ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್; ಇರಾನ್ ಮೇಲಿನ ಯುದ್ಧ, ಹಾರ್ಮುಜ್ ಜಲಸಂಧಿಯ ಬಗ್ಗೆ ಚರ್ಚೆ

ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್; ಇರಾನ್ ಮೇಲಿನ ಯುದ್ಧ, ಹಾರ್ಮುಜ್ ಜಲಸಂಧಿಯ ಬಗ್ಗೆ ಚರ್ಚೆ

ನವದೆಹಲಿ, ಮಾರ್ಚ್ 24: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ವಿಧಿಸಿರುವ ನಿರ್ಬಂಧಗಳ ನಡುವೆಯೂ ಹಾರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವ ಮಹತ್ವದ ಕುರಿತು ಚರ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಕರೆ ಮಾಡಿದ್ದರು. ಈ ದೂರವಾಣಿ ಕರೆಯ ಸಮಯದಲ್ಲಿ ಈ ಪ್ರದೇಶದಲ್ಲಿ ಶಾಂತಿ ಮರುಸ್ಥಾಪನೆ ಮತ್ತು ಹಾರ್ಮುಜ್ ಜಲಸಂಧಿಯನ್ನು ತೈಲ ಮತ್ತು ಇಂಧನ ವ್ಯಾಪಾರಕ್ಕೆ ಮುಕ್ತವಾಗಿಸುವುದಕ್ಕೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.

ಅಂದಹಾಗೆ, ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಪ್ರಾರಂಭವಾದ ನಂತರ ಮೋದಿ ಮತ್ತು ಟ್ರಂಪ್ ಮಾತನಾಡುತ್ತಿರುವುದು ಇದೇ ಮೊದಲು.

ಇದನ್ನೂ ಓದಿ: ಟ್ರಂಪ್ ಕದನ ವಿರಾಮ ಬಯಸುತ್ತಿದ್ದಾರೆ, ಇರಾನ್ ಅಮೆರಿಕದ ಷರತ್ತಿಗೆ ಒಪ್ಪುವುದು ಅನುಮಾನ; ಇಸ್ರೇಲ್ ಅಭಿಮತ

ಭಾರತದಲ್ಲಿರುವ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಇಬ್ಬರು ನಾಯಕರ ನಡುವಿನ ಮಾತುಕತೆಯ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಟ್ರಂಪ್ ಅವರೊಂದಿಗಿನ ಮಾತುಕತೆಯ ಬಗ್ಗೆ ತಿಳಿಸಿದ್ದು, “ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ್ದಾರೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಪರಿಸ್ಥಿತಿಯ ಕುರಿತು ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ. ಭಾರತ ಶಾಂತಿಗೆ ಬೆಂಬಲವಾಗಿ ನಿಂತಿದೆ. ಭಾರತವು ಸಾಧ್ಯವಾದಷ್ಟು ಬೇಗ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಬೆಂಬಲ ನೀಡುವುದಾಗಿ ತಿಳಿಸಿದೆ. ಹಾರ್ಮುಜ್ ಜಲಸಂಧಿಯು ಮುಕ್ತ, ಸುರಕ್ಷಿತ ಸ್ಥಳವಾಗುವುದು ಇಡೀ ಜಗತ್ತಿಗೆ ಅತ್ಯಗತ್ಯ ಎಂದು ಭಾರತವೂ ಹೇಳಿದೆ” ಎಂದು ಗೋರ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಯುದ್ಧ ನಿಲ್ಲಿಸುವ ಸುಳಿವು ನೀಡಿದ ಟ್ರಂಪ್; ಕದನವಿರಾಮಕ್ಕೆ ಇರಾನ್ ಜೊತೆ ಅಮೆರಿಕ ಮಾತುಕತೆ

ಇದಾದ ಬಳಿಕ ಪ್ರಧಾನಿ ಮೋದಿ ಕೂಡ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದು, ಅಮೆರಿಕದ ಅಧ್ಯಕ್ಷರೊಂದಿಗೆ ಉಪಯುಕ್ತ ವಿಷಯದ ವಿನಿಮಯ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. “ಜಾಗತಿಕ ಸ್ಥಿರತೆಗೆ ಹಾರ್ಮುಜ್ ಜಲಸಂಧಿಯನ್ನು ಮುಕ್ತ, ಸುರಕ್ಷಿತವಾದ ರೀತಿಯಲ್ಲಿ ಇಡುವುದು ಅತ್ಯಗತ್ಯ ಎಂದು ಒತ್ತಿ ಹೇಳಿದ್ದೇನೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಶೀಘ್ರವಾಗಿ ಪುನಃಸ್ಥಾಪಿಸಲು ಭಾರತ ಬೆಂಬಲಿಸುತ್ತದೆ ಎಂದು ತಿಳಿಸಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಲವ್ ಮಾಕ್ಟೇಲ್ 3’ ಸಿನಿಮಾ ಕಥೆ ಕಾಪಿ? ಎಲ್ಲವನ್ನೂ ವಿವರಿಸಿದ ರಾಘವೇಂದ್ರ ನಾಯ್ಕ್

ಡಾರ್ಲಿಂಗ್ ಕೃಷ್ಣ ನಟನೆ, ನಿರ್ದೇಶನದ ‘ಲವ್ ಮಾಕ್ಟೇಲ್ 3’ (Love Mocktail 3) ಸಿನಿಮಾ ತಂಡದ ಮೇಲೆ ಕೃತಿಚೌರ್ಯದ ಆರೋಪ ಎದುರಾಗಿದೆ. ರಾಘವೇಂದ್ರ ನಾಯ್ಕ್ ಅವರು ಈ ಕಥೆ ತಮ್ಮದು ಎಂದು ಹೇಳಿದ್ದಾರೆ. ಈ ಕಥೆಯನ್ನು2023ರಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಹೇಳಲಾಗಿತ್ತು. ಆದರೆ ಡಾರ್ಲಿಂಗ್ ಕೃಷ್ಣ (Darling Krishna) ಅವರು ಆ ಕಥೆಯನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಈಗ ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ಅದೇ ಕಥೆ ಇರುವುದು ನೋಡಿ ರಾಘವೇಂದ್ರ ನಾಯ್ಕ್ ಅವರಿಗೆ ಶಾಕ್ ಆಗಿದೆ. ‘ಈ ಸಿನಿಮಾದ ದ್ವಿತೀಯಾರ್ಧ ಸಂಪೂರ್ಣ ನಮ್ಮದೇ ಕಥೆಗೆ ಹತ್ತಿರವಾಗಿದೆ. ಅವರ ಹಿನ್ನೆಲೆ ಮತ್ತು ಪರಿಸರ ಬೇರೆ ಇದೆ. ಆದರೆ ಮುಖ್ಯ ವಿಚಾರ ಹಾಗೆಯೇ ಇದೆ. ಅದರಿಂದ ನನಗೆ ಬೇಜಾರು ಆಯಿತು. ಅದಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡೆ. ಈಗ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇವೆ’ ಎಂದು ರಾಘವೇಂದ್ರ ನಾಯ್ಕ್ (Raghavendra Naik) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದಲೂ ತಯಾರಿಸಬಹುದು ಬಗೆ ಬಗೆಯ ತಿನಿಸು

ಈ ಸುಡು ಬೇಸಿಗೆಯಲ್ಲಿ ಆರೋಗ್ಯಕರವಾದದ್ದು ಏನಾದ್ರೂ ತಿನ್ಬೇಕು ಅಂದಾಗ ಪ್ರತಿಯೊಬ್ಬರು ಕೂಡ ಕಲ್ಲಂಗಡಿ ಹಣ್ಣನ್ನೇ (watermelon) ಆಯ್ಕೆ ಮಾಡೋದು. ಬೇಸಿಗೆಯಲ್ಲಿ ಹೇರಳವಾಗಿ ಸಿಗುವಂತಹ ಈ ಹಣ್ಣು ದೇಹವನ್ನು ತಂಪಾಗಿರಿಸುವುದಲ್ಲದೇ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಹಾಗಾಗಿ ಹೆಚ್ಚಿನವರು ಈ ಬೇಸಿಗೆಯಲ್ಲಿ ಮಾರುಕಟ್ಟೆಯಿಂದ ನಿತ್ಯವೂ ಕಲ್ಲಂಗಡಿ ಹಣ್ಣನ್ನು ಖರೀದಿಸುತ್ತಾರೆ.  ಈ ಕಲ್ಲಂಗಡಿ ಹಣ್ಣನ್ನು ತಿಂದ ಬಳಿದ ಅದರ ಸಿಪ್ಪೆಯನ್ನು  ನಿಷ್ಪ್ರಯೋಜಕವೆಂದು ಬಹುತೇಕ ಎಲ್ಲರೂ ಸಹ ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ.  ನಾವು ವೇಸ್ಟ್‌ ಎಂದು ಎಸೆಯುವ ಬದಲು ಈ  ಕೆಲವು  ಕೆಲವು ರುಚಿಕರ ರೆಸಿಪಿಗಳನ್ನು ತಯಾರಿಸಿ.

ಕಲ್ಲಂಗಡಿ ಹಣ್ಣಿನ ಸಿಪ್ಪಿಯಿಂದ ತಯಾರಿಸಿ ಬಗೆಬಗೆಯ ರೆಸಿಪಿ:

ಕಲ್ಲಂಗಡಿ ಸಿಪ್ಪೆ ಜಾಮ್: ಕಲ್ಲಂಗಡಿ ಸಿಪ್ಪೆಗಳಿಂದ ನೀವು ಸುಲಭವಾಗಿ ಜಾಮ್ ಮಾಡಬಹುದು. ಈ ಜಾಮ್ ಬ್ರೆಡ್ ನಿಂದ ಚಪಾತಿವರೆಗೆ ಎಲ್ಲದರ ಜೊತೆಗೆ ರುಚಿಕರವಾಗಿರುತ್ತದೆ. ಕಲ್ಲಂಗಡಿ ಸಿಪ್ಪೆಯಿಂದ ಜಾಮ್ ಮಾಡಲು, ಮೊದಲು ಸಿಪ್ಪೆಯ ಹಸಿರು ಬಣ್ಣದ ಪದರವನ್ನು ಸುಳಿದು ಬಳಿಕ ಉಳಿದ ಸಿಪ್ಪೆಯನ್ನುಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಕತ್ತರಿಸಿದ ಕಲ್ಲಂಗಡಿ ಸಿಪ್ಪೆಗೆ, ಎರಡು ಕಪ್ ಸಕ್ಕರೆ, ನಿಂಬೆ ರಸ ಮತ್ತು 1 ಟೀಚಮಚ ವೆನಿಲ್ಲಾ ಎಸೆನ್ಸ್ ಸೇರಿಸಿ. ಇದೆಲ್ಲವನ್ನೂ ಜೆಲ್ಲಿ ಹದಕ್ಕೆ ಬರುವವರೆಗೆ ಬಿಸಿ ಮಾಡಿಕೊಳ್ಳಿ. ನೀವು ಸುವಾಸನೆಗಾಗಿ ದಾಲ್ಚಿನ್ನಿ ಕೂಡ ಸೇರಿಸಬಹುದು.

ಕಲ್ಲಂಗಡಿ ಸಿಪ್ಪೆಯ ಉಪ್ಪಿನಕಾಯಿ: ಮಾವಿನ ಕಾಯಿ, ನಿಂಬೆ, ನೆಲ್ಲಿಕಾಯಿ, ಕ್ಯಾರೆಟ್‌ ಸೇರಿದಂತೆ ಬಗೆ ಬಗೆಯ ಉಪ್ಪಿನಕಾಯಿಗಳನ್ನು ತಯಾರಿಸುತ್ತಾರೆ. ಅದೇ ರೀತಿ ಕಲ್ಲಂಗಡಿ ಸಿಪ್ಪೆಯಿಂದಲೂ ಉಪ್ಪಿನಕಾಯಿ ತಯಾರಿಸಬಹುದು. ಈ ಉಪ್ಪಿನಕಾಯಿ ಮಾಡಲು, ನೀವು ಕಲ್ಲಂಗಡಿ ಸಿಪ್ಪೆಯ ಹಸಿರು ಸಿಪ್ಪೆಯನ್ನು ತೆಗೆದು  ಉಳಿದ ಭಾಗವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಾವಿನಕಾವಿ ಉಪ್ಪಿನಕಾಯಿಯಂತೇ ಇದನ್ನೂ ತಯಾರಿಸಿ.

ಇದನ್ನೂ ಓದಿ: ಹಣ್ಣು, ತರಕಾರಿಗಳನ್ನು ಒಟ್ಟಿಗೆ ಸಂಗ್ರಹಿಸಿಡಲೇಬಾರದು, ಯಾಕೆ ಗೊತ್ತಾ?

ಕಲ್ಲಂಗಡಿ ಸಿಪ್ಪೆ ಚಟ್ನಿ: ಕಲ್ಲಂಗಡಿ ಸಿಪ್ಪೆಯಿಂದ ರುಚಿಕರ ಚಟ್ನಿಯನ್ನು ತಯಾರಿಸಬಹುದು.  ಈ ಚಟ್ನಿ ಮಾಡಲು, ಮೊದಲು 3 ರಿಂದ 4 ಕಪ್ ಕಲ್ಲಂಗಡಿ ಸಿಪ್ಪೆಯನ್ನು ತೆಗೆದುಕೊಳ್ಳಿ, ಆದರ ಹಸಿರು ಪದರವನ್ನು ತೆಗೆದುಹಾಕಿ. ಸಿಪ್ಪೆಯನ್ನು ಸಣ್ಣಗೆ ಕಟ್‌ ಮಾಡಿ ಅದಕ್ಕೆ ಒಂದು ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿಕಾಯಿ, ಸ್ವಲ್ಪ ಸಣ್ಣಗೆ ಹೆಚ್ಚಿದ ಶುಂಠಿ ಜೊತೆಗೆ ನಿಮಗೆ ಬೇಕಾಗಿರುವ ಮಸಾಲೆಗಳನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಂಡರೆ ಕಲ್ಲಂಗಡಿ ಸಿಪ್ಪೆ ಚಟ್ನಿ ಸಿದ್ಧ.

ಇದಲ್ಲದೆ ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ಪಲ್ಯ, ಹಲ್ವಾ, ಟುಟ್ಟಿ ಫ್ರೂಟಿಯನ್ನು ತಯಾರಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಸಾವು ಪ್ರಕರಣ: ಸ್ಫೋಟಕ ವಿಷ್ಯ ಹೇಳಿದ ಪಶುವೈದ್ಯಕೀಯ ಸಂಘದ ಸದಸ್ಯ

ಅನೇಕಲ್, ಮಾ.24: ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿನ ಕುರಿತು ಕರ್ನಾಟಕ ಪಶುವೈದ್ಯಕ ಸಂಘವು ಗಂಭೀರ ಆರೋಪಗಳನ್ನು ಮಾಡಿದೆ. ಸಂಘದ ಅಧ್ಯಕ್ಷ ಡಾ. ಶಿವಶರಣಪ್ಪ ಎಲ್ಗೊಡ್ ಮಾತನಾಡಿ, ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಡಿಸಿಎಫ್ ಅವರ ಸಂಪೂರ್ಣ ತಪ್ಪಿದೆ ಎಂದು ಹೇಳಿದ್ದಾರೆ. ಮಧ್ಯರಾತ್ರಿಯಲ್ಲಿ ಯಾವುದೇ ರಕ್ಷಣೆ ಇಲ್ಲದೆ ವನ್ಯಜೀವಿ ಚಿಕಿತ್ಸೆಗೆ ಕಳುಹಿಸಿದ್ದು ದೊಡ್ಡ ತಪ್ಪು. ಈ ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಡಿಸಿಎಫ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಸಂಘ ಆಗ್ರಹಿಸಿದೆ. ಅಲ್ಲದೆ, ಪಶುವೈದ್ಯರನ್ನು ಕಡಿಮೆ ಸಂಬಳಕ್ಕೆ ಬ್ಲಾಕ್ಮೇಲ್ ಮಾಡಿ ಅಪಾಯಕಾರಿ ಕಾರ್ಯಗಳಿಗೆ ಕಳುಹಿಸಲಾಗುತ್ತಿದೆ. ಇದನ್ನು ತಡೆಯಲು ಅರಣ್ಯ ಇಲಾಖೆಯಲ್ಲಿ ಪ್ರತ್ಯೇಕ ಪಶುವೈದ್ಯಕೀಯ ವಿಭಾಗ ಸ್ಥಾಪಿಸಬೇಕು, ಅವರಿಗೆ ಸೂಕ್ತ ತರಬೇತಿ ಮತ್ತು ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಮೀಕ್ಷಾ ರೆಡ್ಡಿ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರದ ಬೇಡಿಕೆಯನ್ನೂ ಇಡಲಾಗಿದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ದೊಡ್ಡ ಹೋರಾಟ ನಡೆಸುವುದಾಗಿ ಸಂಘ ಎಚ್ಚರಿಕೆ ನೀಡಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Karnataka Rain: ಕರ್ನಾಟಕದಲ್ಲಿ ಮುಂದಿನ 3 ಗಂಟೆಯಲ್ಲಿ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಅಲರ್ಟ್

ಬೆಂಗಳೂರು, ಮಾರ್ಚ್​​ 24: ಕರ್ನಾಟಕದಲ್ಲಿ ಮುಂದಿನ 3 ಗಂಟೆಯಲ್ಲಿ ಮಳೆಯಾಗುವ (rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ ಮೂಲಕ ಗುಡುಗು ಸಹಿತ ಮಳೆಯಾಗುವ ಎಚ್ಚರಿಕೆ ನೀಡಿದೆ. ಜೊತೆಗೆ ಕಲಬುರಗಿ, ಯಾದಗಿರಿ, ರಾಯಚೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಯಲ್ಲೋ ಹಾಗೂ ಚಿಕ್ಕಮಗಳೂರು, ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಇತ್ತ ಬೆಂಗಳೂರಿನಲ್ಲಿ ಭಾರೀ ಮಳೆಯ ನಿರೀಕ್ಷೆ ಇಲ್ಲದಿದ್ದರೂ, ಹೆಚ್ಚುತ್ತಿರುವ ಬಿಸಿಗಾಳಿಯಿಂದ ತಾತ್ಕಾಲಿಕ ಪರಿಹಾರ ಸಿಗಲಿದೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಉಷ್ಣತೆ ಹೆಚ್ಚಳಗೊಳ್ಳುತ್ತಿರುವುದು ಕಂಡುಬರುತ್ತಿದೆ. ಜೊತೆಗೆ ನಗರದಲ ಕೆಲವೆಡೆ ಮೋಡ ಕವಿದ ವಾತಾವರಣ ಕಾಣಬಹುದು.

ಬಿರುಗಾಳಿ ಸಹಿತ ಮಳೆ: ಮನೆಗಳಿಗೆ ನುಗ್ಗಿದ ನೀರು

ಇನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯ ಅಬ್ಬರ ಜೋರಾಗಿದೆ. ಇತ್ತ ಬೆಳಗಾವಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ರಸ್ತೆಗಳು ನದಿಯಂತಾಗಿದ್ದು, ಬೇಸ್​ಮೆಂಟ್​ನಲ್ಲಿ ನಿಲ್ಲಿಸಿದ್ದ ಕಾರುಗಳು, ಬೈಕ್​ಗಳು ಮುಳುಗಡೆ ಆಗಿವೆ. ಸದಾಶಿವನಗರ, ನೆಹರುನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬಹುತೇಕ ರಸ್ತೆಗಳ ಮೇಲೆ ಚರಂಡಿ ನೀರು ಉಕ್ಕಿಹರಿದಿದೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಕರಾವಳಿ ಸೇರಿದಂತೆ ರಾಜ್ಯದೆಲ್ಲೆಡೆ ಇಂದು ವರುಣಾರ್ಭಟ ಸಾಧ್ಯತೆ! 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ರಸ್ತೆಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನಲ್ಲೇ ಸವಾರರು ವಾಹನ ಸಂಚಾರ ಮಾಡುತ್ತಿದ್ದಾರೆ. ಸದ್ಯ ಜೆಸಿಬಿ ಮೂಲಕ ನೀರು ಹೋಗಲು ಸ್ಥಳೀಯರಿಂದ ವ್ಯವಸ್ಥೆ ಮಾಡಲಾಗಿದೆ. ಸೂಕ್ತ ಚರಂಡಿ ವ್ಯವಸ್ಥೆ ಮಾಡದ ಪಾಲಿಕೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಬೆಳಗಾವಿ ಜನತೆ ಹಿಡಿಶಾಪ ಹಾಕಿದ್ದಾರೆ.

ಬಿರುಗಾಳಿ ಸಮೇತ ಮಳೆ: ಕೊಚ್ಚಿಹೋದ ತರಕಾರಿ

ಹಾವೇರಿ ಜಿಲ್ಲೆಯ ಹಲವೆಡೆಗಳಲ್ಲಿ ಬಿರುಗಾಳಿ ಸಮೇತ ಮಳೆ ಸುರಿದಿದೆ. ಧಾರಕಾರ ಮಳೆಗೆ ಸಂತೆಯಲ್ಲಿದ್ದ ತರಕಾರಿ ಕೊಚ್ಚಿಕೊಂಡು ಹೋಗಿದೆ. ಬದನೆಕಾಯಿ, ಟೊಮ್ಯಾಟೊ, ಆಲೂಗಡ್ಡೆ ಸೇರಿದಂತೆ ಹಲವು ತರಕಾರಿ ‌ನೀರಿನಲ್ಲಿ ಜಲಾವೃತವಾಗಿವೆ. ಇನ್ನು ಸಂತೆಗೆ ಬಂದ ಜನರು ಮನೆಗೆ ಹೋಗಲು ಪರದಾಡಿದ್ದಾರೆ. ಅಕಾಲಿಕ ಮಳೆಗೆ ಜಿಲ್ಲೆಯ ಜನರು ಹೈರಾಣಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದಾವಣಗೆರೆಯಲ್ಲಿ ಬಿಜೆಪಿಗೆ ಮುಸ್ಲಿಂ ಸಾಥ್! ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮಹಿಳೆಯರು

ದಾವಣಗೆರೆ, ಮಾ.24: ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರ ಕುಟುಂಬದವರು ಪ್ರಚಾರ ನಡೆಸುತ್ತಿದ್ದಾರೆ. ಮತ ಯಾಚಿಸಲು ತೆರಳಿದಾಗ ಮುಸ್ಲಿಂ ಸಮುದಾಯದವರು ಅಭ್ಯರ್ಥಿ ಪತ್ನಿಯನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸಾಂಪ್ರದಾಯಿಕವಾಗಿ ಉಡಿ ತುಂಬುವ ಮೂಲಕ ತಮ್ಮ ಬೆಂಬಲ ಸೂಚಿಸಿದರು. ಪ್ರಚಾರದ ವೇಳೆ ಮಾತನಾಡಿದ ಅಭ್ಯರ್ಥಿಯ ಪ್ರತಿನಿಧಿಗಳು, ಶ್ರೀನಿವಾಸ್ ದಾಸಕರಿಯಪ್ಪ ಅವರನ್ನು ನಿಮ್ಮ ಮನೆಯ ಮಗ ಎಂದು ಪರಿಚಯಿಸಿದರು. ನೀರಿನ ವ್ಯವಸ್ಥೆ, ಚರಂಡಿ, ಮನೆ ಇಲ್ಲದವರಿಗೆ ಸೂರಿನ ವ್ಯವಸ್ಥೆ ಮತ್ತು ಆಸ್ಪತ್ರೆಗಳ ನಿರ್ಮಾಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ ಎಂದು ಭರವಸೆ ನೀಡಿದರು. ಅಧಿಕಾರ ಸಿಕ್ಕರೆ ಈ ಕೆಲಸಗಳನ್ನು ನೆರವೇರಿಸುವುದಾಗಿ ಹೇಳಿದರು. ಈ ಬಾರಿಯ ಉಪಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಿ, ಅಭಿವೃದ್ಧಿಗೆ ಅವಕಾಶ ನೀಡುವಂತೆ ಸಮುದಾಯದವರಲ್ಲಿ ಮನವಿ ಮಾಡಿಕೊಂಡರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

WITT Summit 2026: ಬಂಗಾಳದಲ್ಲಿ ಡಬಲ್ ಎಂಜಿನ್ ಸರ್ಕಾರ ರಚನೆ ಖಚಿತ; WITT ಶೃಂಗಸಭೆಯಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ ಭವಿಷ್ಯ

ನವದೆಹಲಿ, ಮಾರ್ಚ್ 24: ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026’ (WITT Summit 2026)ಯಲ್ಲಿ ಮಾತನಾಡಿದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿ, ಮುಂದಿನ ತಿಂಗಳು 5 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಬಂಗಾಳದಲ್ಲಿ ಮತ್ತೆ ಟಿಎಂಸಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಅಲ್ಲಿನ ಜನರು ಬೇಸತ್ತಿದ್ದಾರೆ. ಕೊಲೆಗಳು ಬಹಿರಂಗವಾಗಿ ನಡೆಯುತ್ತಿವೆ. ಬಂಗಾಳವು ಪ್ರತಿಯೊಂದು ಕ್ಷೇತ್ರದಲ್ಲೂ ಹಿಂದುಳಿದಿದೆ. ಅಲ್ಲಿನ ಜನರು ಡಬಲ್ ಎಂಜಿನ್ ಸರ್ಕಾರವನ್ನು ಬಯಸುತ್ತಿದ್ದಾರೆ. ಅಲ್ಲಿ ಈ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ತಮಿಳುನಾಡಿನಲ್ಲೂ ಇದೇ ಪರಿಸ್ಥಿತಿ ಇದೆ. ಪ್ರತಿ ಐದು ವರ್ಷಗಳಿಗೊಮ್ಮೆ ಅಲ್ಲಿ ಸರ್ಕಾರ ಬದಲಾಗುತ್ತದೆ. ಡಿಎಂಕೆ ಸರ್ಕಾರ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿದೆ. ಅಲ್ಲಿ ಸ್ವಜನಪಕ್ಷಪಾತವಿದೆ. ಅಲ್ಲಿಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಕೇರಳದಲ್ಲಿ ನಾವು ನಮ್ಮ ಸ್ಥಾನವನ್ನು ಸುಧಾರಿಸುತ್ತೇವೆ. ಪುದುಚೇರಿ ಮತ್ತು ಅಸ್ಸಾಂನಲ್ಲಿಯೂ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಕಿಶನ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: PM Modi in WITT Summit 2026: ನಾವು ಭಾರತೀಯರ ಪರ, ನಮಗೆ ಅಭಿವೃದ್ಧಿಯೇ ಮುಖ್ಯ; ವಿಟ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಘೋಷಣೆ

ಭಾರತದ ಇಂಧನ ವಲಯವು ಪ್ರಸ್ತುತ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ಎಲ್ಲಾ ವಲಯಗಳಲ್ಲಿ ಸ್ವಾವಲಂಬನೆ ಸಾಧಿಸಲು ಪ್ರಯತ್ನಗಳು ನಡೆಯುತ್ತಿವೆ. 2014ಕ್ಕಿಂತ ಮೊದಲು ಕಲ್ಲಿದ್ದಲಿನ ಪೂರೈಕೆಯಲ್ಲಿ ಸಮಸ್ಯೆಗಳಿದ್ದವು. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಕಲ್ಲಿದ್ದಲು ಹಂಚಿಕೆಯ ಬಗ್ಗೆ ಯಾವುದೇ ಆರೋಪಗಳಿಲ್ಲ ಎಂದು ಹೇಳಿದರು.

ಇದನ್ನೂ ಓದಿ: PM Modi in WITT Summit 2026: ಕಾಂಗ್ರೆಸ್​ನ ಪಾಪದ ಹೊರೆಯನ್ನು ನಾವು ಹೊತ್ತಿದ್ದೇವೆ; ವಿಟ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ಓವೈಸಿಗೆ ತಿರುಗೇಟು:

ಭಾರತದಲ್ಲಿ ಈದ್ ಆಚರಿಸಲು ಸ್ವಾತಂತ್ರ್ಯವಿಲ್ಲ ಎಂಬ ಓವೈಸಿ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವ ಕಿಶನ್ ರೆಡ್ಡಿ, “ಇದು ಸಂಪೂರ್ಣವಾಗಿ ತಪ್ಪು. ಸ್ವಾತಂತ್ರ್ಯವಿಲ್ಲದೆ ಇರುವುದಕ್ಕೆ ಇದು ಪಾಕಿಸ್ತಾನವೇ? ಭಾರತದಲ್ಲಿ ಎಲ್ಲರೂ ಸ್ವತಂತ್ರರು. ಇಲ್ಲಿ ಯಾವುದೇ ಧರ್ಮದ ಸಮಸ್ಯೆ ಇಲ್ಲ. ಓವೈಸಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ಆದರೆ ಈ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂಬುದನ್ನು ಕೂಡ ಅರ್ಥ ಮಾಡಿಕೊಳ್ಳಬೇಕು” ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಾಮಾನ್ಯ ವೈದ್ಯಕೀಯ ಪರೀಕ್ಷೆಗಳ ವರದಿ ನಾರ್ಮಲ್ ಇದ್ದರೂ ದಿನಪೂರ್ತಿ ದಣಿವೇ? ಈ 4 ಆರೋಗ್ಯ ಸಮಸ್ಯೆಗಳ ಬಗ್ಗೆ ಇರಲಿ ಗಮನ

ತುಂಬಾ ಸುಸ್ತು (fatigue) ಎನ್ನುವುದು ಇತ್ತೀಚೆಗೆ ಸಾಮಾನ್ಯವಾಗಿ ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುವ ಮಾತು. ಬಹುತೇಕ ಜನರಿಗೆ ದಿನಪೂರ್ತಿ ದಣಿವು ಕಾಣಿಸಿಕೊಂಡರೆ, ಇನ್ನು ಕೆಲ ಮಂದಿಗೆ ಇದು ಅಲ್ಪಕಾಲಿಕವಾಗಿ ಅನುಭವಕ್ಕೆ ಬಂದಿರುತ್ತದೆ. ಹೀಗಾಗಿ ಕೆಲಸ ಮಾಡಲು ಮನಸ್ಸಾಗುವುದಿಲ್ಲ ಮತ್ತು ಸಣ್ಣ ಕೆಲಸಗಳೂ ಕಷ್ಟವಾಗುತ್ತವೆ ಎಂಬ ಕಾರಣಕ್ಕೆ ಜನರು ಬ್ಲಡ್ ಟೆಸ್ಟ್, ಥೈರಾಯ್ಡ್, ಶುಗರ್ ಹಾಗೂ ವಿಟಮಿನ್ B12 ಮತ್ತು D ಪರೀಕ್ಷೆಗಳನ್ನು ಮಾಡಿಸಿಕೊಳ್ಳುತ್ತಾರೆ. ಆದರೆ ಅವುಗಳ ವರದಿ ನಾರ್ಮಲ್ ಬಂದರೂ ದಣಿವು ಕಡಿಮೆಯಾಗುವುದಿಲ್ಲ. ಬಹುಪಾಲು ಜನರು ಇದನ್ನು ಸಾಮಾನ್ಯ ದೌರ್ಬಲ್ಯವೆಂದು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ದೇಹದ ಈ ಲಕ್ಷಣಗಳ ಹಿಂದೆ ಆರೋಗ್ಯ ಸಮಸ್ಯೆಗಳು ಇರಬಹುದು. ಸಮಯಕ್ಕೆ ಗಮನ ಕೊಡದಿದ್ದರೆ ದೀರ್ಘಕಾಲ ಸಮಸ್ಯೆಯಾಗಬಹುದು.

ದಿನಪೂರ್ತಿ ದಣಿವಿಗೆ ಇವೂ ಕಾರಣ ಆಗಿರಬಹುದು

ಕ್ರೋನಿಕ್ ಫ್ಯಾಟಿಗ್ ಸಿಂಡ್ರೋಮ್: ಈ ಸ್ಥಿತಿಯಲ್ಲಿ ವ್ಯಕ್ತಿಗೆ ದೀರ್ಘಕಾಲದ ದಣಿವು ಇರುತ್ತದೆ. ವಿಶ್ರಾಂತಿ ತೆಗೆದುಕೊಂಡರೂ ದಣಿವು ಹೋಗುವುದಿಲ್ಲ. ನಿದ್ರೆಯಾದರೂ ಫ್ರೆಶ್ ಅನಿಸದು, ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ.

ಸ್ಲೀಪ್ ಅಪ್ನಿಯಾ: ನಿದ್ರೆಯ ಸಮಯದಲ್ಲಿ ಉಸಿರಾಟಕ್ಕೆ ಮತ್ತೆ ಮತ್ತೆ ತೊಂದರೆ ಆಗುವುದು ಈ ರೋಗದ ಲಕ್ಷಣ. ಇದರಿಂದ ನಿದ್ರೆ ಸಂಪೂರ್ಣವಾಗುವುದಿಲ್ಲ. ದಿನಪೂರ್ತಿ ನಿದ್ರೆ ಬರುವುದು, ತಲೆನೋವು ಮತ್ತು ದಣಿವು ಮುಂದುವರಿಯುತ್ತದೆ.

ಹಾರ್ಮೋನ್‌ ಅಸಮತೋಲನ: ಥೈರಾಯ್ಡ್ ಸೇರಿದಂತೆ ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾದರೆ ದೇಹದ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ದಣಿವು, ಮನೋಭಾವದ ಬದಲಾವಣೆ (ಮೂಡ್ ಸ್ವಿಂಗ್) ಮತ್ತು ತೂಕದಲ್ಲಿ ಬದಲಾವಣೆ ಕಾಣಬಹುದು.

ಮಾನಸಿಕ ಆರೋಗ್ಯ ಸಮಸ್ಯೆಗಳು: ಡಿಪ್ರೆಶನ್ ಮತ್ತು ಆಂಕ್ಸೈಟಿ ರೀತಿಯ ಸಮಸ್ಯೆಗಳು ದೇಹವನ್ನು ದಣಿಗೊಳಿಸುತ್ತವೆ. ಮನಸ್ಸಿನ ಒತ್ತಡದಿಂದ ದೇಹದಲ್ಲಿ ಎನರ್ಜಿ ಕಡಿಮೆಯಾಗುತ್ತದೆ ಮತ್ತು ನಿರಂತರ ದಣಿವು ಉಂಟಾಗುತ್ತದೆ.

ಇದನ್ನೂ ಓದಿ: ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ಬೇಡ ನಿರ್ಲಕ್ಷ್ಯ; ಅವಾಗಿರಬಹುದು ಬ್ರೈನ್ ಸ್ಟ್ರೋಕ್ ಮುನ್ಸೂಚನೆ!

ಸಾಕಷ್ಟು ನಿದ್ರೆ ಮಾಡಿದರೂ ದಣಿವು ಕಡಿಮೆಯಾಗದಿರುವುದು, ಗಮನ ಕೇಂದ್ರೀಕರಿಸಲು ಕಷ್ಟವಾಗುವುದು ಈ ರೀತಿಯ ಆರೋಗ್ಯ ಸಮಸ್ಯೆಯ ಪ್ರಮುಖ ಲಕ್ಷಣ ತಲೆನೋವಿನ ಜೊತೆಗೆ, ದೇಹ ಭಾರವಾಗಿರುವ ಅನುಭವವೂ ಕೆಲವರಲ್ಲಿ ಕಂಡುಬರುತ್ತದೆ. ನಿದ್ರೆಯ ವೇಳೆ ಗೊರಕೆ ಹೊಡೆಯುವುದು ಅಥವಾ ಬೆಳಗ್ಗೆ ಎದ್ದರೂ ತಾಜಾತನ ಕಾಣಿಸದಿರುವುದು ಕೂಡ ಸಾಮಾನ್ಯ ಲಕ್ಷಣಗಳೆಂದೇ ಪರಿಗಣಿಸಲ್ಪಟ್ಟಿವೆ. ಇವುಗಳ ಪೈಕಿ ಯಾವುದೇ ಆರೋಗ್ಯ ಲಕ್ಷಣಗಳು ದೀರ್ಘಕಾಲ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.

ಈ ಸಮಸ್ಯೆಗಳಿಂದ ದೂರ ಉಳಿಯುವುದು ಹೇಗೆ?

ಪ್ರತಿದಿನ 7–8 ಗಂಟೆ ಉತ್ತಮ ನಿದ್ರೆ ಮಾಡುವ ಜೊತೆಗೆ, ಹಣ್ಣು, ತರಕಾರಿ ಮತ್ತು ಪ್ರೋಟೀನ್ ಒಳಗೊಂಡ ಸಮತೋಲನ ಆಹಾರ ಸೇವಿಸಿ. ಯೋಗ ಮತ್ತು ಧ್ಯಾನದಿಂದ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ. ಹಾಗೆಯೇ ವ್ಯಾಯಾಮ ಮಾಡುವುದನ್ನೂ ಅಭ್ಯಾಸ ಮಾಡಿಕೊಳ್ಳಿ. ಸ್ಕ್ರೀನ್ ಟೈಮ್ ಕಡಿಮೆ ಮಾಡಿ, ಮಲಗುವ ಮೊದಲು ಮೊಬೈಲ್ ಬಳಕೆ ತಪ್ಪಿಸಿ ಎಂಬುದು ವೈದ್ಯರ ಸಲಹೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಾವುಂಡಿ ದೇವಾಲಯದಲ್ಲಿ ರಣವೀರ್ ಸಿಂಗ್ ಕ್ಷಮೆ ಕೇಳಬೇಕು: ದೂರುದಾರರ ಒತ್ತಾಯ

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ ಚಾಪ್ಟರ್ 1’ (Kantara Chapter 1) ಸಿನಿಮಾದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಈಗಾಗಲೇ ಕ್ಷಮೆ ಕೇಳಿದ್ದಾರೆ. ಆದರೂ ದೂರುದಾರರು ಕಾನೂನು ಹೋರಾಟ ಮುಂದುವರಿಸಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ (FIR) ರದ್ದು ಕೋರಿ ರಣವೀರ್ ಸಿಂಗ್ ಅವರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ನಡೆಯುತ್ತಿದೆ. ‘ಚಾವುಂಡಿ ದೇವಾಲಯಕ್ಕೆ ರಣವೀರ್ ಸಿಂಗ್ (Ranveer Singh) ಭೇಟಿ ನೀಡಲೇಬೇಕು’ ಎಂದು ದೂರುದಾರರು ಬೇಡಿಕೆ ಇಟ್ಟಿದ್ದಾರೆ.

ಈಗಾಗಲೇ ತಮ್ಮ ವಿವಾದಾತ್ಮಕ ಹೇಳಿಕೆಗಾಗಿ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಖಾತೆ ಮೂಲಕ ಕ್ಷಮೆ ಯಾಚಿಸಿರುವ ರಣವೀರ್ ಸಿಂಗ್, ಕಾನೂನಾತ್ಮಕವಾಗಿಯೂ ಪಶ್ಚಾತ್ತಾಪ ವ್ಯಕ್ತಪಡಿಸಲು ಮುಂದಾಗಿದ್ದಾರೆ. ನ್ಯಾಯಾಲಯಕ್ಕೆ ಅಧಿಕೃತವಾಗಿ ಕ್ಷಮೆಯಾಚನೆಯ ಪ್ರಮಾಣಪತ್ರ ಸಲ್ಲಿಸುವುದಾಗಿ ಅವರ ಪರ ವಕೀಲರು ಹೈಕೋರ್ಟ್ ಪೀಠಕ್ಕೆ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ದೂರುದಾರರಾಗಿರುವ ಪ್ರಶಾಂತ್ ಮೆತಾಲ್ ಅವರು ರಣವೀರ್ ಸಿಂಗ್ ಅವರ ಕ್ಷಮೆ ಯಾಚನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಕೇವಲ ಟ್ವೀಟ್ ಅಥವಾ ಪೇಪರ್ ಮೇಲೆ ಕ್ಷಮೆ ಕೇಳಿದರೆ ಸಾಲದು. ರಣವೀರ್ ಸಿಂಗ್ ಅವರಲ್ಲಿ ನೈಜ ಪಶ್ಚಾತ್ತಾಪವಿರಬೇಕು. ಅವರು ಖುದ್ದಾಗಿ ಚಾವುಂಡಿ ದೇವಾಲಯಕ್ಕೆ ಭೇಟಿ ನೀಡಿ ದೈವದ ಮುಂದೆ ಕ್ಷಮೆ ಕೇಳಬೇಕು’ ಎಂದು ವಾದಿಸಿದ್ದಾರೆ.

ದೂರುದಾರರ ಬೇಡಿಕೆಗೆ ಸ್ಪಂದಿಸಿರುವ ರಣವೀರ್ ಸಿಂಗ್ ಪರ ವಕೀಲರು, ‘ಅವರು ಚಾವುಂಡಿ ದೇವಾಲಯಕ್ಕೆ ಭೇಟಿ ನೀಡಿ ಕ್ಷಮೆ ಯಾಚಿಸಲಿದ್ದಾರೆ ಹಾಗೂ ಅದರೊಂದಿಗೆ ನ್ಯಾಯಾಲಯಕ್ಕೂ ಪ್ರಮಾಣಪತ್ರ ಸಲ್ಲಿಸಲಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬೆಳವಣಿಗೆಯ ನಂತರ ಹೈಕೋರ್ಟ್‌ನ ಏಕಸದಸ್ಯ ಪೀಠವು ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿದೆ.

ಇದನ್ನೂ ಓದಿ: ರಣವೀರ್ ಸಿಂಗ್ ಮುಂದೆ ಬೇರೆ ಹೀರೋಗಳೆಲ್ಲ ಜೋಕರ್​ಗಳು; ಆರ್​ಜಿವಿ ಟೀಕೆ

ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸೂಪರ್ ಹಿಟ್ ಆಯಿತು. ಆ ಸಿನಿಮಾದಲ್ಲಿನ ರಿಷಬ್ ಶೆಟ್ಟಿ ಅವರ ನಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು ರಣವೀರ್ ಸಿಂಗ್ ಅವರ ಉದ್ದೇಶ ಆಗಿತ್ತು. ಆದರೆ ಅದನ್ನು ವ್ಯಕ್ತಪಡಿಸುವ ಭರದಲ್ಲಿ ಅವರು ತೋರಿದ ಮುಖಭಾವದಿಂದ ದೈವಕ್ಕೆ ಅವಮಾನ ಆಗಿದೆ ಎಂಬ ಆರೋಪ ಕೇಳಿಬಂತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮತಾಂತರಗೊಂಡು ವಿವಾಹವಾಗಬೇಕು ಎಂದು ಬಾಲಕಿಗೆ ಕಿರುಕುಳ ಆರೋಪ: ಮುಸ್ಲಿಂ ಬಾಲಕನ ಮೇಲೆ ಹಲ್ಲೆ

ಮೂಡಿಗೆರೆ, ಮಾ.24: ಚಿಕ್ಕಮಗಳೂರಿನ ಬಿಳುಗುಳ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮತ್ತು ಅನ್ಯಕೋಮಿನ ಅಪ್ರಾಪ್ತ ಬಾಲಕನ ನಡುವಿನ ವಿಚಾರವು ಈಗ ಸಂಘರ್ಷಕ್ಕೆ ಕಾರಣವಾಗಿದ್ದು, ಪೊಲೀಸರು ಎರಡು ಗುಂಪುಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತಾಂತರದ ಒತ್ತಾಯ ಮತ್ತು ಅಶ್ಲೀಲ ಫೋಟೋಗಳ ಮೂಲಕ ಬ್ಲಾಕ್‌ಮೇಲ್ ಮಾಡಿದ ಆರೋಪ ಒಂದೆಡೆಯಾದರೆ, ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪ ಮತ್ತೊಂದೆಡೆ ಕೇಳಿಬಂದಿದೆ. ಬಾಲಕಿಯ ತಂದೆ ನೀಡಿದ ದೂರಿನನ್ವಯ, ಅಪ್ರಾಪ್ತ ಬಾಲಕ ಮತ್ತು ಆತನ ತಂದೆ ಇಲಿಯಾಸ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬಾಲಕಿಯು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ತನ್ನನ್ನು ವಿವಾಹವಾಗಬೇಕು ಎಂದು ಬಾಲಕ ಒತ್ತಾಯಿಸುತ್ತಿದ್ದ, ಬಾಲಕಿ ಒಪ್ಪದಿದ್ದಾಗ ಆಕೆಯ ಕೆಲವು ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿ ಬ್ಲಾಕ್‌ಮೇಲ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎನ್‌ಎಸ್ (BNS) 329(4), ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಕಾಯ್ದೆ 2022 (ಮತಾಂತರ ನಿಷೇಧ ಕಾಯ್ದೆ), ಐಟಿ ಆಕ್ಟ್ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದಾವಣಗೆರೆಯಲ್ಲಿ ಬಿಜೆಪಿಗೆ ಮುಸ್ಲಿಂ ಸಾಥ್! ಅಭ್ಯರ್ಥಿಯ ಪತ್ನಿಗೆ ಉಡಿ ತುಂಬಿದ ಮಹಿಳೆಯರು

ಅಪ್ರಾಪ್ತ ಬಾಲಕ ನೀಡಿದ ದೂರಿನನ್ವಯ, ಆತನ ಮೇಲೆ ಹಲ್ಲೆ ನಡೆಸಿದ ಆರೋಪದಡಿ 6 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ. ದಿನಾಂಕ 23-03-2026ರಂದು ಸಂಜೆ ಕಬಾಬ್ ಅಂಗಡಿ ಬಳಿ ಕರೆಸಿಕೊಂಡ ಆರೋಪಿಗಳಾದ ಪ್ರಶಾಂತ್, ಸುದೇವ್, ಪ್ರಣೀತ್, ಚಂದ್ರು, ಪುಷ್ಪ ಮತ್ತು ವಿನೋದ್ ಎಂಬುವವರು ಬಾಲಕನಿಗೆ ಮುತ್ತಿಗೆ ಹಾಕಿ, ಕೆನ್ನೆಗೆ ಹೊಡೆದು, ಕುತ್ತಿಗೆ ಹಿಸುಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ತಾವಿಬ್ಬರೂ ಈ ಹಿಂದೆ ಪ್ರೀತಿಸುತ್ತಿದ್ದು, ಪೋಷಕರು ಬುದ್ಧಿವಾದ ಹೇಳಿದ ಮೇಲೆ ಓದಿನ ಕಡೆ ಗಮನ ಹರಿಸಿದ್ದೆವು. ಆದರೆ ಹಳೆಯ ವಿಚಾರಕ್ಕೆ ಈಗ ಹಲ್ಲೆ ನಡೆಸಲಾಗಿದೆ ಎಂದು ಬಾಲಕ ದೂರಿದ್ದಾನೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Exit mobile version