ಬೆಂಗಳೂರು, ಆಗಸ್ಟ್ 16: ಇತ್ತೀಚೆಗೆ ಬೆಂಗಳೂರಿನಲ್ಲಿ (Bengaluru) ಐಷಾರಾಮಿ ಹೋಟೆಲ್‌ಗಳು, ಕ್ಯಾಂಟೀನ್‌ಗಳು ಮತ್ತು ಆಹಾರ ಸಂಗ್ರಹ ಕೇಂದ್ರಗಳ ಮೇಲೆ ದಾಳಿ ನಡೆಸಿ ಗಮನ ಸೆಳೆದಿರುವ ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ (FDA) ಇಲಾಖೆ ಮನೆ ಆಧಾರಿತ ಬೇಕರ್ಸ್, ಟಿಫಿನ್ ಸೇವೆಗಳು, ಇನ್‌ಸ್ಟಾಗ್ರಾಂ ಮೂಲಕ ಆಹಾರ ಮಾರಾಟ ಮಾಡುವವರು, ಕ್ಲೌಡ್ ಕಿಚನ್‌ಗಳು ಹಾಗೂ ತಾತ್ಕಾಲಿಕ ಆಹಾರ ಮಳಿಗೆಗಳಲ್ಲಿನ ಆಹಾರ ಪದಾರ್ಥಗಳ ಮೇಲೂ ಕಣ್ಣಿಟ್ಟಿದೆ. ಮನೆ ಆಧಾರಿತ ಆಹಾರ ಉದ್ಯಮಗಳು ಅಗತ್ಯ ಪರವಾನಗಿ ಪಡೆದಿವೆಯೇ ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸುತ್ತಿವೆಯೇ ಎಂದು ಪರಿಶೀಲನೆಗೆ ಮುಂದಾಗಿದೆ.
FSSAI ನೋಂದಣಿ ಕಡ್ಡಾಯ
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಯಮಗಳ ಪ್ರಕಾರ, ಪ್ರತಿಯೊಬ್ಬ ಆಹಾರ ಉದ್ಯಮ ನಿರ್ವಾಹಕರೂ ನೋಂದಣಿ ಅಥವಾ ಪರವಾನಗಿ ಹೊಂದಿರಬೇಕು. 2026ರ ಏಪ್ರಿಲ್ 1ರಿಂದ ಜಾರಿಯಲ್ಲಿರುವ ನಿಯಮಗಳ ಪ್ರಕಾರ, ವಾರ್ಷಿಕ ವಹಿವಾಟು ₹1.5 ಕೋಟಿವರೆಗೆ ಇದ್ದರೆ FSSAI ನೋಂದಣಿ ಸಾಕು. ₹1.5 ಕೋಟಿಯಿಂದ ₹50 ಕೋಟಿವರೆಗೆ ಇದ್ದರೆ ರಾಜ್ಯ ಪರವಾನಗಿ ಕಡ್ಡಾಯವಾಗಿರಬೇಕಿದೆ. ₹50 ಕೋಟಿಗಿಂತ ಹೆಚ್ಚು ವಹಿವಾಟು ಇದ್ದರೆ ಕೇಂದ್ರ ಪರವಾನಗಿ ಪಡೆಯಬೇಕು. ಈ ನಿಯಮಗಳು ತಾತ್ಕಾಲಿಕ ಆಹಾರ ಮಳಿಗೆಗಳಿಗೂ ಅನ್ವಯಿಸುತ್ತವೆ. ಪ್ರದರ್ಶನಗಳು, ಸಂಗೀತ ಕಾರ್ಯಕ್ರಮಗಳು, ಫ್ಲೀ ಮಾರ್ಕೆಟ್‌ಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಆಹಾರ ಮಾರಾಟ ಮಾಡುವವರೂ ಆಹಾರ ಸುರಕ್ಷತಾ ವ್ಯವಸ್ಥೆಯ ವ್ಯಾಪ್ತಿಯಲ್ಲೇ ಬರಲಿದ್ದಾರೆ.
ಸಾಮಾಜಿಕ ಜಾಲತಾಣಗಳು ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ ಆಹಾರ ಮಾರಾಟ ಮಾಡುವ ಮನೆ ಆಧಾರಿತ ಉದ್ಯಮಗಳಿಗೆ ಕಠಿಣ ನಿಯಮಗಳನ್ನು ರೂಪಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ. ಯಾರಾದರೂ ಆನ್‌ಲೈನ್ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆಹಾರ ವ್ಯವಹಾರವನ್ನು ಪ್ರಚಾರ ಮಾಡುತ್ತಿದ್ದರೆ, ಅವರು ನಿಯಮಗಳ ವ್ಯಾಪ್ತಿಗೆ ಬರಬೇಕು. ಇದಕ್ಕಾಗಿ ಕಠಿಣ ನೀತಿ ರೂಪಿಸುವುದು ಉತ್ತಮ. ಈ ವಿಚಾರವನ್ನು ಪರಿಶೀಲಿಸುತ್ತೇನೆ ಎಂದು ಖಾದರ್ ತಿಳಿಸಿದ್ದಾರೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 16, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಪರಾಭವ ನಾಮ ಸಂವತ್ಸರ, ದಕ್ಷಿಣಾಯಣ, ಶ್ರಾವಣ ಮಾಸದ ಈ ದಿನ ಚೌತಿ ತಿಥಿ, ಉತ್ತರಾ ನಕ್ಷತ್ರ, ಸಿದ್ಧ ಯೋಗ ಮತ್ತು ವಣಿಕ ಕರಣ ಇರಲಿದೆ.
ಇಂದು ವಿನಾಯಕಿ ಚತುರ್ಥಿ ಎಂದು ಆಚರಿಸಲಾಗುತ್ತದೆ. ಇದು ಶುಕ್ಲಪಕ್ಷದ ಚತುರ್ಥಿಯಾಗಿದ್ದು, ಆಸೆ ಆಕಾಂಕ್ಷೆಗಳ ಸಿದ್ಧಿಗಾಗಿ ವಿಶೇಷ ವ್ರತವನ್ನು ಆಚರಿಸುವ ದಿನವಾಗಿದೆ. ರವಿ ಕರ್ಕಾಟಕ ರಾಶಿಯಲ್ಲಿ ಮತ್ತು ಚಂದ್ರ ಕನ್ಯಾ ರಾಶಿಯ ಉತ್ತರಾ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಭಾನುವಾರದಂದು ರವಿಯ ನಕ್ಷತ್ರ ಬರುವುದು ಅತಿ ವಿಶೇಷ ಶುಭ ಯೋಗವನ್ನು ತರುತ್ತದೆ. ರಾಹುಕಾಲವು 5 ಗಂಟೆ 5 ನಿಮಿಷದಿಂದ 6 ಗಂಟೆ 37 ನಿಮಿಷದವರೆಗೆ ಇರುತ್ತದೆ. ಸರ್ವಸಿದ್ದಿ, ಸಂಕಲ್ಪ ಮತ್ತು ಶುಭಕಾಲ ಮಧ್ಯಾಹ್ನ 1 ಗಂಟೆ 58 ನಿಮಿಷದಿಂದ 3 ಗಂಟೆ 32 ನಿಮಿಷದವರೆಗೆ ಇರಲಿದೆ. ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರಿಗೆ ಆರ್ಥಿಕ ಸ್ಥಿತಿ, ವೃತ್ತಿ, ಆರೋಗ್ಯ ಮತ್ತು ಕೌಟುಂಬಿಕ ವಿಚಾರಗಳಲ್ಲಿನ ಭವಿಷ್ಯವನ್ನು ವಿವರವಾಗಿ ನೀಡಿದ್ದಾರೆ.
ಬೆಂಗಳೂರು, ಆಗಸ್ಟ್ 16:ಕರ್ನಾಟಕದಲ್ಲಿ ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (Pollution Under Control Certificate – PUCC) ಪಡೆಯಲು ವಾಹನ ಮಾಲೀಕರು ಇನ್ನು ಮುಂದೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ. ರಾಜ್ಯ ಸರ್ಕಾರವು ಎಲ್ಲ ವಾಹನ ವರ್ಗಗಳಿಗೆ ಅನ್ವಯವಾಗುವಂತೆ ಮಾಲಿನ್ಯ ಪರೀಕ್ಷಾ ಶುಲ್ಕವನ್ನು ಪರಿಷ್ಕರಿಸಿದೆ. ಮಾಲಿನ್ಯ ಪರೀಕ್ಷಾ ಕೇಂದ್ರಗಳ ನಿರ್ವಾಹಕರು ಕಾರ್ಯಾಚರಣೆ ವೆಚ್ಚ ಹೆಚ್ಚಿರುವುದನ್ನು ಉಲ್ಲೇಖಿಸಿ ಶುಲ್ಕ ಪರಿಷ್ಕರಣೆಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ, ಸಾರಿಗೆ ಇಲಾಖೆ ಆಗಸ್ಟ್ 13ರಂದು ಹೊಸ ದರಗಳ ಅಧಿಸೂಚನೆ ಹೊರಡಿಸಿದೆ. ಇದಕ್ಕೂ ಮೊದಲು ಕೊನೆಯ ಬಾರಿ ಏಪ್ರಿಲ್ 2022ರಲ್ಲಿ ಶುಲ್ಕ ಪರಿಷ್ಕರಿಸಲಾಗಿತ್ತು.
ದರ ಎಷ್ಟು ಹೆಚ್ಚಳ?
ದ್ವಿಚಕ್ರ ವಾಹನಗಳ PUCC ಶುಲ್ಕ 15 ರೂ. ಹೆಚ್ಚಳ
ಆಟೋರಿಕ್ಷಾಗಳ ಶುಲ್ಕ 5 ರೂ. ಏರಿಕೆ
ಪೆಟ್ರೋಲ್, LPG ಹಾಗೂ CNG ಚಾಲಿತ ನಾಲ್ಕು ಚಕ್ರ ವಾಹನಗಳಿಗೆ 35 ರೂ. ಹೆಚ್ಚಳ
ಎಲ್ಲ ವರ್ಗದ ಡೀಸೆಲ್ ವಾಹನಗಳ ಶುಲ್ಕ 40 ರೂ. ಏರಿಕೆ
ಇಂಧನ, ಬಾಡಿಗೆ, ಇಂಟರ್ನೆಟ್ ಸೇವೆ, ಉಪಕರಣಗಳ ನಿರ್ವಹಣೆ, ವಿದ್ಯುತ್ ಹಾಗೂ ಸಿಬ್ಬಂದಿ ವೇತನ ಸೇರಿದಂತೆ ಕಾರ್ಯಾಚರಣೆ ವೆಚ್ಚಗಳು ಗಣನೀಯವಾಗಿ ಹೆಚ್ಚಿರುವುದರಿಂದ ಶುಲ್ಕ ಪರಿಷ್ಕರಣೆ ಅಗತ್ಯವಾಗಿತ್ತು ಎಂದು ಪರೀಕ್ಷಾ ಕೇಂದ್ರಗಳ ನಿರ್ವಾಹಕರು ಇಲಾಖೆಗೆ ತಿಳಿಸಿದ್ದರು.
ಶುಲ್ಕ ಪರಿಷ್ಕರಣೆಯ ಜೊತೆಗೆ ಮಾಲಿನ್ಯ ಪರೀಕ್ಷಾ ಕೇಂದ್ರಗಳು ಕಡ್ಡಾಯವಾಗಿ ಪಾಲಿಸಬೇಕಾದ ಹೊಸ ನಿರ್ದೇಶನಗಳನ್ನೂ ಸಾರಿಗೆ ಇಲಾಖೆ ಹೊರಡಿಸಿದೆ.
ಪರೀಕ್ಷೆಗೆ ಬಳಸುವ ಗ್ಯಾಸ್ ಅನಾಲೈಸರ್‌ಗಳನ್ನು ನಿಯಮಿತವಾಗಿ ಮರುಮಾಪನ (ಕ್ಯಾಲಿಬ್ರೇಷನ್) ಮಾಡಬೇಕು.
ಕೊನೆಯ ಕ್ಯಾಲಿಬ್ರೇಷನ್ ದಿನಾಂಕವನ್ನು ವಾಹನ ಮಾಲೀಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು.
PUCC ಪ್ರಮಾಣಪತ್ರದಲ್ಲಿ ಕೈಬರಹದ ನಮೂದುಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಕೇಂದ್ರ ಮೋಟಾರು ವಾಹನ ನಿಯಮಗಳು-1989ರ ರೂಲ್ 115ರಲ್ಲಿ ನಿಗದಿಪಡಿಸಿರುವ ಮಿತಿಯೊಳಗೆ ವಾಹನದ ಹೊರಸೂಸುವಿಕೆ ಇದ್ದರೆ ಮಾತ್ರ ಪ್ರಮಾಣಪತ್ರ ನೀಡಬೇಕು.
ಪ್ರಮಾಣಪತ್ರದ ಅವಧಿ, ಹೋಲೋಗ್ರಾಂ ಕಡ್ಡಾಯ
ಭಾರತ್ ಸ್ಟೇಜ್-IV ಮತ್ತು ಭಾರತ್ ಸ್ಟೇಜ್-VI ವಾಹನಗಳಿಗೆ ನೀಡುವ PUCC ಪ್ರಮಾಣಪತ್ರವು 12 ತಿಂಗಳುಗಳವರೆಗೆ ಮಾನ್ಯವಾಗಿರುತ್ತದೆ.
ಪರೀಕ್ಷಾ ಕೇಂದ್ರಗಳು ಮಾಲಿನ್ಯ ಪರೀಕ್ಷೆ ಮತ್ತು ಉಪಕರಣಗಳ ನಿರ್ವಹಣೆಗೆ ಅಗತ್ಯ ಸ್ಥಳ ಹಾಗೂ ಸೌಲಭ್ಯಗಳನ್ನು ಹೊಂದಿರಬೇಕು. ಅಲ್ಲದೆ, ಕೇಂದ್ರದ ಪರವಾನಗಿಯನ್ನು ಗ್ರಾಹಕರಿಗೆ ಸುಲಭವಾಗಿ ಕಾಣುವ ಸ್ಥಳದಲ್ಲಿ ಪ್ರದರ್ಶಿಸುವುದು ಕಡ್ಡಾಯವಾಗಿದೆ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ಹಸ್ತಾ, ಯೋಗ : ಸಿದ್ಧ, ಕರಣ : ಕೌಲವ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 39 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 17:05 – 18:39, ಯಮಗಂಡ ಕಾಲ 12:24 – 13:58, ಗುಳಿಕ ಕಾಲ 15:31 – 17:05
ಮೇಷ ರಾಶಿ: ನಿಮ್ಮದಾದ ಕೆಲಸಗಳನ್ನು ಇಂದು ಬಾಕಿ ಉಳಿಸಿಕೊಳ್ಳುವುದು ಬೇಡ. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ನೀವು ಒಬ್ಬರೇ ತೆಗೆದುಕೊಳ್ಳಬೇಡಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು. ವಾದವು ಸಂಘರ್ಷವಾಗಿ ಬದಲಾಗಲಿದೆ. ಸೂಕ್ತ ಚಿಕಿತ್ಸೆ ಅವಶ್ಯಕ. ಯಾರನ್ನೂ ನೀವು ನಿಮಗಿಂತ ಕೆಳಗೆಂದು ಭಾವಿಸುವುದು ಬೇಡ. ನಿಮಗೇ ಗೊತ್ತಿಲ್ಲದೇ ಅನಾರೋಗ್ಯವು ಸರಿಯಾಗುವುದು. ಸಣ್ಣ ಮಟ್ಟಿನ ಗೌರವಕ್ಕೆ ಪಾತ್ರರಾಗುವಿರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗುವುದು.
ವೃಷಭ ರಾಶಿ: ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಆಲಸ್ಯತನವನ್ನು ತೋರಿಸುವರು. ನಿಮ್ಮ ಆಲೋಚನೆಗಳು ನಕಾರಾತ್ಮಕವಾಗಿ ಇರಲಿದೆ. ನೀವು ಇಂದು ಕುಲದೇವರ ದರ್ಶನಕ್ಕೆ ತೆರಳಲಿದ್ದೀರಿ. ನಿಮ್ಮ ಆಸಕ್ತಿಯ ಕೆಲಸವನ್ನು ಇಂದು ಮಾಡಲಾಗದೇ ಇದ್ದೀತು. ನಿಕ್ಷೇಪವಾಗಿ ಕೊಟ್ಟ ವಸ್ತುವನ್ನು ಪಡೆಯಲು ಸಾಧ್ಯವಾಗದು. ನಿಮ್ಮನ್ನೇ ಹೋಲುವಂತಹವರು ನಿಮಗೆ ಸಿಗಬಹುದು. ಹೊಸದನ್ನು ಕಲಿಯಲು ಮತ್ತು ನಿಮ್ಮ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಏನನ್ನಾದರೂ ಮಾಡುವುದು ಉತ್ತಮ.
ಮಿಥುನ ರಾಶಿ: ಯಾರದೋ ಆಡಿದ ಮಾತಿನಿಂದ ನೀವು ನಿಮ್ಮವರನ್ನು ಕಳೆದುಕೊಳ್ಳಬಹುದು. ನೀವು ಮಾಡಲು ಹೊರಟ ಕೆಲಸಕ್ಕೆ ಹಿತಶತ್ರುಗಳಿಂದಲೇ ತೊಂದರೆಯಾಗಬಹುದು. ಪರರು ಕೇಳಿದ ಸಹಾಯವನ್ನು ಮಾಡಿ. ಸರ್ಕಾರಿ ಕಾರ್ಯಕ್ಕೆ ನಿಮಗೆ ಅವಕಾಶಗಳು ಸಿಗದೇ ಹೋಗಬಹುದು. ತಿಳಿವಳಿಕೆ ಇಲ್ಲದೇ ಕಾರ್ಯವನ್ನು ಮಾಡಿ ಕೈ ಸುಟ್ಟುಕೊಳ್ಳಬೇಡಿ. ದೂರದ ಪ್ರಯಾಣಕ್ಕೆ ನೀವು ಮೊದಲು ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳುವಿರಿ.
ಕರ್ಕಾಟಕ ರಾಶಿ: ಉದ್ಯೋಗದಲ್ಲಿ ನಿಮ್ಮ ಶಿಸ್ತಿನ ಕೆಲಸಕ್ಕೆ ಪ್ರಶಂಸೆ ಸಿಗಲಿದೆ. ಪುಣ್ಯ ಸ್ಥಳಗಳಿಗೆ ಹೋಗುವ ಕನಸು ಭಗ್ನವಾಗುವುದು. ಆರ್ಥಿಕತೆಯನ್ನು ಸರಿದೂಗಿಸಲು ನೀವು ಏನಾದರೂ ಹೊಸ ಯೋಜನೆಯನ್ನು ರೂಪಿಸಬಹುದು. ಯಾರೋ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಲು ನಿಮಗೆ ಸಾಕಾಗುವುದು. ಸಮಯವನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ಯಾವುದೇ ಪ್ರೇರಣೆ ನಿಮಗೆ ಸಿಕ್ಕಿ, ಯೋಜನೆ ಬದಲಾಯಿಸುವಿರಿ. ಹೂಡಿಕೆ ನಿಮಗೆ ಪ್ರಶಸ್ತ ಎನಿಸಬಹುದು.
ಸಿಂಹ ರಾಶಿ: ನಿಮ್ಮ ಬಂಧುಮಿತ್ರರು ನಿಮಗೆ ಸಲ್ಲದ್ದನ್ನು ಮಾಡುವರು. ಅವರ ಜೊತೆ ಕಲಹವಾಗುವ ಸಾಧ್ಯತೆ ಇದೆ. ಆಸ್ತಿಯ ವಿಚಾರದಲ್ಲಿ ನಿಮಗೆ ಸಮಪಾಲ ಸಿಗದೇ ಹೋಗಬಹುದು. ನಿಮ್ಮನ್ನು ಯಾರಾದರೂ ರಹಸ್ಯವಾಗಿ ಗಮನಿಸುತ್ತಿದ್ದಾರೆ ಎಂಬ ಸಂದೇಹ ಬರಬಹುದು. ವಿದೇಶದ ಸಂಸ್ಥೆಗಳಿಂದ ಕರೆ ಬರುವ ಸಾಧ್ಯತೆ ಇದೆ. ನಿಮ್ಮ ತಂದೆಯ ಮಾರ್ಗದರ್ಶನದಲ್ಲಿ ಕುಟುಂಬ ವ್ಯವಹಾರವು ಮತ್ತೆ ಬೆಳೆಯುತ್ತದೆ. ವೃತ್ತಿಯಲ್ಲಿ ಜವಾಬ್ದಾರಿಯನ್ನು ಬೇರೆಯವರಿಗೆ ಹಾಕಿ, ಸುಮ್ಮನಾಗುವಿರಿ.
ಕನ್ಯಾ ರಾಶಿ: ಸಜ್ಜನರ ಸಹವಾಸದಿಂದ ಸಂತೋಷ ಸಿಗಲಿದೆ. ನಿಮ್ಮನ್ನು ಗೌರವಿಸಿದವರಿಗೆ ಪ್ರತಿಯಾಗಿ ಗೌರವಿಸಿ. ಅನಾರೋಗ್ಯದ ಕಾರಣ ನೀವು ಸಾಲವನ್ನು ಮಾಡಬೇಕಾಗಬಹುದು. ನಿಮ್ಮ ಕೂಡಿಟ್ಟ ಹಣವು ಆಪತ್ಕಾಲದಲ್ಲಿ ಸಿಗುವುದು ಕಷ್ಟವಾದೀತು. ಭೂಮಿಯ ಖರೀದಿಯು ನಿಮಗೆ ಅನಿವಾರ್ಯವಾಗಲಿದೆ. ಅದನ್ನು ಬದಲಿಸಿಕೊಂಡು ಮುಂದುವರಿಯಿರಿ. ಹೂಡಿಕೆಯಲ್ಲಿ ಅಜ್ಞಾನದ ಕಾರಣದಿಂದ ನಷ್ಟವಾಗುವುದು. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು.
ತುಲಾ ರಾಶಿ: ವಿದ್ಯಾರ್ಥಿಗಳು ಅಲ್ಪ ಯಶಸ್ಸಿಗೆ ಸಂತೋಷಪಡಬೇಕಾದೀತು. ಅಧಿಕ ಸಂಪಾದನೆಗೆ ಹೆಚ್ಚು ಶ್ರಮವೂ ಬೇಕು. ವಿದೇಶದಲ್ಲಿ ಇರುವವರಿಗೆ ಅಶುಭವಾರ್ತೆಯು ಬರಬಹುದು. ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ನೀವೇ ಅಪತ್ತಿಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಅತಿಯಾದ ನಗುವು ಅಪಾಯಕಾರಿ. ನಿಮ್ಮ ಮನಃಸ್ಥಿತಿಯನ್ನು ಯಾರಾದರೂ ದುರುಪಯೋಗ ಮಾಡಿಕೊಳ್ಳಬಹುದು. ಕಾರ್ಯದಲ್ಲಿ ಎಲ್ಲಿಯೂ ತಪ್ಪಾಗದಂತೆ ನೋಡಿಕೊಳ್ಳಿ.
ವೃಶ್ಚಿಕ ರಾಶಿ: ಯಾವುದಾದರೂ ಕಾರ್ಯಕ್ಕೆ ನಿಮ್ಮವರ ವಿರೋಧ ಬರಬಹುದು. ಸಂಗಾತಿಯ ಜೊತೆ ಇಂದು ಹಣದ ವಿಚಾರದಲ್ಲಿ ವೈಮನಸ್ಯ ಉಂಟಾಗಲಿದೆ. ಇಂದು ನಿಮ್ಮ ಉತ್ಸಾಹವು ಕಡಿಮೆ ಇರಲಿದೆ. ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಕಷ್ಟಪಡುವಿರಿ. ನಿಮ್ಮ ಸ್ವಾರ್ಥ ಮನೋಭಾವವು ನಿಮ್ಮನ್ನು ಸಣ್ಣವರನ್ನಾಗಿ ಮಾಡಬಹುದು. ಇಂದು ನಿಮ್ಮ ಸಂಗಾತಿಯಾಗುವವನು ನಿಮ್ಮ ಬಗ್ಗೆ ಅತಿಯಾದ ಕಾಳಜಿ ಉಳ್ಳವನು. ನಿಮ್ಮ ವಿಷಯಕ್ಕೆ ಸ್ನೇಹಿತರು ನಗುವರು.
ಧನು ರಾಶಿ: ಆತುರದ ವ್ಯವಹಾರದಿಂದ ನಿಮಗೆ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ನೀವು ಅಂದುಕೊಳ್ಳುವ ವಿಚಾರಗಳು ನಿಮ್ಮದಷ್ಟೇ ಆಗಿರುವುದಿಲ್ಲ. ಶತ್ರುಗಳ ಮೇಲೆ ನಿಮ್ಮ ಗಮನವು ಇರಲಿದೆ. ನಿಮ್ಮ ಅನಾರೋಗ್ಯವನ್ನು ನಕಾರಾತ್ಮಕವಾಗಿ ನೋಡಿಕೊಳ್ಳದೇ ಸಕಾರಾತ್ಮಕವಾಗಿ ಚಿಂತಿಸಿದರೆ ಆರೋಗ್ಯದಲ್ಲಿ ಸುಧಾರಣೆ. ನಿಮ್ಮ ಹಾರಿಕೆಯ ಮಾತುಗಳು ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು. ಯಂತ್ರದಿಂದ ಕೆಲಸ ಮಾಡುವವರಿಗೆ ಕಷ್ಟವಾದೀತು.
ಮಕರ ರಾಶಿ: ಕೇಳಿದ್ದನ್ನು ಸಂಗಾತಿಯಿಂದ ಪಡೆಯಲು ಅಸಾಧ್ಯವಾದೀತು. ವಾಯುವಿಹಾರಕ್ಕೆ ನೀವು ಸಂಗಾತಿಯ ಜೊತೆ ಹೋಗಬಹುದು. ಆರೋಗ್ಯವನ್ನು ನೀವು ಗಮನದಲ್ಲಿಟ್ಟುಕೊಂಡು ಆಹಾರವನ್ನು ಸ್ವೀಕರಿಸಿ. ಅನ್ಯರಿಗೆ ಸಹಕಾರ ನೀಡುವ ಗುಣವನ್ನು ಮೆಚ್ಚಿಕೊಳ್ಳುವರು. ಒರಟು ಸ್ವಭಾವವು ಇಷ್ಟವಾಗದು. ಹಿರಿಯ ಅಧಿಕಾರಿಗಳ ಸಹಾಯದಿಂದ ನಿಮ್ಮ ಸಂಕೀರ್ಣ ಕಾರ್ಯಗಳು ಸಹ ಇಂದು ಪೂರ್ಣವಾಗಲಿದೆ. ಹಿರಿಯರಿಂದ ಆಶೀರ್ವಾದ ಸಿಗಲಿದೆ.
ಕುಂಭ ರಾಶಿ: ಸಿರಿವಂತರಾಗಲು ನೀವು ಆಯ್ಕೆ ಮಾಡಿಕೊಂಡ ದಾರಿಯು ಸರಿಯಿರದು. ನಿಮ್ಮ ಬಗ್ಗೆಯೇ ನೀವು ಅವಲೋಕನ ಮಾಡಿಕೊಂಡು ನಿರ್ಧಾರವನ್ನು ತೆಗೆದುಕೊಳ್ಳಿ. ನೀವು ಇಂದು ಸ್ವಭಾವವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಚಿಕಿತ್ಸೆಗೆ ಸಂಬಂಧಿಸಿದಂತೆ ಅನೇಕ ವೈದ್ಯರ ಸಲಹೆಯನ್ನು ಪಡೆಯುವಿರಿ. ಬೆಲೆಯುಳ್ಳ ಅಮೂಲ್ಯ ವಸ್ತುಗಳು ಕಣ್ಮರೆಯಾಗಬಹುದು. ಆರೋಪ ಪ್ರತ್ಯಾರೋಪಗಳಿಂದ ಸಮಯ ವ್ಯರ್ಥವಾಗಲಿದೆ.
ಮೀನ ರಾಶಿ: ದೊಡ್ಡವರ ಜೊತೆ ಸಹಜವಾಗಿ ಪ್ರೀತಿ ಗೌರವದಿಂದ ವರ್ತಿಸಿ. ಕೆಲವು ನಿರ್ಧಾರಗಳಿಂದ ಆರ್ಥಿಕವಾಗಿ ನಷ್ಟವಾಗುವುದು. ಯಾರ ಮೇಲೂ ಒತ್ತಡವನ್ನು ಹೇರುವುದು ಬೇಡ. ಮಾತಿನಿಂದ ಯಾವುದೇ ವ್ಯವಹಾರ ಸಿಂಧುವಾಗದು. ಅವರವರ ಬದುಕು ಅವರವರಿಗೇ ಇರಲಿದೆ. ಸಹಜ ಬೆಳವಣಿಗೆಗೆ ನಿಮ್ಮ ಒತ್ತು ಹೆಚ್ಚಿರಲಿ. ಮಿತ್ರರ ಜೊತೆ ಹೆಚ್ಚು ಕಾಲವನ್ನು ಕಳೆಯುವಿರಿ. ನೀವು ಒಂಟಿಯಾಗೇ ಇರಲು ಇಚ್ಛಿಸುವವರು, ಹಾಗೆಯೇ ಇರುವುದು ಒಳ್ಳೆಯದು.
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಸಿನಿಮಾದ ಬಗ್ಗೆ ಭಾರತದಲ್ಲಿ ಮಾತ್ರವೇ ಅಲ್ಲ ವಿದೇಶಗಳಲ್ಲೂ ಸಹ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾ ಮೂಲಕ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎನಿಸಿಕೊಂಡಿದ್ದರು. ಈಗ ‘ಟಾಕ್ಸಿಕ್’ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇದೀಗ ‘ಆಪ್ ಕಿ ಅದಾಲತ್’ ಸಂದರ್ಶನದಲ್ಲಿ ಭಾಗಿ ಆಗಿರುವ ನಟ ಯಶ್, ತಮ್ಮ ಸಂಭಾವನೆ ವಿಷಯವನ್ನು ಹಂಚಿಕೊಂಡಿದ್ದಾರೆ. ತಾವು ಸಂಭಾವನೆಯೇ ಪಡೆಯುವುದಿಲ್ಲ ಎಂದಿದ್ದಾರೆ ನಟ.
‘ಒಂದು ಸಿನಿಮಾಕ್ಕೆ 50 ಕೋಟಿ ಕೇಳುತ್ತೀರಂತೆ?’ ಎಂದು ಸಂದರ್ಶಕ ರಜತ್ ಶರ್ಮಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಶ್, ‘ಇಲ್ಲ ಅದಕ್ಕಿಂತಲೂ ಹೆಚ್ಚು ಪಡೆಯುತ್ತೇನೆ’ ಎಂದಿದ್ದಾರೆ. ‘ಮೌಲ್ಯ ಇದ್ದರಷ್ಟೆ ಹಣ ಕೊಡುತ್ತಾನೆ. ನನಗೆ ಕೊಡುತ್ತಿದ್ದಾರೆ ಎಂದರೆ ಮೌಲ್ಯ ಇದೆ ಎಂದು ಅರ್ಥ’ ಎಂದಿದ್ದಾರೆ ಯಶ್. ಮುಂದುವರೆದು ಮಾತನಾಡಿದ ಯಶ್, ‘ನಾನು ಮೊದಲಿನಿಂದಲೂ ಸಂಭಾವನೆ ಪಡೆಯುವುದಿಲ್ಲ ಸರ್, ನಾನು ಪಾರ್ಟನರ್ಶಿಪ್ನಲ್ಲಿ ಕೆಲಸ ಮಾಡುತ್ತೀನಿ. ‘ಕೆಜಿಎಫ್’ ಮಾತ್ರವಲ್ಲ, ಅದಕ್ಕೆ ಮುಂಚಿನಿಂದಲೂ ನಾನು ಪಾರ್ಟನರ್ಶಿಪ್ನಲ್ಲೇ ಕೆಲಸ ಮಾಡುತ್ತಿದ್ದೀನಿ’ ಎಂದಿದ್ದಾರೆ ಯಶ್.
‘ನಮ್ಮನ್ನು ನಂಬಿ ಕೆಲವರು ಹಣ ಹಾಕಿರುತ್ತಾರೆ. ನಾನೂ ಸಹ ಅವರೊಟ್ಟಿಗೆ ಸೇರಿಕೊಳ್ಳುತ್ತೇನೆ. ಗೆದ್ದರೆ ಇಬ್ಬರೂ ಗೆಲ್ಲುತ್ತೇವೆ, ಸೋತರೆ ಇಬ್ಬರೂ ಕಳೆದುಕೊಳ್ಳುತ್ತೇವೆ. ಹಣ ಪಡೆದುಕೊಂಡು, ಸಿನಿಮಾ ಗೆದ್ದರೂ, ಸೋತರೂ ಸಂಬಂಧ ಇಲ್ಲ ಎನ್ನುವ ವ್ಯಕ್ತಿ ನಾನಲ್ಲ. ಮೊದಲಿನಿಂದಲೂ ನಾನು ಸಹ ನಿರ್ಮಾಪಕನಾಗಿಯೇ ಕೆಲಸ ಮಾಡುತ್ತಾ ಬಂದಿದ್ದೇನೆ. ಸಂಭಾವನೆ ಪಡೆಯುವುದಿಲ್ಲ ಬದಲಿಗೆ ಸಹ ನಿರ್ಮಾಪಕನಾಗಿ ಕೆಲಸ ಮಾಡುತ್ತೇನೆ’ ಎಂದಿದ್ದಾರೆ ನಟ.
ಯಶ್ ಅವರು ಮೊದಲಿನಿಂದಲೂ ತಾವು ನಟಿಸುವ ಸಿನಿಮಾಗಳಲ್ಲಿ ಸಹ ನಿರ್ಮಾಪಕನಾಗಿ ಇರುತ್ತಾರೆ. ಅವರೇ ಹೇಳಿರುವಂತೆ ‘ಕೆಜಿಎಫ್’ ಸಿನಿಮಾಕ್ಕೂ ಬಹಳ ಮೊದಲಿನಿಂದಲೇ ಅದನ್ನು ಅವರು ಪಾಲಿಸಿಕೊಂಡು ಬಂದಿದ್ದಾರೆ. ‘ಸಿನಿಮಾ ಗೆದ್ದರೆ ನನಗೆ ಲಾಭ ಬರುತ್ತದೆ, ಆದರೆ ಲಾಭ ತೆಗೆದುಕೊಂಡು ಸುಮ್ಮನೆ ಕೂರುವುದಿಲ್ಲ, ಬದಲಿಗೆ ಇನ್ನೂ ಒಳ್ಳೆಯ ಸಿನಿಮಾ ನೀಡುವ ಪ್ರಯತ್ನ ಮಾಡುತ್ತೇನೆ’ ಎಂದಿದ್ದಾರೆ ಯಶ್.
ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಸಂಪೂರ್ಣವಾಗಿ ಭಾರತ ತಂಡದ ಪರವಾಗಿತ್ತು. ಭಾರತೀಯ ಬ್ಯಾಟ್ಸ್‌ಮನ್‌ಗಳು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡ ಹಾಕಿದರು. ಇದರ ಫಲವಾಗಿ ಟೀಂ ಇಂಡಿಯಾ ದಿನದಾಟದಂತ್ಯಕ್ಕೆ 2 ವಿಕೆಟ್‌ಗಳನ್ನು ಕಳೆದುಕೊಂಡು 288 ರನ್ ಕಲೆಹಾಕಿ ಪಂದ್ಯದಲ್ಲಿ ಭಿಗಿ ಹಿಡಿತ ಸಾಧಿಸಿದೆ. ಆದಾಗ್ಯೂ, ಮಧ್ಯಂತರ ಮಳೆಯಿಂದಾಗಿ ಆಟಕ್ಕೆ ಹಲವಾರು ಬಾರಿ ಅಡ್ಡಿಯುಂಟಾಯಿತು. ಇದರ ಪರಿಣಾಮವಾಗಿ ಮೊದಲ ದಿನ ಪೂರ್ಣ 90 ಓವರ್‌ಗಳನ್ನು ಬೌಲ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಎರಡನೇ ದಿನದಾಟವನ್ನು ನಿಗದಿತ ಸಮಯಕ್ಕೂ ಮುಂಚಿತವಾಗಿ ಆರಂಭಿಸಲು ನಿರ್ಧರಿಸಲಾಗಿದೆ.
ಮೊದಲ ದಿನ 73 ಓವರ್‌ಗಳ ಆಟ
ಮೊದಲ ದಿನದಂದು ಗಾಲೆಯಲ್ಲಿ ಹವಾಮಾನವು ಆಗಾಗ್ಗೆ ಬದಲಾಗುತ್ತಿತ್ತು. ಎರಡನೇ ಸೆಷನ್ ಆರಂಭಕ್ಕೂ ಮುನ್ನ ಮಳೆಯಿಂದಾಗಿ ಆಟಗಾರರು ಮತ್ತು ಅಭಿಮಾನಿಗಳು ಬಹಳ ಸಮಯ ಕಾಯಬೇಕಾಯಿತು. ಆದಾದ ನಂತರೂ ಮಳೆಯಿಂದಾಗಿ ಕೊನೆಯ ಸೆಷನ್ಗೂ ಅಡ್ಡಿಯುಂಟಾಯಿತು. ಇದರ ಪರಿಣಾಮವಾಗಿ ಪೂರ್ಣ 90 ಓವರ್‌ಗಳ ಆಟ ನಡೆಯಲಿಲ್ಲ. ಬದಲಿಗೆ ಮೊದಲ ದಿನ 73 ಓವರ್‌ಗಳ ಆಟ ನಡೆಯಿತು. ಹೀಗಾಗಿ ಬಾಕಿ ಉಳಿದಿರುವ 17 ಓವರ್‌ಗಳನ್ನು ಎರಡನೇ ದಿನದಂದು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ ಪಂದ್ಯದ ಅಧಿಕಾರಿಗಳು ಎರಡನೇ ದಿನದ ವೇಳಾಪಟ್ಟಿಯನ್ನು ಮರು ನಿಗದಿಪಡಿಸುವ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಮೊದಲ ದಿನದ ಆಟ ಬೆಳಿಗ್ಗೆ 10:00 ಗಂಟೆಗೆ ಆರಂಭವಾಗಿತ್ತು. ಆದರೆ, ಎರಡನೇ ದಿನದ ಆಟ ಬೆಳಿಗ್ಗೆ 9:45 ಕ್ಕೆ ಆರಂಭವಾಗಲಿದೆ. ಹೆಚ್ಚುವರಿಯಾಗಿ, ಓವರ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮೊದಲ ದಿನದ ನಷ್ಟವನ್ನು ಸರಿದೂಗಿಸಲು ಎರಡನೇ ದಿನಕ್ಕೆ ಒಟ್ಟು 98 ಓವರ್‌ಗಳನ್ನು ಯೋಜಿಸಲಾಗಿದೆ. ಎರಡನೇ ದಿನದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಮೂರನೇ ದಿನದ ಆಟ ಕೂಡ ಬೇಗನೇ ಆರಂಭವಾಗಬಹುದು.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತ ಎರಡು ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿದೆ. ತಂಡದ ಪರ ದೇವದತ್ ಪಡಿಕ್ಕಲ್ ಅದ್ಭುತ ಇನ್ನಿಂಗ್ಸ್ ಆಡಿ 131 ರನ್ ಗಳಿಸಿ ಅಜೇಯರಾಗಿ ಉಳಿದರೆ, ಕೆಎಲ್ ರಾಹುಲ್ ಕೂಡ 77 ರನ್ ಗಳಿಸಿ ಗಾಯದಿಂದಾಗಿ ಆಟದಿಂದ ನಿವೃತ್ತರಾಗಿದ್ದಾರೆ. ಉಳಿದಂತೆ ಯಶಸ್ವಿ ಜೈಸ್ವಾಲ್ 32 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರೆ, ರಿಷಭ್ ಪಂತ್ 27 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇದೀಗ ಟೀಂ ಇಂಡಿಯಾ ಪಂದ್ಯದ ಎರಡನೇ ದಿನದಂದು ದೊಡ್ಡ ಮೊತ್ತವನ್ನು ಕಲೆಹಾಕುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಆಗಸ್ಟ್ 15: ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೂಚನೆ ಮೇರೆಗೆ ಗಂಡಭೇರುಂಡ ಲಾಂಛನ ಹಾಗೂ ಕನ್ನಡ ಅಂಕಿಗಳನ್ನು ಒಳಗೊಂಡ ವಿಶೇಷವಾದ ಹೆಚ್‌ಎಂಟಿ (HMT) ನೂತನ ವಾಚ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್‌ಎಂಟಿ ಕೇಂದ್ರದಲ್ಲಿ ಈ ವಾಚ್‌ಗಳನ್ನು ಖರೀದಿಸಲು ಸಾರ್ವಜನಿಕರು ಮುಗಿಬಿದ್ದಿದ್ದರು. ಈ ವಿಶೇಷ ವಾಚ್‌ಗಳನ್ನು ಖರೀದಿಸಲು ಜನರು ಮುಂಜಾನೆಯಿಂದಲೇ ಬರೋಬ್ಬರಿ 2 ಕಿ.ಮೀಗೂ ಅಧಿಕ ಉದ್ದದ ಕ್ಯೂನಲ್ಲಿ ನಿಂತಿದ್ದು, ಭಾರೀ ಬೇಡಿಕೆ ಕಂಡುಬಂದಿದೆ.
ಅನುರಾಗ್ ಕಶ್ಯಪ್ (Anurag Kashyap) ಬಾಲಿವುಡ್ನ ಸ್ಟಾರ್ ನಿರ್ದೇಶಕ. ಆದರೆ ಅವರು ಬಾಲಿವುಡ್ ಬಿಟ್ಟು ದಕ್ಷಿಣಕ್ಕೆ ಬಂದಿದ್ದಾರೆ. ಕಳೆದ ಕೆಲ ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿರುವ ಅನುರಾಗ್ ಕಶ್ಯಪ್, ಬಾಲಿವುಡ್ ಬಗ್ಗೆ ಅಲ್ಲಿನ ಕೆಟ್ಟ ಪದ್ಧತಿಗಳ ಬಗ್ಗೆ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಅನುರಾಗ್ ಕಶ್ಯಪ್ ಅವರು ತಮ್ಮ ‘ಗರ್ಲ್ಫ್ರೆಂಡ್’ ಜೊತೆಗೆ ಲಿವಿನ್ನಲ್ಲಿದ್ದಾರೆ. ಅನುರಾಗ್ ಕಶ್ಯಪ್ ಅವರು ತಮಗಿಂತಲೂ 20 ವರ್ಷ ಕಿರಿಯವರಾದ ಶುಭ್ರತಾ ಶೆಟ್ಟಿಯ ಜೊತೆಗೆ ಪ್ರೀತಿಯಲ್ಲಿದ್ದಾರೆ. ಕಳೆದ ಒಂದು ದಶಕದಿಂದಲೂ ಇವರಿಬ್ಬರು ಒಟ್ಟಿಗಿದ್ದಾರೆ. ಇತ್ತೀಚೆಗಿನ ಸಂದರ್ಶನದಲ್ಲಿ ಅನುರಾಗ್ ಕಶ್ಯಪ್ ಅವರು ಮದುವೆಯ ಬಗ್ಗೆಯೂ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಅನುರಾಗ್ ಕಶ್ಯಪ್, ತಮ್ಮ ಹಾಗೂ ಶುಭ್ರತಾ ನಡುವಿನ ವಯಸ್ಸಿನ ಅಂತರದಿಂದಾಗಿ ಎದುರಿಸಿರುವ ಟೀಕೆ, ವ್ಯಂಗ್ಯ, ಮದುವೆಯಾಗುವ ಯೋಚನೆ, ಶುಭ್ರತಾರ ಭೇಟಿಯ ಬಳಿಕ ತಮ್ಮಲ್ಲಾದ ಬದಲಾವಣೆ ಇನ್ನೂ ಹಲವು ವಿಷಯಗಳ ಬಗ್ಗೆ ಅನುರಾಗ್ ಕಶ್ಯಪ್ ಮಾತನಾಡಿದ್ದಾರೆ.
ಅನುರಾಗ್ ಕಶ್ಯಪ್ ಅವರು ಶುಭ್ರಾ ಶೆಟ್ಟಿಯ ಜೊತೆಗಿನ ಸಂಬಂಧದಿಂದ ತಾವು ಶಾಂತವಾಗಿರುವುದಾಗಿ ಹೇಳಿದ್ದಾರೆ. ಮದುವೆಯಾಗುವ ಯೋಜನೆಗಳ ಬಗ್ಗೆ ಕೇಳಿದಾಗ, ಶುಭ್ರಾಗೆ ಮದುವೆಯಲ್ಲಿ ನಂಬಿಕೆಯಿಲ್ಲ. ನಾನು ಶುಭ್ರಾ ಜೊತೆಗೆ ಇದ್ದಾಗ ತುಂಬಾ ಸಂತೋಷವಾಗಿರುತ್ತೇನೆ. ನಾನು ಶುಭ್ರ ಜೊತೆ ಇರಲು ಬಯಸುತ್ತೇನೆ. ಅದಕ್ಕೆ ಏನಾದರೂ ಸರಿ, ಮದುವೆಯಾದರೂ ಸರಿ, ಲಿವಿನ್ ಆದರೂ ಸರಿ ಎಂದಿದ್ದಾರೆ.
ಶುಭ್ರಾ ಅನ್ನು ಭೇಟಿಯಾಗುವ ಮೊದಲು, ತನಗೆ ಸಾಯುವ ಭಯವಿರಲಿಲ್ಲ ಮತ್ತು ಅಪಘಾತವಾದರೂ ತನಗೆ ಕಾಳಜಿಯಿರಲಿಲ್ಲ, ಆದರೆ ಮೊದಲ ಬಾರಿಗೆ, ಬದುಕಲು ಯೋಗ್ಯವಾದದ್ದನ್ನು ಕಂಡುಕೊಂಡಿದ್ದರಿಂದ ಸಾಯಲು ಬಯಸುವುದಿಲ್ಲ, ಈಗ ಸಾವಿನ ಬಗ್ಗೆ ಭಯ ಮೂಡಿದೆ, ಬದುಕುವ ಆಸೆ ಮೂಡಿದೆ ಎಂದು ಹೇಳಿದರು.
ವಯಸ್ಸಿನ ಅಂತರದ ಕಾರಣಕ್ಕೆ ಸಾಕಷ್ಟು ಟೀಕೆ ಅನುಭವಿಸಿರುವುದಾಗಿ ಅನುರಾಗ್ ಕಶ್ಯಪ್ ಹೇಳಿದರು. ಅನುರಾಗ್ ಕಶ್ಯಪ್ ಅವರು ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದಾರೆ. ಮೊದಲಿಗೆ ಎಡಿಟರ್ ಆಗಿದ್ದ ಆರತಿ ಬಜಾಜ್ ಅವರನ್ನು ವಿವಾಹವಾದರು. ಅವರಿಗೆ ಒಬ್ಬ ಹೆಣ್ಣು ಮಗಳಿದ್ದು, ಅವರು ಇತ್ತೀಚೆಗಷ್ಟೆ ಮದುವೆ ಆಗಿದ್ದಾರೆ. ಬಳಿಕ ಅವರು ನಟಿ ಕಲ್ಕಿ ಜೊತೆ ವಿವಾಹವಾದರು. 2013 ರಲ್ಲಿ ಇಬ್ಬರೂ ಬೇರಾದರು. ಬಳಿಕ ಅವರು 2016ರಲ್ಲಿ ಶುಭ್ರ ಜೊತೆಗೆ ರಿಲೇಷನ್ಶಿಪ್ ಆರಂಭಿಸಿದರು.
ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಒತ್ತಡ, ತಡರಾತ್ರಿಯವರೆಗೆ ಮೊಬೈಲ್ ಬಳಕೆ, ಅನಿಯಮಿತ ಆಹಾರ ಪದ್ಧತಿ ಮತ್ತು ಬದಲಾಗಿರುವ ನಿದ್ರೆಯ ಸಮಯದಿಂದಾಗಿ ಹಲವರ ನಿದ್ರೆಯ ಗುಣಮಟ್ಟ ಕುಸಿಯುತ್ತಿದೆ. ರಾತ್ರಿ ಸರಿಯಾಗಿ ನಿದ್ರೆ ಬರದಿರುವುದು ಕೇವಲ ಮರುದಿನದ ಆಯಾಸಕ್ಕೆ ಕಾರಣವಾಗುವುದಿಲ್ಲ ಮನಸ್ಥಿತಿ ಮತ್ತು ದೈನಂದಿನ ಕಾರ್ಯಗಳ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ ನಿದ್ರೆ ಚೆನ್ನಾಗಿ ಬರಲು ಕೇವಲ ಹೆಚ್ಚು ಹೊತ್ತು ಹಾಸಿಗೆಯಲ್ಲಿ ಇರುವುದು ಸಾಕಾಗುವುದಿಲ್ಲ. ನಿಯಮಿತ ನಿದ್ರೆಯ ಸಮಯ ಮತ್ತು ಮಲಗುವ ಮುನ್ನದ ಅಭ್ಯಾಸಗಳಿಗೂ ಹೆಚ್ಚಿನ ಮಹತ್ವವಿದೆ.
ನಿದ್ರೆ ಉತ್ತಮವಾಗಲು ರಾತ್ರಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ಪ್ರತಿದಿನ ಒಂದೇ ಸಮಯಕ್ಕೆ ಮಲಗಿ, ಏಳುವುದಕ್ಕೆ ಪ್ರಯತ್ನಿಸಿ: ಪ್ರತಿದಿನ ಸಾಧ್ಯವಾದಷ್ಟು ಒಂದೇ ಸಮಯಕ್ಕೆ ಮಲಗುವುದು ಮತ್ತು ಬೆಳಗ್ಗೆ ಏಳುವುದು ದೇಹದ ನೈಸರ್ಗಿಕ ಬಾಡಿ ಕ್ಲಾಕ್ ಅನ್ನು ನಿಯಮಿತವಾಗಿಡಲು ಸಹಾಯ ಮಾಡಬಹುದು. ವಾರಾಂತ್ಯದಲ್ಲೂ ನಿದ್ರೆಯ ಸಮಯದಲ್ಲಿ ಹೆಚ್ಚಿನ ವ್ಯತ್ಯಾಸವಾಗದಂತೆ ನೋಡಿಕೊಳ್ಳುವುದು ಉತ್ತಮ.
ಮಲಗುವ ಮುನ್ನ ಮೊಬೈಲ್ ಬಳಕೆ ಕಡಿಮೆ ಮಾಡಿ: ರಾತ್ರಿ ಮಲಗುವ ಮುನ್ನ ಮೊಬೈಲ್, ಟಿವಿ, ಲ್ಯಾಪ್‌ಟಾಪ್‌ನಂತಹ ಸ್ಕ್ರೀನ್‌ಗಳನ್ನು ದೀರ್ಘಕಾಲ ನೋಡುವುದನ್ನು ತಪ್ಪಿಸಿ. ಸ್ಕ್ರೀನ್ ಬಳಕೆ ಮನಸ್ಸನ್ನು ಹೆಚ್ಚು ಸಕ್ರಿಯವಾಗಿರಿಸಬಹುದು. ಆದ್ದರಿಂದ ಮಲಗುವ ಸಮಯ ಹತ್ತಿರವಾದಂತೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ.
ರಾತ್ರಿ ಅತಿಯಾಗಿ ಆಹಾರ ಸೇವಿಸಬೇಡಿ: ಮಲಗುವ ಮುನ್ನ ತುಂಬಾ ಹೊಟ್ಟೆ ತುಂಬುವಂತೆ ಅಥವಾ ಭಾರವಾದ ಆಹಾರ ಸೇವಿಸಿದರೆ ಹೊಟ್ಟೆ ಭಾರವಾಗಬಹುದು ಮತ್ತು ಕೆಲವರಿಗೆ ನಿದ್ರೆಗೆ ತೊಂದರೆಯಾಗಬಹುದು. ರಾತ್ರಿ ಸಾಧ್ಯವಾದಷ್ಟು ಹಗುರವಾದ ಆಹಾರ ಸೇವಿಸುವುದು ಉತ್ತಮ.
ಸಂಜೆ ನಂತರ ಚಹಾ-ಕಾಫಿ ಕಡಿಮೆ ಮಾಡಿ: ಚಹಾ ಮತ್ತು ಕಾಫಿಯಲ್ಲಿರುವ ಕ್ಯಾಫೀನ್ ಕೆಲವರಲ್ಲಿ ಹೆಚ್ಚು ಸಮಯ ಎಚ್ಚರವಾಗಿರುವಂತೆ ಮಾಡಬಹುದು. ವಿಶೇಷವಾಗಿ ಸಂಜೆ ಅಥವಾ ರಾತ್ರಿ ಕ್ಯಾಫೀನ್ ಇರುವ ಪಾನೀಯಗಳ ಸೇವನೆಯನ್ನು ಕಡಿಮೆ ಮಾಡುವುದು ನಿದ್ರೆಗೆ ಸಹಾಯಕವಾಗಬಹುದು.
ಹಗಲಿನಲ್ಲಿ ದೈಹಿಕ ಚಟುವಟಿಕೆ ಇರಲಿ: ನಿಯಮಿತವಾಗಿ ವಾಕಿಂಗ್, ವ್ಯಾಯಾಮ ಅಥವಾ ಇತರ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಒಟ್ಟಾರೆ ಆರೋಗ್ಯದ ಜೊತೆಗೆ ನಿದ್ರೆಯ ಗುಣಮಟ್ಟಕ್ಕೂ ಸಹಾಯ ಮಾಡಬಹುದು. ಆದರೆ ಮಲಗುವ ಸಮಯಕ್ಕೆ ತೀರಾ ಹತ್ತಿರದಲ್ಲಿ ತೀವ್ರ ವ್ಯಾಯಾಮ ಮಾಡುವುದನ್ನು ತಪ್ಪಿಸುವುದು ಉತ್ತಮ.
ಮಲಗುವ ಕೋಣೆಯನ್ನು ಆರಾಮದಾಯಕವಾಗಿಡಿ: ಮಲಗುವ ಕೋಣೆ ಶಾಂತ, ಕತ್ತಲೆ ಮತ್ತು ಆರಾಮದಾಯಕವಾಗಿರುವಂತೆ ನೋಡಿಕೊಳ್ಳಿ. ಸೂಕ್ತ ತಾಪಮಾನ, ಆರಾಮದಾಯಕ ಹಾಸಿಗೆ ಮತ್ತು ಸರಿಯಾದ ದಿಂಬು ಕೂಡ ಉತ್ತಮ ನಿದ್ರೆಗೆ ಸಹಾಯ ಮಾಡಬಹುದು.
ಮಲಗುವ ಮುನ್ನ ಮನಸ್ಸನ್ನು ಶಾಂತಗೊಳಿಸಿ: ಮಲಗುವ ಮುನ್ನ ಪುಸ್ತಕ ಓದುವುದು, ನಿಧಾನವಾದ ಸಂಗೀತ ಕೇಳುವುದು ಅಥವಾ ಕೆಲವು ನಿಮಿಷ ವಿಶ್ರಾಂತಿ ಪಡೆಯುವುದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡಬಹುದು. ಒತ್ತಡ ಮತ್ತು ಚಿಂತೆ ಹೆಚ್ಚಿದ್ದರೆ ನಿದ್ರೆ ಬರುವುದಕ್ಕೂ ತೊಂದರೆಯಾಗಬಹುದು.
ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ರೆ ಮಾಡಬೇಡಿ: ದೀರ್ಘ ಸಮಯ ಹಗಲಿನಲ್ಲಿ ನಿದ್ರೆ ಮಾಡುವ ಅಭ್ಯಾಸ ರಾತ್ರಿ ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಅಗತ್ಯವಿದ್ದರೆ ಸಣ್ಣ ಅವಧಿಯ ನಿದ್ರೆ ಮಾಡಬಹುದು. ಆದರೆ ರಾತ್ರಿ ನಿದ್ರೆ ಬರಲು ತೊಂದರೆಯಾಗುತ್ತಿದ್ದರೆ ಹಗಲಿನ ನಿದ್ರೆಯ ಅವಧಿಯನ್ನು ಗಮನಿಸಿಕೊಳ್ಳುವುದು ಮುಖ್ಯ.
ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?
ಕೆಲವೊಮ್ಮೆ ಒತ್ತಡ, ಪ್ರಯಾಣ ಅಥವಾ ದಿನಚರಿಯ ಬದಲಾವಣೆಯಿಂದ ನಿದ್ರೆ ಹಾಳಾಗಬಹುದು. ಆದರೆ ನಿರಂತರವಾಗಿ ನಿದ್ರೆ ಬರದಿರುವುದು, ರಾತ್ರಿ ಪದೇಪದೇ ಎಚ್ಚರವಾಗುವುದು ಅಥವಾ ತುಂಬಾ ಬೇಗ ಎಚ್ಚರವಾಗಿ ಮತ್ತೆ ನಿದ್ರೆ ಬರದಿರುವುದು ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ರಾತ್ರಿ ಜೋರಾಗಿ ಗೊರಕೆ ಹೊಡೆಯುವುದರ ಜೊತೆಗೆ ಉಸಿರಾಟ ನಿಲ್ಲುವಂತೆ ಆಗುವುದು, ಹಠಾತ್ ಉಸಿರು ತೆಗೆದುಕೊಳ್ಳಲು ಎಚ್ಚರವಾದರೆ ಅಥವಾ ಹಗಲಿನಲ್ಲಿ ಅತಿಯಾದ ನಿದ್ರೆ ಮತ್ತು ಆಯಾಸ ಇದ್ದರೂ ವೈದ್ಯಕೀಯ ಸಲಹೆ ಪಡೆಯಬೇಕು.
ಬೆಂಗಳೂರು, ಆಗಸ್ಟ್ 15: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ವೆಚ್ಚದ ಅಂಕಿ-ಅಂಶಗಳಲ್ಲಿ ಭಾರೀ ಗೋಲ್‌ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಆಗ್ರಹಿಸಿದ್ದಾರೆ. ಸಿಎಂ ಡಿಕೆ ಶಿವಕುಮಾರ್ (DK Shivakumar) ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ನೀಡಿರುವ ಅಂಕಿ-ಅಂಶಗಳಿಗೂ ಹಾಗೂ ಸರ್ಕಾರದ ಹಿಂದಿನ ಪ್ರಕಟಣೆಗಳಿಗೂ ಯಾವುದೇ ತಾಳೆಯಾಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ ಕಳೆ ಗಟ್ಟಿತ್ತು. ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಡಿಕೆ ಮುಖ್ಯಮಂತ್ರಿಯಾಗಿ ತಮ್ಮ ಚೊಚ್ಚಲ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಡಿಕೆ ಶಿವಕುಮಾರ್ ಅಭಿವೃದ್ಧಿಯೇ ನಮ್ಮ ಗುರಿ ಎಂದಿದ್ದರು. ಜೊತೆಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದರು. ಈ ವೇಳೆ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ನೀಡಿರುವ ಕೆಲ ಅಂಕಿ ಸಂಖ್ಯೆ ತಾಳೆ ಆಗುತ್ತಿಲ್ಲ ಎಂದು ಆರ್ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
7 ಕೋಟಿ ಕನ್ನಡಿಗರಿಗೆ ಘೋರ ಅಪಮಾನ: ಡಿಕೆ ಶಿವಕುಮಾರ್ ವಿರುದ್ಧ ಅಶೋಕ್ ಕಿಡಿ
ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ‘ಸ್ವಾತಂತ್ರ್ಯ ದಿನಾಚರಣೆಯಂತಹ ಪವಿತ್ರ ವೇದಿಕೆಯಲ್ಲೂ ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಲೆಕ್ಕಗಳನ್ನು ನೀಡುವ ಮೂಲಕ ಡಿ.ಕೆ. ಶಿವಕುಮಾರ್ ಅವರು 7 ಕೋಟಿ ಕನ್ನಡಿಗರಿಗೆ ಘೋರ ಅಪಮಾನ ಮಾಡಿದ್ದಾರೆ’ ಎಂದಿದ್ದಾರೆ.
ಆರ್ ಅಶೋಕ್ ಟ್ವೀಟ್
🚨ಗ್ಯಾರೆಂಟಿ ಗೋಲ್‌ಮಾಲ್🚨
ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲೂ ಅಪ್ಪಟ ಸುಳ್ಳು! ಏಳು ಕೋಟಿ ಕನ್ನಡಿಗರಿಗೆ ಸಿಎಂ @DKShivakumar ಮಾಡಿದ ಘೋರ ಅಪಮಾನ!
ಸ್ವಾತಂತ್ರ್ಯ ದಿನಾಚರಣೆಯಂತಹ ಪವಿತ್ರ ವೇದಿಕೆಯಲ್ಲೂ ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಲೆಕ್ಕಗಳನ್ನು ನೀಡುವ ಮೂಲಕ ಡಿ.ಕೆ. ಶಿವಕುಮಾರ್ ಅವರು 7 ಕೋಟಿ ಕನ್ನಡಿಗರಿಗೆ ಘೋರ… pic.twitter.com/4ccFMQKnK7
ಶಕ್ತಿ ಯೋಜನೆಯ ವೆಚ್ಚದಲ್ಲಿ ಭಾರೀ ಗೊಂದಲವಿದೆ ಎಂದಿರುವ ಅಶೋಕ್, ‘ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಸಿಎಂ ಅವರು 3.5 ಕೋಟಿ ಮಹಿಳೆಯರು 796 ಕೋಟಿ ಉಚಿತ ಪ್ರಯಾಣ ಮಾಡಿದ್ದು, ಮೂರು ವರ್ಷಗಳಲ್ಲಿ 14,875 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದಿದ್ದಾರೆ. ಆದರೆ ಜೂನ್ 11ರಂದು ಸಿಎಂ ಅಧಿಕೃತ ‘ಎಕ್ಸ್’ ಖಾತೆಯಲ್ಲಿ 753.7 ಕೋಟಿ ಪ್ರಯಾಣಕ್ಕೆ 19,771 ಕೋಟಿ ರೂ. ವೆಚ್ಚವಾಗಿದೆ ಎಂದು ಮತ್ತು ಮೇ 25ರ ಪೋಸ್ಟ್‌ನಲ್ಲಿ 726 ಕೋಟಿ ಪ್ರಯಾಣಕ್ಕೆ 18,943 ಕೋಟಿ ರೂ. ವ್ಯಯಿಸಲಾಗಿದೆ ಎಂದು ತಿಳಿಸಲಾಗಿತ್ತು. ಇವುಗಳನ್ನು ತಾಳೆ ನೋಡಿದರೆ ಸುಮಾರು 5 ರಿಂದ 6 ಸಾವಿರ ಕೋಟಿ ರೂ ವ್ಯತ್ಯಾಸ ಕಂಡುಬರುತ್ತಿದೆ. ಹಿಂದೆ ಹೆಚ್ಚಿದ್ದ ಒಟ್ಟು ಖರ್ಚು ಈಗ ದಿಢೀರನೆ ಕಡಿಮೆಯಾಗಿದ್ದು ಹೇಗೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕು’ ಎಂದಿದ್ದಾರೆ.
ಯಾರ ಖಾತೆಗೆ ಹಣ ಹೋಗುತ್ತಿದೆ?
ಇದೇ ವೇಳೆ ಗೃಹಲಕ್ಷ್ಮಿ ಯೋಜನೆಯ ಅಂಕಿ-ಅಂಶಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ‘ನಿಮ್ಮದೇ ಸರ್ಕಾರ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಹಾಗೂ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ನೀಡಿರುವ ಅಧಿಕೃತ ಪ್ರಕಟಣೆಯಲ್ಲಿ ಫಲಾನುಭವಿಗಳ ಸಂಖ್ಯೆ 1.24 ಕೋಟಿ ಎಂದಿದೆ. ಕಾಂಗ್ರೆಸ್ ಸರ್ಕಾರ 3 ವರ್ಷ ಪೂರೈಸಿದ ಸಂದರ್ಭದಲ್ಲಿ ಮೇ 25, 2026ರಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಎಕ್ಸ್ ಖಾತೆಯ ಪೋಸ್ಟ್ ಒಂದರಲ್ಲಿಯೂ ಸಹ ಫಲಾನುಭವಿಗಳ ಸಂಖ್ಯೆ 1.24 ಕೋಟಿ ಎಂದು ಹೇಳಲಾಗಿದೆ. ಆದರೆ, ಇಂದಿನ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು 1.28 ಕೋಟಿ ಎಂದು ಹೇಳುತ್ತಾರೆ. ಈ 4 ಲಕ್ಷ ಹೆಚ್ಚುವರಿ ಫಲಾನುಭವಿಗಳು ಯಾರು? ಯಾರ ಖಾತೆಗೆ ಹಣ ಹೋಗುತ್ತಿದೆ’ ಎಂದು ಪ್ರಶ್ನಿಸಿದರು.
ಇಷ್ಟಕ್ಕೂ ಇಲ್ಲಿ ಯಾರು ಹೇಳುತ್ತಿರುವುದು ಸತ್ಯ? ಯಾರು ಹೇಳುತ್ತಿರುವುದು ಸುಳ್ಳು?
‘ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಿರುವುದು ಸುಳ್ಳಾ? ಹಾಲಿ ಸಿಎಂ ಡಿಕೆ ಶಿವಕುಮಾರ್ ಹೇಳುತ್ತಿರುವುದು ಸುಳ್ಳಾ? ಅಥವಾ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹೇಳುತ್ತಿರುವುದು ಸುಳ್ಳಾ? ಸಾರ್ವಜನಿಕರ ತೆರಿಗೆ ಹಣದಲ್ಲಿ ‘ಗ್ಯಾರಂಟಿ ಅನುಷ್ಠಾನ ಸಮಿತಿ’ ಎಂದು ಅಧ್ಯಕ್ಷರು, ಉಪಾಧ್ಯಕ್ಷರನ್ನು ನೇಮಿಸಿ, ಅವರಿಗೆ ಕಾರು, ಭತ್ಯೆ, ಆಡಂಬರದ ಸೌಲಭ್ಯಗಳನ್ನು ನೀಡಿದ್ದೀರಿ. ಸರ್ಕಾರಿ ಇಲಾಖೆಗಳು ಒಂದು ಲೆಕ್ಕ ನೀಡಿದರೆ, ಈ ಸಮಿತಿ ಇನ್ನೊಂದು ಲೆಕ್ಕ ಕೊಡುತ್ತದೆ, ಸಚಿವರು ಮತ್ತೊಂದು ಸುಳ್ಳು ಹೇಳುತ್ತಾರೆ. ಈ ಗೊಂದಲ ಸೃಷ್ಟಿಸಲೆಂದೇ ಅನುಷ್ಠಾನ ಸಮಿತಿಗಳನ್ನು ಮಾಡಿದ್ದೀರಾ’ ಎಂದು ಪ್ರಶ್ನಿಸಿದರು.
ಇನ್ನು ಮುಖ್ಯಮಂತ್ರಿಗಳಿಗೆ ನೇರ ಸವಾಲು ಹಾಕಿದ ಅಶೋಕ್, ‘ಕನ್ನಡಿಗರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ತಕ್ಷಣವೇ ನಿಲ್ಲಿಸಿ. ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸುಳ್ಳು ಲೆಕ್ಕ ನೀಡಿ ರಾಜ್ಯದ ಜನತೆಗೆ ಅಪಮಾನ ಮಾಡಿದ್ದಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ಕನ್ನಡಿಗರ ಕ್ಷಮೆ ಕೇಳಬೇಕು’. ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಗ್ಯಾರಂಟಿ ಯೋಜನೆಗಳ ಪ್ರತಿಯೊಂದು ಪೈಸೆ ವೆಚ್ಚ ಹಾಗೂ ಫಲಾನುಭವಿಗಳ ನಿಜವಾದ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ಬಿಡುಗಡೆ ಮಾಡಬೇಕು’ ಎಂದು ಸವಾಲು ಹಾಕಿದ್ದಾರೆ.