ಬೆಂಗಳೂರು, ಮಾರ್ಚ್ 16: ಐಟಿ ಸಿಟಿಗೆ ಉದ್ಯೋಗ ಹುಡುಕಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ ಕೆಲಸ ಅರಸಿ ಬರುವ ಆಕಾಂಕ್ಷಿಗಳ ಮಧ್ಯೆ ಸ್ಪರ್ಧೆ ತೀವ್ರವಾಗಿದ್ದು, ಈ ಬಗ್ಗೆ ಬೆಂಗಳೂರಿನ (Bengaluru)ರಿಕ್ರೂಟರ್ ಒಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 15 ದಿನಗಳಲ್ಲಿ ಸಾವಿರಾರು ಮಂದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರ ಕುರಿತು ಪೋಸ್ಟ್ ಮಾಡಿರುವ ಅವರು, ಒಂದು ಕೆಲಸ ದಕ್ಕಿಸಿಕೊಳ್ಳಲು ಎದುರಾಗುವ ಸ್ಪರ್ಧೆ ಇದುವೇ ಎಂದು ಬರೆದುಕೊಂಡಿದ್ದಾರೆ.
15 ದಿನಗಳಲ್ಲಿ 30 ಸಾವಿರಕ್ಕೂ ಹೆಚ್ಚು ಅರ್ಜಿಗಳು
ನಗರದಲ್ಲಿ ಟೆಕ್ ಉದ್ಯೋಗಗಳಿಗಾಗಿ ಸ್ಪರ್ಧೆ ದಿನೇ ದಿನೇ ಹೆಚ್ಚುತ್ತಿದ್ದು, ವಿಶೇಷವಾಗಿ MERN ಮತ್ತು ರಿಯಾಕ್ಟ್ ಡೆವಲಪರ್ ಹುದ್ದೆಗಳಿಗೆ ಭಾರೀ ಪ್ರಮಾಣದಲ್ಲಿ ಅಭ್ಯರ್ಥಿಗಳು ಅರ್ಜಿ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಕಳೆದ 15 ದಿನಗಳಲ್ಲಿ ಮಾತ್ರ ಸುಮಾರು 34,742 ಮಂದಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಕುರಿತು ಮಾಹಿತಿ ಹಂಚಿಕೊಂಡಿರುವ ರಿಕ್ರೂಟರ್ ನಾರಾಯಣಿ ಗುರುನಾಥನ್ ಎಕ್ಸ್ ಪೋಸ್ಟ್ ಮಾಡಿ, ಕೇವಲ 15 ದಿನಗಳಲ್ಲಿ MERN ಮತ್ತು React ಉದ್ಯೋಗಗಳಿಗೆ 34 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಹಾಕಿದ್ದಾರೆ. ಉದ್ಯೋಗಕ್ಕೆ ಅರ್ಜಿ ಹಾಕುವಾಗ ಎದುರಾಗುವ ಸ್ಪರ್ಧೆ ಇದುವೆ ಎಂದು ಹೇಳಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ
34,742 candidates who are actively applying for MERN or React Jobs in Bengaluru, in the last 15 days.
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಹಲವರು ಬೆಂಗಳೂರು ಟೆಕ್ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧೆ ಎಷ್ಟು ಹೆಚ್ಚಾಗಿದೆ ಎಂಬುದನ್ನು ತಮ್ಮ ಅನುಭವಗಳ ಮೂಲಕ ಹಂಚಿಕೊಂಡಿದ್ದಾರೆ. ಕೆಲವರು ಉದ್ಯೋಗ ಸುಳ್ಳು ಅರ್ಜಿ ಹಾಕುವವರ ಸಂಖ್ಯೆಯೂ ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ಬಳಕೆದಾರ ನಮ್ಮ ಕಂಪನಿಯಲ್ಲಿ 500ಕ್ಕೂ ಹೆಚ್ಚು ರೆಸ್ಯೂಮ್ ಬಂದರೂ, ಕೆಲಸಕ್ಕೆ ಬೇಕಾದ ಅರ್ಹ ತಿಳುವಳಿಕೆ ಹಲವರಲ್ಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ, ಟೆಕ್ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಿದ್ದರೂ, ಅದೇ ಮಟ್ಟದಲ್ಲಿ ಸ್ಪರ್ಧೆಯೂ ಹೆಚ್ಚುತ್ತಿರುವುದು ಈ ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ.
ಪಾಕಿಸ್ತಾನದ ನ್ಯಾಷನಲ್ ಟಿ20 ಕಪ್ ಟೂರ್ನಿಯಲ್ಲಿ ಅಸಾದ್ ಅಖ್ತರ್ (Asad Akhtar) ಎಸೆದ ಎಸೆತವು ಇದೀಗ ಮ್ಯಾಚ್ ಫಿಕ್ಸಿಂಗ್ ಅನುಮಾನಕ್ಕೆ ಕಾರಣವಾಗಿದೆ. ಪೇಶಾವರದ ಅರ್ಬಾಬ್ ನಿಯಾಜ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಲಾಹೋರ್ ಹಾಗೂ ಕರಾಚಿ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಕರಾಚಿ ತಂಡದ ವೇಗಿ ಅಸಾದ್ ಅಖ್ತರ್ ಎಸೆತವು ಇದೀಗ ಅನುಮಾನಕ್ಕೆ ಕಾರಣವಾಗಿದೆ. ಏಕೆಂದರೆ ಈ ಅಸಾದ್ ಚೆಂಡೆಸೆದಾಗ ಅವರ ಕಾಲು ಕ್ರೀಸ್‌ಗಿಂತ ಸುಮಾರು ಒಂದು ಅಡಿಗಿಂತಲೂ ಹೆಚ್ಚು ಮುಂದೆ ಹೋಗಿತ್ತು.
ಅಂದರೆ ಮೇಲ್ನೋಟಕ್ಕೆ ಅಸಾದ್ ಅಖ್ತರ್ ಉದ್ದೇಶಪೂರ್ವಕವಾಗಿಯೇ ನೋ ಬಾಲ್ ಎಸೆದಿದ್ದಾರೆ ಕಂಡು ಬರುತ್ತದೆ. ಏಕೆಂದರೆ ಸ್ಪರ್ಧಾತ್ಮಕ ಕ್ರಿಕೆಟ್ ಆಡುವ ಯಾವುದೇ ಬೌಲರ್ ಇಷ್ಟೊಂದು ದೂರ ಕಾಲಿಟ್ಟು ಚೆಂಡೆಸುವುದಿಲ್ಲ.
ಆದರೆ ಅಸಾದ್ ಅಖ್ತರ್ ಕ್ರೀಸ್ನಿಂದ ತುಂಬಾ ದೂರನೇ ಕಾಲಿಡುವ ಮೂಲಕ ನೋ ಬಾಲ್ ಮಾಡಿರುವುದು ಕಂಡು ಬಂದಿದೆ. ಹೀಗಾಗಿಯೇ ಇದು ಉದ್ದೇಶಪೂರ್ವಕ ನೋ ಬಾಲ್ ಎಂಬ ಅನುಮಾನವನ್ನು ಹುಟ್ಟು ಹಾಕಿದೆ.
ಇನ್ನು ಈ ಪಂದ್ಯದಲ್ಲಿ ಅಸಾದ್ ಅಖ್ತರ್ ಕೇವಲ ಒಂದು ಓವರ್ ಮಾತ್ರ ಬೌಲಿಂಗ್ ಮಾಡಿದ್ದರು. ಆ ಓವರ್‌ನಲ್ಲಿ ನೀಡಿದ್ದು ಬರೋಬ್ಬರಿ 21 ರನ್ಗಳು. ಅದರಲ್ಲಿ ಎರಡು ನೋ-ಬಾಲ್ ಮತ್ತು ಎರಡು ವೈಡ್‌ಗಳು ಸೇರಿದ್ದವು.
ಅಂದರೆ ಇಲ್ಲಿ ಅಸಾದ್ ಮನಃಪೂರ್ವಕವಾಗಿಯೇ 2 ನೋ ಬಾಲ್ ಹಾಗೂ 2 ವೈಡ್ಗಳನ್ನು ಎಸೆದಿದ್ದಾರೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದಾರೆ.
ಅಮಿರ್ ನೋ ಬಾಲ್‌ಗೆ ಹೋಲಿಕೆ:
ಅಸಾದ್ ಅಖ್ತರ್ ಎಸೆದಿರುವ ನೋ-ಬಾಲ್ ಅನ್ನು ನೋಡಿದ ಅಭಿಮಾನಿಗಳು, 2010ರಲ್ಲಿ ಮೊಹಮ್ಮದ್ ಅಮಿರ್ ಎಸೆದಿದ್ದ ವಿವಾದಾತ್ಮಕ ನೋ-ಬಾಲ್‌ಗೆ ಹೋಲಿಸಿ ‘ಸ್ಪಾಟ್ ಫಿಕ್ಸಿಂಗ್’ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
2010 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಮಿರ್ ಸ್ಪಾಟ್ ಫಿಕ್ಸಿಂಗ್ ಮಾಡಿಕೊಂಡು ನೋ ಬಾಲ್ ಎಸೆದಿದ್ದರು. ಈ ವೇಳೆ ಅವರ ಕಾಲುಗಳು ಕ್ರೀಸ್ನಿಂದ ಬಲು ದೂರವಿತ್ತು.
ಇದೀಗ ಅಸಾದ್ ಅಖ್ತರ್ ಕೂಡ ಇದೇ ಮಾದರಿಯಲ್ಲಿ ನೋ ಬಾಲ್ ಎಸೆದಿದ್ದಾರೆ. ಹೀಗಾಗಿ ಈ ನೋ ಬಾಲ್ ಅನ್ನು ಅಮಿರ್ ಅವರ ಸ್ಪಾಟ್ ಫಿಕ್ಸಿಂಗ್ ನೋ ಬಾಲ್‌ಗೆ ಹೋಲಿಸಲಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಅಸಾದ್ ಅಖ್ತರ್ ದುಬಾರಿಯಾದರೂ, ಕರಾಚಿ ತಂಡವು ಈ ಪಂದ್ಯವನ್ನು 57 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರಾಚಿ 20 ಓವರ್ಗಳಲ್ಲಿ 206 ರನ್ಗಳಿಸಿದರೆ, ಲಾಹೋರ್ ತಂಡವು 17.3 ಓವರ್ಗಳಲ್ಲಿ 149 ರನ್ಗಳಿಸಿ ಆಲೌಟ್ ಆಗಿದೆ.
ಬೆಂಗಳೂರು, ಮಾರ್ಚ್ 16: ವಿಧಾನ ಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ ಗರಂ ಆದ ಸ್ಪೀಕರ್ ಯು.ಟಿ. ಖಾದರ್ ಸಮಯ ಹೇಳದೆ ಕಲಾಪವನ್ನು ಮುಂದೂಡಿರುವ ಪ್ರಸಂಗ ನಡೆದಿದೆ. ಸಚಿವರ ನಡೆಗೆ ಬೇಸರ ವ್ಯಕ್ತಪಡಿಸಿದ ಸ್ಪೀಕರ್ ಉತ್ತರ ಕೊಡದಿರಲು ಕಾರಣ ಹೇಳುವವರೆಗೂ ಸದನ ನಡೆಸಲ್ಲ ಎಂದು ಕಲಾಪ ಮೊಟಕು ಮಾಡಿ ಪೀಠದಿಂದ ತೆರಳಿದ್ದಾರೆ. ಲಿಖಿತ ರೂಪದ 230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡನೆ ವೇಳೆ ಈ ಪ್ರಸಂಗ ನಡೆದಿದೆ.
ಸದನದಲ್ಲಿ ಸಚಿವ ಪರಮೇಶ್ವರ್ ಉತ್ತರಗಳನ್ನು ಮಂಡಿಸುತ್ತಿದ್ದ ವೇಳೆ ವಿಪಕ್ಷಗಳ ಸದಸ್ಯರಿಂದ ಟೀಕೆ ವ್ಯಕ್ತವಾಗಿದೆ. ಕಲಾಪ ಆರಂಭದಿಂದಲೂ ಸಚಿವರಿಂದನಿರೀಕ್ಷಿತ ಉತ್ತರ ಬಂದಿಲ್ಲ. ಸರ್ಕಾರ ಸತ್ತು ಹೋಗಿದೆ, ತಿಥಿ ಮಾಡಬೇಕು, ತಿಥಿ ಊಟಕ್ಕೆ ಹೋಗಬೇಕು ಅಂತಾ ವಿಪಕ್ಷ ನಾಯಕ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಚಿವರ ವಿರುದ್ಧ ಸ್ಪೀಕರ್ ಖಾದರ್ ಅಸಮಾಧಾನ ಹೊರಹಾಕಿದ್ದಾರೆ. ಸದನದಲ್ಲಿ ಎಲ್ಲಾ ಶಾಸಕರೂ ಪ್ರಶ್ನೆ ಕೇಳುತ್ತಾರೆ. ಎಲ್ಲವೂ ಚುಕ್ಕೆ ಗುರುತಿನ ಪ್ರಶ್ನೆ ಆಗಲ್ಲ. ಗಮನ ಸೆಳೆಯುವ ಸೂಚನೆಗೂ ಸಚಿವರು ಉತ್ತರ ಕೊಡಲ್ಲ. 3 ಸಲ ಸಚಿವರಿಗೆ ಹೇಳಿದರೂ ಸುಧಾರಣೆ ಕಂಡು ಬರುತ್ತಿಲ್ಲ. ಸಂಬಂಧಿಸಿದ ಸಚಿವರು ಬಂದು ಸ್ಪಷ್ಟತೆ, ಕಾರಣ ಕೊಡಬೇಕು. ಅಲ್ಲಿಯವರೆಗೂ ನಾನು ಸದನ ನಡೆಸುವುದಿಲ್ಲ ಎಂದು ಖಾರವಾಗಿ ಹೇಳುವ ಮೂಲಕ ಆಡಳಿತ ಪಕ್ಷಕ್ಕೆ ಸ್ಪೀಕರ್ ಖಾದರ್ ಬಿಸಿ ಮುಟ್ಟಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ಸಭಾತ್ಯಾಗ ಮಾಡಿದ್ದಾರೆ. ಪ್ರತಿದಿನವೂ ಶೇ. 10-30 ಲಿಖಿತ ಪ್ರಶ್ನೆಗಳಿಗೆ ಮಾತ್ರ ಉತ್ತರ ಕೊಡುತ್ತಿದ್ದಾರೆ. ಸರ್ಕಾರ ಹೆಣದಂತಾಗಿದ್ದು, ಸಿಎಂ ಹಿಡಿತ ಕಳೆದುಕೊಂಡಿದ್ದಾರೆ. ಸಚಿವರು ಸದನಕ್ಕೆ ಬರುತ್ತಿಲ್ಲ. ಯಾರು ಸಿಎಂ ಅಂತಾ ತೀರ್ಮಾನ ಆಗದಿರುವ ಕಾರಣ ಈ ರೀತಿ ಆಗುತ್ತಿದೆ. ಸ್ಪೀಕರ್ ನೊಂದು ಹೊರ ಹೋಗಿರುವುದು ಸರ್ಕಾರಕ್ಕೆ ಚಾಟಿ ಏಟು ನೀಡಿದಂತಾಗಿದೆ. ಸ್ಪೀಕರ್ ನಡೆಯನ್ನು ಸ್ವಾಗತಿಸುತ್ತೇವೆ. ಸರ್ಕಾರ ಬದುಕಿದ್ದರೆ ಸಿಎಂ ಬಂದು ಕ್ಷಮೆ ಕೇಳಬೇಕು. ಮಾನ, ಮಾರ್ಯಾದೆ ಇದ್ದರೆ ಸಚಿವರು ರಾಜೀನಾಮೆ ಕೊಟ್ಟು ಹೋಗಬೇಕು ಎಂದು ತಿವಿದಿದ್ದಾರೆ. ವಿಧಾನಸಭೆ ಇತಿಹಾಸದಲ್ಲಿಯೇ ಸರ್ಕಾರದ ಧೋರಣೆ ಖಂಡಿಸಿ ಸ್ಪೀಕರ್ ಪೀಠ ಬಿಟ್ಟು ಹೊರ ಹೋಗಿದ್ದಾರೆ. ಇದು ಆಘಾತಕಾರಿಯಾಗಿದ್ದು, ಸಿಎಂ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು. 40 ದಿನದ ಅಧಿವೇಶನದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರವೇ ಬರುವುದಿಲ್ಲ. ಸ್ಪೀಕರ್ ತೆಗೆದುಕೊಂಡಿರುವ ನಿರ್ಣಯಕ್ಕೆ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ನವದೆಹಲಿ, ಮಾರ್ಚ್ 16: ಹಾರ್ಮುಜ್ ಜಲಸಂಧಿಯನ್ನು ಬ್ಲಾಕ್ ಮಾಡಿದ್ದ ಇರಾನ್ ಮೊನ್ನೆಯಷ್ಟೇ ಎರಡು ಭಾರತೀಯ ಗ್ಯಾಸ್ ಟ್ಯಾಂಕರ್ಗಳು (Indian flagged gas tankers) ಸಾಗಲು ಅನುಮತಿ ಕೊಟ್ಟಿದೆ. ಈ ವಿಚಾರದ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ. ಭಾರತೀಯ ಹಡಗುಗಳಿಗೆ ಇರಾನ್ ಅನುಮತಿಸಿರುವುದರ ಹಿಂದೆ ಯಾವುದೇ ಒಪ್ಪಂದ ಇಲ್ಲ. ಇದು ಎರಡು ದೇಶಗಳ ನಡುವಿನ ಸಂಬಂಧದ ಫಲ, ಮಾತುಕತೆಯ ಫಲ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
ಇರಾನ್ ಜೊತೆ ಭಾರತ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ, ಭಾರತದ ಹಡಗುಗಳಿಗೆ ಇರಾನ್ ಒಪ್ಪಿಗೆ ಕೊಟ್ಟಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಜೈಶಂಕರ್ ಅವರು ಈ ಸ್ಪಷ್ಟನೆ ಕೊಟ್ಟಿದ್ದು, ಇರಾನ್ ಮಾಡಿರುವ ಸಹಾಯಕ್ಕೆ ಬದಲಾಗಿ ಭಾರತ ಮತ್ತೇನೂ ನೆರವು ಕೊಟ್ಟಿಲ್ಲ ಎಂದಿದ್ದಾರೆ.
‘ಇದು ವಿನಿಮಯದ ವಿಚಾರ ಅಲ್ಲ. ಭಾರತ ಮತ್ತು ಇರಾನ್ ನಡುವೆ ಸಂಬಂಧ ಮೊದಲಿಂದಲೂ ಇದೆ. ಇದರ ಆಧಾರದ ಮೇಲೆ ನಾನು ಮಾತುಕತೆ ನಡೆಸುತ್ತಿದ್ದೇನೆ. ಈ ಮಾತುಕತೆಯು ಕೆಲ ಫಲ ಕೊಟ್ಟಿದೆ. ಈ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಮಾತುಕತೆಯಿಂದ ಫಲ ದೊರಕುತ್ತಿದೆ ಎಂದಾದರೆ ಸಹಜವಾಗಿ ನಾನು ಅದೇ ನಿಟ್ಟಿನಲ್ಲಿ ಮುಂದುವರಿಯುತ್ತೆನೆ’ ಎಂದು ಸಚಿವರು ತಿಳಿಸಿದ್ದಾರೆ.
‘ಇವು ಇನ್ನೂ ಆರಂಭಿಕ ದಿನಗಳಷ್ಟೇ. ನಮ್ಮ ಇನ್ನೂ ಹಲವು ಹಡಗುಗಳು ಅಲ್ಲಿವೆ. ಈಗ ಎರಡು ಹಡಗುಗಳನ್ನು ಬಿಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ. ಹಾಗೆಯೇ, ಮಾತುಕತೆ ಮುಂದುವರಿಯುತ್ತಿರುವುದೂ ಹೌದು’ ಎಂದು ಜೈಶಂಕರ್ ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಇರಾನ್ ಅಧ್ಯಕ್ಷ ಮಸೂದ್ ಪೆಜೆಶಕಿಯನ್ ಜೊತೆ ಮಾತನಾಡಿ, ಇಂಧನ ಮತ್ತು ಸರಕುಗಳ ಸಾಗಣೆ ವಿಚಾರವನ್ನು ಚರ್ಚಿಸಿದ್ದಾರೆ. ಅದೇ ವೇಳೆ, ಇರಾನ್ನಿಂದ ತಡೆ ಎದುರಿಸುತ್ತಿರುವ ಹಾರ್ಮುಜ್ ಜಲಸಂಧಿ ಮೂಲಕ ಎಲ್ಪಿಜಿ ಹೊತ್ತ ಎರಡು ಭಾರತೀಯ ಟ್ಯಾಂಕರ್ಗಳು ಅರೇಬಿಯನ್ ಸಮುದ್ರ ಪ್ರವೇಶಿಸಿ ಭಾರತವನ್ನು ತಲುಪುತ್ತಿವೆ ಎನ್ನಲಾಗುತ್ತಿದೆ. ಶಿವಾಲಿಕ್ ಮತ್ತು ನಂದಾದೇವಿ ಹೆಸರಿನ ಈ ಹಡಗುಗಳು ಇನ್ನೆರಡು ದಿನದೊಳಗೆ ಮುಂದ್ರಾ ಮತ್ತು ಕಾಂಡ್ಲಾ ಪೋರ್ಟ್ಗಳಿಗೆ ಬರುವ ನಿರೀಕ್ಷೆ ಇದೆ.
ದಶಕಕ್ಕಿಂತ ಹೆಚ್ಚು ಅವಧಿಯ ನಂತರ ಬೆಂಗಳೂರಿನಲ್ಲಿ ವಾರ್ಡ್ ಕಾರ್ಪೊರೇಟರ್ ಚುನಾವಣೆ ನಡೆಯಲು ಸಿದ್ಧತೆಗಳು ಆರಂಭವಾಗಿವೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಹೊಸದಾಗಿ ರಚನೆಯಾದ ಗ್ರೇಟರ್ ಬೆಂಗಳೂರು ಅಥಾರಿಟಿ ಹಾಗೂ ರಾಜ್ಯ ಚುನಾವಣಾ ಆಯೋಗ ಜೂನ್ ಅಂತ್ಯದೊಳಗೆ ಚುನಾವಣೆ ನಡೆಸಲು ಸಜ್ಜಾಗಿವೆ. ಮೊದಲ ಹಂತವಾಗಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಪಟ್ಟಿಯಲ್ಲಿ 45,69,193 ಪುರುಷರು, 43,20,583 ಮಹಿಳೆಯರು ಮತ್ತು 1,635 ಇತರೆ ಮತದಾರರ ಹೆಸರುಗಳಿದ್ದು, ವಿವರಗಳು ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿವೆ. ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವ ವಿಧಾನ ಇಲ್ಲಿದೆ. ಹಂತ 1: ಮೊದಲು ವೆಬ್ಸೈಟ್ನಲ್ಲಿ ಕಾಣಿಸುವ ನೋಟಿಫಿಕೇಶನ್ ಬ್ಯಾನರ್ ಮೇಲೆ ಕ್ಲಿಕ್ ಮಾಡಿ.
ಹಂತ 2: ನಂತರ ಹೊಸ ವೆಬ್ ಪುಟ ತೆರೆಯುತ್ತದೆ. ಅಲ್ಲಿ ಮೂರು ಆಯ್ಕೆಗಳು ಕಾಣಿಸುತ್ತವೆ:
1. EPIC (Electors Photo Identity Card) ಸಂಖ್ಯೆ ಮೂಲಕ ಹುಡುಕುವುದು
2. ಹೆಸರಿನ ಮೂಲಕ ಹುಡುಕುವುದು
3. ಮತದಾನ ಕೇಂದ್ರವಾರು ಹುಡುಕುವುದು
ಈ ಆಯ್ಕೆಗಳಲ್ಲಿ ಯಾವುದನ್ನಾದರೂ ಬಳಸಿಕೊಂಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಬಹುದು.
EPIC ಸಂಖ್ಯೆ ಇಲ್ಲದಿದ್ದರೆ Search by Name (ಹೆಸರು ಬಳಸಿ ಹುಡುಕು) ಆಯ್ಕೆ ಬಳಸಬಹುದು. ಅಲ್ಲಿ ಈ ವಿವರಗಳನ್ನು ನಮೂದಿಸಬೇಕು:
1. ಕಾರ್ಪೊರೇಷನ್ (ಬೆಂಗಳೂರು ನಾರ್ತ್, ಈಸ್ಟ್, ವೆಸ್ಟ್, ಸೌತ್ ಅಥವಾ ಸೆಂಟ್ರಲ್)
2. ವಾರ್ಡ್ ಹೆಸರು
3. ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳು
4. ತಂದೆ/ತಾಯಿ/ಪತಿ ಹೆಸರಿನ ಮೊದಲ ನಾಲ್ಕು ಅಕ್ಷರಗಳು
5. ವಯಸ್ಸು
6. ಜನ್ಮ ದಿನಾಂಕ (ತಿಂಗಳು/ದಿನ/ವರ್ಷ)
ಮೂರನೇ ಆಯ್ಕೆ ಮತದಾನ ಕೇಂದ್ರವಾರು ಹುಡುಕುವುದು ಸ್ವಲ್ಪ ಕಷ್ಟಕರವಾಗಿದೆ. ಈ ವಿಧಾನದಲ್ಲಿ ಹುಡುಕಲು ಮೊದಲು ಕಾರ್ಪೊರೇಷನ್ ಹೆಸರು (ಬೆಂಗಳೂರು ನಾರ್ತ್, ಸೌತ್, ಈಸ್ಟ್, ವೆಸ್ಟ್ ಅಥವಾ ಸೆಂಟ್ರಲ್), ವಾರ್ಡ್ ಹೆಸರು ಹಾಗೂ ಪೋಲಿಂಗ್ ಸ್ಟೇಷನ್ ಹೆಸರು ತಿಳಿದಿರಬೇಕು. ಬಳಿಕ ಪಿಡಿಎಫ್ ರೂಪದಲ್ಲಿ ಮತದಾರರ ಪಟ್ಟಿಯನ್ನು ನೀಡಲಾಗುತ್ತದೆ. ಆ ಪಟ್ಟಿಯಲ್ಲಿ ಬಳಕೆದಾರರು ಪುಟಗಳನ್ನು ಸ್ವತಃ ಸ್ಕ್ರೋಲ್ ಮಾಡಿ ತಮ್ಮ ಹೆಸರನ್ನು ಹುಡುಕಬೇಕಾಗುತ್ತದೆ.
ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸದಿದ್ದರೆ ನ್ಯಾಷನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ (NVSP) ವೆಬ್ಸೈಟ್ನಲ್ಲಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಹೊಸದಾಗಿ ಹೆಸರು ನೋಂದಾಯಿಸಬಹುದು. ಇದರ ಜೊತೆಗೆ ಸಮೀಪದ ಪಾಲಿಕೆ ಕಚೇರಿ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಫಾರ್ಮ್–4 (ಹೆಸರು ಸೇರ್ಪಡೆ), ಫಾರ್ಮ್–5 (ಆಕ್ಷೇಪಣೆ), ಫಾರ್ಮ್–6 (ತಿದ್ದುಪಡಿ), ಫಾರ್ಮ್–7 (ವಾಸಸ್ಥಳ ಬದಲಾವಣೆ) ಹಾಗೂ ಫಾರ್ಮ್–8 (ಹೆಸರು ಅಳಿಸುವಿಕೆ) ಪಡೆಯಬೇಕು. ವಿವರಗಳನ್ನು ಭರ್ತಿ ಮಾಡಿ ಅಧಿಕಾರಿಗಳಿಗೆ ಸಲ್ಲಿಸಬೇಕು. ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಮಾರ್ಚ್ ಮಧ್ಯದಲ್ಲಿ ಪ್ರಕಟಿಸುವ ನಿರೀಕ್ಷೆಯಿರುವುದರಿಂದ ಸಾಧ್ಯವಾದಷ್ಟು ಬೇಗ ಈ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಬೆಂಗಳೂರು, ಮಾರ್ಚ್ 16: ಎಲ್ಪಿಜಿ ಸಿಲಿಂಡರ್ಗಳ ಅಭಾವದಿಂದ ಜನರೀಗ ಮತ್ತೆ ಸಾಂಪ್ರದಾಯಿಕ ಸೌದೆ ಒಲೆಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ವೈದ್ಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಕ್ಯಾನ್ಸರ್, ಟಿಬಿ, ಅಸ್ತಮಾ ಸೇರಿದಂತೆ ನೂರಾರು ರೋಗಗಳಿಗೆ ಇವೇ ತವರುಮನೆ ಎಂದು ಎಚ್ಚರಿಸಿದ್ದಾರೆ. ಸೌದೆಯಿಂದ ಹೊರ ಬರುವ ಹೊಗೆ ಲಂಗ್ಸ್ ಕ್ಯಾನ್ಸರ್, ಟಿಬಿ, ಬ್ರೆಸ್ಟ್ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಈ ಹೊಗೆಯಲ್ಲಿ ಬೆಂಜೀನ್ ಮತ್ತು ಪಾಲಿ ಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಗಳು ಹೊರ ಹೊಮ್ಮುತ್ತವೆ ಎಂದು ತಿಳಿಸಿದ್ದಾರೆ. ಆದರೆ ಇವು ಅಲ್ಪ ಕಾಲದಲ್ಲಿ ದೊಡ್ಡ ಪರಿಣಾಮ ಬೀರಲ್ಲ. ಬದಲಾಗಿ ದೀರ್ಘ ಕಾಲದಲ್ಲಿ ಸೌದೆ ಒಲೆಗಳ ಬಳಕೆ ಮಾರಕ ರೋಗಗಳಿಗೆ ಕಾರಣವಾಗಬಹುದು. ಹೀಗಾಗಿ ಅಡುಗೆ ಮಾಡಲು ಸಾಧ್ಯವಾದಷ್ಟು ಒಣ ಸೌದೆ ಬಳಸಿ, ಹಸಿ ಸೌದೆಗಳ ಬಳಕೆ ಬೇಡ. ಇದರಿಂದ ಸಂಭಾವ್ಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.
ನವದೆಹಲಿ, ಮಾರ್ಚ್ 16: ಯುದ್ಧದ ತೀವ್ರತೆ ಹೆಚ್ಚುತ್ತಿರುವ ಬೆನ್ನಲ್ಲೇ ಇರಾನ್ (Iran) ಅತ್ಯಾಧುನಿಕ, ದೇಶೀಯ ನಿರ್ಮಿತ ‘ಡ್ಯಾನ್ಸಿಂಗ್ ಮಿಸೈಲ್ (Dancing Missile)’ ಸೆಜ್ಜಿಲ್ (Sejjil) ಮೂಲಕ ಇಸ್ರೇಲ್ ವಿರುದ್ಧ ದಾಳಿ ನಡೆಸಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇದರೊಂದಿಗೆ, ಇರಾನ್ ಮೊತ್ತಮೊದಲ ಬಾರಿಗೆ ಇಸ್ರೇಲ್ ವಿರುದ್ಧ ಡ್ಯಾನ್ಸಿಂಗ್ ಮಿಸೈಲ್ ಪ್ರಯೋಗ ಮಾಡಿದಂತಾಗಿದೆ. ಇಸ್ರೇಲ್ನ ಪ್ರಮುಖ ಪ್ರದೇಶಗಳನ್ನು ಗುರಿಯಾಗಿಸಿ ಇರಾನ್, ಸೆಜ್ಜಿಲ್ ಮೂಲಕ ದಾಳಿ ನಡೆಸಿದೆ.
ಸದ್ಯ ‘ಡ್ಯಾನ್ಸಿಂಗ್ ಮಿಸೈಲ್’ ಎಂಬ ಹೆಸರು ಜಗತ್ತಿನ ಗಮನ ಸೆಳೆದಿದೆ. ‘ಡ್ಯಾನ್ಸಿಂಗ್ ಮಿಸೈಲ್’ ಎಂದರೇನು? ಡ್ಯಾನ್ಸಿಂಗ್ ಮಿಸೈಲ್ ಸೆಜ್ಜಿಲ್ ಇದರ ವಿಶೇಷ ಏನು ಎಂಬ ಮಾಹಿತಿ ಇಲ್ಲಿದೆ.
ಸೆಜ್ಜಿಲ್ ಕ್ಷಿಪಣಿ ಎಂದರೇನು?
ಸೆಜ್ಜಿಲ್-2 ಇರಾನ್ನಲ್ಲೇ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ಎರಡು ಹಂತಗಳ ಘನ ಇಂಧನ (Solid Fuel) ಬಳಸುವ ಮಧ್ಯಮ ದೂರದ ಬಾಲಿಸ್ಟಿಕ್ ಕ್ಷಿಪಣಿಯಾಗಿದೆ. ಈ ಕ್ಷಿಪಣಿಯ ಅಂದಾಜು ವ್ಯಾಪ್ತಿ ಸುಮಾರು 2,000 ಕಿಲೋಮೀಟರ್ ಆಗಿದ್ದು, ಸುಮಾರು 700 ಕಿಲೋಗ್ರಾಂ ತೂಕದ ಪೇಲೋಡ್ ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.
ಡ್ಯಾನ್ಸಿಂಗ್ ಮಿಸೈಲ್ ಹೆಸರು ಯಾಕೆ ಬಂತು?
ಈ ಕ್ಷಿಪಣಿಯು ಗುರಿಯತ್ತ ಸಾಗುತ್ತಿರುವಾಗ ಚುರುಕಾಗಿ ದಿಕ್ಕು ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಶತ್ರುಗಳ ರೇಡಾರ್ ಕಣ್ತಪ್ಪಿಸಿ ನೆಗೆಯಬಲ್ಲದ್ದಾಗಿದೆ. ಛಂಗನೆ ದಿಕ್ಕು ಬದಲಾಯಿಸಿ ರೇಡಾರ್ಗಳ ಕಣ್ತಪ್ಪಿಸಿ ನೆಗೆಯಬಲ್ಲದ್ದಾದ್ದರಿಂದ ಇದಕ್ಕೆ ‘ಡ್ಯಾನ್ಸಿಂಗ್ ಮಿಸೈಲ್’ ಎಂಬ ಹೆಸರು ಬಂದಿದೆ.
ಅಮೆರಿಕದ ಸೆಂಟರ್ ಫಾರ್ ಸ್ಟ್ರಾಟಜಿಕ್ ಆ್ಯಂಡ್ ಇಂಟರ್ನ್ಯಾಷನಲ್ ಸ್ಟಡೀಸ್(CSIS) ಮಾಹಿತಿಯ ಪ್ರಕಾರ, ಸೆಜ್ಜಿಲ್ ಕ್ಷಿಪಣಿ ಸುಮಾರು 18 ಮೀಟರ್ ಉದ್ದ, 1.25 ಮೀಟರ್ ವ್ಯಾಸ ಹೊಂದಿದ್ದು, ಸುಮಾರು 23,600 ಕಿಲೋಗ್ರಾಂ ತೂಕವಿದೆ.
ಘನ ಇಂಧನ ಬಳಸುವ ಕ್ಷಿಪಣಿಯಾದ್ದರಿಂದ ಹಳೆಯ ಶಹಾಬ್ ಮಿಸೈಲ್ನಂಥ ದ್ರವ ಇಂಧನ ಕ್ಷಿಪಣಿಗಳಿಗಿಂತ ಇದು ಬೇಗ ಸಿದ್ಧಪಡಿಸಿ ಉಡಾಯಿಸಲು ಸಾಧ್ಯವಾಗುತ್ತದೆ.
ಸೆಜ್ಜಿಲ್ ಕ್ಷಿಪಣಿಯ ವಿನ್ಯಾಸ ಕಾರ್ಯ 1990ರ ದಶಕದ ಆರಂಭದಲ್ಲೇ ಪ್ರಾರಂಭಗೊಂಡಿತ್ತು. ಮೊದಲ ಪರೀಕ್ಷಾ ಉಡಾವಣೆ 2008ರಲ್ಲಿ ನಡೆದಿದ್ದು, ಆಗ ಕ್ಷಿಪಣಿ ಸುಮಾರು 800 ಕಿಲೋಮೀಟರ್ ದೂರದ ಗುರಿ ತಲುಪಿತ್ತು. ನಂತರ 2009ರ ಮೇ ತಿಂಗಳಲ್ಲಿ ಎರಡನೇ ಪರೀಕ್ಷೆ ನಡೆಸಿ ಗೈಡೆನ್ಸ್ ಆ್ಯಂಡ್ ನ್ಯಾವಿಗೇಶನ್ ವ್ಯವಸ್ಥೆಯನ್ನು ಸುಧಾರಿಸಲಾಯಿತು. 2009ರಿಂದ ಬಳಿಕ ಇನ್ನೂ ನಾಲ್ಕು ಪರೀಕ್ಷಾರ್ಥ ಉಡಾವಣೆಗಳು ನಡೆದಿದ್ದು, ಆರನೇ ಪರೀಕ್ಷೆಯಲ್ಲಿ ಕ್ಷಿಪಣಿ ಸುಮಾರು 1,900 ಕಿಲೋಮೀಟರ್ ದೂರ ಇಂಡಿಯನ್ ಓಷನ್ ಕಡೆಗೆ ಪ್ರಯಾಣಿಸಿತ್ತು ಎಂದು ವರದಿಯಾಗಿದೆ.
ಯಾವುದೇ ಸೆಲೆಬ್ರಿಟಿ ಹೊರಗೆ ಕಾಣಿಸಿಕೊಂಡರೆ ಸಾಕು, ಅವರನ್ನು ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಹೀಗಾಗದಂತೆ ತಡೆಯಲು ಭದ್ರತಾ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗೋದಿಲ್ಲ. ಈಗ ಕಾಜೋಲ್ ಅವರಿಗೆ ಹಾಗೆಯೇ ಆಗಿದೆ. ಅವರು ಬಾಲಿವುಡ್ ನಟಿ. ಅಜಯ್ ದೇವಗನ್ ಪತ್ನಿ. ಅವರು ಬರುತ್ತಾರೆ ಎಂದರೆ ಸಾಕಷ್ಟು ಭದ್ರತೆ ನೀಡಲಾಗುತ್ತದೆ. ಆದಾಗ್ಯೂ ಅಭಿಮಾನಿಗಳು ಮುತ್ತಿಕೊಂಡರು. ಕೊನೆಗೆ ಅವರು ಕಷ್ಟಪಟ್ಟು ಕಾರನ್ನು ಏರಿದ್ದಾರೆ. ಆ ಸಂದರ್ಭದ ವಿಡಿಯೋ ಮೇಲಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ಉಳಿದಿರುವುದು ದಿನಗಳು ಮಾತ್ರ. ಮಾರ್ಚ್ 28 ರಿಂದ ಶುರುವಾಗಲಿರುವ 19ನೇ ಆವೃತ್ತಿಯ ಟೂರ್ನಿಗೆ ಈಗಾಗಲೇ 10 ತಂಡಗಳು ಸಜ್ಜಾಗಿವೆ. ಈ ತಂಡಗಳಲ್ಲಿ ಇರುವ ಆಟಗಾರರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
ನವದೆಹಲಿ, ಮಾರ್ಚ್ 16: ಜಗತ್ತಿನ ಪ್ರಮುಖ ತೈಲ ಮಾರ್ಗಗಳಲ್ಲಿ ಒಂದೆನಿಸಿರುವ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ತೈಲ ಹಡಗುಗಳ ಸಾಗಣೆಗೆ ರಕ್ಷಣೆ ಒದಗಿಸಲು ಅಮೆರಿಕವು ಹಲವು ದೇಶಗಳ ನೆರವು ಯಾಚಿಸುತ್ತಿದೆ. ಇರಾನ್ ಯುದ್ಧದಿಂದಾಗಿ ಈ ಹಾರ್ಮುಜ್ ಸ್ಟ್ರೇಟ್ ಬಹುತೇಕ ಸ್ಥಗಿತಗೊಂಡಿದೆ. ತೈಲ ಹೊತ್ತ ಕೆಲವೇ ಕೆಲವು ಹಡಗುಗಳ ಮಾತ್ರ ಆಗಾಗ್ಗೆ ಹೊರಬರುತ್ತಿವೆ. ಇದರ ಪರಿಣಾಮವಾಗಿ ಜಾಗತಿಕವಾಗಿ ತೈಲ ಬೆಲೆ ಗಗನಕ್ಕೇರುತ್ತಿದೆ.
ಇದೇ ವೇಳೆ, ಹಾರ್ಮುಜ್ ಜಲಸಂಧಿಯಲ್ಲಿ ತೈಲ ಹಡಗುಗಳನ್ನು ಸಾಗಿಸಲು ಬಿಡುವುದಿಲ್ಲ ಎಂದು ಇರಾನ್ ಹೇಳಿರುವ ಹಿನ್ನೆಲೆಯಲ್ಲಿ ಅಮೆರಿಕ ಇತರ ರಾಷ್ಟ್ರಗಳ ನೆರವು ಕೇಳುತ್ತಿದೆ. ತನ್ನ ನೌಕಾಸೇನೆಯ ಭದ್ರತೆಯಲ್ಲಿ ತೈಲ ಹಡಗುಗಳನ್ನು ಸಾಗಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ದ ಅಮೆರಿಕ ಈಗ ಇತರ ದೇಶಗಳ ನೆರವು ಕೇಳುವಂತಾಗಿದೆ. ವರದಿ ಪ್ರಕಾರ ಭಾರತದ ನೆರವನ್ನೂ ಕೇಳಲು ಅಮೆರಿಕ ಯೋಜಿಸಿದೆ.
ಚೀನಾ, ಜಪಾನ್, ಫ್ರಾನ್ಸ್, ಆಸ್ಟ್ರೇಲಿಯಾ, ಬ್ರಿಟನ್, ಸೌತ್ ಕೊರಿಯ, ಹಾಗೆಯೇ ನಾಟೋ ಕೂಟದ ದೇಶಗಳನ್ನು ಹಾರ್ಮುಜ್ ಜಲಸಂಧಿಯಲ್ಲಿ ಭದ್ರತೆಗೆ ಬರಬೇಕೆಂದು ಕೇಳಿಕೊಂಡಿರುವುದಾಗಿ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ನಿನ್ನೆ ಹೇಳಿದ್ದರು.
ಅವರ ಪ್ರಕಾರ, ಕೆಲ ದೇಶಗಳು ಅಮೆರಿಕದ ಮನವಿಗೆ ಸಮ್ಮತಿಸಿವೆ. ಕೆಲ ವರದಿಗಳ ಪ್ರಕಾರ ಅಮೆರಿಕದ ಹಲವು ಮಿತ್ರ ದೇಶಗಳು ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ. ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳು ಹಾರ್ಮುಜ್ ಜಲಸಂಧಿ ಬಳಿ ತಮ್ಮ ನೌಕೆಗಳನ್ನು ಕಳುಹಿಸಲು ನಿರಾಕರಿಸಿವೆ.
ಭಾರತ ಸೇರಿದಂತೆ ಇನ್ನೂ ಕೆಲ ದೇಶಗಳನ್ನು ಹಾರ್ಮುಜ್ ಜಲಸಂಧಿ ಭದ್ರತೆಗೆ ಬರಬೇಕೆಂದು ಆಹ್ವಾನಿಸುವ ಆಲೋಚನೆಯಲ್ಲಿ ಅಮೆರಿಕ ಇದೆ. ಹಾರ್ಮುಜ್ ಜಲಸಂಧಿ ಮೂಲಕ ಬರುವ ತೈಲದ ಮೇಲೆ ಹೆಚ್ಚು ಅವಲಂಬಿತವಾಗಿರುವ ಭಾರತ, ಜಪಾನ್, ಕೊರಿಯಾ, ಚೀನಾ, ಥಾಯ್ಲೆಂಡ್ ಮೊದಲಾದ ಏಷ್ಯನ್ ದೇಶಗಳು ಹಾರ್ಮುಜ್ ಸ್ಟ್ರೇಟ್ ರಕ್ಷಣೆಗೆ ಬರಬಹುದು ಎಂದು ಅಮೆರಿಕ ನಿರೀಕ್ಷಿಸುತ್ತಿದೆ.
ಹಾರ್ಮುಜ್ ಜಲಸಂಧಿ ಯಾಕೆ ಮುಖ್ಯ?
ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿ ಹಾಗೂ ಅರೇಬಿಯನ್ ಸಮುದ್ರವನ್ನು ಸಂಪರ್ಕಿಸುತ್ತದೆ. ಬಹಳ ಕಿರಿದಾಗಿರುವ ಜಲಮಾರ್ಗವಾದ್ದರಿಂದ ಹಡಗುಗಳ ಸಾಗಾಟ ಬಹಳ ಸೂಕ್ಷ್ಮ ಎನಿಸುತ್ತದೆ. ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ಮಾಡಿದ ಹಿನ್ನೆಲೆಯಲ್ಲಿ ಈ ಜಲಸಂಧಿಗೆ ಕಂಟಕ ಶುರುವಾಗಿದೆ.
ಕೊಲ್ಲಿ ದೇಶಗಳ ತೈಲಗಳು ಇತರೆಡೆ ಸಾಗಲು ಈ ಜಲಸಂಧಿಯೇ ಮುಖ್ಯ ಮಾರ್ಗ. ಜಗತ್ತಿನ ಶೇ. 40ರಷ್ಟು ತೈಲ ಸಾಗಾಟ ಇಲ್ಲಿಂದಲೇ ನಡೆಯುತ್ತದೆ. ಭಾರತ, ಚೀನಾ ಸೇರಿದಂತೆ ಹೆಚ್ಚಿನ ಏಷ್ಯನ್ ದೇಶಗಳಿಗೆ ಬೇಕಾದ ಹೆಚ್ಚಿನ ತೈಲವು ಇಲ್ಲಿಂದಲೇ ಪೂರೈಕೆಯಾಗುವುದು. ಹೀಗಾಗಿ, ಕೊಲ್ಲಿ ದೇಶಗಳು ಹಾಗೂ ಏಷ್ಯನ್ ದೇಶಗಳಿಗೆ ಈ ಜಲಸಂಧಿಯ ಭದ್ರತೆ ಬಹಳ ಮುಖ್ಯವಾಗುತ್ತದೆ. ಜಾಗತಿಕವಾಗಿ ತೈಲ ಬೆಲೆಯಲ್ಲಿ ಏರುಪೇರಾಗದಂತೆ ನೋಡಿಕೊಳ್ಳಲೂ ಇದು ಮುಖ್ಯ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ