IPL 2026: ಯಾರಾಗಲಿದ್ದಾರೆ SRH ತಂಡದ ಹೊಸ ನಾಯಕ?

Source link

ಪಾಳು ಮನೆಯಲ್ಲಿ ಅಪ್ರಾಪ್ತೆಯ ಭೀಕರ ಕೊಲೆ: ಭಾವಿ ಪತಿಯಿಂದಲೇ ನಡೀತು ಹತ್ಯೆ!; ಕಾರಣ ನಿಗೂಢ

ಬೆಂಗಳೂರು/ ಗದಗ, ಮಾರ್ಚ್​ 17: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನೇ ವ್ಯಕ್ತಿಯೋರ್ವ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಯಲ್ಲಿ ನಡೆದಿದೆ. ಯುವತಿ ಜೋಯಾಯಳ ಕತ್ತುಕೊಯ್ದು ಕೊಂದು ಶಬೀಲ್(20) ಪರಾರಿಯಾಗಿದ್ದು, ಬೆಳಗ್ಗೆ 6.30ರ ಸುಮಾರಿಗೆ ಘಟನೆ ನಡೆದಿದೆ. ಆರೋಪಿ ಶಬೀಲ್ ಕುಟುಂಬ ಸದಸ್ಯರಿಂದಲೇ ಪ್ರಕರಣ ಬೆಳಕಿಗೆ ಬಂದಿದ್ದು, ಡಿ.ಜೆ.ಹಳ್ಳಿ ಠಾಣೆ ಪೊಲೀಸರಿಂದ ಆರೋಪಿ ಶಬೀಲ್​ಗಾಗಿ ಶೋಧ ಮುಂದುವರಿದಿದೆ. ಬಾಲಕಿ ಹತ್ಯೆಯಾಗಿರುವ ಬಗ್ಗೆ ಬೆಳಗ್ಗೆ 11 ಗಂಟೆಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ, ಹತ್ಯೆಯಾದ ಸ್ಥಳದಲ್ಲಿ ಸೋಕೋ ಟೀಮ್ ಪರಿಶೀಲನೆ ನಡೆಸಿದೆ. ಕೊಲೆಮಾಡಿರುವುದು ಯಾರು ಎಂದು ಈಗಾಗಲೇ ಗೊತ್ತಾಗಿದ್ದು, ಆರೋಪಿ ಶಬೀಲ್ ಬಂಧಿಸಿದ ನಂತರ ಕೊಲೆಗೆ ಕಾರಣ ತಿಳಿಯಲಿದೆ. ಘಟನೆ ನಡೆದ ಸ್ಥಳ ಶಬೀಲ್ ಕುಟುಂಬಕ್ಕೆ ಸೇರಿದ್ದಾಗಿದ್ದು, ಈ ಮನೆಯಲ್ಲಿ ಯಾರೂ ವಾಸ ಇರಲಿಲ್ಲ. ಆಗಾಗ ಇಬ್ಬರು ಇಲ್ಲಿ ಬಂದು ಸೇರುತ್ತಿದ್ದರೂ ಎಂಬ ಮಾಹಿತಿಯಿರೋದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ; ಸಂತ್ರಸ್ತ ಮಹಿಳೆಯ ಅಪ್ರಾಪ್ತ ಮಗಳ ಮೇಲೂ ಕಣ್ಣು! ಆಡಿಯೋ ವೈರಲ್

ಮದುವೆ ವಿಚಾರಕ್ಕೆ ತಮ್ಮನನ್ನೇ ಕೊಲೆಗೈದ ಅಣ್ಣ

ಮೃತ ಫಕ್ಕೀರಪ್ಪ

ಯುವತಿ ಜೊತೆ ಮದುವೆ ವಿಚಾರಕ್ಕೆ ತಮ್ಮನನ್ನೇ ಅಣ್ಣ ಕೊಲೆಗೈದಿರುವ ಆಘಾತಕಾರಿ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ. ತಲೆಯ ಮೇಲೆ ಕಲ್ಲು ಎತ್ತಿಹಾಕಿ ಫಕ್ಕೀರಪ್ಪ(19) ಬರ್ಬರ ಹತ್ಯೆ ಮಾಡಲಾಗಿದ್ದು, ಆರೋಪಿ ಅಶೋಕ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಕ್ಕಮೊಲಂಗಿ ನಿವಾಸಿಗಳಾಗಿದ್ದ ಸಹೋದರರು ಕುರಿ ಮೇಯಿಸಲು ಹಿರೇಕೊಪ್ಪ ಗ್ರಾಮಕ್ಕೆ ಬಂದಿದ್ದರು. ತಮ್ಮನಿಗೆ ಫಿಕ್ಸ್ ಆಗಿದ್ದ ಹುಡುಗಿ ಜತೆ ತಾನು ಮದುವೆ ಆಗಬೇಕೆಂದು ಬಯಸಿದ್ದ ಅಶೋಕ್‌, ಕುರಿದೊಡ್ಡಿಯಲ್ಲಿ ಮಲಗಿದ್ದ ಸಹೋದರನನ್ನು ಕೊಲೆಗೈದ್ದಾನೆ. ಬಳಿಕ ಬೇರೆಯವರು ಹತ್ಯೆ ಮಾಡಿರೋದು ಎಂದು ಕತೆ ಕಟ್ಟಿದ್ದ ಆರೋಪಿಯ ನಿಜ ಬಣ್ಣ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

9 ಮಂದಿ ಆರೋಪಿಗಳ ಬಂಧನ

ಹಫ್ತಾ ಕೊಡದಿದ್ದಕ್ಕೆ ಬೆಂಗಳೂರಿನ ಸಿದ್ದಯ್ಯ ರಸ್ತೆ ಸಮೀಪದ ಬಡಮಕಾನ್ ಬಳಿ ಪುಡಿರೌಡಿಗಳಿಂದ ಮೆಕ್ಯಾನಿಕ್ ಹತ್ಯೆ ಪ್ರಕರಣ ಸಂಬಂಧ 9 ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪರ್ವೇಜ್, ಅಫ್ರಿದಿ, ಸಮೀರ್, ಶಬ್ಬೀರ್, ಮುನ್ನಾವರ್, ಸಾದಿಕ್ ಸೇರಿದಂತೆ 9 ಆರೋಪಿಗಳನ್ನು ಅರೆಸ್ಟ್​​ ಮಾಡಲಾಗಿದೆ. ಎರಡು ದಿನಗಳ ಹಿಂದೆ ನಡೆದಿದ್ದ ರಶೀದ್​ ಕೊಲೆ ಪ್ರಕರಣ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎಲ್​ಪಿಜಿ ಇಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ; ಈ ಗ್ರಾಹಕರಿಗೆ ಮಾತ್ರ ಅನ್ವಯ, ಗಮನಿಸಿ

ನವದೆಹಲಿ, ಮಾರ್ಚ್ 17: ಎಲ್​ಪಿಜಿ ಗ್ರಾಹಕರು ಇಕೆವೈಸಿ (Biometric Aadhaar Authentication) ಮಾಡುವುದು ಕಡ್ಡಾಯ ಎನ್ನುವಂತಹ ಸುದ್ದಿ ಎರಡು ದಿನಗಳಿಂದ ಕೇಳಿಬರುತ್ತಿದೆ. ಇದೇ ವೇಳೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಆಧಾರ್ ಬಯೋಮೆಟ್ರಿಲ್ ದೃಢೀಕರಣ ಅಥವಾ ಇಕೆವೈಸಿಯು ಎಲ್ಲಾ ಎಲ್​ಪಿಜಿ ಗ್ರಾಹಕರಿಗೂ ಕಡ್ಡಾಯವೇನಲ್ಲ. ಇಕೆವೈಸಿ ಮಾಡಿಸಿಲ್ಲದ ಎಲ್​ಪಿಜಿ ಗ್ರಾಹಕರು ಮಾತ್ರ ಈ ಗ್ಯಾಸ್ ಪಡೆಯಲು ಇಕೆವೈಸಿ ಮಾಡುವುದು ಕಡ್ಡಾಯ ಎಂದು ಸಚಿವಾಲಯವು ಹೇಳಿದೆ.

ಎಲ್​ಪಿಜಿ ಗ್ರಾಹಕರು ಆಧಾರ್ ದೃಢೀಕರಣ ಮಾಡುವ ವಿಚಾರದಲ್ಲಿ ಹೊಸದೇನೂ ನಿರ್ದೇಶನ ಹೊರಡಿಸಲಾಗಿಲ್ಲ. ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಳಿಸುವಂತೆ ಎಲ್​ಪಿಜಿ ಗ್ರಾಹಕರನ್ನು ಪ್ರೋತ್ಸಾಹಿಸುವ ಕ್ರಮ ಜಾರಿಯಲ್ಲಿದೆ.

ಎಲ್​ಪಿಜಿ ಇಕೆವೈಸಿ ವಿಚಾರದಲ್ಲಿ ತಿಳಿಯಬೇಕಾದ ಸಂಗತಿಗಳಿವು…

  • ಎಲ್​ಪಿಜಿ ಗ್ರಾಹಕರು ಇದೂವರೆಗೆ ಇಕೆವೈಸಿ ಮಾಡಿಸಿಲ್ಲದೇ ಇದ್ದರೆ ಅವರು ಈಗ ಮಾಡಿಸುವುದು ಕಡ್ಡಾಯ.
  • ಪಿಎಂ ಉಜ್ವಲ್ ಯೋಜನೆಯ ಫಲಾನುಭವಿಗಳು ಪ್ರತೀ ಹಣಕಾಸು ವರ್ಷಕ್ಕೆ ಒಮ್ಮೆ ಇಕೆವೈಸಿ ಅಪ್​ಡೇಟ್ ಮಾಡಬೇಕು. ಅದೂ 7 ಸಿಲಿಂಡರ್ ಪೂರೈಕೆಗೆ ಸಬ್ಸಿಡಿ ಪಡೆದು, 8 ಮತ್ತು 9ನೇ ಸಿಲಿಂಡರ್ ಪಡೆಯುವಾಗ ಇಕೆವೈಸಿ ಅಪ್​ಡೇಟ್ ಮಾಡಬೇಕು.
  • ಪಿಎಂ ಉಜ್ವಲ್ ಯೋಜನೆಗೆ ಒಳಪಡದ ಇತರ ಎಲ್​ಪಿಜಿ ಗ್ರಾಹಕರು ಒಮ್ಮೆ ಇಕೆವೈಸಿ ಮಾಡಿಸಿದ್ದರೆ ಸಾಕು, ಮತ್ತೆ ಅಪ್​ಡೇಟ್ ಮಾಡುವ ಅಗತ್ಯ ಇಲ್ಲ.
  • ಮನೆಯಲ್ಲೇ ಕುಳಿತು, ಉಚಿತವಾಗಿ ಇಕೆವೈಸಿಯನ್ನು ಮಾಡಬಹುದು.

ಇದನ್ನೂ ಓದಿ: ಪಿಎನ್​ಜಿ ಗ್ಯಾಸ್​ಗೂ ಎಲ್​ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್​ಜಿ ಕನೆಕ್ಷನ್ ಪಡೆಯುವುದು ಹೇಗೆ?
ಸರ್ಕಾರದಿಂದ ಬಂದ ಸ್ಪಷ್ಟನೆ

ಎಲ್​ಪಿಜಿ ಗ್ರಾಹಕರು ಇಕೆವೈಸಿ ಅಪ್​ಡೇಟ್ ಮಾಡುವುದು ಹೇಗೆ?

ಎಲ್​ಪಿಜಿ ಗ್ರಾಹಕರು ತಮ್ಮ ವಿತರಕರ ಕಚೇರಿಗೆ ಹೋಗಿ ಅಲ್ಲಿ ಬಯೋಮೆಟ್ರಿಕ್ ಆಧಾರ್ ಅಥೆಂಟಿಕೇಶನ್ ಕೊಡಬಹುದು. ಇದು ಒಂದು ವಿಧಾನ.

ಮತ್ತೊಂದು ವಿಧಾನ ಆನ್​ಲೈನ್​ನದ್ದು. ಆಧಾರ್ ಫೇಸ್​ಆರ್​ಡಿ ಆ್ಯಪ್ ಅನ್ನು ಡೌನ್​ಲೋಡ್ ಮಾಡಬೇಕು. ನಿಮ್ಮ ಗ್ಯಾಸ್​ನ ಕಂಪನಿಯ ಆ್ಯಪ್ ಅನ್ನೂ ಡೌನ್​ಲೋಡ್ ಮಾಡಬೇಕು. ಉದಾಹರಣೆಗೆ, ಇಂಡೇನ್ ಗ್ರಾಹಕರು ಐಒಸಿಎಲ್​ನ ಆ್ಯಪ್ ಡೌನ್​ಲೋಡ್ ಮಾಡಬೇಕು. ಹಾಗೆಯೇ, ಬಿಪಿಸಿಲ್ ಅಥವಾ ಎಚ್​ಪಿಸಿಎಲ್ ಬಳಕೆದಾರರು ಆಯಾ ಕಂಪನಿಗಳ ಆ್ಯಪ್​ಗಳನ್ನು ಬಳಸಿ ಬಯೋಮೆಟ್ರಿಕ್ ಆಧಾರ್ ಅಥೆಂಟಿಕೇಶನ್ ಮಾಡಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್ ಆರಂಭಕ್ಕೂ ಮುನ್ನ ಹೊಸ ಮಾರ್ಗಸೂಚಿಗಳನ್ನು ಮುಂದಿಟ್ಟ ಬಿಸಿಸಿಐ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಆರಂಭಕ್ಕೆ ಇನ್ನು ಉಳಿದಿರುವುದು ಕೇವಲ ದಿನಗಳು ಮಾತ್ರ. ಅದಕ್ಕೂ ಮುನ್ನ ಬಿಸಿಸಿಐ ಎಲ್ಲಾ ತಂಡಗಳಿಗೆ ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಈ ಮಾರ್ಗಸೂಚಿಗಳ ಪ್ರಕಾರವೇ ಅಭ್ಯಾಸ ನಡೆಸಬೇಕೆಂದು ತಿಳಿಸಲಾಗಿದೆ. ಬಿಸಿಸಿಐ ಮುಂದಿಟ್ಟಿರುವ ಮಾರ್ಗಸೂಚಿಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

  • ತಾಜಾ ಪಿಚ್‌ಗಳ ಬಳಕೆ: ಯಾವುದೇ ತಂಡವು ಅಭ್ಯಾಸದ ವೇಳೆ ತನ್ನ ಪ್ರತಿಸ್ಪರ್ಧಿ ತಂಡ ಬಳಸಿದ ಪಿಚ್ ಅಥವಾ ನೆಟ್‌ಗಳನ್ನು ಬಳಸುವಂತಿಲ್ಲ. ಪ್ರತಿ ಸೆಷನ್‌ಗೂ ಹೊಸದಾಗಿ ಸಿದ್ಧಪಡಿಸಿದ ಪಿಚ್‌ಗಳನ್ನೇ ನೀಡಬೇಕು. ಉದಾಹರಣೆಗೆ, ಬೆಳಿಗ್ಗೆ ‘ತಂಡ ಎ’ ಅಭ್ಯಾಸ ಮಾಡಿದ ಪಿಚ್‌ನಲ್ಲಿ ಸಂಜೆ ‘ತಂಡ ಬಿ’ ಅಭ್ಯಾಸ ಮಾಡುವಂತಿಲ್ಲ.
  • ನೆಟ್‌ಗಳ ಹಂಚಿಕೆಗೆ ನಿಷೇಧ: ಒಂದರ ನಂತರ ಒಂದರಂತೆ ತಂಡಗಳು ಅಭ್ಯಾಸ ನಡೆಸುತ್ತಿದ್ದರೂ ಸಹ, ಮೊದಲ ತಂಡ ಬಳಸಿದ ನೆಟ್‌ಗಳನ್ನು ಎರಡನೇ ತಂಡಕ್ಕೆ ನೀಡಲಾಗುವುದಿಲ್ಲ. ಇದು ‘ರೇಂಜ್ ಹಿಟ್ಟಿಂಗ್’ ಪಿಚ್‌ಗಳಿಗೂ ಅನ್ವಯಿಸುತ್ತದೆ.
  • ಅಭ್ಯಾಸ ಪಂದ್ಯಗಳ ಮಿತಿ: ಪ್ರತಿ ತಂಡವು ಗರಿಷ್ಠ 2 ಅಭ್ಯಾಸ ಪಂದ್ಯಗಳನ್ನು ಮಾತ್ರ ಆಡಬಹುದು ಮತ್ತು ಅದಕ್ಕಾಗಿ ಮಂಡಳಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ.
  • ಸಮಯದ ಮಿತಿ: ಫ್ಲಡ್‌ಲೈಟ್‌ಗಳ ಅಡಿಯಲ್ಲಿ ನಡೆಯುವ ಅಭ್ಯಾಸ ಪಂದ್ಯಗಳು 3.5 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಾರದು.
  • ಮುಖ್ಯ ಪಿಚ್‌ಗಳ ರಕ್ಷಣೆ: ತಂಡದ ಮೊದಲ ಹೋಮ್ ಮ್ಯಾಚ್‌ಗಿಂತ 4 ದಿನಗಳ ಮೊದಲು ಮುಖ್ಯ ಪಿಚ್ ಅಥವಾ ಸೆಂಟ್ರಲ್ ಸ್ಕ್ವೇರ್‌ನಲ್ಲಿ ಯಾವುದೇ ರೀತಿಯ ಅಭ್ಯಾಸ ಅಥವಾ ತರಬೇತಿ ಪಂದ್ಯಗಳನ್ನು ನಡೆಸುವಂತಿಲ್ಲ. ಈ ಅವಧಿಯಲ್ಲಿ ಹೋಮ್ ತಂಡಕ್ಕೆ ಬೇರೆ ಅಭ್ಯಾಸ ಮೈದಾನದ ಅಗತ್ಯವಿದ್ದರೆ, ರಾಜ್ಯ ಕ್ರಿಕೆಟ್ ಸಂಸ್ಥೆಗಳು ಅದನ್ನು ಉಚಿತವಾಗಿ ಒದಗಿಸಬೇಕು.
  • ಸಮಯ ಮತ್ತು ಆದ್ಯತೆ: ಅಭ್ಯಾಸದ ಸ್ಲಾಟ್‌ಗಳನ್ನು ಆರಿಸುವಾಗ ಹೋಮ್ ತಂಡಕ್ಕೆ ಮೊದಲ ಆದ್ಯತೆ ಇರುತ್ತದೆ.
    ಆದರೆ, ಹಿಂದಿನ ದಿನ ಪಂದ್ಯವಿದ್ದಲ್ಲಿ ಅಥವಾ ಪ್ರಯಾಣದ ಒತ್ತಡವಿದ್ದಲ್ಲಿ ಪ್ರವಾಸಿ ತಂಡಗಳ ವಿನಂತಿಯನ್ನೂ ಪರಿಗಣಿಸಲಾಗುತ್ತದೆ.
  • ಜವಾಬ್ದಾರಿಗಳು: ಅಭ್ಯಾಸದ ಸಮಯದಲ್ಲಿ ಊಟ, ವೈದ್ಯಕೀಯ ಸೇವೆ ಮತ್ತು ಸುರಕ್ಷತೆಯ ಸಂಪೂರ್ಣ ಜವಾಬ್ದಾರಿ ಆಯಾ ಹೋಮ್ ತಂಡದ್ದೇ ಆಗಿರುತ್ತದೆ.
  • ರೇಂಟ್ ಹಿಟ್ಟಿಂಗ್​ ಅಭ್ಯಾಸ: ಎಲ್ಲಾ ತಂಡಗಳಿಗೆ ನಿಗದಿತ ಮೈದಾನಗಳಲ್ಲಿ ಎರಡು ನೆಟ್ಸ್ ಅಭ್ಯಾಸ ಮತ್ತು ರೇಂಜ್-ಹಿಟ್ಟಿಂಗ್‌ಗಾಗಿ ಮುಖ್ಯ ಮೈದಾನದಲ್ಲಿ ಅವಕಾಶ ಒದಗಿಸಲು ಬಿಸಿಸಿಐ ಸೂಚಿಸಿದೆ.

ಇದನ್ನೂ ಓದಿ: RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಅಲಭ್ಯ..!

ಯಾಕೆ ಈ ನಿಯಮ?

  • ಸಮಾನ ಅವಕಾಶ: ಮೊದಲು ಅಭ್ಯಾಸ ಮಾಡುವ ತಂಡಕ್ಕೆ ಪಿಚ್ ಚೆನ್ನಾಗಿರುತ್ತದೆ, ನಂತರ ಬರುವ ತಂಡಕ್ಕೆ ಪಿಚ್ ಹಾಳಾಗಿರುತ್ತದೆ . ಇದನ್ನು ತಡೆಗಟ್ಟಿ ಎರಡೂ ತಂಡಗಳಿಗೆ ಸಮಾನ ಗುಣಮಟ್ಟದ ಪಿಚ್ ಸಿಗಲಿ ಎಂಬುದು ಉದ್ದೇಶ.
  • ಗಾಯದ ಮುನ್ನೆಚ್ಚರಿಕೆ: ಬಳಸಿದ ಪಿಚ್‌ಗಳಲ್ಲಿ ಅಸಮತೋಲಿತ ಬೌನ್ಸ್ ಇರಬಹುದು, ಇದು ಬ್ಯಾಟರ್‌ಗಳಿಗೆ ಗಾಯ ಮಾಡುವ ಸಾಧ್ಯತೆ ಇರುತ್ತದೆ.
  • ನಿಖರ ಸಿದ್ಧತೆ: ಪಂದ್ಯದ ದಿನದ ಪಿಚ್ ಹೇಗಿರುತ್ತದೆ ಎಂಬ ನಿಖರ ಕಲ್ಪನೆ ಸಿಗಲು ತಾಜಾ ಪಿಚ್‌ಗಳ ಅಗತ್ಯವಿರುತ್ತದೆ.

 

Source link

ಬೆಂಗಳೂರಿನಲ್ಲಿ ಪಬ್ಗಳಿಗೂ ಸಿಲಿಂಡರ್ ಸಮಸ್ಯೆ: ಕೋಲಾರದಲ್ಲಿ ಹೋಟೆಲ್ ಗ್ರಾಹಕರಿಗೆ ಕಲ್ಯಾಣ ಮಂಟಪದ ಊಟ!

ಬೆಂಗಳೂರು, ಕೋಲಾರ ಮಾರ್ಚ್ 17: ಕರ್ನಾಟಕದಲ್ಲಿ ವಾಣಿಜ್ಯ ಬಳಕೆಯ ಎಲ್​​ಪಿಜಿ ಸಿಲಿಂಡರ್‌ಗಳ ಕೊರತೆ ತೀವ್ರಗೊಂಡಿದ್ದು, ಕಳೆದ ಎಂಟು ದಿನಗಳಿಂದ ಈ ಸಮಸ್ಯೆ ಬಗೆಹರಿದಿಲ್ಲ. ಇದರ ಬಿಸಿ ಬೆಂಗಳೂರಿನಾದ್ಯಂತ ಪಬ್‌ಗಳಿಗೂ ತಟ್ಟಿದೆ. ವಿಶೇಷವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್ ಪ್ರದೇಶಗಳಲ್ಲಿ, ಸಿಲಿಂಡರ್ ಕೊರತೆಯಿಂದ ಪಬ್​ಗಳ ಮಾಲಕರು ಕಂಗಾಲಾಗಿದ್ದಾರೆ. ಹಲವು ಪಬ್‌ಗಳಲ್ಲಿ ‘ಫೈರ್‌ಲೆಸ್ ಕುಕಿಂಗ್’ ಅಂದರೆ ಬೆಂಕಿ ಬಳಸದೆ ತಯಾರಿಸುವ ಸಲಾಡ್, ಹಣ್ಣುಗಳಂತಹ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ.

ಕೋಲಾರ ಜಿಲ್ಲೆಯಲ್ಲೂ ಹೋಟೆಲ್‌ಗಳು ಗ್ಯಾಸ್ ಸಿಲಿಂಡರ್ ಕೊರತೆಯಿಂದ ಪರದಾಡುತ್ತಿವೆ. ವಾಣಿಜ್ಯ ಸಿಲಿಂಡರ್ ಸಿಗದೆ ಇರುವ ಕಾರಣ ಪಂಚವಟಿಯಂತಹ ಹಳೆಯ ಹೋಟೆಲ್‌ಗಳು ಸೌದೆ ಒಲೆಯ ಮೊರೆ ಹೋಗಿವೆ. ಹೊಗೆಯ ಸಮಸ್ಯೆ, ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ, ಮತ್ತು ಮೆನು ನಿರ್ಬಂಧಗಳಿಂದಾಗಿ ಹೋಟೆಲ್ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಹೋಟೆಲ್ ಸಿಬ್ಬಂದಿಯೂ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಹೋಟೆಲ್​ಗಳು ಕಲ್ಯಾಣ ಮಂಟಪಗಳಲ್ಲಿ ಅಡುಗೆ ಮಾಡಿ ಹೋಟೆಲ್‌ಗಳಿಗೆ ತಂದು ಗ್ರಾಹಕರಿಗೆ ಬಡಿಸುವಂತಹ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುಗಾದಿಗೆ ಮೈಸೂರು, ಧರ್ಮಸ್ಥಳ, ಕುಕ್ಕೆಗೆ ಹೋಗುವವರಿಗೆ ಬಿಗ್​​ ಶಾಕ್​​​​​ ನೀಡಿದ ಖಾಸಗಿ ಬಸ್​​​: ಟಿಕೆಟ್​​​​ ದರ ಏರಿಕೆ ಪಟ್ಟಿ ಇಲ್ಲಿದೆ

ಬೆಂಗಳೂರು, ಮಾ.17: ಸತತ ನಾಲ್ಕು ದಿನಗಳ ರಜೆ ಮತ್ತು ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತಮ್ಮೂರಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ (Bengaluru private bus ) ಮಾಲೀಕರು ದರ ಏರಿಕೆಯ ಬಿಸಿ ಮುಟ್ಟಿಸಿದ್ದಾರೆ. ಯುಗಾದಿ ಮತ್ತು ರಂಜಾನ್ ಹಬ್ಬವನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಸಾರಿಗೆ ಸಂಸ್ಥೆಗಳು, ಟಿಕೆಟ್ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡಿವೆ.

ಖಾಸಗಿ ಬಸ್ ದರ ಏರಿಕೆಯ ಕಟು ಸತ್ಯ (ನಾರ್ಮಲ್ vs ಹಬ್ಬದ ದರ):

ಬೆಂಗಳೂರು-ಮಂಗಳೂರು: 600 ರೂ. ಇದ್ದ ದರ ಈಗ 2,999 ರೂ. ವರೆಗೆ ಏರಿಕೆಯಾಗಿದೆ.

ಬೆಂಗಳೂರು-ಧಾರವಾಡ/ಹುಬ್ಬಳ್ಳಿ: 400-1,300 ರೂ. ಇದ್ದ ದರ ಭರ್ಜರಿ 4,500 ರೂ. ತಲುಪಿದೆ.

ಬೆಂಗಳೂರು-ಶಿವಮೊಗ್ಗ: 400 ರೂ. ಇದ್ದ ಸಾಮಾನ್ಯ ದರ ಹಬ್ಬದ ವೇಳೆ 2,799 ರೂ.ಕ್ಕೆ ಜಿಗಿದಿದೆ.

ಬೆಂಗಳೂರು-ಧರ್ಮಸ್ಥಳ: 500 ರೂ. ರಿಂದ 3,600 ರೂ.ಕ್ಕೆ ಏರಿಕೆ ಕಂಡುಬಂದಿದೆ.

ಬೆಂಗಳೂರು-ಮೈಸೂರು: ಕೇವಲ 350 ರೂ. ಇದ್ದ ದರ ಈಗ 2,500 ರೂ. ವರೆಗೆ ವಸೂಲಿ ಮಾಡಲಾಗುತ್ತಿದೆ.

ಆದರೆ ಇದರ ನಡುವೆ ಖಾಸಗಿ ಬಸ್‌ಗಳ ದರ ಏರಿಕೆಯಿಂದ ಕಂಗಾಲಾದ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನೆರವಾಗಲಿದೆ.ಮಾರ್ಚ್ 18, 19 ಮತ್ತು 20 ರಂದು ಬೆಂಗಳೂರಿನ ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್), ಮೈಸೂರು ರಸ್ತೆ ಸ್ಯಾಟಲೈಟ್ ಮತ್ತು ಶಾಂತಿನಗರ ನಿಲ್ದಾಣಗಳಿಂದ ರಾಜ್ಯದ ವಿವಿಧ ಮೂಲೆಗಳಿಗೆ 2,000 ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: ಕನ್ನಡದಲ್ಲಿ ರೇಲ್ವೆ ಇಲಾಖೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ: ರೊಚ್ಚಿಗೆದ್ದ ಕನ್ನಡಪರ ಹೋರಾಟಗಾರರು

“ಡೀಸೆಲ್ ದರ ಏರಿಕೆ ಮತ್ತು ಸರ್ಕಾರದ ತೆರಿಗೆ ಹೊರೆಯಿಂದಾಗಿ ಅನಿವಾರ್ಯವಾಗಿ ದರ ಹೆಚ್ಚಿಸಬೇಕಾಗಿದೆ. ಯುದ್ಧದಂತಹ ಪರಿಸ್ಥಿತಿಯಿಂದ ಡೀಸೆಲ್ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ದರ ಏರಿಕೆ ಅಷ್ಟೊಂದು ಹೆಚ್ಚಿಲ್ಲ” ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ತಿಳಿಸಿದ್ದಾರೆ. ಇನ್ನು ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆಯ ( ಸ್ಯಾಟ್ ಲೈಟ್ )ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಿಎಂಟಿಸಿ ಬಸ್ ಸ್ಟ್ಯಾಂಡ್ ನಿಂದ ಸಂಚಾರ ಮಾಡಲಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಯುವಕನಿಗೆ ಸುರಕ್ಷತೆಯ ಪಾಠ ಮಾಡಿದ ಪುಟ್ಟ ಹುಡುಗಿ

ವಾಹನ ಚಲಾಯಿಸುವ ವೇಳೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ (helmet) ಧರಿಸುವುದು ಕಡ್ಡಾಯ. ಆದರೆ ಕೆಲವರು ಈ ರೂಲ್ಸ್ ಬ್ರೇಕ್ ಮಾಡ್ತಾರೆ. ಕೆಲವೊಮ್ಮೆ ಪೊಲೀಸರ ಕೈಯಲ್ಲಿ ತಗಲಾಕಿ ಕೊಳ್ತಾರೆ. ಆದರೆ ಇಲ್ಲೊಬ್ಬ ಯುವಕ ಪೋಲೀಸರ ಕೈಯಲ್ಲಿ ಅಲ್ಲ, ಪುಟಾಣಿಯ (little girl) ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಹೌದು, ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಯುವಕನಿಗೆ ಪುಟ್ಟ ಹುಡುಗಿಯೂ ಸುರಕ್ಷತೆಯ ಪಾಠ ಮಾಡಿದ್ದು, ಹೆಲ್ಮೆಟ್ ಧರಿಸುವಂತೆ ಹೇಳಿದ್ದಾಳೆ. ಈ ಪುಟಾಣಿಯ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ.

instaviral.inm ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವಕನೊಬ್ಬ ಹೆಲ್ಮೆಟ್ ಧರಿಸದೇ ವಾಹನ ಓಡಿಸುವುದನ್ನು ಕಾಣಬಹುದು. ಹೆತ್ತವರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಪುಟ್ಟ ಹುಡುಗಿಯೂ ಅದನ್ನು ಗಮನಿಸಿದ್ದಾಳೆ. ತಕ್ಷಣವೇ ಈ ಯುವಕನನ್ನು ಕರೆದು, ಹೆಲ್ಮೆಟ್ ಹಾಕುವಂತೆ ಹೇಳುವುದನ್ನು ಕಾಣಬಹುದು. ಈ ಪುಟಾಣಿ ಹೆತ್ತವರು, ಈ ಮಗಳ ಮಾತು ಕೇಳಿ ಜೋರಾಗಿ ನಗುತ್ತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಟ್ಟ ಹುಡುಗಿ ಐಸ್ ಕ್ರೀಮ್ ಕೊಟ್ಟಿದ್ದಕ್ಕೆ ಮುತ್ತು ಕೊಟ್ಟು ಥ್ಯಾಂಕ್ಸ್ ಹೇಳಿದ ಗಜರಾಜ

ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ಪುಟಾಣಿಯನ್ನು ಬ್ರಾಂಡ್ ಅಂಬಾಸಿಡರ್ ಮಾಡಿ ಎಂದಿದ್ದಾರೆ. ಇನ್ನೊಬ್ಬರು, ಹೇ ಬಾಬು, ಜೈ ಬಾಬು ಎಂದು ಕಾಲೆಳೆದಿದ್ದಾರೆ. ಮತ್ತೊಬ್ಬರು, ತುಂಬಾ ಮುದ್ದಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಅಲಭ್ಯ..!

Source link

‘ಕೆಡಿ’ ಹಾಡು ವಿವಾದ: ಪ್ರೇಮ್ ವಿರುದ್ಧ ದೆಹಲಿಯಲ್ಲಿ ದೂರು

ಧ್ರುವ ಸರ್ಜಾ (Dhrva Sarja) ನಟಿಸಿ, ಪ್ರೇಮ್ ನಿರ್ದೇಶನ ಮಾಡಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ: ದಿ ಡೆವಿಲ್’ದ ಹಾಡೊಂದು ಇತ್ತೀಚೆಗಷ್ಟೆ ಬಿಡುಗಡೆ ಆಯ್ತು. ನೋರಾ ಫತೇಹಿ ನಟಿಸಿರುವ ಹಾಡನ್ನು ಬಲು ಅದ್ಧೂರಿಯಾಗಿ ಚಿತ್ರತಂಡೆ ಬಿಡುಗಡೆ ಮಾಡಿತು. ಹಾಡು ಕನ್ನಡದಲ್ಲಿ ಮಾತ್ರವೇ ಅಲ್ಲದೆ, ಹಿಂದಿ, ತೆಲುಗು ಇನ್ನೂ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಯೂಟ್ಯೂಬ್​​ನಲ್ಲಿ ರಿಲೀಸ್ ಆಯ್ತು. ಆದರೆ ಈ ಹಾಡು ಇದೀಗ ವಿವಾದಕ್ಕೆ ಸಿಲುಕಿದೆ. ಕನ್ನಡದಲ್ಲಿ ‘ಸರ್ಸೆ ಸೆರಗ ಸರ್ಸೆ’ ಎಂದಿರುವ ಈ ಹಾಡು ಹಿಂದಿಯಲ್ಲಿ ‘ಸರ್ಕೆ ಚುನರ್’ ಎಂದಿದೆ. ಆದರೆ ಈ ಹಾಡಿನ ಸಾಹಿತ್ಯ ತೀವ್ರ ಟೀಕೆಗೆ ಗುರಿ ಆಗಿದ್ದು, ಹಾಡಿನ ವಿರುದ್ಧ ದೂರುಗಳು ದಾಖಲಾಗಿವೆ.

ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಈ ಐಟಂ ಸಾಂಗ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಹಾಡಿನಲ್ಲಿರುವ ನೋರಾ ಫತೇಹಿ ಅವರ ನೃತ್ಯದ ಭಂಗಿಗಳು ‘ಅತಿರೇಕದ ಅಶ್ಲೀಲತೆ’ಯಿಂದ ಕೂಡಿವೆ ಎನ್ನಲಾಗಿತ್ತು. ಅದರಲ್ಲೂ ಹಾಡಿನ ಸಾಹಿತ್ಯವಂತೂ ತೀರ ಅಶ್ಲೀಲವಾಗಿದೆ ಎನ್ನಲಾಗುತ್ತಿದೆ. ವಿಶೇಷವಾಗಿ ಹಿಂದಿ ಹಾಡಿನ ಸಾಹಿತ್ಯದ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿದ್ದು, ಇದೀಗ ದೆಹಲಿಯಲ್ಲಿ ಈ ಬಗ್ಗೆ ದೂರು ಸಹ ದಾಖಲಾಗಿದೆ.

ದೆಹಲಿಯ ವಕೀಲ ವಿನೀತ್ ಜಿಂದಾಲ್ ಎಂಬುವರು ಹಾಡಿನ ವಿರುದ್ಧ ಸಿಬಿಎಫ್​​ಸಿಗೆ ದೂರು ನೀಡಿದ್ದು, ಈ ಕೂಡಲೇ ಹಾಡನ್ನು ತೆಗೆಸಬೇಕು ಎಂದು ಮನವಿ ಮಾಡಿದ್ದಾರೆ. ವಕೀಲ ವಿನೀತ್ ಅವರು ದೆಹಲಿ ಸೈಬರ್ ಪೊಲೀಸರಿಗೂ ಸಹ ದೂರು ನೀಡಿದ್ದು, ಈ ಹಾಡಿನ ಸಾಹಿತ್ಯ ಬರೆದವರು, ಸಂಗೀತ ನಿರ್ದೇಶಕ, ಸಿನಿಮಾ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 294 (ಮಹಿಳೆಯ ಮಾನಕ್ಕೆ ಧಕ್ಕೆ) ಮತ್ತು ಪೋಕ್ಸೊ ಕಾಯ್ದೆಯ ಅಡಿ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಪ್ರತಿ ಭಾನುವಾರ ಫ್ಯಾನ್ಸ್ ಭೇಟಿ ಮಾಡೋದು ಯಾಕೆ? ಕಾರಣ ತಿಳಿಸಿದ ಧ್ರುವ ಸರ್ಜಾ

ವಕೀಲ ವಿನೀತ್ ಮಾತ್ರವೇ ಅಲ್ಲದೆ ಕೆಲವು ಗಾಯಕರು ಸಹ ಈ ಹಾಡಿನ ಸಾಹಿತ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಸಹ ಹಾಡಿನ ಅಶ್ಲೀಲ ಸಾಹಿತ್ಯದ ಬಗ್ಗೆ ವಿರೋಧ ವ್ಯಕ್ತವಾಗಿದೆ. ಇದರ ಗಂಭೀರತೆಯನ್ನು ಪರಿಗಣಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ದೃಶ್ಯಗಳನ್ನು ಪ್ರದರ್ಶಿಸಿರುವುದನ್ನು ಆಯೋಗವು ಆಕ್ಷೇಪಿಸಿದೆ ಎನ್ನಲಾಗಿದೆ.

‘ಕೆಡಿ’ ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಹಾಡು ಐಟಂ ಹಾಡಾಗಿದ್ದು, ನೋರಾ ಫತೇಹಿ ಗ್ಲಾಮರಸ್ ಆಗಿ ಕುಣಿದಿದ್ದಾರೆ. ಸಂಜಯ್ ದತ್ ಸಹ ಹಾಡಿನಲ್ಲಿದ್ದಾರೆ. ನೋರಾ ಫತೇಹಿ ಮದ್ಯದ ಕುರಿತಾಗಿ ಹಾಡುವ ಹಾಡು ಅದಾಗಿದೆ ಆದರೆ ಹಾಡಿನಲ್ಲಿ ಸಾಕಷ್ಟು ದ್ವಂದ್ವಾರ್ಥಗಳಿವೆ. ಇದೇ ಕಾರಣಕ್ಕೆ ಇದೀಗ ಹಾಡು ವಿವಾದಕ್ಕೆ ಕಾರಣವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SSB Recruitment 2026: ಸಶಸ್ತ್ರ ಸೀಮಾ ಬಲದಲ್ಲಿ 233 ಹೆಡ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ; ಹೀಗೆ ಅರ್ಜಿ ಸಲ್ಲಿಸಿ

ಸಶಸ್ತ್ರ ಸೀಮಾ ಬಲದಲ್ಲಿ (SSB) ವೃತ್ತಿಜೀವನವನ್ನು ಆರಂಭಿಸಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣ ಅವಕಾಶವೊಂದು ಒದಗಿಬಂದಿದೆ. ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಎಸ್‌ಎಸ್‌ಬಿ, ಖಾಲಿ ಇರುವ ಒಟ್ಟು 233 ಹೆಡ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ದೇಶದಾದ್ಯಂತ ಎಲ್ಲಿ ಬೇಕಾದರೂ ಕೆಲಸ ಮಾಡಲು ಸಿದ್ಧವಿರುವ ಮತ್ತು ನಿಗದಿತ ಶೈಕ್ಷಣಿಕ ಅರ್ಹತೆ ಹೊಂದಿರುವ ಆಸಕ್ತರು ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ 25,500 ದಿಂದ 81,100 ರೂ. ರವರೆಗೆ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಶೈಕ್ಷಣಿಕ ಅರ್ಹತೆಯ ವಿಷಯಕ್ಕೆ ಬಂದರೆ, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಕನಿಷ್ಠ 10ನೇ ತರಗತಿ, 12ನೇ ತರಗತಿ, ಐಟಿಐ ಅಥವಾ ಡಿಪ್ಲೊಮಾವನ್ನು ಪೂರ್ಣಗೊಳಿಸಿರಬೇಕು. ವಯೋಮಿತಿಯು ಕನಿಷ್ಠ 18 ವರ್ಷಗಳಿಂದ ಗರಿಷ್ಠ 27 ವರ್ಷಗಳ ಒಳಗಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಭ್ಯರ್ಥಿಗಳ ಆಯ್ಕೆಯನ್ನು ಒಟ್ಟು ನಾಲ್ಕು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲಿಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ತೇರ್ಗಡೆಯಾದವರಿಗೆ ದೈಹಿಕ ದಕ್ಷತೆ ಪರೀಕ್ಷೆ ಮತ್ತು ದೈಹಿಕ ಪ್ರಮಾಣೀಕರಣ ಪರೀಕ್ಷೆಗಳನ್ನು ನಡೆಸಲಾಗುವುದು. ಈ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳನ್ನು ಅಂತಿಮವಾಗಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಅರ್ಜಿ ಸಲ್ಲಿಸಲು ಇಚ್ಛಿಸುವವರು ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳುವುದು ಅವಶ್ಯಕ. ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡುವ ಮುನ್ನ ಚಾಲ್ತಿಯಲ್ಲಿರುವ ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಅಥವಾ ಇತರ ಗುರುತಿನ ಚೀಟಿ, ವಯಸ್ಸಿನ ಪುರಾವೆ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಎಸ್‌ಎಸ್‌ಬಿಯ ಅಧಿಕೃತ ವೆಬ್‌ಸೈಟ್ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಿ, ಅಗತ್ಯವಿರುವ ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ, ನಿಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಪಾವತಿಸಿ. ಏಪ್ರಿಲ್ 19 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸಿದ ನಂತರ ಮುಂದಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಪ್ರಿಂಟ್ ಪಡೆದುಕೊಳ್ಳುವುದು ಉತ್ತಮ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version