ಬೆಂಗಳೂರು, (ಮಾರ್ಚ್ 06): ಚಿಕ್ಕ ಮಕ್ಕಳನ್ನು (children) ಕಾಡುತ್ತಿರುವ ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾ (social media) ವ್ಯಸನಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ಕರ್ನಾಟಕದಲ್ಲೂ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸಲಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ. ದಿನವಿಡೀ ಮೊಬೈಲ್ ಬಳಕೆಯನ್ನೇ ಮಗ್ನರಾಗಿರುತ್ತಿದ್ದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸರ್ಕಾರದ ಈ ನಡೆಗೆ ಮೆಚ್ಚುಗಳು ವ್ಯಕ್ತವಾಗಿವೆ. ಇನ್ನು ಈ ಬಗ್ಗೆ ಮಕ್ಕಳನ್ನು ವಿಚಾರಿಸಿದಾಗ ಸಾಮಾಜಿಕ ಜಾಲತಾಣ ಬಳಕೆ ಬ್ಯಾನ್ ಮಾಡಿರುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೆಂಗಳೂರು, ಮಾರ್ಚ್ 6: ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ (Bio Technology), ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜಿಸಲು ಬಜೆಟ್ನಲ್ಲಿ ಸಿದ್ದರಾಮಯ್ಯ (Siddaramaiah) ಹಲವು ಕ್ರಮಗಳನ್ನು ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಹೊಸ ಸೈನ್ಸ್ ಸಿಟಿ ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಇಂದು ನಾಲ್ಕೂವರೆ ಲಕ್ಷ ಕೋಟಿ ರೂ ಮೊತ್ತದ ದಾಖಲೆಯ ಬಜೆಟ್ (Karnataka Budget 2026) ಮಂಡಿಸಿದ ಮುಖ್ಯಮಂತ್ರಿಗಳು, ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿಯಲ್ಲಿ ‘ವಿಜ್ಞಾನ ನಗರ’ (Science City) ಸ್ಥಾಪಿಸಲಾಗುವುದು ಎಂದಿದ್ದಾರೆ. ಈ ಸೈನ್ಸ್ ಸಿಟಿಯನ್ನು 233 ಕೋಟಿ ರೂ ವೆಚ್ಚದಲ್ಲಿ ಸ್ಥಾಪಿಸಲು ವಿಸ್ತೃತವಾದ ಯೋಜನಾ ವರದಿಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ. ಇದಕ್ಕೆ ಅನುಮೋದನೆ ದೊರೆತ ನಂತರ ವಾಸ್ತುವಿನ್ಯಾಸ ತಯಾರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳೀಸಿದ್ದಾರೆ.
ಇದಲ್ಲದೇ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಹಾಗೂ 11 ಜಿಲ್ಲೆಗಳಲ್ಲಿ ತಾರಾಲಯಗಳನ್ನು (ಪ್ಲಾನಿಟೋರಿಯಂ) ಸ್ಥಾಪಿಸಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳಲ್ಲಿ ತಲಾ 4 ಕೋಟಿ ರೂಗಳಂತೆ ಒಟ್ಟು 24 ಕೋಟಿ ರೂ ವೆಚ್ಚದಲ್ಲಿ ಆರು ತಾರಾಲಯಗಳನ್ನು ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಮಾಹಿತಿ ತಂತ್ರಜ್ಞಾನದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿ: ಸಿದ್ದರಾಮಯ್ಯ
ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಹೇಳಿದ ಸಿದ್ದರಾಮಯ್ಯ, ರಾಜ್ಯದ ಟೆಕ್ ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ಕೊಡಲು ಈ ಕೆಳಗಿನ ಕೆಲ ಕ್ರಮಗಳನ್ನು ಪ್ರಕಟಿಸಿದ್ದಾರೆ.
KDEM ಸಂಸ್ಥೆಯ ಸಹಯೋಗದೊಂದಿಗೆ “Super 100 Industry-Academia Adoption Program” ಅನ್ನು ಜಾರಿಗೊಳಿಸಲಾಗುವುದು.
ಕೆ–ಕಾಂಬಿನೇಟರ್ (K-Combinator) ಮೂಲಕ ನವೋದ್ಯಮಿಗಳಿಗೆ ವೇಗವರ್ಧಕ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.
ಹುಬ್ಬಳ್ಳಿ, ಕಲಬುರಗಿ, ಹೊಸಕೋಟೆ ಮತ್ತು ಮೈಸೂರಿನಲ್ಲಿ ಉದ್ಯಮಿಗಳಿಗೆ Incubation ಸೌಲಭ್ಯಗಳನ್ನು ಒದಗಿಸಲು ಕಿಯೋನಿಕ್ಸ್ ಸಂಸ್ಥೆಯ ಮೂಲಕ ಪ್ಲಗ್-ಅಂಡ್-ಪ್ಲೇ ಸೌಲಭ್ಯದ ʻಲೀಪ್ ಲ್ಯಾಬ್ಸ್ʼ ಗಳನ್ನು ಸ್ಥಾಪಿಸಲಾಗುವುದು.
ಜಾಗತಿಕ ಟೆಕ್ನಾಲಜಿ ಕಂಪನಿಗಳಿಂದ ರಾಜ್ಯದಲ್ಲಿ 45,000 ಕೋಟಿ ರೂಗಳ ಹೂಡಿಕೆ ಆಗಲಿದೆ.
GCC ನೀತಿಯಡಿಯಲ್ಲಿ 2029ರ ವೇಳೆಗೆ ರಾಜ್ಯದಲ್ಲಿ 500 ಹೊಸ GCCಗಳನ್ನು ಸ್ಥಾಪಿಸುವ ಗುರಿ ಇದೆ. ಈಗಾಗಲೇ ರಾಜ್ಯದಲ್ಲಿ 550ಕ್ಕೂ ಅಧಿಕ ಗ್ಲೋಬಲ್ ಕೇಪಬಿಲಿಟಿ ಸೆಂಟರ್ಗಳಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ ಸ್ಥಾಪಿಸಲು ಕ್ರಮ.
ಐಐಐಟಿ ಬೆಂಗಳೂರು ಮತ್ತು ನಿಮ್ಹಾನ್ಸ್ ಸಹಭಾಗಿತ್ವದಲ್ಲಿ ನರಶಸ್ತ್ರಚಿಕಿತ್ಸೆಗೆ ಪೂರಕವಾಗಲು ಸುಧಾರಿತ ಸರ್ಜಿಕಲ್ ಸಹಾಯಕ ರೋಬೋಗಳನ್ನು ತಯಾರಿಸಲಾಗುವುದು.
ಕ್ವಾಂಟಂ ಕ್ಷೇತ್ರಕ್ಕೆ ಮಾನವ ಸಂಪನ್ಮೂಲ ಪೂರೈಸಲು ಕರ್ನಾಟಕ ಕ್ವಾಂಟಂ ರೋಡ್ಮ್ಯಾಪ್ನ ಪ್ರಥಮ ಹಂತದ ಅನುಷ್ಠಾನಕ್ಕೆ ಕ್ರಮ
ಬೆಂಗಳೂರಿನಲ್ಲಿ ಸೈನ್ಸ್ ಸಿಟಿ ನಿರ್ಮಾಣ ಮಾಡಲಾಗುತ್ತದೆ. 11 ಜಿಲ್ಲೆಗಳಲ್ಲಿ ತಾರಾಲಯಗಳನ್ನೂ ನಿರ್ಮಿಸಲಾಗುತ್ತದೆ.
ದಳಪತಿ ವಿಜಯ್ ಹಾಗೂ ಸಂಗೀತಾ ಬೇರೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಪತಿಗೆ ನಟಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿ, ಸಂಗೀತಾ ಅವರು ಕೌಟುಂಬಿಕ ನ್ಯಾಯಾಲದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.ಈ ವಿಷಯ ಚರ್ಚೆ ಹುಟ್ಟುಹಾಕಿದೆ. ದಂಪತಿ ಬೇರೆ ಆಗಲು ತ್ರಿಷಾ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಿರುವಾಗಲೇ ಇವರಿಬ್ಬರೂ ವಿವಾಹ ಕಾರ್ಯಕ್ರಮ ಒಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈ ಬಳಿಕೆ ಅವರ ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ.
ತ್ರಿಷಾ ಹಾಗೂ ವಿಜಯ್ ಒಟ್ಟಾಗಿ ಕಾಣಿಸಿಕೊಂಡ ಬೆನ್ನಲ್ಲೇ ಅಭಿಮಾನಿಗಳು ವಿಜಯ್ ಅವರನ್ನು ಬೆಂಬಲಿಸಿದರು. ವಿಜಯ್ ಅವರು ಮಾಡಿದ್ದು ಸರಿ ಇದೆ ಎಂದು ಹೇಳಿದರು. ಸಾಮಾನ್ಯವಾಗಿ ಈ ರೀತಿಯ ಅಫೇರ್ ವಿಷಯ ಬಂದಾಗ ಪರಸ್ಪರ ದೂರ ಆಗುತ್ತಾರೆ. ಒಟ್ಟಾಗಿ ಕಾಣಿಸಿಕೊಳ್ಳುವುದನ್ನು ತಪ್ಪಿಸಲು ನೋಡುತ್ತಾರೆ. ಆದರೆ, ವಿಜಯ್ ಆ ರೀತಿ ಮಾಡಿಲ್ಲ. ಅವರು ಯಾವುದೇ ಮುಚ್ಚುಮರೆ ಇಲ್ಲದೆ ವಿವಾಹ ಸಮಾರಂಭಕ್ಕೆ ಬಂದರು. ಈಗ ತ್ರಿಷಾ ಹಾಗೂ ವಿಜಯ್ ಇಬ್ಬರೂ ಆಡಿದ ವಿಷಯ ಚರ್ಚೆ ಆಗುತ್ತಿದೆ.
ಈವೆಂಟ್ ಒಂದರಲ್ಲಿ ವಿಜಯ್ ಹಾಗೂ ತ್ರಿಷಾ ಇಬ್ಬರೂ ಇದ್ದರು. ವಿಜಯ್ ನನ್ನ ಮನೆ ಇದ್ದಂತೆ ಎಂದು ತ್ರಿಷಾ ಹೇಳಿದ್ದರು. ಇದು ಇಬ್ಬರ ಬಾಂಡಿಂಗ್ ಹೇಗಿದೆ ಎಂಬುದನ್ನು ತೋರಿಸುತ್ತದೆ. ‘ವಿಜಯ್ ನನ್ನ ಕುಟುಂಬದವರ ರೀತಿ’ ಎಂದು ಹೇಳಲು ತ್ರಿಷಾ ಆ ರೀತಿ ಹೇಳಿರಬಹುದು ಎಂದು ಅನೇಕರರು ಊಹಿಸುತ್ತಿದ್ದಾರೆ. ಇದನ್ನು ಕೆಲವರು ತಪ್ಪಾಗಿ ಅರ್ಥೈಸುತ್ತಿದ್ದಾರೆ.
ವೇದಿಕೆ ಒಂದರಲ್ಲಿ ತ್ರಿಷಾ ಅವರನ್ನು ವಿಜಯ್ ಹೊಗಳಿದ್ದರು. ‘ಚಿತ್ರರಂಗಕ್ಕೆ ಬಂದ 20 ವರ್ಷಗಳ ನಂತರವೂ ಅದೇ ಸೌಂದರ್ಯವನ್ನು ಕಾಪಾಡಿಕೊಂಡು ಟಾಪ್ ಹೀರೋಯಿನ್ ಆಗಿ ಮುಂದುವರೆಯುತ್ತಿರುವ ತ್ರಿಷಾಗೆ ಅಭಿನಂದನೆಗಳು. ಅವರು ರಾಜಕುಮಾರಿ’ ಎಂದು ವಿಜಯ್ ಹೇಳಿದ್ದರು.
ಕೋಲಾರ, ಮಾರ್ಚ್ 06: ಅದು ಬೆಟ್ಟಗುಡ್ಡಗಳಿರುವ ಭೂಮಿ (land). ಅಲ್ಲಿ ಕೃಷಿ ಮಾಡಲು ಯೋಗ್ಯವಲ್ಲ, ಹಾಗಾಗಿ ಅದನ್ನು ರೈತರಿಗೆ ಮಂಜೂರು ಮಾಡುವುದು ಬೇಡ ಎಂದು ಅಧಿಕಾರಿಗಳೇ ತಿರಸ್ಕರಿಸಿದ್ದರು. ಆದರೆ ಇಂದು ಆ ಭೂಮಿಗೆ ಬಂಗಾರದ ಬೆಲೆ ಬಂದ ಹಿನ್ನಲೆ ಅಧಿಕಾರಿಗಳೇ ಶಾಮೀಲಾಗಿ ನೂರಾರು ಕೋಟಿ ರೂ ಬೆಲೆಬಾಳುವ ಭೂಮಿಯನ್ನು ಅಕ್ರಮವಾಗಿ ರಾತ್ರೋರಾತ್ರಿ ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ.
ಕೋಲಾರ ಜಿಲ್ಲೆಯ ಮಾಲೂರು ಬಹುತೇಕ ಬೆಂಗಳೂರಿಗೆ ಹೊಂದಿಕೊಂಡಿರುವ ತಾಲ್ಲೂಕು. ಹಾಗಾಗಿ ಮಾಲೂರು ತಾಲ್ಲೂಕಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಕಳೆದ ಕೆಲವು ದಿನಗಳಿಂದ ಮಾಲೂರು ತಾಲ್ಲೂಕಿನಲ್ಲಿ ಮೇಲಿಂದ ಮೇಲೆ ಭೂ ಹಗರಣಗಳು ನಡೆಯುತ್ತಿವೆ. ಅದರಂತೆ ಮಾಲೂರು ತಾಲ್ಲೂಕು ಚೆನ್ನಿಗರಾಯಪುರ ಗ್ರಾಮದ ಸರ್ವೆ ನಂ-6ರಲ್ಲಿನ ಸುಮಾರು 250 ಕೋಟಿ ರೂ ಬೆಲೆಬಾಳುವ ಸುಮಾರು 81 ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದರಲ್ಲಿ ಕೆಲವೊಂದು ಪ್ರಭಾವಿಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳೇ ಶಾಮೀಲಾಗಿರುವ ಆರೋಪವೂ ಇದೆ.
ಕೂಲಂಕುಷವಾಗಿ ತನಿಖೆಗೆ ಸೂಚನೆ
ಸದ್ಯ ನೂರಾರು ಕೋಟಿಯ ಭೂ ಅಕ್ರಮ ಕುರಿತು ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಈ ವಿಚಾರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಯ ವಿಷಯವಾಗಿದ್ದು ಸ್ವತ: ಜಿಲ್ಲಾ ಉಸ್ತವಾರಿ ಸಚಿವರೇ ಚೆನ್ನಿಗರಾಯಪುರ ಭೂ ಅವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ಜಮೀನು ಮಂಜೂರಾತಿಗೆ ತಡೆಯಾಜ್ಞೆ ನೀಡಿ ಕೂಲಂಕುಷವಾಗಿ ತನಿಖೆ ನಡೆಸಿ ಕ್ರಮವಹಿಸುವಂತೆ ಸೂಚನೆ ನೀಡಿದ್ದಾರೆ.
ಅಷ್ಟಕ್ಕೂ ಏನಿದು ಚೆನ್ನಿಗರಾಯಪುರ ಗ್ರಾಮದ ನೂರಾರು ಕೋಟಿ ರೂ ಬೆಲೆಬಾಳುವ ಭೂಮಿಯ ಕಥೆ ಅಂತ ನೋಡುವುದಾರೆ ಅದು ಸುಮಾರು 44 ವರ್ಷಗಳ ಹಿಂದೆ ಅಂದರೆ 1982ರಲ್ಲಿ ಚೆನ್ನಿಗರಾಯಪುರ ಗ್ರಾಮದ ಸರ್ವೆ ನಂ-6 ರಲ್ಲಿದ್ದ ಗೊರಜು ಹಾಗೂ ಮಣ್ಣು ಗುಡ್ಡವಿದ್ದ ಭೂಮಿಯನ್ನು ಮಂಜೂರು ಮಾಡುವಂತೆ 27 ಜನರು ತಲಾ ಮೂರು ಎಕರೆಯಂತೆ 81 ಎಕರೆ ಭೂಮಿ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಅಂದಿನ ಭೂ ವಿತರಣಾ ಸಲಹಾ ಸಮಿತಿ ಸ್ಥಳ ಪರಿಶೀಲನೆ ನಡೆಸಿ ಈ ಭೂಮಿ ವ್ಯವಸಾಯ ಮಾಡಲು ಯೋಗ್ಯವಿಲ್ಲ, ಅಲ್ಲಿ ಕಲ್ಲುಗುಡ್ಡ, ಬೆಟ್ಟಗಳಿದ್ದು ಅಲ್ಲಿ ವ್ಯವಸಾಯ ಮಾಡಲು ಆಗೋದಿಲ್ಲ. ಅದನ್ನು ಅರಣ್ಯ ಬೆಳೆಸಲು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿತ್ತು. ಅದರಂತೆ ಜಿಲ್ಲಾಧಿಕಾರಿಗಳು ತಾಲ್ಲೂಕು ಅಭಿವೃದ್ದಿ ಮಂಡಳಿಗೆ ನಿರ್ದೇಶನ ನೀಡಿ ಆದೇಶಿಸಿದ್ದರು. ಆದರೆ ಈ ಆದೇಶವನ್ನು ಪ್ರಶ್ನಿಸಿ ಭೂ ಮಂಜೂರಾತಿಗೆ ಅರ್ಜಿಸಲ್ಲಿಸಿದ್ದ ಅರ್ಜಿದಾರರು ಎ.ಸಿ. ಅವರಿಗೆ ಮೇಲ್ಮನವಿ ಸಲ್ಲಿಸಿದ್ದರು. ನಂತರ ಎಸಿ ಅವರು ಕೂಡ ಅವರ ಮನವಿಯನ್ನು ತಿರಸ್ಕರಿಸಿದ್ದರು.
ಎಸಿ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ 2011-12 ರಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ಹೈಕೋರ್ಟ್ 2017ರಲ್ಲಿ ಭೂ ಮಂಜೂರಾತಿ ಕಮಿಟಿಯವರು ಅರ್ಜಿದಾರರಿಗೆ ನೋಟಿಸ್ ನೀಡಿ. ವಿಚಾರಣೆ ನಡೆಸಿ ಮುಂದಿನ ಕ್ರಮ ಜರುಗಿಸುವಂತೆ ಆದೇಶ ನೀಡಿತ್ತು. 2017ರಿಂದ ಬಂದಂತ ಯಾವುದೇ ಅಧಿಕಾರಿಗಳು ಈ ಪ್ರಕರಣವನ್ನು ಕೈಗೆತ್ತುಕೊಂಡಿರಲಿಲ್ಲ. 2025 ಅಕ್ಟೋಬರ್ನಲ್ಲಿ ಎಸಿ ಅವರು ಏಕಾಏಕಿ ಮಂಜೂರಾತಿ ಆದೇಶವನ್ನು ಮಾಡಿದ್ದಾರೆ. ಆದರೆ ಮಂಜೂರಾತಿ ಮಾಡುವ ವೇಳೆಯಲ್ಲಿ ಮಂಜೂರಾತಿಗೆ ಅರ್ಜಿಸಲ್ಲಿಸಿದ್ದ ಅರ್ಜಿದಾರರಿಗೆ ನೋಟಿಸ್ ನೀಡಿಲ್ಲ. 44 ವರ್ಷದ ಹಿಂದಿನ ಪ್ರಕರಣವಾಗಿದ್ದ ಹಿನ್ನೆಲೆ ಅವರ ಪ್ರಸ್ತುತ ಪರಿಸ್ಥಿತಿ ಸ್ಥಿತಿಗತಿ, ಎಲ್ಲಿ ವಾಸವಿದ್ದಾರೆ ಅನ್ನೋದರ ಕುರಿತು ವರದಿ ಪಡೆದಿಲ್ಲ. ಅವರ ಹೇಳಿಕೆಗಳನ್ನು ದಾಖಲಿಸದೆ ಏಕಾಏಕಿ ಆದೇಶ ಮಾಡಿದ್ದಾರೆ. ಇದು ಅಕ್ರಮ ಮಂಜೂರಾತಿಗೆ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಇನ್ನು 44 ವರ್ಷಗಳ ಹಿಂದೆ ಈ ಪ್ರದೇಶ ಬೆಟ್ಟ, ಗುಡ್ಡಗಳಿಂದ ಕೂಡಿದ್ದ ಗೊರಜು ಪ್ರದೇಶವಾಗಿತ್ತು, ಆದರೆ ಈಗ ಅಲ್ಲಿದ್ದ ಬೆಟ್ಟಗುಡ್ಡವನ್ನು ಹೆದ್ದಾರಿ ಕಾಮಗಾರಿಗೆ ಹಾಗೂ ಅಕ್ರಮ ಮಣ್ಣು ಮಾಫಿಯಾ ಮಣ್ಣನ್ನೇ ಲೂಟಿ ಮಾಡಿದ್ದು, ಅಲ್ಲಿದ್ದ ಬೆಟ್ಟವೇ ನಾಪತ್ತೆಯಾಗಿದೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೆ ಕೂಗಳತೆ ದೂರದಲ್ಲಿದ್ದು, ಸದ್ಯ ಅದು ರಿಯಲ್ ಎಸ್ಟೇಟ್ ಉದ್ಯಮಿಗಳ ಕಣ್ಣುಕುಕ್ಕುವ ಸ್ಥಳವಾಗಿ ಮಾರ್ಪಟ್ಟಿದೆ. ಹಾಗಾಗಿ ಇಂದಿಗೆ ಆ ಪ್ರದೇಶದಲ್ಲಿ ಒಂದು ಎಕರೆಗೆ ನಾಲ್ಕರಿಂದ ಐದು ಕೋಟಿ ರೂ ಮಾರುಕಟ್ಟೆ ಬೆಲೆ ಇದ್ದು 81 ಎಕರೆ ಭೂಮಿ ಮಂಜೂರಾತಿ ಹಿಂದೆ ಪ್ರಭಾವಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಆ ಭೂಮಿಯನ್ನು ಪ್ರಸ್ತುತ ಅನುಭೋಗದಲ್ಲಿರುವವರಿಗೆ ಮಂಜೂರು ಮಾಡಬೇಕು. ಇಲ್ಲ ಅದನ್ನು ಸರ್ಕಾರ ವಾಪಸ್ ಪಡೆಯಬೇಕು. ಅದರ ಜೊತೆಗೆ ಅಕ್ರಮದ ತನಿಖೆ ನಡೆಸಬೇಕು ಅನ್ನೋದು ಗ್ರಾಮಸ್ಥರ ಆಗ್ರಹವಾಗಿದೆ.
ಒಟ್ಟಾರೆ ಕಾಲ ಬದಲಾದಂತೆ ಅಲ್ಲಿನ ಪರಿಸ್ಥಿತಿಯೂ ಬದಲಾಗುತ್ತದೆ ಎನ್ನುವಂತೆ 44 ವರ್ಷಗಳ ಹಿಂದೆ ಯಾವುದಕ್ಕೂ ಯೋಗ್ಯವಲ್ಲದ ಭೂಮಿಗೆ ಇಂದು ಬಂಗಾರದ ಬೆಲೆ ಬಂದಿದೆ. ತಿರಸ್ಕರವಾಗಿದ್ದ ಭೂಮಿಯನ್ನು ಪಡೆಯಲು ಇಂದು ನೂರಾರು ಕೋಟಿ ರೂ ಅಕ್ರಮ ಮಾಡಲು ಮುಂದಾಗಿರುವುದು ನಿಜಕ್ಕೂ ಆಶ್ಚರ್ಯವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಅಕ್ರಮ ಬಯಲಿಗೆಳೆಯಬೇಕಿದೆ.
ನವದೆಹಲಿ, ಮಾರ್ಚ್ 6: ಇರಾನ್ ಯುದ್ಧದಿಂದಾಗಿ ಜಾಗತಿಕವಾಗಿ ತೈಲ ಪೂರೈಕೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿದ್ದರೂ ಭಾರತದಲ್ಲಿ ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಸಂಸ್ಥೆ (Adani Total Gas Ltd) ತನ್ನ ಸಿಎನ್ಜಿ ಮತ್ತು ಪಿಎನ್ಜಿ ಅನಿಲಗಳ ಬೆಲೆ ಏರಿಕೆ ಮಾಡಿಲ್ಲ. ಔದ್ಯಮಿಕ ಗ್ರಾಹಕರಿಗೆ ಅದಾನಿ ಕಂಪನಿ ಎಲ್ಎನ್ಜಿ ಪೂರೈಕೆಯನ್ನು ಮಿತಿಗೊಳಿಸಿದೆ. ಅದು ಬಿಟ್ಟರೆ ಗೃಹಬಳಕೆಗೆ ಎಟಿಜಿಎಲ್ನಿಂದ ಸರಬರಾಜಾಗುವ ಕೊಳವೆ ಅಡುಗೆ ಅನಿಲ ಹಾಗೂ ವಾಹನಗಳಿಗೆ ಬಳಕೆಯಾಗುವ ಸಿಎನ್ಜಿ ಗ್ಯಾಸ್ನ ಪೂರೈಕೆಯಲ್ಲಿ ಯಾವ ನಿರ್ಬಂಧ ಇಲ್ಲ. ಬೆಲೆಯಲ್ಲೂ ವ್ಯತ್ಯಯವಾಗಿಲ್ಲ.
ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಕಂಪನಿಯು ತನ್ನ ಶೇ. 70ರಷ್ಟು ಗ್ಯಾಸ್ ಅನ್ನು ದೇಶೀಯವಾಗಿ ಪಡೆಯುತ್ತಿದೆ. ಸಿಎನ್ಜಿ ಬಳಕೆದಾರರಿಗೆ ಮತ್ತು ಗೃಹ ಅಡುಗೆಮನೆಗಳಿಗೆ ಇವು ಸರಬರಾಜಾಗುತ್ತವೆ. ಕಂಪನಿಯ ಉಳಿದ ಶೇ. 30ರಷ್ಟು ಅನಿಲವು ಎಲ್ಎನ್ಜಿಯಾಗಿದ್ದು ಇದನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತದೆ. ಎಲ್ಎನ್ಜಿ ಗ್ಯಾಸ್ ಅನ್ನು ಕಮರ್ಷಿಯಲ್ ಮತ್ತು ಕೈಗಾರಿಕಾ ಬಳಕೆಗೆ ನೀಡಲಾಗುತ್ತದೆ.
ಎಲ್ಎನ್ಜಿಯನ್ನು ಭಾರತೀಯ ಕಂಪನಿಗಳು ಗಲ್ಫ್ ರಾಷ್ಟ್ರಗಳಿಂದ ಪಡೆಯುತ್ತವೆ. ಆದರೆ, ಹಾರ್ಮುಜ್ ಜಲಸಂಧಿಯಲ್ಲಿ ಕಚ್ಚಾ ತೈಲ ಮತ್ತು ಅನಿಲಗಳ ಸಾಗಣೆಗೆ ತಡೆ ಬಿದ್ದಿರುವುದರಿಂದ ಅದಾನಿ ಟೋಟಲ್ ಗ್ಯಾಸ್ ಕಂಪನಿಗೆ ಎಲ್ಎಲ್ಜಿ ಪೂರೈಕೆಯಲ್ಲಿ ವ್ಯತ್ಯಯ ಆಗಿದೆ.
ಎಲ್ಎನ್ಜಿ ಗ್ಯಾಸ್ ಅನ್ನು ಬಳಸುವ ಕಮರ್ಷಿಯಲ್ ಹಾಗೂ ಕೈಗಾರಿಕಾ ಗ್ರಾಹಕರು, ಗ್ಯಾಸ್ ಬಳಕೆಯನ್ನು ಶೇ. 40ರಷ್ಟು ಕಡಿಮೆ ಮಾಡಬೇಕೆಂದು ಮನವಿ ಪಡೆದಿದ್ದಾರೆ. ಈ ಗ್ರಾಹಕರು ಈಗಾಗಲೆ ಒಪ್ಪಂದ ಮಾಡಿಕೊಂಡಿದ್ದಾರಾದರೂ ಕಾಂಟ್ರಾಕ್ಟ್ನಲ್ಲಿರುವಷ್ಟು ಎಲ್ಎನ್ಜಿ ಗ್ಯಾಸ್ ಬಳಕೆಗೆ ಮುಕ್ತಾವಕಾಶ ಇರುವುದಿಲ್ಲ. ಕಾಂಟ್ರಾಕ್ಟ್ ದರವು ಪ್ರತೀ ಸ್ಟ್ಯಾಂಡರ್ಸ್ ಕ್ಯೂಬಿಕ್ ಮೀಟರ್ಗೆ 40 ರೂ ಇದೆ. ಶೇ. 40ರಷ್ಟು ಎನ್ಎನ್ಜಿಯನ್ನು ಇದೇ ಬೆಲೆಯಲ್ಲಿ ಬಳಸಬಹುದು. ಇದಕ್ಕಿಂತ ಹೆಚ್ಚಿನ ಸಿಎನ್ಜಿ ಗ್ಯಾಸ್ ಬಳಸಿದರೆ, ಹಾಲಿ ಮಾರುಕಟ್ಟೆ ದರ ಅಥವಾ ಸ್ಪಾಟ್ ಪ್ರೈಸ್ ಪಾವತಿಸಬೇಕಾಗುತ್ತದೆ. ಸ್ಪಾಟ್ ಪ್ರೈಸ್ ಸಾಮಾನ್ಯವಾಗಿ ಕಾಂಟ್ರಾಕ್ಟ್ ಪ್ರೈಸ್ಗಿಂತ ಎರಡು ಪಟ್ಟು ಹೆಚ್ಚಿರುತ್ತದೆ.
ಬೆಂಗಳೂರು, (ಮಾರ್ಚ್ 06): ವಾಕಿಂಗ್ ಹೋಗಿದ್ದ ಮಹಿಳೆ 25 ಅಡಿ ಆಳದ ಗುಂಡಿಗೆ ಬಿದ್ದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ 56 ವರ್ಷದ ಮಹಿಳೆಯನ್ನು (Woman) ಬೆಂಗಳೂರಿನ (Bengaluru) ಚಂದ್ರಲೇಔಟ್ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. 56 ವರ್ಷದ ಮಹಿಳೆಯೊಬ್ಬರು ಇಂದು (ಮಾರ್ಚ್ 06) ವಾಕಿಂಗ್ ಹೋಗುವಾಗ ನಾಗರಭಾವಿ ಪಾರ್ಕ್ ಸಮೀಪದ ಸುಮಾರು 25 ಅಡಿ ಆಳದ ಗುಂಡಿಗೆ ಬಿದ್ದು ಮೇಲೆ ಬರಲಾಗದೇ ಒಳಗೆ ಅಪಾಯಕ್ಕೆ ಸಿಲುಕಿದ್ದರು. ಬಳಿಕ ಮಗ ತಾಯಿ ಮನೆಗೆ ಬರದಿರುವುದರಿಂದ ಆತಂಕಗೊಂಡು 112ಗೆ ಕರೆ ಮಾಡಿ ತಿಳಿಸಿದ್ದ. ಈ ಕರೆ ಬಳಿಕ ಅಲರ್ಟ್ ಆದ ಚಂದ್ರಲೇಔಟ್ ಪೊಲೀಸರು, ಮಹಿಳೆಯ ಮೊಬೈಲ್ ಲೋಕೇಷನ್ ಟ್ರೇಸ್ ಮಾಡಿ ಆಕೆಯನ್ನು ಹುಡುಕಿಕೊಂಡು ಹೋಗಿ ರಕ್ಷಸಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸುಧಾ ಪರಿಮಳ (56) ಎಂಬ ಮಹಿಳೆ ಮಾರ್ಚ್ 06ರ ಬೆಳಗಿನ ಜಾವ ನಾಗರಭಾವಿ ಪಾರ್ಕ್ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ, ಅಲ್ಲಿ ಅಗೆಯಲಾಗಿದ್ದ ಸುಮಾರು 25 ಅಡಿ ಆಳದ ಬೃಹತ್ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾರೆ. ಗುಂಡಿ ತೀವ್ರ ಆಳವಾಗಿದ್ದರಿಂದ ಹೊರಬರಲು ಸಾಧ್ಯವಾಗದೆ ಸುಧಾ ಅವರು ಅಲ್ಲಿಯೇ ಪರದಾಡಿದ್ದಾರೆ. ಬೆಳಗಿನ ಜಾವವಾಗಿದ್ದರಿಂದ ಅಲ್ಲಿ ಜನಸಂಚಾರವೂ ವಿರಳವಾಗಿತ್ತು. ಗುಂಡಿಯೊಳಗೆ ಬಿದ್ದ ಆಘಾತದಿಂದ ಸುಧಾ ಅವರು ಅಲ್ಲೇ ಅಸ್ವಸ್ಥರಾಗಿದ್ದರು.
ಇತ್ತ ಸುಧಾ ಅವರು ಸಮಯಕ್ಕೆ ಸರಿಯಾಗಿ ಮನೆಗೆ ಮರಳದಿದ್ದಾಗ ಆತಂಕಗೊಂಡ ಮಗ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಚಂದ್ರಲೇಔಟ್ ಪೊಲೀಸ್ ಠಾಣೆಯ ಹೊಯ್ಸಳ ಸಿಬ್ಬಂದಿ, ಮಹಿಳೆಯ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿದ್ದಾರೆ. ಆಗ ಮಹಿಳೆಯ ಮೊಬೈಲ್ ಸಿಗ್ನಲ್ ನಾಗರಭಾವಿ ಪಾರ್ಕ್ ಬಳಿ ತೋರಿಸಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಪಾರ್ಕ್ ಬಳಿ ಅಗೆಯಲಾಗಿದ್ದ ಆಳವಾದ ಗುಂಡಿಯೊಳಗೆ ಮಹಿಳೆ ಅಸ್ವಸ್ಥರಾಗಿ ಬಿದ್ದಿರುವುದು ಕಂಡುಬಂದಿದ್ದು, ಕೂಡಲೇ ಪೊಲೀಸರು, ಸ್ಥಳೀಯ ಸಾರ್ವಜನಿಕರ ಸಹಾಯ ಪಡೆದ ಹರಸಾಹಸ ಪಟ್ಟು 25 ಅಡಿ ಆಳದ ಗುಂಡಿಯಿಂದ ಸುಧಾ ಅವರನ್ನು ಮೇಲೆತ್ತಿದ್ದಾರೆ. ಬಳಿಕ ಸ್ವಸ್ಥರಾಗಿದ್ದ ಸುಧಾ ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರ ರೋಚಕ ಕಾರ್ಯಚರಣೆ ಕುಟುಂಬದವರು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಗುಂಡಿ ಅಗೆದು ಹಾಗೆ ಬಿಟ್ಟು ಹೋಗಿರುವವರು ಯಾರು ಎನ್ನುವುದನ್ನು ಪೊಲೀಸರು ತನಿಖೆ ನಡೆಸಿದ್ದಾರೆ.
2026 ರ ಟಿ20 ವಿಶ್ವಕಪ್ನ ಫೈನಲ್ ಪಂದ್ಯವು ಮಾರ್ಚ್ 8 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ನಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿರುವುದು ಈ ಫೈನಲ್ ಪಂದ್ಯದ ಮತ್ತೊಂದು ವಿಶೇಷ ಕ್ಷಣವಾಗಿದೆ.
ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ ಸತತ ಎರಡನೇ ಪ್ರಶಸ್ತಿಯತ್ತ ಗುರಿ ಇಟ್ಟಿದೆ. ಇತ್ತ ನ್ಯೂಜಿಲೆಂಡ್ ತನ್ನ ಮೊದಲ ಟಿ20 ವಿಶ್ವಕಪ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ. ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಐಸಿಸಿಯ ಮೂರು ಮಾದರಿಗಳ ಫೈನಲ್ನಲ್ಲಿ ಎರಡು ತಂಡಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲು. ಭಾರತ ಮತ್ತು ನ್ಯೂಜಿಲೆಂಡ್ ಈ ಹಿಂದೆ ಏಕದಿನ ಮತ್ತು ಟೆಸ್ಟ್ ಟೂರ್ನಿಗಳ ಫೈನಲ್ನಲ್ಲಿ ಮುಖಾಮುಖಿಯಾಗಿದ್ದವು ಈಗ ಟಿ20 ಸ್ವರೂಪದಲ್ಲೂ ಉಭಯ ತಂಡಗಳು ಎದುರುಬದುರಾಗುತ್ತಿವೆ.
2021 ರಲ್ಲಿ ಸೌತಾಂಪ್ಟನ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ನ್ಯೂಜಿಲೆಂಡ್, ಭಾರತವನ್ನು 8 ವಿಕೆಟ್ಗಳಿಂದ ಸೋಲಿಸಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಕೈಲ್ ಜೇಮಿಸನ್ ಮತ್ತು ಕೇನ್ ವಿಲಿಯಮ್ಸನ್ ಅವರ ಅದ್ಭುತ ಪ್ರದರ್ಶನದಿಂದಾಗಿ ಬ್ಲಾಕ್ ಕ್ಯಾಪ್ಸ್ ಇತಿಹಾಸ ನಿರ್ಮಿಸಿತು.
ಆನಂತರ 2025 ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ದುಬೈನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ (ODI ಸ್ವರೂಪದ ಪಂದ್ಯಾವಳಿ) ಫೈನಲ್ ಪಂದ್ಯ ನಡೆಯಿತು. ಈ ಪಂದ್ಯವನ್ನು ಭಾರತ 4 ವಿಕೆಟ್ಗಳಿಂದ ಗೆದ್ದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ರೋಹಿತ್ ಶರ್ಮಾ ನಾಯಕತ್ವದಲ್ಲಿ, ತಂಡವು ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದು ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯನ್ನು ವಶಪಡಿಸಿಕೊಂಡಿತು.
ಇದೀಗ 2026 ರ ಟಿ20 ವಿಶ್ವಕಪ್ನಲ್ಲಿ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆಯಾದರೂ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ವಾಸ್ತವವಾಗಿ, ಈ ಪಂದ್ಯಾವಳಿಯಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಎರಡೂ ತಂಡಗಳು ಟಿ20 ವಿಶ್ವಕಪ್ನಲ್ಲಿ ಮೂರು ಪಂದ್ಯಗಳನ್ನು ಆಡಿದ್ದು, ಟೀಂ ಇಂಡಿಯಾ ಮೂರು ಬಾರಿಯೂ ಸೋತಿದೆ. ಹೀಗಾಗಿ ಭಾರತಕ್ಕೆ ತನ್ನ ಸೋಲಿನ ಸರಣಿಯನ್ನು ಮುರಿಯಲು ಒಂದೊಳ್ಳೆ ಅವಕಾಶ ಸಿಕ್ಕಿದೆ.
ಚೆನ್ನೈ, ಮಾರ್ಚ್ 6: ತಮಿಳುನಾಡಿನಲ್ಲಿ ಪ್ರಾಣಿ ಪ್ರಿಯರನ್ನು ಆಘಾತಕ್ಕೀಡು ಮಾಡಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಯುವತಿಯೊಬ್ಬಳು ನಾಯಿಗಳ (Dog Video) ಮೇಲೆ ತನ್ನ ಕೋಪವನ್ನು ಹೊರಹಾಕುವ ಭರದಲ್ಲಿ ಅವುಗಳ ಜೀವದ ಜೊತೆ ಆಟವಾಡಿದ್ದಾಳೆ. ತನ್ನ ಮನೆಯ ಮುಂದೆ ನಿಂತಿದ್ದ ಆಟೋದ ಕೆಳಗೆ ಹೋಗಿದ್ದ ಪುಟ್ಟ ನಾಯಿಮರಿಗಳನ್ನು ಎತ್ತಿ ಆಕೆ ಕಾಂಪೌಂಡ್ ಗೋಡೆಗೆ ಬಡಿದಿದ್ದಾಳೆ. ಇದರಿಂದ ಚೀರಾಡುತ್ತಾ ಆ ನಾಯಿಮರಿಗಳು ಕೆಳಗೆ ಬಿದ್ದಿವೆ. ಇನ್ನೆರಡು ನಾಯಿಗಳನ್ನು ಕುತ್ತಿಗೆಗೆ ಹಗ್ಗ ಹಾಕಿ ನೇತು ಹಾಕಿದ್ದಾಳೆ. ಅವುಗಳಲ್ಲಿ ಎರಡು ಮರಿಗಳು ಸತ್ತುಹೋಗಿವೆ. ನಾಯಿ ಮರಿಗಳ ಮೇಲಿನ ಈ ಕ್ರೌರ್ಯವನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ. ಯುವತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಭೀತಿ ಭಾರತೀಯ ಚಿತ್ರರಂಗದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ ಕನ್ನಡದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಮಾರ್ಚ್ 19ರಂದು ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಅದೇ ದಿನ ರಿಲೀಸ್ ಆಗಲು ಸಜ್ಜಾಗಿರುವ ಬಾಲಿವುಡ್‌ನ ‘ಧುರಂಧರ್ 2’ ಮಾತ್ರ ಬಿಡುಗಡೆ ದಿನಾಂಕ ಬದಲಾಯಿಸಿಕೊಂಡಿಲ್ಲ. ಯಾಕೆಂದರೆ, ‘ಧುರಂಧರ್ 2’ (Dhurandhar 2) ಚಿತ್ರಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದ ಬಿಸಿ ತಟ್ಟುವುದಿಲ್ಲ.
ಬಿಡುಗಡೆಗೆ ಕೇವಲ ಎರಡು ವಾರ ಬಾಕಿ ಇರುವಾಗ ‘ಟಾಕ್ಸಿಕ್’ ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿತು. ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಅನಿಶ್ಚಿತತೆ ಮೂಡಿದೆ. ಭಾರತೀಯ ಸಿನಿಮಾಗಳಿಗೆ ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳು ದೊಡ್ಡ ಮಾರುಕಟ್ಟೆಯಾಗಿದ್ದು, ಅಲ್ಲಿನ ಸದ್ಯದ ಪರಿಸ್ಥಿತಿಯು ಸಿನಿಮಾದ ಕಲೆಕ್ಷನ್ ಮೇಲೆ ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರವನ್ನು ಜೂನ್ ತಿಂಗಳಿಗೆ ಮುಂದೂಡಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಹತ್ಯೆಯಾಗಿತ್ತು. ಇದಕ್ಕೆ ಪ್ರತಿಕಾರವಾಗಿ ಇರಾನ್ ಕೂಡ ಅಮೆರಿಕ ಮತ್ತು ಇಸ್ರೇಲ್ ನೆಲೆಗಳ ಮೇಲೆ ದಾಳಿ ಮಾಡಿದೆ. ಪ್ರಸ್ತುತ ಗಲ್ಫ್ ರಾಷ್ಟ್ರಗಳಲ್ಲಿ ವಿಮಾನ ನಿಲ್ದಾಣಗಳು ಬಂದ್ ಆಗಿದ್ದು, ಪ್ರವಾಸಿಗರನ್ನು ಸ್ಥಳಾಂತರಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತವಲ್ಲ ಎಂಬುದು ತಜ್ಞರ ಅಭಿಪ್ರಾಯ.
ಮಾರ್ಚ್ 19ರಂದು ಬಿಡುಗಡೆ ಆಗಬೇಕಿದ್ದ ‘ಟಾಕ್ಸಿಕ್’ ಹಿಂದೆ ಸರಿದಿದ್ದರೂ ‘ಧುರಂಧರ್ 2’ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನಿರ್ಮಾಣ ಸಂಸ್ಥೆ ‘ಜಿಯೋ ಸ್ಟುಡಿಯೋಸ್’ ಸ್ಪಷ್ಟಪಡಿಸಿದೆ. ಇದಕ್ಕೆ ಕಾರಣ ಕೂಡ ಇದೆ. ಗಲ್ಫ್ ರಾಷ್ಟ್ರಗಳಲ್ಲಿ ‘ಧುರಂಧರ್ 2’ ಬಿಡುಗಡೆ ಆಗುತ್ತಿಲ್ಲ. ಕಳೆದ ವರ್ಷ ತೆರೆಕಂಡಿದ್ದ ‘ಧುರಂಧರ್’ ಸಿನಿಮಾದಲ್ಲಿ ಪಾಕಿಸ್ತಾನವನ್ನು ಭಯೋತ್ಪಾದನೆಯ ತಾಣ ಎಂದು ಬಿಂಬಿಸಿದ್ದರಿಂದ ಯುಎಇ, ಸೌದಿ ಅರೇಬಿಯಾ, ಖತಾರ್ ಸೇರಿದಂತೆ ಆರು ಗಲ್ಫ್ ರಾಷ್ಟ್ರಗಳು ಚಿತ್ರಕ್ಕೆ ನಿಷೇಧ ಹೇರಿದ್ದವು.
ಸೀಕ್ವೆಲ್ ಮೇಲೂ ನಿಷೇಧ ಹೇರಲಾಗಿದೆ. ‘ಧುರಂಧರ್ 2’ ಕೂಡ ಮೊದಲ ಭಾಗದ ಕಥೆಯ ಮುಂದುವರಿದ ಭಾಗವಾಗಿದ್ದು, ಪಾಕಿಸ್ತಾನದ ಕುರಿತಾದ ಕಠಿಣ ನಿಲುವು ಹೊಂದಿರುವುದರಿಂದ ಇದು ಕೂಡ ಗಲ್ಫ್‌ನಲ್ಲಿ ಬಿಡುಗಡೆ ಆಗುವುದಿಲ್ಲ. ಹಾಗಾಗಿ ಅಲ್ಲಿನ ಯುದ್ಧದ ಪರಿಸ್ಥಿತಿ ಈ ಚಿತ್ರದ ಕಲೆಕ್ಷನ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾಗಿ ‘ಧುರಂಧರ್ 2’ ಸಿನಿಮಾ ಯಾವುದೇ ಭೀತಿ ಇಲ್ಲದೇ ಮಾರ್ಚ್ 19ರಂದು ರಿಲೀಸ್ ಆಗಲಿದೆ.
2026 ರ ಟಿ20 ವಿಶ್ವಕಪ್ (T20 World Cup 2026) ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 7 ರನ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ (India vs England) ಫೈನಲ್ಗೇರಿತು. ರನ್ಗಳ ಮಳೆಯೇ ಹರಿದ ಈ ಪಂದ್ಯದಲ್ಲಿ ಬೌಲರ್ಗಳು ಹೈರಾಣಾದರೆ ಬ್ಯಾಟ್ಸ್ಮನ್ಗಳು ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆದರು. ಅದರಲ್ಲೂ ಕ್ರೀಡಾಂಗಣದಲ್ಲಿ ಭಾರತದ ಅಭಿಮಾನಿಗಳು ಹೆಚ್ಚಿದ್ದ ಕಾರಣ, ಟೀಂ ಇಂಡಿಯಾದ ಬ್ಯಾಟಿಂಗ್ ವೇಳೆ ಇಡೀ ಕ್ರೀಡಾಂಗಣವೇ ಜೈಕಾರಗಳಿಂದ ತುಂಬಿ ತುಳುಕಿತ್ತು. ಇತ್ತ ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಆಂಗ್ಲ ಆಭಿಮಾನಿಗಳು ಕಡಿಮೆ ಇದ್ದ ಕಾರಣ, ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಬೌಂಡರಿ, ಸಿಕ್ಸರ್ ಬಾರಿಸುತ್ತಿದ್ದಂತೆ ಇಡೀ ಕ್ರೀಡಾಂಗಣವೇ ನಿಶ್ಯಬ್ದವಾಗಿತ್ತು. ಆದಾಗ್ಯೂ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವೇಳೆ ಆರ್ಸಿಬಿ ಅಭಿಮಾನಿಗಳ (RCB Fans) ಅತಿರೇಕ ಇತರ ಅಭಿಮಾನಿಗಳನ್ನು ಅಸಮಾಧಾನಗೊಳ್ಳುವಂತೆ ಮಾಡಿತು. ಇದೀಗ ಆರ್ಸಿಬಿ ಫ್ಯಾನ್ಸ್ ಅಂಧಾಭಿಮಾನಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಆರ್ಸಿಬಿ ಫ್ಯಾನ್ಸ್ ಅಂಧಾಭಿಮಾನ
ವಾಸ್ತವವಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬರೋಬ್ಬರಿ 253 ರನ್ ಕಲೆಹಾಕಿತು. ಗುರಿ ದೊಡ್ಡದಿದ್ದರಿಂದ ಟೀಂ ಇಂಡಿಯಾ ಈ ಪಂದ್ಯವನ್ನು ಸುಲಭವಾಗಿ ಗೆದ್ದುಕೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಕೊನೆಯವರೆಗೂ ಸೋಲೊಪ್ಪಿಕೊಳ್ಳದ ಇಂಗ್ಲೆಂಡ್ ಆಟಗಾರರು ಪಂದ್ಯವನ್ನು ಕೊನೆಯವರೆಗೂ ರೋಚಕಗೊಳಿಸಿದರು. ಇದರಿಂದ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಕೊನೆಯ ಓವರ್ವರೆಗೂ ಆತಂಕ ಮನೆಮಾಡಿತ್ತು. ಆದರೆ ಆರ್ಸಿಬಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ವರ್ತಿಸಿದ ರೀತಿ ನಿಜಕ್ಕೂ ಟೀಂ ಇಂಡಿಯಾ ಅಭಿಮಾನಿಗಳನ್ನು ಬೇಸರಗೊಳಿಸಿದಲ್ಲದೆ, ಕೋಪಗೊಳ್ಳುವಂತೆ ಮಾಡಿತು.
ಅಷ್ಟಕ್ಕೂ ಆರ್ಸಿಬಿ ಫ್ಯಾನ್ಸ್ ಮಾಡಿದ್ದಾದರೂ ಏನು ಎಂಬುದನ್ನು ನೋಡುವುದಾದರೆ… ಇಂಗ್ಲೆಂಡ್ ಪರ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ಜೆಕಬ್ ಬೆಥೆಲ್ ಸ್ಫೋಟಕ ಶತಕ ಸಿಡಿಸುವುದರ ಜೊತೆಗೆ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ಯುವ ಕೆಲಸ ಮಾಡಿದರು. ತಮ್ಮ ಇನ್ನಿಂಗ್ಸ್ನಲ್ಲಿ 48 ಎಸೆತಗಳನ್ನು ಎದುರಿಸಿದ ಬೆಥೆಲ್ 8 ಬೌಂಡರಿ ಹಾಗೂ 7 ಸಿಕ್ಸರ್‌ಗಳನ್ನು ಬಾರಿಸಿದರು. ಹೀಗೆ ಬೆಥೆಲ್ ಭಾರತದ ಬೌಲರ್ಗಳನ್ನು ದಂಡಿಸುತ್ತಿದ್ದರೆ ಒಂದೆಡೆ ಟೀಂ ಇಂಡಿಯಾ ಅಭಿಮಾನಿಗಳು ಬೇಸರದಿಂದ ತಲೆಮೇಲೆ ಕೈಹೊತ್ತು ಕುಳಿತಿದ್ದರು. ಆದರೆ ಕ್ರೀಡಾಂಗಣದಲ್ಲಿದ್ದ ಕೆಲವು ಆರ್ಸಿಬಿ ಫ್ಯಾನ್ಸ್, ಬೆಥೆಲ್ ಬೌಂಡರಿ ಸಿಕ್ಸರ್‌ಗಳನ್ನು ಬಾರಿಸುತ್ತಿದ್ದಂತೆ ಆರ್ಸಿಬಿ, ಆರ್ಸಿಬಿ ಎಂದು ಕೂಗಲು ಶುರು ಮಾಡುತ್ತಿದ್ದರು.
ದೇಶಕ್ಕಿಂತ ಆರ್ಸಿಬಿ ತಂಡ ಮುಖ್ಯವೇ?
ಏಕೆಂದರೆ ಬೆಥೆಲ್ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುತ್ತಾರೆ. ಹೀಗಾಗಿ ಕೆಲವು ಆರ್ಸಿಬಿ ಅಭಿಮಾನಿಗಳು ಬೆಥೆಲ್, ಭಾರತದ ಬೌಲರ್ಗಳನ್ನು ದಂಡಿಸುತ್ತಿದ್ದಾಗ ಆರ್ಸಿಬಿ, ಆರ್ಸಿಬಿ ಎಂದು ಕೂಗಿ ಟೀಂ ಇಂಡಿಯಾ ಅಭಿಮಾನಿಗಳಿಗೆ ಇರಿಸು ಮುರಿಸು ಉಂಟುಮಾಡಿದರು. ಆರ್ಸಿಬಿ ಅಭಿಮಾನಿಗಳ ಈ ಅತಿರೇಕ ಎಲ್ಲರನ್ನು ಅಸಮಾಧಾನಗೊಳಿಸಿದೆ. ಅಂತರರಾಷ್ಟ್ರೀಯ ಪಂದ್ಯದಲ್ಲಿ ತಮ್ಮ ದೇಶವನ್ನು ಬೆಂಬಲಿಸುವ ಬದಲು ಫ್ರಾಂಚೈಸ್ ಕ್ರಿಕೆಟ್ನಲ್ಲಿ ಒಂದು ತಂಡವನ್ನು ಪ್ರತಿನಿಧಿಸುವ ಆಟಗಾರನನ್ನು ಬೆಂಬಲಿಸುವುದು ಎಷ್ಟು ಸರಿ ಎಂಬುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಆರ್ಸಿಬಿ ಅಭಿಮಾನಿಗಳ ಈ ಅಂಧಾಭಿಮಾನ ಸೋಶಿಯಲ್ ಮಿಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಟೀಂ ಇಂಡಿಯಾ ಅಭಿಮಾನಿಗಳ ಇದನ್ನು ನಾಚಿಕೆಗೇಡಿನ ಸಂಗತಿ ಎಂದು ಜರಿದಿದ್ದಾರೆ. ದೇಶದ ತಂಡವು ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡುತ್ತಿರುವಾಗ ಫ್ರಾಂಚೈಸಿ ನಿಷ್ಠೆಯನ್ನು ತೋರಿಸುವುದು ತಪ್ಪು ಎಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ‘ಫ್ರಾಂಚೈಸಿ ಕ್ರಿಕೆಟ್ಗಿಂತ ದೇಶವೇ ಮೊದಲು, ಐಪಿಎಲ್ ಅಲ್ಲ’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ