ರಾಜ್ಯ ಸರ್ಕಾರ ದಿವಾಳಿ, ಸಂಬಳ ನೀಡಲೂ ಹಣವಿಲ್ಲ: ವಿಪಕ್ಷ ನಾಯಕ ಅಶೋಕ್​​ ಸ್ಫೋಟಕ ಆರೋಪ – Kannada News | Dharwad Students Protest: R Ashok Slams Karnataka Government Over Job Vacancies

ಧಾರವಾಡ, ಫೆಬ್ರವರಿ 24: ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರು ಉದ್ಯೋಗ ನೀಡುವಂತೆ ಆಗ್ರಹಿಸಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ, ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳೆದ ಎರಡೂವರೆ ವರ್ಷಗಳಲ್ಲಿ ಒಬ್ಬ ನಿರುದ್ಯೋಗಿಗೂ ಉದ್ಯೋಗ ನೀಡಿಲ್ಲ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರದ ಕಚ್ಚಾಟದಲ್ಲಿ ಮುಳುಗಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಮತ್ತು ಸಂಬಳ ನೀಡಲು ಸಹ ಹಣವಿಲ್ಲ. ರಾಜ್ಯದಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಹಣಕಾಸು ಇಲಾಖೆ 65,000 ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ನೀಡಿ ಆರು ತಿಂಗಳಾದರೂ ಒಂದು ಸಂದರ್ಶನ ಸಹ ಕರೆದಿಲ್ಲ. ತಕ್ಷಣವೇ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸದಿದ್ದರೆ ರಾಜ್ಯವ್ಯಾಪಿ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಹವ್ವೂರ್ ರಾಣಾ ಪೌರತ್ವ ರದ್ದು, ಪ್ರಧಾನಿ ಕಾರ್ನಿ ಭಾರತ ಭೇಟಿಗೂ ಮುನ್ನ ಕೆನಡಾ ಸರ್ಕಾರದಿಂದ ಪ್ರಮುಖ ನಿರ್ಧಾರ – Kannada News | Canada Takes Key Step in Tahawwur Rana Case Ahead of PM Carney’s India Trip

ನವದೆಹಲಿ, ಫೆಬ್ರವರಿ 24: 2008ರ ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾ(Tahawwur Rana)ನ ಪೌರತ್ವವನ್ನು ರದ್ದುಗೊಳಿಸುವ ನಿರ್ಧಾರವನ್ನು ಕೆನಡಾ ಸರ್ಕಾರ ತೆಗೆದುಕೊಂಡಿದೆ. ರಾಣಾ ತಮ್ಮ ಪೌರತ್ವ ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಕೆನಡಾ ಪ್ರಧಾನಿ ಮಾರ್ಕ್​ ಕಾರ್ನಿ ಭಾರತ ಭೇಟಿಗೂ ಮುನ್ನ ಕೆನಡಾ ಸರ್ಕಾರ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.

ಭಾರತ ಭೇಟಿಗೆ ಮುನ್ನ ಕೆನಡಾ ಸರ್ಕಾರ ಒಂದು ಪ್ರಮುಖ ಹೆಜ್ಜೆ ಇಟ್ಟಿದೆ. ಪಾಕಿಸ್ತಾನ ಮೂಲದ ಉದ್ಯಮಿ ತಹಾವ್ವೂರ್ ರಾಣಾ ಅವರ ಕೆನಡಾ ಪೌರತ್ವವನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ರಾಣಾ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

64 ವರ್ಷದ ರಾಣಾ 1997 ರಲ್ಲಿ ಕೆನಡಾಕ್ಕೆ ವಲಸೆ ಬಂದು 2001 ರಲ್ಲಿ ಕೆನಡಾದ ಪೌರತ್ವವನ್ನು ಪಡೆದಿದ್ದ. ಈತ 26/11 ದಾಳಿಯ ಮಾಸ್ಟರ್ ಮೈಂಡ್ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಅವರ ಆಪ್ತ ಸಹಚರ ಎಂದು ಹೇಳಲಾಗಿದೆ. ಆತನನ್ನು ಏಪ್ರಿಲ್ 2025 ರಲ್ಲಿ ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸಲಾಯಿತು. ನವದೆಹಲಿಗೆ ಆಗಮಿಸಿದ ನಂತರ, ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು.

ಕೆನಡಾದ ವಲಸೆ ಇಲಾಖೆಯು ರಾಣಾನ ಪೌರತ್ವವನ್ನು ರದ್ದುಗೊಳಿಸಲಾಗುತ್ತಿರುವುದು ಭಯೋತ್ಪಾದನಾ ಆರೋಪಗಳಿಂದಲ್ಲ, ಬದಲಾಗಿ ಅವರು ಸುಳ್ಳು ಮಾಹಿತಿ ನೀಡಿದ್ದರಿಂದ ಎಂದು ಸ್ಪಷ್ಟಪಡಿಸಿದೆ.
ಇಲಾಖೆಯ ಪ್ರಕಾರ, ರಾಣಾ ತಮ್ಮ ಅರ್ಜಿಯಲ್ಲಿ ಸುಳ್ಳು ಹೇಳಿದ್ದಾರೆ. ಅವರು ಒಟ್ಟಾವಾ ಮತ್ತು ಟೊರೊಂಟೊದಲ್ಲಿ ನಾಲ್ಕು ವರ್ಷಗಳ ಕಾಲ ವಾಸಿಸುತ್ತಿದ್ದರು ಮತ್ತು ಕೇವಲ ಆರು ದಿನಗಳ ಕಾಲ ದೇಶದಿಂದ ಹೊರಗಿದ್ದೆ ಎಂದು ಹೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಭಾರತಕ್ಕೆ ಬರಲಿರುವ ಉಗ್ರ ತಹವ್ವೂರ್ ರಾಣಾ; ಮುಂಬೈ ದಾಳಿಯಲ್ಲಿ ಈತನ ಪಾತ್ರವೇನು?

ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ನಡೆಸಿದ ತನಿಖೆಯಲ್ಲಿ ರಾಣಾ ಆ ಅವಧಿಯಲ್ಲಿ ಹೆಚ್ಚಿನ ಸಮಯ ಚಿಕಾಗೋದಲ್ಲಿದ್ದರು ಎಂದು ತಿಳಿದುಬಂದಿದೆ. ಆತ ಅಲ್ಲಿ ಹಲವಾರು ವ್ಯವಹಾರಗಳು ಮತ್ತು ಆಸ್ತಿಗಳನ್ನು ಹೊಂದಿದ್ದರು.
ಈ ಸುಳ್ಳು ಮಾಹಿತಿಯು ಆತ ಅರ್ಹರಲ್ಲದಿದ್ದರೂ ಪೌರತ್ವವನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಇಲಾಖೆ ಹೇಳಿದೆ.

ಪೌರತ್ವವನ್ನು ರದ್ದುಗೊಳಿಸುವುದು ಸುಲಭದ ನಿರ್ಧಾರವಲ್ಲ, ಆದರೆ ಕಾನೂನಿನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ವಲಸೆ ಇಲಾಖೆ ಹೇಳಿದೆ. ಈಗ, ರಾಣಾ ಮೋಸದಿಂದ ಪೌರತ್ವವನ್ನು ಪಡೆದಿದ್ದಾರೆಯೇ ಎಂದು ಫೆಡರಲ್ ನ್ಯಾಯಾಲಯ ನಿರ್ಧರಿಸುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಡತನವನ್ನೇ ಮೆಟ್ಟಿ ನಿಂತು ಮಹತ್ತರ ಸಾಧನೆ: ಛಲಬಿಡದೆ ಓದಿ ಜಡ್ಜ್ ಆದ ಆಟೋ ಚಾಲಕನ ಮಗಳು! – Kannada News | Auto Driver’s Daughter from Anekal Becomes Civil Judge: Nagini L Secures 48th Rank After Beating Poverty

ಆನೇಕಲ್, ಫೆಬ್ರವರಿ 24: ಆಟೋ ಚಾಲಕರೊಬ್ಬರ ಮಗಳು ಬಡತನವನ್ನೇ ಮೆಟ್ಟಿ ನಿಂತು ಸಾಧನೆಯ ಶಿಖರಕ್ಕೇರಿ ಇದೀಗ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಈ ಮೂಲಕ, ಕುಟುಂಬದವರಿಗಷ್ಟೇ ಅಲ್ಲದೆ ಇಡೀ ಊರಿಗೂ ರಾಜ್ಯಕ್ಕೂ ಕೀರ್ತಿ ತಂದಿದ್ದಾರೆ. ಇಂಥದ್ದೊಂದು ಅಪರೂಪದ ವಿದ್ಯಮಾನ ಬೆಂಗಳೂರು (Bangalore) ಹೊರವಲಯದ ಆನೇಕಲ್​ನಿಂದ ವರದಿಯಾಗಿದೆ. ಆನೇಕಲ್ ತಾಲ್ಲೂಕಿನ ತಿರುಪಾಳ್ಯ ನಿವಾಸಿಯಾದ ನಾಗಿಣಿ ಎಲ್ ಎಂಬವರು ಲಕ್ಷ್ಮಣ್ ಮತ್ತು ಮಂಜುಳಾ ದಂಪತಿಯ ದ್ವಿತೀಯ ಪುತ್ರಿ. ತಂದೆ ಲಕ್ಷ್ಮಣ್ ಆಟೋ ಚಾಲಕರಾಗಿದ್ದು, ತಾಯಿ ಮಂಜುಳಾ ಹೂವಿನ ವ್ಯಾಪಾರ ಮಾಡುತ್ತಿದ್ದರು.

ಬಾಲ್ಯದಿಂದಲೇ ತಾಯಿ ಜೊತೆ ಸೇರಿ ಹೂವಿನ ವ್ಯಾಪಾರದಲ್ಲಿ ಕೈಜೋಡಿಸುತ್ತಿದ್ದ ನಾಗಿಣಿ, ಬಡತನದ ನಡುವೆಯೂ ಓದಿನ ಮೇಲಿನ ಆಸಕ್ತಿ ಕಡಿಮೆ ಮಾಡಲಿಲ್ಲ. ಚೆನ್ನಾಗಿ ಓದುತ್ತಿದ್ದ ಆಕೆ, ಶಾಲಾ ಕಲಿಕೆಯಲ್ಲಿ ಮುಂದಿದ್ದಳು. ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ನಾಗಿಣಿ ನಂತರ ಡಾ. ರಾಮ್ ಮನೋಹರ್ ಲೋಹಿಯಾ ಕಾಲೇಜಿನಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದಳು.

ನ್ಯಾಯಾಂಗ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಬೇಕೆಂಬುದು ನಾಗಿಣಿ ತಂದೆಯ ದೊಡ್ಡ ಕನಸಾಗಿತ್ತು. ಆ ಕನಸನ್ನು ನನಸು ಮಾಡುವುದೇ ಗುರಿ ಎಂದು ನಿಶ್ಚಯಿಸಿಕೊಂಡ ನಾಗಿಣಿ ಛಲಬಿಡದೆ ಸಿವಿಲ್ ನ್ಯಾಯಾಧೀಶರ ಪರೀಕ್ಷೆಗೆ ಸಿದ್ಧತೆ ಆರಂಭಿಸಿದ್ದಳು.

ಹಿನ್ನಡೆಯಾದರೂ ಛಲಬಿಡದೆ ಯತ್ನ, ಕೊನೆಗೂ ಸಿಕ್ತು ಯಶಸ್ಸು

ಮೊದಲ ಎರಡು ಪ್ರಯತ್ನಗಳಲ್ಲಿ ಅಲ್ಪ ಹಿನ್ನಡೆ ಅನುಭವಿಸಿದರೂ ಎದೆಗುಂದದೆ ಮೂರನೇ ಪ್ರಯತ್ನದಲ್ಲಿ ನಾಗಿಣಿ ಭರ್ಜರಿ ಯಶಸ್ಸು ಸಾಧಿಸಿದರು. ಇತ್ತೀಚೆಗೆ ನಡೆದ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ 48ನೇ ರ್ಯಾಂಕ್ ಗಳಿಸಿ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ.

ಪೋಷಕರ ಕಷ್ಟ ಮತ್ತು ಬೆವರಿನ ಬೆಲೆಯನ್ನು ಅರಿತು ನಾಗಿಣಿಯ ಮಾಡಿದ ಸಾಧನೆಗೆ ಈಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಂದೆಯ ಕನಸನ್ನು ನನಸು ಮಾಡುವುದು ನನ್ನ ಜೀವನದ ಗುರಿಯಾಗಿತ್ತು ಎನ್ನುವ ನಾಗಿಣಿ, ಈ ಯಶಸ್ಸಿಗೆ ಪೋಷಕರ ತ್ಯಾಗವೇ ಕಾರಣ ಎಂದು ವಿನಯದಿಂದ ಹೇಳುತ್ತಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಮನ್​ ಕಿ ಬಾತ್​​ ಪ್ರೇರಣೆ: ಸಿರಿಧಾನ್ಯದ ಹೋಟೆಲ್ ತೆರೆದ ಚಾಮರಾಜನಗರದ ಗೃಹಿಣಿ

ಬಡತನವನ್ನು ಮೆಟ್ಟಿ ನಿಂತು ಶ್ರಮ ಮತ್ತು ಸಂಕಲ್ಪದಿಂದ ಸಾಧನೆ ಮಾಡಿದ ನಾಗಿಣಿ, ಈಗ ಆನೇಕಲ್ ಹಾಗೂ ರಾಜ್ಯದ ಯುವತಿಯರಿಗೆ ಪ್ರೇರಣೆಯಾಗಿದ್ದಾರೆ. ಅವರ ಸಾಧನೆಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸರ ವಿರೋಧದ ಮಧ್ಯೆಯೇ ಜಯನಗರ ವೃತ್ತದ ಕಡೆಗೆ ಯುವಕರ ಮೆರವಣಿಗೆ! – Kannada News | Dharwad Job Aspirants Protest for Vacant Posts Amidst Police Opposition

ಧಾರವಾಡ, ಫೆಬ್ರವರಿ 24: ಧಾರವಾಡದಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವಕರು ಶ್ರೀನಗರ ವೃತ್ತದಲ್ಲಿ ಜಮಾಯಿಸಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಆಗ್ರಹಿಸಿದ್ದಾರೆ. ಪೊಲೀಸರ ವಿರೋಧದ ಮಧ್ಯೆಯೂ ಪ್ರತಿಭಟನಾಕಾರರು ಜಯನಗರ ವೃತ್ತದ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಧಾರವಾಡ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಜನಾಸಮಂಕರ ವೇದಿಕೆಯ ಅಡಿಯಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಕಾಂಗ್ರೆಸ್ ನಾಯಕರ ಫೋಟೋಗಳನ್ನು ಹಿಡಿದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

ಸರ್ಕಾರದ ವಿರುದ್ಧ ಉದ್ಯೋಗಾಂಕ್ಷಿಗಳ ಕಿಚ್ಚು: ಅನುಮತಿ ಇಲ್ಲದಿದ್ರೂ ಪ್ರೊಟೆಸ್ಟ್​​ – Kannada News | Massive Protest by Job Aspirants in Dharwad Held Without Police Permission

ಧಾರವಾಡ, ಫೆಬ್ರವರಿ 24: ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡ ಶ್ರೀನಗರ ವೃತ್ತದಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ ನಡೆದಿದೆ. ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವಂತೆ ಘೋಷಣೆ ಕೂಗಿರುವ ಪ್ರತಿಭಟನಾಕಾರರು, ಕಾಂಗ್ರೆಸ್ ನಾಯಕರ ಫೋಟೋ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಧಾರವಾಡ ಪೊಲೀಸರ ಹರಸಾಹಸ ಪಟ್ಟ ಪ್ರಸಂಗವೂ ನಡೆದದೆ. ಇನ್ನು ಇಂದು ಪ್ರತಿಭಟನೆಗೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ(AKSA) ಅನುಮತಿ ಕೇಳಿದ್ದು, ಪೊಲೀಸರು ನಿರಾಕರಿಸಿದ್ದರು. ಆದರೆ ಸಂಘಟನೆ ಹೈಕೋರ್ಟ್​​ ಮೊರೆ ಹೋಗಿದ್ದು, ಕೋರ್ಟ್​​ ಪೊಲೀಸರೊಂದಿಗೇ ಈ ಬಗ್ಗೆ ಚರ್ಚಿಸಿ ಎಂದು ತಿಳಿಸಿ ವಿಚಾರಣೆಯನ್ನು ಮಾರ್ಚ್​​ 3ಕ್ಕೆ ಮುಂದೂಡಿತ್ತು. ಈ ನಡುವೆ ಇಂದು ಬಿಜೆಪಿ ಹೋರಾಟಕ್ಕೆ ಪೊಲೀಸರು ಗ್ರೀನ್ ಸಿಗ್ನಲ್ ನೀಡಿರು ಹಿನ್ನೆಲೆ ಅನುಮತಿ ಇಲ್ಲದಿದ್ದರೂ ಯುವಕರು ಬೀದಿಗೆ ಇಳಿದಿದ್ದಾರೆ. ಜಯನಗರ ವೃತ್ತದ ಕಡೆಗೆ ಹೋಗುತ್ತಿದ್ದ ಪ್ರತಿಭಟನಾಕಾರರನ್ನು ಶ್ರೀನಗರ ವೃತ್ತದ ಬಳಿಯೇ ಪೊಲೀಸರು ತಡೆದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Astrological Remedie: ಸಾಲವಾಗಿ ನೀಡಿದ ಹಣ ವಾಪಸ್ ಸಿಗುತ್ತಿಲ್ಲವೇ? ಈ ಜ್ಯೋತಿಷ್ಯ ಸಲಹೆ ಅನುಸರಿಸಿ – Kannada News | Recover Lent Money: Astrological Remedies to Get Your Funds Back Fast

ಸ್ನೇಹಿತರು, ಸಂಬಂಧಿಕರು ಅಥವಾ ಪರಿಚಿತರವರಿಗೆ ಸಹಾಯದ ಮನಸ್ಸಿನಿಂದ ನೀಡಿದ ಹಣ ಸಮಯಕ್ಕೆ ಸರಿಯಾಗಿ ವಾಪಸ್ ಸಿಗದಿದ್ದರೆ ಮಾನಸಿಕ ಒತ್ತಡ ಉಂಟಾಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ಕೆಲವರು ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸುವ ಮೂಲಕ ಧನಪ್ರವಾಹ ಸುಗಮವಾಗುತ್ತದೆ ಎಂದು ನಂಬುತ್ತಾರೆ. ಇವು ನಂಬಿಕೆ ಆಧಾರಿತ ಪರಿಹಾರಗಳಾಗಿದ್ದು, ನಿಮ್ಮ ವಿಶ್ವಾಸಕ್ಕೆ ಅನುಗುಣವಾಗಿ ಅನುಸರಿಸಬಹುದು. ಸಾಲವಾಗಿ ನೀಡಿದ ಹಣ ವಾಪಸ್ ಸಿಗುತ್ತಿಲ್ಲವೆಂದಾದರೆ ಜ್ಯೋತಿಷ್ಯ ಶಾಸ್ತಜ್ಞರು ಹೇಳುವ ಈ ಪರಿಹಾರವನ್ನು ಒಮ್ಮೆ ಪ್ರಯತ್ನಿಸಿ.

ಬುಧವಾರದ ಪರಿಹಾರ:

ಬುಧವಾರ ಗಣೇಶನ ದಿನವೆಂದು ಪರಿಗಣಿಸಲಾಗುತ್ತದೆ. ಆ ದಿನ ಬೆಳಿಗ್ಗೆ ಸ್ನಾನ ಮಾಡಿ ಗಣೇಶನಿಗೆ ದುರ್ವಾ (ಗರಿಕೆ ಹುಲ್ಲು) ಮತ್ತು ಮೋದಕ ಅರ್ಪಿಸಿ “ಓಂ ಗಣ ಗಣಪತಯೇ ನಮಃ” ಮಂತ್ರವನ್ನು 108 ಬಾರಿ ಜಪಿಸುವುದು ಅಡಚಣೆಗಳು ದೂರವಾಗಲು ಸಹಾಯಕವೆಂದು ಹೇಳಲಾಗುತ್ತದೆ. ಹಣ ವಾಪಸ್ ಸಿಗದಿರುವ ಸಮಸ್ಯೆಗೂ ಇದು ಒಳ್ಳೆಯದು ಎಂದು ನಂಬಿಕೆ ಇದೆ.

ಶನಿವಾರ ಶನಿ ಪರಿಹಾರ:

ಹಣದ ಸಮಸ್ಯೆಗೆ ಶನಿ ದೋಷವೂ ಕೂಡ ಕಾರಣವಾಗಿರಬಹುದು ಎಂದು ಕೆಲವರು ನಂಬುತ್ತಾರೆ. ಶನಿವಾರ ಕಪ್ಪು ಎಳ್ಳು ಅಥವಾ ಎಣ್ಣೆಯನ್ನು ದಾನ ಮಾಡುವುದು, ಅಥವಾ ಶನಿ ದೇವಾಲಯದಲ್ಲಿ ದೀಪ ಹಚ್ಚುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. “ಓಂ ಶಂ ಶನೈಶ್ಚರಾಯ ನಮಃ” ಮಂತ್ರ ಜಪ ಸಹ ಉಪಕಾರಿ ಎನ್ನಲಾಗುತ್ತದೆ.

ಅರಿಶಿನದಿಂದ ಪರಿಹಾರ:

ಸಾಲವಾಗಿ ನೀಡಿದ ಹಣವನ್ನು ಮರಳಿ ಪಡೆಯಲು ಬಯಸುವ ವ್ಯಕ್ತಿಯ ಹೆಸರನ್ನು ಅರಿಶಿನದ ತುಂಡಿನ ಮೇಲೆ ಬರೆಯಿಸಿ, ಅದನ್ನು ಪೂಜಾಸ್ಥಳದಲ್ಲಿ ಇಟ್ಟು ಪ್ರಾರ್ಥನೆ ಮಾಡುವುದರಿಂದ ಹಣ ವಾಪಸ್ ಸಿಗುತ್ತದೆ ಎಂದು ಹಲವರು ನಂಬುತ್ತಾರೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಲಕ್ಷ್ಮೀ ದೇವಿಯ ಆರಾಧನೆ:

ಪ್ರತಿ ಶುಕ್ರವಾರ ಲಕ್ಷ್ಮೀ ದೇವಿಗೆ ಕಮಲ ಹೂವಿನೊಂದಿಗೆ ಪೂಜೆ ಸಲ್ಲಿಸಿ, ಶ್ರೀಸೂಕ್ತ ಪಠಣ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಮನೆಯ ಉತ್ತರ ದಿಕ್ಕನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ಧನಪ್ರವಾಹಕ್ಕೆ ಸಹಾಯಕವೆಂದು ವಾಸ್ತು ಶಾಸ್ತ್ರ ಸೂಚಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಂಜಿನ್​​ನಲ್ಲಿ ದೋಷ, 150 ಜನರನ್ನು ಹೊತ್ತು ಲೇಹ್​​ಗೆ ಹೊರಟಿದ್ದ ಸ್ಪೈಸ್​​ಜೆಟ್ ವಿಮಾನ ದೆಹಲಿಗೆ ವಾಪಸ್ – Kannada News | SpiceJet Emergency: Delhi Leh Flight Makes Safe Return After Engine Issue

ಸ್ಪೈಸ್​ಜೆಟ್-ಸಾಂದರ್ಭಿಕ ಚಿತ್ರ Image Credit source: Skytrax

ನವದೆಹಲಿ, ಫೆಬ್ರವರಿ 24: ಎಂಜಿನ್​​ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ 150 ಜನರನ್ನು ಹೊತ್ತು ಲೇಹ್​​ಗೆ ಹೊರಟಿದ್ದ ಸ್ಪೈಸ್​ಜೆಟ್(SpiceJet) ವಿಮಾನ ದೆಹಲಿಗೆ ಹಿಂದಿರುಗಿರುವ ಘಟನೆ ನಡೆದಿದೆ. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಬೇಕಾಯಿತು . SG121 ವಿಮಾನವು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು, ಆಗ ಸಿಬ್ಬಂದಿಗೆ ಒಂದು ಎಂಜಿನ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿತ್ತು. ಮುನ್ನೆಚ್ಚರಿಕೆಯಾಗಿ, ಪೈಲಟ್‌ಗಳು ವಿಮಾನವನ್ನು ತಿರುಗಿಸಿ ದೆಹಲಿಗೆ ಹಿಂತಿರುಗಲು ನಿರ್ಧರಿಸಲಾಗಿತ್ತು.

ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ವಿಮಾನದ ಲ್ಯಾಂಡಿಂಗ್‌ಗೆ ಆದ್ಯತೆ ನೀಡಲಾಗಿದೆ ಮತ್ತು ವೈದ್ಯಕೀಯ ಮತ್ತು ಅಗ್ನಿಶಾಮಕ ಸೇವೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಸಮಯದಲ್ಲಿ ಬೋಯಿಂಗ್ 737 ವಿಮಾನದಲ್ಲಿ ಸುಮಾರು 150 ಪ್ರಯಾಣಿಕರು ಇದ್ದರು ಎಂದು ವರದಿಯಾಗಿದೆ.
ಮಂಗಳವಾರ ದೆಹಲಿಯಿಂದ ಲೇಹ್‌ಗೆ ಹಾರಾಟ ನಡೆಸುತ್ತಿದ್ದ ವಿಮಾನವು ತಾಂತ್ರಿಕ ದೋಷವನ್ನು ಅನುಭವಿಸಿದ ನಂತರ ದೆಹಲಿಗೆ ಮರಳಿದೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.

ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಯಿತು. ಪ್ರಯಾಣಿಕರಿಗೂ ಯಾವುದೇ ತೊಂದರೆಯಾಗಿಲ್ಲ. ಸ್ಪೈಸ್‌ಜೆಟ್ ತನ್ನ ಸೇವೆಗಳನ್ನು ವಿಸ್ತರಿಸಲು ಮುಂದಾಗಿದೆ. ಕಳೆದ ವಾರ, ಸ್ಪೈಸ್‌ಜೆಟ್ ತನ್ನ ವಿಮಾನಗಳ ಸಂಖ್ಯೆಯನ್ನು ಸುಮಾರು 60 ಕ್ಕೆ ವಿಸ್ತರಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿತ್ತು.

ಮತ್ತಷ್ಟು ಓದಿ: ಬೆಂಗಳೂರಿಗರ ಬಹುದಿನದ ಕನಸು ನನಸಾಗುವ ಕಾಲ ಬಂತು: ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗಕ್ಕೆ ಶೀಘ್ರದಲ್ಲಿ ಬರಲಿದೆ ಮೆಟ್ರೋ

ಡಿಸೆಂಬರ್ ತ್ರೈಮಾಸಿಕದಲ್ಲಿ ಸಾಮರ್ಥ್ಯದಲ್ಲಿ ಶೇ. 56 ರಷ್ಟು ಏರಿಕೆಯಿಂದಾಗಿ, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಶೇ. 1.9 ರಷ್ಟಿದ್ದ ವಿಮಾನಯಾನ ಸಂಸ್ಥೆಯ ದೇಶೀಯ ಮಾರುಕಟ್ಟೆ ಪಾಲು ಡಿಸೆಂಬರ್‌ನಲ್ಲಿ ಶೇ. 4.3 ಕ್ಕೆ ಏರಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. 2026 ರ ಚಳಿಗಾಲದ ವೇಳೆಗೆ 220 ಕೋಟಿ ಲಭ್ಯವಿರುವ ಸೀಟ್ ಕಿಲೋಮೀಟರ್‌ಗಳನ್ನು ಗುರಿಯಾಗಿಟ್ಟುಕೊಂಡು, ವಾಹಕವು ತನ್ನ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.

ಇದಕ್ಕೂ ಮೊದಲು, ನವೆಂಬರ್ 9 ರಂದು, ಮುಂಬೈನಿಂದ ಕೋಲ್ಕತ್ತಾಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ವರದಿಗಳ ಪ್ರಕಾರ, ವಿಮಾನದ ಒಂದು ಎಂಜಿನ್ ವಿಫಲವಾಗಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ನವೆಂಬರ್‌ಗೆ ಮುನ್ನ, ಸೆಪ್ಟೆಂಬರ್ 12 ರಂದು ಸ್ಪೈಸ್‌ಜೆಟ್ ವಿಮಾನವೂ ತುರ್ತು ಭೂಸ್ಪರ್ಶ ಮಾಡಿತು. ವಿಮಾನ ಗುಜರಾತ್‌ನ ಕಾಂಡ್ಲಾದಿಂದ ಮುಂಬೈಗೆ ಹಾರುತ್ತಿತ್ತು. ಟೇಕ್ ಆಫ್ ಸಮಯದಲ್ಲಿ, ವಿಮಾನದ ಒಂದು ಚಕ್ರ ರನ್‌ವೇಯಲ್ಲಿಯೇ ಇತ್ತು. ನಂತರ ವಿಮಾನವನ್ನು ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಲಿಯಾ ಭಟ್ ಮೇಲೆ ನಂಬಿಕೆ 215 ಕೋಟಿ ಆಫರ್ ತಿರಸ್ಕರಿಸಿದ ವೈಆರ್​ಎಫ್ – Kannada News | Yash Raj Films rejects 215 crore rs offer of Netflix on Alpha movie

ಬಾಲಿವುಡ್‌ನ (Bollywood) ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್, ಒಂದರ ಹಿಂದೊಂದು ಭಾರಿ ಬಜೆಟ್ ಸಿನಿಮಾಗಳನ್ನು ಮಾಡುತ್ತಿದೆ. ಸಲ್ಮಾನ್ ಖಾನ್, ಶಾರುಖ್ ಖಾನ್, ರಣ್​​ಬೀರ್ ಕಪೂರ್, ಹೃತಿಕ್ ರೋಷನ್, ಜೂ ಎನ್​​ಟಿಆರ್ ಹೀಗೆ ಒಬ್ಬರಾದ ಮೇಲೆ ಒಬ್ಬ ಸೂಪರ್ ಸ್ಟಾರ್ ನಟರ ಭಾರಿ ಬಜೆಟ್ ಸಿನಿಮಾಗಳ ಮೇಲೆ ಸಾವಿರಾರು ಕೋಟಿ ಹಣ ಸುರಿಯುತ್ತಿದೆ. ಭಾರಿ ಬಜೆಟ್​ನ ಆಕ್ಷನ್ ಸಿನಿಮಾಗಳು, ಸ್ಪೈ ಸಿನಿಮಾಗಳ ಮೇಲೆ ಬಂಡವಾಳ ಹೂಡುತ್ತಾ ಬಂದಿರುವ ಯಶ್ ರಾಜ್ ಫಿಲಮ್ಸ್, ಇದೀಗ ಮಹಿಳಾ ಪ್ರಧಾನ ಸ್ಪೈ ಥ್ರಿಲ್ಲರ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದು, ಸಿನಿಮಾಕ್ಕೆ ಆಲಿಯಾ ಭಟ್ ನಾಯಕಿ. ಸಿನಿಮಾಕ್ಕೆ ‘ಆಲ್ಫಾ’ ಎಂದು ಹೆಸರಿಡಲಾಗಿದೆ. ಈ ಸಿನಿಮಾಕ್ಕೆ ಬರೋಬ್ಬರಿ 215 ಕೋಟಿ ಆಫರ್ ಬಂದಿದ್ದರೂ ಸಹ ಅದನ್ನು ತಿರಸ್ಕಾರ ಮಾಡಿದೆ ಯಶ್ ರಾಜ್ ಫಿಲಮ್ಸ್.

ಆಲಿಯಾ ಭಟ್ ಮತ್ತು ಶಾರ್ವರಿ ವಾಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘ಆಲ್ಫಾ’ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಖರೀದಿಸಲು ನೆಟ್‌ಫ್ಲಿಕ್ಸ್ ಮುಂದಾಗಿತ್ತು. ಇದಕ್ಕಾಗಿ ಭಾರಿ ಮೊತ್ತದ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡದೆ ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮ್ ಮಾಡಲು ಈ ಆಫರ್ ನೀಡಲಾಗಿತ್ತು ಎನ್ನಲಾಗಿತ್ತು. ಇದಕ್ಕಾಗಿ 215 ಕೋಟಿ ರೂಪಾಯಿ ಹಣ ಆಫರ್ ನೀಡಲಾಗಿತ್ತು. ವೈಆರ್‌ಎಫ್ ಮುಖ್ಯಸ್ಥ ಆದಿತ್ಯ ಚೋಪ್ರಾ ಈ ಆಫರ್ ಅನ್ನು ತಿರಸ್ಕರಿಸಿದ್ದಲ್ಲದೆ, ಸಿನಿಮಾ ಮೊದಲು ಥಿಯೇಟರ್‌ಗಳಲ್ಲೇ ಬರಬೇಕು ಎಂಬ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ.

ಆಲಿಯಾ ಭಟ್​​ ಮೇಲಿರುವ ನಂಬಿಕೆಯಿಂದಲೇ ಆದಿತ್ಯ ಚೋಪ್ರಾ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಬಾಲಿವುಡ್ ಬಾಕ್ಸ್ ಆಫೀಸ್ ಪಂಡಿತರು ತುಸು ಭಿನ್ನ ಅಭಿಪ್ರಾಯ ಮುಂದಿಟ್ಟಿದ್ದಾರೆ. ಆಲಿಯಾ ಭಟ್ ನಟನೆಯ ಈ ಹಿಂದಿನ ಆಕ್ಷನ್ ಸಿನಿಮಾ ‘ಜಿಗ್ರ’ ಬಾಕ್ಸ್ ಆಫೀಸ್​​ನಲ್ಲಿ ಇನ್ನಿಲ್ಲದಂತೆ ನೆಲಕಚ್ಚಿತ್ತು, ಒಳ್ಳೆಯ ಪ್ರೊಡಕ್ಷನ್ ವ್ಯಾಲ್ಯೂ, ಕತೆ, ಪಾತ್ರಧಾರಿಗಳು ಇದ್ದ ಹೊರತಾಗಿಯೂ ಆ ಸಿನಿಮಾ ಓಡಿರಲಿಲ್ಲ, ಮಾತ್ರವಲ್ಲ ಒಟಿಟಿಯಲ್ಲೂ ಸಹ ಜನ ಆ ಸಿನಿಮಾವನ್ನು ವೀಕ್ಷಿಸರಿಲ್ಲ. ಹೀಗಿದ್ದಾಗ ‘ಆಲ್ಫಾ’ ಸಿನಿಮಾಕ್ಕೆ ಬಂದಿರುವ ಈ ದೊಡ್ಡ ಆಫರ್ ಅನ್ನು ಒಪ್ಪಿಕೊಂಡಿದ್ದಿದ್ದರೆ ಯಶ್​ ರಾಜ್ ಫಿಲಮ್ಸ್​​ಗೆ ಲಾಭ ಆಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೆ ಕಳೆದ ಕೆಲವು ಸಮಯದಿಂದ ಯಶ್ ರಾಜ್ ಫಿಲ್ಮ್ಸ್‌ನ ‘ಟೈಗರ್ 3’ ಮತ್ತು ‘ವಾರ್ 2’ ಅಂದುಕೊಂಡ ಮಟ್ಟಕ್ಕೆ ಯಶಸ್ಸು ಕಂಡಿಲ್ಲ ಎಂಬ ಮಾತುಗಳಿವೆ. ಇಂತಹ ಸಂದರ್ಭದಲ್ಲಿ 215 ಕೋಟಿಯಂತಹ ದೊಡ್ಡ ಮೊತ್ತವನ್ನು ಕೈಬಿಟ್ಟಿರುವುದು ಅತಿಯಾದ ಆತ್ಮವಿಶ್ವಾಸ ಎನ್ನಲಾಗುತ್ತಿದೆ.

ಇದನ್ನೂ ಓದಿ:ಬಾಲಿವುಡ್​​ನಲ್ಲಿ ಪಿಆರ್​ ತಂತ್ರ ಹೇಗೆ ನಡೆಯುತ್ತೆ ನೋಡಿ; ಎಕ್ಸ್​​ಪೋಸ್ ಮಾಡಿದ ಫ್ಯಾನ್ಸ್

‘ಆಲ್ಫಾ’ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಅತ್ಯಾಧುನಿಕ ವಿಎಫ್‌ಎಕ್ಸ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಕಾರಣದಿಂದಾಗಿ ‘ಆಲ್ಫಾ’ ಬಿಡುಗಡೆ ಮುಂದೂಡಲ್ಪಟ್ಟಿದೆ. ಈ ಮೊದಲು ಡಿಸೆಂಬರ್ 2025ಕ್ಕೆ ನಿಗದಿಯಾಗಿದ್ದ ಈ ಚಿತ್ರ, ಈಗ ಏಪ್ರಿಲ್ 17, 2026 ರಂದು ಬಿಡುಗಡೆ ಆಗಲು ಸಿದ್ಧವಾಗಿದ್ದು, ಆಲಿಯಾ ಭಟ್ ಮತ್ತು ಶಾರ್ವರಿ ವಾಗ್ ಅವರು ಸಿನಿಮಾದ ಪ್ರಚಾರಕ್ಕೆ ಶೀಘ್ರವೇ ಧುಮುಕಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Namma Metro: ಪರ್ಪಲ್ ಮತ್ತು ಗ್ರೀನ್ ಲೈನ್​ಗೆ ಬರಲಿವೆ ಮೂರು ಹೊಸ ರೈಲುಗಳು! – Kannada News | Namma Metro: New Trains to Ease Purple and Green Line Rush by May June

ಬೆಂಗಳೂರು, ಫೆಬ್ರವರಿ 24: ನಗರದ ಮೆಟ್ರೋ (Namma Metro) ಸಂಚಾರದಲ್ಲಿ ಉಂಟಾಗುತ್ತಿರುವ ತೀವ್ರ ಜನಸಂದಣಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಿಶೇಷವಾಗಿ ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಲ್ಲಿ ಪ್ರಯಾಣಿಕರು ತೀವ್ರ ಅಸೌಕರ್ಯ ಅನುಭವಿಸುತ್ತಿದ್ದಾರೆ. ವಾರದಲ್ಲಿ ಸರಾಸರಿ ಪ್ರಯಾಣಿಕರ ಸಂಖ್ಯೆ 10 ಲಕ್ಷದ ಗಡಿಯನ್ನು ದಾಟಿದೆ ಎನ್ನಲಾಗಿದೆ. ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರವಾಗಿ ಮೇ–ಜೂನ್ ವೇಳೆಗೆ ಮೂರು ಹೊಸ ರೈಲುಗಳನ್ನು ಸೇವೆಗೆ ಸೇರಿಸುವ ಯೋಜನೆ ರೂಪಿಸಲಾಗಿದೆ.

ಇನ್ನೆರಡೇ ತಿಂಗಳಲ್ಲಿ ಟೀಟಾಘರ್ನಿಂದ ರೈಲು ಪೂರೈಕೆ

ಪಶ್ಚಿಮ ಬಂಗಾಳ ಮೂಲದ ಟೀಟಾಘರ್ನಿಂದ(ಟಿಆರ್‌ಎಸ್‌ಎಲ್) ಫೆಬ್ರವರಿ 18ರಂದು ಪರ್ಪಲ್ ಮತ್ತು ಗ್ರೀನ್ ಮಾರ್ಗಗಳಿಗೆ ಮೀಸಲಾಗಿರುವ 20 ಡಿಟಿಜಿ (ಡಿಸ್ಟೆನ್ಸ್-ಟು-ಗೋ) ರೈಲುಗಳಲ್ಲಿ ಮೊದಲನೆಯ ರೈಲನ್ನು ರವಾನಿಸಲಾಗಿದೆ. ಈ ರೈಲು ಫೆಬ್ರವರಿ ಅಂತ್ಯದೊಳಗೆ ಪೀಣ್ಯ ಡಿಪೋಗೆ ತಲುಪಲಿದ್ದು, ಅಲ್ಲಿಗೆ ತಲುಪಿದ ಬಳಿಕ ಆರು ಕೋಚ್‌ಗಳನ್ನು ಜೋಡಿಸಿ ಸಂಪೂರ್ಣ ರೈಲಾಗಿ ರೂಪಿಸಲಾಗುತ್ತದೆ. ನಂತರ ಸ್ಥಿರ ಹಾಗೂ ವಿದ್ಯುತ್ ವಲಯ ಪರೀಕ್ಷೆಗಳು ನಡೆಯಲಿದ್ದು, ಬಳಿಕ ಮುಖ್ಯ ಮಾರ್ಗದಲ್ಲಿ ರಾತ್ರಿ ವೇಳೆ 750 ಕಿಲೋಮೀಟರ್ ಪ್ರಯೋಗಾತ್ಮಕ ಸಂಚಾರ ನಡೆಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

2019ರಲ್ಲಿ ಚೀನಾದ ಸರ್ಕಾರಿ ಕಂಪನಿ ರೂ.1,578 ಕೋಟಿ ಮೌಲ್ಯದ ಒಪ್ಪಂದದಡಿ ಒಟ್ಟು 36 ರೈಲುಗಳನ್ನು ಪೂರೈಕೆ ಮಾಡುವ ಹೊಣೆ ಹೊತ್ತಿತ್ತು. ಇದರಲ್ಲಿ 15 ರೈಲುಗಳು ಯೆಲ್ಲೋ ಲೈನ್‌ಗೆ ಮತ್ತು 21 ರೈಲುಗಳು ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಿಗೆ ಮೀಸಲಾಗಿದ್ದವು. ಎರಡು ಪ್ರೋಟೋಟೈಪ್ ರೈಲುಗಳನ್ನು ಈಗಾಗಲೇ ಪೂರೈಸಲಾಗಿದ್ದು, ಉಳಿದ ರೈಲುಗಳನ್ನು ಟಿಆರ್‌ಎಸ್‌ಎಲ್ ನಿರ್ಮಿಸುತ್ತಿದೆ. ಇದುವರೆಗೆ ಯೆಲ್ಲೋ ಲೈನ್‌ಗೆ ಎಂಟು ರೈಲುಗಳನ್ನು ಮಾತ್ರ ವಿತರಿಸಲಾಗಿದೆ.

ಇದನ್ನೂ ಓದಿ BMRCL ಜೊತೆಗೆ ಪ್ರೆಸ್ಟೀಜ್ ಗ್ರೂಪ್ 90 ಕೋಟಿ ಒಪ್ಪಂದ: ಬೆಳ್ಳಂದೂರು ಮೆಟ್ರೋ ಇನ್ಮುಂದೆ ‘ಪ್ರೆಸ್ಟೀಜ್ ಬೆಳ್ಳಂದೂರು ಸ್ಟೇಷನ್’

ಚಾಲಕರಿಲ್ಲದೇ ಸಂಚರಿಸುವ ಸೌಲಭ್ಯ

ಯೆಲ್ಲೋ ಲೈನ್‌ನಲ್ಲಿ ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್ (CBTC) ವ್ಯವಸ್ಥೆ ಜಾರಿಯಲ್ಲಿದ್ದು, ಚಾಲಕರಿಲ್ಲದೇ ಸಂಚರಿಸುವ ಸೌಲಭ್ಯವಿದೆ. ಆದರೆ ಪರ್ಪಲ್ ಮತ್ತು ಗ್ರೀನ್ ಮಾರ್ಗಗಳಲ್ಲಿ ಡಿಟಿಜಿ ಸಿಗ್ನಲಿಂಗ್ ವ್ಯವಸ್ಥೆ ಇರುವುದರಿಂದ ಲೋಕೋಪೈಲಟ್ ಅಗತ್ಯವಿದೆ. ಜನವರಿ 2025ರಲ್ಲಿ ಪರ್ಪಲ್ ಲೈನ್ ಪ್ರೋಟೋಟೈಪ್ ರೈಲು ಲಭಿಸಿದ್ದರೂ, ಬಿಎಂಆರ್‌ಸಿಎಲ್ ಇನ್ನೂ ವಾಣಿಜ್ಯ ಸಂಚಾರಕ್ಕೆ ಅಗತ್ಯವಾದ 37 ಕಾನೂನು ಅನುಮತಿಗಳನ್ನು ಸಂಪೂರ್ಣವಾಗಿ ಪಡೆಯಬೇಕಿದೆ. ಸದ್ಯ ಸಿಗ್ನಲಿಂಗ್ ಸಾಫ್ಟ್‌ವೇರ್ ಪರೀಕ್ಷೆ ಮತ್ತು ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಲ್ಟಿ-ಟ್ರೈನ್ (ಆಂಟಿ-ಕೋಲಿಷನ್) ಪರೀಕ್ಷೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಪರೀಕ್ಷೆಗಳು ಪೂರ್ಣಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ ಅಂತ್ಯದೊಳಗೆ ಮೂರನೇ ಡಿಟಿಜಿ ರೈಲು ರವಾನೆಯಾಗುವ ಸಾಧ್ಯತೆ ಇದ್ದು, ಬಳಿಕ ಯೆಲ್ಲೋ ಲೈನ್‌ಗೆ ಉಳಿದ ಸಿಬಿಟಿಸಿ ರೈಲುಗಳು ಹಾಗೂ ಪರ್ಪಲ್-ಗ್ರೀನ್ ಮಾರ್ಗಗಳಿಗೆ ಅಂತಿಮ ಹಂತದ ರೈಲುಗಳನ್ನು ಹಂತ ಹಂತವಾಗಿ ಪೂರೈಸುವ ಯೋಜನೆ ಇದೆ. ಕಾರ್ಯಾಚರಣಾ ಅಗತ್ಯತೆ ಆಧರಿಸಿ ಮೇ–ಜೂನ್ ವೇಳೆಗೆ ಮೂರು ಡಿಟಿಜಿ ರೈಲುಗಳನ್ನು ಸೇವೆಗೆ ಸೇರಿಸಿದರೆ, ಪೀಕ್ ಅವರ್ ಜನಸಂದಣಿ ಸಮಸ್ಯೆಗೆ ಭಾಗಶಃ ಪರಿಹಾರ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Gold Rate Today: ಚಿನ್ನದ ಬೆಲೆ ಏರಿಕೆ; ಬೆಳ್ಳಿ ಬೆಲೆ ಇಳಿಕೆ – Kannada News | Gold Price Today on 24th February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 24: ಚಿನ್ನದ ಬೆಲೆಯ ಸತತ ಏರಿಕೆ ಮುಂದುವರಿದಿದೆ. ಮೊನ್ನೆ ಮತ್ತು ನಿನ್ನೆ ಕ್ರಮವಾಗಿ 285 ರೂ ಮತ್ತು 190 ರೂ ಏರಿದ್ದ ಚಿನ್ನದ ಬೆಲೆ (Gold Rates) ಇವತ್ತು 40 ರೂ ಹೆಚ್ಚಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆಯ ಏರಿಕೆ ಓಟ ನಿಂತಿದೆ. ಮಂಗಳವಾರ ಇದರ ಬೆಲೆ 10ರಿಂದ 15 ರೂನಷ್ಟು ತಗ್ಗಿದೆ. ನಿನ್ನೆ ಬೆಳ್ಳಿ ಬೆಲೆ ಬರೋಬ್ಬರಿ 25 ರೂ ಏರಿತ್ತು. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,48,300 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,61,780 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,48,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 28,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 24ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,178 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,830 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,134 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 16,178 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,830 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,830 ರೂ
  • ಚೆನ್ನೈ: 14,890 ರೂ
  • ಮುಂಬೈ: 14,830 ರೂ
  • ದೆಹಲಿ: 14,845 ರೂ
  • ಕೋಲ್ಕತಾ: 14,830 ರೂ
  • ಕೇರಳ: 14,830 ರೂ
  • ಅಹ್ಮದಾಬಾದ್: 14,835 ರೂ
  • ಜೈಪುರ್: 14,845 ರೂ
  • ಲಕ್ನೋ: 14,845 ರೂ
  • ಭುವನೇಶ್ವರ್: 14,830 ರೂ

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಅತಿಯಾಗಿ ಏರಿದ್ದು ಯಾಕೆಂದು ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 617 ರಿಂಗಿಟ್ (14,345 ರುಪಾಯಿ)
  • ದುಬೈ: 580.25 ಡಿರಾಮ್ (14,370 ರುಪಾಯಿ)
  • ಅಮೆರಿಕ: 161.50 ಡಾಲರ್ (14,689 ರುಪಾಯಿ)
  • ಸಿಂಗಾಪುರ: 204.30 ಸಿಂಗಾಪುರ್ ಡಾಲರ್ (14,661 ರುಪಾಯಿ)
  • ಕತಾರ್: 574 ಕತಾರಿ ರಿಯಾಲ್ (14,323 ರೂ)
  • ಸೌದಿ ಅರೇಬಿಯಾ: 589 ಸೌದಿ ರಿಯಾಲ್ (14,289 ರುಪಾಯಿ)
  • ಓಮನ್: 61.50 ಒಮಾನಿ ರಿಯಾಲ್ (14,528 ರುಪಾಯಿ)
  • ಕುವೇತ್: 47.41 ಕುವೇತಿ ದಿನಾರ್ (14,123 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 285 ರೂ
  • ಚೆನ್ನೈ: 290 ರೂ
  • ಮುಂಬೈ: 285 ರೂ
  • ದೆಹಲಿ: 285 ರೂ
  • ಕೋಲ್ಕತಾ: 285 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 285 ರೂ
  • ಜೈಪುರ್: 285 ರೂ
  • ಲಕ್ನೋ: 285 ರೂ
  • ಭುವನೇಶ್ವರ್: 290 ರೂ
  • ಪುಣೆ: 285

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Exit mobile version