Gold Rates: ಚಿನ್ನದ ಬೆಲೆ ಸತತ ಕುಸಿತ; ಎರಡು ದಿನದಲ್ಲಿ 190 ರೂ ಇಳಿಕೆ

Gold Rates: ಚಿನ್ನದ ಬೆಲೆ ಸತತ ಕುಸಿತ; ಎರಡು ದಿನದಲ್ಲಿ 190 ರೂ ಇಳಿಕೆ

ಬೆಂಗಳೂರು, ಮಾರ್ಚ್ 13: ನಿನ್ನೆಯಂತೆ ಇವತ್ತು ಶುಕ್ರವಾರವೂ ಚಿನ್ನದ ಬೆಲೆಯಲ್ಲಿ (Gold Rates) ಇಳಿಕೆಯಾಗಿದೆ. ಸತತ ಎರಡು ದಿನ ಏರಿಕೆ ಬಳಿಕ, ಸತತ ಎರಡು ದಿನ ಇಳಿಕೆಯಾಗಿದೆ. ನಿನ್ನೆ 100 ರೂ ತಗ್ಗಿದ್ದ ಇದರ ಬೆಲೆ ಇವತ್ತು 90 ರೂ ಇಳಿದಿದೆ. ವಿದೇಶಗಳಲ್ಲೂ ಹಲವೆಡೆ ಬೆಲೆ ತಗ್ಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,47,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,61,240 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,47,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 13ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,124 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,780 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,093 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,124 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,780 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 280 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,780 ರೂ
  • ಚೆನ್ನೈ: 14,900 ರೂ
  • ಮುಂಬೈ: 14,780 ರೂ
  • ದೆಹಲಿ: 14,795 ರೂ
  • ಕೋಲ್ಕತಾ: 14,780 ರೂ
  • ಕೇರಳ: 14,780 ರೂ
  • ಅಹ್ಮದಾಬಾದ್: 14,785 ರೂ
  • ಜೈಪುರ್: 14,795 ರೂ
  • ಲಕ್ನೋ: 14,795 ರೂ
  • ಭುವನೇಶ್ವರ್: 14,780 ರೂ

ಇದನ್ನೂ ಓದಿ: ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್​ಬಿಐ ಮಿತಿಯಲ್ಲಿ ಬೆಲೆ ಏರಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 620 ರಿಂಗಿಟ್ (14,560 ರುಪಾಯಿ)
  • ದುಬೈ: 571.75 ಡಿರಾಮ್ (14,386 ರುಪಾಯಿ)
  • ಅಮೆರಿಕ: 160.50 ಡಾಲರ್ (14,830 ರುಪಾಯಿ)
  • ಸಿಂಗಾಪುರ: 203.90 ಸಿಂಗಾಪುರ್ ಡಾಲರ್ (14,724 ರುಪಾಯಿ)
  • ಕತಾರ್: 569 ಕತಾರಿ ರಿಯಾಲ್ (14,418 ರೂ)
  • ಸೌದಿ ಅರೇಬಿಯಾ: 580 ಸೌದಿ ರಿಯಾಲ್ (14,279 ರುಪಾಯಿ)
  • ಓಮನ್: 60.65 ಒಮಾನಿ ರಿಯಾಲ್ (14,572 ರುಪಾಯಿ)
  • ಕುವೇತ್: 46.54 ಕುವೇತಿ ದಿನಾರ್ (14,028 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 280 ರೂ
  • ಚೆನ್ನೈ: 290 ರೂ
  • ಮುಂಬೈ: 280 ರೂ
  • ದೆಹಲಿ: 280 ರೂ
  • ಕೋಲ್ಕತಾ: 280 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 280 ರೂ
  • ಜೈಪುರ್: 280 ರೂ
  • ಲಕ್ನೋ: 280 ರೂ
  • ಭುವನೇಶ್ವರ್: 290 ರೂ
  • ಪುಣೆ: 280

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರಗಳಿಗೆ ಬೆಂಬಲ ಒದಗಿಸಲು ಕರ್ನಾಟಕದಲ್ಲಿ ಮತ್ತಷ್ಟು ಹೂಡಿಕೆ ಮಾಡಿದ ABB

ಬೆಂಗಳೂರು, ಮಾರ್ಚ್ 13: ಎಲೆಕ್ಟ್ರಿಫಿಕೇಶನ್ ಮತ್ತು ಆಟೋಮೇಷನ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ, ಜಾಗತಿಕ ತಂತ್ರಜ್ಞಾನ ನಾಯಕನಾಗಿರುವ ABB ಸಂಸ್ಥೆಯು, ಬೆಂಗಳೂರಿನಲ್ಲಿ ಹೊಸ ‘ಗ್ರೀನ್‌ ಫೀಲ್ಡ್ ಕ್ಯಾಂಪಸ್’ಗಳು, ಉತ್ಪಾದನಾ ಘಟಕಗಳು, ಹೊಸ ಉತ್ಪನ್ನ ಶ್ರೇಣಿಗಳು ಹಾಗೂ ಸೇವಾ ಮತ್ತು ತರಬೇತಿ ಕೇಂದ್ರಗಳ ಮೂಲಕ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದೆ. ಈ ವಿಸ್ತರಣೆಯ ಭಾಗವಾಗಿ ABB ಸಮೂಹದ ಸಿಇಓ ಮಾರ್ಟನ್ ವಿಯೆರೋಡ್ ಅವರು ಪೀಣ್ಯದಲ್ಲಿ ಹೊಸ ಸಮಗ್ರ ಮೋಷನ್ ಘಟಕಕ್ಕೆ ಭೂಮಿಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಅವರು ಕುಣಿಗಲ್ ರಸ್ತೆಯಲ್ಲಿರುವ ‘ಎಲೆಕ್ಟ್ರಿಫಿಕೇಷನ್ ಆಂಡ್ ಅಟೋಮೇಷನ್ ನೆಲಮಂಗಲ ಕ್ಯಾಂಪಸ್ 2’ ಅನ್ನು ಉದ್ಘಾಟಿಸಿದರು.

ಕರ್ನಾಟಕದಲ್ಲಿ ದೀರ್ಘಕಾಲದಿಂದ ಬಲವಾದ ಅಸ್ತಿತ್ವವನ್ನು ಹೊಂದಿರುವ ABB ಸಂಸ್ಥೆಗೆ ಬೆಂಗಳೂರು ಭಾರತದ ಪ್ರಮುಖ ಉತ್ಪಾದನಾ ಮತ್ತು ತಾಂತ್ರಿಕ ಕೇಂದ್ರವಾಗಿದೆ. ಈ ಇತ್ತೀಚಿನ ಹೂಡಿಕೆಯ ಮೂಲಕ ABB ರಾಜ್ಯದಲ್ಲಿ ಮೂರು ಪ್ರಮುಖ ಉತ್ಪಾದನಾ ಸ್ಥಳಗಳನ್ನು ಹೊಂದಲಿದ್ದು, ಇಲ್ಲಿನ ಉತ್ಪಾದನಾ ಚಟುವಟಿಕೆಗಳಲ್ಲಿ 3,000ಕ್ಕೂ ಹೆಚ್ಚು ಜನರು ಉದ್ಯೋಗ ಪಡೆಯಲಿದ್ದಾರೆ. ಈ ಹೊಸ ಘಟಕಗಳು ಡೇಟಾ ಸೆಂಟರ್​ಗಳು, ಮೆಟ್ರೋ ರೈಲು, ನವೀಕರಿಸಬಹುದಾದ ಇಂಧನ, ಮೂಲಸೌಕರ್ಯ ಮತ್ತು ಲೋಹದಂತಹ ಕ್ಷೇತ್ರಗಳಿಗೆ ಸೇವೆ ಒದಗಿಸಲಿದೆ.

ಈ ಕುರಿತು ಮಾತನಾಡಿದ ABB ಇಂಡಿಯಾದ ಕಂಟ್ರಿ ಹೆಡ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಸಂಜೀವ್ ಶರ್ಮಾ ಅವರು, “ಈ ಕಾರ್ಯ ವಿಸ್ತರಣೆಯು ಭಾರತದ ಮೇಲೆ ABB ಹೊಂದಿರುವ ದೀರ್ಘಕಾಲೀನ ಬದ್ಧತೆ ಮತ್ತು ನಮ್ಮ ‘ಲೋಕಲ್- ಫಾರ್- ಲೋಕಲ್’ (ಸ್ಥಳೀಯರಿಗಾಗಿ ಸ್ಥಳೀಯ ಉತ್ಪಾದನೆ) ತಂತ್ರವನ್ನು ಪ್ರತಿಬಿಂಬಿಸುತ್ತದೆ. ಕರ್ನಾಟಕದಲ್ಲಿ ನಮ್ಮ ಉತ್ಪಾದನಾ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುವ ಮೂಲಕ, ನಾವು ಸುಧಾರಿತ ತಂತ್ರಜ್ಞಾನಗಳನ್ನು ಗ್ರಾಹಕರಿಗೆ ಹತ್ತಿರ ತರುತ್ತಿದ್ದೇವೆ. ಇದು ಕೈಗಾರಿಕೆಗಳ ಇಂಧನ ದಕ್ಷತೆಯನ್ನು ಸುಧಾರಿಸಲು, ಕಾರ್ಯಾಚರಣೆಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು ಭಾರತದ ಮೂಲಸೌಕರ್ಯ ಬೆಳವಣಿಗೆಗೆ ಬೆಂಬಲ ನೀಡಲು ನಮಗೆ ಸಹಾಯ ಮಾಡುತ್ತದೆ” ಎಂದು ತಿಳಿಸಿದರು.

ABB ಸಂಸ್ಥೆಯ ‘ಮೋಷನ್’ ವಿಭಾಗವು ಪೀಣ್ಯದಲ್ಲಿರುವ ತನ್ನ ಕ್ಯಾಂಪಸ್ ಅನ್ನು ಎರಡು ಹೊಸ ಉತ್ಪಾದನಾ ಘಟಕಗಳೊಂದಿಗೆ ವಿಸ್ತರಿಸುತ್ತಿದೆ. 6,100 ಚದರ ಮೀಟರ್ ವಿಸ್ತೀರ್ಣದ ಈ ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದಾಗ 330 ಉದ್ಯೋಗಿಗಳಿಗೆ ಅವಕಾಶ ನೀಡಲಿದೆ. ಇಲ್ಲಿ ‘ಫ್ಲೇಮ್‌ ಪ್ರೂಫ್’ (ಎಎಕ್ಸ್) ವಿನ್ಯಾಸಗಳು, ರೋಲರ್ ಟೇಬಲ್ ವೇರಿಯೆಂಟ್ ಗಳು ಮತ್ತು ದೊಡ್ಡ ಸ್ಮೋಕ್ ವೆಂಟಿಲೇಷನ್ ಮಾದರಿಗಳು ಸೇರಿದಂತೆ ವಿವಿಧ ರೀತಿಯ ಇಂಧನ ದಕ್ಷ ಮೋಟಾರ್‌ ಗಳನ್ನು ತಯಾರಿಸಲಾಗುತ್ತದೆ. ಇದರೊಂದಿಗೆ ಕಡಿಮೆ-ವೋಲ್ಟೇಜ್ ಡ್ರೈವ್‌ ಗಳು ಮತ್ತು ಪ್ರೋಗ್ರಾಮೇಬಲ್ ಲಾಜಿಕ್ ಕಂಟ್ರೋಲರ್‌ ಗಳನ್ನು (ಪಿ ಎಲ್ ಸಿಗಳು) ಇಲ್ಲಿ ಉತ್ಪಾದಿಸಲಾಗುತ್ತದೆ. ಈ ಕ್ಯಾಂಪಸ್‌ ನಲ್ಲಿ ಡಿಜಿಟಲ್ ಪರಿಕರಗಳು ಮತ್ತು ರಿಮೋಟ್ ಡಯಾಗ್ನೋಸ್ಟಿಕ್ಸ್ ಒಳಗೊಂಡ ಸೇವಾ ಮತ್ತು ತರಬೇತಿ ಕೇಂದ್ರವೂ ಇರಲಿದೆ. ಕಳೆದ 12 ವರ್ಷಗಳಲ್ಲಿ ಎಬಿಬಿ ಅಳವಡಿಸಿರುವ ಹೈ-ಎಫಿಷಿಯನ್ಸಿ ಮೋಟಾರ್‌ಗಳು ಮತ್ತು ಡ್ರೈವ್​ಗಳು ವಾರ್ಷಿಕವಾಗಿ ಸುಮಾರು 20 TWh ಇಂಧನವನ್ನು ಉಳಿಸಿದ್ದು, ಇದು ದೆಹಲಿಯ ವಾರ್ಷಿಕ ವಿದ್ಯುತ್ ಬಳಕೆಯ ಸುಮಾರು ಅರ್ಧದಷ್ಟು ಭಾಗಕ್ಕೆ ಸಮನಾಗಿದೆ.

ನೆಲಮಂಗಲದ ಎರಡನೇ ಕ್ಯಾಂಪಸ್​ನಲ್ಲಿ 16,470 ಚದರ ಮೀಟರ್ ವಿಸ್ತೀರ್ಣದ ಬಹು-ಉದ್ಯಮ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ಎಲೆಕ್ಟ್ರಿಫಿಕೇಶನ್ ಮತ್ತು ಆಟೋಮೇಷನ್ ವ್ಯವಹಾರಗಳ ಉತ್ಪಾದನೆಯನ್ನು ಹೆಚ್ಚಿಸಲಿದೆ. ಈ ಘಟಕವು ಸ್ಮಾರ್ಟ್ ಪವರ್ ತಂತ್ರಜ್ಞಾನಗಳು, ಗ್ಯಾಸ್ ಅನಲೈಸರ್ ಉತ್ಪಾದನೆ, ಎಕ್ಸೈಟೇಶನ್ ಸಿಸ್ಟಮ್​ಗಳು ಮತ್ತು ಹೈ-ಪವರ್ ರೆಕ್ಟಿಫೈಯರ್‌ ಗಳನ್ನು ಒಳಗೊಂಡ ವಿಶಾಲವಾದ ಪೋರ್ಟ್‌ ಫೋಲಿಯೋಗೆ ಬೆಂಬಲ ನೀಡುತ್ತದೆ. ವಿಶೇಷವಾಗಿ ಡೇಟಾ ಸೆಂಟರ್​ಗಳಿಗೆ ಅಗತ್ಯವಾದ ಪವರ್ ಮ್ಯಾನೇಜ್ಮೆಂಟ್ ಉತ್ಪನ್ನಗಳ ಉತ್ಪಾದನೆಯು ಈ ಕ್ಯಾಂಪಸ್​ನಲ್ಲಿ ಸುಮಾರು ಹತ್ತು ಪಟ್ಟು ಹೆಚ್ಚಾಗಲಿದೆ. ಭಾರತದ ಶೇಕಡಾ 30 ಕ್ಕಿಂತ ಹೆಚ್ಚು ಹೈಪರ್‌ ಸ್ಕೇಲ್ ಡೇಟಾ ಸೆಂಟರ್​ಗಳು ಈಗಾಗಲೇ ABB ಸಂಸ್ಥೆಯ ಕಡಿಮೆ ಮತ್ತು ಮಧ್ಯಮ ವೋಲ್ಟೇಜ್ ಸಿಸ್ಟಮ್‌ ಗಳ ಮೂಲಕ ಕಾರ್ಯನಿರ್ವಹಿಸುತ್ತಿವೆ. ಈ ಹೊಸ ಕ್ಯಾಂಪಸ್, ಲೂಬ್ರಿಕೆಂಟ್, ಪೇಂಟ್, ಪೇಪರ್ ಮತ್ತು ಪಲ್ಪ್ ಉದ್ಯಮಗಳಿಗೆ ಅಗತ್ಯವಾದ ‘ಬ್ಲೆಂಡಿಂಗ್ ಸೊಲ್ಯೂಷನ್ಸ್’ ಸೇರಿದಂತೆ ಎಬಿಬಿಯ ನಾವೀನ್ಯತೆ ಆಧಾರಿತ ‘ಮೇಕ್ ಇನ್ ಇಂಡಿಯಾ’ ಉತ್ಪನ್ನಗಳ ಶ್ರೇಣಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಇದಲ್ಲದೆ, ದೇಶದ ಶೇಕಡ 60ಕ್ಕಿಂತ ಹೆಚ್ಚು ‘ಕ್ಯಾಪ್ಟಿವ್’ ವಿದ್ಯುತ್ ಸ್ಥಾವರಗಳಲ್ಲಿ ವಿಶ್ವಾಸಾರ್ಹ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುವ ‘ಎಕ್ಸೈಟೇಶನ್ ಸಿಸ್ಟಮ್‌ ಗಳ’ ಮೂಲಕ ABB ತನ್ನ ಪ್ರಬಲ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ. ಈ ಹೂಡಿಕೆಯೊಂದಿಗೆ, ಇಲ್ಲಿಯವರೆಗೆ ಕೇವಲ ಸ್ಥಳೀಯ ರಾಸಾಯನಿಕ ಮತ್ತು ಲೋಹದ ಉದ್ಯಮದ ಗ್ರಾಹಕರಿಗೆ ಪೂರೈಕೆಯಾಗುತ್ತಿದ್ದ ‘ಹೈ-ಪವರ್ ರೆಕ್ಟಿಫೈಯರ್‌ ಗಳು’ ಇನ್ನು ಮುಂದೆ ಪ್ರಾದೇಶಿಕ ಮಾರುಕಟ್ಟೆಗಳಿಗೂ ವಿಸ್ತರಣೆಯಾಗಲಿವೆ.

ಸಾಫ್ಟ್​ವೇರ್, ಉತ್ಪಾದನೆ ಮತ್ತು ಆರ್ ಅಂಡ್ ಡಿ ಕ್ಷೇತ್ರಗಳಲ್ಲಿ ಕರ್ನಾಟಕವು ದೀರ್ಘಕಾಲದಿಂದ ತಾಂತ್ರಿಕ ಪ್ರತಿಭೆಗಳ ಕೇಂದ್ರವಾಗಿದೆ. ABBಯ ಈ ನಿರಂತರ ಹೂಡಿಕೆಗಳು ಸ್ಥಳೀಯ ಉತ್ಪಾದನೆಯನ್ನು ವಿಸ್ತರಿಸುವ ಮೂಲಕ, ವಿಶೇಷ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತು ಈ ಪ್ರದೇಶದ ಪೂರೈಕೆದಾರರ ಜಾಲವನ್ನು ಬೆಂಬಲಿಸುವ ಮೂಲಕ ರಾಜ್ಯದ ಕೈಗಾರಿಕಾ ವ್ಯವಸ್ಥೆಯನ್ನು ಬಲಪಡಿಸುತ್ತವೆ.
ಹೆಚ್ಚಿನ ಮಾಹಿತಿಗಾಗಿ ನೋಡಿ:  www.abb.com

(ಗಮನಿಸಿ: ಇದು ಪ್ರಾಯೋಜಿತ ಲೇಖನವಾಗಿರುತ್ತದೆ)

Source link

Video: ಮಗುವನ್ನು ಸ್ಕೂಟಿಯ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿದ ಮಹಿಳೆ

ಕೆಲವೊಮ್ಮೆ ಜನರು ದಿಢೀರನೆ ಫೇಮಸ್ ಆಗಲು ಅದೇನೆಲ್ಲಾ ಮಾಡುತ್ತಾರೆ ನೋಡಿ, ಇತ್ತೀಚೆಗಷ್ಟೇ ತಾಯಿಯೊಬ್ಬರು ಬಾವಿಯ ಕಟ್ಟೆಯ ಮೇಲೆ ನಿಂತು ತನ್ನ ಇಬ್ಬರು ಮಕ್ಕಳ ಕೈ ಹಿಡಿದು ನೃತ್ಯ ಮಾಡುವ ವಿಡಿಯೋ ವೈರಲ್ ಆಗಿತ್ತು., ಈಗ ಇಲ್ಲೊಬ್ಬ ಮಹಿಳೆ ತನ್ನ ಮಗುವನ್ನು ಬೈಕಿನ ಡಿಕ್ಕಿಯಲ್ಲಿ ಮಲಗಿಸಿ ಗಾಡಿ ಓಡಿಸಿರುವ ವಿಡಿಯೋ ವೈರಲ್ ಆಗಿದೆ. ಮಹಿಳೆ ತನ್ನ ಮಗುವನ್ನು ಸ್ಕೂಟರ್‌ನ ಸ್ಟೋರೇಜ್ ವಿಭಾಗದಲ್ಲಿ ಇರಿಸಿ ಸ್ಕೂಟರ್ ಓಡಿಸುವುದನ್ನು ನೋಡಬಹುದು. ಮುಚ್ಚಿದ ಡಿಕ್ಕಿಯೊಳಗೆ ಉಸಿರಾಡಲು ಮಗುವಿಗೆ ತೊಂದರೆಯಾಗಬಹುದು ಎಂದು ಈ ವಿಡಿಯೋ ನೋಡಿದವರು ಚಿಂತಿತರಾಗಿದ್ದಾರೆ.

 

Source link

Iran-Israel War: ಯುದ್ಧದ ಪರಿಣಾಮ ಯಾದಗಿರಿಯ 28 ರೈಸ್ ಮಿಲ್‌ಗಳಿಗೆ ಭಾರೀ ಹೊಡೆತ!

ಯಾದಗಿರಿ, ಮಾರ್ಚ್​ 13: ಇರಾನ್–ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮ ಇದೀಗ ಗಲ್ಫ್ ರಾಷ್ಟ್ರಗಳ ಮೇಲಷ್ಟೇ ಅಲ್ಲದೆ ಭಾರತದ ಕೆಲವು ಉದ್ಯಮಗಳ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಈಗಾಗಲೆ ಬೆಂಗಳೂರು ಸೇರಿ ದೇಶದ ಹಲವೆಡೆ ಎಲ್​ಪಿಜಿ ಗ್ಯಾಸ್ ಸಿಲಿಂಡರ್ (LPG cylinder crisis) ಕೊರತೆ ತಲೆಯಿತ್ತಿದೆ. ಅದಲ್ಲದೆ ಗಲ್ಫ್ ರಾಷ್ಟ್ರಗಳಿಗೆ ರಫ್ತು ಆಗುತ್ತಿದ್ದ ಅಕ್ಕಿ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆಯ ರೈಸ್ ಮಿಲ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ಹಲವಾರು ಮಿಲ್‌ಗಳು ಬಂದ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ವ್ಯಾಪಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಮಿಲ್ ಮಾಲೀಕರು

ಯಾದಗಿರಿ ಜಿಲ್ಲೆಯಲ್ಲಿ ಬೆಳೆಯುವ ಸೋನಾ ಮಸೂರಿ ಅಕ್ಕಿಗೆ ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಯಿಂದ ವಿವಿಧ ಮಹಾನಗರಗಳ ಮೂಲಕ ಈ ಅಕ್ಕಿಯನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ವಿಶೇಷವಾಗಿ ಸೌದಿ ಅರೇಬಿಯಾ, ದುಬೈ, ಕುವೈತ್ ಸೇರಿದಂತೆ ಹಲವು ಗಲ್ಫ್ ರಾಷ್ಟ್ರಗಳಿಗೆ ಅಕ್ಕಿ ಸಾಗಾಟ ನಡೆಯುತ್ತಿತ್ತು. ಪ್ರತಿದಿನವೂ ಯಾದಗಿರಿಯಿಂದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಅಕ್ಕಿ ವಿದೇಶಗಳಿಗೆ ರಫ್ತು ಆಗುತ್ತಿತ್ತು. ಆದರೆ ಇತ್ತೀಚೆಗೆ ಇರಾನ್–ಇಸ್ರೇಲ್ ಯುದ್ಧದ ಪರಿಣಾಮ ಗಲ್ಫ್ ರಾಷ್ಟ್ರಗಳ ವ್ಯಾಪಾರ ಚಟುವಟಿಕೆಗಳು ಕುಂಠಿತಗೊಂಡಿದ್ದು, ಅಕ್ಕಿ ರಫ್ತು ಸಂಪೂರ್ಣವಾಗಿ ನಿಂತಿದೆ.

ಇದರಿಂದ ಮಿಲ್ ಮಾಲೀಕರಿಗೆ ಭಾರೀ ಹೊಡೆತ ಬಿದ್ದಿದೆ. ಎರಡು ತಿಂಗಳ ಹಿಂದೆ ರೈತರಿಂದ ಹೆಚ್ಚಿನ ದರಕ್ಕೆ ಭತ್ತ ಖರೀದಿ ಮಾಡಿದ್ದ ಮಿಲ್ ಮಾಲೀಕರು, ಅದನ್ನು ಅಕ್ಕಿಯಾಗಿಸಿ ವಿದೇಶಗಳಿಗೆ ರಫ್ತು ಮಾಡಲು ಯೋಜಿಸಿದ್ದರು. ಆದರೆ ಈಗ ರಫ್ತು ಸ್ಥಗಿತಗೊಂಡಿರುವುದರಿಂದ ಅಕ್ಕಿಯನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ ಮಧ್ಯಪ್ರಾಚ್ಯ ಯುದ್ಧದಿಂದ ಯಾದಗಿರಿಯ ಅಕ್ಕಿ ಉದ್ಯಮಕ್ಕೂ ಹೊಡೆತ!

ಜಿಲ್ಲೆಯಿಂದ ರಫ್ತಾಗುವ ಅಕ್ಕಿಯ ಪ್ರಮಾಣವೆಷ್ಟು?

ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 28 ರೈಸ್ ಮಿಲ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಒಂದೊಂದು ಮಿಲ್‌ನಿಂದ ದಿನಕ್ಕೆ ಸುಮಾರು 25 ಟನ್ ಅಕ್ಕಿ ಸಿದ್ಧಪಡಿಸಿ ರಫ್ತು ಮಾಡಲಾಗುತ್ತಿತ್ತು. ಆದರೆ ಈಗ ರಫ್ತು ನಿಂತಿರುವುದರಿಂದ ಹಲವಾರು ಮಿಲ್‌ಗಳು ಅಕ್ಕಿ ಉತ್ಪಾದನೆ ಕಾರ್ಯವನ್ನೇ ಸ್ಥಗಿತಗೊಳಿಸಿ ಬಂದ್ ಮಾಡುವ ಹಂತಕ್ಕೆ ತಲುಪಿವೆ. ಮಿಲ್‌ಗಳು ಬಂದ್ ಆಗಿರುವುದರಿಂದ ನೂರಾರು ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ನೊಂದೆಡೆ ಮಿಲ್ ಮಾಲೀಕರು ಬ್ಯಾಂಕ್ ಸಾಲ, ವಿದ್ಯುತ್ ಬಿಲ್ ಸೇರಿದಂತೆ ಹಲವು ಖರ್ಚುಗಳನ್ನು ನಿರ್ವಹಿಸಲು ಪರದಾಡುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಅಕ್ಕಿ ಉದ್ಯಮವೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಮಿಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ದೂರದ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ಯಾದಗಿರಿ ಜಿಲ್ಲೆಯ ಅಕ್ಕಿ ಉದ್ಯಮಕ್ಕೂ ಹೊಡೆತ ನೀಡಿದ್ದು, ರಫ್ತು ಮತ್ತೆ ಆರಂಭವಾಗುವವರೆಗೆ ಉದ್ಯಮಿಗಳು ಹಾಗೂ ಕಾರ್ಮಿಕರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪಾಕಿಸ್ತಾನ ಸ್ಪಿನ್ನರ್ ಅಬ್ರಾರ್ ಖರೀದಿಸಿದ ಕಾವ್ಯಾ ಮಾರನ್​​ಗೆ ಬ್ಯಾನ್ ಬಿಸಿ

ಸನ್ ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್​​​ಗೆ ಬ್ಯಾನ್ ಬಿಸಿ ತಟ್ಟಿದೆ. ದಿ ಹಂಡ್ರೆಡ್ ಲೀಗ್​​​ನಲ್ಲಿ ಕಾವ್ಯಾ ಅವರ ಸನ್​​ರೈಸರ್ಸ್ ಲೀಡ್ಸ್ ಫ್ರಾಂಚೈಸಿಯು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್​ ಅವರನ್ನು ಖರೀದಿ ಮಾಡಿತು. ಆಕ್ಷನ್​ ಅಲ್ಲಿ 2.35 ಕೋಟಿ ರೂಪಾಯಿಯನ್ನು ಕೊಡಲು ಸನ್​​ರೈಸರ್​ಸ್ ಒಪ್ಪಿಕೊಂಡಿತು. ಈ ಬೆನ್ನಲ್ಲೇ ಕಾವ್ಯಾ ಮಾರನ್ ಅವರು ಸಾಕಷ್ಟು ಟೀಕೆ ಎದುರಿಸಿದರು. ಅಷ್ಟೇ ಅಲ್ಲ, ಸನ್​​ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಬ್ಯಾನ್ ಆಗಿದೆ.

ಮಾರ್ಚ್ 12ರ ರಾತ್ರಿ 8.30ಕ್ಕೆ ವೇಳೆಗೆ ಈ ಖರೀದಿ ನಡೆದಿದೆ. ಇಂದು (ಮಾರ್ಚ್ 13) ಮುಂಜಾನೆ ಸನ್​​ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ. ಭಾರತೀಯರು ಸಾಕಷ್ಟು ಸಂಖ್ಯೆಯಲ್ಲಿ ಸನ್​​ರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆಯನ್ನು ರಿಪೋರ್ಟ್ ಮಾಡಿರಬಹುದು ಎಂದು ಊಹಿಸಲಾಗಿದೆ. ಈ ಕಾರಣದಿಂದಲೇ ಸಸ್ಪೆಂಡ್ ಆಗಿರಬಹುದು ಎಂಬುದು ಕೆಲವರ ಊಹೆ.

ಹಂಡ್ರೆಡ್ ಲೀಗ್ಸ್ ಆಕ್ಷನ್ ಅಲ್ಲಿ ಕಾವ್ಯಾ ಮಾರನ್, ತಂಡದ ಕೋಚ್ ಡ್ಯಾನಿಯಲ್ ವಿಟ್ಟೋರಿ ಇದ್ದರು. ಭಾರತ ಒಡೆತನದ ನಾಲ್ಕು ತಂಡಗಳು ಹಂಡ್ರೆಡ್ ಲೀಗ್​​​ನಲ್ಲಿ ಇದ್ದು, ಇವರು ಪಾಕಿಸ್ತಾನ ಆಟಗಾರರನ್ನು ಖರೀದಿಸುತ್ತಾರೆಯೇ ಎಂಬ ಪ್ರಶ್ನೆ ಇತ್ತು. ಕಾವ್ಯಾ ಅವರು ತೆಗೆದುಕೊಂಡ ಒಂದು ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇದು ಐಪಿಎಲ್ ತಂಡದ ವರ್ಚಸ್ಸಿನ ಮೇಲೂ ಪರಿಣಾಮ ಬಿರಬಹುದು.

ಸನ್ನರೈಸರ್ಸ್ ಲೀಡ್ಸ್ ಅಬ್ರಾರ್​​ಗೆ ವೆಲ್​​​ಕಮ್ ಎಂದು ಪೋಸ್ಟ್ ಹಾಕಿತ್ತು. ಈ ಪೋಸ್ಟ್ ಸಾಕಷ್ಟು ವೈರಲ್ ಆಯಿತು. ಕಾವ್ಯಾ ಅವರನ್ನು ಬ್ಯಾನ್ ಮಾಡುವಂತೆ ಟ್ವಿಟರ್​​​ನಲ್ಲಿ ಟ್ರೆಂಡ್ ಆಗಿದೆ. ಸನ್ನರೈಸರ್ಸ್ ಲೀಡ್ಸ್ ಟ್ವಿಟರ್ ಖಾತೆ ಓಪನ್ ಮಾಡಿದರೆ ‘ಈ ಖಾತೆಯನ್ನು ಸಸ್ಪೆಂಡ್ ಮಾಡಲಾಗಿದೆ’ ಎಂಬ ಬರಹ ಕಾಣುತ್ತದೆ.

ಭಾರತದಲ್ಲಿ ಪಾಕಿಸ್ತಾನ ಆಟಗಾರರ ಮೇಲೆ ಸಂಪೂರ್ಣ ಬ್ಯಾನ್ ಹೇರಲಾಗಿದೆ. ಅವರ ಜೊತೆ ಐಸಿಸಿ ಟೂರ್ನಮೆಂಟ್ ಹೊರತುಪಡಿಸಿ ಮತ್ಯಾವುದೇ ಪಂದ್ಯವನ್ನು ಆಡುತ್ತಿಲ್ಲ. ಹೀಗಿರುವಾಗ ಸನ್​ರೈಸರ್ಸ್ ಹೈದರಾಬಾದ್​​ನ ಸೋದರ ಸಂಸ್ಥೆಯಾಗಿರುವ ಸನ್​ರೈಸರ್ಸ್ ಲೀಡ್ಸ್ ಪಾಕ್ ಆಟಗಾರನನ್ನು ಖರೀರಿದಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ಈ ವಿರೋಧದ ಬಳಿಕ ಆಟಗಾರನನ್ನು ಕೈ ಬಿಡಲಾಗುವುದೇ ಎಂಬ ಪ್ರಶ್ನೆ ಮೂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ..

Source link

ಹುಬ್ಬಳ್ಳಿಯಲ್ಲಿ ಆಟೋ ಗ್ಯಾಸ್ ಬಂಕ್ ಬಂದ್: ಚಾಲಕರ ಪರದಾಟ, ಪ್ರಯಾಣಿಕರಿಗೆ ದರ ಏರಿಕೆ ಬರೆ

ಹುಬ್ಬಳ್ಳಿ, ಮಾರ್ಚ್ 13: ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಎಲ್​ಪಿಜಿ ಪೂರೈಕೆ ವ್ಯತ್ಯಯವಾಗಿದ್ದು, ಆಟೋ ಚಾಲಕರಿಗೂ ಇದರ ಬಿಸಿ ತಟ್ಟಿದೆ. ಹುಬ್ಬಳ್ಳಿಯಲ್ಲಿ ಆಟೋ ಎಲ್‌ಪಿಜಿ ಸಿಲಿಂಡರ್ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ಆಟೋ ಚಾಲಕರು ಮತ್ತು ಪ್ರಯಾಣಿಕರ ನಡುವೆ ವಾಗ್ವಾದಗಳು ಹೆಚ್ಚಾಗಿವೆ. ಎಲ್‌ಪಿಜಿ ದರ ಹೆಚ್ಚಳದ ಹಿನ್ನೆಲೆಯಲ್ಲಿ ಆಟೋ ಚಾಲಕರು ಪ್ರಯಾಣದ ದರವನ್ನು ಹೆಚ್ಚಿಸಿದ್ದಾರೆ. ಇದರಿಂದ ಪ್ರಯಾಣಿಕರು ಅಸಮಾಧಾನಗೊಂಡಿದ್ದಾರೆ. ಚೆನ್ನಮ್ಮ ವೃತ್ತದಿಂದ ಇಂಡಿ ಪಂಪ್‌ಗೆ ಹಿಂದೆ 10 ರೂಪಾಯಿ ಇದ್ದ ದರವನ್ನು ಈಗ 15 ರೂಪಾಯಿಗೆ ಏರಿಸಲಾಗಿದೆ. ಇದಲ್ಲದೆ, ಸಿದ್ಧಾರೂಢ ಮಠಕ್ಕೆ 20 ರೂಪಾಯಿ ಮತ್ತು ಆನಂದ ನಗರಕ್ಕೆ 30 ರೂಪಾಯಿಯಷ್ಟು ದರ ವಿಧಿಸಲಾಗುತ್ತಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಆಟೋ ಚಾಲಕರು ಎಲ್‌ಪಿಜಿ ಬೆಲೆ ಏರಿಕೆಯಾಗಿದ್ದರಿಂದ ಮತ್ತು ನಗರದಲ್ಲಿ ಐದಕ್ಕೂ ಹೆಚ್ಚು ಎಲ್‌ಪಿಜಿ ಬಂಕ್‌ಗಳು ಮುಚ್ಚಿರುವುದರಿಂದ ತಮಗೆ ಪರ್ಯಾಯವಿಲ್ಲ ಎಂದು ಹೇಳುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಮ್ ರಕ್ಷಿತ್ ಬೆನ್ನು ತಟ್ಟಿದ ಲಿಜೆಂಡರಿ ಕೊರಿಯೋಗ್ರಾಫರ್ ವಿನ್ಸೆಂಟ್

‘ಕಿಂಗ್ ಆಫ್ ಪಾಪ್’ ಮೈಖಲ್ ಜಾಕ್ಸನ್ (Michael Jackson), ಇಂದು ಲಿಜೆಂಡರಿ ಎನಿಸಿಕೊಂಡಿರುವ ಎಷ್ಟೋ ಮಂದಿ ಖ್ಯಾತ ಪಾಪ್ ತಾರೆಯವರಿಗೆ, ಡ್ಯಾನ್ಸ್ ಮಾಸ್ಟರ್​​ಗಳಿಗೆ ಗುರು. ಅಂಥಹಾ ಮೈಖಲ್ ಜಾಕ್ಸನ್ ಅವರಿಗಾಗಿ ನೃತ್ಯ ನಿರ್ದೇಶನ ಮಾಡುತ್ತಿದ್ದ ಹಾಲಿವುಡ್​ನ ಲಿಜೆಂಡರಿ ನೃತ್ಯ ನಿರ್ದೇಶಕ ಅಥವಾ ಕೊರಿಯೋಗ್ರಾಫರ್ ಇದೀಗ ಭಾರತದ ಜನಪ್ರಿಯ ಕೊರಿಯೋಗ್ರಾಫರ್ ಪ್ರೇಮ್ ರಕ್ಷಿತ್ ಅವರ ಕೆಲಸ ನೋಡಿ ಮೆಚ್ಚಿ ಕೊಂಡಾಡಿದ್ದಾರೆ. ಅಲ್ಲದೆ, ಅವರನ್ನು ಭೇಟಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

‘ಆರ್​​ಆರ್​​ಆರ್’ ಸಿನಿಮಾದ ‘ನಾಟು-ನಾಟು’ ಹಾಡಿಗೆ ನೃತ್ಯ ನಿರ್ದೇಶನ ಮಾಡಿರುವ ಪ್ರೇಮ್ ರಕ್ಷಿತ್, ಇದೀಗ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆಂಡ್ ಸೈನ್ಸ್ (ಆಸ್ಕರ್ಸ್)ನ ಸದಸ್ಯರಾಗಿದ್ದು, ಇದೇ ಸಂದರ್ಭದಲ್ಲಿ ಲಿಜೆಂಡರಿ ಕೊರಿಯೋಗ್ರಾಫರ್ ಆಗಿರುವ ವಿನ್ಸೆಂಟ್ ಪ್ಯಾಟರ್ಸನ್ ಅವರಿಂದ ವಿಡಿಯೋ ಸಂದೇಶ ಪಡೆದಿದ್ದು, ವಿನ್ಸೆಂಟ್ ಅವರು ಪ್ರೇಮ್ ರಕ್ಷಿತ್ ಅವರ ಪ್ರತಿಭೆಯನ್ನು ಕೊಂಡಾಡಿದ್ದಾರೆ.

ವಿಡಿಯೋನಲ್ಲಿ ಮಾತನಾಡಿರುವ ವಿನ್ಸೆಂಟ್, ‘ನಿಮ್ಮ ಕೆಲವನ್ನು ನಾನು ನೋಡಿದ್ದೀನಿ, ನೀವು ಸಿನಿಮಾಗಳಲ್ಲಿ ಮಾಡುತ್ತಿರುವ ಕೆಲಸವನ್ನು ನಾನು ಗೌರವಿಸುತ್ತೇನೆ, ಇಷ್ಟಪಡುತ್ತೇನೆ. ಅಲ್ಲದೆ, ನೀವು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆಂಡ್ ಸೈನ್ಸ್​​ನ ಸದಸ್ಯ ಆಗಿರುವುದಕ್ಕೆ ನಾನು ಸಂತೋಷಪಡುತ್ತೇನೆ. ಸದ್ಯಕ್ಕೆ ನಾನು ಲಾಸ್ ಏಂಜಲ್ಸ್​ನಲ್ಲಿದ್ದು, ನಿಮ್ಮನ್ನು ಭೇಟಿ ಆಗುವ ಕಾತರದಲ್ಲಿದ್ದೇನೆ. ಭಾರತದ ಯುವ ಡ್ಯಾನ್ಸ್ ಕೊರಿಯೋಗ್ರಾಫರ್​​ಗಳು ನನ್ನ ಮತ್ತು ನಿಮ್ಮ ಕೆಲಸದಿಂದ ಸ್ಪೂರ್ತಿ ಪಡೆಯುತ್ತಾರೆ. ನಮ್ಮಂತೆ ಅವರಿಗೂ ಸಾಧನೆ ಸಾಧ್ಯ ಎಂದು ಅರಿತುಕೊಳ್ಳುತ್ತಾರೆ ಎಂಬುದನ್ನು ನಂಬಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ:ಮೈಖಲ್ ಜಾಕ್ಸನ್ ಕಾಲು ಚೀಲ ಹರಾಜು, ಬೆಲೆ ಎಷ್ಟು ಗೊತ್ತೆ?

ವಿನ್ಸೆಂಟ್ ಅವರು ಹಾಲಿವುಡ್​ನ ಲಿಜೆಂಡರಿ ಕೊರಿಯೋಗ್ರಾಫರ್ ಆಗಿದ್ದಾರೆ. ಮೈಖಲ್ ಜಾಕ್ಸನ್ ಅವರೊಟ್ಟಿಗೆ ಹಲವು ವರ್ಷ ಅವರು ಕೆಲಸ ಮಾಡಿದ್ದರು. ಮೈಖಲ್ ಅವರ ಆಲ್​​ಟೈನ್ ಫೇವರೇಟ್ ಆಗಿರುವ ‘ಸ್ಮೂತ್ ಕ್ರಿಮಿನಲ್’ ಆಲ್ಬಂಗೆ ಕೊರಿಯೋಗ್ರಫಿ ಮಾಡಿದ್ದು ವಿನ್ಸೆಂಟ್. ಅದಕ್ಕೆ ಮುಂಚೆ ಮೈಖಲ್ ಅವರ ‘ಬೀಟ್ ಇಟ್’ ನಲ್ಲಿ ಡ್ಯಾನ್ಸರ್ ಆಗಿದ್ದರು. ‘ಥ್ರಿಲ್ಲರ್’ ಆಲ್ಬಂಗೆ ಸಹಾಯಕ ಡ್ಯಾನ್ಸರ್ ಆಗಿದ್ದರು. ಮೈಖಲ್ ಜಾಖ್ಸನ್ ಮಾತ್ರವೇ ಅಲ್ಲದೆ, ಮಡೋನಾ, ಜಾರ್ಜ್ ಹ್ಯಾರಿಸನ್ ಇನ್ನೂ ಹಲವು ಪಾಪ್ ತಾರೆಯರೊಟ್ಟಿಗೆ ವಿನ್ಸೆಂಟ್ ಕೆಲಸ ಮಾಡಿದ್ದಾರೆ. ಹಲವು ಹಾಲಿವುಡ್ ಸಿನಿಮಾಗಳಿಗೂ ಸಹ ವಿನ್ಸೆಂಟ್ ಕೊರಿಯೋಗ್ರಫಿ ಮಾಡಿದ್ದಾರೆ.

ಇನ್ನು ಪ್ರೇಮ್ ರಕ್ಷಿತ್, ವಿನ್ಸೆಂಟ್ ಅವರ ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ್ದು, ವಿನ್ಸೆಂಟ್ ಅವರಿಗೆ ಧನ್ಯವಾದ ಹೇಳಿದ್ದಾರೆ. ತಾವು ಬಾಲ್ಯದಿಂದಲೂ ‘ಸ್ಮೂತ್ ಕ್ರಿಮಿನಲ್’ನ ಅಭಿಮಾನಿ ಆಗಿರುವುದಾಗಿಯೂ ಹೇಳಿಕೊಂಡಿದ್ದಾರೆ. ಅಲ್ಲದೆ ತಮ್ಮ ಈ ಸಾಧನೆಗೆ ತಮ್ಮ ಗುರು ಆಗಿರುವ ರಾಜಮೌಳಿ ಕಾರಣ ಎಂದಿದ್ದಾರೆ. ‘ನಾನೂ ಸಹ ನಿಮ್ಮನ್ನು ಭೇಟಿ ಆಗಲು ಕಾತರನಾಗಿದ್ದೇನೆ’ ಎಂದಿದ್ದಾರೆ ಪ್ರೇಮ್ ರಕ್ಷಿತ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Friday Born Luck: ಶುಕ್ರವಾರ ಜನಿಸಿದವರ ಬಗೆಗಿನ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಪ್ರತಿ ದಿನಕ್ಕೂ ತನ್ನದೇ ಆದ ವಿಶೇಷತೆ ಇರುತ್ತದೆ. ಅದರಲ್ಲಿಯೂ ಶುಕ್ರವಾರ ಹುಟ್ಟಿದವರು ಸಾಕ್ಷಾತ್ ಲಕ್ಷ್ಮಿ ದೇವಿಯ ಅನುಗ್ರಹ ಪಡೆದವರು ಎಂಬ ನಂಬಿಕೆಯಿದೆ. ಶುಕ್ರವಾರ ಜನಿಸಿದ ಪುರುಷ ಮತ್ತು ಮಹಿಳೆಯರ ಸ್ವಭಾವ, ವೃತ್ತಿಜೀವನ ಮತ್ತು ಯಶಸ್ಸಿನ ಸೂತ್ರಗಳ ಬಗ್ಗೆ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ಅಕ್ಷಯ ಸಂಪತ್ತಿನ ಒಡೆಯರು:

ಶುಕ್ರವಾರ ಜನಿಸಿದವರ ಅತ್ಯಂತ ದೊಡ್ಡ ವಿಶೇಷತೆಯೆಂದರೆ ಅವರ ಆರ್ಥಿಕ ಸ್ಥಿತಿ. ಇವರು ಶ್ರೀಮಂತ ಕುಟುಂಬದಲ್ಲಿ ಜನಿಸದೇ ಇದ್ದರೂ, ತಮ್ಮ ಸ್ವಪ್ರಯತ್ನ ಮತ್ತು ಅದೃಷ್ಟದಿಂದ ಜೀವನದಲ್ಲಿ ಶೇ. 100ರಷ್ಟು ಯಶಸ್ಸನ್ನು ಸಾಧಿಸುತ್ತಾರೆ. ಇವರ ಕೈಯಲ್ಲಿ ಹಣ ಯಾವಾಗಲೂ ಇರುತ್ತದೆ. ಎಷ್ಟೇ ಖರ್ಚು ಮಾಡಿದರೂ ಯಾವುದೋ ಒಂದು ರೂಪದಲ್ಲಿ ಸಂಪತ್ತು ಇವರನ್ನು ಹುಡುಕಿಕೊಂಡು ಬರುತ್ತದೆ. “ಅಕ್ಷಯ ಸಂಪತ್ತು” ಇವರ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ.

ಆಕರ್ಷಕ ವ್ಯಕ್ತಿತ್ವ ಮತ್ತು ವಾಗ್ಮಿಗಳು:

ಇವರು ತಮ್ಮ ಮಾತು ಮತ್ತು ವ್ಯಕ್ತಿತ್ವದಿಂದ ಇತರರನ್ನು ಸುಲಭವಾಗಿ ಆಕರ್ಷಿಸುತ್ತಾರೆ. ಇವರ ಮಾತಿನ ಶೈಲಿ ಎಂತವರನ್ನೂ ಮಂತ್ರಮುಗ್ಧಗೊಳಿಸುವಂತಿರುತ್ತದೆ. ಜೀವನದಲ್ಲಿ ಯಾರೂ ಊಹಿಸದಂತಹ ಅದ್ಭುತ ಸಾಧನೆ ಮಾಡಿ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆಯುವ ಶಕ್ತಿ ಇವರಿಗಿದೆ. ಮತ್ತೊಂದು ವಿಶೇಷವೆಂದರೆ ಇವರಿಗೆ ಶಾಶ್ವತ ಶತ್ರುಗಳಿಲ್ಲ; ತಮ್ಮ ಮೃದು ಮಾತುಗಳಿಂದ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡಿಕೊಳ್ಳುವ ಕಲೆ ಇವರಿಗೆ ಸಿದ್ಧಿಸಿದೆ.

ವೃತ್ತಿ ಮತ್ತು ಯಶಸ್ಸಿನ ಕ್ಷೇತ್ರಗಳು:

ಶುಕ್ರವಾರ ಜನಿಸಿದವರು ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡುತ್ತಾರೆ. ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಇವರು ಮಿಂಚುತ್ತಾರೆ. ಇದಲ್ಲದೇ ಚಲನಚಿತ್ರ, ಟಿವಿ, ನಟನೆ ಮತ್ತು ನಿರ್ದೇಶನದಲ್ಲಿ ಇವರಿಗೆ ಹೆಚ್ಚಿನ ಯಶಸ್ಸು ಸಿಗುತ್ತದೆ. ಜವಳಿ ಉದ್ಯಮ, ಫ್ಯಾಶನ್ ಡಿಸೈನಿಂಗ್, ಸೌಂದರ್ಯ ವರ್ಧಕಗಳ ವ್ಯಾಪಾರ ಇವರಿಗೆ ಕೈಹಿಡಿಯುತ್ತದೆ.

ಇದನ್ನೂ ಓದಿ: ಈ ವರ್ಷ ಯುಗಾದಿ ಹಬ್ಬ ಯಾವಾಗ ? ಈ ದಿನ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಅದೃಷ್ಟದ ಸಂಖ್ಯೆ, ಬಣ್ಣ ಮತ್ತು ಮಂತ್ರ:

ಜೀವನದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸಿಕೊಳ್ಳಲು ಈ ಕೆಳಗಿನ ಅಂಶಗಳನ್ನು ಪಾಲಿಸುವುದು ಸೂಕ್ತ:

  • ಅದೃಷ್ಟ ಸಂಖ್ಯೆಗಳು: 6, 15 ಮತ್ತು 24. ಯಾವುದೇ ಶುಭ ಕಾರ್ಯಗಳನ್ನು ಈ ದಿನಾಂಕಗಳಲ್ಲಿ ಮಾಡಿದರೆ ಯಶಸ್ಸು ಖಚಿತ.
  • ಅದೃಷ್ಟದ ಬಣ್ಣ: ಗುಲಾಬಿ (Pink). ಈ ಬಣ್ಣದ ಬಳಕೆ ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ತುಂಬುತ್ತದೆ.
  • ದೈವ ಭಕ್ತಿ: ರಾಜರಾಜೇಶ್ವರಿ ಅಥವಾ ಲಲಿತಾ ದೇವಿಯನ್ನು ಆರಾಧಿಸುವುದು ಅತ್ಯಂತ ಶುಭದಾಯಕ.
  • ಮಂತ್ರ ಪಠಣೆ: ನಿತ್ಯವೂ “ಓಂ ಘ್ರುಮ್ ಶುಕ್ರಾಯ ನಮಃ” ಮಂತ್ರವನ್ನು ಜಪಿಸುವುದರಿಂದ ಮತ್ತು ಲಲಿತಾ ಸಹಸ್ರನಾಮ ಪಠಿಸುವುದರಿಂದ ಶೀಘ್ರವಾಗಿ ಅದೃಷ್ಟ ಲಭಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಶುಕ್ರವಾರ ಜನಿಸಿದವರ ಜೀವನವು ಚಿನ್ನದಂತೆ ಹೊಳೆಯುತ್ತದೆ. ಅವರು ಅಂದುಕೊಂಡಿದ್ದನ್ನು ಸಾಧಿಸುವ ಛಲ ಮತ್ತು ದೈವಬಲ ಎರಡೂ ಇವರ ಜೊತೆಗಿರುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯಾದಗಿರಿಯಲ್ಲಿ ಹೋಟೆಲ್​ಗಳ ಮೇಲೆ ದಿಢೀರ್ ದಾಳಿ: ಅಕ್ರಮವಾಗಿ ಇರಿಸಿದ್ದ 45 ಎಲ್​ಪಿಜಿ ಸಿಲಿಂಡರ್ ಜಪ್ತಿ

ಯಾದಗಿರಿ, ಮಾರ್ಚ್ 13: ಕರ್ನಾಟಕದ ಯಾದಗಿರಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮಾರ್ಚ್ 12 ರಂದು ಹೋಟೆಲ್‌ಗಳ ದಿಢೀರ್ ದಾಳಿ ನಡೆಸಿ ವಾಣಿಜ್ಯ ಉದ್ದೇಶಗಳಿಗೆ ಅಕ್ರಮವಾಗಿ ಬಳಸಲಾಗುತ್ತಿದ್ದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ವಿವಿಧ ಹೋಟೆಲ್ ಮತ್ತು ಆಹಾರ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಒಟ್ಟು 46 ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ. ಗೃಹಬಳಕೆಗೆ ಮೀಸಲಾದ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ಬಳಸುತ್ತಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ಈ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂಥ ಅಕ್ರಮಗಳ ವಿರುದ್ಧ ಇದೀಗ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನಲ್ಲಿ ಇವಿ ಬೈಕ್ ಸ್ಕ್ಯಾಮ್! ಕೋಟ್ಯಾಂತರ ರೂ. ವಂಚಿಸಿ ಸಿಕ್ಕಿಬಿದ್ರು ಆರೋಪಿಗಳು

ಬೆಂಗಳೂರು, ಮಾರ್ಚ್​ 13: ಇವಿ ಬೈಕ್ (EV Bike) ಮಾರಾಟದ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಕೇಶ್ ಹಾಗೂ ಹನುಮಂತರಾಜು ಬಿಲ್ಕರ್ ಎಂದು ಗುರುತಿಸಲಾಗಿದೆ. ರಾಕೇಶ್​ನನ್ನು ಪೀಣ್ಯಾ ಪೊಲೀಸರು ಬಂಧಿಸಿದ್ದು, ಹನುಮಂತರಾಜು ಬಿಲ್ಕರ್​ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಮೋದಿ ಸ್ಕೀಮ್ ಹೆಸರಿನಲ್ಲಿ ವಂಚನೆ

ಮೋದಿ ಸ್ಕೀಮ್ ಹೆಸರಿನಲ್ಲಿ 3250 ಇವಿ ಬೈಕ್ ಮಾರಾಟ ಮಾಡುವ ನೆಪದಲ್ಲಿ ಸುಮಾರು 35 ಸಾವಿರ ರೂಪಾಯಿ ಮೌಲ್ಯದ ಬೈಕ್‌ಗೆ ಒಂದೂವರೆ ಲಕ್ಷ ರೂಪಾಯಿ ಬಿಲ್ ಮಾಡಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು. ಸಬ್ಸಿಡಿ ಸೌಲಭ್ಯ ದೊರೆಯುತ್ತದೆ ಎಂದು ನಂಬಿಸಿ ಕೋಟಿ ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಗ್ರಾಹಕರಿಂದ ಕೇವಲ 20 ಸಾವಿರ ರೂಪಾಯಿ ಡಿಪಾಸಿಟ್ ಪಡೆದು ಅವರ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿತ್ತು. ಬಳಿಕ ಆ ದಾಖಲೆಗಳನ್ನು ಬಳಸಿ ಗ್ರಾಹಕರ ಹೆಸರಿನಲ್ಲಿ ಕೊಟಾಕ್ ಮಹೀಂದ್ರಾ ಬ್ಯಾಂಕ್‌ನಲ್ಲಿ ಸುಮಾರು 1.5 ಲಕ್ಷ ರೂಪಾಯಿ ಸಾಲ ಮಾಡಿಸಲಾಗುತ್ತಿತ್ತು. ಇದೇ ಹಣವನ್ನು ಇವಿ ಶೋರೂಮ್ ಮಾಲೀಕರು ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ ಬಸ್​​​ನಲ್ಲಿ 90 ಲಕ್ಷಕ್ಕೂ ಅಧಿಕ ಮೌಲ್ಯದ, ಚಿನ್ನ,ವಜ್ರಾಭರಣದ ಬ್ಯಾಗ್ ದರೋಡೆ: ಊಟಕ್ಕೆ ನಿಲ್ಲಿಸಿದಾಗ ಕೃತ್ಯ

‘ಆಪ್ಕಿ ಇವಿ’ ಶೋರೂಮ್‌ನ ಮಾಲೀಕರಾದ ರಾಕೇಶ್ ಮತ್ತು ಹನುಮಂತರಾಜು ಈ ವಂಚನೆಯ ಪ್ರಮುಖ ಆರೋಪಿಗಳಾಗಿದ್ದು, ಪ್ರಕರಣದಲ್ಲಿ ಕೊಟಾಕ್ ಮಹೀಂದ್ರಾ ಬ್ಯಾಂಕ್‌ನ ಮ್ಯಾನೇಜರ್ ಸಹ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಬಾಗಲಗುಂಟೆ ಹಾಗೂ ಪೀಣ್ಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ವರದಿ: ಮಂಜುನಾಥ್, ಟಿವಿ9 ಬೆಂಗಳೂರು 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version