ಟೋಕಿಯೋ, ಫೆಬ್ರವರಿ 23: ಈ ಕೋತಿ ಮರಿ ಹುಟ್ಟಿನಿಂದಲೇ ಒಬ್ಬಂಟಿ, ಅದು ತೂಕ ಕಡಿಮೆ ಇದ್ದಿದ್ದರಿಂದ ತಾಯಿಗೂ ಅದನ್ನು ಸಾಕಲು ತಿಳಿಯದೆ ಬಿಟ್ಟು ಹೋಗಿತ್ತು. ಜಪಾನ್ನ ಮೃಗಾಲಯದಲ್ಲಿ ಅದನ್ನು ಬಿಡಲಾಗಿತ್ತು. ಆದರೆ ಅದಕ್ಕೆ ಸ್ನೇಹಿತರು ಯಾರೂ ಇರಲಿಲ್ಲ, ಕೋತೊಯನ್ನೇ ಹೋಲುವ ಗೊಂಬೆಯನ್ನೇ ಅದು ತನ್ನ ಕುಟುಂಬವನ್ನಾಗಿ ಮಾಡಿಕೊಂಡಿತ್ತು. ಉಳಿದ ಕೋತಿಗಳೆಲ್ಲಾ ಅದರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಬಳಿಕ ಅದಕ್ಕೆ ಕೆಲವು ಕೋತಿಗಳು ಫ್ರೆಂಡ್ಶಿಪ್ ಮಾಡಿವೆ ಎನ್ನುವ ಮಾಹಿತಿಯೂ ಇದೆ. @ Pediavenir ಎಂಬ ಎಕ್ಸ್ ಅಕೌಂಟ್ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಆದರೆ ಈಗ ಹೇಳಲು ಹೊರಟಿರುವ ವಿಚಾರ ಅದಲ್ಲ, ಆ ಮರಿಗೆ ಮೊದಲು ತೊಂದರೆ ಕೊಟ್ಟಿದ್ದ ಕೋತಿ ಮೇಲೆ ಸೇಡು ತೀರಿಸಿಕೊಳ್ಳುವ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಈ ಮರಿ ದೊಡ್ಡ ಕೋತಿಗೆ ಪಂಚ್ ಕೊಡುತ್ತಿರುವುದು, ಹಾರಿ ಒದೆಯುತ್ತಿರುವುದನ್ನು ಕಾಣಬಹುದು. ಆದರೆ ಇದು ಸತ್ಯ ಅಲ್ಲ ಇದು ಎಐ ರಚಿತ ವಿಡಿಯೋ ಆಗಿದ್ದು, ಮರಿ ಹೀಗೆ ಸೇಡು ತೀರಿಸಿಕೊಂಡರೆ ಹೇಗಿರುತ್ತೆ ಎಂಬುದಕ್ಕೆ ಈ ವಿಡಿಯೋ ಕ್ರಿಯೇಟ್ ಮಾಡಲಾಗಿದೆ. ಪಂಚ್ ಜುಲೈ 26, 2025 ರಂದು ಜನಿಸಿದ್ದು, ಕೇವಲ 500 ಗ್ರಾಂ ತೂಕವಿತ್ತು. ಮೈನಿಚಿ ಶಿಂಬುನ್ ವರದಿ ಮಾಡಿದಂತೆ, ಪಂಚ್ನ ತಾಯಿ ಮೊದಲ ಬಾರಿಗೆ ಗರ್ಭ ಧರಿಸಿತ್ತು, ಜನನದ ನಂತರ ಅವನನ್ನು ನೋಡಿಕೊಳ್ಳಲಿಲ್ಲ.
ಬೆಂಗಳೂರು, ಫೆಬ್ರವರಿ 23:ಬಿಕ್ಲು ಶಿವಕೊಲೆ ಪ್ರಕರಣದ ಆರೋಪಿ ಪ್ರದೀಪ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ತನ್ನ ಸಹ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಕೊಲೆ ಆರೋಪದಡಿ ಬಂಧಿತನಾಗಿ ಜೈಲೂಟ ಸವಿಯುತ್ತಿದ್ದರೂ ಈತ ಮತ್ತೆ ತನ್ನ ರೌಡಿಸಂ ಪ್ರದರ್ಶಿಸಿದ್ದಾನೆ ಎನ್ನಲಾಗಿದೆ. ಫೆಬ್ರವರಿ 18ರಂದು ಸುರೇಶ್ ಹಾಗೂ ಆದಿತ್ ಮಧುಕಿರಣ್ ಎಂಬುವವರ ಮೇಲೆ ಪ್ರದೀಪ್ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ಸುರೇಶ್ ಮತ್ತು ಆದಿತ್ ಮಧುಕಿರಣ್ ಅವರ ಮೂಗು ಮತ್ತು ಕಪಾಳಕ್ಕೆ ಪ್ರದೀಪ್ ಹೊಡೆದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ನಾನ್-ಕಾಗ್ನಿಜೆಬಲ್ ರಿಪೋರ್ಟ್ (ಎನ್‌ಸಿಆರ್) ಅನ್ನು ದಾಖಲಿಸಿದ್ದಾರೆ.
‘ಧುರಂಧರ್ 2’ vs ‘ಟಾಕ್ಸಿಕ್’ ಫೈಟ್ಗೆ ವೇದಿಕೆ ಸಿದ್ಧವಾಗುತ್ತಿದೆ. ಮಾರ್ಚ್ 19ರಂದು ಎರಡೂ ಸಿನಿಮಾಗಳು ಮುಖಾ ಮುಖಿ ಆಗುತ್ತಿವೆ. ಈ ಎರಡು ಸಿನಿಮಾಗಳ ಪೈಕಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಹೀಗಿರುವಾಗಲೇ, ‘ಟಾಕ್ಸಿಕ್’ ಸಿನಿಮಾಗೆ (Toxic Movie) ‘ಧುರಂಧರ್ 2’ ಚಿತ್ರಕ್ಕಿಂತ ಹೆಚ್ಚುವರಿಯಾಗಿ 1200 ಸ್ಕ್ರೀನ್ಗಳು ಸಿಗಲಿವೆ ಎಂದು ಹೇಳಲಾಗುತ್ತಾ ಇದೆ.
‘ಧುರಂಧರ್ 2’ ಸಿನಿಮಾ ಬಗ್ಗೆ ಒಂದು ವರ್ಗದ ಜನರಿಗೆ ನಿರೀಕ್ಷೆ ಇದೆ. ಈಗಾಗಲೇ ರಿಲೀಸ್ ಆಗಿರುವ ಮೊದಲ ಪಾರ್ಟ್ ಹಲ್ಚಲ್ ಎಬ್ಬಿಸಿರುವುದರಿಂದ ಎರಡನೇ ಪಾರ್ಟ್ ಇಷ್ಟ ಆಗಬಹುದು ಎಂದು ಹೇಳಲಾಗುತ್ತಾ ಇದೆ. ‘ಟಾಕ್ಸಿಕ್’ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಲು ಕಾರಣ ಆಗಿದ್ದು ಯಶ್. ‘ಕೆಜಿಎಫ್ 2’ ಚಿತ್ರದ ಬಳಿಕ ಅವರು ಮತ್ತೊಂದು ಹಂತಕ್ಕೆ ಹೋಗಿದ್ದಾರೆ. ಈಗ ‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್ ದಾಸ್ ಜೊತೆ ಅವರು ಕೂಡ ಕಥೆ ಬರೆದು, ಸಿನಿಮಾ ನಿರ್ಮಾಣದಲ್ಲಿ ಅವರು ಕೈ ಜೋಡಿಸಿದ್ದಾರೆ.
ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ‘ಟಾಕ್ಸಿಕ್’ ಚಿತ್ರಕ್ಕೆ ಭಾರತಾದ್ಯಂತ ಸುಮಾರು 5,500 ಪರದೆಗಳು ಸಿಗುವ ಸಾಧ್ಯತೆ ಇದೆ. ‘ಧುರಂಧರ್ 2’ ಚಿತ್ರಕ್ಕೆ 4,300 ಪರದೆಗಳು ಸಿಗಲಿವೆ ಎಂದು ಹೇಳಲಾಗುತ್ತಾ ಇದೆ. ಹೀಗಾದಲ್ಲಿ ಯಶ್ ಚಿತ್ರಕ್ಕೆ ಹೆಚ್ಚಿನ ಮೈಲೇಜ್ ಸಿಗಲಿದೆ.
#Dhurandhar2 is expected to release on around 4,300 screens across India.
Meanwhile, Toxic is targeting a massive 5,500 screens nationwide.
ಮೊದಲ ದಿನದ ಕಲೆಕ್ಷನ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ‘ಧುರಂಧರ್ 2’ ಸಿನಿಮಾ ಮೊದಲ ದಿನ ಭಾರತದಲ್ಲಿ 80-100 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ 260 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಹಾಗಾದಲ್ಲಿ ಯಶ್ ಚಿತ್ರಕ್ಕೆ ದೊಡ್ಡ ಗೆಲುವು ಸಿಕ್ಕಂತೆ ಆಗಲಿದೆ.
ನವದೆಹಲಿ, ಫೆಬ್ರುವರಿ 23: ಐಡಿಎಫ್ಸಿ ಫಸ್ಟ್ ಬ್ಯಾಂಕ್ನ (IDFC First Bank) ಚಂಡೀಗಡ ಶಾಖೆಯಲ್ಲಿ 590 ಕೋಟಿ ರೂ ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಈ ಬ್ಯಾಂಕ್ನ ಷೇರುಗಳು ತರಗೆಲೆಯಲ್ಲಿ ಉದುರುತ್ತಿವೆ. ಸೋಮವಾರ ಈ ಬ್ಯಾಂಕ್ನ ಷೇರುಬೆಲೆ ಶೇ. 20ರ ಕೆಳಗಿನ ಮಿತಿಯಷ್ಟು ಕುಸಿದಿದೆ. ಇದರ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಒಂದೇ ದಿನ 14,000 ಕೋಟಿ ರೂಗೂ ಅಧಿಕ ಮೊತ್ತದ ನಷ್ಟ ಆಗಿದೆ.
ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಈ ಪ್ರಕರಣವೇನು?
ಐಡಿಎಫ್ಸಿ ಫಸ್ಟ್ ಬ್ಯಾಂಕ್ನ ಚಂಡೀಗಡ ಶಾಖೆಯ ಸಿಬ್ಬಂದಿಯಿಂದ ವಂಚನೆ ನಡೆದಿರುವ ಆರೋಪ ಇದೆ. ಹರ್ಯಾಣ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಸಂಸ್ಥೆಗಳ ಅಕೌಂಟ್ಗಳಲ್ಲಿ ಅನಧಿಕೃತ ವಹಿವಾಟುಗಳು ನಡೆದಿರುವುದು ಬೆಳಕಿಗೆ ಬಂದಿದೆ. ಸರ್ಕಾರವು ಈ ಅಕೌಂಟ್ಗಳನ್ನು ಮುಚ್ಚಲು ಹೋದಾಗ ಅಕೌಂಟ್ ಬ್ಯಾಲನ್ಸ್ನಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ಆಗ ಒಟ್ಟು 590 ಕೋಟಿ ರೂ ಹಣಕಾಸು ಅಕ್ರಮ ನಡೆದಿರುವುದು ಗೊತ್ತಾಗಿದೆ. ಈ ಬ್ಯಾಂಕ್ನ ಮೂರನೇ ಕ್ವಾರ್ಟರ್ನ ನಿವ್ವಳ ಆದಾಯವೇ 503 ಕೋಟಿ ರೂ ಇದೆ. ಅದಕ್ಕಿಂತಲೂ ಹೆಚ್ಚಿನ ಮೊತ್ತದ ಅಕ್ರಮವನ್ನು ಕೆಲ ಸಿಬ್ಬಂದಿ ಎಸಗಿದ್ದಾರೆ.
ಸದ್ಯ ಐಡಿಎಫ್ಸಿ ಬ್ಯಾಂಕ್ನ ಚಂಡೀಗಡ ಬ್ರ್ಯಾಂಚ್ನಿಂದ ಅನಧಿಕೃತವಾಗಿ ನಡೆದಿರುವ ವಹಿವಾಟುಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಈ ಹಣವನ್ನು ಫ್ರೀಜ್ ಮಾಡುವಂತೆ ಸಂಬಂಧಿಸಿದ ಎಲ್ಲಾ ಬ್ಯಾಂಕುಗಳಿಗೂ ಮನವಿ ಮಾಡಲಾಗಿದೆ. ಎಷ್ಟು ಸಾಧ್ಯವೋ ಎಷ್ಟು ಹಣ ರಿಕವರ್ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಹರ್ಯಾಣ ಸರ್ಕಾರವು ತನ್ನ ಎಂಪ್ಯಾನಲ್ ಪಟ್ಟಿಯಿಂದ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಅನ್ನು ತೆಗೆದುಹಾಕಿದೆ. ತನ್ನ ಅಧೀನದ ಇಲಾಖೆಗಳು ಈ ಬ್ಯಾಂಕ್ನಲ್ಲಿ ಹೊಂದಿರುವ ಅಕೌಂಟ್ಗಳನ್ನು ಮುಚ್ಚುವಂತೆಯೂ ಸರ್ಕಾರ ತಿಳಿಸಿದೆ.
ಐಡಿಎಫ್ಸಿ ಫಸ್ಟ್ ಬ್ಯಾಂಕ್ ಈ ಅಕ್ರಮದ ಬಗ್ಗೆ ತನ್ನ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ. ಬ್ಯಾಂಕ್ನ ಸಿಸ್ಟಂನಲ್ಲಿ ಯಾವುದೇ ಲೋಪ ಇಲ್ಲ. ನಿರ್ದಿಷ್ಟ ಬ್ರ್ಯಾಂಚ್ನ ಕೆಲ ಸಿಬ್ಬಂದಿ ಹಾಗೂ ನಿರ್ದಿಷ್ಟ ಖಾತೆಗಳಿಗೆ ಮಾತ್ರವೇ ಈ ಅಕ್ರಮ ಸೀಮಿತವಾಗಿದೆ ಎಂದು ಬ್ಯಾಂಕ್ ಹೇಳಿಕೊಂಡಿದೆ. ಹಾಗೆಯೇ, ಬ್ಯಾಂಕ್ ಆಂತರಿಕ ತನಿಖೆ ನಡೆಸಿದ್ದು, ಅಕ್ರಮ ಎಸಗಿದ ಶಂಕೆಯ ಮೇಲೆ ನಾಲ್ವರು ಬ್ಯಾಂಕ್ ಅಧಿಕಾರಿಗಳನ್ನು ಅಮಾನತಿನಲ್ಲಿ ಇಡಲಾಗಿದೆ. ಬ್ಯಾಂಕ್ನಿಂದ ಪೊಲೀಸ್ ದೂರು ಕೂಡ ಸಲ್ಲಿಕೆಯಾಗಿದೆ. ಸರ್ಕಾರಿ ಆಡಿಟಿಂಗ್ಗೆ ಸೂಚಿಸಲಾಗಿದೆ. ಸ್ವತಂತ್ರವಾದ ಫೋರೆನ್ಸಿಕ್ ತನಿಖೆ ನಡೆಸುವಂತೆ ಕೆಪಿಎಂಜಿ ಸಂಸ್ಥೆಗೂ ತಿಳಿಸಲಾಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿ ಸರ್ಕಾರದ ಷೇರುಪಾಲು ಅಧಿಕ
ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿ ಅತಿಹೆಚ್ಚು ಷೇರುಮಾಲಿಕತ್ವ ಹೊಂದಿರುವುದು ಸರ್ಕಾರವೇ. ಶೇ. 7.75 ಷೇರುಪಾಲು ಹೊಂದಿದೆ. 66 ಕೋಟಿಗೂ ಅಧಿಕ ಷೇರುಗಳನ್ನು ಸರ್ಕಾರ ಹೊಂದಿದೆ. ಎಲ್ಐಸಿ, ಟಾಟಾ ಎಐಎ ಲೈಫ್ ಇನ್ಷೂರೆನ್ಸ್, ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್, ಎಚ್ಡಿಎಫ್ಸಿ ಲೈಫ್ ಇನ್ಷೂರೆನ್ಸ್ ಸಂಸ್ಥೆಗಳು ಗಣನೀಯ ಪ್ರಮಾಣದ ಷೇರುಪಾಲು ಹೊಂದಿವೆ. ರೀಟೇಲ್ ಹೂಡಿಕೆದಾರರ ಬಳಿ 129 ಕೋಟಿಗೂ ಅಧಿಕ ಷೇರುಗಳಿವೆ.
ಕಾಂಗ್ರೆಸ್‌ನಲ್ಲಿ ರೂಪುಗೊಳ್ಳುತ್ತಿದೆಯಾ ಮತ್ತೊಂದು ಪವರ್ ಸೆಂಟರ್!Image Credit source: tv9
ಬೆಂಗಳೂರು, ಫೆಬ್ರವರಿ 23: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಸಿಎಂ ಸಿದ್ದರಾಮಯ್ಯ ಬಣ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣಗಳ ನಡುವೆ ಅಧಿಕಾರ ಹಂಚಿಕೆ ಚರ್ಚೆ ಮತ್ತೆ ಜೋರಾಗಿರುವ ಸಂದರ್ಭದಲ್ಲೇ ಮತ್ತೊಂದು ಪವರ್ ಸೆಂಟರ್ ರೂಪುಗೊಳ್ಳುತ್ತಿದೆಯಾ ಎಂಬ ಅನುಮಾನ ಬಲವಾಗಿದೆ. ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮತ್ತೊಂದು ಪವರ್ ಸೆಂಟರ್ ರೂಪದಲ್ಲಿ ಮುನ್ನುಗ್ಗುತ್ತಿರುವ ಲಕ್ಷಣ ಕಾಣಿಸಿದೆ. ಹೈಕಮಾಂಡ್ ಮಟ್ಟದಲ್ಲೂ ಬಲ ಪ್ರದರ್ಶನ ಮಾಡಲು ಸತೀಶ್ ಜಾರಕಿಹೊಳಿ ಮುಂದಾಗಿರುವುದು ಇತ್ತೀಚಿನ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ.
ಅಂತಾರಾಜ್ಯ ಪ್ರವಾಸಕ್ಕೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಸಜ್ಜು
ಆಪ್ತ ಶಾಸಕರು ಹಾಗೂ ಆಪ್ತ ಡಿಸಿಸಿ ಅಧ್ಯಕ್ಷರೊಂದಿಗೆ ದೆಹಲಿಗೆ ಎರಡು ಬಾರಿ ಭೇಟಿ ನೀಡಿರುವ ಅವರು, ಬಜೆಟ್ ಅಧಿವೇಶನದ ಆಸುಪಾಸಿನಲ್ಲಿ ಮತ್ತೊಮ್ಮೆ ದೆಹಲಿಗೆ ತೆರಳಿದ್ದಾರೆ. ಇದಲ್ಲದೆ, ಮತ್ತೊಂದು ಸುತ್ತಿನ ಅಂತಾರಾಜ್ಯ ಪ್ರವಾಸಕ್ಕೂ ಬೆಂಬಲಿಗರು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈ ಪ್ರವಾಸಗಳ ಮೂಲಕ ಪರ್ಯಾಯ ನಾಯಕತ್ವದ ಸಂದೇಶ ರವಾನಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬರುತ್ತಿವೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೂ ಕಣ್ಣು
ಕೆಪಿಸಿಸಿ ಅಧ್ಯಕ್ಷ ಸ್ಥಾನ ವಿಚಾರದಲ್ಲೂ ಸತೀಶ್ ಪ್ರಯತ್ನ ಆರಂಭಿಸಿರುವುದು ಕುತೂಹಲ ಹೆಚ್ಚಿಸಿದೆ. ಮೇ ತಿಂಗಳಲ್ಲಿ ರಾಜ್ಯ ಸರ್ಕಾರ ಮೂರು ವರ್ಷ ಪೂರೈಸಲಿರುವ ಹಿನ್ನೆಲೆ, ರಾಜ್ಯ ರಾಜಕೀಯದಲ್ಲಿ ಸಹಜವಾಗಿ ಚುನಾವಣಾ ವಾತಾವರಣ ರೂಪುಗೊಳ್ಳುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಪರ್ಯಾಯ ನಾಯಕತ್ವದ ರೂಪರೇಖೆ ಸಿದ್ಧಪಡಿಸುವ ಯತ್ನವೇ ಈ ಚಟುವಟಿಕೆಗಳ ಹಿಂದೆ ಇದೆ ಎನ್ನಲಾಗುತ್ತಿದೆ.
ಇನ್ನೊಂದೆಡೆ, ನಾಯಕತ್ವ ಬದಲಾವಣೆ ಗೊಂದಲಗಳ ನಡುವೆ ಸಿಎಂ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆಗಳತ್ತ ಗಮನಹರಿಸಿದ್ದಾರೆ. ಸ್ವಲ್ಪ ವಿರಾಮದ ನಂತರ ಮತ್ತೆ ಮ್ಯಾರಥಾನ್ ಬಜೆಟ್ ಸಭೆಗಳನ್ನು ಆರಂಭಿಸಿರುವ ಅವರು, ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಆಡಳಿತ ಪಕ್ಷದ ಪರಿಶಿಷ್ಟ ಪಂಗಡ ಶಾಸಕರು ಮತ್ತು ಮುಖಂಡರು, ದಲಿತ ಸಂಘರ್ಷ ಸಮಿತಿಯ ನಾಯಕರು ಹಾಗೂ ಒಬಿಸಿ ಸಚಿವರು ಮತ್ತು ಮುಖಂಡರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಾಗುತ್ತಿದೆ.
ಗೃಹ ಕಚೇರಿ ಕೃಷ್ಣದಲ್ಲಿ ನಡೆಯುತ್ತಿರುವ ಈ ಸಭೆಗಳು ಮಾರ್ಚ್ 6ರಂದು ಮಂಡಿಸಲಿರುವ ಐತಿಹಾಸಿಕ ಬಜೆಟ್‌ಗೆ ಪೂರ್ವಭಾವಿ ಸಿದ್ಧತೆ ಎಂದು ತಿಳಿದುಬಂದಿದೆ. ಪಕ್ಷದ ಒಳರಾಜಕೀಯ ಚರ್ಚೆಗಳು ಒಂದೆಡೆ ನಡೆಯುತ್ತಿದ್ದರೆ, ಆಡಳಿತ ಕಾರ್ಯಚಟುವಟಿಕೆಗಳತ್ತ ಸಿಎಂ ಗಮನ ಹರಿಸಿರುವುದು ಮತ್ತೊಂದು ರಾಜಕೀಯ ಸಂದೇಶವನ್ನೇ ನೀಡುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
T20 World Cup 2026: ಟಿ20 ವಿಶ್ವಕಪ್ನಲ್ಲಿ ಆಫ್ ಸ್ಪಿನ್ನರ್‌ಗಳ ವಿರುದ್ಧ ಟೀಮ್ ಇಂಡಿಯಾದ ತಿಣುಕಾಟ ಮುಂದುವರೆದಿದೆ. ಈ ತಿಣುಕಾಟವನ್ನೇ ಇದಿಗ ಎದುರಾಳಿ ತಂಡಗಳು ಅಸ್ತ್ರವಾಗಿ ಪ್ರಯೋಗಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯ. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಪರ ಮೊದಲ ಓವರ್ ಎಸೆದಿದ್ದು ಐಡೆನ್ ಮಾರ್ಕ್ರಾಮ್. ಪಾರ್ಟ್ ಟೈಮ್ ಆಫ್ ಸ್ಪಿನ್ನರ್ ಆಗಿರುವ ಮಾರ್ಕ್ರಾಮ್ ಇಶಾನ್ ಕಿಶನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಇದಕ್ಕೂ ಮುನ್ನ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಸಲ್ಮಾನ್ ಅಲಿ ಅಘಾ ಮೊದಲ ಓವರ್ ಎಸೆದಿದ್ದರು. ಅಲ್ಲದೆ ಅಭಿಷೇಕ್ ಶರ್ಮಾ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಸಲ್ಮಾನ್ ಅಲಿ ಅಘಾ ಕೂಡ ಪಾರ್ಟ್ ಟೈಮ್ ಆಫ್ ಸ್ಪಿನ್ನರ್ ಎಂಬುದು.
ಇನ್ನು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಮೊದಲ ಓವರ್‌ನಲ್ಲೇ ಆರ್ಯನ್ ದತ್ ಔಟ್ ಮಾಡಿದ್ದರು. ಆರ್ಯನ್ ದತ್ ಕೂಡ ಆಫ್ ಸ್ಪಿನ್ನರ್ ಎಂಬುದು ವಿಶೇಷ.
ಆಫ್ ಸ್ಪಿನ್ಗೆ ಆಫ್:
ಕಡಿಮೆ ರನ್ ಗತಿ: ಈ ಟೂರ್ನಿಯಲ್ಲಿ ಆಫ್-ಸ್ಪಿನ್ ವಿರುದ್ಧ ಭಾರತದ ಸರಾಸರಿ ರನ್ ಗತಿ ಕೇವಲ 6.23 ರನ್ ಮಾತ್ರ. ಅಂದರೆ ಆಫ್ ಸ್ಪಿನ್ನರ್‌ಗಳ ಓವರ್ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಕೇವಲ 6.23 ರ ಸರಾಸರಿಯಲ್ಲಿ ಮಾತ್ರ ರನ್ ಕಲೆಹಾಕಿದ್ದಾರೆ.
ವಿಕೆಟ್ ನಷ್ಟ: ಕಳೆದ 5 ಪಂದ್ಯಗಳಲ್ಲಿ ಭಾರತ ಕಳೆದುಕೊಂಡ 41 ವಿಕೆಟ್‌ಗಳಲ್ಲಿ 12 ವಿಕೆಟ್‌ಗಳನ್ನು ಆಫ್-ಸ್ಪಿನ್ನರ್‌ಗಳೇ ಪಡೆದಿದ್ದಾರೆ.
ಪಾರ್ಟ್-ಟೈಮ್ ಸ್ಪಿನ್ನರ್: ವಿಶೇಷವೆಂದರೆ, ಐಡೆನ್ ಮಾರ್ಕ್ರಾಮ್ ಮತ್ತು ಸಲ್ಮಾನ್ ಅಲಿ ಅಘಾ ಅವರಂತಹ ಪಾರ್ಟ್-ಟೈಮ್ ಬೌಲರ್‌ಗಳೇ ಭಾರತದ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ದಾಂಡಿಗರ ವೈಫಲ್ಯ:
ಎಡಗೈ ಬ್ಯಾಟರ್‌ಗಳ ಸಮಸ್ಯೆ: ಭಾರತದ ಟಾಪ್ ಆರ್ಡರ್‌ನಲ್ಲಿರುವ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಅವರಂತಹ ಎಡಗೈ ಬ್ಯಾಟರ್‌ಗಳನ್ನು ಗುರಿಯಾಗಿಸಿ ಎದುರಾಳಿ ತಂಡಗಳು ಆಫ್-ಸ್ಪಿನ್ನರ್‌ಗಳನ್ನು ಬಳಸುತ್ತಿವೆ.
ಅಭಿಷೇಕ್ ಶರ್ಮಾ: ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಆಫ್-ಸ್ಪಿನ್ ವಿರುದ್ಧ ರನ್ ಗಳಿಸಲು ಪರದಾಡುತ್ತಿದ್ದು, ಸತತ ವೈಫಲ್ಯ ಅನುಭವಿಸಿದ್ದಾರೆ.
ಇಶಾನ್ ಕಿಶನ್: ಸೌತ್ ಆಫ್ರಿಕಾ ವಿರುದ್ಧದ ಪಂದ್ಯದ ಮೊದಲ ಓವರ್‌ನಲ್ಲೇ ಆಫ್-ಸ್ಪಿನ್ನರ್ ಮಾರ್ಕ್ರಾಮ್‌ಗೆ ವಿಕೆಟ್ ಒಪ್ಪಿಸಿದ್ದರು.
ಸೂರ್ಯಕುಮಾರ್ ಯಾದವ್: ಸಾಮಾನ್ಯವಾಗಿ ವೇಗವಾಗಿ ಆಡುವ ಸೂರ್ಯ ಕೂಡ ಆಫ್-ಸ್ಪಿನ್ನರ್‌ಗಳ ವಿರುದ್ಧ 27 ಎಸೆತಗಳಲ್ಲಿ ಕೇವಲ 28 ರನ್ ಗಳಿಸಿ ತಿಣುಕಾಡಿದ್ದಾರೆ.
ಬದಲಾವಣೆ ಸಾಧ್ಯತೆ:
ಟೀಮ್ ಇಂಡಿಯಾದ ಟಾಪ್-3 ಬ್ಯಾಟರ್ಗಳು, ಅಂದರೆ ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಆಫ್ ಸ್ಪಿನ್ ಎಸೆತಗಳಲ್ಲಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಇಲ್ಲಾ ರನ್ಗಳಿಸಲು ಪರದಾಡುತ್ತಿದ್ದಾರೆ. ಹೀಗಾಗಿ ಝಿಂಬಾಬ್ವೆ ವಿರುದ್ಧದ ಪಂದ್ಯಕ್ಕಾಗಿ ಟಾಪ್-3 ನಲ್ಲಿ ಬದಲಾವಣೆ ಕಂಡು ಬರಲಿದೆ.
ಅಂದರೆ ಈ ಮೂವರು ಎಡಗೈ ದಾಂಡಿಗರಲ್ಲಿ ಒಬ್ಬರನ್ನು ಕೈ ಬಿಟ್ಟು ಅವರ ಬದಲಿಗೆ ಬಲಗೈ ದಾಂಡಿಗನನ್ನು ಕಣಕ್ಕಿಳಿಸಬಹುದು. ಅದರಂತೆ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗುವ ಸಾಧ್ಯತೆಯಿದೆ.
ಸೂಪರ್-8 ಸುತ್ತಿನಲ್ಲಿ ಭಾರತ ತಂಡಕ್ಕೆ ಉಳಿದಿರುವುದು ಕೇವಲ 2 ಮ್ಯಾಚ್ ಮಾತ್ರ. ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಅಂದರೆ ಭಾರತ ತಂಡವು ಸೆಮಿಫೈನಲ್ಗೆ ಪ್ರವೇಶಿಸಬೇಕಿದ್ದರೆ ಮುಂದಿನ ಎರಡು ಮ್ಯಾಚ್ಗಳಲ್ಲೂ ಜಯ ಸಾಧಿಸಬೇಕು. ಅದಕ್ಕೂ ಮುನ್ನ ಟೀಮ್ ಇಂಡಿಯಾ ತನ್ನ ಆಫ್ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಇಟಲಿ, ಫೆಬ್ರವರಿ 23: ರಸ್ತೆ ಬದಿ ತಾವು ಕಸ ಹಾಕಿದ್ರೆ ದಂಡ ಬೀಳುತ್ತೆ ಎಂದು ವ್ಯಕ್ತಿಯೊಬ್ಬ ನಾಯಿಗೆ ಕಸ ಎಸೆಯುವ ಟ್ರೈನಿಂಗ್ ನೀಡಿರುವ ಘಟನೆ ಇಟಲಿಯಲ್ಲಿ ನಡೆದಿದೆ. ಆದರೆ ವಿಪರ್ಯಾವೆಂಸದರೆ ಟ್ರೈನಿಂಗ್ ಕೊಟ್ಟಿದ್ದು, ಡಸ್ಟ್ಬಿನ್ ಒಳಗೆ ಕಸ ಹಾಕುವುದಕ್ಕಲ್ಲ ಬದಲಾಗಿ ರಸ್ತೆ ಪಕ್ಕದಲ್ಲೇ ಎಸೆಯುವುದಕ್ಕೆ. ಕ್ಯಾಟಾನಿಯಾದಲ್ಲಿ, ಕ್ಯಾಮೆರಾ ದಂಡದಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ತನ್ನ ನಾಯಿಗೆ ಕಸ ಎಸೆಯಲು ತರಬೇತಿ ನೀಡಿದ್ದ. ಆ ನಾಯಿ ರಸ್ತೆಬದಿಯಲ್ಲಿ ಚೀಲವನ್ನು ಹೊತ್ತುಕೊಂಡು ಹೋಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಮತ್ತು ಅಧಿಕಾರಿಗಳು ಅಂತಿಮವಾಗಿ ಮಾಲೀಕರನ್ನು ಗುರುತಿಸಿದ್ದಾರೆ.
ಬೆಂಗಳೂರು, ಫೆ.23: ನೈಋತ್ಯ ರೈಲ್ವೆಯು ಬೆಂಗಳೂರು ಮತ್ತು ಗೋವಾದ ಮಡ್ಗಾಂವ್ (Vande Bharat Bengaluru Goa) ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಆದರೆ, ಈ ರೈಲಿನ ಅಂದಾಜು ಪ್ರಯಾಣದ ಸಮಯ ಮತ್ತು ವೇಳಾಪಟ್ಟಿಯ ಬಗ್ಗೆ ಈಗ ಭಾರಿ ಚರ್ಚೆ ಶುರುವಾಗಿದೆ. ವಂದೇ ಭಾರತ್ ರೈಲು ಬೆಂಗಳೂರಿನಿಂದ ಗೋವಾ ತಲುಪಲು ಸುಮಾರು 13 ಗಂಟೆಗಳ ಸಮಯ ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಇದು ಪ್ರೀಮಿಯಂ ರೈಲಿಗೆ ಬಹಳ ದೀರ್ಘ ಸಮಯ ಎಂಬುದು ತಜ್ಞರ ಅಭಿಪ್ರಾಯ. ಜತೆಗೆ ಇದು ಪ್ರಯಾಣಿಕರಿಗೂ ತೊಂದರೆ ಆಗಲಿದೆ.
ಇನ್ನು ರೈಲ್ವೆ ತಜ್ಞ ಸಂಜೀವ್ ದ್ಯಾಮನವರ್ ಅವರ ಪ್ರಕಾರ, ಈ ರೈಲು ಹಗಲು ಹೊತ್ತಿನಲ್ಲಿ ಸಂಚರಿಸಿದರೆ ಪ್ರವಾಸಿಗರು ಇಡೀ ದಿನವನ್ನು ಪ್ರಯಾಣದಲ್ಲೇ ಕಳೆಯಬೇಕಾಗುತ್ತದೆ. ಬೆಳಿಗ್ಗೆ 4 ಗಂಟೆಗೆ ರೈಲು ಬಿಟ್ಟರೆ ಪ್ರವಾಸಿಗರಿಗೆ ತೊಂದರೆಯಾಗಲಿದೆ. ಅದರ ಬದಲು ಸಂಜೆ 6 ಅಥವಾ 7 ಗಂಟೆಗೆ ಹೊರಟು ಬೆಳಿಗ್ಗೆ 7 ಗಂಟೆಗೆ ಗೋವಾ ತಲುಪುವಂತಿದ್ದರೆ ಹೆಚ್ಚು ಅನುಕೂಲಕರ.
ವಂದೇ ಭಾರತ್ ಒಂದು ಪ್ರೀಮಿಯಂ ರೈಲಾದ್ದರಿಂದ ಇದರ ಟಿಕೆಟ್ ದರ ಎಲ್ಲರಿಗೂ ಕೈಗೆಟುಕುವಂತಿರಲಿಕ್ಕಿಲ್ಲ. ಅಲ್ಲದೆ, 12-13 ಗಂಟೆಗಳ ಕಾಲ ಕುಳಿತು ಪ್ರಯಾಣಿಸುವುದು ಕಷ್ಟಕರ. ಹೀಗಾಗಿ ಈ ಮಾರ್ಗಕ್ಕೆ ಸ್ಲೀಪರ್ ಕೋಚ್‌ಗಳಿರುವ (Sleeper Configuration) ರೈಲು ಹೆಚ್ಚು ಪ್ರಾಯೋಗಿಕ ಎಂದು ರೈಲ್ವೆ ಹೋರಾಟಗಾರ ಕೃಷ್ಣ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಯಾಣದ ಸಮಯವನ್ನು ಕನಿಷ್ಠ 11 ಗಂಟೆಯೊಳಗೆ ತರಬೇಕು ಎಂದು ರೈಲ್ವೆ ತಜ್ಞರು ಒತ್ತಾಯಿಸಿದ್ದಾರೆ. ಪ್ರಸ್ತುತ ಬೆಂಗಳೂರು-ಬೆಳಗಾವಿ ವಂದೇ ಭಾರತ್ 9 ರಿಂದ 10 ಗಂಟೆ ತೆಗೆದುಕೊಳ್ಳುತ್ತಿದ್ದು, ಅದನ್ನು ಲೊಂಡಾ ಮಾರ್ಗವಾಗಿ ಗೋವಾಕ್ಕೆ ವಿಸ್ತರಿಸುವ ಬಗ್ಗೆಯೂ ಚರ್ಚೆ ನಡೆದಿದೆ. ನೈಋತ್ಯ ರೈಲ್ವೆಯ ಈ ಪ್ರಸ್ತಾವನೆಯು ಈಗ ರೈಲ್ವೆ ಮಂಡಳಿಯ (Railway Board) ಅನುಮೋದನೆಗಾಗಿ ಕಾಯುತ್ತಿದೆ. ಸಾರ್ವಜನಿಕರ ಈ ಆಕ್ಷೇಪಣೆಗಳನ್ನು ಮಂಡಳಿಯು ಪರಿಗಣಿಸುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.
ಹಾಸನ/ಚಾಮರಾಜನಗರ, ಫೆಬ್ರವರಿ 23: ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಂಪ್ಗಳಿಗೆ ಬಲಿ ಮುಂದುವರಿದಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಅಪಘಾತ ನಡೆದು ಯುವಕ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ ಹಾಸನದಲ್ಲಿಯೂ ಯುವತಿಯೋರ್ವಳು ಪ್ರಾಣ ಕಳೆದುಕೊಂಡಿದ್ದಾಳೆ. ದಾರಿಯಲ್ಲಿದ್ದ ಹಂಪ್ಸ್ ಕಾಣದ ಪರಿಣಾಮ ದ್ವಿಚಕ್ರ ವಾಹನ ರಸ್ತೆಗೆ ಉರುಳಿ ಪ್ರಿಯಾ (23) ಸ್ಥಳದಲ್ಲೇ ಮೃತಪಟ್ಟಿದ್ದರೆ, ಸ್ವಾತಿ(24) ಸ್ಥಿತಿ ಗಂಭೀರವಾಗಿದೆ. ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಘಟನೆ, ನಡೆದಿದ್ದು, ಗಾಯಾಳು ಸ್ವಾತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಸ್ಪೀಡ್ ಬ್ರೇಕರ್ಗಳನ್ನು ಹಾಕಲಾಗಿದ್ದು, ಈ ಬಗ್ಗೆ ಕನಿಷ್ಠ ಸೂಚನಾ ಫಲಕಗಳನ್ನೂ ಹಾಕಿಲ್ಲ. ಈ ರೀತಿಯ ಅವೈಜ್ಞಾನಿಕ ಹಂಪ್ಗಳ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಆರೋಪಿಸಿದ್ದಾರೆ. ಹಂಪ್ಗಳ ಮೇಲೆ ಬಿಳಿ ಬಣ್ಣದ ಪಟ್ಟಿ ಬಳಿಯಲಾಗಿತ್ತಾದರೂ ಅವು ಈಗ ಅಳಿಸಿಹೋಗಿವೆ. ಹೀಗಾಗಿ ಅವುಗಳಿಗೆ ಮತ್ತೆ ಬಣ್ಣ ಬಳಿಯುವ ಜೊತೆಗೆ ಸೂಚನಾ ಫಲಕಗಳನ್ನು ಅಳವಡಿಸಬೇಕೆಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಮಣ್ಣು ಸಾಗಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸರಗೂರು ಸಮೀಪ ನಡೆದಿದೆ. ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ರಾಜೇಶ್(25) ಮೃತ ದುರ್ದೈವಿಯಾಗಿದ್ದು, ಜಮೀನಿನ ಬಳಿಯ ಹಳ್ಳದಿಂದ ರಸ್ತೆಯತ್ತ ಬರುವಾಗ ಅಪಘಾತ ನಡೆದಿದೆ. ಚಾಲಕ ಟ್ರ್ಯಾಕ್ಟರ್ ಅಡಿ ಸಿಲುಕಿಕೊಂಡ ಹಿನ್ನೆಲೆ ಸ್ಥಳದಲ್ಲೇ ಕೊನೆಯುಸಿರು ಎಳೆದಿದ್ದಾರೆ. ಈ ಬಗ್ಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ನೇಹಮಯಿ ಕೃಷ್ಣ ಆಡಿಯೋ ಬಾಂಬ್ಗೆ ಸ್ಫೋಟಕ ತಿರುವುImage Credit source: tv9
ಮೈಸೂರು, ಫೆಬ್ರವರಿ 23: ಸ್ನೇಹಮಯಿ ಕೃಷ್ಣ (Snehamayi Krishna) ಆಡಿಯೋ ಬಾಂಬ್ ಪ್ರಕರಣ ಇದೀಗ ನಾಟಕೀಯ ತಿರುವು ಪಡೆದಿದೆ. ಚಿನ್ನದ ಉದ್ಯಮಿ ವಿನೋದ್ ಮತ್ತು ಮುಡಾ ಮಾಜಿ ಆಯುಕ್ತ ನಟೇಶ್ ಸೇರಿ ಸ್ನೇಹಮಯಿ ಕೃಷ್ಣರನ್ನು ಸಿಲುಕಿಸಲು ಪಕ್ಕಾ ಪ್ಲಾನ್ ರೂಪಿಸಿದ್ದಾರಾ ಎಂಬ ಗಂಭೀರ ಅನುಮಾನಗಳು ಸಿಸಿಬಿ (CCB Police) ತನಿಖೆಯಲ್ಲಿ ಮೂಡಿವೆ. ಬೆಂಗಳೂರು ಸಿಸಿಬಿ ಅಧಿಕಾರಿಗಳು ವಿನೋದ್ ಮತ್ತು ನಟೇಶ್ ಜೊತೆಗಿರುವ ಹಲವು ಫೋಟೋಗಳನ್ನು ಪತ್ತೆ ಮಾಡಿದ್ದು, ಇದೀಗ ಸ್ನೇಹಮಯಿ ಕೃಷ್ಣರನ್ನು ಟ್ರ್ಯಾಪ್ ಮಾಡುವ ಯತ್ನ ನಡೆದಿತ್ತೇ ಎಂಬ ಸಂಶಯ ಬಲವಾಗಿದೆ.
ವಿನೋದ್ ಆರಂಭದಲ್ಲಿ ಸ್ನೇಹಮಯಿ ಕೃಷ್ಣರ ವಿಶ್ವಾಸ ಗಳಿಸಿದ್ದರು. ನಟೇಶ್ ಮಾತನಾಡಿದ್ದು ಎನ್ನಲಾದ ಆಡಿಯೋ ಒಂದನ್ನು ಸ್ನೇಹಮಯಿ ಕೃಷ್ಣರಿಗೆ ನೀಡಿದ್ದರು. ಈ ಆಡಿಯೋದಲ್ಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಟೇಶ್ ಲಂಚ ನೀಡಿದ ಬಗೆಗೆ ಮಾತನಾಡಲಾಗಿದೆ ಎಂದು ವಿನೋದ್ ತಿಳಿಸಿದ್ದರು. ಲಂಚವಾಗಿ ನೀಡಿದ ಕಾರು ಮತ್ತು ಹಣದ ಚೀಲದ ಬಗ್ಗೆ ಕಥೆ ಹೇಳಿ, ಕಾರಿನ ಫೋಟೋಗಳನ್ನೂ ಸ್ನೇಹಮಯಿ ಕೃಷ್ಣರಿಗೆ ವಿನೋದ್ ಕೊಟ್ಟಿದ್ದರು. ವಿನೋದ್ ಮಾತುಗಳನ್ನು ನಂಬಿದ ಸ್ನೇಹಮಯಿ ಕೃಷ್ಣ, ಸಿಎಸ್ ಶಾಲಿನಿ ರಜನೀಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅಷ್ಟೇ ಅಲ್ಲದೆ, ಮಾಧ್ಯಮಗಳ ಎದುರು ಸಹ ಇದೇ ಆರೋಪಗಳನ್ನು ಪುನರುಚ್ಚರಿಸಿ, ದೂರು ಸಹ ದಾಖಲಿಸಿದ್ದರು.
ಆದರೆ, ಪ್ರಕರಣದ ತನಿಖೆ ಮುಂದುವರಿದಂತೆ, ಸ್ನೇಹಮಯಿ ಕೃಷ್ಣ ಅವರು ಸಿಎಸ್‌ಗೆ ಕ್ಷಮೆಯಾಚಿಸಿ ತಾವು ನೀಡಿದ ದೂರನ್ನು ವಾಪಸ್ ಪಡೆದರು. ಸಿಎಸ್ ಮೇಲಿನ ಆರೋಪಗಳು ಸುಳ್ಳು ಎಂದು ಹೇಳಿದ್ದರು. ಆದರೂ, ನಟೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಲಂಚದ ವಿಚಾರ ಸತ್ಯ ಎಂದು ಸ್ನೇಹಮಯಿ ಕೃಷ್ಣ ಸಮರ್ಥಿಸಿಕೊಂಡಿದ್ದರು. ಇದೀಗ ಪ್ರಕರಣದಲ್ಲಿ ಹೊಸ ವಿಚಾರ ಬಯಲಾಗಿದ್ದು, ವಿನೋದ್ ಮತ್ತು ನಟೇಶ್ ಇಬ್ಬರು ಪರಸ್ಪರ ಸ್ನೇಹಿತರು ಎಂಬ ಅಂಶ ಬೆಳಕಿಗೆ ಬಂದಿದೆ.
ವಿನೋದ್, ನಟೇಶ್ ಸ್ನೇಹ ಬಯಲು: ಸಿಸಿಬಿ ತನಿಖೆಯ ದಿಕ್ಕೇ ಬದಲು
ವಿನೋದ್ ಮತ್ತು ನಟೇಶ್ ಸ್ನೇಹ ಬಯಲಾದ ನಂತರ, ಸಿಸಿಬಿ ತನಿಖೆಯ ದಿಕ್ಕು ಬದಲಾಗಿದೆ. ಸ್ನೇಹಮಯಿ ಕೃಷ್ಣರನ್ನು ಬಲೆಗೆ ಬೀಳಿಸಲು ಇವರಿಬ್ಬರು ಉದ್ದೇಶಪೂರ್ವಕವಾಗಿ ಪಿತೂರಿ ನಡೆಸಿದ್ದಾರಾ ಎಂಬ ಅನುಮಾನ ಬಲವಾಗಿದೆ. ವಿಶೇಷವಾಗಿ ವಿನೋದ್, ಈಗ ತಾನು ಸಿಎಸ್ ವಿಚಾರ ಹೇಳಿಯೇ ಇಲ್ಲ ಎಂದು ಉಲ್ಟಾ ಹೊಡೆಯುತ್ತಿದ್ದು, ಇವರ ಮಾತುಗಳಲ್ಲಿನ ವೈರುಧ್ಯಗಳು ಮತ್ತಷ್ಟು ಸಂಶಯಗಳಿಗೆ ಕಾರಣವಾಗಿವೆ.
ಸಿಸಿಬಿ ಅಧಿಕಾರಿಗಳು ವಿನೋದ್ ಮತ್ತು ನಟೇಶ್‌ರನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆಡಿಯೋ ಸತ್ಯವಾಗಿದ್ದರೂ, ಸಿಎಸ್ ಮೇಲಿನ ಆರೋಪಗಳು ಸುಳ್ಳು ಎಂದು ಸಾಬೀತುಪಡಿಸಲು ಹೊರಟಿರುವುದು ಈ ಪಿತೂರಿಯ ಭಾಗವಾಗಿರಬಹುದು ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಮೂಲವನ್ನು ಭೇದಿಸಲು ಸಿಸಿಬಿ ತೀವ್ರ ತನಿಖೆ ನಡೆಸುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ