ಪಾಲನೆ ಮಾಡದಿದ್ದಲ್ಲಿ, ಕೋಲಾರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಭೂಮಿ ತೆರವುಗೊಳಿಸುವಂತೆ ಸೂಚಿಸಲಾಗಿದೆ.
ಏನಿದು ಪ್ರಕರಣ?
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ 2 ದಶಕಗಳಿಂದ ಅರಣ್ಯ ಭೂಮಿಯ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ಹುಟ್ಟೂರಾದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದಲ್ಲಿರುವ ಸರ್ವೆ ಸಂಖ್ಯೆ 1 ಮತ್ತು 2ರಲ್ಲಿ 60.23 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿಬಂದಿತ್ತು.
ಬೇರೆ ಬೇರೆ ರೈತರಿಂದ ಖರೀದಿ ಮಾಡಿದ್ದ ಭೂಮಿಯ ಪೈಕಿ ಸುಮಾರು 60.23 ಎರಕೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಜಂಟಿ ಸರ್ವೇ ಕಾರ್ಯದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅದರಂತೆ ಜಂಟಿ ಸರ್ವೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ನವದೆಹಲಿ, ಏಪ್ರಿಲ್ 10: ದೆಹಲಿ ಪೊಲೀಸರು ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ಐಎಸ್ಐ (ISI) ಜೊತೆ ಸಂಪರ್ಕ ಹೊಂದಿರುವ ಪ್ರಮುಖ ಗೂಢಚಾರ ಜಾಲವನ್ನು ಭೇದಿಸಿದ್ದು, 11 ಜನರನ್ನು ಬಂಧಿಸಿದ್ದಾರೆ. ಐಎಸ್ಐ ಜೊತೆಗೆ ಮಾತ್ರವಲ್ಲದೆ ಈ ಗೂಢಚಾರ ಜಾಲವು ನಿಷೇಧಿತ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ನೊಂದಿಗೆ ಸಂಪರ್ಕ ಹೊಂದಿದೆ ಎಂದು ಮಾಹಿತಿ ಲಭ್ಯವಾಗಿದೆ. ದೆಹಲಿ ಮತ್ತು ಪಂಜಾಬ್ನ ವಿವಿಧ ಸ್ಥಳಗಳಿಂದ 11 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಇವರು ದೇಶದ ವಿವಿಧ ಭಾಗಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಈ ಗುಂಪು ದೇಶದ ವಿವಿಧ ಭಾಗಗಳಲ್ಲಿ ಸಕ್ರಿಯವಾಗಿದ್ದು, ಬೇಹುಗಾರಿಕೆ ಗುಂಪಾಗಿ ಮಾತ್ರವಲ್ಲದೆ ಭಯೋತ್ಪಾದಕ ಘಟಕವಾಗಿಯೂ ಕಾರ್ಯನಿರ್ವಹಿಸುತ್ತಿತ್ತು. ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ದೇಶಾದ್ಯಂತ 9 ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರು ಎಂದು ತಿಳಿದುಬಂದಿದೆ. ಕಥುವಾದಿಂದ ಉತ್ತರ ಭಾರತದವರೆಗಿನ ಹಲವಾರು ಮಿಲಿಟರಿ ಪ್ರದೇಶಗಳಲ್ಲಿ ಬೇಹುಗಾರಿಕೆ ನಡೆಸಲಾಗುತ್ತಿತ್ತು.
VIDEO | Delhi Police Special Cell busted an inter-state terror, arms and espionage module linked to ISI-BKI, arresting 11 accused from Punjab and Delhi. Nine solar-powered CCTV cameras installed near sensitive locations, along with 4 pistols and 24 cartridges, were recovered, and… pic.twitter.com/M8xoKFMEH0
ಈ ಜಾಲವು ಮಿಲಿಟರಿ ನೆಲೆಗಳು, ರೈಲು ನಿಲ್ದಾಣಗಳು ಮತ್ತು ಇತರ ಸೂಕ್ಷ್ಮ ಪ್ರದೇಶಗಳ ಡೇಟಾ, ಸ್ಥಳ, ಫೋಟೋಗಳು ಮತ್ತು ವಿಡಿಯೋಗಳನ್ನು ಸಂಗ್ರಹಿಸಿ ಪಾಕಿಸ್ತಾನಕ್ಕೆ ಕಳುಹಿಸುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಇದಲ್ಲದೆ, ಈ ಆರೋಪಿಗಳು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ತರಲು ಪ್ರಯತ್ನಿಸುತ್ತಿದ್ದರು. ತನಿಖಾ ಸಂಸ್ಥೆಗಳ ಪ್ರಕಾರ, ಆರೋಪಿಗಳು ಕಂಟೋನ್ಮೆಂಟ್ ಮತ್ತು ರೈಲ್ವೆ ನಿಲ್ದಾಣದಂತಹ ಸೂಕ್ಷ್ಮ ಸ್ಥಳಗಳಲ್ಲಿ ಸೌರಶಕ್ತಿ ಚಾಲಿತ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಈ ಕ್ಯಾಮೆರಾಗಳಿಂದ ಲೈವ್ ಫೀಡ್ಗಳನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಹುಭಾಷೆಯಲ್ಲಿ ಬಿಡುಗಡೆ ಆಗಲಿರುವ ‘ಅದಿತಿ’ ಸಿನಿಮಾದಲ್ಲಿ ಒಂದು ಡಿಫರೆಂಟ್ ಪ್ರಯತ್ನ ಮಾಡಲಾಗಿದೆ. ಇಡೀ ಸಿನಿಮಾವನ್ನು ಕೇವಲ 5 ಶಾಟ್ಗಳಲ್ಲಿ ಚಿತ್ರಿಸಲಾಗಿದೆ. ಇದು ನಿಜಕ್ಕೂ ಸವಾಲಿನ ಕೆಲಸ. ಆ ಮೂಲಕ ‘ಅದಿತಿ’ ಸಿನಿಮಾ (Aditi Movie) ಕುತೂಹಲ ಮೂಡಿದೆ. ಅಂದಹಾಗೆ, ಈ ಸಿನಿಮಾದಲ್ಲಿ ಮಹಿಳಾ ಪ್ರಧಾನ ಕಥಾಹಂದರ ಇದೆ. ಬಹುತೇಕ ಮಹಿಳೆಯರೇ ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ‘ಅದಿತಿ’ ಸಿನಿಮಾದ ಟೀಸರ್ (Teaser) ಬಿಡುಗಡೆ ಮಾಡಲಾಯಿತು. ಈ ಚಿತ್ರದ ಶೀರ್ಷಿಕೆಗೆ ‘ಲಿಬರ್ಟಿ’ ಎಂಬ ಟ್ಯಾಗ್ಲೈನ್ ಇದೆ.
‘ಮಿಲೆನಿಯಮ್ ಆಡ್ ಮೀಡಿಯಾ’ ಮೂಲಕ ‘ಅದಿತಿ’ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾಗೆ ನೆಲ್ಸನ್ ರೋಜರ್ಸ್ ಡಬ್ಲ್ಯೂ. ಮತ್ತು ಸೋಲೋಮನ್ ಕೆ. ಜಾರ್ಜ್ ಅವರು ನಿರ್ದೇಶನ ಮಾಡಿದ್ದಾರೆ. ವ್ಯಾಲೆರಿನಾ ಮರಿಯಾ ರೋಜರ್ಸ್ ಮತ್ತು ನೆಲ್ಸನ್ ರೋಜರ್ಸ್ ಡಬ್ಲ್ಯೂ. ಅವರು ಬಂಡವಾಳ ಹೂಡಿದ್ದಾರೆ. ನೆಲ್ಸನ್ ರೋಜರ್ಸ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ.
ಈ ಸಿನಿಮಾದ ಪ್ರಚಾರದ ಮೊದಲ ಹಂತವಾಗಿ ಹಾಡುಗಳು, ಟೀಸರ್ ಬಿಡುಗಡೆ ಮಾಡಲಾಗಿದೆ. ಅಲ್ಲದೇ, ವೈ2ಕೆ ಮ್ಯೂಸಿಕ್ ಆಡಿಯೋ ಕಂಪನಿ ಲೋಗೋ ಅನಾವರಣ ಸಮಾರಂಭವು ಕೂಡ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು. ‘ಆ ದಿನಗಳು’ ಖ್ಯಾತಿಯ ಚೇತನ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ‘ಅದಿತಿ’ ಚಿತ್ರತಂಡಕ್ಕೆ ವಿಶ್ ಮಾಡಿದರು.
ಇಶಾನಾ, ಹರ್ಷಿತಾ ಕಲ್ಲಿಂಗಲ್, ಆರತಿ, ನಿಸರ್ಗ ಮಂಜುನಾಥ್, ಯಶಾ, ಸುನಿಲ್, ಡ್ಯಾನಿ ಕುಟ್ಟಪ್ಪ, ಅಜಿತ್ ಕುಮಾರ್, ಗೋಪಿ ಮುಂತಾದವರು ‘ಅದಿತಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕರು ಈ ಸಿನಿಮಾದ ವಿಶೇಷತೆಗಳ ಬಗ್ಗೆ ತಿಳಿಸಿದರು. ಈ ಸಿನಿಮಾದಲ್ಲಿ ಒಂದು ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಇದೆ ಎಂದು ಅವರು ಹೇಳಿದರು.
‘ಈ ಸಿನಿಮಾವನ್ನು ಕೇವಲ 5 ಶಾಟ್ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರತಿಯೊಂದು ದೃಶ್ಯಗಳು 20-25 ನಿಮಿಷ ಇರುತ್ತದೆ. ಇದಕ್ಕಾಗಿ ತಿಂಗಳುಗಟ್ಟಲೆ ಕಲಾವಿದರಿಗೆ ತರಬೇತಿ ನೀಡಿದ್ದೇವೆ. ಹಿರಿಯ ಛಾಯಾಗ್ರಾಹಕ ಪಿ.ಕೆ.ಹೆಚ್. ದಾಸ್ ಅವರ ಸಲಹೆ, ಸಹಕಾರ ನೀಡುವುದಲ್ಲದೇ ಬಹಳ ಚೆನ್ನಾಗಿ ಶಾಟ್ಸ್ ಸೆರೆ ಹಿಡಿದುಕೊಟ್ಟಿದ್ದಾರೆ. ಕನ್ನಡದ ಜೊತೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕೊಂಕಣಿ ಭಾಷೆಗಳಲ್ಲಿ ಸಿನಿಮಾವು ಏಕಕಾಲಕ್ಕೆ ಬರಲಿದೆ’ ಎಂದು ಅವರು ಹೇಳಿದರು.
‘ಅದಿತಿ’ ಸಿನಿಮಾದ ಟೀಸರ್:
ಈ ಚಿತ್ರದ ಎಲ್ಲ ಭಾಷೆಯ ಅವತರಣಿಕೆಗಳಿಗೆ ಮಹಿಳೆಯರೇ ಸಂಭಾಷಣೆ ಬರೆದಿದ್ದಾರೆ. ಕನ್ನಡದಲ್ಲಿ ಕುಮುದಹಳ್ಳಿ ಅರುಣ್ಮೂರ್ತಿ ಅವರ ಸಂಭಾಷಣೆ ಇರಲಿದೆ. ಗ್ಲಾಮರಸ್ ಹಾಡುಗಳಿಗೆ ಪ್ರಿಯಾ ಮಾಲಿ, ಚೇತನ ನಾಯಕ್ ಧ್ವನಿಯಾಗಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ರಮೇಶ್ ಕೃಷ್ಣ, ಕೃಷ್ಣ ಪ್ರಿಯದರ್ಶನ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೊನೆ ಹಂತದ ಛಾಯಾಗ್ರಹಣವನ್ನು ವೆಂಕಟೇಶ್ ಆರ್. ಮಾಡಿದ್ದಾರೆ. ಸೋಲೋಮನ್ ಕೆ. ಜಾರ್ಜ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.
ಬೆಂಗಳೂರು, (ಏಪ್ರಿಲ್ 10): ದಾವಣಗೆರೆ ದಕ್ಷಿಣ ಉಪ ಚುನಾವಣೆ (Davanagere By Election) ಮುಗಿದರೂ ಸಹ ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿನ (Congress Muslim Leaders) ಕಿಚ್ಚು ತಣ್ಣಗಾಗಿಲ್ಲ. ಬದಲಾಗಿ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಹೌದು…ಬೈ ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ದಾವಣಗೆರೆ ಚುನಾವಣೆಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ನಜೀರ್ ಅಹಮದ್, ಅಬ್ದುಲ್ ಜಬ್ಬರ್ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ ಆರೋಪ ಕೇಳಿಬಂದಿದೆ. ಈ ಸಂಬಂಧ ಕಾಂಗ್ರೆಸ್ ಮುಸ್ಲಿಂ ನಾಯಕರು ರಣದೀಪ್ ಸುರ್ಜೇವಾಲಗೆ ದೂರು ನೀಡಿದ್ದಾರೆ. ಇದರೊಂದಿಗೆ ಟಿಕೆಟ್ ವಿಚಾರವಾಗಿ ಮುಸ್ಲಿಂ ನಾಯಕರಲ್ಲಿ ಇದ್ದ ಭಿನ್ನಾಭಿಪ್ರಾಯ ಇದೀಗ ಅಧಿಕೃತವಾಗಿ ಹೊರಬಿದ್ದಿದೆ. ಅದರಲ್ಲೂ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ತೀವ್ರ ಅಸಮಾಧಾನ ಇರುವುದು ಬಹಿರಂಗವಾದಂತಾಗಿದೆ.
ಜಮೀರ್ ಅಹ್ಮದ್ ವಿರುದ್ಧ ಗಂಭೀರ ಆರೋಪ
ಶಾಸಕರಾದ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್, ಯಾಸಿನ್ ಖಾನ್ ಪಠಾಣ್ ಹಾಗೂ ಬಿಲ್ಕೀಸ್ ಬಾನು ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಕೆಲವೊಂದು ಸ್ಫೋಟಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಚಿವ ಜಮೀರ್ ಏಕಚಕ್ರಾಧಿಪತ್ಯದ ವಿರುದ್ಧ ಸೆಡ್ಡು ಹೊಡೆದಿರೋ ಕೆಲ ಅಲ್ಪಸಂಖ್ಯಾತ ನಾಯಕರು, ದಾವಣಗೆರೆ ಬೈಎಲೆಕ್ಷನ್ನಲ್ಲಿ ಕೆಲಸ ಮಾಡಿದವರಿಗೆ ಕೂಲಿ ಕೊಡಿ ಅಂತಿದ್ದಾರೆ. ಕೆಲಸ ಮಾಡಿದವರ ಲೆಕ್ಕ ಇಡಿ ಅಂತಿದ್ದು, ಪ್ರಾರಂಭದಲ್ಲಿ ಬೈಲೆಕ್ಷನ್ನಿಂದ ದೂರ ಉಳಿದಿದ್ದ ಜಮೀರ್ ವಿರುದ್ಧ ಪರೋಕ್ಷವಾಗಿಯೇ ರಿಜ್ವಾನ್ ಅರ್ಷದ್, ಸಲೀಂ ಅಹಮ್ಮದ್ ಜೋಡಿ ಗುಡುಗಿದೆ. ಹೌದು..ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಸಮರ್ಥ್ಗೆ ಒಪ್ಪಿಗೆ ನೀಡಿದ್ವಿ. ಆನಂತರ ಪಕ್ಷಕ್ಕೆ ಕೊಟ್ಟ ಮಾತಿನಂತೆ ನಾವು ಕೆಲಸ ಮಾಡಿದ್ದೇವೆ. ಆದ್ರೆ, ಕೆಲವರು ಕೆಲಸ ಮಾಡಿಲ್ಲ ಎಂದು ಶಾಸಕ ರಿಜ್ವಾನ್ ಅರ್ಷದ್ ಪರೋಕ್ಷವಾಗಿಯೇ ಸಚಿವ ಜಮೀರ್ ಅಹಮ್ಮದ್ ಖಾನ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಾವೆಲ್ಲಾ ಒಗ್ಗೂಡಿ ಕೆಲಸ ಮಾಡಿದ್ದೇವೆ ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ. ಆದ್ರೆ ಪಟ್ಟಿಯಲ್ಲಿ ಸಚಿವ ಜಮೀರ್ ಹೆಸರು ಇಲ್ಲ. ವಿರೋಧ ಪಕ್ಷದವರ ಜೊತೆಗೂಡಿ ಪಕ್ಷದ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಕಾಂಗ್ರೆಸ್ ಸೋಲಿಸೋಕೆ ಕೆಲ ಪಕ್ಷದ ಮುಖಂಡರೇ ಹುನ್ನಾರ ಮಾಡಿದ್ರು ಎಂದು ರಿಜ್ವಾನ್, ಸಲೀಂ ಅಹ್ಮದ್ ಗಂಭೀರ ಆರೋಪ ಮಾಡಿದ್ದಾರೆ.
ಜಮೀರ್ ಅಹಮ್ಮದ್ ಖಾನ್ ಕೈಕೊಟ್ಟಿದ್ದಕ್ಕೆ ಪರಿಸ್ಥಿತಿ ಕೈ ಮೀರಿದಾಗ ಸಾದಿಕ್ನನ್ನ ಮನವೊಲಿಸಲು ರಿಜ್ವಾನ್ ಅರ್ಷದ್ ಮತ್ತು ಸಲೀಂ ಅಹ್ಮದ್ಗೆ ಜಬಾವ್ದಾರಿ ಕೊಡಲಾಗಿತ್ತು. ಸಿಎಂ, ಡಿಸಿಎಂ ಸೂಚನೆಯಂತೆಯೇ ಮುನಿಸು ಶಮನ ಮಾಡೋ ಕೆಲಸ ಇವರಿಬ್ಬರು ಮಾಡಿದ್ದರು. ಇದೀಗ ಜಮೀರ್ ವಿರುದ್ಧ ಕೆಲ ಮುಸ್ಲಿಂ ನಾಯಕರು ಸಿಡಿದೆದ್ದಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಹೈಕಮಾಂಡ್ಗೆ ದೂರು ನೀಡಿದ್ದಾರೆ.
ತೆರೆಮರೆಯಲ್ಲಿದ್ದ ಮುಸ್ಲಿಂ ನಾಯಕರ ಗುದ್ದಾಟ ಬಯಲಿಗೆ
ದಾವಣಗೆರೆ ದಕ್ಷಿಣ ಟಿಕೆಟ್ ಹಂಚಿಕೆ ವೇಳೆ ಅಲ್ಪಸಂಖ್ಯಾತರ ಮಧ್ಯೆ ಭಿನ್ನಾಭಿಪ್ರಾಯ ಬಂದಿತ್ತು. ಮುಸ್ಲಿಂ ನಾಯಕರಿಗೆ ಟಿಕೆಟ್ ಕೊಡಿಸುತ್ತೇನೆಂದು ಜಮೀರ್ ಭರವಸೆ ಕೊಟ್ಟಿದ್ದರು. ಆ ವೇಳೆ ತಾನೇ ಅಖಂಡ ಕರ್ನಾಟಕದ ಮುಸ್ಲಿಂ ಅಧಿಪತಿ ಎಂಬಂತೆ ಜಮೀರ್ ಅಬ್ಬರಿಸಿದ್ದರು. ಆದ್ರೆ ಪ್ರಯತ್ನಕ್ಕೆ ಸಹಕಾರ ಸಿಗದಿದ್ದರಿಂದ ಮುಸ್ಲಿಂ ನಾಯಕರಿಗೆ ದಾವಣಗೆರೆ ದಕ್ಷಿಣದಲ್ಲಿ ಟಿಕೆಟ್ ಸಿಗಲೇ ಇಲ್ಲ. ಹೀಗಾಗಿ ಟಿಕೆಟ್ ಕೊಡಿಸುತ್ತೇನೆಂದುಭರವಸೆ ಕೊಟ್ಟಿದ್ದ ಜಮೀರ್ ಅಂತರ ಕಾಯ್ದುಕೊಂಡ್ರು. ದಾವಣಗೆರೆ ದಕ್ಷಿಣದಿಂದ ದೂರ ಉಳಿದಿದ್ದು, ಇದು ಕೆಲ ಅಲ್ಪಸಂಖ್ಯಾತ ಮುಖಂಡರಿಗೆ ಸಿಟ್ಟು ತರಿಸಿತ್ತು. ಹೀಗೆ ತೆರೆಮರೆಯಲ್ಲೇ ನಡೆದಿದ್ದ ಮುಸ್ಲಿಂ ನಾಯಕರ ಗುದ್ದಾಟ ಈಗ ಬಹಿರಂಗವಾಗಿ ಹೊರಬಂದಂತಾಗಿದೆ.
ದಾವಣಗೆರೆ ಬಂದು ಹಿಂಬಾಗಿಲಿನಿಂದ ಹೋಗಿದ್ದ ಜಮಿರ್
ಟಿಕೆಟ್ ಘೋಷಣೆಯಾದ ಬಳಿಕ ಜಮೀರ್ ಅಹಮ್ಮದ್ ಖಾನ್ ದಾವಣಗೆರೆ ಕಡೆ ಮುಖ ಹಾಕಿಲ್ಲ. ಕೇರಳ ಚುನಾವಣೆ ನೆಪ ಮಾಡಿಕೊಂಡು ಅಲ್ಲಿಯೇ ಠಿಕಾಣಿ ಹೂಡಿದ್ದರು. ಇತ್ತ ಅಭಿಮಾನಿಗಳು ಹಾಗೂ ಮುಸ್ಲಿಂ ಕಾರ್ಯಕರ್ತರು ಜಮೀರ್ ಕರೆಯಿಸಿ ಎಂದು ಡಿಕೆಶಿ, ಸಿದ್ದರಾಮಯ್ಯ ಹೋದಲೆಲ್ಲ ಪಟ್ಟು ಹಿಡಿದಿದ್ದರು. ಕೊನೆಗೆ ಸಿಎಂ ಸೂಚನೆಯಂತೆ ಜಮೀರ್ ಕೇಳದಿಂದ ದಾವಣಗೆರೆಗೆ ಹಾರಿಬಂದಿದ್ದು, ಎಸ್ಎಸ್ ಮಲ್ಲಿಕಾರ್ಜುನ ಮನೆಯಲ್ಲಿ ಊಟ ಸವಿದು ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹಿಂಬಾಗಿಲಿನಿಂದ ಹೋಗಿದ್ದು, ಮತ್ತೆ ದಾವಣಗೆರೆ ಕಡೆ ತಲೆ ಹಾಕಲೇ ಇಲ್ಲ. ಆದ್ರೆ, ದಾವಣಗೆರೆಯಲ್ಲಿ ಪ್ರಚಾರ ಮಾಡದೇ ನೇರವಾಗಿ ಬಾಗಲಕೋಟೆಯಲ್ಲಿ ಎರಡು ದಿನ ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಇದು ಸಹ ಕೆಲ ನಾಯಕರ ಕಣ್ಣು ಕೆಂಪಾಗಿಸಿದೆ.
ರಿಸಲ್ಟ್ ಮೇಲೆ ನಿಂತಿದೆ ಮುಂದಿನ ಬೆಳವಣಿಗೆ
ಹೌದು….ಜಮೀರ್ ಅಹಮ್ಮದ್ ಖಾನ್ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ ಎಂದು ಸ್ವತಃ ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಒಂದು ವೇಳೆ ಫಲಿತಾಂಶ ಪರವಾಗಿ ಬಂದರೆ ಅಸಮಾಧಾನ ಕೊಂಚ ತಣ್ಣಗಾಗುತ್ತೆ. ಒಂದು ವೇಳೆ ರಿಸಲ್ಟ್ ವ್ಯತರಿಕ್ತವಾಗಿ ಅಂದರೆ ಸಮರ್ಥ್ ಸೋತರೆ ಭಿನ್ನಮತ ಮತ್ತಷ್ಟು ಸ್ಫೋಟಗೊಳ್ಳಲಿದೆ. ಜಮೀರ್ ವಿರೋಧ ಮುಸ್ಲಿಂ ನಾಯಕರ ಮಾತ್ರವಲ್ಲ ಎಸ್ಎಸ್ ಮಲ್ಲಿಕಾರ್ಜುನ ಸೇರಿದಂತೆ ಹಲವು ಲಿಂಗಾಯರ ನಾಯಕರು ಸಹ ಜಮೀರ್ ಮೇಲೆ ಮುಗಿಬೀಳುವ ಸಾಧ್ಯತೆಗಳಿದ್ದು, ದಾವಣಗೆರೆ ದಂಗಲ್ ತೀವ್ರ ಸ್ವರೂಪ ಪಡೆದುಕೊಳ್ಳುವುದು ಗ್ಯಾರಂಟಿ.
ಕಾಂಗ್ರೆಸ್ ಪಕ್ಷದ ಮುಸ್ಲಿಂ ನಾಯಕರ ನಡುವಿನ ಭಿನ್ನಮತ ಸ್ಫೋಟಗೊಂಡಿದ್ದು, ಮುಸ್ಲಿಂ ನಾಯಕರ ನಡುವೆ ಎರಡು ಬಣಗಳು ಸೃಷ್ಟಿಯಾಗಿದೆ. ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಬಂದು ನಿಲ್ಲಲಿದೆ ಎನ್ನುವುದನ್ನು ಕಾದುನೋಡಬೇಕಿದೆ.