ಒತ್ತಡ, ಸ್ಕ್ರೀನ್‌ ಸಮಯದ ಹೆಚ್ಚಳದಿಂದ ಉಂಟಾಗುತ್ತಿದೆ ನಿದ್ರೆ ಸಮಸ್ಯೆ: ನಗರದ ಜನರಿಗೆ ವೈದ್ಯರ ಎಚ್ಚರಿಕೆ

ಒತ್ತಡ, ಸ್ಕ್ರೀನ್‌ ಸಮಯದ ಹೆಚ್ಚಳದಿಂದ ಉಂಟಾಗುತ್ತಿದೆ ನಿದ್ರೆ ಸಮಸ್ಯೆ: ನಗರದ ಜನರಿಗೆ ವೈದ್ಯರ ಎಚ್ಚರಿಕೆ

ನಿದ್ರೆ (Sleep) ದೇಹಕ್ಕೆ ಎಷ್ಟು ಮುಖ್ಯ ಎಂಬುದು ತಿಳಿದಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಹೆಚ್ಚುತ್ತಿರುವ ಒತ್ತಡ, ಅತಿಯಾದ ಸ್ಕ್ರೀನ್‌ ಬಳಕೆ ಮತ್ತು ಜೀವನಶೈಲಿಯಲ್ಲಿ ಮಾಡಿಕೊಂಡಿರುವ ಬದಲಾವಣೆಗಳಿಂದ ನಿದ್ರೆ ಹಾಳಾಗುತ್ತಿದೆ. ಅಷ್ಟೇಅಲ್ಲ, ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ದೈನಂದಿನ ಅಭ್ಯಾಸಗಳಲ್ಲಿ ಮಾಡಿಕೊಂಡ ಬದಲಾವಣೆ, ರಾತ್ರಿ ಹೊತ್ತು ಕೆಲಸ ಮಾಡುವುದು ಮತ್ತು ಡಿಜಿಟಲ್ ಅಭ್ಯಾಸಗಳಿಂದ ಎಲ್ಲಾ ವಯೋಮಾನದವರಲ್ಲಿಯೂ ನಿದ್ರೆ ಸಂಬಂಧಿತ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅದರಲ್ಲಿಯೂ ಈ ರೀತಿಯ ಸಮಸ್ಯೆ ನಗರ ನಿವಾಸಿಗಳಲ್ಲಿಯೇ ಹೆಚ್ಚಾಗಿ ಕಂಡುಬರುತ್ತಿದೆ. ಅದಕ್ಕಾಗಿಯೇ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾರ್ಚ್ 13ರಂದು ವಿಶ್ವ ನಿದ್ರೆ ದಿನವನ್ನು ಕೂಡ ಆಚರಣೆ ಮಾಡಲಾಗುತ್ತದೆ.

ರಾತ್ರಿ ವೇಳೆ ದೀರ್ಘಕಾಲ ಸ್ಕ್ರೀನ್‌ ಎದುರು ಸಮಯ ಕಳೆಯುವುದರಿಂದ ನಿದ್ರೆ ಸರಿಯಾಗಿ ಆಗುವುದಿಲ್ಲ ಎಂದು ನಾರಾಯಣ ಹೆಲ್ತ್‌ನ ಸ್ಲೀಪ್ ಮೆಡಿಸಿನ್ ವಿಭಾಗದ ಕ್ಲಿನಿಕಲ್ ಲೀಡ್ ರವಿಚಂದ್ರ ಎಂಆರ್‌ಕೆ ಹೇಳಿದ್ದಾರೆ. ಟೆಲಿವಿಷನ್‌, ಸ್ಮಾರ್ಟ್‌ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳಿಂದ ಹೊರಹೊಮ್ಮುವ ನೀಲಿ ಬೆಳಕು ನಿದ್ರೆ ನಿಯಂತ್ರಿಸುವ ಮೆಲಟೊನಿನ್ ಹಾರ್ಮೋನ್‌ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹದ ಸರ್ಕೇಡಿಯನ್ ರಿದಮ್ ಅಸ್ತವ್ಯಸ್ತವಾಗಿ, ನಿದ್ರೆ ಬರುವ ಸಮಯ ತಡವಾಗುತ್ತದೆ. ಜೊತೆಗೆ ಒಟಿಟಿ ವೇದಿಕೆಗಳಲ್ಲಿ ನಿರಂತರವಾಗಿ ಧಾರಾವಾಹಿ ಅಥವಾ ಸಿನಿಮಾಗಳನ್ನು ವೀಕ್ಷಿಸುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಸ್ಕ್ರೋಲಿಂಗ್ ಮಾಡುವುದರಿಂದ ಮೆದುಳು ವಿಶ್ರಾಂತ ಸ್ಥಿತಿಗೆ ಹೋಗುವುದಿಲ್ಲ. ಇದರಿಂದ ಸುಲಭವಾಗಿ ನಿದ್ರೆ ಬರುವುದಕ್ಕೆ ಅಡಚಣೆ ಉಂಟಾಗುತ್ತದೆ.

ಇದನ್ನೂ ಓದಿ: ರಾತ್ರಿ ಬ್ರಾ ಧರಿಸಿ ಮಲಗಿದ್ರೆ ಬ್ರೆಸ್ಟ್ ಕ್ಯಾನ್ಸರ್ ಬರುತ್ತಾ? ವೈದ್ಯರು ಏನ್ ಹೇಳ್ತಾರೆ?

ನಿದ್ರೆ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು:

ವೈದ್ಯರ ಪ್ರಕಾರ, ತಲೆನೋವು, ದೌರ್ಬಲ್ಯ ಮತ್ತು ಯಾವುದೇ ಕೆಲಸದ ಬಗ್ಗೆ ಗಮನ ಕೇಂದ್ರೀಕರಿಸಲು ಆಗದಿರುವುದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಲಕ್ಷಣಗಳು ಹೆಚ್ಚಾಗಿ ನಿದ್ರೆ ಸರಿಯಾಗಿ ಆಗದೆಯೇ ಅದರ ಕೊರತೆ ಉಂಟಾಗಿರುವುದರ ಸೂಚನೆಯಾಗಿರುತ್ತದೆ. ವಾಸವಿ ಆಸ್ಪತ್ರೆಯ ಒಳರೋಗ ವಿಭಾಗದ ಸಲಹೆಗಾರ ಡಾ. ಶ್ರೀಧರ್ ಶ್ರೀನಿವಾಸನ್ ಜಿ ಹೇಳುವ ಪ್ರಕಾರ, ಅನಿಯಮಿತ ನಿದ್ರೆ ಸಮಯ, ರಾತ್ರಿ ಹೊತ್ತು ಅತಿಯಾಗಿ ಮೊಬೈಲ್ ಬಳಕೆ ಮಾಡುವುದು ಮತ್ತು ತಡವಾಗಿ ಊಟ ಮಾಡುವ ಅಭ್ಯಾಸಗಳು ಈಗ ಎಲ್ಲಾ ವಯೋಮಾನದವರಲ್ಲಿಯೂ ಸಾಮಾನ್ಯವಾಗಿವೆ. ವಿಶೇಷವಾಗಿ ಯುವಜನರಲ್ಲಿ ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯಿಂದ ಉಂಟಾಗುವ ನಿದ್ರೆ ಕೊರತೆ ಮೈಗ್ರೇನ್ ಮತ್ತು ಹೈಪರ್‌ಟೆನ್ಶನ್‌ ಮೊದಲಾದ ಕಾಯಿಲೆಗಳಿಗೆ ಕಾರಣವಾಗಬಹುದು. ಮಾತ್ರವಲ್ಲ, ಕೆಲಸದ ಒತ್ತಡ ಮತ್ತು ಸರಿಯಾದ ನಿದ್ರೆ ಅಭ್ಯಾಸಗಳ ಕೊರತೆ 25 ರಿಂದ 40 ವರ್ಷದ ವಯಸ್ಸಿನ ಉದ್ಯೋಗಿಗಳಲ್ಲಿ ನಿದ್ರೆ ಸರಿಯಾಗಿ ಮಾಡಲು ಸಾಧ್ಯವಾಗದಂತಹ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತಿದೆ. ತಡ ರಾತ್ರಿ ಊಟ ಮತ್ತು ಅಸಮರ್ಪಕ ನಿದ್ರೆ ಪದ್ಧತಿ ಗ್ಯಾಸ್ಟ್ರೋಈಸೊಫೆಜಿಯಲ್ ರಿಫ್ಲಕ್ಸ್ ರೋಗ (GERD)ಕ್ಕೂ ಕಾರಣವಾಗಿದೆ.

ವೈದ್ಯರು ಎಚ್ಚರಿಸುವಂತೆ, ದೀರ್ಘಕಾಲವರೆಗೆ ನಿದ್ರೆ ಸರಿಯಾಗಿ ಮಾಡದಿದ್ದರೆ ಒಬೆಸಿಟಿ, ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಜೊತೆಗೆ ಸ್ಮರಣೆ, ಏಕಾಗ್ರತೆ ಮತ್ತು ಕೆಲಸದ ಉತ್ಪಾದಕತೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಮತ್ತು ಎದ್ದೇಳುವ ಅಭ್ಯಾಸ ಮಾಡಿಕೊಳ್ಳಿ, ಮಲಗುವ ಮೊದಲು ಸ್ಕ್ರೀನ್ ಬಳಕೆಯನ್ನು ಕಡಿಮೆ ಮಾಡಿ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಿದ್ರೆ ಚೆನ್ನಾಗಿ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಮಾರ್ಟ್​ಫೋನ್ ಉತ್ಪಾದನೆಗೆ ಉತ್ತೇಜಿಸಲು ಸರ್ಕಾರದಿಂದ ಹೊಸ ಸಬ್ಸಿಡಿ ಸ್ಕೀಮ್; ಪಿಎಲ್​ಐ ಬದಲು ಹೊಸ ಯೋಜನೆ

ನವದೆಹಲಿ, ಮಾರ್ಚ್ 13: ದೇಶದಲ್ಲಿ ಸ್ಮಾರ್ಟ್​ಫೋನ್ ಉತ್ಪಾದನೆಗೆ ಉತ್ತೇಜನ ನೀಡಲು ಸರ್ಕಾರ ಹೊಸ ರೀತಿಯ ಸಬ್ಸಿಡಿ ಪ್ಲಾನ್ (New subsidy plan) ಹಾಕಿದೆ. ಪಿಎಲ್​ಐ ಸ್ಕೀಮ್ (PLI scheme) ಬದಲು ಈ ಹೊಸ ಯೋಜನೆ ಜಾರಿಗೆ ಬರುವ ಚಿಂತನೆಯಲ್ಲಿ ಸರ್ಕಾರ ಇದೆ. ಪಿಎಲ್​ಐ ಸ್ಕೀಮ್​ನಲ್ಲಿ ಕಂಪನಿಗಳಿಗೆ ರಫ್ತಿಗೆ ಉತ್ತೇಜನ ಕೊಡಲಾಗುತ್ತದೆ. ಹೊಸ ಸ್ಕೀಮ್​ನಲ್ಲಿ ಸ್ಥಳೀಯವಾಗಿ ಬಿಡಿಭಾಗಗಳ ಪೂರೈಕೆ ಪಡೆಯುವುದಕ್ಕೆ ಉತ್ತೇಜನ ಕೊಡಲು ಯೋಜಿಸಲಾಗಿದೆ. ಅಂದರೆ, ಭಾರತದೊಳಗೆ ತಯಾರಾಗಿರುವ ಬಿಡಿಭಾಗಗಳನ್ನು ಬಳಸಿ ಸ್ಮಾರ್ಟ್​ಫೋನ್ ಅಸೆಂಬ್ಲಿಂಗ್ ಮಾಡಿ, ಅದನ್ನು ರಫ್ತು ಮಾಡಿದರೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ.

ಸದ್ಯ, ಆ್ಯಪಲ್, ಸ್ಯಾಮ್ಸುಂಗ್ ಕಂಪನಿಗಳು ತಮ್ಮ ಅನೇಕ ಸ್ಮಾರ್ಟ್​ಫೋನ್​ಗಳನ್ನು ಭಾರತದಲ್ಲಿ ಅಸೆಂಬ್ಲಿಂಗ್ ಮಾಡಿಸುತ್ತಿವೆ. ಆದರೆ, ಅದಕ್ಕೆ ಬೇಕಾದ ಹೆಚ್ಚಿನ ಬಿಡಿಭಾಗಗಳನ್ನು ಚೀನಾ, ತೈವಾನ್ ಮತ್ತು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ, ಹೊಸ ಸಬ್ಸಿಡಿ ಸ್ಕೀಮ್​ನಿಂದ ಸ್ಥಳೀಯವಾಗಿ ಬಿಡಿಭಾಗಗಳ ಉತ್ಪಾದನೆ ಹೆಚ್ಚುತ್ತದೆ. ಆ್ಯಪಲ್, ಸ್ಯಾಮ್ಸುಂಗ್​ನಂತಹ ಒಇಎಂ ಕಂಪನಿಗಳಿಗೂ ತಯಾರಿಕಾ ವೆಚ್ಚ ಕಡಿಮೆ ಆಗುತ್ತೆ. ಭಾರತೀಯ ಕಂಪನಿಗಳಿಗೆ ಮ್ಯಾನುಫ್ಯಾಕ್ಚರಿಂಗ್ ಅವಕಾಶ ಮತ್ತು ಪರಿಣಿತಿ ಹೆಚ್ಚುತ್ತದೆ.

ಇದನ್ನೂ ಓದಿ: ಸಿಲಿಕಾನ್ ಸಿಟಿ ಹೊಂದಿರುವ ಕರ್ನಾಟಕದಲ್ಲಿ 470 ಹಳ್ಳಿಗಳಲ್ಲಿ ಈಗಲೂ ಇಲ್ಲ ಮೊಬೈಲ್ ಸಂಪರ್ಕ

ಹೇಗಿರುತ್ತೆ ಹೊಸ ಸಬ್ಸಿಡಿ ಪ್ಲಾನ್?

ಈ ಸ್ಕೀಮ್​ಗೆ ಆಯ್ಕೆಯಾಗುವ ಕಂಪನಿಗಳು ರಫ್ತು ಮಾಡುವ ಉತ್ಪನ್ನಗಳು ಹಾಗು ಆ ಉತ್ಪನ್ನಗಳ ತಯಾರಿಕೆಗೆ ಸ್ಥಳೀಯ ಮೌಲ್ಯ ವರ್ಧನೆ ಎಷ್ಟು ಎಂಬುದರ ಲೆಕ್ಕಾಚಾರದ ಮೇಲೆ ಸಬ್ಸಿಡಿ ನೀಡಲಾಗುತ್ತದೆ. ಉದಾಹರಣೆಗೆ, ಆ್ಯಪಲ್ ಕಂಪನಿ ತನ್ನ ಐಫೋನ್ ಅಸೆಂಬ್ಲಿಂಗ್​ಗೆ ಬೇಕಾದ ಬಿಡಿಭಾಗಗಳೆಲ್ಲವನ್ನೂ ಆಮದು ಮಾಡಿಕೊಂಡರೆ ಸಬ್ಸಿಡಿ ಸಿಗುವುದು ಬಹಳ ಕಡಿಮೆ. ಆದರೆ, ಭಾರತದಲ್ಲೇ ತಯಾರಾದ ಕ್ಯಾಮೆರಾ ಮಾಡ್ಯೂಲ್​ಗಳು, ಡಿಸ್​ಪ್ಲೇ ಇತ್ಯಾದಿ ಬಿಡಿಭಾಗಗಳನ್ನು ಪಡೆದು ಬಳಸಿದಾಗ ಹೆಚ್ಚಿನ ಸಬ್ಸಿಡಿ ಸಿಗುತ್ತದೆ.

ಈಗ ಅಸ್ತಿತ್ವದಲ್ಲಿರುವ ಪಿಎಲ್​ಐ ಸ್ಕೀಮ್​ನಿಂದ ಸ್ಮಾರ್ಟ್​ಫೋನ್ ಅಸೆಂಬ್ಲಿಂಗ್ ಕಾರ್ಯ ಭಾರತದಲ್ಲಿ ಗಣನೀಯವಾಗಿ ಹೆಚ್ಚಿದೆ. ಭಾರತದಲ್ಲಿ ಮಾರಾಟವಾಗುವ ಶೇ. 95ಕ್ಕೂ ಹೆಚ್ಚು ಸ್ಮಾರ್ಟ್​ಫೋನ್​ಗಳು ಇಲ್ಲಿಯೇ ಅಸೆಂಬಲ್ ಆಗಿರುವುದು. ಇದರ ಜೊತೆಗೆ ಬಿಡಿಭಾಗಗಳೂ ಇಲ್ಲೇ ತಯಾರಾದಾಗ ಒಟ್ಟಾರೆ ತಯಾರಿಕೆಯ ಚಕ್ರ ಬಹುತೇಕ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: 18 ವರ್ಷ ಅಡೋಬ್ ಸಿಇಒ ಆಗಿದ್ದ ಭಾರತ ಮೂಲದ ಶಾಂತನು ನಾರಾಯಣ್ ರಾಜೀನಾಮೆ

ಭಾರತದಲ್ಲಿ ಸ್ಮಾರ್ಟ್​ಫೋನ್ ಬಿಡಿಭಾಗಗಳ ತಯಾರಿಕೆ ಹೆಚ್ಚಾದಾಗ ಸಪ್ಲೈ ಚೈನ್ ಮತ್ತಷ್ಟು ಬಲಗೊಳ್ಳುತ್ತದೆ. ಹೀಗಾಗಿ, ಸರ್ಕಾರದ ಹೊಸ ಸಬ್ಸಿಡಿ ಸ್ಕೀಮ್ ಬಗ್ಗೆ ಭಾರತೀಯ ಉದ್ಯಮ ಕುತೂಹಲ ಮತ್ತು ಸ್ವಾಗತಿಸುವ ಸ್ಥಿತಿಯಲ್ಲಿದೆ. ಫಾಕ್ಸ್​ಕಾನ್​ನಂತಹ ಫೋನ್ ಅಸೆಂಬ್ಲಿಂಗ್ ಕಂಪನಿಗಳು ಭಾರತದಲ್ಲಿ ಹೆಚ್ಚೆಚ್ಚು ಹೂಡಿಕೆ ಮಾಡಬಹುದರ ಜೊತೆಗೆ ತಮ್ಮ ಪೂರೈಕೆ ಸರಪಳಿಯನ್ನು ಭಾರತದಲ್ಲೇ ನಿರ್ಮಿಸಲು ಮುಂದಾಗಬಹುದು. ಇದರಿಂದ ಅಂತಿಮ ಲಾಭ ಭಾರತಕ್ಕೆ ಆಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ಡಿಜಿಟಲ್ ಅರೆಸ್ಟ್​​ಗೆ ಯತ್ನ: ಸೈಬರ್ ಕ್ರೈಂ ಪೊಲೀಸರಿಗೆ ದೂರು

ಬೆಂಗಳೂರು, ಮಾರ್ಚ್​​ 13: ಇತ್ತೀಚೆಗೆ ಸೈಬರ್​​ ರಾಜ್ಯದಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಸದನದಲ್ಲಿಯೇ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಏನೋ​​ ತಿಳಿಸಿದ್ದಾರೆ. 2023ರಲ್ಲಿ ರಾಜ್ಯದಲ್ಲಿದ್ದ 22,225 ಪ್ರಕರಣಗಳ ಸಂಖ್ಯೆ 2025ರ ವೇಳೆಗೆ 14,899ಕ್ಕೆ ಇಳಿಕೆಯಾಗಿವೆ. ಪೊಲೀಸ್ ಇಲಾಖೆ ಕೈಗೊಂಡ ಪರಿಣಾಮಕಾರಿ ಕ್ರಮಗಳು, ಪ್ರಕರಣಗಳ ತ್ವರಿತ ಪತ್ತೆ ಮತ್ತು ಸಾರ್ವಜನಿಕರಲ್ಲಿ ಮೂಡಿಸಿದ ಜಾಗೃತಿ ಫಲಕೊಟ್ಟಿರೋದಾಗಿ ಹೇಳಿದ್ದಾರೆ. ಆದ್ರೆ ಖದೀಮರು ಮಾತ್ರ ಜನರಿಗೆ ವಂಚನೆ ಮಾಡಲು ಹೊಸ ಹೊಸ ದಾರಿ ಹುಡುಕುತ್ತಿದ್ದಾರೆ. ಖಾಕಿ ಚಾಪೆ ಕೆಳಗೆ ತೂರಿದರೆ ಇವರು ರಂಗೋಲಿ ಕೆಳಗೇ ತೂರುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತಿದೆ ಬೆಂಗಳೂರಲ್ಲಿ ನಡೆದಿರುವ ಈ ಘಟನೆ.

ಸೈಬರ್ ಖದೀಮರ ಆಟ ಈಗ ನೆಕ್ಸ್ಟ್ ಲೆವೆಲ್‌ಗೆ ಹೋಗಿದೆ. ಇಷ್ಟು ದಿನ ಬೇರೆ ರಾಜ್ಯದ ಪೊಲೀಸರ ಹೆಸರಲ್ಲಿ ಹೆದರಿಸ್ತಿದ್ದವರು,ಈಗ ಲೋಕಲ್ ಪೊಲೀಸರ ಹೆಸರನ್ನೇ ಬಳಸುತ್ತಿದ್ದಾರೆ. ಬೆಂಗಳೂರಿನ ಮಹಿಳೆಯೊಬ್ಬರಿಗೆ ಬಂದ ಒಂದು ಕರೆ ಚಾಲಾಕಿಗಳ ನಾಟಕ ಬಟಾಬಯಲು ಮಾಡಿದೆ. ಹೌದು, ನಯನಾ ಪ್ರಕಾಶ್ ಎಂಬುವರ ಹೆಸರಲ್ಲಿ ದಾಖಲೆ ಸೃಷ್ಟಿಸಿದ್ದ ಕಿಲಾಡಿಗಳು ಮಹಿಳೆಗೆ ಕರೆ ಮಾಡಿದ್ದಾರೆ. ಮೊದಲು ಆಡಿಯೋ ಕಾಲ್ ಮಾಡಿ, ನಿಮ್ಮ ತಾಯಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೆದರಿಸಿದ್ದಾರೆ. ನಂತರ ಕರೆಯನ್ನ ವಿಡಿಯೋ ಕಾಲ್​​ಗೆ ಕನ್ವರ್ಟ್ ಮಾಡಿ ತನಿಖೆ ಮಾಡಬೇಕು ಅಂತಾ ದಬಾಯಿಸಿದ್ದಾರೆ. ಈ ಖದೀಮರ ಧೈರ್ಯ ಎಷ್ಟಿದೆ ಅಂದ್ರೆ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರ ನಕಲಿ ಸೀಲ್ ಮತ್ತು ಸಹಿಯನ್ನೇ ಬಳಸಿದ್ದಾರೆ. ಸಾಲದ್ದಕ್ಕೆ ಕರ್ನಾಟಕ ಸಿಐಡಿ ಹೆಸರಲ್ಲಿ ಅರೆಸ್ಟ್ ವಾರಂಟ್ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್ ಆದೇಶ ಅಂತಾ ನಕಲಿ ದಾಖಲೆ ಕಳಿಸಿ, ನಿಮ್ಮ ಮನೆ ಲೊಕೇಶನ್ ಕಳಿಸಿ ನಾವು ಬರ್ತೀವಿ ಅಂತಾ ಮಹಿಳೆಯನ್ನ ಟೆನ್ಶನ್ ಗೆ ತಳ್ಳಿದ್ದಾರೆ.

ಇದನ್ನೂ ಓದಿ: ನಿಮ್ಮ ಫೋನ್‌ನಲ್ಲಿ 1930 ಸಂಖ್ಯೆಯನ್ನು ಸೇವ್ ಮಾಡಿದ್ದೀರ? ಇದರಿಂದ ಏನು ಪ್ರಯೋಜನ?

​ಆದರೆ ದಾಖಲೆಗಳನ್ನ ನೋಡಿ ಅನುಮಾನಗೊಂಡ ಮಹಿಳೆ ಅಂಜದೆ ಎಚ್ಚೆತ್ತುಕೊಂಡಿದ್ದಾರೆ. ಕೂಡಲೇ ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಅಧಿಕೃತ ಮೇಲ್ ಐಡಿಗೆ ದೂರು ನೀಡಿದ್ದಾರೆ. ಜೊತೆಗೆ ಸೈಬರ್ ಕ್ರೈಂ ಪೋರ್ಟಲ್​​ನಲ್ಲೂ ಕಂಪ್ಲೇಂಟ್ ರಿಜಿಸ್ಟರ್ ಮಾಡಿದ್ದಾರೆ.​ ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ರಾಜಾ ಇಮಾಮ್ ಖಾಸಿಂ, ಪೊಲೀಸರು ಯಾವತ್ತೂ ಡಿಜಿಟಲ್ ಅರೆಸ್ಟ್ ಮಾಡಲ್ಲ. ವಿಡಿಯೋ ಕಾಲ್ ಮೂಲಕ ತನಿಖೆ ನಡೆಸಿ ಹಣ ಕೇಳಲ್ಲ. ಇಂತಹ ನಕಲಿ ಆದೇಶ ಪತ್ರಗಳಿಗೆ ಸಾರ್ವಜನಿಕರು ಮರುಳಾಗಬಾರದು. ಅನುಮಾನ ಬಂದರೆ ಕೂಡಲೇ 1930 ಗೆ ಕರೆ ಮಾಡಿ ದೂರು ಕೊಡಿ ಎಂದಿದ್ದಾರೆ. ಒಟ್ಟಿನಲ್ಲಿ ಇಂತಹ ಜಾಲಕ್ಕೆ ಬೆದರಿ ಅನೇಕ ಮಂದಿ ಈಗಾಗಲೇ ಸಾಕಷ್ಟು ಹಣ ಕಳೆದುಕೊಂಡಿದ್ದಾರೆ. ಈ ನಡುವೆ ಪೊಲೀಸರ ಹೆಸರಲ್ಲೇ ವಂಚನೆ ಮಾಡೋಕೆ ಹೊರಟಿರುವ ಸೈಬರ್ ಖದೀಮರ ಬಗ್ಗೆ ಸಾರ್ವಜನಿಕರು ಇನ್ನಷ್ಟು ಜಾಗ್ರತೆ ವಹಿಸಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಶ್ಮಿಕಾ ಹಿಂದಿ ಸಿನಿಮಾ ರಿಲೀಸ್ ದಿನಾಂಕ ನಿಗದಿ, ಬೋಲ್ಡ್ ಲುಕ್​​ನಲ್ಲಿ ನಟಿ

ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ಜೊತೆಗೆ ಮದುವೆಯಾಗಿದ್ದು, ಸದ್ಯಕ್ಕೆ ಕೆಲ ವಾರಗಳ ಕಾಲ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಅಷ್ಟರಲ್ಲೇ ಅವರ ಹೊಸ ಸಿನಿಮಾದ ಬಿಡುಗಡೆ ದಿನಾಂಕ ನಿಗದಿ ಆಗಿದೆ. ರಶ್ಮಿಕಾ ನಟಿಸಿರುವ ಬಹುತಾರಾಗಣದ ಬಾಲಿವುಡ್ ಸಿನಿಮಾ ‘ಕಾಕ್​​ಟೇಲ್ 2’ ಸಿನಿಮಾದ ಬಿಡುಗಡೆ ದಿನಾಂಕ ಹಾಗೂ ಟೀಸರ್ ರಿಲೀಸ್ ದಿನಾಂಕಗಳನ್ನು ಇಂದು ಘೋಷಿಸಲಾಗಿದೆ. ಈ ಕುರಿತು ರಶ್ಮಿಕಾ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ರಶ್ಮಿಕಾ ತುಸು ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ಸುಳಿವನ್ನು ಪೋಸ್ಟರ್ ನೀಡುತ್ತಿದೆ.

2012 ರಲ್ಲಿ ಬಿಡುಗಡೆ ಆಗಿ ಬ್ಲಾಕ್‌ಬಸ್ಟರ್ ಆಗಿದ್ದ ‘ಕಾಕ್‌ಟೇಲ್’ ಸಿನಿಮಾದ ಸೀಕ್ವೆಲ್ ಆಗಿರುವ ‘ಕಾಕ್‌ಟೇಲ್ 2’ನಲ್ಲಿ ರಶ್ಮಿಕಾ ಮಂದಣ್ಣ, ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ಅವರುಗಳು ನಟಿಸಿದ್ದಾರೆ. 2012 ರ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ, ಸೈಫ್ ಅಲಿ ಖಾನ್ ಮತ್ತು ಡಿಯಾನಾ ಪೆಂಟಿ ನಟಿಸಿದ್ದರು. ಇದೀಗ ‘ಕಾಕ್​​ಟೇಲ್ 2’ ಸಿನಿಮಾದ ಪೋಸ್ಟರ್ ಮತ್ತು ಬಿಡುಗಡೆ ದಿನಾಂಕವನ್ನು ಇಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.

ಹೋಮಿ ಅದಜಾನಿಯಾ ನಿರ್ದೇಶನ ಮಾಡಿರುವ ‘ಕಾಕ್​​ಟೇಲ್ 2’ ಸಿನಿಮಾ ಜೂನ್ 19ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಜೂನ್ 4 ರಂದು ಬಿಡುಗಡೆ ಆಗಲಿದ್ದು, ಅದಾದ ಎರಡು ವಾರಗಳ ಬಳಿಕ ‘ಕಾಟ್​​ಕೇಟ್ 2’ ಬಿಡುಗಡೆ ಆಗಲಿದೆ. ದಿನೇಶ್ ವಿಜನ್ ಅವರ ‘ಮ್ಯಾಡಾಕ್ ಫಿಲ್ಮ್ಸ್’ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಇದೀಗ ಬಿಡುಗಡೆ ಆಗಿರುವ ಪೋಸ್ಟರ್​​ನಲ್ಲಿ ರಶ್ಮಿಕಾ ತುಸು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಮಾತ್ರವಲ್ಲ ಕೃತಿ ಸನೋನ್ ಪಾತ್ರವೂ ಸಹ ಗ್ಲಾಮರಸ್ ಆಗಿಯೇ ಇದ್ದಂತಿದೆ.

ಇದನ್ನೂ ಓದಿ:ಲಾವಣ್ಯ ತ್ರಿಪಾಠಿ ಬಿಟ್ಟ ಸಿನಿಮಾದಿಂದ ಸೂಪರ್ ಹಿಟ್ ಆದ ರಶ್ಮಿಕಾ ಮಂದಣ್ಣ

ಇಂದು ಬಿಡುಗಡೆಯಾದ ಪೋಸ್ಟರ್‌ನಲ್ಲಿ ರಶ್ಮಿಕಾ ಅತ್ಯಂತ ಚಟುವಟಿಕೆಯುಳ್ಳ, ಉಲ್ಲಾಸಭರಿತ ಹುಡುಗಿಯಂತೆ ಕಾಣಿಸಿಕೊಂಡಿದ್ದಾರೆ. ಕೆಲ ವರದಿಗಳ ಪ್ರಕಾರ, ರಶ್ಮಿಕಾ ಅವರು ಲೆಸ್ಬಿಯನ್ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಹೊರನೋಟಕ್ಕೆ ಇದು ತ್ರಿಕೋನ ಪ್ರೇಮಕಥೆಯಾದರೂ ಸಹ ಮುಖ್ಯ ಲವ್ ಸ್ಟೋರಿ ಇರುವುದು ಕೃತಿ ಸನೋನ್ ಮತ್ತು ರಶ್ಮಿಕಾ ಮಂದಣ್ಣ ಪಾತ್ರದ ನಡುವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಶ್ಮಿಕಾ ಕೆಲವು ಬೋಲ್ಡ್ ದೃಶ್ಯಗಳಲ್ಲಿ ಸಹ ನಟಿಸಿದ್ದಾರೆ ಎನ್ನಲಾಗುತ್ತಿದೆ.

‘ಕಾಕ್​​ಟೇಲ್ 2’ ಜೂನ್ 19ಕ್ಕೆ ಬಿಡುಗಡೆ ಆಗುತ್ತಿದೆಯಾದರೂ, ಮಾರ್ಚ್ 18ರಂದು ‘ಕಾಕ್‌ಟೇಲ್ 2’ ಚಿತ್ರದ ಮೊದಲ ಟೀಸರ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಸಿನಿಮಾದ ಪ್ರದರ್ಶನದ ಸಮಯದಲ್ಲಿ ಈ ಟೀಸರ್ ಅನ್ನು ವೀಕ್ಷಿಸಬಹುದಾಗಿದೆ. ರಶ್ಮಿಕಾ ಮಂದಣ್ಣ ಮದುವೆ ಆದ ಬಳಿಕ ಬಿಡುಗಡೆ ಆಗುತ್ತಿರುವ ಅವರ ಮೊದಲ ಸಿನಿಮಾ ಇದಾಗಿದ್ದು, ಸಿನಿಮಾದ ಪ್ರಚಾರದಲ್ಲಿ ಅವರು ಶೀಘ್ರವೇ ಪಾಲ್ಗೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಇರಾಕ್ ಬಳಿ ಟ್ಯಾಂಕರ್ ದಾಳಿಯಲ್ಲಿ ಗಾಯಗೊಂಡಿದ್ದ ಮುಂಬೈ ಮೂಲದ ಭಾರತೀಯ ಎಂಜಿನಿಯರ್ ನಿಧನ

ನವದೆಹಲಿ, ಮಾರ್ಚ್ 13: ಎಂಟಿ ಸಫೇಸಿಯಾ ವಿಷ್ಣುವಿನ ಹೆಚ್ಚುವರಿ ಮುಖ್ಯ ಎಂಜಿನಿಯರ್ (ಸೂಪರಿಂಟೆಂಡೆಂಟ್) ದೇವಾನಂದನ್ ಪ್ರಸಾದ್ ಸಿಂಗ್ ಬುಧವಾರ ಮಾರ್ಷಲ್ ದ್ವೀಪದ ಧ್ವಜ ಹೊತ್ತ ಟ್ಯಾಂಕರ್ (Oil Tanker) ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ. 50 ವರ್ಷದ ದೇವಾನಂದನ್ ಸಿಂಗ್ 2019ರಲ್ಲಿ ತಮ್ಮ ಊರಾದ ಬಿಹಾರದಿಂದ ಮುಂಬೈಗೆ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸ್ಥಳಾಂತರಗೊಂಡಿದ್ದರು. ಅವರು ಸರಕು ಹಡಗುಗಳಲ್ಲಿ ಸಿಬ್ಬಂದಿಯೊಂದಿಗೆ ಸಾಗರಗಳಲ್ಲಿ ಪ್ರಯಾಣಿಸಿ ಅವರನ್ನು ನೋಡಿಕೊಳ್ಳುತ್ತಿದ್ದರು.

ಆ ತೈಲ ಟ್ಯಾಂಕರ್ ಡಿಕ್ಕಿ ಹೊಡೆದಾಗ ಸುಮಾರು 48,000 ಮೆಟ್ರಿಕ್ ಟನ್ ನಾಫ್ತಾ ಸಾಗಿಸುತ್ತಿತ್ತು. ನೀರೊಳಗಿನ ಡ್ರೋನ್ ಅದಕ್ಕೆ ಡಿಕ್ಕಿ ಹೊಡೆದಿತ್ತು. ಈ ಸ್ಫೋಟದಲ್ಲಿ ಭಾರತೀಯ ನಾವಿಕ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ತೈಲ ಟ್ಯಾಂಕರ್ ಮೇಲಿನ ದಾಳಿಯ ನಂತರ ದೇವಾನಂದನ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಟ್ಟಿದೆ. ಬೆಂಕಿ ಹೊತ್ತಿಕೊಂಡ ಹಡಗಿನಿಂದ ಇತರ 15 ಭಾರತೀಯರನ್ನು ರಕ್ಷಿಸಲಾಗಿತ್ತು.

ಇದನ್ನೂ ಓದಿ: ಇರಾಕ್‌ ಬಳಿ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ; ಗಲ್ಫ್ ಯುದ್ಧಕ್ಕೆ ಮತ್ತೋರ್ವ ಭಾರತೀಯ ಬಲಿ

ದೇವಾನಂದನ್ ಸಿಂಗ್ ಈ ಹಿಂದೆ ನಿಯೋಮ್ ಮ್ಯಾರಿಟೈಮ್, ಯುನೈಟೆಡ್ ಓಷನ್ ಶಿಪ್ ಮ್ಯಾನೇಜ್‌ಮೆಂಟ್, ಬರ್ನಾರ್ಡ್ ಶುಲ್ಟೆ ಶಿಪ್ ಮ್ಯಾನೇಜ್‌ಮೆಂಟ್, ಸ್ಯಾಮ್ಸನ್ ಮ್ಯಾರಿಟೈಮ್ ಮತ್ತು ಶಿಪ್ಪಿಂಗ್ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡಿದ್ದರು. ಡ್ರೋನ್ ಹಡಗನ್ನು ಅಪ್ಪಳಿಸಿದ ನಂತರ, ಎಲ್ಲಾ ಸಿಬ್ಬಂದಿ ಸದಸ್ಯರು ಹಡಗನ್ನು ಬಿಟ್ಟು ನೀರಿಗೆ ಹಾರಿದರು. ಹತ್ತಿರದಲ್ಲಿ ಕಾರ್ಯನಿರ್ವಹಿಸುತ್ತಿದ್ದ STS ಟಗ್ ಮೂಲಕ ಅವರನ್ನು ರಕ್ಷಿಸಲಾಯಿತು. ಆದರೆ, ದೇವಾನಂದನ್ ತೀವ್ರವಾಗಿ ಗಾಯಗೊಂಡಿದ್ದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಇನ್ನೊಮ್ಮೆ ಇಂಥಹಾ ತಪ್ಪು ಮಾಡಲ್ಲ ಕ್ಷಮಿಸಿಬಿಡಿ: ರಾಜೇಂದ್ರ ಪ್ರಸಾದ್ ಮನವಿ

ತೆಲುಗು ಚಿತ್ರರಂಗದ (Tollywood) ಹಿರಿಯ ನಟ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಜೇಂದ್ರ ಪ್ರಸಾದ್ ಅವರು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ತಾವು ಆಡಿದ ಮಾತಿನಿಂದ ಆಗಿರುವ ವಿವಾದದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿರುವುದು ಮಾತ್ರವೇ ಅಲ್ಲದೆ. ‘ತಾವು ಜೀವನದಲ್ಲಿ ಇನ್ನೊಮ್ಮೆ ಇಂಥಹಾ ಘೋರ ತಪ್ಪು ಮಾಡುವುದಿಲ್ಲ, ಇದೊಂದು ಬಾರಿ ನನ್ನನ್ನು ಕ್ಷಮಿಸಿಬಿಡಿ’ ಎಂದು ತಮಿಳು ಜನರ ಬಳಿ ಕೈಮುಗಿದು ಕ್ಷಮೆ ಕೇಳಿದ್ದಾರೆ.

ಕೆಲ ದಿನಗಳ ಹಿಂದೆ ರಾಜೇಂದ್ರ ಪ್ರಸಾದ್ ಅವರಿಗೆ ಕಾಂತಾರಾವ್ ಪ್ರಶಸ್ತಿ ನೀಡಲಾಯ್ತು. ಕಾರ್ಯಕ್ರಮದಲ್ಲಿ ಭಾವಾವೇಶದಿಂದ ಮಾತನಾಡಿದ ರಾಜೇಂದ್ರ ಪ್ರಸಾದ್, ಕಾಂತಾರಾವ್ ಅವರ ನಟನೆಯನ್ನು ಕೊಂಡಾಡುತ್ತಾ, ‘ಕಾಂತಾರಾವ್ ಮಾಡುತ್ತಿದ್ದ ಸಿನಿಮಾ, ಅವರ ಜನಪದ ಶೈಲಿನ ನಟನೆಯನ್ನು ನೋಡಿ ಎಂಜಿಆರ್ ಅಂಥಹವರೇ ಪ್ಯಾಂಟಿನಲ್ಲಿ ಮೂತ್ರವಿಸರ್ಜನೆ ಮಾಡಿಕೊಳ್ಳುತ್ತಿದ್ದರು. ಇವನ್ಯಾರಯ್ಯ, ಭಾರತೀಯ ಸಿನಿಮಾವನ್ನು ಎಲ್ಲಿಗೋ ತೆಗೆದುಕೊಂಡು ಹೋಗುತ್ತಾನೆ ಎಂದು ಅವರು ಭಯಗೊಂಡು ಮೂತ್ರ ಮಾಡಿಕೊಳ್ಳುತ್ತಿದ್ದರು’ ಎಂದಿದ್ದರು.

ತಮಿಳು ಚಿತ್ರರಂಗದ ದಿಗ್ಗಜ ನಟ, ಮಾಜಿ ಸಿಎಂ ಸಹ ಆಗಿರುವ ಎಂಜಿಆರ್ ಅವರ ಬಗ್ಗೆ ರಾಜೇಂದ್ರ ಪ್ರಸಾದ್ ಆಡಿದ್ದ ಕೀಳು ಮಾತುಗಳನ್ನು ತಮಿಳು ಸಿನಿಮಾ ಪ್ರೇಮಿಗಳು ಮಾತ್ರವಲ್ಲದೆ ತಮಿಳು ಚಿತ್ರರಂಗದ ಪ್ರಮುಖ ನಟರುಗಳಾದ ನಾಸರ್, ನಟ ವಿಶಾಲ್ ಇನ್ನೂ ಹಲವರು ಖಂಡಿಸಿದ್ದರು. ಕ್ಷಮೆ ಕೇಳುವಂತೆ ಒತ್ತಾಯ ಸಹ ಮಾಡಿದ್ದರು. ಅದರಂತೆ ಇದೀಗ ರಾಜೇಂದ್ರ ಪ್ರಸಾದ್ ಕ್ಷಮೆ ಕೋರಿದ್ದಾರೆ.

ಇದನ್ನೂ ಓದಿ:ತಮಿಳಿನ ದಿಗ್ಗಜ ನಟ, ಮಾಜಿ ಸಿಎಂ ಎಂಜಿಆರ್​​ ಬಗ್ಗೆ ತೆಲುಗು ಹಿರಿಯ ನಟನ ಕೀಳು ಹೇಳಿಕೆ

‘ಎಂಜಿಆರ್, ತಮಿಳು ಚಿತ್ರರಂಗದ ದೇವರು. ನಾನು ಅವರನ್ನು ಟೀಕೆ ಮಾಡುವಷ್ಟು ದೊಡ್ಡವನಲ್ಲ. ನಾನು ಮದ್ರಾಸ್ ಫಿಲಂ ಇನ್​​ಸ್ಟಿಟ್ಯೂಟ್​​ನಲ್ಲಿ ಕಲಿಯುವಾಗ ಅವರು ಸಿಎಂ, ಅವರು ಸಹ ಒಮ್ಮೆ ನಮ್ಮ ಇನ್​​ಸ್ಟಿಟ್ಯೂಟಿಗೆ ಭೇಟಿ ನೀಡಿದ್ದರು. ಅವರೊಬ್ಬ ಮಹಾನ್ ನಟ. ಕಾಂತಾರಾವ್ ಅವರ ಬಗ್ಗೆ ಲೋಕಾಭಿರಾಮವಾಗಿ ಮಾತನಾಡುವಾಗ ನನ್ನ ಬಾಯಿಂದ ಅದೊಂದು ವಾಕ್ಯ ತಪ್ಪಿ ಬಂದುಬಿಟ್ಟಿತು. ನಾನು ಎಂಜಿಆರ್ ಬಗ್ಗೆ ಅಪಾರ ಗೌರವ ಉಳ್ಳವನು. ಈ ಬಾರಿ ನನ್ನನ್ನು ಕ್ಷಮಿಸಿಬಿಡಿ, ಮುಂದೆ ಜೀವನದಲ್ಲಿ ಇನ್ನೆಂದೂ ಇಂಥಹಾ ತಪ್ಪು ನಾನು ಮಾಡುವುದಿಲ್ಲ’ ಎಂದು ಕೈ ಮುಗಿದು ಕ್ಷಮೆ ಕೇಳಿದ್ದಾರೆ ಹಿರಿಯ ನಟ.

ರಾಜೇಂದ್ರ ಪ್ರಸಾದ್ ಅವರು ಇತ್ತೀಚೆಗೆ ತಮ್ಮ ಹೇಳಿಕೆಗಳಿಂದ ವಿವಾದಗಳನ್ನು ಸೃಷ್ಟಿಸುತ್ತಲೇ ಇದ್ದಾರೆ. ಈ ಹಿಂದೆ ಬ್ರಹ್ಮಾನಂದಂ, ಆಲಿ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದರು. ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದ ಕ್ರಿಕೆಟಿಗ ಡೇವಿಡ್ ವಾರ್ನರ್ ಬಗ್ಗೆಯೂ ಇವರು ನೀಡಿದ್ದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ಆದರೆ ಈ ಬಾರಿ ಅವರು ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ಕೊನೆ ಹಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Yadgir Court Recruitment 2026: ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗವಕಾಶ; 10th ಪಾಸಾಗಿದ್ರೆ ಸಾಕು

ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​ ಇಲ್ಲಿದೆ. ಅಧಿಕೃತ ಅಧಿಸೂಚನೆಯ ಮೂಲಕ ಯಾದಗಿರಿ ಇ-ಕೋರ್ಟ್ ಪ್ರಸ್ತುತ ಖಾಲಿ ಇರುವ ಒಟ್ಟು 14 ಪ್ರೊಸೆಸ್ ಸರ್ವರ್ ಮತ್ತು ಪಿಯೋನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 27,000 ರಿಂದ ರೂ. 61,300 ರವರೆಗೆ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.

ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ನೇಮಕಾತಿ ಪ್ರಕ್ರಿಯೆಗೆ ಅರ್ಹರಾಗಿದ್ದು, ವಯೋಮಿತಿಯು 29 ಜನವರಿ 2026 ರಂತೆ ಕನಿಷ್ಠ 18 ವರ್ಷಗಳಿಂದ ಗರಿಷ್ಠ 35 ವರ್ಷಗಳ ಒಳಗಿರಬೇಕು. ಸರ್ಕಾರದ ನಿಯಮಾನುಸಾರ ಎಸ್‌ಸಿ/ಎಸ್‌ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷಗಳು ಹಾಗೂ ಅಂಗವಿಕಲ ಅಥವಾ ವಿಧವೆ ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿಯಿರುವ ಅಭ್ಯರ್ಥಿಗಳು ಏಪ್ರಿಲ್ 12 ರ ಒಳಗಾಗಿ ಆನ್‌ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಶುಲ್ಕವಾಗಿ ಸಾಮಾನ್ಯ ವರ್ಗದವರಿಗೆ ರೂ. 200 ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ (SC/ST/Cat-1/PH) ರೂ. 100 ನಿಗದಿಪಡಿಸಲಾಗಿದ್ದು, ಇದನ್ನು ಆನ್‌ಲೈನ್ ಮೂಲಕವೇ ಪಾವತಿಸಬಹುದಾಗಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಅಭ್ಯರ್ಥಿಗಳ ಆಯ್ಕೆಯು ಕೇವಲ ಸಂದರ್ಶನದ ಮೂಲಕ ನಡೆಯಲಿದ್ದು, ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಶೈಕ್ಷಣಿಕ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಅವಶ್ಯಕ. ಅಧಿಕೃತ ಇ-ಕೋರ್ಟ್ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಗತ್ಯ ವಿವರಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿದ ನಂತರ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬಹುದು. ಯಾದಗಿರಿಯಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇದು ಸುಸಂದರ್ಭವಾಗಿದ್ದು, ಕೊನೆಯ ದಿನಾಂಕದವರೆಗೆ ಕಾಯದೆ ಶೀಘ್ರವಾಗಿ ಅರ್ಜಿ ಸಲ್ಲಿಸುವುದು ಸೂಕ್ತ.

ಅಧಿಕೃತ ಅಧಿಸೂಚನೆ ಓದಲು ಈ ಲಿಂಕ್​ ಮೇಲೆ ಕ್ಲಿಕ್​ ಮಾಡಿ: Yadgiri-District-Court-Recruitment-2026-Apply-for-Process-Server-Posts-Notification

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್​​ಗೆ ಭೇಟಿ ನೀಡಿ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶಿರಾಡಿಘಾಟ್​​ನಲ್ಲಿ ಭೀಕರ ಅಪಘಾತ: ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಸಾವು, ಓರ್ವನ ಸ್ಥಿತಿ ಗಂಭೀರ

ಮಂಗಳೂರು, (ಮಾರ್ಚ್ 13): KSRTC ರಾಜಹಂಸ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು,  ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ  ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ತಾಲೂಕಿನ ಶಿರಾಡಿಘಾಟ್​​​ನ (shiradi ghat) ಗುಂಡ್ಯ ಸಮೀಪ ನಡೆದಿದೆ. ಉಜಿರೆ ನಿವಾಸಿಗಳಾದ ಶ್ರೀಧರ ಮರಕಡ, ಜನಾರ್ದನ ಕೆರಿಮಾರ್ ಹಾಗೂ ಕೊಕ್ಕಡ ನಿವಾಸಿ ಚಂದ್ರಶೇಖರಗೌಡ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಇನ್ನು ಈ ಘಟನೆಯಲ್ಲಿ ಕಾರಿನಲ್ಲಿದ್ದ ಮತ್ತೋರ್ವ ಸುರೇಶ್ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.

ನಾಲ್ವರು ಒಂದೇ ಕಾರಿನಲ್ಲಿ ಸಕಲೇಶಪುರದಲ್ಲಿ ಮದುವೆ ಮುಗಿಸಿಕೊಂಡು ವಾಪಸ್ ಉಜಿರೆ ಕಡೆ ಹೋಗುತ್ತಿದ್ದರು. ಇನ್ನು ಕೆಎಸ್​​ಆರ್​​ಟಿಸಿ ರಾಜಹಂಸ ಬಸ್ ಮಂಗಳೂರು ಕಡೆಯಿಂದ ಬಂದಿದ್ದು, ಶಿರಾಡಿಘಾಟ್​ನ ಗುಂಡ್ಯ ಸಮೀಪ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Source link

ಚಿಂತಿತರಾಗಬೇಡಿ, ಬೇಕಾದಷ್ಟು ಎಲ್​ಪಿಜಿ ಸಂಗ್ರಹವಿದೆ; ಸರ್ಕಾರದಿಂದ ಗ್ರಾಹಕರಿಗೆ ಮನವಿ

ನವದೆಹಲಿ, ಮಾರ್ಚ್ 13: ಭಾರತದ ಅನೇಕ ನಗರಗಳಲ್ಲಿ ಹೋಟೆಲ್, ರೆಸ್ಟೋರೆಂಟ್​​ಗಳಲ್ಲಿ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್​ಗಳ ಅಭಾವ ಎದುರಾಗುತ್ತಿದ್ದಂತೆ ದಿನಬಳಕೆಯ ಎಲ್​ಪಿಜಿ ಸಿಲಿಂಡರ್​ಗಳನ್ನು ಬುಕ್ ಮಾಡುವ ಗ್ರಾಹಕರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರಾಗಕರಿಗೆ ಸ್ಪಷ್ಟನೆ ನೀಡಿದ್ದು, ಬೇಕಾದಷ್ಟು ಸಿಲಿಂಡರ್ ಸ್ಟಾಕ್ ಇರುವುದರಿಂದ ಯಾರೂ ಗೊಂದಲಕ್ಕೊಳಗಾಗಬೇಡಿ, ಚಿಂತಿತರಾಗಬೇಡಿ, ಆತುರದಿಂದ ಸಿಲಿಂಡರ್ ಬುಕ್ ಮಾಡಬೇಡಿ ಎಂದು ಸೂಚಿಸಿದೆ.

Source link

ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ

ಬೆಂಗಳೂರು, ಮಾರ್ಚ್​​ 13: ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಮಾತಿದೆ. ಜನ್ಮ ನೀಡಿದ ತಾಯಿ ಅಂದ್ರೆ ನಡೆದಾಡುವ ದೇವರು ಎಂದು ನಾವು ಪೂಜಿಸುತ್ತೇವೆ. ಆದರೆ ಇಲ್ಲೊಬ್ಬ ಮಗ ಆಸ್ತಿಗಾಗಿ ಅಂತಹ ತಾಯಿ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪಾಪಿ ಮಗನ ಕ್ರೌರ್ಯಕ್ಕೆ ವೃದ್ಧೆ ಆಸ್ಪತ್ರೆ ಸೇರಿದ್ದಾರೆ. ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಲಕ್ಷ್ಮೀ ಎಂಬವರು ಗಂಭೀರ ಗಾಯಗೊಂಡಿದ್ದಾರೆ.

ಜಯನಗರದ ನಿವಾಸಿ ಲಕ್ಷ್ಮೀ ಹಾಗೂ ಸಣ್ಣಸಿದ್ದಪ್ಪ ದಂಪತಿಗೆ 3 ಜನ ಗಂಡು ಮಕ್ಕಳು. ಈ ಪೈಕಿ ಲಕ್ಷ್ಮೀ ಅವರ ಪತಿ ಸಣ್ಣಸಿದ್ದಪ್ಪ ಮತ್ತು ಎರಡನೇ ಮಗ ಸುರೇಶ್​​ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ಕುಟುಂಬ ಜಯನಗರದಲ್ಲಿ ಮನೆ, ಬನ್ನೇರುಘಟ್ಟ ಬಳಿ ಫ್ಯಾಕ್ಟರಿ ಮತ್ತು ಶಿರಾ ಬಳಿ 7 ಎಕರೆ ಜಮೀನು ಹೊಂದಿದ್ದು, ಆಸ್ತಿಗಾಗಿ ಮೊದಲನೇ ಮಗ ರಮೇಶ್ ಹಾಗೂ ಮೂರನೇ ಮಗ ಪ್ರಕಾಶ್ ನಡುವೆ ಕಲಹ ನಡೆದಿತ್ತು. ಆಸ್ತಿ ಭಾಗ ಆಗಬೇಕೆಂದು ಮೂರನೇ ಮಗ ಪ್ರಕಾಶ್ ಕೋರ್ಟ್ ಮೆಟ್ಟಿಲು ಕೂಡ ಏರಿದ್ದ. 2016ರಿಂದಲೂ ಇದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಪಾರ್ಟಿಗೆಂದು ಹೋದವ ಸಿಕ್ಕಿದ್ದು ಶವವಾಗಿ; ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ಯಾರು?

ಈ ನಡುವೆ ನಿನ್ನೆ ಜಯನಗರದ 9ನೇ ಬ್ಲಾಕ್​​ನ ಮನೆ ಬಳಿ ಬಂದ ಪ್ರಕಾಶ್ ಏಕಾಏಕಿ ಮನೆ ರಿನೋವೇಷನ್ ಮಾಡಲು ಮುಂದಾಗಿದ್ದಾನೆ. ಆಗ ತಾಯಿ ಕೋರ್ಟ್​​ನಲ್ಲಿ ಕೇಸ್ ಇರುವಾಗ ಇದೆಲ್ಲ ಯಾಕೆ ಮಾಡ್ತೀಯ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಕುಪಿತಗೊಂಡ ಮಗ ಪ್ರಕಾಶ್ ತಾಯಿ ಮನೆಯ ವಸ್ತುಗಳನ್ನೆಲ್ಲ ಒಡೆದು ಹಾಳುಮಾಡಿದ್ದಾನೆ. ಜೊತೆಗೆ ವಾಕಿಂಗ್ ಸ್ಟಿಕ್​​ನಿಂದ ತಲೆಗೆ ಹೊಡೆದಿದ್ದಾನೆ‌‌. ಪೆಟ್ಟಾಗಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಲಕ್ಷ್ಮೀ ಅವರನ್ನು ಮೊದಲ ಮಗ ರಮೇಶ್​​ ಆಸ್ಪತ್ರೆಗೆ ದಾಖಲಿಸಿದ್ದು, ಜಯನಗರ ಜನರಲ್ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗ್ತಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದ್ದು, ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕಾಶ್ ವಿರುದ್ಧ ದೂರು ದಾಖಲಾಗಿದೆ. ಸದ್ಯ FIR ದಾಖಲಿಸಿರೋ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version