ಜಗಳ ಆಗಿಯೇ ಆಗುತ್ತೆ ಅಂತ ಮೊದಲೇ ಗೊತ್ತಿತ್ತು: ಅನಿಲ್ ಚೌಧರಿ – Kannada News | IPL 2013 Clash: Umpire Recalls Kohli Gambhir Fight

ಕ್ರಿಕೆಟ್ ಮೈದಾನದಲ್ಲಿ ದಾಖಲೆಗಳು ಸೃಷ್ಟಿಯಾಗುತ್ತವೆ, ಹಳೇ ದಾಖಲೆಗಳು ಧೂಳೀಪಟವಾಗುತ್ತವೆ. ಆದರೆ, ಕೆಲವು ಆನ್-ಫೀಲ್ಡ್ ಘಟನೆಗಳು ಮಾತ್ರ ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಅಚ್ಚೊತ್ತಿಬಿಡುತ್ತವೆ. ಅಂತಹದ್ದೇ ಒಂದು ಹೈ-ವೋಲ್ಟೇಜ್ ಘಟನೆಯೇ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಮುಖಾಮುಖಿ. 2013ರ ಆ ಐಪಿಎಲ್ ಪಂದ್ಯದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಬ್ಬರು ದಿಲ್ಲಿ ಸಿಂಹಗಳು ಪರಸ್ಪರ ಅಬ್ಬರಿಸಿದ ಆ ಕ್ಷಣ, ಕ್ರಿಕೆಟ್ ಲೋಕದಲ್ಲಿ ಎಂದಿಗೂ ಮರೆಯಲಾಗದ ಇತಿಹಾಸ. ಈ ಐತಿಹಾಸಿಕ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ಮಾಜಿ ಅಂತರರಾಷ್ಟ್ರೀಯ ಅಂಪೈರ್ ಅನಿಲ್ ಚೌಧರಿ, ಇತ್ತೀಚೆಗೆ ಜಿಯೋಸ್ಟಾರ್ (JioStar) ವಾಹಿನಿಯ ‘ಚೀಕಿ ಸಿಂಗಲ್ಸ್’ ಕಾರ್ಯಕ್ರಮದಲ್ಲಿ ಅಂದಿನ ಘಟನೆಯ ಹಿಂದಿನ ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಜಗಳ ಆಗಿಯೇ ಆಗುತ್ತದೆ ಎಂದು ಗೊತ್ತಿತ್ತು!

ಈ ಬಗ್ಗೆ ಮಾತನಾಡಿದ ಅನಿಲ್ ಚೌಧರಿ,

ಆ ಪಂದ್ಯದಲ್ಲಿ ಜಗಳ ಆಗೇ ಆಗುತ್ತದೆ ಎಂದು ನನಗೆ ಮೊದಲೇ ಗೊತ್ತಿತ್ತು. ಏಕೆಂದರೆ ಉತ್ತರ ಭಾರತದ (ವಿಶೇಷವಾಗಿ ದೆಹಲಿ ಮೂಲದ) ಆಟಗಾರರು ಮೈದಾನದಲ್ಲಿ ಅತಿ ಹೆಚ್ಚು ಆಕ್ರಮಣಶೀಲತೆಯಿಂದ ಆಡುತ್ತಾರೆ. ಹೀಗಾಗಿ ಈ ಇಬ್ಬರಿಂದ ಆಕ್ರಮಣಕಾರಿ ವರ್ತನೆ ಮೂಡಿ ಬರುತ್ತದೆ ಎಂದು ನಾನು ಊಹಿಸಿದ್ದೆ. ಅದರಂತೆ ಇಬ್ಬರೂ ಮೈದಾನದಲ್ಲಿ ಕಿತ್ತಾಡಿಕೊಂಡಿದ್ದರು ಎಂದು ಅನಿಲ್ ಚೌಧರಿ ಹೇಳಿದ್ದಾರೆ.

ಆಕ್ರಮಣಕಾರಿ ಆಟ ಬೇಕು, ಮಿತಿ ಇರಬೇಕು!

ಮೈದಾನದಲ್ಲಿ ಆಟಗಾರರ ಆಕ್ರಮಣಕಾರಿ ಸ್ವಭಾವದ ಬಗ್ಗೆ ಮಾತನಾಡಿದ ಅನಿಲ್ ಚೌಧರಿ, ಮೈದಾನದಲ್ಲಿ ಆಟಗಾರರಿಗೆ ಅತಿಯಾದ ನಿರ್ಬಂಧಗಳನ್ನು ಹೇರಿದರೆ, ಅವರ ಅತ್ಯುತ್ತಮ ಪ್ರದರ್ಶನ ಹೊರಬರುವುದಿಲ್ಲ. ಆಟಗಾರರಲ್ಲಿ ಇಂತಹ ಜಿದ್ದಾಜಿದ್ದಿನ ಕಿಚ್ಚು ಇರಬೇಕು, ಆಗಲೇ ಪಂದ್ಯಗಳು ರೋಚಕವಾಗಿರುತ್ತವೆ. ಆದರೆ ಪ್ರತಿಯೊಂದಕ್ಕೂ ಒಂದು ಮಿತಿ ಇರಬೇಕು ಮತ್ತು ಆ ಮಿತಿಯನ್ನು ಯಾರೂ ದಾಟಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಮನಸ್ಸಿನಲ್ಲಿ ದ್ವೇಷವಿಲ್ಲ!

ವಿರಾಟ್ ಕೊಹ್ಲಿ ಜೂನಿಯರ್ ಕ್ರಿಕೆಟ್ ಆಡುತ್ತಿದ್ದ ದಿನಗಳಿಂದಲೂ ನಾನು ಅವರನ್ನು ನೋಡುತ್ತಿದ್ದೇನೆ. ಅವರು ಮೈದಾನದಲ್ಲಿ ಭಾವನಾತ್ಮಕವಾಗಿ ಬೇಗನೆ ಪ್ರತಿಕ್ರಿಯಿಸುತ್ತಾರೆಯೇ ಹೊರತು, ಅವರ ಮನಸ್ಸಿನಲ್ಲಿ ಯಾರ ಮೇಲೂ ವೈಯಕ್ತಿಕ ದ್ವೇಷ ಅಥವಾ ಕೆಟ್ಟ ಆಲೋಚನೆ ಇರುವುದಿಲ್ಲ. ಅಂಪೈರ್‌ಗಳ ತೀರ್ಪು ಸರಿಯಾಗಿದ್ದಾಗ ಕೊಹ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸುವ ದೊಡ್ಡ ಗುಣ ಹೊಂದಿದ್ದಾರೆ ಎಂದು ಇದೇ ವೇಳೆ ಅನಿಲ್ ಚೌಧರಿ ಸ್ಮರಿಸಿದ್ದಾರೆ.

2013ರಲ್ಲಿ ಏನಾಗಿತ್ತು?

ಏಪ್ರಿಲ್ 11, 2013 ರಂದು ಆರ್‌ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೊಹ್ಲಿ ಔಟಾದಾಗ ಕೆಕೆಆರ್ ನಾಯಕ ಗಂಭೀರ್ ಅತಿಯಾಗಿ ಸಂಭ್ರಮಿಸಿದ್ದರು. ಇದರಿಂದ ಆಕ್ರೋಶಗೊಂಡ ಕೊಹ್ಲಿ ಮೈದಾನದಲ್ಲೇ ಗಂಭೀರ್ ಜೊತೆ ಮಾತಿನ ಚಕಮಕಿಗೆ ಇಳಿದಿದ್ದರು. ಇಬ್ಬರೂ ಆಟಗಾರರು ಮುಖಾಮುಖಿ ಜಗಳಕ್ಕೆ ನಿಂತಾಗ, ಕೆಕೆಆರ್ ಆಟಗಾರ ರಜತ್ ಭಾಟಿಯಾ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಿದ್ದರು. ಈ ಘಟನೆಯನ್ನೇ ಇದೀಗ ಅಂದು ಅಂಪೈರ್​ ಆಗಿದ್ದ ಅನಿಲ್ ಚೌಧರಿ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ಭಾರತ ಲಂಕಾದಲ್ಲಿ ಟೆಸ್ಟ್ ಸರಣಿ ಗೆಲ್ಲೋದು ಅಂದುಕೊಂಡಷ್ಟು ಸುಲಭವಲ್ಲ!

ಇನ್ನು 2013 ಮತ್ತು 2023ರ ಐಪಿಎಲ್ ಆವೃತ್ತಿಗಳಲ್ಲಿ ಕಡು ವೈರಿಗಳಂತೆ ಮುಖಾಮುಖಿಯಾಗಿದ್ದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್, ಪ್ರಸ್ತುತ ಭಾರತ ತಂಡದಲ್ಲಿ ಕ್ರಮವಾಗಿ ಹಿರಿಯ ಆಟಗಾರ ಮತ್ತು ಮುಖ್ಯ ತರಬೇತುದಾರನಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಮಾಜಿ ಅಂಪೈರ್ ಅನಿಲ್ ಚೌಧರಿ ಹೇಳಿರುವಂತೆ, ಅವರಿಬ್ಬರ ನಡುವಿನ ಹಳೆಯ ಕಹಿ ನೆನಪುಗಳು ಈಗ ಸಂಪೂರ್ಣವಾಗಿ ಮರೆಯಾಗಿದ್ದು, ಭಾರತೀಯ ಕ್ರಿಕೆಟ್‌ನ ಒಳಿತಿಗಾಗಿ ಇಬ್ಬರೂ ಒಟ್ಟಾಗಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ.

Source link

‘ತ್ರಿಶಾ ಹೆಸರನ್ನೇ ಹೇಳಿಲ್ಲ’; ಉದಯನಿಧಿ ಬಂಧನದ ಬಳಿಕ ಟಿವಿಕೆ ಸರ್ಕಾರದ ವಿರುದ್ಧ ತಿರುಗಿಬಿದ್ದ ಡಿಎಂಕೆ – Kannada News | Never mentioned Trisha Name DMK hits back after Udhayanidhi stalin detained over offensive remarks

ಚೆನ್ನೈ, ಆಗಸ್ಟ್ 4: ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರನ್ನು ತಮಿಳುನಾಡು ಪೊಲೀಸರು ಇಂದು ಬೆಳಿಗ್ಗೆ ಅವರ ನಿವಾಸದಲ್ಲಿ ಬಂಧಿಸಿದ್ದಾರೆ. ಇದರಿಂದ ಚೆನ್ನೈನಲ್ಲಿ ಭಾರಿ ಹೈಡ್ರಾಮಾ ಸೃಷ್ಟಿಯಾಗಿದೆ. ಸೋಮವಾರ ನಡೆದ ರ‍್ಯಾಲಿಯಲ್ಲಿ ಉದಯನಿಧಿ ಸ್ಟಾಲಿನ್ ನಟಿ ತ್ರಿಶಾ ಕುರಿತು ನೀಡಿದ್ದ ಹೇಳಿಕೆಯು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಆಡಳಿತಾರೂಢ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಡಿಎಂಕೆ ನಾಯಕನ ಈ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ತ್ರಿಶಾ ಅವರ ಹೆಸರನ್ನೇ ಹೇಳದಿದ್ದರೂ ಸುಳ್ಳು ಆರೋಪ ಮಾಡಿ ಉದಯನಿಧಿಯನ್ನು ಬಂಧಿಸಲಾಗಿದೆ ಎಂದು ಡಿಎಂಕೆ ಆರೋಪಿಸಿದೆ.

ಈ ಬಂಧನವನ್ನು ರಾಜಕೀಯ ಸೇಡಿನ ಕೃತ್ಯ ಎಂದು ಡಿಎಂಕೆ ಟೀಕಿಸಿದೆ. “ಉದಯನಿಧಿ ಸ್ಟಾಲಿನ್ ಯಾರ ವಿರುದ್ಧವೂ ಏನೂ ಹೇಳಿಲ್ಲ. ಉದಯನಿಧಿ ಕೇವಲ ಸಿಎಂ ವಿಜಯ್ ಅವರ ವೈಫಲ್ಯಗಳನ್ನು ಪಟ್ಟಿ ಮಾಡಿದ್ದಾರಷ್ಟೇ. ಅವರ ಭಾಷಣದಲ್ಲಿ ನಿಂದನೀಯ ಮಾತುಗಳಿರಲಿಲ್ಲ. ಅವರು ತ್ರಿಶಾ ಹೆಸರನ್ನೇ ಹೇಳಿಲ್ಲ” ಎಂದು ಡಿಎಂಕೆ ನಾಯಕ ಟಿ.ಕೆ.ಎಸ್. ಇಲಂಗೋವನ್ ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸರ ವಶಕ್ಕೆ!

ಈ ಘಟನೆಯ ಹಿನ್ನೆಲೆ ಏನು?:

ಸೋಮವಾರ ತಂಜಾವೂರಿನಲ್ಲಿ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಉದಯನಿಧಿ ಸ್ಟಾಲಿನ್, ಮುಖ್ಯಮಂತ್ರಿ ಜೋಸೆಫ್ ವಿಜಯ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ತಮಿಳುನಾಡಿಗೆ ಕಾವೇರಿ ನೀರಿನ ಒಂದು ಹನಿಯೂ ಸಿಗದಿದ್ದರೂ ಮುಖ್ಯಮಂತ್ರಿ ಜಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ವೇಳೆ ಸಭೆಯಲ್ಲಿದ್ದ ಯಾರೋ ಒಬ್ಬರು “ತ್ರಿಶಾ, ತ್ರಿಶಾ” ಎಂದು ಘೋಷಣೆ ಕೂಗಿದರು. ಆಗ ತಮ್ಮ ಭಾಷಣವನ್ನು ನಿಲ್ಲಿಸಿ ಕುಹಕವಾಡಿದ ಉದಯನಿಧಿ, ನಟಿ ತ್ರಿಶಾ ಕುರಿತು ದ್ವಂದ್ವಾರ್ಥದ ಆಕ್ಷೇಪಾರ್ಹ ಹೇಳಿಕೆ ನೀಡಿದರು. ಈ ಮಾತುಗಳು ವ್ಯಾಪಕ ರಾಜಕೀಯ ಆಕ್ರೋಶಕ್ಕೆ ಕಾರಣವಾದವು.

ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಟಿವಿಕೆ, ಡಿಎಂಕೆ ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದು, ಪೊಲೀಸರಿಗೂ ದೂರು ನೀಡಿತ್ತು. ಇದಕ್ಕೂ ಮುನ್ನ ತಮಿಳುನಾಡು ಬಿಜೆಪಿಯೂ ಉದಯನಿಧಿ ಬಂಧನಕ್ಕೆ ಆಗ್ರಹಿಸಿತ್ತು. “ಮುಖ್ಯಮಂತ್ರಿ ವಿಜಯ್ ಮತ್ತು ತ್ರಿಶಾ ಅವರ ಕುರಿತು ಉದಯನಿಧಿ ಆಡಿರುವ ಮಾತುಗಳು ಅಸಹ್ಯಕರ ಮತ್ತು ನಾಚಿಕೆಗೇಡಿನ ಸಂಗತಿ. ತಾಯಿ, ಹೆಂಡತಿ, ಮಗಳನ್ನು ಹೊಂದಿರುವ ಯಾವುದೇ ವ್ಯಕ್ತಿಯೂ ಇಷ್ಟು ಅಶ್ಲೀಲವಾಗಿ ಮಾತನಾಡಲಾರ. ಇಂತಹ ಕೀಳುಮಟ್ಟದ ಭಾಷಣಕ್ಕಾಗಿ ಉದಯನಿಧಿ ಅವರನ್ನು ಬಂಧಿಸಿ ಜೈಲಿಗಟ್ಟುವುದು ತಮಿಳುನಾಡಿಗೆ ಹೆಮ್ಮೆ ತರುತ್ತದೆ” ಎಂದು ತಮಿಳುನಾಡು ಬಿಜೆಪಿ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ ಹೇಳಿದ್ದಾರೆ.

ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕಿದವರನ್ನು ಮತ್ತೆ ನಂಬುವುದಿಲ್ಲ; ಕಾಂಗ್ರೆಸ್ ವಿರುದ್ಧ ಉದಯನಿಧಿ ಸ್ಟಾಲಿನ್ ಆಕ್ರೋಶ

ನಟಿ ತ್ರಿಶಾ ಅವರ ಕುರಿತು ಇಂತಹ ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿರುವುದು ಇದೇ ಮೊದಲೇನಲ್ಲ. ಈ ವರ್ಷದ ಆರಂಭದಲ್ಲಿ, ತಮಿಳುನಾಡು ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್ ಅವರು, ವಿಜಯ್ ರಾಜಕೀಯಕ್ಕೆ ಬರುವ ಮುನ್ನ ‘ತ್ರಿಶಾ ಮನೆಯಿಂದ ಹೊರಬರಬೇಕು’ ಎಂದು ಹೇಳಿಕೆ ನೀಡಿದ್ದರು. ಆ ಸಮಯದಲ್ಲಿ ತ್ರಿಶಾ ಅವರ ಕಾನೂನು ತಂಡವು ಈ ಹೇಳಿಕೆಗೆ ಕಾನೂನುಬದ್ಧವಾಗಿ ತಿರುಗೇಟು ನೀಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ನಮ್ಮಲ್ಲಿ ಯಾರಿಗೂ ಅಸಮಾಧಾನವಿಲ್ಲ, ಯಾರು ರಾಜೀನಾಮೆ ನೀಡಿಲ್ಲ ಎಂದ ಬಿ‌ಕೆ ಹರಿಪ್ರಸಾದ್ – Kannada News | Karnataka Cabinet: B.K. Hariprasad Says No Minister Is Dissatisfied, No One Has Resigned

ಬೆಂಗಳೂರು, ಆಗಸ್ಟ್​​ 04: ಕಾಂಗ್ರೆಸ್​ ಮನೆಯಲ್ಲಿ ಬಂಡಾಯದ ಬಿರುಗಾಳಿ ಎದ್ದಿದೆ. ಮಿನಿಸ್ಟರ್ ಸ್ಥಾನ (Karnataka Cabinet) ಮಿಸ್​ ಆಗಿರುವುದು ಘಟನಾಘಟಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲವರು ರಾಜೀನಾಮೆಯ ಹಾದಿ ಕೂಡ ಹಿಡಿದಿದ್ದಾರೆ. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ‌.ಕೆ ಹರಿಪ್ರಸಾದ್ (B. K. Hariprasad)​​, ‘ಯಾವುದೇ ಶಾಸಕರಲ್ಲಿ ಅಸಮಾಧಾನವಿಲ್ಲ. ಯಾರೂ ಕೂಡ ರಾಜೀನಾಮೆ ನೀಡಿಲ್ಲ’ ಎಂದು ಹೇಳಿದ್ದಾರೆ.

ನಾಯಕತ್ವದ ದಿವಾಳಿಯಿಲ್ಲ; ಎಲ್ಲ ಸಮುದಾಯಕ್ಕೂ ಅವಕಾಶ ಎಂದ ಬಿ‌.ಕೆ ಹರಿಪ್ರಸಾದ್

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷದಲ್ಲಿ ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ನಮ್ಮ ಪಕ್ಷದಲ್ಲಿ ನಾಯಕತ್ವದ ದಿವಾಳಿತನವಿಲ್ಲ, ಪ್ರತಿಯೊಬ್ಬರೂ ನಾಯಕರೇ. ಹೊಸಬರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಈ ಬಾರಿ ಕೆಲವು ಹಿರಿಯರಿಗೆ ಅವಕಾಶ ಕೈತಪ್ಪಿದೆ. ಆದಾಗ್ಯೂ ಎಲ್ಲ ಸಮುದಾಯಗಳಿಗೂ ಸಮಾನ ಪ್ರಾತಿನಿಧ್ಯ ನೀಡಲಾಗಿದೆ. ಸಚಿವ ಸ್ಥಾನ ಸಿಗದೆ ನಿರಾಸೆಗೊಂಡಿರುವ ಕೃಷ್ಣಪ್ಪ, ಪ್ರಿಯಾ ಕೃಷ್ಣ ಹಾಗೂ ಹಿರಿಯ ನಾಯಕ ಮಂಕಾಳ ವೈದ್ಯ ಅವರೊಂದಿಗೆ ಮಾತುಕತೆ ನಡೆಸಲಾಗುವುದು’ ಎಂದರು.

ಬಿಜೆಪಿ ವಿರುದ್ಧ ಬಿ‌.ಕೆ ಹರಿಪ್ರಸಾದ್ ವಾಗ್ದಾಳಿ 

ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ‘ಈ ಹಿಂದೆ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸುಮಾರು 13 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯವೇ ಸಿಕ್ಕಿರಲಿಲ್ಲ. ಅವರು ಸರ್ಕಾರ ನಡೆಸುವಾಗ ಎಷ್ಟು ಸಮತೋಲನ ಕಾಯ್ದುಕೊಂಡಿದ್ದರು ಎಂಬುದನ್ನು ಮೊದಲು ಹೇಳಲಿ’ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ನೂತನ ಸಚಿವರ ಪಟ್ಟಿಗೆ ಸಿದ್ದರಾಮಯ್ಯ ಅಸಮಾಧಾನ? ಮಾಜಿ ಸಿಎಂ ಬೇಸರಕ್ಕೆ ಕಾರಣವಾದ ಅಂಶಗಳು ಇಲ್ಲಿವೆ

‘ಕಾಂಗ್ರೆಸ್ ಪಕ್ಷವು ಇತಿಹಾಸದಲ್ಲೇ ಮೊದಲ ಬಾರಿಗೆ ಶೋಷಿತ ಸಮುದಾಯದವರಿಗೆ ಅರ್ಹ ಸ್ಥಾನಮಾನ ನೀಡಿದ್ದು, ಪೌರಕಾರ್ಮಿಕರ ಮಗನನ್ನು ಮಂತ್ರಿ ಮಾಡಿದ ಹೆಗ್ಗಳಿಕೆ ನಮ್ಮ ಪಕ್ಷಕ್ಕಿದೆ. ಎಲ್ಲಿಯೂ ಕೂಡ ಅಸಮಾಧಾನ ಇಲ್ಲ, ರಾಜೀನಾಮೆ ನೀಡಿರುವವರು ವಾಪಸ್ ತೆಗೆದುಕೊಳ್ಳುತ್ತಾರೆ’ ಎಂದರು.

ಮಹಿಳಾ ಸಚಿವರು ಹಾಗೂ ಸ್ಪೀಕರ್ ಆಯ್ಕೆ ಕುರಿತ ಚರ್ಚೆ ಬಗ್ಗೆ ಹೇಳಿದ್ದಿಷ್ಟು

ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ವಿಚಾರವಾಗಿ ಮಾತನಾಡಿದ ಅವರು, ‘ಮಹಿಳೆಯರಿಗೆ ಅವಕಾಶ ನೀಡಿಲ್ಲ. ಅದರ ಬಗ್ಗೆ ನಾನು ಚರ್ಚೆ ಮಾಡುತ್ತೇನೆ. ಮಹಿಳಾ ಸಚಿವರು ಆಗಬೇಕು. ಒಟ್ಟಾರೆಯಾಗಿ ಸಚಿವ ಸಂಪುಟ ಭರ್ತಿ ಪ್ರಕ್ರಿಯೆ ತಮಗೆ ಸಂಪೂರ್ಣ ಸಂತೃಪ್ತಿ ತಂದಿದೆ’ ಎಂದಿದ್ದಾರೆ.

ಇದನ್ನೂ ಓದಿ: ರಾಜೀನಾಮೆ ಬೆದರಿಕೆ ಹಾಕಿದವರು ಯಾರು? ಸಿಎಂಗೇ ನೇರ ಕಡೆ ಮಾಡಿ ಮಾಹಿತಿ ಕೋರಿದ ಕಾಂಗ್ರೆಸ್ ಹೈಕಮಾಂಡ್

ಇನ್ನು ಸ್ಪೀಕರ್ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿಯ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ‘ಸಂವಿಧಾನದ 170ನೇ ವಿಧಿಯ ಪ್ರಕಾರ ವಿಧಾನಸಭೆಯೇ ಸ್ಪೀಕರ್ ಅವರನ್ನು ಆಯ್ಕೆ ಮಾಡುತ್ತದೆ ಎಂಬ ಕನಿಷ್ಠ ಜ್ಞಾನವೂ ಬಿಜೆಪಿಯವರಿಗಿಲ್ಲವೇ? ನಾವು ಕೇವಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಅಷ್ಟೇ’ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ನೂತನ ಸಚಿವರ ಪಟ್ಟಿಗೆ ಸಿದ್ದರಾಮಯ್ಯ ಅಸಮಾಧಾನ? ಮಾಜಿ ಸಿಎಂ ಬೇಸರಕ್ಕೆ ಕಾರಣವಾದ ಅಂಶಗಳು ಇಲ್ಲಿವೆ – Kannada News | Siddaramaiah Unhappy With Karnataka Cabinet List? 7 Reasons Behind Congress Debate

ಬೆಂಗಳೂರು, ಆಗಸ್ಟ್ 4: ಒಂದೆಡೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಶಾಸಕರು ಹಾಗೂ ಅವರ ಬೆಂಬಲಿಗರ ಅಸಮಾಧಾನ ಸ್ಫೋಟಗೊಂಡಿರುವ ಬೆನ್ನಲ್ಲೇ, ಮತ್ತೊಂದೆಡೆ ನೂತನ ಸಚಿವರ ಪಟ್ಟಿಯ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೂ ಅಸಮಾಧಾನ ಉಂಟಾಗಿದೆ ಎಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ತೀವ್ರವಾಗಿದೆ. ತಮ್ಮ ಶಿಫಾರಸುಗಳಿಗೆ ಹೈಕಮಾಂಡ್ ಸೂಕ್ತ ಮನ್ನಣೆ ನೀಡಿಲ್ಲ ಎಂಬ ಬೇಸರ ಸಿದ್ದರಾಮಯ್ಯ ಅವರಿಗೆ ಇದೆ ಎನ್ನಲಾಗುತ್ತಿದ್ದು, ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಅವರು ಗೈರಾಗಿರುವುದು ಈ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದೆ.

ಸಿದ್ದರಾಮಯ್ಯ ಅಸಮಾಧಾನಕ್ಕೆ ಕಾರಣಗಳೇನು?

ಕಾಂಗ್ರೆಸ್​ನ ಆಂತರಿಕ ವಲಯದಲ್ಲಿ ಚರ್ಚೆಯಾಗುತ್ತಿರುವಂತೆ, ಸಿದ್ದರಾಮಯ್ಯ ಅಸಮಾಧಾನಕ್ಕೆ ಕಾರಣವಾಗಿರುವ ಅಂಶಗಳು ಇಲ್ಲಿವೆ;

  1. ಗಾಯತ್ರಿ ಶಾಂತೇಗೌಡಗೆ ಸಚಿವ ಸ್ಥಾನ ನೀಡಿರುವುದು
  2. ತಮ್ಮದೇ ಸಮುದಾಯದ ಇನ್ನೊಬ್ಬ MLC ಸಚಿವರಾಗಿದ್ದು
  3. ಸಭಾಪತಿ, ಉಪಸಭಾಪತಿ ಆಯ್ಕೆ ಬಗ್ಗೆ ಹೈಕಮಾಂಡ್ ಚರ್ಚಿಸಿಲ್ಲ
  4. ಸಚಿವ ಸ್ಥಾನಕ್ಕೆ ಶಿಫಾರಸು ಮಾಡಿದ ಉಮಾಶ್ರೀಗೆ ಉಪ ಸಭಾಪತಿ
  5. ತನ್ನ ಶಿಫಾರಸುಗಳಿಗೆ ಹೈಕಮಾಂಡ್ ಸೂಕ್ತ ಮನ್ನಣೆ ನೀಡಿಲ್ಲ
  6. ಹೆಚ್.ಸಿ ಮಹದೇವಪ್ಪ ಸೇರಿ ಉಳಿದವರನ್ನು ಪರಿಗಣಿಸಿಲ್ಲ
  7. ವಿರೋಧದ ನಡುವೆಯೂ ಜಮೀರ್ಗೆ ಸಚಿವ ಸ್ಥಾನ

ನೂತನ ಸಚಿವರ ಪಟ್ಟಿ ಅಂತಿಮಗೊಂಡ ಬಳಿಕ ಸಿದ್ದರಾಮಯ್ಯ ಅವರು ಬೇಸರಗೊಂಡಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್ ಪಾಳಯದಲ್ಲಿ ನಡೆಯುತ್ತಿದೆ. ತಮ್ಮ ಶಿಫಾರಸಿಗೆ ಹೈಕಮಾಂಡ್ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ ಎಂಬ ಅಸಮಾಧಾನ ಅವರಲ್ಲಿದೆ ಎನ್ನಲಾಗಿದೆ. ಸೋಮವಾರ ಇಡೀ ದಿನ ಸಿದ್ದರಾಮಯ್ಯ ಗರಂ ಆಗಿದ್ದರು ಎನ್ನಲಾಗಿದ್ದು, ತಮ್ಮ ಭೇಟಿಗೆ ಬಂದ ನಾಯಕರ ವಿರುದ್ಧವೂ ಸಿಟ್ಟು ಹೊರಹಾಕಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇದರ ಬೆನ್ನಲ್ಲೇ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೂ ಸಿದ್ದರಾಮಯ್ಯ ಗೈರಾಗಿದ್ದರು. ಹೀಗಾಗಿ ಅವರ ಗೈರುಹಾಜರಿ ಹಲವು ರೀತಿಯ ಚರ್ಚೆಗಳಿಗೆ ಕಾರಣವಾಗಿದೆ.

ಈ ನಡುವೆ ಸಿದ್ದರಾಮಯ್ಯ ಅವರ ಅಸಮಾಧಾನದ ಕುರಿತು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ರಾಜೇಂದ್ರ ಹಾಗೂ ಬ್ಯಾಡಗಿ ಶಾಸಕ ಶಿವಣ್ಣನವರ್ ಕೂಡ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬೇಸರವಾಗಿರುವ ಸಾಧ್ಯತೆಯ ಬಗ್ಗೆ ಇಬ್ಬರೂ ಮಾತನಾಡಿದ್ದಾರೆ. ಇದೇ ಬೆಳವಣಿಗೆಗಳ ನಡುವೆ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರು ಕಾಂಗ್ರೆಸ್ ವರಿಷ್ಠರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದಿದ್ದು ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ಆಗಬಹುದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನಲ್ಲಿನ ಈ ಬೆಳವಣಿಗೆಗಳನ್ನು ಬಿಜೆಪಿ ಕೂಡ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದೆ. ಸಿದ್ದರಾಮಯ್ಯ ಅವರ ಸ್ವಾಭಿಮಾನವನ್ನು ಉಲ್ಲೇಖಿಸಿ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ ಪ್ರಶ್ನೆ ಎತ್ತಿದ್ದಾರೆ.

ಆದರೆ, ಸಿದ್ದರಾಮಯ್ಯ ಅವರ ಅಸಮಾಧಾನದ ಕುರಿತ ಚರ್ಚೆಯ ನಡುವೆಯೇ ಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದು, ಸಿದ್ದರಾಮಯ್ಯ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಕೂಡ ತಮ್ಮ ತಂದೆಗೆ ಯಾವುದೇ ಬೇಸರ ಅಥವಾ ಅಸಮಾಧಾನ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ಸಿಎಂ ಬದಲಿಸಿದಾಗಲೆಲ್ಲ ಪಕ್ಷಕ್ಕೆ ಡ್ಯಾಮೇಜ್ ಆಗಿದೆ’: ಸಂಪುಟ ವಿಸ್ತರಣೆ ಬೆನ್ನಲ್ಲೇ ಮಾಜಿ ಸಚಿವ ಕೆಎನ್ ರಾಜಣ್ಣ ಅಚ್ಚರಿಯ ಮಾತು

ಹೀಗಾಗಿ ಹೊರಗಡೆ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಪ್ರದರ್ಶನವಾಗುತ್ತಿದ್ದರೂ, ಪಕ್ಷದೊಳಗೆ ಆಂತರಿಕ ಬೇಗುದಿ ಇದೆಯೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಈ ಅಸಮಾಧಾನದ ಚರ್ಚೆ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಶಾಸಕರ ಬೆಂಬಲಿಗರಿಂದ ಕೆಪಿಸಿಸಿ ಕಚೇರಿ ಬಳಿ ಪ್ರತಿಭಟನೆ – Kannada News | Dinesh Gundu Rao Supporters Protest at KPCC Office Over Cabinet Exclusion

ಬೆಂಗಳೂರು, ಆಗಸ್ಟ್​ 04: ದಿನೇಶ್ ಗುಂಡೂರಾವ್​ಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕೆಪಿಸಿಸಿ ಕಚೇರಿ ಸಭಾಂಗಣದಲ್ಲಿ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಎದುರೇ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯ ಕಡೆಗಣನೆ ಮಾಡಲಾಗಿದೆ. ಹೀಗಾಗಿ ಖಾಲಿಯಿರುವ ಒಂದು ಸ್ಥಾನವನ್ನು ದಿನೇಶ್​ಗೆ ನೀಡುವಂತೆ ಒತ್ತಡ ಹೇರುವಂತೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್​ಗೆ ಮನವಿಪತ್ರ ಸಲ್ಲಿಸಿದ್ದಾರೆ. ಮನವಿ ಸ್ವೀಕರಿಸಿದ ಹರಿಪ್ರಸಾದ್​​ ಆಗ್ರಹವನ್ನು ಹೈಕಮಾಂಡ್​ಗೆ ತಿಳಿಸುವ ಭರವಸೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆ ಶಿವಕುಮಾರ್ ಚರ್ಚೆ, ಕ್ರಮದ ಭರವಸೆ – Kannada News | AO, AAO Recruitment Row: DK Shivakumar Holds Talks with Students, Assures Action

ಬೆಂಗಳೂರು, ಆಗಸ್ಟ್​​ 04: ಕೃಷಿ ಅಧಿಕಾರಿ (AO) ಮತ್ತು ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಕಳೆದ 20 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು, 101 ಸೀಟುಗಳ ಭರ್ತಿಯಲ್ಲಿನ ಅನ್ಯಾಯ ಮತ್ತು 15% ಕೋಟಾ ಸಂಬಂಧಿಸಿದಂತೆ ತಮ್ಮ ಅಹವಾಲುಗಳನ್ನು ಸಿಎಂ ಅವರ ಮುಂದಿಟ್ಟಿದ್ದು, ಕಳೆದ 10 ವರ್ಷಗಳಿಂದ ಯಾವುದೇ ನೇಮಕಾತಿ ನಡೆದಿಲ್ಲ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಯುಎಎನ್​ಗಿಂತಲೂ ಮೊದಲು ಇದ್ದ ಹಳೆಯ ಪಿಎಫ್ ಖಾತೆ ಲಿಂಕ್ ಆಗಿಲ್ಲವಾ? ಇಲ್ಲಿದೆ ಮಾರ್ಗೋಪಾಯ – Kannada News | Had PF accounts before UAN, here’s how to retrieve it and link to universal account number

ಪ್ರಾವಿಡೆಂಟ್ ಫಂಡ್ ಸ್ಕೀಮ್​ನಲ್ಲಿ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಸಿಸ್ಟಂ ಜಾರಿಗೆ ಬರುವ ಮೊದಲು ಕೆಲಸ ಪ್ರಾರಂಭಿಸಿದ ಹಾಗೂ ಆ ಬಳಿಕ ಉದ್ಯೋಗ ಬದಲಾಯಿಸಿದ ಲಕ್ಷಾಂತರ ಉದ್ಯೋಗಿಗಳಿಗೆ ಶುಭಸುದ್ದಿ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್​ಒ (EPFO) ತನ್ನ ನವೀಕರಿಸಿದ ಯೂನಿಫೈಡ್ ಮೆಂಬರ್ ಪೋರ್ಟಲ್ (EPFO 2.01) ನಲ್ಲಿ ‘ಸರ್ವಿಸ್ ಹಿಸ್ಟರಿ’ (Service History) ಎಂಬ ನೂತನ ಫೀಚರ್ ಹಾಗೂ ಆಧಾರ್ ಆಧಾರಿತ ಡಿಜಿಟಲ್ ಪೋರ್ಟಲ್ ಅನ್ನು ಪರಿಚಯಿಸಿದೆ.

ಇದರ ಮೂಲಕ ಉದ್ಯೋಗಿಗಳು ತಮ್ಮ ಹಳೆಯ ಅಥವಾ ಯುಎಎನ್‌ಗೆ ಲಿಂಕ್ ಆಗದೇ ಉಳಿದಿರುವ ಪಿಎಫ್ (PF) ಖಾತೆಗಳನ್ನು ಸುಲಭವಾಗಿ ಪತ್ತೆಹಚ್ಚಿ, ಪ್ರಸ್ತುತ ಚಾಲ್ತಿಯಲ್ಲಿರುವ ಯುಎಎನ್‌ಗೆ ವಿಲೀನಗೊಳಿಸಬಹುದು ಎಂದು ಹೇಳಲಾಗುತ್ತಿದೆ. ಯುಎಎನ್ ಮೊದಲು ಚಾಲನೆಗೆ ಬಂದಿದ್ದು 2014ರಲ್ಲಿ. ಆ ಮುಂಚೆ ಇದ್ದ ಪಿಎಫ್ ಅಕೌಂಟ್​​ಗಳಲ್ಲಿ ಕೆಲವು ಯುಎಎನ್​ಗೆ ಲಿಂಕ್ ಆಗಿಲ್ಲದೆ ಇರಬಹುದು.

ಇದನ್ನೂ ಓದಿ: ಮೊಬೈಲ್ ಇದ್ರೆ ಸಾಕು ರೇಷನ್ ಕಾರ್ಡ್‌ ಇ-ಕೆವೈಸಿ ಸ್ಥಿತಿ ಪರಿಶೀಲಿಸ್ಬಹುದು

ಹಳೆಯ ಪಿಎಫ್ ಖಾತೆಗಳು ಯುಎಎನ್‌ಗೆ ಲಿಂಕ್ ಆಗದಿರಲು ಕಾರಣಗಳೇನು?

ಯುಎಎನ್ ವ್ಯವಸ್ಥೆ ಬರುವುದಕ್ಕಿಂತ ಮೊದಲು, ಪ್ರತಿ ಹೊಸ ಉದ್ಯೋಗದಲ್ಲೂ ಹೊಸ ‘ಮೆಂಬರ್ ಐಡಿ’ (Member ID) ಸೃಷ್ಟಿಯಾಗುತ್ತಿತ್ತು. ಯುಎಎನ್ ಬಂದ ಬಳಿಕ ಎಲ್ಲಾ ಮೆಂಬರ್ ಐಡಿಗಳು ಒಂದೇ ಯುಎಎನ್ ಅಡಿ ಪಟ್ಟಿ ಆಗಿವೆ. ಆದರೆ, ಹಳೆಯ ಮೆಂಬರ್ ಐಡಿಗಳು ಈ ಕೆಳಗಿನ ಕಾರಣಗಳಿಗೆ ಯುಎಎನ್​ಗೆ ಲಿಂಕ್ ಆಗದೇ ಇದ್ದಿರಬಹುದು:

  • ಹೆಸರು, ಜನ್ಮ ದಿನಾಂಕ ಅಥವಾ ತಂದೆಯ ಹೆಸರಿನಲ್ಲಿ ವ್ಯತ್ಯಾಸಗಳಿರುವುದು.
  • ಹಳೆಯ ಕಂಪನಿಗಳು ಸೇವಾ ನಿರ್ಗಮನ ದಿನಾಂಕವನ್ನು (Date of Exit) ನಮೂದಿಸದಿರುವುದು.
  • ಆಧಾರ್ ಮತ್ತು ಕೆವೈಸಿ (KYC) ವಿವರಗಳು ಸರಿಯಾಗಿ ಅಪ್‌ಡೇಟ್ ಆಗದೇ ಇರುವುದು.

ಈ ಎಲ್ಲಾ ಕಾರಣಗಳಿಂದಾಗಿ ಹಳೆಯ ಪಿಎಫ್ ಖಾತೆಗಳು ಪ್ರಸ್ತುತ ಯುಎಎನ್‌ನೊಂದಿಗೆ ಲಿಂಕ್ ಆಗದೆ ಪ್ರತ್ಯೇಕವಾಗಿ ಉಳಿದುಕೊಂಡಿರಬಹುದು.

ನೂತನ ಫೀಚರ್‌ನಿಂದ ಉದ್ಯೋಗಿಗಳಿಗೆ ಏನು ಪ್ರಯೋಜನ?

  • ಸಂಪೂರ್ಣ ಸೇವಾ ವಿವರ ಒಂದೇ ಸ್ಥಳದಲ್ಲಿ: ಯೂನಿಫೈಡ್ ಮೆಂಬರ್ ಪೋರ್ಟಲ್‌ಗೆ ಲಾಗಿನ್ ಆಗಿ ‘Service History’ ವಿಭಾಗಕ್ಕೆ ಹೋದರೆ, ನಿಮ್ಮ ಎಲ್ಲಾ ಹಳೆಯ ಕಂಪನಿಗಳ ಹೆಸರುಗಳು, ಮೆಂಬರ್ ಐಡಿಗಳು, ಕೆಲಸಕ್ಕೆ ಸೇರಿದ ಮತ್ತು ಬಿಟ್ಟ ದಿನಾಂಕಗಳು ಒಂದೇ ಕಡೆ ಸಿಗಲಿವೆ.
  • ಸುಲಭ ವರ್ಗಾವಣೆ ಮತ್ತು ಕ್ಲೈಮ್: ಹಳೆಯ ಪಿಎಫ್ ಬ್ಯಾಲೆನ್ಸ್ ಅನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಯುಎಎನ್‌ಗೆ ವರ್ಗಾಯಿಸಲು (PF Transfer) ಅಥವಾ ಹಿಂಪಡೆಯಲು (PF Withdrawal) ಇದು ಸಹಕಾರಿಯಾಗಿದೆ.
  • ಪಿಂಚಣಿ (EPS) ದಾಖಲೆಗಳ ಸರಿಹೊಂದಿಸುವಿಕೆ: ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯ ಪಡೆಯಲು ಒಟ್ಟು ಸೇವಾ ಅವಧಿಯ (Total Service Period) ಸರಿಯಾದ ಲೆಕ್ಕಾಚಾರಕ್ಕೆ ಇದು ನೆರವಾಗುತ್ತದೆ.

ಇದನ್ನೂ ಓದಿ: ಪಿಎಫ್ ವೇತನ ಮಿತಿ 15,000 ರೂನಿಂದ 25,000 ರೂ ಏರಿಕೆ: ಹಣಕಾಸು ಸಚಿವಾಲಯ ಅನುಮೋದನೆ; ಏನಿದರ ಅನುಕೂಲ?

ಹಳೆಯ ಖಾತೆಯನ್ನು ಪತ್ತೆಹಚ್ಚಿ ಲಿಂಕ್ ಮಾಡುವುದು ಹೇಗೆ?

  • ಪೋರ್ಟಲ್‌ನಲ್ಲಿ ಪರಿಶೀಲಿಸಿ: ಮೊದಲಿಗೆ ಇಪಿಎಫ್‌ಒ ಮೆಂಬರ್ ಪೋರ್ಟಲ್‌ಗೆ ಯುಎಎನ್ ಲಾಗಿನ್ ಆಗಿ ‘Service History’ ವಿಭಾಗದಲ್ಲಿ ನಿಮ್ಮ ಹಳೆಯ ಖಾತೆಗಳ ವಿವರ ಕಾಣಿಸುತ್ತಿದೆಯೇ ಎಂದು ನೋಡಿ.
  • ಹಳೆಯ ಕಂಪನಿಯನ್ನು ಸಂಪರ್ಕಿಸಿ: ನಿಮ್ಮ ಹಳೆಯ ಮೆಂಬರ್ ಐಡಿ ಅಥವಾ ಯುಎಎನ್ ನೆನಪಿಲ್ಲದಿದ್ದರೆ, ನಿಮ್ಮ ಹಳೆಯ ಕಂಪನಿಯನ್ನು (Employer) ಸಂಪರ್ಕಿಸಬಹುದು. ಇಪಿಎಫ್‌ಒ ಎಂಪ್ಲಾಯರ್ ಪೋರ್ಟಲ್ ಮೂಲಕ ಅವರು ನಿಮ್ಮ ಹಳೆಯ ವಿವರಗಳನ್ನು ಹಿಂಪಡೆದು ನೀಡಬಹುದು.
  • ಆಧಾರ್ ಆಧಾರಿತ ದೃಢೀಕರಣ: ಇಪಿಎಫ್‌ಒದ ಹೊಸ ವ್ಯವಸ್ಥೆಯಲ್ಲಿ ಆಧಾರ್ ದೃಢೀಕರಣದ ಮೂಲಕ ನಿಮ್ಮ ಹಳೆಯ ಖಾತೆಗಳನ್ನು ಪತ್ತೆಹಚ್ಚಿ, ಆನ್‌ಲೈನ್‌ನಲ್ಲೇ ‘ಜಾಯಿಂಟ್ ಡಿಕ್ಲರೇಷನ್’ (Joint Declaration) ಸಲ್ಲಿಸಿ ಕೆವೈಸಿ ನವೀಕರಿಸಲು ಅವಕಾಶವಿದೆ.

ಇಪಿಎಫ್‌ಒ ತನ್ನ ದತ್ತಾಂಶವನ್ನು ವಿಕೇಂದ್ರೀಕೃತ ವ್ಯವಸ್ಥೆಯಿಂದ ಕೇಂದ್ರೀಕೃತ ರಾಷ್ಟ್ರೀಯ ಡೇಟಾಬೇಸ್‌ಗೆ (Centralised Database) ಸ್ಥಳಾಂತರಿಸಿರುವುದರಿಂದ, ಈ ಸೇವೆಗಳು ಇನ್ನು ಮುಂದೆ ಹೆಚ್ಚು ಪಾರದರ್ಶಕ ಹಾಗೂ ವೇಗವಾಗಿ ನಡೆಯಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಂಡ ಬದಲಿಸುವಂತೆ ಫಿನ್ ಅಲೆನ್​ಗೆ 3.37 ಕೋಟಿ ರೂ. ಆಫರ್! – Kannada News | KKR Star Finn Allen Set for Record Breaking BBL Deal

ನ್ಯೂಝಿಲೆಂಡ್ ತಂಡದ ಸ್ಫೋಟಕ ದಾಂಡಿಗ ಫಿನ್ ಅಲೆನ್ ಬಿಗ್ ಬ್ಯಾಷ್ ಲೀಗ್ (BBL) ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಏಕೆಂದರೆ ಮುಂಬರುವ ಸೀಸನ್‌ಗಾಗಿ ವಿವಿಧ ಫ್ರಾಂಚೈಸಿಗಳು ಅಲೆನ್ ಅವರಿಗೆ ಬರೋಬ್ಬರಿ 6,00,000 ಆಸ್ಟ್ರೇಲಿಯನ್ ಡಾಲರ್ (ಸುಮಾರು 3.37 ಕೋಟಿ ರೂಪಾಯಿ) ಆಫರ್ ನೀಡಿದೆ.

ಕಳೆದ ಸೀಸನ್‌ನಲ್ಲಿ ಪರ್ತ್ ಸ್ಕಾರ್ಚರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಲೆನ್ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ಪರ್ತ್ ಸ್ಕಾರ್ಚರ್ಸ್ ಫ್ರಾಂಚೈಸಿ ಹರಸಾಹಸ ಪಡುತ್ತಿದೆ. ಏಕೆಂದರೆ ಅಲೆನ್​ಗಾಗಿ ಪ್ರಮುಖ ಫ್ರಾಂಚೈಸಿಗಳು ತೆರೆಮರೆಯಲ್ಲೇ ಬಿಗ್ ಆಫರ್ ನೀಡುತ್ತಿದೆ.

ಮುಗಿಬಿದ್ದ ಫ್ರಾಂಚೈಸಿಗಳು:

ಬಿಬಿಎಲ್‌ನ ಹಳೆಯ ನಿಯಮಗಳ ಪ್ರಕಾರ ಫಿನ್ ಅಲೆನ್ ಕಳೆದ ಬಾರಿ 4,20,000 ಡಾಲರ್ ಒಪ್ಪಂದ ಹೊಂದಿದ್ದರು. ಆದರೆ, ಈ ಬಾರಿ ಕ್ರಿಕೆಟ್ ಆಸ್ಟ್ರೇಲಿಯಾ (CA) ತಂದಿರುವ ಹೊಸ ‘ಮಾರ್ಕ್ಯೂ ಪ್ಲೇಯರ್ ಪೂಲ್’ ನಿಯಮದಿಂದಾಗಿ ಆಟಗಾರರ ಮೌಲ್ಯ ಗಗನಕ್ಕೇರಿದೆ.

ಸ್ಟಾರ್ಸ್ ಮತ್ತು ಸ್ಟ್ರೈಕರ್ಸ್ ಪೈಪೋಟಿ:

ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಅಡಿಲೇಡ್ ಸ್ಟ್ರೈಕರ್ಸ್ ಫ್ರಾಂಚೈಸಿಗಳು ಈಗಾಗಲೇ ಫಿಲ್ ಅಲೆನ್​ಗೆ 6 ಲಕ್ಷ ಡಾಲರ್​ನ ಆಫರ್ ನೀಡಿದೆ.

ಇತ್ತ ಮೆಲ್ಬೋರ್ನ್ ಸ್ಟಾರ್ಸ್ ತಂಡದ ನೂತನ ಮುಖ್ಯ ಕೋಚ್ ಕ್ಯಾಮರೋನ್ ವೈಟ್ ಅವರು ಈ ಹಿಂದೆ ಅಮೆರಿಕದ ಎಂಎಲ್‌ಸಿ ಲೀಗ್‌ನಲ್ಲಿ ಫಿನ್ ಅಲೆನ್ ಅವರಿಗೆ ತರಬೇತಿ ನೀಡಿದ್ದರು. ಹೀಗಾಗಿ ಅಲೆನ್ ಮೆಲ್ಬೋರ್ನ್ ಸ್ಟಾರ್ಸ್ ಸೇರುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸ್ಟೋಕ್ಸ್ ಜೊತೆ ಪೈಪೋಟಿ:

ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಅವರಿಗೂ ಸಿಡ್ನಿ ಸಿಕ್ಸರ್ಸ್ ಇಷ್ಟೇ ಮೊತ್ತದ ಆಫರ್ ನೀಡಿದೆ. ಆದರೆ ಸ್ಟೋಕ್ಸ್ ಪೂರ್ಣ ಸೀಸನ್‌ಗೆ ಲಭ್ಯವಿರದ ಕಾರಣ, ಇಡೀ ಟೂರ್ನಿಗೆ ಲಭ್ಯವಿರಲಿರುವ ಫಿನ್ ಅಲೆನ್ ಅವರೇ ಬಿಬಿಎಲ್ ಇತಿಹಾಸದ ಗರಿಷ್ಠ ಸಂಭಾವನೆ ಪಡೆಯುವ ಆಟಗಾರನಾಗಿ ಹೊರಹೊಮ್ಮುವ ಸಾಧ್ಯತೆಯಿದೆ.

ಅಲೆನ್ ಡಿಮ್ಯಾಂಡ್‌ಗೆ ಕಾರಣವೇನು?

ಕಳೆದ 2025–26ರ ಬಿಬಿಎಲ್ ಸೀಸನ್‌ನಲ್ಲಿ ಫಿನ್ ಅಲೆನ್ ಅಕ್ಷರಶಃ ಅಬ್ಬರಿಸಿದ್ದರು. ಅವರ ಅಬ್ಬರದ ಬ್ಯಾಟಿಂಗ್ ಅಂಕಿ-ಅಂಶಗಳು ಹೀಗಿವೆ…

ಟಿ20 ಕ್ರಿಕೆಟ್‌ನಲ್ಲಿ ಸದ್ಯ ಅತ್ಯಂತ ಅಪಾಯಕಾರಿ ಬ್ಯಾಟರ್ ಎನಿಸಿಕೊಂಡಿರುವ ಫಿನ್ ಅಲೆನ್ ಅಂತಿಮವಾಗಿ ಬಿಬಿಎಲ್‌ನ ಯಾವ ಫ್ರಾಂಚೈಸಿಗೆ ಸಹಿ ಹಾಕಲಿದ್ದಾರೆ ಎಂಬುದೇ ಈಗ ಕುತೂಹಲ.

Source link

Vidyasiri Scholarship 2026: ವಿದ್ಯಾಸಿರಿ ಸ್ಕಾಲರ್‌ಶಿಪ್​​​​; ತಿಂಗಳಿಗೆ 1,500ರೂ. ಆರ್ಥಿಕ ನೆರವು, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ! – Kannada News | Vidyasiri Scholarship 2026 27: Get 1,500 Rs Monthly Financial Assistance; Apply Online by August 31

ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು (BCWD) ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡಲು ‘ವಿದ್ಯಾಸಿರಿ ಸ್ಕಾಲರ್‌ಶಿಪ್ 2026-27′ ಯೋಜನೆಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಸ್ವಂತ ಅಥವಾ ಖಾಸಗಿ ವಸತಿಯಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಆಹಾರ ಮತ್ತು ವಸತಿ ವೆಚ್ಚವನ್ನು ಭರಿಸಲು ಸರ್ಕಾರವು ತಿಂಗಳಿಗೆ 1,500 ರೂ. ಗಳಂತೆ (ಗರಿಷ್ಠ 10 ತಿಂಗಳಿಗೆ ಒಟ್ಟು ₹15,000) ಆರ್ಥಿಕ ಸಹಾಯಧನವನ್ನು ನೀಡುತ್ತದೆ. ಈ ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಯೋಜನೆಗೆ ಯಾರು ಅರ್ಹರು?

ಈ ಯೋಜನೆಯಡಿ ಸೌಲಭ್ಯ ಪಡೆಯಲು ವಿದ್ಯಾರ್ಥಿಗಳು ಮೂಲತಃ ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು. ಅಲ್ಲದೆ ಹಿಂದುಳಿದ ವರ್ಗಗಳಾದ ಪ್ರವರ್ಗ-1, 2A, 2B, 3A, ಹಾಗೂ 3B (OBC) ಗೆ ಸೇರಿದವರಾಗಿರಬೇಕು. ಪಿಯುಸಿ (PUC), ಐಟಿಐ (ITI), ಡಿಪ್ಲೊಮಾ, ಪದವಿ (UG), ಸ್ನಾತಕೋತ್ತರ ಪದವಿ (PG) ಹಾಗೂ ಇತರ ಪೋಸ್ಟ್-ಮೆಟ್ರಿಕ್ ಕೋರ್ಸ್‌ಗಳಲ್ಲಿ ಸರ್ಕಾರಿ, ಅನುದಾನಿತ ಅಥವಾ ಮಾನ್ಯತೆ ಪಡೆದ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಆರ್ಥಿಕ ನೆರವಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆದರೆ, ಸರ್ಕಾರಿ ಅಥವಾ ಇಲಾಖೆಯ ವಸತಿನಿಲಯಗಳಲ್ಲಿ (ಹಾಸ್ಟೆಲ್) ವಾಸಕ್ಕೆ ಸ್ಥಳಾವಕಾಶ ಪಡೆದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅಗತ್ಯವಿರುವ ಪ್ರಮುಖ ದಾಖಲೆಗಳು:

ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಬಳಿ ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ ಹಾಗೂ ಚಾಲ್ತಿಯಲ್ಲಿರುವ ಆದಾಯ ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಇದರ ಜೊತೆಗೆ ಅರ್ಹತಾ ಪರೀಕ್ಷೆಯ ಹಿಂದಿನ ವರ್ಷದ ಅಂಕಪಟ್ಟಿ, ಪ್ರಸಕ್ತ ಸಾಲಿನ ಕಾಲೇಜು ಪ್ರವೇಶ ದೃಢೀಕರಣ ಪತ್ರ ಅಥವಾ ಐಡಿ ಕಾರ್ಡ್, ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಆಗಿರುವ ಸಕ್ರಿಯ ಬ್ಯಾಂಕ್ ಪಾಸ್‌ಬುಕ್ ಪ್ರತಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಸಿದ್ಧವಾಗಿಟ್ಟುಕೊಳ್ಳಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ:

ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳು ರಾಜ್ಯ ಸ್ಕಾಲರ್‌ಶಿಪ್ ಪೋರ್ಟಲ್ (SSP – State Scholarship Portal) ssp.karnataka.gov.in ಮೂಲಕವೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. 2026-27ನೇ ಸಾಲಿನ ವಿದ್ಯಾಸಿರಿ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿದೆ. ವಿದ್ಯಾರ್ಥಿಗಳು ಕೊನೆಯ ಕ್ಷಣದ ತಾಂತ್ರಿಕ ತೊಂದರೆಗಳನ್ನು ತಪ್ಪಿಸಲು ನಿಗದಿತ ದಿನಾಂಕದೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭ ಪಡೆಯಬಹುದು.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“22,000 ರೂ. ಖರ್ಚಾಗಿದೆ, ಕ್ಷಮಿಸಿ”: ಕದ್ದ ಚಿನ್ನ-ಹಣ ವಾಪಸ್ ತಂದು ಸಾರಿ ಪತ್ರವಿಟ್ಟ ಕಳ್ಳರು

ಕಾಕಿನಾಡ, ಆ.4: ದೋಚಿದ ಚಿನ್ನಾಭರಣ ಹಾಗೂ ನಗದನ್ನು ಎರಡು ವಾರಗಳ ಬಳಿಕ ಮಾಲೀಕರ ಮನೆ ಅಂಗಳಕ್ಕೇ ಎಸೆದು, “ಕ್ಷಮಿಸಿ, ಮಾಡಿದ ತಪ್ಪು ಒಪ್ಪಿಕೊಳ್ಳುತ್ತಿದ್ದೇವೆ” ಎಂದು ಕ್ಷಮಾಪಣಾ ಪತ್ರ ಬರೆದಿಟ್ಟು ಹೋದ ವಿಚಿತ್ರ ಹಾಗೂ ಅಪರೂಪದ ಘಟನೆಯೊಂದು ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಾಕಿನಾಡ ಜಿಲ್ಲೆಯ ಕರಪ ಮಂಡಲದ ರಾಮಕಂಚಿರಾಜು ನಗರದ ನಿವಾಸಿ ನಾಮಾಲ ಗಣೇಶ್ ಎಂಬುವವರು ತಮ್ಮ ಕುಟುಂಬದೊಂದಿಗೆ ಜುಲೈ 18 ರಂದು ಸ್ವಗ್ರಾಮಕ್ಕೆ ತೆರಳಿದ್ದರು.

ಮನೆಗೆ ಬೀಗ ಹಾಕಿರುವುದನ್ನು ಗಮನಿಸಿದ ಕಳ್ಳರು, ಬೀಗ ಮುರಿದು ಒಳನುಗ್ಗಿ ಸುಮಾರು 6.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 50,000 ರೂ. ನಗದು ದೋಚಿ ಪರಾರಿಯಾಗಿದ್ದರು. ಮನೆಗೆ ಹಿಂತಿರುಗಿದ ಗಣೇಶ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ಕಳ್ಳತನ ನಡೆದ 15 ದಿನಗಳ ನಂತರ, ಅಂದರೆ ಆಗಸ್ಟ್ 2ರಂದು ತೆಲ್ಲವಾರಿನ ಜಾವ ಗಣೇಶ್ ಅವರ ಮನೆಯ ಅಂಗಳದಲ್ಲಿ ಕವರ್‌ ಒಂದರಲ್ಲಿ ಚಿನ್ನಾಭರಣ ಹಾಗೂ ಹಣವನ್ನು ಎಸೆದು ಕಳ್ಳರು ಪರಾರಿಯಾಗಿದ್ದಾರೆ. ಕವರ್‌ನೊಂದಿಗೆ ಹಸ್ತಪ್ರತಿಯ ಲೇಖನವೊಂದನ್ನು (ಕ್ಷಮಾಪಣಾ ಪತ್ರ) ಇಡಲಾಗಿತ್ತು. “ನಾವು ಮಾಡಿದ್ದು ತಪ್ಪೇ… ದಯವಿಟ್ಟು ಕ್ಷಮಿಸಿ. ದೋಚಿದ ಹಣದಲ್ಲಿ 22,000 ರೂ. ವರೆಗೆ ಖರ್ಚು ಮಾಡಿದ್ದೇವೆ. ಆ ಹಣವನ್ನು ಮರಳಿಸಲು ಸಾಧ್ಯವಿಲ್ಲ. ಉಳಿದ ಎಲ್ಲಾ ಚಿನ್ನಾಭರಣ ಹಾಗೂ ಹಣವನ್ನು ವಾಪಸ್ ನೀಡುತ್ತಿದ್ದೇವೆ. ಕ್ಷಮಿಸಿ ಎಂದು ಕೇಳಿಕೊಂಡಿದ್ದಾನೆ.

ಇದನ್ನೂ ಓದಿ: ಕಾಲೇಜಿನ ಕೊನೆಯ ದಿನ ಸೆಕ್ಯೂರಿಟಿ ಗಾರ್ಡ್‌ನ ಆಶೀರ್ವಾದ ಪಡೆದ ವಿದ್ಯಾರ್ಥಿ

22,000 ರೂ. ನಗದು ಕಳೆದುಕೊಂಡರೂ, ಲಕ್ಷಾಂತರ ರೂಪಾಯಿ ಮೌಲ್ಯದ ತಮ್ಮ ಅಮೂಲ್ಯ ಚಿನ್ನಾಭರಣಗಳು ಹಾಗೂ ಉಳಿದ ಹಣ ವಾಪಸ್ ಸಿಕ್ಕಿದ್ದಕ್ಕೆ ಮನೆಯಜಮಾನ ಗಣೇಶ್ ನಿಟ್ಟುಸಿರು ಬಿಟ್ಟಿದ್ದಾರೆ. ಕಳ್ಳತನ ಮಾಡಿ ವಾಪಸ್ ಕ್ಷಮೆ ಕೇಳಿ ಸೊತ್ತು ಮರಳಿಸಿದ ಈ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕಳ್ಳತನ ಮಾಡಿ ಸೊತ್ತು ಮರಳಿಸಿದ ಖದೀಮರು ಯಾರು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Exit mobile version