ಧನ್ವೀರ್ ಸಿನಿಮಾಕ್ಕೆ ಆರಂಭದಲ್ಲೇ ವಿಘ್ನ, ರಾಜ್ಯದಾದ್ಯಂತ ಶೋಗಳು ರದ್ದು – Kannada News | Dhanveer Gowda starrer Hayagreeva movie release postponed

ದರ್ಶನ್ (Darshan) ಆಪ್ತ ಎಂದೇ ಹೆಚ್ಚು ಗುರುತಿಸಿಕೊಂಡಿರುವ ಧನ್ವೀರ್ ಗೌಡ ನಟನೆಯ ‘ಹಯಗ್ರೀವ’ ಸಿನಿಮಾ ಇಂದು (ಫೆಬರವರಿ 27) ಬಿಡುಗಡೆ ಆಗಬೇಕಿತ್ತು, ಸಿನಿಮಾಕ್ಕೆ ಸಾಕಷ್ಟು ಪ್ರಚಾರವನ್ನೂ ಸಹ ಧನ್ವೀರ್ ಮತ್ತು ತಂಡ ಮಾಡಿತ್ತು, ದರ್ಶನ್ ಖಾತೆಯಿಂದ ‘ಹಯಗ್ರೀವ’ ಸಿನಿಮಾದ ಬಗ್ಗೆ ಪೋಸ್ಟ್ ಸಹ ಶೇರ್ ಮಾಡಿ ಶುಭಾಶಯ ಕೋರಲಾಗಿತ್ತು. ಆದರೆ ಇದೀಗ ಸಿನಿಮಾಕ್ಕೆ ಮೊದಲ ಹೆಜ್ಜೆಯನ್ನೇ ವಿಘ್ನ ಎದುರಾಗಿದೆ. ಸಿನಿಮಾದ ಬೆಳಿಗ್ಗೆ ಮತ್ತು ಮಧ್ಯಾಹ್ನದ ಶೋಗಳು ರಾಜ್ಯದಾದ್ಯಂತ ಸಾಮೂಹಿಕವಾಗಿ ರದ್ದಾಗಿವೆ.

‘ಹಯಗ್ರೀವ’ ಸಿನಿಮಾ ಇಂದು (ಫೆಬ್ರವರಿ 27) ಬಿಡುಗಡೆ ಆಗಬೇಕಿತ್ತು, ಆದರೆ ಸೆನ್ಸಾರ್ ಸಮಸ್ಯೆಯಿಂದಾಗಿ ಸಿನಿಮಾದ ಮೊದಲ ಎರಡು ಶೋಗಳು ಅಂದರೆ ಬೆಳಿಗ್ಗೆ 10:30 ಮತ್ತು ಮಧ್ಯಾಹ್ನ 1:30ಗೆ ಪ್ರದರ್ಶನ ಆಗಬೇಕಿದ್ದ ಶೋಗಳು ರದ್ದಾಗಿವೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಚಿತ್ರತಂಡ, ‘ಅನಿವಾರ್ಯ ಕಾರಣಗಳಿಂದ ನಮ್ಮ ಸಿನಿಮಾದ ದಿನದ ಮೊದಲ ಎರಡೂ ಶೋಗಳು ರದ್ದಾಗಿದ್ದು, ಸಂಜೆ 4:30ರ ಶೋನಿಂದ ರಾಜ್ಯದಾದ್ಯಂತ ಅದ್ಧೂರಿಯಾಗಿ ಪ್ರಾರಂಭ ಆಗುತ್ತವೆ, ನೋಡಿ ಹರಸಿ’ ಎಂದಿದ್ದಾರೆ ನಟ ಧನ್ವೀರ್.

ಧನ್ವೀರ್ ಗೌಡ ನಟಿಸಿರುವ ‘ಹಯಗ್ರೀವ’ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿರುವ ಕಾರಣದಿಂದಾಗಿ ಸಿನಿಮಾದ ಬಿಡುಗಡೆ ತಡವಾಗುತ್ತಿದೆ. ‘ಹಯಗ್ರೀವ’ ಸಿನಿಮಾನಲ್ಲಿ ಹಿಂದೂ ದೇವತೆಗಳ ಉಲ್ಲೇಖ ಇದೆಯಂತೆ. ಕೆಲವು ದೃಶ್ಯಗಳಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಅಥವಾ ಮುಖವನ್ನು ತಿರುಚಿರುವ ದೃಶ್ಯಗಳು ಸಹ ಇವೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸೆನ್ಸಾರ್ ಮಂಡಳಿಯು ಸಿನಿಮಾವನ್ನು ರಿವೈಸ್ ಕಮಿಟಿಗೆ ಕಳಿಸಿದ್ದು, ರಿವೈಸ್ ಕಮಿಟಿ ಸಿನಿಮಾ ನೋಡಿದ ಬಳಿಕವಷ್ಟೆ ಸಿನಿಮಾಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಗಲಿದೆ. ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ವಿಳಂಬ ಆಗುತ್ತಿದೆ.

ಇದನ್ನೂ ಓದಿ:ದರ್ಶನ್ ಕೇಸ್: ಪೊಲೀಸರ ತನಿಖೆ ಬಗ್ಗೆ ಅನುಮಾನ; ಗೃಹ ಸಚಿವರ ಸ್ಪಷನೆ ಇಲ್ಲಿದೆ..

ನಿಯಮದ ಪ್ರಕಾರ ರಿವೈಸ್ ಕಮಿಟಿಯವರಿಗೆ ಸಿನಿಮಾವನ್ನು ನೋಡಿ ಕಟ್​​ಗಳನ್ನು ಸೂಚಿಸಲು ಅಥವಾ ಪ್ರಮಾಣ ಪತ್ರ ನೀಡಲು ಹದಿನೈದು ದಿನಗಳ ಕಾಲಾವಕಾಶ ಇರುತ್ತದೆ ಎನ್ನಲಾಗಿದೆ. ಆದರೆ ರಿವೈಸ್ ಕಮಿಟಿಯವರು ಇಂದೇ ಸೆನ್ಸಾರ್ ಪ್ರಮಾಣ ಪತ್ರ ನೀಡುವ ಭರವಸೆಯಲ್ಲಿರುವ ‘ಹಯಗ್ರೀವ’ ಚಿತ್ರತಂಡ ಇಂದು ಸಂಜೆಯಿಂದಲೇ ಪದರ್ಶನ ಆರಂಭಿಸುವುದಾಗಿ ಭರವಸೆ ನೀಡಿವೆ.

‘ಹಯಗ್ರೀವ’ ಸಿನಿಮಾನಲ್ಲಿ ಧನ್ವೀರ್ ಗೌಡ ಮತ್ತು ಸಂಜನಾ ಆನಂದ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರವುದು ರಘು ಕುಮಾರ್, ಸಿನಿಮಾನಲ್ಲಿ ಶರತ್ ಲೋಹಿತಾಶ್ವ, ಸಾಧುಕೋಕಿಲ, ಶೋಭರಾಜ್ ಇನ್ನೂ ಹಲವು ಕಲಾವಿದರು ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸಮೃದ್ಧಿ ಮಂಜುನಾಥ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Rinku Singh’s father dies: ರಿಂಕು ಸಿಂಗ್ ತಂದೆ ನಿಧನ, ಟಿ20 ವಿಶ್ವಕಪ್ ಮಧ್ಯೆಯೇ ಟೀಂ ಇಂಡಿಯಾ ಆಟಗಾರನಿಗೆ ಆಘಾತ – Kannada News | Rinku Singh’s Father Passes Away Due to Liver Cancer; Team India Star Leaves T20 World Cup Camp Midway

ಟೀಂ ಇಂಡಿಯಾ (Team India) ಯುವ ಬ್ಯಾಟರ್ ರಿಂಕು ಸಿಂಗ್ (Rinku Singh) ತಂದೆ ಖಚೇಂದ್ರ ಸಿಂಗ್ ಶುಕ್ರವಾರ ನಿಧನರಾದರು. ನಾಲ್ಕನೇ ಹಂತದ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ ವೆಂಟಿಲೇಟರ್‌ ಅಳವಡಿಸಲಾಗಿತ್ತಲ್ಲದೆ, ಕಿಡ್ನಿ ಸಮಸ್ಯೆ ಹಿನ್ನೆಲೆಯಲ್ಲಿ ನಿರಂತರ ಡಯಾಲಿಸಿಸ್‌ ಮಾಡಲಾಗುತ್ತಿತ್ತು ಎಂದು ಕುಟುಂಬ ಮೂಲಗಳು ತಿಳಿಸಿವೆ. ರಿಂಕು ಸಿಂಗ್ ಅವರು ಟಿ20 ವಿಶ್ವಕಪ್‌ (T20 World Cup) ಟೂರ್ನಿಯಲ್ಲಿ ಟೀಂ ಇಂಡಿಯಾದ ಬಳಗದಲ್ಲಿರುವಾಗಲೇ ಈ ದುಃಖಕರ ಘಟನೆ ಸಂಭವಿಸಿದೆ.

ಕೆಲವು ದಿನಗಳ ಹಿಂದೆ ರಿಂಕು ಸಿಂಗ್ ತಂಡದಲ್ಲಿದ್ದಾಗ ತಂದೆಯ ಆರೋಗ್ಯ ಹದಗೆಟ್ಟ ಸುದ್ದಿ ತಲುಪಿತ್ತು. ಬಳಿಕ ಅವರು ತುರ್ತಾಗಿ ಮನೆಗೆ ತೆರಳಿ ಮತ್ತೆ ತಂಡಕ್ಕೆ ಮರಳಿದ್ದರು. ಇದೀಗ ತಂದೆಯ ನಿಧನದ ಸುದ್ದಿ ತಿಳಿದ ತಕ್ಷಣ ತಂಡವನ್ನು ತೊರೆದು ಸ್ವಗ್ರಾಮ ಅಲೀಗಢ್‌ಗೆ ಪ್ರಯಾಣ ಬೆಳೆಸಿದ್ದಾರೆ.

ತಂದೆ ಖಚೇಂದ್ರ ಸಿಂಗ್ ಜತೆ ರಿಂಕು ಸಿಂಗ್ (ಚಿತ್ರ ಕೃಪೆ; ಇನ್​ಸ್ಟಾಗ್ರಾಂ)

ಗುರುವಾರ ರಾತ್ರಿ ಚೆನ್ನೈಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಪ್ರಮುಖ ಪಂದ್ಯದಲ್ಲಿ ರಿಂಕು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲಿಲ್ಲ. ತಂಡದ ಸಮತೋಲನದ ದೃಷ್ಟಿಯಿಂದ ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ರಿಂಕು ತಂಡದೊಂದಿಗೇ ಇದ್ದು, ಬದಲಿ ಆಟಗಾರನಾಗಿ ಫೀಲ್ಡಿಂಗ್ ಮಾಡಿದ್ದರು.

ಟಿ20 ವಿಶ್ವಕಪ್ ಮುಂದಿನ ಪಂದ್ಯಗಳಿಗೆ ಲಭ್ಯರಾಗುತ್ತಾರಾ ರಿಂಕು ಸಿಂಗ್?

ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರಿಂಕು ಸಿಂಗ್ ಐದು ಪಂದ್ಯಗಳಲ್ಲಿ ಆಡಿದ್ದು 24 ರನ್ ಗಳಿಸಿದ್ದಾರೆ. ಫಿನಿಷರ್ ಪಾತ್ರದಲ್ಲಿ ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರು ಲಭ್ಯರಾಗುವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಬಿಸಿಸಿಐ ಅಥವಾ ತಂಡದ ಆಡಳಿತ ಮಂಡಳಿ ಅಧಿಕೃತ ಪ್ರಕಟಣೆಯನ್ನು ಇನ್ನಷ್ಟೇ ಹೊರಡಿಸಬೇಕಿದೆ.

ಇದನ್ನೂ ಓದಿ: ಜಿಂಬಾಬ್ವೆ ವಿರುದ್ಧ ಗೆದ್ದ ಭಾರತದ ಸೆಮಿಫೈನಲ್ ಕನಸು ಜೀವಂತ

ಟೀಂ ಇಂಡಿಯಾ ಮುಂದಿನ ಪಂದ್ಯ ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದೆ. ಇದು ಭಾರತದ ಪಾಲಿಗೆ ನಿರ್ಣಾಯಕ ಪಂದ್ಯ ಆಗಿರಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 9:21 am, Fri, 27 February 26

Source link

ಗೃಹಸಚಿವ ಅಮಿತ್ ಶಾ ಭೇಟಿ ಮಾಡಿದ ರಶ್ಮಿಕಾ-ವಿಜಯ್; ಕಾರಣವೇನು? – Kannada News | Rashmika Mandanna And Vijay Devarakonda Met Amith Shah to Invite Reception

ಗೃಹಸಚಿವ ಅಮಿತ್ ಶಾ ಭೇಟಿ ಮಾಡಿದ ರಶ್ಮಿಕಾ-ವಿಜಯ್

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರ ವಿವಾಹ ಅದ್ಧೂರಿಯಾಗಿ ನಡೆಯಿತು. ಗುರುವಾರ (ಫೆಬ್ರವರಿ 27) ಉದಯಪುರದ ಹೋಟೆಲ್​ ಅಲ್ಲಿ ದಂಪತಿಗಳು ಸಪ್ತಪದಿ ತುಳಿದರು. ಎರಡು ಸಂಪ್ರದಾಯಗಳ ಪ್ರಕಾರ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ವಿವಾಹವಾದರು. ಗುರುವಾರ ಬೆಳಿಗ್ಗೆ 10 ಗಂಟೆಗೆ ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರನ್ನು ತೆಲುಗು ಸ್ಟೈಲ್​​ನಲ್ಲಿ ವಿವಾಹ ಆದರು. ನಂತರ, ದಂಪತಿಗಳು ಕೊಡಗು ಸಂಪ್ರದಾಯದಂತೆ ಮತ್ತೆ ಮದುವೆ ಆದರು. ಈ ಮಧ್ಯೆ ಜೋಡಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಫೋಟೋ ಗಮನ ಸೆಳೆದಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ತಮ್ಮ ಮದುವೆಯ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡರು. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ವಿಜಯ್ ಬಿಳಿ ಮತ್ತು ರಶ್ಮಿಕಾ ಹಳದಿ ಬಣ್ಣದ ಉಡುಗೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಆದರು.

ಈ ಜೋಡಿ ವಿವಾಹದ ಆರತಕ್ಷತೆ ಸಮಾರಂಭದಲ್ಲಿ ಭಾಗವಹಿಸಲು ಅಮಿತ್ ಶಾ ಅವರನ್ನು ವಿಶೇಷವಾಗಿ ಆಹ್ವಾನಿಸಿತು. ಈ ಸಂದರ್ಭದಲ್ಲಿ, ಅಮಿತ್ ಶಾ ಅವರಿಗೆ ಗಣಪತಿ ವಿಗ್ರಹವನ್ನು ಉಡುಗೊರೆಯಾಗಿ ನೀಡಲಾಯಿತು. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಇದು ವಿವಾಹಕ್ಕೂ ಮೊದಲು ತೆರಳಿದ ಫೋಟೋ ಎನ್ನಲಾಗಿದೆ.

ಇದನ್ನೂ ಓದಿ: ಮದುವೆಯಲ್ಲಿ ರಶ್ಮಿಕಾ ಮಂದಣ್ಣ ಆಸೆ ಈಡೇರಿಸಿದ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ಆರತಕ್ಷತೆ ಹೈದರಾಬಾದ್‌ನಲ್ಲಿ ನಡೆಯಲಿದೆ. ಮಾರ್ಚ್ 4ರಂದು ಐಷಾರಾಮಿ ಹೋಟೆಲ್‌ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ಸಮಾರಂಭದಲ್ಲಿ ಸಿನಿಮಾ ಮತ್ತು ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ, ವಿಜಯ್-ರಶ್ಮಿಕಾ ಅವರ ವಿವಾಹದ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿವೆ. ಅವರನ್ನು ನೋಡಿದ ಅನೇಕ ಚಲನಚಿತ್ರ ತಾರೆಯರು, ಅಭಿಮಾನಿಗಳು ಮತ್ತು ನೆಟ್ಟಿಗರು ನವ ಜೋಡಿಗೆ ಅಭಿನಂದನೆ ಮತ್ತು ಶುಭಾಶಯ ಕೋರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿಜಯ್-ರಶ್ಮಿಕಾ ಮದುವೆ ಉಡುಗೆ ವಿನ್ಯಾಸ ಮಾಡಿದ್ಯಾರು? ಉಡುಗೆಯ ಬೆಲೆ ಎಷ್ಟು? – Kannada News | Who is Anamika Khanna who designed Vijay Deverakonda and Rashmika’s wedding dress

ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ಮದುವೆ ಅದ್ಧೂರಿಯಾಗಿ ನಡೆದಿದೆ. ಇಬ್ಬರ ಮದುವೆಯ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಮದುವೆ ಸಮಯದಲ್ಲಿ ಇಬ್ಬರೂ ಧರಿಸಿದ್ದ ಉಡುಗೆಗಳ ಬಗ್ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಬ್ಬರ ಉಡುಗೆಗೆ ಡಿವೈನ್ ಲುಕ್ (ದೈವೀಕಳೆ) ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂದಹಾಗೆ ಈ ಇಬ್ಬರ ಮದುವೆ ಉಡುಗೆಗಳನ್ನು ವಿನ್ಯಾಸ ಮಾಡಿರುವ ವಿನ್ಯಾಸಕಿ ಒಬ್ಬರೇ ಅದುವೇ ಡಿಸೈನರ್​​ಗಳ ಡಿಸೈನರ್ ಎನಿಸಿಕೊಂಡಿರುವ ಅನಾಮಿಕಾ ಖನ್ನಾ.

ಅನಾಮಿಕಾ ಖನ್ನಾ, ಭಾರತದ ಮಾತ್ರವಲ್ಲದ ಹಾಲಿವುಡ್​​ನ ಸ್ಟಾರ್ ನಟ-ನಟಿಯರು ಮತ್ತು ಪಾಪ್ ತಾರೆಗಳೊಟ್ಟಿಗೆ ಕೆಲಸ ಮಾಡುತ್ತಾರೆ. ಅವರು ವಿನ್ಯಾಸ ಮಾಡಿರುವ ಉಡುಗೆಯನ್ನು ಶಕಿರಾ, ಜೆನಿಫರ್ ಲೋಪೆಜ್, ಓಪ್ರಾ ವಿನ್​​ಫ್ರೆ, ಕೆಲ್ಲಿ ರೋಲಂಡ್, ಬಿಯಾನ್ಸೆ, ಕರ್ದಾಶಿಯನ್ಸ್ ಇನ್ನೂ ಹಲವರು ಉಟ್ಟಿದ್ದಾರೆ. ಅಂಬಾನಿ ಮದುವೆಗೆ ಬಂದ ಬಹುತೇಕ ವಿದೇಶಿ ಸೆಲೆಬ್ರಿಟಿಗಳು ಅನಾಮಿಕಾ ವಿನ್ಯಾಸ ಮಾಡಿದ್ದ ಉಡುಗೆಯನ್ನೇ ತೊಟ್ಟಿದ್ದರು. ಮಾತ್ರವಲ್ಲದೆ, ಅಂಬಾನಿ ಸೊಸೆ ರಾಧಿಕಾ ಮರ್ಚೆಂಟ್, ಹಳದಿ ಶಾಸ್ತ್ರದ ಉಡುಗೆಯನ್ನು ವಿನ್ಯಾಸ ಮಾಡಿದ್ದು ಸಹ ಅನಾಮಿಕಾ ಅವರೇ. ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮೆಟ್ ಗಾಲಾದ ರೆಡ್ ಕಾರ್ಪೆಟ್ ಮೇಲೆ ಅನಾಮಿಕಾ ವಿನ್ಯಾಸ ಮಾಡಿದ್ದ ಉಡುಗೆ ತೊಟ್ಟೇ ನಡೆದಿದ್ದರು.

ಅನಾಮಿಕಾ ಖನ್ನಾ, ಭಾರತದ ಖ್ಯಾತ ವಸ್ತ್ರ ವಿನ್ಯಾಸಕಿಯರಲ್ಲಿ ಒಬ್ಬರು. ಪಶ್ಚಿಮ ಬಂಗಾಳ ಮೂಲಕ ಅನಾಮಿಕ ಮೂಲತಃ ಭರತನಾಟ್ಯ ಕಲಾವಿದೆ ಜೊತೆಗೆ ಚಿತ್ರಕಲಾ ನಿಪುಣೆ ಸಹ. ಅವರು ಫ್ಯಾಷನ್ ಡಿಸೈನ್ ಅನ್ನು ಶಾಸ್ತ್ರೀಯವಾಗಿ ಕಲಿತವರಲ್ಲ. ಆದರೆ ಅವರು ಆಸಕ್ತಿಯಿಂದ ವಸ್ತ್ರವಿನ್ಯಾಸದ ಕಡೆಗೆ ಬಂದವರು. ವಿನ್ಯಾಸಗಳನ್ನು ಅಭ್ಯಾಸ ಮಾಡುತ್ತಾ, ಸ್ವಂತ ಕಲಿಕೆಯ ಮೂಲಕ ಫ್ಯಾಷನ್ ಡಿಸೈನರ್ ಆದವರು ಅನಾಮಿಕಾ ಖನ್ನಾ.

ಇದನ್ನೂ ಓದಿ:Photo Gallery: ಮದುವೆ ಫೋಟೋ ಜೊತೆ ರಶ್ಮಿಕಾ ಮಂದಣ್ಣ ಎಮೋಷನಲ್ ಮಾತು

1990ರಲ್ಲಿ ತಮ್ಮದೇ ಫ್ಯಾಷನ್ ಬ್ರ್ಯಾಂಡ್ ಪ್ರಾರಂಭಿಸಿದ ಅನಾಮಿಕಾ ಖನ್ನಾ, ಫ್ಯಾಷನ್ ವೀಕ್​​​ನಲ್ಲಿ ತಮ್ಮ ಕಲೆಕ್ಷನ್​​ಗಳನ್ನು ಪ್ರದರ್ಶನಕ್ಕೆ ಇರಿಸಿದ ಭಾರತದ ಮೊಟ್ಟ ಮೊದಲ ಮಹಿಳಾ ಡಿಸೈನರ್ ಎನಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಬ್ಯುಸಿನೆಸ್ ಆಫ್ ಫ್ಯಾಷನ್ (ಬಿಒಎಫ್) 500 ನಲ್ಲಿ ಸಹ ಅನಾಮಿಕಾ ಖನ್ನಾ ಕಾಣಿಸಿಕೊಂಡಿದ್ದಾರೆ. ಇವರ ವಿನ್ಯಾಸಗಳು ಅಪರೂಪದ್ದಾಗಿದ್ದು, ಭಾರತೀಯ ವಿನ್ಯಾಸಗಳನ್ನು ವಿದೇಶಿ ಉಡುಗೆ ಮಾದರಿಗಳ ಜೊತೆಗೆ ಬ್ಲೆಂಡ್ ಮಾಡಿ ಪ್ರೆಸೆಂಟ್ ಮಾಡುವ ಅಪರೂಪದ ಸ್ಟೈಲ್ ಅನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರ ವಿನ್ಯಾಸಗಳು ಬಹಳ ಜನಪ್ರಿಯತೆ ಹೊಂದಿವೆ.

‘ವಾರಣಾಸಿ’ ಇವೆಂಟ್​​ನಲ್ಲಿ ಪ್ರಿಯಾಂಕಾ ಧರಿಸಿದ್ದ ಉಡುಗೆಯನ್ನು ಅನಾಮಿಕಾ ಅವರೇ ವಿನ್ಯಾಸ ಮಾಡಿದ್ದರು. ದೀಪಿಕಾ ಪಡುಕೋಣೆ, ಸೋನಂ ಕಪೂರ್, ಆಲಿಯಾ ಭಟ್, ಜಾನ್ಹವಿ ಕಪೂರ್ ಇನ್ನೂ ಹಲವು ಬಾಲಿವುಡ್ ಸೆಲೆಬ್ರಿಟಿಗಳ ಮೆಚ್ಚಿನ ವಿನ್ಯಾಸಕಿ ಅನಾಮಿಕಾ ಖನ್ನಾ. ಖ್ಯಾತ ವಿದೇಶಿ ಫ್ಯಾಷನ್ ಬ್ರ್ಯಾಂಡ್ ಆಗಿರುವ ಎಚ್​​ ಆಂಡ್ ಎಂ (H n M) ಮತ್ತು ಸ್ಯಾಕ್ಸ್ ಫಿಫ್ತ್ ಅವೆನ್ಯೂ ಜೊತೆಗೆ ಅವರು ಪಾರ್ಟನ್ ಆಗಿದ್ದು, ತಮ್ಮ ವಿನ್ಯಾಸಗಳನ್ನು ಅವರೊಟ್ಟಿಗೆ ಹಂಚಿಕೊಳ್ಳುತ್ತಾರೆ.

ಅನಾಮಿಕಾ ಖನ್ನಾ ಭಾರತದ ದುಬಾರಿ ವಿನ್ಯಾಸಕಿ. ಅವರ ಸಾಮಾನ್ಯ ವಿನ್ಯಾಸಗಳು ಸಹ 1 ಲಕ್ಷದಿಂದ 3 ಲಕ್ಷದ ವರೆಗೆ ಮಾರಾಟ ಆಗುತ್ತವೆ. ಇನ್ನು ಅವರ ವಿಶೇಷ ವಿನ್ಯಾಸದ ಉಡುಗೆಗಳಿಗೆ 50 ಲಕ್ಷದವರೆಗೆ ಬೆಲೆ ಇದೆ. ಕೋಟಿ ಬೆಲೆಯ ಉಡುಗೆಗಳು ಸಹ ಅವರ ಕಲೆಕ್ಷನ್​​ನಲ್ಲಿವೆ ಎನ್ನಲಾಗುತ್ತದೆ. ಅನಾಮಿಕಾ ಅವರದ್ದು ಎಕೆ-ಒಕೆ ಹೆಸರಿನ ಬ್ರ್ಯಾಂಡ್ ಇದೆ. ಕೊಲ್ಕತ್ತ, ಹೈದರಾಬಾದ್, ಮುಂಬೈ, ದೆಹಲಿಗಳಲ್ಲಿ ತಮ್ಮ ಔಟ್​​ಲೆಟ್​​ಗಳನ್ನು ಅನಾಮಿಕಾ ಹೊಂದಿದ್ದಾರೆ. ಈಗ ವಿಜಯ್ ಮತ್ತು ರಶ್ಮಿಕಾ ಉಡುಗೆಯ ನಿಖರ ಬೆಲೆ ತಿಳಿದಿಲ್ಲವಾದರೂ ಆಭರಣಗಳನ್ನು ಹೊರತುಪಡಿಸಿ, ಕೇವಲ ಉಡುಗೆಗೆ ಸುಮಾರು 50 ಲಕ್ಷ ರೂಪಾಯಿ ಆಗಿದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಇಯರ್ ಎಂಡ್ ಪಾರ್ಟಿ ಕೊಟ್ಟು, 235 ಕೋಟಿ ರೂ. ನಗದು ಇಟ್ಟು, ಸಿಬ್ಬಂದಿಗೆ ಎಷ್ಟು ಬೇಕೋ ಅಷ್ಟು ತಗೊಳಿ ಎಂದ ಮಾಲೀಕ

ಬೀಜಿಂಗ್, ಫೆಬ್ರವರಿ 27: ಸಾಮಾನ್ಯವಾಗಿ ಕಂಪನಿಗಳಲ್ಲಿ ಪ್ರತಿ ವರ್ಷ ಸಂಬಳ ಹೆಚ್ಚಿಸುವುದೇ ಕಷ್ಟ, ಅದರಲ್ಲಿ ಬೋನಸ್ ಆಗಿ ಕೋಟಿ ಕೋಟಿ ರೂ. ಹಣ ಸಿಬ್ಬಂದಿಗೆ ಕೊಡುತ್ತಾರೆ ಎಂದರೆ ಅಚ್ಚರಿಯ ವಿಷಯವೇ ಸರಿ. ಚೀನಾದ ಕಂಪನಿಯೊಂದು ಈ ಮಹತ್ತರ ಕೆಲಸ ಮಾಡಿದೆ. ಕಂಪನಿಗೆ ಬಂದ ಲಾಭದಲ್ಲಿ ಶೇ.70ರಷ್ಟನ್ನು ತನ್ನ ಉದ್ಯೋಗಿಗಳಿಗೆ ನೀಡಿದೆ. ವಾರ್ಷಿಕ ಬೋನಸ್ ಆಗಿ ಸಿಬ್ಬಂದಿಗೆ 180 ಮಿಲಿಯನ್ ಯುವಾನ್ ಅಂದರೆ ಸುಮಾರು 235 ಕೋಟಿ ರೂ. ನೀಡಿರುವ ಘಟನೆ ನಡೆದಿದೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಬ್ಬಂದಿ ತಮ್ಮ ಸೂಟ್​ಕೇಸ್​​ನಲ್ಲಿ ಹಣವನ್ನು ತುಂಬಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ , ಹೆನಾನ್ ಕುವಾಂಗ್‌ಶಾನ್ ಕ್ರೇನ್ ಕಂಪನಿ, ಲಿಮಿಟೆಡ್ ಫೆಬ್ರವರಿ 13 ರಂದು ತನ್ನ ಇಯರ್ ಪಾರ್ಟಿ ಆಯೋಜಿಸಿತ್ತು. ಸುಮಾರು 7,000 ಉದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆಲವು ಉದ್ಯೋಗಿಗಳು ಬೃಹತ್ ಪ್ರಮಾಣದ ನಗದು ಬಂಡಲ್‌ಗಳನ್ನು ಸಾಗಿಸಲು ಹೆಣಗಾಡುತ್ತಿದ್ದರೆ, ಇತರರು ದೊಡ್ಡ ಮೊತ್ತದೊಂದಿಗೆ ಯಶಸ್ವಿಯಾಗಿ ಕಚೇರಿಯಿಂದ ಹೋಗಿದ್ದಾರೆ. ಇದು ಪ್ರಪಂಚದಾದ್ಯಂತ 130 ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Bengaluru Air Quality: ಹಾಳಾಗುತ್ತಲೇ ಇದೆ ಬೆಂಗಳೂರಿನ ಏರ್ ಕ್ವಾಲಿಟಿ – Kannada News | Bangalore Air Pollution Crisis: Bengaluru’s Air quality is dropping fast

ಹಾಳಾಗುತ್ತಲೇ ಇದೆ ಬೆಂಗಳೂರಿನ ಏರ್ ಕ್ವಾಲಿಟಿ

ಬೆಂಗಳೂರು, ಫೆಬ್ರವರಿ 27: ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಮಂಗಳೂರು ಮತ್ತು ಉಡುಪಿಯ ವಾಯು ಗುಣಮಟ್ಟವೂ (Bengaluru Air Quality) ಹದಗೆಟ್ಟಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ನಗರಗಳ ಗಾಳಿಯ ಗುಣಮಟ್ಟ, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಇಂದೂ ಸಹ ಹಲವೆಡೆ ಕಳಪೆ ಏರ್ ಕ್ವಾಲಿಟಿ ದಾಖಲಾಗಿದ್ದು, ಕಲಬುರ್ಗಿ ಸೇರಿದಂತೆ ಬೆಂಗಳೂರಿನಲ್ಲಿ ಏರ್ ಕ್ವಾಲಿಟಿ ತೀವ್ರ ಕುಸಿತ ಕಂಡಿದೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 168ಕ್ಕೆ ತಲುಪಿದೆ. ಹಲವು ದಿನಗಳಿಂದ ವಿಪರೀತ ಏರಿಕೆ ಕಾಣುತ್ತಿರುವ ಉಡುಪಿಯ ಏರ್ ಕ್ವಾಲಿಟಿ ಇಂದು 200ರ ಗಡಿ ತಲುಪಿರುವುದು ಆತಂಕಕಾರಿಯಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –168
  • ಮಂಗಳೂರು-118
  • ಮೈಸೂರು –150
  • ಬೆಳಗಾವಿ – 112
  • ಕಲಬುರ್ಗಿ-152
  • ಶಿವಮೊಗ್ಗ – 112
  • ಬಳ್ಳಾರಿ – 148
  • ಹುಬ್ಬಳ್ಳಿ- 119
  • ಉಡುಪಿ –113
  • ವಿಜಯಪುರ –141

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮುಂದೆ ಕಾಂಗ್ರೆಸ್ ಸರ್ಕಾರ ಬರೋದು ಕಷ್ಟ! ಡಿನ್ನರ್ ಮೀಟಿಂಗ್ ಬೆನ್ನಲ್ಲೇ ಶಾಸಕ ಬಾಲಕೃಷ್ಣ ಶಾಕಿಂಗ್ ಮಾತು – Kannada News | Congress May Struggle to Return to Power: MLA HC Balakrishna’s Statement After DK Shivakumar Camp Dinner Meeting

ಬೆಂಗಳೂರು, ಫೆಬ್ರವರಿ 27: ಕರ್ನಾಟಕ ಕಾಂಗ್ರೆಸ್ ಅಧಿಕಾರ ಹಂಚಿಕೆ ಸಂಘರ್ಷ ಮುಂದುವರಿದಿದ್ದು, ಗುರುವಾರ ರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ಬಣದ 40ಕ್ಕೂ ಹೆಚ್ಚು ಶಾಸಕರು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಡಿನ್ನರ್ ಸಭೆ ನಡೆಸಿದ್ದಾರೆ. ಈ ಬಗ್ಗೆ ಮಾಗಡಿ ಶಾಸಕ ಎಚ್‌ಸಿ ಬಾಲಕೃಷ್ಣ ಪ್ರತಿಕ್ರಿಯಿಸಿ, ನನ್ನ ಹುಟ್ಟು ಹಬ್ಬದ ನಿಮಿತ್ತ ಈ ಔತಣಕೂಟ ಆಯೋಜಿಸಲಾಗಿತ್ತು ಎಂದರು. ಅಲ್ಲದೆ, ಸದ್ಯದ ಪರಿಸ್ಥಿತಿಯಲ್ಲಿ ಮುಂದುವರೆದರೆ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರಕ್ಕೆ ಬರುವುದು ಕಷ್ಟವಿದೆ. ಹೀಗಾಗಿ, ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು ಎಂಬ ಚರ್ಚೆ ನಡೆದಿದೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಯಲ್ಲಿ ರಶ್ಮಿಕಾ ಮಂದಣ್ಣ ಆಸೆ ಈಡೇರಿಸಿದ ವಿಜಯ್ ದೇವರಕೊಂಡ – Kannada News | Vijay Devarakonda Fulfill Rashmika Mandanna Desire In Their wedding

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿವಾಹ ಸಮಾರಂಭವು ಉದಯಪುರದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಮೊದಲು, ತೆಲುಗು ಮತ್ತು ನಂತರ ಕೊಡವ ವಿವಾಹ ವಿಧಿವಿಧಾನಗಳ ಪ್ರಕಾರ ಆಚರಣೆಗಳನ್ನು ನಡೆಸಲಾಯಿತು. ಈ ವಿವಾಹ ಸಮಾರಂಭ ಎಲ್ಲರನ್ನೂ ಆಕರ್ಷಿಸಿದೆ. ರಶ್ಮಿಕಾ ಮತ್ತು ವಿಜಯ್ ಅವರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಥೀಮ್ ಅನ್ನು ನಿರ್ಧರಿಸಲಾಯಿತು. ರಶ್ಮಿಕಾ-ವಿಜಯ್ ಅವರ ಹಲ್ದಿ ಸಮಾರಂಭವು ಫೆಬ್ರವರಿ 25 ರಂದು ನಡೆಯಿತು. ಇಬ್ಬರೂ ಅದರ ಕೆಲವು ಫೋಟೋಗಳನ್ನು ಇನ್ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು. ಹಲ್ದಿ ಸಮಾರಂಭದ ಅಲಂಕಾರದಲ್ಲಿ ಹೋಳಿ ಥೀಮ್ ಕಾಣಿಸಿಕೊಂಡಿತು. ವಿವಾಹ ಪೂರ್ವ ಕಾರ್ಯಕ್ರಮಗಳಲ್ಲಿ ಕೆ-ಡ್ರಾಮಾ ಥೀಮ್ ಕೂಡ ಕಾಣಿಸಿಕೊಂಡಿತು.

ರಶ್ಮಿಕಾ ಅನಿಮೆ ಮತ್ತು ಕೆ-ಡ್ರಾಮಾವನ್ನು ಇಷ್ಟಪಡುವವರು. ರಶ್ಮಿಕಾ ಕೊರಿಯನ್ ಪಾಪ್ ಸಂಸ್ಕೃತಿ ಮತ್ತು ಕೆ ಡ್ರಾಮಾನ ತುಂಬಾ ಪ್ರೀತಿಸುತ್ತಾರೆ. ಅದಕ್ಕಾಗಿಯೇ ವಿವಾಹ ಪೂರ್ವ ಸಮಾರಂಭದಲ್ಲಿ ಕೇಕ್ ಕೂಡ ಕೆ-ಡ್ರಾಮಾ ಥೀಮ್ ಆಗಿತ್ತು. ವಿಜಯ್ ಅವರ ಸರ್ಪ್ರೈಸ್ ಡ್ಯಾನ್ಸ್ ಕಾರ್ಯಕ್ರಮದ ಹೈಲೈಟ್ ಆಗಿತ್ತು. ವಿಜಯ್ ವಿಶೇಷವಾಗಿ ರಶ್ಮಿಕಾಗಾಗಿ ಗಂಗ್ನಮ್ ಶೈಲಿಯಲ್ಲಿ ನೃತ್ಯ ಮಾಡಿದರು. ಈ ಮೂಲಕ ರಶ್ಮಿಕಾ ಮಂದಣ್ಣ ಅವರ ಆಸೆ ಈಡೇರಿಸಿದ್ದಾರೆ.

ಅಂತ್ಯಾಕ್ಷರಿ ಕೂಡ ಆಡಿಸಲಾಯಿತು. ಆದರೆ ಈ ಅಂತಕ್ಷರಿಯ ನಿಯಮಗಳು ವಿಭಿನ್ನವಾಗಿದ್ದವು. ಇದರಲ್ಲಿ, ವಿಜಯ್ ಮತ್ತು ರಶ್ಮಿಕಾ ಅವರ ಚಿತ್ರಗಳ ಹಾಡುಗಳನ್ನು ಮಾತ್ರ ಹಾಡಬೇಕಿತ್ತು. ಅತಿಥಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು ಮತ್ತು ವಿಜೇತ ತಂಡಕ್ಕೆ ಐಷಾರಾಮಿ ಹ್ಯಾಂಪರ್ ನೀಡಲಾಯಿತು.

ವಿವಾಹ ಸಮಾರಂಭದ ನಂತರ, ರಶ್ಮಿಕಾ ಮಂದಣ್ಣ ಅವರ ತಂಡವು ಪಾಪರಾಜಿಗಳಿಗೆ ಸಿಹಿತಿಂಡಿಗಳನ್ನು ವಿತರಿಸಿತು. ವಿವಾಹ ಸ್ಥಳದ ಹೊರಗೆ ನಿಂತಿದ್ದ ಮಕ್ಕಳಿಗೆ ಸಿಹಿತಿಂಡಿಗಳನ್ನು ಸಹ ನೀಡಲಾಗಿದೆ. ವಿಜಯ್ ಮತ್ತು ರಶ್ಮಿಕಾ ಅವರ ತಂಡವು ಎಲ್ಲರಿಗೂ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸಿತು. ರಶ್ಮಿಕಾ ಅವರ ಮಂಟಪ ಪ್ರವೇಶ ಅತ್ಯಂತ ಸುಂದರ ಮತ್ತು ವಿಶಿಷ್ಟವಾಗಿತ್ತು. ರಶ್ಮಿಕಾ ಅವರನ್ನು ವಧುವಾಗಿ ನೋಡಿ ವಿಜಯ್ ಕೂಡ ಭಾವುಕರಾದರು. ವೇದಿಕೆಯ ಮೇಲೆ ಇಬ್ಬರೂ ಪರಸ್ಪರ ಕುತ್ತಿಗೆಗೆ ಹಾರಗಳನ್ನು ಹಾಕಿದಾಗ, ಇಬ್ಬರ ಕಣ್ಣಲ್ಲೂ ನೀರು ಬಂತು.

ಇದನ್ನೂ ಓದಿ: ರಶ್ಮಿಕಾ-ವಿಜಯ್ ಮದುವೆ ಉಡುಗೆಯ ವಿಶೇಷತೆಯೇನು? ವಿನ್ಯಾಸಕ್ಕೆ ಸ್ಪೂರ್ತಿಯೇನು?

ರಶ್ಮಿಕಾ ಮತ್ತು ವಿಜಯ್ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಆದರೆ ಅವರು ಈ ಸಂಬಂಧದ ಬಗ್ಗೆ ಎಂದಿಗೂ ಬಹಿರಂಗಪಡಿಸಿರಲಿಲ್ಲ. ಮದುವೆಗೆ ಕೆಲವು ದಿನಗಳ ಮೊದಲು, ವಿಜಯ್ ಮತ್ತು ರಶ್ಮಿಕಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡು ಅಭಿಮಾನಿಗಳಿಗೆ ಸಂತೋಷದ ಸುದ್ದಿ ನೀಡಿದರು.

ಮತ್ತಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಅತ್ತಿಗೆ ರಶ್ಮಿಕಾ ಬಗ್ಗೆ ವಿಜಯ್ ಸಹೋದರ ಆನಂದ್ ದೇವರಕೊಂಡ ಹೇಳಿದ್ದೇನು? – Kannada News | Vijay Deverakonda brother Anand Deverakonda Insta post about Rashmika Mandanna

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ವಿವಾಹವಾಗಿದ್ದಾರೆ. ಇವರಿಬ್ಬರ ವಿವಾಹ ಉದಯಪುರದ ಐಟಿಸಿ ಮೆಮಂಟೋಸ್​​ನಲ್ಲಿ ಅದ್ಧೂರಿಯಾಗಿ ನಡೆದಿದೆ. ಎರಡೂ ಕುಟುಂಬದ ಆಪ್ತರು, ಬಹಳ ಆಪ್ತ ಸ್ನೇಹಿತರು ಸಂಬಂಧಿಗಳ ಎದುರು ಈ ಜೋಡಿ ಅಧಿಕೃತವಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ರಶ್ಮಿಕಾ ಅವರು ಇದೀಗ ಅಧಿಕೃತವಾಗಿ ದೇವರಕೊಂಡ ಮನೆ ಸೊಸೆ. ದೇವರಕೊಂಡ ಕುಟುಂಬದವರು ಹೊಸ ಸದಸ್ಯೆಯನ್ನು ಬಲು ಪ್ರೀತಿಯಿಂದ ಕುಟುಂಬಕ್ಕೆ ಸ್ವಾಗತಿಸಿದ್ದಾರೆ.

ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ದೇವರಕೊಂಡ ಅವರು ರಶ್ಮಿಕಾಗೆ ತಮ್ಮ ಕುಟುಂಬದಲ್ಲಿ ತಲೆ-ತಲಾಂತರಗಳಿಂದ ಬಂದಿದ್ದ ವಿಶೇಷ ಚಿನ್ನದ ಬಳೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಳೆಗಳನ್ನು ಪಡೆದ ರಶ್ಮಿಕಾ ಭಾವುಕರಾಗಿದ್ದಾರೆ. ಇದೀಗ ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಸಹ ತಮ್ಮ ಕುಟುಂಬಕ್ಕೆ ರಶ್ಮಿಕಾರನ್ನು ಸ್ವಾಗತಿಸಿದ್ದಾರೆ. ರಶ್ಮಿಕಾ ಬಗ್ಗೆ ವಿಶೇಷ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ವಿಜಯ್ ಮತ್ತು ರಶ್ಮಿಕಾರನ್ನು ಮದುವೆ ಮಂಟಪದಲ್ಲಿ ತಬ್ಬಿ ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿರುವ ಆನಂದ್ ದೇವರಕೊಂಡ, ‘ನಾನು ಹೋದಲ್ಲೆಲ್ಲ ಹಲವಾರು ಬಾರಿ ಅಭಿಮಾನಿಗಳು ‘ಅತ್ತಿಗೆ ಹೇಗಿದ್ದಾರೆ’ ಎಂದು ಕಿರುಚುತ್ತಿದ್ದರು, ಆದರೆ ಅವರಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದು ನನಗೆ ಗೊತ್ತಾಗುತ್ತಿರಲಿಲ್ಲ. ಇಂದು ನನ್ನ ಅಣ್ಣ ಮದುವೆಯಾಗಿದ್ದಾನೆ. ಅತ್ಯಂತ ಸಕಾರಾತ್ಮಕ ಮತ್ತು ಸಹಾನುಭೂತಿಯ ವ್ಯಕ್ತಿಯನ್ನು ಅತ್ತಿಗೆಯಾಗಿ ನಾನು ಪಡೆದುಕೊಂಡಿದ್ದೇನೆ. ತಮ್ಮ ಜೀನದಾದ್ಯಂತ ಇವರಿಬ್ಬರು (ವಿಜಯ್-ರಶ್ಮಿಕಾ) ಹೀಗೆಯೇ ನಗುತ್ತಲೇ ಇರಲಿ, ನಗುತ್ತಲೇ ಜೀವನ ಪರ್ಯಂತ ಜೊತೆಯಾಗಿರಲಿ ಎಂದು ಹಾರೈಸುತ್ತೇನೆ’ ಎಂದಿದ್ದಾರೆ ಆನಂದ್ ದೇವರಕೊಂಡ.

ಇದನ್ನೂ ಓದಿ:Photo Gallery: ಮದುವೆ ಫೋಟೋ ಜೊತೆ ರಶ್ಮಿಕಾ ಮಂದಣ್ಣ ಎಮೋಷನಲ್ ಮಾತು

ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಸಹ ತೆಲುಗು ಚಿತ್ರರಂಗದ ನಟರಾಗಿದ್ದು, ಕೆಲವು ಒಳ್ಳೆಯ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಣ್ಣನಂತೆ ಮಾಸ್ ಸಿನಿಮಾಗಳಲ್ಲಿ ನಟಿಸದೆ ತಮಗೆ ಹೊಂದಿಕೆ ಆಗುವಂಥಹ ಕಾಮಿಡಿ, ರೊಮ್ಯಾಂಟಿಕ್ ಸಿನಿಮಾಗಳನ್ನು ಆನಂದ್ ನಟಿಸುತ್ತಾ ಸಾಗುತ್ತಿದ್ದಾರೆ. ರಶ್ಮಿಕಾ ಅವರೊಟ್ಟಿಗೆ ಮೊದಲಿನಿಂದಲೂ ಆನಂದ್​​ಗೆ ಒಳ್ಳೆಯ ಗೆಳೆತನವಿದೆ. ಆನಂದ್ ಅವರು ತಮ್ಮ ಒಂದು ಸಿನಿಮಾದ ಪ್ರೀ ರಿಲೀಸ್ ಇವೆಂಟ್​​ಗೆ ರಶ್ಮಿಕಾರನ್ನೇ ಅತಿಥಿಯನ್ನಾಗಿ ಕರೆದಿದ್ದರು. ಅಂದು ಆನಂದ್ ಬಗ್ಗೆ ಭಾವುಕರಾಗಿ ರಶ್ಮಿಕಾ ಮಾತನಾಡಿದ್ದರು. ಒಟ್ಟಾರೆ ರಶ್ಮಿಕಾ, ಪ್ರೀತಿ ತುಂಬಿದ ಮನೆಗೆ ಸೊಸೆಯಾಗಿ ಕಾಲಿರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ-ಬೆಂಗಳೂರು ಪ್ರಯಾಣಕ್ಕೆ ಎರಡೂವರೆ ಗಂಟೆ ಸಾಕು! ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಮುಂದಿನ ವರ್ಷ ಸಿದ್ಧ – Kannada News | Tumakuru–Chitradurga–Davanagere New Railway Line to Be Ready by 2027; Bengaluru Travel Time to Drop to 2.5 Hours

ತುಮಕೂರು-ದಾವಣಗೆರೆ ನೇರ ರೈಲ್ವೆ ಮಾರ್ಗ ಮುಂದಿನ ವರ್ಷ ಸಿದ್ಧImage Credit source: tv9

ದಾವಣಗೆರೆ, ಫೆಬ್ರವರಿ 27: ಮಧ್ಯ ಕರ್ನಾಟಕದ ಜನತೆಯ ಬಹುಕಾಲದ ಕನಸು ಈಡೇರುವ ಹಂತಕ್ಕೆ ಬಂದಿದೆ. ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗದ ಕಾಮಗಾರಿ 2027ರ ಡಿಸೆಂಬರ್ ಒಳಗಾಗಿ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ (Indian Railway) ಸ್ಪಷ್ಟಪಡಿಸಿದೆ. ಈ ಘೋಷಣೆಯಿಂದ ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ (Karnataka) ಜನರಲ್ಲಿ ಹರ್ಷ ವ್ಯಕ್ತವಾಗಿದೆ. ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ (V Somanna) ಗುರುವಾರ ದಾವಣಗೆರೆ ಜಿಲ್ಲೆಯ ತೋಳಹುಣಸೆಯಿಂದ ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗದ ಕಾಮಗಾರಿ ಪರಿಶೀಲನೆ ನಡೆಸಿದರು.

ತೋಳಹುಣಸೆಯಿಂದ ಆನಗೋಡು ರೈಲು ನಿಲ್ದಾಣದವರೆಗೆ ಮೋಟಾರ್ ಟ್ರಾಲಿಯಲ್ಲಿ ಸಂಚರಿಸಿ ಕಾಮಗಾರಿಯ ಪ್ರಗತಿಯನ್ನು ಸೋಮಣ್ಣ ಅವಲೋಕಿಸಿದರು. ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಇನ್ನೂ ಭೂಸ್ವಾಧೀನ ಪ್ರಕ್ರಿಯೆ ಸಂಪೂರ್ಣವಾಗಿಲ್ಲವೆಂದು ತಿಳಿದುಬಂದಿದೆ. ಈ ವಿಳಂಬದ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿ, ಮಾರ್ಚ್ 31ರೊಳಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

20 ವರ್ಷಗಳ ಹಿಂದೆ ಆರಂಭಗೊಂಡಿದ್ದ ಯೋಜನೆ

ತುಮಕೂರು–ಚಿತ್ರದುರ್ಗ–ದಾವಣಗೆರೆ ರೈಲು ಮಾರ್ಗ ಯೋಜನೆ ಸುಮಾರು 20 ವರ್ಷಗಳ ಹಿಂದೆ ಪ್ರಾರಂಭಗೊಂಡಿತ್ತು. ಯೋಜನೆಗೆ ಒಟ್ಟು ಸುಮಾರು 1200 ಎಕರೆ ಜಮೀನು ಅಗತ್ಯವಿದ್ದು, ಇದರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲೇ ಇನ್ನೂ ಸುಮಾರು 111 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.

ಮೋಟಾರ್ ಟ್ರಾಲಿಯಲ್ಲಿ ಸಂಚರಿಸಿ ಕಾಮಗಾರಿ ಪ್ರಗತಿ ಪರಿಶೀಲಿಸಿದ ಸೋಮಣ್ಣ

ರೈಲ್ವೆ ಇಲಾಖೆಯ ಅಭಿವೃದ್ಧಿ ಕಾರ್ಯಗಳಿಗೆ ಈ ವರ್ಷ ದೇಶವ್ಯಾಪಿಯಾಗಿ 52,000 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ ವಿವಿಧ ಯೋಜನೆಗಳಿಗೆ 7,800 ಕೋಟಿ ರೂ. ಮೀಸಲಾಗಿದೆ. ಜೊತೆಗೆ ರೈಲು ನಿಲ್ದಾಣಗಳ ಮೂಲಭೂತ ಸೌಕರ್ಯಗಳು ಹಾಗೂ ಶೌಚಾಲಯಗಳ ಅಭಿವೃದ್ಧಿಗಾಗಿ 2,093 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಸೋಮಣ್ಣ ತಿಳಿಸಿದರು.

ಹೊಸ ಮಾರ್ಗದಲ್ಲಿ ತೋಳಹುಣಸೆಯಿಂದ ಹೆಬ್ಬಾಳದವರೆಗೆ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಭವಿಷ್ಯದ ಜನಸಂಖ್ಯೆ ಮತ್ತು ಪ್ರಯಾಣಿಕರ ಸಂಖ್ಯೆ ಗಮನದಲ್ಲಿಟ್ಟು ಕನಿಷ್ಠ 21 ಬೋಗಿಗಳ ರೈಲು ನಿಲುಗಡೆಗೊಳ್ಳುವಂತೆ ನಿಲ್ದಾಣಗಳನ್ನು ವಿಸ್ತರಿಸಲಾಗುತ್ತಿದೆ. ಆದರೆ ಕೆಲವೆಡೆ ಕಿಡಿಗೇಡಿಗಳು ಕಲ್ಲು ಎಸೆದು ಕಾಮಗಾರಿಗೆ ಅಡ್ಡಿಪಡಿಸುತ್ತಿರುವ ಬಗ್ಗೆ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ವಂದೇ ಭಾರತ್ ರೈಲಿನ ವೇಳಾಪಟ್ಟಿ ಬದಲಾಯಿಸಲು ಆಗ್ರಹಿಸಿದರು. ಜೊತೆಗೆ ದಾವಣಗೆರೆ ಲಿಂಗೇಶ್ವರ ದೇವಸ್ಥಾನದ ಬಳಿ ಸೇವಾ ರಸ್ತೆ ನಿರ್ಮಾಣ, ದಾವಣಗೆರೆ–ಹುಬ್ಬಳ್ಳಿ–ಬೆಳಗಾವಿ ಮಾರ್ಗವಾಗಿ ಬೆಂಗಳೂರು–ಮುಂಬೈ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದರು. ಈ ಯೋಜನೆಯಿಂದ ಮುಂಬೈ ವ್ಯಾಪಾರಿಗಳಿಗೆ ಹಾಗೂ ಮಧ್ಯ ಕರ್ನಾಟಕದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ದಾವಣಗೆರೆ-ಬೆಂಗಳೂರು ಪ್ರಯಾಣ ಸುಗಮ

ಪ್ರಸ್ತುತ ದಾವಣಗೆರೆಯಿಂದ ಬೆಂಗಳೂರಿಗೆ ಬಸ್ ಮೂಲಕ ಪ್ರಯಾಣಿಸಲು ಕನಿಷ್ಠ 4 ರಿಂದ 5 ಗಂಟೆ, ಕಾರಿನಲ್ಲಿ 3 ರಿಂದ 4 ಗಂಟೆ ಸಮಯ ಬೇಕಾಗುತ್ತದೆ. ಆದರೆ ಈ ನೂತನ ರೈಲು ಮಾರ್ಗ ಪೂರ್ಣಗೊಂಡ ಬಳಿಕ ಸುಮಾರು 2 ಗಂಟೆ 30 ನಿಮಿಷಗಳಲ್ಲಿ ಬೆಂಗಳೂರು ತಲುಪಲು ಸಾಧ್ಯವಾಗಲಿದೆ. ಹೀಗಾಗಿ ಈ ಯೋಜನೆ ಮಧ್ಯ ಕರ್ನಾಟಕದ ಸಾರಿಗೆ ವ್ಯವಸ್ಥೆಗೆ ಕ್ರಾಂತಿಕಾರಿ ಬದಲಾವಣೆ ತರುವುದರಲ್ಲಿ ಸಂಶಯವೇ ಇಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಸೆಂಟರ್: ವಿ ಸೋಮಣ್ಣ ಮಹತ್ವದ ಘೋಷಣೆ

ಒಟ್ಟಿನಲ್ಲಿ, ತುಮಕೂರು–ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ಪೂರ್ಣಗೊಂಡರೆ ದಾವಣಗೆರೆ–ಬೆಂಗಳೂರು ಸಂಪರ್ಕಕ್ಕೆ ಹೊಸ ವೇಗ ಸಿಗಲಿದ್ದು, ವ್ಯಾಪಾರ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಿಗೆ ಮಹತ್ತರ ಉತ್ತೇಜನ ದೊರೆಯಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:05 am, Fri, 27 February 26

Source link

Exit mobile version