ಬೆಂಗಳೂರು, ಡಿಸೆಂಬರ್ 22: ಪ್ರತಿಯೊಬ್ಬ ವ್ಯಕ್ತಿಗೂ ಸ್ವಂತ ಮನೆ ಹೊಂದುವ ಕನಸು ಸಹಜ. ಅನೇಕರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಸ್ವಂತ ಮನೆಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ. ಕೆಲವರಿಗೆ ಪೂರ್ವಿಕರ ಆಸ್ತಿ, ಭೂಮಿ ಇದ್ದರೂ ಮನೆ ಕಟ್ಟಲು ಸಾಧ್ಯವಾಗುವುದಿಲ್ಲ. ಹಣ ಕೂಡಿಟ್ಟರೂ ಅದನ್ನು ಮನೆ ನಿರ್ಮಾಣಕ್ಕೆ ಬಳಸಲು ಆಗುವುದಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ಸೂಚಿಸಲಾಗಿದೆ.
ಮನೆ ಯೋಗವನ್ನು ಪ್ರೋತ್ಸಾಹಿಸುವ ಪ್ರಮುಖ ಗ್ರಹಗಳೆಂದರೆ ಕುಜ, ಶುಕ್ರ ಮತ್ತು ಬುಧ. ವಿಶೇಷವಾಗಿ ಕುಜ (ಮಂಗಳ) ಗ್ರಹವು ಪ್ರಮುಖ ಪಾತ್ರ ವಹಿಸುತ್ತದೆ, ಇದು ನಾಲ್ಕನೇ ಮನೆಯ ಅಧಿಪತಿಯಾಗಿದೆ. ಕುಜನ ಅಧಿಪತಿ ಸುಬ್ರಹ್ಮಣ್ಯ ಸ್ವಾಮಿ. ಸ್ವಂತ ಮನೆ ಕನಸು ನನಸಾಗಲು ಮಂಗಳ ಗ್ರಹವನ್ನು ಸತತವಾಗಿ ಪೂಜಿಸಬೇಕು. ಪ್ರತಿ ಮಂಗಳವಾರದಂದು ಸುಬ್ರಹ್ಮಣ್ಯ ಸ್ವಾಮಿ ಮತ್ತು ನಾಗರಕಲ್ಲು ಪೂಜಿಸುವುದು ಉತ್ತಮ. ಕೃಷ್ಣ ಪಕ್ಷದ ಚತುರ್ಥಿಯಂದು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವುದರಿಂದ ಮನೆ ಯೋಗ ಪ್ರಾಪ್ತವಾಗುತ್ತದೆ. ಪ್ರತಿದಿನ “ಓಂ ಅಂಗಾರಕಾಯ ನಮಃ” ಮಂತ್ರವನ್ನು ಜಪಿಸುವುದರಿಂದ ಕುಜ ಗ್ರಹದ ಅನುಗ್ರಹ ದೊರೆಯುತ್ತದೆ. ಸಾಧ್ಯವಾದರೆ ಮಂಗಳವಾರ ಉಪವಾಸ ಆಚರಿಸುವುದು ಕೂಡ ಒಳ್ಳೆಯದು ಎಂದು ಗುರೂಜಿ ಹೇಳಿದ್ದಾರೆ.
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 22 ಡಿಸೆಂಬರ್ 2025 ರ ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಈ ದಿನವು ಸೋಮವಾರವಾಗಿದ್ದು, ವಿಶ್ವಾವಸು ನಾಮ ಸಂವತ್ಸರ, ಪುಷ್ಯ ಮಾಸ, ಶುಕ್ಲ ಪಕ್ಷ, ಬಿದಿಗೆ ತಿಥಿಯನ್ನು ಹೊಂದಿದೆ. ಉತ್ತರಾಷಾಢ ನಕ್ಷತ್ರದಲ್ಲಿ ಚಂದ್ರನ ಸಂಚಾರವು ಎಲ್ಲ ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರಲಿದೆ ಎಂದು ಗುರೂಜಿ ತಿಳಿಸಿದ್ದಾರೆ.
ಮೇಷ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿದ್ದು, ವೃಷಭ ರಾಶಿಯವರಿಗೆ ಆಲಸ್ಯ ತ್ಯಜಿಸಲು ಸೂಚಿಸಲಾಗಿದೆ. ಮಿಥುನ ರಾಶಿಯವರು ಸಮಯಕ್ಕೆ ತಕ್ಕಂತೆ ಕೆಲಸಗಳನ್ನು ಪೂರೈಸಬೇಕು. ಕರ್ಕಾಟಕ ರಾಶಿಯವರಿಗೆ ಪ್ರಯಾಣ ಯೋಗವಿದ್ದರೆ, ಸಿಂಹ ರಾಶಿಯವರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಕನ್ಯಾ ರಾಶಿಯವರಿಗೆ ಆಕಸ್ಮಿಕ ಧನಯೋಗವಿದ್ದು, ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ವೃಶ್ಚಿಕ ರಾಶಿಯವರು ಮಾತಿನಲ್ಲಿ ಜಾಗ್ರತೆ ವಹಿಸಬೇಕು. ಧನು ರಾಶಿಯವರಿಗೆ ಅದೃಷ್ಟದ ದಿನವಾಗಿದ್ದು, ಮಕರ ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಅಗತ್ಯ. ಕುಂಭ ರಾಶಿಯವರು ಕಾನೂನು ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು ಮತ್ತು ಮೀನ ರಾಶಿಯವರು ವೃಥಾ ತಿರುಗಾಟ, ಕೋಪವನ್ನು ನಿಯಂತ್ರಿಸಬೇಕು. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಜಪಿಸಬೇಕಾದ ಮಂತ್ರವನ್ನು ಸೂಚಿಸಲಾಗಿದೆ.
ಯಾವುದೇ ವಿಚಾರದಲ್ಲಿ ಉಲ್ಲಾಸ- ಉತ್ಸಾಹದಿಂದ ತೊಡಗಿಕೊಳ್ಳಲು ಮನಸ್ಸು ಇರುವುದಿಲ್ಲ. ಆದಾಯದಲ್ಲಿ ಇಳಿಕೆ ಆಗುತ್ತಿದೆ ಎಂಬುದು ಒಂದು ಕಡೆಯ ಚಿಂತೆಯಾದರೆ, ಅದನ್ನು ಹೆಚ್ಚಿಸಲು ಮಾಡುತ್ತಿರುವ ಪ್ರಯತ್ನಗಳು ಫಲ ನೀಡುತ್ತಿಲ್ಲ ಎಂಬುದು ಇನ್ನೊಂದು ಕಡೆಯ ಬೇಸರಕ್ಕೆ ಕಾರಣ ಆಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮನ್ನು ದೂರ ಇಟ್ಟು, ಕೆಲವು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸಂಗತಿ ಗಮನಕ್ಕೆ ಬರಲಿದ್ದು, ಸಂಬಂಧಪಟ್ಟವರಲ್ಲಿ ಇದನ್ನು ಕೇಳಿಯೂ ಕೇಳಲಿದ್ದೀರಿ. ಪ್ರಾಣಿಗಳಿಂದ ಕಡಿತಕ್ಕೆ ಒಳಗಾಗುವ ಯೋಗ ಇದೆ, ಆದ್ದರಿಂದ ನೀವು ಅಂಥ ಪರಿಸರದಲ್ಲಿ ಓಡಾಡುವಾಗಲೋ ಅಥವಾ ಕಾರ್ಯ ನಿರ್ವಹಣೆ ಮಾಡುವಾಗಲೋ ಸಾಮಾನ್ಯ ದಿನಗಳಿಗಿಂತ ಎಚ್ಚರಿಕೆಯನ್ನು ವಹಿಸಿ. ಎಲೆಕ್ಟ್ರಿಕಲ್ ಸಾಧನಗಳ ಮಾರಾಟ ಮಳಿಗೆ ಇಟ್ಟಿರುವವರಿಗೆ ಆದಾಯ ಮೂಲ ಹೆಚ್ಚಿಕೊಳ್ಳುವುದಕ್ಕೆ ಮಾರ್ಗೋಪಾಯ ಗೋಚರ ಆಗಲಿದೆ. ಆದರೆ ಇದರ ಬಗ್ಗೆ ನಿಮ್ಮ ಆಸಕ್ತಿ ಕುದುರುವುದಿಲ್ಲ.
ಮನಸ್ಸಿಗೆ ಸಮಾಧಾನ ತರುವಂಥ ಬೆಳವಣಿಗೆಗಳು ಆಗಲಿವೆ. ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಪ್ರತಿಷ್ಠಿತ ಸಂಸ್ಥೆಯಿಂದ ಇಂಟರ್ ವ್ಯೂ ಕರೆ ಬರಬಹುದು. ಇನ್ನು ವೃತ್ತಿಪರರು ನೀವಾಗಿಯೇ ಕೆಲವು ಕ್ಲೈಂಟ್ ಗಳಿಗೆ ಇನ್ನು ಕೆಲಸ ಮಾಡಿಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಲಿದ್ದೀರಿ. ಊಟ- ತಿಂಡಿಗಾಗಿ ದೂರದ ಸ್ಥಳಗಳಿಗೆ ಹುಡುಕಿಕೊಂಡು ಹೋಗಲಿದ್ದೀರಿ. ಇದಕ್ಕೆ ನಿಮ್ಮ ಸ್ನೇಹಿತರು ಸಹ ಜೊತೆಯಾಗುತ್ತಾರೆ. ಕೋರ್ಟ್- ಕಚೇರಿ ಅಲೆದಾಟ ಮಾಡುತ್ತಿರುವವರಿಗೆ ರಾಜೀ- ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂಬ ಪ್ರಸ್ತಾವವನ್ನು ನಿಮ್ಮ ಎದುರಿನ ಪಾರ್ಟಿಯವರಿಂದ ಬರುವ ಸಾಧ್ಯತೆ ಇದೆ. ಮುಕ್ತ ಮನಸ್ಸಿನಿಂದ ಆಲೋಚನೆ ಮಾಡುವುದು ಒಳ್ಳೆಯದು. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನಿರೀಕ್ಷಿತವಾಗಿ ಆತಂಕ ಎದುರಾಗಲಿದೆ. ಯಾವುದೋ ಮುಖ್ಯವಾದ ಸಂಗತಿಯನ್ನು ಮರೆತಿದ್ದೀರಿ ಎಂಬುದು ಈ ಆತಂಕದ ಮೂಲ ಆಗಲಿದೆ.
ಯಾಕೆ- ಏನು ಎಂಬ ಪ್ರಶ್ನೆ ಮಾಡದೆ ತಮಗೆ ಬೇಕಾದ ಕೆಲಸವನ್ನು ಮಾಡಿಕೊಡಬೇಕು ಎಂಬುದು ನಿಮ್ಮ ಸ್ನೇಹಿತರ ನಿರೀಕ್ಷೆ ಆಗಿರಲಿದೆ. ಇದಕ್ಕಾಗಿ ನಡೆಯುವ ಮಾತುಕತೆ ವೇಳೆ ನಿಮ್ಮ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದೆನಿಸುವುದಕ್ಕೆ ಶುರು ಆಗಲಿದೆ. ಮನೆ- ಮಳಿಗೆ ನಿರ್ಮಾಣದಲ್ಲಿ ತೊಡಗಿಕೊಂಡವರು ನಿಯಮಾನುಸಾರ ಕೆಲಸ- ಕಾರ್ಯಗಳು ನಡೆಯುತ್ತಾ ಇವೆಯೇ ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವುದು ಒಳ್ಳೆಯದು. ಆಸಕ್ತಿಯಿಂದ ಸೇರಿಕೊಂಡಿದ್ದ ಕೋರ್ಸ್ ವೊಂದರಲ್ಲಿ ಮುಂದುವರಿಯುವುದು ಸಾಧ್ಯ ಇಲ್ಲ ಎಂಬುದು ಖಚಿತವಾಗಿ, ಬೇಸರ ಮಾಡಿಕೊಳ್ಳುವಂತೆ ಆಗಲಿದೆ. ಯೂಟ್ಯೂಬರ್ ಗಳಿಗೆ ಖರ್ಚಿನ ಪ್ರಮಾಣ ಹೆಚ್ಚಲಿದ್ದು, ಅದನ್ನು ಹೇಗೆ ಹೊಂದಾಣಿಕೆ ಮಾಡುವುದು ಎಂಬುದೇ ತಿಳಿಯದೆ ಕಂಗಾಲಾಗುತ್ತೀರಿ. ಮನೆಯಲ್ಲಿ ಹಿರಿಯರು ಹೇಳುವಂಥ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ.
ಎಲ್ಲ ವಿಚಾರಕ್ಕೂ ಪ್ಲಾನ್ ಬಿ ಮಾಡಿಕೊಳ್ಳುವ ನಿಮ್ಮ ವಿಧಾನದಿಂದ ದೊಡ್ಡ ಅನುಕೂಲ ಆಗಲಿದೆ. ಕಠಿಣವಾದ ವಿಷಯಗಳನ್ನು ಸಹ ಸಲೀಸಾಗಿ ಅರ್ಥ ಮಾಡಿಕೊಳ್ಳುವ ರೀತಿಯಿಂದಾಗಿಯೇ ಇತರರು ನಿಮ್ಮ ಕಡೆಗೆ ಬೆರಗಿನಿಂದ ನೋಡುತ್ತಾರೆ. ದೊಡ್ಡ ಮಟ್ಟದ ಖರ್ಚು ಬರಬಹುದು ಎಂದು ಅಂದಾಜು ಮಾಡಿಕೊಂಡಿದ್ದು, ತುಂಬ ಕಡಿಮೆ ಮೊತ್ತದಲ್ಲಿ ಅಂದುಕೊಂಡ ರೀತಿಯಲ್ಲಿಯೇ ಕೆಲಸ ಮುಗಿಯುತ್ತದೆ. ಉದ್ಯೋಗ ಬಿಟ್ಟು ಹೊಸ ವ್ಯವಹಾರ- ವ್ಯಾಪಾರ ಆರಂಭಿಸುವ ನಿರ್ಧಾರದ ಬಗ್ಗೆ ನಿಮ್ಮಲ್ಲಿ ಕೆಲವರು ಸ್ನೇಹಿತರ ಜೊತೆಗೆ ಚರ್ಚೆ ಮಾಡಲಿದ್ದೀರಿ. ಇನ್ನೂ ಕೆಲವರು ಆಹಾರದ ವ್ಯವಹಾರ ಶುರು ಮಾಡುವುದಕ್ಕೆ ಎಲ್ಲ ಸಿದ್ಧತೆ ಮುಗಿಸಿರುವ ಸಾಧ್ಯತೆ ಇದೆ. ಉನ್ನತ ವ್ಯಾಸಂಗ ಮಾಡುತ್ತಾ ಇರುವವರಿಗೆ ಉದ್ಯೋಗದ ಆಫರ್ ಬರಬಹುದು. ಇಂಟರ್ನ್ ಷಿಪ್ ಮಾಡುವಂತೆ ಸಹ ಪ್ರಸ್ತಾವವನ್ನು ನಿಮ್ಮ ಮುಂದೆ ಇಡಲಿದ್ದಾರೆ. ಒಟ್ಟಾರೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವ ದಿನ ಇದಾಗಿರುತ್ತದೆ.
ಕೆಲವು ಬದಲಾವಣೆಗೆ ಸಂಬಂಧಿಸಿದಂತೆ ನಿಮ್ಮನ್ನು ಒಪ್ಪಿಸುವುದಕ್ಕೆ ಸಹೋದ್ಯೋಗಿಗಳು ಪ್ರಯತ್ನ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಇಲ್ಲಿಯ ತನಕ ಎಲ್ಲಿಯೂ ಹೇಳಿಕೊಳ್ಳದ ಸಂಗತಿಗಳನ್ನು ಬಾಯಿ ಬಿಟ್ಟು ಹೇಳಿಕೊಳ್ಳುವಂತೆ ಆಗಲಿದೆ. ನಿಮ್ಮ ಸಾಮರ್ಥ್ಯ, ಬದ್ಧತೆ, ಅದರಿಂದ ಆಗಿರುವ ಅನುಕೂಲಗಳ ಬಗ್ಗೆ ಮಾತನಾಡುತ್ತೀರಿ. ಇದರ ಆಚೆಗೆ ಆಗುವ ಯಾವುದೇ ಬದಲಾವಣೆಗೆ ಒಪ್ಪಿಕೊಳ್ಳುವುದಕ್ಕೆ ಸಿದ್ಧರಿಲ್ಲ ಎಂಬುದನ್ನು ಸಹ ಹೇಳಲಿದ್ದೀರಿ. ಯಾವುದಾದರೂ ನಿರ್ದಿಷ್ಟ ಕಾಯಿಲೆ ಆಗಿದೆಯಾ ಎಂಬ ಬಗ್ಗೆ ವೈದ್ಯಕೀಯ ಪರೀಕ್ಷೆ ಏನಾದರೂ ಸೂಚಿಸಿದ್ದಲ್ಲಿ ಗಂಭೀರ ಸಮಸ್ಯೆ ಇಲ್ಲ ಎಂಬುದು ತಿಳಿದುಬರಲಿದೆ. ಸಮಾರಂಭಗಳಿಗೆ ತೆರಳುವುದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದೀರಿ. ಆಪತ್ಕಾಲಕ್ಕೆ ಇರಲಿ ಎಂಬ ಉದ್ದೇಶದಿಂದ ಕೂಡಿಟ್ಟುಕೊಂಡಿದ್ದ ಹಣವನ್ನು ಬೇರೆ ಉದ್ದೇಶಕ್ಕೆ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಉದ್ಭವ ಆಗಲಿದೆ.
ನಿಮ್ಮ ಹತ್ತಿರ ಏನಿದೆಯೋ ಅದು ಮಾತ್ರ ನಿಮ್ಮದು. ನೀವು ಬೇರೆಯವರಿಗೆ ಕೊಟ್ಟಂಥ ಸಾಲ, ಈಗಾಗಲೇ ಕೆಲಸ ಮಾಡಿಯಾಗಿದೆ ಅದರ ಹಣ ಬರಬೇಕಿದೆ, ಸ್ನೇಹಿತರು- ಸಂಬಂಧಿಕರು ಸಹಾಯ ಮಾಡುವುದಾಗಿ ಕೊಟ್ಟಂಥ ಮಾತು ಇದ್ಯಾವುದನ್ನೂ ನೆಚ್ಚಿಕೊಂಡು ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕುವುದಕ್ಕೆ ಹೋಗಬೇಡಿ. ಹೋಟೆಲ್ ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಪ್ರೀತಿಯಲ್ಲಿ ಇರುವವರು ಜೊತೆಯಾಗಿ ಸಮಯವನ್ನು ಕಳೆಯುವಂಥ ಯೋಗ ಇದೆ. ಭವಿಷ್ಯದ ಬಗ್ಗೆ ಗಂಭೀರವಾದ ಚರ್ಚೆ ಸಹ ಮಾಡಲಿದ್ದೀರಿ. ಇಷ್ಟು ಸಮಯ ಮಾತನಾಡದೆ ಉಳಿದು ಹೋಗಿದ್ದ ಕೆಲವು ಸಂಗತಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಯಾರ ಜತೆಗೂ ಅತಿಯಾದ ಸಲುಗೆ ಬೇಡ. ಇದನ್ನು ಮೀರಿಯೂ ನಡೆದುಕೊಂಡಲ್ಲಿ ಎಚ್ಚರಿಕೆ ಮಾತುಗಳನ್ನು ಕೇಳಿಸಿಕೊಳ್ಳುವಂತೆ, ಮುಜುಗರದ ಸನ್ನಿವೇಶ ಎದುರಿಸುವಂತೆ ಆಗುತ್ತದೆ.
ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುವ ಯೋಗ ಇದೆ. ಬಹಳ ಸಮಯದಿಂದ ನೀವು ಹೇಳಬೇಕು ಅಂದುಕೊಳ್ಳುತ್ತಾ ಇದ್ದ ಕೆಲವು ವಿಚಾರಗಳನ್ನು ಸಂಬಂಧ ಪಟ್ಟವರಿಗೆ ಹೇಳಲಿದ್ದೀರಿ. ಧಾರ್ಮಿಕ ವೃತ್ತಿಯಲ್ಲಿ ಇರುವವರಿಗೆ ಕೆಲಸದ ಒತ್ತಡ ಹೆಚ್ಚಿರುತ್ತದೆ. ನೀವು ಕೈಯಿಂದ ಹಣ ಹಾಕಿ, ಮಾಡಿಕೊಟ್ಟ ಕೆಲಸದ ಬಾಕಿ ವಸೂಲಿ ಮಾಡುವುದು ಈ ದಿನ ಸಾಧ್ಯವಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಕುದುರುವುದು ಕಷ್ಟ ಆಗಲಿದೆ. ಸ್ನೇಹಿತರ ಜೊತೆಗೆ ದೂರ ಪ್ರಯಾಣ ಮಾಡುವಂಥ ಯೋಗ ಇದೆ. ಅದು ಕೂಡ ಯಾವುದೇ ಯೋಜನೆ ಇಲ್ಲದೆ ದಿಢೀರ್ ಹೊರಟುಬಿಡುವಂತೆ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರು ಯಾವುದೇ ಸನ್ನಿವೇಶವನ್ನು ಭಾವನಾತ್ಮಕ ಹಿನ್ನೆಲೆಯಲ್ಲಿ ನೋಡುವುದಕ್ಕೆ ಹೋಗಬೇಡಿ. ಲಾಭಕ್ಕೆ ಬರಲಾರದು ಎಂದೆನಿಸಿದ್ದನ್ನು ನಿಲ್ಲಿಸಿಬಿಡುವುದು ಒಳ್ಳೆಯದು. ಆಯುರ್ವೇದ ಔಷಧಗಳ ವಿತರಣೆ ಮಾಡುವಂಥವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ.
ಮನೆಯ ಖರ್ಚು ವೆಚ್ಚಗಳು ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿಗೆ ಆಗಲಿದೆ. ಆದಾಯ ಹಾಗೂ ಅದನ್ನು ಬಳಸುವುದಕ್ಕೂ ತಾಳೆ ಆಗುತ್ತಿಲ್ಲ ಎಂಬುದು ಚಿಂತೆಗೆ ಕಾರಣ ಆಗಲಿದೆ. ಆದಾಯದ ಮೂಲ ಜಾಸ್ತಿ ಮಾಡಿಕೊಳ್ಳಲು ಹಾಕುವಂಥ ಶ್ರಮ ಫಲ ನೀಡುತ್ತದೆ. ಸಂಗಾತಿ ಜತೆಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಅವರ ಬೇಕು- ಬೇಡಗಳನ್ನು ಕೇಳಿಕೊಂಡು, ಅದನ್ನು ಒದಗಿಸಿಕೊಡಲು ಆದ್ಯತೆ ನೀಡಲಿದ್ದೀರಿ. ನಿಮ್ಮ ನಿಲವು- ಉದ್ದೇಶದ ಬಗ್ಗೆ ಸಂಬಂಧಿಕರು ಆಕ್ಷೇಪದ ಮಾತುಗಳನ್ನು ಹೇಳಲಿದ್ದಾರೆ. ನೀವು ಸಹ ಇಂಥ ಮಾತುಗಳಿಗೆ ಅಲ್ಲಿಂದ ಅಲ್ಲಿಗೆ ಎಂಬಂತೆ ಉತ್ತರವನ್ನು ಸಹ ನೀಡುತ್ತೀರಿ. ದೊಡ್ಡ ಅಳತೆಯ ಸೈಟು ಇರುವವರು ಅದನ್ನು ಮಾರಾಟ ಮಾಡಿ, ಕಟ್ಟಿರುವ ಮನೆ ಖರೀದಿ ಮಾಡುವ ಬಗ್ಗೆ ಆಲೋಚಿಸುತ್ತೀರಿ. ಅದರಲ್ಲೂ ತಿಂಗಳಾ ತಿಂಗಳು ಬಾಡಿಗೆ ರೂಪದಲ್ಲಿ ನಿಗದಿತ ಆದಾಯ ಮಾಡಿಕೊಳ್ಳುವ ಕಡೆಗೆ ಗಮನ ಇರಲಿದೆ.
ನಿರ್ಭಾವುಕ ನಿರ್ಧಾರ ತೆಗೆದುಕೊಳ್ಳಬೇಕು, ಯಾರನ್ನೂ ಹಚ್ಚಿಕೊಳ್ಳಬಾರದು ಎಂದುಕೊಳ್ಳಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮಿಂದ ನಿರೀಕ್ಷೆ ಮಾಡುತ್ತಿರುವುದು ತಲುಪಲು ಸಾಧ್ಯ ಇಲ್ಲದಷ್ಟು ಎತ್ತರದಲ್ಲಿದೆ ಎಂದೆನಿಸುವುದಕ್ಕೆ ಶುರು ಆಗಲಿದೆ. ನೀವು ಒಪ್ಪಿಸಿದ ಕೆಲಸ- ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುವುದಾಗಿ ಮಾತು ನೀಡಿದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಾಗುತ್ತಿಲ್ಲ ಎನ್ನುವುದರಿಂದ ನೀವು ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತೀರಿ. ಪ್ರಯಾಣಕ್ಕೆ ಹೆಚ್ಚು ಖರ್ಚು ಮಾಡುವ ಯೋಗ ಇದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂಬ ನಿಮ್ಮ ಬದ್ಧತೆಗೆ ಸ್ನೇಹಿತರು- ಸಂಬಂಧಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ಇತರರು ತಮ್ಮಿಂದ ಆಗದು ಎಂದು ಅರ್ಧಕ್ಕೇ ನಿಲ್ಲಿಸಿದಂಥ ಪ್ರಾಜೆಕ್ಟ್ ಅನ್ನು ನೀವು ಕೈಗೆತ್ತಿಕೊಂಡು, ಸಮಾಧಾನ ಆಗುವ ಮಟ್ಟಕ್ಕೆ ಪೂರ್ಣ ಮಾಡಲಿದ್ದೀರಿ. ಹಣಕಾಸಿನ ವಿಚಾರವನ್ನು ಆರಂಭದಲ್ಲಿಯೇ ಮಾತನಾಡಿಕೊಳ್ಳುವುದಕ್ಕೆ ದಾಕ್ಷಿಣ್ಯ ಮಾಡಿಕೊಳ್ಳಬೇಡಿ.
ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಧ್ರುವ, ಕರಣ : ಕೌಲವ, ಸೂರ್ಯೋದಯ – 06 – 45 am, ಸೂರ್ಯಾಸ್ತ – 06 – 00 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08:10 – 09:34, ಯಮಗಂಡ ಕಾಲ 10:59 – 12:23, ಗುಳಿಕ ಕಾಲ 13:47 – 15:12
ಮೇಷ ರಾಶಿ :ಇಂದು ಆತ್ಮವಿಶ್ವಾಸ ಹೆಚ್ಚಾಗಿ ಕಾಣಿಸುತ್ತದೆ. ಹೊಸ ಕಾರ್ಯಗಳನ್ನು ಆರಂಭಿಸಲು ಸೂಕ್ತ ದಿನ. ಆದರೆ ತ್ವರಿತ ನಿರ್ಧಾರಗಳು ಕೆಲವೊಮ್ಮೆ ಅಸಮಾಧಾನ ಉಂಟುಮಾಡಬಹುದು. ಸ್ತ್ರೀಯರು ಸಂತೋಷದಿಂದ ದಿನ ಕಳೆಯುವಿರಿ. ಸಹೋದರರ ಪಾಲಿಗೆ ಬಂದ ಆಸ್ತಿಯು ನಿಮಗೆ ಸಿಗುವ ಸಾಧ್ಯತೆ ಇದೆ. ನಿಮಗೆ ಇಂದು ಧಾರ್ಮಿಕ ಕಾರ್ಯದಲ್ಲಿ ತೃಪ್ತಿಯು ಸಿಗಲಿದೆ. ಸಂಗಾತಿಯ ಪ್ರೀತಿಯಿಂದ ನಿಮಗೆ ಅಚ್ವರಿಯಾಗಬಹುದು. ನೌಕರರಿಗೆ ಇಂದು ನಿಮ್ಮಿಂದ ಅನಿರೀಕ್ಷಿತ ಸಂತಸ ಸಿಗಲಿದೆ. ಸಂತೋಷದ ನಡುವೆ ಯಾರನ್ನೂ ಬೇಸರಿಸುವುದು ಬೇಡ. ನಿಮ್ಮ ಅಧ್ಯಾತ್ಮ ಜೀವನದಿಂದ ಪ್ರಭಾವಿತರಾಗುವರು. ಅತಿಯಾದ ಭೋಜನದಿಂದ ಕಷ್ಟವಾದೀತು. ಕುಟುಂಬದವರ ಮಾತಿಗೆ ಮೌಲ್ಯ ನೀಡಿದರೆ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗುತ್ತವೆ. ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸುವುದು ಒಳಿತು. ಮನೆಯ ಗಂಭೀರ ವಿಚಾರವನ್ನು ಲಘುವಾಗಿ ತೆಗೆದುಕೊಳ್ಳುವುದು ಬೇಡ. ವಿದ್ಯಾರ್ಥಿಗಳಿಗೆ ಸಾಲಬಾಧೆ ತಟ್ಟುವ ಸಾಧ್ಯತೆ ಇದೆ.
ವೃಷಭ ರಾಶಿ :ಹಣಕಾಸಿನ ವಿಷಯಗಳಲ್ಲಿ ಸ್ಥಿರತೆ ಕಂಡುಬರುತ್ತದೆ. ಹಳೆಯ ಪ್ರಯತ್ನಗಳಿಗೆ ಇಂದು ಫಲ ದೊರಕುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಹನಶೀಲತೆ ಮೆಚ್ಚುಗೆ ಪಡೆಯುತ್ತದೆ. ಸ್ವಯಂ ಕೃತ ತಪ್ಪಿನಿಂದ ಪಶ್ಚಾತ್ತಾಪ ಪಡಬೇಕಾಗುವುದು. ನಿಮ್ಮ ಏಳ್ಗೆಯನ್ನು ಇತರರು ಸಹಿಸಿಕೊಳ್ಳುವುದು ಕಷ್ಟವಾಗುವುದು. ಯಾರ ಬಗ್ಗೆಯೂ ಸಲ್ಲದ ಮಾತನಾಡಿ ಸಿಕ್ಕಿಕೊಳ್ಳುವಿರಿ. ಸ್ವಯಂ ಕೃತ ಅಪರಾಧದಿಂದ ಪಶ್ಚಾತ್ತಾಪವಾಗುವುದು. ಸಂಗಾತಿಯ ವಿಷಯದಲ್ಲಿ ನಿಮಗೆ ಸಮಾಧಾನ ಇರದು. ನಿಮ್ಮ ಬಾಲಿಶ ಮಾತುಗಳಿಂದ ಇತರರು ನಕ್ಕಾರು. ಕ್ರೀಡೆಯಲ್ಲಿ ಉತ್ಸಾಹವು ತೋರಿ, ಗೆಲ್ಲುವಿರಿ. ಮನೆಯಲ್ಲಿ ಇಂದು ಸ್ನೇಹ ಕೂಟವು ಏರ್ಪಡುವುದು. ಅನಗತ್ಯ ಖರ್ಚು ತಪ್ಪಿಸಿದರೆ ಭವಿಷ್ಯದಲ್ಲಿ ಲಾಭ. ದೈಹಿಕ ಶ್ರಮದ ಅನಂತರ ವಿಶ್ರಾಂತಿ ಅಗತ್ಯ. ನಿಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವಿರಿ. ಕಛೇರಿಯ ವ್ಯವಹಾರವನ್ನು ಮನೆಯಲ್ಲಿ ಚರ್ಚಿಸುವುದು ಬೇಡ. ಸನ್ನಿವೇಶವನ್ನು ಎದುರಿಸುವುದು ಕಷ್ಟವಾಗಲಾರದು. ನಿಮ್ಮ ಸ್ವೇಚ್ಛೆಗೆ ಭಂಗವಾಗುವುದನ್ನು ನೀವು ಸಹಿಸಲಾರಿರಿ.
ಮಿಥುನ ರಾಶಿ :ಸಂಭಾಷಣೆ ಮತ್ತು ಸಂಪರ್ಕಗಳು ಇಂದು ನಿಮ್ಮ ಕಾರ್ಯಕ್ಕೆ ಶಕ್ತಿಯಾಗುತ್ತವೆ. ಹೊಸ ಪರಿಚಯಗಳಿಂದ ಉಪಯುಕ್ತ ಮಾಹಿತಿ ಸಿಗುತ್ತದೆ. ಆದರೆ ಅತಿಯಾಗಿ ಮಾತನಾಡುವುದರಿಂದ ತಪ್ಪು ಅರ್ಥಗಳಾಗುವ ಸಾಧ್ಯತೆ ಇದೆ. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು. ದೂರಪ್ರಯಾಣವು ಆಯಾಸವನ್ನು ಕೊಡಬಹುದು. ಯಾರನ್ನೋ ಮೆಚ್ಚಿಸಿ ಪ್ರಯೋಜನವಾಗದು. ಸಂಶೋಧನೆಯ ಮನಸ್ಸಿನಲ್ಲಿ ಇದ್ದರೆ ಹೊಸ ವಿಷಯವು ನಿಮ್ಮ ಮನಸ್ಸಿಗೆ ಬರಬಹುದು. ಆರ್ಥಿಕತೆಯು ದುರ್ಬಲವಾದ ಕಾರಣ ಆತಂಕವು ಉಂಟಾಗಬಹುದು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು. ಕಾರ್ಯಗಳಲ್ಲಿ ಏಕಾಗ್ರತೆ ಕಾಪಾಡಿಕೊಳ್ಳಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಪ್ರಗತಿ ಸೂಚನೆ. ಆಪತ್ಕಾಲಕ್ಕಾಗಿ ಕೂಡಿಟ್ಟ ಹಣವು ಇಂದು ಖರ್ಚು ಮಾಡಬೇಕಾಗುವುದು. ಭವಿಷ್ಯದ ಬಗ್ಗೆ ಅಸ್ಪಷ್ಟತೆ ಇರುವ ಕಾರಣ ಮನಸ್ಸಿಗೆ ಕಿರಿಕಿರಿ ಇರುವುದು.
ಕರ್ಕಾಟಕ ರಾಶಿ :ಇಂದು ಮನಸ್ಸು ಸ್ವಲ್ಪ ಭಾವನಾತ್ಮಕವಾಗಿರುತ್ತದೆ. ಕುಟುಂಬ ಸಂಬಂಧಗಳು ಹೆಚ್ಚು ಮಹತ್ವ ಪಡೆಯುತ್ತವೆ. ಮನೆಯ ವಿಷಯಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಕಾಣಬಹುದು. ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಿಲ್ಲ. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು. ಅಧ್ಯಾತ್ಮದಿಂದ ಸುಖ ಸಿಗಲಿದೆ. ದುರಭ್ಯಾಸದ ಕಾರಣ ಮರ್ಯಾದಿಯನ್ನು ಕಳೆದುಕೊಳ್ಳಬೇಕಾದೀತು. ಮಹಿಳೆಯರಿಗೆ ಸಹಾಯ ಮಾಡಲು ಹೋಗಿ ಅಪವಾದಕ್ಕೆ ಸಿಕ್ಕುವಿರಿ. ನಿಮ್ಮ ನಿರುದ್ಯೋಗಕ್ಕೆ ಸೂಕ್ತ ಪರಿಹಾರ ಸಿಗಲಿದೆ. ವಿನೋದದ ಮಾತುಗಳು ಇತರರಿಗೆ ಅಚ್ಚರಿ ತರಬಹುದು. ಅನಿರೀಕ್ಷಿತವಾಗಿ ಇಂದು ಮನೆಯಲ್ಲಿಯೇ ಕಛೇರಿಯ ಕಾರ್ಯವನ್ನು ಮಾಡಬೇಕಾಗುವುದು. ನಿಮ್ಮ ವ್ಯಕ್ತಿತ್ವವು ಗೌರವವನ್ನು ಹೆಚ್ಚಿಸುವುದು. ಹಳೆಯ ನೆನಪುಗಳು ಮನಸ್ಸನ್ನು ಕಾಡಬಹುದು. ಧ್ಯಾನದಿಂದ ಮನಶ್ಶಾಂತಿ ಲಭ್ಯ. ಆರೋಗ್ಯದ ಕಡೆ ನಿರ್ಲಕ್ಷ್ಯ ಬೇಡ. ಸ್ವತಂತ್ರ ಆಲೋಚನೆಯು ನಿಮಗೆ ಉಪಯುಕ್ತವಾಗಲಿದೆ.
ಸಿಂಹ ರಾಶಿ :ನಿಮ್ಮ ನಾಯಕತ್ವ ಗುಣಗಳು ಇಂದು ಬೆಳಕಿಗೆ ಬರುತ್ತವೆ. ಕೆಲಸದ ಸ್ಥಳದಲ್ಲಿ ಗೌರವ ಹಾಗೂ ಪ್ರಶಂಸೆ ದೊರೆಯುವ ಸಾಧ್ಯತೆ ಇದೆ. ಆದರೆ ಹಠದಿಂದ ಸಂಬಂಧಗಳಲ್ಲಿ ದೂರವುಂಟಾಗಬಹುದು. ವಾಹನವನ್ನು ಚಲಿಸುವಾಗ ಯಾವದೇ ಒತ್ತಡವನ್ನು ಇಟ್ಟುಕೊಳ್ಳುವುದು ಬೇಡ. ನೆರ ಮನೆಯವರ ವರ್ತನೆಯಿಂದ ನೀವು ಸಿಟ್ಟಾಗುವಿರಿ. ಅಧ್ಯಾತ್ಮ ಸಾಧನೆಯ ಕಡೆ ನಿಮ್ಮ ಮನಸ್ಸು ಇರಲಿದೆ. ವಾಹನವನ್ನು ಚಲಿಸುವಾಗ ಒತ್ತಡವನ್ನು ಇಟ್ಟುಕೊಳ್ಳುವುದು ಬೇಡ. ಬಂಧುಗಳ ಜೊತೆಗಿನ ಕಹಿ ಅನುಭವವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ಬೇಡ. ಚರಾಸ್ತಿಗಳನ್ನು ನಷ್ಟ ಮಾಡಿಕೊಳ್ಳಬೇಕಾಗುವುದು. ನಿಮಗೆ ಯಾರಾದರೂ ದಾನಕ್ಕೆ ಯೋಗ್ಯರಾದವರು ಅನ್ನಿಸಿದವರಿಗೆ ದಾನವನ್ನು ಮಾಡಿ. ಸಾಲವಾಗಿ ನೀಡಿದ ಹಣವನ್ನು ಮತ್ತೆ ಬರುವುದು ಕಷ್ಟವಾದೀತು. ಸಂಗಾತಿಯನ್ನು ನಿರ್ಲಕ್ಷಿಸಿದಂತೆ ತೋರುವುದು. ಸಹೋದ್ಯೋಗಿಗಳ ಸಹಕಾರ ಸ್ವೀಕರಿಸಿ. ನಿರೀಕ್ಷಿತ ವೇಳೆಗೆ ಸಂತೋಷದ ಸುದ್ದಿ ಕೇಳುವ ಸೂಚನೆ.
ಕನ್ಯಾ ರಾಶಿ :ಪೂರ್ವನಿಯೋಜಿತವಾಗಿ ಕೆಲಸ ಮಾಡಿದರೆ ಉತ್ತಮ ಫಲ ಸಿಗುತ್ತದೆ. ಸಣ್ಣ ಅಡೆತಡೆಗಳು ಬಂದರೂ ನಿಮ್ಮ ವಿವೇಕದಿಂದ ಅವನ್ನು ಜಯಿಸುತ್ತೀರಿ. ಆರೋಗ್ಯ ಸಂಬಂಧಿತ ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಇಂದು ಬಿಡಲಾಗದ ದುಶ್ಚಟಗಳು ನಿಮ್ಮ ವ್ಯಕ್ತಿತ್ವವನ್ನು ಘಾಸಿಗೊಳಿಸಬಹುದು. ವಾಹನ ಖರೀದಿಯ ಬಗ್ಗೆ ಮನೆಯಲ್ಲಿ ಪೂರ್ಣ ಬೆಂಬಲ ಇರುವುದು. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ. ಕಳ್ಳರ ಭೀತಿಯು ಇರಲಿದೆ. ದೇಹವು ವಾತದಿಂದ ತೊಂದರೆಗೆ ಸಿಲುಕಬಹುದು. ಧಾರ್ಮಿಕ ಆಚರಣೆಗೆ ಇನ್ನೊಬ್ಬರಿಂದ ಪ್ರೇರಣೆ ಪಡೆಯುವಿರಿ. ಸ್ತ್ರೀಯರು ನಿಮ್ಮನ್ನು ಮೆಚ್ಚಿಕೊಳ್ಳುವರು. ನಿಮ್ಮ ಲಾಭದ ಉದ್ಯಮದ ಮೇಲೆ ಕೆಟ್ಟ ದೃಷ್ಟಿ ಬೀಳಬಹುದು. ಯಾರಿಗಾದರೂ ನಿಮ್ಮಿಂದ ನೆರವಾಗಬಹುದು. ಆರೋಗ್ಯವು ಚೆನ್ನಾಗಿ ಇರಲಿದ್ದು ಮಾನಸಿಕವಾದ ನೆಮ್ಮದಿಯು ಇರುವುದು. ಹಣಕಾಸಿನಲ್ಲಿ ಲೆಕ್ಕಾಚಾರ ಅಗತ್ಯ. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ.
ತುಲಾ ರಾಶಿ :ಉದ್ಯೋಗಿಗಳನ್ನು ಸಮತೋಲನದಿಂದ ಕೊಂಡೊಯ್ಯುವುದು ಇಂದು ಮುಖ್ಯವಾಗಿರುತ್ತದೆ. ಸಂಬಂಧಗಳಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಹೆಚ್ಚಾಗುತ್ತದೆ. ಹಣಕಾಸಿನ ವಿಚಾರದಲ್ಲಿ ತೀರ್ಮಾನ ಮಾಡುವ ಮೊದಲು ಯೋಚನೆ ಅಗತ್ಯ. ನಿಮ್ಮ ಮಕ್ಕಳ ಬಾಂಧವ್ಯದಿಂದೆ ನಿಮಗೆ ಅಗಲಿಕೆ ಕಷ್ಟವಾದೀತು. ಸಹೋದ್ಯೋಗಿಗಳನ್ನು ಅನೌಪಚಾರಿಕವಾಗಿ ಭೇಟಿಯಾಗುವಿರಿ. ಭೂಮಿಯ ವ್ಯವಹಾರವು ನಿಮಗೆ ಹಿನ್ನಡೆಯಾಗಬಹುದು. ಓಡಾಟದಿಂದ ಸಮಯ ವ್ಯರ್ಥ ಮಾಡುವಿರಿ. ಸ್ಥಾನಮಾನವನ್ನು ಕಳೆದುಕೊಳ್ಳುವ ಸನ್ನಿವೇಶವು ಬರಬಹುದು. ನಿಮ್ಮ ತ್ಯಾಗವು ಬಹಳ ದೊಡ್ಡದೆನಿಸಬಹುದು. ಉದ್ಯೋಗವೇ ಸಾಕು ಎಂದು ಅನ್ನಿಸುವಷ್ಟು ಹಿಂಸೆಯನ್ನು ಮನಸ್ಸಿನಲ್ಲಿ ಅನುಭವಿಸುವಿರಿ. ಹೊಸ ಮನೆಗೆ ಸ್ಥಳಾಂತರ ಮಾಡಿಕೊಳ್ಳುವಿರಿ. ಕಲೆ ಅಥವಾ ಸೌಂದರ್ಯ ಸಂಬಂಧಿತ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಸಂಗಾತಿಯು ನಿಮ್ಮಿಂದ ಏನನ್ನೋ ಮುಚ್ಚಿಡುತ್ತಾನೆ ಎಂದು ಅನ್ನಿಸಬಹುದು.
ವೃಶ್ಚಿಕ ರಾಶಿ :ಕೆಲವರ ಮಾತಿನಿಂದ ಆಂತರಿಕ ಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ರಹಸ್ಯ ವಿಚಾರಗಳಲ್ಲಿ ಎಚ್ಚರಿಕೆ ಅಗತ್ಯ. ಅತಿಯಾಗಿ ಸಂಶಯ ಪಡುವುದು ಸಂಬಂಧಗಳಿಗೆ ಹಾನಿ ಮಾಡಬಹುದು. ಬೇರೆಯವರ ಮುಖಾಂತರ ಪುಣ್ಯಸ್ಥಳಗಳಿಗೆ ಹೋಗಿಬರುವಿರಿ. ನೀವು ನೋಡಲಷ್ಟೇ ಸುಂದರವಗಿದ್ದರೆ ಸಾಲದು. ಎಲ್ಲ ಕಡೆಯಿಂದ ನಿಮಗೆ ಅನುಕೂಲವಾಗಬೇಕು ಎಂದುಕೊಳ್ಳುವುದು ಬೇಡ. ಅನಿಶ್ಚಿತತೆಯು ನಿಮ್ಮ ಮೇಲೆ ದಟ್ಟವಾದ ಪ್ರಭಾವವನ್ನು ಬೀರಬಹುದು. ಅಮೂಲ್ಯವಾದ ಸಂಪತ್ತು ಅಥವಾ ಸಂಬಂಧವನ್ನು ಕಳೆದುಕೊಳ್ಳಬೇಕಸದೀತು. ಕುಟುಂಬದಲ್ಲಿ ಪರಸ್ಪರ ಪ್ರೀತಿಯು ತೋರುವುದು. ಪ್ರಯಾಣದಿಂದ ಪ್ರಯಾಸವಾಗಲಿದೆ. ಹೊಸ ವ್ಯವಹಾರದ ಬಗ್ಗೆ ನಿಮಗೆ ಆಪ್ತರ ಸಲಹೆಯು ಸಿಗಲಿದೆ. ಧಾರ್ಮಿಕ ಅಥವಾ ಆಧ್ಯಾತ್ಮಿಕ ಚಿಂತನೆ ಮನಸ್ಸಿಗೆ ಶಾಂತಿ ನೀಡುತ್ತದೆ. ಆರೋಗ್ಯ ಸ್ಥಿರವಾಗಿರುತ್ತದೆ. ಹಣಕಾಸಿನ ಕಾರಣಕ್ಕೆ ನೀವು ಮೋಸ ಹೋಗಬಹುದು. ಹೊಸ ವಸ್ತ್ರವನ್ನು ಖರೀದಿಸಿ ಧರಿಸುವಿರಿ. ವಿದ್ಯಾರ್ಥಿಗಳಿಂದ ಸಿಗುವ ಯಶಸ್ಸನ್ನು ಹೃದಯದಲ್ಲಿ ಧರಿಸಿ.
ಧನು ರಾಶಿ :ನಿಮ್ಮ ಧೈರ್ಯ ಮತ್ತು ಉತ್ಸಾಹಕ್ಕೆ ಯಶಸ್ಸಿನ ದಾರಿಗೆ ಕರೆದೊಯ್ಯುವ ಸಾಮರ್ಥ್ಯ ಇರಲಿದೆ. ಆದರೆ ಮಾತಿನಲ್ಲಿ ಮಿತಿಯಿರಲಿ. ಸ್ನೇಹಿತರ ಸಹಕಾರದಿಂದ ಕೆಲಸಗಳು ಸುಗಮವಾಗುತ್ತವೆ. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವಿರಲಿದೆ. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ. ವಾಹನದಲ್ಲಿ ಸಣ್ಣ ಅಪಘಾತವಾಗಲಿದೆ. ಆಕಸ್ಮಿಕವಾಗಿ ವಿವಾಹ ಮಾತುಕತೆಗೆ ತಯಾರಿಯಾಗಬಹುದು. ಇನ್ನೊಬ್ಬರ ಬಗ್ಗೆ ದೋಷವನ್ನೇ ಹುಡುಕುತ್ತ ಕುಳಿತುಕೊಳ್ಳುವ ಬದಲು ಗುಣಗಳನ್ನು ಸ್ವೀಕರಿಸಿ ಸಖ್ಯ ಮಾಡಿಕೊಳ್ಳುವುದು ಉತ್ತಮ. ಉಪಕಾರದ ಸ್ಮರಣೆಯನ್ನು ನೀವು ಮಾಡಿಕೊಳ್ಳುವುದಿಲ್ಲ. ಮುಂಗೋಪವು ಸಂಬಂಧವನ್ನು ಹಾಳು ಮಾಡುವುದು. ಹೊಸ ಅವಕಾಶಗಳು ನಿಮ್ಮ ದಿಕ್ಕುಗಳು ನಿಮ್ಮ ದಿಕ್ಕನ್ನು ಬದಲಿಸಬಹುದು. ಹೊಸ ಕಲಿಕೆಯ ಸಾಧ್ಯತೆ ಇದೆ. ಸಂಗಾತಿಯ ಒರಟಾದ ಮಾತಿಗೆ ಉತ್ತರಕೊಡಲು ಹೋಗುವುದು ಬೇಡ. ನೀವು ವಹಿಸಿಕೊಂಡ ಕಾಮಗಾರಿಯ ಬಗ್ಗೆ ಪೂರ್ಣ ವಿಶ್ವಾಸ ಬರದು.
ಮಕರ ರಾಶಿ :ಹೊಣೆಗಾರಿಕೆಗಳು ಹೆಚ್ಚಾಗುವ ದಿನ. ಶ್ರಮ ಹೆಚ್ಚು ಇದ್ದರೂ ಅದರ ಫಲ ಖಂಡಿತ ಸಿಗುತ್ತದೆ. ಹಿರಿಯರ ಸಲಹೆ ಅನುಕೂಲಕರವಾಗಿರುತ್ತದೆ. ಬೇಕೆಂದೇ ಶಸ್ತ್ರಗಳಿಂದ ಘಾಸಿ ಮಾಡಿಕೊಳ್ಳುವಿರಿ. ಮನೆಯಲ್ಲಿ ಹರ್ಷದ ವಾತಾವರಣ ಇದ್ದು ಬಂಧುಗಳು ನಿಮ್ಮ ಜೊತೆಗಿರುವಿರು. ಸರಳವಾದ ನಿಮ್ಮ ವ್ಯಕ್ತಿತ್ವಕ್ಕೆ ಯಾರೂ ಮನಸೋಲುವರು. ಕರ್ತವ್ಯವನ್ನು ನಿಷ್ಠೆಯಿಂದ ಮಾಡುವಿರಿ. ಪ್ರೀತಿಗೆ ಮಿತ್ರರಿಂದ ಸಹಕಾರವು ಇರುವುದು. ಸ್ನೇಹ ಸಂಬಂಧವನ್ನು ಹೆಚ್ಚು ಆಪ್ತ ಎನಿಸುವುದು. ಮೋಹದಿಂದ ಸತ್ಯವನ್ನು ಅರಿತುಕೊಳ್ಳಲಾಗದು. ಅಪೇಕ್ಷಿಸದಿದ್ದರೂ ನಿಮ್ಮ ಪರಿಶ್ರಮಕ್ಕೆ ಯೋಗ್ಯವಾದ ಗೌರವವು ಸಿಗುವುದು. ಕೆಟ್ಟ ಕೆಲಸಕ್ಕೆ ಯಾರಾದರೂ ಪ್ರೇರಣೆ ಕೊಡಬಹುದು. ದುರಭ್ಯಾಸವು ನಿಮಗೆ ಬೇಡವೆನಿಸುವುದು. ಸಂಗಾತಿಯ ಮೇಲೇ ಪ್ರೀತಿಯು ಹೆಚ್ಚಾಗಿ ಅದನ್ನು ಹೇಳಿಕೊಳ್ಳಲು ಸಂಕೋಚಪಡುವಿರಿ. ನಿಮಗೆ ಏಕಾಂಗಿಯಂತೆ ಅನ್ನಿಸಬಹುದು. ಹಣಕಾಸಿನ ವಿಷಯದಲ್ಲಿ ನಿಧಾನ ನಿರ್ಧಾರ ಉತ್ತಮ. ಆರೋಗ್ಯದ ಕಡೆ ಸ್ವಲ್ಪ ಗಮನ ನೀಡಿದರೆ ದಿನ ಸುಗಮವಾಗಿ ಸಾಗುತ್ತದೆ.
ಕುಂಭ ರಾಶಿ :ವಿಭಿನ್ನ ಚಿಂತನೆಗಳಿಗೆ ಬೆಂಬಲ ದೊರೆಯುತ್ತದೆ. ಸ್ನೇಹ ವಲಯ ವಿಸ್ತಾರವಾಗುವ ಸಾಧ್ಯತೆ ಇದೆ. ತಾಂತ್ರಿಕ ಅಥವಾ ಸೃಜನಶೀಲ ಕಾರ್ಯಗಳಲ್ಲಿ ಯಶಸ್ಸು. ಇಂದು ಎಲ್ಲೇ ಇದ್ದರೂ ಕಾರ್ಯದ ಪ್ರಗತಿಯನ್ನು ಪಡೆದುಕೊಳ್ಳುವಿರಿ. ಒಂದೇ ಉದ್ದೇಶ ಹೊಂದಿದ ಹಲವರನ್ನು ಭೇಟಿ ಮಾಡುವಿರಿ. ಯಾರೊಂದಿಗೂ ಮುಕ್ತವಾಗಿ ಮಾತನಾಡಲು ಆಗದು. ಕೆಲವು ಸನ್ನಿವೇಶವು ನಿಮಗೆ ಇಷ್ಟವಾಗದು. ಅದರೂ ಅನಿವಾರ್ಯ ಎನಿಸೀತು. ಕೋಪವನ್ನು ಬಿಟ್ಟೆನೆಂದರೂ ಮತ್ತೆ ಹೇಗಾದರೂ ನಿಮ್ಮ ಬಳಿ ಬರುವುದು. ಯಾವುದಾದರೂ ರೀತಿಯಲ್ಲಿ ಮತ್ತೆ ನಿಮ್ಮನ್ನು ಸೇರಿಕೊಳ್ಳುವುದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ. ಸಮಾಧಾನದ ಚಿತ್ತವು ಅನೇಕ ವಿಚಾರಕ್ಕೆ ಪೂರಕ. ನಿದ್ರೆಯ ಕೊರತೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ. ಸಮಯ ನಿರ್ವಹಣೆ ಮುಖ್ಯ. ಸುಮ್ಮನೇ ವಾಗ್ವಾದವನ್ನು ಮಾಡಲು ಹೋಗಿ ಸಮಯವನ್ನು ಹಾಗೂ ಇತರರ ಸಮಯವನ್ನೂ ಹಾಳು ಮಾಡುವಿರಿ. ಹಲವರ ಕಾರಣದಿಂದ ನಿಮ್ಮ ಗುರಿಯು ಬದಲಾಗಬಹುದು. ಹೃದಯ ವೈಶಾಲ್ಯವನ್ನು ತೋರಿಸುವಿರಿ.
ಮೀನ ರಾಶಿ :ಸಹಾನುಭೂತಿ ಇಂದು ನಿಮ್ಮ ಪ್ರಮುಖ ಗುಣವಾಗಿರುತ್ತದೆ. ಕಲಾತ್ಮಕ ಅಥವಾ ಸೃಜನಶೀಲ ಕಾರ್ಯಗಳಲ್ಲಿ ಮನಸ್ಸು ತೊಡಗುತ್ತದೆ. ನಿಮ್ಮನ್ನು ಕಂಡರೆ ಆಗದವರ ಎದುರೇ ನೀವು ಗರ್ವದಿಂದ ಇರುವಿರಿ. ನೀವು ಇಂದು ಅಕಾರಣವಾಗಿ ಚಿಂತೆ ಮಾಡುವಿರಿ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದ್ದು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ಮಾಡಲು ಸರಿಯಾದ ವ್ಯಕ್ತಿಗಳು ಸಿಗುವರು. ಕಾರ್ಯದಲ್ಲಿ ಶ್ರದ್ಧೆಯಿರುವ ಕಾರಣ ಅನ್ಯ ಆಲೋಚನೆಯನ್ನು ಮಾಡಲಾರಿರಿ. ನಿಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಹರಡುವುದು. ಇಂದು ಸೌಂದರ್ಯಕ್ಕೆ ಬೆಲೆ ಕೊಡುವಿರಿ. ನಿಮ್ಮಿಂದ ಉಪಕಾರವನ್ನು ಪಡೆದವರೇ ನಿಮ್ಮ ಶತ್ರುಗಳಾದಾರು. ಸಂಬಂಧಗಳಲ್ಲಿ ಭಾವನಾತ್ಮಕ ಬಾಂಧವ್ಯ ಗಟ್ಟಿಯಾಗುತ್ತದೆ. ಅನಾವಶ್ಯಕ ಚಿಂತೆ ಬಿಡಿ. ಆಧ್ಯಾತ್ಮಿಕ ಚಿಂತನೆ ಮನಸ್ಸಿಗೆ ಆಳವಾದ ಶಾಂತಿ ನೀಡುತ್ತದೆ. ನಿಮ್ಮ ಬಗ್ಗೆ ನಿಮಗೇ ನಂಬಿಕೆ ಕಡಿಮೆ ಆಗಬಹುದು. ಮುದುವಾದ ಮಾತು ಕೃತಕತೆಯಂತೆ ತೋರಬಹುದು. ನೀವೊಬ್ಬ ಸುಳ್ಳುಗಾರರೆನ್ನುವಂತೆ ಇತರರು ಬಿಂಬಿಸುವರು. ಬಂಧುಗಳ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ.
ಹಾಸನ, (ಡಿಸೆಂಬರ್ 21): ಆತನಿಗೆ 68, ಆಕೆಗೆ 58 ವರ್ಷ. ಬದುಕಿನ ಸಂಧ್ಯಾಕಾಲದಲ್ಲಿ ಅವರು ಒಂದಾಗಿದ್ದಾರೆ. ಒಂಟಿಯಾಗಿದ್ದ ಇಬ್ಬರು ಹೊಸಜೀವನ ಆರಂಭಿಸಿದ್ದಾರೆ. ಹೌದು..ಹಾಸನ (Hassan) ಜಿಲ್ಲೆ ಹೊಳೆನರಸೀಪುರ ತಾಲೂಕಿನ ಗಾಳಿಪುರದ 68 ವರ್ಷದ ರಾಜಣ್ಣ ಅವರು ಕಿತ್ತಾನೆಗಡಿಯ 58 ವರ್ಷದ ಗೀತಾಳನ್ನ ಎರಡನೇ ಮದುವೆಯಾಗಿದ್ದಾರೆ (Second Marriage). ಆದ್ರೆ, ವೃದ್ಧ ನವವಿವಾಹಿತರಿಗೆ ಮಕ್ಕಳೇ ಕಂಟಕವಾಗಿದ್ದು, ಇಳಿವಯಸ್ಸಿಯನಲ್ಲಿ ಎರಡನೇ ಮದುವೆ ಮಾಡಿಕೊಂಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ದಂಪತಿ ಇದೀಗ ರಕ್ಷಣೆಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮಗನ ಕಾಟಕ್ಕೆ ಮಚ್ಚು ಹಿಡಿದ ಅಪ್ಪ!
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಗಾಳಿಪುರದ ರಾಜಣ್ಣನಿಗೆ 40 ವರ್ಷಗಳ ಹಿಂದೆಯೇ ಮದುವೆಯಾಗಿದ್ದು. ಎರಡು ಹೆಣ್ಣ ಮಕ್ಕಳು ಹಾಗು ಓರ್ವ ಮಗ ಇದ್ದ ರಾಜಣ್ಣ ಚನ್ನಾಗಿ ದುಡಿಮೆ ಮಾಡಿದ್ದ ಕೂಲಿ ಮಾಡಿ ಮನೆ ಕಟ್ಟಿ, ಮನೆ ಸಮೀಪವೇ ಒಂದು ಫ್ಲೋರ್ ಮಿಲ್ ಮಾಡಿ ನೆಮ್ಮದಿಯಾಗಿದ್ದರು. ಆದ್ರೆ, 2 ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದರಿಂದ ರಾಜಣ್ಣ ಒಂಟಿಯಾಗಿದ್ದರು. ಬಳಿಕ ಸ್ನೇಹಿತರ ಸಲಹೆ ಮೇರೆಗೆ, ಹಾಸನದ ಕಿತ್ತಾನೆಗಡಿಯ 58 ವರ್ಷದ ಗೀತಾಳನ್ನ ಮದ್ವೆ ಆಗಿದ್ದಾರೆ. ಪತಿಯಿಂದ ದೂರಾಗಿದ್ದ ಗೀತಾ, ರಾಜಣ್ಣ ಅವರ ಜತೆ ಇದೇ 17ರಂದು ವಿವಾಹವಾಗಿದ್ದಾರೆ. ಆದ್ರೆ, ಈಗ ರಾಜಣ್ಣನ 2ನೇ ಮದ್ವೆಗೆ ಪುತ್ರ ಕೆರಳಿದ್ದು, ಕಾಟ ಕೊಡ್ತಿದ್ದಾನಂತೆ. ಇದರಿಂದ ಮಗ ನನ್ನ ಮೇಲೆ ಹಲ್ಲೆ ಮಾಡ್ತಿದ್ದಾನೆಂದು ಮಚ್ಚು ಹಿಡಿದು ಹೊಳೆನರಸೀಪುರ ಠಾಣೆಗೆ ಬಂದ ರಾಜಣ್ಣ ರಕ್ಷಣೆ ಕೋರಿದ್ದಾರೆ.
ಹೊಳೆನರಸೀಪುರದ ಹೌಸಿಂಗ್ಬೋರ್ಡ್ನಲ್ಲಿ ಫ್ಲೋರ್ ಮಿಲ್ ನಡೆಸ್ತಿರುವ ರಾಜಣ್ಣ, ಎರಡ್ಮೂರು ಮನೆ ಕಟ್ಟಿ ಬಾಡಿಗೆಗೂ ಬಿಟ್ಟಿದ್ದಾರೆ. ಪತ್ನಿ ಅಗಲಿದ ಬಳಿಕ ಮಕ್ಕಳು ರಾಜಣ್ಣನ ಬಗ್ಗೆ ತಲೆಕೆಡಿಸಿಕೊಳ್ತಿಲ್ವಂತೆ. ಹೀಗಾಗಿ ರಾಜಣ್ಣ ಗೀತಾರನ್ನ ಮದ್ವೆ ಆಗಿದ್ದಾರೆ. ಆದ್ರೆ ಅಪ್ಪನ 2ನೇ ಮದ್ವೆಯಿಂದ ಆಸ್ತಿ ಪಾಲಾಗುತ್ತೆಂದು ಮಕ್ಕಳು ಕಾಟ ಕೊಡ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಪೊಲೀಸರು ತಮಗೆ ರಕ್ಷಣೆ ಕೊಡುತ್ತಿಲ್ಲ ಎಂದು ವೃದ್ಧ ದಂಪತಿ ಅಳಲು ತೋಡಿಕೊಂಡಿದ್ದಾರೆ.
ರಾಜಣ್ಣನ ಆರೋಪವೇನು?
ಈಗ ಎರಡು ವರ್ಷಗಳ ಹಿಂದೆ ಪತ್ನಿ ಮೃತಪಟ್ಟ ಬಳಿಕ ಹೆಣ್ನು ಮಕ್ಕಳಾಗಲಿ, ಗಂಡು ಮಗನಾಗಲಿ ತನ್ನನ್ನ ನೋಡಿಕೊಳ್ತಿಲ್ಲ. ಕೊನೆಗಾಲದಲ್ಲಿ ನನಗೆ ಯಾರು ಆಗುತ್ತಾರೆ ಎಂದು ಗೀತಾಳನ್ನು ಕೈ ಹಿಡಿದಿದ್ದೇನೆ. ಹಾಸನ ತಾಲ್ಲೂಕಿನ ಗೀತಾ ಅವರು ಈಗಾಗಲೇ ಮದುವೆಯಾಗಿದ್ದು, ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದಾರೆ. ಆದ್ರೆ, ಗಂಡನಿಂದ ದೂರವಾಗಿ ಕೂಲಿ ಮಾಡಿ ಜೀವನ ಮಾಡುತ್ತಿದ್ದವಳಿಗೆ ಒಂದು ಬಾಳು ಸಿಗಲಿ ಎಂದು ಹೊಳೆನರಸೀಪುರ ತಾಳ್ಲೂಕಿನ ಮಾವಿನಕೆರೆಯ ರಂಗನಾಥಸ್ವಾಮಿ ಬೆಟ್ಟದಲ್ಲಿ ಸತಿಪತಿಗಳಾಗಿದ್ದೇವೆ. ಆದ್ರೆ, ನೆಮ್ಮದಿ ಜೀವನ ಮಾಡಲು ಮಕ್ಕಳು ಬಿಡುತ್ತಿಲ್ಲ.
ನನ್ನ ಆಸ್ತಿ ಈ ಮಹಿಳೆ ಪಾಲಾಗುತ್ತೆ ಎಂದು ಮಕ್ಕಳು ತೊಂದರೆ ಕೊಡುತ್ತಿದ್ದಾರೆ. ಅಲ್ಲದೇ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇತ್ತ ಮಕ್ಕಳು ತಂದೆಯೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪ್ರತಿದೂರು ನೀಡಿದ್ದಾರೆ. ಸದ್ಯ ಎರಡೂ ಕಡೆಯ ದೂರು ಸ್ವೀಕರಿಸಿರುವ ಪೊಲೀಸರು ವಿಚಾರಣೆ ನಡಸಿದ್ದಾರೆ/ ಆದ್ರೆ ಈ ನಡುವೆ ತಮ್ಮ ಮೇಲೆ ದೌರ್ಜನ್ಯ ಮಾಡಲಾಗುತ್ತಿದೆ. ಪೊಲೀಸರು ತಮಗೆ ರಕ್ಷಣೆ ಕೊಡುತ್ತಿಲ್ಲ ಎಂದು ವೃದ್ಧ ದಂಪತಿ ವೀಡಿಯೋ ಮಾಡಿ ತಮಗೆ ರಕ್ಷಣೆ ನೀಡಿ ಎಂದು ಮೊರೆಯಿಟ್ಟಿದ್ದಾರೆ.
ಮಕ್ಕಳು, ಮೊಮ್ಮಕ್ಕಳು ಎಷ್ಟೇ ಇರಲಿ, ಪ್ರೀತಿ ತೋರದಿದ್ರೆ ಸಂಬಂಧಕ್ಕೆ ಅರ್ಥವೇ ಇರಲ್ಲ. ಇದನ್ನ ಅರ್ಥ ಮಾಡಿಕೊಂಡು ಮಕ್ಕಳು ನಡೆಯಬೇಕಿದೆ. ವೃದ್ಧ ದಂಪತಿಯ ಹೊಸ ಜೀವನಕ್ಕೂ ಪೊಲೀಸರು ರಕ್ಷಣೆ ನೀಡಬೇಕಿದೆ.
ಢಾಕಾ, ಡಿಸೆಂಬರ್ 21: ಷರೀಫ್ ಉಸ್ಮಾನ್ ಹದಿ ಹತ್ಯೆ ಬಳಿಕ ಬಾಂಗ್ಲಾದೇಶದಾದ್ಯಂತ ಉದ್ಭವಿಸಿರುವ ಹಿಂಸಾಚಾರ ಹಲವರನ್ನು ಬಲಿತೆಗೆದುಕೊಂಡಿದೆ. ಪ್ರತಿಭಟನಾಕಾರರ ಗುಂಪೊಂದು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿಯ ಮುಖಂಡ ಬಿಲಾನ್ ಹುಸೇನ್ (Belal Hossain) ಅವರ ಮನೆಗೆ ಕೊಳ್ಳಿ ಇಟ್ಟಿದ್ದಾರೆ. ಲಕ್ಷ್ಮೀಪುರ್ನಲ್ಲಿರುವ ಅವರ ಮನೆಗೆ ಬೆಂಕಿ ಇಟ್ಟ ಪರಿಣಾಮ, ಮನೆಯೊಳಗಿದ್ದ 7 ವರ್ಷದ ಬಾಲಕಿಯೊಬ್ಬಳು ಸಜೀವವಾಗಿ ಸುಟ್ಟುಹೋಗಿದ್ದಾಳೆ. ಬಿಲಾಲ್ ಹುಸೇನ್ ಹಾಗೂ ಅವರ ಇನ್ನಿಬ್ಬರು ಮಕ್ಕಳು ಪಾರಾದರೂ ಸುಟ್ಟ ಗಾಯಗಳಾಗಿವೆ.
ಶನಿವಾರ ಬೆಳಗಿನ ಜಾವ ಈ ಘಟನೆ ನಡೆದಿರುವುದು ತಿಳಿದುಬಂದಿದೆ. ಬಿಎನ್ಪಿ ಪಕ್ಷದ ನಾಯಕ ಬಿಲಾನ್ ಹುಸೇನ್ ಅವರ ಕುಟುಂಬ ಸದಸ್ಯರು ಮನೆಯೊಳಗೆ ಇರುವಾಗಲೇ ಪ್ರತಿಭಟನಾಕಾರರು ಮನೆಗೆ ಬೆಂಕಿ ಇಟ್ಟಿದ್ದಾರೆ. ಬಿಲಾಲ್ ಅವರ ಏಳು ವರ್ಷದ ಮಗಳಾದ ಆಯೇಶಾ ಅಖ್ತರ್ ಸುಟ್ಟ ಗಾಯಗಳಿಂದ ಅಸುನೀಗಿದ್ದಾಳೆ. ಬಿಲಾಲ್ ಅದೃಷ್ಟ ರೀತಿಯಲ್ಲಿ ಬದುಕುಳಿದಿದ್ದಾರೆ.
‘ಒಂದು ಮಗು ಮೃತಪಟ್ಟಿರುವುದು ಗೊತ್ತಾಗಿದೆ. ಮೂವರನ್ನು ರಕ್ಷಿಸಲಾಗಿದೆ. ಅವರಿಗೆ ಸುಟ್ಟ ಗಾಯಗಳಾಗಿವೆ ಎಂದು ಲಕ್ಷ್ಮೀಪುರ್ನ ಫೈರ್ ಸರ್ವಿಸ್ನ ರಜಿಂತ್ ಕುಮಾರ್ ಹೇಳಿದ್ದಾರೆ.
ಬಿಲಾಲ್ ಹುಸೇನ್ ಅವರು ಬದುಕುಳಿದಿದ್ದಾರೆ. ಅವರ ಜೊತೆ ಅವರ ಇಬ್ಬರು ಹೆಣ್ಮಕ್ಕಳಾದ 16 ವರ್ದ ಸಲ್ಮಾ ಅಖ್ತರ್ ಮತ್ತು 14 ವರ್ಷದ ಸಾಮಿಯಾ ಅಖ್ತರ್ ಅವರೂ ಬದುಕಿದ್ದಾರೆ. ಆದರೆ ಈ ಇಬ್ಬರು ಹೆಣ್ಮಕ್ಕಳಿಗೆ ತೀವ್ರ ರೀತಿಯಲ್ಲಿ ಸುಟ್ಟಗಾಯಗಳಾಗಿದ್ದು, ಗಂಭೀರ ಪರಿಸ್ಥಿತಿಯಲ್ಲಿದ್ದಾರೆ. ಅವರನ್ನು ಢಾಕಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಲಾನ್ ಹುಸೇನ್ ಅವರ ತಾಯಿ ನೀಡಿರುವ ಹೇಳಿಕೆ ಪ್ರಕಾರ, ದುಷ್ಕರ್ಮಿಗಳು ಮನೆಗೆ ಹೊರಗಿನಿಂದ ಬೀಗ ಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹೊತ್ತಿಸಿದ್ದಾರೆ.
ಶೇಖ್ ಹಸೀನಾ ಪ್ರಧಾನಿಯಾಗಿದ್ದಾಗ ದೇಶಾದ್ಯಂತ ಹಿಂಸಾಚಾರ ಹೊತ್ತಿಸಿದ್ದ ವಿದ್ಯಾರ್ಥಿ ಮುಖಂಡ ಷರೀಫ್ ಉಸ್ಮಾನ್ ಹದಿಯ ಮೇಲೆ ಆಗಂತುಕರು ಇತ್ತೀಚೆಗೆ ಗುಂಡಿನ ದಾಳಿ ಮಾಡಿದ್ದರು. ತಲೆಗೆ ಗುಂಡು ತಗುಲಿ ಗಾಯಗೊಂಡು ಆತ ಸಾವನ್ನಪ್ಪಿದ್ದಾನೆ. ಅದಾದ ಬಳಿಕ ದೇಶದಾದ್ಯಂತ ಹಿಂಸಾಚಾರಗಳು ಸಂಭವಿಸುತ್ತಿವೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss) ಮನೆಯಲ್ಲಿ ಕಳೆದ ವಾರ ಎಲಿಮಿನೇಷನ್ ನಡೆದಿಲ್ಲ. ಎಲಿಮಿನೇಷನ್ ಹೆಸರಲ್ಲಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಹೊರಗೆ ಕಳಿಸಿದ್ದ ಬಿಗ್ಬಾಸ್ ಅವರಿಬ್ಬರನ್ನೂ ಸೀಕ್ರೆಟ್ ರೂಂನಲ್ಲಿ ಇರಿಸಿ, ಅವರನ್ನೂ ಸಹ ಟಾಸ್ಕ್ನ ಒಂದು ಭಾಗವಾಗಿಸಿದ್ದರು. ನಿನ್ನೆ (ಶನಿವಾರ) ಎಪಿಸೋಡ್ನಲ್ಲಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಮರಳಿ ಮನೆಗೆ ಕರೆಸಿಕೊಂಡ ಬಿಗ್ಬಾಸ್ ಇದೀಗ ಈ ವಾರವೂ ಯಾವುದೇ ಎಲಿಮಿನೇಷನ್ ಮಾಡಿಲ್ಲ. ಬದಲಿಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿದ್ದವರನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ.
ಕೆಲ ವಾರಗಳ ಹಿಂದೆ ಉಗ್ರಂ ಮಂಜು, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಂ, ಮೋಕ್ಷಿತಾ ಅವರುಗಳು ಅತಿಥಿಗಳಾಗಿ ಬಂದಿದ್ದರು. ಒಂದು ವಾರಗಳ ನಂತರ ಉಗ್ರಂ ಮಂಜು, ತ್ರಿವಿಕ್ರಂ, ಮೋಕ್ಷಿತಾ ಮನೆಯಿಂದ ಹೊರಗೆ ಹೋದರು. ಆದರೆ ರಜತ್ ಹಾಗೂ ಚೈತ್ರಾ ಅವರನ್ನು ವೈಲ್ಡ್ ಕಾರ್ಡ್ ಎಂಟ್ರಿಗಳು ಎಂದು ಹೇಳಿ, ಇನ್ನು ಮುಂದೆ ಅವರೂ ಸಹ ನಿಮ್ಮೊಂದಿಗೆ ಸ್ಪರ್ಧೆಯಲ್ಲಿರುತ್ತಾರೆ ಎಂದು ಇತರೆ ಸ್ಪರ್ಧಿಗಳಿಗೆ ಹೇಳಿ ಮನೆಯಲ್ಲಿ ಉಳಿಸಲಾಗಿತ್ತು.
ರಜತ್ ಮತ್ತು ಚೈತ್ರಾ ಅವರುಗಳು ಸುಮಾರು ನಾಲ್ಕು ವಾರಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದರು. ಚೆನ್ನಾಗಿ ಆಟ ಆಡಿದ್ದಾರೆ. ಕೆಲವರ ವಿರೋಧ ಕಟ್ಟಿಕೊಂಡರು. ರಜತ್ ಅಂತೂ ಕಳೆದ ವಾರ, ‘ನಾನು, ಗಿಲ್ಲಿ ಹಾಗೂ ಇನ್ನಿತರರನ್ನು ಮನೆಯಿಂದ ಹೊರಗೆ ಹಾಕಿಯೇ ಈ ಮನೆ ಬಿಟ್ಟು ಹೋಗೋದು ಎಂದು ಅಬ್ಬರಿಸಿದ್ದರು. ಆದರೆ ಈ ವಾರ ಅವರೇ ಮನೆಯಿಂದ ಹೊರಗೆ ಹೋಗಿದ್ದಾರೆ.
ಸುದೀಪ್ ಅವರು ಈ ವಾರ ರಜತ್ ಮತ್ತು ಚೈತ್ರಾ ಅವರುಗಳನ್ನು ಮನೆಯಿಂದ ಹೊರಗೆ ಕರೆಸಿಕೊಂಡಿದ್ದಾರೆ. ರಜತ್ ಮತ್ತು ಚೈತ್ರಾ ಅವರುಗಳು ಸ್ಪರ್ಧಿಗಳಾಗಿರಲಿಲ್ಲ, ಅವರು ಅತಿಥಿಗಳೇ ಆಗಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿಗಳಾಗಿರಲಿಲ್ಲ ಎಂದರು ಸುದೀಪ್. ಆ ಇಬ್ಬರೂ ಯಾರ ಪದವಿಯನ್ನೂ ಕಿತ್ತುಕೊಳ್ಳಲು ಬಂದಿಲ್ಲ. ಇಬ್ಬರೂ ಸಹ ನಾವು ಕೇಳಿದ ಕೂಡಲೇ ಸಮಯ ಮಾಡಿಕೊಂಡು, ಕೆಲಸಗಳ್ನು ಬದಿಗೊತ್ತಿ ಮನೆಗೆ ಬಂದರು. ಮಾತ್ರವಲ್ಲದೆ, ಅವರು ಸ್ಪರ್ಧಿಗಳಲ್ಲ ಎಂಬುದು ಗೊತ್ತಿದ್ದರೂ ಸಹ ಅದನ್ನು ಎಲ್ಲಿಯೂ ಬಿಟ್ಟುಕೊಡದೆ ಎಲ್ಲರೊಟ್ಟಿಗೆ ಸೇರಿ ಆಟ ಆಡಿದರು. ನನ್ನಿಂದಲೂ ಸಹ ಪಾಪ ಕೆಲವೊಮ್ಮೆ ಬೈಸಿಕೊಂಡರು’ ಎಂದರು ಸುದೀಪ್.
ಅತಿಥಿಗಳಾಗಿ ಬಂದು ಬಿಗ್ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ, ಮನೆಯ ಸದಸ್ಯರೊಟ್ಟಿಗೆ ಆಟ ಆಡಿದ್ದಕ್ಕೆ ರಜತ್ ಮತ್ತು ಚೈತ್ರಾ ಅವರಿಗೆ ಧನ್ಯವಾದ ಹೇಳಿದರು ಸುದೀಪ್. ಹೋಗುವ ಸಮಯದಲ್ಲಿ ತುಸು ಭಾವುಕರಾದ ಚೈತ್ರಾ, ಸುದೀಪ್ ಎದುರು ಮಾತನಾಡುತ್ತಾ, ‘ಈ ಬಿಗ್ಬಾಸ್ ನನಗೆ ನನ್ನ ಜೀವನ ಮರಳಿ ಕೊಟ್ಟಿದೆ. ನಾನು ಸೋತಿದ್ದಾಗ ನನಗೆ ಮತ್ತೆ ವೇದಿಕೆ ಕೊಟ್ಟಿದೆ. ನಾನು ಮದುವೆ ಆಗಿ ಸುಮಂಗಲಿಯಾಗಿ ನಿಂತಿದ್ದೇನೆ ಎಂದರೆ ಅದಕ್ಕೆ ಬಿಗ್ಬಾಸ್ ಕಾರಣ’ ಎಂದರು.
ನವದೆಹಲಿ, ಡಿಸೆಂಬರ್ 21: ಜಗತ್ತಿನ ಎಲ್ಲಾ ಧರ್ಮಗಳನ್ನು ಯಾವುದೇ ಭೇದವಿಲ್ಲದೇ ಕುಟುಕುವ ಬಾಲಿವುಡ್ ಚಿತ್ರ ಸಾಹಿತಿ, ಕವಿ ಹಾಗೂ ವಿಚಾರವಂತರಾದ ಜಾವೇದ್ ಅಖ್ತರ್ (Javed Akhtar), ಮತ್ತೊಮ್ಮೆ ದೇವರ ಅಸ್ತಿತ್ವವನ್ನು ಪ್ರಶ್ನೆ ಮಾಡಿದ್ದಾರೆ. ದಿ ಲಲ್ಲನ್ಟಾಪ್ ಎನ್ನುವ ಯೂಟ್ಯೂಬ್ ಪೋಡ್ಕ್ಯಾಸ್ಟ್ನಲ್ಲಿ ಇಸ್ಲಾಮೀ ವಿದ್ವಾಂಸ ಮುಫ್ತಿ ಷಮಾಯಿಲ್ ನದ್ವಿ (Mufti Shamail Nadwi) ಮತ್ತು ಜಾವೇದ್ ಅಖ್ತರ್ ನಡುವೆ ದೇವರ ಅಸ್ತಿತ್ವ ವಿಚಾರ ಕುರಿತು ನಡೆದ ಚರ್ಚೆ ಸಾಕಷ್ಟು ಪ್ರತಿಕ್ರಿಯೆ ಪಡೆಯುತ್ತಿದೆ.
ಈ ವೇಳೆ, ಅಖ್ತರ್ ಅವರು ಪ್ಯಾಲೆಸ್ಟೀನ್ ಹಿಂಸೆಯ ಪರಿಸ್ಥಿತಿ ಉಲ್ಲೇಖಿಸಿ, ಆ ದೇವರಿಗಿಂತ ನರೇಂದ್ರ ಮೋದಿಯೇ ವಾಸಿ ಎಂದು ಈ ಡಿಬೇಟ್ನಲ್ಲಿ ವಾದಿಸಿದ್ದೂ ಉಂಟು. ದೇವರು ಅಸ್ತಿತ್ವದಲ್ಲಿದ್ದಾನಾ ಇಲ್ಲವಾ ಎಂಬುದು ಈ ಡಿಬೇಟ್ನ ಮುಖ್ಯ ವಿಷಯವಾಗಿತ್ತು. ಚರ್ಚೆಯ ವೇಳೆ, ಜಾವೇದ್ ಅಖ್ತರ್ ಅವರು ಗಾಜಾ ಸಂಘರ್ಷದ ಘಟನೆಗಳನ್ನು ಉಲ್ಲೇಖಿಸಿ ವಾದಿಸಿದರು.
‘ಇಸ್ರೇಲ್-ಪ್ಯಾಲೆಸ್ಟೀನ್ ಭಾಗದ ಗಾಜಾದಲ್ಲಿ 70,000 ಪ್ಯಾಲೆಸ್ಟೀನಿಯನ್ನರು ಬಲಿಯಾಗಿದ್ದಾರೆ. ನೀನು (ದೇವರು) ಸರ್ವಾಂತರ್ಯಾಮಿಯೇ ಆಗಿದ್ದರೆ ಗಾಜಾದಲ್ಲೂ ಇರಬೇಕು. ಅಲ್ಲಿ ಮಕ್ಕಳ ನರಮೇಧ ಆಗುತ್ತಿರುವುದನ್ನು ಕಂಡಿರಬೇಕು. ಆದರೂ ಸುಮ್ಮನಿದ್ದೀಯ ಎಂದರೆ ನಿನ್ನನ್ನು ಹೇಗೆ ನಂಬಲು ಸಾಧ್ಯ?’ ಎಂದು ಜಾವೇದ್ ಅಖ್ತರ್ ಹೇಳುತ್ತಾ, ಈ ವಾದಕ್ಕೆ ನರೇಂದ್ರ ಮೋದಿ ಅವರನ್ನೂ ಪ್ರಸ್ತಾಪಿಸಿದರು.
‘ಅದಕ್ಕೆ (ದೇವರು) ಹೋಲಿಸಿದರೆ ನಮ್ಮ ಪ್ರಧಾನಿಯೇ ಉತ್ತಮ ಎನಿಸುತ್ತದೆ. ಅವರು ನಮ್ಮಗಳ ಯೋಗಕ್ಷೇಮವನ್ನಾದರೂ ನೋಡಿಕೊಳ್ಳುತ್ತಾರೆ’ ಎಂದು ಜಾವೇದ್ ಅಖ್ತರ್ ಆ ಡಿಬೇಟ್ನಲ್ಲಿ ಹೇಳಿದರು.
‘ಈ ದೇವರ ವಿಷಯ ಬಂದರೆ ಯಾಕೆ ಎಲ್ಲವೂ ನಿಂತುಬಿಡುತ್ತದೆ? ನಾವು ಯಾಕೆ ಪ್ರಶ್ನಿಸೋದನ್ನೇ ನಿಲ್ಲಿಸಬೇಕು? ಮಕ್ಕಳ ಮೇಲೆ ಬಾಂಬ್ ಹಾಕಲು ಅನುಮತಿಸುವ ದೇವರು ಎಂಥವನು? ಅವನು ಅಸ್ತಿತ್ವದಲ್ಲಿದ್ದೂ ಇದಕ್ಕೆ ಅವಕಾಶ ಕೊಡುತ್ತಾನೆಂದರೆ ಹೇಗೆ’ ಎಂದು ಅಖ್ತರ್ ಪ್ರಶ್ನೆ ಮಾಡಿದರು.
ಜಾವೇದ್ ಅಖ್ತರ್ ಅವರ ತೀಕ್ಷ್ಣ ಪ್ರಶ್ನೆಗಳಿಗೆ ಇಸ್ಲಾಮೀ ಧರ್ಮಗುರು ಮುಫ್ತಿ ಷಮಾಯಿಲ್ ನದ್ವಿ ಒಂದಷ್ಟು ಸಮಾಧಾನದ ಉತ್ತರ ಕೊಡಲು ಯತ್ನಿಸಿದರು. ದೇವರಿಂದ ಕೆಟ್ಟದ್ದೂ ಸೃಷ್ಟಿಯಾಗಿದೆಯೇ ವಿನಃ ದೇವರೇ ಕೆಟ್ಟವನಲ್ಲ. ಜನರು ತಮಗೆ ಸಿಕ್ಕಿರುವ ಮುಕ್ತ ವಿವೇಚನೆಯನ್ನು ದುರ್ಬಳಕೆ ಮಾಡಿಕೊಳ್ಳುವವರು ದುರುಳರು. ಹಿಂಸಾಚಾರ, ಅತ್ಯಾಚಾರ ಇವೆಲ್ಲವೂ ಮನುಷ್ಯನ ಆಯ್ಕೆಯೇ ಹೊರತು ದೇವರ ಉದ್ದೇಶವಲ್ಲ ಎಂದು ಧರ್ಮಗುರು ವಾದಿಸಿದರು.
ತೆಲುಗು ಬಿಗ್ಬಾಸ್ (Bigg Boss) ಫಿನಾಲೆ ಇಂದು (ಡಿಸೆಂಬರ್ 21) ನಡೆದಿದೆ. ಬರೋಬ್ಬರಿ 106 ದಿನಗಳ ಶೋ ಇದಾಗಿದ್ದು, ಫಿನಾಲೆಗೆ ಕರ್ನಾಟಕದ ಇಬ್ಬರು ಸ್ಪರ್ಧಿಯರು ಬಂದಿದ್ದರು. ಈ ಕಾರಣಕ್ಕೆ ಈ ಬಾರಿಯ ತೆಲುಗು ಬಿಗ್ಬಾಸ್ ಗಮನ ಸೆಳೆದಿತ್ತು. ನಟಿ ಸಂಜನಾ ಗಲ್ರಾನಿ ಮತ್ತು ಕನ್ನಡ ಸಿನಿಮಾ ಮೂಲಕ ನಟನೆ ಆರಂಭಿಸಿದ ಈಗ ತೆಲುಗು ಧಾರಾವಾಹಿಗಳಲ್ಲಿ ಮಿಂಚುತ್ತಿರುವ ಕರ್ನಾಟಕದ ಹುಡುಗಿ ತನುಜಾ ಪುಟ್ಟಸ್ವಾಮಿ ಇಬ್ಬರೂ ಸಹ ತೆಲುಗು ಬಿಗ್ಬಾಸ್ ಫಿನಾಲೆಗೆ ಬಂದಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಇಬ್ಬರಿಗೂ ಅದೃಷ್ಟ ಕೈಕೊಟ್ಟಿದೆ.
ಒಟ್ಟು ಐದು ಜನ ಫಿನಾಲೆಗೆ ಬಂದಿದ್ದರು. ಕಲ್ಯಾಣ್, ಇಮಾನ್ಯುಯೆಲ್, ಸಂಜನಾ ಗಲ್ರಾನಿ, ತನುಜಾ ಮತ್ತು ಪವನ್ ಅವರುಗಳು ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಐವರಲ್ಲಿ ಕಲ್ಯಾಣ್ ಮತ್ತು ತನುಜಾ ನಡುವೆ ಬಹಳ ಗಟ್ಟಿಯಾದ ಸ್ಪರ್ಧೆ ಇತ್ತು. ತನುಜಾ ಅವರು ಗೆಲ್ಲುವ ನಿರೀಕ್ಷೆ ಬಹಳ ಇತ್ತು. ಕಲ್ಯಾಣ್ಗೂ ಸಹ ಸಾಕಷ್ಟು ಅಭಿಮಾನಿಗಳಿದ್ದರು. ಇಂದು ನಡೆದ ಫಿನಾಲೆಯಲ್ಲಿ ಕಲ್ಯಾಣ್ ಅವರು ಬಿಗ್ಬಾಸ್ ತೆಲುಗು ಸೀಸನ್ 09ರ ವಿಜೇತರಾಗಿದ್ದಾರೆ. ತನುಜಾ ಅವರು ರನ್ನರ್ ಅಪ್ ಆಗಿದ್ದಾರೆ. ಆ ಮೂಲಕ ತನುಜಾ ಅಭಿಮಾನಿಗಳಿಗೆ ಭಾರಿ ನಿರಾಸೆ ಆಗಿದೆ.
ಫಿನಾಲೆ ವಾರದಲ್ಲಿ ಒಟ್ಟು ಐದು ಮಂದಿ ಸ್ಪರ್ಧಿಗಳಿದ್ದರು. ಅದರಲ್ಲಿ ಮೊದಲಿಗೆ ಇಮಾನ್ಯುಯೆಲ್ ನಾಲ್ಕನೇ ರನ್ನರ್ ಅಪ್ ಆದರು. ಬಳಿಕ ಸಂಜನಾ ಅವರು ಮೂರನೇ ರನ್ನರ್ ಅಪ್ ಆದರು. ಡಿಮಾನ್ ಪವನ್ ಎರಡನೇ ರನ್ನರ್ ಅಪ್ ಆದರೆ. ವೇದಿಕೆ ಹೋಗಿ ಮೊದಲ ರನ್ನರ್ ಅಪ್ ಆದರು ತನುಜಾ ಪುಟ್ಟಸ್ವಾಮಿ. ಕಲ್ಯಾಣ್ ಅವರು ವಿಜೇತರಾದರು. ತನುಜಾ ಅವರು ಇಡೀ ಸೀಸನ್ ಅದ್ಭುತವಾಗಿ ಆಟವಾಡುತ್ತಾ ಬಂದಿದ್ದರು ಆದರೆ ಕೊನೆಗೆ ರನ್ನರ್ ಅಪ್ ಆದರು.
ತನುಜಾ ಅವರು ಗೆಲ್ಲುವ ಸ್ಪರ್ಧಿ ಎಂದೇ ಬಿಂಬಿತವಾಗಿದ್ದರು. ಆದರೆ ಕೊನೆಯ ಒಂದು ವಾರದಲ್ಲಿ ತನುಜಾ ಅವರು ಕನ್ನಡಿಗರು, ತೆಲುಗು ರಾಜ್ಯದವರಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಲು ಆರಂಭಿಸಿದರು. ಇದು ತನುಜಾ ಅವರಿಗೆ ಕೊನೆಯಲ್ಲಿ ತುಸು ನೆಗೆಟಿವ್ ಆಯ್ತು. ಆದರೂ ಸಹ ಪರಭಾಷೆ ನಟಿಯಾಗಿ ಫಿನಾಲೆ ವರೆಗೆ ಹೋಗಿದ್ದು ಸಾಮಾನ್ಯ ಸಾಧನೆಯಲ್ಲ.
ಇದರ ಜೊತೆಗೆ ಕಲ್ಯಾಣ್ ಸಹ ಒಳ್ಳೆಯ ಸ್ಪರ್ಧಿಯೇ ಆಗಿದ್ದರು. ಕಾಮನರ್ ಆಗಿ ಬಿಗ್ಬಾಸ್ ಮನೆಗೆ ಹೋಗಿದ್ದ ಕಲ್ಯಾಣ್ ತಮ್ಮ ಆಟ, ವ್ಯಕ್ತಿತ್ವದಿಂದ ಸ್ಪರ್ಧಿಗಳನ್ನು, ಪ್ರೇಕ್ಷಕರನ್ನು ಸೆಳೆದರು. ಅಂತಿಮವಾಗಿ ಬಿಗ್ಬಾಸ್ ವಿನ್ನರ್ ಆಗಿದ್ದಾರೆ.
ವಿಶಾಖಪಟ್ಟಣಂನಲ್ಲಿ ನಡೆದ ಶ್ರೀಲಂಕಾ ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಜೆಮಿಮಾ ರೊಡ್ರಿಗಸ್ ಅವರ ಅಜೇಯ ಅರ್ಧಶತಕದ ನೆರವಿನಿಂದ ಭಾರತೀಯ ಮಹಿಳಾ ತಂಡವು ಶ್ರೀಲಂಕಾವನ್ನು ಏಕಪಕ್ಷೀಯವಾಗಿ ಸೋಲಿಸಿತು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಡಿದ ಶ್ರೀಲಂಕಾ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 120 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಭಾರತ ಜೆಮಿಮಾ ಅವರ ಪ್ರಬಲ ಪ್ರದರ್ಶನದ ನೆರವಿನಿಂದ 14.4 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 122 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈ ಮೂಲಕ ಭಾರತ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
122 ರನ್ ಗುರಿ ನೀಡಿದ ಶ್ರೀಲಂಕಾ
ಶ್ರೀಲಂಕಾ ಪರ ಚಾಮರಿ ಅಟಪಟ್ಟು ಮತ್ತು ವಿಷ್ಮಿ ಗುಣರತ್ನೆ ಇನ್ನಿಂಗ್ಸ್ ಆರಂಭಿಸಿದರು. ಆದಾಗ್ಯೂ ಭಾರತದ ಯುವ ಬೌಲರ್ ಕ್ರಾಂತಿ ಗೌಡ್, ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು ಅವರನ್ನು ಔಟ್ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು. ಚಾಮರಿ 12 ಎಸೆತಗಳಲ್ಲಿ ಮೂರು ಬೌಂಡರಿಗಳ ಸಹಾಯದಿಂದ 15 ರನ್ ಗಳಿಸಿ ಔಟಾದರು. ಇದಾದ ಬಳಿಕ ಶ್ರೀಲಂಕಾ ಪವರ್‌ಪ್ಲೇನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದಿದ್ದರೂ, ರನ್ ವೇಗ ಕಡಿಮೆಯಾಯಿತು. ಇದೇ ವೇಳೆ ದಾಳಿಗಿಳಿದ ದೀಪ್ತಿ ಶರ್ಮಾ, ಹಸಿನಿ ಪೆರೆರಾ ಅವರನ್ನು ಔಟ್ ಮಾಡುವ ಮೂಲಕ ಶ್ರೀಲಂಕಾಕ್ಕೆ ಎರಡನೇ ಹೊಡೆತ ನೀಡಿದರು. ತಂಡದ ಪರ ಏಕಾಂಗಿ ಹೋರಾಟ ನೀಡಿದ ವಿಷ್ಮಿ ಗುಣರತ್ನೆ 43 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರು. ಭಾರತ ಪರ ಕ್ರಾಂತಿ ಗೌಡ್, ದೀಪ್ತಿ ಶರ್ಮಾ ಮತ್ತು ಶ್ರೀ ಚರಣಿ ತಲಾ ಒಂದು ವಿಕೆಟ್ ಪಡೆದರು.
ಜೆಮಿಮಾ ಗೆಲುವಿನ ಅರ್ಧಶತಕ
ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಶೆಫಾಲಿ ವರ್ಮಾ ಅವರ ವಿಕೆಟ್ ಬೇಗನೆ ಪತನವಾಯಿತು. ಆದರೆ ಜೆಮಿಮಾ ಮತ್ತು ಮಂಧಾನ 50+ ರನ್‌ಗಳ ಜೊತೆಯಾಟವನ್ನು ಮಾಡಿ ತಂಡದ ಗೆಲುವನ್ನು ಖಚಿತಪಡಿಸಿದರು. ನಂತರ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಜೆಮಿಮಾ ಮೂರನೇ ವಿಕೆಟ್‌ಗೆ 55 ರನ್‌ಗಳ ಅಜೇಯ ಪಾಲುದಾರಿಕೆಯನ್ನು ನಿರ್ಮಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಟಿ20 ಯಲ್ಲಿ ಭಾರತ ಎರಡನೇ ಮತ್ತು ಮೂರನೇ ವಿಕೆಟ್‌ಗೆ 50+ ರನ್‌ಗಳ ಜೊತೆಯಾಟವನ್ನು ಮಾಡಿರುವುದು ಇದೇ ಮೊದಲು. ಅಂತಿಮವಾಗಿ ಜೆಮಿಮಾ 44 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ಅಜೇಯ 69 ರನ್ ಗಳಿಸಿದರೆ, ಹರ್ಮನ್‌ಪ್ರೀತ್ 16 ಎಸೆತಗಳಲ್ಲಿ 15 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಶ್ರೀಲಂಕಾ ಪರ ಕಾವ್ಯ ಕವಿಂದಿ ಮತ್ತು ಇನೋಕಾ ರಣವೀರ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ