ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ಪ್ರಕರಣದಲ್ಲಿ ಬೇಕಾಗಿದ್ದ ಉಗ್ರ ಜುನೈದ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ: ಎನ್ಐಎ ಘೋಷಣೆ – Kannada News | NIA Announces Rs 5 Lakh Reward for Information on LeT Operative Junaid Ahmed Wanted in Bengaluru Terror Case

ಉಗ್ರ ಜುನೈದ್ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ: ಎನ್ಐಎ ಘೋಷಣೆImage Credit source: TV9 Network

ಬೆಂಗಳೂರು, ಫೆಬ್ರವರಿ 21: ಲಷ್ಕರ್ ಎ ತೊಯ್ಬಾ (LeT) ಉಗ್ರ ಜುನೈದ್ ಅಹ್ಮದ್ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (NIA) ಘೋಷಿಸಿದೆ. 33 ವರ್ಷ ವಯಸ್ಸಿನ ಉಗ್ರ ಜುನೈದ್ ಅಹ್ಮದ್ ಘೋಷಿತ ಅಪರಾಧಿಯಾಗಿದ್ದು, ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಎನ್​ಐಎಗೆ ಬೇಕಾಗಿದ್ದಾನೆ. ಜುಲೈ 2023 ರಲ್ಲಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ವಿವಿಧ ಹೆಸರುಗಳನ್ನಿಟ್ಟುಕೊಂಡು ಬೆಂಗಳೂರಿನ ನಾಗಶೆಟ್ಟಿಹಳ್ಳಿಯ ಮಲ್ಲಿಗೆ ಲೇಔಟ್​​ನಲ್ಲಿ ವಾಸಿಸುತ್ತಿದ್ದ.

ಜುನೈದ್ ಅಹ್ಮದ್ ಬಂಧನಕ್ಕೆ ನೆರವಾಗುವಂಥ ಯಾವುದೇ ಮಾಹಿತಿಯನ್ನು ನೀಡುವವರಿಗೆ ಬಹುಮಾನ ನೀಡಲಾಗುವುದು. ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಎನ್​ಐಎ ಹೇಳಿದೆ. ಮಾಹಿತಿಯನ್ನು 080-29510900 ಅಥವಾ 8904241100 ಗೆ ಕರೆ ಮಾಡಿ ಹಂಚಿಕೊಳ್ಳಬಹುದು. ಜುನೈದ್ ಅಹ್ಮದ್ ಎಂಬ ಉಗ್ರ ಜುನೈದ್, ಜೆಡಿ ಜಮ್ಶೀದಾ, ಜಾನ್, ಸುಹಾನಾ, ಡಿಜೆ ರಿಟ್ಜ್, ಜಮೀಲಾ ಮತ್ತು ಜನ್ನು ಎಂಬ ಹೆಸರುಗಳಿಂದ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಬೆಂಗಳೂರಿನ ಪರಪ್ಪನ ಅಗಹಾರದಲ್ಲಿರುವ ಕೇಂದ್ರ ಕಾರಾಗೃಹದಿಂದ 2023 ರ ಜುಲೈನಲ್ಲಿ ಐವರು ಭಯೋತ್ಪಾದಕ ಶಂಕಿತರನ್ನು ಬಂಧಿಸಿದ್ದರು. ಅವರನ್ನು ಎಲ್‌ಇಟಿ ಉಗ್ರನೊಬ್ಬ ನಗರದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸೆಳೆದುಕೊಂಡಿದ್ದು ಬಯಲಾಗಿತ್ತು. ಆರೋಪಿಗಳಿಂದ ಏಳು ದೇಶೀಯ ಪಿಸ್ತೂಲ್‌ಗಳು, 45 ಜೀವಂತ ಸುತ್ತುಗಳು, ವಾಕಿ-ಟಾಕಿ ಸೆಟ್‌ಗಳು, ಒಂದು ಚಾಕು ಮತ್ತು 12 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಭಯೋತ್ಪಾದ ಚಟುವಟಿಕೆ ಸಂಬಂಧ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವರನ್ನು ಬಂಧಿಸಲಾಗಿತ್ತು. ಎಲ್‌ಇಟಿ ಕಾರ್ಯಕರ್ತ ಟಿ ನಸೀರ್ ಅಲಿಯಾಸ್ ಉಮ್ಮರ್ ಹಾಜಿ ಮತ್ತು ಜುನೈದ್ ಅಹ್ಮದ್ ಜೊತೆಗೆ ಐವರು ಶಂಕಿತ ಭಯೋತ್ಪಾದಕ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಜುನೈದ್ ಅಹ್ಮದ್ ಜೊತೆಗೆ ಬಂಧಿತರಾದ ಐವರು 2017 ರಲ್ಲಿ ಆರ್‌ಟಿ ನಗರ ಪೊಲೀಸ್ ವ್ಯಾಪ್ತಿಯಲ್ಲಿ ನೂರ್ ಅಹ್ಮದ್‌ ಎಂಬಾತನನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಸುಮಾರು 18 ತಿಂಗಳ ಕಾಲ ವಿಚಾರಣಾಧೀನ ಕೈದಿಗಳಾಗಿ ಜೈಲು ಶಿಕ್ಷೆ ಅನುಭವಿಸಿದ ನಂತರ, ಜುನೈದ್ ಅಹ್ಮದ್ ಜೊತೆಗೆ ಬಂಧಿಸಲಾದ ಐವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಬಿಡುಗಡೆಯಾದ ನಂತರ ಐವರು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು.

ಜುನೈದ್ ಅಹ್ಮದ್ 2020 ರಲ್ಲಿ ಮತ್ತೆ ರಕ್ತಚಂದನ ಕಳ್ಳಸಾಗಣೆಗಾಗಿ ಬಂಧನಕ್ಕೊಳಗಾಗಿ ಮತ್ತೆ ಐದು ತಿಂಗಳು ಅದೇ ಜೈಲಿನಲ್ಲಿದ್ದನು. 2021 ರಲ್ಲಿ ಡಕಾಯಿತಿ ಪ್ರಕರಣದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದ. ಜಾಮೀನಿನ ಮೇಲೆ ಹೊರಬಂದ ನಂತರ, ದೇಶ ಬಿಟ್ಟು ಓಡಿಹೋಗಿ ಪ್ರಸ್ತುತ ಮಧ್ಯಪ್ರಾಚ್ಯ ದೇಶದಲ್ಲಿ ಆಶ್ರಯ ಪಡೆದಿದ್ದಾನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕದ ಮೂವರು ಶಂಕಿತ ಉಗ್ರರನ್ನ NIA ಕಸ್ಟಡಿಗೆ ನೀಡಿ ಕೋರ್ಟ್ ಆದೇಶ

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಉಗ್ರ ಟಿ. ನಾಸಿರ್​​ಗೆ ಮೊಬೈಲ್ ಮತ್ತು ಹಣವನ್ನು ಒದಗಿಸಿದ ಆರೋಪದ ಮೇಲೆ ಜುನೈದ್ ತಾಯಿ ಅನೀಸ್ ಫಾತಿಮಾರನ್ನು ಎನ್​ಐಎ ಬಂಧಿಸಿತ್ತು. ಫಾತಿಮಾ ಜೊತೆಗೆ ನಗರ ಸಶಸ್ತ್ರ ಮೀಸಲು-ದಕ್ಷಿಣದ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಚಂದ್ ಪಾಷಾ ಮತ್ತು ಬೆಂಗಳೂರು ಕೇಂದ್ರ ಕಾರಾಗೃಹದ ಮನೋವೈದ್ಯ ಡಾ. ನಾಗರಾಜ್ ಅವರನ್ನು ಸಹ ಬಂಧಿಸಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vastu Tips: ಮನೆ, ಜಾಗ ಖರೀದಿಸುವ ಯೋಚನೆ ಇದ್ದರೆ, ಈ ಮುಖ್ಯ ವಾಸ್ತು ಸಲಹೆ ಮರೆಯದಿರಿ – Kannada News | Vastu Shastra Tips: Avoid These 5 Mistakes When Buying Your New Home

ಹಿಂದೂ ಸಂಪ್ರದಾಯಗಳಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ಭೂಮಿಯನ್ನು ಖರೀದಿಸುವುದರಿಂದ ಆರಂಭಿಸಿ, ಮನೆ ನಿರ್ಮಾಣ, ಗೃಹಪ್ರವೇಶ ಹಾಗೂ ದೈನಂದಿನ ಜೀವನವರೆಗೂ ವಾಸ್ತು ನಿಯಮಗಳು ಪರಿಣಾಮ ಬೀರುತ್ತವೆ ಎಂದು ನಂಬಲಾಗಿದೆ. ಈ ನಿಯಮಗಳನ್ನು ಪಾಲಿಸದೆ ನಿರ್ಮಿಸಲಾದ ಮನೆಗಳಲ್ಲಿ ವಾಸ್ತು ದೋಷಗಳು ಉಂಟಾಗಿ, ಕುಟುಂಬದ ಶಾಂತಿ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗೆ ಅಡಚಣೆ ಉಂಟಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ವಿಶೇಷವಾಗಿ ಮನೆ ಖರೀದಿಸುವ ಯೋಚನೆ ಇದ್ದರೆ, ಕೆಲವು ಮುಖ್ಯ ವಾಸ್ತು ನಿಯಮಗಳನ್ನು ಗಮನದಲ್ಲಿಡುವುದು ಅಗತ್ಯ.

ಮನೆ ಹತ್ತಿರ ಸ್ಮಶಾನ:

ಮೊದಲನೆಯದಾಗಿ, ಮನೆ ಅಥವಾ ಆಸ್ತಿಯನ್ನು ಆಯ್ಕೆಮಾಡುವಾಗ ಅದರ ಸುತ್ತಮುತ್ತಲಿನ ಪರಿಸರವನ್ನು ಚೆನ್ನಾಗಿ ಪರಿಶೀಲಿಸಬೇಕು. ಮನೆ ಹತ್ತಿರ ಸ್ಮಶಾನ ಇರಬಾರದು ಎಂದು ವಾಸ್ತು ಸೂಚಿಸುತ್ತದೆ. ಇಂತಹ ಪ್ರದೇಶಗಳು ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತವೆ ಎಂಬ ನಂಬಿಕೆ ಇದೆ. ಇದು ಮನೆಯ ಒಳಗಿನ ಶಾಂತಿ, ಸಮತೋಲನ ಮತ್ತು ಸಕಾರಾತ್ಮಕ ವಾತಾವರಣಕ್ಕೆ ಧಕ್ಕೆಯನ್ನು ಉಂಟುಮಾಡಬಹುದು ಎಂದು ಹೇಳಲಾಗುತ್ತದೆ.

ಮನೆಯ ಸುತ್ತ ಕಸದ ರಾಶಿ:

ಅದೇ ರೀತಿ, ಮನೆಯ ಸುತ್ತ ಕಸದ ರಾಶಿಗಳು ಅಥವಾ ಅಶುಚಿ ಪ್ರದೇಶಗಳು ಇರಬಾರದು. ಕಸದ ಗುಡ್ಡೆಗಳು ಕೇವಲ ಆರೋಗ್ಯ ಸಮಸ್ಯೆಗಳಿಗೆ ಮಾತ್ರವಲ್ಲ, ವಾಸ್ತು ದೃಷ್ಟಿಯಿಂದಲೂ ಅಶುಭವೆಂದು ಪರಿಗಣಿಸಲಾಗುತ್ತದೆ. ಸ್ವಚ್ಛ ಮತ್ತು ನಿರ್ಮಲ ಪರಿಸರವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಮನೆ ನಿರ್ಮಾಣ ಅಥವಾ ಖರೀದಿಸುವಾಗ ಸ್ವಚ್ಛತೆಯನ್ನು ವಿಶೇಷವಾಗಿ ಗಮನಿಸಬೇಕು.

ಮನೆಯ ಹತ್ತಿರ ಪಾಳು ಬಾವಿ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಹತ್ತಿರ ದೊಡ್ಡ ಗುಂಡಿ, ಹೊಂಡ ಅಥವಾ ಪಾಳು ಬಾವಿ ಇದ್ದರೆ ಅದು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಇಂತಹ ಕುಳಿಗಳು ಅಥವಾ ತಗ್ಗು ಪ್ರದೇಶಗಳು ಮನೆಯ ಶಕ್ತಿಸಂತುಲನವನ್ನು ಹಾಳುಮಾಡಬಹುದು. ಹೀಗಾಗಿ ಮನೆ ಆಯ್ಕೆ ಮಾಡುವ ಮೊದಲು ಅದರ ಸುತ್ತಲಿನ ಭೂಆಕಾರವನ್ನು ಪರಿಶೀಲಿಸುವುದು ಒಳಿತು.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಮನೆಯ ಉತ್ತರ ದಿಕ್ಕಿನಲ್ಲಿ ಬೆಟ್ಟ:

ಇನ್ನೊಂದು ಪ್ರಮುಖ ನಿಯಮವೆಂದರೆ ಮನೆಯ ಉತ್ತರ ದಿಕ್ಕಿನಲ್ಲಿ ಬೆಟ್ಟ ಅಥವಾ ದೊಡ್ಡ ಅಡಚಣೆ ಇರಬಾರದು. ಉತ್ತರ ದಿಕ್ಕು ಧನ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆ ದಿಕ್ಕಿನಲ್ಲಿ ಅಡಚಣೆ ಇದ್ದರೆ ಗಾಳಿಯ ಹರಿವು ಮತ್ತು ಶಕ್ತಿಯ ಪ್ರಸರಣ ತಡೆಯಲ್ಪಟ್ಟು, ಮನೆಯ ಒಟ್ಟು ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ.

ಆದರೆ, ಇವುಗಳೆಲ್ಲವೂ ಪರಂಪರೆಯ ನಂಬಿಕೆಗಳ ಮೇಲೆ ಆಧಾರಿತವಾಗಿದೆ. ಮನೆ ಖರೀದಿಸುವಾಗ ಕೇವಲ ವಾಸ್ತು ಮಾತ್ರವಲ್ಲದೆ, ಸ್ಥಳದ ಸುರಕ್ಷತೆ, ನೀರು–ವಿದ್ಯುತ್ ಸೌಲಭ್ಯಗಳು, ರಸ್ತೆ ಸಂಪರ್ಕ ಮತ್ತು ಕಾನೂನು ಸಂಬಂಧಿತ ದಾಖಲೆಗಳ ಪರಿಶೀಲನೆಯೂ ಕೂಡ ಮುಖ್ಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

17 ವರ್ಷಗಳ ಬಳಿಕ ಒಂದೇ ಗ್ರೂಪ್ ಮತ್ತು ಟೀಮ್ ಇಂಡಿಯಾದ ಕಹಿ ನೆನಪು! – Kannada News | T20 World Cup 2026: India, South Africa and West Indies in the same group after 17 years

ಬರೋಬ್ಬರಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನಲ್ಲಿ ಭಾರತ, ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಒಂದೇ ಗ್ರೂಪ್​ನಲ್ಲಿ ಕಾಣಿಸಿಕೊಂಡಿದೆ. ಈ ಹಿಂದೆ 2009ರ ಟಿ20 ವಿಶ್ವಕಪ್​ನಲ್ಲಿ ಈ ಮೂರು ತಂಡಗಳು ಸೇಮ್ ಗ್ರೂಪ್​ನಲ್ಲಿ ಸ್ಥಾನ ಪಡೆದಿದ್ದವು. ಇದೀಗ ಹದಿನೇಳು ವರ್ಷಗಳ ಬಳಿಕ ಮತ್ತೊಮ್ಮೆ ಬಲಿಷ್ಠ ಮೂರು ತಂಡಗಳು ಒಂದೇ ಗ್ರೂಪ್​ನಲ್ಲಿ ಕಾಣಿಸಿಕೊಂಡಿದೆ.

ಟೀಮ್ ಇಂಡಿಯಾದ ಕಹಿ ನೆನಪು:

2007ರ ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಮ್ ಇಂಡಿಯಾ 2009 ರಲ್ಲಿ ದ್ವಿತೀಯ ಸುತ್ತಿನಲ್ಲೇ ಹೊರಬಿದ್ದಿತ್ತು. ಇದಕ್ಕೆ ಕಾರಣವಾಗಿದ್ದು ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್.

  • ದ್ವಿತೀಯ ಸುತ್ತಿನಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್​ಗಳ ಸೋಲನುಭವಿಸಿತ್ತು.
  • ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 3 ರನ್​ಗಳಿಂದ ಸೋಲೊಪ್ಪಿಕೊಂಡಿದ್ದರು.
  • ಭಾರತ ತಂಡವನ್ನು 12 ರನ್​ಗಳಿಂದ ಸೋಲಿಸುವಲ್ಲಿ ಸೌತ್ ಆಫ್ರಿಕಾ ತಂಡ ಯಶಸ್ವಿಯಾಗಿತ್ತು.

ಈ ನಾಲ್ಕು ತಂಡಗಳಲ್ಲಿ 2009 ರಲ್ಲಿ ಸೆಮಿಫೈನಲ್​ಗೇರಿದ್ದು ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್. ಅಂದರೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು ದ್ವಿತೀಯ ಸುತ್ತಿನಲ್ಲೇ ಹೊರಬಿದ್ದಿದ್ದವು.

ಇದೀಗ ಬರೋಬ್ಬರಿ 17 ವರ್ಷಗಳ ಬಳಿಕ ಗ್ರೂಪ್​-1 ರಲ್ಲಿ ಭಾರತ, ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕಾಣಿಸಿಕೊಂಡಿವೆ. ಇಲ್ಲಿ ನಾಲ್ಕನೇ ತಂಡವಾಗಿ ಇಂಗ್ಲೆಂಡ್ ಬದಲಿಗೆ ಝಿಂಬಾಬ್ವೆ ತಂಡವಿದೆ.

ಅಂದರೆ 17 ವರ್ಷಗಳ ಹಿಂದೆ ಟೀಮ್ ಇಂಡಿಯಾ ಯಾವ ಎರಡು ತಂಡಗಳ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತೋ ಇದೀಗ ಅದೇ ತಂಡಗಳು ಎದುರಾಳಿಗಳಾಗಿ ಸಿಕ್ಕಿದ್ದಾರೆ. ಅದರಲ್ಲೂ ಭಾರತ ತಂಡದ ವಿರುದ್ಧ ಸೆಣಸಲಿರುವ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ಮೊದಲ ಸುತ್ತಿನಲ್ಲಿ ಯಾವುದೇ ಪಂದ್ಯವನ್ನು ಸೋತಿರಲಿಲ್ಲ ಎಂಬುದು ಉಲ್ಲೇಖಾರ್ಹ.

ಇತ್ತ ಟೀಮ್ ಇಂಡಿಯಾ ತವರಿನಲ್ಲಿ ಮೂರು ಪಂದ್ಯಗಳನ್ನಾಡಿದರೂ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ಭರ್ಜರಿ ಫಾರ್ಮ್​ನಲ್ಲಿರುವ ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಗೆಲುವು ಅಂದುಕೊಂಡಷ್ಟು ಸುಲಭವಲ್ಲ.

ಭಾರತದ ಪಂದ್ಯಗಳ ವೇಳಾಪಟ್ಟಿ (ಸೂಪರ್-8)

  • ಭಾರತ vs ಸೌತ್ ಆಫ್ರಿಕಾ: ಫೆಬ್ರವರಿ 22 (ಸಂಜೆ 7:00 IST), ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.
  • ಭಾರತ vs ಝಿಂಬಾಬ್ವೆ: ಫೆಬ್ರವರಿ 26 (ಸಂಜೆ 7:00 IST), ಎಂ.ಎ. ಚಿದಂಬರಂ ಸ್ಟೇಡಿಯಂ, ಚೆನ್ನೈ.
  • ಭಾರತ vs ವೆಸ್ಟ್ ಇಂಡೀಸ್: ಮಾರ್ಚ್ 1 (ಸಂಜೆ 7:00 IST), ಈಡನ್ ಗಾರ್ಡನ್ಸ್, ಕೋಲ್ಕತ್ತಾ.

Source link

ಮುಸ್ಲಿಮರ ನಮಾಜ್​ಗೆ ಅನುಮತಿ, ಹಿಂದೂಗಳ ಪ್ರಾರ್ಥನೆಗೆ ನಿರ್ಬಂಧ: ಪ್ರಲ್ಹಾದ್ ಜೋಶಿ ವಾಗ್ದಾಳಿ – Kannada News | Prahlad Joshi Slams Karnataka Government Over Bagalkot Incident, Alleges Double Standards on Religious Gatherings

ಕಲಬುರಗಿ, ಫೆಬ್ರವರಿ 21: ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಘಟನೆಯ ನಂತರದ ಬೆಳವಣಿಗೆಗಳ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದು, ಪೊಲೀಸರ ಕಾರ್ಯವೈಖರಿ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಮಸೀದಿಯೊಂದರಲ್ಲಿ 200 ಜನ ಸೇರಿದ್ದರೂ, ಅಲ್ಲಿ ಮಾರಕಾಸ್ತ್ರಗಳು ಸಂಗ್ರಹವಾಗಿವೆ ಎಂಬ ಮಾಧ್ಯಮ ವರದಿಗಳಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದ್ದಾರೆ ಎಂದು ದೂರಿದ ಜೋಶಿ, ಇದು ಅವರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ. ಹಿಂದೂಗಳ ಮೆರವಣಿಗೆಗಳಿಗೆ ನಿಷೇಧ ಹೇರಿ, ಒಂದು ಸಮುದಾಯಕ್ಕೆ ಅನುಮತಿ ನೀಡುವ ದ್ವಂದ್ವ ನೀತಿಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ. ಬಾಗಲಕೋಟೆ ಪೊಲೀಸ್ ವರಿಷ್ಠಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಐಪಿಎಸ್ ಅಧಿಕಾರಿಯಾದ ನೀವು ‘ಅಯೋಗ್ಯರ’ ಮಾತು ಕೇಳಿ ನಡೆದುಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಮತಾಂಧ ಇಸ್ಲಾಮಿಕ್ ಶಕ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ದೂರಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಟ್ಟು ನಿಂತ ಸ್ಕ್ಯಾನಿಂಗ್ ಮಶಿನ್! ರೋಗಿಗಳ ಪರದಾಟ – Kannada News | Bangalore Victoria Hospital Scanning Crisis: MRI Breakdown Leaves Patients Stranded

ಬೆಂಗಳೂರಿನ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಕೆಟ್ಟು ನಿಂತ ಸ್ಕ್ಯಾನಿಂಗ್ ಮಶಿನ್!

ಬೆಂಗಳೂರು, ಫೆಬ್ರವರಿ 21: ಬೆಂಗಳೂರಿನ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ (Victoria Hospital) ಸ್ಕ್ಯಾನಿಂಗ್ ಸೌಲಭ್ಯ ಸ್ಥಗಿತಗೊಂಡಿರುವುದರಿಂದ ರೋಗಿಗಳು ಪರದಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳಿಂದ ಎಂಆರ್‌ಐ ಸ್ಕ್ಯಾನ್ ಯಂತ್ರ ಕಾರ್ಯನಿರ್ವಹಿಸದೇ ಇರುವುದರಿಂದ ನೂರಾರು ರೋಗಿಗಳು ಬಿಲ್ಡಿಂಗ್​ನಿಂದ ಬಿಲ್ಡಿಂಗ್​ಗೆ ಅಲೆದಾಡುವ ದುಸ್ಥಿತಿ ಎದುರಾಗಿದೆ.

ಮೂರೂ ಯಂತ್ರಗಳು ಖರಾಬು!

ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಹಾಳಾಗಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಹಾಗೂ ಪಿಎಂಎಸ್‌ಎಸ್‌ವೈ ಸೇರಿ ಮೂರು ಆಸ್ಪತ್ರೆಗಳಿಗೆ ಒಟ್ಟು ಕೇವಲ ಮೂರು ಸ್ಕ್ಯಾನಿಂಗ್ ಯಂತ್ರಗಳಷ್ಟೇ ಲಭ್ಯವಿವೆ. ಅವುಗಳಲ್ಲಿ ಒಂದು ಯಂತ್ರ ಎಸಿ ಸಮಸ್ಯೆಯಿಂದ ಸ್ಥಗಿತಗೊಂಡಿದೆ. ಇದರಿಂದ ಉಳಿದ ಎರಡು ಯಂತ್ರಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ, ಸ್ಕ್ಯಾನಿಂಗ್ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಎರಡು ದಿನಗಳಿಂದ ಸ್ಕ್ಯಾನಿಂಗ್ ಕೌಂಟರ್ ಬಳಿ ಬಂದು ಕೊನೆಗೆ ಬರಿಗೈಯಲ್ಲಿ ಹಿಂತಿರುಗುತ್ತಿರುವ ರೋಗಿಗಳ ಅಸಮಾಧಾನ ಹೆಚ್ಚಾಗಿದೆ. ತುರ್ತು ಚಿಕಿತ್ಸೆಗಾಗಿ ಸ್ಕ್ಯಾನಿಂಗ್ ಅವಶ್ಯಕವಾಗಿರುವ ರೋಗಿಗಳಿಗೆ ವರದಿಗಳು ತಡವಾಗಿ ಕೈ ಸೇರುತ್ತಿರುವುದರಿಂದ ಆರೋಗ್ಯ ಸೇವೆಗಳ ಗುಣಮಟ್ಟದ ಕುರಿತು ಪ್ರಶ್ನೆಗಳು ಎದ್ದಿವೆ. ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇದನ್ನೂ ಓದಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಟಿ, MRI ಸ್ಕ್ಯಾನಿಂಗ್​ ಸೇವೆ ಸ್ಥಗಿತ; ಸರ್ಕಾರ ವಿರುದ್ಧ ಜನಾಕ್ರೋಶ!

ಜಿಲ್ಲಾಸ್ಪತ್ರೆಗಳಲ್ಲೂ ಇದೇ ಪಾಡು!

ಇತ್ತ ರಾಜ್ಯದ 13 ಜಿಲ್ಲಾಸ್ಪತ್ರೆಗಳಲ್ಲಿಯೂ ಸ್ಕ್ಯಾನಿಂಗ್ ಯಂತ್ರಗಳು ಸ್ಥಗಿತಗೊಂಡಿರುವ ಮಾಹಿತಿ ಲಭ್ಯವಾಗಿದೆ. ಆರೋಗ್ಯ ಇಲಾಖೆ ಸುಮಾರು 143 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವುದೇ ಸಮಸ್ಯೆಗೆ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಸಿಟಿ ಸ್ಕ್ಯಾನ್ ಮತ್ತು ಎಂಆರ್‌ಐ ಸೌಲಭ್ಯಗಳ ಕೊರತೆಯಿಂದ ಬಡ ರೋಗಿಗಳು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಆರೋಗ್ಯ ಇಲಾಖೆಯಿಂದ ಸುಮಾರು 140 ಕೋಟಿ ರೂ ಬಿಲ್ ಬಾಕಿ ಉಳಿದ ಹಿನ್ನೆಲೆ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸಿಟಿ ಸ್ಕ್ಯಾನಿಂಗ್ ಸೇವೆ ಸ್ಥಗಿತಗೊಂಡಿದೆ. ಬಿಪಿಎಲ್ ಕಾರ್ಡ್ ಹೊಂದಿದ ಬಡ ರೋಗಿಗಳು ತೀವ್ರ ಪರದಾಟ ಅನುಭವಿಸುತ್ತಿದ್ದಾರೆ. ಸರ್ಕಾರದ ಬಾಕಿ ಪಾವತಿ ವಿಳಂಬದ ಕಾರಣ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲೂ ಉಚಿತ ಸಿಟಿ ಸ್ಕ್ಯಾನ್ ಸೇವೆ ಬಂದ್ ಮಾಡಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಜಿಲ್ಲಾ ಸರ್ಜನ್ ಮನವಿ ಮೇರೆಗೆ ಮಾತ್ರ ಸ್ಕ್ಯಾನಿಂಗ್ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ. ರಾಜ್ಯದ 14 ಜಿಲ್ಲಾಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ KRSNAA ಡಯಾಗ್ನೊಸ್ಟಿಕ್ ಸೆಂಟರ್‌ಗಳು 143 ಕೋಟಿ ಬಾಕಿ ಹಿನ್ನೆಲೆಯಲ್ಲಿ ಸೇವೆ ನಿಲ್ಲಿಸಿವೆ. ಸಿಟಿ, ಎಂಆರ್‌ಐ ಸೌಲಭ್ಯಗಳಿಲ್ಲದೆ ರೋಗಿಗಳು ಸಂಕಷ್ಟದಲ್ಲಿದ್ದು, ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 11:24 am, Sat, 21 February 26

Source link

‘ಧುರಂಧರ್ 2’ ಬಿಡುಗಡೆ ದಿನಾಂಕ ಬದಲು? ಟ್ರೈಲರ್​​ನಲ್ಲಿ ಸಿಗಲಿದೆ ಮಾಹಿತಿ – Kannada News | Dhurandhar 2 movie release may get postponed

ಟಾಕ್ಸಿಕ್’ (Toxic) ಮತ್ತು ‘ಧುರಂಧರ್ 2’ (Dhurandhar) ಸಿನಿಮಾಗಳ ನಡುವೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದ್ದು, ಅದೇ ದಿನ ರಣ್ವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ‘ಧುರಂಧರ್ 2’ ಸಿನಿಮಾ ಬಿಡುಗಡೆ ಮುಂದೂಡಲಾಗುತ್ತದೆ ಎನ್ನಲಾಗುತ್ತಿದೆ. ನಿನ್ನೆಯಷ್ಟೆ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆಗಳನ್ನು ದುಪ್ಪಟ್ಟು ಮಾಡಿದೆ. ಇದೀಗ ‘ಟಾಕ್ಸಿಕ್’ಗೆ ಠಕ್ಕರ್ ಕೊಡಲು ‘ಧುರಂಧರ್ 2’ ಸಿನಿಮಾದ ಟ್ರೈಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಟ್ರೈಲರ್​​ನಲ್ಲಿಯೇ ಸಿನಿಮಾದ ಅಧಿಕೃತ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ ಮಾಡಲಿದೆ ಚಿತ್ರತಂಡ.

‘ಧುರಂಧರ್ 2’ ಸಿನಿಮಾದ ಚಿತ್ರೀಕರಣ ಇನ್ನೂ ಚಾಲ್ತಿಯಲ್ಲಿದ್ದು, ನಿಗದಿತ ಸಮಯಕ್ಕೆ ಸಿನಿಮಾದ ಚಿತ್ರೀಕರಣ ಮುಗಿಯುವುದಿಲ್ಲ ಎನ್ನಲಾಗುತ್ತಿದೆ. ವಾರದ ಹಿಂದೆ ಸಹ ಮುಂಬೈನಲ್ಲಿ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿತ್ತು. ಮುಂಬೈ ಮಹಾನಗರ ಪಾಲಿಕೆಯ ನಿಯಮಗಳನ್ನು ಉಲ್ಲಂಘಿಸಿ ಚಿತ್ರೀಕರಣ ಮಾಡಿದ್ದಕ್ಕೆ ಚಿತ್ರತಂಡದ ವಿರುದ್ಧ ದೂರು ಸಹ ದಾಖಲಾಗಿದೆ. ಚಿತ್ರೀಕರಣಕ್ಕೆ ಬಳಸಿದ್ದ ಕೆಲವು ವಸ್ತುಗಳನ್ನು ಸಹ ಸೀಜ್ ಮಾಡಲಾಗಿದೆ. ಚಿತ್ರೀಕರಣ ತಡವಾಗುತ್ತಿರುವ ಕಾರಣದಿಂದಾಗಿ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೂಡ ತಡವಾಗುವ ಸಾಧ್ಯತೆ ಇದ್ದು, ಇದೇ ಕಾರಣಕ್ಕೆ ಸಿನಿಮಾದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ಇದನ್ನೂ ಓದಿ:‘ಟಾಕ್ಸಿಕ್’ ಟೀಸರ್: ವೈರಲ್ ಆಗುತ್ತಿದೆ ಯಶ್ ಕಾಲೇಜು ವಿಡಿಯೋ ವಿಶೇಷತೆಯೇನು?

ಪಿಂಕ್‌ವಿಲ್ಲಾ ವರದಿಯ ಪ್ರಕಾರ, ರಣವೀರ್ ಸಿಂಗ್ ಬಹು ನಿರೀಕ್ಷಿತ ಸಿನಿಮಾ ‘ಧುರಂಧರ್ 2’ ಟ್ರೈಲರ್ ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಈದ್ ಹಬ್ಬದ ಪ್ರಯುಕ್ತ ತೆರೆಗೆ ಬರಲು ಸಿದ್ಧವಾಗಿದ್ದು, ಅದಕ್ಕೂ ಮುನ್ನ ಟ್ರೈಲರ್ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡ ಮಾಸ್ಟರ್ ಪ್ಲಾನ್ ಮಾಡಿದೆ. ರಣ್ವೀರ್ ಸಿಂಗ್ ಅವರನ್ನು ಎರಡು ಲುಕ್​​ಗಳಲ್ಲಿ ‘ಧುರಂಧರ್ 2’ ಟ್ರೈಲರ್​​ನಲ್ಲಿ ತೋರಿಸಲಾಗುತ್ತದೆ ಎನ್ನಲಾಗುತ್ತಿದೆ. ಜೊತೆಗೆ ಸಿನಿಮಾದ ಹೊಸ ಬಿಡುಗಡೆ ದಿನಾಂಕವನ್ನು ಟ್ರೈಲರ್​​ನಲ್ಲಿ ಘೋಷಿಸಲಾಗುತ್ತದೆಯಂತೆ.

ಇನ್ನು ಕನ್ನಡಿಗರ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾದ ಟೀಸರ್ ನಿನ್ನೆ ಬಿಡುಗಡೆಯಾಗಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದ ಟೀಸರ್‌ನಲ್ಲಿ ಯಶ್ ಅವರ ಸ್ಟೈಲಿಶ್ ಲುಕ್ ಮತ್ತು ಹಿನ್ನೆಲೆ ಸಂಗೀತ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದೆ. ‘ಧುರಂಧರ್ 2’ ಅಪ್‌ಡೇಟ್ ಬರುವ ಸಮಯದಲ್ಲೇ ಯಶ್ ಅವರ ‘ಟಾಕ್ಸಿಕ್’ ಹವಾ ಶುರುವಾಗಿರುವುದು ಸಿನಿರಂಗದಲ್ಲಿ ತೀವ್ರ ಪೈಪೋಟಿಗೆ ನಾಂದಿ ಹಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಡ್ಡೆ ಹುಡುಗರ ಅನೈತಿಕ ತಾಣವಾಗಿ ಮಾರ್ಪಟ್ಟ ಗೋರಿಪಾಳ್ಯ ಇಂದಿರಾ ಕ್ಯಾಂಟೀನ್! – Kannada News | Goripalya Indira Canteen Turns into Hub of Illegal Activities: Residents Allege Neglect by Authorities in Bengaluru

ಬೆಂಗಳೂರು, ಫೆಬ್ರವರಿ 21: ಬೆಂಗಳೂರಿನ ಗೋರಿಪಾಳ್ಯದಲ್ಲಿರುವ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಕೊರತೆಯಿಂದ ಪಾಳು ಬಿದ್ದಿದೆ. ಬಡವರ ಅಕ್ಷಯ ಪಾತ್ರೆ ಎಂದೇ ಕರೆಯಲ್ಪಡುತ್ತಿದ್ದ ಈ ಕ್ಯಾಂಟೀನ್ ಪ್ರಸ್ತುತ ದಯನೀಯ ಸ್ಥಿತಿಯಲ್ಲಿದೆ. ಕಳೆದ ಎರಡು-ಮೂರು ತಿಂಗಳಿಂದ ಕ್ಯಾಂಟೀನ್ ಮುಚ್ಚಲ್ಪಟ್ಟಿದೆ. ಸ್ಥಳೀಯರ ಪ್ರಕಾರ, ಕ್ಯಾಂಟೀನ್ ಆವರಣವನ್ನು ಈಗ ಗಾಂಜಾ ಮತ್ತು ಇತರೆ ಅನೈತಿಕ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಸದ್ಯ ಸ್ಥಳೀಯರು ಆಕ್ರೋಶಗೊಂಡಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಹಿಂದೆ ಬಡವರು ಇಲ್ಲಿ ನೆಮ್ಮದಿಯಿಂದ ಊಟ ಮಾಡುತ್ತಿದ್ದರು. ಆದರೆ ಈಗ ಕ್ಯಾಂಟೀನ್ ಸುತ್ತಮುತ್ತ ಕಸ ಮತ್ತು ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದೆ. ಅಧಿಕಾರಿಗಳು, ಕಾರ್ಪೊರೇಟರ್‌ಗಳು ಈ ಬಗ್ಗೆ ಗಮನಹರಿಸಿ, ಕ್ಯಾಂಟೀನ್ ಅನ್ನು ಸ್ವಚ್ಛಗೊಳಿಸಿ, ಪುನಃ ತೆರೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವರದಿ: ಅರುಣ್​ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಂಗಾ ನದಿ ತೀರದಲ್ಲಿ ವಿದೇಶಿಗರ ಪಾರ್ಟಿ! ರೆಸಾರ್ಟ್ ಮಾಲೀಕರ ಮೇಲೆ ಬಿತ್ತು ಕೇಸ್ – Kannada News | Koppal: Unauthorized Foreigner Party at Tungabhadra River Bank, Police Act

ತುಂಗಾ ನದಿ ತೀರದಲ್ಲಿ ವಿದೇಶಿಗರ ಪಾರ್ಟಿ! ರೆಸಾರ್ಟ್ ಮಾಲೀಕರ ಮೇಲೆ ಬಿತ್ತು ಕೇಸ್

ಕೊಪ್ಪಳ, ಫೆಬ್ರವರಿ 21: ಜಿಲ್ಲೆಯಲ್ಲಿ ವಿದೇಶಿಗರ ಅನಧಿಕೃತ ಪಾರ್ಟಿಗಳು ನಿಲ್ಲದಿರುವುದು ಮತ್ತೆ ಬೆಳಕಿಗೆ ಬಂದಿದೆ. ಗಂಗಾವತಿ (Gangavathi) ಸಮೀಪದ ತುಂಗಭದ್ರಾ ನದಿ ತೀರದಲ್ಲಿ ಫೆಬ್ರವರಿ 16ರಂದು ಯಾವುದೇ ಅನುಮತಿ ಪಡೆಯದೆ ಭರ್ಜರಿ ಪಾರ್ಟಿ ಆಯೋಜಿಸಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿದೇಶಿಗರ ವೀಡಿಯೋ ನೋಡಿದ್ದ ಪೊಲೀಸರು ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವೈರಲ್ ವೀಡಿಯೋ ನೋಡಿ ಕೇಸ್ ದಾಖಲು

ಈ ಕಾರ್ಯಕ್ರಮವು ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ವೇಳೆ ಡಿಜೆ ಸದ್ದಿಗೆ ವಿದೇಶಿಗರು ನದಿ ತೀರದಲ್ಲೇ ಕುಣಿದು ಕುಪ್ಪಳಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿತು. ಈ ಹಿನ್ನೆಲೆ  ‘ದಿ ಹಂಪಿ ಕೆಫೆ’ ರೆಸಾರ್ಟ್ ಮಾಲೀಕರಾದ ಪಿಯೂಷ್ ಹಾಗೂ ವ್ಯವಸ್ಥಾಪಕರ ವಿರುದ್ಧವೂ ಅನುಮತಿ ಇಲ್ಲದೆ ಪಾರ್ಟಿ ಆಯೋಜಿಸಿದ ಆರೋಪದಡಿ ಪ್ರಕರಣ ದಾಖಲಾಗಿತ್ತು.

ವೈರಲ್ ಆದ ಪಾರ್ಟಿ ವೀಡಿಯೋ ಇಲ್ಲಿದೆ

ಇದನ್ನೂ ಓದಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಟ್ಟು ನಿಂತ ಸ್ಕ್ಯಾನಿಂಗ್ ಮಶಿನ್! ರೋಗಿಗಳ ಪರದಾಟ

ತೆರೆದ ಜಾಗದಲ್ಲಿ ಕಾರ್ಯಕ್ರಮ ನಡೆಸಿ ನಿಯಮ ಉಲ್ಲಂಘಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕೆಪಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ನೋಟಿಸ್ ಜಾರಿಗೊಳಿಸಲಾಗಿದೆ. ಈ ಕುರಿತು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿಕೆ ನೀಡಿದ್ದು, ಕಾರ್ಯಕ್ರಮಕ್ಕೆ ಯಾರು ಯಾರು ಹಾಜರಾಗಿದ್ದರು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದಿದ್ದಾರೆ. ರೆಸಾರ್ಟ್‌ನಲ್ಲಿ ನಿಯಮಬಾಹಿರ ಚಟುವಟಿಕೆಗಳ ಪರಿಶೀಲನೆಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಜಿಲ್ಲಾಡಳಿತವೂ ಟಾಸ್ಕ್ ಫೋರ್ಸ್ ರಚಿಸಿದೆ. ದೂರು ದಾಖಲಾಗುತ್ತಿದ್ದರೂ ಅನಧಿಕೃತ ಪಾರ್ಟಿಗಳು ಮರುಕಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸೂಪರ್-8 ಪಂದ್ಯಗಳ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ? – Kannada News | T20 World Cup 2026: What will happen if Super 8 match is cancelled

T20 World Cup 2026: ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳು ಮುಗಿದಿದೆ. ಮೊದಲ ಸುತ್ತಿನಲ್ಲಿ ಕಣಕ್ಕಿಳಿದ 20 ತಂಡಗಳಲ್ಲಿ 8 ಟೀಮ್​ಗಳು ಸೂಪರ್-8 ಸುತ್ತಿಗೆ ಪ್ರವೇಶಿಸಿದೆ. ಈ ಎಂಟು ತಂಡಗಳನ್ನು 2 ಗ್ರೂಪ್​ಗಳಾಗಿ ವಿಂಗಡಿಸಲಾಗಿದ್ದು, ಅದರಂತೆ ದ್ವಿತೀಯ ಸುತ್ತಿನಲ್ಲಿ ಗ್ರೂಪ್​ಗಳಲ್ಲಿರುವ ತಂಡಗಳ ನಡುವೆ ಸೆಣಸಾಟ ನಡೆಯಲಿದೆ.

ಸೂಪರ್-8 ಗುಂಪುಗಳು:

  • ಗ್ರೂಪ್ 1: ಭಾರತ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ.
  • ಗ್ರೂಪ್ 2: ಇಂಗ್ಲೆಂಡ್, ನ್ಯೂಝಿಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ.

ಇಲ್ಲಿ ಭಾರತ ತಂಡವು ಗ್ರೂಪ್-1 ರಲ್ಲಿರುವ ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ತಂಡಗಳನ್ನು ಎದುರಿಸಲಿದೆ. ಇದೇ ಮಾದರಿಯಲ್ಲಿ ಗ್ರೂಪ್-2 ನಲ್ಲಿರುವ ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ.

ಅದರಂತೆ ದ್ವಿತೀಯ ಸುತ್ತಿನಲ್ಲಿ ಒಂದು ತಂಡವು ಒಟ್ಟು 3 ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳಲ್ಲಿ ಗೆದ್ದು ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ 4 ಟೀಮ್​ಗಳು ಸೆಮಿಫೈನಲ್​ಗೇರಲಿದೆ.

ಒಂದು ವೇಳೆ  ಪಂದ್ಯಗಳಿಗೆ ಮಳೆ ಅಡಚಣೆ ಉಂಟು ಮಾಡಿದರೆ ಫಲಿತಾಂಶ ನಿರ್ಧರಿಸುವುದು ಹೇಗೆ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಈ ಕೆಳಗಿನಂತಿದೆ..

  • ಮೀಸಲು ದಿನ ಇಲ್ಲ: ಸೂಪರ್ 8 ಹಂತದ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇರುವುದಿಲ್ಲ. ಮೀಸಲು ದಿನಗಳು ಕೇವಲ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮಾತ್ರ ಅನ್ವಯಿಸುತ್ತವೆ.
  • ಒಂದೊಂದು ಅಂಕ: ಟಿ20 ವಿಶ್ವಕಪ್‌ನ ಸೂಪರ್ 8 ಪಂದ್ಯವು ಮಳೆಯಿಂದಾಗಿ ರದ್ದಾದರೆ ಎರಡೂ ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಗುತ್ತದೆ.
  • ಕನಿಷ್ಠ ಓವರ್‌ಗಳು: ಪಂದ್ಯದ ಫಲಿತಾಂಶ ನಿರ್ಧರಿಸಲು ಎರಡೂ ತಂಡಗಳು ಕನಿಷ್ಠ 5 ಓವರ್‌ಗಳನ್ನು ಆಡುವುದು ಕಡ್ಡಾಯ.
  • ಹೆಚ್ಚುವರಿ ಸಮಯ: ಮಳೆ ಬಂದಾಗ ಪಂದ್ಯ ನಡೆಸಲು ಅಧಿಕಾರಿಗಳಿಗೆ ನಿಗದಿತ ಸಮಯದ ನಂತರ ಹೆಚ್ಚುವರಿಯಾಗಿ 90 ನಿಮಿಷಗಳ ಕಾಲಾವಕಾಶ ಇರಲಿದೆ.
  • 30 ಎಸೆತಗಳು: ಮಳೆಯಿಂದಾಗಿ ಪಂದ್ಯವು ಸ್ಥಗಿತಗೊಂಡರೆ, ಎರಡನೇ ಬ್ಯಾಟಿಂಗ್ ಮಾಡುವ ತಂಡ (ಉದಾಹರಣೆಗೆ ಭಾರತ) ಕನಿಷ್ಠ 5 ಓವರ್‌ಗಳನ್ನು ಪೂರ್ಣಗೊಳಿಸಿದರೆ ಮಾತ್ರ DLS ವಿಧಾನದಡಿ ವಿಜೇತರನ್ನು ನಿರ್ಧರಿಸಲು ಸಾಧ್ಯವಾಗುತ್ತದೆ.
  • ಪಂದ್ಯ ರದ್ದು: ಒಂದು ವೇಳೆ ಮಳೆಯ ಕಾರಣದಿಂದ ಎರಡೂ ತಂಡಗಳು ತಲಾ 5 ಓವರ್‌ಗಳನ್ನು ಆಡಲು ಸಾಧ್ಯವಾಗದಿದ್ದರೆ ಮಾತ್ರ ಪಂದ್ಯವನ್ನು ‘ರದ್ದು’ ಎಂದು ಘೋಷಿಸಲಾಗುತ್ತದೆ.

ಇತ್ತ ಭಾರತ ತಂಡವು ತನ್ನೆಲ್ಲಾ ಪಂದ್ಯಗಳನ್ನು ಭಾರತದಲ್ಲೇ ಆಡಲಿದೆ. ಹೀಗಾಗಿ ಮಳೆ ಭೀತಿ ಇಲ್ಲ ಎಂದೇ ಹೇಳಬಹುದು. ಆದರೆ ಶ್ರೀಲಂಕಾದಲ್ಲಿ ನಡೆಯಲಿರುವ ನ್ಯೂಝಿಲೆಂಡ್, ಇಂಗ್ಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ ನಡುವಣ ಪಂದ್ಯಗಳಿಗೆ ಮಳೆ ಆತಂಕ ಎದುರಾಗಿದೆ.

ಇದನ್ನೂ ಓದಿ: ‘ಹೈದರಾಬಾದ್’ ತಂಡಕ್ಕೆ ಗ್ಲೆನ್ ಮ್ಯಾಕ್ಸ್​ವೆಲ್ ಡೈರೆಕ್ಟ್ ಎಂಟ್ರಿ

ಏಕೆಂದರೆ ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಝಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಣ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಹಾಗೆಯೇ ಕೆಲ ಪಂದ್ಯಗಳು ಮಳೆಯಿಂದಾಗಿ ವಿಳಂಬವಾಗಿತ್ತು. ಹೀಗಾಗಿ ಗ್ರೂಪ್-2 ನಲ್ಲಿರುವ ತಂಡಗಳ ಪಂದ್ಯಗಳಿಗೆ ಮಳೆ ಅಡಚಣೆ ಉಂಟು ಮಾಡುವ ಸಾಧ್ಯತೆಯಿದೆ.

Published On – 11:53 am, Sat, 21 February 26

Source link

ಅಮೆರಿಕ ಸುಪ್ರೀಂ ಕೋರ್ಟ್​ನಲ್ಲಿ ಟ್ರಂಪ್ ಸೊಕ್ಕು ಮುರಿಯಲು ಕಾರಣರಾಗಿದ್ದು ಭಾರತೀಯ ಮೂಲದ ವಕೀಲ! ಯಾರು ಗೊತ್ತೇ ಈ ನೀಲ್ ಕತ್ಯಾಲ್? – Kannada News | Who Is Neal Katyal? Indian Origin Lawyer Behind US Supreme Court Setback to Donald Trump on Tariffs

ವಾಷಿಂಗ್ಟನ್, ಫೆಬ್ರವರಿ 21: ಭಾರತವೂ ಸೇರಿದಂತೆ ವಿವಿಧ ದೇಶಗಳ ಉತ್ಪನ್ನಗಳ ಆಮದಿನ ಮೇಲೆ ಯದ್ವಾತದ್ವಾ ಸುಂಕ ವಿಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ (Donald Trump) ಅಲ್ಲಿನ ಸುಪ್ರೀಂ ಕೋರ್ಟ್ ತೀರ್ಪು ಭಾರೀ ಹಿನ್ನಡೆ ಉಂಟುಮಾಡಿದೆ. ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನಿಂದ (US Supreme court) ಸದ್ಯದ ಮಟ್ಟಿಗೆ ಭಾರತಕ್ಕೂ ಪ್ರಯೋಜನವಾಗಿದೆ. ಅಂದಹಾಗೆ, ಟ್ರಂಪ್ ಸೊಕ್ಕುಮುರಿಯುವಂತಹ ತೀರ್ಪು ಬರುವುದಕ್ಕೆ ಕಾರಣರಾಗಿದ್ದು ಕೂಡ ಭಾರತೀಯ ಮೂಲದವರೇ! ಸುಪ್ರೀಂ ಕೋರ್ಟ್​​ಮಲ್ಲಿ 6-3 ಅನುಪಾತದಲ್ಲಿ ಪ್ರಕಟವಾದ ತೀರ್ಪು ಅಮೆರಿಕದ ಹಾಗೂ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ತೀರ್ಪು ಬರುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಭಾರತೀಯ ಮೂಲದ ಅಮೆರಿಕನ್ ವಕೀಲ ನೀಲ್ ಕತ್ಯಾಲ್ ಎಂಬುದು ಗಮನಾರ್ಹ.

ಯಾರು ಈ ನೀಲ್ ಕತ್ಯಾಲ್?

ನೀಲ ಕತ್ಯಾಲ್ ಭಾರತೀಯ ಮೂಲದ ವ್ಯಕ್ತಿ ಹಾಗೂ ಪ್ರಸಿದ್ಧ ಅಮೆರಿಕನ್ ವಕೀಲ. ಇವರ ತಂದೆ-ತಾಯಿ ಭಾರತೀಯ ಮೂಲದವರು. ತಾಯಿ ಪ್ರತಿಭಾ ಮಕ್ಕಳ ತಜ್ಞೆಯಾಗಿದ್ದು, ತಂದೆ ಸುಂದರ್ ಎಂಜಿನಿಯರ್ ಆಗಿದ್ದರು. 1970ರ ಮಾರ್ಚ್​​ 12 ರಂದು ಷಿಕಾಗೋದಲ್ಲಿ ಜನಿಸಿದ ಕತ್ಯಾಲ್ ಕಾನೂನು ಪದವಿ ಪಡೆದಿದ್ದಾರೆ.

ಕತ್ಯಾಲ್ ಅಮೆರಿಕ ನ್ಯಾಯಾಂಗ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ಅನುಭವ ಹೊಂದಿದ್ದು, ಸಾಲಿಸಿಟರ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಜಾರ್ಜ್‌ಟೌನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. 50ಕ್ಕೂ ಪ್ರಮುಖ ಹೆಚ್ಚು ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್​​ನಲ್ಲಿ ವಾದಿಸಿದ ಅನುಭವ ಹೊಂದಿದ್ದಾರೆ.

ಸದ್ಯ ಕತ್ಯಾಲ್ ಅವರು ಹೆಚ್ಚುವರಿ ಸುಂಕ ವಿಧಿಸಿದ ಪ್ರಕರಣದಲ್ಲಿ ಸಣ್ಣ ಉದ್ಯಮಿಗಳ ಪರವಾಗಿ ವಾದ ಮಂಡಿಸಿದ್ದರು. ತೀರ್ಪು ಪ್ರಕಟವಾದ ಬಳಿಕ, ನಾವು ಕೇಳಿದ್ದನ್ನೆಲ್ಲಾ ಸುಪ್ರೀಂ ಕೋರ್ಟ್ ನೀಡಿದೆ. ನಗೆ ಸಂಪೂರ್ಣ ಜಯ ದೊರಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಅವರಿಗೆ ಅಮೆರಿಕ ನ್ಯಾಯಾಂಗ ಇಲಾಖೆಯಿಂದ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಎಡ್ಮಂಡ್ ಜೆ. ರ್ಯಾಂಡಾಲ್ಫ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ. 2017ರಲ್ಲಿ ‘ಲಿಟಿಗೇಟರ್ ಆಫ್ ದಿ ಇಯರ್’ ಪ್ರಶಸ್ತಿಗೂ ಭಾಜನರಾಗಿದ್ದರು.

ಸುಂಕ ಪ್ರಕರಣದ ವಿರುದ್ಧದ ತೀರ್ಪಿನ ಮಹತ್ವವೇನು?

ಅಧ್ಯಕ್ಷರು ಶಕ್ತಿಶಾಲಿಗಳಾಗಿರಬಹುದು, ಆದರೆ ಸಂವಿಧಾನ ಅದಕ್ಕಿಂತಲೂ ಶಕ್ತಿಶಾಲಿ. ಅಮೆರಿಕದಲ್ಲಿ ತೆರಿಗೆ ವಿಧಿಸುವ ಅಧಿಕಾರ ಕಾಂಗ್ರೆಸ್‌ಗೆ ಮಾತ್ರ ಸೀಮಿತ ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ ಎಂದು ತೀರ್ಪಿನ ಮಹತ್ವವನ್ನು ಕತ್ಯಾಲ್ ವಿವರಿಸಿದ್ದಾರೆ.

ಈ ಪ್ರಕರಣ ಹಾಗೂ ತೀರ್ಪು ಯಾವುದೇ ಒಬ್ಬ ಅಧ್ಯಕ್ಷರ ಬಗ್ಗೆ ಅಲ್ಲ. ಇದು ಅಧಿಕಾರ ವಿಭಜನೆ ಮತ್ತು ಸಂವಿಧಾನಾತ್ಮಕ ಮೌಲ್ಯಗಳ ರಕ್ಷಣೆಯ ಬಗ್ಗೆ ಎಂದು ಕತ್ಯಾಲ್ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿಗೆ ಟ್ರಂಪ್ ಪ್ರತಿಕ್ರಿಯೆ ಏನು?

ತೀರ್ಪಿನ ಬಳಿಕ ಟ್ರಂಪ್ ಕೆಲವು ನ್ಯಾಯಮೂರ್ತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ತೀರ್ಪಿನ ಪರಿಣಾಮವಾಗಿ ಅಮೆರಿಕ ಇತರೆ ರಾಷ್ಟ್ರಗಳೊಂದಿಗೆ ಈಗಾಗಲೇ ಹೊಂದಿರುವ ವ್ಯಾಪಾರ ಒಪ್ಪಂದಗಳ ಮೇಲೆ ಏನು ಪರಿಣಾಮ ಬೀಳಬಹುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: ಟ್ರಂಪ್ ಸೊಕ್ಕು ಮುರಿದ ಅಮೆರಿಕ ಸುಪ್ರೀಂ ಕೋರ್ಟ್: ಭಾರತದ ಉತ್ಪನ್ನಗಳ ಮೇಲಿನ ತೆರಿಗೆಯೂ ಶೇ 10ಕ್ಕೆ ಇಳಿಕೆ!

ಒಟ್ಟಿನಲ್ಲಿ, ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಭಾರತೀಯ ಮೂಲದ ವಕೀಲ ನೀಲ್ ಕತ್ಯಾಲ್ ವಹಿಸಿದ ಪಾತ್ರ ಭಾರತೀಯ ಮೂಲದ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದ್ದು, ಜಾಗತಿಕ ರಾಜಕೀಯ-ಆರ್ಥಿಕ ವಲಯದಲ್ಲಿ ಭಾರತೀಯರ ಪ್ರಭಾವ ಮತ್ತೊಮ್ಮೆ ಸಾಬೀತಾದದಂತಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Exit mobile version