ವೈ-ಫೈ ಸಿಗ್ನಲ್ ಹೆಚ್ಚಿಸಲು ಸಿಂಪಲ್ ಟ್ರಿಕ್ಸ್; ಟಿವಿಯಿಂದ ರೂಟರ್ ತುಸು ದೂರ ಸರಿಸಿದರೆ ಸಾಕು; ಇಂಟರ್ನೆಟ್ ವೇಗ ಶೇ. 30 ಏರುತ್ತೆ – Kannada News | Simple hacks to boost Wi fi signal and internet speed

ಮನೆಯಲ್ಲಿ ವೈ-ಫೈ (Wi-Fi) ಸಂಪರ್ಕವಿದ್ದರೂ ಇಂಟರ್ನೆಟ್ ವೇಗ ಕಡಿಮೆಯಿದೆಯೇ ಅಥವಾ ಸಿಗ್ನಲ್ ಕಟ್ ಆಗುತ್ತಿದೆಯೇ? ಇದಕ್ಕೆ ಕಾರಣ ನಿಮ್ಮ ವೈ-ಫೈ ರೂಟರ್ ಅನ್ನು ಟಿವಿ (TV) ಅಥವಾ ಇತರ ಎಲೆಕ್ಟ್ರಾನಿಕ್ ಉಪಕರಣಗಳ ಪಕ್ಕದಲ್ಲೇ ಇಟ್ಟಿರುವುದು ಇರಬಹುದು. ರೂಟರ್ ಅನ್ನು ಟಿವಿಯಿಂದ ಕೇವಲ ಕೆಲವು ಅಡಿಗಳಷ್ಟು ದೂರ ಸರಿಸುವುದರಿಂದ ವೈ-ಫೈ ಸಿಗ್ನಲ್ ಸಾಮರ್ಥ್ಯ ಮತ್ತು ಇಂಟರ್ನೆಟ್ ವೇಗವನ್ನು ಶೇ. 30 ರಷ್ಟು (up to 30%) ಹೆಚ್ಚಿಸಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

ಟಿವಿ ಬಳಿ ರೂಟರ್ ಇಡುವುದರಿಂದ ಸಮಸ್ಯೆ ಏಕಾಗುತ್ತದೆ?

  • ವಿದ್ಯುತ್ಕಾಂತೀಯ ಅಡಚಣೆ: ಸ್ಮಾರ್ಟ್ ಟಿವಿಗಳು, ಹೋಮ್ ಥಿಯೇಟರ್ ಸಿಸ್ಟಮ್‌ಗಳು, ಮೆಟಲ್ ಫ್ರೇಮ್‌ಗಳು ಮತ್ತು ಇನ್​ಬ್ಯುಲ್ಟ್ ಸ್ಪೀಕರ್‌ಗಳಲ್ಲಿರುವ ಶಕ್ತಿಯುತ ಅಯಸ್ಕಾಂತಗಳು (Magnets) ವೈ-ಫೈ ಹೊರಸೂಸುವ ರೇಡಿಯೋ ತರಂಗಗಳಿಗೆ ತಡೆ (Electromagnetic Interference) ಒಡ್ಡುತ್ತವೆ.
  • ಸಿಗ್ನಲ್ ಬ್ಲಾಕ್: ಟಿವಿಯ ಹಿಂಭಾಗದಲ್ಲಿರುವ ಬೃಹತ್ ಮೆಟಲ್ ಪ್ಯಾನಲ್‌ಗಳು ವೈ-ಫೈ ತರಂಗಗಳನ್ನು ಹೀರಿಕೊಳ್ಳುತ್ತವೆ (Signal Blocking) ಅಥವಾ ದಿಕ್ಕು ತಪ್ಪಿಸುತ್ತವೆ, ಇದರಿಂದಾಗಿ ಮನೆಯ ಇತರೆ ಕೋಣೆಗಳಿಗೆ ಸಿಗ್ನಲ್ ತಲುಪುವುದಿಲ್ಲ.
  • ಬ್ಲೂಟೂತ್ ಮತ್ತು ಇತರೆ ಸಿಗ್ನಲ್: ಇತ್ತೀಚಿನ ಸ್ಮಾರ್ಟ್ ಟಿವಿಗಳಲ್ಲಿ ಬ್ಲೂಟೂತ್ ಮತ್ತು ವೈ-ಫೈ ಎರಡೂ ಇರುವುದರಿಂದ ಇವುಗಳು ಒಂದೇ 2.4GHz ಫ್ರೀಕ್ವೆನ್ಸಿಯಲ್ಲಿ ಕಾರ್ಯನಿರ್ವಹಿಸಿ ರೂಟರ್ ಸಿಗ್ನಲ್‌ನೊಂದಿಗೆ ಘರ್ಷಣೆ ಉಂಟುಮಾಡುತ್ತವೆ.

ಇದನ್ನೂ ಓದಿ: ಯುಪಿಐ ಪಾವತಿಗೆ ಹೆಚ್ಚುವರಿ ಭದ್ರತೆ; ಯೆಸ್ ಎಂದರಷ್ಟೇ ಪೇಮೆಂಟ್; ವಂಚನೆ, ತಪ್ಪಾದ ಹಣ ವರ್ಗಾವಣೆ ತಡೆಯಲು ಈ ಕ್ರಮಕ್ಕೆ ಯೋಚನೆ

ವೈ-ಫೈ ವೇಗ ಮತ್ತು ಸಿಗ್ನಲ್ ಹೆಚ್ಚಿಸಲು ಉತ್ತಮ ಪರಿಹಾರಗಳು

  1. ಕನಿಷ್ಠ 3 ರಿಂದ 5 ಅಡಿ ದೂರವಿರಿಸಿ: ವೈ-ಫೈ ರೂಟರ್ ಅನ್ನು ನಿಮ್ಮ ಟಿವಿಯಿಂದ ಕನಿಷ್ಠ 3 ರಿಂದ 5 ಅಡಿಗಳಷ್ಟು ದೂರದಲ್ಲಿಡಿ.
  2. ಎತ್ತರದ ಸ್ಥಳದಲ್ಲಿರಿಸಿ: ರೂಟರ್ ಅನ್ನು ನೆಲದ ಮೇಲಿಡದೆ, ಗೋಡೆಯ ಮೇಲೆ ಅಥವಾ ಎತ್ತರದ ಟೇಬಲ್ ಮೇಲಿಡಿ. ಇದರಿಂದ ವೈ-ಫೈ ಸಿಗ್ನಲ್ ಸುತ್ತಲೂ ಸಮನಾಗಿ ಹರಡುತ್ತದೆ.
  3. ಲೋಹದ ವಸ್ತುಗಳಿಂದ ದೂರವಿರಿ: ಮೈಕ್ರೋವೇವ್ ಓವನ್, ಫ್ರಿಡ್ಜ್, ವೈರ್‌ಲೆಸ್ ಫೋನ್‌ಗಳು ಮತ್ತು ಕನ್ನಡಿಗಳ ಬಳಿ ರೂಟರ್ ಇಡಬೇಡಿ.
  4. ಫ್ರೀಕ್ವೆನ್ಸಿ ಬದಲಾಯಿಸಿ: ಸಾಧ್ಯವಾದರೆ ನಿಮ್ಮ ರೂಟರ್‌ನಲ್ಲಿ 5GHz ಬ್ಯಾಂಡ್ ಬಳಸಿ. ಇದು ಕಡಿಮೆ ಅಡಚಣೆಯನ್ನು ಹೊಂದಿದ್ದು ಹೆಚ್ಚಿನ ವೇಗವನ್ನು ನೀಡುತ್ತದೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ F70 ಪ್ರೊ 5G ಭಾರತದಲ್ಲಿ ಬಿಡುಗಡೆ: ಬೆಲೆ 25,999 ರೂನಿಂದ ಆರಂಭ; ಬಲವಾದ ಬ್ಯಾಟರಿ, ಉತ್ತಮ ಡಿಸ್​ಪ್ಲೇ ಇರುವ ಫೋನ್

ಈ ರೀತಿ ಜಾಗದ ಬದಲಾವಣೆ ಹಾಗು ಇತರ ಸಣ್ಣ ಪುಟ್ಟ ಪರಿಹಾರಗಳಿಂದ ನಿಮ್ಮ ವೈ-ಫೈ ಸಂಪರ್ಕದ ಗುಣಮಟ್ಟ ಮತ್ತು ವೇಗವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಕೈತಪ್ಪಿದ ಸಚಿವ ಸ್ಥಾನ: ರೆಬೆಲ್ಸ್​​ ಸಭೆಯಲ್ಲಿ ಅಪ್ಪಾಜಿ ನಾಡಗೌಡ ಕಣ್ಣೀರು – Kannada News | Missed Out on Cabinet Berth: Appaji Nadagouda Breaks Down at Rebels’ Meeting

ಬೆಂಗಳೂರು, ಆಗಸ್ಟ್​​ 03: ಸಚಿವ ಸಂಪುಟ ವಿಸ್ತರಣೆ ಬೆನ್ನಲೇ ರಾಜ್ಯ ಕಾಂಗ್ರೆಸ್​​ ಪಾಳಯದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಸಚಿವಸ್ಥಾನ ಸಿಗದಿದ್ದಕ್ಕೆ ಅಸಮಾಧಾನಿತ ಶಾಸಕರು ಟಿ.ಬಿ.ಜಯಚಂದ್ರ ಮನೆಯಲ್ಲಿ ಸಭೆ ನಡೆಸಿದ್ದಾರೆ. ಅಪ್ಪಾಜಿ ನಾಡಗೌಡ ಮತ್ತು ಎಂ.ವೈ.ಗೋಪಾಲಕೃಷ್ಣ ಮೀಟಿಂಗ್​​ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಸಭೆಯಲ್ಲಿ ನಾಡಗೌಡರು ಕಣ್ಣೀರು ಹಾಕಿರುವ ಪ್ರಸಂಗ ನಡೆದಿದೆ. ತಾನು ಸಚಿವನಾಗಬೇಕೆಂದು ಬಹಳಷ್ಟು ಜನ ಬಯಸಿದ್ದರು. ಆದರೆ ಇವತ್ತು ಹೀಗಾಗಿದೆ ಎಂದವರು ಭಾವುಕರಾಗಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಸಿಸಿಐಗೆ ತಲೆನೋವಾದ ಆಟಗಾರರ ಗಾಯದ ಸಮಸ್ಯೆ; ತಂಡದ ಫಿಸಿಯೋಗೆ ಶೀಘ್ರದಲ್ಲೇ ಗೇಟ್​ಪಾಸ್ – Kannada News | Indian Cricket Injury Crisis: BCCI Mulls Physio Change Amidst Player Fitness Woes

ಯಾವುದೇ ಕ್ರೀಡೆಯಾಗಲಿ ಆ ಕ್ರೀಡೆಯಲ್ಲಿ ಆಟಗಾರರು ಗಾಯಗೊಳ್ಳುವುದು ಸರ್ವೆ ಸಾಮಾನ್ಯ. ಗಾಯದಿಂದಾಗಿ ಅವರು ಕೆಲವು ದಿನ ತಂಡದಿಂದ ದೂರ ಉಳಿಯುವುದು ಕೂಡ ಸಾಮಾನ್ಯ. ಆದರೆ ಕೆಲವು ತಿಂಗಳುಗಳಿಂದ ಭಾರತ ಕ್ರಿಕೆಟ್ ತಂಡದಲ್ಲಿ ಆಟಗಾರರ ಗಾಯದ ಸಮಸ್ಯೆ ಬಿಸಿಸಿಐಗೆ (BCCI) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಒಬ್ಬರ ಹಿಂದೆ ಒಬ್ಬರಂತೆ ಹಲವು ಆಟಗಾರರು ಗಾಯದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆಟಗಾರರು ಅಪರೂಪಕ್ಕೊಮ್ಮೆ ಗಾಯಕ್ಕೆ ತುತ್ತಾದರೆ ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಗಾಯದಿಂದ ಚೇತರಿಸಿಕೊಂಡು ಒಂದು ಸರಣಿಯನ್ನೋ ಅಥವಾ ಒಂದು ಪಂದ್ಯವನ್ನು ಆಡಿ ಮುಗಿಸುವುದರೊಳಗೆ ಮತ್ತೆ ಗಾಯಕ್ಕೆ ತುತ್ತಾಗುತ್ತಿದ್ದಾರೆ. ಇದು ಆಡಳಿತ ಮಂಡಳಿಯ ಜೊತೆಗೆ ನಾಯಕ ಶುಭ್​ಮನ್ ಗಿಲ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭಿರ್​ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಟೀಂ ಇಂಡಿಯಾದಲ್ಲಿ ಗಾಯಾಳುಗಳ ಸಮಸ್ಯೆ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯನ್ನೇ ನಾವು ನೋಡಿದರೆ, ಈ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ ಹಳೆಯ ಗಾಯದಿಂದ ಇನ್ನು ಚೇತರಿಸಿಕೊಳ್ಳದ ಕಾರಣ ಅವರನ್ನು ಈ ಸರಣಿಯಿಂದ ಕೈಬಿಡಲಾಗಿದೆ. ಬುಮ್ರಾ ಜೊತೆಗೆ ಸಾಯಿ ಸುದರ್ಶನ್, ಹರ್ಷಿತ್ ರಾಣಾ ಮತ್ತು ನಿತೀಶ್ ರೆಡ್ಡಿ ಕೂಡ ಗಾಯಗೊಂಡಿದ್ದಾರೆ. ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆಯಾಗಿರು ಸುದರ್ಶನ್ ಟೆಸ್ಟ್ ಸರಣಿಯಲ್ಲಿಯೂ ಆಡುತ್ತಾರೋ ಇಲ್ಲವೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಆಟಗಾರರು ಪದೇ ಪದೇ ಗಾಯಕ್ಕೆ ತುತ್ತಾಗುತ್ತಿರುವುದರಿಂದ ಬಿಸಿಸಿಐ ಮತ್ತು ಟೀಮ್ ಇಂಡಿಯಾ ಆಡಳಿತ ಮಂಡಳಿ ಮಹತ್ವದ ತೀರ್ಮಾನಕ್ಕೆ ಬಂದಿದೆ ಎಂದು ವರದಿಯಾಗಿದೆ. ಆ ಪ್ರಕಾರ ಟೀಮ್ ಇಂಡಿಯಾ ಫಿಸಿಯೋಥೆರಪಿಸ್ಟ್ ಕಮಲೇಶ್ ಜೈನ್ ಅವರನ್ನು ತಂಡದಿಂದ ಹೊರಹಾಕುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಫಿಸಿಯೋಥೆರಪಿಸ್ಟ್​ಗೆ ಗೇಟ್​ಪಾಸ್?

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಶ್ರೀಲಂಕಾ ಪ್ರವಾಸದ ನಂತರ ಕಮಲೇಶ್ ಜೈನ್ ಅವರನ್ನು ಮುಂದುವರೆಸುವ ಬಗ್ಗೆ ಆಡಳಿತ ಮಂಡಳಿ ಪ್ರಮುಖ ತೀರ್ಮಾನ ಕೈಗೊಳ್ಳಲಿದೆ. 2022 ರಿಂದ ಕಮಲೇಶ್ ಜೈನ್ ಟೀಂ ಇಂಡಿಯಾದಲ್ಲಿದ್ದಾರೆ. ಅವರನ್ನು ಈ ಹುದ್ದೆಯಿಂದ ತೆಗೆದುಹಾಕಿ ಬೇರೆಯವರನ್ನು ಕರೆತರಲು ಬಿಸಿಸಿಐ ಚಿಂತಿಸಿದೆ. ಸ್ಟಾರ್ ಆಟಗಾರರು ಪದೇ ಪದೇ ಗಾಯಗೊಳ್ಳುತ್ತಿರುವುದರಿಂದ ಪ್ರಮುಖ ಸರಣಿಗಳಲ್ಲಿ ಅತ್ಯುತ್ತಮ ಆಡುವ ಹನ್ನೊಂದರ ಬಳಗವನ್ನು ಕಣಕ್ಕಿಳಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ತಂಡ ಅನಿರೀಕ್ಷಿತ ಸೋಲುಗಳನ್ನು ಎದುರಿಸುತ್ತಿದೆ.

ಆಟಗಾರರು ಫಿಟ್ ಆಗಲು ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಹೋಗುತ್ತಾರೆ. ನಂತರ, ಅವರು ಫಿಟ್ನೆಸ್ ಕ್ಲಿಯರೆನ್ಸ್ ಪಡೆಯುತ್ತಾರೆ. ಆದರೆ ಟೀಂ ಇಂಡಿಯಾಕ್ಕೆ ಮರಳಿದ ನಂತರ, ಅವರು ಮತ್ತೆ ಗಾಯಕ್ಕೆ ತುತ್ತಾಗುತ್ತಿದ್ದಾರೆ. ಇದು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶುಭ್​ಮನ್ ಗಿಲ್​ಗೆ ದೊಡ್ಡ ಸವಾಲಾಗಿದೆ. ಶುಭ್​ಮನ್ ಈಗಾಗಲೇ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಲವಾರು ಪ್ರಮುಖ ಆಟಗಾರರು ತಮ್ಮ ಗಾಯಗಳಿಗೆ ಸಂಬಂಧಿಸಿದಂತೆ ಸೆಂಟರ್ ಆಫ್ ಎಕ್ಸಲೆನ್ಸ್ ಬದಲಿಗೆ ವಿದೇಶಿ ತಜ್ಞರನ್ನು ಸಂಪರ್ಕಿಸಲು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ. ಇದು ಬಿಸಿಸಿಐಗೆ ಮುಜುಗರವನ್ನುಂಟುಮಾಡುತ್ತಿದ್ದು, ಅದಕ್ಕಾಗಿಯೇ ವಿಶ್ವದ ಅತ್ಯಂತ ಶ್ರೀಮಂತ ಮಂಡಳಿ ಈಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ವರದಿಯಾಗಿದೆ.

ಟೀಂ ಇಂಡಿಯಾದಲ್ಲಿ ಒಬ್ಬರಿಗೊಂದು ನ್ಯಾಯ; ಬಿಸಿಸಿಐ ವಿರುದ್ಧ ಮಾಜಿ ಕ್ರಿಕೆಟಿಗ ಗರಂ

ಗಾಯದಿಂದ ಬಳಲುತ್ತಿರುವ ಆಟಗಾರರಿವರು

ಟೀಂ ಇಂಡಿಯಾದ ಗಾಯಗೊಂಡ ಆಟಗಾರರ ಪಟ್ಟಿ ದೊಡ್ಡದಿದೆ. ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ನಿತೀಶ್ ಕುಮಾರ್ ರೆಡ್ಡಿ, ವರುಣ್ ಚಕ್ರವರ್ತಿ, ಸಾಯಿ ಸುದರ್ಶನ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಗಾಯಗೊಂಡಿದ್ದಾರೆ. ಹರ್ಷಿತ್ ರಾಣಾ ಕೂಡ ಆಗಾಗ್ಗೆ ಗಾಯಗಳಿಂದ ಬಳಲುತ್ತಿದ್ದಾರೆ.

Published On – 6:02 pm, Mon, 3 August 26

Source link

20 ಅಲ್ಲ, 19 ಮಂದಿ ಮಾತ್ರ ಸಚಿವರಾಗಿ ಪ್ರಮಾಣ: ಗಾಯತ್ರಿ ಶಾಂತೇಗೌಡ ಪಾಲಿಗೆ ಕೈಗೆ ಬಂದರೂ ಬಾಯಿಗೆ ಬಾರದ ತುತ್ತು! – Kannada News | Karnataka Cabinet Expansion: Only 19 Ministers Take Oath as Gayatri Shanthegowda Misses Out Due to Intense Women’s Quota Lobbying

ಬೆಂಗಳೂರು, ಆಗಸ್ಟ್​​ 03: ಕರ್ನಾಟಕದ ಸಚಿವ ಸಂಪುಟ ವಿಸ್ತರಣೆ ಸಂಬಂಧ 20 ಮಂದಿ ಹೆಸರನ್ನು ಹೈಕಮಾಂಡ್​​ ಪ್ರಕಟಿಸಿತ್ತಾದರೂ 19 ಮಂದಿ ಮಾತ್ರ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಲಿಸ್ಟ್​​ನಲ್ಲಿದ್ದವರ ಪೈಕಿ ಗಾಯತ್ರಿ ಶಾಂತೇಗೌಡ ಮಾತ್ರ ಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಿಲ್ಲ. ಕೊನೇ ಕ್ಷಣದಲ್ಲಿ ನಡೆದ ದಿಢೀರ್​​ ರಾಜಕೀಯ ಬೆಳವಣಿಗೆಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದ್ದು, ಮಹಿಳಾ ಶಾಸಕರ ನಡುವಿನ ತೀವ್ರ ಪೈಪೋಟಿಯೇ ಇದಕ್ಕೆ ಕಾರಣ ಎನ್ನಲಾಗಿದೆ.

ಗಾಯತ್ರಿ ಶಾಂತೇಗೌಡಗೆ ತಪ್ಪಿದ ಅವಕಾಶ

ಹೌದು, 20 ಮಂದಿ ನೂತನ ಸಚಿವರ ಪಟ್ಟಿಯಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರಿತ್ತು. ಆದರೆ ಪ್ರಮಾಣವಚನ ಸ್ವೀಕರಿಸಲು ಸಿಎಂ ಕಡೆಯಿಂದ ಅವರಿಗೆ ಯಾವುದೇ ಕರೆ ಬಂದಿಲ್ಲ. ಪರಿಷತ್ ಸದಸ್ಯೆಯಾಗಿ ಗಾಯತ್ರಿ ಇನ್ನೂ ಪ್ರಮಾಣ ಸ್ವೀಕರಿಸಿದ ಕಾರಣ ಪಕ್ಷದಲ್ಲಿ ಈ ಬಗ್ಗೆ ಅಸಮಾಧಾನ ಭುಗಿಲೆದ್ದ ಕಾರಣ, ಪಕ್ಷ ಈ ತೀರ್ಮಾನ ಕೈಗೊಂಡಿರುವ ಮಾಹಿತಿ ಇದೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆಗೆ ಮೆಗಾ ಟ್ವಿಸ್ಟ್: ಪಟ್ಟಿಯಲ್ಲಿ ಹೆಸರಿದ್ದರೂ ಮಂಕಾಳು ವೈದ್ಯಗೆ ತಪ್ಪಿದ ಮಂತ್ರಿಗಿರಿ; ಟೈಪಿಂಗ್ ಮಿಸ್ಟೇಕ್ ಎಂದ ಎಐಸಿಸಿ!

ಮಹಿಳಾ ಸಚಿವ ಸ್ಥಾನಕ್ಕಾಗಿ ಹಗ್ಗಜಗ್ಗಾಟ

ಮಹಿಳಾ ಸಚಿವ ಸ್ಥಾನಕ್ಕೆ ಗಾಯತ್ರಿ ಅವರ ಹೆಸರು ಘೋಷಣೆ ನಡುವೆಯೂ ಲಕ್ಷ್ಮೀ ಹೆಬ್ಬಾಳ್ಕರ್ ಉಮಾಶ್ರೀ ನಡುವೆ ತೀವ್ರ ಪೈಪೋಟಿ ನಡೆದಿದೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಕೊನೆ ಕ್ಷಣದಲ್ಲಿ ಗಾಯತ್ರಿ ಹೆಸರು ಬಿಡಲೇಬೇಕು ಎಂಬ ರಾಜ್ಯ ನಾಯಕರ ಒತ್ತಡಕ್ಕೆ ಕಾಂಗ್ರೆಸ್ ವರಿಷ್ಠರು ಮಣಿದಿದ್ದಾರೆ. ಈ ನಡುವೆ ದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದ ಸಂಸದ ಇ.ತುಕಾರಾಂ ಪತ್ನಿ ಅನ್ನಪೂರ್ಣ ಪರ ಲಾಬಿ ನಡೆಸಿದ ಪ್ರಸಂಗವೂ ನಡೆದಿದೆ.

ಗಾಯತ್ರಿ ಶಾಂತೇಗೌಡ ಭಾವುಕ

ಸಿದ್ದರಾಮಯ್ಯ ಮುಂದೆ ಗಾಯತ್ರಿ ಶಾಂತೇಗೌಡ ಬೇಸರ ವ್ಯಕ್ತಪಡಿಸಿದ್ದು, ತಪ್ಪು ಮಾಡದಿದ್ದರೂ ಪರಿಷತ್ ಸ್ಥಾನದಲ್ಲೂ ತನಗೆ 4 ವರ್ಷ ಅನ್ಯಾಯ ಆಗಿದೆ. ಈಗ ಸಚಿವ ಸ್ಥಾನದ ವಿಚಾರದಲ್ಲಿಯೂ ಹೀಗಾಗಿದ್ದು, ಒಂದು ಅವಕಾಶ ನೀಡುವಂತೆ ಮನವಿ ಮಾಡಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಷ್ಟ್ರಾಧ್ಯಕ್ಷರ ಕ್ಷೇತ್ರದಲ್ಲೇ ಬಿಜೆಪಿಗೆ ಮುಖಭಂಗ; ಐತಿಹಾಸಿಕ ಗೆಲುವಿನ ಮೂಲಕ ರಾಜಕೀಯಕ್ಕೆ ಪ್ರಶಾಂತ್ ಕಿಶೋರ್ ಎಂಟ್ರಿ – Kannada News | Prashant Kishors Historic Win in Bankipur Bypoll BJP Loses 30 Year Stronghold

ನವದೆಹಲಿ, ಆಗಸ್ಟ್ 3: 3 ದಶಕಗಳ ನಂತರ ಬಿಜೆಪಿ ತನ್ನ ಭದ್ರಕೋಟೆಯಾದ ಬಿಹಾರದ ಬಂಕಿಪುರದಲ್ಲಿ ಹೀನಾಯ ಸೋಲು ಅನುಭವಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಕ್ಷೇತ್ರವಾದ ಬಂಕಿಪುರದಲ್ಲಿ (Bankipur By-Election) ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ (Prashant Kishor) ಮೊದಲ ಪ್ರಯತ್ನದಲ್ಲೇ ಬಿಜೆಪಿಗೆ ಹೀನಾಯ ಸೋಲಿನ ರುಚಿ ತೋರಿಸುವ ಮೂಲಕ ಗೆಲುವಿನ ನಗು ಬೀರಿದ್ದಾರೆ. ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದ ಬಂಕಿಪುರದ ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಹಲವಾರು ಕೇಂದ್ರ ಸಚಿವರು, ಇಡೀ ಬಿಹಾರ ಸಚಿವ ಸಂಪುಟದೊಂದಿಗೆ ಬಂಕಿಪುರದಲ್ಲಿ ಬೀಡುಬಿಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ. ಪ್ರಶಾಂತ್ ಕಿಶೋರ್ ಗೆಲ್ಲುವುದು ಖಚಿತವಾಗುತ್ತಿದ್ದಂತೆ ಜನ ಸುರಾಜ್ ಪಕ್ಷದ ಕಾರ್ಯಕರ್ತರು ಅವರನ್ನು ರಸ್ತೆಗಳಲ್ಲಿ ಮೆರವಣಿಗೆ ಮಾಡಿಸಿ ಸಂಭ್ರಮಾಚರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದ್ಯಾರ್ಥಿಗಳ ವಿರುದ್ಧ ಧ್ವನಿ ಎತ್ತಿ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾದ ನಟಿ ಭೂಮಿ ಪೆಡ್ನೇಕರ್ – Kannada News | Bhumi Pednekar Faces Online Backlash Over PM Modi Remarks NEET Protest

ನೀಟ್-ಯುಜಿ ಪರೀಕ್ಷೆಯ ಅಕ್ರಮ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವಿರುದ್ಧ ಬಳಕೆಯಾದ ನಿಂದನೀಯ ಭಾಷೆಯನ್ನು ಖಂಡಿಸಿದ ನಟಿ ಭೂಮಿ ಪೆಡ್ನೇಕರ್‌ಗೆ (Bhumi Pednekar) ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ಎದುರಾಗಿದೆ. ಪ್ರತಿಭಟನಾಕಾರರ ಭಾಷೆಯನ್ನು ಪ್ರಶ್ನಿಸಿದ ನಟಿ, ವಿದ್ಯಾರ್ಥಿಗಳ ಮೇಲಾದ ಪೊಲೀಸ್ ಲಾಠಿಚಾರ್ಜ್ ಹಾಗೂ ಹಿಂಸಾಚಾರದ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದ ಭೂಮಿ ಪೆಡ್ನೇಕರ್, ‘ಪ್ರತಿಭಟನಾ ನಿರತ ಯುವಕರು ಬಳಸಿರುವ ಕೆಟ್ಟ ಪದಗಳು ಭಾರತೀಯ ಸಂಸ್ಕೃತಿಗೆ ತಕ್ಕುದಾದ್ದಲ್ಲ. ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿಯವರ ಬಗ್ಗೆ ಮಾತನಾಡುವಾಗ ಕನಿಷ್ಠ ಸೌಜನ್ಯ ಇರಬೇಕು. ನಮ್ಮ ಮನೆಗಳ ಹಿರಿಯರ ಜೊತೆ ನಾವು ಹೀಗೆ ಮಾತನಾಡುತ್ತೇವೆಯೇ?’ ಎಂದು ಪ್ರಶ್ನಿಸಿದ್ದರು. ಅಲ್ಲದೆ ಯುವಜನತೆ ತಮ್ಮ ಆಕ್ರೋಶವನ್ನು ಸಭ್ಯ ರೀತಿಯಲ್ಲಿ ವ್ಯಕ್ತಪಡಿಸಬೇಕೆಂದು ಮನವಿ ಮಾಡಿದ್ದರು.

ಪೊಲೀಸ್ ದೌರ್ಜನ್ಯದ ಬಗ್ಗೆ ನಟಿಯ ಮೌನ:

ಆದರೆ, ಭೂಮಿ ಪೆಡ್ನೇಕರ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಟಿಯ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ. ಜುಲೈ 20ರಂದು ನಡೆದ ‘ಸಂಸತ್ ಚಲೋ’ ಪ್ರತಿಭಟನೆ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ, ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗದ ಕುರಿತು ಭೂಮಿ ಪೆಡ್ನೇಕರ್ ಮೌನ ವಹಿಸಿದ್ದನ್ನು ಬಳಕೆದಾರರು ಬೆಟ್ಟು ಮಾಡಿ ತೋರಿಸಿದ್ದಾರೆ.

ಹಿಂಸಾಚಾರವನ್ನು ಖಂಡಿಸಿಲ್ಲ:

‘ಬೈಗುಳ ಕೇಳುವುದು ದೊಡ್ಡದೋ ಅಥವಾ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡುವುದು ದೊಡ್ಡದೋ? ನೀವು ಹಿಂಸಾಚಾರವನ್ನು ಖಂಡಿಸದೇ ಭಾಷೆಯನ್ನು ಮಾತ್ರ ಟೀಕಿಸುತ್ತಿರುವುದು ಸರಿಯಲ್ಲ’ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‘ರಾಜಕಾರಣಿಗಳು ಇಂತಹ ಕೆಟ್ಟ ಭಾಷೆ ಬಳಸಿದಾಗಲೂ ನೀವು ಹೀಗೆಯೇ ಧ್ವನಿ ಎತ್ತುತ್ತೀರಾ?’ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಶಿವನ ದೇವಾಲಯದಲ್ಲಿ ಸನ್‌ಗ್ಲಾಸ್ ಧರಿಸಿ ಪೂಜೆ: ನಟಿ ಭೂಮಿ ಪೆಡ್ನೇಕರ್ ವಿರುದ್ಧ ನೆಟ್ಟಿಗರ ಆಕ್ರೋಶ

‘ಎಸಿ ಕಾರಿನಲ್ಲಿ ಕುಳಿತು ಜ್ಞಾನ ನೀಡುವುದು ಸುಲಭ’

‘ಎಸಿ ಕಾರಿನಲ್ಲಿ ಕುಳಿತು ಮೇಕಪ್ ಹಾಕಿಕೊಂಡು ಜ್ಞಾನ ನೀಡುವುದು ಸಖತ್ ಸುಲಭ’ ಎಂದು ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ವ್ಯಂಗ್ಯವಾಡಿದ್ದಾರೆ. ಗೌರವವನ್ನು ಯಾರೂ ಬಲವಂತವಾಗಿ ಪಡೆಯಲು ಸಾಧ್ಯವಿಲ್ಲ, ಅದನ್ನು ಸಂಪಾದಿಸಬೇಕು ಎಂದು ಹೇಳಿರುವ ನೆಟ್ಟಿಗರು, ಭೂಮಿ ಪೆಡ್ನೇಕರ್ ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಾಯಿಗಳು ಚಪ್ಪಲಿ, ಶೂಗಳನ್ನು ಅಗಿಯೋದೇಕೆ? ಇದರ ಹಿಂದಿನ ಕಾರಣವೇನು? – Kannada News | What is the reason behind dogs biting shoes?

ನಾಯಿಗಳು (dogs) ಮನುಷ್ಯನ ಉತ್ತಮ ಸ್ನೇಹಿತ ಎಂದು ಹೇಳಾಗುತ್ತದೆ. ಅಲ್ಲದೆ ಇದು ನಿಷ್ಠಾವಂತ ಪ್ರಾಣಿಯೂ ಹೌದು. ಇದೇ ಕಾರಣಕ್ಕೆ ಹೆಚ್ಚಿನವರು ನಾಯಿಗಳನ್ನು ಸಾಕಲು ಇಷ್ಟಪಡುತ್ತಾರೆ. ಈ ಶ್ವಾನಗಳು ತುತ್ತು ಆಹಾರ ನೀಡುವವರಿಗೆ ಅತಿಯಾಗಿ ಪ್ರೀತಿಯನ್ನು ತೋರುವಂತೆ, ಕೆಲವೊಮ್ಮೆ ಅವು ವಿಚಿತ್ರವಾಗಿ ವರ್ತಿಸುತ್ತವೆ. ಹೌದು ವಿಪರೀತವಾಗಿ ಬೊಗಳುವುದು, ಬೈಕ್‌ ಮತ್ತು ಕಾರುಗಳನ್ನು ಅಟ್ಟಾಡಿಸಿಕೊಂಡು ಹೋಗುವುದು ಹೀಗೆ ಒಂದಷ್ಟು ವಿಚಿತ್ರ ವರ್ತನೆಗಳನ್ನು ತೋರುತ್ತವೆ. ಅದೇ ರೀತಿ ಶ್ವಾನಗಳು ಚಪ್ಪಲಿ, ಶೂಗಳನ್ನು ಸಹ ಕಚ್ಚಿ ಹಾಕುತ್ತವೆ. ಶ್ವಾನದ ಈ ವರ್ತನೆಯಿಂದ ನಮಗೆ ಸಹಜವಾಗಿಯೇ ಕೋಪ ಬಂದೇ ಬರುತ್ತದೆ. ಆದರೆ  ಈ ವರ್ತನೆಯ ಹಿಂದೆ ಒಂದು ದೊಡ್ಡ ಕಾರಣವಿದೆ ಎಂದು ತಜ್ಞರು ಹೇಳುತ್ತಾರೆ. ನಾಯಿ ಚಪ್ಪಲಿ ಕಚ್ಚುವ, ಬಟ್ಟೆ ಹರಿದು ಹಾಕುವ ಕ್ರಿಯೆ  ಅವುಗಳಿಗೆ ನಮ್ಮ ಮೇಲಿರುವ ಪ್ರೀತಿಯ ಸಂಕೇತವೆಂದು ತಜ್ಞರು ಹೇಳುತ್ತಾರೆ. ಇದಲ್ಲದೆ ಹಸಿವು, ಆಟ, ಜಂತು ಹುಳದ ಸಮಸ್ಯೆಯಿಂದಲೂ ಚಪ್ಪಲಿ ಕಚ್ಚುತ್ತವೆ. ಈ ಕುರಿತ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

ನಾಯಿಗಳು ಚಪ್ಪಲಿ, ಶೂಗಳನ್ನು ಕಚ್ಚುವುದೇಕೆ?

ಪ್ರೀತಿಯ ಭಾವನೆ: ನಾಯಿಗಳು ಅವು ಪ್ರೀತಿಸುವ ವ್ಯಕ್ತಿಯ ಚಪ್ಪಲಿ, ಶೂ, ಬಟ್ಟೆಗಳನ್ನು ಮಾತ್ರ ಕಚ್ಚಿ ಹಾಕುತ್ತವೆ ಎಂದು ತಜ್ಞರು ಹೇಳುತ್ತಾರೆ. ನಿಮ್ಮನೆ ನಾಯಿಗೂ ಕೂಡ ನಿಮ್ಮ ಬೂಟುಗಳು ಅಥವಾ ಚಪ್ಪಲಿಗಳನ್ನೇ ಕಚ್ಚುವ ಅಭ್ಯಾಸವಿದ್ದರೆ, ನಿಮ್ಮ ನಾಯಿ ನಿಮ್ಮನ್ನು ತುಂಬಾ ಪ್ರೀತಿಸುತ್ತದೆ ಎಂದರ್ಥ. ವಾಸ್ತವವಾಗಿ, ಅದು ನಿಮ್ಮ ಬೂಟುಗಳಿಂದ ನಿಮ್ಮ ದೇಹದ ವಾಸನೆಯನ್ನು ಅನುಭವಿಸುತ್ತವೆ. ಆದ್ದರಿಂದ, ನೀವು ಇಲ್ಲದಿರುವಾಗ, ನಾಯಿ ಚಪ್ಪಲಿ ಅಥವಾ ಶೂಗಳನ್ನು ನಿಧಾನವಾಗಿ ಕಚ್ಚುವ ಮೂಲಕ ಮುದ್ದಿಸಲು ಪ್ರಯತ್ನಿಸುತ್ತದೆ.

ಒಂಟಿತನ: ನಾಯಿಗಳು ಬೇರ್ಪಡುವಿಕೆಯ ಆತಂಕದಿಂದ ಮತ್ತು ಒಂಟಿತನದಿಂದ ಬಳಲುವ ಸಂದರ್ಭದಲ್ಲಿ ಒಂಟಿತನವನ್ನು ನಿವಾರಿಸಲು ಚಪ್ಪಲಿಗಳನ್ನು ಕಚ್ಚುತ್ತವೆ. ಹೌದು ನಾವು ಮನೆಯಲ್ಲಿ ಇಲ್ಲದಿರುವಾಗ ಅಥವಾ ಎಲ್ಲೋ ಹೋದಾಗ, ನಾಯಿಗಳು ಒಂಟಿತನದಿಂದ ಬಳಲುತ್ತವೆ. ಈ ನೋವನ್ನು ನಿವಾರಿಸಲು, ಅವು ನಮ್ಮ ವಸ್ತುಗಳೊಂದಿಗೆ ಸಮಯ ಕಳೆಯಲು ಪ್ರಯತ್ನಿಸುತ್ತವೆ. ಮುಖ್ಯವಾಗಿ ಅವುಗಳು ಒಂಟಿತನವನ್ನು ನಿವಾರಿಸಲು ಚಪ್ಪಲಿಯಲ್ಲಿ ನಮ್ಮ ದೇಹ ವಾಸನೆಯನ್ನು ಗ್ರಹಿಸುವ ಮೂಲಕ ಚಪ್ಪಲಿಯನ್ನು ಕಚ್ಚಿ ಹಾಕುತ್ತವೆ.

ಹಸಿವು: ಪ್ರೀತಿ ಮಾತ್ರವಲ್ಲ ಹಸಿವಿನ ಕಾರಣದಿಂದಲೂ ನಾಯಿಗಳು ಶೂಗಳನ್ನು ಕಚ್ಚುತ್ತವೆ. ಹೌದು ತೀವ್ರ ಹಸಿವಿನಿಂದ ಶೂಗಳನ್ನು, ಯಾವುದೇ ಪೀಠೋಪಕರಣಗಳನ್ನು ಅಥವಾ ಬಟ್ಟೆಗಳನ್ನು ಅಗಿಯುತ್ತವೆ. ಈ ಸಮಸ್ಯೆ ಬೀದಿ ನಾಯಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: ಸೊಳ್ಳೆಗಳು ಕೆಲ ಜನರಿಗೆ ಹೆಚ್ಚು ಕಚ್ಚುವುದೇಕೆ? ಇದರ ಹಿಂದಿನ ವೈಜ್ಞಾನಿಕ ಕಾರಣ ಇಲ್ಲಿದೆ

ಜಂತುಹುಳದ ಸಮಸ್ಯೆ: ನಾಯಿಗಳಿಗೆ ಹೊಟ್ಟೆಯಲ್ಲಿ ಜಂತುಹುಳದ ಸಮಸ್ಯೆಯಿದ್ದರೂ ಅವು ಶೂ, ಚಪ್ಪಲಿಗಳನ್ನು ಕಚ್ಚುತ್ತವೆ. ಇದಲ್ಲದೆ ದವಡೆಗಳನ್ನು ಬಲಪಡಿಸಲು ಕೂಡ ಹೀಗೆ ಮಾಡುತ್ತವೆ. ನಾಯಿಗಳು ನಿರಂತರವಾಗಿ ಚಪ್ಪಲಿ, ಶೂಗಳನ್ನು ಅಗಿಯುವ ಮೂಲಕ, ತಮ್ಮ ದವಡೆಗಳನ್ನು ಪೂರ್ಣ ಬಲದಿಂದ ಇಡಲು ಪ್ರಯತ್ನಿಸುತ್ತವೆ. ಈ ಅಭ್ಯಾಸ ನಾಯಿ ಮರಿಗಳಲ್ಲಿ ಹೆಚ್ಚು ಕಂಡು ಬರುತ್ತವೆ. ವಿಶೇಷವಾಗಿ ಈ ನಾಯಿ ಮರಿಗಳು ಆಟ ಮತ್ತು ತನ್ನ ಮಾಲೀಕನ ಗಮನ ಸೆಳೆಯಲು ಚಪ್ಪಲಿಗಳನ್ನು ಕಚ್ಚುತ್ತವೆ.

ಹೀಗೆ, ನಾಯಿಗಳು ಚಪ್ಪಲಿಗಳನ್ನು ಕಚ್ಚುವುದರ ಹಿಂದೆ ಪ್ರೀತಿ, ಹಸಿವು ಮತ್ತು ಆಟ ಮುಂತಾದ ವಿಭಿನ್ನ ಕಾರಣಗಳಿವೆ. ಹಾಗಾಗಿ ಅವುಗಳಿಗೆ ಗದರುವ ಬದಲು ಅವುಗಳ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವ ಮೂಲಕ, ಅವುಗಳೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:43 pm, Mon, 3 August 26

Source link

30 ವರ್ಷದ ಕೋಟೆ 30 ದಿನಗಳಲ್ಲಿ ಕುಸಿಯಿತು’; ಬಿಜೆಪಿಯ ಭದ್ರಕೋಟೆ ಬಂಕಿಪುರದಲ್ಲಿ ಜಯ ಸಾಧಿಸಿದ ಪ್ರಶಾಂತ್ ಕಿಶೋರ್ ಲೇವಡಿ – Kannada News | 30 Year Fort Collapsed In Just 30 Days Prashant Kishor targets BJP in Bankipur By Election after inches towards victory

ಪಾಟ್ನಾ, ಆಗಸ್ಟ್ 3: ಬಿಹಾರದ ಬಂಕಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸುವ ಸನ್ನಿಹಿತದಲ್ಲಿರುವ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor) ಇಂದು ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. ಬಂಕಿಪುರದ ಹಿನ್ನಡೆಯು ಬಿಜೆಪಿಗೆ ತಕ್ಕ ಸಂದೇಶವಾಗಿದೆ ಎಂದು ಹೇಳಿದ್ದಾರೆ. ಬಂಕಿಪುರ ಉಪಚುನಾವಣೆಯಲ್ಲಿ ಭಾರೀ ಮುನ್ನಡೆ ಸಾಧಿಸಿರುವ ಪ್ರಶಾಂತ್ ಕಿಶೋರ್ ತಮ್ಮ ಗೆಲುವನ್ನು “30 ವರ್ಷಗಳ ಕೋಟೆಯ ಪತನ” ಎಂದು ಬಣ್ಣಿಸಿದ್ದು, ಬಿಹಾರದ ರಾಜಕೀಯ ಆದ್ಯತೆಗಳು ಈಗ ಉದ್ಯೋಗ, ಶಿಕ್ಷಣ ಮತ್ತು ಅಭಿವೃದ್ಧಿಯತ್ತ ಬದಲಾಗುತ್ತಿರುವುದನ್ನು ಈ ಫಲಿತಾಂಶ ಪ್ರತಿಬಿಂಬಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, “30 ವರ್ಷಗಳ ಕೋಟೆ ಕೇವಲ 30 ದಿನಗಳಲ್ಲಿ ಕುಸಿಯಿತು. ಬಿಹಾರದ ಜನತೆ ಈಗ 4ರಿಂದ 5 ಕೆಜಿ ಉಚಿತ ಪಡಿತರ ಮತ್ತು ಜಾತಿ ರಾಜಕೀಯದಿಂದ ಮೇಲೆದ್ದು, ತಮ್ಮ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಸರ್ಕಾರಗಳು ಕೆಲಸ ಮಾಡಬೇಕೆಂದು ಬಯಸುತ್ತಿರುವುದರಿಂದ ಈ ಬದಲಾವಣೆ ಆಗಿದೆ” ಎಂದು ಹೇಳಿದರು.

ಇದನ್ನೂ ಓದಿ: ಬಂಕಿಪುರ ಉಪಚುನಾವಣೆ : ಪ್ರಶಾಂತ್ ಕಿಶೋರ್ ಕುಟುಂಬದ ಒಟ್ಟು ಆಸ್ತಿ 198 ಕೋಟಿ ರೂ.ಗೂ ಅಧಿಕ!

ತಮ್ಮ ಹೋರಾಟ ಯಾವುದೇ ವ್ಯಕ್ತಿಯ ವಿರುದ್ಧವಲ್ಲ, ಬದಲಿಗೆ ಬಿಹಾರದಲ್ಲಿ ಉತ್ತಮ ಆಡಳಿತಕ್ಕಾಗಿಯಷ್ಟೇ ಎಂದ ಪ್ರಶಾಂತ್ ಕಿಶೋರ್, ಬಿಹಾರವನ್ನು ಆಳಲು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಜನಾದೇಶವಿದೆ. ಹೀಗಾಗಿ, ಬಿಹಾರದ ಅಭಿವೃದ್ಧಿ ಪಥವನ್ನು ಬದಲಾಯಿಸಬಲ್ಲ ಸಮರ್ಥ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು. ಈ ಮೂಲಕ ಬಿಹಾರದ ಸಿಎಂ ಸಾಮ್ರಾಟ್ ಚೌಧರಿ ವಿರುದ್ಧ ಅವರು ಮತ್ತೊಮ್ಮೆ ವಾಗ್ದಾಳಿ ನಡೆಸಿದರು.

“ಇದು ಬಂಕಿಪುರದ ಜನರ ಗೆಲುವು. ನಾವು ಚುನಾವಣಾ ಪ್ರಚಾರದ ಸಮಯದಲ್ಲಿ ಹೇಳಿದಂತೆ, ಇದು ಕೇವಲ ಒಬ್ಬ ಶಾಸಕನನ್ನು ಆಯ್ಕೆ ಮಾಡುವ ಚುನಾವಣೆಯಾಗಿರಲಿಲ್ಲ. ಉತ್ತಮ ವ್ಯಕ್ತಿಯನ್ನು ಬಿಹಾರದ ಮುಖ್ಯಮಂತ್ರಿಯನ್ನಾಗಿ ನೇಮಿಸಬೇಕೆಂದು ಬಿಹಾರದ ಜನತೆ ಬಿಜೆಪಿಯ ಕೇಂದ್ರ ನಾಯಕತ್ವಕ್ಕೆ ಸಂದೇಶ ರವಾನಿಸುವ ಪ್ರಯತ್ನವಾಗಿತ್ತು” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ನಾನಾ ಪಟೋಲೆ ಪಾದ ತೊಳೆಯುವ ವಿಡಿಯೋ ವೈರಲ್: ಬಿಜೆಪಿ ವಾಗ್ದಾಳಿ, ತಿರುಗೇಟು ನೀಡಿದ ಕಾಂಗ್ರೆಸ್ ನಾಯಕ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಬಂಕಿಪುರ ಕ್ಷೇತ್ರದಲ್ಲಿ ಪ್ರಶಾಂತ್ ಕಿಶೋರ್ ಜಯಗಳಿಸುವುದು ಬಹುತೇಕ ಖಚಿತವಾಗಿದೆ. ನಿತಿನ್ ನವೀನ್ ಅವರು 2010, 2015, 2020 ಮತ್ತು 2025 ರಲ್ಲಿ ಬಂಕಿಪುರ ಕ್ಷೇತ್ರದಿಂದ ಸತತ 4 ಬಾರಿ ಗೆದ್ದಿದ್ದರು. ಆದರೆ, ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಂತರ ರಾಜ್ಯಸಭೆಗೆ ಆಯ್ಕೆಯಾದ ಕಾರಣ ಈ ಉಪಚುನಾವಣೆ ಎದುರಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:28 pm, Mon, 3 August 26

Source link

ನಕಲಿ ಪಿಯುಸಿ ಅಂಕಪಟ್ಟಿ ನೀಡಿ ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆದಿದ್ದ ನಾಲ್ವರಿಗೆ ಶಾಕ್​​: 2 ವರ್ಷ ಜೈಲು ಶಿಕ್ಷೆ – Kannada News | 4 Get 2 Years Jail in Belagavi for Securing Village Accountant Posts via Fake II PUC Marks Cards

ನಕಲಿ ಪಿಯುಸಿ ಅಂಕಪಟ್ಟಿ ನೀಡಿ ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆದಿದ್ದ ನಾಲ್ವರಿಗೆ ಶಾಕ್

ಬೆಳಗಾವಿ, ಆಗಸ್ಟ್​​ 03: ನಕಲಿ ದ್ವಿತೀಯ ಪಿಯುಸಿ (II PUC) ಅಂಕಪಟ್ಟಿಗಳನ್ನು ಸಲ್ಲಿಸಿ ಗ್ರಾಮ ಆಡಳಿತಾಧಿಕಾರಿ (Village Accountant) ಹುದ್ದೆ ಪಡೆದಿದ್ದ ನಾಲ್ವರಿಗೆ ಬೆಳಗಾವಿಯ ಎರಡನೇ ಜೆಎಂಎಫ್‌ಸಿ (JMFC) ನ್ಯಾಯಾಲಯವು ತಲಾ ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ 19 ಸಾವಿರ ರೂಪಾಯಿ ದಂಡ ವಿಧಿಸಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಅನೆಹಳ್ಳಿ ಗ್ರಾಮದ ರಾಜು ವೆಂಕಟೇಶಪ್ಪ ಟಿ., ಕುನ್ನಿಬಂಡಿ ಗ್ರಾಮದ ಮೋಹನ್‌ಕುಮಾರ್ ಚಂದ್ರಪ್ಪ, ಮದ್ದೇರಿ ಗ್ರಾಮದ ಮಂಜುನಾಥ ಬೈಚಪ್ಪ ಹಾಗೂ ಅನೆಹಳ್ಳಿ ಗ್ರಾಮದ ಬಾಲಕೃಷ್ಣ ವೆಂಕಟಪ್ಪ ಶಿಕ್ಷೆಗೆ ಗುರಿಯಾದವರಾಗಿದ್ದಾರೆ.

ಪ್ರಕರಣದ ಹಿನ್ನೆಲೆ

2012ರ ಸೆಪ್ಟೆಂಬರ್ 6ರಂದು ಬೆಳಗಾವಿ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆಯ ಖಾಲಿ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದ್ದರು. ಈ ವೇಳೆ ಆರೋಪಿಗಳು ಬೆಂಗಳೂರಿನ ಅಪರಿಚಿತ ವ್ಯಕ್ತಿಯೊಬ್ಬರಿಂದ ನಕಲಿ ದ್ವಿತೀಯ ಪಿಯುಸಿ ಅಂಕಪಟ್ಟಿಗಳನ್ನು ಪಡೆದು, ಅದರಲ್ಲಿ ಹೆಚ್ಚಿನ ಅಂಕಗಳನ್ನು ತೋರಿಸಿ ಮೆರಿಟ್ ಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆದು ಗ್ರಾಮ ಆಡಳಿತಾಧಿಕಾರಿಗಳಾಗಿ ನೇಮಕಗೊಂಡಿದ್ದರು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಚಾಮರಾಜಪೇಟೆ ಪೊಲೀಸ್ ಠಾಣೆ ಬಳಿಯೇ ಕೊಕೇನ್ ಡೆಲಿವರಿ ದಂಧೆ! 50 ಲಕ್ಷ ರೂ. ಮೌಲ್ಯದ ಡ್ರಗ್ಸ್ ಜಪ್ತಿ

ದಾಖಲೆ ಪರಿಶೀಲನೆಯಲ್ಲಿ ಬಯಲಾದ ವಂಚನೆ

ನೇಮಕಾತಿಯ ನಂತರ ದಾಖಲೆಗಳ ಪರಿಶೀಲನೆ ವೇಳೆ ಅಂಕಪಟ್ಟಿಗಳು ನಕಲಿಯಾಗಿರುವುದು ಪತ್ತೆಯಾಗಿತ್ತು. ಇದರಿಂದಾಗಿ ಅಂದಿನ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ಆರೋಪಿಗಳು ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಬಳಸಿ ಸರ್ಕಾರಿ ಉದ್ಯೋಗ ಪಡೆದಿರುವುದು ದೃಢಪಟ್ಟಿತು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಬೆಳಗಾವಿಯ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ನಾಲ್ವರನ್ನು ದೋಷಿಗಳೆಂದು ತೀರ್ಪು ನೀಡಿರೋದಾಗಿ ದಿ ಟೈಮ್ಸ್​​ ಆಫ್​​ ಇಂಡಿಯಾ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Kerala Flood: ಕೇರಳದಲ್ಲಿ ಭಾರಿ ಪ್ರವಾಹ; ಸಾವಿನ ಸಂಖ್ಯೆ 15ಕ್ಕೆ ಏರಿಕೆ, 7 ಮಂದಿ ನಾಪತ್ತೆ – Kannada News | Kerala floods 15 people dead rescue operations intensify after Heavy Rainfall

ತಿರುವನಂತಪುರಂ, ಆಗಸ್ಟ್ 3: ಕೇರಳ (Kerala Rains) ರಾಜ್ಯಾದ್ಯಂತ ಮಳೆಗೆ ಸಂಬಂಧಿಸಿದ ಅವಾಂತರಗಳಿಂದಾಗಿ 15 ಜನರು ಮೃತಪಟ್ಟಿದ್ದು, 7 ಜನರು ನಾಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ವಿ. ಡಿ. ಸತೀಶನ್ ಇಂದು ತಿಳಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸತೀಶನ್, ರಾಜ್ಯ ಸರ್ಕಾರವು ರಾಜ್ಯಾದ್ಯಂತ 316 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, ಇದುವರೆಗೂ 11,018 ಜನರಿಗೆ ಆಶ್ರಯ ನೀಡಲಾಗಿದೆ ಎಂದು ತಿಳಿಸಿದರು.

ಸಾವುಗಳ ಬಗ್ಗೆ ಮಾಹಿತಿ ನೀಡಿದ ಕೇರಳದ ಸಿಎಂ, ಕೊಟ್ಟಾಯಂ ಜಿಲ್ಲೆಯಿಂದ 3 ಸಾವುಗಳು ವರದಿಯಾಗಿವೆ ಎಂದು ಹೇಳಿದ್ದಾರೆ. ಮೃತರ ಪೈಕಿ ಸಣ್ಣ ಮಗುವೂ ಸೇರಿದೆ. ಕೊಟ್ಟಾಯಂನಲ್ಲಿ ಮೃತಪಟ್ಟ ಮೂವರಲ್ಲಿ ಇಬ್ಬರು ಪೂಂಜಾರ್ ಶಾಸನಸಭಾ ಕ್ಷೇತ್ರದವರಾಗಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಲ್ಲೂ ಮಳೆಯಿಂದಾಗಿ ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಎರ್ನಾಕುಲಂನಲ್ಲಿ ಇಬ್ಬರು ಮೃತಪಟ್ಟಿದ್ದರೆ, ಇಡುಕ್ಕಿ ಮತ್ತು ಮೂವಾಟ್ಟುಪುಳ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಕೊಲ್ಲಂನಲ್ಲಿ 2, ಮಲಪ್ಪುರಂನಲ್ಲಿ 4 ಮತ್ತು ಕಣ್ಣೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಕೋಝಿಕ್ಕೋಡ್‌ನಿಂದಲೂ ಒಂದು ಸಾವು ವರದಿಯಾಗಿದೆ.

ಇದನ್ನೂ ಓದಿ: ಕೊಡಗಿನಲ್ಲಿ ಮುಂದುವರಿದ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!

ಕೇರಳದಲ್ಲಿ ನಾಪತ್ತೆಯಾಗಿರುವ 7 ಜನರ ಪೈಕಿ ಇಬ್ಬರು ಕೊಲ್ಲಂ, ಇಬ್ಬರು ಕಣ್ಣೂರು ಮತ್ತು ಒಬ್ಬರು ಮಲಪ್ಪುರಂ ಜಿಲ್ಲೆಯವರಾಗಿದ್ದಾರೆ ಎಂದು ಸಿಎಂ ಸತೀಶನ್ ತಿಳಿಸಿದ್ದಾರೆ. ಇದಲ್ಲದೆ ಇಡುಕ್ಕಿ ಮತ್ತು ಮೂವಾಟ್ಟುಪುಳದಿಂದ ತಲಾ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಬೋಟ್‌ಗಳು ಹಾಗೂ ಹೆಲಿಕಾಪ್ಟರ್ ನಿಯೋಜನೆ:

ರಕ್ಷಣಾ ಕಾರ್ಯಾಚರಣೆಯನ್ನು ಬಲಪಡಿಸಲು ಕೊಲ್ಲಂನಿಂದ ಚೆಂಗನ್ನೂರಿನವರೆಗೆ 14 ಮೀನುಗಾರಿಕಾ ದೋಣಿಗಳನ್ನು ನಿಯೋಜಿಸಲಾಗಿದೆ. ತಮಿಳುನಾಡಿನ ಸುಲೂರ್‌ನಿಂದ ಬಂದಿರುವ ಎರಡು ಹೆಲಿಕಾಪ್ಟರ್‌ಗಳನ್ನು ವೈಮಾನಿಕ ಕಾರ್ಯಾಚರಣೆಗಾಗಿ ತಿರುವನಂತಪುರಂನಲ್ಲಿ ಸಜ್ಜಾಗಿಡಲಾಗಿದೆ. ತೀವ್ರ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ತಂಡಗಳನ್ನು ನಿಯೋಜಿಸಲಾಗಿದ್ದು, ಅರಕ್ಕೋಣಂನಿಂದ ಹೆಚ್ಚುವರಿ ಪಡೆಯನ್ನು ಕರೆಸಲಾಗುತ್ತಿದೆ. ಪರಿಸ್ಥಿತಿ ಕೈಮೀರಿದರೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮತ್ತು ರಕ್ಷಣಾ ಭದ್ರತಾ ಪಡೆಯನ್ನು (DSC) ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೇರಳಕ್ಕೆ ಭಾರಿ ಮಳೆಯ ಮುನ್ಸೂಚನೆ:

ಭಾರತೀಯ ಹವಾಮಾನ ಇಲಾಖೆ (IMD) ಆಗಸ್ಟ್ 3 ಮತ್ತು ಆಗಸ್ಟ್ 6ರಂದು ಕೇರಳದಲ್ಲಿ ಗಾಳಿಸಹಿತ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು. ಗಾಳಿಯ ವೇಗ ಗಂಟೆಗೆ 50 ಕಿ.ಮೀವರೆಗೆ ತಲುಪಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ, ರೈಲು ಸಂಚಾರ ಸ್ಥಗಿತ!

ಆಗಸ್ಟ್ 2 ಮತ್ತು ಆಗಸ್ಟ್ 3ರಂದು ವಿಶೇಷವಾಗಿ ಕೇರಳ-ಕರ್ನಾಟಕ-ಲಕ್ಷದ್ವೀಪ ಕರಾವಳಿ ಪ್ರದೇಶಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ. ಸಮುದ್ರದ ಕೊರೆತ ಹೆಚ್ಚಿರಲಿದ್ದು, ಕರಾವಳಿ ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 60 ಕಿ.ಮೀ.ವರೆಗೆ ತಲುಪಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಮೃತರ ಕುಟುಂಬಕ್ಕೆ ಸರ್ಕಾರದಿಂದ ತಲಾ 8 ಲಕ್ಷ ಪರಿಹಾರ ಹಾಗೂ ಶವಸಂಸ್ಕಾರದ ವೆಚ್ಚಕ್ಕಾಗಿ ತಕ್ಷಣವೇ 10,000 ರೂ. ಒದಗಿಸಲಾಗುವುದು. ಭೂಕುಸಿತದಲ್ಲಿ ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಗಳಿಗೆ ನೀಡಲಾಗುತ್ತಿದ್ದ ಹಣವನ್ನು 10 ಲಕ್ಷದಿಂದ 12 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version