ಹಿಂದೂ ಧರ್ಮದಲ್ಲಿ ಚೈತ್ರ ಮಾಸದ ಹುಣ್ಣಿಮೆಗೆ ಅಪಾರ ಪ್ರಾಮುಖ್ಯತೆಯಿದೆ. ಪುರಾಣಗಳ ಪ್ರಕಾರ, ಶ್ರೀರಾಮನ ಪರಮ ಭಕ್ತ ಹನುಮಂತನು ಜನಿಸಿದ ಈ ಪವಿತ್ರ ದಿನವನ್ನು ‘ಹನುಮ ಜಯಂತಿ‘ ಅಥವಾ ‘ಹನುಮಾನ್ ಜನ್ಮೋತ್ಸವ’ ಎಂದು ದೇಶಾದ್ಯಂತ ಅತ್ಯಂತ ಭಕ್ತಿ-ಭಾವದಿಂದ ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್ 2 ರಂದು ಹನುಮಾನ್ ಜಯಂತಿ ಬಂದಿದ್ದು, ಈ ದಿನದಂದು ಬಜರಂಗಬಲಿಯನ್ನು ಆರಾಧಿಸುವುದರಿಂದ ಜೀವನದ ಸಕಲ ಭಯ ಹಾಗೂ ಕಷ್ಟಗಳು ದೂರವಾಗುತ್ತವೆ ಎಂಬ ಬಲವಾದ ನಂಬಿಕೆಯಿದೆ. ವಿಶೇಷವಾಗಿ ಜಾತಕದಲ್ಲಿರುವ ಮಂಗಳ ದೋಷದ ಪ್ರಭಾವವನ್ನು ತಗ್ಗಿಸಲು ಈ ದಿನದ ಪೂಜೆ ಅತ್ಯಂತ ಫಲಪ್ರದವಾಗಿದೆ.
ಹನುಮಾನ್ ಜಯಂತಿಯಂದು ಕೆಲವು ವಿಶೇಷ ಧಾರ್ಮಿಕ ಕ್ರಮಗಳನ್ನು ಕೈಗೊಳ್ಳುವುದರಿಂದ ಗ್ರಹಗತಿಗಳ ಅಶುಭ ಫಲಗಳನ್ನು ದೂರ ಮಾಡಬಹುದು. ಅಂತಹ ಕೆಲವು ಪರಿಣಾಮಕಾರಿ ಪರಿಹಾರಗಳು ಇಲ್ಲಿವೆ:
ಸಿಂಧೂರ ಮತ್ತು ಮಲ್ಲಿಗೆ ಎಣ್ಣೆ ಸಮರ್ಪಣೆ:
ಹನುಮಂತನಿಗೆ ಮಲ್ಲಿಗೆ ಎಣ್ಣೆಯಲ್ಲಿ ಬೆರೆಸಿದ ಸಿಂಧೂರವನ್ನು (ಚೋಳ) ಅರ್ಪಿಸುವುದು ಅತ್ಯಂತ ಶ್ರೇಷ್ಠ. ಇದು ಮಂಗಳ ಗ್ರಹದ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಿ, ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸುತ್ತದೆ.
ಸುಂದರಕಾಂಡ ಪಠಣೆ:
ಈ ದಿನ ಸುಂದರಕಾಂಡವನ್ನು ಪಠಿಸುವುದರಿಂದ ಮನಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಹಾಗೂ ಮಾಡಿದ ಪಾಪಕರ್ಮಗಳು ದೂರವಾಗಿ ಶಾಂತಿ ಲಭಿಸುತ್ತದೆ.
ಹನುಮಂತನಿಗೆ ರಾಮ ನಾಮವೆಂದರೆ ಅತ್ಯಂತ ಪ್ರಿಯ. ಆದ್ದರಿಂದ “ರಾಮ್-ರಾಮ್” ಎಂದು 108 ಬಾರಿ ಜಪಿಸುವುದರಿಂದ ಹನುಮಂತನ ಕೃಪೆ ಬೇಗನೆ ದೊರೆಯುತ್ತದೆ ಮತ್ತು ಮಂಗಳ ದೋಷ ನಿವಾರಣೆಯಾಗುತ್ತದೆ.
ನೈವೇದ್ಯ ಮತ್ತು ದಾನ:
ಬಜರಂಗಬಲಿಗೆ ಕೆಂಪು ಗುಲಾಬಿ ಹಾಗೂ ಬೂಂದಿ ಅಥವಾ ಕಡಲೆಹಿಟ್ಟಿನ ಲಡ್ಡುಗಳನ್ನು ಅರ್ಪಿಸುವುದು ಮಂಗಳ ಗ್ರಹವನ್ನು ಶಾಂತಗೊಳಿಸಲು ಸಹಕಾರಿ. ಇದರೊಂದಿಗೆ ಅಗತ್ಯವಿರುವವರಿಗೆ ಕೆಂಪು ಬೇಳೆ ಮತ್ತು ಬೆಲ್ಲವನ್ನು ದಾನ ಮಾಡುವುದರಿಂದ ಗ್ರಹಗಳ ಋಣಾತ್ಮಕ ಪರಿಣಾಮಗಳು ದೂರವಾಗುತ್ತವೆ.
ಬಜರಂಗ ಬಾಣ ಮತ್ತು ಹನುಮಾನ್ ಚಾಲೀಸಾ:
ಮದುವೆಯಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಲು ಭಕ್ತಿಯಿಂದ ಬಜರಂಗ ಬಾಣ ಪಠಿಸಬೇಕು. ಹಾಗೆಯೇ ದೇವಸ್ಥಾನಕ್ಕೆ ಭೇಟಿ ನೀಡಿ ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ನಾಶವಾಗಿ ಧನಾತ್ಮಕತೆ ನೆಲೆಸುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಮನಗರ, ಮಾರ್ಚ್ 31: ಐದು ಮಹಿಳೆಯರ ಗುಂಪೊಂದು ಬೆದರಿಸಿ ಚಿತ್ರಮಂದಿರದ ಮಾಲೀಕರೊಬ್ಬರಿಂದ 25 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಈ ಬಗ್ಗೆ ಪಟ್ಟಣದ ಅಗ್ರಹಾರ ಬಡಾವಣೆ ನಿವಾಸಿಯಾಗಿರುವ 52 ವರ್ಷದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಏಳು ವರ್ಷಗಳ ಹಿಂದೆ ಪತ್ನಿ ದೂರವಾದ ಬಳಿಕ ಅವರು ಒಬ್ಬರೇ ವಾಸವಾಗಿದ್ದರು. ತಾಯಿ-ತಂದೆ ಅಥವಾ ಮಕ್ಕಳು ಯಾರೂ ಅವರಿಗೆ ಇಲ್ಲ. ಈ ನಡುವೆ ಆರೋಪಿಗಳ ಪೈಕಿ ಓರ್ವಳು ಮೊದಲು ಮದುವೆಯಾಗುವ ಆಸೆ ವ್ಯಕ್ತಪಡಿಸಿ ಸಂತ್ರಸ್ತರನ್ನು ಸಂಪರ್ಕಿಸಿದ್ದಳು. ಬಳಿಕ ಉಳಿದ ನಾಲ್ವರ ಪರಿಚಯವಾಗಿತ್ತು ಎನ್ನಲಾಗಿದೆ. ಆದರೆ ಬ್ಲ್ಯಾಕ್‌ಮೇಲ್‌ನ ನಿಖರ ಕಾರಣ ಏನೆಂಬುದು ತನಿಖೆ ಬಳಿಕ ಸ್ಪಷ್ಟವಾಗಬೇಕಿದೆ.
ಸಂತ್ರಸ್ತ ವ್ಯಕ್ತಿ ನೀಡಿರುವ ದೂರಿನ ಪ್ರಕಾರ, ಆರೇಳು ತಿಂಗಳ ಹಿಂದೆ ಕೋಟಿಪುರ ಪ್ರದೇಶದ ಮಹಿಳೆ ಸಿನಿಮಾ ನೋಡುವ ನೆಪದಲ್ಲಿ ಅವರ ಥಿಯೇಟರ್‌ಗೆ ಬಂದಿದ್ದಳು. ತನ್ನನ್ನು ಪರಿಚಯಿಸಿಕೊಂಡು ಮದುವೆಯಾಗಲು ಇಚ್ಛೆ ಇದೆ ಎಂದು ಹೇಳಿದ್ದಳು. ಆದರೆ ಇವರು ಅದನ್ನು ನಿರಾಕರಿಸಿದ ನಂತರ, ಆಕೆ ಮತ್ತಿಬ್ಬರು ಮಹಿಳೆಯರೊಂದಿಗೆ ಮತ್ತೆ ಭೇಟಿ ನೀಡಿದ್ದಳು. ಬಳಿಕ ವಿವಿಧ ನೆಪಗಳಲ್ಲಿ ಬೆದರಿಕೆ ಹಾಕಿ ಹಣ ಹಾಗೂ ಚಿನ್ನವನ್ನು ಪಡೆದುಕೊಳ್ಳಲು ಆರೋಪಿಗಳು ಯತ್ನಿಸಿದ್ದರು. ಮೊದಲು ಚಿಕ್ಕ ಮೊತ್ತಗಳನ್ನು ಪಡೆದುಕೊಳ್ಳುತ್ತಿದ್ದ ಆರೋಪಿಗಳು, ನಂತರ ದೊಡ್ಡ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಂತ್ರಸ್ತ ವ್ಯಕ್ತಿ ಒಪ್ಪದಿದ್ದಾಗ ಅತ್ಯಾಚಾರ ಹಾಗೂ ಪೋಕ್ಸೋ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿರೋದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸುಮಾರು 500 ಗ್ರಾಂ ಚಿನ್ನಾಭರಣಗಳನ್ನು ಕೂಡ ಆರೋಪಿ ಮಹಿಳೆಯರು ಪೀಕಿರೋದಾಗಿ ಮಾಹಿತಿ ನೀಡಲಾಗಿದೆ.
ಇದರ ಜೊತೆಗೆ ವಿವಿಧ ಮೊಬೈಲ್ ಸಂಖ್ಯೆಗಳ ಮೂಲಕ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿ ಆನ್‌ಲೈನ್‌ನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸಲು ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಇಜೂರು ಪೊಲೀಸ್ ಠಾಣೆಯಲ್ಲಿ BNS 308 ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಐದು ಮಹಿಳೆಯರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತ 52 ವರ್ಷದ ವ್ಯಕ್ತಿಯು ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಪತ್ರೆಗೆ 15 ದಿನಗಳ ಕಾಲ ದಾಖಲಾಗಿ ಚಿಕಿತ್ಸೆ ಪಡೆದಿದ್ದರು ಎಂಬ ವಿಚಾರವೂ ಈ ವೇಳೆ ಗೊತ್ತಾಗಿದೆ.
ದಾವಣಗೆರೆ, (ಮಾರ್ಚ್ 31): ಸಚಿವ ಎಸ್ಎಸ್ ಮಲ್ಲಿಕಾರ್ಜು ಆಡಿದ ಮಾತು ಹಾಗೂ ಮುಸ್ಲಿಮರಿಗೆ ಟಿಕೆಟ್ ಕೈತಪ್ಪಿದ್ದರಿಂದ ಜಮಿರ್ ಅಹಮ್ಮದ್ ಖಾನ್ ಮುನಿಸಿಕೊಂಡಿದ್ದು, ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆ ಪ್ರಚಾರದಿಂದ ದೂರ ಉಳಿದುಕೊಂಡಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 80 ಸಾವಿರ ಮುಸ್ಲಿಂ ಮತಗಳಿವೆ. ಹೀಗಾಗಿ ಜಮೀರ್ ಅಹಮ್ಮದ್ ಖಾನ್ ಅವರನ್ನು ಪ್ರಚಾರಕ್ಕೆ ಕರೆಯುಸುವಂತೆ ಆಗ್ರಹಗಳು ವ್ಯಕ್ತವಾಗುತ್ತಿವೆ. ಆದ್ರೆ, ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ ಒಬ್ಬರಿಂದ ಪಕ್ಷ ನಡೆಯಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದು, ಇದು ಭಾರೀ ಸಂಚಲ ಮೂಡಿಸಿದೆ.
ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಶೇ. 79ರಷ್ಟು ಜನ ಕಾಂಗ್ರೆಸ್ ಅಭ್ಯರ್ಥಿ ಪರ ಒಲವು ಹೊಂದಿದ್ದಾರೆ. ಶಾಮನೂರು ಶಿಕ್ಷಣ ಸಂಸ್ಥೆಯಲ್ಲಿ ಲಕ್ಷಾಂತರ ಜನ ಶಿಕ್ಷಣ ಪಡೆದಿದ್ದಾರೆ. ಸಚಿವ ಜಮೀರ್ ಕೇರಳದಲ್ಲಿ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡ್ತಿದ್ದಾರೆ.ಮುಗಿಸಿಕೊಂಡು ಬಂದ ಮೇಲೆ ಎಲ್ಲಿಗೆ ಕಳುಹಿಸುವ ಬಗ್ಗೆ ಚರ್ಚಿಸುತ್ತೇವೆ. ಒಬ್ಬರಿಂದ ಪಕ್ಷ ನಡೆಯಲ್ಲ. ಅದು ಡಿಕೆ, ಸಿಎಂ, ಜಮೀರ್ ಆಗಬಹುದು. 16 ನಿಗಮ ಮಂಡಳಿಗಳಲ್ಲಿ ಮುಸ್ಲಿಮರಿಗೆ ಅಧ್ಯಕ್ಷ ಸ್ಥಾನ ನೀಡಿದ್ದೇವೆ. ಅಬ್ದುಲ್ ಜಬ್ಬಾರ್ಗೆ 3 ಬಾರಿ ಪರಿಷತ್ ಸದಸ್ಯ ಸ್ಥಾನ ನೀಡಿದ್ದೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜಮೀರ್ ಅಹಮ್ಮದ್ ಖಾನ್ಗೆ ಟಾಂಗ್ ಕೊಟ್ಟರು.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ ಮೂರು ದಿನಗಳು ಕಳೆದಿವೆ. ಈ ಮೂರು ದಿನಗಳಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿದಿವೆ. ಈ ಆರು ತಂಡಗಳಲ್ಲಿ ಅತ್ಯಧಿಕ ನೆಟ್ ರನ್ ರೇಟ್ ಪಡೆದಿರುವುದು ರಾಜಸ್ಥಾನ್ ರಾಯಲ್ಸ್. ಅದು ಸಹ ಸಿಎಸ್ಕೆ ತಂಡವನ್ನು ಹೀನಾಯವಾಗಿ ಸೋಲಿಸುವ ಮೂಲಕ ಎಂಬುದು ವಿಶೇಷ.
ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ಮುಂಬೈ ಇಂಡಿಯನ್ಸ್ ತಂಡವು ಕೆಕೆಆರ್ ತಂಡವನ್ನು ಅತೀ ಸುಲಭವಾಗಿ ಬಗ್ಗು ಬಡಿದಿದ್ದರು. ಇದೀಗ ರಾಜಸ್ಥಾನ್ ರಾಯಲ್ಸ್ ತಂಡ ಸಿಎಸ್ಕೆ ತಂಡವನ್ನು ಮಕಾಡೆ ಮಲಗಿಸಿದ್ದಾರೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಪ್ರಸ್ತುತ ಅಂಕ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಅಗ್ರಸ್ಥಾನದಲ್ಲಿದೆ. ಸಿಎಸ್ಕೆ ನೀಡಿದ 128 ರನ್ಗಳ ಗುರಿಯನ್ನು ಕೇವಲ 12.1 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಆರ್ಆರ್ ತಂಡವು 8 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ. ಈ ಭರ್ಜರಿ ಗೆಲುವಿನ ಪರಿಣಾಮ ರಾಜಸ್ಥಾನ್ ರಾಯಲ್ಸ್ ತಂಡವು +4.171 ನೆಟ್ ರನ್ ರೇಟ್ನೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.
ಇನ್ನು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 202 ರನ್ಗಳ ಗುರಿಯನ್ನು 15.4 ಓವರ್ಗಳಲ್ಲಿ ಚೇಸ್ ಮಾಡಿ 6 ವಿಕೆಟ್ಗಳ ಜಯ ಸಾಧಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಆರ್ಸಿಬಿ ತಂಡದ ಪ್ರಸ್ತುತ ನೆಟ್ ರನ್ ರೇಟ್ +2.907 . ಅಂದರೆ ಆರ್ಸಿಬಿ ಮತ್ತು ಆರ್ಆರ್ ನಡುವೆ +1.264 ನೆಟ್ ರನ್ ರೇಟ್ ವ್ಯತ್ಯಾಸವಿದೆ.
ಮತ್ತೊಂದೆಡೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ದಾಖಲೆಯ 221 ರನ್ಗಳ ಗುರಿಯನ್ನು ಚೇಸ್ ಮಾಡಿ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡದ ಪ್ರಸ್ತುತ ನೆಟ್ ರನ್ ರೇಟ್ +0.687 .
ಅಹ್ಮದಾಬಾದ್, ಮಾರ್ಚ್ 31: ಇಲ್ಲಿಗೆ ಸಮೀಪದ ಸಾನಂದ್ನಲ್ಲಿ ಕೇನ್ಸ್ ಸಮಿಕಾನ್ನ ಒಸಾಟ್ (OSAT- Outsourced Semiconductor Assembly and Test) ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದು 3,300 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟಿಂಗ್ ಫೆಸಿಲಿಟಿ ಆಗಿದೆ. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಶುರುವಾಗಿರುವ ಎರಡನೇ ಚಿಪ್ ಮ್ಯಾನುಫ್ಯಾಕ್ಚರಿಂಗ್ ಘಟಕ ಇದಾಗಿದೆ. ಇದೇ ತಿಂಗಳು ಗುಜರಾತ್ನಲ್ಲೇ ಅಮೆರಿಕ ಮೂಲದ ಮೈಕ್ರಾನ್ ಟೆಕ್ನಾಲಜಿಯಿಂದ ಭಾರತದ ಮೊದಲ ಸೆಮಿಕಂಡಕ್ಟರ್ ತಯಾರಕ ಘಟಕ ಶುರುವಾಗಿತ್ತು.
ಕೇನ್ಸ್ ಸಮಿಕಾನ್ ಮೈಸೂರಿನ ಕೇನ್ಸ್ ಟೆಕ್ನಾಲಜಿ ಸಂಸ್ಥೆಯಿಂದ ಶುರುವಾಗಿರುವ ಸೆಮಿಕಂಡಕ್ಟರ್ ಚಿಪ್ ತಯಾರಕ ಘಟಕವಾಗಿದೆ. ಉದ್ಘಾಟನೆಗೆ ಮುಂಚೆಯೇ ಇಲ್ಲಿ ಕಮರ್ಷಿಯಲ್ ಉತ್ಪಾದನೆ ಆರಂಭವಾಗಿದೆ. ಆಟೊಮೋಟಿವ್ ಮತ್ತು ಔದ್ಯಮಿಕ ಅಪ್ಲಿಕೇಶನ್ಗಳಿಗೆ ಬಳಸಲಾಗುವ ಇಂಟೆಲಿಜೆಂಟ್ ಪವರ್ ಮಾಡ್ಯೂಲ್ಗಳನ್ನು (ಐಪಿಎಂ) ತಯಾರಿಸುವ ಕಾರ್ಯ ನಡೆಯುತ್ತಿದೆ. ಈ ಒಂದೊಂದು ಮಾಡ್ಯೂಲ್ನಲ್ಲಿ 17 ಚಿಪ್ಗಳನ್ನು ಜೋಡಿಸಲಾಗಿರುತ್ತದೆ. ಸುಮಾರು 900 ಮಲ್ಟಿಚಿಪ್ ಮಾಡ್ಯೂಲ್ಗಳನ್ನು ತಯಾರಿಸಿ ಹೊರಕಳುಹಿಸಲಾಗಿದೆ.
ಈ ಘಟಕ ಪೂರ್ಣ ಶಕ್ತಿಯಿಂದ ಕಾರ್ಯಾರಂಭಿಸಿದರೆ ಒಂದು ದಿನಕ್ಕೆ 60 ಲಕ್ಷ ಚಿಪ್ ಯುನಿಟ್ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.
ಭಾರತದಲ್ಲಿ ಇನ್ನೂ ಹಲವು ಚಿಪ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳು ಬರಲಿವೆ
ಸರ್ಕಾರವು ಸೆಮಿಕಂಡಕ್ಟರ್ ಮಿಷನ್ ಅನ್ನು ಗಂಭೀರವಾಗಿ ಪರಿಗಣಿಸಿದ್ದು, ಹಲವಾರು ಘಟಕಗಳಿಗೆ ಅನುಮೋದನೆ ಕೊಟ್ಟಿದೆ. ಸದ್ಯಕ್ಕೆ ಅಮೆರಿಕದ ಮೈಕ್ರಾನ್ ಮತ್ತು ಮೈಸೂರಿನ ಕೇನ್ಸ್ ಟೆಕ್ನಾಲಜಿ ಕಂಪನಿಗಳು ಗುಜರಾತ್ನ ಸಾನಂದ್ನಲ್ಲಿ ಚಿಪ್ ತಯಾರಿಸುವ ಘಟಕ ಆರಂಭಿಸಿವೆ. ತೈವಾನ್ನ ಪಿಎಸ್ಎಂಸಿ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಮೊದಲಾದ ಸಂಸ್ಥೆಗಳಿಂದಲೂ ಸೆಮಿಕಂಡಕ್ಟರ್ ಘಟಕಗಳು ಶುರುವಾಗಲಿವೆ. ಅನುಮೋದನೆಗೊಂಡಿರುವ ಐದು ಸೆಮಿಕಂಡಕ್ಟರ್ ಘಟಕಗಳು ಇಂತಿವೆ:
ಮೈಕ್ರಾನ್ ಟೆಕ್ನಾಲಜಿ: ಗುಜರಾತ್ನ ಸಾನಂದ್ನಲ್ಲಿ
ಕೇನ್ಸ್ ಸೆಮಿಕಾನ್: ಗುಜರಾತ್ನ ಸಾನಂದ್ನಲ್ಲಿ
ಟಿಎಸ್ಎಟಿ (ಟಾಟಾ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್) ಘಟಕ: ಅಸ್ಸಾಮ್ನಲ್ಲಿ
ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈ ಲಿ (ಟಿಇಪಿಎಲ್) ಫ್ಯಾಬ್ ಘಟಕ: ಗುಜರಾತ್ನ ಧುಲೆರಾದಲ್ಲಿ
ಇಲ್ಲಿ ಸಿಜಿ ಪವರ್ ರೆನಿಸಾಸ್ ಘಟಕವು ಭಾರತ, ಜಪಾನ್ ಮತ್ತು ಥಾಯ್ಲೆಂಡ್ ಕಂಪನಿಗಳ ಜಂಟಿ ಯೋಜನೆಯಾಗಿದೆ. ಜಪಾನ್ನ ರೆನಿಸಾಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಶನ್, ಥಾಯ್ಲೆಂಡ್ನ ಸ್ಟಾರ್ಸ್ ಮೈಕ್ರೋಎಲೆಕ್ಟ್ರಾನಿಕ್ಸ್ ಮತ್ತು ಭಾರತದ ಸಿಜಿ ಪವರ್ ಸಂಸ್ಥೆಗಳು ಸೇರಿ ಸಿಜಿ ಪವರ್ ರೆನಿಸಾಸ್ ಘಟಕವನ್ನು ನಿರ್ಮಿಸುತ್ತಿವೆ.
ದಾವಣಗೆರೆ/ಬಾಗಲಕೋಟೆ, (ಮಾರ್ಚ್ 31): ದಾವಣಗೆರೆ ದಕ್ಷಿಣ ಕ್ಷೇತ್ರದಿಂದ (Davanagere South By Election) ಮುಸ್ಲಿಂ ಮುಖಂಡ ಸಾದಿಕ್ ಪೈಲ್ವಾನ್ ಅವರಿಗೆ ಟಿಕೆಟ್ ನೀಡಬೇಕೆಂದು ಸಚಿವ ಜಮೀರ್ ಅಹಮ್ಮದ್ ಖಾನ್ (zameer ahmed khan )ಬಿಗಿಪಟ್ಟು ಹಿಡಿದಿದ್ದರು. ಈ ಸಂಬಂಧ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಆಕ್ಷೇಪ ವ್ಯಕ್ತಪಡಿಸಿದ್ದು, ಬಹಿರಂಗವಾಗಿ ಜಮೀರ್ ಅಹಮ್ಮದ್ ಖಾನ್ಗೆ ಏಕವಚಲನದಲ್ಲಿ ನಿಂದಿಸಿದ್ದರು. ಇದು ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ ತಮ್ಮ ಸಮುದಾಯಕ್ಕೆ ಟಿಕೆಟ್ ಕೈತಪ್ಪಿದ್ದರಿಂದ ಜಮೀರ್ ಅಸಮಾಧಾನಗೊಂಡಿದ್ದು, ಚುನಾವಣಾ ಪ್ರಚಾರದಿಂದ ದೂರ ಇದ್ದಾರೆ. ಇನ್ನೊಂದೆಡೆ ಅವರ ಅಭಿಮಾನಿಗಳು ಹಾಗೂ ಮುಸ್ಲಿಂ ಸಮಯದಾಯದವರು ಪ್ರಚಾರಕ್ಕೆ ಜಮೀರ್ ಅಹಮ್ಮದ್ ಖಾನ್ ಅವರನ್ನು ಕರೆಯಿಸಿ ಎಂದು ಆಗ್ರಹಿಸಿಸುತ್ತಿದ್ದಾರೆ.
ಮಲ್ಲಿಕಾರ್ಜುನ-ಜಮೀರ್ ನಡುವೆ ತಿಕ್ಕಾಟ
ಉಪಚುನಾವಣೆ ಘೋಷಣೆಯಾದಾಗಿನಿಂದ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ವಸತಿ ಮತ್ತು ವಕ್ಸ್ ಸಚಿವ ಜಮೀರ್ ಅಹ್ಮದ್ ನಡುವಿನ ತಿಕ್ಕಾಟ ಮುಂದುವರೆದಿದ್ದು, ‘ಸ್ವಾಭಿಮಾನ’ ಮಾತುಗಳನ್ನು ಉಭಯ ನಾಯಕರು ಆಡಿದ್ದಾರೆ. ಪುತ್ರ ಸಮರ್ಥ್‌ಗೆ ಟಿಕೆಟ್ ನೀಡ ಬೇಕೆಂದು ಸಚಿವ ಮಲ್ಲಿಕಾರ್ಜುನ ಹಾಗೂ ಸಾದಿಕ್ ಪೈಲ್ವಾನ್‌ಗೆ ಟಿಕೆಟ್ ನೀಡಬೇಕೆಂದು ಸಚಿವ ಜಮೀರ್ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಅಂತಿಮವಾಗಿ ಶಾಮನೂರು ಮೊಮ್ಮಗನಿಗೆ ಟಿಕೆಟ್ ಕೊಡಲು ಹೈಕಮಾಂಡ್ ತೀರ್ಮಾನಿಸಿದ್ದರೂ ಜಮೀರ್ ಇದನ್ನು ವಿರೋಧಿಸಿಕೊಂಡೇ ಬಂದಿದ್ದರು. ಸಾದಿಕ್ ಬಂಡಾಯವಾಗಿ ಸ್ಪರ್ಧಿಸಲು ಜಮೀರ್ ಕಾರಣ ಎನ್ನುವ ಮಾತುಗಳು ಕೇಳಿಬಂದಿತ್ತು. ಈ ಎಲ್ಲ ಗೊಂದಲಗಳ ಹೊರತಾಗಿಯೂ ಸಿಎಂ ಸಿದ್ದರಾಮಯ್ಯ ಮಧ್ಯಸ್ಥಿಕೆಯಲ್ಲಿ ಜಮೀರ್ ಸಮರ್ಥ್ ಪರವಾಗಿ ಪ್ರಚಾರ ಕೈಗೊಳ್ಳಲು ಮುಂದಾಗಿದ್ದರು. ಬೂದಿ ಮುಚ್ಚಿದ ಕೆಂಡದಂತಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯಕ್ಕೆ ಸಚಿವ ಮಲ್ಲಿಕಾರ್ಜುನ್ ಅವರ ‘ಜಮೀರ್ ಬರುವುದಕ್ಕಿಂತ ಬಾರದಿರುವುದೇ ಒಳ್ಳೆಯದು’ ಎನ್ನುವ ಹೇಳಿಕೆ ಮತ್ತೆ ಕಿಡಿ ಹೊತ್ತಿಸಿದೆ.
ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವ (ಸುಮಾರರು 80 ಸಾವಿರ) ದಾವಣಗೆರೆ ಕ್ಷೇತ್ರದಲ್ಲಿ ಮುಸ್ಲೀಮರಿಗೆ ಟಿಕೆಟ್ ಕೊಡಿಸಲು ಸಚಿವ ಜಮೀರ್ ಇನ್ನಿಲ್ಲದಂತೆ ಸರ್ಕಸ್ ಮಾಡಿದ್ದರು. ಮುಸ್ಲಿಂ ಮುಖಂಡ ಸಾದಿಕ್ಗೆ ಟಿಕೆಟ್ ಕೊಡಿ. ಗೆಲ್ಲಿಸಿಕೊಂಡು ಬರುತ್ತೇನೆಂದು ಜಮೀರ್ ಸುರ್ಜೇವಾಲ ಸಭೆಯಲ್ಲೂ ಭರವಸೆ ನೀಡಿದ್ದರು. ಆದ್ರೆ ಹೈಕಮಾಂಡ್ ಶಾಮನೂರು ಮೊಮ್ಮಗ ಸಮರ್ಥ್‌ಗೆ ಟಿಕೆಟ್ ಕೊಟ್ಟಿದೆ. ಇನ್ನೊಂದೆಡೆ ಎಸ್ಎಸ್ ಮಲ್ಲಿಕಾರ್ಜುನ ಆಡಿದ ಮಾತುಗಳಿಂದ ಸಹ ಸಿಎಂ ಸಿದ್ದರಾಮಯ್ಯ ಆಪ್ತ, ಸಚಿವ ಜಮೀರ್ ಮುನಿಸಿಕೊಂಡಿದ್ದು, ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದ್ದರೂ ಸಹ ಪ್ರಚಾರದಿಂದ ದೂರ ಉಳಿದಿದ್ದಾರೆ. ಕೇರಳ ಚುನಾವಣೆಗೆ ಪ್ರಚಾರ ಮಾಡಲು ಅಲ್ಲೇ ಠಿಕಾಣಿ ಹೂಡಿರುವ ಜಮೀರ್ ಅಹ್ಮದ್, ದಾವಣಗೆರೆ ದಕ್ಷಿಣ ಕ್ಷೇತ್ರದತ್ತ ಮುಖ ಹಾಕಿಯೂ ನೋಡುತ್ತಿಲ್ಲ.
ಜಮೀರ್ಗೆ ಫುಲ್ ಡಿಮ್ಯಾಂಡ್
ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದರ ಮಧ್ಯೆ ಅಲ್ಪಸಂಖ್ಯಾತ ಮುಖಂಡರು ಹಾಗೂ ಕಾರ್ಯಕರ್ತರು ಸಚಿವ ಜಮೀರ್ ಅಹಮ್ಮದ್ ಖಾನ್ ಅವರನ್ನು ಪ್ರಚಾರಕ್ಕೆ ಕಳುಹಿಸುವಂತೆ ನಾಯಕರಿಗೆ ಬಿಗಿ ಪಟ್ಟು ಹಿಡಿದಿದ್ದಾರೆ. ನಿನ್ನೆ (ಮಾರ್ಚ್ 30) ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳೆ ಸಹ ಮುಸ್ಲಿಮರು, ಜಮೀರ್ ಅವರನ್ನ ಪ್ರಚಾರಕ್ಕೆ ಕಳುಹಿಸುವಂತೆ ಆಗ್ರಹಿಸಿದ್ದಾರೆ.
ಇನ್ನೊಂದೆಡೆ ಇಂದು (ಮಾರ್ಚ್ 31) ದಾವಣಗೆರೆಗೆ ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಸಹ ಜಮೀರ್ ಅಭಿಮಾನಿಯೊಬ್ಬ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪೋಟೋ ಹಿಡಿದ ಹೆಲಿಪ್ಯಾಡ್ ಆಗಮಿಸಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಎದರು ಜಮೀರ್ ಅಹಮ್ಮದ್ ಖಾನ್ ಪೋಟೋ ಹಿಡಿದು ಘೋಷಣೆ ಕೂಗಿದ್ದಾನೆ. ಅಲ್ಲದೇ ಚುನಾವಣೆ ಪ್ರಚಾರಕ್ಕೆ ಜಮೀರ್ ಅವರನ್ನು ಕರೆಸಬೇಕು. ಅವರು ಬರದಿದ್ದರೆ ನಾವು ಬರಲ್ಲ. ಜಮೀದ್ ಅಹಮ್ಮದ್ ಖಾನ್ ಬಂದರೆ ಕಾಂಗ್ರೆಸ್ ಗೆಲ್ಲುತ್ತೆ. ಇಲ್ಲವಾದರೆ ಕಾಂಗ್ರೆಸ್ ಗೆಲುವು ಕಷ್ಟ ಎಂದು ಜಮೀರ್ ಅಭಿಮಾನಿ ಆಸೀಫ್ ಅಲಿ ಬಿಗಿಪಟ್ಟು ಹಿಡಿದಿದ್ದು, ಕೊನೆಗೆ ಮೊಹಮ್ಮದ್ ನಲಪಾಡ್ ಆಸೀಫ್ ಅಲಿಯನ್ನು ಪಕ್ಕಕ್ಕೆ ಕರೆದೊಯ್ದು ಸಮಧಾನಪಡಿಸಿದ್ದಾರೆ.
ಒಬ್ಬರಿಂದ ಪಕ್ಷ ನಡೆಯಲ್ಲ ಎಂದ ಡಿಕೆಶಿ
ಇನ್ನು ದಾವಣಗೆರೆಯಲ್ಲಿ ಮಾತನಾಡಿದ ಡಿಕೆಶಿ, ಶೇ. 79ರಷ್ಟು ಜನ ಕಾಂಗ್ರೆಸ್ ಅಭ್ಯರ್ಥಿ ಪರ ಒಲವು ಹೊಂದಿದ್ದಾರೆ. ಶಾಮನೂರು ಶಿಕ್ಷಣ ಸಂಸ್ಥೆಯಲ್ಲಿ ಲಕ್ಷಾಂತರ ಜನ ಶಿಕ್ಷಣ ಪಡೆದಿದ್ದಾರೆ. ಸಚಿವ ಜಮೀರ್ ಕೇರಳದಲ್ಲಿ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡ್ತಿದ್ದಾರೆ.ಮುಗಿಸಿಕೊಂಡು ಬಂದ ಮೇಲೆ ಎಲ್ಲಿಗೆ ಕಳುಹಿಸಬೇಕು ಬಗ್ಗೆ ಚರ್ಚಿಸುತ್ತೇವೆ. ಒಬ್ಬರಿಂದ ಪಕ್ಷ ನಡೆಯಲ್ಲ. ಅದು ಡಿಕೆ, ಸಿಎಂ, ಜಮೀರ್ ಆಗಬಹುದು. 16 ನಿಗಮ ಮಂಡಳಿಗಳಲ್ಲಿ ಮುಸ್ಲಿಮರಿಗೆ ಅಧ್ಯಕ್ಷ ಸ್ಥಾನ ನೀಡಿದ್ದೇವೆ. ಅಬ್ದುಲ್ ಜಬ್ಬಾರ್ಗೆ 3 ಬಾರಿ ಪರಿಷತ್ ಸದಸ್ಯ ಸ್ಥಾನ ನೀಡಿದ್ದೇವೆ. ಕಣದಲ್ಲಿ ಮುಸ್ಲಿಂ ಅಭ್ಯರ್ಥಿಗಳು ಇದ್ದಾರೆ. ಅದರಿಂದ ತೊಂದರೆ ಆಗಲ್ಲ ಎಂದರು. ಅಲ್ಲದೇ ಒಬ್ಬರಿಂದ ಪಕ್ಷ ನಡೆಯಲ್ಲ ಎಂದು ಹೇಳುವ ಮೂಲಕ ಜಮೀರ್ ಅಹಮ್ಮದ್ ಖಾನ್ಗೆ ಪರೋಕ್ಷ ಟಾಂಗ್ ಕೊಟ್ಟರು.
‘ಆರ್ಆರ್ಆರ್’ ಸಿನಿಮಾದ ಬಳಿಕ ರಾಮ್ ಚರಣ್ (Ram Charan) ನಟನೆಯ ಸತತ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಫ್ಲಾಪ್ ಆಗಿವೆ. ‘ಗೇಮ್ ಚೇಂಜರ್’ ಮತ್ತು ‘ಆಚಾರ್ಯ’ ಎರಡೂ ಸಿನಿಮಾಗಳು ಹೀನಾಯ ಸೋಲು ಕಂಡಿವೆ. ಇದೀಗ ರಾಮ್ ಚರಣ್ ಅವರು ಗೆಲುವಿನ ಹುಡುಕಾಟದಲ್ಲಿದ್ದಾರೆ. ರಾಮ್ ಚರಣ್ ಪ್ರಸ್ತುತ ‘ಪೆದ್ದಿ’ ಸಿನಿಮಾ ಬಹುತೇಕ ಮುಗಿಸಿದ್ದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್ 30 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ನಿರ್ಮಾಪಕರೊಬ್ಬರು ಸಿನಿಮಾದ ಬಿಡುಗಡೆ ಮತ್ತೆ ಮುಂದೂಡಲ್ಪಟ್ಟಿರುವ ಬಗ್ಗೆ ಸುಳಿವು ನೀಡಿದ್ದು, ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಅಸಲಿಗೆ ‘ಪೆದ್ದಿ’ ಸಿನಿಮಾ ಮಾರ್ಚ್ 27ರಂದೇ ಬಿಡುಗಡೆ ಆಗಬೇಕಿತ್ತು. ಆದರೆ ರಾಮ್ ಚರಣ್ ಅವರ ಚಿಕ್ಕಪ್ಪ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಮಾರ್ಚ್ 26ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಣೆ ಆಗಿತ್ತು. ಹಾಗಾಗಿ ಸಿನಿಮಾದ ಬಿಡುಗಡೆಯನ್ನು ಏಪ್ರಿಲ್ 30ಕ್ಕೆ ಮುಂದೂಡಲಾಯ್ತು. ಆದರೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಯ್ತು. ಆದರೆ ‘ಪೆದ್ದಿ’ ಸಿನಿಮಾದ ಚಿತ್ರೀಕರಣ ಈಗ ಏಪ್ರಿಲ್ 30ರ ಬದಲಾಗಿ ಜೂನ್ನಲ್ಲಿ ಆಗಲಿದೆ ಎನ್ನಲಾಗುತ್ತಿದೆ.
ಈ ಸುದ್ದಿ ಹರಡಲು ಮುಖ್ಯ ಕಾರಣ ನಿರ್ಮಾಪಕ ಎಸ್ಕೆನ್. ಇತ್ತೀಚೆಗೆ ಅವರು ‘ಚೆನ್ನೈ ಲವ್ಸ್ಟೋರಿ’ ಹೆಸರಿನ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ತಮ್ಮ ‘ಚೆನ್ನೈ ಲವ್ಸ್ಟೋರಿ’ ಸಿನಿಮಾ ಬಗ್ಗೆ ಮಾತನಾಡುತ್ತಾ, ನಾವು ಮೊದಲಿಗೆ ಸಿನಿಮಾವನ್ನು ಜೂನ್ 26ಕ್ಕೆ ಬಿಡುಗಡೆ ಮಾಡೋಣ ಎಂದುಕೊಂಡಿದ್ದೆವು, ಆದರೆ ಆಗ ‘ಪೆದ್ದಿ’ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಕೆಲವರು ಮಾಹಿತಿ ನೀಡಿದರು. ಹೀಗಾಗಿ ಸಿನಿಮಾದ ಬಿಡುಗಡೆಯನ್ನು ನಾವು ಬದಲಾಯಿಸಿಕೊಂಡೆವು’ ಎಂದಿದ್ದರು.
ಎಸ್ಕೆಎನ್ ಅವರ ಈ ಮಾತುಗಳು ರಾಮ್ ಚರಣ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ‘ಪೆದ್ದಿ’ ಸಿನಿಮಾದ ಬಿಡುಗಡೆ ಜೂನ್ ತಿಂಗಳಲ್ಲಿ ಆಗಲಿದೆಯೇ ಎಂಬ ಅನುಮಾನ ಮೂಡಿಸಿದೆ. ಇತ್ತೀಚೆಗಷ್ಟೆ ‘ಪೆದ್ದಿ’ ಸಿನಿಮಾದ ಚಿತ್ರೀಕರಣದ ವೇಳೆ ರಾಮ್ ಚರಣ್ ಗೆ ಗಾಯ ಸಹ ಆಗಿದ್ದು, ಸಣ್ಣ ಆಪರೇಷನ್ ಸಹ ಆಗಿದೆ. ಇದರಿಂದ ಚಿತ್ರೀಕರಣ ತಡವಾಗಿ ಸಿನಿಮಾದ ಬಿಡುಗಡೆ ಏಪ್ರಿಲ್ನಿಂದ ಜೂನ್ಗೆ ವರ್ಗಾವಣೆ ಆಗಿರಬಹುದು ಎಂಬ ಅನುಮಾನ ಮೂಡಿದೆ. ಚಿತ್ರತಂಡದವರು ಸಹ ಯಾವುದೇ ಸ್ಪಷ್ಟನೆ, ಹೇಳಿಕೆ ನೀಡದೇ ಇರುವುದು ರಿಲೀಸ್ ಮುಂದೂಡಿಕೆ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ.
‘ಪೆದ್ದಿ’ ಸಿನಿಮಾ ಗ್ರಾಮೀಣ ಆಕ್ಷನ್ ಕತೆಯನ್ನು ಹೊಂದಿದೆ. ಸಿನಿಮಾದ ನಾಯಕ ರಾಮ್ ಚರಣ್ ಕ್ರಿಕೆಟ್ ಆಟಗಾರ ಮತ್ತು ಕುಸ್ತಿ ಪೈಲ್ವಾನನ ಪಾತ್ರದಲ್ಲಿ ಮಿಂಚಿದ್ದಾರೆ. ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಅವರು ನಾಯಕನ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ಜಾನ್ಹವಿ ಕಪೂರ್ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಬುಚ್ಚಿಬಾಬು ಸನಾ.
ಮೇಘನಾ ರಾಜ್ ಮಗ ರಾಯನ್ ಹಾಗೂ ತಮ್ಮ ಕುಟುಂಬದ ಜೊತೆ ವೆಕೇಶನ್ ತೆರಳಿದ್ದಾರೆ. ಈ ಸಂದರ್ಭದ ಫೋಟೋ ಹಂಚಿಕೊಂಡಿದ್ದು, ಅವು ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಮೇಘನಾ ರಾಜ್ ಅವರ ಮಗ ರಾಯನ್ ಓದುವುದರಲ್ಲಿ ತೊಡಗಿಕೊಂಡಿದ್ದಾನೆ. ಈಗ ಸಮ್ಮರ್ ವೆಕೇಶನ್ ಶುರುವಾಗಿದೆ. ಹೀಗಾಗಿ, ಮಗನ ಜೊತೆ ಮೇಘನಾ ಪ್ರವಾಸ ತೆರಳಿದ್ದಾರೆ. ಈ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮೇಘನಾ ರಾಜ್ ಅವರಿಗೆ ಈಗ ಮಗನೇ ಪ್ರಪಂಚ. ಚಿರಂಜೀವಿ ಸರ್ಜಾ ನಿಧನ ಹೊಂದುವಾಗ ಮೇಘನಾ ರಾಜ್ ಪ್ರೆಗ್ನೆಂಟ್ ಆಗಿದ್ದರು. ಚಿರುನ ಕಳೆದುಕೊಂಡು ದುಃಖದಲ್ಲಿ ಕೈ ತೊಳೆದರು. ಆ ಬಳಿಕ ಅವರ ಬದುಕು ನಿಧಾನವಾಗಿ ಬದಲಾಗುತ್ತಾ ಬಂತು.
ಮೇಘನಾ ರಾಜ್ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅಲ್ಲೊಂದು, ಇಲ್ಲೊಂದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ. ಅವರ ಸಂಪೂರ್ಣ ಗಮನ ಮಗನ ಸಾಕುವುದರ ಮೇಲೆಯೇ ಇದೆ.
ಮೇಘನಾ ರಾಜ್ ತಂದೆ ಸುಂದರ್ ರಾಜ್ ಹಾಗೂ ಪ್ರಮಿಳಾ ಜೋಶಾಯಿ ಅವರು ಕೂಡ ಮೇಘನಾ ಬೆಂಬಲಕ್ಕೆ ನಿಂತಿದ್ದಾರೆ. ಅವರು ಮಗಳು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ.
ಪಾಕಿಸ್ತಾನದ ವೇಗಿ ನಸೀಮ್ ಶಾ (Naseem Shah) ಅವರಿಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (PCB) ಸುಮಾರು 2 ಕೋಟಿ ರೂಪಾಯಿ (PKR) ಭಾರಿ ದಂಡ ವಿಧಿಸಿದೆ. ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲೇ ಇದು ಒಬ್ಬ ಆಟಗಾರನಿಗೆ ವಿಧಿಸಲಾದ ಅತಿ ದೊಡ್ಡ ಮೊತ್ತದ ದಂಡ ಎಂಬುದು ವಿಶೇಷ.
ದಂಡ ವಿಧಿಸಲು ಕಾರಣವೇನು?
ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಝ್ ಅವರನ್ನು ಟೀಕಿಸಿ ನಸೀಮ್ ಶಾ ಅವರ ಎಕ್ಸ್ (ಟ್ವಿಟರ್) ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು.
ಪಾಕಿಸ್ತಾನ್ ಸೂಪರ್ ಲೀಗ್ನ (PSL 2026) ಪಂದ್ಯವೊಂದರ ವೇಳೆ ಮರಿಯಮ್ ನವಾಝ್ ಅವರಿಗೆ ನೀಡಲಾಗಿದ್ದ ವಿಶೇಷ ಗೌರವವನ್ನು ಪ್ರಶ್ನಿಸಿ, “ಅವರನ್ನು ಲಾರ್ಡ್ಸ್ ಮೈದಾನದ ರಾಣಿಯಂತೆ ಏಕೆ ನಡೆಸಿಕೊಳ್ಳಲಾಗುತ್ತಿದೆ?” ಎಂದು ವ್ಯಂಗ್ಯವಾಡಿದ್ದರು.
ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಈ ಪೋಸ್ಟ್ ವಿವಾದಕ್ಕೆ ಕಾರಣಗಾಗುತ್ತಿದ್ದಂತೆ ನಸೀಮ್ ಶಾ ಅದನ್ನು ಡಿಲೀಟ್ ಮಾಡಿದ್ದರು. ಅಲ್ಲದೆ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು ಎಂದು ಅವರು ಸ್ಪಷ್ಟನೆ ನೀಡಿದ್ದರು.
ಪಿಸಿಬಿ ಕ್ರಮ:
ನಸೀಮ್ ಶಾ ಅವರ ‘ಹ್ಯಾಕಿಂಗ್’ ವಾದವನ್ನು ತಳ್ಳಿಹಾಕಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶಿಸ್ತು ಸಮಿತಿ, ಇದು ಕೇಂದ್ರ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಿದೆ.
ಅಲ್ಲದೆ ಯುವ ವೇಗಿಯನ್ನು ಎರಡು ವರ್ಷಗಳ ಕಾಲ ನಿಷೇಧಿಸುವ ಬಗ್ಗೆ ಚರ್ಚಿಸಲಾಗಿತ್ತು. ಆದರೆ, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರ ಹಸ್ತಕ್ಷೇಪದಿಂದಾಗಿ ಕೇವಲ ಆರ್ಥಿಕ ದಂಡಕ್ಕೆ ಸೀಮಿತಗೊಳಿಸಲಾಯಿತು.
ಅದರಂತೆ ಇದೀಗ ನಸೀಮ್ ಶಾಗೆ ಬರೋಬ್ಬರಿ 2 ಕೋಟಿ ರೂ. (PKR) ದಂಡ ವಿಧಿಸಲಾಗಿದೆ. ಇನ್ನು ತಾನು ಮಾಡಿರುವ ಪ್ರಮಾದಕ್ಕೆ ಪಾಕ್ ವೇಗಿ, ಮಂಡಳಿಯ ಮುಂದೆ ಬೇಷರತ್ ಕ್ಷಮೆಯಾಚಿಸಿದ್ದಾರೆ.
ಮ್ಯಾನೇಜರ್ಗೆ ಗೇಟ್ ಪಾಸ್:
ಈ ಘಟನೆಯ ನಂತರ ನಸೀಮ್ ಶಾ ಅವರು ತಮ್ಮ ಸೋಶಿಯಲ್ ಮೀಡಿಯಾ ಮ್ಯಾನೇಜರ್ ಅನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಪಿಸಿಬಿ ಕೂಡ ಆ ಮ್ಯಾನೇಜರ್ ಅನ್ನು ಕಪ್ಪುಪಟ್ಟಿಗೆ ಸೇರಿಸಿದೆ.
ಸದ್ಯ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ತೊಡಗಿಸಿಕೊಂಡಿರುವ ನಸೀಮ್ ಶಾ ರಾವಲ್ಪಿಂಡಿಸ್ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ. ಪಿಂಡಿಸ್ ಫ್ರಾಂಚೈಸಿ ಪರ ಕಣಕ್ಕಿಳಿಯುತ್ತಿರುವ ನಸೀಮ್ಗೆ ಈ ಬಾರಿ ಸಿಗುವ ವೇತನ 8.65 ಕೋಟಿ ರೂ. (PKR). ಇದರಲ್ಲಿ ಇದೀಗ 2 ಕೋಟಿ ರೂ. ದಂಡ ಪಾವತಿಸಬೇಕಾಗಿ ಬಂದಿದೆ.
ದೇವನಹಳ್ಳಿ,ಮಾ.31: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೊರವಲಯದ ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಮಂಗಳವಾರ (ಮಾ.31) ನಡೆದಿದೆ. ಕಾರು ಹೆದ್ದಾರಿಯಲ್ಲಿ ವೇ ಗವಾಗಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಕಾರಿನ ಚಾಲಕ ಮತ್ತು ಪ್ರಯಾಣಿಕರು ಹೆದ್ದಾರಿ ಮಧ್ಯೆಯೇ ಕಾರನ್ನು ನಿಲ್ಲಿಸಿ ಕೆಳಗಿಳಿದಿದ್ದಾರೆ. ಅವರು ಇಳಿಯುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಕಾರಿನಾದ್ಯಂತ ಆವರಿಸಿದ್ದು, ನೋಡ ನೋಡುತ್ತಿದ್ದಂತೆ ಇಡೀ ಕಾರು ಬೆಂಕಿಗಾಹುತಿಯಾಗಿದೆ. ಇನ್ನು ಇದನ್ನು ಗಮನಿಸಿದ ಕಾರು ಚಾಲಕ ಕೆಳಗಿಳಿದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಈ ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು. ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.