ಶುಲ್ಕ ಕಟ್ಟಿಲ್ಲವೆಂದು ಬೈಕ್ ಅಡವಿಟ್ಟುಕೊಂಡು ವಿದ್ಯಾರ್ಥಿಗೆ ಹಾಲ್ ಟಿಕೆಟ್ ನೀಡಿದ ಕಾಲೇಜು – Kannada News | Haveri: College Issues Hall Ticket to 2nd PUC Student After Bike Pawned Over Unpaid Fees

ಹಾವೇರಿ, ಮಾರ್ಚ್​​ 01: ಇತ್ತೀಚೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಹಣಕ್ಕಾಗಿ ಶಿಕ್ಷಣ ನೀಡುತ್ತಿವೆ ಎಂಬ ಅನುಮಾನಗಳು ಮೂಡುತ್ತಿವೆ. ಏಕೆಂದರೆ ಇದಕ್ಕೆ ಸಾಕ್ಷಿಯೆಂಬಂತೆ ಘಟನೆಯೊಂದು ನಗರದಲ್ಲಿ ನಡೆದಿದೆ.  ಇಲ್ಲೊಂದು ಖಾಸಗಿ ಶಿಕ್ಷಣ ಸಂಸ್ಥೆ ಶುಲ್ಕ ಕಟ್ಟಿಲ್ಲ ಅಂತಾ ಆರೋಪಿಸಿ ವಿದ್ಯಾರ್ಥಿನಿಗೆ ಪ್ರವೇಶ ಪತ್ರ ನೀಡಿಲ್ಲ.‌ ಅಷ್ಟೇ ಅಲ್ಲದೆ ಮಧ್ಯಸ್ಥಿಕೆ ವಹಿಸಿದ ವ್ಯಕ್ತಿಯ ಬೈಕ್​​ ಅನ್ನು ಅಡವಿಟ್ಟುಕೊಂಡು ಬಳಿಕ ಹಾಲ್​ ಟಿಕೆಟ್​ (hall ticket) ನೀಡಿದ್ದಾರೆ. ಸದ್ಯ ಆಡಳಿತ ಮಂಡಳಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿಕ್ಷಕಿಯಿಂದ ದರ್ಪ 

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಬಿಎಜೆಎಸ್​​ಎಸ್​ ಕಾಲೇಜು ಆವರಣದಲ್ಲಿರುವ ಪಿಯುಸಿ ಡಿಬಿಎಸ್ ಮೆಡಿಕಲ್ ನೀಟ್ ಅಕಾಡೆಮಿ ಕಾಲೇಜ್​​​ನಲ್ಲಿ ಘಟನೆ ನಡೆದಿದೆ. ಸಾರಾ ಜೆಸ್ಸಿಕಾ ಪಿಯುಸಿ ವಿಜ್ಞಾನ ಭಾಗದಲ್ಲಿ ಓದುತ್ತಿದ್ದು, ಪರೀಕ್ಷೆ ಹಾಲ್ ಟಿಕೆಟ್ ನೀಡದೆ ಕಳೆದ ಒಂದು ವಾರದಿಂದ ಆಡಳಿತದ ಮಂಡಳಿ ಸತಾಯಿಸಿದೆ. ವಿದ್ಯಾರ್ಥಿನಿ ಭವಿಷ್ಯ ಹಾಳಾಗುತ್ತೆ, ಹಾಲ್ ಟಿಕೆಟ್ ನೀಡುವಂತೆ ಕೇಳಿದಾಗ ಸುನೀತಾ ಮೇಡಂ ಎನ್ನುವವರು ಎಲ್ಲಾ ಕಾಲೇಜಿನವರು ಪುಗಸಟ್ಟೆ ಕಲಿಸುತ್ತಾರಾ ಎಂದು ದರ್ಪ ತೋರಿದ್ದಾರೆ.

ಅಲ್ಲದೆ ಪ್ರಕರಣ ಮಧ್ಯಸ್ಥಿಕೆ ವಹಿಸಿದ ಶಿವಪುತ್ರ ಎಂಬುವವರ ಬೈಕ್ ಮತ್ತು ಮೊಬೈಲ್ ತೆಗೆದುಕೊಂಡಿದ್ದಾರೆ. ಕೊನೆಗೆ ಮೊಬೈಲ್ ಕೊಟ್ಟು ಬೈಕ್ ಇಟ್ಟುಕೊಂಡಿದ್ದಾರೆ. ಬಳಿಕ ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗೆ ಹಾಲ್​ ಟಿಕೆಟ್ ನೀಡಿ ಪರೀಕ್ಷೆಗೆ ಅವಕಾಶ ನೀಡಿದ್ದಾರೆ.

ಇದನ್ನೂ ಓದಿ: ಶುಲ್ಕ ಬಾಕಿ ಆರೋಪ: ವಿದ್ಯಾರ್ಥಿನಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಹಾಲ್ ಟಿಕೆಟ್ ನಿರಾಕರಿಸಿದ ಕಾಲೇಜು

ಸುನೀತಾ ಡಿಬಿ ಮೇಡಂ ಸರ್ಕಾರಿ ಹಿರಿಯ ಉನ್ನತ್ತೀಕರಣ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಖಾಸಗಿ ಶಾಲೆಯಲ್ಲಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. 30 ಸಾವಿರ ಶುಲ್ಕಕ್ಕಾಗಿ ವಿದ್ಯಾರ್ಥಿನಿ ಕಣ್ಣೀರು ಹಾಕಿದ್ದು, ಸರ್ಕಾರಿ ಶಾಲೆಯ ಶಿಕ್ಷಕಿಗೆ ಖಾಸಗಿ ಶಾಲೆಯಲ್ಲಿ ಏನು ಕೆಲಸ ಎಂದು ಆಕ್ರೋಶ ವ್ಯಕ್ತವಾಗಿದೆ.

ಅಲ್ಲದೆ ಈ ಹಿಂದೆ ಈ ಶಾಲೆಯಲ್ಲಿ ಕೆಲಸ ಮಾಡಿದ ಶಿಕ್ಷಕರಿಗೆ ಸಂಬಳ ನೀಡಿಲ್ಲ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಲು ಸುನೀತಾ ‌ಮೇಡಂ ನಿರಾಕರಿಸಿದರು. ವಿದ್ಯಾರ್ಥಿನಿ ಸಾರಾ ತಂದೆ ರಾಜು ಪ್ರತಿಕ್ರಿಯಿಸಿದ್ದು, ಶುಲ್ಕವನ್ನ ಕಟ್ಟಿದ್ದೇನೆ. ಅದಕ್ಕೆ ಸರಿಯಾದ ರಸೀದಿ ನೀಡಲ್ಲ‌ ಎಂದರು. ಇನ್ನು ಈ ವಿಚಾರ ಬಿಇಒ ಶ್ಯಾಮಸುಂದರ್ ಗಮನಕ್ಕೆ ತರಲಾಗಿದ್ದು, ನೋಟಿಸ್ ನೀಡಿ ತನಿಖೆ ಮಾಡುತ್ತೇವೆ ಅಂದಿದ್ದಾರೆ.

ಇದನ್ನೂ ಓದಿ: ಪರೀಕ್ಷೆಗೆ ಹೆದರಿ ವಸತಿ ಶಾಲೆಯ ಕಾಂಪೌಂಡ್​​ ಹಾರಿ 5 ಮಂದಿ SSLC ವಿದ್ಯಾರ್ಥಿಗಳು ಪರಾರಿ!

ಒಟ್ಟಿನಲ್ಲಿ ಖಾಸಗಿ ಶಾಲೆಯ ಧನದಾಯಿ ಆಸೆಗಾಗಿ ವಿದ್ಯಾರ್ಥಿನಿ ಪ್ರವೇಶ ಪತ್ರ ನೀಡಿದೆ ಸತಾಯಿಸುತ್ತಿದ್ದಾರೆ. ಸ್ಥಳೀಯರು ಸುನೀತಾ ಮೇಡಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದು, ಸರ್ಕಾರಿ ಶಾಲೆಯ ಶಿಕ್ಷಕಿಯ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.

ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ದಯವಿಟ್ಟು ಕಾಪಾಡಿ’: ಸಹಾಯಕ್ಕಾಗಿ ಮೋದಿಗೆ ಮೊರೆಯಿಟ್ಟ ಶಿವಣ್ಣನ ನಟಿ – Kannada News | Sonal Chauhan stranded Dubai appeals pm Modi’s help to get back to India

ಮಧ್ಯಪ್ರಾಚ್ಯದಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇರಾನ್ ಮೇಲೆ ಅಮೆರಿಕ (America) ಮತ್ತು ಇಸ್ರೇಲ್ ಜಂಟಿ ದಾಳಿ ಮಾಡುತ್ತಿವೆ. ಇರಾನ್ ಸಹ ಪ್ರತಿದಾಳಿ ಮಾಡುತ್ತಿದೆ. ಯುದ್ಧದ ಭೀತಿ ಮಧ್ಯಪ್ರಾಚ್ಯದ ಹಲವು ದೇಶಗಳನ್ನು ಆವರಿಸಿದ್ದು, ಅದರಲ್ಲಿ ಯುಎಇ ಸಹ ಒಂದಾಗಿದೆ. ಯುಎಇಯ ದುಬೈ, ಅಬುದಾಭಿ ಇನ್ನೂ ಕೆಲವು ನಗರಗಳಲ್ಲಿ ಭಾರತೀಯರು ಸಿಲುಕಿಕೊಂಡಿದ್ದು, ಭಯದಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ವಿಮಾನ ಹಾರಾಟ ರದ್ದಾಗಿರುವ ಕಾರಣ ಭಾರತಕ್ಕೆ ಬರಲಾರದೆ ಒದ್ದಾಡುತ್ತಿದ್ದಾರೆ. ಇದೀಗ ದುಬೈನಲ್ಲಿ ಸಿಲುಕಿಕೊಂಡಿರುವ ನಟಿಯೊಬ್ಬರು ತಮ್ಮನ್ನು ಕಾಪಾಡುವಂತೆ ಪ್ರಧಾನಿ ಮೋದಿ ಅವರಲ್ಲಿ ಕೇಳಿಕೊಂಡಿದ್ದಾರೆ. ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ, ಬಾಲಿವುಡ್ ನಟಿ ಸೋನಲ್ ಚೌಹಾಣ್ ಅವರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನಯಾನ ಸೇವೆಗಳು ಸ್ಥಗಿತಗೊಂಡಿರುವುದರಿಂದ ತಾಯ್ನಾಡಿಗೆ ಮರಳಲು ಸಾಧ್ಯವಾಗದೆ, ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ಕನ್ನಡದ ‘ಶಿವಲಿಂಗ’ ಸೇರಿದಂತೆ ಹಿಂದಿ, ತೆಲುಗು ಸಿನಿಮಾಗಳಲ್ಲಿಯೂ ಸಹ ನಟಿಸಿರುವ ನಟಿ ಸೋನಲ್ ಚೌಹಾಣ್ ಅವರು ದುಬೈನಲ್ಲಿ ಸಿಲುಕಿಕೊಂಡಿದ್ದು, ಯುದ್ಧ ಭೀತಿಯಿಂದ ತತ್ತರಿಸಿದ್ದಾರೆ. ಭಾರತಕ್ಕೆ ಬರಲಾರದೆ ಚಿಂತಿತರಾಗಿರುವ ನಟಿ ಸೋನಲ್, ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದ್ದು, ತಮ್ಮನ್ನ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಸೋನಲ್ ಚೌಹಾಣ್ ಅವರು ತಮ್ಮ ಪೋಸ್ಟ್‌ನಲ್ಲಿ,ಪ್ರಧಾನಿ ನರೇಂದ್ರ ಮೋದಿ ಅವರೇ, ನಾನು ಪ್ರಸ್ತುತ ದುಬೈನಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ ಸಿಲುಕಿಕೊಂಡಿದ್ದೇನೆ. ವಿಮಾನಗಳನ್ನು ರದ್ದುಗೊಳಿಸಲಾಗಿದೆ ಮತ್ತು ಭಾರತಕ್ಕೆ ಮರಳಲು ಸ್ಪಷ್ಟ ಮಾರ್ಗವಿಲ್ಲ. ನಾನು ಸುರಕ್ಷಿತವಾಗಿ ಮನೆಗೆ ಮರಳಲು ಸರ್ಕಾರದ ಮಾರ್ಗದರ್ಶನ ಮತ್ತು ಬೆಂಬಲವನ್ನು ಬಯಸುತ್ತಿದ್ದೇನೆ. ಸರ್ಕಾರದಿಂದ ಯಾವುದೇ ಸಹಾಯ ಮತ್ತು ಸುರಕ್ಷಿತ ವಾಪಸಾತಿಗೆ ಮಾರ್ಗದರ್ಶನಕ್ಕಾಗಿ ನಾನು ತುಂಬಾ ಕೃತಜ್ಞಳಾಗಿರುತ್ತೇನೆ’ ಎಂದಿರುವ ನಟಿ, ತಮ್ಮ ಟ್ವೀಟ್ ಅನ್ನು ಪ್ರಧಾನಿ ಕಚೇರಿ (PMO) ಮತ್ತು ವಿದೇಶಾಂಗ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ:‘ನಾನು ಬಾಲಿವುಡ್ ಬಿಡಲು ಬಯಸಲಿಲ್ಲ, ನನ್ನನ್ನು ಬಲವಂತಪಡಿಸಲಾಯಿತು’; ಪ್ರಿಯಾಂಕಾ ಚೋಪ್ರಾ

ಸೋನಲ್ ಚೌಹಾಣ್ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ಮತ್ತು ಮಾಡೆಲ್ ಆಗಿದ್ದಾರೆ. 2008ರಲ್ಲಿ ಇಮ್ರಾನ್ ಹಶ್ಮಿ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಜನ್ನತ್’ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಈ ಚಿತ್ರದ ‘ಜರಾ ಸಾ’ ಹಾಡಿನ ಮೂಲಕ ಅವರು ಸಖತ್ ಜನಪ್ರಿಯತೆ ಗಳಿಸಿದರು. ಕೇವಲ ಹಿಂದಿ ಮಾತ್ರವೇ ಅಲ್ಲದೆ ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಶಿವ ರಾಜ್‌ಕುಮಾರ್ ಅವರ ಜೊತೆ ‘ಶಿವಲಿಂಗ’ ಚಿತ್ರದ ಪ್ರಮುಖ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ತೆಲುಗಿನಲ್ಲಿ ಬಾಲಕೃಷ್ಣ ಅವರ ಜೊತೆ ‘ಲೆಜೆಂಡ್’ ಮತ್ತು ‘ಡಿಕ್ಟೇಟರ್’ ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಭಾಸ್ ಅಭಿನಯದ ಅದ್ದೂರಿ ಚಿತ್ರ ‘ಆದಿಪುರುಷ್’ ನಲ್ಲಿ ಶೇಷನಾಗನ ಪತ್ನಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಯುದ್ಧ ಭೀತಿ ಇರುವ ಕಾರಣದಿಂದಾಗಿ ಸುರಕ್ಷತೆಯ ದೃಷ್ಟಿಯಿಂದ ದುಬೈ ಸೇರಿದಂತೆ ಹಲವು ಅರಬ್ ರಾಷ್ಟ್ರಗಳ ವೈಮಾನಿಕ ಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಆಕಾಶದಲ್ಲಿ ಕ್ಷಿಪಣಿಗಳು ಸಂಚರಿಸುತ್ತಿರುವ ವಿಡಿಯೋಗಳು ಹರಿದಾಡುತ್ತಿದ್ದು, ಪ್ರವಾಸಿಗರಲ್ಲಿ ಭೀತಿ ಮೂಡಿಸಿದೆ.ಸೋನಲ್ ಅವರಂತೆ ಸಾವಿರಾರು ಭಾರತೀಯ ಪ್ರಜೆಗಳು ಅಲ್ಲಿ ಸಿಲುಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs WI: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ; ರಿಂಕು, ಕುಲ್ದೀಪ್​ಗೆ ಇಲ್ಲ ಅವಕಾಶ – Kannada News | IND vs WI T20 World Cup: Knockout Match for Semifinals; Playing XI and Head to Head

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ (India vs West Indies) ನಡುವಿನ ಸೂಪರ್ 8 ಪಂದ್ಯ ನಡೆಯುತ್ತಿದೆ. ಈ ಪಂದ್ಯವು ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ. ಏಕೆಂದರೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಸೆಮಿಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತದೆ. ಹೀಗಾಗಿ ಈ ಪಂದ್ಯ ಉಭಯ ತಂಡಗಳಿಗೂ ಒಂದು ರೀತಿಯ ನಾಕೌಟ್ ಪಂದ್ಯವಾಗಿದ್ದು ಸೋತ ತಂಡ ಟಿ20 ವಿಶ್ವಕಪ್​ನಿಂದ (T20 World Cup) ಹೊರಬೀಳಲಿದೆ.

ಟಾಸ್ ಗೆದ್ದ ಭಾರತ

ಇನ್ನು ಈ ಪಂದ್ಯದ ಟಾಸ್ ಈಗಾಗಲೇ ಮುಗಿದಿದ್ದು, ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಟಾಸ್ ನಂತರ ಎರಡೂ ತಂಡಗಳ ಆಡುವ ಹನ್ನೊಂದರ ಬಳಗವೂ ಹೊರಬಿದ್ದಿದೆ. ಅದರಂತೆ ಭಾರತ ತಂಡದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಅಂದರೆ ಜಿಂಬಾಬ್ವೆ ವಿರುದ್ಧ ಕಣಕ್ಕಿಳಿದಿದ್ದ ತಂಡವೇ ಈ ಪಂದದಯದಲ್ಲೂ ಆಡಲಿದೆ. ಇತ್ತ ವೆಸ್ಟ್ ಇಂಡೀಸ್ ತಂಡದಲ್ಲಿ ಬದಲಾವಣೆ ಮಾಡಲಾಗಿದೆ.

ಮುಖಾಮುಖಿ ದಾಖಲೆ

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಅಂತರರಾಷ್ಟ್ರೀಯ ಟಿ20 ಪಂದ್ಯದಲ್ಲಿ ಇದುವರೆಗೆ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ತಂಡವು 19 ಪಂದ್ಯಗಳನ್ನು ಗೆದ್ದಿದ್ದರೆ, ವೆಸ್ಟ್ ಇಂಡೀಸ್ 10 ಪಂದ್ಯವನ್ನು ಗೆದ್ದಿದೆ. ಉಳಿದಂತೆ 1 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಇದರರ್ಥ ಭಾರತ ತಂಡ, ವಿಂಡೀಸ್ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿದೆ ಎನ್ನಬಹುದು.

IND vs WI T20 WC Live Score: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ

ಉಭಯ ತಂಡಗಳು

ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಜಸ್ಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ

ವೆಸ್ಟ್ ಇಂಡೀಸ್ ತಂಡ: ಶೈ ಹೋಪ್ (ನಾಯಕ), ಶಿಮ್ರಾನ್ ಹೆಟ್ಮೈರ್, ರೋವ್ಮನ್ ಪೊವೆಲ್, ರೋಸ್ಟನ್ ಚೇಸ್, ಶೆರ್ಫೇನ್ ರುದರ್ಫೋರ್ಡ್, ಜೇಸನ್ ಹೋಲ್ಡರ್, ಮ್ಯಾಥ್ಯೂ ಫೋರ್ಡ್, ರೊಮಾರಿಯೊ ಶೆಫರ್ಡ್, ಗುಡಕೇಶ್ ಮೋತಿ, ಶಮರ್ ಜೋಸೆಫ್, ಅಕಿಲ್ ಹೊಸೈನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:52 pm, Sun, 1 March 26

Source link

Video: ಮೈಸೂರಿನ ಬೀದಿಯಲ್ಲಿ ಬಿರಿಯಾನಿ ಸವಿದು ಸ್ಥಳೀಯರ ಆತಿಥ್ಯಕ್ಕೆ ಮನಸೋತ ವಿದೇಶಿಗ – Kannada News | Mysore: A foreigner was delighted with the hospitality after tasting free biryani on the side of the road in Mysore.

ಮೈಸೂರು, ಮಾರ್ಚ್ 01: ಭಾರತಕ್ಕೆ ಬರುವ ವಿದೇಶಿಗರು (Foreigners) ಇಲ್ಲಿನ ಪ್ರವಾಸಿ ತಾಣಗಳು, ವಿವಿಧ ಆಹಾರಗಳನ್ನು ಇಷ್ಟ ಪಟ್ಟು ಸವಿಯುತ್ತಾರೆ. ಆಚಾರ ವಿಚಾರವನ್ನು ಇಷ್ಟ ಪಟ್ಟು ಇಲ್ಲೇ ಸೆಟಲ್ ಆಗ್ತಾರೆ.  ಅಷ್ಟೇ ಅಲ್ಲದೇ ಭಾರತೀಯರ ಒಳ್ಳೆಯ ಮನಸ್ಸಿಗೆ ಹಾಗೂ ಅತಿಥಿ ಸತ್ಕಾರಕ್ಕೆ ಮನಸೋಲುವುದಿದೆ. ಇದೀಗ ಭಾರತಕ್ಕೆ ಭೇಟಿ ನೀಡಿದ ವಿದೇಶಿಗರೊಬ್ಬರು ಹಂಚಿಕೊಂಡ ಹೃದಯಸ್ಪರ್ಶಿ ಅನುಭವವು ಎಲ್ಲರ ಗಮನ ಸೆಳೆದಿದೆ. ಮೈಸೂರಿನ (Mysore) ಬೀದಿಗಳಲ್ಲಿ ನಡೆದುಕೊಂಡು ಹೋಗುವಾಗ ವಿದೇಶಿಗರೊಬ್ಬರು ಅನಿರೀಕ್ಷಿತ ಕ್ಷಣವನ್ನು ಸೆರೆ ಹಿಡಿದ್ದಾರೆ. ಉಚಿತವಾಗಿ ಬಿರಿಯಾನಿ ನೀಡಿದ್ದು, ಭಾರತೀಯರ ಆತಿಥ್ಯಕ್ಕೆ ಮನಸೋತಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

lepanimusicc ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.  ಈ ವಿಡಿಯೋ ವಿದೇಶಿಗರೊಬ್ಬರು ಮೈಸೂರಿನ ಬೀದಿಗಳಲ್ಲಿ ಸುತ್ತಾಡಿದ್ದಾರೆ. ಈ ವಿಡಿಯೋದಲ್ಲಿ ಸ್ಥಳೀಯರೊಬ್ಬ ಉಚಿತವಾಗಿ ವಿದೇಶಿಗರೊಬ್ಬರಿಗೆ ಊಟ ಬಡಿಸುವುದನ್ನು ನೋಡಬಹುದು. ಈ ಕ್ಲಿಪ್‌ನ ಶೀರ್ಷಿಕೆಯಲ್ಲಿ ಭಾರತವು ಅದ್ಭುತವಾದ ಸ್ಥಳ. ನಾವು ಮೈಸೂರಿನ ಜನನಿಬಿಡ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಸುವಾಸನೆ ನನ್ನ ಮೂಗಿಗೆ ಬಡಿಯಿತು. ನಾವು ರಸ್ತೆಯ ಆಚೆ ನೋಡಿದೆವು. ಒಂದು ದೊಡ್ಡ ಪಾತ್ರೆಯ ಹಿಂದೆ ಇದ್ದ ಆ ವ್ಯಕ್ತಿ ನಗುವಿನೊಂದಿಗೆ, ಜನರಿಗೆ ಪ್ಲೇಟ್‌ ಬಿರಿಯಾನಿಯನ್ನು ಹಾಕುತ್ತಿದ್ದವ ನಮ್ಮತ್ತ ಕೈ ಬೀಸುತ್ತಿದ್ದ.

ವೈರಲ್ ವಿಡಿಯೋ ಇಲ್ಲಿದೆ

ಮೊದಲಿಗೆ ನಾನು ಹಿಂಜರಿದಿದ್ದೆ, ಆ ಬಳಿಕ ನಾವು ಹೋದೆವು. ನಾನು ಅವನ ಬಳಿ ಒಂದು ಪ್ಲೇಟ್‌ಗೆ ಎಷ್ಟು ಎಂದು ಕೇಳಿದೆ. ಅವನು ‘ಚಿಂತಿಸಬೇಡಿ, ತಿನ್ನಿರಿ’ ಎಂದು ಹೇಳಿದನು. ನನಗೆ ಒಂದು ಪ್ಲೇಟ್‌ ಬಿರಿಯಾನಿ ಬಡಿಸಿದ. ಅವನ ಸ್ನೇಹಿತ ನನಗೆ ಮೇಲೆ ಸ್ವಲ್ಪ ಚಿಕನ್ ಕರಿ ಬಡಿಸಿದನು. ನಾನು ಬೀದಿ ಬದಿಯಲ್ಲಿ ಕೆಲವು ಸ್ಥಳೀಯರ ಪಕ್ಕದಲ್ಲಿ ನಿಂತು ನನ್ನ ಜೀವನದಲ್ಲಿ ಹೊಟ್ಟೆ ತುಂಬುವ ರುಚಿಕರ ಬಿರಿಯಾನಿ ತಿಂದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಧೋಬಿ ಘಾಟ್‌ಗೆ ತೆರಳಿ ತನ್ನ ಮಕ್ಕಳಿಗೆ ಜೀವನ ಪಾಠ ಹೇಳಿಕೊಟ್ಟ ತಾಯಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಇದು ನಮಗೆ ತಿಳಿದಿರುವ ಭಾರತ, ಅಲ್ಲಿ ಅತಿಥಿಗಳನ್ನು ಕುಟುಂಬದವರಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ವಿದೇಶಿಗರು ಭಾರತವನ್ನು ಇಷ್ಟ ಪಡಲು ಇದುವೇ ಕಾರಣ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇದು ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಶುದ್ಧ ಮಾನವೀಯತೆ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:42 pm, Sun, 1 March 26

Source link

ಚಿತ್ರದುರ್ಗ ಜಿಲ್ಲಾಡಳಿತ ಭವನ ವಿವಾದ: ಅವೈಜ್ಞಾನಿಕ ಕಟ್ಟಡವೆಂದು ರಿಜೆಕ್ಟ್; ಕೋಟ್ಯಂತರ ರೂ ನೀರಲ್ಲಿ ಹೋಮ – Kannada News | Chitradurga Admin Building Row: Rejected Site, New Plan Sparks Environmental Clash

ಚಿತ್ರದುರ್ಗ, ಮಾರ್ಚ್​​ 01: ಚಿತ್ರದುರ್ಗದಲ್ಲಿ (Chitradurga) ನೂತನ ಜಿಲ್ಲಾಡಳಿತ ಭವನ ಆಗಬೇಕೆಂಬುದು ದುರ್ಗದ ಜನರ ಬಹು ಕಾಲದ ಕನಸು. ಹಾಗಾಗಿ ಕಣಿವೆ ಪ್ರದೇಶದಲ್ಲಿ ಜಿಲ್ಲಾಡಳಿತ ಭವನ ಕಟ್ಟಡವೇನೋ ನಿರ್ಮಾಣವಾಗಿದೆ. ಆದರ  ಉದ್ಘಾಟನೆಗೂ ಮುನ್ನವೇ ಅವೈಜ್ಞಾನಿಕ ಕಟ್ಟಡ ಎಂಬ ಕಾರಣಕ್ಕೆ ಜಿಲ್ಲಾಡಳಿತವೇ ತಿರಸ್ಕರಿಸಿ ಮಾಡಿದ್ದು, ಬೇರೆಡೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ. ಆ ಮೂಲಕ ಕೋಟ್ಯಂತರ ರೂ ನೀರಲ್ಲಿ ಹೋಮ ಮಾಡಿದಂತಾಗಿದೆ. ಸದ್ಯ ಹೊಸ ವಿವಾದವೊಂದು ಸೃಷ್ಟಿ ಆಗಿದೆ.

ಕೋಟೆನಾಡು ಚಿತ್ರದುರ್ಗದಲ್ಲಿ ಒಂದೇ ಸೂರಿನಡಿ ಎಲ್ಲಾ ಕಚೇರಿಗಳು ಇರುವಂತ ಜಿಲ್ಲಾಡಳಿತ ಭವನ ನಿರ್ಮಾಣ ಆಗಬೇಕೆಂಬುದು ದುರ್ಗದ ಜನರ ಬಹುಕಾಲದ ಕನಸು. ಅಂತೆಯೇ 2020-21ರಲ್ಲಿ ಚಿತ್ರದುರ್ಗ ಬಳಿಯ ಕಣಿವೆ ಪ್ರದೇಶದಲ್ಲಿ ಜಾಗ ಗುರುತಿಸಿ ಜಿಲ್ಲಾಡಳಿತ ಭವನ ಕಟ್ಟಡ ಶುರು ಮಾಡಲಾಗಿತ್ತು. ಆರೇಳು ತಿಂಗಳ ಹಿಂದೆ ಕಟ್ಟಡ ಪೂರ್ಣಗೊಂಡಿದ್ದರೂ ಉದ್ಘಾಟನೆ ಭಾಗ್ಯ ಮಾತ್ರ ಕಂಡಿಲ್ಲ.

ಇದನ್ನೂ ಓದಿ: ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ವಿಳಂಬ: ಸಿಡಿದೆದ್ದ ರೈತರಿಂದ ನಾಳೆ ಬಂದ್‌ಗೆ ಕರೆ

ಅವೈಜ್ಞಾನಿಕ ಕಟ್ಟಡ, ಸೂಕ್ತ ಮೂಲಕ ಸೌಕರ್ಯಗಳ ಕೊರತೆ ಹಾಗೂ ನಗರದಿಂದ ಮೂರ್ನಾಲ್ಕು ಕಿ.ಮೀ ದೂರ ಎನ್ನುವ ಕಾರಣಕ್ಕೆ ಜಿಲ್ಲಾಡಳಿತವೇ ರಿಜೆಕ್ಟ್ ಮಾಡಿದೆ. ಉಸ್ತುವಾರಿ ಸಚಿವ ಡಿ ಸುಧಾಕರ್, ಶಾಸಕ ಕೆಸಿ ವಿರೇಂದ್ರ ಪಪ್ಪಿ ನಿರ್ಮಾಣವಾದ ಕಟ್ಟಡ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಬಿಟ್ಟುಕೊಡಲು ನಿರ್ಧರಿಸಿದ್ದು, ಈಗಾಗಲೇ ಹಸ್ತಾಂತರಿಸಿದ್ದಾರೆ. ಚಿತ್ರದುರ್ಗ ನಗರದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ಜಾಗದಲ್ಲಿ ಆರು ಎಕರೆ ಪ್ರದೇಶದಲ್ಲಿ ಹೊಸ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಪ್ಲ್ಯಾನ್​​ ಮಾಡಲಾಗಿದ್ದು, ತೋಟಗಾರಿಕೆ ಇಲಾಖೆ ಸಚಿವ ಎಸ್​​.ಎಸ್ ಮಲ್ಲಿಕಾರ್ಜುನ್​​​ ಕೂಡ ಸೈ ಎಂದಿದ್ದಾರೆ.

ಪರಿಸರ ಪ್ರಿಯರು ಹಾಗೂ ಬಿಜೆಪಿ ನಾಯಕರು ವಿರೋಧ

ಇನ್ನು ದುರ್ಗದ ಪರಿಸರ ಪ್ರಿಯರು ಹಾಗೂ ಬಿಜೆಪಿ ನಾಯಕರು ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ತೋಟಗಾರಿಕೆ ಇಲಾಖೆ ಪ್ರದೇಶದಲ್ಲಿ ನೂರಾರು ಗಿಡ ಮರಗಳಿವೆ, ಸಸಿಗಳನ್ನು ಬೆಳೆಸಲಾಗುತ್ತದೆ. ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಅಲ್ಲದೆ ರೈತರಿಗೆ ಅನುಕೂಲಕರವಾಗಿದೆ. ಆರು ಎಕರೆಯಷ್ಟು ಪ್ರದೇಶದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಸರಿಯಲ್ಲ. ಕಟ್ಟಡ ನಿರ್ಮಾಣಕ್ಕಾಗಿ ಗಿಡ ಮರಗಳಿಗೆ ಕೊಡಲಿ ಪೆಟ್ಟು ನೀಡಬೇಕಾಗುತ್ತದೆ. ಪರಿಸರ ಹಾನಿ ಮಾಡಿ ಕಟ್ಟಡ ನಿರ್ಮಾಣ ಅಗತ್ಯವಿಲ್ಲ ಎಂದಿದ್ದಾರೆ.

ಸಂಸದ ಗೋವಿಂದ ಕಾರಜೋಳ ಹೇಳಿದ್ದಿಷ್ಟು 

ಅಲ್ಲದೆ ಮುಂದಿನ 50 ವರ್ಷದ ಪ್ಲ್ಯಾನ್​ ಇಟ್ಟುಕೊಂಡು ಸೂಕ್ತ ಸ್ಥಳದಲ್ಲಿ ವಿಶಾಲವಾದ ಕಟ್ಟಡ ನಿರ್ಮಿಸಬೇಕು. ಈಗಾಗಲೇ ಹತ್ತಾರು ಕೋಟಿ ರೂ ಖರ್ಚು ಮಾಡಿ ಕಣಿವೆ ಪ್ರದೇಶದಲ್ಲಿ ನಿರ್ಮಿಸಲಾದ ಜಿಲ್ಲಾಡಳಿತ ಭವನ ಕಟ್ಟಡವನ್ನೇ ಬಳಸಬೇಕು. ಆಡಳಿತ ಭವನ ಮೆಡಿಕಲ್ ಕಾಲೇಜಿಗೆ ಸೂಕ್ತ ಆಗದು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲೊಂದು ವಿಶೇಷ ಗ್ರಾಮ: ಮಾರಮ್ಮ ಜಾತ್ರೆಗೆ ಪ್ರತಿ ರಸ್ತೆಗೆ ಮುಳ್ಳಿನ ಬೇಲಿ ಹಾಕಿ ದಿಗ್ಭಂಧನ

ಒಟ್ಟಾರೆ ಚಿತ್ರದುರ್ಗ ನಗರದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣ ಈಗ ವಿವಾದ ಸೃಷ್ಟಿಸಿದೆ. ಜಿಲ್ಲಾಡಳಿತ, ಸರ್ಕಾರ ಮತ್ತು ಅಧಿಕಾರಿಗಳು ಸೂಕ್ತ ಪ್ಲ್ಯಾನ್​ ಇಲ್ಲದೆ ಹತ್ತಾರು ಕೋಟಿ ರೂ ವೆಚ್ಚದಲ್ಲಿ ಈಗಾಗಲೇ ಕಣಿವೆ ಬಳಿ ಕಟ್ಟಡ ನಿರ್ಮಿಸಿದ್ದಾರೆ. ಕಟ್ಟಡ ನಿರ್ಮಾಣದ ಬಳಿಕ ರಿಜೆಕ್ಟ್ ಮಾಡುತ್ತಿರುವುದು ವಿವಾದ ಹುಟ್ಟುಹಾಕಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಕೊನೆಯದಾಗಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs WI T20 WC Live Score: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ – Kannada News | India vs West Indies T20 World Cup 2026 Live Cricket Score IND vs WI Today Match at Eden Gardens Kolkata Live Cricket Score and Updates in Kannada

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯವು ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ ಏಕೆಂದರೆ ಈ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸುತ್ತದೋ ಆ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗಲಿದೆ. ಸೋತ ತಂಡದ ಪ್ರಯಾಣ ಇಲ್ಲಿಗೆ ಅಂತ್ಯವಾಗುತ್ತದೆ. ಹೀಗಾಗಿ ಉಭಯ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನೀಡುವುದನ್ನು ನಿರೀಕ್ಷಿಸಲಾಗಿದೆ.

Source link

ಪಾಕಿಸ್ತಾನ ಆಯ್ತು, ಇರಾನ್ ದೇಶಕ್ಕೂ ಕೈಕೊಟ್ಟಿತಾ ಚೀನಾದ ಏರ್ ಡಿಫೆನ್ಸ್ ಸಿಸ್ಟಂ? – Kannada News | China’s air defence system HQ 9B in Iran allegedly failed to stop US air strikes

ನವದೆಹಲಿ, ಮಾರ್ಚ್ 1: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್​ನಿಂದ ವ್ಯಾಪಕ ಮಿಲಿಟರಿ ದಾಳಿ ಆಗಿದೆ. ಇರಾನ್ ಸರ್ವೇಚ್ಚ ನಾಯಕ ಆಯತುಲ್ಲಾ ಅಲಿ ಖಮೇನೀ (Ayatollah Ali Khamenei) ಸೇರಿದಂತೆ 200ಕ್ಕೂ ಹೆಚ್ಚು ಜನರು ದಾಳಿಯಲ್ಲಿ ಹತರಾಗಿದ್ದಾರೆ. ಈ ಮಧ್ಯೆ ಚೀನಾದ ಎಚ್​ಕ್ಯೂ-9ಬಿ (HQ-9B) ಎನ್ನುವ ಏರ್ ಡಿಫೆನ್ಸ್ ಸಿಸ್ಟಂನ ಸುದ್ದಿ ಚಾಲನೆಗೆ ಬಂದಿದೆ. ಸುದ್ದಿಯ ಪ್ರಕಾರ, ಇರಾನ್ ದೇಶ ಇತ್ತೀಚೆಗಷ್ಟೇ ಚೀನಾದ ಎಚ್​ಕ್ಯೂ-9ಬಿ ಅನ್ನು ಪಡೆದಿತ್ತು ಎನ್ನಲಾಗಿದೆ. ಇದು ನಿಜವೇ ಆದಲ್ಲಿ ಚೀನಾಗೆ ಮುಜುಗರ ತರಬಹುದಾದಂತಹ ಮತ್ತು ಕಳವಳಪಡಬೇಕಾದಂತಹ ಸಂಗತಿಯಾಗುತ್ತದೆ.

ಅಮೆರಿಕ ಮತ್ತು ಇಸ್ರೇಲ್​ನ ಜಂಟಿ ದಾಳಿಗಳನ್ನು ತಡೆಯಲು ಇರಾನ್​ಗೆ ಸಾಧ್ಯವಾಗಿಲ್ಲ. ಅಂದರೆ ಚೀನಾ ನೀಡಿದ ಎಚ್​ಕ್ಯೂ-9ಬಿ ಏರ್ ಡಿಫೆನ್ಸ್ ಸಿಸ್ಟಂ ಪೂರ್ಣ ವಿಫಲಗೊಂಡಿರಬಹುದು. ಅಥವಾ ಅಮೆರಿಕ ಇಸ್ರೇಲ್​ನ ಸಂಯೋಜಿತ ದಾಳಿ ಎದುರಿಸಲು ಇದು ವಿಫಲವಾಗಿರಬಹುದು.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಆಯಿಲ್ ಟ್ಯಾಂಕರ್ ಮೇಲೆ ಇರಾನ್ ದಾಳಿ; ತೈಲ ಹಡಗಿನಲ್ಲಿದ್ದರು 15 ಮಂದಿ ಭಾರತೀಯರು

ಆಪರೇಷನ್ ಸಿಂದೂರ್ ವೇಳೆಯೂ ಎಚ್​ಕ್ಯೂ-9ಬಿ ಏರ್ ಡಿಫೆನ್ಸ್ ಸಿಸ್ಟಂ ಮುನ್ನೆಲೆಗೆ ಬಂದಿತ್ತು. ಭಾರತದ ವಾಯು ದಾಳಿಗಳನ್ನು ತಡೆಯಲು ಈ ಚೀನೀ ಸಿಸ್ಟಂ ವಿಫಲವಾಗಿತ್ತು. ಈಗ ಮತ್ತೊಂದು ಯುದ್ಧ ಸಂದರ್ಭದಲ್ಲಿ ಅದರ ವೈಫಲ್ಯ ಕಂಡು ಬಂದಿರುವುದು ಗಮನಾರ್ಹ ಸಂಗತಿ.

ಚೈನಾ ಏರೋಸ್ಪೇಸ್ ಸೈನ್ಸ್ ಅಂಡ್ ಇಂಡಸ್ಟ್ರಿ ಕಾರ್ಪೊರೇಶನ್ ಸಂಸ್ಥೆ ಅಭಿವೃದ್ದಿಪಡಿಸಿದ ಎಚ್​ಕ್ಯೂ-9ಬಿ ಏರ್ ಡಿಫೆನ್ಸ್ ಸಿಸ್ಟಂ 2006ರಲ್ಲಿ ಮೊದಲ ಪರೀಕ್ಷೆಗೆ ಒಳಪಟ್ಟಿತು. ಇದು ರಷ್ಯಾದ ಎಸ್-300 ಪಿಎಂಯು ಮತ್ತು ಅಮೆರಿಕದ ಪೇಟ್ರಿಯಟ್ ಪ್ಯಾಕ್-2 ಸಿಸ್ಟಂ ಮಾದರಿಯಲ್ಲಿ ಚೀನಾ ತಯಾರಿಸಿದ ಸಿಸ್ಟಂ. ಇದರ ದಾಳಿ ಶ್ರೇಣಿ 260 ಕಿಮೀ ಇದೆ. 50 ಕಿಮೀ ಎತ್ತರದ ಗುರಿಯನ್ನೂ ಇದು ಮುಟ್ಟಬಲ್ಲುದು. ಶತ್ರುಗಳ ವಂಚಕ ಏರ್​ಕ್ರಾಫ್ಟ್​ಗಳನ್ನು ಪತ್ತೆ ಮಾಡುವ ಸಾಮರ್ಥ್ಯ ಇದಕ್ಕಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಆಯತುಲ್ಲಾ ಖಮೇನಿ ಮೇಲೆ ದಾಳಿಗೆ ಶನಿವಾರ ಬೆಳಗಿನ ಸಮಯ ಆರಿಸಿದ್ದು ಯಾಕೆ? ಬೇರೆ ಇದ್ದ ಪ್ಲಾನ್ ಬದಲಾಗಿದ್ದು ಯಾಕೆ?

ಗಮನಾರ್ಹ ಸಂಗತಿ ಎಂದರೆ, ಭಾರತದ ಗಡಿ ಭಾಗದಲ್ಲಿರುವ ಟಿಬೆಟ್, ಚೀನಾದ ರಾಜಧಾನಿ ನಗರಿಯಾದ ಬೀಜಿಂಗ್, ಆಯಕಟ್ಟಿನ ಪ್ರದೇಶವಾದ ಸೌತ್ ಚೀನಾ ಜಾಗಗಳಲ್ಲಿ ಎಚ್​ಕ್ಯೂ-9ಬಿ ಏರ್ ಡಿಫೆನ್ಸ್ ಸಿಸ್ಟಂಗಳನ್ನು ಅಳವಡಿಸಲಾಗಿದೆ. ತಜ್ಞರ ಪ್ರಕಾರ, ಇದು ಚೀನಾದ ಪ್ರಮುಖ ರಕ್ಷಣಾ ಕೋಟೆ ಎನಿಸಿದೆ. ಇಂಥ ಡಿಫೆನ್ಸ್ ಸಿಸ್ಟಂ ಆಪರೇಷನ್ ಸಿಂದೂರ್ ಮತ್ತು ಇರಾನ್ ಯುದ್ಧದಲ್ಲಿ ವಿಫಲವಾಗಿರುವುದು ಚೀನಾದ ದೌರ್ಬಲ್ಯವನ್ನು ಜಾಹೀರುಗೊಳಿಸಿದಂತಾಗಿರಬಹುದು.

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನಿರ್ಮಾಣ ಸಂಸ್ಥೆಗೆ ದಾಖಲೆಯ 10 ಲಕ್ಷ ಕೋಟಿ ಆಫರ್, ಓಕೆ ಆಗುತ್ತಾ ಡೀಲ್? – Kannada News | Netflix walks away from Warner Bros deal paramount wins 111 billion bid details in Kannada

ಹಾಲಿವುಡ್‌ನ (Hollywood) ಅತಿದೊಡ್ಡ ವ್ಯವಹಾರವೊಂದು ನಡೆಯುತ್ತಿದೆ. ಕಳೆದ ಕೆಲ ತಿಂಗಳುಗಳಿಂದಲೂ ಹಾಲಿವುಡ್​​ನ ಸಿನಿಮಾ ಪ್ರೇಮಿಗಳು, ದೊಡ್ಡ ಸಿನಿಮಾ ಉದ್ಯಮಿಗಳು, ತೆರಿಗೆ ಇಲಾಖೆಯವರು ಇನ್ನೂ ಹಲವು ಕ್ಷೇತ್ರದವರು ಈ ವ್ಯವಹಾರದ ಮೇಲೆ ಕಣ್ಣಿಟ್ಟಿದ್ದಾರೆ. ಹಾಲಿವುಡ್​ನ ಅತ್ಯಂತ ಯಶಸ್ವಿ, ಜನಪ್ರಿಯ ಮತ್ತು ಹಳೆಯ ನಿರ್ಮಾಣ ಸಂಸ್ಥೆಯಾದ ವಾರ್ನರ್ಸ್ ಬ್ರದರ್ಸ್​​ ನ ಮಾರಾಟ ಆಗಲಿಕ್ಕಿದೆ. ನೆಟ್​​ಫ್ಲಿಕ್ಸ್​ ಸೇರಿದಂತೆ ಕೆಲವು ದೊಡ್ಡ ನಿರ್ಮಾಣ ಸಂಸ್ಥೆಗಳು, ಉದ್ಯಮಪತಿಗಳು ಈ ನಿರ್ಮಾಣ ಸಂಸ್ಥೆಯ ಖರೀದಿಗೆ ಆಸಕ್ತಿ ತೋರಿಸಿದ್ದಾರೆ. ಆದರೆ ಇದೀಗ ಈ ವ್ಯವಹಾರದಲ್ಲಿ ಭಾರಿ ದೊಡ್ಡ ಬದಲಾವಣೆಯಾಗಿದೆ.

ವಾರ್ನರ್ ಬ್ರದರ್ಸ್ ಅನ್ನು ಪ್ರಸಿದ್ಧ ಸ್ಟ್ರೀಮಿಂಗ್ ಸಂಸ್ಥೆ ನೆಟ್‌ಫ್ಲಿಕ್ಸ್ ಖರೀದಿ ಮಾಡಲಿದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ನೆಟ್​​ಫ್ಲಿಕ್ಸ್​ ಸಹ ವಾರ್ನರ್ ಬ್ರದರ್ಸ್​​ನ ಪ್ರತಿ ಷೇರಿಗೆ 27 ಡಾಲರ್ ಹಣ ಪಾವತಿಸಲು ತಯಾರಿರುವುದಾಗಿ ಬಿಡ್ ಹೂಡಿತ್ತು. ಅಲ್ಲಿಗೆ ಒಟ್ಟು ವಾರ್ನರ್ ಬ್ರದರ್ಸ್​​ಗೆ 9.97 ಲಕ್ಷ ಕೋಟಿ ಹಣದ ಆಫರ್ ಅನ್ನು ನೀಡಿತ್ತು. ಇನ್ನೇನು ವಾರ್ನರ್ ಬ್ರದರ್ಸ್ ಅನ್ನು ನೆಟ್​ಫ್ಲಿಕ್ಸ್ ಖರೀದಿಸಿಯೇ ಬಿಟ್ಟಿತು ಎಂದುಕೊಳ್ಳುತ್ತಿರುವಾಗ ಹಾಲಿವುಡ್​ನ ಮತ್ತೊಂದು ಜನಪ್ರಿಯ ಮತ್ತು ಯಶಸ್ವಿ ಸಿನಿಮಾ ನಿರ್ಮಾಣ ಸಂಸ್ಥೆಯಾದ ಪ್ಯಾರಾಮೌಂಟ್ ಅಖಾಡಕ್ಕೆ ಧುಮುಕಿದ್ದು ನೆಟ್​​ಫ್ಲಿಕ್ಸ್​​ಗಿಂತಲೂ ಉತ್ತಮ ಆಫರ್ ಅನ್ನು ನೀಡಿದೆ.

ಕಳೆದ ಕೆಲವು ತಿಂಗಳುಗಳಿಂದ ನೆಟ್‌ಫ್ಲಿಕ್ಸ್ ಮತ್ತು ವಾರ್ನರ್ ಬ್ರದರ್ಸ್ ನಡುವೆ ಮಾತುಕತೆ ನಡೆಯುತ್ತಿತ್ತು. ವಾರ್ನರ್ ಬ್ರದರ್ಸ್‌ನ ಸ್ಟುಡಿಯೋ ಮತ್ತು ಸ್ಟ್ರೀಮಿಂಗ್ ವ್ಯವಹಾರವನ್ನು ಖರೀದಿಸಲು ನೆಟ್‌ಫ್ಲಿಕ್ಸ್ ಸುಮಾರು ಸುಮಾರು ಏಳು ಲಕ್ಷ ಕೋಟಿ ರೂಪಾಯಿ (83 ಬಿಲಿಯನ್ ಡಾಲರ್) ಬಿಡ್ ಮಾಡಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪ್ಯಾರಾಮೌಂಟ್ ಸಂಸ್ಥೆಯು ಇದಕ್ಕಿಂತ ಹೆಚ್ಚಿನ ಮೊತ್ತದ ಆಫರ್ ನೀಡಿದ್ದರಿಂದ, ನೆಟ್‌ಫ್ಲಿಕ್ಸ್ ಈ ರೇಸ್‌ನಿಂದ ಹೊರಬರಲು ನಿರ್ಧರಿಸಿದೆ. ‘ಹೆಚ್ಚಿನ ಬೆಲೆ ತೆತ್ತು ಈ ಕಂಪನಿಯನ್ನು ಖರೀದಿಸುವುದು ಆರ್ಥಿಕವಾಗಿ ಲಾಭದಾಯಕವಲ್ಲ’ ಎಂದು ನೆಟ್‌ಫ್ಲಿಕ್ಸ್‌ನ ಸಿಇಒಗಳು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ಆ ಡೀಲ್​​ನಿಂದ ಅಸಮಾಧಾನಗೊಂಡ ‘ಟೈಟಾನಿಕ್’ ನಿರ್ದೇಶಕ; ಹಾಲಿವುಡ್​​ಗೆ ಎಚ್ಚರಿಕೆ ಕೊಟ್ಟ ಜೇಮ್ಸ್ ಕ್ಯಾಮೆರಾನ್

ಪ್ಯಾರಾಮೌಂಟ್ ಸಂಸ್ಥೆಯು ವಾರ್ನರ್ ಬ್ರದರ್ಸ್ ಕಂಪನಿಯನ್ನು ಪೂರ್ತಿಯಾಗಿ ಖರೀದಿಸಲು ಸುಮಾರು 10 ಲಕ್ಷ ಕೋಟಿ ರೂಪಾಯಿ (111 ಬಿಲಿಯನ್ ಡಾಲರ್) ಮೊತ್ತದ ಬಿಡ್ ಮಾಡಿದೆ. ಇದು ನೆಟ್‌ಫ್ಲಿಕ್ಸ್ ನೀಡಿದ್ದ ಆಫರ್ಗಿಂತ ಸುಮಾರು 2.4 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚು. ಈ ಮೊತ್ತದಲ್ಲಿ ಕಂಪನಿಯ ಸಾಲಗಳೂ ಸೇರಿವೆ. ಆದರೆ ಈ ಆಫರ್ ಅನ್ನು ವಾರ್ನರ್ಸ್ ಬ್ರದರ್ಸ್ ಕಂಪೆನಿಯ ಹೂಡಿಕೆದಾರರು, ಆಡಳಿತ ವರ್ಗ ಒಪ್ಪಿಕೊಳ್ಳುವುದು ಬಾಕಿ ಇದೆ. ಒಂದೊಮ್ಮೆ ಈ ಡೀಲ್ ನಡೆದರೆ ಪ್ಯಾರಾಮೌಂಟ್ ಹಾಲಿವುಡ್‌ನ ಅತ್ಯಂತ ಶಕ್ತಿಶಾಲಿ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಲಿದೆ.

ಪ್ಯಾರಾಮೌಂಟ್ ಈಗ ವಾರ್ನರ್ ಬ್ರದರ್ಸ್ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದರಿಂದ, ಪ್ರಪಂಚದ ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳು ಒಂದೇ ಸೂರಿನಡಿ ಬರಲಿವೆ. ‘ಹ್ಯಾರಿ ಪಾಟರ್’, ‘ಗೇಮ್ ಆಫ್ ಥ್ರೋನ್ಸ್’ ನಂತಹ ಜನಪ್ರಿಯ ಸರಣಿಗಳು ಈಗ ಪ್ಯಾರಾಮೌಂಟ್ ಪಾಲಾಗಲಿವೆ. ಸುದ್ದಿ ವಾಹಿನಿ ಸಿಎನ್​​ಎನ್​, ಡಿಸಿ ಕಾಮಿಕ್ಸ್ ಮತ್ತು ವಾರ್ನರ್ ಬ್ರದರ್ಸ್ ಸ್ಟುಡಿಯೋಗಳು ಪ್ಯಾರಾಮೌಂಟ್‌ ಪಾಲಾಗಲಿವೆ. ಕಂಟೆಂಟ್ ಕ್ಷೇತ್ರದಲ್ಲಿ ನೆಟ್​​ಫ್ಲಿಕ್ಸ್​​ಗೆ ಇದು ದೊಡ್ಡ ಹಿನ್ನಡೆಯನ್ನು ಮೂಡಿಸಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಿಲ್ಲದ ಮಾನವ-ಆನೆ ಸಂಘರ್ಷ: ಕಾಡಾನೆ ದಾಳಿಗೆ ಪಿಯು ವಿದ್ಯಾರ್ಥಿನಿ ಬಲಿ, ಭುಗಿಲೆದ್ದ ಆಕ್ರೋಶ – Kannada News | Kodagu Tragedy: Wild Elephant Kills PUC Student; Human Elephant Conflict Escalates

ಕೊಡಗು, ಮಾರ್ಚ್​​ 01: ಆ ವಿದ್ಯಾರ್ಥಿನಿ ಈಗಷ್ಟೇ ಪಿಯುಸಿ ಪರೀಕ್ಷೆ ಬರೆದಿದ್ದಳು. ಇನ್ನೆರಡು ತಿಂಗಳು ರಜೆಯನ್ನ ಆರಾಮವಾಗಿ ಕಳೆಯುವ ಆಸೆಯಲ್ಲಿದ್ದಳು. ನಿನ್ನೆ ಕೂಡ ಅಪ್ಪ-ಅಮ್ಮನ ಜೊತೆಗೆ ಬೇಗ ಮನೆ ಸೇರುವ ಆಸೆಯಲ್ಲಿದ್ದಳು. ಆದರೆ ಕಾಡಾನೆ (Elephant) ರೂಪದಲ್ಲಿ ಬಂದ ಯಮರಾಯ ಆ ಮುಗ್ಧ ಯುವತಿಯನ್ನ ಬಲಿ (death) ಪಡೆದಿದೆ. ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ಘಟನೆ ನಡೆದಿದೆ.

ಕ್ಷಣಾರ್ಧದಲ್ಲಿ ವಿದ್ಯಾರ್ಥಿನಿಯ ಜೀವ ತೆಗೆದ ಕಾಡಾನೆ

ಕೊಡಗು ಜಿಲ್ಲೆಯಲ್ಲಿ ಆನೆ-ಮಾನವ ಸಂಘರ್ಷ ತಾರಕಕ್ಕೇರಿದೆ. ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ದಾರುಣ ಬಲಿಯಾಗಿದ್ದಾಳೆ. ಮಡಿಕೇರಿ ತಾಲೂಕಿನ ಗುಡ್ಡಗಾಡು ಗ್ರಾಮ ಬೆಟ್ಟತ್ತೂರಿನಲ್ಲಿ ನಿನ್ನೆ ಸಂಜೆ ನಡೆದ ಕಾಡಾನೆ ದಾಳಿಗೆ ವಿದ್ಯಾರ್ಥಿನಿ ಪೂಜ್ಯ ಸಾವನ್ನಪ್ಪಿದ್ದಾಳೆ. ಸಂಜೆ ತನ್ನ ತಂದೆ-ತಾಯಿ ಜೊತೆ ಬೈಕ್​ನಲ್ಲಿ ಬಂದ ಪೂಜ್ಯ, ಬೈಕ್​ನಿಂದ ಇಳಿದಿದ್ದೇ ತಡ ಅಷ್ಟರಲ್ಲಿ ಕತ್ತಲಿನಲ್ಲಿ ಹಿಂಬಂದಿಯಿಂದ ದಾಳಿ ನಡೆಸಿದ ಕಾಡಾನೆ, ಪೂಜ್ಯಳ ದೇಹವನ್ನ ತುಳಿದು ಸ್ಥಳದಲ್ಲೇ ಸಾಯಿಸಿದೆ. ಮಗಳ ಕಿರುಚಾಟ ಕಂಡು ತಾಯಿ ಎಷ್ಟೇ ಬೊಬ್ಬೆ ಹೊಡೆದರೂ ಪ್ರಯೋಜನವಾಗಿಲ್ಲ, ಕ್ಷಣಾರ್ಧದಲ್ಲಿ ಕಾಡಾನೆ ವಿದ್ಯಾರ್ಥಿನಿಯ ಜೀವ ತೆಗೆದಿದೆ.

ಇದನ್ನೂ ಓದಿ: ವಿರಾಜಪೇಟೆ: ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!

ಪತ್ನಿ ಮತ್ತು ಮಗಳನ್ನ ಬೈಕ್​ನಿಂದ ಇಳಿಸಿ ಬೈಕ್​ ನಿಲ್ಲಿಸಲು ಸ್ವಲ್ಪ ದೂರು ಹೋಗಿದ್ದ ತಂದೆ ಚಂಗಪ್ಪ ಅವರಿಗೆ ಪತ್ನಿ ಮತ್ತು ಮಗಳ ಕಿರುಚಾಟ ಕೇಳಿ ಓಡಿ ಬಂದಿದ್ದಾರೆ. ಅಷ್ಟರಲ್ಲಾಗಲೇ ಅನಾಹುತ ನಡೆದು ಹೋಗಿತ್ತು. ಮಗಳ ರಕ್ತಸಿಕ್ತ ದೇಹವನ್ನ ಅಪ್ಪಿಕೊಂಡು ಪತ್ನಿ ದೇವಕಿ ರೋಧಿಸುತ್ತಿದ್ದರು. ಈ ಭಾಗದಲ್ಲಿ ಈ ಒಂಟಿ ಆನೆ ನಿರಂತರವಾಗಿ ಓಡಾಡುತ್ತಿದೆ. ಜನರು ಕಾಡಾನೆಯಿಂದ ಈ ಹಿಂದೆಯೂ ಬಹಳಷ್ಟು ಬಾರಿ ತಪ್ಪಿಸಿಕೊಂಡಿದ್ದರು. ಆದರೆ ಇಂದು ಪೂಜ್ಯಳ ಅದೃಷ್ಟ ಸರಿ ಇರಲಿಲ್ಲ.

ಸರ್ಕಾರದಿಂದ 20 ಲಕ್ಷ ರೂ ಪರಿಹಾರ 

ಮಡಿಕೇರಿ ಡಿಎಫ್​ಒ ಅಭಿಷೇಕ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಕಾಡಾನೆಯನ್ನ ಸೆರೆ ಹಿಡಿಯಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಮೃತಳ ಕುಟುಂಬಕ್ಕೆ ಸರ್ಕಾರದಿಂದ 20 ಲಕ್ಷ ರೂ ಪರಿಹಾರ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಈ ನಾಲ್ಕು ಜಿಲ್ಲೆಗಳಲ್ಲಿ ಅತಿ ಹೆಚ್ಚು ಜನ ಸಾಯುವುದೇ ಕಾಡು ಪ್ರಾಣಿ ದಾಳಿಯಿಂದ!

ಕಾಡಾನೆಗಳು ಮಾನವರು ವಾಸಿಸುವ ಪ್ರದೇಶಗಳತ್ತ ಬಾರದಂತೆ ತಡೆಯಲು ವೈಜ್ಞಾನಿಕ ಕ್ರಮ ಅನಿವಾರ್ಯವಾಗಿದೆ. ಇಲ್ಲದಿದ್ದರೆ ಇಂತಹ ಅನ್ಯಾಯದ ಸಾವುಗಳು ಮುಂದುವರಿಯುತ್ತವೆ. ಒಟ್ಟಾರೆ ಕಾಡು ನಾಡು ಸಂಘರ್ಷದಲ್ಲಿ ಅಮಾಯಕ ವಿದ್ಯಾರ್ಥಿನಿ ಬಲಿಯಾಗಿದ್ದು ಮಾತ್ರ ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

185 ರನ್‌ಗಳಿಂದ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ; ಹೀಲಿಗೆ ಸ್ಮರಣೀಯ ವಿದಾಯ – Kannada News | India Women’s ODI Series Loss: Australia Sweeps 3 0, Healy Bids Farewell with 158

ಆಸ್ಟ್ರೇಲಿಯಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ವಿಶ್ವ ಚಾಂಪಿಯನ್ ಭಾರತೀಯ ಮಹಿಳಾ ತಂಡ ಹೀನಾಯವಾಗಿ ಸೋತಿದೆ. ಇಡೀ ಸರಣಿಯಲ್ಲಿ ಪಾರುಪತ್ಯ ಸಾಧಿಸಿದ ಆತಿಥೇಯ ಆಸ್ಟ್ರೇಲಿಯಾ, ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಮಾರ್ಚ್ 1 ರ ಭಾನುವಾರ ಹೋಬಾರ್ಟ್‌ನಲ್ಲಿ ನಡೆದ ಸರಣಿಯ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 409 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 224 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯವನ್ನು 185 ರನ್‌ಗಳ ಬೃಹತ್ ಅಂತರದಿಂದ ಸೋತಿತು. ಈ ಗೆಲುವಿನೊಂದಿಗೆ, ಆಸ್ಟ್ರೇಲಿಯಾದ ನಾಯಕಿ ಮತ್ತು ವಿಕೆಟ್‌ಕೀಪರ್-ಬ್ಯಾಟರ್ ಅಲಿಸಾ ಹೀಲಿ ತಮ್ಮ ಏಕದಿನ ವೃತ್ತಿಜೀವನಕ್ಕೆ ವಿದಾಯ ಹೇಳಿದರು.

ಹೀಲಿ-ಮೂನಿ ಸ್ಫೋಟಕ ಶತಕ

ಸರಣಿ ಆರಂಭವಾಗುವ ಮೊದಲೇ, ಅಲಿಸಾ ಹೀಲಿ ಇದು ತಮ್ಮ ಕೊನೆಯ ಸರಣಿ ಎಂದು ಘೋಷಿಸಿದ್ದರು. ಅದರಂತೆ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯದಲ್ಲಿ ಸಂಚಲನ ಮೂಡಿಸಿದ ಹೀಲಿ ತಮ್ಮ ತಂಡಕ್ಕೆ ತ್ವರಿತ ಆರಂಭವನ್ನು ನೀಡಿದರು. ಹೀಲಿ ಅಬ್ಬರದ ಪರಿಣಾಮದಿಂದಾಗಿ ಆಸೀಸ್ ತಂಡ 16 ಓವರ್‌ಗಳಲ್ಲಿ 100 ರನ್‌ಗಳ ಗಡಿ ದಾಟಿತು. ಇದೇ ವೇಳೆ 49 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಹೀಲಿ, 79 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಶತಕ ಪೂರೈಸಿದ ಬಳಿಕ ಮತ್ತಷ್ಟು ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಹೀಲಿ ಕೇವಲ 98 ಎಸೆತಗಳಲ್ಲಿ 158 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಹೀಲಿ ಅವರ ಈ ಇನ್ನಿಂಗ್ಸ್‌ನಲ್ಲಿ 27 ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು.

ಹೀಲಿ ಜೊತೆಗೆ ಬೆತ್ ಮೂನಿ ಕೂಡ ಅದ್ಭುತ ಶತಕ ಬಾರಿಸಿ ತಂಡವನ್ನು 400 ರನ್​ಗಳ ಗಡಿ ದಾಟಿಸಿದರು. ಮೂನಿ 106 ರನ್ ಗಳಿಸಿ ಅಜೇಯರಾಗಿ ಉಳಿದರೆ, ಜಾರ್ಜಿಯಾ ವಾಲ್ ಕೂಡ 62 ರನ್​ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ, ನಿಕೋಲಾ ಕ್ಯಾರಿ ಕೇವಲ 15 ಎಸೆತಗಳಲ್ಲಿ 34 ರನ್ ಬಾರಿಸಿದರು. ಭಾರತದ ಪರ ಸ್ನೇಹ್ ರಾಣಾ 10 ಓವರ್‌ಗಳಲ್ಲಿ 66 ರನ್‌ ನೀಡಿ 2 ವಿಕೆಟ್‌ಗಳನ್ನು ಕಬಳಿಸಿದರು.

ಸತತ 3ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ

ಈ ಗುರಿ ಭಾರತ ತಂಡಕ್ಕೆ ಎಂದಿಗೂ ಸುಲಭವಾಗಿರಲಿಲ್ಲ, ಆದರೆ ಈ ಗುರಿಯನ್ನು ಬೆನ್ನಟ್ಟುವಲ್ಲಿ ಅವರಿಗಿದ್ದ ಯಾವುದೇ ಭರವಸೆ ಎರಡನೇ ಓವರ್‌ನಲ್ಲಿ ಸ್ಮೃತಿ ಮಂಧಾನ ಖಾತೆ ತೆರೆಯದೆಯೇ ಔಟಾದಾಗ ಮಾಯವಾಯಿತು. ನಂತರ ಪ್ರತೀಕಾ ರಾವಲ್ ಮತ್ತು ಜೆಮಿಮಾ ರೊಡ್ರಿಗಸ್ ಆಕ್ರಮಣಕಾರಿ ಜೊತೆಯಾಟವನ್ನು ರೂಪಿಸಿದರು. ಆದರೆ ಪ್ರತೀಕಾ ಔಟಾದ ನಂತರ ತಂಡದ ವಿಕೆಟ್‌ಗಳು ನಿಯಮಿತ ಅಂತರದಲ್ಲಿ ಪತನಗೊಂಡವು. ಅಂತಿಮವಾಗಿ ಹಾಲಿ ಏಕದಿನ ಚಾಂಪಿಯನ್ ಟೀಂ ಇಂಡಿಯಾ 45.1 ಓವರ್‌ಗಳಲ್ಲಿ ಕೇವಲ 224 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ನಾಯಕಿ ಹೀಲಿಗೆ ಸ್ಮರಣೀಯ ವಿದಾಯ ನೀಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version