ಯಾದಗಿರಿ, ಫೆಬ್ರವರಿ 23: ಮಹಾತ್ಮ ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫೆ. 21ರಂದು ಜಿಲ್ಲೆಯ ಗುರುಮಠಕಲ್ನಲ್ಲಿ ನಡೆದ ಶಿವಾಜಿ ಜಯಂತಿಯಲ್ಲಿ ಮಾತನಾಡಿದ ಶಾಸಕ ಯತ್ನಾಳ್ ಭಾಷಣದ ವಿಡಿಯೋ ಇದೀಗ ವೈರಲ್ ಆಗಿದೆ. ಗಾಂಧೀಜಿಯನ್ನ ಭಾರತದ ರಾಷ್ಟ್ರಪಿತ ಎಂದು ನಾನು ಒಪ್ಪಿಕೊಳ್ಳುವುದಿಲ್ಲ. ಜವಾಹರ ಲಾಲ್ ನೆಹರುರನ್ನು ಮೊದಲ ಪ್ರಧಾನಿ ಎಂದು ಒಪ್ಪಿಕೊಳ್ಳಲ್ಲ ಎಂದು ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನವದೆಹಲಿ, ಫೆಬ್ರವರಿ 23: ವಧುವಿನ ಸಾಕು ನಾಯಿಯಿಂದಾಗಿ ಉತ್ತರ ಪ್ರದೇಶದಲ್ಲಿ ಮದುವೆಯೇ ರದ್ದಾಗಿರುವ ಘಟನೆ ನಡೆದಿದೆ. ಮದುಮಗನ ಸಂಬಂಧಿಕರು ನಾಯಿಗೆ ಹೊಡೆದ ಕಾರಣದಿಂದಾಗಿ ಉತ್ತರ ಪ್ರದೇಶದ ಹುಡುಗಿಯೊಬ್ಬಳು ತನ್ನ ಮದುವೆಯನ್ನೇ (Wedding) ರದ್ದುಗೊಳಿಸಿದ್ದಾಳೆ. ಈ ವೇಳೆ ವಧು-ವರರ ಸಂಬಂಧಿಕರ ನಡುವೆ ಗಲಾಟೆ ನಡೆದಿದ್ದು, ಅತಿಥಿಗಳಿಗೆ ಗಾಯಗಳಾಗಿವೆ. ವಧುವಿನ ಸಾಕು ನಾಯಿಯ ಕಾರಣದಿಂದ ಮದುವೆಯೇ ನಿಂತುಹೋಗಿದೆ. ಹೊಡೆದಾಟ ನಡೆದು ಹಲವಾರು ಅತಿಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಧುವಿನ ಸಾಕು ನಾಯಿಯ ವಿವಾದವು ಎರಡು ಕುಟುಂಬಗಳ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು. ಉತ್ತರ ಪ್ರದೇಶದ ಫತೇಪುರದಲ್ಲಿ ಈ ಘಟನೆ ನಡೆದಿದೆ. ಸಂಭ್ರಮ ತುಂಬಬೇಕಾದ ಮದುವೆ ಮಂಟಪದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇಂಡಿಯಾ ಟುಡೇ ವರದಿಯ ಪ್ರಕಾರ, ಈ ಘಟನೆ ಕಳೆದ ಬುಧವಾರ ರಾತ್ರಿ ಖಾಗಾ ಕೊಟ್ವಾಲಿ ಪ್ರದೇಶದ ಅತಿಥಿ ಗೃಹದಲ್ಲಿ ನಡೆದಿದೆ. ವಧುವಿನ ಕುಟುಂಬಸ್ಥರು ಪ್ರಯಾಗರಾಜ್‌ನಿಂದ ಬಸ್ ಮತ್ತು ಖಾಸಗಿ ವಾಹನಗಳಲ್ಲಿ ಆಗಮಿಸಿದ್ದರು. ವರನ ಕಡೆಯವರು ಸಾಂಪ್ರದಾಯಿಕವಾದ ವಿವಾಹ ಮೆರವಣಿಗೆಯೊಂದಿಗೆ ಬಂದರು. ಹೂಮಾಲೆ ವಿನಿಮಯ ಸೇರಿದಂತೆ ಮದುವೆಯ ಆರಂಭಿಕ ಸಮಾರಂಭಗಳು ಸರಾಗವಾಗಿ ನಡೆದವು.
ಮದುವೆಯ ಸಾಂಪ್ರದಾಯಿಕ ಆಚರಣೆಗಳ ಸಮಯದಲ್ಲಿ ಬೆಳಿಗ್ಗೆ 4 ಗಂಟೆಯ ಸುಮಾರಿಗೆ ಅಡ್ಡಿಯಾಗಬಾರದು ಎಂದು ವಧುವಿನ ಸಾಕು ನಾಯಿಯನ್ನು ಅವಳ ಕುಟುಂಬಸ್ಥರು ಸ್ವಲ್ಪ ದೂರದಲ್ಲಿ ಕಟ್ಟಿಹಾಕಿದ್ದರು. ಅದು ಅಲ್ಲಿಂದಲೇ ಜೋರಾಗಿ ಬೊಗಳಲು ಪ್ರಾರಂಭಿಸಿತು. ಇದರಿಂದ ಸಿಟ್ಟಿಗೆದ್ದ ವರನ ಕಡೆಯ ಯುವಕ ಆ ನಾಯಿಯನ್ನು ಹೊಡೆದನು. ಇದಕ್ಕೆ ವಧುವಿನ ಕುಟುಂಬಸ್ಥರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಈ ವಾದ ಜಗಳಕ್ಕೆ ತಿರುಗಿ ವಧು ಹಾಗೂ ವರನ ಸಂಬಂಧಿಕರು ಹೊಡೆದಾಡಿಕೊಂಡರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಈ ಘರ್ಷಣೆಯ ಸಮಯದಲ್ಲಿ ಕೋಲುಗಳು ಮತ್ತು ಕುರ್ಚಿಗಳನ್ನು ಹಿಡಿದುಕೊಂಡು ಹೊಡೆದಾಡಿಕೊಂಡರು. ವಧುವಿನ ಕುಟುಂಬದ ಮೂವರು ಸದಸ್ಯರಾದ ಶುಭಮ್ ಗುಪ್ತಾ, ರಿಷಭ್ ಕೇಸರ್ವಾನಿ ಮತ್ತು ಸಂಗೀತಾ ದೇವಿ ಅವರ ತಲೆಗೆ ಗಾಯಗಳಾಯಿತು. ವರನ ಕುಟುಂಬದ ಕೆಲವು ಸದಸ್ಯರಿಗೂ ಸಣ್ಣಪುಟ್ಟ ಗಾಯಗಳಾಯಿತು. ಈ ಗಲಾಟೆಯಿಂದ ಹೆದರಿ ಅನೇಕ ಅತಿಥಿಗಳು ಓಡಿಹೋದರು.
ಕೊನೆಗೆ ಮದುವೆ ಮನೆಗೆ ಪೊಲೀಸರನ್ನು ಕರೆಸಬೇಕಾಯಿತು. ಅವರು ಮದುವೆಯ ವಿಧಿವಿಧಾನಗಳನ್ನು ನಿಲ್ಲಿಸಿ ಎರಡೂ ಕುಟುಂಬಗಳನ್ನು ಖಾಗಾ ಪೊಲೀಸ್ ಠಾಣೆಗೆ ಕರೆದೊಯ್ದರು. ಗಾಯಾಳುಗಳಿಗೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಗುರುವಾರ, ಎರಡೂ ಕುಟುಂಬಗಳು ಪೊಲೀಸ್ ಠಾಣೆಗೆ ಮತ್ತೆ ಹಾಜರಾದರು.
ವಿಚಾರಣೆಯ ಸಮಯದಲ್ಲಿ, ವಧು ತಾನು ಈ ಮದುವೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದಳು. ನಂತರ ಎರಡೂ ಕುಟುಂಬಗಳ ಹಿರಿಯ ಸದಸ್ಯರ ನಡುವೆ ಪಂಚಾಯ್ತಿ ನಡೆಯಿತು. ಮದುವೆಯ ಸಮಯದಲ್ಲಿ ವಿನಿಮಯ ಮಾಡಿಕೊಂಡ ಉಡುಗೊರೆಗಳು ಮತ್ತು ಹಣವನ್ನು ಹಿಂತಿರುಗಿಸಲಾಯಿತು. ಎರಡೂ ಕಡೆಯವರು ಒಪ್ಪಂದಕ್ಕೆ ಬಂದರು. ಒಂದು ನಾಯಿಯ ಕಾರಣದಿಂದಾಗಿ ಮಂಟಪದಲ್ಲೇ ಮದುವೆ ನಿಂತುಹೋಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಅಭಿಮಾನಿಗಳ ಬಹುಕಾಲದ ಕುತೂಹಲಕ್ಕೆ ತೆರೆಬಿದ್ದಿದೆ. ಟಾಲಿವುಡ್‌ನ ಸ್ಟಾರ್ ನಟ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಹಸೆಮಣೆ ಏರಲಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ಈ ಜೋಡಿಯನ್ನು ವಿರೋಶ್ ಎಂದು ಕರೆಯುತ್ತಾರೆ. ಆ ಪದವನ್ನು ರಶ್ಮಿಕಾ ಮತ್ತು ವಿಜಯ್ ದೇವರಕೊಂಡ (Vijay Deverakonda) ಒಪ್ಪಿಕೊಂಡಿದ್ದಾರೆ. ಹಾಗಾಗಿ ಈ ಮದುವೆಗೆ ‘ದಿ ವೆಡ್ಡಿಂಗ್ ಆಫ್ ವಿರೋಶ್’ (The Wedding of VIROSH) ಎಂದು ಹೆಸರಿಡಲಾಗಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಯಸ್ಸಿನ ಅಂತರದ ಬಗ್ಗೆಯೂ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಎಂಬ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇದೆ. ಈ ಸುಂದರ ಜೋಡಿಯ ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ನಡೆಯುತ್ತಿರುವಾಗ ಅವರ ವಯಸ್ಸಿನ ಅಂತರದ ಬಗ್ಗೆಯೂ ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಜೋಡಿಯ ನಡುವೆ 7 ವರ್ಷಗಳ ವಯಸ್ಸಿನ ಅಂತರವಿದೆ.
ವಿಜಯ್ ದೇವರಕೊಂಡ ಅವರು 1989ರ ಮೇ 9ರಂದು ಜನಿಸಿದ್ದು, ಸದ್ಯ ಅವರಿಗೆ 36 ವರ್ಷ ವಯಸ್ಸು. ರಶ್ಮಿಕಾ ಮಂದಣ್ಣ ಅವರು 1996ರ ಏಪ್ರಿಲ್ 5ರಂದು ಜನಿಸಿದ್ದು, ಈಗ ಅವರಿಗೆ 29 ವರ್ಷ ವಯಸ್ಸು. ಏಳು ವರ್ಷಗಳ ವಯಸ್ಸಿನ ಅಂತರ ಇದರೂ ಅನ್ಯೋನ್ಯತೆ ಮತ್ತು ಹೊಂದಾಣಿಕೆ ಅವರಲ್ಲಿ ಕಾಣಿಸಿದೆ. ಹಾಗಾಗಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.
2018ರಲ್ಲಿ ಬಿಡುಗಡೆಯಾದ ‘ಗೀತಾ ಗೋವಿಂದಂ’ ಸಿನಿಮಾದಲ್ಲಿ ಈ ಜೋಡಿಯ ಕೆಮಿಸ್ಟ್ರಿ ಮೋಡಿ ಮಾಡಿತ್ತು. ನಂತರ ‘ಡಿಯರ್ ಕಾಮ್ರೇಡ್’ ಚಿತ್ರದಲ್ಲಿಯೂ ಇವರ ಸ್ನೇಹ ಗಟ್ಟಿಯಾಯಿತು. ತೆರೆಯ ಮೇಲೆ ಅಭಿಮಾನಿಗಳಿಗೆ ಇಷ್ಟವಾದ ಈ ಜೋಡಿ ನಿಜ ಜೀವನದಲ್ಲೂ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದಾರೆ. ರಶ್ಮಿಕಾ ಹಲವು ಸಂದರ್ಭಗಳಲ್ಲಿ ವಿಜಯ್ ತಮ್ಮ ಜೀವನದ ದೊಡ್ಡ ಶಕ್ತಿ ಎಂದು ಹೇಳಿಕೊಂಡಿದ್ದಾರೆ.
ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ಸುಮಾರು 8 ವರ್ಷಗಳ ಸುದೀರ್ಘ ಡೇಟಿಂಗ್ ಬಳಿಕ ಈಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಫೆಬ್ರವರಿ 26ರಂದು ಉದಯಪುರದಲ್ಲಿ ಕೆಲವೇ ಕೆಲವು ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವಿವಾಹ ನಡೆಯಲಿದೆ. ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ.
ಕಲ್ಲು ತೂರಾಟ ಪ್ರಕರಣImage Credit source: tv9 kannada
ಬಾಗಲಕೋಟೆ, ಫೆಬ್ರವರಿ 23: ಶಿವಾಜಿ ಜಯಂತಿ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟದ (Stone pelting) ಕಾವು ಇನ್ನೂ ಆರಿಲ್ಲ. ಕಲ್ಲೆಸೆದ ಎರಡು ಕೋಮಿನ ಕೆಲ ಕಿಡಿಗೇಡಿಗಳು ಅಂದರ್ ಆಗಿದ್ದಾರೆ. ಶಾಂತಿ ಸಭೆಗಳೂ ವಿಫಲವಾಗಿದ್ದು, ದ್ವೇಷದ ಕಿಚ್ಚು ಬುಸುಗುಡುತ್ತಿದೆ. ಇದೇ ತಿಂಗಳ 26ರಂದು ಬೃಹತ್ ಹೋರಾಟಕ್ಕೆ ಹಿಂದೂ ಸಂಘಟನೆಗಳು ಮುಂದಾಗಿವೆ. ಹೀಗಾಗಿ ಫೆ. 28ರವರೆಗೂ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಜೊತೆಗೆ ಯಾವುದೇ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಪ್ರತಿಭಟನೆಗೆ ಮುಂದಾದರೆ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ಎಸ್ಪಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರ ಆರ್.ಬಿ.ತಿಮ್ಮಾಪುರ, ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಹಿಂದೂ, ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಸಭೆ ಮಾಡಲಾಗಿದೆ. ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಭೆಯಲ್ಲಿ ಮನವಿ ಮಾಡಲಾಗಿದೆ. ಫೆಬ್ರವರಿ 28ರಂದು ಪಿಯುಸಿ ಪರೀಕ್ಷೆ, ಹೋಳಿ ಹಬ್ಬವಿದೆ. ಎಲ್ಲರೂ ಅಣ್ಣ ತಮ್ಮಂದಿರಂತೆ ಸಹಬಾಳ್ವೆಯಿಂದ ಇರಲು ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಮನವಿ ಮಾಡಿದ್ದಾರೆ.
ಎಸ್ಪಿ ಸಿದ್ದಾರ್ಥ ಗೋಯಲ್ ಹೇಳಿದ್ದಿಷ್ಟು
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್. ಫೆ. 28ರವರೆಗೂ ಬಾಗಲಕೋಟೆ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಯಾವುದೇ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಪ್ರತಿಭಟನೆಗೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಪ್ರತಿಭಟನೆ ನಡೆಸಿದರೆ ರಸ್ತೆ ಬದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ. ಫೆ.28ರಿಂದ ಪರೀಕ್ಷೆಗಳು ಆರಂಭವಾಗುತ್ತಿದ್ದು ಓದಿಕೊಳ್ಳಲು ಅವಕಾಶ ನೀಡಿ. ಮಕ್ಕಳು ಓದಿಕೊಳ್ಳಬೇಕು, ಚೆನ್ನಾಗಿ ಪರೀಕ್ಷೆ ಬರೆಯಲು ಎಲ್ಲರೂ ಸಹಕರಿಸಿ ಎಂದು ಎಸ್ಪಿ ಸಿದ್ದಾರ್ಥ ಗೋಯಲ್ ಮನವಿ ಮಾಡಿದ್ದಾರೆ.
ಫೆ.26ರಂದು ಬೃಹತ್ ಹೋರಾಟಕ್ಕೆ ಹಿಂದೂ ಸಮುದಾಯ ಕರೆ
ನಿನ್ನೆ ಸಂಜೆ ಹಿಂದೂ ಮುಖಂಡರ ಸಭೆ ಮಾಡಲಾಗಿದೆ. ಬಾಗಲಕೋಟೆಯಲ್ಲಿ ಫೆ.26ರಂದು ಬೃಹತ್ ಹೋರಾಟಕ್ಕೆ ಮುಂದಾಗಿದ್ದಾರೆ. ಇಂದು ಹೋರಾಟದ ರೂಪುರೇಷೆ ಬಗ್ಗೆ ನಿರ್ಧರಿಸಲಿದ್ದಾರೆ. ಮಸೀದಿ ಅಧ್ಯಕ್ಷ ಸೇರಿದಂತೆ ಸದಸ್ಯರ ವಿರುದ್ಧ ಕೇಸ್ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಸದ್ಯ ಬೂದಿ ಮುಚ್ಚಿದ ಕೆಂಡದಂತಿರೋ ಬಾಗಲಕೋಟೆಯಲ್ಲಿ ಪಂಕಾ ಮಸೀದಿ ಮತ್ತು ಕೊತ್ತಲೇಶ್ವರ ಮಂದಿರದ ಬಳಿ ಪೊಲೀಸ್ ಸರ್ಪ ಗಾವಲಿದೆ. ಈಗಾಗಲೇ ನಡೆದ ಎರಡು ಶಾಂತಿ ಸಭೆಗಳು ವಿಫಲವಾಗಿವೆ. ಮುಸ್ಲಿಂ ಕಡೆಯ 8 ಜನರ ಬಂಧನ ವಾಗಿದೆ. ಇನ್ನು ಮಾಂಸದಂಗಡಿಗಳ ಮೇಲೆ ಕಲ್ಲೆಸೆದ ಇಬ್ಬರು ಹಿಂದು ಕಾರ್ತಕರ್ತರನ್ನೂ ಬಂಧಿಸಲಾಗಿದೆ. ಇಂದು ಆಸ್ಪತ್ರೆಗೆ ಭೇಟಿ ಕೊಟ್ಟ ಮಾಜಿ ಸಚಿವ ಬಿ ಶ್ರೀರಾಮುಲು, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಶ್ರೀನಗರ, ಫೆಬ್ರವರಿ 23: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಜಾಲಗಳ ನಿರ್ಮೂಲನೆಯ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಕಳೆದ 1 ತಿಂಗಳಲ್ಲಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ)ಗೆ ಸಂಬಂಧಿಸಿದ 7 ಉಗ್ರರನ್ನು ತಟಸ್ಥಗೊಳಿಸಿವೆ. ಇದರಲ್ಲಿ ಹಿಂದಿನ ದಾಳಿಗಳಿಗೆ ಸಂಬಂಧಿಸಿದ ಉನ್ನತ ಕಮಾಂಡರ್ ಕೂಡ ಸೇರಿದ್ದಾನೆ. ಕಿಶ್ತ್ವಾರ್‌ನಲ್ಲಿ ನಡೆದ ಭಾನುವಾರದ ಎನ್‌ಕೌಂಟರ್‌ನಲ್ಲಿ (Encounter) ಮೂವರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲಾಗಿತ್ತು. ಇದಕ್ಕೂ ಮೊದಲು, ಫೆಬ್ರವರಿ 4ರಂದು ಉಧಂಪುರದಲ್ಲಿರುವ ರಾಮನಗರ ಕಾಡಿನಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ಜನವರಿ 23ರಂದು ಕಥುವಾದ ಪರ್ಹೆತಾರ್ ಗ್ರಾಮದಲ್ಲಿ ಒಬ್ಬನನ್ನು ತಟಸ್ಥಗೊಳಿಸಲಾಗಿತ್ತು.
“ನಮ್ಮ ಪ್ರದೇಶಕ್ಕೆ ಯಾರೇ ಬಂದರೂ ಭಯೋತ್ಪಾದಕರನ್ನು ನಾವು ತಟಸ್ಥಗೊಳಿಸುತ್ತಲೇ ಇರುತ್ತೇವೆ. ಫೆಬ್ರವರಿಯಲ್ಲಿ ನಾವು 6 ಜೆಇಎಂ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿದೆ. ಭಯೋತ್ಪಾದಕರಿಗೆ ಸಹಾಯ ಮಾಡಿದ ಸ್ಥಳೀಯರ ಬಗ್ಗೆಯೂ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಕಣ್ಣಿಟ್ಟಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಕಿಶ್ತ್ವಾರ್ ಎನ್‌ಕೌಂಟರ್‌ನಲ್ಲಿ ಭಾನುವಾರ ಭದ್ರತಾ ಪಡೆಗಳು ತಟಸ್ಥಗೊಳಿಸಿದ ಮೂವರು ಭಯೋತ್ಪಾದಕರಲ್ಲಿ ಈ ಹಿಂದೆ ಹಲವಾರು ಎನ್‌ಕೌಂಟರ್‌ಗಳಿಂದ ತಪ್ಪಿಸಿಕೊಂಡಿದ್ದ ಕುಖ್ಯಾತ ಜೆಇಎಂ ಕಮಾಂಡರ್ ಸೈಫುಲ್ಲಾ ಕೂಡ ಒಬ್ಬ. ಗುಂಡಿನ ಚಕಮಕಿಯ ಸಮಯದಲ್ಲಿ ಆತ ಅಡಗಿಕೊಂಡಿದ್ದ ಮಣ್ಣಿನ ಮನೆ ಬೆಂಕಿಗೆ ಆಹುತಿಯಾದ ಕಾರಣದಿಂದ ಹತ್ಯೆಗೀಡಾದ ಎಲ್ಲಾ ಭಯೋತ್ಪಾದಕರ ಶವಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ. ಅವರನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಭದ್ರತಾ ಪಡೆಗಳು ತಿಳಿಸಿವೆ.
BIG BREAKING
Pakistan military regime backed 2 Jaish terrorists, including MOST-WANTED Saifullah, eliminated in an ENCOUNTER with the Indian Army in Kishtwar, Jammu and Kashmir. pic.twitter.com/WVCSo9gUX2
ಸೈಫುಲ್ಲಾ ಸುಮಾರು 5 ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿದ್ದನೆಂದು ತಿಳಿದು ಬಂದಿದೆ. ಅಂದಿನಿಂದ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ. ಭದ್ರತಾ ಪಡೆಗಳ ಮೇಲೆ ಹಲವಾರು ಮಾರಕ ದಾಳಿಗಳ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿದೆ. ಇದರಲ್ಲಿ ಜುಲೈ 2024ರಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿದ್ದರು. ಅವನು 17 ಬಾರಿ ಸಿಕ್ಕಿಬಿದ್ದಿದ್ದರೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ಈ ತಿಂಗಳ ಆರಂಭದಲ್ಲಿ, ಜೆಇಎಂನ ಇನ್ನೊಬ್ಬ ಕಮಾಂಡರ್ ಸೇರಿದಂತೆ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಉಧಂಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ತಟಸ್ಥಗೊಳಿಸಿದವು. ತಟಸ್ಥಗೊಂಡ ಭಯೋತ್ಪಾದಕರಿಂದ ಎಂ4 ಕಾರ್ಬೈನ್ ಮತ್ತು ಎಕೆ ಅಸಾಲ್ಟ್ ರೈಫಲ್ ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಪ್ರಮುಖ ಜೈಶ್ ಭಯೋತ್ಪಾದಕ ಆದಿಲ್‌ನನ್ನು ಛಾತ್ರೂ ಪ್ರದೇಶದಲ್ಲಿ ಇತ್ತೀಚೆಗೆ ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿದ್ದವು. ಆದಿಲ್ ಪಾಕಿಸ್ತಾನಿ ಪ್ರಜೆಯಾಗಿದ್ದು, ಸೈಫುಲ್ಲಾನ ಬಲಗೈ ಬಂಟ ಎನ್ನಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸಾಮಾನ್ಯವಾಗಿ 35 ವರ್ಷ ವಯಸ್ಸಿನ ನಂತರ, ಮಹಿಳೆಯರ ದೇಹದಲ್ಲಿ ಹಲವಾರು ರೀತಿಯ ಹಾರ್ಮೋನುಗಳ ಬದಲಾವಣೆಗಳಾಗುತ್ತದೆ. ಚಯಾಪಚಯ ಕ್ರಿಯೆ ಕ್ರಮೇಣ ನಿಧಾನಗೊಳ್ಳುತ್ತದೆ, ತೂಕ ಹೆಚ್ಚಾಗುವ ಸಾಧ್ಯತೆ ಕೂಡ ಹೆಚ್ಚಾಗಿಯೇ ಇರುತ್ತದೆ. ಈ ವಯಸ್ಸಿನ ನಂತರ, ಥೈರಾಯ್ಡ್ ಅಸಮತೋಲನ, ರಕ್ತಹೀನತೆ, ಮೂಳೆ ದೌರ್ಬಲ್ಯ, ವಿಟಮಿನ್ ಡಿ (Vitamin D) ಮತ್ತು ಬಿ 12 ಕೊರತೆಗಳು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ. ಅನೇಕ ಮಹಿಳೆಯರಲ್ಲಿ ಪಿಸಿಓಎಸ್, ಅನಿಯಮಿತ ಮುಟ್ಟು ಅಥವಾ ಮುಟ್ಟು ನಿಲ್ಲುವ ರೋಗಲಕ್ಷಣಗಳು ಕಂಡುಬರುತ್ತದೆ. ಹಾಗಾಗಿ 35ರ ನಂತರ ಪ್ರತಿನಿತ್ಯ ಸೇವನೆ ಮಾಡುವ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಏಕೆಂದರೆ ಆಹಾರದಿಂದ ಈ ರೀತಿ ಕಂಡುಬರುವ ಸಮಸ್ಯೆಗಳನ್ನು ತಡೆಗಟ್ಟಬಹುದು. ಹಾಗಾದರೆ ಯಾವ ಆಹಾರಗಳ ಸೇವನೆ ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಪ್ರತಿನಿತ್ಯ ಸೇವನೆ ಮಾಡುವ ಆಹಾರದಲ್ಲಿ ಏನೇನಿರಬೇಕು?
ಲೇಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕ ಎಚ್‌ಒಡಿ ಡಾ. ಎಲ್.ಎಚ್. ಘೋಟೇಕರ್ ಹೇಳುವ ಪ್ರಕಾರ, 35 ವರ್ಷದ ನಂತರ ಮಹಿಳೆಯರು ಸಮತೋಲಿತ ಮತ್ತು ಪೌಷ್ಟಿಕ- ಭರಿತ ಆಹಾರವನ್ನು ಸೇವನೆ ಮಾಡಬೇಕು. ಸ್ನಾಯುಗಳನ್ನು ಬಲಪಡಿಸಿಕೊಳ್ಳಲು ಬೇಳೆ, ಪನೀರ್, ಮೊಟ್ಟೆ, ಸೋಯಾ ಮತ್ತು ಕಡಲೆ ಮುಂತಾದ ಪ್ರೋಟೀನ್ ಭರಿತ ಆಹಾರಗಳನ್ನು ದಿನನಿತ್ಯ ಸೇವನೆ ಮಾಡಬೇಕು. ಹಾಲು, ಮೊಸರು, ಎಳ್ಳು ಮತ್ತು ರಾಗಿಯಂತಹ ಕ್ಯಾಲ್ಸಿಯಂ- ಭರಿತ ಆಹಾರಗಳು ಕೂಡ ಮೂಳೆಗಳಿಗೆ ಅತ್ಯಗತ್ಯವಾಗಿದ್ದು ನಿಯಮಿತವಾಗಿ ಈ ರೀತಿಯ ಪದಾರ್ಥಗಳನ್ನು ಕೂಡ ಸೇವನೆ ಮಾಡಬೇಕು.
ಎಲೆ ತರಕಾರಿಗಳು, ದಾಳಿಂಬೆ, ಬೀಟ್ರೂಟ್ ಮತ್ತು ಬೆಲ್ಲ ಕಬ್ಬಿಣಾಂಶಕ್ಕೆ ಪ್ರಯೋಜನಕಾರಿ. ಧಾನ್ಯಗಳು, ಓಟ್ಸ್ ಮತ್ತು ಹಣ್ಣುಗಳು ಫೈಬರ್ ಅನ್ನು ಒದಗಿಸುತ್ತವೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಒಮೆಗಾ- 3 ಗಾಗಿ ವಾಲ್ನಟ್ಸ್ ಮತ್ತು ಅಗಸೆ ಬೀಜಗಳ ಸೇವನೆ ಮಾಡಬಹುದು. ವಿಟಮಿನ್ ಡಿ ಗಾಗಿ, ಸೂರ್ಯನ ಬೆಳಕನ್ನು ಪಡೆಯಿರಿ, ಅಗತ್ಯವಿದ್ದರೆ ವೈದ್ಯರ ಸಲಹೆಯಂತೆ ಪೂರಕ ಮಾತ್ರೆಗಳ ಸೇವನೆ ಮಾಡಿ. ಸಾಕಷ್ಟು ನೀರು ಕುಡಿಯುವುದನ್ನು ಮರೆಯಬೇಡಿ.
ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬಾರದು?
35ರ ನಂತರ ಹೆಚ್ಚು ಹುರಿದ, ಕರಿದ, ಸಂಸ್ಕರಿಸಿದ ಮತ್ತು ಜಂಕ್ ಫುಡ್ ಅನ್ನು ತಿನ್ನಬಾರದು. ಸಕ್ಕರೆ ಮತ್ತು ಉಪ್ಪಿನ ಸೇವನೆಯನ್ನು ಕಡಿಮೆ ಮಾಡಬೇಕು. ಏಕೆಂದರೆ ಇದು ತೂಕ ಹೆಚ್ಚಾಗುವುದು, ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಸಕ್ಕರೆ ಪಾನೀಯಗಳು ಮತ್ತು ಪ್ಯಾಕ್ ಮಾಡಿದ ತಿಂಡಿಗಳನ್ನು ತಪ್ಪಿಸುವುದು ಒಳ್ಳೆಯದು. ಆಗಾಗ ಹೊರಗೆ ತಿನ್ನುವುದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಕೇವಲ ಆಹಾರ ಪದ್ಧತಿ ಮಾತ್ರವಲ್ಲ, ಜೀವನಶೈಲಿಯೂ ಬಹಳ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ, ಚುರುಕಾದ ನಡಿಗೆ, ಒಳ್ಳೆಯ ನಿದ್ರೆ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದೆಲ್ಲದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ.
ನೈರ್ಮಲ್ಯದ ದೃಷ್ಟಿಯಿಂದ ಪ್ರತಿನಿತ್ಯ ಸ್ನಾನ ಮಾಡುವುದು ತುಂಬಾನೇ ಒಳ್ಳೆಯದು. ಹಾಗಾಗಿ ಪ್ರತಿಯೊಬ್ಬರೂ ಪ್ರತಿದಿನ ತಪ್ಪದೇ ಸ್ನಾನ ಮಾಡ್ತಾರೆ. ಕೆಲವರು ತಣ್ಣೀರಿನಿಂದ, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದ್ರೆ, ಇನ್ನೂ ಕೆಲವರು ಚಳಿಗಾಲ ಮಾತ್ರವಲ್ಲ ಬೇಸಿಗೆಕಾಲದಲ್ಲೂ ಸುಡು ಬಿಸಿ ನೀರಿನಿಂದಲೇ (Hot Water) ಸ್ನಾನ ಮಾಡುತ್ತಾರೆ. ಹೀಗೆ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ದೇಹಕ್ಕೆ ರಿಲ್ಯಾಕ್ಸ್ ಸಿಗಬಹುದು, ಸ್ನಾಯುಗಳ ಬಿಗಿತದಿಂದ ಪರಿಹಾರ ದೊರೆಯಬಹುದು. ಆದರೆ ಹೆಚ್ಚು ಬಿಸಿನೀರಿನಿಂದ ಸ್ನಾನ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು. ಇದು ಚರ್ಮ ಹಾಗೂ ಕೂದಲಿನ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಂತೆ. ಹಾಗಾದರೆ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಆಗುವ ತೊಂದರೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಉಂಟಾಗುವ ಪರಿಣಾಮಗಳೇನು?
ಚರ್ಮ ಒಣಗುತ್ತದೆ: ಬಿಸಿನೀರಿನ ಸ್ನಾನ ಚರ್ಮದ ನೈಸರ್ಗಿಕ ತೇವಾಂಶ ಮತ್ತು ರಕ್ಷಣಾತ್ಮಕ ತೈಲಗಳನ್ನು ತೆಗೆದುಹಾಕುತ್ತದೆ. ಇದು ಚರ್ಮವನ್ನು ಒಣಗಿಸುತ್ತದೆ, ತುರಿಕೆ , ಕಿರಿಕಿರಿ ಇತ್ಯಾದಿ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಕೂದಲು ಮತ್ತು ನೆತ್ತಿಗೆ ಹಾನಿ: ಬಿಸಿನೀರು ಚರ್ಮಕ್ಕೆ ಮಾತ್ರವಲ್ಲದೆ ಕೂದಲು ಮತ್ತು ನೆತ್ತಿಗೂ ಹಾನಿಕಾರಕವಾಗಿದೆ. ಇದು ನೆತ್ತಿಯ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುತ್ತದೆ, ಇದು ಒಣಗಲು ಕಾರಣವಾಗುತ್ತದೆ ಮತ್ತು ತಲೆಹೊಟ್ಟು ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಅಲ್ಲದೆ ಇದು ಕೂದಲಿನ ಹೊರಪೊರೆಗಳನ್ನು ಹಾನಿಗೊಳಿಸುತ್ತದೆ, ಕೂದಲು ಉದುರುವಿಕೆಯ ಸಮಸ್ಯೆಯನ್ನೂ ಹೆಚ್ಚಿಸುತ್ತದೆ.
ರಕ್ತದೊತ್ತಡ: ಸುಡು ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ದೇಹದ ರಕ್ತನಾಳಗಳು ಹಿಗ್ಗುತ್ತವೆ, ಇದು ಹಠಾತ್ ರಕ್ತದೊತ್ತಡ ಕಡಿಮೆಯಾಗಿ ತಲೆತಿರುಗುವಿಕೆ ಅಥವಾ ಆಯಾಸಕ್ಕೆ ಕಾರಣವಾಗಬಹುದು.
ಕಣ್ಣಿನ ಸಮಸ್ಯೆಗಳು: ಬಿಸಿನೀರಿನ ಆವಿಯ ನೇರ ಸಂಪರ್ಕವು ಕಣ್ಣುಗಳ ನೈಸರ್ಗಿಕ ತೇವಾಂಶವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಕಣ್ಣುಗಳು ಕೆಂಪಾಗುತ್ತವೆ ಮತ್ತು ತುರಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ತಾಪಮಾನ ಅಸಮತೋಲನ: ಬಿಸಿನೀರಿನ ಅಭ್ಯಾಸವು ದೇಹದ ನೈಸರ್ಗಿಕ ತಾಪಮಾನವನ್ನು ಕಾಯ್ದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ, ಇದು ಶೀತ ಹವಾಮಾನವನ್ನು ಎದುರಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ಹಾಗಾಗಿ ಸ್ನಾನಕ್ಕೆ ಯಾವಾಗಲೂ ಉಗುರು ಬೆಚ್ಚಗಿನ ನೀರನ್ನು ಬಳಸಿ, ಇದರಿಂದ ಚರ್ಮ ಒಣಗುವುದಿಲ್ಲ ಮತ್ತು ಅದರ ನೈಸರ್ಗಿಕ ಎಣ್ಣೆಗಳು ಹಾಗೆಯೇ ಉಳಿಯುತ್ತವೆ. ಜೊತೆಗೆ ಕೂದಲಿಗೂ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ.
ಮಂಗಳೂರು, ಫೆಬ್ರವರಿ 23: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 34 ಜಾನುವಾರುಗಳನ್ನು ಮಂಗಳೂರಿನ ಕದ್ರಿ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಜಾನುವಾರು ಸಾಗಾಟ ಬಗ್ಗೆ ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರ್ಯಾಚರಣೆ ನಡೆಸಿರುವ ಖಾಕಿ ತಂಡ ಜಾಲವನ್ನು ಭೇದಿಸಿದೆ. ಜಾನುವಾರುಗಳ ಕಾಲುಗಳನ್ನು ಹಗ್ಗದಿಂದ ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಈ ವೇಳೆ ಕಂಡುಬಂದಿದ್ದು, ಕೇರಳದ ಕಸಾಯಿಖಾನೆಗೆ ಇವುಗಳನ್ನು ಸಾಗಿಸಲಾಗುತ್ತಿತ್ತು. ಪ್ರಕರಣ ಸಂಬಂಧ ದಸ್ತಗೀರ್ ಸಾಬ್, ಖತಿಪ್ ಪಾಷಾ ಮತ್ತು ಅಯೂಬ್ ಖಾನ್ ಎಂಬವರನ್ನು ಬಂಧಿಸಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಿಂದ ಆರೋಪಿಗಳು ಜಾನುವಾರು ತಂದಿದ್ದರು ಎನ್ನಲಾಗಿದ್ದು, ಬಂಧಿತರ ವಿಚಾರಣೆ ತೀವ್ರಗೊಂಡಿದೆ. ಶಿರಾಳಕೊಪ್ಪದ ಒಂದೇ ಕಡೆಯಿಂದ ಜಾನುವಾರು ತಂದಿರುವುದಾಗಿ ಆರೋಪಿಗಳು ಹೇಳುತ್ತಿದ್ದರೂ, ಬೇರೆ ಬೇರೆ ಕಡೆ ರೈತರಿಂದ ಜಾನುವಾರು ಖರೀದಿಸಿ ಸಾಗಾಟ ಮಾಡುತ್ತಿದ್ದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಬಂಧಿತ ಮೂವರೂ ಸಹ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮೂಲದವರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಕರಾವಳಿ ಭಾಗದಲ್ಲಿ ನಿರಂತರವಾಗಿ ಅಕ್ರಮ ಗೋ ಸಾಗಾಟ ಆಗ್ತಿದೆ. ಬಿಜೆಪಿ ಸರ್ಕಾರ ಇದ್ದಾಗ ಅಕ್ರಮ ಗೋ ಸಾಗಾಟ ತಡೆಗೆ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅಕ್ರಮ ಗೋ ಸಾಗಾಟಗಾರರಿಗೆ ಸಹಕಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ನಮ್ಮ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ಗೋವನ್ನು ರಕ್ಷಿಸಿದ್ದಾರೆ. ದಿನನಿತ್ಯ ಪೊಲೀಸ್ ಇಲಾಖೆ ಈ ರೀತಿ ಅಕ್ರಮ ಗೋ ಸಾಗಾಟ ತಡೆಯುವ ಧೈರ್ಯ ಮಾಡಬೇಕು. ಡ್ರಗ್ಸ್ ಮುಕ್ತ ಮಂಗಳೂರು ಮಾಡಿದ ಹಾಗೆ ಅಕ್ರಮ ಗೋ ಸಾಗಾಟ ತಡೆಗೆ ಕ್ರಮ ಕೈಗೊಳ್ಳಬೇಕು. ತಲವಾರು ಹಿಡಿದುಕೊಂಡು ಮನೆ ಮನೆಗೆ ಬಂದು ಗೋ ಕಳ್ಳತನ ಮಾಡ್ತಿದ್ದಾರೆ. ಇಂತವರನ್ನು ಬೇರು ಸಹಿತ ಕಿತ್ತೆಸೆಯಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಬಗ್ಗೆ ಕಿಡಿ ಕಾರಿರುವ ಮಂಗಳೂರು ಉತ್ತರ ಶಾಸಕ ಡಾ .ವೈ. ಭರತ್ ಶೆಟ್ಟಿ, ಕಾಯ್ದೆ ಜಾರಿಯಲ್ಲಿದ್ದರೂ ಯಾವುದೇ ಹೆದರಿಕೆಯಿಲ್ಲದೆ ಜಾನುವಾರುಗಳ ಸಾಗಾಟ ಮಾಡಲಾಗಿದೆ. ಸಂಘಟನೆಯವರು ವಾಹನ ತಡೆದ್ರೆ ಅವರ ಮೇಲೆ ಕೇಸು ಹಾಕ್ತಾರೆ. ಸಾರ್ವಜನಿಕರು, ಸಂಘಟನೆ ಕಾರ್ಯಕರ್ತರು ಕೈ ಕಟ್ಟಿ ಕೂರಬೇಕಾ? ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, (ಫೆಬ್ರವರಿ 23): ತರಕಾರಿಗಳು (Vegetables) ಆರೋಗ್ಯಕ್ಕೆ ಪ್ರಯೋಜನದ ಜೊತೆಗೆ ಕೆಲವು ಅಡ್ಡ ಪರಿಣಾಮವನ್ನೂ ಉಂಟು ಮಾಡುತ್ತವೆ. ಹೌದು… ಕರ್ನಾಟಕ ತರಕಾರಿಗಳಲ್ಲಿ ಭಾರೀ ಲೋಹ ಹಾಗೂ ಕೀಟನಾಶಕಗಳ ಅಂಶ ಪತ್ತೆಯಾಗಿದ್ದು, ಹಿಂದಿನ ವರದಿಯು ಮತ್ತೊಮ್ಮೆ ದೃಢಪಟ್ಟಿದೆ. CPCB ಸಮಿತಿಯ FSSAI-ಮಾನ್ಯತೆ ಪಡೆದ ಪ್ರಯೋಗಾಲಯ ಪರೀಕ್ಷೆಯಲ್ಲಿ, 72 ಮಾದರಿಗಳಲ್ಲಿ 19 ಸೀಸದ ಅಂಶದ ಮಿತಿ ಮೀರಿವೆ. ಕೆಲ ತರಕಾರಿಗಳಲ್ಲಿ 20 ಪಟ್ಟು ಹೆಚ್ಚು ಸೀಸ, ನಿಷಿದ್ಧ ಕೀಟನಾಶಕಗಳು ಪತ್ತೆಯಾಗಿವೆ.
ಈ ಬಗ್ಗೆ ಆಹಾರ ತಜ್ಞೆ ಕೀರ್ತಿ ಹಿರಿಸಾವೆ ಮಾತನಾಡಿ, ಬೆಂಗಳೂರು ನಗರಕ್ಕೆ ವಿವಿಧ ಕಡೆ ಗಳಿಂದ ತರಕಾರಿಗಳು ಬರುತ್ತೆ. FSSAI ವರದಿ ಪ್ರಕಾರ ಕಲುಷಿತವಾಗಿರುವುದು ಕಂಡು ಬಂದಿದೆ.ಬೆಂಗಳೂರಿಗೆ ಬೇರೆ ಬೇರೆ ಕಡೆಯಿಂದ ತರಕಾರಿಗಳು ಬರುತ್ತವೆ. ಕೆಲವೊಂದು ತರಕಾರಿಗಳಲ್ಲಿ ಸೀಸದ ಪ್ರಮಾಣ ಹೆಚ್ಚಾಗಿರುತ್ತೆ . ಕೆಲವು ತರಕಾರಿಗಳಲ್ಲಿ ಕಡಿಮೆ ಇರುತ್ತೆ. ತಿನ್ನೋ ಅನ್ನವನ್ನು ಗೊಂದಲದಲ್ಲಿ ತಿನ್ನಬಾರದು. ಕೆಲವು ಪೆಷ್ಠಿಸೈಟ್, ಫರ್ಟಿಲಿಸರ್ಸ್ ಜಾಸ್ತಿ ಹಾಕಿದಾಗ ಮೆಟಲ್ ಪ್ರಮಾಣ ಹೆಚ್ಚಾಗುತ್ತೆ.ಇಂಡಸ್ಟ್ರೀಯಲ್ ವೇಸ್ಟ್ ನಿಂದ ಮೆಟಲ್ ಪ್ರಮಾಣ ಹೆಚ್ಚಾಗಬಹುದು.ಇಂಡಸ್ಟ್ರೀಯಲ್ ವೇಸ್ಟ್ ಗಳನ್ನ ನದಿಗೆ, ಕೆರೆ ಗಳಿಗೆ ಹರಿ ಬಿಡೋದ್ರಿಂದ ಜಾಸ್ತಿ ಆಗುತ್ತೆ. ಕಲುಷಿತ ನೀರನ್ನ ತರಕಾರಿಗಳಿಗೆ ಹಾಕಿದಾಗ ಈ ರೀತಿ ಆಗುತ್ತೆ. ತರಕಾರಿಗಳಿಗೆ ಸರಿಯಾದ ನೀರನ್ನ ಹಾಕಬೇಕು. ಗಲೀಜು ನೀರು ಸೇರ್ಕೊಂಡಾಗ ಮೆಟಲ್ ಪ್ರಮಾಣ ಹೆಚ್ಚಾಗಬಹುದು. ಆಹಾರದಲ್ಲೂ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತೆ. ಕಲುಷಿತ ನೀರಿನಿಂದನೇ ಈ ರೀತಿಯ ಅಂಶ ಕಂಡು ಬರುತ್ತೆ ಎಂದು ಮಾಹಿತಿ ನೀಡಿದರು.
ಖ್ಯಾತ ನಿರ್ದೇಶಕ ಮಣಿರತ್ನಂ (Mani Ratnam) ಅವರ ಮುಂದಿನ ಚಿತ್ರದ ಬಗ್ಗೆ ಸಿನಿರಂಗದಲ್ಲಿ ಒಂದಷ್ಟು ಚರ್ಚೆ ನಡೆಯುತ್ತಿದೆ. ‘ಥಗ್ ಲೈಫ್’ ಸಿನಿಮಾಗೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ, ಮಣಿರತ್ನಂ ಈಗ ಪ್ರೇಮಕಥೆಯೊಂದನ್ನು ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ದಕ್ಷಿಣ ಭಾರತದ ಪ್ರತಿಭಾವಂತ ಕಲಾವಿದರಾದ ವಿಜಯ್ ಸೇತುಪತಿ (Vijay Sethupathi) ಮತ್ತು ಸಾಯಿ ಪಲ್ಲವಿ ಮೊದಲ ಬಾರಿಗೆ ಜೋಡಿಯಾಗಿ ನಟಿಸಲಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ.
ಮೂಲಗಳ ಪ್ರಕಾರ, ಮಣಿರತ್ನಂ ಈ ಕಥೆಯನ್ನು ಮೊದಲು ನಟ ಧನುಷ್ ಅವರಿಗೆ ವಿವರಿಸಿದ್ದರು. ಧನುಷ್ ಅವರಿಗೆ ಕಥೆ ಇಷ್ಟವಾಗಿದ್ದರೂ, ಸಂಭಾವನೆಯ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಅವರು ಈ ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಆನಂತರ ಸಿಂಬು ಹಾಗೂ ಧ್ರುವ್ ವಿಕ್ರಮ್ ಅವರ ಹೆಸರುಗಳು ಕೇಳಿಬಂದರೂ, ಅಂತಿಮವಾಗಿ ವಿಜಯ್ ಸೇತುಪತಿ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.
‘ಚೆಕ್ಕ ಚಿವಂತ ವಾನಂ’ ನಂತರ ಮಣಿರತ್ನಂ ಮತ್ತು ಸೇತುಪತಿ ಜೊತೆಯಾಗಿ ಮಾಡಲಿರುವ ಎರಡನೇ ಸಿನಿಮಾ ಇದಾಗಿದೆ. ಈ ಸಿನಿಮಾಗೆ ನಾಯಕಿಯಾಗಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದು, ಇದು ಮಣಿರತ್ನಂ ನಿರ್ದೇಶನದಲ್ಲಿ ಅವರು ನಟಿಸುತ್ತಿರುವ ಮೊದಲ ಸಿನಿಮಾ. ಈ ಹಿಂದೆ ರುಕ್ಮಿಣಿ ವಸಂತ್ ಅವರ ಹೆಸರು ಕೇಳಿಬಂದಿತ್ತಾದರೂ, ಅಂತಿಮವಾಗಿ ಸಾಯಿ ಪಲ್ಲವಿ ಅವರು ಆಯ್ಕೆ ಆಗಿದ್ದಾರೆ.
ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಇಬ್ಬರೂ ಅದ್ಭುತ ಕಲಾವಿದರು ಎಂಬುದು ಈಗಾಗಲೇ ಸಾಬೀತಾಗಿದೆ. ಅವರಿಬ್ಬರ ಫ್ರೆಶ್ ಕಾಂಬಿನೇಷನ್ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಈ ಸಿನಿಮಾವನ್ನು ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆಯು ನಿರ್ಮಾಣ ಮಾಡಲಿದೆ. ಆಸ್ಕರ್ ಪ್ರಶಸ್ತಿ ವಿಜೇತ ಮ್ಯೂಸಿಕ್ ಕಂಪೋಸರ್ ಎ.ಆರ್. ರೆಹಮಾನ್ ಅವರು ಸಂಗೀತ ನೀಡಲಿದ್ದಾರೆ.
ಈ ಸಿನಿಮಾಗೆ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆಯಿದೆ. ಸಿನಿಪ್ರೇಮಿಗಳಿಗೆ ಮಣಿರತ್ನಂ ಅವರ ದೃಶ್ಯ ವೈಭವದ ಜೊತೆಗೆ ರೆಹಮಾನ್ ಅವರ ಮೆಲೋಡಿ ಹಾಡುಗಳ ರಸದೌತಣ ಸಿಗುವುದರಲ್ಲಿ ಸಂಶಯವಿಲ್ಲ. ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಅವರ ಕೆಮಿಸ್ಟ್ರಿ ತೆರೆಯ ಮೇಲೆ ಹೇಗೆ ಮೂಡಿಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.