ಪಾಸ್‌ಪೋರ್ಟ್ ಬೇಡ, ಮುಖ ಸ್ಕ್ಯಾನ್ ಮಾಡಿದ್ರೆ ಸಾಕು: ಬೆಂಗಳೂರು ವಿಮಾನ ನಿಲ್ದಾದಲ್ಲಿ ಹೊಸ ಮೈಲಿಗಲ್ಲು

ಪಾಸ್‌ಪೋರ್ಟ್ ಬೇಡ, ಮುಖ ಸ್ಕ್ಯಾನ್ ಮಾಡಿದ್ರೆ ಸಾಕು: ಬೆಂಗಳೂರು ವಿಮಾನ ನಿಲ್ದಾದಲ್ಲಿ ಹೊಸ ಮೈಲಿಗಲ್ಲು

ಬೆಂಗಳೂರು, ಏಪ್ರಿಲ್​​ 09: ದೇಶೀಯ ವಿಮಾನ ಪ್ರಯಾಣಿಕರಿಗೆ ಈಗಾಗಲೇ ಅತ್ಯಾಧುನಿಕ ‘ಡಿಜಿ ಯಾತ್ರಾ’ ಸೌಲಭ್ಯವನ್ನು ಒದಗಿಸುತ್ತಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA), ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಮುಖಚಹರೆ (Biometric) ಆಧಾರಿತ ಸ್ಪರ್ಶರಹಿತ ಪ್ರಯಾಣದ ಅನುಭವ ನೀಡಲು ಸಜ್ಜಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL), ಇಂಡಿಗೋ, ಡಿಜಿ ಯಾತ್ರಾ ಫೌಂಡೇಶನ್ ಹಾಗೂ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆ (IATA) ಜಂಟಿಯಾಗಿ, ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಟಿಕೆಟ್ ಬುಕಿಂಗ್‌ನಿಂದ ಹಿಡಿದು ಬೋರ್ಡಿಂಗ್‌ವರೆಗಿನ ಸಂಪೂರ್ಣ ಸಂಪರ್ಕರಹಿತ ಪ್ರಯಾಣದ ತಾಂತ್ರಿಕ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿವೆ.

ಭಾರತದಲ್ಲಿ ಇದೇ ಮೊದಲು!

ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂತಹದೊಂದು ವಿನೂತನ ಪ್ರಯೋಗ ನಡೆದಿದ್ದು, ಜಾಗತಿಕ ಮಟ್ಟದಲ್ಲಿ ತಡೆರಹಿತ ವಿಮಾನ ಪ್ರಯಾಣ ವ್ಯವಸ್ಥೆಯ ಅನುಷ್ಠಾನದತ್ತ ಇದು ಮಹತ್ವದ ಹೆಜ್ಜೆ ಎಂದೇ ಪರಿಗಣಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಇಂಡಿಗೋ ಹಾಗೂ ಡಿಜಿ ಯಾತ್ರಾ ಫೌಂಡೇಶನ್ ಸಂಸ್ಥೆಗಳು, ಪ್ರಯಾಣಿಕರ ದತ್ತಾಂಶ ಸುರಕ್ಷತೆಗಾಗಿ ‘ಸೆಲ್ಫ್-ಸೋವರಿನ್ ಐಡೆಂಟಿಟಿ’ (ಎಸ್‌ಎಸ್‌ಐ) ಎಂಬ ಸ್ವಯಂ-ಗುರುತು ವ್ಯವಸ್ಥೆ ಹಾಗೂ ಬೋರ್ಡಿಂಗ್ ಪಾಸ್‌ಗಳನ್ನು ಸುಲಭವಾಗಿ ವರ್ಗಾಯಿಸಲು ‘ಆ್ಯಪ್-ಟು-ಆ್ಯಪ್’ ತಂತ್ರಜ್ಞಾನವನ್ನು ಪರಿಚಯಿಸಿದ್ದವು. ಇದೇ ಯಶಸ್ವಿ ಮಾದರಿಯನ್ನು ಇದೀಗ ಬಿಐಎಎಲ್ ನೆರವಿನೊಂದಿಗೆ ಅಂತಾರಾಷ್ಟ್ರೀಯ ಪ್ರಯಾಣಕ್ಕೂ ವಿಸ್ತರಿಸಿ, ಅದರ ಕಾರ್ಯಸಾಧ್ಯತೆಯನ್ನು ಯಶಸ್ವಿಯಾಗಿ ಸಾಬೀತುಪಡಿಸಲಾಗಿದೆ.

ಇದನ್ನೂ ಓದಿ: ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ..!

ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಈ ತಂತ್ರಜ್ಞಾನದ ಅಳವಡಿಕೆಯು ಪ್ರಯಾಣದ ಸಮಯವನ್ನು ಉಳಿಸುವುದಲ್ಲದೆ, ಭದ್ರತೆಯನ್ನೂ ಹೆಚ್ಚಿಸಲಿದೆ. ವಿಶೇಷವೆಂದರೆ, ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಜಾರಿಗೆ ತರುವ ಈ ಪ್ರತಿಷ್ಠಿತ ಯೋಜನೆಯಲ್ಲಿ ಪಾಲ್ಗೊಂಡಿರುವ ಭಾರತದ ಏಕೈಕ ಏರ್​​ಪೋರ್ಟ್​​ಎಂಬ ಹೆಗ್ಗಳಿಕೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ.

ಕಾರ್ಯನಿರ್ವಹಣೆ ಹೇಗೆ?

ಪ್ರಯಾಣಿಕರ ಗುರುತನ್ನು ಮುಂಚಿತವಾಗಿಯೇ ಸುರಕ್ಷಿತವಾಗಿ ದೃಢೀಕರಿಸಿ, ವಿಮಾನ ನಿಲ್ದಾಣದ ಎಲ್ಲಾ ಹಂತಗಳಲ್ಲಿ ಮುಖ ಗುರುತಿನ (ಫೇಸ್ ರೆಕಗ್ನಿಷನ್) ಮೂಲಕ ಪರಿಶೀಲಿಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಈ ವ್ಯವಸ್ಥೆ ಟಿಕೆಟ್ ಬುಕ್ಕಿಂಗ್‌ನಿಂದ ಹಿಡಿದು ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸುವವರೆಗಿನ ಸಂಪೂರ್ಣ ಪ್ರಯಾಣವನ್ನು ಒಳಗೊಂಡಿದೆ. ಎಲ್ಲಾ ಭದ್ರತಾ ತಪಾಸಣೆಗಳಲ್ಲಿ ಬಯೋಮೆಟ್ರಿಕ್ ತಂತ್ರಜ್ಞಾನ ಬಳಸಲಾಗಿದೆ. ಆ ಮೂಲಕ ಇನ್ನು ಮುಂದೆ ಪಾಸ್‌ಪೋರ್ಟ್ ಅಥವಾ ಬೋರ್ಡಿಂಗ್ ಪಾಸ್ ತೋರಿಸುವ ಬದಲು, ಪ್ರಯಾಣಿಕರು ತಮ್ಮ ಮುಖವನ್ನು ಸ್ಕ್ಯಾನ್ ಮಾಡಿಸುವ ಮೂಲಕ ಸುಲಭವಾಗಿ ಪ್ರಯಾಣ ಮಾಡಬಹುದಾಗಿದೆ.

ಈ ತಂತ್ರಜ್ಞಾನ ‘ಸೆಲ್ಫ್-ಸೋವೆರಿನ್ ಐಡೆಂಟಿಟಿ’ (SSI) ಮಾದರಿಯನ್ವಯ ಕೆಲಸ ಮಾಡಲಿದೆ. ಇದರಿಂದ ವ್ಯಕ್ತಿಯ ಗುರುತು ಸುರಕ್ಷಿತವಾಗಿ ಸಂಗ್ರಹವಾಗಿದ್ದು, ತಕ್ಷಣವೇ ವಿವಿಧ ವ್ಯವಸ್ಥೆಗಳ ಮೂಲಕ ಪರಿಶೀಲನೆಗೊಳಗಾಗುತ್ತದೆ. ಇದಲ್ಲದೆ, ಏರ್‌ಲೈನ್ ಆ್ಯಪ್‌ಗಳು ಮತ್ತು ವಿಮಾನ ನಿಲ್ದಾಣ ವ್ಯವಸ್ಥೆಗಳು ಪರಸ್ಪರ ಸಂಪರ್ಕ ಹೊಂದಿದ್ದು, ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ಮತ್ತು ಪ್ರಯಾಣ ವಿವರಗಳು ಸ್ವಯಂಚಾಲಿತವಾಗಿ ಲಭ್ಯವಾಗುತ್ತವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೆಲ ಮನೆಗಳಲ್ಲಿ ನೀರು ತುಂಬಿದ ಲೋಟದೊಳಗೆ ನಿಂಬೆಹಣ್ಣು ಇಟ್ಟಿರುವುದನ್ನು ನೋಡಿದ್ದೀರಾ? ಅದರ ಅದ್ಭುತ ಲಾಭಗಳೇನು ಗೊತ್ತಾ?

ನಮ್ಮ ಸುತ್ತಮುತ್ತಲಿನ ವಾತಾವರಣವು ಮನಸ್ಸು ಮತ್ತು ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಮನೆಯಲ್ಲಿ ಸಕಾರಾತ್ಮಕತೆ ಇದ್ದರೆ ಮಾತ್ರ ನೆಮ್ಮದಿ ನೆಲೆಸಲು ಸಾಧ್ಯ. ವಾಸ್ತು ಶಾಸ್ತ್ರ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ನಿಂಬೆಹಣ್ಣು ಕೇವಲ ಆಹಾರ ಪದಾರ್ಥವಲ್ಲ, ಅದು ನಕಾರಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುವ ಅದ್ಭುತ ಶಕ್ತಿಯನ್ನು ಹೊಂದಿದೆ. ನೀವು ಜೀವನದಲ್ಲಿ ಸಣ್ಣಪುಟ್ಟ ಅಡೆತಡೆಗಳಿಂದ ಬೇಸತ್ತಿದ್ದರೆ, ಈ ಕೆಳಗಿನ ಸರಳ ಹಾಗೂ ಪ್ರಭಾವಶಾಲಿ ವಾಸ್ತು ಸಲಹೆಯನ್ನು ಒಮ್ಮೆ ಪ್ರಯತ್ನಿಸಿ ನೋಡಿ.

ಈ ಪರಿಹಾರವನ್ನು ಮಾಡುವುದು ಹೇಗೆ?

ಒಂದು ಶುದ್ಧವಾದ ಮತ್ತು ಪಾರದರ್ಶಕವಾದ ಗಾಜಿನ ಲೋಟವನ್ನು ತೆಗೆದುಕೊಳ್ಳಿ. ಅದರಲ್ಲಿ ಶುದ್ಧವಾದ ನೀರನ್ನು ತುಂಬಿಸಿ. ಒಂದು ತಾಜಾ ಹಳದಿ ನಿಂಬೆಹಣ್ಣನ್ನು ಆ ನೀರಿನೊಳಗೆ ಹಾಕಿ. ಈ ಲೋಟವನ್ನು ನಿಮ್ಮ ಮನೆ ಅಥವಾ ಕಚೇರಿಯ ಸಭಾಂಗಣದಲ್ಲಿ (Hall) ಎಲ್ಲರಿಗೂ ಕಾಣಿಸುವಂತಹ ಜಾಗದಲ್ಲಿ ಇರಿಸಿ. ಪ್ರತಿ ಶನಿವಾರ ಅಥವಾ ಮಂಗಳವಾರ ಈ ನೀರನ್ನು ಬದಲಾಯಿಸಿ, ಹಳೆಯ ನಿಂಬೆಹಣ್ಣನ್ನು ಹೊರಹಾಕಿ ಹೊಸ ನಿಂಬೆಹಣ್ಣನ್ನು ಇಡುವುದು ಅತ್ಯಂತ ಶುಭ.

ಈ ಪರಿಹಾರದಿಂದ ದೂರವಾಗುವ ಸಮಸ್ಯೆಗಳು:

ಕಾರಣವಿಲ್ಲದೆ ಕುಟುಂಬ ಸದಸ್ಯರ ನಡುವೆ ಸಣ್ಣ ವಿಷಯಗಳಿಗೂ ಜಗಳವಾಗುತ್ತಿದ್ದರೆ, ಈ ನಿಂಬೆಹಣ್ಣಿನ ನೀರು ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ನಿರ್ಮಿಸುತ್ತದೆ. ವ್ಯಾಪಾರ ಸ್ಥಳದಲ್ಲಿ ಅಥವಾ ನಿಮ್ಮ ಆಫೀಸ್ ಟೇಬಲ್ ಮೇಲೆ ಈ ರೀತಿ ನಿಂಬೆಹಣ್ಣನ್ನು ಇಡುವುದರಿಂದ ಜನರ ಕೆಟ್ಟ ದೃಷ್ಟಿ ದೂರವಾಗಿ, ಲಾಭದ ಹಾದಿ ಸುಗಮವಾಗುತ್ತದೆ. ಇದಲ್ಲದೇ ಬೇರೆಯವರ ದುಷ್ಟ ಕಣ್ಣಿನಿಂದ (Evil Eye) ನಿಮ್ಮ ಕೆಲಸಗಳು ಅರ್ಧಕ್ಕೆ ನಿಂತುಹೋಗುತ್ತಿದ್ದರೆ ಅಥವಾ ಮನೆಯಲ್ಲಿ ಯಾರಾದರೂ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೆ ಇದು ರಾಮಬಾಣದಂತೆ ಕೆಲಸ ಮಾಡುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಮನೆಗೆ ಬಂದ ಕೂಡಲೇ ಅಕಾರಣ ಭಯ ಅಥವಾ ಒತ್ತಡ ಉಂಟಾಗುತ್ತಿದ್ದರೆ, ಈ ಪರಿಹಾರವು ಮನೆಯೊಳಗೆ ಸಕಾರಾತ್ಮಕ ಕಂಪನಗಳನ್ನು (Positive Vibrations) ಸೃಷ್ಟಿಸಿ ಮನಸ್ಸನ್ನು ಶಾಂತಗೊಳಿಸುತ್ತದೆ. ರಾತ್ರಿ ವೇಳೆ ಕೆಟ್ಟ ಕನಸು ಬೀಳುವವರು ಅಥವಾ ಮನೆಯಲ್ಲಿ ಯಾರೋ ಇದ್ದಾರೆ ಎಂಬ ಭ್ರಮೆಯಿರುವವರು ಈ ಪದ್ಧತಿಯನ್ನು ಅನುಸರಿಸುವುದರಿಂದ ಮಾನಸಿಕ ಧೈರ್ಯ ಹೆಚ್ಚುತ್ತದೆ.

ಯಾಕೆ ಈ ಪರಿಹಾರ ಮುಖ್ಯ?

ವಿಜ್ಞಾನದ ಪ್ರಕಾರವೂ ನಿಂಬೆಹಣ್ಣು ತನ್ನ ಸುವಾಸನೆಯಿಂದ ಪರಿಸರವನ್ನು ತಾಜಾವಾಗಿಡುತ್ತದೆ. ಆಧ್ಯಾತ್ಮಿಕವಾಗಿ, ನಿಂಬೆಹಣ್ಣು ನಕಾರಾತ್ಮಕ ಶಕ್ತಿಯನ್ನು ತನ್ನೊಳಗೆ ಎಳೆದುಕೊಂಡು ವಾತಾವರಣವನ್ನು ಶುದ್ಧೀಕರಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮುಖಾಮುಖಿ ಆಗಲಿವೆ ‘ಧುರಂಧರ್ 2’-‘ಟಾಕ್ಸಿಕ್’; ಹೇಗೆ?

‘ಧುರಂಧರ್ 2’ ಹಾಗೂ ‘ಟಾಕ್ಸಿಕ್’ ನಡುವೆ ಕ್ಲ್ಯಾಶ್ ಆಗಲಿದೆ ಎಂಬ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಯಾವಾಗ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಮುಂದಕ್ಕೆ ಹೋಯಿತೋ ಆಗ ಈ ಚರ್ಚೆ ಕೂಡ ಕೊನೆ ಆಯಿತು. ಈಗ ‘ಧುರಂದರ್ 2’ ಹಾಗೂ ‘ಟಾಕ್ಸಿಕ್’ ಒಂದೇ ಸಮಯದಲ್ಲಿ ರಿಲೀಸ್ ಆಗಲಿವೆ! ಅರೆ ಇದೇನು ಅಂತೀರಾ? ಆ ಬಗ್ಗೆ ಇಲ್ಲಿದೆ ವಿವರ.

ರಣವೀರ್ ಸಿಂಗ್ ಹಾಗೂ ಆದಿತ್ಯ ಧಾರ್ ಅವರು ‘ಧುರಂಧರ್: ದಿ ರಿವೇಂಜ್’ ಮೂಲಕ ಹಲ್​ಚಲ್ ಸೃಷ್ಟಿಸಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್​​​ನಲ್ಲಿ ಧೂಳೆಬ್ಬಿಸಿದೆ. ಎಷ್ಟೇ ದೊಡ್ಡ ಬಜೆಟ್ ಸಿನಿಮಾ ಆದರೂ, ಎಷ್ಟೇ ಜನಪ್ರಿಯತೆ ಪಡೆದರೂ 50 ದಿನಗಳ ಬಳಿಕ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ. ಆದರೆ, ‘ಧುರಂಧರ್ 2’ ವಿಷಯದಲ್ಲಿ ಆ ರೀತಿ ಆಗುವುದಿಲ್ಲ ಎನ್ನಲಾಗಿದೆ. ಮಾರ್ಚ್ 19ರಲ್ಲಿ ರಣವೀರ್ ನಟನೆಯ ಈ ಸಿನಿಮಾ ರಿಲೀಸ್ ಆಗಿದೆ. ಎರಡು ತಿಂಗಳ ಅವಧಿ ಎಂದರೂ ಮೇ 15ಕ್ಕೆ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಬೇಕಿತ್ತು.

ಆದರೆ, ಒಟಿಟಿ ರಿಲೀಸ್ ಪ್ಲ್ಯಾನ್ ಬೇರೆಯದೇ ಇದೆ ಎನ್ನಲಾಗಿದೆ. ಸದ್ಯ ಎಲ್ಲೆಲ್ಲೂ ಐಪಿಎಲ್ ಹವಾ ಜೋರಾಗಿದೆ. ಐಪಿಎಲ್ ಜ್ವರ ಮೇ 31ರವರೆಗೆ ಇರಲಿದೆ. ಇದು ಸಿನಿಮಾ ಒಟಿಟಿ ರಿಲೀಸ್ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಲಾಗುತ್ತಾ ಇದೆ. ಐಪಿಎಲ್ ಪ್ರಸಾರ ಕಾಣುತ್ತಿರುವುದು ಜಿಯೋ ಹಾಟ್​ ಸ್ಟಾರ್​​ನಲ್ಲಿ. ಈ ಸಿನಿಮಾ ಪ್ರಸಾರ ಕಾಣೋದು ಕೂಡ ಇದೇ ಒಟಿಟಿಯಲ್ಲಿ.

‘ಧುರಂಧರ್ 2’ ಸಿನಿಮಾ ಥಿಯೇಟರ್​​​ನಲ್ಲಿ ಈಗಾಗಲೇ ಸಾಕಷ್ಟು ದಾಖಲೆಗಳನ್ನು ಬರೆದಿದೆ. ಈ ದಾಖಲೆಯನ್ನು ಒಟಿಟಿಯಲ್ಲಿಯೂ ‘ಬರೆಯಲು ಈ ಸಿನಿಮಾ ಸಿದ್ಧವಾಗಿದೆ. ಇದಕ್ಕೆ ಕ್ರಿಕೆಟ್ ಅಡ್ಡಿ ಆಗಬಹುದು ಎಂಬ ಭಯ ಇದೆ. ಹೀಗಾಗಿ, ಜೂನ್ 1ರ ಬಳಿಕ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಬಹುದು.

ಇದನ್ನೂ ಓದಿ: ಧುರಂಧರ್ ರಣವೀರ್ ಸಿಂಗ್ ಸಿನಿಮಾ ಎಂದು ಹೇಳಲು ಸಾಧ್ಯವಿಲ್ಲ; ಕರೀನಾ ಕಪೂರ್

ಜೂನ್ 4ರಂದು ‘ಟಾಕ್ಸಿಕ್’ ಸಿನಿಮಾ ಥಿಯೇಟರ್​ನಲ್ಲಿ ರಿಲೀಸ್ ಆಗುತ್ತಿದೆ. ಇದೇ ವೇಳೆ ‘ಧುರಂಧರ್ 2’ ಒಟಿಟಿಗೆ ಬಂದರೆ ಎರಡೂ ಸಿನಿಮಾಗಳ ಮಧ್ಯೆ ಸಣ್ಣ ಕ್ಲ್ಯಾಶ್ ಅನ್ನು ನಿರೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸ್ಮಾರ್ಟ್ ಆಗಿ ಪ್ಲಾನ್ ಮಾಡಿ; ಈ 4 ಹಣಕಾಸು ತಪ್ಪುಗಳನ್ನು ಮಾಡದಿರಿ

ಮಧ್ಯಮ ವರ್ಗದ ಜನರು ಶ್ರೀಮಂತಿಕೆ (wealthy) ಪಡೆಯುವುದು ಅಷ್ಟು ಸುಲಭದ ಸಂಗತಿಯಲ್ಲ. ಖರ್ಚು ಮಾಡಲು ನಾನಾ ಮಾರ್ಗಗಳು ತೆರೆದುಕೊಂಡಿರುವ ಇವತ್ತಿನ ಕಾಲಘಟ್ಟದಲ್ಲಿ ಹಣ ಉಳಿಸುವುದು ಬಹಳ ಕಷ್ಟದ ಕೆಲಸ. ಹಣದ ವಿಚಾರದಲ್ಲಿ ಎಸಗುವ ಒಂದು ತಪ್ಪು ಹಲವು ಸಂಪತ್ತು ಗಳಿಕೆಯನ್ನು ನಶಿಸುವಂತೆ ಮಾಡಬಲ್ಲುದು. ಮಧ್ಯಮ ವರ್ಗದ ಜನರು ಹಣವಂತರಾಗಬೇಕೆಂದರೆ ಕೆಲ ತಪ್ಪುಗಳಿಂದ ದೂರ ಇರುವುದು ಲೇಸು. ಈ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.

ಇತಿ ಮಿತಿ ಮೀರಿ ಹೋಗುವುದು…

ಹಾಸಿಗೆ ಇದ್ದಷ್ಟು ಕಾಲು ಚಾಚಿ ಎಂದು ದೊಡ್ಡವರು ಹೇಳುತ್ತಾರೆ. ನಮ್ಮ ಆದಾಯದ ಮಿತಿಯೊಳಗೆ ಎಲ್ಲಾ ಖರ್ಚು ವೆಚ್ಚ, ಹೂಡಿಕೆಗಳು ಇರಬೇಕು. ತೀರಾ ಅಗತ್ಯ ಇಲ್ಲದ ಐಷಾರಾಮಿ ವಸ್ತುಗಳಿಂದ ದೂರವೇ ಇರಿ. ಮೌಲ್ಯ ಕಡಿಮೆ ಆಗುವ ಸರಕುಗಳಿಗೆ ಹಣ ಹಾಕುವ ಬದಲು, ಈಕ್ವಿಟಿ, ಬಾಂಡ್, ಮ್ಯೂಚುವಲ್ ಫಂಡ್, ಗೋಲ್ಡ್, ಎಫ್​ಡಿ ಇತ್ಯಾದಿ ಮೌಲ್ಯವರ್ಧನೆಯ ಆಸ್ತಿಗಳಲ್ಲಿ ಹಣ ಹೂಡಿಕೆ ಮಾಡಿ.

ಇದನ್ನೂ ಓದಿ: ಪಿಪಿಎಫ್​ನಲ್ಲಿ ಕೇವಲ 1 ಪರ್ಸಂಟ್ ಬಡ್ಡಿಗೆ ಸಾಲ? ಯಾವ ವರ್ಷ, ಎಷ್ಟು ಅವಧಿ ಇತ್ಯಾದಿ ನಿಯಮಗಳು ತಿಳಿದಿರಿ

ಸಾಲ ಮಾಡಿಯಾದ್ರೂ ತುಪ್ಪ ತಿನ್ನು…

ಇರುವುದೊಂದೇ ಜೀವನ. ಇದ್ದಷ್ಟು ದಿನ ಠಾಕು ಠೀಕಾಗಿ ಬದುಕುತ್ತೇನೆ ಎಂದುಕೊಂಡು ಸಾಲ ಸೋಲ ಮಾಡುವುದು ಬದುಕಲ್ಲ. ಅದು ಭವಿಷ್ಯದ ನರಕಕ್ಕೆ ಮಾಡುವ ದಾರಿ. ಅದರಲ್ಲೂ ಕ್ರೆಡಿಟ್ ಕಾರ್ಡ್ ಮೋಡಿಗೆ ಬಿದ್ದರೆ ಕಷ್ಟ. ಬೇಡದ ಖರ್ಚುಗಳಿಗೆ ಪುಸಲಾಯಿಸುತ್ತೆ ಈ ಕ್ರೆಡಿಟ್ ಕಾರ್ಡ್. ಹಾಗೆಯೇ, ಪ್ರೀಪೇಡ್ ಲೋನ್ ಸಿಗುತ್ತೆ ಎಂದು ಪರ್ಸನಲ್ ಲೋನ್ ಪಡೆಯುವ ಚಾಳಿಯೂ ಹಲವರಿಗೆ ಇರುತ್ತದೆ. ಇವೆಲ್ಲವೂ ಅನಗತ್ಯ ವೆಚ್ಚಗಳಿಗೆ ದಾರಿ ಮಾಡಿಕೊಡುವ ಸಂಗತಿಗಳು, ಹುಷಾರಾಗಿರಿ.

ಆರೋಗ್ಯ ಚೆನ್ನಾಗಿದ್ದೇನೆ, ನನಗ್ಯಾಕೆ ಇನ್ಷೂರೆನ್ಸ್

ಗಟ್ಟಿ ಮುಟ್ಟಾಗಿದ್ದೇನೆ. ಈಗ್ಯಾಕೆ ನನಗೆ ಇನ್ಷೂರೆನ್ಸ್. ವಯಸ್ಸಾದಾಗ ನೋಡಿಕೊಳ್ಳೋಣ ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ಪ್ರತೀ ವ್ಯಕ್ತಿಗೂ ಲೈಫ್ ಇನ್ಷೂರೆನ್ಸ್, ಹೆಲ್ತ್ ಇನ್ಷೂರೆನ್ಸ್ ಇರಬೇಕು. ಸಣ್ಣ ವಯಸ್ಸಲ್ಲೇ ಹೆಲ್ತ್ ಇನ್ಷೂರೆನ್ಸ್ ಮಾಡಿಸಿದಾಗ ಪ್ರೀಮಿಯಮ್ ಕಡಿಮೆ ಇರುತ್ತದೆ. ಆರೋಗ್ಯ ಯಾವ ವಯಸ್ಸಲ್ಲಿ ಹೇಗೆ ಏರುಪೇರಾಗುತ್ತೆ ಯಾರಿಗೂ ಗೊತ್ತಿರುವುದಿಲ್ಲ.

ಇದನ್ನೂ ಓದಿ: ಇಪಿಎಫ್, ಎನ್​ಪಿಎಸ್ ಮತ್ತು ಮ್ಯೂಚುವಲ್ ಫಂಡ್; ರಿಟೈರ್ಮೆಂಟ್ ಪ್ಲಾನಿಂಗ್​ಗೆ ಯಾವುದು ಉತ್ತಮ?

ಒಂದೇ ಕಡೆ ಹೂಡಿಕೆ ಮಾಡುವುದು

ಹೂಡಿಕೆ ಮಾಡುವುದು ಒಳ್ಳೆಯ ನಿರ್ಧಾರ. ಆದರೆ, ಬಹಳ ಜನರು ತಮ್ಮಲ್ಲಿರುವ ಎಲ್ಲಾ ಹಣವನ್ನೂ ಒಂದೇ ಕಡೆ ಇರಿಸಿಬಿಡುವುದುಂಟು. ಉದಾಹರಣೆಗೆ, ಎಲ್ಲವನ್ನೂ ಬ್ಯಾಂಕ್ ಡೆಪಾಸಿಟ್​ಗೆ ಹಾಕುವುದು, ಅಥವಾ ಮ್ಯೂಚುವಲ್ ಫಂಡ್​ಗಳಲ್ಲಿ ಹಾಕುವುದು, ಅಥವಾ ರಿಯಲ್ ಎಸ್ಟೇಟ್​ಗಳಲ್ಲಿ ಹಾಕುವುದು ಹೀಗೆ. ಇದು ತಪ್ಪು ಕ್ರಮ. ಹೂಡಿಕೆಯಲ್ಲಿ ವಿಸ್ತಾರ ಮತ್ತು ವೈವಿಧ್ಯತೆ ಇರಬೇಕು. ವಿವಿಧ ಅಸೆಟ್ ಕ್ಲಾಸ್​ಗಳಲ್ಲಿ ಹೂಡಿಕೆ ಇರಬೇಕು. ಒಂದು ಬಿದ್ದರೆ ಮತ್ತೊಂದು ನಿಮ್ಮ ಕೈಹಿಡಿಯಬಹುದು. ಮಾರುಕಟ್ಟೆ ಕುಸಿದಾಗ ಠೇವಣಿಗಳು, ಬಾಂಡ್​ಗಳು ಕೈಹಿಡಿಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವಿರಾಟ್ ಕೊಹ್ಲಿ ಹೆಸರು ಕೇಳುತ್ತಿದ್ದಂತೆ ಕೆರಳಿ ಕೆಂಡವಾದ ಬಾಬರ್ ಆಝಂ

ಕೆಲವೇ ಕೆಲವು ವರ್ಷಗಳ ಹಿಂದೆ, ಪ್ರಸ್ತುತ ವಿಶ್ವ ಕ್ರಿಕೆಟ್​ನ ಶ್ರೇಷ್ಠ ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಜೊತೆಗೆ ಬಾಬರ್ ಆಝಂ (Babar Azam) ಅವರ ಹೆಸರನ್ನು ಸಹ ಹೇಳಲಾಗುತಿತ್ತು. ವಿರಾಟ್ ಕೊಹ್ಲಿ ಎರಡು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕವೂ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಆದರೆ ಬಾಬರ್ ಆಝಂ ಹಾಗಲ್ಲ. ಸತತ ಕಳಪೆ ಪ್ರದರ್ಶನದಿಂದ ಬಳಲುತ್ತಿರುವ ಬಾಬರ್​ ಈಗಲೂ ಎಲ್ಲಾ ಮಾದರಿಯಲ್ಲಿ ಆಡುತ್ತಿದ್ದಾರೆ. ಆದರೆ ಅವಮಾನವೆಂಬಂತೆ ಪಾಕ್ ಆಯ್ಕೆ ಮಂಡಳಿ ಅವರನ್ನು ತಂಡಕ್ಕೆ ಆಯ್ಕೆ ಮಾಡದೆ ಹೊರಗಿಡುತ್ತಿದೆ. ಹೀಗಿರುವಾಗ ಪಾಕ್ ಪತ್ರಕರ್ತರೊಬ್ಬರು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಿ ಬಾಬರ್ ಆಝಂ ಬಳಿ ಪ್ರಶ್ನೆಯೊಂದನ್ನು ಕೇಳಿದ್ದಾರೆ ಇದಕ್ಕೆ ಕೆರಳಿ ಕೆಂಡವಾಗಿರುವ ಬಾಬರ್ ಆಝಂ ನೀಡಿದ ಉತ್ತರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಬಾಬರ್ ತಂಡಕ್ಕೆ ಜಯ

ವಾಸ್ತವವಾಗಿ ಭಾರತದಲ್ಲಿ ಐಪಿಎಲ್ ನಡೆಯುತ್ತಿರುವಂತೆ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ ನಡೆಯುತ್ತಿದೆ. ಲೀಗ್​ನಲ್ಲಿ ಬಾಬರ್ ಆಝಂ ಪೇಶಾವರ್ ಝಲ್ಮಿ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಬುಧವಾರ ಪೇಶಾವರ್ ಮತ್ತು ಹೈದರಾಬಾದ್ ನಡುವೆ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಕೇವಲ 145 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪೇಶಾವರ್ ತಂಡವು ಕೊನೆಯ ಓವರ್‌ನಲ್ಲಿ ಪಂದ್ಯವನ್ನು ಗೆದ್ದಿತು. ತಂಡದ ಪರ ಬಾಬರ್ ಆಝಂ ನಾಯಕನ ಇನ್ನಿಂಗ್ಸ್ ಆಡಿದರಾದರೂ ಪಂದ್ಯವನ್ನು ಮುಗಿಸುವ ಮೊದಲೇ ವಿಕೆಟ್ ಒಪ್ಪಿಸಿದರು. ಪಂದ್ಯದ ನಂತರ ಬಾಬರ್ ಅವರನ್ನು ಈ ಬಗ್ಗೆ ಪ್ರಶ್ನಿಸಲಾಯಿತು.

ಪಂದ್ಯ ಮುಗಿಸಲು ಬಾಬರ್ ವಿಫಲ

ಪೇಶಾವರ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಬಾಬರ್ 37 ಎಸೆತಗಳಲ್ಲಿ 43 ರನ್ ಬಾರಿಸಿದರು. ಅವರ ಇನ್ನಿಂಗ್ಸ್​ನಲ್ಲಿ ಒಂದೇ ಒಂದು ಸಿಕ್ಸ್ ಇರದಿದ್ದರೂ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ತಂಡವು ಕೇವಲ 145 ರನ್‌ಗಳನ್ನು ಬೆನ್ನಟ್ಟುತ್ತಿದ್ದಾಗ, ಪಂದ್ಯವನ್ನು ಮುಗಿಸುವುದು ಬಾಬರ್ ಅವರ ಜವಾಬ್ದಾರಿಯಾಗಿತ್ತು, ಆದರೆ ಹಾಗೇ ಮಾಡುವಲ್ಲಿ ಬಾಬರ್ ವಿಫಲರಾದರು. ತಂಡದ ಸ್ಕೋರ್ 116 ರನ್‌ಗಳಾಗಿದ್ದಾಗ ನಾಯಕ ಬಾಬರ್ ಅಜಮ್ 15 ನೇ ಓವರ್‌ನಲ್ಲಿ ಔಟಾದರು.

ಇಂತಹ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ

ಪಂದ್ಯ ಮುಗಿದ ಬಳಿಕ ಈ ಬಗ್ಗೆ ಅವರನ್ನು ಪ್ರಶ್ನಿಸಲಾಯಿತು. ‘ವಿರಾಟ್ ಕೊಹ್ಲಿ ನಿಮ್ಮಂತೆಯೇ ಆರಂಭಿಕರಾಗಿ ಆಡುತ್ತಾರೆ, ಅವರು ಪಂದ್ಯಗಳನ್ನು ಮುಗಿಸಿದ ನಂತರವೇ ಡಗೌಟ್​ಗೆ ಮರಳುತ್ತಾರೆ. ಆದರೆ ನಿಮಗೆ ಮಾತ್ರ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಹೀಗಿದ್ದರೂ ಜನರು ನಿಮ್ಮನ್ನು ಕೊಹ್ಲಿಯೊಂದಿಗೆ ಹೋಲಿಸುತ್ತಾರೆ. ಈ ಹೋಲಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಪತ್ರಕರ್ತ ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಕೋಪಗೊಂಡ ಬಾಬರ್, ಇಂತಹ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ಹೋಲಿಕೆ ಮಾಡುವುದನ್ನು ನಿಲ್ಲಿಸಿ. ನಾನು ಪಂದ್ಯಗಳನ್ನು ಮುಗಿಸಿಲ್ಲ ಎಂಬುದು ನಿಮ್ಮ ತಪ್ಪು ಕಲ್ಪನೆ. ನಾನು ಯಾವಾಗಲೂ ಪಂದ್ಯಗಳನ್ನು ಮುಗಿಸಲು ಶ್ರಮಿಸುತ್ತೇನೆ ಮತ್ತು ನಾನು ಹಲವು ಬಾರಿ ಅದನ್ನು ಮಾಡಿದ್ದೇನೆ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದುರಂತ ಅಂತ್ಯ ಕಂಡ ಕಾಲೇಜ್​​ ಲವ್: ಯುವತಿ ಮದ್ವೆಗೆ ಒಪ್ಪದಕ್ಕೆ ಡೆತ್​ನೋಟ್​ ಬರೆದಿಟ್ಟು ಯುವಕ ಆತ್ಮಹತ್ಯೆ

ಬೆಂಗಳೂರು, ಏಪ್ರಿಲ್​ 09: ಮದುವೆಗೆ ಯುವತಿ ಒಪ್ಪದಿದ್ದಕ್ಕೆ ಮನನೊಂದ ಯುವಕ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ (suicide) ಶರಣಾಗಿರುವಂತಹ ಘಟನೆ ಬೆಂಗಳೂರಿನ ಯಲಹಂಕ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಭಿಷೇಕ್(23) ಮೃತ ಯುವಕ. ಇತ್ತೀಚೆಗಷ್ಟೇ ಅಭಿಷೇಕ್ ಖಾಸಗಿ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದ. ಸದ್ಯ ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ನಡೆದಿದ್ದೇನು? 

ಅಭಿಷೇಕ್​ ಖಾಸಗಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಯುವತಿಯ ಜೊತೆ ಪ್ರೀತಿ ಮಾಡಿದ. ಕಳೆದ ಆರೇಳು ವರ್ಷದಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರು. ಇಬ್ಬರ ಪ್ರೀತಿ ವಿಷಯ ಯುವತಿಯ ಮನೆಯವರಿಗೆ ಗೊತ್ತಾಗಿತ್ತು. ಇತ್ತ ಯುವತಿಯ ಪೋಷಕರು ಅಭಿಷೇಕ್ ಜತೆ ಮದುವೆಗೆ ನಿರಾಕರಿಸಿದ್ದಾರೆ. ಹೀಗಾಗಿ ಯುವತಿ ಅಭಿಷೇಕ್​ನನ್ನು ಅವೈಡ್ ಮಾಡಲು ಶುರು ಮಾಡಿದ್ದಾಳೆ. ಇದರಿಂದ ಮನನೊಂದ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೇಣುಬಿಗಿದ ಸ್ಥಿತಿಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ ಶವ ಪತ್ತೆ

ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ 6ನೇ ತರಗತಿ ವಿದ್ಯಾರ್ಥಿನಿ ಶವ ಪತ್ತೆ ಆಗಿರುವಂತಹ ಘಟನೆ ಶಿವಮೊಗ್ಗದ ಬೊಮ್ಮನಕಟ್ಟೆ ಪ್ರದೇಶದ ಎ ಬ್ಲಾಕ್‌ನಲ್ಲಿ ನಡೆದಿದೆ. ಜೀವಿತಾ(12) ಮೃತ ವಿದ್ಯಾರ್ಥಿನಿ. ಸದ್ಯ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಜಾತ್ರೆ ನೋಡಲು ಹೋಗಿ ಹಸೆಮಣೆ ಏರಬೇಕಿದ್ದವನ ದುರಂತ ಅಂತ್ಯ: ಪಲ್ಲಕ್ಕಿ ಹೊತ್ತ ಟ್ರ್ಯಾಕ್ಟರ್​ ಹರಿದು ಸಾವು

ಬೊಮ್ಮನ​ಕಟ್ಟೆಯ ಶಾಲೆಯಲ್ಲಿ ಜೀವಿತಾ 6ನೇ ತರಗತಿ ಓದುತ್ತಿದ್ದಳು. ರಜೆ ಇದ್ದ ಕಾರಣ ಮನೆಯಲ್ಲೇ ಇದ್ದಳು. ಆದರೆ ಏಕಾಏಕಿ ದುರ್ಘಟನೆ ಸಂಭವಿಸಿದೆ. ಸದ್ಯ ಬಾಲಕಿ ಜೀವಿತಾ ಸಾವಿನ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಸಂಪೂರ್ಣ ತನಿಖೆಯಿಂದಲೇ ನಿಜಾಂಶ ಬಹಿರಂಗವಾಗಬೇಕಿದೆ. ಬಾಲಕಿ ತಾಯಿ ಮೆಗ್ಗಾನ್​ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ.

ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ

ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಚಿಕ್ಕಬಳ್ಳಾಪುರ ನಗರದದಲ್ಲಿ ನಡೆದಿದೆ. ಮನೋರೋಗದಿಂದ ಬಳಲುತ್ತಿದ್ದ ತಮಿಳುನಾಡು ಮೂಲದ ವಿಜಿ(57) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಲ್ಲಿಕ್ ಮಾಡಿ.

Source link

ಮಧುಬಾಲಾ ಪಾತ್ರ ಮಾಡಲಿರುವ ಧುರಂಧರ್ ನಟಿ ಸಾರಾ ಅರ್ಜುನ್? ಬನ್ಸಾಲಿ ನಿರ್ಮಾಣದ ಚಿತ್ರಕ್ಕೆ ಸಿದ್ಧತೆ

‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೇಂಜ್’ ಸಿನಿಮಾಗಳ ಅಭೂತಪೂರ್ವ ಯಶಸ್ಸಿನ ನಂತರ, ನಟಿ ಸಾರಾ ಅರ್ಜುನ್ (Sara Arjun) ಅವರು ವೃತ್ತಿಜೀವನದ ಅತ್ಯಂತ ಸವಾಲಿನ ಪಾತ್ರಕ್ಕೆ ಸಜ್ಜಾಗುತ್ತಿದ್ದಾರೆ. ಭಾರತೀಯ ಚಿತ್ರರಂಗದ ಎವರ್​ಗ್ರೀನ್ ಬ್ಯೂಟಿ, ದಂತಕಥೆ ಮಧುಬಾಲಾ (Madhubala) ಅವರ ಬಯೋಪಿಕ್‌ನಲ್ಲಿ ಸಾರಾ ಅರ್ಜುನ್ ನಟಿಸಲಿದ್ದಾರೆ ಎಂಬ ವರದಿಗಳು ಬಿತ್ತರವಾಗಿವೆ. ಈ ಚಿತ್ರವನ್ನು ‘ಡಾರ್ಲಿಂಗ್ಸ್’ ಖ್ಯಾತಿಯ ನಿರ್ದೇಶಕಿ ಜಸ್ಮೀತ್ ಕೆ. ರೀನ್ ನಿರ್ದೇಶಿಸುತ್ತಿದ್ದು, ಖ್ಯಾತ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರು ಬಂಡವಾಳ ಹೂಡುತ್ತಿದ್ದಾರೆ.

ಈ ಬಹುನಿರೀಕ್ಷಿತ ಚಿತ್ರವು ಪ್ರಸ್ತುತ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಈ ವರ್ಷದ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಮಧುಬಾಲಾ ಅವರ ಕಾಲದ ಸುವರ್ಣ ಯುಗವನ್ನು ಮರುಸೃಷ್ಟಿಸಲು ಚಿತ್ರತಂಡ ಭಾರಿ ತಯಾರಿ ನಡೆಸುತ್ತಿದೆ. ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮಾಡಲು ಸಾಕಷ್ಟು ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಮಧುಬಾಲಾ ಅವರ ಮೋಡಿ ಮತ್ತು ಸೌಂದರ್ಯವನ್ನು ತೆರೆಯ ಮೇಲೆ ತರಲು ಸಾರಾ ಅರ್ಜುನ್ ಅವರು ಸಾಕಷ್ಟು ತರಬೇತಿ ಪಡೆಯಬೇಕಿದೆ. ಆ ಕಾಲದ ಭಾಷಾ ಶೈಲಿಯನ್ನು ಕರಗತ ಮಾಡಿಕೊಳ್ಳಲು ಸಾರಾ ಅವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಮಧುಬಾಲಾ ಅವರ ಐಕಾನಿಕ್ ಲುಕ್‌ಗಳನ್ನು ಮರುಸೃಷ್ಟಿಸಲು ಈಗಾಗಲೇ ಹಲವು ಲುಕ್ ಟೆಸ್ಟ್‌ಗಳು ನಡೆಯುತ್ತಿವೆ ಎಂದು ವರದಿ ಆಗಿದೆ.

ನಿರ್ದೇಶಕಿ ಜಸ್ಮೀತ್ ಕೆ. ರೀನ್ ಅವರು ಈ ಚಿತ್ರವನ್ನು ಕೇವಲ ಯಶಸ್ಸಿನ ಕಥೆಯನ್ನಾಗಿ ಮಾತ್ರವಲ್ಲದೆ, ಮಧುಬಾಲಾ ಅವರ ಜೀವನದ ಏರಿಳಿತಗಳು ಮತ್ತು ಭಾವನಾತ್ಮಕ ಹೋರಾಟಗಳನ್ನು ಒಳಗೊಂಡ ತೀವ್ರವಾದ ಡ್ರಾಮಾ ಆಗಿ ರೂಪಿಸುತ್ತಿದ್ದಾರೆ. ಮಧುಬಾಲಾ ಅವರ ರಹಸ್ಯಮಯ ವ್ಯಕ್ತಿತ್ವ ಮತ್ತು ಅವರ ವೃತ್ತಿಜೀವನದ ಮೈಲಿಗಲ್ಲುಗಳನ್ನು ಈ ಚಿತ್ರ ಅನಾವರಣಗೊಳಿಸಲಿದೆ.

‘ಭಾರತೀಯ ಚಿತ್ರರಂಗದ ಅತ್ಯಂತ ಪ್ರೀತಿಪಾತ್ರ ನಟಿಯ ಜೀವನ ಕಥೆಯನ್ನು ಸಿನಿಮಾ ಮಾಡುವುದು ಒಂದು ಜವಾಬ್ದಾರಿಯುತ ಕೆಲಸ. ಸಾರಾ ಅರ್ಜುನ್ ಈ ಪಾತ್ರಕ್ಕೆ ನ್ಯಾಯ ಒದಗಿಸಲಿದ್ದಾರೆ ಎಂಬ ನಂಬಿಕೆ ನಮಗಿದೆ’ ಎಂದು ಚಿತ್ರತಂಡದ ಆಪ್ತ ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ. ಸಾರಾ ಅರ್ಜುನ್ ಅವರ ಈ ಹೊಸ ಅವತಾರವನ್ನು ನೋಡಲು ಅಭಿಮಾನಿಗಳು ಈಗಿನಿಂದಲೇ ಕುತೂಹಲದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ನಟಿ ಸಾರಾ ಅರ್ಜುನ್​ಗೆ ಫ್ಯಾನ್ಸ್ ಮುತ್ತಿಗೆ: ಮಗಳಿಗೆ ಬಾಡಿಗಾರ್ಡ್ ಆದ ತಂದೆ

1950ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯಾಗಿದ್ದ ಮಧುಬಾಲಾ ಅವರು ತಮ್ಮ ಎರಡು ದಶಕಗಳ ವೃತ್ತಿಜೀವನದಲ್ಲಿ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ದಶಕಗಳೇ ಕಳೆದರೂ ಅವರ ಸೌಂದರ್ಯ ಮತ್ತು ನಟನೆ ಇಂದಿಗೂ ಸಿನಿಮಾ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಸ್ತೆಯಲ್ಲಿ ಹೊಡೆದಾಕ್ತಾರೆ: ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೆ ಕಮಿಷನರ್ ಕ್ಲಾಸ್

ಹುಬ್ಬಳ್ಳಿ, (ಏಪ್ರಿಲ್ 09): ಪೊಲೀಸ್ ಆಯುಕ್ತ (Hubballi-Dharwad Police Commissioner ) ಎನ್ ಶಶಿಕುಮಾರ್ ಅವರು ಇಂದು (ಏಪ್ರಿಲ್ 09) ಹುಬ್ಬಳ್ಳಿ ಹಳೇ  ಸಿಎಆರ್​ ಮೈದಾನದಲ್ಲಿ ಅವಳಿ ನಗರದ ವಿವಿಧ ಠಾಣೆಗಳ ರೌಡಿಶೀಟರ್​ಗಳ ಪರೇಡ್ ನಡೆಸಿದರು. ಈ ವೇಳೆ ಅಪರಾಧ ಕೃತ್ಯ ಮುಂದುವರಿಸಿದ ರೌಡಿಶೀಟರ್​ಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಕೆಲ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇನ್ನು ರೌಡಿಶೀಟರ್​ನಲ್ಲಿರೋ ಅಪ್ಪ ಮಗನಿಗೂ ಕಮಿಷನರ್ ಶಶಿಕುಮಾರ್ ತರಾಟೆ ತೆಗೆದುಕೊಂಡಿದ್ದು, ಹೀಗೆ ಮುಂದುವರೆಸಿ ರಸ್ತೆಯಲ್ಲಿ ಸಾಯ್ತಿರಿ. ಯಾವನಾದರೂ ಹೊಡೆದು ಹಾಕುತ್ತಾರೆ ಅಷ್ಟೇ ಎಂದು ಕ್ಲಾಸ್ ತೆಗೆದುಕೊಂಡರು.

Source link

ಮನೆಯಲ್ಲಿ ಪದೇ ಪದೇ ಕಾಡುವ ಜೇಡರ ಬಲೆಗಳ ಸಮಸ್ಯೆಯಿಂದ ಮುಕ್ತಿ ಪಡೆಯಲು ಈ ಮನೆಮದ್ದುಗಳು ಬೆಸ್ಟ್‌

ಇಲಿ, ಹಲ್ಲಿ, ಸೊಳ್ಳೆ, ಜಿರಳೆಗಳ ಕಾಟ ಇರುವಂತೆ ಹೆಚ್ಚಿನ ಮನೆಗಳಲ್ಲಿ ಜೇಡರ ಬಲೆಗಳ  (cobweb) ಸಮಸ್ಯೆಯೂ ಇದ್ದೇ ಇರುತ್ತವೆ. ಮನೆಯ ಸೀಲಿಂಗ್‌, ಮೂಲೆಗಳು, ಗೋಡೆಗಳಲ್ಲಿ ಕಾಣಿಸಿಕೊಳ್ಳುವ ಜೇಡರ ಬಲೆಗಳು ಮನೆಯ ಸೌಂದರ್ಯವನ್ನು ಹಾಳು ಮಾಡುವುದಲ್ಲದೆ, ಈ ಜೇಡರ ಬಲೆಗಳು ಈ ಜೇಡರ ಬಲೆಗಳು ಆಸ್ತಮಾ ಮತ್ತು ಅಲರ್ಜಿಯಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಇದನ್ನು ತೊಡೆದು ಹಾಕಲು ಅನೇಕರು ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಇವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಪದೇ ಪದೇ ಜೇಡಗಳು ಪದೇ ಪದೇ ಬಲೆ ಕಟ್ಟುತ್ತವೆ. ಹೀಗಿರುವಾಗ ಈ ಜೇಡರಬಲೆಗಳನ್ನು ಪರಿಣಾಮಕಾರಿಯಾಗಿ ತೊಡೆದು ಹಾಕಲು ಈ ನೈಸರ್ಗಿಕ ವಿಧಾನವನ್ನು ಅನುಸರಿಸಿ.

ಜೇಡರ ಬಲೆಗಳನ್ನು ತೊಡೆದುಹಾಕಲು ಇಲ್ಲಿವೆ ಪರಿಣಾಮಕಾರಿ ಮಾರ್ಗ:

ವಿನೆಗರ್: ಜೇಡರ ಬಲೆಗಳನ್ನು ನಿವಾರಿಸಲು ವಿನೆಗರ್‌ ಕೂಡ ಪರಿಣಾಮಕಾರಿ. ಎರಡು ಅಥವಾ ಮೂರು ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿ ಪುಡಿಮಾಡಿ ಒಂದು ಕಪ್ ವಿನೆಗರ್‌ನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಈ ವಿನೆಗರ್ ಮತ್ತು ಬೆಳ್ಳುಳ್ಳಿ ದ್ರವವನ್ನು ಸ್ಪ್ರೇ ಬಾಟಲಿಗೆ ಸುರಿದು ಜೇಡಗಳು ಬಲೆ ಕಟ್ಟುವ ಪ್ರದೇಶಗಳಲ್ಲಿ ಸಿಂಪಡಿಸಿ. ಜೇಡಗಳು ಬೆಳ್ಳುಳ್ಳಿ ಮತ್ತು ವಿನೆಗರ್‌ನ ಬಲವಾದ ವಾಸನೆಯನ್ನು ಸಹಿಸುವುದಿಲ್ಲ. ಇದು ಅವುಗಳನ್ನು ಓಡಿಹೋಗುವಂತೆ ಮಾಡುತ್ತದೆ.

ಪುದೀನ ನೀರು: ಪುದೀನಾದ ಕಟುವಾದ ವಾಸನೆಯನ್ನು ಜೇಡಗಳು ಇಷ್ಟಪಡುವುದಿಲ್ಲ. ಆದ್ದರಿಂದ, ಕೆಲವು ಪುದೀನ ಎಲೆಗಳನ್ನು ತೆಗೆದುಕೊಂಡು ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ಮಾಡಿ. ನಂತರ, ಸ್ಪ್ರೇ ಬಾಟಲಿಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಅದಕ್ಕೆ ಈ ಪುದೀನ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಜೇಡ ಗೂಡುಕಟ್ಟುವ ಪ್ರದೇಶಗಳಲ್ಲಿ ಸಿಂಪಡಿಸಿ. ಈ ಮಿಶ್ರಣದ ಬಲವಾದ ವಾಸನೆಯು ಜೇಡಗಳ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವು ಹೊರಗೆ ಹೋಗುವಂತೆ ಮಾಡುತ್ತದೆ.

ದಾಲ್ಚಿನ್ನಿ ಪುಡಿ: ಜೇಡಗಳಿಗೆ ದಾಲ್ಚಿನ್ನಿ ವಾಸನೆ ಇಷ್ಟವಾಗುವುದಿಲ್ಲ. ಅದರಿಂದ ಹೊರಹೊಮ್ಮುವ ಬಲವಾದ ಸುವಾಸನೆಯು ಜೇಡಗಳು ಮನೆಯಿಂದ ಹೊರಗೆ ಹೋಗುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಜೇಡಗಳು ಬಲೆ ಕಟ್ಟುವ ಸ್ಥಳಗಳಲ್ಲಿ, ಮನೆಯ ಮೂಲೆಗಳಲ್ಲಿ ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಸಿಂಪಡಿಸಿದರೆ,  ದಾಲ್ಚಿನ್ನಿ ಎಣ್ಣೆಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಸ್ಪ್ರೇ ಮಾಡುವುದರಿಂದ ಜೇಡ ಬಲೆ ಕಟ್ಟುವುದನ್ನು ಪರಿಣಾಮಕಾರಿಯಾಗಿ ತಡೆಯಬಹುದು.

ಇದನ್ನೂ ಓದಿ: ಬೇಸಿಗೆಯಲ್ಲಿ ತುಳಸಿ ಗಿಡ ಒಣಗಿ ಹೋಗದಂತೆ ನೋಡಿಕೊಳ್ಳಲು ಸಿಂಪಲ್‌ ಸಲಹೆ ಪಾಲಿಸಿ

ನಿಂಬೆ ಸಿಪ್ಪೆ: ಜೇಡರ ಬಲೆಗಳನ್ನು ತೊಡೆದುಹಾಕಲು ನಿಂಬೆ ಸಿಪ್ಪೆ ಕೂಡ ಪರಿಣಾಮಕಾರಿ.  ನಿಂಬೆ ಸಿಪ್ಪೆಗಳನ್ನು ಪುಡಿ ಮಾಡಿ ಒಂದು ಕಪ್ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ. ಈ ನೀರನ್ನು ಸ್ಪ್ರೇ ಬಾಟಲಿಗೆ ಸುರಿದು ಜೇಡಗಳು ಹೆಚ್ಚಾಗಿ ಗೂಡು ಕಟ್ಟುವ ಸ್ಥಳಗಳಾದ ಮನೆಯ ಮೂಲೆಗಳಲ್ಲಿ, ಬಾಗಿಲು ಮತ್ತು ಕಿಟಕಿಗಳ ಹಿಂದೆ ಸಿಂಪಡಿಸಿ. ಸಿಟ್ರಸ್ ವಾಸನೆಯು ಜೇಡಗಳನ್ನು ಹಿಮ್ಮೆಟ್ಟಿಸುತ್ತದೆ. ಇದಲ್ಲದೆ ಜೇಡರ ಬಲೆಗಳನ್ನು ತೊಡೆದು ಹಾಕಲು ಕರ್ಪೂರವನ್ನು ಸಹ ಬಳಸಬಹುದು.

ಬೇವಿನ ಎಲೆ: ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಕೀಟ ನಿವಾರಕ ಗುಣಗಳನ್ನು ಹೊಂದಿವೆ.  ಒಣಗಿದ ಬೇವಿನ ಎಲೆಗಳನ್ನು ಸುಟ್ಟಾಗ ಉತ್ಪತ್ತಿಯಾಗುವ ಹೊಗೆ ಜೇಡಗಳಿಗೆ ಇಷ್ಟವಾಗುವುದಿಲ್ಲ. ಈ ಮೂಲಕ ಜೇಡರ ಬಲೆಗಳನ್ನು ನಿವಾರಿಸಬಹುದು. ಇದಲ್ಲದೆ,  ಸ್ವಲ್ಪ ನೀರಿನೊಂದಿಗೆ ಬೇವಿನ ಎಣ್ಣೆಯನ್ನು ಬೆರೆಸಿ, ಅದರಲ್ಲಿ ಹತ್ತಿಯನ್ನು ಅದ್ದಿ ಮನೆಯ ಮೂಲೆಗಳಲ್ಲಿ ಇಟ್ಟರೆ, ಜೇಡಗಳು ಅಲ್ಲಿಂದ ಓಡಿಹೋಗುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದೆಯೇ? ಚಿಂತಿಸಬೇಡಿ, ಯಶಸ್ಸಿಗೆ ಇಲ್ಲಿವೆ ಸಾವಿರ ಹಾದಿಗಳು!

ಪಿಯುಸಿ ಫಲಿತಾಂಶ ಬಂದಾಗ ಅಂಕಗಳು ನಿರೀಕ್ಷೆಯಂತೆ ಇಲ್ಲದಿದ್ದರೆ ಆತಂಕವಾಗುವುದು ಸಹಜ. ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಪೋಷಕರು ಅಂಕಗಳೇ ಭವಿಷ್ಯದ ಅಂತಿಮ ತೀರ್ಪು ಎಂದು ಭಾವಿಸುತ್ತಾರೆ. ಆದರೆ ವಾಸ್ತವವೆನೆಂದರೆ, ಪಿಯುಸಿ ಅಂಕಪಟ್ಟಿ ನಿಮ್ಮ ಬದುಕಿನ ಒಂದು ‘ಬಾಗಿಲು’ ಮಾತ್ರ, ಅದು ನಿಮ್ಮ ಬದುಕಿನ ‘ಅಂತ್ಯ’ವಲ್ಲ. ಇಂದಿನ ಆಧುನಿಕ ಜಗತ್ತಿನಲ್ಲಿ ಕಂಪನಿಗಳು ಅಭ್ಯರ್ಥಿಯ ಅಂಕಪಟ್ಟಿ ನೋಡುವುದಕ್ಕಿಂತ ಹೆಚ್ಚಾಗಿ ಅವರಲ್ಲಿರುವ ಕೌಶಲ (Skill) ಮತ್ತು ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ನೋಡುತ್ತಿವೆ. ಕಡಿಮೆ ಅಂಕ ಬಂದರೂ ನೀವು ಆಯ್ಕೆ ಮಾಡಿಕೊಳ್ಳಬಹುದಾದ ಕೆಲವು ಅದ್ಭುತ ವೃತ್ತಿಜೀವನದ ದಾರಿಗಳು ಇಲ್ಲಿವೆ. ಆದ್ದರಿಂದ, ಫಲಿತಾಂಶದ ಬಗ್ಗೆ ಹೆಚ್ಚು ಚಿಂತಿಸದೆ ಮುಂದಿರುವ ಅವಕಾಶಗಳತ್ತ ಗಮನ ಹರಿಸಿ.

ವೃತ್ತಿಪರ ಡಿಪ್ಲೋಮಾ ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್‌ಗಳು:

ಕಡಿಮೆ ಅಂಕ ಬಂದವರಿಗೆ ವೃತ್ತಿಪರ ಡಿಪ್ಲೋಮಾ ಕೋರ್ಸ್‌ಗಳು ಅತ್ಯುತ್ತಮ ಆಯ್ಕೆಯಾಗಿವೆ. ಪ್ಯಾರಾ ಮೆಡಿಕಲ್ ಕ್ಷೇತ್ರದಲ್ಲಿರುವ ನರ್ಸಿಂಗ್, ಲ್ಯಾಬ್ ಟೆಕ್ನಿಷಿಯನ್ ಅಥವಾ ಡಯಾಲಿಸಿಸ್ ಟೆಕ್ನಿಷಿಯನ್ ಕೋರ್ಸ್‌ಗಳು ತಕ್ಷಣದ ಉದ್ಯೋಗ ಭರವಸೆಯನ್ನು ನೀಡುತ್ತವೆ. ಹಾಗೆಯೇ ತಾಂತ್ರಿಕ ಆಸಕ್ತಿ ಇರುವವರು ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ಅಥವಾ ಸಿವಿಲ್ ಡಿಪ್ಲೋಮಾ ಮಾಡುವುದರಿಂದ ಕೈಗಾರಿಕಾ ಕ್ಷೇತ್ರಗಳಲ್ಲಿ ಬೇಗನೆ ನೆಲೆ ಕಂಡುಕೊಳ್ಳಬಹುದು. ಈ ಕೋರ್ಸ್‌ಗಳಲ್ಲಿ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚಿನ ಒತ್ತು ಇರುವುದರಿಂದ, ಕೆಲಸದ ಮಾರುಕಟ್ಟೆಯಲ್ಲಿ ಇವರಿಗೆ ಹೆಚ್ಚಿನ ಬೇಡಿಕೆಯಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಸರ್ಕಾರಿ ಉದ್ಯೋಗ:

ಸರ್ಕಾರಿ ಕೆಲಸದ ಕನಸು ಇರುವವರು ಅಂಕಗಳು ಕಡಿಮೆ ಇವೆ ಎಂದು ನಿರಾಶರಾಗಬೇಕಿಲ್ಲ. ಕೇಂದ್ರ ಸರ್ಕಾರದ ಎಸ್‌ಎಸ್‌ಸಿ (SSC) ನಡೆಸುವ ಪರೀಕ್ಷೆಗಳು ಅಥವಾ ರಾಜ್ಯ ಸರ್ಕಾರದ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಪಿಯುಸಿ ಕೇವಲ ಪಾಸಾಗಿದ್ದರೂ ಸಾಕು. ಇಲ್ಲಿ ನಿಮ್ಮ ಅಂಕಗಳಿಗಿಂತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೀವು ತೋರುವ ಪ್ರತಿಭೆ ಮತ್ತು ದೈಹಿಕ ಸಾಮರ್ಥ್ಯಕ್ಕೆ ಪ್ರಾಮುಖ್ಯತೆ ಇರುತ್ತದೆ. ಆದ್ದರಿಂದ, ಸರಿಯಾದ ತರಬೇತಿ ಮತ್ತು ಪರಿಶ್ರಮವಿದ್ದರೆ ಸರ್ಕಾರಿ ಹುದ್ದೆಯನ್ನು ಪಡೆಯುವುದು ಕಷ್ಟವೇನಲ್ಲ.

ಡಿಜಿಟಲ್ ಯುಗದ ಹೊಸ ಕೌಶಲಗಳು (The AI & Digital Wave):

ಡಿಜಿಟಲ್ ಕೌಶಲಗಳನ್ನು ಕಲಿಯುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ. ನೀವು ಯಾವುದೇ ವಿಭಾಗದಲ್ಲಿ (ಆರ್ಟ್ಸ್, ಕಾಮರ್ಸ್, ಸೈನ್ಸ್) ಪಿಯುಸಿ ಮುಗಿಸಿದ್ದರೂ, ಡಿಜಿಟಲ್ ಮಾರ್ಕೆಟಿಂಗ್, ಗ್ರಾಫಿಕ್ ಡಿಸೈನಿಂಗ್ ಅಥವಾ ವಿಡಿಯೋ ಎಡಿಟಿಂಗ್‌ನಂತಹ ಕೋರ್ಸ್‌ಗಳನ್ನು ಮಾಡಬಹುದು. ಇವುಗಳನ್ನು ಕಲಿಯಲು ಕೇವಲ 3 ರಿಂದ 6 ತಿಂಗಳು ಸಾಕು. ಇಂದಿನ ಸ್ಟಾರ್ಟ್‌ಅಪ್ ಯುಗದಲ್ಲಿ ಇಂತಹ ಕ್ರಿಯೇಟಿವ್ ಕೆಲಸ ಮಾಡುವವರಿಗೆ ದೊಡ್ಡ ದೊಡ್ಡ ಸಾಫ್ಟ್‌ವೇರ್ ಕಂಪನಿಗಳು ಮತ್ತು ಜಾಹೀರಾತು ಸಂಸ್ಥೆಗಳು ಆಕರ್ಷಕ ಸಂಬಳ ನೀಡಲು ಸಿದ್ಧವಿರುತ್ತವೆ.

ಸೃಜನಶೀಲ ವೃತ್ತಿಜೀವನ (Creative Careers):

ಸೃಜನಶೀಲ ವೃತ್ತಿಜೀವನವನ್ನು ಇಷ್ಟಪಡುವವರಿಗೆ ಹೋಟೆಲ್ ಮ್ಯಾನೇಜ್‌ಮೆಂಟ್, ಫ್ಯಾಷನ್ ಡಿಸೈನಿಂಗ್ ಮತ್ತು ಅನಿಮೇಷನ್ ಕ್ಷೇತ್ರಗಳು ಬಾಗಿಲು ತೆರೆದಿವೆ. ನಿಮಗೆ ಅಡುಗೆಯಲ್ಲಿ ಆಸಕ್ತಿ ಇದ್ದರೆ ಅಥವಾ ವಿನ್ಯಾಸಗಳಲ್ಲಿ ಹೊಸತನ ಹುಡುಕುವ ಹವ್ಯಾಸವಿದ್ದರೆ, ಈ ಕ್ಷೇತ್ರಗಳಲ್ಲಿ ನಿಮ್ಮ ಕಲ್ಪನಾ ಶಕ್ತಿಯೇ ಬಂಡವಾಳವಾಗುತ್ತದೆ. ಪ್ರವಾಸೋದ್ಯಮ ಮತ್ತು ಸಿನೆಮಾ ರಂಗವು ಬೆಳೆಯುತ್ತಿರುವ ಕಾರಣ, ಈ ವೃತ್ತಿಗಳಲ್ಲಿ ಉದ್ಯೋಗದ ಕೊರತೆಯಿಲ್ಲ. ಇದು ನಿಮ್ಮ ಹವ್ಯಾಸವನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಲು ಇರುವ ಸುಸಂದರ್ಭವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version