ಟೆಹ್ರಾನ್, ಮಾರ್ಚ್ 13: ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವುದನ್ನು ನಿರ್ಬಂಧಿಸಲು ನಿಯೋಜಿಸಲಾದ ಆತ್ಮಾಹುತಿ ಡ್ರೋನ್ ಹಡಗುಗಳ ದೊಡ್ಡ ಸಂಗ್ರಹವನ್ನು ಇರಾನ್ (Iran) ಸೇನೆ ಹೊಂದಿದೆ. ಇರಾನ್‌ನ ಅಧಿಕಾರಿಗಳು “ಕ್ಷಿಪಣಿ ನಗರ” ಎಂದು ಹೇಳುವ ಭೂಗತ ಕಾಂಪ್ಲೆಕ್ಸ್ ಒಳಗೆ ಚಿತ್ರೀಕರಿಸಲಾದ ವಿಡಿಯೋಗಳನ್ನು ಇರಾನ್‌ನ ಮಾಧ್ಯಮಗಳು ಬಿಡುಗಡೆ ಮಾಡಿದೆ. ನೌಕಾ ಡ್ರೋನ್‌ಗಳು, ಹಡಗು ವಿರೋಧಿ ಕ್ಷಿಪಣಿಗಳು ಮತ್ತು ಸಮುದ್ರ ಗಣಿಗಳಿಂದ ಕೂಡಿದ ಉದ್ದವಾದ ಸುರಂಗಗಳನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ರೆಕಾರ್ಡಿಂಗ್‌ಗಳನ್ನು ಯಾವಾಗ ಮಾಡಲಾಯಿತು, ಅಮೆರಿಕನ್ ಅಥವಾ ಇಸ್ರೇಲಿ ಪಡೆಗಳು ಆ ಸ್ಥಳವನ್ನು ಧ್ವಂಸ ಮಾಡಿವೆಯೇ ಎಂಬುದು ಸ್ಪಷ್ಟವಾಗಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 13: ಇರಾನ್ ಹಾಗೂ ಇಸ್ರೇಲ್-ಅಮೆರಿಕದ ನಡುವೆ ಸಂಘರ್ಷ ಆರಂಭವಾದ ನಂತರ ಜಗತ್ತಿನಾದ್ಯಂತ ಹಲವೆಡೆ ಇಂಧನ, ಎಲ್ಪಿಜಿ ಬಿಕ್ಕಟ್ಟು (LPG Crisis) ತಲೆದೋರಿತ್ತು. ಅದಕ್ಕೆ ಭಾರತವೂ ಹೊರತಾಗಿರಲಿಲ್ಲ. ಆದರೆ, ಕೊನೆಗೂ ಭಾರತದಲ್ಲಿ ಉದ್ಭವವಾಗಿದ್ದ ಎಲ್ಪಿಜಿ ಕೊರತೆಗೆ ಪರಿಹಾರ ಸಿಕ್ಕಂತಾಗಿದೆ. ಭಾರತ ಮತ್ತು ಇರಾನ್ ಹಾರ್ಮುಜ್ ಜಲಸಂಧಿಯಿಂದ ಹಡಗುಗಳ ಸಾಗಣೆಗೆ ಒಪ್ಪಂದ ಮಾಡಿಕೊಂಡಿವೆ. ಈಗಾಗಲೇ 40,000 ಮೆಟ್ರಿಕ್ ಟನ್ ಬೃಹತ್ ಎಲ್‌ಪಿಜಿಯನ್ನು ಹೊತ್ತ ಶಿವಾಲಿಕ್ ಎಂಬ ಹಡಗು ಹಾರ್ಮುಜ್ ಜಲಸಂಧಿಯನ್ನು ದಾಟಿ ಬಂದಿದೆ. ಮತ್ತೊಂದು ಹಡಗು ಕೂಡ ಈ ಜಲಸಂಧಿಯನ್ನು ದಾಟಿ ಮುಂದಿನ ವಾರದೊಳಗೆ ಭಾರತದಲ್ಲಿ ಡಾಕ್ ಮಾಡಲಿದೆ ಎಂದು ವರದಿಗಳು ತಿಳಿಸಿವೆ.
ಇರಾನ್ ಮತ್ತು ಭಾರತದ ನಡುವೆ ನಡೆದ ಹಲವಾರು ಸುತ್ತಿನ ಮಾತುಕತೆಗಳ ನಂತರ ಇರಾನ್ ಭಾರತೀಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ದಾಟಲು ಅವಕಾಶ ನೀಡಿತ್ತು. ಇದರ ಬೆನ್ನಲ್ಲೇ ಈ ದೊಡ್ಡ ಬೆಳವಣಿಗೆ ಸಂಭವಿಸಿದೆ. ಶಿವಾಲಿಕ್ ಹಡಗು ಇರಾನ್‌ನ ಬಂದರ್ ಅಬ್ಬಾಸ್ ಬಂದರಿನಿಂದ ಹೊರಟು ಕೆಲವು ಗಂಟೆಗಳ ಹಿಂದೆ ಹಾರ್ಮುಜ್ ಜಲಸಂಧಿಯನ್ನು ದಾಟಿದೆ.
Iran has allowed two Indian-flagged liquefied petroleum gas (LPG) carriers to sail through the Strait of Hormuz, four sources with direct knowledge of the matter said: Reuters pic.twitter.com/8wAvHOK05b
ಇಂದು ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಅವರು ಭಾರತಕ್ಕೆ ಸುರಕ್ಷಿತ ಮಾರ್ಗದ ಬಗ್ಗೆ ಪಾಸಿಟಿವ್ ಹೇಳಿಕೆಗಳನ್ನು ನೀಡಿದ್ದರು. “ಭಾರತ ನಮ್ಮ ಸ್ನೇಹಿತನಾಗಿರುವುದರಿಂದ ನೀವು ಎರಡು ಅಥವಾ ಮೂರು ಗಂಟೆಗಳಲ್ಲಿ ಅದರ ಪರಿಣಾಮವನ್ನು ನೋಡುತ್ತೀರಿ. ಇರಾನ್ ಮತ್ತು ಭಾರತ ಈ ಪ್ರದೇಶದಲ್ಲಿ ಸಾಮಾನ್ಯ ಹಿತಾಸಕ್ತಿಗಳನ್ನು ಹಂಚಿಕೊಳ್ಳುತ್ತವೆ” ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಭಾರತದ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ಹಾದುಹೋಗಲು ಅನುಮತಿ ಸಿಕ್ಕಿದೆ. ಇಂದು ಮಧ್ಯಾಹ್ನ ಯಾವುದೇ ತೊಂದರೆಯಿಲ್ಲದೆ ಭಾರತೀಯ ಹಡಗು ಜಲಸಂಧಿಯನ್ನು ದಾಟಿದೆ.
BIG. Confirmation from Iran’s ambassador to India. Question: Will India get safe passage through Strait of Hormuz? Answer: Yes, you will see in 2-3 hours. India-Iran are friends, have common interests. Govt of India helped us after war in different fields pic.twitter.com/0BKQQ3XDfy
ಎರಡು ವಾರಗಳ ಹಿಂದೆ ಅಮೆರಿಕ-ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ, ಇರಾನ್ ಜಲಸಂಧಿಯನ್ನು ದಿಗ್ಬಂಧನಗೊಳಿಸುವುದಾಗಿ ಘೋಷಿಸಿತ್ತು. ಹೀಗಾಗಿ, ಭಾರತದ ದೊಡ್ಡ ಟ್ಯಾಂಕರ್‌ಗಳು ಅಲ್ಲೇ ಸಿಕ್ಕಿಹಾಕಿಕೊಂಡಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೊಪ್ಪಳ (ಮಾರ್ಚ್ 13): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇದ್ದ ದುಬಾರಿ ಹ್ಯೂಬ್ಲೋಟ್ ವಾಚ್ ಪ್ರಕರಣ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಹ್ಯೂಬ್ಲೋಟ್ ವಾಚ್ ಅಂದ್ರೆ ಸಾಕು ಥಂಟ್ ಅಂತ ಸಿಎಂ ಸಿದ್ದರಾಮಯ್ಯನವರರು ನೆನಪಾಗುತ್ತಾರೆ. ಅಷ್ಟರ ಮಟ್ಟಿಗೆ ಸಿದ್ದರಾಮಯ್ಯನವರ ಹ್ಯೂಬ್ಲೋಟ್ ವಾಚ್ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿತ್ತು. ಅಲ್ಲದೇ ಅವರನ್ನು ಮುಜುಗರಕ್ಕೀಡು ಮಾಡಿತ್ತು. ಇದೀಗ ಸಿದ್ದರಾಮಯ್ಯನವರ ಆಪ್ತ ಶಾಸಕ ರಾಘವೇಂದ್ರ ಹಿಟ್ನಾಳ್ ಬಳಿಯೂ ಸಹ ದುಬಾರಿ ಮೌಲ್ಯದ ಹ್ಯೂಬ್ಲೋಟ್ ವಾಚ್ ಇರುವುದು ಬೆಳಕಿಗೆ ಬಂದಿದೆ. ಹೌದು..ಸುಮಾರು ಕೊಪ್ಪಳ ಕಾಂಗ್ರೆಸ್ ಶಾಸಕ ಶಾಸಕ ರಾಘವೇಂದ್ರ ಹಿಟ್ನಾಳ್ 18 ಲಕ್ಷ ರೂಪಾಯಿ ಮೌಲ್ಯದ ಹ್ಯೂಬ್ಲೋಟ್ ವಾಚ್ ಧರಿಸಿರುವುದು ಕಂಡುಬಂದಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ರಾಮನಗರ, ಮಾರ್ಚ್ 13: ಪೊಲೀಸ್ ಕಸ್ಟಡಿಯಲ್ಲಿದ್ದ ಕುಖ್ಯಾತ ಕಳ್ಳಿ (Thief)ಜಿಲ್ಲಾಸ್ಪತ್ರೆಯ ಸಖಿ ಕೇಂದ್ರದಿಂದ ಪರಾರಿ ಆಗಿರುವಂತಹ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿರುವ ಜಿಲ್ಲಾಸ್ಪತ್ರೆಯ ಸಖಿ ಕೇಂದ್ರದಲ್ಲಿ ನಡೆದಿದೆ. ಆಂಧ್ರಪ್ರದೇಶದ ಕುಪ್ಪಂ ಮೂಲದ ಮಾಲಾ ಪರಾರಿಯಾದ ಕಳ್ಳಿ. ಮಾಲಾ ಪರಾರಿ ಸಂಬಂಧ ರಾಮನಗರ ಟೌನ್ ಠಾಣೆಯಲ್ಲಿ ಕೇಸ್ ದಾಲಾಗಿದ್ದು, ಕುಖ್ಯಾತ ಕಳ್ಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಹದಿನಾರು ವರ್ಷದಿಂದ ಪೊಲೀಸರ ಕೈಗೆ ಸಿಗದ ಕಳ್ಳಿ
ಮೂಲತಃ ಆಂಧ್ರಪ್ರದೇಶದ ಕುಪ್ಪಂ ಮೂಲದ ಮಾಲಾ ಹಲವು ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡು ತಿರುಗಾಡುತ್ತಿದ್ದಳು. ಕಳೆದ ಹದಿನಾರು ವರ್ಷಗಳಿಂದ ವಿವಿಧ ಕಡೆಗಳಲ್ಲಿ ಕಳ್ಳತನ ಎಸಗಿ ಪೊಲೀಸರ ಕೈಗೆ ಸಿಕ್ಕಿರಲಿಲ್ಲ.
350 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಮಾಲಾ
ಇತ್ತೀಚೆಗೆ ಮಾಗಡಿ ಪಟ್ಟಣದಲ್ಲಿ ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಸುಮಾರು 350 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಸಂಬಂಧ ಮಾಗಡಿ ಠಾಣೆ ಪೊಲೀಸರು ಮಾಲಾಳನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ನಂತರ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು.
ಬಳಿಕ ಆರೋಪಿಯನ್ನು ರಾಮನಗರದ ಜಿಲ್ಲಾಸ್ಪತ್ರೆಯಲ್ಲಿರುವ ಸಖಿ ಕೇಂದ್ರದಲ್ಲಿ ತಡರಾತ್ರಿ ಇರಿಸಲಾಗಿತ್ತು. ಆದರೆ ಇದೇ ವೇಳೆ ಪೊಲೀಸರ ಗಮನವನ್ನು ಬೇರೆಡೆ ಸೆಳೆದು, ಅವರಿಗೆ ಚೆಳ್ಳೆಹಣ್ಣು ತಿನ್ನಿಸಿ ಮಾಲಾ ಅಲ್ಲಿಂದ ಪರಾರಿಯಾಗಿದ್ದಾಳೆ. ಇನ್ನು ಆರೋಪಿ ಮಾಲಾಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
97 ಲಕ್ಷಕ್ಕೂ ಅಧಿಕ ಮೌಲ್ಯದ ಡೈಮಾಂಡ್ ಮಿಶ್ರಿತ ಚಿನ್ನ ಕಳವು
ಕೊಪ್ಪಳ ನಗರದಲ್ಲಿ ಭಾರೀ ಮೌಲ್ಯದ ಚಿನ್ನ ಕಳುವಾಗಿರುವ ಪ್ರಕರಣ ಸಂಬಂಧ ಕೊನೆಗೂ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರಿನ ಮೂಲದ ಮೊಹಮ್ಮದ್ ಅಸ್ಗರ್ ಎಂಬುವವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಸುಮಾರು 97,17,700 ರೂ. ಮೌಲ್ಯದ ವಜ್ರ ಮಿಶ್ರಿತ ಚಿನ್ನಾಭರಣ ಜೊತೆಗೆ 26,000 ರೂ. ನಗದು ಮತ್ತು ಲ್ಯಾಪ್‌ಟಾಟ್ ಕಳ್ಳತನವಾಗಿದೆ.
ಮೊಹಮ್ಮದ್ ಅಸ್ಗರ್ ಯುನಿಷೆಫ್ ಡೈಮಂಡ್ ಲಿ. ಕಂಪನಿಯ ಫೀಲ್ಡ್ ಆಪರೇಷನ್ ಮ್ಯಾನೇಜರ್ ಆಗಿದ್ದು, ಈ ಚಿನ್ನಾಭರಣ ಮಂಗಳೂರಿನ ಮೊಹಮ್ಮದ್ ಇರ್ಷಾದ್ ಅವರಿಗೆ ಸೇರಿದೆ. ಘಟನೆ ನಿನ್ನೆ ರಾತ್ರಿ ಕೊಪ್ಪಳ ನಗರದ ತವಾ ಪಂಜಾಬ್ ಹೋಟೆಲ್ ಬಳಿ ನಡೆದಿದೆ. ಸಿಂಧನೂರಿನಿಂದ ಮಂಗಳೂರಿಗೆ ಖಾಸಗಿ ಸ್ಲೀಪರ್ ಕೋಚ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೊಹಮ್ಮದ್ ಅಸ್ಗರ್, ಊಟಕ್ಕಾಗಿ ಬಸ್ ನಿಲ್ಲಿಸಿದ್ದ ವೇಳೆ ಬಸ್‌ನಲ್ಲಿದ್ದ ಚಿನ್ನದ ಬ್ಯಾಗ್‌ನ್ನು ಯಾರೋ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಬಾಂಗ್ಲಾದೇಶ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಹೊರಹಾಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಅವರ ಬದಲಿಯಾಗಿ ಕಳೆದ ಆವೃತ್ತಿಯಲ್ಲಿ ಆರ್ಸಿಬಿ ತಂಡದ ಭಾಗವಾಗಿದ್ದ ಜಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಜರಬಾನಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಟಿ20 ವಿಶ್ವಕಪ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಬ್ಲೆಸಿಂಗ್ ಮುಜರಬಾನಿಗೆ ಕೆಕೆಆರ್ ಪ್ಲೇಯಿಂಗ್ 11ನಲ್ಲೂ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಿವೆ.
ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಕೆಕೆಆರ್, ಬಾಂಗ್ಲಾದೇಶ ವೇಗಿ ಮುಸ್ತಾಫಿಜುರ್ ರೆಹಮಾನ್ ಬದಲಿಗೆ ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸಿಂಗ್ ಮುಜರಬಾನಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮುಜರಬಾನಿ ಮಾರ್ಚ್ 17 ರಂದು ತಂಡವನ್ನು ಸೇರಿಕೊಳ್ಳಲಿದ್ದು, ಮಾರ್ಚ್ 28 ರಿಂದ ಪ್ರಾರಂಭವಾಗಲಿರುವ ಐಪಿಎಲ್ನಲ್ಲಿ ಕೆಕೆಆರ್ ಪರ ಆಡಲಿದ್ದಾರೆ ಎಂದಿದೆ.
ವಾಸ್ತವವಾಗಿ ಐಪಿಎಲ್ಗೆ ಸೇರುವ ಮೊದಲು, ಬ್ಲೆಸಿಂಗ್ ಮುಜರಬಾನಿ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡದ ಭಾಗವಾಗಿದ್ದರು. ಆದಾಗ್ಯೂ, ಬ್ಲೆಸಿಂಗ್ ಮುಜರಬಾನಿ ಐಪಿಎಲ್ನಲ್ಲಿ ಕೆಕೆಆರ್ ಪರ ಆಡುವ ಸಲುವಾಗಿ ಪಿಎಸ್ಎಲ್ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ಬ್ಲೆಸಿಂಗ್ ಮುಜರಬಾನಿ ಕಳೆದ ತಿಂಗಳು ನಡೆದಿದ್ದ ಪಿಎಸ್ಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದರು. ಆದರೆ ವೆಸ್ಟ್ ಇಂಡೀಸ್ನ ಶಮರ್ ಜೋಸೆಫ್ಗೆ ಬದಲಿ ಆಟಗಾರನಾಗಿ ಇಸ್ಲಾಮಾಬಾದ್ ಯುನೈಟೆಡ್ ಫ್ರಾಂಚೈಸಿ ಬ್ಲೆಸಿಂಗ್ ಮುಜರಬಾನಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು.
ಮೇಲೆ ಹೇಳಿದಂತೆ ಐಪಿಎಲ್ನಲ್ಲಿ ಬ್ಲೆಸ್ಸಿಂಗ್ ಮುಜರಬಾನಿ ಕಾಣಿಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು, ಅವರು 2025 ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಭಾಗವಾಗಿದ್ದರು. ಆರ್ಸಿಬಿ ತಾತ್ಕಾಲಿಕವಾಗಿ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ಅವರಿಗೆ ಪ್ಲೇಯಿಂಗ್ 11 ನಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ.
ಜನವರಿ 23ರಂದು ‘ಲ್ಯಾಂಡ್ಲಾರ್ಡ್’ ಸಿನಿಮಾ (Landlord Kannada Movie) ಬಿಡುಗಡೆ ಆಗಿತ್ತು. ದುನಿಯಾ ವಿಜಯ್, ರಚಿತಾ ರಾಮ್, ಶಿಶಿರ್ ಬೈಕಾಡಿ, ರಿತನ್ಯ ವಿಜಯ್, ಉಮಾಶ್ರೀ, ರಾಜ್ ಬಿ. ಶೆಟ್ಟಿ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿರುವ ಈ ಸಿನಿಮಾಗೆ ಚಿತ್ರಮಂದಿರಗಳಲ್ಲಿ ಜನರ ಮೆಚ್ಚುಗೆ ಸಿಕ್ಕಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಈಗ ‘ಲ್ಯಾಂಡ್ಲಾರ್ಡ್’ ಚಿತ್ರ ಒಟಿಟಿಗೆ ಬರುತ್ತಿದೆ. ಯುಗಾದಿ ಹಬ್ಬದ ಸಂದರ್ಭದಲ್ಲಿ ಜೀ5 ಒಟಿಟಿ (Zee5 OTT) ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.
ಮಾರ್ಚ್ 19ಕ್ಕೆ ಜೀ5ನಲ್ಲಿ ‘ಲ್ಯಾಂಡ್ಲಾರ್ಡ್’ ಸಿನಿಮಾ ಪ್ರಸಾರ ಆರಂಭ ಆಗಲಿದೆ. ಜಡೇಶ್ ಕೆ. ಹಂಪಿ ನಿರ್ದೇಶನದ ಈ ಸಿನಮಾ 1980ರಲ್ಲಿ ಗ್ರಾಮೀಣ ಕರ್ನಾಟಕದಲ್ಲಿ ನಡೆಯುವ ಕಥೆಯನ್ನು ಹೇಳುತ್ತದೆ. ‘ಸಾರಥಿ ಫಿಲ್ಮ್ಸ್’ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಸಂಪತ್ ಮೈತ್ರೇಯ, ಭಾವನಾ ರಾವ್ ಕೂಡ ಈ ಚಿತ್ರದಲ್ಲಿ ಗಮನಾರ್ಹ ಪಾತ್ರಗಳನ್ನು ಮಾಡಿದ್ದಾರೆ.
‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿ ದುನಿಯಾ ವಿಜಯ್ ಅವರು ಕೊಡಲಿ ರಾಚಯ್ಯ ಎಂಬ ಪಾತ್ರ ಮಾಡಿದ್ದಾರೆ. ಆ ಪಾತ್ರದ ಕುರಿತು ಮಾತನಾಡಿದ ಅವರು, ‘ನಾನು ರಾಚಯ್ಯ ಎಂಬ ಪಾತ್ರವನ್ನು ವಹಿಸಿದ್ದೇನೆ. ರಾಚಯ್ಯನು ಒಬ್ಬ ಅಂತರ್ಮುಖಿ. ಹೆಚ್ಚು ಮಾತನಾಡದೇ ಒಳಗಿನ ಭಾವನೆಗಳನ್ನು ವ್ಯಕ್ತಪಡಿಸುವ ಈ ಪಾತ್ರ ನನಗೆ ಒಂದು ಸವಾಲಾಗಿತ್ತು. ಇದೀಗ ಜೀ5ನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿರುವುದು ನನಗೆ ಸಂತಸ ತಂದಿದೆ. ಪ್ರೇಕ್ಷಕರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ’ ಎಂದಿದ್ದಾರೆ.
ಸಿನಿಮಾದ ಬಗ್ಗೆ ಮತ್ತು ತಮ್ಮ ಪಾತ್ರದ ಕುರಿತು ಮಾತನಾಡಿದ ನಟಿ ರಚಿತಾ ರಾಮ್, ‘ಚಿತ್ರವು ಸರಳವಾಗಿದ್ದರೂ, ಕಥೆಯಲ್ಲಿರುವ ಭಾವನೆಗಳ ಆಳ ದೊಡ್ಡದಾಗಿದೆ. ಅಗಾಧವಾದ ಭಾವನೆಗಳನ್ನು ವ್ಯಕ್ತಪಡಿಸುವ ಕಥೆಯೇ ಲ್ಯಾಂಡ್ಲಾರ್ಡ್. ಇದರಲ್ಲಿ ನನ್ನದು ಬಹಳ ವಿಶೇಷವಾದ ಪಾತ್ರ’ ಎಂದಿದ್ದಾರೆ. ಉಮಾಶ್ರೀ ಅವರ ಪಾತ್ರ ಕೂಡ ಗಮನ ಸೆಳೆಯುಂತಿದೆ.
‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿನ ಎಲ್ಲ ಕಲಾವಿದರ ನಟನೆಗೆ ಚಿತ್ರಮಂದಿರದಲ್ಲಿ ಜನರು ಭೇಷ್ ಎಂದಿದ್ದರು. ವಿಲನ್ ಪಾತ್ರದಲ್ಲಿ ಅಬ್ಬರಿಸಿದ ರಾಜ್ ಬಿ. ಶೆಟ್ಟಿ ಅವರು ಚಪ್ಪಾಳೆ ಗಿಟ್ಟಿಸಿದರು. ಈಗ ಒಟಿಟಿಯಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯುವ ಸಮಯ ಸಮೀಪಿಸಿದೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ.
ಬೆಂಗಳೂರು, (ಮಾರ್ಚ್ 13): ಮಹಿಳೆಯರಿಗೆ (Women) ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ (shakthi yojana)ಜಾರಿ ಬಂದಾಗಿನಿಂದ ಬಸ್ (Bus) ಓಡಾಟ ಕಡಿಮೆಯಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಹೊಸ ಬಸ್ಸುಗಳು ರಸ್ತೆಗಿಳಿದಿವೆ. ಹೌದು.. ಕೆಎಸ್‌ಆರ್‌ಟಿಸಿ 45 ಸಾಮಾನ್ಯ ಹಾಗೂ 70 ಪಲ್ಲಕ್ಕಿ ಸ್ಲೀಪರ್ ಬಸ್‌ಗಳು ಸೇರಿದಂತೆ ಒಟ್ಟು 115 ನೂತನ ಬಸ್‌ಗಳಿಗೆ ಇಂದು (ಮಾರ್ಚ್ 13) ಸಚಿವ ರಾಮಲಿಂಗರೆಡ್ಡಿ ಹಸಿರು ನಿಶಾನೆ ತೋರಿಸಿದ್ದು, ಈ ಹೊಸ ಬಸ್‌ಗಳು ಬೆಂಗಳೂರಿನಿಂದ ರಾಜ್ಯದ ಹಲವು ಪ್ರಮುಖ ಮಾರ್ಗಗಳಿಗೆ ಸಂಚಾರ ನಡೆಸಲಿವೆ.
ಒಟ್ಟು 115 ಬಸ್‌ಗಳು ಪೈಕಿ 70 ಬಸ್‌ಗಳು ಪ್ರೀಮಿಯಂ ಪಲ್ಲಕ್ಕಿ ಬಸ್‌ಗಳು ಹಾಗೂ 45 ಬಸ್‌ಗಳು ನಾರ್ಮಲ್ ಬಸ್ಗಳಾಗಿದ್ವು.ಈ ಪಲ್ಲಕ್ಕಿ ಬಸ್ಗಳ ವಿಶೇಷತೆ ಏನಂದ್ರೆ, ಈ ಬಸ್‌ಗಳಲ್ಲಿ ಹೈಟೆಕ್ ಸೀಟಿನ ವ್ಯವಸ್ಥೆ ಸೇರಿದಂತೆ ಅನೇಕ ಅನುಕೂಲಗಳಿವೆ. ಪಲ್ಲಕ್ಕಿ ಬಸ್‌ಗಳಲ್ಲಿ ಹೆಣ್ಣು ಮಕ್ಕಳೂ ಸಹ ಹಣ ಕೊಟ್ಟು ಪ್ರಯಾಣ ಮಾಡಬೇಕು. ಇನ್ನು 45 ನಾರ್ಮಲ್ ಬಸ್‌ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಸಂಚಾರ ಮಾಡಬಹುದು.
ಈ ಹಂತದಲ್ಲಿ ಒಟ್ಟು 115 ಬಸ್‌ಗಳನ್ನು ಸೇವೆಗೆ ಸೇರಿಸಲಾಗಿದೆ, ಅದರಲ್ಲಿ 45 ಸಾಮಾನ್ಯ ಬಸ್‌ಗಳು ಮತ್ತು 70 ಪಲ್ಲಕ್ಕಿ (ಸ್ಲೀಪರ್) ಬಸ್‌ಗಳು ಸೇರಿವೆ. ವಿಶೇಷವಾಗಿ ದೀರ್ಘ ದೂರ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆಧುನಿಕ ಸೌಲಭ್ಯಗಳೊಂದಿಗೆ ಈ ಪಲ್ಲಕ್ಕಿ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
ಈ ನೂತನ ಸ್ಲೀಪರ್ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ವಿನ್ಯಾಸ ಮಾಡಲಾಗಿದೆ. ಇವುಗಳಲ್ಲಿ ಒಟ್ಟು ಐದು ಬಾಗಿಲುಗಳನ್ನು (ಡೋರ್‌ಗಳು) ಅಳವಡಿಸಲಾಗಿದೆ. ಇದಕ್ಕೂ ಮೊದಲು ಸಾಮಾನ್ಯವಾಗಿ ಎರಡು ಬಾಗಿಲುಗಳು ಮತ್ತು ಒಂದು ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ಮಾತ್ರ ಇದ್ದವು. ಆದರೆ ಹೊಸ ಮಾದರಿಯ ಸ್ಲೀಪರ್ ಬಸ್‌ಗಳಲ್ಲಿ ಬಸ್‌ನ ಮೇಲ್ಭಾಗದಲ್ಲಿಯೂ ಎರಡು ಹೆಚ್ಚುವರಿ ಬಾಗಿಲುಗಳನ್ನು ಅಳವಡಿಸಲಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ಹೊರಬರಲು ಈ ವ್ಯವಸ್ಥೆ ಸಹಾಯಕವಾಗಲಿದೆ.
ಹೊಸ ಬಸ್‌ಗಳು ಎಲ್ಲಿಂದ ಎಲ್ಲಿಗೆ ಸಂಚಾರ?
ಹೊಸ ಪಲ್ಲಕ್ಕಿ ಸ್ಲೀಪರ್ ಬಸ್‌ಗಳನ್ನು ರಾಜ್ಯದ ಹಾಗೂ ಹೊರರಾಜ್ಯಗಳ ಪ್ರಮುಖ ಧಾರ್ಮಿಕ ಮತ್ತು ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಸಂಚಾರಕ್ಕೆ ಬಿಡಲಾಗಿದೆ. ಪಲ್ಲಕ್ಕಿ ನಾನ್ ಎಸಿ ಬಸ್‌ಗಳು ಉಡುಪಿ, ಮಂಗಳೂರು, ಮೈಸೂರು, ಧರ್ಮಸ್ಥಳ, ಶೃಂಗೇರಿ, ಹೊರನಾಡು, ಆಗುಂಬೆ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಂಪಿ, ರಾಯಚೂರು, ಜಮಖಂಡಿ, ಪುತ್ತೂರು, ಕಾಣಿಯೂರು, ಕುಕ್ಕೆ ಸುಬ್ರಹ್ಮಣ್ಯ, ಕಾಸರಗೋಡು, ಮಂತ್ರಾಲಯ, ತಿರುಚಿ, ಕೊಜಿಕ್ಕೋಡ್, ಮುನ್ನಾರ್, ಪಾಂಡಿಚೇರಿ, ತಂಜಾವೂರು, ಕೊಟ್ಟಾಯಂ, ಹೈದಾರಬಾದ್, ಚೆನ್ನೈ, ಪಣಜಿ, ಮಧುರೈ, ಕುಂಭಕೋಣಂ, ಎರ್ನಾಕುಲಂಗೆ ಸಂಚರಿಸುತ್ತವೆ.
ನವದೆಹಲಿ, ಮಾರ್ಚ್ 13: ನಾಳೆಯಿಂದ ಇಂಡಿಗೋ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನದ ಟಿಕೆಟ್‌ಗಳ ಮೇಲೆ ಇಂಧನ ಸರ್‌ಚಾರ್ಜ್ ಅನ್ನು ಪರಿಚಯಿಸಲಿದೆ. ವಾಯುಯಾನ ಟರ್ಬೈನ್ ಇಂಧನ ಬೆಲೆಗಳಲ್ಲಿ ತೀವ್ರ ಏರಿಕೆಯೇ ಈ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ವಿಮಾನಯಾನ ಸಂಸ್ಥೆ ಇಂಡಿಗೋ (IndiGo) ತಿಳಿಸಿದೆ. ಪ್ರಯಾಣದ ಮಾರ್ಗ ಮತ್ತು ದೂರವನ್ನು ಅವಲಂಬಿಸಿ ಪ್ರತಿ ಪ್ರಯಾಣಿಕರಿಗೆ 425 ರೂ.ನಿಂದ 2,300 ರೂ.ವರೆಗೆ ಸರ್‌ಚಾರ್ಜ್ ವಿಧಿಸಲಾಗುತ್ತದೆ. ಜಾರಿಗೆ ಬರುವ ದಿನಾಂಕದಿಂದ ದೇಶೀಯ ಮತ್ತು ಅಂತಾರಾಷ್ಟ್ರೀಯ ಬುಕಿಂಗ್‌ಗಳಿಗೆ ಹೆಚ್ಚುವರಿ ಶುಲ್ಕ ಅನ್ವಯಿಸುತ್ತದೆ.
ನಾಳೆಯಿಂದ (ಮಾರ್ಚ್ 14) ಜಾರಿಗೆ ಬರುವಂತೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಇಂಡಿಗೋ ಇಂಧನ ಶುಲ್ಕವನ್ನು ಹೇರಲಿದೆ. ಇಂಡಿಗೋ ವಿಮಾನಗಳಲ್ಲಿನ ಎಲ್ಲಾ ಹೊಸ ಬುಕಿಂಗ್‌ಗಳಿಗೆ ಒಟ್ಟಾರೆ ಬೆಲೆಗಳು ಈ ಕೆಳಗಿನ ಹೆಚ್ಚುವರಿ ಇಂಧನ ಶುಲ್ಕವನ್ನು ಒಳಗೊಂಡಿರುತ್ತವೆ. ಭಾರತದೊಳಗೆ 425 ರೂ., ಮಧ್ಯಪ್ರಾಚ್ಯಕ್ಕೆ 900 ರೂ., ಆಗ್ನೇಯ ಏಷ್ಯಾ ಮತ್ತು ಚೀನಾಗೆ 1800 ರೂ., ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ 1800 ರೂ. ಮತ್ತು ಯುರೋಪ್ಗೆ 2,300 ರೂ. ಟಿಕೆಟ್ ದರ ಹೆಚ್ಚಳವಾಗಲಿದೆ.
“ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಮಸ್ಯೆಗಳ ನಂತರ ಇಂಧನ ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ. ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ USD 100ರಷ್ಟು ಹೆಚ್ಚಾಗಿದೆ. ಏರ್ ಇಂಡಿಯಾ ನಂತರ ಇಂಧನ ಶುಲ್ಕವನ್ನು ಘೋಷಿಸಿದ ಎರಡನೇ ಭಾರತೀಯ ವಿಮಾನಯಾನ ಸಂಸ್ಥೆ ಇಂಡಿಗೋ ಆಗಿದೆ.
IndiGo introduces fuel charge on domestic and international routes, effective 14th March, 2026
Starting 14th March 2026, overall prices for all new bookings on IndiGo flights will include the following additional Fuel Charge, per sector- Within Domestic India Rs 425, Indian… pic.twitter.com/llXXdrtsYS
ಬೆಂಗಳೂರು, ಮಾರ್ಚ್ 13: ಸುಮಾರು 350 ಮಕ್ಕಳು ವ್ಯಾಸಂಗ ಮಾಡುತ್ತಿರುವ ಈಸ್ಟ್ ವೆಸ್ಟ್ ಅಕಾಡೆಮಿ ಶಾಲೆಯನ್ನ (East West Academy school) ಮುಚ್ಚುವುದಕ್ಕೆ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ತೀವ್ರ ಆರ್ಥಿಕ ಸಂಕಷ್ಟವೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಹೀಗಾಗಿ ಮಕ್ಕಳ ಭವಿಷ್ಯವೇ ಅತಂತ್ರವಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೋಷಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯ ಅತಂತ್ರ: ಪೋಷಕರು ಆಕ್ರೋಶ
ರಾಜಾಜಿನಗರ ಮಾರುತಿ ಎಕ್ಸ್ಟೆನ್ಷನ್ನಲ್ಲಿರುವ 58 ವರ್ಷಗಳ ಇತಿಹಾಸವಿರುವ ಈಸ್ಟ್ ವೆಸ್ಟ್ ಅಕಾಡೆಮಿ ಶಾಲೆಗೆ ಇಂದು ಪೋಷಕರು ದೌಡಾಯಿಸಿದ್ದರು. ಏಕೆಂದರೆ ಶಾಲೆಯನ್ನೇ ಬಂದ್ ಮಾಡುವುದಕ್ಕೆ ಆಡಳಿತ ಮಂಡಳಿ ನಿರ್ಧಾರ ಮಾಡಿರುವುದೇ ಇದಕ್ಕೆ ಕಾರಣ. ಹೀಗಾಗಿ ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ಓದುತ್ತಿರುವ 350ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿರುವ ಹಿನ್ನೆಲೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಶಾಲೆಯು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ನಿರ್ವಹಣೆ ಕಷ್ಟವಾಗಿದೆ ಎಂದು ಹೇಳುತ್ತಿರುವ ಆಡಳಿತ ಮಂಡಳಿ, ಸಿಬ್ಬಂದಿಗೆ ಸಂಬಳ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಈ ಶೈಕ್ಷಣಿಕ ವರ್ಷಗಳ ಪರೀಕ್ಷೆಗಳು ಮುಗಿದ ಬಳಿಕ ಮಕ್ಕಳನ್ನ ಬೇರೆ ಶಾಲೆಗೆ ದಾಖಲು ಮಾಡಿ ಅಂತಾ ಪೋಷಕರಿಗೆ ಸೂಚನೆ ನೀಡಿದ್ದಾರೆ. ಆದರೆ ಪೋಷಕರು ಇದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಫೀಸ್ ಸ್ವಲ್ಪ ಹೆಚ್ಚಿಗೆ ಮಾಡಿ, ಇನ್ನೊಂದು ವರ್ಷ ಶಾಲೆ ನಡೆಸಿ ಅಂತಾ ಪಟ್ಟು ಹಿಡಿದಿದ್ದಾರೆ.
ಇನ್ನು ಈ ಬಗ್ಗೆ ಸ್ಥಳೀಯ ಶಿಕ್ಷಣಾಧಿಕಾರಿ ಕೂಡ ಗಮನ ವಹಿಸದೇ ನಿರ್ಲಕ್ಷ್ಯ ತೋರಿದ್ದಾರಂತೆ. ಮ್ಯಾನೇಜ್ಮೆಂಟ್ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪೋಷಕರು ಕಿಡಿಕಾರಿದ್ದು, ಶಿಕ್ಷಣ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ.
ಭಾರತೀಯ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಬಿಡುಗಡೆಗೆ ಕೆಲವೇ ದಿನ ಬಾಕಿ ಇದೆ. ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಈ ಸಿನಿಮಾದ ಟ್ರೇಲರ್ ಈಗಾಗಲೇ ಧೂಳೆಬ್ಬಿಸಿದೆ. ಸದ್ಯಕ್ಕೆ ಪೇಯ್ಡ್ ಪ್ರೀಮಿಯರ್ ಶೋ ಬುಕಿಂಗ್ ಮಾತ್ರ ಶುರುವಾಗಿದೆ. ಅದಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಬಂದಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ‘ಧುರಂಧರ್ 2’ (Dhurandhar 2) ಸಿನಿಮಾದ ಟಿಕೆಟ್ ಬುಕಿಂಗ್ ಆರಂಭಿಸಲು ವಿಳಂಬ ಆಗಿದೆ. ಅದಕ್ಕೆ ಒಂದಷ್ಟು ಕಾರಣಗಳಿವೆ.
ಮಾರ್ಚ್ 18ರಂದು ಸಂಜೆ 5 ಗಂಟೆಯಿಂದ ಚಿತ್ರದ ಪೇಯ್ಡ್ ಪ್ರಿವ್ಯೂಗಳು ಆರಂಭವಾಗಲಿವೆ. ಈ ಪ್ರದರ್ಶನಗಳ ಟಿಕೆಟ್ ದರ ಗಗನಕ್ಕೇರಿದ್ದರೂ ಕೂಡ ದೆಹಲಿ, ಮುಂಬೈ ಬೆಂಗಳೂರು ಮುಂತಾದ ನಗರಗಳಲ್ಲಿ ಟಿಕೆಟ್‌ಗಳು ಬಿಸಿ ಬಿಸಿ ಕಜ್ಜಾಯದಂತೆ ಮಾರಾಟವಾಗುತ್ತಿವೆ. ಆದರೆ, ವಾರಾಂತ್ಯದ ಸಾಮಾನ್ಯ ಪ್ರದರ್ಶನಗಳ ಬುಕಿಂಗ್ ಇನ್ನೂ ಓಪನ್ ಆಗಿಲ್ಲ.
ಸಿನಿಮಾ ನಿರ್ಮಾಣ ಸಂಸ್ಥೆ ‘ಜಿಯೋ ಸ್ಟುಡಿಯೋಸ್’ ಚಿತ್ರಮಂದಿರಗಳ ಮಾಲೀಕರಿಂದ ಒಂದು ಕಠಿಣ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಮೊದಲ 4 ವಾರಗಳ ಕಾಲ ಕೇವಲ ‘ಧುರಂಧರ್ 2’ ಚಿತ್ರವನ್ನೇ ಪ್ರದರ್ಶಿಸಬೇಕು ಮತ್ತು ಬೇರೆ ಯಾವುದೇ ಸಿನಿಮಾಗೆ ಶೋಗಳನ್ನು ಹಂಚಬಾರದು ಎಂಬುದು ಇವರ ಶರತ್ತು. ಆದರೆ, ಈ ಚಿತ್ರ ಬಿಡುಗಡೆಯಾದ 4ನೇ ವಾರದಲ್ಲಿ ಅಕ್ಷಯ್ ಕುಮಾರ್ ಅವರ ‘ಭೂತ್ ಬಂಗ್ಲ’ ಸಿನಿಮಾ ತೆರೆಗೆ ಬರಲಿದೆ. ಹೀಗಾಗಿ, ಚಿತ್ರಮಂದಿರಗಳ ಮಾಲೀಕರು ಅಕ್ಷಯ್ ಚಿತ್ರಕ್ಕೆ ಶೋ ನೀಡಲು ಬಯಸುತ್ತಿದ್ದು, ಈ ಕುರಿತು ತಿಕ್ಕಾಟ ನಡೆಯುತ್ತಿದೆ.
ವಿತರಕರ ಜೊತೆ ಲಾಭದ ಹಂಚಿಕೆಯಲ್ಲಿ ಮಾತುಕಥೆ ಅಂತಿಮವಾಗಿಲ್ಲ. ‘ಧುರಂಧರ್’ ಮೊದಲ ಭಾಗವು ನಿಧಾನವಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಆಗ ವಿತರಕರಿಗೆ ಸರಿಯಾದ ಲಾಭದ ಪಾಲು ಸಿಕ್ಕಿರಲಿಲ್ಲ ಎನ್ನಲಾಗಿದೆ. ಆದ್ದರಿಂದ, ಈ ಬಾರಿ ವಿತರಕರು ಹೆಚ್ಚಿನ ಶೇಕಡವಾರು ಲಾಭದ ಪಾಲನ್ನು ಕೇಳುತ್ತಿದ್ದಾರೆ. ಈ ಮಾತುಕತೆಗಳು ಇತ್ಯರ್ಥವಾಗದ ಕಾರಣ ಪೂರ್ಣ ಪ್ರಮಾಣದ ಬುಕಿಂಗ್ ವಿಳಂಬ ಆಗಿದೆ.
ಪೂರ್ಣ ಪ್ರಮಾಣದಲ್ಲಿ ಬುಕಿಂಗ್ ಆರಂಭವಾಗದ ಕಾರಣ, ಪ್ರೇಕ್ಷಕರು ಅನಿವಾರ್ಯವಾಗಿ ಹೆಚ್ಚಿನ ಹಣ ಕೊಟ್ಟು ಪೇಯ್ಡ್ ಪ್ರಿವ್ಯೂಗಳ ಟಿಕೆಟ್ ಖರೀದಿಸುತ್ತಿದ್ದಾರೆ. ಇದು ಪ್ರಿವ್ಯೂ ಪ್ರದರ್ಶನಗಳಿಗೆ ಲಾಭ ತಂದರೂ, ಸಾಮಾನ್ಯ ಪ್ರೇಕ್ಷಕರಿಗೆ ಹೊರೆಯಾಗುತ್ತಿದೆ. ಒಟ್ಟಿನಲ್ಲಿ ‘ಧುರಂಧರ್ 2’ ಸಿನಿಮಾದಿಂದ ಬಾಕ್ಸ್ ಆಫೀಸ್ನಲ್ಲಿ ಹಣದ ಹೊಳೆ ಹರಿಯುವ ಸೂಚನೆ ಸಿಕ್ಕಿದೆ.