ಹಾರ್ಮುಜ್ ಜಲಸಂಧಿಯಲ್ಲಿ ಹಡಗುಳಿಂದ ಟೋಲ್ ವಸೂಲಿಗೆ ಇರಾನ್ ಯೋಜನೆ; ಅಂತಾರಾಷ್ಟ್ರೀಯ ನಿಯಮಗಳು ಏನು ಹೇಳುತ್ತವೆ?

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಳಿಂದ ಟೋಲ್ ವಸೂಲಿಗೆ ಇರಾನ್ ಯೋಜನೆ; ಅಂತಾರಾಷ್ಟ್ರೀಯ ನಿಯಮಗಳು ಏನು ಹೇಳುತ್ತವೆ?

ನವದೆಹಲಿ, ಏಪ್ರಿಲ್ 8: ಹಾರ್ಮುಜ್ ಜಲಸಂಧಿ (Hormuz Strait) ಮೂಲಕ ಸಾಗುವ ಹಡಗುಗಳಿಗೆ ಟೋಲ್ ವಿಧಿಸಲು ಇರಾನ್ ಯೋಜಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರ ಕದನ ವಿರಾಮ ಘೋಷಣೆ (ceasefire) ಆದ ಬೆನ್ನಲ್ಲೇ ಈ ಟೋಲ್ ವಿಚಾರ ಮುನ್ನೆಲೆಗೆ ಬಂದಿದೆ. ಮಾರ್ಗದಲ್ಲಿ ಸಾಗುವ ಪ್ರತೀ ಹಡಗಿನಿಂದ 2 ಮಿಲಿಯನ್ ಡಾಲರ್ ಶುಲ್ಕ ವಸೂಲಿ ಮಾಡಲು ಇರಾನ್ ಪ್ಲಾನ್ ಹಾಕಿದೆ. ಇರಾನ್​ನ ಸೇನಾಪಡೆಗಳು ಈ ಜಲಸಂಧಿಯನ್ನು ನಿಯಂತ್ರಿಸಿ, ಹಡಗುಗಳ ಸಾಗಣೆಗೆ ಅವಕಾಶ ಮಾಡಿಕೊಡುತ್ತವೆ.

ಹಾರ್ಮುಜ್ ಜಲಸಂಧಿಯಲ್ಲಿ ಅಧಿಕೃತವಾಗಿ ಹಡಗುಗಳಿಂದ ಟೋಲ್ ಸಂಗ್ರಹಿಸಲು ಇರಾನ್ ಸಂಸತ್ತಿನಲ್ಲಿ ಕರಡ ಮಸೂದೆ ಸಿದ್ಧವಾಗಿದೆ. ಇದೇನಾದರೂ ಅನುಮೋದನೆಗೊಂಡು ಜಾರಿಯಾದಲ್ಲಿ ಟೋಲ್ ಸಿಸ್ಟಂ ಸ್ಥಾಪನೆಯಾಗಬಹುದು. ಈ ಟೋಲ್​ನಿಂದ ಸಂಗ್ರಹವಾಗುವ ಹಣವನ್ನು ಇರಾನ್ ಯುದ್ಧದಿಂದ ಹಾನಿಯಾದ ತನ್ನ ಪ್ರದೇಶಗಳ ಪುನರಭಿವೃದ್ಧಿಗೆ ಬಳಸಲು ಯೋಜಿಸಿದೆ.

ಇರಾನ್ ಹಾಗು ಅದರ ಪುರಾತನ ನಾಗರಿಕತೆಯನ್ನು ಧೂಳೀಪಟ ಮಾಡುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ನಿನ್ನೆಯಷ್ಟೇ ಎಚ್ಚರಿಕೆ ಕೊಟ್ಟಿದ್ದರು. ಈ ಮಧ್ಯೆ ಯುದ್ಧ ನಿಲುಗಡೆಗೆ ಪಾಕಿಸ್ತಾನದ ಮೂಲಕ ಇರಾನ್ 10 ಅಂಶಗಳ ಪ್ಲಾನ್ ಅನ್ನು ಅಮೆರಿಕಕ್ಕೆ ಕಳುಹಿಸಿತ್ತು. ಈ ಪ್ಲಾನ್ ಅನ್ನು ಪರಿಗಣಿಸುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ಯುಎಇಗೆ ಸಾಲ ವಾಪಸ್ ಕೊಟ್ಟರೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಏನಾಗಬಹುದು? ಇಲ್ಲಿದೆ ಇಂಟರೆಸ್ಟಿಂಗ್ ಲೆಕ್ಕಾಚಾರ

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಾಗಾಟದ ಮೇಲೆ ನಿಯಂತ್ರಣ; ಯುದ್ಧ ನಿಲ್ಲಿಸುವುದು; ಸುತ್ತಲಿನ ದೇಶಗಳಲ್ಲಿರುವ ಅಮೆರಿಕನ್ ಮಿಲಿಟರಿ ನೆಲೆಗಳನ್ನು ತೆರವುಗೊಳಿಸುವುದು; ಇರಾನ್​ಗೆ ಆದ ನಷ್ಟಕ್ಕೆ ಪೂರ್ಣ ಪರಿಹಾರ ನೀಡುವುದು; ಎಲ್ಲಾ ನಿಷೇಧಗಳನ್ನು ರದ್ದುಗೊಳಿಸುವುದು; ಇರಾನ್​ನ ನಿರ್ಬಂಧಿತ ಆಸ್ತಿಗಳನ್ನು ಬಿಡುಗಡೆ ಮಾಡುವುದು, ಇವೇ ಮುಂತಾದ 10 ಅಂಶಗಳ ಪ್ಲಾನ್ ಅನ್ನು ಟ್ರಂಪ್​ಗೆ ಇರಾನ್ ಕೊಟ್ಟಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಿಸಲು ಕಾನೂನು ಅವಕಾಶ ಇದೆಯಾ?

ಸೂಜ್ ಕೆನಾಲ್ ಮತ್ತು ಪನಾಮ ಕೆನಾಲ್​ನಲ್ಲಿ ಹಡಗುಗಳಿಗೆ ಟ್ರಾನ್ಸಿಟ್ ಫೀ ವಿಧಿಸಲಾಗುತ್ತದೆ. ಅದೇ ಮಾದರಿಯಲ್ಲಿ ಇರಾನ್​ನ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಟ್ರಾನ್ಸಿಟ್ ಶುಲ್ಕ ವಸೂಲಿ ಮಾಡಲು ಹೊರಟಿದೆ. ಆದರೆ, ಗಮನಿಸಬೇಕಾದ ಸಂಗತಿ ಎಂದರೆ ಸೂಜ್ ಕಾಲುವೆ ಮತ್ತು ಪನಾಮೆ ಕಾಲುವೆಗಳನ್ನು ಮನುಷ್ಯರೇ ನಿರ್ಮಿಸಿ, ನಿರ್ವಹಿಸುತ್ತಾರೆ. ಹೀಗಾಗಿ, ಸುಂಕದ ರೀತಿ ಹಡಗುಗಳಿಂದ ಟ್ರಾನ್ಸಿಟ್ ಫೀ ಪಡೆಯಲಾಗುತ್ತದೆ.

ಇದನ್ನೂ ಓದಿ: ಕದನವಿರಾಮ ಬೆನ್ನಲ್ಲೇ ತೈಲ ಬೆಲೆ ಐತಿಹಾಸಿಕ ಕುಸಿತ; ಪೆಟ್ರೋಲ್, ಡೀಸಲ್ ಬೆಲೆಯೂ ಇಳಿಯುತ್ತಾ?

ಆದರೆ, ಹಾರ್ಮುಜ್ ಜಲಸಂಧಿಯು ನೈಸರ್ಗಿಕವಾಗಿ ನಿರ್ಮಾಣವಾಗಿರುವ ಜಲಮಾರ್ಗ. ವಿಶ್ವಸಂಸ್ಥೆಯ ಸಾಗರ ಕಾನೂನು ನಿಯಮಾವಳಿ ಪ್ರಕಾರ ಅಂತಾರಾಷ್ಟ್ರೀಯವಾಗಿ ಜಲಮಾರ್ಗಗಳು ಮತ್ತು ವಾಯುಮಾರ್ಗಗಳು ಮುಕ್ತವಾಗಿರಬೇಕು. ಕರಾವಳಿ ಪ್ರದೇಶಗಳು ಇದನ್ನು ತಡೆಯುವಂತಿಲ್ಲ ಅಥವಾ ನಿಯಂತ್ರಿಸುವಂತಿಲ್ಲ ಎಂದು ನಿಯಮಗಳು ಹೇಳುತ್ತವೆ. ಹೀಗಾಗಿ, ಇರಾನ್ ದೇಶವು ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಂದ ಟ್ರಾನ್ಸಿಟ್ ಫೀ ಪಡೆಯುವುದು ವಿಶ್ವಸಂಸ್ಥೆ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಫಿನಾಲೆಗೆ ವೇದಿಕೆ ರೆಡಿ; ಯಾರಾಗ್ತಾರೆ ಚಾಂಪಿಯನ್?

ಜೀ ಕನ್ನಡದಲ್ಲಿ ಪ್ರಸಾರ ಆಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (DKD) ಮೂಲಕ ಅನೇಕ ಪ್ರತಿಭೆಗಳಿಗೆ ವೇದಿಕೆ ಸಿಕ್ಕಿದೆ.ಈಗ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 2025’ ಅಂತಿಮ ಹಂತ ತಲುಪಿದೆ. ಏಪ್ರಿಲ್ 11 ಶನಿವಾರ ಸಂಜೆ 7 ಗಂಟೆಯಿಂದ 9 ಗಂಟೆಯವರೆಗೆ ಮತ್ತು ಏಪ್ರಿಲ್ 12 ಭಾನುವಾರದಂದು ಸಂಜೆ 7 ಗಂಟೆಯಿಂದ 9:30ರವರೆಗೆ ಫಿನಾಲೆ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ. ಈ ವೇಳೆ ವಿಜೇತರ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ಈ ಬಾರಿಯ ಡಿಕೆಡಿ ಚಾಂಪಿಯನ್ ಯಾರಾಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಇದಕ್ಕೆ ಭಾನುವಾರ ರಾತ್ರಿ ಉತ್ತರ ಸಿಗಲಿದೆ.

ಈ ಬಾರಿ ಫಿನಾಲೆಯಲ್ಲಿ ಪೂಜಾ ಮತ್ತು ಅನೂಪ್, ಮೋಹಿತ್ ಮತ್ತು ಅನನ್ಯ, ಸಿದ್ದೇಗೌಡ್ರು ಮತ್ತು ದೀಶಲ್, ಹರ್ಷ ಮತ್ತು ನಂದು, ಶಿಕ್ಷಿತ್ ತಾಪಾ ಮತ್ತು ಸಂಜನಾ ಫೈನಲಿಸ್ಟ್ ಆಗಿದ್ದಾರೆ. ಗ್ರಾಂಡ್ ಫಿನಾಲೆಯಲ್ಲಿ ಇವರುಗಳ ನಡುವೆ ಪೈಪೋಟಿ ನಡೆಯಲಿದೆ.

ಇದನ್ನೂ ಓದಿ: ಏಪ್ರಿಲ್ 4ರಿಂದ ಜೀ ಕನ್ನಡದಲ್ಲಿ ‘ಜೋಡಿ ನಂ.1′ ಶೋ; ಜಡ್ಜ್​​-ಸ್ಪರ್ಧಿ ಇಬ್ಬರೂ ಸೂಪರ್

ಒಂದು ವೇದಿಕೆಯಿಂದ ಸ್ಪರ್ಧಿಗಳು ಕೇವಲ ಅವಕಾಶವನ್ನು ಮಾತ್ರ ಪಡೆಯುವುದಿಲ್ಲ. ಅವಕಾಶದ ಜೊತೆ ಹಿರಿಯರ ಮಾರ್ಗದರ್ಶನ ಕೂಡ ಪಡೆಯುತ್ತಾರೆ. ಯಾವ ಶಾಲೆಗಳೂ ಹೇಳಿಕೊಡದ ಪಾಠ ಇಲ್ಲಿ ಸಿಗುತ್ತದೆ. ಡಿಕೆಡಿ ಶೋನ ಸ್ಪರ್ಧಿಗಳಿಗೂ ಜಡ್ಜ್​​ಗಳಾದ ಡಾ. ಶಿವರಾಜ್ ಕುಮಾರ್, ರಚಿತಾ ರಾಮ್, ಅರ್ಜುನ್ ಜನ್ಯ ಮತ್ತು ವಿಜಯ್ ರಾಘವೇಂದ್ರ ಅವರ ಮಾರ್ಗದರ್ಶನ ಸಿಕ್ಕಿದೆ. ಈ ನಾಲ್ವರು ಸೆಲೆಬ್ರಿಟಿಗಳು ಈ ಬಾರಿಯ ಡಿಕೆಡಿ ಜಡ್ಜ್​​ಗಳಾಗಿದ್ದರು. ಅನುಶ್ರೀ ಅವರು ತಮ್ಮ ಮುದ್ದಾದ ಮಾತುಗಳಿಂದ ಆ್ಯಂಕರಿಂಗ್ ಮಾಡುತ್ತಾ ಎಲ್ಲರನ್ನೂ ರಂಜಿಸಿದ್ದಾರೆ.

ಫಿನಾಲೆಯಲ್ಲಿರುವ ಎಲ್ಲಾ ಸ್ಪರ್ಧಿಗಳು ಸಾಕಷ್ಟು ಶ್ರಮ ಹಾಕಿ ಇಲ್ಲಿವರೆಗೆ ಬಂದಿದ್ದಾರೆ. ಜಡ್ಜ್​​ಗಳ ಮಾರ್ಗದರ್ಶನ ಕೂಡ ಇವರಿಗೆ ಸಹಕಾರಿ ಆಗಿದೆ. ಫಿನಾಲೆ ಎಪಿಸೋಡ್​ನಲ್ಲಿ ಎಲ್ಲಾ ಜೋಡಿಗಳು ಪರ್ಫಾರ್ಮ್ ಮಾಡಿದ ನಂತರ ವಿನ್ನರ್ ಘೋಷಣೆ ಆಗಲಿದೆ. ಗೆದ್ದವರಿಗೆ ಪುನೀತ್ ರಾಜ್​​​ಕುಮಾರ್ ಅವರಿರೋ ಆಕರ್ಷಕ ಕಪ್ ಸಿಗಲಿದೆ. ಈ ಶೋ ಮುಗಿದ ಬಳಿಕ ಹೊಸ ರಿಯಾಲಿಟಿ ಶೋ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿವಾದ ಪುರುಷರಾದ್ರಾ ಮಲ್ಲಿಕಾರ್ಜುನ ಖರ್ಗೆ?: ಟೀಕಿಸುವ ಭರದಲ್ಲಿ ಸಾಲು ಸಾಲು ಕಾಂಟ್ರವರ್ಸಿ!

ಬೆಂಗಳೂರು, ಏಪ್ರಿಲ್​​ 08: ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್​​ನ ಹಿರಿಯ ರಾಜಕಾರಣಿ. ಎಐಸಿಸಿಯ ಅಧ್ಯಕ್ಷರೂ ಆಗಿರುವ ಇದೇ ಖರ್ಗೆ ಅದ್ಯಾಕೋ ಗೊತ್ತಿಲ್ಲ ಬೇಕು ಬೇಕಂತಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಮೊನ್ನೆ ಭಾನುವಾರ ಅಸ್ಸಾಂನ ನಿಲಾಂಬಜಾರ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಇವರು, ಕುರಾನ್‌ನಲ್ಲಿ ನಮಾಜ್ ಮಾಡುವಾಗಲೂ ವಿಷಕಾರಿ ಹಾವನ್ನು ಕಂಡರೆ ಅದನ್ನು ಕೊಲ್ಲಬೇಕು ಎಂದು ಹೇಳಲಾಗಿದೆ. ಆರ್‌ಎಸ್‌ಎಸ್ ಅಥವಾ ಬಿಜೆಪಿ ಕೂಡ ಅದೇ ರೀತಿಯ ಹಾವು, ಅವನ್ನು ಕೊಲ್ಲದಿದ್ದರೆ ನೀವು ಬದುಕಲು ಸಾಧ್ಯವಿಲ್ಲ ಎಂದಿದ್ದು, ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಖರ್ಗೆ ಮೇಲೆ ಬಿಜೆಪಿಗರು ಮುಗಿ ಬಿದ್ದಿದ್ದು, ಎಲ್ಲೆಡೆ ಆಕ್ರೋಶಕ್ಕೆ ವ್ಯಕ್ತವಾಗ್ತಿವೆ.

ಅಷ್ಟಕ್ಕೂ ಮಲ್ಲಿಕಾರ್ಜುನ ಖರ್ಗೆ ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡಿರೋದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಇವರು ನೀಡಿದ್ದ ಕೆಲ ಹೇಳಿಕೆಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಮಾತಿಗೂ ಡೋಂಟ್​​ ಕೇರ್​; ‘ಕೈ’ ಮನೆಯಲ್ಲಿ ನಿಲ್ಲದ ಬಣಗಳ ವಾರ್

‘ಗುಜರಾತಿಗರು ಅನಕ್ಷರಸ್ಥರು’

ವಿಧಾನಸಭೆ ಚುನಾವಣೆ ನಿಮಿತ್ತಕೇರಳದ ಇಡುಕ್ಕಿಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮೊನ್ನೆ ಮೊನ್ನೆಯಷ್ಟೇ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆ, ಗುಜರಾತ್ ಜನರು ಅನಕ್ಷರಸ್ಥರು. ಹೀಗಾಗಿ ನರೇಂದ್ರ ಮೋದಿ ಅಲ್ಲಿನ ಜನರನ್ನು ಸುಲಭವಾಗಿ ದಾರಿ ತಪ್ಪಿಸಬಹುದು, ಆದರೆ ಕೇರಳದ ಜನರು ಹೆಚ್ಚು ಸಂವೇದನಾಶೀಲ ಮತ್ತು ವಿದ್ಯಾವಂತರು. ಹೀಗಾಗಿ ಅವರನ್ನು ಯಾರೂ ಮೋಸಗೊಳಿಸಲು ಸಾಧ್ಯವಿಲ್ಲ ಎಂದಿದ್ದರು. ಯಾವಾಗ ತಮ್ಮ ಹೇಳಿಕೆ ತೀವ್ರ ವಿವಾದವಾಗಿ ಟೀಕೆಗೆ ಗುರಿಯಾಯ್ತೋ ಎಚ್ಚೆತ್ತ ಖರ್ಗೆ ತಮ್ಮ ಮಾತಿಗೆ ವಿಷಾದವನ್ನೂ ವ್ಯಕ್ತಪಡಿಸಿದ್ದರು. ಇತ್ತೀಚೆಗೆ ಕೇರಳದಲ್ಲಿ ನಡೆದ ಚುನಾವಣಾ ಭಾಷಣದಲ್ಲಿ ನನ್ನ ಕೆಲವು ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದಾಗ್ಯೂ, ನಾನು ಹೃತ್ಪೂರ್ವಕ ವಿಷಾದವನ್ನು ವ್ಯಕ್ತಪಡಿಸುತ್ತೇನೆ. ಗುಜರಾತ್ ಜನರ ಭಾವನೆಗಳಿಗೆ ಧಕ್ಕೆಯುಂಟುಮಾಡುವುದು ನನ್ನ ಉದ್ದೇಶವೇ ಅಲ್ಲ. ಅವರ ಮೇಲೆ ನನಗೆ ಸದಾ ಅತ್ಯಂತ ಗೌರವವಿದೆ ಮತ್ತು ಅದು ಮುಂದುವರೆಯುತ್ತದೆ ಎಂದು ಹೇಳುವ ಮೂಲಕ ವಿವಾದ ಸುಖಾಂತ್ಯಗೊಳಿಸಲು ಯತ್ನಿಸಿದ್ದರು.

‘ಮೋದಿ ವಿಷ ಸರ್ಪ ಇದ್ದಂತೆ’

2023ರ ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆಯೂ ಖರ್ಗೆ ಭಾರಿ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್‌ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಅವರು, ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಇದ್ದಂತೆ, ವಿಷದ ಹಾವನ್ನು ನೆಕ್ಕಿದ್ರೆ ಸತ್ತು ಹೋಗ್ತಾರೆ. ದೇಶಕ್ಕೆ ಬಿಜೆಪಿಯವರ ಕೊಡುಗೆ ಏನು ಅಂತಾ ಹೇಳಲಿ, ನಿಮ್ಮ ಮನೆಯಲ್ಲಿ ದೇಶಕ್ಕಾಗಿ ಒಂದೂ ನಾಯಿ ಕೂಡ ಸತ್ತಿಲ್ಲ ಎಂದಿದ್ದರು. ಇದಕ್ಕೆ ಕೌಂಟರ್​​ ನೀಡಿದ್ದ ಮೋದಿ, ನಾನು ಶಿವನ ಕೊರಳಿನ ಸರ್ಪವಾಗಲು ಇಷ್ಟಪಡುತ್ತೇನೆ ಎಂದಿದ್ದು ಕೂಡ ಭಾರಿ ಸುದ್ದಿಯಾಗಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಈ ಬಾಬಾ ನನ್ನನ್ನು ಅತ್ಯಾಚಾರ ಮಾಡಿದ್ದಾನೆ: ದಾರಿಯಲ್ಲಿ ಅಳುತ್ತಾ ಸಹಾಯಕ್ಕಾಗಿ ಅಂಗಲಾಚಿದ 17 ವರ್ಷದ ಬಾಲಕಿ

ಮಥುರಾ, ಏ.8: ಉತ್ತರ ಪ್ರದೇಶದ ಮಥುರಾದಲ್ಲಿ 17 ವರ್ಷದ ಬಾಲಕಿಯೊಬ್ಬಳ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆರೋಪಿತ ವ್ಯಕ್ತಿಯನ್ನು ಬಾಲಕಿಯು ‘ಬಾಬಾ’ (ಸನ್ಯಾಸಿ ಅಥವಾ ಸ್ವಯಂ ಘೋಷಿತ ದೇವಮಾನವ) ಎಂದು ಗುರುತಿಸಿದ್ದು, ಈ ಘಟನೆಯು ಸ್ಥಳೀಯವಾಗಿ ಭಾರಿ ಸಂಚಲನ ಮೂಡಿಸಿದೆ. ವರದಿಗಳ ಪ್ರಕಾರ, ಬಾಲಕಿಯು ರಸ್ತೆಯ ಬದಿಯಲ್ಲಿ ಅಳುತ್ತಾ, ತನಗೆ ಸಹಾಯ ಮಾಡುವಂತೆ ದಾರಿಹೋಕರನ್ನು ವಿನಂತಿಸುತ್ತಿದ್ದಾಗ ಈ ವಿಷಯ ಬೆಳಕಿಗೆ ಬಂದಿದೆ. ತಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದಾಗಿ ಅಳುತ್ತಲೇ ಅಲ್ಲಿನ ಜನರಿಗೆ ವಿವರಿಸಿದ್ದಾಳೆ. ತಕ್ಷಣವೇ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿ ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ‘ಬಾಬಾ’ನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. “ಯಾರೇ ಆಗಿದ್ದರೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಮನೆ ಕಟ್ಟೋರು, ಕಟ್ಟಿದವರು ಈ ವಿಚಾರ ತಿಳಿದಿರಲೇಬೇಕು!

ಬೆಂಗಳೂರು, ಏಪ್ರಿಲ್ 8: ಸಿಲಿಕಾನ್ ಸಿಟಿಯ ಬೆಂಗಳೂರಿನಲ್ಲಿ (Bengaluru) ಸ್ವಂತ ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಕನಸು. ಆದರೆ, ನಗರ ಪಾಲಿಕೆಯ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಅನೇಕರು ಅರಿಯದೇ ‘ಅಕ್ರಮ ಕಟ್ಟಡ’ಗಳ ಮಾಲೀಕರಾಗಿಬಿಡುತ್ತಾರೆ. ಇಂತಹವರಿಗೆ ರಾಜ್ಯ ಸರ್ಕಾರವು ಈಗ ದೊಡ್ಡ ಮಟ್ಟದ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳಿಗೆ ತಿದ್ದುಪಡಿ ತರಲು ಕರಡು ಅಧಿಸೂಚನೆಯನ್ನು ಇತ್ತೀಚೆಗೆ ಪ್ರಕಟಿಸಲಾಗಿದ್ದು, ಸೆಟ್ ಬ್ಯಾಕ್ ಉಲ್ಲಂಘನೆಯ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಸಂದರ್ಭದಲ್ಲಿ, ಸೆಟ್ ಬ್ಯಾಕ್ ಉಲ್ಲಂಘನೆ ಎಂದರೇನು ಹಾಗೂ ಅದರ ಮಿತಿಗಳ ಬಗ್ಗೆ ತಿಳಿಯುವ ಪ್ರಯತ್ನ ಇಲ್ಲಿದೆ.

ಏನಿದು ಸೆಟ್ ಬ್ಯಾಕ್ ನಿಯಮ?

ನಿಮ್ಮ ನಿವೇಶನದಲ್ಲಿ (Site) ಮನೆ ಕಟ್ಟುವಾಗ ಕಟ್ಟಡದ ಸುತ್ತಲೂ ಇಂತಿಷ್ಟು ಜಾಗ ಬಿಡಬೇಕು ಎಂಬುದು ನಿಯಮ. ಇದನ್ನು ‘ಸೆಟ್ ಬ್ಯಾಕ್’ ಎನ್ನಲಾಗುತ್ತದೆ. ಉದಾಹರಣೆಗೆ, ನೀವು 30×40 ನಿವೇಶನದಲ್ಲಿ ಮನೆ ಕಟ್ಟುವಾಗ ಅಕ್ಕಪಕ್ಕದ ಮನೆಯವರ ಗೋಡೆಗೆ ತಾಗದಂತೆ ಅಥವಾ ರಸ್ತೆಯ ಕಡೆಗೆ ಮೂರ್ನಾಲ್ಕು ಅಡಿ ಜಾಗವನ್ನು ಖಾಲಿ ಬಿಡಬೇಕು. ಇದು ಗಾಳಿ-ಬೆಳಕಿನ ಸಂಚಾರಕ್ಕೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಗಳಿಗೆ ಅತ್ಯಗತ್ಯ. ಇದನ್ನು ಪಾಲಿಸದಿದ್ದರೆ ಸೆಟ್​​ ಬ್ಯಾಕ್ ಉಲ್ಲಂಘನೆಯಾಗುತ್ತದೆ.

ಹೊಸ ಪ್ರಸ್ತಾವನೆಯಲ್ಲಿ ಏನಿದೆ?

ಈ ಹಿಂದೆ ನೀವು ಬಿಡಬೇಕಾದ ಜಾಗದಲ್ಲಿ ಕೇವಲ ಶೇಕಡ 5ರಷ್ಟು ಮಾತ್ರ ವ್ಯತ್ಯಾಸ (ಉಲ್ಲಂಘನೆ) ಆಗಲು ಅವಕಾಶವಿತ್ತು. ಅಂದರೆ, ಅಲ್ಪ ಸ್ವಲ್ಪ ಜಾಗ ಹೆಚ್ಚು ಬಳಸಿ ಕಟ್ಟಿದ್ದರೂ ಅದು ಅಕ್ರಮ ಕಟ್ಟಡವಾಗಿ ಬಿಡುತ್ತಿತ್ತು. ಇದರಿಂದಾಗಿ ಬ್ಯಾಂಕ್ ಸಾಲ ಪಡೆಯಲು ಅಥವಾ ಮನೆ ಸಕ್ರಮ ಮಾಡಿಕೊಳ್ಳಲು ತೊಂದರೆಯಾಗುತ್ತಿತ್ತು.

ಹೊಸ ನಿಯಮದಲ್ಲೇನಿದೆ? ಪರಿಣಾಮ ಏನು?

ಈಗ ಸರ್ಕಾರವು ಈ ಉಲ್ಲಂಘನೆ ಮಿತಿಯನ್ನು ಶೇಕಡ 15ಕ್ಕೆ ಏರಿಸಲು ನಿರ್ಧರಿಸಿದೆ. ಇದು ಜಾರಿಗೆ ಬಂದರೆ, ನೀವು ಶೇಕಡ 15ರಷ್ಟು ಜಾಗವನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದರೂ ಸಹ, ನಿಗದಿತ ದಂಡವನ್ನು ಪಾವತಿಸುವ ಮೂಲಕ ಅದನ್ನು ಕಾನೂನುಬದ್ಧವಾಗಿ ಸಕ್ರಮ ಮಾಡಿಕೊಳ್ಳಲು ಅವಕಾಶ ಸಿಗಲಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬ್ಯಾಡ್ ನ್ಯೂಸ್: ಮೇ ತಿಂಗಳಿನಲ್ಲಿ ಓಪನ್ ಆಗಲ್ಲ ಪಿಂಕ್ ಲೈನ್! ವಿಳಂಬಕ್ಕೆ ಅಸಲಿ ಕಾರಣವೇನು?

ಸರ್ಕಾರವು ಈ ಹೊಸ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಇವುಗಳ ಪರಿಶೀಲನೆಯ ನಂತರ ಹೊಸ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದ್ದು, ಸಣ್ಣ ಸಣ್ಣ ಸೆಟ್ ಬ್ಯಾಕ್ ಉಲ್ಲಂಘನೆಗಳಿಂದ ದಂಡ ಅಥವಾ ತೆರವು ಭೀತಿ ಎದುರಿಸುತ್ತಿದ್ದ ಸಾವಿರಾರು ಜನರಿಗೆ ಇದು ರಿಲೀಫ್ ನೀಡಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕದನವಿರಾಮ ಬೆನ್ನಲ್ಲೇ ತೈಲ ಬೆಲೆ ಐತಿಹಾಸಿಕ ಕುಸಿತ; ಪೆಟ್ರೋಲ್, ಡೀಸಲ್ ಬೆಲೆಯೂ ಇಳಿಯುತ್ತಾ?

ನವದೆಹಲಿ, ಏಪ್ರಿಲ್ 8: ಅಮೆರಿಕ ಇರಾನ್ ಕದನ ವಿರಾಮ ಘೋಷಣೆಯಾಗುತ್ತಿದ್ದಂತೆಯೇ ಜಾಗತಿಕ ಕಚ್ಛಾ ತೈಲ (global crude oil) ಮಾರುಕಟ್ಟೆ ಗರಿಗೆದರಿ ನಿಂತಿದೆ. ತೈಲ ಬೆಲೆ ಒಮ್ಮೆಯೇ ಶೇ. 20ರಷ್ಟು ಕುಸಿದಿದೆ. ಒಂದು ಬ್ಯಾರಲ್ ತೈಲ ಬೆಲೆ 117.63 ಡಾಲರ್ ಇದ್ದದ್ದು 91.05 ಡಾಲರ್​ಗೆ ಇಳಿದಿದೆ. ಕೆಲವೇ ಗಂಟೆಯಲ್ಲಿ ತೈಲ ಬೆಲೆ ಬರೋಬ್ಬರಿ 26 ಡಾಲರ್​ಗಳಷ್ಟು ಕುಸಿತ ಕಂಡಿದೆ. ಒಂದೇ ದಿನದಲ್ಲಿ ಅತಿಹೆಚ್ಚು ಕುಸಿತ ದಾಖಲಾದ ಸಂದರ್ಭಗಳಲ್ಲಿ ಇದೂ ಒಂದು. ಕೋವಿಡ್ ವೇಳೆ ಈ ರೀತಿಯ ಮಹಾ ಕುಸಿತ ಆಗಿತ್ತು. ಆ ಬಳಿಕ ಅತಿಹೆಚ್ಚು ತೈಲ ಬೆಲೆ ಒಮ್ಮೆಗೇ ಇಳಿದಿರುವುದು ಇದೇ ಮೊದಲು.

ಚೀನಾ, ಪಾಕಿಸ್ತಾನದ ಪ್ರಯತ್ನಗಳಿಂದ ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ಏರ್ಪಡಲು ಸಾಧ್ಯವಾಗಿದೆ. ಇರಾನ್ ಕೆಲ ಷರತ್ತುಗಳೊಂದಿಗೆ 10 ಅಂಶಗಳ ಪ್ರಸ್ತಾಪವನ್ನು ಅಮೆರಿಕಕ್ಕೆ ರವಾನಿಸಿದೆ. ಏಪ್ರಿಲ್ 10ರಂದು ಇಸ್ಲಾಮಾಬಾದ್​ನಲ್ಲಿ ಈ ಸಂಬಂಧ ಮಾತುಕತೆಗಳು ನಡೆಯಬಹುದು.

ಇದನ್ನೂ ಓದಿ: ಯುದ್ಧ ಅಂತ್ಯವಾಗಿಲ್ಲ, ಕದನ ವಿರಾಮವಷ್ಟೇ: ಮೊಜ್ತಬಾ ಖಮೇನಿ

ಪೆಟ್ರೋಲ್, ಡೀಸಲ್ ಬೆಲೆ ಇಳಿಯುತ್ತಾ?

ಕದನ ವಿರಾಮ ಘೋಷಣೆ ಆಗುತ್ತಿದ್ದಂತೆಯೇ, ಹಾರ್ಮುಜ್ ಜಲಸಂಧಿಯಲ್ಲಿ ತನ್ನ ಹಿಡಿತವನ್ನು ಇರಾನ್ ಸಡಿಲಗೊಳಿಸಿದೆ. ಇದರಿಂದ ಹಡಗುಗಳ ಸಾಗಾಟ ಪೂರ್ಣವಾಗಿ ಪುನಾರಂಭಗೊಳ್ಳುತ್ತಿದೆ. ಇದರಿಂದಾಗಿ ತೈಲ ಬೆಲೆ ಇಳಿಯಲು ಸಾಧ್ಯವಾಗಿದೆ. ಫೆಬ್ರುವರಿ ಕೊನೆಯಲ್ಲಿ ಇರಾನ್ ಯುದ್ಧ ಆರಂಭಕ್ಕೆ ಮುನ್ನ ಕಚ್ಛಾ ತೈಲ ಬೆಲೆ ಬ್ಯಾರಲ್​ಗೆ 65 ಡಾಲರ್ ಆಸುಪಾಸು ಇತ್ತು. ಮುಂದಿನ ದಿನಗಳಲ್ಲಿ ಬೆಲೆ ಆ ಮಟ್ಟಕ್ಕೆ ಇಳಿಯುತ್ತಾ ಎನ್ನುವುದು ಪ್ರಶ್ನೆ.

ತೈಲ ಬೆಲೆ ನೂರು ಡಾಲರ್ ದಾಟಿದಾಗ ಭಾರತ ಸರ್ಕಾರ ಅಬಕಾರಿ ಸುಂಕವನ್ನು ಕಡಿಮೆ ಮಾಡಿತ್ತು. ಇದಕ್ಕೆ ಮುನ್ನ ನಯಾರಾ, ಶೆಲ್ ಇತ್ಯಾದಿ ಖಾಸಗಿ ಪೆಟ್ರೋಲಿಯಂ ಕಂಪನಿಗಳು ಪೆಟ್ರೋಲ್, ಡೀಸಲ್ ಬೆಲೆಗಳನ್ನು ಏರಿಸಿದವು. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಪ್ರೀಮಿಯಮ್ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಸಿದವರಾದರೂ, ಸಾಮಾನ್ಯ ಪೆಟ್ರೋಲ್, ಡೀಸಲ್ ಬೆಲೆ ಏರಿಸಲಿಲ್ಲ. ಅಬಕಾರಿ ಸುಂಕ ಕಡಿಮೆ ಮಾಡಿದ್ದರಿಂದ ಬೆಲೆ ಏರಿಕೆ ಅನಿವಾರ್ಯ ಆಗಲಿಲ್ಲ. ಸರ್ಕಾರ ಕಳೆದ ಎರಡು ವರ್ಷದಿಂದ ಪೆಟ್ರೋಲ್, ಡೀಸಲ್ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವಂತೆ ಕ್ರಮ ತೆಗೆದುಕೊಂಡು ಬಂದಿದೆ.

ಇದನ್ನೂ ಓದಿ: ಇರಾನ್​ನಿಂದ ತೈಲ ಸಾಗಾಟ ಸುಗಮ, ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ಒಪ್ಪಿಗೆ

ಈಗ ತೈಲ ಬೆಲೆ ಕಡಿಮೆ ಆಗಲಿರುವುದರಿಂದ ಭಾರತದಲ್ಲಿ ಪೆಟ್ರೋಲ್, ಡೀಸಲ್ ಬೆಲೆ ಇಳಿಯುವ ಸಾಧ್ಯತೆ ಕಡಿಮೆ. ಈಗಿರುವ ಬೆಲೆಯನ್ನೇ ಮುಂದುವರಿಸಬಹುದು. ಸರ್ಕಾರ ಮತ್ತೊಮ್ಮೆ ಅಬಕಾರಿ ಸುಂಕವನ್ನು ಏರಿಸುವ ಸಾಧ್ಯತೆ ಹೆಚ್ಚು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರಿ ಮಲಗಿದ್ದವರ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ! ಆರು ಜನರ ಸ್ಥಿತಿ ಗಂಭೀರ

ಗದಗ, ಏಪ್ರಿಲ್ 08: ಜಿಲ್ಲೆಯ ಮುಂಡರಗಿ (Gadag) ತಾಲೂಕಿನ ಡೋಣಿ ತಾಂಡಾದಲ್ಲಿ ನಡುರಾತ್ರಿ ನಡೆದ ಭೀಕರ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮನೆ ಮುಂಭಾಗ ಗಾಢ ನಿದ್ರೆಯಲ್ಲಿ ಮಲಗಿದ್ದ ಆರು ಜನರ ಮೇಲೆ ಗ್ರಾಮದ ವ್ಯಕ್ತಿಯೊಬ್ಬನು ಮಾರಣಾಂತಿಕ ಹಲ್ಲೆ  ನಡೆಸಿರುವುದು ಆತಂಕ ಸೃಷ್ಟಿಸಿದೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಂಡಾ ನಿವಾಸಿಗಳು ಕಂಗಾಲು

ಘಟನೆ ತಡರಾತ್ರಿ ಸುಮಾರು 1 ಗಂಟೆಯ ಸುಮಾರಿಗೆ ನಡೆದಿದ್ದು, ಹರ್ಜಪ್ಪ ಲಮಾಣಿ ಎಂಬ ವ್ಯಕ್ತಿ ದೊಣ್ಣೆಯಿಂದ ಮಲಗಿದ್ದವರ ಹಲ್ಲೆ ಮನಸೋಇಚ್ಛೆ ಮಾಡಿದ್ದಾನೆ. ಹಲ್ಲೆಗೊಳಗಾದ ಎಲ್ಲರೂ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಜನರ ಕೂಗಾಟ ಮತ್ತು ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದ ತಾಂಡಾ ನಿವಾಸಿಗಳು ಗಾಯಾಳುಗಳನ್ನು ಕಂಡು ಬೆಚ್ಚಿಬಿದ್ದಾರೆ.

ಕೆಲವರ ಸ್ಥಿತಿ ಚಿಂತಾಜನಕ

ಹಲ್ಲೆಯಲ್ಲಿ ಎಗ್ಗಪ್ಪ ಭಜನೆನಾಯಕ, ಶೇಖಪ್ಪ ನಾಯಕ್, ದೇವಕ್ಕ ನಾಯಕ್, ಷಣ್ಮುಖಪ್ಪ ರಾಠೋಡ, ಜಗದೀಶ್ ಲಮಾಣಿ ಹಾಗೂ ಚವಳ್ಳವ್ವ ಲಮಾಣಿ ಅವರಿಗೆ ತಲೆ, ಕಣ್ಣು ಮತ್ತು ಮುಖ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಮುಂಡರಗಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಘಟನೆಗೆ ನಿಖರ ಕಾರಣ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಗಾಯಾಳುಗಳ ಸ್ಥಿತಿ ಕಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ ಪತ್ನಿಯ ಪ್ರಿಯಕರನಿಂದಲೇ ನಡೀತು ಪತಿಯ ಕೊಲೆ! ಸ್ನೇಹಿತನಂತೆ ನಟಿಸಿದ ವ್ಯಕ್ತಿ ಕೊಲೆ ಮಾಡಿದ್ದು ಹೇಗೆ ಗೊತ್ತಾ?

ಆರೋಪಿ ಮಾನಸಿಕ ಅಸ್ವಸ್ಥ

ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಮಾತನಾಡಿ, ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿ ಎಂದು ತಿಳಿದುಬಂದಿದೆ. ಆತ ಚಿಕಿತ್ಸೆ ಪಡೆಯುತ್ತಿದ್ದ ಮಾಹಿತಿ ದೊರೆತಿದ್ದು, ಈ ಹಿನ್ನೆಲೆ ದಾಳಿ ನಡೆದಿರಬಹುದೆಂದು ಶಂಕಿಸಲಾಗಿದೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೇವಲ ಫೋಟೊಗಾಗಿ ತಿಲಕವೇ? ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ನಡೆಗೆ ಭಾರಿ ಆಕ್ಷೇಪ

ಚೆನ್ನೈ, ಏಪ್ರಿಲ್ 08: ಅಂದು ಸನಾತನ ಧರ್ಮ ನಿರ್ಮೂಲನೆಯ ಮಾತನಾಡಿದ್ದ, ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ ಸ್ಟಾಲಿನ್ ಇಂದು ತಿಲಕವಿಟ್ಟಿದ್ದಾರೆ. ಆದರೆ ಫೋಟೊ ತೆಗೆದ ಮೇಲೆ ಒಂದೇ ಒಂದು ಕ್ಷಣವೂ ಹಣೆಯಲ್ಲಿ ತಿಲಕವಿಟ್ಟುಕೊಳ್ಳದೆ ಬಟ್ಟೆಯಿಂದ ಅಳಿಸಿಹಾಕಿದ್ದಾರೆ. ಕೇವಲ ಚುನಾವಣೆಗಾಗಿ ಮಾತ್ರ ಈ ನಾಟಕವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬರಲಿದೆ. ನಾಮಪತ್ರ ಸಲ್ಲಿಕೆ ಮಾರ್ಚ್​ 30ರಿಂದ ಆರಂಭವಾಗಿದೆ. ಏಪ್ರಿಲ್ 6ಕ್ಕೆ ಕೊನೆಗೊಂಡಿದೆ. ಮಂಗಳವಾರ ನಾಮಪತ್ರಗಳ ಪರಿಶೀಲನೆ ನಡೆದಿದೆ. ಏಪ್ರಿಲ್ 9ರ ಒಳಗೆ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಚಂದ್ರದ್ರೋಣ ಪರ್ವತದಲ್ಲಿ ಶ್ರೀನಂದಾ ನಾಪತ್ತೆ: ಈ ವಿಡಿಯೋ ಬಳಿಕ ಕೆಲವೇ ನಿಮಿಷಗಳಲ್ಲಿ ಗಯಾಬ್

ಚಿಕ್ಕಮಗಳೂರು, ಏಪ್ರಿಲ್ 08): ಕೇರಳ ಮೂಲದ 14 ವರ್ಷದ  ಶ್ರೀ ನಂದಾ ಎನ್ನುವ ಹುಡುಗಿ ಚಿಕ್ಕಮಗಳೂರಿನ (Chikkamagaluru) ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ (Chandradrona Mountains) ನಾಪತ್ತೆಯಾಗಿದ್ದಾಳೆ. 40 ಜನರ ಪ್ರವಾಸಿ ತಂಡದೊಂದಿಗೆ ಬಂದಿದ್ದ ಶ್ರೀ ನಂದಾ ಮಾಣಿಕ್ಯಧಾರಾ ಬಳಿ ಕಾಣೆಯಾಗಿದ್ದಾಳೆ. ಆದ್ರೆ, ನಾಪತ್ತೆಯಾಗುವ ಕೆಲವು ನಿಮಿಷಗಳ ಮುನ್ನ ವಿಡಿಯೋ ಮಾಡಿಕೊಂಡಿದ್ದಾಳೆ. ಸಂಬಂಧಿ ಬಾಲಕಿಯೊಂದಿಗೆ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದು, ಇದಾದ ಬಳಿಕ ಕೆಲವೇ ನಿಮಿಷಗಳಲ್ಲಿ ಶ್ರೀ ನಂದಾ ಏಕಾಏಕಿ ನಾಪತ್ತೆಯಾಗಿದ್ದಾಳೆ. ಹೀಗಾಗಿ ಶ್ರೀ ನಂದಾ ನಾಪತ್ತೆ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಸದ್ಯ ಅಗ್ನಿಶಾಮಕ, ಅರಣ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಡ್ರೋನ್ ಸಹಾಯದಿಂದ ಬಾಲಕಿಯ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಶರಣ್ಯ ಸಿಕ್ಕ ಬೆನ್ನಲ್ಲೇ ಮತ್ತೋರ್ವ ಬಾಲಕಿ ಕಾಣೆ: ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

Source link

ಕಾಲೇಜು ವಿದ್ಯಾರ್ಥಿ ಸಾವಿನ ಸುತ್ತ ಹತ್ತಾರು ಅನುಮಾನ: ಸ್ಫೋಟಕ ಆರೋಪ ಮಾಡಿದ ಮೃತನ ತಂದೆ

ಬೆಂಗಳೂರು, ಏಪ್ರಿಲ್​​ 08:  ಕಟ್ಟಡದಿಂದ ಜಿಗಿದು ವಿದ್ಯಾರ್ಥಿಯೋರ್ವ ಮೃತಪಟ್ಟಿರುವ ಘಟನೆ ಯಲಹಂಕದಲ್ಲಿರೋ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್​​ನಲ್ಲಿ ನಿನ್ನೆ ನಡೆದಿತ್ತು. ಘಟನೆಯಲ್ಲಿ ಮೂಲತಃ ಜಾರ್ಖಂಡ್​​ನ ರಾಂಚಿ ನಿವಾಸಿ 21 ವರ್ಷದ ಲಕ್ಷ್ಯ ಮಿಶ್ರಾ ಮೃತಪಟ್ಟಿದ್ದರು. ಯಲಹಂಕ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದ ವಿದ್ಯಾರ್ಥಿ ನಸುಕಿನ ಜಾವ 3 ಗಂಟೆ ವೇಳೆಗೆ ಹಾಸ್ಟೆಲ್​​ನ 9ನೇ ಮಹಡಿಯಿಂದ ಜಿಗಿದಿದ್ದರು. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಆದರೀಗ ವಿದ್ಯಾರ್ಥಿ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ಹೌದು, ಪುತ್ರ ಲಕ್ಷ್ಯ ಮಿಶ್ರಾ ಸಾವಿನ ಬಗ್ಗೆ ಅವರ ತಂದೆ ಅಂಜನಿ ಕುಮಾರ್ ಸಾಕಷ್ಟು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ವೀಡಿಯೋ ಮಾಡಿ ಘಟನೆ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿರುವ ಅವರು, ತಮಗಿರುವ ಅನುಮಾನಗಳನ್ನು ಉಲ್ಲೇಖಿಸಿ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.

ಇದನ್ನೂ ಓದಿ: ನರ್ಸ್​​​​ ಆಗುತ್ತಿದ್ದಂತೆಯೇ ಬದಲಾಯ್ತು ಲೈಫ್ ಸ್ಟೈಲ್; ವಿಚ್ಛೇದನ ಬಯಸಿದ ಪತ್ನಿಗೆ ಮಚ್ಚಿನೇಟು, ಪತಿ ದುರಂತ ಸಾವು

ಅಂಜನಿ ಕುಮಾರ್ ಅನುಮಾನಗಳೇನು?

  • 9ನೇ ಮಹಡಿಯಿಂದ ಬಿದ್ದರೂ ಲಕ್ಷ್ಯ ಮಿಶ್ರಾ ದೇಹ ಛಿದ್ರವಾಗಿಲ್ಲ ಯಾಕೆ?
  • ಕಿಟಕಿಯಿಂದ ಜಿಗಿಯಲು ಸಾಕಷ್ಟು ಅಂತರ ಇಲ್ಲ
  • ಮೃತ ದೇಹ ಬಿದ್ದಿದ್ದ ಜಾಗದಲ್ಲಿ ಸ್ವಲ್ಪ ರಕ್ತ ಮಾತ್ರ ಕಂಡುಬಂದಿದೆ

ಈ ರೀತಿ ಕೆಲ ಸೂಕ್ಷ ಅನುಮಾನಗಳನ್ನು ಅಂಜನಿ ಕುಮಾರ್ ವ್ಯಕ್ತಪಡಿಸಿದ್ದು, ಹೀಗಾಗಿ ಮಗನ ಸಾವು ಕೊಲೆ ಅಥವಾ ಬೇರೆ ಕೃತ್ಯ ಇರಬಹುದು ಎಂದು ಹೇಳಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದು, ಸದ್ಯ ತಂದೆ ದೂರಿನ ಮೇಲೆ UDR ದಾಖಲು ಮಾಡಿಕೊಂಡಿರುವ ಯಲಹಂಕ ಉಪನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಲಕ್ಷ್ಯ ಮಿಶ್ರಾ ಮರಣೋತ್ತರ ಪರೀಕ್ಷೆ ಮತ್ತು FSL ವರದಿಗಾಗಿ ಕಾದು ಕುಳಿತಿದ್ದಾರೆ. ಇನ್ನು ರಾತ್ರಿ‌ 11.16ರ ಸುಮಾರಿಗೆ ಪ್ಯಾಸೇಜ್​​ನಲ್ಲಿ ಮೃತ ಲಕ್ಷ್ಯ ಓಡಾಡಿದ್ದು, ಈ ವೇಳೆ ನಾಲ್ಕೈದು ಹುಡುಗರು ಮತ್ತೊಂದು ರೂಮ್​​ಗೆ ಎಂಟ್ರಿಯಾಗಿದ್ದಾರೆ. ತದನಂತರ 2 ಗಂಟೆ ಸುಮಾರಿಗೆ ರೂಮ್​​ನಿಂದ ಹೊರಬಂದಿದ್ದ ವಿದ್ಯಾರ್ಥಿ ಮತ್ತೆ ಒಳಗೆ ಹೋಗಿದ್ದಾನೆ. ಹೀಗಾಗಿ ಈ ಅನುಮಾನಸ್ಪಾದ ಓಡಾಟ ಕೂಡ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಮೃತನ ಪೋಷಕರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

 

Source link

Exit mobile version