ಬೆಂಗಳೂರು, ಮಾರ್ಚ್ 27: ಭಾರತದ ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಟೆಕ್ ಪ್ರಾಬಲ್ಯಕ್ಕಾಗಿ ತೀವ್ರ ಚರ್ಚೆ ನಡೆಯುತ್ತಿದೆ. ಸದ್ಯದ ಅಂಕಿಅಂಶಗಳ ಪ್ರಕಾರ, ಬೆಂಗಳೂರು ಐಟಿ ಸೇವೆ, ಸ್ಟಾರ್ಟ್‌ಅಪ್ ಹೂಡಿಕೆ ಮತ್ತು ಕೃತಕ ಬುದ್ಧಿಮತ್ತೆ (AI) ವಲಯಗಳಲ್ಲಿ ಹೈದರಾಬಾದ್‌ಗಿಂತ ಸ್ಪಷ್ಟವಾಗಿ ಮುಂದಿದೆ. ಜಾಗತಿಕ ಟಾಪ್ 10 ಟೆಕ್ ಹಬ್‌ಗಳಲ್ಲಿ ಬೆಂಗಳೂರು ಆರನೇ ಸ್ಥಾನದಲ್ಲಿದ್ದರೆ, ಹೈದರಾಬಾದ್ 26ನೇ ಸ್ಥಾನದಲ್ಲಿದೆ. 2020ರಿಂದ 2024ರ ಅವಧಿಯಲ್ಲಿ ಬೆಂಗಳೂರಿನ ಸ್ಟಾರ್ಟ್‌ಅಪ್‌ಗಳು 42.3 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸಿದ್ದರೆ, ಹೈದರಾಬಾದ್ ಸ್ಟಾರ್ಟ್‌ಅಪ್‌ಗಳು ಕೇವಲ 1.3 ಬಿಲಿಯನ್ ಡಾಲರ್ ಫಂಡಿಂಗ್ ಪಡೆದಿವೆ. ಎಐ ಸ್ಟಾರ್ಟ್‌ಅಪ್‌ಗಳ ಸ್ಥಾಪನೆ ಮತ್ತು ಹೂಡಿಕೆಯಲ್ಲೂ ಬೆಂಗಳೂರು ಗಮನಾರ್ಹ ಮುನ್ನಡೆ ಸಾಧಿಸಿದೆ. ಬೆಂಗಳೂರಿನಲ್ಲಿ 370 ಐಟಿ ಸೇವಾ ಕಂಪನಿಗಳು ಮತ್ತು 3,200 ಟೆಕ್ ಸ್ಟಾರ್ಟ್‌ಅಪ್‌ಗಳಿದ್ದರೆ, ಹೈದರಾಬಾದ್‌ನಲ್ಲಿ ಕ್ರಮವಾಗಿ 270 ಮತ್ತು 940 ಇವೆ. ಮೂಲಸೌಕರ್ಯದಂತಹ ಕೆಲವು ಕ್ಷೇತ್ರಗಳಲ್ಲಿ ಹೈದರಾಬಾದ್ ಉತ್ತಮ ಅಂಕ ಗಳಿಸಿದ್ದರೂ , ಒಟ್ಟಾರೆ ಕೌಶಲ್ಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ಮೇಲುಗೈ ಸಾಧಿಸಿದೆ.
ನವದೆಹಲಿ, ಮಾರ್ಚ್ 27: ಭಾರತದಲ್ಲಿ ಲಾಕ್‌ಡೌನ್ (Lockdown) ಆಗಲಿದೆ ಎಂಬ ವದಂತಿಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಳ್ಳಿಹಾಕಿದ್ದಾರೆ. ಆ ವದಂತಿಗಳು “ಆಧಾರರಹಿತ” ಎಂದು ಕರೆದಿದ್ದಾರೆ. ರಾಜಕಾರಣಿಗಳು ಮತ್ತು ಸಾರ್ವಜನಿಕರು ವಿನಾಕಾರಣ ಭಯವನ್ನು ಹರಡದಂತೆ ಅವರು ಒತ್ತಾಯಿಸಿದ್ದಾರೆ. “ಲಾಕ್‌ಡೌನ್ ಪರಿಸ್ಥಿತಿ ಪಾಕಿಸ್ತಾನದಲ್ಲಿ ಉಂಟಾಗಿದೆಯೇ ವಿನಃ ಭಾರತದಲ್ಲಿ ಅಲ್ಲ” ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ 2026ರ ಹಣಕಾಸು ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, “ದೇಶಾದ್ಯಂತ ಆಧಾರರಹಿತ ವದಂತಿಗಳನ್ನು ಹರಡಲಾಗುತ್ತಿದೆ. ಜನರ ಮನಸ್ಸಿನಲ್ಲಿ ಭಯ ಹುಟ್ಟಿಸಲು ಏನೇನೋ ಹೇಳಲಾಗುತ್ತಿದೆ. ಈ ಲಾಕ್‌ಡೌನ್ ಎಲ್ಲಿ ನಡೆಯುತ್ತಿದೆ? ಪಾಕಿಸ್ತಾನದಲ್ಲಿ ಲಾಕ್‌ಡೌನ್ ನಡೆಯುತ್ತಿದೆಯೇ ವಿನಃ ಭಾರತದಲ್ಲಿ ಅಲ್ಲ” ಎಂದು ಅವರು ಹೇಳಿದ್ದಾರೆ.
“ಬಾಂಗ್ಲಾದೇಶದ ಪರಿಸ್ಥಿತಿಯನ್ನು ನೋಡಿ. ಅವರು ಸಂಕಷ್ಟದಲ್ಲಿ ಬಳಲುತ್ತಿದ್ದಾರೆ ಎಂದು ಸೂಚಿಸಲು ನಾನು ಈ ಮಾತನ್ನು ಹೇಳುತ್ತಿಲ್ಲ. ವಾಸ್ತವಿಕತೆಯ ಹೋಲಿಕೆಯಾಗಿ ಮಾತ್ರ ಇದನ್ನು ಉಲ್ಲೇಖಿಸುತ್ತಿದ್ದೇನೆ. ಉತ್ತಮ ನೆರೆಯವರಾಗಿ, ನಮ್ಮ ಕಡೆಯಿಂದ ಸಾಧ್ಯವಾಗುವ ಯಾವುದೇ ಸಹಾಯವನ್ನು ನಾವು ನೀಡಲು ಸಿದ್ಧರಿದ್ದೇವೆ. ನಾವು ಉತ್ತಮ ನೆರೆಹೊರೆಯ ಸಂಬಂಧಗಳನ್ನು ಕಾಪಾಡಿಕೊಳ್ಳುತ್ತಿದ್ದೇವೆ ಮತ್ತು ಅಗತ್ಯವಿರುವಲ್ಲಿ ಸಹಾಯವನ್ನು ಒದಗಿಸುತ್ತಿದ್ದೇವೆ. ನಮ್ಮ ದೇಶದಲ್ಲಿ ಯಾವ ಸಮಸ್ಯೆಯೂ ಇಲ್ಲ” ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು, ಈಗ ಸ್ಟಾರ್ ನಾಯಕಿಯಾಗಿ ಬೆಳೆಯುತ್ತಿರುವ ಸಾರಾ ಅರ್ಜುನ್ (Sara Arjun) ಸದ್ಯ ತಮ್ಮ ವೃತ್ತಿಜೀವನದ ಸುವರ್ಣ ಕಾಲದಲ್ಲಿದ್ದಾರೆ. ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರದ ಯಶಸ್ಸು ಸಾರಾ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ. ಅದರಲ್ಲೂ ಸದ್ಯ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿ ಮಾಡುತ್ತಿರುವ ‘ಧುರಂಧರ್: ದಿ ರಿವೆಂಜ್’ (Dhurandhar 2) ಚಿತ್ರದ ಅಬ್ಬರದ ನಡುವೆಯೇ ಸಾರಾ ಅವರ ಹೊಸ ಸಿನಿಮಾ ಬಗ್ಗೆ ದೊಡ್ಡ ಸುದ್ದಿಯೊಂದು ಹರಿದಾಡುತ್ತಿದೆ.
ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸಾರಾ ಅರ್ಜುನ್ ಮತ್ತು ‘ಹೋಮ್‌ಬೌಂಡ್’ ಖ್ಯಾತಿಯ ನಟ ಇಶಾನ್ ಖಟ್ಟರ್ ಒಟ್ಟಿಗೆ ಇರುವ ವಿಡಿಯೋಗಳು ಮತ್ತು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಖ್ಯಾತ ನಿರ್ದೇಶಕಿ ಜೋಯಾ ಅಖ್ತರ್ ಅವರ ‘ಟೈಗರ್ ಬೇಬಿ’ ಬ್ಯಾನರ್ ಅಡಿಯಲ್ಲಿ ಇವರಿಬ್ಬರು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಜೋಡಿಯ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಕೂಡ ಹೊಸ ಸಿನಿಮಾ ಘೋಷಣೆಯಾಗಲಿದೆ ಎಂದು ಕಾತರದಿಂದ ಕಾಯುತ್ತಿದ್ದರು.
ಆದರೆ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರು ಎರಚಿದಂತಾಗಿದೆ. ಇದು ಸಿನಿಮಾ ಅಲ್ಲ ಎಂಬ ಸತ್ಯ ಗೊತ್ತಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ಈಗ ಸ್ವತಃ ಸಾರಾ ಅರ್ಜುನ್ ಅವರೇ ಬ್ರೇಕ್ ಹಾಕಿದ್ದಾರೆ. ಇಶಾನ್ ಖಟ್ಟರ್ ಜೊತೆಗಿನ ಆ ಫೋಟೋಗಳು ಸಿನಿಮಾದ್ದಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಇದು ಯಾವುದೋ ಹೊಸ ಸಿನಿಮಾದ ಶೂಟಿಂಗ್ ಅಲ್ಲ, ಬದಲಿಗೆ ಇದೊಂದು ಜಾಹೀರಾತು ಚಿತ್ರೀಕರಣ!
ವೈರಲ್ ಆಗಿರುವ ವಿಡಿಯೋಗಳ ಬಗ್ಗೆ ಸ್ಪಷ್ಟನೆ ನೀಡಿರುವ ಸಾರಾ ಅರ್ಜುನ್, ‘ಇದು ಗೂಗಲ್ ಎಐ ಸಲುವಾಗಿ ಮಾಡಲಾದ ಜಾಹೀರಾತು. ಈ ಅಭಿಯಾನದ ಬಗ್ಗೆ ಕುತೂಹಲ ಮೂಡಿಸಲು ಗೂಗಲ್ ಪ್ರಯತ್ನಿಸುತ್ತಿದೆ’ ಎಂದು ಹೇಳಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿನ ಹೊಸ ತಂತ್ರಜ್ಞಾನಗಳನ್ನು ಉತ್ತೇಜಿಸಲು ಈ ವಿಶೇಷ ಪ್ರಚಾರವನ್ನು ಹಮ್ಮಿಕೊಳ್ಳಲಾಗಿದೆ.
ಹೀಗಾಗಿ, ಸಾರಾ ಮತ್ತು ಇಶಾನ್ ಅವರನ್ನು ಬೆಳ್ಳಿತೆರೆಯ ಮೇಲೆ ಒಟ್ಟಿಗೆ ನೋಡಬಯಸಿದ್ದ ಅಭಿಮಾನಿಗಳಿಗೆ ಸದ್ಯಕ್ಕೆ ನಿರಾಸೆಯಾಗಿದ್ದರೂ, ಗೂಗಲ್‌ನ ಈ ಹೊಸ ಎಐ ಪ್ರಚಾರದಲ್ಲಿ ಅವರ ಅಭಿನಯ ಹೇಗಿರಲಿದೆ ಎಂಬ ಕುತೂಹಲ ಮಾತ್ರ ಹಾಗೆಯೇ ಉಳಿದಿದೆ.
ವಿಜಯ್ ದೇವರಕೊಂಡ (Vijay Deverakonda) ಈಗ ಟಾಲಿವುಡ್ನ ಸ್ಟಾರ್ ನಟರಲ್ಲಿ ಒಬ್ಬರು. ಯಾವುದೇ ಗಾಡ್ಫಾದರ್ಗಳಿಲ್ಲದೆ ತೀರ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ಒಂದೊಂದೇ ಮೆಟ್ಟಿಲು ಏರಿ ಈಗ ಸ್ಟಾರ್ ಆದವರು. ಸ್ಟಾರ್ ಆದ ಬಳಿಕ ತನ್ನಂತೆ ಪ್ರತಿಭೆ ಇರುವ ಆದರೆ ಗಾಡ್ ಫಾದರ್ಗಳಿಲ್ಲದ ಯುವಕರಿಗೆ ಸಹಾಯ ಮಾಡುತ್ತಾ ಬರುತ್ತಿದ್ದಾರೆ. ಇದೀಗ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಮಾಡುತ್ತಾ ಸಿನಿಮಾ ಅವಕಾಶಕ್ಕಾಗಿ ಹುಡುಕಾಡುತ್ತಿದ್ದ ಯುವಕನೊಬ್ಬನಿಗೆ ವಿಜಯ್ ದೇವರಕೊಂಡ ಸಿನಿಮಾನಲ್ಲಿ ಅವಕಾಶ ಕೊಟ್ಟು, ಆತನ ಕನಸು ನನಸು ಮಾಡಿದ್ದಾರೆ.
ಜೀವನ್ ಹೆಸರಿನ ಯುವಕನೊಬ್ಬ ನಟನಾಗುವ ಕನಸು ಹೊಂದಿ, ಇನ್ಸ್ಟಾಗ್ರಾಂನಲ್ಲಿ ತನ್ನ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದ. ಯಾವುದೇ ಆಡಿಷನ್ ಪ್ರಕಟಣೆ ಬಂದರೂ ಅದಕ್ಕೆ ಸೀನ್ ಬರೆದು, ನಟಿಸಿ ಆ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿಕೊಳ್ಳುತ್ತಿದ್ದ. ಇತ್ತೀಚೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ನಟನೆಯ ಹೊಸ ಸಿನಿಮಾ ‘ರಣಬಲಿ’ಗೆ ಹೊಸ ನಟರು ಬೇಕಾಗಿದ್ದಾರೆಂಬ ಆಡಿಷನ್ ಪ್ರಕಟಣೆ ಹೊರಡಿಸಲಾಗಿತ್ತು. ಅದಕ್ಕೆ ಯುವಕ ಜೀವನ್ ವಿಡಿಯೋ ಒಂದನ್ನು ಕಳಿಸಿದ್ದ.
ಆಡಿಷನ್ ವಿಡಿಯೋಗೆ ತಾನೇ ಚಿತ್ರಕತೆ ಬರೆದು, ತಾನೇ ಕಾಸ್ಟ್ಯೂಮ ರೆಡಿ ಮಾಡಿ, ರಕ್ತ ಇನ್ನಿತರೆಗಳನ್ನು ತಾನೇ ಮನೆಯಲ್ಲೇ ತಯಾರು ಮಾಡಿಕೊಂಡು, ಮೊಬೈಲ್ನಲ್ಲಿ ಶೂಟ್ ಮಾಡಿ ವಿಡಿಯೋ ಮಾಡಿದ್ದ ಜೀವನ್ ಆ ವಿಡಿಯೋವನ್ನು ‘ರಣಬಲಿ’ ಸಿನಿಮಾ ತಂಡಕ್ಕೆ ಕಳಿಸುವ ಜೊತೆಗೆ ಇನ್ಸ್ಟಾಗ್ರಾಂನಲ್ಲಿಯೂ ಹಂಚಿಕೊಂಡಿದ್ದ. ವಿಡಿಯೋ ಗಮನಿಸಿದ ವಿಜಯ್ ದೇವರಕೊಂಡ ಖುದ್ದಾಗಿ ವಿಡಿಯೋಕ್ಕೆ ಮೆಸೇಜ್ ಮಾಡಿದ್ದಾರೆ.
‘ಅದ್ಭುತವಾದ ಪ್ರತಿಭೆ, ಈಗಲೇ ನಿನ್ನನ್ನು ಕಾಸ್ಟ್ ಮಾಡೋಣ, ನಮ್ಮ ಜೊತೆ ಸಂಪರ್ಕದಲ್ಲಿರು’ ಎಂದು ವಿಜಯ್ ದೇವರಕೊಂಡ ಕಮೆಂಟ್ ಮಾಡಿದ್ದಾರೆ. ಕಮೆಂಟ್ ಮಾಡಿದ್ದು ಮಾತ್ರವೇ ಅಲ್ಲದೆ, ತಮ್ಮ ‘ರಣಬಲಿ’ ತಂಡಕ್ಕೆ ಹೇಳಿ ಜೀವನ್ ಅವರನ್ನು ಸಂಪರ್ಕಿಸುವಂತೆ ಸಹ ಸೂಚಿಸಿದ್ದರಂತೆ. ಅದರಂತೆ ‘ರಣಬಲಿ’ ತಂಡದವರು ಜೀವನ್ ಅನ್ನು ಇನ್ಸ್ಟಾಗ್ರಾಂ ಮೂಲಕ ಸಂಪರ್ಕ ಮಾಡಿ, ಆತನ ನಂಬರ್ ಪಡೆದುಕೊಂಡಿದ್ದಾರೆ.
ಈ ಕುರಿತು ಪ್ರತ್ಯೇಕ ವಿಡಿಯೋನಲ್ಲಿ ಹೇಳಿಕೊಂಡಿರುವ ಯುವಕ ಜೀವನ, ವಿಜಯ್ ದೇವರಕೊಂಡ ಅವರಿಗೆ ಧನ್ಯವಾದ ಹೇಳಿದ್ದಾನೆ. ಆ ಯುವಕ ಜೀವನ್, ಹಲವಾರು ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ತಾನೊಬ್ಬ ನಟನಾಗಬೇಕು ಎಂಬುದೇ ಆತನ ಕನಸಾಗಿತ್ತು. ಇದೀಗ ವಿಜಯ್ ದೇವರಕೊಂಡ ಅವರಿಂದ ಆ ಕನಸು ನನಸಾಗುತ್ತಿದೆ.
ಪ್ರಸ್ತುತ ಟೀಂ ಇಂಡಿಯಾದ (Team India) ಎಲ್ಲಾ ಆಟಗಾರರು 2026 ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2026) ಭಾಗವಹಿಸಲಿದ್ದಾರೆ. ಈ ಪಂದ್ಯಾವಳಿಯ ಮೊದಲ ಪಂದ್ಯ ಆರ್ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (RCB vs SRH) ನಡುವೆ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ, ಆರ್ಸಿಬಿ ತಂಡದಲ್ಲಿ ವಿಕೆಟ್ ಕೀಪರ್ ಜವಾಬ್ದಾರಿ ನಿಭಾಯಿಸುತ್ತಿರುವ ಜಿತೇಶ್ ಶರ್ಮಾ ಪಾಡ್‌ಕ್ಯಾಸ್ಟ್‌ವೊಂದರಲ್ಲಿ ಗೌತಮ್ ಗಂಭೀರ್ ನಂತರ ದಿನೇಶ್ ಕಾರ್ತಿಕ್ (Dinesh Karthik) ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗಬಹುದು ಎಂದಿದ್ದಾರೆ. ಒಂದು ವೇಳೆ ದಿನೇಶ್ ಕಾರ್ತಿಕ್ ಅವರಿಗೆ ಟೀಂ ಇಂಡಿಯಾದ ಕೋಚ್ ಆಗುವ ಅವಕಾಶ ಸಿಗದಿದ್ದರೂ ಖಂಡಿತವಾಗಿಯೂ ಅವರು ಬೇರೊಂದು ದೇಶದ ತಂಡದ ಮುಖ್ಯ ಕೋಚ್ ಆಗುತ್ತಾರೆ. ಏಕೆಂದರೆ ಅವರು ಅಪಾರ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.
ದಿನೇಶ್ ಕಾರ್ತಿಕ್ ಮುಖ್ಯ ಕೋಚ್?
ರಣವೀರ್ ಅಲಹಾಬಾದ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಜಿತೇಶ್ ಶರ್ಮಾ, ‘ಭವಿಷ್ಯದಲ್ಲಿ ದಿನೇಶ್ ಕಾರ್ತಿಕ್ ಭಾರತೀಯ ಕ್ರಿಕೆಟ್ ತಂಡದ ತರಬೇತುದಾರರಾಗುತ್ತಾರೆಯೇ?” ಎಂದು ರಣವೀರ್ ಜಿತೇಶ್ ಶರ್ಮಾ ಅವರನ್ನು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಜಿತೇಶ್, ‘ಅವರು ಖಂಡಿತಾ ಆಗಬಹುದು. ದಿನೇಶ್ ಕಾರ್ತಿಕ್ ಭಾರತವಲ್ಲದಿದ್ದರೆ, ಇನ್ನೊಂದು ಪ್ರಮುಖ ದೇಶದ ತರಬೇತುದಾರರಾಗುವ ಸಾಮರ್ಥ್ಯ ಹೊಂದಿದ್ದಾರೆ. ಭಾರತ ಅವರನ್ನು ಕೋಚ್ ಆಗಿ ನೇಮಿಸದಿದ್ದರೆ, ಬೇರೆ ಯಾವುದಾದರೂ ದೇಶ ಮಾಡುತ್ತದೆ ಎಂದು ನಾನು ನಂಬುತ್ತೇನೆ’ ಎಂದು ಜಿತೇಶ್ ಶರ್ಮಾ ಉತ್ತರಿಸಿದ್ದಾರೆ.
ದಿನೇಶ್ ಕಾರ್ತಿಕ್ ಯೋಗ್ಯ ಅಭ್ಯರ್ಥಿ
ಜಿತೇಶ್ ಹೇಳಿದಂತೆ, ದಿನೇಶ್ ಕಾರ್ತಿಕ್ ಅವರ ಅನುಭವ ಮತ್ತು ಕ್ರಿಕೆಟ್ ಜ್ಞಾನ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಯೋಗ್ಯ ಅಭ್ಯರ್ಥಿಯನ್ನಾಗಿ ಮಾಡಿದೆ. ದಿನೇಶ್ ಕಾರ್ತಿಕ್ ಅವರ ಯಶಸ್ಸಿಗೆ ದೊಡ್ಡ ಸಾಕ್ಷಿಯೆಂದರೆ ಆರ್‌ಸಿಬಿಯ ಐಪಿಎಲ್ ಗೆಲುವು. 2025 ರಲ್ಲಿ, ದಿನೇಶ್ ಕಾರ್ತಿಕ್ ಬಲಿಷ್ಠ ತಂಡವನ್ನು ಕಟ್ಟಿ ತಂಡವನ್ನು ಚಾಂಪಿಯನ್ ಮಾಡಿದ್ದರು. ದಿನೇಶ್ ಕಾರ್ತಿಕ್ ದಿ ಹಂಡ್ರೆಡ್‌ನಲ್ಲಿ ಲಂಡನ್ ಸ್ಪಿರಿಟ್‌ನ ಬ್ಯಾಟಿಂಗ್ ಕೋಚ್ ಮತ್ತು ಮಾರ್ಗದರ್ಶಕರೂ ಆಗಿದ್ದಾರೆ. ಹೀಗಾಗಿ ಮುಂದೊಂದು ದಿನ ದಿನೇಶ್ ಕಾರ್ತಿಕ್ ಭಾರತ ತಂಡದ ಹೆಡ್ ಕೋಚ್ ಆಗುವ ಸಾಧ್ಯತೆಗಳಿವೆ.
ದಿನೇಶ್ ಕಾರ್ತಿಕ್ ತಮ್ಮ ವೃತ್ತಿಜೀವನದಲ್ಲಿ ಭಾರತ ಪರ 26 ಟೆಸ್ಟ್, 94 ಏಕದಿನ ಮತ್ತು 60 ಟಿ20 ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 28 ಶತಕಗಳು ಸೇರಿದಂತೆ ಅವರು ಒಟ್ಟು 9,620 ರನ್ ಗಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 12 ಶತಕಗಳು ಸೇರಿದಂತೆ 7,603 ರನ್ ಗಳಿಸಿರುವ ಕಾರ್ತಿಕ್ 415 ಟಿ20 ಪಂದ್ಯಗಳನ್ನು ಆಡಿದ್ದು, 7,557 ರನ್ ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಿಕ್ಕಮಗಳೂರು, ಮಾರ್ಚ್ 27: ಹಾಲು ಉತ್ಪಾದಕರ ಸಂಘದಲ್ಲಿ ಹಣ ದುರ್ಬಳಕೆ ಆರೋಪ ಸಂಬಂಧ ಮನನೊಂದು ಮಹಿಳಾ ಸಂಘದ ಕಾರ್ಯದರ್ಶಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರಿನ ತರೀಕೆರೆಯ ಹೆಚ್. ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಉಷಾ (45) ಮೃತ ಮಹಿಳೆಯಾಗಿದ್ದು, ಕಿರುಕುಳ ತಡೆಯಲು ನನ್ನಿಂದ ಆಗುತ್ತಿಲ್ಲ ಎಂದು ಹೇಳಿರುವ ವಿಡಿಯೋ ರೆಕಾರ್ಡ್ ಮಾಡಿ ನೇಣಿಗೆ ಶರಣಾಗಿದ್ದಾರೆ. ಲೆಕ್ಕಪತ್ರ ಪುಸ್ತಕ ಕಳೆದುಹೋಗಿರೋದು ತನ್ನಿಂದಾದ ತಪ್ಪು ಎಂದು ವಿಡಿಯೋದಲ್ಲವರು ಅಲವತ್ತುಕೊಂಡಿದ್ದಾರೆ.
ಕಳೆದ 10 ವರ್ಷಗಳಿಂದ ಹಣ ದುರುಪಯೋಗ ಎಂದು ಗ್ರಾಮಸ್ಥರು ಆರೋಪಿಸಿದ್ದು, ಈ ಸಂಬಂಧ ನಡೆದಿದ್ದ ಪಂಚಾಯತಿಯಲ್ಲೂ ಲೆಕ್ಕಪತ್ರ ಮಿಸ್ಸಿಂಗ್ ಆಗಿರೋದು ನಿಜ ಎಂದು ಉಷಾ ಒಪ್ಪಿಕೊಂಡಿದ್ದರು. 2010ರಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಆರಂಭವಾಗಿತ್ತು. ಅಲ್ಲಿಂದಲೂ ಉಷಾ ಸಂಘದ ಕಾರ್ಯದರ್ಶಿಯಾಗಿದ್ದರು. ಈ ನಡುವೆ 2025ರಲ್ಲಿ ಸಂಘಕ್ಕೆ ಹೊಸ ಸದಸ್ಯರು ಸೇರ್ಪಡೆಗೊಂಡ ಬಳಿಕ ಎಲ್ಲಾ ಲೆಕ್ಕಪತ್ರ ಕೇಳಲು ಅವರು ಪ್ರಾರಂಭಿಸಿದ್ದರು. ಆ ವೇಳೆ ಉಷಾ ವಿರುದ್ಧ ಹಣ ದುರ್ಬಳಕೆ ಆರೋಪ ಮಾಡಲಾಗಿತ್ತು ಎನ್ನಲಾಗಿದೆ.
ಘಟನೆ ಬಗ್ಗೆ ಮೃತ ಉಷಾ ಅವರ ಪತಿ ಪೊಲೀಸರಿಗೆ ದೂರು ನೀಡಿದ್ದು, ಪತ್ನಿ ಸಾವಿಗೆ ಕೆಲವರ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ಜೊತೆಗೆ ಆಕೆ ಎಲ್ಲ ಲೆಕ್ಕಪತ್ರವನ್ನೂ ನೀಡಿದ್ದಳು. ಹೀಗಿದ್ದರೂ ನಮ್ಮ ಕುಟುಂಬಕ್ಕೆ ಜೀವ ಬೆದರಿಕೆ ಹಾಕಲಾಗಿತ್ತು. ಎಚ್. ಎನ್. ಜಗದೀಶ್ (ದೊಡ್ಡೆರಿ), ದಕ್ಷಿಣ ಮೂರ್ತಿ, ಎಚ್. ಎಂ. ಯತೀಶ, ಲವಕುಮಾರ, ಕುಮಾರಸ್ವಾಮಿ, ವಿನಯ್ ಕುಮಾರ, ದರ್ಶನ್ ಕುಮಾರ್ ಎಚ್. ಆರ್., ಮಂಜುನಾಥ, ರಾಜೇಶ್ ಬಿನ್ ಪಾಲಾಕ್ಷಿ ಇವರೇ ತನ್ನ ಪತ್ನಿಯ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಉಷಾ ವಿಡಿಯೋದಲ್ಲಿ 10 ಜನರ ಹೆಸರು ಉಲ್ಲೇಖಿಸಿರುವ ಹಿನ್ನೆಲೆ ಹೆಚ್. ಮಲ್ಲೇನಹಳ್ಳಿ ಗ್ರಾಮದ 10 ಜನರ ಮೇಲೆ ತರೀಕೆರೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ನವದೆಹಲಿ, ಮಾರ್ಚ್ 27: ಜನರಿಗೆ ತೈಲ ಬೆಲೆ ಏರಿಕೆಯ ಬಿಸಿ ತಾಗದಿರಲೆಂದು ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು (Excise Duty) ಕಡಿಮೆಗೊಳಿಸಿದೆ. ಪೆಟ್ರೋಲ್ ಮತ್ತು ಡೀಸಲ್ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವನ್ನು 10 ರೂ ಇಳಿಸಿದೆ. ಇದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ ಆಗಬಹುದಾಗಿದ್ದ ನಷ್ಟದ ಹೊರೆ ಕಡಿಮೆ ಆಗಲಿದೆ. ಜನಸಾಮಾನ್ಯರಿಗೆ ಪೆಟ್ರೋಲ್, ಡೀಸಲ್ ಬೆಲೆ (Petrol Price) ಏರಿಕೆಯ ಭಾರವೂ ತಪ್ಪಿದಂತಾಗುತ್ತದೆ.
ಅಬಕಾರಿ ಸುಂಕ ಇಳಿಕೆಯಿಂದ ಸರಕಾರದ ಆದಾಯಕ್ಕೆ ಸಾಕಷ್ಟು ನಷ್ಟ ಆಗಲಿದೆ. ಕೇಂದ್ರೀಯ ನೇರ ತೆರಿಗೆ ಮತ್ತು ಸುಂಕ ಮಂಡಳಿ ಛೇರ್ಮನ್ ವಿವೇಕ್ ಚತುರ್ವೇದಿ ಪ್ರಕಾರ, ಕೇವಲ 15 ದಿನದಲ್ಲಿ ಸರ್ಕಾರಕ್ಕೆ ಆಗುವ ಆದಾಯ ನಷ್ಟ ಬರೋಬ್ಬರಿ 7,000 ಕೋಟಿ ರೂ.
ಆದರೆ, ತೈಲ ಮಾರುಕಟ್ಟೆ ಸಂಸ್ಥೆಗಳು ವಿಪರೀತ ನಷ್ಟ ಎದುರಿಸುವುದನ್ನು ತಪ್ಪಿಸಲು ಸರ್ಕಾರ ಅಬಕಾರಿ ಸುಂಕ ಇಳಿಸುವುದು ಅನಿವಾರ್ಯವಾಗಿತ್ತು. ಇಲ್ಲದಿದ್ದರೆ ಪೆಟ್ರೋಲ್, ಡೀಸಲ್ ಬೆಲೆಗಳನ್ನು ಏರಿಸಲು ಅವಕಾಶ ಕೊಡುವ ಒಂದು ಮಾರ್ಗ ಇತ್ತಾದರೂ ಅದರಿಂದ ಜನಸಾಮಾನ್ಯರಿಗೆ ನೇರವಾಗಿ ಬಿಸಿ ತಗುಲುತ್ತಿತ್ತು. ಹೀಗಾಗಿ, ಅಬಕಾರಿ ಸುಂಕವನ್ನು ಇಳಿಸಲು ಸರ್ಕಾರ ನಿರ್ಧರಿಸಿದೆ.
ಜಾಗತಿಕ ಕಚ್ಛಾ ತೈಲ ಬೆಲೆ ಇರಾನ್ ಯುದ್ಧಕ್ಕೆ ಮುನ್ನ ಒಂದು ಬ್ಯಾರಲ್ಗೆ ಸುಮಾರು 60 ಡಾಲರ್ ಇತ್ತು. ಈಗ ಅದು 100 ಡಾಲರ್ ದಾಟಿ ಹೋಗಿದೆ. ಒಂದು ಹಂತದಲ್ಲಿ ಅದು 120 ಡಾಲರ್ ಗಡಿ ಮುಟ್ಟಿತ್ತು. ತೈಲ ಬೆಲೆ ಹೆಚ್ಚಿದಷ್ಟೂ ಒಎಂಸಿಗಳಿಗೆ ನಷ್ಟದ ಹೊರೆ ಹೆಚ್ಚುತ್ತಾ ಹೋಗುತ್ತದೆ. ಸರ್ಕಾರ ಪ್ರತೀ 15 ದಿನಗಳಿಗೊಮ್ಮೆ ಅಬಕಾರಿ ಸುಂಕಗಳನ್ನು ಪರಿಷ್ಕರಿಸಲೂ ನಿರ್ಧರಿಸಿದೆ.
ಕೆಲ ದಿನಗಳ ಹಿಂದೆ ಖಾಸಗಿ ಪೆಟ್ರೋಲಿಯಂ ರೀಟೇಲ್ ಮಾರಾಟ ಸಂಸ್ಥೆಯಾದ ನಯಾರಾ ಎನರ್ಜಿ ತನ್ನ ಪೆಟ್ರೋಲ್ ಮತ್ತು ಡೀಸಲ್ ದರಗಳನ್ನು ಹೆಚ್ಚಿಸಿದೆ. ಪೆಟ್ರೋಲ್ ಬೆಲೆ ಲೀಟರ್ಗೆ 5 ರೂ ಹೆಚ್ಚಿದರೆ, ಡೀಸಲ್ ಬೆಲೆ 3 ರೂ ಹೆಚ್ಚಿದೆ.
ನವದೆಹಲಿ, ಮಾರ್ಚ್ 27: ಭಾರತ ಈ ತಿಂಗಳು (ಮಾರ್ಚ್) ಆಪರೇಷನ್ ಊರ್ಜಾ ಸುರಕ್ಷಾ (Operation Oorja Suraksha) ಆರಂಭಿಸಿದೆ. ಭಾರತೀಯ ನೌಕಾಪಡೆಯ ವಿಶೇಷ ಕಾರ್ಯಾಚರಣೆಯಾದ ಇದರಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ (Hormuz Strait) ಭಾರತೀಯ ತೈಲ ನೌಕೆಗಳ ಸಾಗಣೆಗೆ ರಕ್ಷಣೆ ಒದಗಿಸುವುದು ಮುಖ್ಯ ಉದ್ದೇಶವಾಗಿದೆ. ಯುದ್ಧದ ಬಳಿಕ ಹಾರ್ಮುಜ್ ಜಲಸಂಧಿಯು ಅಕ್ಷರಶಃ ಇರಾನ್ ಹತೋಟಿಯಲ್ಲಿದೆ. ಭಾರತ ಸೇರಿದಂತೆ ಕೆಲವೇ ಆಯ್ದ ದೇಶಗಳ ತೈಲ ಹಡಗುಗಳಿಗೆ ಸಾಗಲು ಇರಾನ್ ಅನುಮತಿ ಕೊಟ್ಟಿದೆ. ಆದರೂ ತ್ರಿವರ್ಣ ಧ್ವಜ ಲಾಂಛನದ ತೈಲ ಹಡಗುಗಳಿಗೆ ಭದ್ರತೆ ಒದಗಿಸುವ ಉದ್ದೇಶದಿಂದ ಆಪರೇಷನ್ ಊರ್ಜಾ ಸುರಕ್ಷಾ ಕೈಗೊಳ್ಳಲಾಗಿದೆ.
ಊರ್ಜಾ ಎಂದರೆ ಇಂಧನ. ಈ ಕಾರ್ಯಾಚರಣೆಯ ಉದ್ದೇಶ ಇಂಧನ ಸುರಕ್ಷತೆಯಾಗಿದೆ. ಸದ್ಯ ಬಹಳ ಅಪಾಯಕಾರಿಯಾಗಿ ಮಾರ್ಪಟ್ಟಿರುವ ಹಾರ್ಮುಜ್ ಜಲಸಂಧಿ, ಓಮನ್ ಗಲ್ಫ್ ಮೂಲಕ ಕಚ್ಛಾ ತೈಲ, ಎಲ್ಎನ್ಜಿ ಮತ್ತು ಎಲ್ಪಿಜಿ ಹೊತ್ತ ಭಾರತೀಯ ಹಡಗುಗಳು ಸುರಕ್ಷಿತವಾಗಿ ಭಾರತವನ್ನು ತಲುಪುವುದು ಈ ಆಪರೇಷನ್ನ ಗುರಿ.
ಆಪರೇಷನ್ ಊರ್ಜಾ ಸುರಕ್ಷಾದಲ್ಲಿ ನೌಕಾಪಡೆಯು ತನ್ನ ಫ್ರಂಟ್ಲೈನ್ ಸಮರನೌಕೆಗಳನ್ನು ಗಲ್ಫ್ನತ್ತ ಕಳುಹಿಸಿಕೊಡುತ್ತದೆ. ಭಾರತೀಯ ತೈಲ ನೌಕೆಗಳು ಗಲ್ಫ್ ದಾಟಿ ಬರಲು ಅನುವಾಗುವ ರೀತಿಯಲ್ಲಿ ಅದರ ಹಿಂದೆ ಮುಂದೆ ಸಮರನೌಕೆಗಳನ್ನು ನಿಯೋಜಿಸಲಾಗುತ್ತದೆ. ಹಡಗುಗಳನ್ನು ಯಾರಾದರೂ ಹೈಜಾಕ್ ಮಾಡುವುದೋ, ಬೇರೆಡೆ ವಿಮುಖಗೊಳಿಸುವುದೋ ಇತ್ಯಾದಿ ಮಾಡದಂತೆ ನೌಕಾಪಡೆ ಎಚ್ಚರ ವಹಿಸುತ್ತದೆ.
ಹಾರ್ಮುಜ್ ಜಲಸಂಧಿ ಮತ್ತು ಓಮನ್ ಗಲ್ಫ್ನಲ್ಲಿ ಭಾರತೀಯ ಹಡಗುಗಳಿಗೆ ಸಾಗಲು ಇರಾನ್ ಅನುಮತಿಸಿದೆ. ಆದರೆ ಹೌತಿಸ್ ಬಂಡುಕೋರರು ಅಥವಾ ಇನ್ಯಾರಾದರೂ ತೈಲ ನೌಕೆಗಳಿಗೆ ಹಾನಿ ಮಾಡುವ ಸಾಧ್ಯತೆ ಇದ್ದೇ ಇದೆ. ಹೀಗಾಗಿ, ನೌಕೆಗಳ ರಕ್ಷಣೆ ಉದ್ದೇಶದಿಂದ ಮಾತ್ರವೇ ಭಾರತೀಯ ನೌಕಾಪಡೆಯು ಆಪರೇಷನ್ ಊರ್ಜಾ ಸುರಕ್ಷಾ ಕೈಗೊಂಡಿರುವುದು.
ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜವಿರುವ ಹಲವು ಹಡಗುಗಳಿವೆ. ಇವುಗಳ ಪೈಕಿ ಎಲ್ಪಿಜಿ ಹೊತ್ತಿರುವ 22 ಹಡಗುಗಳನ್ನು ಆಪರೇಷನ್ ಊರ್ಜಾ ಸುರಕ್ಷಾ ಮೂಲಕ ರಕ್ಷಣೆ ಕೊಡಲು ಆಯ್ದುಕೊಳ್ಳಲಾಗಿದೆ. ನೌಕಾಪಡೆಯ ಐದು ಸಮರನೌಕೆಗಳು ಈ ಆಪರೇಷನ್ನಲ್ಲಿ ಇರುತ್ತವೆ. ಮಲ್ಟಿರೋಲ್ ಫ್ರಿಗೇಟ್ಸ್, ಡೆಸ್ಟ್ರಾಯರ್ಗಳು ಇದರಲ್ಲಿ ಇರುತ್ತವೆ. ರಾಡಾರ್, ಕ್ಷಿಪಣಿ, ಹೆಲಿಕಾಪ್ಟರ್ ಪ್ಲಾಟ್ಫಾರ್ಮ್ಗಳು, ಆ್ಯಂಟಿ ಡ್ರೋನ್ ರಕ್ಷಣೆ, ಎಲೆಕ್ಟ್ರಾನಿಕ್ ದಾಳಿ ರಕ್ಷಣೆ ಇತ್ಯಾದಿ ಪೂರ್ಣ ಮಿಲಿಟರಿ ಸಜ್ಜಿತ ಸಮರನೌಕೆಗಳಿವು.
2026 ರ ಐಪಿಎಲ್ ಮಾರ್ಚ್ 28 ರಂದು ಪ್ರಾರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ. ಈ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಪ್ರಾರಂಭವಾಗಲಿದೆ. ಆದಾಗ್ಯೂ ಆರ್ಸಿಬಿಗೆ ಆರಂಭಿಕ ಆಘಾತ ಎದುರಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಜೋಶ್ ಹೇಜಲ್ವುಡ್ ಆರಂಭಿಕ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ತಂಡದ ಕೋಚ್ ಆಂಡಿ ಫ್ಲವರ್ ಖಚಿತ ಮಾಹಿತಿ ನೀಡಿದ್ದಾರೆ. ಗಾಯದ ನಡುವೆಯೂ ಆರ್ಸಿಬಿ ಪಾಳಯವನ್ನು ಸೇರಿಕೊಂಡಿರುವ ಹೇಜಲ್ವುಡ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಫಿಟ್ನೆಸ್ ಸಮಸ್ಯೆಗಳಿಂದಾಗಿ ಅವರು ನಾಳೆಯ ಪಂದ್ಯವನ್ನು ಆಡುವುದಿಲ್ಲ ಎಂದು ಆಂಡಿ ಫ್ಲವರ್ ಹೇಳಿದ್ದಾರೆ.
ಹೇಜಲ್ವುಡ್ ಬಹಳ ದಿನಗಳಿಂದ ಗಾಯದಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರು ಆಶಸ್ ಸರಣಿಯನ್ನು ಮಾತ್ರವಲ್ಲದೆ ಟಿ20 ವಿಶ್ವಕಪ್ನಲ್ಲೂ ಭಾಗವಹಿಸಲು ಸಾಧ್ಯವಾಗಿಲ್ಲ. ನವೆಂಬರ್ 2025 ರಿಂದ ಕ್ರಿಕೆಟ್ನಿಂದ ಹೊರಗುಳಿದಿರುವ ಹೇಜಲ್ವುಡ್, ಮಂಡಿರಜ್ಜು ಮತ್ತು ಅಕಿಲೀಸ್ ಸ್ನಾಯುರಜ್ಜು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಆರ್‌ಸಿಬಿಯ ಬೌಲಿಂಗ್ ವಿಭಾಗದಲ್ಲಿ ಹೇಜಲ್ವುಡ್ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಅನುಪಸ್ಥಿತಿಯಲ್ಲಿ, ತಂಡವು ಇತರ ವೇಗದ ಬೌಲರ್ಗಳನ್ನು ಹೆಚ್ಚು ಅವಲಂಬಿಸಬೇಕಾಗುತ್ತದೆ. ಕಳೆದ ಆವೃತ್ತಿಯಲ್ಲಿ ಹೇಜಲ್ವುಡ್ 12 ಪಂದ್ಯಗಳನ್ನು ಆಡಿ 22 ವಿಕೆಟ್ಗಳನ್ನು ಪಡೆದಿದ್ದರು. ಅವರ ಎಕಾನಮಿ ದರ 8.77 ಆಗಿತ್ತು, ಇದು ಇತರ ಬೌಲರ್ಗಳಿಗೆ ಹೋಲಿಸಿದರೆ ಸಾಕಷ್ಟು ಮಿತವ್ಯಯಕಾರಿಯಾಗಿತ್ತು.
ನವದೆಹಲಿ, ಮಾರ್ಚ್ 27: ಇರಾನ್ ಮೇಲೆ ಯುದ್ಧ ಸಾರಿರುವ ಅಮೆರಿಕ ಹಾಗೂ ಇಸ್ರೇಲ್ಗೆ ಭಾರತ ಬಹಿರಂಗವಾಗಿ ಬೆಂಬಲ ಘೋಷಿಸಿಲ್ಲ. ಇಸ್ರೇಲ್ ಸರ್ಕಾರದ ಜೊತೆ ಮಾತನಾಡಿ ಶಾಂತಿ ಮಾತುಕತೆಗೆ ಕರೆ ನೀಡಿದ್ದ ಪ್ರಧಾನಿ ಮೋದಿ ಅತ್ತ ಇರಾನ್ಗೂ ವೈದ್ಯಕೀಯ ನೆರವು ಕಳುಹಿಸಿಕೊಟ್ಟಿತ್ತು. ಮೊನ್ನೆಯಷ್ಟೇ ಫೋನ್ ಮಾಡಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್ಗೂ ಈ ಬಿಕ್ಕಟ್ಟನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳುವುದು ಉತ್ತಮ ಎಂಬ ಸಂದೇಶ ನೀಡಿದ್ದರು. ಇರಾನ್ ಮೇಲೆ ಇನ್ನೂ ಕತ್ತಿ ಮಸೆಯುತ್ತಲೇ ಇರುವ ಟ್ರಂಪ್ (Donald Trump) ಇದೀಗ ಇದ್ದಕ್ಕಿದ್ದಂತೆ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದಾರೆ.
ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯ ಮೂಲಕ ಹಂಚಿಕೊಂಡ ಸಂದೇಶದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಭಾರತದೊಂದಿಗಿನ ನಮ್ಮ ಅದ್ಭುತ ಸಂಬಂಧವು ಮುಂದಿನ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳುತ್ತದೆ. ಪ್ರಧಾನಿ ಮೋದಿ ಮತ್ತು ನಾನು ಕೆಲಸಗಳನ್ನು ಮಾಡುವ ಇಬ್ಬರು ವ್ಯಕ್ತಿಗಳು. ಹೆಚ್ಚಿನವರ ವಿಷಯದಲ್ಲಿ ಈ ಕುರಿತು ಏನೂ ಹೇಳಲಾಗದು” ಎಂದಿದ್ದಾರೆ.
Our amazing relationship with India will be even stronger going forward. Prime Minister Modi and I are two people that get things done, something that cannot be said for most. – President Donald J. Trump pic.twitter.com/NEJCjGBXps
ಮಾರ್ಚ್ 24ರಂದು ಟ್ರಂಪ್ ಪ್ರಧಾನಿ ನರೇಂದ್ರ ಮೋದಿಗೆ ಕರೆ ಮಾಡಿ ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ಸಂಘರ್ಷದ ಕುರಿತು ಚರ್ಚಿಸಿದ್ದರು. ಈ ಯುದ್ಧ ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇದು ಜಾಗತಿಕ ಇಂಧನ ಪೂರೈಕೆಗೆ ಗಮನಾರ್ಹ ಅಡಚಣೆಗಳನ್ನು ಉಂಟುಮಾಡಿದೆ. ಇರಾನ್‌ನಲ್ಲಿ ನಡೆಯುತ್ತಿರುವ ಸಂಘರ್ಷವು ಭೌಗೋಳಿಕ ರಾಜಕೀಯ ಅಪಾಯಗಳನ್ನು ಹೆಚ್ಚಿಸುತ್ತಿರುವ ಸಮಯದಲ್ಲಿ ಹಾರ್ಮುಜ್ ಜಲಸಂಧಿಯನ್ನು ಮುಕ್ತ ಮತ್ತು ಸುರಕ್ಷಿತವಾಗಿಸುವುದು ಬಹಳ ಮುಖ್ಯ ಎಂದು ಅವರಿಬ್ಬರೂ ಚರ್ಚಿಸಿದ್ದರು.
“ಟ್ರಂಪ್ ಅವರಿಂದ ಕರೆ ಸ್ವೀಕರಿಸಿದೆ. ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡೆವು. ಭಾರತವು ಸಾಧ್ಯವಾದಷ್ಟು ಬೇಗ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಬೆಂಬಲ ನೀಡುತ್ತದೆ. ಹಾರ್ಮುಜ್ ಜಲಸಂಧಿಯು ಮುಕ್ತ, ಸುರಕ್ಷಿತ ಮತ್ತು ಪ್ರವೇಶಿಸಬಹುದಾದ ಸ್ಥಳವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಇಡೀ ಜಗತ್ತಿಗೆ ಅತ್ಯಗತ್ಯ” ಎಂದು ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರೊಂದಿಗಿನ ತಮ್ಮ ದೂರವಾಣಿ ಕರೆಯ ಹೇಳಿಕೆ ನೀಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ