ಮಲಬದ್ಧತೆ ಸಮಸ್ಯೆ ಇದ್ದವರು ಯಾವ ರೀತಿಯ ಆಹಾರ ಸೇವಿಸಬೇಕು, ಯಾವುದನ್ನು ಸೇವನೆ ಮಾಡಬಾರದು? – Kannada News | Improve Digestion Naturally with These Fiber Rich Foods

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ (Constipation) ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಸರಿಯಾದ ಸಮಯಕ್ಕೆ ಮಲವಿಸರ್ಜನೆ ಆಗದಿರುವುದು, ಮಲ ಗಟ್ಟಿಯಾಗುವುದು ಅಥವಾ ಹೊಟ್ಟೆ ಸಂಪೂರ್ಣ ಖಾಲಿಯಾಗದಿರುವುದು ಮಲಬದ್ಧತೆಯ ಪ್ರಮುಖ ಲಕ್ಷಣಗಳಾಗಿವೆ. ಕಡಿಮೆ ಫೈಬರ್ ಇರುವ ಆಹಾರ, ಸಾಕಷ್ಟು ನೀರು ಕುಡಿಯದಿರುವುದು, ಹೆಚ್ಚು ಸಮಯ ಕುಳಿತುಕೊಳ್ಳುವುದು, ವ್ಯಾಯಾಮದ ಕೊರತೆ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಗಳು ಇದರ ಪ್ರಮುಖ ಕಾರಣಗಳಾಗಿವೆ. ಆರಂಭದಲ್ಲಿ ಸಾಮಾನ್ಯ ಸಮಸ್ಯೆಯಂತೆ ಕಂಡರೂ, ದೀರ್ಘಕಾಲ ಮಲಬದ್ಧತೆಯನ್ನು ನಿರ್ಲಕ್ಷಿಸಿದರೆ ಮೂಲವ್ಯಾಧಿ (Hemorrhoids), ಗುದದ್ವಾರದ ಬಿರುಕು (Anal Fissure), ಮಲವು ಕರುಳಿನಲ್ಲಿ ಸಿಲುಕುವ ಸಮಸ್ಯೆ (Fecal Impaction) ಸೇರಿದಂತೆ ಹಲವು ಗಂಭೀರ ಸಮಸ್ಯೆಗಳು ಎದುರಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಮಲಬದ್ಧತೆ ಸಮಸ್ಯೆಯನ್ನು ತಡೆಗಟ್ಟಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟೀಸ್ ಅಂಡ್ ಡೈಜೆಸ್ಟಿವ್ ಅಂಡ್ ಕಿಡ್ನಿ ಡಿಸೀಸಸ್ (NIDDK) ಪ್ರಕಾರ, ಫೈಬರ್ ಸಮೃದ್ಧ ಆಹಾರವು ಮಲವನ್ನು ಮೃದುವಾಗಿಸಿ ಸುಲಭವಾಗಿ ಹೊರಬರಲು ಸಹಾಯ ಮಾಡುತ್ತದೆ. ಜೊತೆಗೆ ಸಾಕಷ್ಟು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ.

ಮಲಬದ್ಧತೆ ಕಡಿಮೆ ಮಾಡಲು ಈ ಆರೋಗ್ಯಕರ ಆಹಾರಗಳನ್ನು ಸೇವಿಸಿ

ಸಂಪೂರ್ಣ ಧಾನ್ಯಗಳು (Whole Grains): ಓಟ್ಸ್, ಬ್ರೌನ್ ರೈಸ್, ಸಂಪೂರ್ಣ ಗೋಧಿ ಹಿಟ್ಟು, ರಾಗಿ, ಜೋಳ ಮತ್ತು ಸಜ್ಜೆಗಳಲ್ಲಿ ಫೈಬರ್ ಅಧಿಕವಾಗಿದ್ದು, ಕರುಳಿನ ಚಲನವಲನವನ್ನು ಸುಧಾರಿಸುತ್ತದೆ.

ತಾಜಾ ಹಣ್ಣುಗಳು: ಸೇಬು, ಪೇರಳೆ, ಕಿವಿ, ಪಿಯರ್, ಕಿತ್ತಳೆ, ಪಪ್ಪಾಯಿ, ಅಂಜೂರ ಹಾಗೂ ಬೆರ್ರಿ ಹಣ್ಣುಗಳಲ್ಲಿ ಫೈಬರ್ ಮತ್ತು ನೀರಿನ ಪ್ರಮಾಣ ಹೆಚ್ಚಿರುತ್ತದೆ. ಇವು ಮಲವನ್ನು ಮೃದುವಾಗಿಸಲು ನೆರವಾಗುತ್ತವೆ.

ಹಸಿರು ಎಲೆ ತರಕಾರಿಗಳು: ಪಾಲಕ್, ಮೆಂತೆ ಸೊಪ್ಪು, ದಂಟಿನ ಸೊಪ್ಪು, ನುಗ್ಗೆ ಸೊಪ್ಪು ಹಾಗೂ ಇತರ ಹಸಿರು ತರಕಾರಿಗಳು ಜೀರ್ಣಕ್ರಿಯೆಗೆ ಸಹಕಾರಿ.

ಬೇಳೆ ಮತ್ತು ಕಾಳುಗಳು: ಹೆಸರುಕಾಳು, ಕಡಲೆ, ರಾಜ್ಮಾ, ಅವರೆಕಾಳು ಹಾಗೂ ವಿವಿಧ ಬೇಳೆಗಳು ಫೈಬರ್ ಜೊತೆಗೆ ಉತ್ತಮ ಗುಣಮಟ್ಟದ ಪ್ರೋಟೀನ್‌ನ್ನು ಒದಗಿಸುತ್ತವೆ.

ಒಣಹಣ್ಣು ಮತ್ತು ಬೀಜಗಳು: ಬಾದಾಮಿ, ಅಗಸೆ ಬೀಜ (Flax Seeds), ಚಿಯಾ ಬೀಜ, ಕುಂಬಳಕಾಯಿ ಬೀಜ ಹಾಗೂ ಸೂರ್ಯಕಾಂತಿ ಬೀಜಗಳು ಜೀರ್ಣಾಂಗದ ಆರೋಗ್ಯಕ್ಕೆ ಉತ್ತಮ.

ಮೊಸರು ಮತ್ತು ಪ್ರೋಬಯೋಟಿಕ್ ಆಹಾರಗಳು: ಮೊಸರು, ಮಜ್ಜಿಗೆ ಹಾಗೂ ಇತರ ಪ್ರೋಬಯೋಟಿಕ್ ಆಹಾರಗಳು ಕರುಳಿನ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ.

ಮಲಬದ್ಧತೆ ಇದ್ದರೆ ಈ ಆಹಾರಗಳಿಂದ ದೂರವಿರಿ

  • ಮೈದಾ ಪದಾರ್ಥಗಳು
  • ಬಿಳಿ ಬ್ರೆಡ್
  • ಕೇಕ್, ಪೇಸ್ಟ್ರಿ, ಬಿಸ್ಕತ್ತು
  • ಹೆಚ್ಚು ಸಂಸ್ಕರಿತ (Processed) ಆಹಾರ
  • ಜಂಕ್ ಫುಡ್
  • ಹೆಚ್ಚು ಎಣ್ಣೆಯಲ್ಲಿ ಕರಿದ ಪದಾರ್ಥಗಳು
  • ಸಕ್ಕರೆ ಹೆಚ್ಚಿರುವ ಆಹಾರ ಮತ್ತು ಪಾನೀಯಗಳು

ಮಲಬದ್ಧತೆ ನಿವಾರಣೆಗೆ ಹೆಚ್ಚುವರಿ ಆರೋಗ್ಯ ಸಲಹೆಗಳು

  • ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯಿರಿ.
  • ಪ್ರತಿದಿನ 30 ನಿಮಿಷಗಳ ಕಾಲ ವೇಗವಾಗಿ ನಡೆಯಿರಿ ಅಥವಾ ವ್ಯಾಯಾಮ ಮಾಡಿ.
  • ಬೆಳಿಗ್ಗೆ ನಿಗದಿತ ಸಮಯದಲ್ಲಿ ಮಲವಿಸರ್ಜನೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.
  • ಮಲವಿಸರ್ಜನೆ ಹೋಗಬೇಕು ಎನಿಸುವುದನ್ನು ತಡೆಯಬೇಡಿ.
  • ರಾತ್ರಿ ತಡವಾಗಿ ಊಟ ಮಾಯುವುದನ್ನು ಆದಷ್ಟು ತಪ್ಪಿಸಿ.
  • ಒತ್ತಡ (Stress) ಕಡಿಮೆ ಮಾಡಲು ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಮಾಡಿ.

ಮಲಬದ್ಧತೆ ಯಾವಾಗ ಗಂಭೀರ ಸಮಸ್ಯೆಯ ಸಂಕೇತವಾಗಬಹುದು?

  • ಮಲದಲ್ಲಿ ರಕ್ತ ಕಾಣಿಸಿದರೆ
  • ಮಲವಿಸರ್ಜನೆ ವೇಳೆ ತೀವ್ರ ನೋವು ಕಂಡುಬಂದರೆ
  • ಕಾರಣವಿಲ್ಲದೆ ತೂಕ ಕಡಿಮೆಯಾದರೆ
  • ಹೊಟ್ಟೆ ನೋವು, ವಾಂತಿ ಅಥವಾ ಹೊಟ್ಟೆ ಉಬ್ಬರ ನಿರಂತರವಾಗಿದ್ದರೆ
  • ಆಹಾರದಲ್ಲಿ ಬದಲಾವಣೆ ಮಾಡಿದರೂ ಸಮಸ್ಯೆ ಕಡಿಮೆಯಾಗದಿದ್ದರೆ
  • ಮಲಬದ್ಧತೆ ತಡೆಯಲು ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳು

ಸೂಚನೆ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

PM Modi Speech in Mysuru: ಮೈಸೂರಿನ ಪ್ರತಿ ಮೂಲೆಯಲ್ಲೂ ಭಾರತದ ಪರಂಪರೆ ಹಾಸುಹೊಕ್ಕಿದೆ; ಪ್ರಧಾನಿ ಮೋದಿ ಬಣ್ಣನೆ – Kannada News | PM Narendra Modi addresses the inauguration of the Swami Vivekananda Cultural Youth Centre Viveka Smaraka in Mysuru

ಮೈಸೂರು, ಆಗಸ್ಟ್ 1: “ಎಲ್ಲರಿಗೂ ನನ್ನ ನಮಸ್ಕಾರಗಳು” ಎನ್ನುತ್ತಾ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮೈಸೂರಿನಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸುತ್ತಿದ್ದಂತೆ ಪ್ರೇಕ್ಷಕರಿಂದ ಭಾರೀ ಕರತಾಡನ ಮೊಳಗಿತು. ಮೈಸೂರಿನಲ್ಲಿ ವಿವೇಕ ಸ್ಮಾರಕವನ್ನು ಉದ್ಘಾಟನೆ ಮಾಡಿದ ಬಳಿಕ ರಾಮಕೃಷ್ಣ ಆಶ್ರಮದ ಆಡಿಟೋರಿಯಂನಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, “ಮೈಸೂರು ಭಾರತದ ಪ್ರಾಚೀನ ಸಾಂಸ್ಕೃತಿಕ ಪ್ರಜ್ಞೆಯ ಕೇಂದ್ರವಾಗಿದೆ. ಭಾರತದ ಪರಂಪರೆಯು ಈ ನಗರದ ಪ್ರತಿಯೊಂದು ಮೂಲೆಯಲ್ಲೂ ಹಾಸುಹೊಕ್ಕಿದೆ. ಮೈಸೂರು ಭಾರತದ ಅತಿ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ತಾಯಿ ಚಾಮುಂಡೇಶ್ವರಿಗೆ ಪ್ರಣಾಮಗಳು. 2 ದಿನಗಳ ಹಿಂದೆ ಗುರು ಪೂರ್ಣಿಮೆ ಆಚರಿಸಿದ್ದೇವೆ. ನನ್ನ ಜೀವನದ ಯಾತ್ರೆಯಲ್ಲಿ ರಾಮಕೃಷ್ಣ ಅಶ್ರಮದ ಪಾತ್ರ ಮಹತ್ವದ್ದು. ಮೈಸೂರಿನ ರಾಮಕೃಷ್ಣ ಅಶ್ರಮಕ್ಕೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ. ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ. ಮೈಸೂರು ದಸರಾ, ಪರಂಪರೆ, ಅರಮನೆ, ಇಲ್ಲಿನ ಸಂಸ್ಕೃತಿ, ಸಂಗೀತ, ಸಾಹಿತ್ಯ ಇಡೀ ದೇಶದ ಗಮನ ಸೆಳೆದಿದೆ. ಮತ್ತೊಮ್ಮೆ ಮೈಸೂರಿಗೆ ಆಗಮಿಸಿದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ” ಎಂದಿದ್ದಾರೆ.


ಇದನ್ನೂ ಓದಿ: ಪ್ರಧಾನಿ ಮೋದಿಗೆ ಅಪೂರ್ವ ಉಡುಗೊರೆ: ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಸ್ವಾಮಿ ವಿವೇಕಾನಂದರ ಮಾರ್ಬಲ್ ಮೂರ್ತಿ ಸಮರ್ಪಣೆ

“ಮೈಸೂರಿನ ರಾಮಕೃಷ್ಣ ಆಶ್ರಮದ ಸೇವೆ ಅಪಾರ. ಸ್ವಾಮಿ ವಿವೇಕಾನಂದರು ದೇಶದ ಯುವಕರಿಗೆ ಪ್ರೇರಣೆ. ಭಾರತದ ಅರ್ಥ ವ್ಯವಸ್ಥೆ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಭಾರತದ ಯುವಕರ ಸಾಮರ್ಥ್ಯದಿಂದ ಅರ್ಥ ವ್ಯವಸ್ಥೆ ಬೆಳೆಯುತ್ತಿದೆ. ಮೊಬೈಲ್ ಉತ್ಪಾದನೆ, ಎಐ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಯಾವುದೇ ದೇಶದಲ್ಲಿ, ಯುವಕರ ಸಾಮರ್ಥ್ಯವು ರಾಷ್ಟ್ರೀಯ ಶಕ್ತಿಯಾಗಿ ಪರಿವರ್ತನೆಯಾಗುವುದು ಅವರಿಗೆ ಸರಿಯಾದ ಅವಕಾಶಗಳು ಮತ್ತು ಮಾರ್ಗದರ್ಶನ ಸಿಕ್ಕಾಗ ಮತ್ತು ಸ್ವಂತ ನೆಲದಲ್ಲಿ ದೊಡ್ಡ ಕನಸುಗಳನ್ನು ಕಾಣುವ, ಆ ಕನಸುಗಳನ್ನು ನನಸಾಗಿಸಿಕೊಳ್ಳುವ ಆತ್ಮವಿಶ್ವಾಸ ದೊರೆತಾಗ ಮಾತ್ರ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಭಾರತದಲ್ಲಿ ಶಿಕ್ಷಣ ಸಂಸ್ಥೆಗಳ ಸಂಖ್ಯೆಯು ಸ್ಥಿರವಾಗಿ ಹೆಚ್ಚುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಮೋದಿ ಹೇಳಿದ್ದಾರೆ.

ವಿವೇಕ ಸ್ಮಾರಕ ತೀರ್ಥಕ್ಷೇತ್ರವಾಗಲಿದೆ:

“ವಿವೇಕ ಸ್ಮಾರಕವು ಸಾಧಕರಿಗೆ ಮತ್ತು ಭಕ್ತರಿಗೆ ಆಧ್ಯಾತ್ಮಿಕ ತೀರ್ಥಕ್ಷೇತ್ರವಾಗಲಿದೆ ಎಂಬ ವಿಶ್ವಾಸ ನನಗಿದೆ. ಈ ವಿವೇಕ ಸ್ಮಾರಕದ ಮೂಲಕ, ವೈಯಕ್ತಿಕ ಸುಖ-ದುಃಖಗಳಿಗಿಂತ ಸಮಾಜದ, ರಾಷ್ಟ್ರದ ಹಿತಾಸಕ್ತಿ ಹಾಗೂ ಬಡವರು ಮತ್ತು ದೀನದಲಿತರ ಸಂಕಷ್ಟಗಳಿಗೆ ಅಗ್ರಸ್ಥಾನ ನೀಡುವ ಯುವ ಜನತೆಯನ್ನು ನಾವು ರೂಢಿಸಬೇಕಾಗಿದೆ. ಯಾರಿಗಾಗಿ ‘ರಾಷ್ಟ್ರವೇ ಪ್ರಥಮ’ ಎಂಬುದು ಪರಮ ಮಾರ್ಗದರ್ಶನ ತತ್ವವಾಗಿದೆಯೋ ಮತ್ತು ಯಾರ ಜೀವನದ ಗುರಿಯು ಭಾರತ ಮಾತೆಯ ಸೇವೆಯೋ ಅಂತಹ ಯುವಕರನ್ನು ರೂಪಿಸಬೇಕಾಗಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ – ವಿವೇಕ ಸ್ಮಾರಕದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.

ಇದನ್ನೂ ಓದಿ: ಮೈಸೂರಿಗೆ ಪ್ರಧಾನಿ ಮೋದಿ ಆಗಮನ: ಸಿಎಂ ಡಿಕೆಶಿಯಿಂದ ಸ್ವಾಗತ

“ಇಂದು ದೇಶದಲ್ಲಿ ಸುಮಾರು 1,40,000 ಎಂಬಿಬಿಎಸ್ (MBBS) ಸೀಟುಗಳಿವೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆ 823ಕ್ಕೆ ಏರಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತದ ಯುವಕರನ್ನು 21 ನೇ ಶತಮಾನಕ್ಕೆ ಸಿದ್ಧಪಡಿಸುತ್ತಿದೆ. ಬಾಲಕಿಯರು ಕೂಡ ಸೈನಿಕ್ ಶಾಲೆಗೆ ಸೇರುತ್ತಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ – ವಿವೇಕ ಸ್ಮಾರಕದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದಾರೆ.

ಬಾಹ್ಯಾಕಾಶ ಕ್ಷೇತ್ರದಲ್ಲೂ ಯುವಕರು ಇತಿಹಾಸ ಸೃಷ್ಟಿಸಿದ್ದಾರೆ. ನಮ್ಮ ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗಬೇಕು. ಯುವಕರ ಕೊಡುಗೆಯಿಂದ ದೇಶದ ಅಭಿವೃದ್ಧಿಯಾಗುತ್ತಿದೆ. ಸ್ವಾಮಿ ವಿವೇಕಾನಂದರು ದೇಶದ ಯುವಕರಿಗೆ ಪ್ರೇರಣೆ. ಭಾರತದ ಯುವಕರ ಸಾಮರ್ಥ್ಯದಿಂದ ಅರ್ಥ ವ್ಯವಸ್ಥೆ ಬೆಳೆಯುತ್ತಿದೆ. ಯುವಕರಿಗೆ ಪ್ರೋತ್ಸಾಹ ನೀಡುವ ದೇಶ ಅಭಿವೃದ್ಧಿ ಹೊಂದುತ್ತದೆ. ದೇಶದಲ್ಲಿ ಕಳೆದ 12 ವರ್ಷದಲ್ಲಿ 650 ವಿವಿಗಳನ್ನು ಸ್ಥಾಪಿಸಲಾಗಿದೆ. 4 ಸಾವಿರಕ್ಕೂ ಹೆಚ್ಚು ಐಟಿಐಗಳನ್ನು ಸ್ಥಾಪಿಸಲಾಗಿದೆ. 9 ಐಐಎಂ, 7 ಐಐಟಿ, 813 ವೈದ್ಯಕೀಯ ಕಾಲೇಜು ಸ್ಥಾಪಿಸಲಾಗಿದೆ. ಎಂಬಿಬಿಎಸ್‌ ಸೀಟ್‌ಗಳ ಸಂಖ್ಯೆ 1 ಲಕ್ಷ 40 ಸಾವಿರಕ್ಕೆ ಹೆಚ್ಚಳವಾಗಿದೆ ಎಂದು ಮೋದಿ ಹೇಳಿದ್ದಾರೆ.

ಮೈಸೂರಿನ ರಾಮಕೃಷ್ಣ ಆಶ್ರಮದ ಆಡಿಟೋರಿಯಂನಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ರಾಜ್ಯಪಾಲ ಗೆಹ್ಲೋಟ್​, ರಾಮಕೃಷ್ಣ ಆಶ್ರಮ ಮತ್ತು ಮಿಷನ್‌ನ ಅಧ್ಯಕ್ಷ ಗೌತಮಾನಂದಜೀ ಮಹಾರಾಜ್, ಮೈಸೂರು ರಾಮಕೃಷ್ಣ ಆಶ್ರಮದ ಪೂಜ್ಯ ಮುಕ್ತಿದಾನಂದಜೀ ಮಹಾರಾಜ್, ಸಂಸದ ಯದುವೀರ್ ಒಡೆಯರ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಹರೀಶ್​ ಗೌಡ ಕೂಡ ಉಪಸ್ಥಿತರಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:26 pm, Sat, 1 August 26

Source link

ಬಿಗ್​​ಬಾಸ್​​ ಬದಲು ಬೇರೊಂದು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಸಲ್ಮಾನ್ ಖಾನ್ – Kannada News | Salman Khan entered Alliance reality show for his brother

ಸಲ್ಮಾನ್ ಖಾನ್ (Salman Khan), ಬಿಗ್​​ಬಾಸ್ ಹಿಂದಿಯ ನಿರೂಪಕರು. ದಶಕಕ್ಕೂ ಹೆಚ್ಚು ಸಮಯದಿಂದ ಅವರು ಈ ಶೋನ ನಿರೂಪಕರಾಗಿದ್ದಾರೆ. ಬಿಗ್​​ಬಾಸ್ ನಿರೂಪಣೆಗೆಂದೆ ನೂರಾರು ಕೋಟಿ ರೂಪಾಯಿ ಸಂಭಾವನೆಯನ್ನು ಸಲ್ಮಾನ್ ಖಾನ್ ಪಡೆಯುತ್ತಾರೆ ಎನ್ನಲಾಗುತ್ತದೆ. ಆದರೆ ಇದೀಗ ಸಲ್ಮಾನ್ ಖಾನ್, ಬಿಗ್​​ಬಾಸ್ ಬದಲಿಗೆ ಮತ್ತೊಂದು ಅಂಥಹುದೇ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಇದು ಖುದ್ದು ಸಲ್ಮಾನ್ ಅಭಿಮಾನಿಗಳಿಗೆ ಶಾಕ್ ನೀಡಿದೆ. ಆದರೆ ಸಲ್ಮಾನ್ ಖಾನ್ ಹೋಗಿರುವುದು ನಿರೂಪಣೆ ಮಾಡಲು ಅಲ್ಲ ಬದಲಿಗೆ ತಮ್ಮ ಸಹೋದರನಿಗಾಗಿ.

ಅಮೆಜಾನ್ ಪ್ರೈಂನಲ್ಲಿ ‘ಅಲಯನ್ಸ್’ ಹೆಸರಿನ ರಿಯಾಲಿಟಿ ಶೋ ಚಾಲ್ತಿಯಲ್ಲಿದೆ. ಸಲ್ಮಾನ್ ಖಾನ್ ಸಹೋದರ ಸೋಹೈಲ್ ಖಾನ್ ಸಹ ಅದರಲ್ಲಿ ಸ್ಪರ್ಧಿ ಆಗಿದ್ದಾರೆ. ಸೊಹೈಲ್ ಅವರ ಮಾಜಿ ಪತ್ನಿ ಸೀಮಾ ಸಚ್‌ದೇವ್ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಶೋಗೆ ಪ್ರವೇಶಿಸಿದ್ದರು, ಆದರೆ ಅವರು ಈಗ ಎಲಿಮಿನೇಟ್ ಆಗಿದ್ದಾರೆ. ಸೊಹೈಲ್ ಅವರಿಗೆ ಶೋನಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಈ ವಾರವಂತೂ ಅವರಿಗೆ ಬಹಳ ಕಷ್ಟಕರವಾಗಿತ್ತು. ಈಗ ಮನೆಯಲ್ಲಿ ಸೊಹೈಲ್ ಅವರಿಗೆ ಬೆಂಬಲ ಸೂಚಿಸಲು ಅವರ ಸಹೋದರ, ಸ್ಟಾರ್ ನಟ ಸಲ್ಮಾನ್ ಖಾನ್ ಶೋಗೆ ಪ್ರವೇಶಿಸಿದ್ದಾರೆ.

ಸಲ್ಮಾನ್ ಸ್ವಲ್ಪ ಸಮಯದವರೆಗೆ ‘ಅಲಿಯನ್ಸ್’ ಶೋ ಪ್ರವೇಶಿಸಿದ್ದಾರೆ. ಮುಖ್ಯ ದ್ವಾರದ ಮೂಲಕ ಅವರು ಎಂಟ್ರಿ ಕೊಟ್ಟಿದ್ದು, ಸಲ್ಮಾನ್ ಖಾನ್ ಎಂಟ್ರಿ ಮನೆಯೊಳಗಿದ್ದ ಸ್ಪರ್ಧಿಗಳಿಗೆ ಆಘಾತ ತಂದಿದೆ. ಸಲ್ಮಾನ್ ಅನ್ನು ನೋಡುತ್ತಿದ್ದಂತೆ ಎಲ್ಲರೂ ಎದ್ದು ನಿಂತಿದ್ದಾರೆ. ಅವರು ನೇರವಾಗಿ ಒಳಗೆ ನಡೆದುಕೊಂಡು ಹೋಗಿ, ಸೊಹೈಲ್ ಅವರನ್ನು ತಬ್ಬಿಕೊಳ್ಳುವುದು ಪ್ರೋಮೊನಲ್ಲಿ ತೋರಿಸಲಾಗಿದೆ. ಸಲ್ಮಾನ್ ಅವರನ್ನು ನೋಡಿ ಸೊಹೈಲ್ ಭಾವುಕರಾಗಿ ಅವರನ್ನು ಬಿಗಿದಪ್ಪಿಕೊಂಡು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ:ಬಿರಿಯಾನಿ ತಿನ್ನುತ್ತಾ ಹಣೆಗೆ ಇಂಜೆಕ್ಷನ್ ಚುಚ್ಚಿಸಿಕೊಂಡಿದ್ದ ಸಲ್ಮಾನ್ ಖಾನ್

ಸಲ್ಮಾನ್ ಖಾನ್, ಬಿಗ್​​ಬಾಸ್ ಹೊರತಾಗಿ ಅದನ್ನೇ ಹೋಲುವ ಮತ್ತೊಂದು ಶೋಗೆ ಎಂಟ್ರಿ ಕೊಟ್ಟಿರುವುದು ಬಹುಷಃ ಇದೇ ಮೊದಲು. ಸಲ್ಮಾನ್ ಖಾನ್, ‘ಅಲಿಯನ್ಸ್’ ಶೋನಲ್ಲಿಯೂ ಸಲ್ಮಾನ್ ಖಾನ್ ಅವರು ಸ್ಪರ್ಧಿಗಳಿಗೆ ಕೆಲ ಕಿವಿ ಮಾತು, ಹಿತವಚನಗಳನ್ನು ಸಹ ಹೇಳಿದ್ದಾರೆ. ಅಲಿಯನ್ಸ್​​ನಲ್ಲಿ ಸೊಹೈಲ್ ಖಾನ್ ಜೊತೆಗೆ ಇನ್ನೂ ಹಲವು ಟಿವಿ, ಸಿನಿಮಾ ಮತ್ತು ಸೋಷಿಯಲ್ ಮೀಡಿಯಾ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ.

ಸೊಹೈಲ್ ಖಾನ್, ‘ಅಲಿಯನ್ಸ್’ನಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಶೋನ ಆರಂಭದಲ್ಲಿ, ಸೊಹೈಲ್ ಖಾನ್ ವಿಷಯವೊಂದನ್ನು ಹಂಚಿಕೊಂಡಿದ್ದರು. ತಾನು ಮಗುವಾಗಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದನ್ನು ಸ್ಮರಿಸಿದ್ದ ಸೊಹೈಲ್, ‘ನಾನು ಚಿಕ್ಕವನಿದ್ದಾಗ ಯಾರೋ ಒಬ್ಬರು ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಮತ್ತು ನಾನು ಅದನ್ನು ವರ್ಷಗಳವರೆಗೆ ನನ್ನಲ್ಲೇ ಇಟ್ಟುಕೊಂಡಿದ್ದೆ. ನಾನು ಬೆಳೆದು ವಯಸ್ಕನಾದಾಗ, ನನ್ನ ತಂದೆಯ ಬಳಿ ವಿಷಯ ಹಂಚಿಕೊಂಡೆ. ನಾನು ಅವರಿಗೆ, ‘ಡ್ಯಾಡಿ, ನನಗೆ ಹೀಗಾಯ್ತು’ ಎಂದೆ. ಅದಕ್ಕೆ ಅವರು, ‘ಮಗುವೇ, ಇಷ್ಟು ವರ್ಷಗಳ ಕಾಲ ನೀನು ಇದನ್ನು ನಿನ್ನಲ್ಲೇ ಇಟ್ಟುಕೊಂಡಿದ್ದೀಯಾ’ ಎಂದರು. ಆಗ ನಾನು, ‘ಕ್ಷಮಿಸಿ, ಆದರೆ ಇದನ್ನು ಹೇಳಲು ನನಗೆ ತುಂಬಾ ಮುಜುಗರವಾಯಿತು’ ಎಂದಿದ್ದಾರೆ.

‘ಅಲಯನ್ಸ್’ ಎಂಬುದು 2026ರಲ್ಲಿ ಪ್ರೈಮ್ ವೀಡಿಯೊದಲ್ಲಿ ಪ್ರದರ್ಶನಗೊಂಡ ರಿಯಾಲಿಟಿ ಸ್ಪರ್ಧಾ ಸರಣಿಯಾಗಿದೆ ಮತ್ತು ಇದನ್ನು ನಟ ಕುನಾಲ್ ಖೇಮು ನಿರೂಪಣೆ ಮಾಡುತ್ತಿದ್ದಾರೆ. ಈ ಶೋನಲ್ಲಿ ಟೆಲಿವಿಷನ್, ಚಲನಚಿತ್ರಗಳು, ಡಿಜಿಟಲ್ ಕಂಟೆಂಟ್ ಮತ್ತು ಕ್ರೀಡಾ ಲೋಕದ ಸೆಲೆಬ್ರಿಟಿ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಇವರು ಆಟದಲ್ಲಿ ಉಳಿಯಲು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾ, ಮುರಿಯುತ್ತಾ ಆಟ ಆಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಾಳೆ ಪೊಲೀಸ್​​ ನೇಮಕಾತಿ ಪರೀಕ್ಷೆ: ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ ಕೊಟ್ಟ ಗೃಹ ಸಚಿವ ಪ್ರಿಯಾಂಕ್ ಖರ್ಗೆ – Kannada News | Karnataka Police Recruitment Exam Tomorrow: Priyank Kharge Shares Important Instructions for Candidates

ಬೆಂಗಳೂರು, ಆಗಸ್ಟ್​​ 01: ನಾಳೆ ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ (Police Constable Recruitment) ಲಿಖಿತ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಶುಭಾಶಯ ತಿಳಿಸಿದ್ದಾರೆ. ನೇಮಕಾತಿ ಪರೀಕ್ಷೆ ಆಯೋಜನೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗಿದ್ದು, ಯುವ ಜನರ ಭವಿಷ್ಯ ಭದ್ರಪಡಿಸಲು ಸಂಪೂರ್ಣ ಪಾರದರ್ಶಕತೆಗೆ ಒತ್ತು ನೀಡಲಾಗಿದೆ. ಯಾವುದೇ ರೀತಿಯ ಅಕ್ರಮದ ಬಗ್ಗೆ ಸುಳಿವಿದ್ದರೆ ನೇರವಾಗಿ ಸಂಪರ್ಕಿಸುವಂತೆ ಉದ್ಯೋಗಾಂಕ್ಷಿಗಳಿಗೆ ಗೃಹ ಸಚಿವರು ಕರೆ ನೀಡಿದ್ದಾರೆ.

ಜನಿವಾರ, ಮಾಂಗಲ್ಯಸರ ಧರಿಸಲು ಅನುಮತಿ

ಈ ಕುರಿತಾಗಿ ಟ್ವೀಟ್​ ಮಾಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ‘ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಆಗಸ್ಟ್ 2ರಂದು ನಡೆಯಲಿರುವ ಲಿಖಿತ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ಲೋಪಗಳಿಗೆ ಆಸ್ಪದ ನೀಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆಯನ್ನು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಸಲು ಪ್ರಶ್ನೆಪತ್ರಿಕೆಯು ಪರೀಕ್ಷಾ ಕೇಂದ್ರವನ್ನು ತಲುಪಿದ ನಂತರ ಪ್ರಾಂಶುಪಾಲರ ನೇತೃತ್ವದಲ್ಲಿ ಹಾಗೂ ಐವರು ಅಭ್ಯರ್ಥಿಗಳ ಸಮ್ಮುಖದಲ್ಲಿಯೇ ಸೀಲ್ ತೆರೆಯುವಂತೆ ಆದೇಶಿಸಲಾಗಿದೆ. ನಕಲು ಎಸಗಲು ಅವಕಾಶ ನೀಡದಂತೆ ವಿವಿಧ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವುದನ್ನು ನಿರ್ಬಂಧಿಸಲಾಗಿದೆ. ಆದರೆ ಧಾರ್ಮಿಕ ನಂಬಿಕೆಯನ್ನು ಗೌರವಿಸಲು ಶಿವದಾರ, ಜನಿವಾರ, ಮಾಂಗಲ್ಯಸರ ಮುಂತಾದವುಗಳನ್ನು ಧರಿಸಲು ಅನುಮತಿ ನೀಡಲಾಗಿದೆ’ ಎಂದಿದ್ದಾರೆ.

ಪ್ರಿಯಾಂಕ್ ಖರ್ಗೆ ಟ್ವೀಟ್ 

‘ಈ ಹಿಂದೆ ವಿವಿಧ ನೇಮಕಾತಿಗಳಲ್ಲಿ ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಯನ್ನು ತಿದ್ದಿದ ಆರೋಪಗಳು ಕೇಳಿಬಂದಿದ್ದರಿಂದ, ಈ ಬಾರಿ ಒಎಂಆರ್ ಶೀಟ್‌ನಲ್ಲಿ ಐದನೇ ಆಯ್ಕೆಯನ್ನು ನೀಡಲಾಗಿದೆ. ಪ್ರಶ್ನೆಗೆ ಉತ್ತರ ಗೊತ್ತಿಲ್ಲದವರು ಒಎಂಆರ್ ಶೀಟ್‌ನಲ್ಲಿ ಖಾಲಿ ಬಿಡುವಂತಿಲ್ಲ. 5ನೇ ಕಾಲಂ ಅನ್ನು ಕಡ್ಡಾಯವಾಗಿ ಶೇಡ್ ಮಾಡಬೇಕು. ಯಾವುದೇ ಉತ್ತರ ಗುರುತಿಸದೆ ಇದ್ದಲ್ಲಿ ಅರ್ಧ ಅಂಕವನ್ನು ಕಡಿತಗೊಳಿಸಲಾಗುತ್ತದೆ. ಪರೀಕ್ಷೆ ಮುಗಿದ 30 ನಿಮಿಷದೊಳಗೆ ಒಎಂಆರ್ ಶೀಟ್ ಅನ್ನು ಕೆಇಎ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 70 ಸಾವಿರಕ ಹುದ್ದೆಗಳ ನೇಮಕಾತಿ: ಸ್ಪರ್ಧಾತ್ಮಕ ಪರೀಕ್ಷೆ- ನೇಮಕಾತಿ ವ್ಯವಸ್ಥೆಯ ಸುಧಾರಣೆಗೆ ಸಮಿತಿ ರಚನೆ

‘ಪ್ರತಿ ಪರೀಕ್ಷಾ ಕೊಠಡಿಯಲ್ಲಿಯೂ ಹೈ ಡೆಫಿನಿಷನ್ ಕ್ಯಾಮೆರಾ, ಲೈವ್ ವೆಬ್‌ಕಾಸ್ಟಿಂಗ್, ನೆಟ್‌ವರ್ಕ್ ಜಾಮರ್, ಬೆರಳಚ್ಚು ಬಯೋಮೆಟ್ರಿಕ್ ಮತ್ತು ಮುಖಗುರುತು ಪತ್ತೆ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ 1 ಗಂಟೆ ಮುಂಚಿತವಾಗಿ ಆಗಮಿಸಿ, ಕಡ್ಡಾಯ ತಪಾಸಣೆಗೆ ಒಳಪಡಬೇಕು. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ಎಸಗುವುದು ಕಂಡುಬಂದರೆ ಅಂತಹ ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್ ಮಾಡಲಾಗುತ್ತದೆ. ಈ ನೇಮಕಾತಿಯು ಲಕ್ಷಾಂತರ ಅಭ್ಯರ್ಥಿಗಳ ಕನಸು. ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ, ನ್ಯಾಯಸಮ್ಮತವಾಗಿ ಮತ್ತು ಪಾರದರ್ಶಕವಾಗಿ ಪ್ರಕ್ರಿಯೆಯನ್ನು ನಡೆಸುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ’ ಎಂದು ಹೇಳಿದ್ದಾರೆ.

ಪಾರದರ್ಶಕತೆಯೇ ನಮ್ಮ ಬದ್ಧತೆ

‘ಇನ್ನು ಪರೀಕ್ಷಾ ಕೇಂದ್ರಕ್ಕೆ ತರಬಹುದಾದ ಹಾಗೂ ನಿಷೇಧಿತ ವಸ್ತುಗಳ ಸಂಪೂರ್ಣ ಪಟ್ಟಿಯನ್ನು ಈಗಾಗಲೇ ಅಭ್ಯರ್ಥಿಗಳ ಹಾಲ್ ಟಿಕೆಟ್​ನಲ್ಲಿ ವಿವರವಾಗಿ ನೀಡಲಾಗಿದ್ದು, ಎಲ್ಲರೂ ಕಡ್ಡಾಯವಾಗಿ ವಸ್ತ್ರ ಸಂಹಿತೆ ಪಾಲಿಸಿಲು ಕೋರಿದರು. ಧಾರ್ಮಿಕ ಉಡುಪು ಧರಿಸಿ ಪರೀಕ್ಷೆ ಬರೆಯಲು ಅಪೇಕ್ಷಿಸುವವರು, ಪರೀಕ್ಷೆ ಆರಂಭಕ್ಕೆ2:30 ಗಂಟೆ ಮೊದಲು ಕೇಂದ್ರದಲ್ಲಿ ಹಾಜರಿದ್ದು, ತಪಾಸಣೆಗೆ ಒಳಪಟ್ಟು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು. ಯಾವುದೇ ಗೊಂದಲಕ್ಕೆ ಒಳಗಾಗದೇ, ಆತ್ಮವಿಶ್ವಾಸದಿಂದ ಉದ್ಯೋಗಾಕಾಂಕ್ಷಿಗಳು ಯಶಸ್ವಿಯಾಗಿ ಪರೀಕ್ಷೆ ಎದುರಿಸುವಂತೆ ಗೃಹ ಸಚಿವರು ಕೋರಿದ್ದಾರೆ.’

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:14 pm, Sat, 1 August 26

Source link

ಕಾಲೇಜು ವಿದ್ಯಾರ್ಥಿಗಳಲ್ಲಿ 7 ಸಾವಿರ ಹೆಚ್‌ಐವಿ ಸೋಂಕು ವದಂತಿ ಸುಳ್ಳು: ಸ್ಪಷ್ಟನೆ ನೀಡಿದ ಆರೋಗ್ಯ ಇಲಾಖೆ – Kannada News | Karnataka Health Minister UT Khader Clarifies HIV Rumors: No Mandatory Testing

ಬೆಂಗಳೂರು, ಆ.1: ರಾಜ್ಯದಲ್ಲಿ ಹೆಚ್‌ಐವಿ (HIV) ಸೋಂಕಿನ ಸ್ಥಿತಿಗತಿ ಹಾಗೂ ಇತ್ತೀಚೆಗೆ ಹರಿದಾಡುತ್ತಿದ್ದ ವಿವಿಧ ವದಂತಿಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಅಧಿಕೃತ ವಿವರಣೆ ಹಾಗೂ ಸ್ಪಷ್ಟನೆ ನೀಡಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಭಾರಿ ಪ್ರಮಾಣದಲ್ಲಿ ಸೋಂಕು ಹರಡಿದೆ ಹಾಗೂ ಕಡ್ಡಾಯ ಪರೀಕ್ಷೆ ಮಾಡಲಾಗುತ್ತಿದೆ ಎಂಬ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಆರೋಗ್ಯ ಸಚಿವ ಯುಟಿ ಖಾದರ್​ ಅವರು ಸ್ಪಷ್ಟಪಡಿಸಿದೆ.

ರಾಜ್ಯದ ಕಾಲೇಜು ವಿದ್ಯಾರ್ಥಿಗಳಲ್ಲಿ 7,000 ಜನರಿಗೆ ಹೆಚ್‌ಐವಿ ಸೋಂಕು ತಗಲಿದೆ ಎಂದು ಹರಡುತ್ತಿರುವ ಸುದ್ದಿ ಸುಳ್ಳು. ಶಾಲಾ-ಕಾಲೇಜುಗಳಲ್ಲಿ ಹೆಚ್‌ಐವಿ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂಬ ನಿಯಮವಿಲ್ಲ. ಶಾಲಾ-ಕಾಲೇಜುಗಳಲ್ಲಿ ಕೇವಲ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾತ್ರ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಯಾವುದೇ ಸಾಮಾನ್ಯ ವ್ಯಕ್ತಿಗೆ ಹೆಚ್‌ಐವಿ ಪರೀಕ್ಷೆಯನ್ನು ಕಡ್ಡಾಯಗೊಳಿಸಿಲ್ಲ.

ಪ್ರಸ್ತುತ ಮುಖ್ಯವಾಗಿ ಎರಡು ಸಂದರ್ಭಗಳಲ್ಲಿ ಮಾತ್ರ ಹೆಚ್‌ಐವಿ ಪರೀಕ್ಷೆ ನಡೆಸಲಾಗುತ್ತಿದೆ. ಒಂದು ಗರ್ಭಿಣಿಯರ ಹೆರಿಗೆ ಸಮಯದಲ್ಲಿ, ಇನ್ನೊಂದು ರಕ್ತದಾನ ಮಾಡುವ ಸಮಯದಲ್ಲಿ ಎಂದು ಹೇಳಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಒಟ್ಟು 5,53,453 ಜನರನ್ನು ಪರೀಕ್ಷೆಗೊಳಪಡಿಸಿದ್ದು, ಅದರಲ್ಲಿ 3,091 ಸೋಂಕಿತರು ಪತ್ತೆಯಾಗಿದ್ದಾರೆ.

ಈ ಪೈಕಿ 2,81,742 ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 111 ಗರ್ಭಿಣಿಯರಲ್ಲಿ ಹೆಚ್‌ಐವಿ ಪಾಸಿಟಿವ್ ಕಂಡುಬಂದಿದೆ. ರಾಜ್ಯದಲ್ಲಿ 2004 ರಿಂದ ಇಲ್ಲಿಯವರೆಗೆ 39,028 ಸೋಂಕಿತರು ನೋಂದಾಯಿತರಾಗಿದ್ದಾರೆ. 18 ರಿಂದ 35 ವರ್ಷದೊಳಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಹೆರಿಗೆಯಾದ ನಂತರ ಹಾಲುಣಿಸುವ ತಾಯಿ ಪೊರಕೆ ಏಕೆ ಮುಟ್ಟಬಾರದು? ಇಲ್ಲಿದೆ ಸಂಪ್ರದಾಯದ ಹಿಂದಿನ ರಹಸ್ಯ!

ಸುಮಾರು 56,000 ಸೋಂಕಿತರು ಸದ್ಯ ತಪಾಸಣೆ ಮತ್ತು ನಿರಂತರ ಚಿಕಿತ್ಸಾ ವ್ಯಾಪ್ತಿಯಿಂದ ಹೊರಗುಳಿದಿರುವುದು ಕಂಡುಬಂದಿದ್ದು, ಅವರನ್ನು ಪತ್ತೆಹಚ್ಚಿ ಚಿಕಿತ್ಸೆಗೆ ತರುವ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಹೆಚ್‌ಐವಿ ಸೋಂಕಿತರ ಪ್ರಮಾಣ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಯಾವುದೇ ಅನಗತ್ಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೇಂದ್ರದಿಂದ ರಾಜ್ಯಗಳಿಗೆ 1 ಲಕ್ಷ ಕೋಟಿ ರೂ ತೆರಿಗೆ ಹಂಚಿಕೆ; ಕರ್ನಾಟಕಕ್ಕೆ 4,504 ಕೋಟಿ ರೂ; ಬೇರೆ ರಾಜ್ಯಗಳಿಗೆ ಸಿಕ್ಕಿದ್ದು ಎಷ್ಟು? – Kannada News | Centre releases additional installment of over Rs 1 lakh crore tax devolution to states

ನವದೆಹಲಿ, ಆಗಸ್ಟ್ 1: ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ ಕಂತಿನ ರೂಪದಲ್ಲಿ ₹1,09,019 ಕೋಟಿ ತೆರಿಗೆ ಪಾಲು (Tax Devolution) ಹಣವನ್ನು ಬಿಡುಗಡೆ ಮಾಡಿದೆ. ಆಗಸ್ಟ್ 10 ರಂದು ಬಿಡುಗಡೆಯಾಗಬೇಕಿರುವ ನಿಯಮಿತ ಮಾಸಿಕ ತೆರಿಗೆ ಹಂಚಿಕೆಯ ಹೊರತಾಗಿ, ಈ ಮುಂಗಡ ಕಂತನ್ನು (Advance Instalment) ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.

ರಾಜ್ಯಗಳ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವುದು ಹಾಗೂ ಬಂಡವಾಳ ವಿನಿಯೋಗ ಮತ್ತು ಅಭಿವೃದ್ಧಿ ವೆಚ್ಚಗಳನ್ನು (Capital and Developmental Expenditure) ವೇಗಗೊಳಿಸುವ ಉದ್ದೇಶದಿಂದ ಈ ಹಣವನ್ನು ಬಿಡುಗಡೆ ಮಾಡಲಾಗಿದೆ.

ಪ್ರಸ್ತುತ ನಿಯಮಗಳ ಪ್ರಕಾರ, ಕೇಂದ್ರ ಸರ್ಕಾರವು ಸಂಗ್ರಹಿಸುವ ಒಟ್ಟು ತೆರಿಗೆಯಲ್ಲಿ ಶೇ. 41 ರಷ್ಟು ಭಾಗವನ್ನು ಹಣಕಾಸು ವರ್ಷದಲ್ಲಿ 14 ಕಂತುಗಳ ಮೂಲಕ ರಾಜ್ಯಗಳಿಗೆ ಹಂಚಿಕೆ ಮಾಡುತ್ತದೆ.

ಇದನ್ನೂ ಓದಿ: ಜುಲೈನಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; ಸರ್ಕಾರದ ಖಜಾನೆ ಮುಟ್ಟಿದ ತೆರಿಗೆ ಮೊತ್ತ 2 ಲಕ್ಷ ಕೋಟಿ ರೂಗೂ ಅಧಿಕ

ಕರ್ನಾಟಕಕ್ಕೆ ಸಿಕ್ಕಿದ್ದು 4,505 ಕೋಟಿ ರೂ, ಉ.ಪ್ರ.ಗೆ ಗರಿಷ್ಠ ಪಾಲು

ನಿರೀಕ್ಷೆಯಂತೆ ಉತ್ತರಪ್ರದೇಶಕ್ಕೆ ಅತಿಹೆಚ್ಚು ತೆರಿಗೆ ಪಾಲು ಸಿಕ್ಕಿದೆ. ಆ ರಾಜ್ಯಕ್ಕೆ 19,208 ಕೋಟಿ ರೂ ಬಂದಿದೆ. ಇತರ ಹಿಂದುಳಿದ ರಾಜ್ಯಗಳೆನಿಸಿರುವ ಬಿಹಾರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳಕ್ಕೂ ಹೆಚ್ಚು ಟ್ಯಾಕ್ಸ್ ಆದಾಯವನ್ನು ಕೇಂದ್ರ ಸರ್ಕಾರ ವರ್ಗಾಯಿಸಿದೆ. ವಿವಿಧ ರಾಜ್ಯಗಳಿಗೆ ಸಿಕ್ಕ ತೆರಿಗೆ ಪಾಲಿನ ವಿವರ ಇಂತಿದೆ:

  1. ಉತ್ತರ ಪ್ರದೇಶ: ₹19,208
  2. ಬಿಹಾರ: ₹10,845
  3. ಮಧ್ಯ ಪ್ರದೇಶ: ₹8,010
  4. ಪಶ್ಚಿಮ ಬಂಗಾಳ: ₹7,866
  5. ಮಹಾರಾಷ್ಟ್ರ: ₹7,022
  6. ರಾಜಸ್ಥಾನ: ₹6,460
  7. ಒಡಿಶಾ: ₹4,819
  8. ಆಂಧ್ರ ಪ್ರದೇಶ: ₹4,597
  9. ಕರ್ನಾಟಕ: ₹4,504
  10. ತಮಿಳುನಾಡು: ₹4,466
  11. ಗುಜರಾತ್: ₹4,094

ಇದನ್ನೂ ಓದಿ: ಎಥನಾಲ್ ಮಿಶ್ರಣ ಇಲ್ಲದಿದ್ದರೆ ಪೆಟ್ರೋಲ್ ಬೆಲೆ ಈ ಹೊತ್ತಿಗೆ 125 ರೂಗೆ ಏರಿರುತ್ತಿತ್ತು: ಕೇಂದ್ರ ಸರ್ಕಾರ

ತೆರಿಗೆ ಹಂಚಿಕೆ ಹೇಗೆ?

ಭಾರತದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ಒಟ್ಟು ತೆರಿಗೆ ಆದಾಯವನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಹಾಗೂ ರಾಜ್ಯ ರಾಜ್ಯಗಳ ನಡುವೆ ಹಂಚಿಕೆ ಮಾಡಲು ಹಣಕಾಸು ಆಯೋಗ (Finance Commission) ಒಂದು ಸೂತ್ರವನ್ನು ರೂಪಿಸುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ 15ನೇ ಹಣಕಾಸು ಆಯೋಗದ ಪ್ರಕಾರ, ಕೇಂದ್ರದ ಒಟ್ಟು ತೆರಿಗೆ ಆದಾಯದ (Divisible Pool) 41% ಭಾಗವನ್ನು ರಾಜ್ಯಗಳಿಗೆ ನೀಡಲಾಗುತ್ತದೆ. ಈ 41% ಹಣವನ್ನು (Vertical Devolution) ಪ್ರತಿಯೊಂದು ರಾಜ್ಯಕ್ಕೂ ಹೇಗೆ ವಿಂಗಡಿಸಬೇಕು ಎಂಬುದಕ್ಕೆ ಈ ಕೆಳಗಿನ ಮಾನದಂಡಗಳನ್ನು (Weightage) ಬಳಸಲಾಗುತ್ತದೆ:

15ನೇ ಹಣಕಾಸು ಆಯೋಗದ ಹಂಚಿಕೆ ಸೂತ್ರ

ರಾಜ್ಯಗಳ ಆದಾಯ ಅಂತರ, ಜನಸಂಖ್ಯೆ, ವಿಸ್ತೀರ್ಣ, ಜನಸಂಖ್ಯೆ ನಿರ್ವಹಣೆ, ಪರಿಸರ ಮತ್ತು ತೆರಿಗೆ ಶಿಸ್ತು ಅಂಶಗಳ ಆಧಾರದ ಮೇಲೆ ರಾಜ್ಯಗಳಿಗೆ ತೆರಿಗೆ ಹಂಚಿಕೆ (Horizontal Devolution) ಮಾಡಲಾಗುತ್ತದೆ. ಇಲ್ಲಿ ಆದಾಯ ಅಂತರಕ್ಕೆ ಶೇ. 45ರಷ್ಟು ತೂಕ ಇರುತ್ತದೆ. ತೆರಿಗೆ ಶಿಸ್ತಿಗೆ ಕನಿಷ್ಠ ಶೇ. 2.5 ವೈಟೇಜ್ ಕೊಡಲಾಗಿದೆ.

ಇಲ್ಲಿ ಆದಾಯ ಅಂತರ ಎಂದರೆ, ಅತಿ ಹೆಚ್ಚು ತಲಾ ಆದಾಯವಿರುವ ರಾಜ್ಯಕ್ಕಿಂತ ಇತರ ರಾಜ್ಯಗಳ ಆದಾಯ ಎಷ್ಟು ಹಿಂದುಳಿದಿದೆ ಎಂದು. ಒಂದು ರಾಜ್ಯವು ಈ ಲೆಕ್ಕಾಚಾರದಲ್ಲಿ ಅತಿ ಹಿಂದುಳಿದಿದ್ದರೆ ಅತಿ ಹೆಚ್ಚು ತೆರಿಗೆ ಪಾಲು ಸಿಗುತ್ತದೆ. ಜನಸಂಖ್ಯೆ ಹೆಚ್ಚು ಇರುವ ರಾಜ್ಯಗಳಿಗೂ ಹೆಚ್ಚಿನ ತೆರಿಗೆ ಪಾಲು ಸಿಗುತ್ತದೆ. ಈ ಕಾರಣಕ್ಕೆ ದಕ್ಷಿಣ ರಾಜ್ಯಗಳಿಗಿಂತ ಉತ್ತರದ ರಾಜ್ಯಗಳಿಗೆ ಹೆಚ್ಚಿನ ಟ್ಯಾಕ್ಸ್ ಹಂಚಿಕೆ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಈ ಹೋಟೆಲ್​​ಗಳು ಆಶಿಕಾ ರಂಗನಾಥ್​​ಗೆ ಬಲು ಇಷ್ಟವಂತೆ – Kannada News | Ashika Ranganath names her favourite Bengaluru hotels

ಆಶಿಕಾ ರಂಗನಾಥ್ (Ashika Ranganath) ಕನ್ನಡದ ಬಲು ಕ್ಯೂಟ್ ನಟಿ. ಆಶಿಕಾ, ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಒಳ್ಳೆಯ ನಟಿ ಆಗಿರುವ ಜೊತೆಗೆ ಆಶಿಕಾ ರಂಗನಾಥ್ ಫುಡಿ ಸಹ. ಅವರ ಭಿನ್ನ ರೀತಿಯ ಆಹಾರವನ್ನು ಸವಿಯುವುದೆಂದರೆ ಬಲು ಇಷ್ಟ. ಆಹಾರದ ಫೋಟೊಗಳು, ವಿಡಿಯೋಗಳನ್ನು ಸಹ ಆಶಿಕಾ ರಂಗನಾಥ್ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರ ಹಳೆಯ ಸಂದರ್ಶನದ ವಿಡಿಯೋ ತುಣುಕೊಂದು ವೈರಲ್ ಆಗಿದ್ದು, ಬೆಂಗಳೂರಿನಲ್ಲಿ ತಮಗೆ ಇಷ್ಟವಾದ ಹೋಟೆಲ್​​ಗಳು ಮತ್ತು ಅವುಗಳ ವಿಶೇಷತೆ ಬಗ್ಗೆ ನಟಿ ಆಶಿಕಾ ರಂಗನಾಥ್ ಮಾತನಾಡಿದ್ದಾರೆ.

ಆಶಿಕಾ ರಂಗನಾಥ್ ಅವರಿಗೆ ಶಿವಾಜಿ ಮಿಲ್ಟ್ರಿ ಹೋಟೆಲ್ ಅಂದರೆ ಬಲು ಇಷ್ಟವಂತೆ. ಅವರಿಗೆ ಬಿರಿಯಾನಿ ಎಂದರೆ ಬಲು ಇಷ್ಟ ಅದರಲ್ಲೂ ಶಿವಾಜಿ ಮಿಲ್ಟ್ರಿ ಹೋಟಲಿನ ಬಿರಿಯಾನಿ ಎಂದರೆ ಬಹಳ ಇಷ್ಟವಂತೆ ನಟಿಗೆ. ‘ನಾನು ಆಗಾಗ್ಗೆ ಶಿವಾಜಿ ಮಿಲ್ಟ್ರಿ ಹೋಟೆಲಿಗೆ ಹೋಗುತ್ತಿರುತ್ತೇನೆ, ಅಲ್ಲಿಯ ಎಲ್ಲ ಖಾದ್ಯಗಳು ನನಗೆ ಇಷ್ಟ’ ಎಂದು ನಟಿ ಹೇಳಿದ್ದಾರೆ.

ಆಶಿಕಾಗೆ ಕಾಂಟಿನೆಂಟಲ್ ಫುಡ್ ಸಹ ಬಲು ಇಷ್ಟವಂತೆ. ತಾವು ಏಷಿಯನ್, ಕೊರಿಯನ್, ಜಪಾನೀಸ್ ಖಾದ್ಯಗಳನ್ನು ಸವಿಯಲು ಬೆಂಗಳೂರಿನ ಇಂದಿರಾನಗರದಲ್ಲಿರುವ ಲಕ್ಕಿ ಚಾನ್ ಹೆಸರಿನ ಹೋಟೆಲ್ಗೆ ಹೋಗುತ್ತಾರಂತೆ. ಅಲ್ಲಿನ ಸೂಶಿಗಳು ಬಹಳ ಚೆನ್ನಾಗಿರುತ್ತವಂತೆ. ಅದಾದ ಬಳಿಕ ಆಶಿಕಾಗೆ ಬೆಂಗಳೂರಿನ ವಿಬಿ ಬೇಕರಿಯ ಖಾದ್ಯಗಳು ಬಹಳ ಇಷ್ಟವಂತೆ. ಅದರಲ್ಲೂ ವಿಬಿ ಬೆಕರಿಯ ಸ್ವೀಟ್ ಆಂಡ್ ಸಾಲ್ಟ್ ಬಿಸ್ಕೆಟ್​​ಗಳು ಆಶಿಕಾ ರಂಗನಾಥ್ ಅವರಿಗೆ ಬಹಳ ಇಷ್ಟವಂತೆ.

ಇದನ್ನೂ ಓದಿ:ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಆಶಿಕಾ ರಂಗನಾಥ್

ಇನ್ನು ಕೊನೆಯದಾಗಿ ಬೆಂಗಳೂರಿನ ಹಳೆಯ ಹೋಟೆಲ್​​ಗಳಲ್ಲಿ ಒಂದಾಗಿರುವ ಎಸ್​​ಎಲ್​​ಎನ್ ಟಿಫನ್ ರೂಂ ಅಥವಾ ಮುದ್ದಣ್ಣ ಹೋಟೆಲ್ ಎಂದರೆ ಬಲು ಇಷ್ಟವಂತೆ. ಮುದ್ದಣ್ಣ ಹೋಟೆಲಿನ ಗರಿ ಗರಿಯಾದ ದೋಸೆ ಆಶಿಕಾಗೆ ಸಖತ್ ಇಷ್ಟವಂತೆ. ಅಲ್ಲಿನ ಇಡ್ಲಿಗಳು ಸಹ ಚೆನ್ನಾಗಿರುತ್ತವೆ. ದಶಕಗಳಿಂದಲೂ ಸಹ ಆ ಹೋಟೆಲ್ ಒಳ್ಳೆಯ ದೋಸೆಗಳನ್ನು ಉಣಬಡಿಸುತ್ತಿದ್ದಾರೆ ಎಂದು ನಟಿ ಆಶಿಕಾ ರಂಗನಾಥ್ ಹೇಳಿದ್ದಾರೆ. ಈ ಹೋಟೆಲ್​​ಗಳಿಗೆ ಆಶಿಕಾ ರಂಗನಾಥ್ ಪದೇ ಪದೇ ಭೇಟಿ ನೀಡುತ್ತಲೇ ಇರುತ್ತಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿಗೆ ಅಪೂರ್ವ ಉಡುಗೊರೆ: ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಸ್ವಾಮಿ ವಿವೇಕಾನಂದರ ಮಾರ್ಬಲ್ ಮೂರ್ತಿ ಸಮರ್ಪಣೆ – Kannada News | Renowned Sculptor Arun Yogirajs Vivekananda Idol Gifted to PM Modi during Mysuru Visit.

ಮೈಸೂರು, ಆ.1: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಆಶ್ರಮದ ವತಿಯಿಂದ ವಿಶೇಷ ಉಡುಗೊರೆಯನ್ನು ಸ್ವೀಕರಿಸಿದರು. ಅಯೋಧ್ಯೆಯ ಶ್ರೀ ರಾಮಲಲ್ಲಾ ಮೂರ್ತಿಯನ್ನು ಕೆತ್ತಿ ಖ್ಯಾತಿ ಗಳಿಸಿರುವ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರು ಕೆತ್ತಿದ ಸ್ವಾಮಿ ವಿವೇಕಾನಂದರ ಸುಂದರ ಏಕಶಿಲಾ ಮೂರ್ತಿಯನ್ನು ಪ್ರಧಾನಿಗೆ ಸಮರ್ಪಿಸಲಾಯಿತು. ಈ ಮೂರ್ತಿಯು ಸುಮಾರು 8.5 ಕೆಜಿ ತೂಕವನ್ನು ಹೊಂದಿದ್ದು, 1.5 ಅಡಿ ಎತ್ತರವಿದೆ. ವಿಯೆಟ್ನಾಂ ಮಾರ್ಬಲ್‌ನಿಂದ ನಿರ್ಮಿಸಲಾಗಿರುವ ಈ ಮೂರ್ತಿಯು ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ ಮಾದರಿಯನ್ನು ಆಧರಿಸಿದೆ. ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಈ ಅಮೂಲ್ಯ ಉಡುಗೊರೆಯನ್ನು ಹಸ್ತಾಂತರಿಸಿದರು. ಶಿಲ್ಪಿ ಅರುಣ್ ಯೋಗಿರಾಜ್ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವಾದ ವಿವೇಕ ಸ್ಮಾರಕದ ಉದ್ಘಾಟನಾ ಸಮಾರಂಭದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದು ಮಾನವ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣದ ಸ್ವಾಮಿ ವಿವೇಕಾನಂದರ ಆಶಯಗಳನ್ನು ಮುಂದಕ್ಕೆ ಕೊಂಡೊಯ್ಯುವ ಬದ್ಧತೆಯನ್ನು ಪುನರುಚ್ಚರಿಸುವ ಮಹತ್ವದ ಸಂದರ್ಭವಾಗಿತ್ತು. ಸಾವಿರಾರು ವಿವೇಕಾನಂದರ ಅಭಿಮಾನಿಗಳು ಒಂದು ದಶಕದಿಂದಲೂ ಈ ಕ್ಷಣಕ್ಕಾಗಿ ಕಾತುರದಿಂದ ಕಾಯುತ್ತಿದ್ದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Friendship Day 2026: ನಿಮ್ಮ ಬೆಸ್ಟ್‌ಫ್ರೆಂಡ್‌ಗೆ ಈ ಗಿಫ್ಟ್‌ಗಳನ್ನು ನೀಡುವ ಮೂಲಕ ಸ್ನೇಹಿತರ ದಿನವನ್ನು ವಿಶೇಷವಾಗಿ ಆಚರಿಸಿ – Kannada News | Friendship Day 2026: Celebrate Friendship Day in a special way by giving these gifts to your best friend

ಸ್ವಾರ್ಥವಿಲ್ಲದ ಸಂಬಂಧಗಳಲ್ಲಿ ಸ್ನೇಹ (Friendship) ಸಂಬಂಧ ಕೂಡಾ ಒಂದು. ನಾವು ಬಿದ್ದಾಗ ನಮ್ಮಂದಿಗೆ ಸಂಬಂಧಿಕರು ಇರುತ್ತಾರೋ ಗೊತ್ತಿಲ್ಲ, ಆದ್ರೆ ಸ್ನೇಹಿತರು ಮಾತ್ರ ಎಂದಿಗೂ ಕೈ ಬಿಡೋದಿಲ್ಲ. ಅವರು ಮಾತ್ರ ಎಂತಹದ್ದೇ ಕಷ್ಟದಲ್ಲೂ ನಮ್ಮ ಜೊತೆಗಿರುತ್ತಾರೆ. ಅದಕ್ಕಾಗಿಯೇ ಸ್ನೇಹವನ್ನು ರಕ್ತ ಸಂಬಂಧಕ್ಕೂ ಮೀರಿದ ಬಂಧವೆಂದು ಹೇಳುವುದು. ಈ ವಿಶೇಷ ಸಂಬಂಧವನ್ನು ಸಂಭ್ರಮಿಸಲು ಪ್ರತಿವರ್ಷ ಆಗಸ್ಟ್‌ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ಸೇರಿ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ. ಈ ಬಾರಿ ಆಗಸ್ಟ್‌ 2 ರಂದು ಫ್ರೆಂಡ್‌ಶಿಪ್‌ ಡೇ ಆಚರಿಸಲಾಗುತ್ತಿದ್ದು, ನಿಮ್ಮ ಬೆಸ್ಟ್‌ಫ್ರೆಂಡ್‌ಗೆ ಈ ಮರೆಯಲಾರದ ಉಡುಗೊರೆಗಳನ್ನು ನೀಡುವ ಮೂಲಕ ಈ ದಿನವನ್ನು ಇನ್ನಷ್ಟು ವಿಶೇಷವಾಗಿ ಆಚರಿಸಿ. ಫ್ರೆಂಡ್‌ಶಿಪ್‌ ಡೇಯಂದು ಕೊಡಬಾಹುದಾದ ಗಿಫ್ಟ್‌ಗಳ ಮಾಹಿತಿ ಇಲ್ಲಿದೆ.

ಸ್ನೇಹಿತರ ದಿನದ ಇತಿಹಾಸವೇನು?

ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಆಚರಿಸುವಂತೆ ಭಾರತ, ಅಮೆರಿಕ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ಆಗಸ್ಟ್‌ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ಸ್ನೇಹ ದಿನದ ಆಚರಣೆಯು 1950 ರ ದಶಕದಲ್ಲಿ ಅಮೆರಿಕದಲ್ಲಿ ಪ್ರಾರಂಭವಾಯಿತು. ಹಾಲ್‌ಮಾರ್ಕ್ ಕಾರ್ಡ್‌ಗಳ ಸಂಸ್ಥಾಪಕಿ ಜಾಯ್ಸ್ ಹಾಲ್ ಇದನ್ನು ಪ್ರಸ್ತಾಪಿಸಿದರು. ಸ್ನೇಹವೆಂಬ ಶುದ್ಧ ಸಂಬಂಧವನ್ನು ಸಂಭ್ರಮಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಜನರು ವಾರಾಂತ್ಯದಲ್ಲಿ ತಮ್ಮ ಸ್ನೇಹಿತರೊಂದಿಗೆ ಆರಾಮವಾಗಿ ಸಮಯ ಕಳೆಯಬಹುದು ಎಂಬ ಕಾರಣದಿಂದ ಈ ದಿನವನ್ನು ಆಗಸ್ಟ್ ಮೊದಲ ಭಾನುವಾರದಂದೇ ಆಚರಿಸಲಾಗುತ್ತದೆ.

ಸ್ನೇಹಿತರ ದಿನದ  ಮಹತ್ವವೇನು?

  • ಸ್ನೇಹಿತರ ದಿನವು ಜನರಿಗೆ ತಮ್ಮ ಜೀವನದಲ್ಲಿನ  ಸ್ನೇಹ ಹಾಗೂ ಸ್ನೇಹಿತರನ್ನು ಗೌರವಿಸಲು ಅವಕಾಶವನ್ನು ನೀಡುತ್ತದೆ ಮತ್ತು ಪರಸ್ಪರ ಬಾಂಧವ್ಯವನ್ನು ಬೆಳೆಸುವ ಸಂಬಂಧಗಳನ್ನು ನಿರ್ಮಿಸಲು ಉತ್ತೇಜಿಸುತ್ತದೆ.
  • ಅಲ್ಲದೆ ಈ ದಿನ ಹಳೆಯ ಸ್ನೇಹಿತರೊಂದಿಗೆ ಮತ್ತೆ ಬೆರೆಯಲು, ಸಂಬಂಧಗಳನ್ನು ಸರಿಪಡಿಸಲು, ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯಲು, ಒಂದೊಳ್ಳೆ ಅವಕಾಶವಾಗಿದೆ.

ಇದನ್ನೂ ಓದಿ: ಫ್ರೆಂಡ್‌ಶಿಪ್‌ ನಮ್ಮ ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ

ಫ್ರೆಂಡ್‌ಶಿಪ್‌ ಡೇಯಂದು ಯಾವೆಲ್ಲಾ ಉಡುಗೊರೆಗಳನ್ನು ನೀಡಬಹುದು:

ಫೋಟೋ ಫ್ರೇಮ್ ಅಥವಾ ಫೋಟೋ ಕೊಲಾಜ್: ನಿಮ್ಮ ಅತ್ಯಂತ ಪ್ರೀತಿಯ ಸ್ನೇಹದ ನೆನಪುಗಳನ್ನು ಫೋಟೋ ಫ್ರೇಮ್ ಅಥವಾ ಫೋಟೋ ಕೊಲಾಜ್‌ನಲ್ಲಿ ಫ್ರೇಮ್ ಮಾಡಿ ಆ ಫೋಟೋ ಫ್ರೇಮ್‌ ಅನ್ನು ನಿಮ್ಮ ಬೆಸ್ಟ್‌ಫ್ರೆಂಡ್‌ಗೆ ಉಡುಗೊರೆಯಾಗಿ ನೀಡಿ. ತುಂಬಾ ದುಬಾರಿಯಲ್ಲದಿದ್ದರೂ ಈ ಉಡುಗೊರೆ ತುಂಬಾನೇ ಸ್ಪೆಷಲ್‌ ಆಗಿರುತ್ತದೆ.

ಇನ್‌ಡೋರ್‌ ಪ್ಲಾಂಟ್‌: ಕೆಲವರಿಗೆ ಗಿಡಗಳೆಂದರೆ ಸಖತ್‌ ಪ್ರೀತಿ. ನಿಮ್ಮ ಫ್ರೆಂಡ್‌ಗೂ ಇದೇ ರೀತಿ ಗಿಡಗಳು ಇಷ್ಟವಿದ್ದರೆ, ಅವರಿಗೆ ಸುಂದರವಾದ ಇನ್‌ಡೋರ್‌ ಪ್ಲಾಂಟ್‌ ಉಡುಗೊರೆಯಾಗಿ ನೀಡಿ. ಈ ಗಿಡಗಳನ್ನು ಸ್ನೇಹ, ಸಮೃದ್ಧಿ ಮತ್ತು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಚಾಕೊಲೇಟ್ ಮತ್ತು ಸ್ನ್ಯಾಕ್ ಹ್ಯಾಂಪರ್: ನಿಮ್ಮ ಫ್ರೆಂಡ್‌  ಆಹಾರಪ್ರಿಯರಾಗಿದ್ದರೆ ಅವರ ನೆಚ್ಚಿನ ಚಾಕೊಲೇಟ್‌ಗಳು, ಕುಕೀಸ್‌ ಸೇರಿದಂತೆ ಇನ್ನಿತರೆ ತಿಸಿಸುಗಳನ್ನು ಸುಂದರವಾದ ಹ್ಯಾಂಪರ್‌ ಪ್ಯಾಕ್‌ ಮಾಡಿ ಉಡುಗೊರೆಯಾಗಿ ನೀಡಿ. ನಿಮ್ಮ ತಿಂಡಿಪೋತಿ ಫ್ರೆಂಡ್‌ ಈ ಉಡುಗೊರೆಯನ್ನು ಇಷ್ಟಪಡುತ್ತಾಳೆ.

ಸ್ಕಿನ್‌ಕೇರ್‌ ಉತ್ಪನ್ನ: ಹೆಣ್ಮಕ್ಕಳಿಗೆ ತ್ವಚೆಯ ಆರೈಕೆಯ ಬಗ್ಗೆ ಕಾಳಜಿ ತುಸು ಹೆಚ್ಚೇ ಇರುತ್ತದೆ. ಹೀಗಿರುವಾಗ ನಿಮ್ಮ ಗರ್ಲ್‌ಬೆಸ್ಟ್‌ಫ್ರೆಂಡ್‌ಗೆ ನೀವು ಸ್ಕಿನ್‌ಕೇರ್‌ ಪ್ರಾಡಕ್ಟ್‌ಗಳನ್ನು ನೀಡಬಹುದು. ಫೇಸ್ ಮಾಸ್ಕ್‌, ಬಾಡಿ ಲೋಷನ್, ಲಿಪ್‌ಬಾಮ್‌, ಸನ್‌ಸ್ಕ್ರೀನ್‌, ಪೇಸ್‌ವಾಶ್‌  ಇತ್ಯಾದಿ ಉತ್ಪನ್ನಗಳನ್ನು ಜೋಡಿಸಿ ಹ್ಯಾಂಪರ್‌ ತಯಾರಿಸಿ  ಸ್ನೇಹಿತೆಗೆ ಉಡುಗೊರೆ ನೀಡಿ.

ಇದಲ್ಲದೆ ಬಟ್ಟೆ, ಇಯರ್‌ಫೋನ್‌, ಪರ್‌ಫ್ಯೂಮ್‌, ಹೂಗುಚ್ಛ ಇವುಗಳನ್ನು ಸಹ ಉಡುಗೊರೆಯಾಗಿ ನೀಡಬಹುದು. ಜೊತೆಗೆ ನಿಮ್ಮ ಬೆಸ್ಟ್‌ಫ್ರೆಂಡ್‌ ಅನ್ನು ಮೂವಿ, ಔಟಿಂಗ್‌, ಡಿನ್ನರ್‌ಗೆ ಕರೆದುಕೊಂಡು ಹೋಗುವ ಮೂಲಕ ಫ್ರೆಂಡ್‌ಶಿಪ್‌ ಡೇಯನ್ನು ಸ್ಪೆಷಲ್‌ ಆಗಿ ಆಚರಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಗ್ರಾಮ ಪಂಚಾಯತಿಗಳಿಗೆ ಪಿಡಿಒಗಳ ನೇಮಕಾತಿ; ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ – Kannada News | Eshwar Khandre: Karnataka Government to Fill 72,000 Posts, 1400 in Rural Development

ಬೆಂಗಳೂರು: ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 1036 ಪಿಡಿಒ ಹುದ್ದೆಗಳು ಖಾಲಿ ಇವೆ. ಕಲ್ಯಾಣ ಕರ್ನಾಟಕ ಭಾಗದ 80 ಅಧಿಕಾರಿಗಳಿಗೆ ಈಗಾಗಲೇ ಮುಂಬಡ್ತಿ ನೀಡಿ ಸ್ಥಳ ನಿಯುಕ್ತಿ ಮಾಡಲಾಗಿದೆ. ಇನ್ನು 76 ಜನರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುಮಾರು 150 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ 2-3 ತಿಂಗಳ ಒಳಗಾಗಿ ನೇಮಕಾತಿ ಆದೇಶ ನೀಡಲಾಗುವುದು. ಸಿಂಧುತ್ವ ಪರಿಶೀಲನೆ, ಆರೋಗ್ಯ ತಪಾಸಣೆ ಸೇರಿ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಈ ಆದೇಶಗಳನ್ನು ನೀಡಲಾಗುತ್ತದೆ. ಈ ನೇಮಕಾತಿಗಳ ನಂತರವೂ 200-250 ಹುದ್ದೆಗಳು ಖಾಲಿ ಉಳಿಯಲಿವೆ. ಒಟ್ಟಾರೆ, ಸುಮಾರು ಶೇ. 90 ರಷ್ಟು ಪಿಡಿಒ ಹುದ್ದೆಗಳು ಭರ್ತಿಯಾಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Source link

Exit mobile version