ಬೆಂಗಳೂರು, ಮಾರ್ಚ್ 20: ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕರ್ನಾಟಕದಲ್ಲಿ ಮುಂಬರುವ ಉಪಚುನಾವಣೆಗಳಲ್ಲಿ ಪಕ್ಷದ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸುತ್ತೆ. ಟಿಕೆಟ್ ಬೇಕೆಂದು ಎಲ್ಲರಿಗೂ ಆಸೆ, ಆಸಕ್ತಿ ಇದ್ದೇ ಇರುತ್ತೆ. ನ್ಯಾಯ ಕೊಡಿಸುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತದೆ. ಕರ್ನಾಟಕ ಜನ ನಮ್ಮ ಪರ ಇದ್ದಾರೆ. ಹಿಂದೆಯೂ ಚುನಾವಣೆ ಗೆದ್ದಿದ್ದೇವೆ, ಈಗಲೂ ಗೆಲ್ಲುತ್ತೇವೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಹೇಳಿದ್ದಾರೆ.
ಐಪಿಎಲ್ನ (IPL) ಮೊದಲ ಸೀಸನ್‌ನಿಂದ ಆಡುತ್ತಿರುವ ಮಹೇಂದ್ರ ಸಿಂಗ್ ಧೋನಿ (MS Dhoni) ಈ ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುವುದನ್ನು ಕಾಣಬಹುದು. ಆದಾಗ್ಯೂ ಧೋನಿ ಈ ಆವೃತ್ತಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಾರಾ? ಅಥವಾ ಇಡೀ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದು ಖಚಿತವಾಗಿಲ್ಲ. ಇದೆಲ್ಲದರ ಹೊರತಾಗಿ ಧೋನಿ ಸಿಎಸ್‌ಕೆ ತಂಡದಲ್ಲಿ ಆಡುವುದು ಖಚಿತ. ಇದೆಲ್ಲದರ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಚೆನ್ನೈ ಸೂಪರ್ ಕಿಂಗ್ಸ್‌ನ ಪ್ಲೇಯಿಂಗ್ 11 ಪ್ರಕಟಿಸಿದ್ದು, ಅಚ್ಚರಿಯ ಸಂಗತಿಯೆಂದರೆ ಪಠಾಣ್ ಅವರ ಆಡುವ ಹನ್ನೊಂದರ ಬಳಗದಲ್ಲಿ ಧೋನಿಗೆ ಸ್ಥಾನ ನೀಡಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿಯೂ ಪಠಾಣ್, ಧೋನಿ ಹೆಸರನ್ನು ತೆಗೆದುಕೊಂಡಿಲ್ಲ.
ಪಠಾಣ್ ಆಯ್ಕೆ ಮಾಡಿರುವ ತಂಡ
ಈ ಬಾರಿಯ ಐಪಿಎಲ್ಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ನ ಅತ್ಯುತ್ತಮ 12 ಆಟಗಾರರ ಬಳಗವನ್ನು ಇರ್ಫಾನ್ ಪಠಾಣ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆಯ್ಕೆ ಮಾಡಿದ್ದಾರೆ. ಈ ತಂಡದಲ್ಲಿ ಇರ್ಫಾನ್ ಪಠಾಣ್ ಸಂಜು ಸ್ಯಾಮ್ಸನ್ ಮತ್ತು ಆಯುಷ್ ಮ್ಹಾತ್ರೆ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು ಮೂರನೇ ಸ್ಥಾನಕ್ಕೆ ಕಳುಹಿಸಲು ಅವರು ನಿರ್ಧರಿಸಿದ್ದಾರೆ. ಶಿವಂ ದುಬೆ ಅವರನ್ನು ನಾಲ್ಕನೇ ಸ್ಥಾನಕ್ಕೆ ಮತ್ತು ಡೆವೋಲ್ಡ್ ಬ್ರೆವಿಸ್ ಅವರನ್ನು ಐದನೇ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ಇರ್ಫಾನ್ ಪಠಾಣ್ ಆರನೇ ಸ್ಥಾನಕ್ಕೆ ಸರ್ಫರಾಜ್ ಖಾನ್ ಅವರಿಗೆ ಆದ್ಯತೆ ನೀಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಬದಲಿಗೆ ಸರ್ಫರಾಜ್ ಖಾನ್ ಈ ಸ್ಥಾನಕ್ಕೆ ಸೂಕ್ತ ಎಂದು ಅವರು ಹೇಳಿದ್ದಾರೆ. ಏಕೆಂದರೆ ಕಳೆದ ಎರಡು ಸೀಸನ್‌ಗಳಲ್ಲಿ ಧೋನಿ ಕೊನೆಯ ಎರಡು ಓವರ್‌ಗಳಿಗೆ ಮಾತ್ರ ಬ್ಯಾಟಿಂಗ್ ಮಾಡಲು ಬಂದಿದ್ದರು. ಅಭಿಮಾನಿಗಳ ಉತ್ಸಾಹ ಹೆಚ್ಚಿಸಲು ಇದು ಒಳ್ಳೆಯದು. ಆದರೆ ಫ್ರಾಂಚೈಸಿಯ ದೃಷ್ಟಿಕೋನದಿಂದ ಇದು ಸರಿಯಲ್ಲ.
ಧೋನಿ ಬಗ್ಗೆ ಪಠಾಣ್ ಅಭಿಪ್ರಾಯ
ಇರ್ಫಾನ್ ಪಠಾಣ್ ಅವರ ಪ್ರಕಾರ, ಧೋನಿ ಕನಿಷ್ಠ ನಾಲ್ಕು ಓವರ್‌ಗಳಾದರೂ ಬ್ಯಾಟಿಂಗ್ ಮಾಡಬೇಕು. ಧೋನಿ ತಂಡದಲ್ಲಿ ಪೂರ್ಣ ಪ್ರಮಾಣದ ಆಟಗಾರನಾಗಿ ಆಡಿದರೆ ಅದು ಫ್ರಾಂಚೈಸಿಯಗೆ ಉತ್ತಮ. ಆದರೆ ಅದು ಸಂಭವಿಸದಿದ್ದರೆ, ಒಂದು ಪ್ರಶ್ನಾರ್ಥಕ ಚಿಹ್ನೆ ಉದ್ಭವಿಸುತ್ತದೆ. ಪ್ರತಿಯೊಬ್ಬ ಶ್ರೇಷ್ಠ ಆಟಗಾರನಿಗೂ, ಅವನು ಆಟವನ್ನು ಬಿಡಬೇಕಾದ ಸಮಯ ಬರುತ್ತದೆ. ಧೋನಿ ಈಗ ಸಿಎಸ್‌ಕೆ ತಂಡವನ್ನು ನಿರ್ಮಿಸುವತ್ತ ಗಮನಹರಿಸಬೇಕು. ಇದರಿಂದ ಹೆಚ್ಚಿನ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡುತ್ತದೆ. ಆದರೆ ಧೋನಿ ಆಡಲು ನಿರ್ಧರಿಸಿದರೆ, ಸರ್ಫರಾಜ್ ಖಾನ್ ಸಿಎಸ್‌ಕೆ ಪರ ತಮ್ಮ ಚೊಚ್ಚಲ ಐಪಿಎಲ್ ಪಂದ್ಯಕ್ಕಾಗಿ ಸ್ವಲ್ಪ ಸಮಯ ಕಾಯಬೇಕಾಗುತ್ತದೆ ಎಂದಿದ್ದಾರೆ.
ಕೆಳಕ್ರಮಾಂಕದಲ್ಲಿ ಯಾರು?
ಉಳಿದಂತೆ ಇರ್ಫಾನ್ ಪಠಾಣ್ ತಂಡದಲ್ಲಿ, ಕಾರ್ತಿಕ್ ಶರ್ಮಾ ಏಳನೇ ಕ್ರಮಾಂದಲ್ಲಿ, ಪ್ರಶಾಂತ್ ವೀರ್ ಎಂಟನೇ ಕ್ರಮಾಂದಲ್ಲಿ ಆಡಲಿದ್ದಾರೆ. ಸ್ಪಿನ್ ಬೌಲಿಂಗ್ ಜವಾಬ್ದಾರಿಯನ್ನು ಅಕೀಲ್ ಹುಸೇನ್ ಮತ್ತು ನೂರ್ ಅಹ್ಮದ್ ಅವರ ಹೆಗಲ ಮೇಲೆ ಹಾಕಿರುವ ಪಠಾಣ್, ವೇಗದ ಬೌಲರ್ಗಳಾಗಿ ಮ್ಯಾಟ್ ಹೆನ್ರಿ ಮತ್ತು ಖಲೀಲ್ ಅಹ್ಮದ್ (ಇಂಪ್ಯಾಕ್ಟ್ ಪ್ಲೇಯರ್) ಅವರಿಗೆ ಅವಕಾಶ ನೀಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ದಂಪತಿಯು ತಮ್ಮ ಪುಟ್ಟ ಅಭಿಮಾನಿಯೊಬ್ಬಳ ಆಸೆಯನ್ನು ಈಡೇರಿಸುವ ಮೂಲಕ ಫ್ಯಾನ್ಸ್ ಮನ ಗೆದ್ದಿದ್ದಾರೆ. ತನ್ನನ್ನು ಮದುವೆಗೆ ಆಹ್ವಾನಿಸಿಲ್ಲ ಎಂದು ಮುನಿಸಿಕೊಂಡಿದ್ದ ಬಾಲಕಿಯನ್ನು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡು ಪ್ರೀತಿಯಿಂದ ಆತಿಥ್ಯ ನೀಡಿದ್ದಾರೆ. ಈ ವಿಡಿಯೋವನ್ನು ಬಾಲಕಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಫೆಬ್ರವರಿ 28ರಂದು ರಶ್ಮಿಕಾ ಮತ್ತು ವಿಜಯ್ ಅದ್ದೂರಿಯಾಗಿ ವಿವಾಹವಾಗಿದ್ದರು. ಈ ಸಂದರ್ಭದಲ್ಲಿ ಪುಟ್ಟ ಬಾಲಕಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಳು. ‘ನಾನೂ ನಿಮ್ಮ ಅಭಿಮಾನಿ ಅಲ್ವಾ? ನನ್ನನ್ನೇಕೆ ಮದುವೆಗೆ ಕರೆದಿಲ್ಲ? ಎಲ್ಲರಿಗೂ ಲಡ್ಡು ಕೊಡುತ್ತಿದ್ದೀರಿ, ಅನ್ನದಾನ ಮಾಡುತ್ತಿದ್ದೀರಿ, ನನಗೆ ಮಾತ್ರ ಇಲ್ಲವೇ?’ ಎಂದು ಮುಗ್ಧವಾಗಿ ಪ್ರಶ್ನಿಸಿದ್ದಳು. ಈ ವಿಡಿಯೋ ಕಂಡು ಮನಸೋತಿದ್ದ ವಿಜಯ್ ದೇವರಕೊಂಡ, ‘ನಿನ್ನನ್ನು ಮನೆಗೆ ಊಟಕ್ಕೆ ಕರೆಯುತ್ತೇನೆ’ ಎಂದು ಭರವಸೆ ನೀಡಿದ್ದರು.
ತಮ್ಮ ಮಾತಿನಂತೆ ಈ ದಂಪತಿ ಇತ್ತೀಚೆಗೆ ಆ ಬಾಲಕಿ ಮತ್ತು ಆಕೆಯ ಕುಟುಂಬವನ್ನು ಮನೆಗೆ ಆಹ್ವಾನಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ವಿಜಯ್ ಆ ಪುಟ್ಟ ಬಾಲಕಿಯನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರೆ, ರಶ್ಮಿಕಾ ಮಂದಣ್ಣ ಆಕೆಯ ತಟ್ಟೆಗೆ ಲಡ್ಡುಗಳನ್ನು ಬಡಿಸಿ ಪ್ರೀತಿಯಿಂದ ಮುತ್ತು ನೀಡಿದ್ದಾರೆ. ವಿಜಯ್ ಕೂಡ ಆಕೆಗೆ ಪ್ರೀತಿಯಿಂದ ಊಟ ಬಡಿಸಿದ್ದಾರೆ. ‘ನಾವಿಬ್ಬರು ಫ್ರೆಂಡ್ಸ್ ಅಲ್ವಾ’ ಎಂದು ಬಾಲಕಿ ಕೇಳಿದಾಗ ವಿಜಯ್ ಮತ್ತು ರಶ್ಮಿಕಾ ನಗುತ್ತಾ ‘ಹೌದು’ ಎಂದಿದ್ದಾರೆ.
ವೈರಲ್ ವಿಡಿಯೋ:
ಈ ಭೇಟಿಯ ಬಗ್ಗೆ ಬರೆದುಕೊಂಡಿರುವ ಬಾಲಕಿಯ ಕುಟುಂಬ, ‘ರೀಲ್ ಟು ರಿಯಲ್… ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದ್ದು ಅದ್ಭುತ ಅನುಭವ. ಅವರು ನಮ್ಮನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡರು. ಇಬ್ಬರೂ ತುಂಬಾ ಸರಳ ವ್ಯಕ್ತಿತ್ವದವರು’ ಎಂದು ಸಂತಸ ಹಂಚಿಕೊಂಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಯ ಸರಳತೆಗೆ ಮತ್ತು ಅಭಿಮಾನಿಯ ಮೇಲಿರುವ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವೃತ್ತಿಜೀವನದ ವಿಚಾರಕ್ಕೆ ಬಂದರೆ, ರಶ್ಮಿಕಾ ಮತ್ತು ವಿಜಯ್ ಶೀಘ್ರದಲ್ಲೇ ‘ರಣಬಾಲಿ’ ಚಿತ್ರದಲ್ಲಿ ಒಂದಾಗಿ ನಟಿಸಲಿದ್ದಾರೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಬಳಿಕ ಅವರು ಒಂದಾಗಿ ನಟಿಸಲಿರುವ ಸಿನಿಮಾ ಇದು.
ನವದೆಹಲಿ, ಮಾರ್ಚ್ 20: ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆ 2026’ (WITT) ಮಾರ್ಚ್ 23-24 ರಂದು ದೆಹಲಿಯಲ್ಲಿ ನಡೆಯಲಿದೆ. ಈ ಶೃಂಗಸಭೆಗೂ ಮುನ್ನ ಮಾತನಾಡಿದ ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್, “ಜಾಗತಿಕ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಸಂಘರ್ಷಗಳ ಹೊರತಾಗಿಯೂ ಭಾರತವು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತವು ಇತಿಹಾಸದಲ್ಲಿ ಒಂದು ವಿಶಿಷ್ಟ ಘಟ್ಟದಲ್ಲಿ ನಿಂತಿದೆ” ಎಂದು ಹೇಳಿದ್ದಾರೆ.
“ಕಳೆದ ವರ್ಷ ಜಾಗತೀಕರಣವು ತೀವ್ರ ಹೊಡೆತ ನೀಡಿದೆ. ಸುಂಕಗಳನ್ನು ಆಯುಧಗಳಾಗಿ ಬಳಸುವುದು ಮತ್ತು ಈಗ ನಡೆಯುತ್ತಿರುವ ವಿವಿಧ ಯುದ್ಧಗಳ ಭಯವು ಜಗತ್ತನ್ನು ಆರ್ಥಿಕ ಅಸ್ಥಿರತೆಯ ಸ್ಥಿತಿಗೆ ತಳ್ಳಿದೆ ಎಂದು ಹೇಳಿದರು. ಈ ಯುದ್ಧವು ಭಾರತದ ಮೇಲೆ ನೇರವಾಗಿ ಪರಿಣಾಮ ಬೀರದಿದ್ದರೂ, ಅದರ ಪರಿಣಾಮವನ್ನು ಪ್ರಪಂಚದಾದ್ಯಂತ ಜನರು ಅನುಭವಿಸುತ್ತಿದ್ದಾರೆ” ಎಂದು ಬರುಣ್ ದಾಸ್ ಹೇಳಿದ್ದಾರೆ.
“ಈ ಸಂಘರ್ಷವು ನೇರವಾಗಿ ಭಾರತದ ಮನೆ ಬಾಗಿಲಿಗೆ ಬರದಿದ್ದರೂ ಅದರ ಆರ್ಥಿಕ ಪರಿಣಾಮ ಜಾಗತಿಕವಾಗಿ ಕಂಡುಬರುತ್ತಿದೆ. ನವದೆಹಲಿಯಿಂದ ನ್ಯೂಜೆರ್ಸಿಯವರೆಗೆ ಇದು ಪರಿಣಾಮ ಬೀರುತ್ತಿದೆ” ಎಂದು ಟಿವಿ9 ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬರುಣ್ ದಾಸ್ ಹೇಳಿದ್ದಾರೆ. ಇದೇ ವೇಳೆ ಇಂಧನ ಸುರಕ್ಷತೆಯ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಇಂಧನದ ಬಿಕ್ಕಟ್ಟು ಜಾಗತಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದ್ದಾರೆ.
“ಭಾರತವು ಇತಿಹಾಸದಲ್ಲಿ ಒಂದು ವಿಶಿಷ್ಟ ಘಟ್ಟದಲ್ಲಿ ನಿಂತಿದೆ. ಯುದ್ಧ, ಅಸಮಾನತೆ ಮತ್ತು ಹಿಂಸಾಚಾರದ ಸುಳಿಯಿಂದ ಹೊರಬರಲು ಜಗತ್ತು ಹೆಣಗಾಡುತ್ತಿರುವಾಗ, ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಭಾರತವು ತಂತ್ರಜ್ಞಾನ, ಸಂಸ್ಕೃತಿ ಮತ್ತು ಸಮಾಜದ ಪರಾಕ್ರಮವನ್ನು ಹೊಂದಿದೆ” ಎಂದು ಅವರು ಹೇಳಿದ್ದಾರೆ.
ಈ ಬಾರಿಯ ಶೃಂಗಸಭೆಯ ವಿಷಯವೆಂದರೆ “ಭಾರತ ಮತ್ತು ವಿಶ್ವ”. ಇದರಲ್ಲಿ ಪ್ರಮುಖ ಚಿಂತಕರು, ವ್ಯಾಪಾರ ಮುಖಂಡರು ಮತ್ತು ನಾಗರಿಕ ಸಮಾಜದ ನಾಯಕರು ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿಯವರ ಮುಖ್ಯ ಭಾಷಣದ ಜೊತೆಗೆ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಶ್ವಿನಿ ವೈಷ್ಣವ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ರಾಜಸ್ಥಾನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಭಾಗವಹಿಸಲಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಾರವಾರ, ಮಾರ್ಚ್ 20: ಹೆರಿಗೆ ಆಸ್ಪತ್ರೆಯಲ್ಲಿ ಬಡವರ ಹತ್ತಿರ ಹಣ ಸುಲಿಗೆ ಮಾಡಿದರೆ ಕೈಕಾಲು ಮುರಿಯುತ್ತೇನೆ. ನನ್ಮೇಲೆ ಕ್ರಿಮಿನಲ್ ಕೇಸ್ ಆದರೂ ಪರವಾಗಿಲ್ಲ ಎಂದು ಶಾಸಕ ಆರ್ವಿ ದೇಶಪಾಂಡೆ (R. V. Deshpande) ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದ ತಾಲೂಕು ಆರೋಗ್ಯ ರಕ್ಷ ಸಮಿತಿ ಸಭೆಯಲ್ಲಿ ವೈದ್ಯರಾದ ಡಾ.ಅಖಿಲ್ ಕಿತ್ತೂರು ಮತ್ತು ಡಾ.ಕೀರ್ತಿಗೆ ತರಾಟೆ ತೆಗೆದುಕೊಂಡಿದ್ದಾರೆ.
ವೈದ್ಯರ ಚಳಿ ಬಿಡಿಸಿದ ಶಾಸಕ ಆರ್ವಿ ದೇಶಪಾಂಡೆ
ಹೆರಿಗೆ ಮಾಡಿದರೆ ಯಾಕೆ ಹಣ ಪಡೆಯುತ್ತೀರಿ ಎಂದು ಸಭೆಯಲ್ಲಿ ಶಾಸಕ ಆರ್ವಿ ದೇಶಪಾಂಡೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಉತ್ತರಿಸಿದ ವೈದರು ನಾವು ಯಾರಿಂದಲೂ ಕೇಳಿ ಪಡೆಯುತ್ತಿಲ್ಲ. ಅವರೇ ಖುಷಿಯಿಂದ ಕೊಟ್ಟರಷ್ಟೇ ತಗೋತೇವೆ ಎಂದಿದ್ದಾರೆ.
ವೈದ್ಯರ ಮಾತಿಗೆ ಕೆಂಡಾಮಂಡಲರಾದ ಶಾಸಕ ದೇಶಪಾಂಡೆ, ಏನು ನಿಮ್ಮ ಮಾತಿನ ಅರ್ಥ. ಯಾರ ಬಳಿ ಕೇಳಲ್ಲ, ಕೊಟ್ಟಷ್ಟು ತಗೋತೀವಿ ಅಂದರೆ ಏನರ್ಥ. ಮಾನ ಮರ್ಯಾದೆ ಇಲ್ವಾ ನಿಮಗೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದುವರೆಗೆ ಪಡೆದ ಹಣದ ಮಾಹಿತಿ ಪಡೆಯುವಂತೆ ತಹಶೀಲ್ದಾರ್ಗೆ ನಿರ್ದೇಶಿಸಿದ್ದಾರೆ.
ನಾನೇನು ಮಂತ್ರಿ ಸ್ಥಾನಕ್ಕೆ ಅಪೇಕ್ಷೆ ಇಟ್ಟಿಲ್ಲ ಎಂದ ಶಾಸಕ ಆರ್ವಿ ದೇಶಪಾಂಡೆ
ಮಂತ್ರಿ ಸ್ಥಾನದ ವಿಚಾರವಾಗಿ ಮಾತನಾಡಿದ ಅವರು, ಹೊಸ ಶಾಸಕರು ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಎಲ್ಲರಿಗೂ ಮಂತ್ರಿ ಆಗಬೇಕೆಂಬ ಆಸೆ ಇರುವುದು ಸಹಜ. ಮಂತ್ರಿ ಆಗಬೇಕಂತ ನನಗೆ ಅತಿ ಆಸೆ ಇಲ್ಲ. ಅವರಿಗೆ ಬೇಕಾದರೆ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿ. 9 ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಏಳೆಂಟು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಮಂತ್ರಿ ಮಾಡಿ ಅಂತ ನಾನ್ಯಾರಿಗೂ ಕೇಳಲ್ಲ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ನನಗಿಂತ ವಯಸ್ಸಿನಲ್ಲಿ ಚಿಕ್ಕವರು. ಅವರು ನನ್ನ ತಮ್ಮನಿದ್ದಂತೆ. ಸಚಿವರು ಹಾಗೂ ಅಧಿಕಾರಿಗಳು ಗೌರವದಿಂದ ಕಾಣುತ್ತಾರೆ. ನನ್ನ ಕ್ಷೇತ್ರಕ್ಕೆ ಬೇಕಾಗಿರುವ ಎಲ್ಲ ಕೆಲಸಗಳು ಆಗುತ್ತಿವೆ. ಹೀಗಾಗಿ ನಾನೇನು ಮಂತ್ರಿ ಸ್ಥಾನಕ್ಕೆ ಅಪೇಕ್ಷೆ ಇಟ್ಟಿಲ್ಲ ಎಂದು ಶಾಸಕ ಆರ್ವಿ ದೇಶಪಾಂಡೆ ಹೇಳಿದ್ದಾರೆ.
ನವದೆಹಲಿ, ಮಾರ್ಚ್ 20: ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರುಕಟ್ಟೆ ಕಂಪನಿಗಳು ತಮ್ಮ ಪ್ರೀಮಿಯಮ್ ಪೆಟ್ರೋಲ್ ದರಗಳನ್ನು ಏರಿಸಿರುವ ಬೆನ್ನಲ್ಲೇ ಇಂಡಿಯನ್ ಆಯಿಲ್ ಸಂಸ್ಥೆಯು ಕೈಗಾರಿಕಾ ಡೀಸಲ್ ಬೆಲೆಯನ್ನು (Industrial Diesel prices) ಹೆಚ್ಚಿಸಿದೆ. ಒಂದು ಲೀಟರ್ಗೆ 87.57 ರೂ ಇದ್ದ ಡೀಸಲ್ ಬೆಲೆ 109.59 ರೂಗೆ ಏರಿಸಲಾಗಿದೆ. ಬೆಲೆಯಲ್ಲಿ ಬರೋಬ್ಬರಿ ಶೇ. 25ರಷ್ಟು ಹೆಚ್ಚಳ ಆಗಿದೆ.
ಇರಾನ್ ಯುದ್ಧದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಮತ್ತು ಅನಿಲಗಳ ಹಡಗುಗಳ ಸಾಗಣೆಗೆ ನಿರ್ಬಂಧ ಇರುವುದರಿಂದ ಜಾಗತಿಕವಾಗಿ ಇವುಗಳ ಸರಬರಾಜು ಕುಂಠಿತಗೊಂಡಿದೆ. ಭಾರತಕ್ಕೂ ಇವುಗಳ ಕೊರತೆ ಕಾಡುತ್ತಿದೆ. ಜನಸಾಮಾನ್ಯರಿಗೆ ಬಾಧೆಯಾಗುವುದನ್ನು ತಪ್ಪಿಸಲು ಸರ್ಕಾರ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡದಂತೆ ಎಚ್ಚರ ವಹಿಸುತ್ತಿದೆ.
ಈಗ ಇರಾನ್ ಯುದ್ಧದ ಅವಧಿ ನಿರೀಕ್ಷೆಮೀರಿ ಹಿಗ್ಗುತ್ತಿರುವುದರಿಂದ ತೈಲ ಪೂರೈಕೆ ಮತ್ತಷ್ಟು ಕಠಿಣಗೊಂಡಿದೆ. ಈ ಕಾರಣಕ್ಕೆ ಸರ್ಕಾರಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಬಹುದು. ಹೀಗಾಗಿ, ಪ್ರೀಮಿಯಮ್ ಪೆಟ್ರೋಲ್, ಔದ್ಯಮಿಕ ಡೀಸಲ್ ಬೆಲೆಗಳನ್ನು ಸದ್ಯಕ್ಕೆ ಹೆಚ್ಚಿಸಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮಾಮೂಲಿಯ ಪೆಟ್ರೋಲ್, ಡೀಸಲ್ ದರಗಳನ್ನು ಹೆಚ್ಚಿಸುವ ಸಾಧ್ಯತೆ ಇದ್ದೇ ಇದೆ.
ಈಗ ಕೈಗಾರಿಕಾ ಡೀಸಲ್ ಅನ್ನು ವಿವಿಧ ಕೈಗಾರಿಕೆಗಳು ಬಳಸುತ್ತವೆ. ವಿದ್ಯುತ್ ಉತ್ಪಾದನೆ, ಮ್ಯಾನುಫ್ಯಾಕ್ಚರಿಂಗ್ ಇತ್ಯಾದಿ ಕ್ಷೇತ್ರದ ಕಂಪನಿಗಳು ಈ ಡೀಸಲ್ ಅನ್ನು ಬಳಸುತ್ತವೆ. ಈಗ ಭಾರೀ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿರುವುದರಿಂದ ಕೈಗಾರಿಕಾ ಉತ್ಪಾದನಾ ವೆಚ್ಚ ಮತ್ತು ಸಾರಿಗೆ ವೆಚ್ಚ ಹೆಚ್ಚಲಿದೆ.
ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳ ಪ್ರೀಮಿಯಮ್ ಪೆಟ್ರೋಲ್ ಬೆಲೆ ಲೀಟರ್ಗೆ 2.05 ರೂನಿಂದ 2.30 ರೂವರೆಗೆ ಏರಿಕೆ ಮಾಡಲಾಗಿದೆ. ಆದರೆ, ಮಾಮೂಲಿಯ ಪೆಟ್ರೋಲ್ ಮತ್ತು ಡೀಸಲ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿಲ್ಲ.
19ನೇ ಆವೃತ್ತಿಯ ಐಪಿಎಲ್ ಮಾರ್ಚ್ 28 ರಂದು ಆರಂಭವಾಗುತ್ತಿದೆ. ಇದರೊಂದಿಗೆ ಒಂದು ಟ್ರೋಫಿ ಗೆಲ್ಲುವ ಸಲುವಾಗಿ 10 ತಂಡಗಳು ಮೈದಾನದಲ್ಲಿ ಹೋರಾಟ ನೀಡಲಿವೆ. ಈ 10 ತಂಡಗಳಲ್ಲಿ ದೇಶ, ವಿದೇಶಗಳ 200 ಕ್ಕೂ ಅಧಿಕ ಪ್ರತಿಭಾನಿತ್ವ ಕ್ರಿಕೆಟಿಗರು ತಮ್ಮ ತಂಡವನ್ನು ಚಾಂಪಿಯನ್ ಮಾಡುವ ಸಲುವಾಗಿ ಸಾಕಷ್ಟು ಬೆವರು ಹರಿಸಲಿದ್ದಾರೆ. ಈ 200 ಕ್ಕೂ ಅಧಿಕ ಆಟಗಾರರ ಪಟ್ಟಿಯಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ಆಟಗಾರರು ಎಷ್ಟು ಮಂದಿ? ಅವರುಗಳಲ್ಲಿ ಯಾರ್ಯಾರು ಯಾವ ತಂಡದ ಪರ ಆಡಲಿದ್ದಾರೆ? ಇದರಲ್ಲಿ ಎಷ್ಟು ಆಟಗಾರರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲಿದೆ ಎಂಬುದನ್ನು ನೋಡುವುದಾದರೆ..
ಕೆಎಲ್ ರಾಹುಲ್: ಐಪಿಎಲ್ನಲ್ಲಿ ಆಡುತ್ತಿರುವ ಕರ್ನಾಟಕದ ಪ್ರಮುಖ ಆಟಗಾರರ ಪಟ್ಟಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಈ ಲೀಗ್ನಲ್ಲಿ ಸಾಕಷ್ಟು ಅನುಭವ ಹೊಂದಿರುವ ರಾಹುಲ್ ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದಾರೆ. ಪ್ರಸ್ತುತ 14 ಕೋಟಿ ರೂ. ವೇತನ ಪಡೆಯುವದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ರಾಹುಲ್ , ಈ ಸೀಸನ್ನಲ್ಲಿ ಆರಂಭಿಕ ಬ್ಯಾಟ್ಸ್ಮನ್ ಆಗಿ ಆಡುವುದರ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹೊರಲಿದ್ದಾರೆ.
ಕರುಣ್ ನಾಯರ್: ಕೆಎಲ್ ರಾಹುಲ್ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್, ಕಳೆದ ಆವೃತ್ತಿಯಲ್ಲಿ 50 ಲಕ್ಷ ರೂ.ಗೆ ಡೆಲ್ಲಿ ತಂಡವನ್ನು ಸೇರಿಕೊಂಡಿದ್ದ ಕರುಣ್ ಕೆಲವು ಗಮನಾರ್ಹ ಇನ್ನಿಂಗ್ಸ್ ಕೂಡ ಆಡಿದ್ದರು. ಹೀಗಾಗಿ ಅವರನ್ನು ಡೆಲ್ಲಿ ತನ್ನ ತಂಡದಲ್ಲಿಯೇ ಉಳಿಸಿಕೊಂಡಿದೆ. ಈ ಆವೃತ್ತಿಯಲ್ಲಿ ಕರುಣ್ಗೆ ತಂಡದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆಗಳಿವೆ.
ದೇವದತ್ ಪಡಿಕ್ಕಲ್; ತವರು ತಂಡ ಆರ್ಸಿಬಿಯಲ್ಲಿರುವ ಏಕೈಕ ಕನ್ನಡಿಗ ದೇವದತ್ ಪಡಿಕ್ಕಲ್. ತಂಡದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಪಡಿಕ್ಕಲ್, ಕಳೆದ ಆವೃತ್ತಿಯಲ್ಲಿ ಇಂಜುರಿಗೊಂಡು ಲೀಗ್ನಿಂದ ಹೊರಬೀಳುವುದಕ್ಕೂ ಮುನ್ನ ತಂಡದ ಪರ ಅಮೋಘ ಪ್ರದರ್ಶನ ನೀಡಿದ್ದರು. ಹೀಗಾಗಿ 2 ಕೋಟಿ ರೂಗೆ ಖರೀದಿಸಿದ್ದ ಪಡಿಕ್ಕಲ್ ಅವರನ್ನು ಆರ್ಸಿಬಿ ಫ್ರಾಂಚೈಸಿ ಈನ ಆವೃತ್ತಿಗೂ ತಂಡದಲ್ಲಿ ಉಳಿಸಿಕೊಂಡಿದೆ. ಪ್ರಸ್ತುತ ಅದ್ಭುತ ಫಾರ್ಮ್ನಲ್ಲಿರುವ ಪಡಿಕ್ಕಲ್ ಈ ಆವೃತ್ತಿಯಲ್ಲಿ ತಂಡದಲ್ಲಿ ಆಡುವುದು ಖಚಿತ.
ಪ್ರಸಿದ್ಧ್ ಕೃಷ್ಣ; ಗುಜರಾತ್ ಟೈಟನ್ಸ್ ತಂಡದ ಬೌಲಿಂಗ್ ವಿಭಾಗದಲ್ಲಿ ಖಾಯಂ ಸ್ಥಾನ ಪಡೆದಿರುವ ಪ್ರಸಿದ್ಧ್ ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 9.5 ಕೋಟ ರೂಗಳ ದಾಖಲೆಯ ಮೊತ್ತಕ್ಕೆ ಗುಜರಾತ್ ತಂಡವನ್ನು ಸೇರಿಕೊಂಡಿರುವ ಪ್ರಸಿದ್ಧ್ ಈ ಬಾರಿಯೂ ತಂಡದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.
ವೈಶಾಕ್ ವಿಜಯ್ಕುಮಾರ್; ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಐಪಿಎಲ್ ವೃತ್ತಿಜೀವನ ಆರಂಭಿಸಿದ್ದ ವೈಶಾಕ್ ಪ್ರಸ್ತುತ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾರೆ. 2025 ರ ಮೆಗಾ ಹರಾಜಿನಲ್ಲಿ 1.5 ಕೋಟಿ ರೂಗಳಿಗೆ ಪಂಜಾಬ್ ತಂಡವನ್ನು ಸೇರಿಕೊಂಡಿರುವ ವೈಶಾಕ್ ಕಳೆದ ಆವೃತ್ತಿಯಂತೆ ಈ ಆವೃತ್ತಿಯಲ್ಲೂ ಆಡುವ ಅವಕಾಶ ಪಡೆಯಲಿದ್ದಾರೆ.
ಶ್ರೇಯಸ್ ಗೋಪಾಲ್; 2025 ರ ಮೆಗಾ ಹರಾಜಿನಲ್ಲಿ ಆಲ್ರೌಂಡರ್ ಶ್ರೇಯಲ್ ಗೋಪಾಲ್ ಅವರನ್ನು ಸಿಎಸ್‌ಕೆ ಫ್ರಾಂಚೈಸಿ 30 ಲಕ್ಷ ರೂ ನೀಡಿ ಖರೀದಿ ಮಾಡಿದೆ. ಈ ಆವೃತ್ತಿಯಲ್ಲೂ ಅವರನ್ನು ತಂಡದಲ್ಲಿ ಉಳಿಸಿಕೊಂಡಿರುವ ಸಿಎಸ್‌ಕೆ ಅವರಿಗೆ ಆಡುವ ಅವಕಾಶ ನೀಡಬಹುದು. ಐಪಿಎಲ್ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಶ್ರೇಯಸ್ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯದ ಜೊತೆಗೆ ಲೆಗ್ ಸ್ಪಿನ್ನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಮನೀಶ್ ಪಾಂಡೆ; ಕಳೆದ 18 ಐಪಿಎಲ್ ಆವೃತ್ತಿಗಳಲ್ಲಿ ಆಡಿರುವ ಕೆಲವೇ ಕೆಲವು ಆಟಗಾರರ ಪಟ್ಟಿಯಲ್ಲಿ ಮನೀಶ್ ಪಾಂಡೆ ಕೂಡ ಒಬ್ಬರು. 2025 ರ ಮೆಗಾ ಹರಾಜಿನಲ್ಲಿ ಮನೀಶ್ಗೆ 75 ಲಕ್ಷ ರೂ. ನೀಡಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿ ಮಾಡಿತ್ತು. ಈ ಆವೃತ್ತಿಯಲ್ಲೂ ಅವರನ್ನು ಉಳಿಸಿಕೊಂಡಿರುವ ಕೆಕೆಆರ್ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡುತ್ತಾ ಕಾದು ನೋಡಬೇಕಿದೆ.
ಪ್ರವೀಣ್ ದುಬೆ; ವೈಶಾಕ್ ವಿಜಯ್ಕುಮಾರ್ ಜೊತೆಗೆ ಪಂಜಾಬ್ ಕಿಂಗ್ಸ್ ತಂಡದಲ್ಲಿರುವ ಮತ್ತೊಬ್ಬ ಆಟಗಾರ ಪ್ರವೀಣ್ ದುಬೆ. 2026 ರ ಐಪಿಎಲ್ ಹರಾಜಿನಲ್ಲಿ 30 ಲಕ್ಷ ರೂ ನೀಡಿ ಪಂಜಾಬ್ ಫ್ರಾಂಚೈಸಿ ಈ ಲೆಗ್ ಸ್ಪಿನ್ನರ್ನ ಖರೀದಿ ಮಾಡಿದ್ದು, ಅವರಿಗೆ ಆಡುವ ಅವಕಾಶ ಸಿಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಸ್ಮರಣ್ ರವಿಚಂದ್ರನ್; ಇತ್ತಿಚೆಗಷ್ಟೆ ಮುಗಿದಿದ್ದ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಪರ ಅಮೋಘ ಪ್ರದರ್ಶನ ನೀಡಿದ್ದ ಸ್ಮರಣ್ರನ್ನು ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 2025 ರಲ್ಲಿ ಆಡಂ ಝಂಪಾ ಬದಲಿಗೆ 30 ಲಕ್ಷ ರೂಗಳ ಮೂಲ ಬೆಲೆಗೆ ಖರೀದಿ ಮಾಡಿತ್ತು. ತಂಡದಲ್ಲಿ ಈಗಾಗಲೇ ಅಭ್ಯಾಸ ಆರಂಭಿಸಿರುವ ಸ್ಮರಣ್ಗೆ ತಂಡದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಗಬಹುದು.
ಹವಾಮಾನ ಬದಲಾಗುತ್ತಿರುವುದರಿಂದ ಮನೆಗಳಲ್ಲಿ ಎಸಿ (AC) ಬಳಕೆ ಆರಂಭ ಹೆಚ್ಚಾಗಿದೆ. ಆದರೆ ಮನೆಯಲ್ಲಿ ಮಕ್ಕಳಿದ್ದಾಗ, ಎಸಿ ಬಳಸುವಾಗ ವಿಶೇಷ ಜಾಗ್ರತೆ ಅಗತ್ಯವಾಗಿದೆ. ಸರಿಯಾದ ರೀತಿಯಲ್ಲಿ ಬಳಸದೇ ಇದ್ದರೆ, ಇದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ವೈದ್ಯರ ಪ್ರಕಾರ, ಅನೇಕ ಬಾರಿ ಪಾಲಕರು ಅರಿವಿಲ್ಲದೆ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಇದು ಮಕ್ಕಳ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಹಾಗಾಗಿ, ಎಸಿ ಬಳಸುವಾಗ ಯಾವ ವಿಷಯಗಳನ್ನು ಗಮನಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಮಕ್ಕಳ ಕೋಣೆಯಲ್ಲಿ ತಾಪಮಾನ ಎಷ್ಟಿರಬೇಕು?
ತಜ್ಞರ ಪ್ರಕಾರ, ಮಗು ಮಲಗುವ ಕೊಠಡಿಯಲ್ಲಿ ಎಸಿ ತಾಪಮಾನ 23ರಿಂದ 27 ಡಿಗ್ರಿ ಸೆಲ್ಸಿಯಸ್ ನಡುವೆ ಇಡಬೇಕು. ಇದಕ್ಕಿಂತ ಕಡಿಮೆ ತಾಪಮಾನ ಇದ್ದಲ್ಲಿ, ಅದು ಯಾವುದೇ ಋತುವಾಗಿರಲಿ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ತಂಪಾದ ವಾತಾವರಣದಿಂದ ಮಕ್ಕಳಿಗೆ ಕೆಮ್ಮು, ಶೀತ ಅಥವಾ ಅಲರ್ಜಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅದರಲ್ಲಿಯೂ ಎಸಿ ಗಾಳಿಯು ನೇರವಾಗಿ ಮಗುವಿನ ಮೇಲೆ ಬೀಳದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ. ನೇರ ಗಾಳಿಯ ಪರಿಣಾಮವಾಗಿ ಮಗುವಿನ ಚರ್ಮದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಎಸಿ ಇರುವ ಕೊಠಡಿಯಲ್ಲಿ ಮಲಗುವ ಮಗುವಿಗೆ ಸರಿಯಾದ ಬಟ್ಟೆಗಳನ್ನು ಹಾಕಬೇಕು. ಬಟ್ಟೆಗಳು ಮಗುವಿನ ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತಿರಬೇಕು. ಆದರೆ, ಅಗತ್ಯಕ್ಕಿಂತ ಹೆಚ್ಚು ಬಟ್ಟೆ ಹಾಕಬಾರದು, ಏಕೆಂದರೆ ಇದರಿಂದ ದೇಹದ ತಾಪಮಾನ ಹೆಚ್ಚಾಗಿ ಹೊರಗಿನ ತಣ್ಣನೆಯ ವಾತಾವರಣದೊಂದಿಗೆ ವ್ಯತ್ಯಾಸ ಉಂಟಾಗಿ ಆರೋಗ್ಯ ಸಮಸ್ಯೆಗಳು ಬರಬಹುದು. ಹಾಗಾಗಿ ಹಗುರವಾಗಿರುವ ಮತ್ತು ಆರಾಮದಾಯಕವಾಗಿರುವ ಬಟ್ಟೆಗಳನ್ನು ಆಯ್ಕೆ ಮಾಡುವುದು ಬಹಳ ಉತ್ತಮ.
ಆದರೆ ನೆನೆಪಿರಲಿ, ಎಸಿಯನ್ನು ನಿರಂತರವಾಗಿ ಬಳಸುವುದು ಸರಿಯಲ್ಲ. ಪ್ರತಿ 3ರಿಂದ 4 ಗಂಟೆಗೆ ಒಂದು ಬಾರಿ ಎಸಿಯನ್ನು ಸ್ವಲ್ಪ ಸಮಯ ಆಫ್ ಮಾಡಿ, ಸುಮಾರು ಅರ್ಧ ಗಂಟೆಯ ನಂತರ ಮತ್ತೆ ಆನ್ ಮಾಡುವುದು ಉತ್ತಮ. ಇದರಿಂದ ಕೊಠಡಿಯ ವಾತಾವರಣ ಸಮತೋಲನದಲ್ಲಿರುತ್ತದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಎಸಿ ಬಳಕೆ ಮಾಡುವಾಗ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಸರಿಯಾದ ತಾಪಮಾನ, ಗಾಳಿಯ ನಿಯಂತ್ರಣ ಮತ್ತು ಬಟ್ಟೆಗಳ ಆಯ್ಕೆ ಮೂಲಕ ಮಕ್ಕಳು ಆರೋಗ್ಯವಾಗಿರುವಂತೆ ನೋಡಿಕೊಳ್ಳಬಹುದು.
ಬೆಂಗಳೂರಿನ ಸ್ಯಾಂಕಿ ಕೆರೆ (Sankey Tank) ಮುಂದೆ ಪುನೀತ್ ರಾಜ್‍ಕುಮಾರ್ ಅವರ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಲಾಗಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneeth Rajkumar) ಅವರು 800 ಕೆಜಿ ತೂಕದ ಪ್ರತಿಮೆಯನ್ನು ಅನಾವರಣ ಮಾಡಿದರು. ಈ ವೇಳೆ ಮಲ್ಲೇಶ್ವರದ ಶಾಸಕ ಡಾ. ಅಶ್ವತ್ಥ್ ನಾರಾಯಣ ಮತ್ತು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಭಾಗಿ ಆಗಿದ್ದರು. ‘ಪ್ರತಿಮೆ ಚೆನ್ನಾಗಿದೆ. ಅಭಿಮಾನಿಗಳಿಗೆ ಮತ್ತು ಅಶ್ವತ್ಥ್ ನಾರಾಯಣ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದರು ಅಶ್ವಿನಿ ಪುನೀತ್ ರಾಜ್‍ಕುಮಾರ್. ‘ನಮ್ಮನೆಚ್ಚಿನ ನಟ ಪುನೀತ್ ರಾಜ್‍ಕುಮಾರ್ (Puneeth Rajkumar). ಅವರ ಮೆಚ್ಚಿನ ಸ್ಥಳ ಸದಾಶಿವ ನಗರ. ಇಲ್ಲಿ ಅವರ ಪ್ರತಿಮೆ ಆಗಬೇಕು ಎಂಬ ಬೇಡಿಕೆ ಇತ್ತು. ಇದಕ್ಕೆ ಸ್ಫೂರ್ತಿಯ ಪ್ರತಿಮೆ ಎಂದು ಹೆಸರಿಡಲಾಗಿದೆ. ಎಲ್ಲರ ಸಲಹೆ ಪಡೆದು ಪ್ರತಿಮೆ ಮಾಡಲಾಗಿದೆ. ಯುಗಾದಿ ಹಬ್ಬದ ಸಂಧರ್ಭದಲ್ಲಿ ಉದ್ಘಾಟನೆ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೆ, ಅಭಿಮಾನಿಗಳಿಗೆ, ಪುನೀತ್ ಕುಟುಂಬಕ್ಕೆ ಧನ್ಯವಾದಗಳು’ ಎಂದು ಅಶ್ವತ್ಥ್ ನಾರಾಯಣ ಅವರು ಹೇಳಿದರು.
ನವದೆಹಲಿ, ಮಾರ್ಚ್ 20: ಫುಡ್ ಡೆಲಿವರಿ ಕಂಪನಿಯಾದ ಜೊಮಾಟೊ ತನ್ನ ಪ್ಲಾಟ್ಫಾರ್ಮ್ ಶುಲ್ಕವನ್ನು (Zomato platform fee) ಏರಿಸಿದೆ. 12.50 ರೂ ಇದ್ದ ಜೊಮಾಟೊ ಪ್ಲಾಟ್ಫಾರ್ಮ್ ಫೀ ಅನ್ನು 14.90 ರೂಗೆ ಏರಿಸಲಾಗಿದೆ. ಒಬ್ಬ ಗ್ರಾಹಕ ನೀಡುವ ಪ್ರತೀ ಆರ್ಡರ್ಗೆ ಪ್ಲಾಟ್ಫಾರ್ಮ್ ಫೀ ಅನ್ವಯ ಆಗುತ್ತದೆ. ಇದರಲ್ಲಿ 2.40 ರೂ ಅಥವಾ ಶೇ. 19.2ರಷ್ಟು ಶುಲ್ಕ ಏರಿಕೆ ಆಗಿದೆ.
ಒಂದು ವರ್ಷದೊಳಗೆ ಜೊಮಾಟೊ ಎರಡನೇ ಬಾರಿ ತನ್ನ ಪ್ಲಾಟ್ಫಾರ್ಮ್ ಫೀ ಏರಿಸಿರುವುದು. 2025ರ ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಳ ಮಾಡಲಾಗಿತ್ತು. ಈ ಪ್ಲಾಟ್ಫಾರ್ಮ್ ಫೀ ಮೇಲೆ ಜಿಎಸ್ಟಿ ಕೂಡ ಅನ್ವಯ ಆಗುತ್ತದೆ. ಎಲ್ಪಿಜಿ ಬೆಲೆ ಏರಿಕೆಯ ಬಿಸಿಯಲ್ಲಿರುವ ಗ್ರಾಹಕರಿಗೆ ಈಗ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ನಲ್ಲೂ ದರ ಏರಿಕೆಯ ಶಾಕ್ ಸಿಗಲಿದೆ.
ಎರಡನೇ ಅತಿದೊಡ್ಡ ಫುಡ್ ಡೆಲಿವರಿ ಆ್ಯಪ್ ಆಗಿರುವ ಸ್ವಿಗ್ಗಿಯಲ್ಲಿ ಪ್ಲಾಟ್ಫಾರ್ಮ್ ಫೀ 14.99 ರೂ ಇದೆ. ಮೂರನೇ ಅತಿದೊಡ್ಡ ಫುಡ್ ಡೆಲಿವರಿ ಆ್ಯಪ್ ಆದ ಮ್ಯಾಜಿಕ್ಪಿನ್ನ ಪ್ಲಾಟ್ಫಾರ್ಮ್ ಫೀ 14.20 ರೂ ಇದೆ. ಸ್ವಿಗ್ಗಿ ಮತ್ತು ಜೊಮಾಟೊ ಬಹುತೇಕ ಸಮಾನ ಪ್ಲಾಟ್ಫಾರ್ಮ್ ಫೀ ಹೊಂದಿವೆ. ಮ್ಯಾಜಿಕ್ಪಿನ್ ಸ್ವಲ್ಪ ಕಡಿಮೆ ಶುಲ್ಕವನ್ನು ವಿಧಿಸುತ್ತಿದೆ.
ಫುಡ್ ಡೆಲಿವರಿ ಪ್ಲಾಟ್ಫಾರ್ಮ್ಗಳು ಗ್ರಾಹಕರಿಗೆ ಯಾವೆಲ್ಲಾ ಶುಲ್ಕ ವಿಧಿಸುತ್ತವೆ?
ಪ್ಲಾಟ್ಫಾರ್ಮ್ ಫೀ
ಡೆಲಿವರಿ ಪಾರ್ಟ್ನರ್ ಫೀ
ಜಿಎಸ್ಟಿ
ರೆಸ್ಟೋರೆಂಟ್ ಪ್ಯಾಕಿಂಗ್ ಚಾರ್ಜಸ್
ಕೆಲ ಪ್ಲಾಟ್ಫಾರ್ಮ್ಗಳು ಬೇರೆ ಶುಲ್ಕ ಹಾಕಬಹುದು. ಉದಾಹರಣೆಗೆ, ಜೊಮಾಟೊ ಸಂಸ್ಥೆ ಫೀಡಿಂಗ್ ಇಂಡಿಯಾ ಸ್ಕೀಮ್ಗೆ ಡೊನೇಶನ್ ಆಗಿ ಪ್ರತೀ ಆರ್ಡರ್ಗೆ 4 ರೂ ಸಂಗ್ರಹಿಸುತ್ತದೆ. ಹಾಗೆಯೇ, ಸರ್ಜಿಂಗ್ ಪ್ರೈಸ್ ಅನ್ನೂ ವಿಧಿಸುತ್ತವೆ. ಮೇಲೆ ತಿಳಿಸಿದ ನಾಲ್ಕು ಶುಲ್ಕಗಳಲ್ಲಿ ಜಿಎಸ್ಟಿಯು ಸರ್ಕಾರಕ್ಕೆ ಹೋಗುತ್ತದೆ. ರೆಸ್ಟೋರೆಂಟ್ ಪ್ಯಾಕಿಂಗ್ ಶುಲ್ಕವು ಆಯಾ ರೆಸ್ಟೋರೆಂಟ್ಗೆ ಸಂದಾಯವಾಗುತ್ತದೆ.
ಇದರ ಜೊತೆಗೆ ಫುಡ್ ಡೆಲಿವರಿ ಆ್ಯಪ್ಗಳು ತಮ್ಮ ರೆಸ್ಟೋರೆಂಟ್ ಪಾರ್ಟ್ನರ್ಗಳಿಂದ ಕಮಿಷನ್ ಫೀಸ್ ಕೂಡ ಸಂಗ್ರಹಿಸುತ್ತವೆ. ಶೇ. 30ಕ್ಕಿಂತಲೂ ಹೆಚ್ಚಿನ ಕಮಿಷನ್ ಅನ್ನು ರೆಸ್ಟೋರೆಂಟ್ಗಳು ನೀಡುತ್ತವೆ. ರೆಸ್ಟೋರೆಂಟ್ಗೆ ಹೋಗಿ ನೀವು 250 ರೂ ಮೊತ್ತದ ತಿಂಡಿಯನ್ನು ಪ್ಯಾಕ್ ಮಾಡಿ ತರಲು ಆಗುವ ವೆಚ್ಚಕ್ಕೆ ಹೋಲಿಸಿದರೆ ಅದೇ ತಿಂಡಿಯನ್ನು ಆ್ಯಪ್ ಮೂಲಕ ತರಿಸಿಕೊಂಡರೆ 350 ರೂಗಿಂತಲೂ ಹೆಚ್ಚು ವೆಚ್ಚವಾಗುತ್ತದೆ.