Video: ತನ್ನ ಕಂದಮ್ಮನಿಗೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕನಿಗೆ ಧನ್ಯವಾದ ತಿಳಿಸಿದ ಯುವಕ

Video: ತನ್ನ ಕಂದಮ್ಮನಿಗೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕನಿಗೆ ಧನ್ಯವಾದ ತಿಳಿಸಿದ ಯುವಕ

ಆನೆಗಳ (elephants) ಆಟ ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವುದೇ ಚಂದ. ಆನೆಗಳು ತನ್ನ ಸಹಜ ಗುಣದಿಂದಲೇ ಮನುಷ್ಯರಿಗೆ ಹತ್ತಿರವಾಗುತ್ತದೆ. ಅದರಲ್ಲೂ ಈ ತಾಯಾನೆಗಳು ಸಹಾಯ ಮಾಡಿದ ಮನುಷ್ಯರಿಗೆ ಕೃತಜ್ಞತೆ ಸಲ್ಲಿಸುವುದನ್ನು ನೋಡುವುದಕ್ಕೆ ಖುಷಿಯಾಗುತ್ತದೆ. ಅಂತಹದ್ದೇ ದೃಶ್ಯವೊಂದು ವೈರಲ್ ಆಗಿದ್ದು, ಬಾಯಾರಿದ್ದ ತನ್ನ ಕಂದಮ್ಮನಿಗೆ ನೀರು ಕೊಟ್ಟದ್ದಕ್ಕೆ ಯುವಕನಿಗೆ ತಾಯಾನೆಯೊಂದು ಧನ್ಯವಾದ ತಿಳಿಸಿದೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಯೋಗ್ (Yog) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ತಾಯಾನೆ ಗುಣವನ್ನು ಕಾಣಬಹುದು. ತಾಯಾನೆ ಹಾಗೂ ಮರಿಯಾನೆ ಅದರ ಮಾವುತನ ಜತೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವುದನ್ನು ಕಾಣಬಹುದು. ಇದೇ ವೇಳೆ ಮರಿಯಾನೆಗೆ ವಿಪರೀತ ಬಾಯಾರಿಕೆ ಆದಂತೆ ಕಾಣುತ್ತಿದೆ. ಹೀಗಾಗಿ ರಸ್ತೆ ಬದಿಯಲ್ಲಿ ಗಿಡಗಳಿಗೆ ಪೈಪ್ ನಲ್ಲಿ ನೀರು ಹಾಕುತ್ತಿದ್ದ ಯುವಕನ ಹತ್ತಿರ ಓಡೋಡಿ ಹೋಗಿದೆ. ಆತ ಕೂಡ ನೀರು ಕುಡಿಯಲು ಅನುವು ಮಾಡಿಕೊಟ್ಟಿದ್ದಾನೆ. ನೀರಿನ ಪೈಪ್ ಬಾಯಿಯೊಳಗಿಟ್ಟು ಮರಿಯಾನೆ ಬಾಯಾರಿಕೆ ನೀಗುವಷ್ಟು ನೀರು ಕುಡಿದಿದೆ. ಅದಾದ ಬಳಿಕ ತಾಯಾನೆ ಯುವಕನಿಗೆ ಸೊಂಡಿಲೆತ್ತಿ ಧನ್ಯವಾದ ಸಲ್ಲಿಸಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ರಸ್ತೆ ದಾಟಲು ಸಹಾಯ ಮಾಡಿದ ವ್ಯಕ್ತಿಗೆ ಸೊಂಡಿಲೆತ್ತಿ ಧನ್ಯವಾದ ತಿಳಿಸಿದ ಆನೆಗಳ ಹಿಂಡು

ಏಪ್ರಿಲ್ 1 ರಂದು ಹಂಚಿಕೊಳ್ಳಲಾದ ಈ ವಿಡಿಯೋ 2.1 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಮನುಷ್ಯರಿಗೆ ಹೋಲಿಸಿದ್ರೆ ಪ್ರಾಣಿಗಳೇ ಗುಣದಲಿ ಮೇಲು ಎಂದಿದ್ದಾರೆ. ಇನ್ನೊಬ್ಬರು, ತುಂಬಾ ಬಾಯಾರಿಕೆಯಾದಂತೆ ಕಾಣುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ತಾಯಿ ಪ್ರೀತಿ ಮುಂದೆ ಏನು ಇಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಐಪಿಎಲ್‌ನಲ್ಲಿ ಮೊದಲ ಡಬಲ್ ಹೆಡರ್; ಯಾವ 4 ತಂಡಗಳ ನಡುವೆ ಪಂದ್ಯ?

ಮಾರ್ಚ್​ 28 ರಂದು ಆರಂಭವಾದ 2026 ರ ಐಪಿಎಲ್‌ನಲ್ಲಿ (IPL 2026) ಇದುವರೆಗೆ 6 ಪಂದ್ಯಗಳು ನಡೆದಿವೆ. 7ನೇ ಪಂದ್ಯ ಇಂದು, ಸಿಎಸ್​ಕೆ ಹಾಗೂ ಪಂಜಾಬ್ (CSK vs PBKS) ನಡುವೆ ನಡೆಯಲಿದೆ. ಅಂದಹಾಗೆ ಈ ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ 12 ಡಬಲ್ ಹೆಡರ್ (Double Header) ಪಂದ್ಯಗಳು ನಡೆಯಲಿವೆ. ಅಂದರೆ ಒಂದೇ ದಿನ ಎರಡು ಪಂದ್ಯಗಳು ನಡೆಯಲಿವೆ. ಅದರಲ್ಲಿ ಮೊದಲ ಡಬಲ್ ಹೆಡರ್ ಪಂದ್ಯ ಏಪ್ರಿಲ್ 4 ರಂದು ನಡೆಯಲಿದೆ. ದಿನದ ಮೊದಲ ಪಂದ್ಯ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. ಹಾಗೆಯೇ ದಿನದ ಎರಡನೇ ಪಂದ್ಯದಲ್ಲಿ ಗುಜರಾತ್ ತಂಡಕ್ಕೆ ರಾಜಸ್ಥಾನ್ ರಾಯಲ್ಸ್ ಎದುರಾಗಲಿದೆ.

ಮುಂಬೈ-ಡೆಲ್ಲಿ ಮುಖಾಮುಖಿ ದಾಖಲೆ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇದುವರೆಗೆ 37 ಪಂದ್ಯಗಳು ನಡೆದಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 21 ಪಂದ್ಯಗಳನ್ನು ಗೆದ್ದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ 16 ಪಂದ್ಯಗಳನ್ನು ಗೆದ್ದಿದೆ. ಅಂದರೆ ಈ ಮುಖಾಮುಖಿಯಲ್ಲಿ ಮುಂಬೈ ಮೇಲುಗೈ ಸಾಧಿಸಿರುವುದನ್ನು ಕಾಣಬಹುದಾಗಿದೆ. ಇನ್ನು ಈ ಅವೃತ್ತಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಅದರಲ್ಲಿ ಮುಂಬೈ ಇಂಡಿಯನ್ಸ್, ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರೆ, ಇತ್ತ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ತಂಡವನ್ನು ಮಣಿಸಿದೆ. ಹೀಗಾಗಿ ಗೆದ್ದ ತಂಡಗಳ ನಡುವಿನ ಕಾಳಗ ತೀವ್ರ ಕುತೂಹಲ ಕೆರಳಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ರಾಣಾ, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಅಕ್ಸರ್ ಪಟೇಲ್ (ನಾಯಕ), ವಿಪ್ರಜ್ ನಿಗಮ್, ಕುಲ್ದೀಪ್ ಯಾದವ್, ಲುಂಗಿ ಎನ್‌ಗಿಡಿ, ಮುಖೇಶ್ ಕುಮಾರ್, ಟಿ ನಟರಾಜನ್.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ, ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಶೆರ್ಫಾನೆ ರುದರ್‌ಫೋರ್ಡ್, ಶಾರ್ದೂಲ್ ಠಾಕೂರ್, ಮಯಾಂಕ್ ಮಾರ್ಕಾಂಡೆ, ಗಜಾನಫರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

ಗುಜರಾತ್- ರಾಜಸ್ಥಾನ್ ಮುಖಾಮುಖಿ

ಐಪಿಎಲ್‌ನಲ್ಲಿ ಗುಜರಾತ್ ಮತ್ತು ರಾಜಸ್ಥಾನ್ ನಡುವೆ ಇದುವರೆಗೆ 8 ಪಂದ್ಯಗಳು ನಡೆದಿವೆ. ಇದರಲ್ಲಿ ಗುಜರಾತ್ ಟೈಟನ್ಸ್ 6 ಪಂದ್ಯಗಳನ್ನು ಗೆದ್ದಿದ್ದರೆ, ರಾಜಸ್ಥಾನ್ ಉಳಿದ 2 ಪಂದ್ಯಗಳನ್ನು ಗೆದ್ದಿದೆ. ಅಂದರೆ ಈ ಮುಖಾಮುಖಿಯಲ್ಲಿ ಗುಜರಾತ್ ಮೇಲುಗೈ ಸಾಧಿಸಿರುವುದನ್ನು ಕಾಣಬಹುದಾಗಿದೆ. ಇನ್ನು ಈ ಅವೃತ್ತಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಅದರಲ್ಲಿ ಗುಜರಾತ್ ಟೈಟನ್ಸ್, ಪಂಜಾಬ್ ವಿರುದ್ಧ ಸೋತಿದ್ದರೆ, ಇತ್ತ ರಾಜಸ್ಥಾನ್, ಸಿಎಸ್​ಕೆ ತಂಡವನ್ನು ಮಣಿಸಿದೆ.

IPL 2026: ಮೊದಲ ಗೆಲುವಿನ ಹುಡುಕಾಟದಲ್ಲಿ ಸಿಎಸ್​ಕೆ; ತಂಡದಲ್ಲಿ ಏನೆಲ್ಲಾ ಬದಲಾವಣೆ?

ಗುಜರಾತ್ ಟೈಟಾನ್ಸ್ ಸಂಭಾವ್ಯ ಪ್ಲೇಯಿಂಗ್ XI: ಸಾಯಿ ಸುದರ್ಶನ್, ಶುಭ್​ಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ವಾಷಿಂಗ್ಟನ್ ಸುಂದರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ರಾಜಸ್ಥಾನ್ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್ XI: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಸಂದೀಪ್ ಶರ್ಮಾ, ರವಿ ಬಿಷ್ಣೋಯ್, ಬ್ರಿಜೇಶ್ ಶರ್ಮಾ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರೈತರಿಗೂ ತಟ್ಟಿದ್ದ ಯುದ್ಧದ ಬಿಸಿ: ಗಗನಕ್ಕೇರಿದ್ದ ತರಕಾರಿ ದರದಲ್ಲಿ ಭಾರೀ ಕುಸಿತ

ಚಿಕ್ಕಬಳ್ಳಾಪುರ, ಏಪ್ರಿಲ್​ 03: ವಾಣಿಜ್ಯ ಸಿಲಿಂಡರ್​ಗಳ ಕೊರತೆಯಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಹಲವು ಹೋಟೆಲ್‍ಗಳು ಬಂದ್ ಆಗಿವೆ. ಇತ್ತ ಚಿಕ್ಕಬಳ್ಳಾಪುರದಲ್ಲೂ ಗ್ಯಾಸ್​ ಅಭಾವ ಮುಂದುವರೆದಿದೆ. ಹೋಟೆಲ್​ಗಳು ಬಂದ್ ಆಗುತ್ತಿವೆ. ಹೀಗಾಗಿ ಸದ್ಯ ನಗರದಲ್ಲಿ ತರಕಾರಿಗೆ (vegetable) ಬೆಲೆ ಇಲ್ಲದಂತಾಗಿದ್ದು, ರಾಶಿ-ರಾಶಿ ತರಕಾರಿ ಮಾರುಕಟ್ಟೆಯಲ್ಲಿ ಕೊಳೆಯುವಂತಾಗಿವೆ.

ಚಿಕ್ಕಬಳ್ಳಾಪುರದಲ್ಲಿ ತರಕಾರಿಗಿಲ್ಲ ಬೆಲೆ

ಚಿಕ್ಕಬಳ್ಳಾಪುರ ಹೂವು, ಹಣ್ಣು, ತರಕಾರಿಗೆ ಖ್ಯಾತಿ ಪಡೆದಿದೆ. ಅಲ್ಲಿ ಬೆಳೆಯುವ ತರಕಾರಿಗಳು ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಮೆಟ್ರೋ ನಗರಗಳಿಗೆ ದಿನನಿತ್ಯ ರಫ್ತಾಗುತ್ತದೆ. ಆದರೆ ವಾಣಿಜ್ಯ ಸಿಲಿಂಡರ್​ಗಳ ಕೊರತೆಯಿಂದ ಬೆಂಗಳೂರು ಸೇರಿದಂತೆ ವಿವಿಧಡೆ ಹೋಟೆಲ್‍ಗಳು ಬಂದ್ ಆಗಿವೆ.

ಇದನ್ನೂ ಓದಿ: ಚಿಯಾ, ಕಲ್ಲಂಗಡಿ ಬೆನ್ನಲ್ಲೇ ಕರಬೂಜಕ್ಕೂ ತಟ್ಟಿದ ಯುದ್ಧದ ಬಿಸಿ: ದರ ಕುಸಿತ, ಹೊಲದಲ್ಲೇ ಕೊಳೆಯುತ್ತಿರುವ ಹಣ್ಣು

ಇದರಿಂದ ಚಿಕ್ಕಬಳ್ಳಾಪುರದ ತರಕಾರಿಗೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ ತರಕಾರಿಗಳ ಬೆಲೆ ತೀವ್ರ ಕುಸಿತವಾಗಿದೆ. ಬೆಸಿಗೆಯಲ್ಲಿ ಕೆ.ಜಿ ಬೀನ್ಸ್ ಬೆಲೆ ಬರೋಬ್ಬರಿ 80 ರೂಪಾಯಿಯಿಂದ 100 ರೂಪಾಯಿವರೆಗೂ ಇರುತ್ತೆ, ಆದರೆ ಈ ಭಾರಿ ಮೂಟೆ ಬೀನ್ಸ್ ಬೆಲೆ 300 ರೂಪಾಯಿಯಿಂದ 400 ನೂರು ರೂಪಾಯಿಗೆ ಬಿಕಾರಿಯಾಗುತ್ತಿದೆ.

ಯಾವ ತರಕಾರಿಗೆ ಎಷ್ಟು ಬೆಲೆ?

ಇರಾನ್, ಇಸ್ರೇಲ್-ಅಮೇರಿಕ ಯುದ್ಧ ಆರಂಭವಾಗುವುದಕ್ಕೂ ಮುನ್ನ ತರಕಾರಿಗಳಿಗೆ ಒಳ್ಳೆಯ ಬೆಲೆಯಿತ್ತು. ಕಳೆದ 20 ದಿನಗಳಿಂದ ತರಕಾರಿಗಳ ಬೆಲೆ ತೀವ್ರ ಕುಸಿತಿದೆ. ಬೀನ್ಸ್ ಕೆಜಿಗೆ 20 ರೂ, ಕ್ಯಾರೆಟ್ 8 ರೂ, ಸೋರೆಕಾಯಿ 5 ರೂ, ಆಲೂಗಡ್ಡೆ 6 ರೂ, ಬೆಂಡೆಕಾಯಿ 10 ರೂ, ಈರುಳ್ಳಿ 12 ರೂ, ಮೂಲಂಗಿ 5 ರೂ, ಆಗಲಕಾಯಿ 15 ರೂ, ಕ್ಯಾಪ್ಸಿಕಂ 20 ರೂ, ಬದನೇಕಾಯಿ 2 ರೂ, ದರ ಕುಸಿದಿದೆ. ಇನ್ನು ಹಗಲು-ರಾತ್ರಿ ಕಷ್ಟಪಟ್ಟು ತರಕಾರಿ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ.

ಇದನ್ನೂ ಓದಿ: ಮಧ್ಯಪ್ರಾಚ್ಯದ ವಾರ್​​ ಎಫೆಕ್ಟ್​​: ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ; ಪಾತಾಳಕ್ಕಿಳಿದ ಬೆಲೆ

ಒಟ್ಟಿನಲ್ಲಿ ಗಲ್ಫ್​ ಯುದ್ಧ ಎಫೆಕ್ಟ್​ನಿಂದ ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್​​ ಉದ್ಯಮ ಕುಂಟುತ್ತಾ ಸಾಗಿದೆ. ಇದರಿಂದ ಹೋಟೆಲ್ ಉದ್ಯಮ ನಂಬಿಕೊಂಡಿದ್ದ ತರಕಾರಿ ವ್ಯಾಪಾರಕ್ಕೂ ಭಾರಿ ಹೊಡೆತ ಬಿದ್ದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪೇಪರ್ ಪ್ಲೇಟ್‌ನಲ್ಲಿ ಊಟ ಮಾಡುವುದು ಒಳ್ಳೆಯದೋ, ಅಲ್ಲವೋ? ತಜ್ಞರು ನೀಡಿದ ಮಾಹಿತಿ ಇಲ್ಲಿದೆ

ಇತ್ತೀಚಿನ ದಿನಗಳಲ್ಲಿ ಪೇಪರ್ ಪ್ಲೇಟ್‌ಗಳ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಮನೆಗಳಲ್ಲಿ ನಡೆಯುವ ಕಾರ್ಯಕ್ರಮ, ಹುಟ್ಟುಹಬ್ಬ, ಮದುವೆ ಸೇರಿದಂತೆ ವಿವಿಧ ರೀತಿಯ ಸಮಾರಂಭಗಳಲ್ಲಿ ಆಹಾರ ಸೇವನೆಗೆ ಬಾಳೆ ಎಲೆ ಅಥವಾ ಸ್ಟೀಲ್ ಪ್ಲೇಟ್ ಬದಲು ಜನ ಪೇಪರ್ ಪ್ಲೇಟ್‌ಗಳನ್ನು ಬಳಸುವುದಕ್ಕೆ ಆರಂಭಿಸಿದ್ದಾರೆ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಬಿಸಿ ಬಿಸಿ ಆಹಾರವನ್ನು ಇಂತಹ ಪ್ಲೇಟ್‌ಗಳಲ್ಲಿ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು, ಅಷ್ಟೇಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಈ ಬಗ್ಗೆ ಹಲವು ರೀತಿಯ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಡಾ. ವಿಕ್ರಾಂತ್ ಸಿಂಗ್ ಠಾಕೂರ್ ಹೇಳಿರುವ ಮಾಹಿತಿ ಕೂಡ ವೈರೆಲ್ ಆಗಿದೆ. ಅವರು ಪೇಪರ್ ಪ್ಲೇಟ್ (Paper Plates) ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಅದರಲ್ಲಿ ತಿಳಿಸಿದ್ದಾರೆ.

ವೈದ್ಯರು ಹೇಳುವ ಪ್ರಕಾರ, ಸಾಮಾನ್ಯವಾಗಿ ನಾವು ಬಿಸಿ ಆಹಾರವನ್ನು ಪೇಪರ್ ಪ್ಲೇಟ್ ಅಥವಾ ಪ್ಲಾಸ್ಟಿಕ್ ಲೇಪಿತ ಪ್ಲೇಟ್‌ಗಳಲ್ಲಿ ಸೇವಿಸುತ್ತೇವೆ. ಆದರೆ ಇವು ಸಾಮಾನ್ಯ ಪ್ಲೇಟ್‌ಗಳಲ್ಲ, ಇವುಗಳನ್ನು “ಕ್ಯಾನ್ಸರ್ ಪ್ಲೇಟ್‌ಗಳು” ಎಂದು ಕರೆಯಬಹುದು ಎಂದು ಹೇಳಿದ್ದಾರೆ. ಏಕೆಂದರೆ ಬಿಸಿ ಆಹಾರದಿಂದ ಪ್ಲೇಟ್‌ನ ಮೇಲಿನ ಪ್ಲಾಸ್ಟಿಕ್ ಲೇಪ ಕರಗಿ, ಮೈಕ್ರೋಪ್ಲಾಸ್ಟಿಕ್‌ಗಳು ಮತ್ತು ಹಾನಿಕಾರಕ ರಾಸಾಯನಿಕಗಳು ಆಹಾರದಲ್ಲಿ ಬೆರೆತು ನಮ್ಮ ದೇಹಕ್ಕೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ.

ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ?

  • ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ
  • ಹಾರ್ಮೋನ್ ಅಸಮತೋಲನ
  • ರೋಗನಿರೋಧಕ ಶಕ್ತಿ ಕಡಿಮೆಯಾಗುವುದು
  • ಪರಿಸರದ ಮೇಲೂ ಹಾನಿ

ಇಂತಹ ಪ್ಲೇಟ್‌ಗಳನ್ನು ಬಳಸಿ ಬಿಸಾಡಿದಾಗ, ಅವುಗಳನ್ನು ಹಸು ಮುಂತಾದ ಪ್ರಾಣಿಗಳು ತಿಂದರೆ ಸಾವಿಗೆ ದಾರಿಮಾಡಿಕೊಡಬಹುದು. ಇನ್ನು, ಇವುಗಳನ್ನು ಸುಟ್ಟರೆ ವಿಷಕಾರಿ ಹೊಗೆ ಉಂಟಾಗಿ ಗಾಳಿ ಮಾಲಿನ್ಯವಾಗಬಹುದು. ಇದರಿಂದ ಉಸಿರಾಟ ಸಂಬಂಧಿ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಬಹುದು.

ಇದನ್ನೂ ಓದಿ: ಊಟ ಮಾಡುವಾಗ ಅಥವಾ ಊಟವಾದ ಎಷ್ಟು ಹೊತ್ತಿನ ನಂತರ ನೀರು ಕುಡಿಯಬೇಕು? ಆಯುರ್ವೇದ ಏನು ಹೇಳುತ್ತದೆ?

ತಜ್ಞರು ಹೇಳುವುದೇನು?

ಪರಿಸರ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪೇಪರ್ ಪ್ಲೇಟ್‌ಗಳ ಬದಲು ನೈಸರ್ಗಿಕ ವಸ್ತುಗಳಿಂದ ತಯಾರಾದ ಪ್ಲೇಟ್‌ಗಳನ್ನು ಬಳಸುವುದು ಉತ್ತಮ. ಉದಾಹರಣೆಗೆ:

  • ಅಡಿಕೆ (Areca) ಎಲೆ ಪ್ಲೇಟ್‌ಗಳು
  • ಬಾಳೆ ಎಲೆಗಳು
  • ಬಿದಿರಿನ ಪ್ಲೇಟ್‌ಗಳು
    ಒಟ್ಟಿನಲ್ಲಿ, ಸಣ್ಣ ಅಭ್ಯಾಸಗಳು ನಮ್ಮ ಆರೋಗ್ಯ ಮತ್ತು ಪರಿಸರದ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಆದ್ದರಿಂದ ಪೇಪರ್ ಪ್ಲೇಟ್ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾರ್ಯಕ್ರಮದಲ್ಲಿ ಕುಸಿದುಬಿದ್ದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ

ಬೆಂಗಳೂರು, (ಏಪ್ರಿಲ್ 03): ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆಯವರು (Lokayukta retired justice santosh hegde ) ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಇಂದು (ಏಪ್ರಿಲ್ 03) ಸ್ಕೌಟ್ಸ್ & ಗೈಡ್ಸ್ ಆಯುಕ್ತ PGR ಸಿಂಧ್ಯಾಗೆ ಅಭಿನಂದನಾ ಸಮಾರಂಭದಲ್ಲಿ ಸಂತೋಷ್ ಹೆಗ್ಡೆ ಭಾಗವಹಿಸಿದ್ದು, ಈ ವೇಳೆ ಭಾಷಣ ಮಾಡುವಾಗ ಅಸ್ವಸ್ಥಗೊಂಡಿದ್ದಾರೆ. ಬಳಿಕ ಭಾಷಣ ಮುಗಿಸಿ ವೇದಿಕೆ ಮೇಲಿನ ಕುರ್ಚಿ ಮೇಲೆ ಕುಳಿತುಕೊಳ್ಳುವಾಗ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸದ್ಯ ಅವರಿಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಕಿತ್ಸೆ ನೀಡಲಾಗುತ್ತಿದೆ.

Source link

ಏಪ್ರಿಲ್​ನಲ್ಲಿ ಚಿನ್ನ ಸಖತ್ ದುಬಾರಿ? ಕಳೆದ 45 ವರ್ಷದಲ್ಲೆ ಬಂಗಾರಕ್ಕೆ ಗರಿಷ್ಠ ಡಿಮ್ಯಾಂಡ್; 20,000 ರೂಗೆ ಏರುತ್ತಾ ಬೆಲೆ?

ನವದೆಹಲಿ, ಏಪ್ರಿಲ್ 3: ಕಳೆದ 1 ವರ್ಷದಿಂದ ಚಿನ್ನದ ಬೆಲೆ (Gold Rates) ಬಹಳ ಏರಿದೆ. 2025ರ ಏಪ್ರಿಲ್ 3ರಂದು ಅಪರಂಜಿ ಚಿನ್ನದ ಬೆಲೆ 9,164 ರೂ ಇತ್ತು. ಒಂದು ವರ್ಷದ ನಂತರ ಇವತ್ತು ಅದರ ಬೆಲೆ 15,093 ರೂಗೆ ಏರಿದೆ. ಒಂದು ವರ್ಷದಲ್ಲಿ ಬೆಲೆಯಲ್ಲಿ ಶೇ. 65ರಷ್ಟು ಏರಿಕೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 4,700 ಡಾಲರ್ ದಾಟಿ, 4,800 ಡಾಲರ್ ಗಡಿಯತ್ತ ಸಾಗಿದೆ. ಒಂದು ಔನ್ಸ್ ಎಂದರೆ 28.35 ಗ್ರಾಮ್.

ಫೆಬ್ರುವರಿ 28ರಂದು ಯುದ್ಧ ಶುರುವಾದಾಗ ಚಿನ್ನ, ಬೆಳ್ಳಿ ಬೆಲೆ ತೀರಾ ಹೆಚ್ಚಬಹುದು ಎಂದು ಭಾವಿಸಲಾಗಿತ್ತು. ಆದರೆ, ಬೆಲೆ ಇಳಿಕೆಯಾಗಿದೆ. ಮಾರ್ಚ್ 1ರಂದು 17,309 ರೂ ಇದ್ದ ಚಿನ್ನದ ಬೆಲೆ ಇವತ್ತು 15,093 ರೂಗೆ ಇಳಿದಿದೆ. ಮಾರ್ಚ್ 1ರಿಂದೀಚೆ ಶೇ. 12ರಷ್ಟು ಬೆಲೆ ಇಳಿಕೆ ಆಗಿದೆ. ಖ್ಯಾತ ಹೂಡಿಕೆದಾರ ಪೀಟರ್ ಶಿಫ್ ಪ್ರಕಾರ ಚಿನ್ನದ ಇಳಿಕೆಯ ಆಟ ಮುಕ್ತಾಯವಾಗಿದೆ. ಇನ್ನೇನಿದ್ದರೂ ಪವರ್​ಫುಲ್ ಜಂಪ್.

ಇದನ್ನೂ ಓದಿ: ಚಿನ್ನದ ಬೆಲೆ ಗ್ರಾಮ್​ಗೆ 180 ರೂ ಏರಿಕೆ; ಇಲ್ಲಿದೆ ದರಪಟ್ಟಿ

ಮಾರ್ಚ್​ನಲ್ಲಿ ಇಳಿದಿದ್ದ ಚಿನ್ನದ ಬೆಲೆ ಏಪ್ರಿಲ್​ನಲ್ಲಿ ಸತತವಾಗಿ ಏರಿಕೆಯಾಗುವ ಟ್ರೆಂಡ್ ಇದೆ. ಇದು ಯುದ್ಧದ ಪರಿಣಾಮದಿಂದ ಮಾತ್ರವೇ ಆಗುತ್ತಿರುವ ಏರಿಕೆಯಲ್ಲ. ಬದಲಾಗಿ, ಹೂಡಿಕೆದಾರರು ಅಮೆರಿಕನ್ ಡಾಲರ್​ನಿಂದ ದೂರವಾಗಿ, ನೈಜ ಆಸ್ತಿಯತ್ತ ವಾಲತೊಡಗಿರುವುದರ ಕುರುಹು ಇದು ಎಂಬುದು ಪೀಟರ್ ಶಿಫ್ ಅವರ ಅನಿಸಿಕೆ.

ಏಪ್ರಿಲ್​ನಲ್ಲಿ ಚಿನ್ನದ ಬೆಲೆ 20,000 ರೂ ದಾಟುತ್ತಾ?

ಪೀಟರ್ ಶಿಫ್ ಪ್ರಕಾರ, ಮಾರ್ಚ್ ತಿಂಗಳು 2008ರ ನಂತರ ಚಿನ್ನದ ಸಾಧನೆ ಅತ್ಯಂತ ಕಳಪೆ ಸಾಧನೆ ಕಂಡ ತಿಂಗಳೆನಿಸಿದೆ. ಹಾಗೆಯೇ, ಏಪ್ರಿಲ್ ತಿಂಗಳು ಕಳೆದ ನಾಲ್ಕೂವರೆ ದಶಕದಲ್ಲೇ ಚಿನ್ನಕ್ಕೆ ಬೆಸ್ಟ್ ಮಂತ್ ಆಗಿರಲಿದೆಯಂತೆ.

ಇದನ್ನೂ ಓದಿ: ಬೆಂಗಳೂರಿನ ಶೇ. 80 ಐಟಿ ಕೂಲಿಗಳಿಗೆ ಇನ್ನು 3 ವರ್ಷದಲ್ಲಿ ಕೆಲಸ ಇರೋದಿಲ್ಲ: ಶಾಕ್ ಕೊಟ್ಟಿದೆ ರೆಡ್ಡಿಟ್ ಪೋಸ್ಟ್

ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್​ಗೆ 4,700 ಡಾಲರ್ ಬೆಲೆ ದಾಟಿ, 4,800 ಡಾಲರ್​ನತ್ತ ಸಾಗಿದೆ. ಮಾರ್ಚ್ 23ರ ನಂತರ ಚಿನ್ನದ ಬೆಲೆ ಶೇ. 15ರಷ್ಟು ಹೆಚ್ಚಾಗಿದೆ. ಇದೇ ಟ್ರೆಂಡ್ ಏಪ್ರಿಲ್​ನಲ್ಲಿ ಮುಂದುವರಿಯಲಿದ್ದು, ಒಂದು ಔನ್ಸ್ ಚಿನ್ನದ ಬೆಲೆ 6,000 ಡಾಲರ್ ದಾಟಬಹುದು. ಅಂದರೆ, ಒಂದು ಗ್ರಾಮ್ ಚಿನ್ನದ ಬೆಲೆ 19,616 ರೂ ಮುಟ್ಟಬಹುದು. 20,000 ರೂ ದಾಟಿದರೂ ಅಚ್ಚರಿ ಇಲ್ಲ ಎನ್ನುವ ಅಭಿಪ್ರಾಯ ಇವರದ್ದು. ಅಂದರೆ ಮುಂದಿನ ನಾಲ್ಕು ವಾರದಲ್ಲಿ ಬಂಗಾರದ ಬೆಲೆ ಶೇ 20ಕ್ಕಿಂತಲೂ ಹೆಚ್ಚಿನ ಪ್ರಮಾಣದಷ್ಟು ಏರಿಕೆ ಆಗಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹೈದರಾಬಾದ್‌ನ ಪಬ್‌ನಲ್ಲಿ ನಟಿ ಹೇಮಾ ಕೊಲ್ಲಗೆ ಡ್ರಗ್ಸ್ ಪರೀಕ್ಷೆ

ಬೆಂಗಳೂರಿನ ಪಾರ್ಟಿಯೊಂದರಲ್ಲಿ ಭಾಗಿ ಆಗಿ ಡ್ರಗ್ಸ್ ಸೇವಿಸಿದ್ದ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಟಿ ಹೇಮಾ ಕೊಲ್ಲ (Hema Kolla) ಇದಿಗ ಮತ್ತೊಮ್ಮೆ ಪಾರ್ಟಿಯೊಂದರಲ್ಲಿ ಡ್ರಗ್ಸ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ನಟಿ ಹೇಮಾ ಕೊಲ್ಲ ಹೈದರಾಬಾದ್​​ನ ಪಬ್ ಒಂದರಲ್ಲಿ ಪಾರ್ಟಿಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಪಬ್​ ಮೇಲೆ ಪೊಲೀಸ್ ದಾಳಿ ಆಗಿದ್ದು, ಅಲ್ಲಿ ನಟಿ ಹೇಮಾ ಅವರಿಗೆ ಡ್ರಗ್ಸ್ ಪರೀಕ್ಷೆ ಮಾಡಲಾಗಿತ್ತು.

ಹೈದರಾಬಾದ್‌ನ ಕೊಂಡಾಪುರದಲ್ಲಿರುವ ‘ಕ್ವಾಕ್ ಅರೀನಾ ಪಬ್’ ಮೇಲೆ ಇತ್ತೀಚೆಗೆ ಹೈದರಾಬಾದ್ ಪೊಲೀಸರು ಮತ್ತು ಮಾದಕ ವಸ್ತು ನಿಯಂತ್ರಣ ತಂಡವಾದ ಈಗಲ್ ತಂಡ ಜಂಟಿಯಾಗಿ ದಾಳಿ ನಡೆಸಿತ್ತು. ಈ ಪಬ್‌ನಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ. ಪಾರ್ಟಿಯಲ್ಲಿದ್ದ ಸುಮಾರು 64 ಜನರಿಗೆ ಪೊಲೀಸರು ಸ್ಥಳದಲ್ಲೇ ಡ್ರಗ್ಸ್ ಪರೀಕ್ಷೆ ನಡೆಸಿದರು. ಈ ಪರೀಕ್ಷೆಯಲ್ಲಿ ಎಂಟು ಜನರಿಗೆ ಪಾಸಿಟಿವ್ ಬಂದಿದ್ದು, ಅವರಲ್ಲಿ ಆರು ಮಂದಿ ಗಾಂಜಾ ಮತ್ತು ಇಬ್ಬರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.

ಈ ದಾಳಿಯ ಸಮಯದಲ್ಲಿ ನಟಿ ಹೇಮಾ ಕೂಡ ಅದೇ ಪಬ್‌ನಲ್ಲಿದ್ದರು. ಪೊಲೀಸರು ಅವರಿಗೂ ಡ್ರಗ್ಸ್ ಪರೀಕ್ಷೆ ನಡೆಸಿದ್ದು, ಅದರ ಫಲಿತಾಂಶ ‘ನೆಗೆಟಿವ್’ ಬಂದಿದೆ ಎಂದು ನಟಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ಪಬ್ ಆವರಣದಿಂದಲೇ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೇಮಾ, ‘ನಾನು ಮತ್ತೆ ಪಬ್‌ಗೆ ಬಂದಿದ್ದೇನೆ. ಈಗಷ್ಟೇ ಈಗಲ್ ತಂಡದವರು ಮಾಡಿದ ಡ್ರಗ್ಸ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ’ ಎಂದು ತಮ್ಮ ಯೂರಿನ್ ಟೆಸ್ಟ್ ರಿಪೋರ್ಟ್ ತೋರಿಸಿದ್ದಾರೆ. ‘ನಿಮ್ಮ ಹೇಮಕ್ಕ ಯಾವತ್ತೂ ತಪ್ಪು ಮಾಡುವುದಿಲ್ಲ. ನಾಳೆ ಡ್ರಗ್ಸ್ ಪರೀಕ್ಷೆಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಪೋಸ್ಟ್ ಮಾಡುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:ಚಿತ್ರರಂಗಕ್ಕೆ ಗುಡ್ ಬೈ ಹೇಳಿದೆ ಬೆಂಗಳೂರು ಡ್ರಗ್ಸ್ ಪ್ರಕರಣ ಆರೋಪಿ ನಟಿ ಹೇಮಾ: ಕಾರಣ?

ಹಿಂದೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿ ಆಗಿದ್ದರು. ಆಗ ಅವರ ಮೇಲೆ ಡ್ರಗ್ಸ್ ಪರೀಕ್ಷೆ ನಡೆಸಲಾಗಿದ್ದು, ಅವರು ಡ್ರಗ್ಸ್ ಸೇವಿಸಿದ್ದಾರೆ ಎಂದು ಅವರನ್ನು ಬಂಧಿಸಲಾಗಿತ್ತು. ಸುಮಾರು ಒಂದು ವಾರಗಳ ಕಾಲ ನಟಿ ಹೇಮಾ ಕೊಲ್ಲ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಬಳಿಕ ಇತ್ತೀಚೆಗಷ್ಟೆ ಪ್ರಕರಣದಲ್ಲಿ ಅವರನ್ನು ನಿರ್ದೋಷಿ ಎಂದು ಘೋಷಿಸಲಾಯ್ತು.

ಆದರೆ ಆ ಘಟನೆಯಿಂದ ತನ್ನ ವೈಯಕ್ತಿಕ ಜೀವನ ಮತ್ತು ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಅವರು ಈ ಹಿಂದೆ ಕಣ್ಣೀರಿಟ್ಟಿದ್ದರು. ಇದೀಗ ಮತ್ತೆ ಪಬ್ ದಾಳಿಯ ವೇಳೆ ಅವರು ಅಲ್ಲಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಸದ್ಯ ಅವರು ಸಿನಿಮಾಗಳಿಂದ ದೂರವಿದ್ದು, ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಡ್ರಗ್ಸ್ ಪ್ರಕರಣದ ಬಳಿಕ ಅವರಿಗೆ ಸಿನಿಮಾ ಅವಕಾಶಗಳು ಸಂಪೂರ್ಣ ನಿಂತು ಹೋಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರು ರೈಲ್ವೆ ದಾಖಲೆ: ಸರಕು ಸಾಗಣೆ-ಪಾರ್ಸೆಲ್, ಟಿಕೆಟ್ ಪರಿಶೀಲನೆಯಲ್ಲಿ ಕೋಟ್ಯಂತರ ರೂ ಆದಾಯ

ಮೈಸೂರು, ಏಪ್ರಿಲ್​ 03: ನೈರುತ್ಯ ರೈಲ್ವೆ ಮೈಸೂರು ವಿಭಾಗವು (mysuru railway division) 2025-26ನೇ ಸಾಲಿನ ಹಣಕಾಸು ವರ್ಷದಲ್ಲಿ ಭರ್ಜರಿ ಸಾಧನೆ ಮಾಡಿದೆ. 449.13 ಕೋಟಿ ರೂ ಪ್ರಯಾಣಿಕ ಆದಾಯ ಗಳಿಸುವ ಮೂಲಕ ಈ ಹಿಂದಿನ ದಾಖಲೆಯನ್ನು ಮೀರಿಸಿದೆ. ಜೊತೆಗೆ ಸರಕ ಸಾಗಾಣೆಯಲ್ಲೂ ವಿಭಾಗ ಉತ್ತಮ ಸಾಧನೆ ಮಾಡಿದ್ದು, ಇತಿಹಾಸದಲ್ಲೇ ಹೆಚ್ಚು ಸರಕು ಸಾಗಾಣೆ ಮಾಡಿದ ಎರಡನೇ ಅತ್ಯುನ್ನತ ಸಾಧನೆ ಆಗಿದೆ ಎಂದು ವಿಭಾಗೀಯ ಮುಖ್ಯಸ್ಥ ಮುದಿತ್​ ಮಿತ್ತಲ್ ಮಾಹಿತಿ ನೀಡಿದ್ದಾರೆ.

ಮುದಿತ್​ ಮಿತ್ತಲ್ ಹೇಳಿದ್ದಿಷ್ಟು 

ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುದಿತ್​ ಮಿತ್ತಲ್, ಟಿಕೆಟ್ ಪರಿಶೀಲನೆ ಮೂಲಕ 9.75 ಕೋಟಿ ರೂ ಆದಾಯ ಗಳಿಸಲಾಗಿದೆ. 11.81 ಕೋಟಿ ರೂ ಪಾರ್ಸೆಲ್ ಆದಾಯ, ಲೀಸ್ ಮೂಲಕ 5.85 ಕೋಟಿ ರೂ ಗಳಿಕೆ ಮಾಡಲಾಗಿದೆ ಎಂದರು.

ಇದನ್ನೂ ಓದಿ: ಈ ವಂದೇ ಭಾರತ್ ರೈಲಿನಲ್ಲಿ ಪುರುಷ ಸಿಬ್ಬಂದಿಯೇ ಇರ್ಲಿಲ್ಲ, ಎಲ್ಲರೂ ಮಹಿಳೆಯರೇ!

ಇನ್ನು ಸರಕು ಚಾಲನೆ ವಿಭಾಗದಿಂದ 900.19 ಕೋಟಿ ಆದಾಯ ಗಳಿಸಲಾಗಿದ್ದು, 10.586 ಮಿಲಿಯನ್ ಟನ್ ಸರಕು ಸಾಗಣೆ ಮಾಡಲಾಗಿದೆ. ಆ ಮೂಲಕ ಇತಿಹಾಸದಲ್ಲೇ ಅತೀ ಹೆಚ್ಚು ಸಾಗಾಟ ಮಾಡುವ ಮೂಲಕ ರೆಲ್ವೆ ವಿಭಾಗದ ಎರಡನೇ ಸಾಧನೆ ಆಗಿದೆ.

ಡಿಜಿಟಲ್ ಟಿಕೆಟ್ ವ್ಯವಸ್ಥೆ

ಕುವೆಂಪುನಗರದಲ್ಲಿ ಹೊಸ ಪಿಆರ್​ಎಸ್​ ಸೌಲಭ್ಯ, ಡಿಜಿಟಲ್ ಟಿಕೆಟ್ ವ್ಯವಸ್ಥೆ ಆರಂಭಿಸಲಾಗಿದೆ. ನಗದು ರಹಿತ ಸೇವೆ ಸೇರಿದಂತೆ ಸ್ಥಳೀಯ ಪ್ರಯಾಣಿಕರಿಗೆ ಸೌಲಭ್ಯ ಹೆಚ್ಚಿಸಲಾಗಿದೆ. ಟ್ರ್ಯಾಕ್, ಸೇತುವೆ, ಪ್ಲಾಟ್‌ಫಾರ್ಮ್ ಅಭಿವೃದ್ಧಿ ಪಡಿಸಲಾಗಿದೆ. ದಾಹಕ, ನಿಷಿದ್ಧ ವಸ್ತು ಪತ್ತೆ ಇಲ್ಲ ಆಗಿಲ್ಲ ಆ ಮೂಲಕ ಭದ್ರತೆಯಲ್ಲಿ ಉತ್ತಮ ದಾಖಲೆ ಮಾಡಿದೆ. 69 ಸಿಬ್ಬಂದಿಗೆ ಅಗ್ನಿಶಾಮಕ ತರಬೇತಿ ನೀಡುವ ಮೂಲಕ ಸುರಕ್ಷತೆಗೆ ಒತ್ತು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಿದ್ಯುತ್ ಕಾಮಗಾರಿಯಲ್ಲಿ ಮಹತ್ವದ ಸಾಧನೆ

91.34 MUರಿಂದ 90.53 MUಗೆ ವಿದ್ಯುತ್ ಬಳಕೆಯಲ್ಲಿ ಇಳಿಕೆ ಆಗಿದೆ. ಸೌರ ಶಕ್ತಿ ಸಾಮರ್ಥ್ಯ 160% ಏರಿಕೆ ಆಗಿದ್ದು, ವಾರ್ಷಿಕ 29 ಲಕ್ಷ ರೂ ಉಳಿತಾಯ ಮಾಡಲಾಗುತ್ತಿದೆ. ಮೂಲ ಸೌಕರ್ಯದಲ್ಲಿ ದೊಡ್ಡ ಸುಧಾರಣೆ ವೈಫಲ್ಯದ ಅಂಕಿಅಂಶ 176ರಿಂದ 75ಕ್ಕೆ ಇಳಿಕೆ ಆಗಿದೆ. ಆ ಮೂಲಕ ಸಕಲೇಶಪುರ-ಸುಬ್ರಮಣ್ಯ ಘಾಟ್ ವಿದ್ಯುತ್ ಕಾಮಗಾರಿಯಲ್ಲಿ ಮಹತ್ವದ ಸಾಧನೆ ಮಾಡಲಾಗಿದೆ. ಪ್ರಯಾಣಿಕ ಸೌಲಭ್ಯಗಳಾದ ಲಿಫ್ಟ್, ಸ್ಟೇಷನ್ ಅಭಿವೃದ್ಧಿ ಪಡಿಸಲಾಗಿದೆ. ಶೂನ್ಯ ವಿದ್ಯುತ್, ಅಪಘಾತ ಶೂನ್ಯ ಅಗ್ನಿ ಅವಘಡಗಳ ಭದ್ರತೆಗೆ ಆದ್ಯತೆ ನೀಡಲಾಗಿದೆ.

ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ: ಫೆಬ್ರವರಿ 16ರಂದು ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ; ಇಲ್ಲಿದೆ ಮಾಹಿತಿ

ಇನ್ನು ನೂರಾರು ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸುವ ಮೂಲಕ ಆರೋಗ್ಯ ಸೇವೆಗಳಲ್ಲಿ ಸಾಧನೆ ಮಾಡಲಾಗಿದೆ. 132 ಮಕ್ಕಳ ರಕ್ಷಣೆ, 1.17 ಕೋಟಿ ರೂ ಮೌಲ್ಯದ ವಸ್ತುಗಳನ್ನು ಪ್ರಯಾಣಿಕರಿಗೆ ಹಿಂದಿರುಗಿಸಲಾಗಿದೆ. 88.92 ಕೋಟಿ ರೂ ಹಣಕಾಸು ಉಳಿತಾಯದಿಂದ 53.55% ಏರಿಕೆ ಆಗಿದೆ. QR ಕೋಡ್ ಪಾವತಿ ವ್ಯವಸ್ಥೆ ಪರಿಚಯಿಸಲಾಗಿದೆ. ಸರಕು ಮತ್ತು ಪ್ರಯಾಣಿಕ ಸೇವೆಯಲ್ಲಿ ವಿಶ್ವಾಸಾರ್ಹತೆ ಹೆಚ್ಚಿಸಲಾಗಿದೆ ಎಂದು ಮುದಿತ್​ ಮಿತ್ತಲ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಇರಾನ್​ನಿಂದ ಅಮೆರಿಕದ ಎರಡನೇ ಎಫ್-35 ಫೈಟರ್ ಜೆಟ್ ಪತನ; ಪೈಲಟ್ ಬದುಕುಳಿದ ಸಾಧ್ಯತೆ ಕಡಿಮೆ

ಟೆಹ್ರಾನ್, ಏಪ್ರಿಲ್ 3: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ಎರಡನೇ F-35 ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂದು ಇರಾನಿನ (Iran War) ರಾಜ್ಯ ಮಾಧ್ಯಮ ಇಂದು ತಿಳಿಸಿದೆ. ಅಮೆರಿಕದ ಮತ್ತೊಂದು ಯುದ್ಧ ವಿಮಾನ ಪತನವಾಗಿ ಸಂಪೂರ್ಣವಾಗಿ ನಾಶವಾಗಿದೆ. ವಿಮಾನಕ್ಕೆ ತೀವ್ರ ಹಾನಿಯಾಗಿದ್ದರಿಂದ ಪೈಲಟ್ ಬದುಕಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಐಆರ್‌ಜಿಸಿ ತಿಳಿಸಿದೆ.

ಆದರೆ, ಅಮೆರಿಕದಿಂದ ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ದೃಢೀಕರಣ ಬಂದಿಲ್ಲ. F-35 ಯುಎಸ್‌ನ ಅತ್ಯಂತ ಮುಂದುವರಿದ ಸ್ಟೆಲ್ತ್ ಫೈಟರ್ ಜೆಟ್‌ಗಳಲ್ಲಿ ಒಂದಾಗಿದ್ದು, ರಾಡಾರ್ ಪತ್ತೆಹಚ್ಚುವಿಕೆಯನ್ನು ತಪ್ಪಿಸುವ ಮತ್ತು ಹೆಚ್ಚು ರಕ್ಷಿಸಲ್ಪಟ್ಟ ವಾಯುಪ್ರದೇಶದೊಳಗೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಆ ಯುದ್ಧ ವಿಮಾನವನ್ನು ಕೂಡ ಪತನಗೊಳಿಸಿರುವುದಾಗಿ ಇರಾನ್ ಘೋಷಿಸಿದೆ.

ಇದನ್ನೂ ಓದಿ: ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ

ಇರಾನ್ ಅಮೆರಿಕದ ಅತ್ಯಂತ ಅಮೂಲ್ಯವಾದ ವಿಮಾನಗಳಲ್ಲಿ ಒಂದಾದ ಮತ್ತು ಅಮೆರಿಕದ ಐದನೇ ತಲೆಮಾರಿನ ಯುದ್ಧ ಹೋರಾಟದ ಸಾಮರ್ಥ್ಯದ ಬೆನ್ನೆಲುಬಾದ US F-35 ಲೈಟ್ನಿಂಗ್ 2 ಅನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡ ಸುಮಾರು 2 ವಾರಗಳ ನಂತರ ಈ ದಾಳಿ ಸಂಭವಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಹುಬ್ಬಳ್ಳಿಯಲ್ಲೊಂದು ಲವ್ ಜಿಹಾದ್: ಜಿಮ್ ಟ್ರೈನರ್​ನ​​​​​​​​​ ಕಾಮುಕ ಮುಖ ಬಿಚ್ಚಿಟ್ಟ ಯುವತಿ

ಹುಬ್ಬಳ್ಳಿ, (ಏಪ್ರಿಲ್ .03): ನಗರದಲ್ಲಿ ಲವ್ ಜಿಹಾದ್ (love jihad) ಆರೋಪದ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಹಳೆ ಹುಬ್ಬಳ್ಳಿ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳಿಯ (Hubballi) ವಿಜಯನಗರದ ನಿವಾಸಿ ಸಮೀರ್ ಎನ್ನುವಾತ ಜಿಮ್​​ನಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡು ಬಳಿಕ ಆಕೆಯೊಂದಿಗೆ ಸಲುಗೆ ಬೆಳೆಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಮನೆಗೆ ಹೋಗಿ ಸಮೀರ್​​​ ನನ್ನು ಹಿಡಿದು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹುಬ್ಬಳ್ಳಿ ನಗರದ ವಿಜಯನಗರ ನಿವಾಸಿಯಾಗಿರುವ ಸಮೀರ್ ಮತ್ತು ಹಿಂದೂ ಯುವತಿ ಜಿಮ್‌ನಲ್ಲಿ ಪರಿಚಯವಾಗಿತ್ತು. ಬಳಿಕ ಸಮೀರ್ ಯುವತಿಯೊಂದಿಗೆ ಸಲುಗೆ ಬೆಳೆಸಿದ್ದಾನೆ. ಬಳಿಕ ಯುವತಿಯನ್ನು ಮನೆಗೆ ಕರೆಯಿಸಿಕೊಂಡು ಜ್ಯೂಸ್​​ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇನ್ನು ಸಮೀರ್ ಕುಟುಂಬದವರು ವಿಕಾಸನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿ ಗಲಾಟೆ ನಡೆಸಿದರೆಂಬ ಆರೋಪ ಕೇಳಿಬಂದಿದೆ.

ಇದನ್ನೂ ನೋಡಿ: ಹಿಂದೂ ಯುವತಿಯನ್ನ ಮತಾಂತರಕ್ಕೆ ಯತ್ನ: ಸಮೀರ್ ನನ್ನು ಪೊಲೀಸರಿಗೆ ಒಪ್ಪಿಸಿದ ಹಿಂದೂ ಸಂಘಟನೆಗಳು

ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್

ಕೆಲ ದಿನ ನಂತರ ಯುವತಿ ಜೊತೆ ಖಾಸಗಿಯಾಗಿ ಕಳೆದ ಕ್ಷಣಗಳಿದ್ದ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದು, ಅನೇಕ ಬಾರಿ ಲೈಂಗಿಕ ಕಿರುಕುಳ ನೀಡಿದ್ದಾನಂತೆ. ಆದರೂ ಇದೆಲ್ಲವನ್ನು ಯುವತಿ ಮನೆಯವರಿಗೆ ಹೇಳಿರಲಿಲ್ಲ. ಆದ್ರೆ ನಿನ್ನೆ (ಏಪ್ರಿಲ್ 02) ಸಂಜೆ ಈ ವಿಚಾರ ಯುವತಿ ಮನೆಯವರು ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಗೆ ಗೊತ್ತಾಗಿದ್ದು, ಬಳಿಕ ದೊಡ್ಡ ಹೈಡ್ರಾಮಾವೇ ನಡೆದಿದೆ.  ವಿಚಾರ ತಿಳಿಯುತ್ತಿದ್ದಂತೆಯೇ ಹಿಂದೂ ಕಾರ್ಯಕರ್ತರು, ಹೋಗಿ ಸಮೀರ್ ನನ್ನು ಥಳಿಸಿ ಬಳಿಕಪೊಲೀಸರ ವಶಕ್ಕೊಪ್ಪಿಸಿದ್ದಾರೆ.ಇದಾದ ಬಳಿಕ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.

ಯುವತಿ ಮನೆಯವರ ಮೇಲೆ ಸಮೀರ್ ಕುಟುಂಬಸ್ಥರಿಂದ ಹಲ್ಲೆ

ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಸಮೀರ್ ಮುಲ್ಲಾ ಮನೆಗೆ ಹೋಗಿ ಆತನನ್ನು ಹಿಡಿದುಕೊಂಡು ಥಳಿಸಿ ಆತನನ್ನು ಹಳೆ ಹುಬ್ಬಳ್ಳಿ ಠಾಣೆಗೆ ಒಪ್ಪಿಸಿದ್ದರು. ಇತ್ತ ಸಮೀರ್ ಮುಲ್ಲಾ ನನ್ನು ಯುವತಿ ಮನೆಯವರೇ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದು ಸಮೀರ್ ಮುಲ್ಲಾ ಮನೆಯವರು ಯುವತಿ ಮನೆಗೆ ನುಗ್ಗಿ ಗಲಾಟೆ ಮಾಡಿ ಅನೇಕರ ಮೇಲೆ ಹಲ್ಲೆ ಮಾಡಿದ್ದರು. ಇತ್ತ ಪೊಲೀಸರು ಬರುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತಿದ್ದರು. ಇನ್ನು ಇದಾದ ನಂತರ ಹಳೆ ಹುಬ್ಬಳ್ಳಿ ಠಾಣೆಗೆ ಮುತ್ತಿಗೆ ಹಾಕಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮತ್ತು ವಿವಿಧ ಸಮಾಜದವರು, ಪ್ರತಿಭಟನೆ ನಡೆಸಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ಜಿಮ್‌ಗಳು ಲವ್ ಜಿಹಾದ್ ಕೇಂದ್ರಗಳಾಗುತ್ತಿವೆ ಎಂದು ಹಿಂದೂ ಸಂಘಟನೆಗಳು ವ್ಯಕ್ತಪಡಿಸಿದ್ದು,  ಸಮೀರ್ ಜಿಮ್‌ನಲ್ಲಿ ಹಿಂದೂ ಹುಡುಗಿಯನ್ನು ಪರಿಚಯ ಮಾಡಿಕೊಂಡು ಲವ್ ಜಿಹಾದ್ ಮಾಡುತ್ತಿದ್ದ. ಹೀಗಾಗಿ ಸಮೀರ್‌ಗೆ ತಕ್ಕ ಶಿಕ್ಷೆ ಆಗಬೇಕು. ಅಲ್ಲದೇ ಜಿಮ್ ಬಂದ್ ಮಾಡಿಸಬೇಕೆಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಅವರಿಬ್ಬರು ಪರಿಚಿತರು ಎಂದ ಪೋಷಕರು

ಮತ್ತೊಂದಡೆ ಗಾಯಳು ಸಮೀರ್ ಮುಲ್ಲಾನನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಿ, ಪೊಲೀಸರು ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸಮೀರ್ ಪೋಷಕರು, ನಮ್ಮ ಮಗ ಯಾವುದೇ ಲವ್ ಜಿಹಾದ್ ಮಾಡಿಲ್ಲ. ಅವರಿಬ್ಬರು ಪರಿಚಿತರು, ಓಡಾಡಿಕೊಂಡಿದ್ದರು. ಆದ್ರೆ ಇದನ್ನೇ ತಪ್ಪಾಗಿ ತಿಳಿದುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಸಮೀರ್ ವಿರುದ್ಧ ಸಂತ್ರಸ್ತೆ ಸ್ಫೋಟಕ ಹೇಳಿಕೆ

ಇನ್ನು ಈ ಬಗ್ಗೆ ಸಂತ್ರಸ್ತೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಈ ವಿಡಿಯೋನಲ್ಲಿ ಸಮೀರ್ ಜತೆ ಹೇಗೆ ಪರಿಯವಾಯ್ತು ? ಬಳಿಕ ಏನೆಲ್ಲಾ ಆಯ್ತು ಎಂದು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸಮೀರ್​ ಸೋದರಿ ತೈಸೀಮ್ ಮುಲ್ಲಾ ನನ್ನ ಸ್ನೇಹಿತೆ. ಆಕೆಯಿಂದ ನನಗೆ ಸಮೀರ್ ಪರಿಚಯವಾಗಿತ್ತು. ಆತ ಚೆನ್ನಾಗಿ ಜಿಮ್ ಮಾಡಿಸುತ್ತಾನೆಂದು ಹೇಳಿದ್ದಳು. ಹೀಗಾಗಿ ಜಿಮ್​​ನಲ್ಲಿ ಪರಿಚಯವಾಗಿದ್ದು, ಬಳಿಕ ಬರ್ತಡೇ ಪಾರ್ಟಿ, ವಿಕೇಂಡ್ ಪಾರ್ಟಿಗೆ ಹೋಗಿದ್ವಿ. ನಮ್ಮ ಬರ್ತಡೇ ಪಾರ್ಟಿಗೆ ಸಮೀರ್ ಸಹ ಬಂದಿದ್ದ. ಇದಾದ ಮೇಲೆ ಸಮೀರ್ ನನಗೆ ಆತ್ಮೀಯನಾಗಿದ್ದ ಎಂದಿದ್ದಾರೆ.

ಮತ್ತು ಬರುವ ಜ್ಯೂಸ್​ ಕೊಟ್ಟು ಅತ್ಯಾಚಾರ

ಒಂದು ದಿನ ಸಮೀರ್ ತನ್ನ ಮನೆಗೆ ಕರೆದೊಯ್ದಿದ್ದ. ಬಳಿಕ ಮನೆಯಲ್ಲಿ ಮತ್ತು ಬರುವ ಜ್ಯೂಸ್​ ಕೊಟ್ಟು ಅತ್ಯಾಚಾರ ​ ಮಾಡಿದ್ದ. ಅಲ್ಲದೇ ಅತ್ಯಾಚಾರ ಮಾಡಿರುವುದನ್ನು ವಿಡಿಯೋ ಮಾಡಿದ್ದು, ಅದನ್ನು ನನಗೆ ತೋರಿಸಿದ್ದ. ಅಲ್ಲದೇ ಆ ವಿಡಿಯೋ ಇಟ್ಟುಕೊಂಡು ಬ್ಲಾಕ್​ಮೇಲ್ ಮಾಡಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ದೂರು ಪ್ರತಿದೂರು

ಈ ಸಂಬಂಧ ದೂರು ಪ್ರತಿದೂರು ದಾಖಲಾಗಿದೆ. ಸಮೀರ್ ಮುಲ್ಲಾನನ್ನು ಕರೆದುಕೊಂಡು ಹೋಗಿ ಥಳಿಸಿದ ಬಗ್ಗೆ ಯುವಕನ ಮನೆಯವರು ಅಶೋಕ್ ನಗರ ಠಾಣೆಗೆ ದೂರು ನೀಡಿದ್ರೆ, ಇತ್ತ ಯುವತಿ ಮನೆಯವರ ಮೇಲೆ ಹಲ್ಲೆ ಸೇರಿದಂತೆ ಯುವತಿ ಮೇಲೆ ಲೈಂಗಿಕ ಕಿರುಕುಳ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಎರಡು ಕಡೆಯವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ಮುಂದೆ ಈ ಪ್ರಕರಣ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version