Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರ ಆಸ್ತಿ ವಿವಾದ ಕೊನೆಗೂ ಸೌಹಾರ್ದಯುತವಾಗಿ ಬಗೆಹರಿಯುವ ಸೂಚನೆಗಳಿವೆ – Kannada News | Numerology Prediction: Birth Numbers 7,8,9 Horoscope for January 14

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ದೀರ್ಘಕಾಲದಿಂದ ನಡೆಯುತ್ತಿರುವ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಹಿರಿಯರೊಂದಿಗೆ ತೀರ್ಥಯಾತ್ರೆಗೆ ಹೋಗುವ ಬಗ್ಗೆ ಚರ್ಚೆ ನಡೆಸುವಿರಿ. ಹಣಕಾಸಿನ ವ್ಯವಹಾರಗಳಲ್ಲಿ ಅಲ್ಪ ಲಾಭ ಇದ್ದರೂ ಭವಿಷ್ಯದ ಹೂಡಿಕೆಗೆ ಉತ್ತಮ ತಳಹದಿ ಸಿಗಲಿದೆ. ಸಾಲದ ಹೊರೆ ತಗ್ಗಿಸಲು ನೀವು ವಿಶೇಷ ಹಣಕಾಸಿನ ಯೋಜನೆ ರೂಪಿಸುವಿರಿ. ಕಚೇರಿಯಲ್ಲಿ ಗುಪ್ತ ಶತ್ರುಗಳ ಬಗ್ಗೆ ಎಚ್ಚರಿಕೆ ಇರಲಿ. ನಿಮ್ಮ ಕೆಲಸದ ವಿವರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ. ಧ್ಯಾನ, ಯೋಗದ ಅಭ್ಯಾಸದಿಂದ ಮಾನಸಿಕ ಒತ್ತಡ ಕಡಿಮೆ ಆಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಬಿಗಿಯಾದ ವರ್ತನೆ ಇದ್ದರೂ ನಿಮ್ಮ ಪ್ರಾಮಾಣಿಕತೆಯೇ ರಕ್ಷಿಸಲಿದೆ. ಕಲ್ಲಿದ್ದಲು ವ್ಯಾಪಾರಿಗಳಿಗೆ ಶುಭಪ್ರದವಾಗಿದೆ. ಆಸ್ತಿ ವಿವಾದಗಳು ಕೊನೆಗೂ ಸೌಹಾರ್ದಯುತವಾಗಿ ಬಗೆಹರಿಯುವ ಸೂಚನೆಗಳಿವೆ. ಮನೆಯಲ್ಲಿ ಗೃಹಿಣಿಯರಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು, ಆರೋಗ್ಯದ ಕಾಳಜಿ ವಹಿಸಿ, ವಿಶೇಷವಾಗಿ ಮಂಡಿ ನೋವು ಅಥವಾ ಕಾಲುಗಳ ನೋವು ಕಾಡಬಹುದು. ಹೂಡಿಕೆ ಮಾಡುವ ಮೊದಲು ಮಾರುಕಟ್ಟೆಯ ಸ್ಥಿತಿಗತಿಯನ್ನು ಅಧ್ಯಯನ ಮಾಡಿ. ಶತ್ರುಗಳು ನಿಮ್ಮನ್ನು ಕೆಣಕಲು ಪ್ರಯತ್ನಿಸಬಹುದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಆರ್ಥಿಕವಾಗಿ ಅನಿರೀಕ್ಷಿತ ಧನಾಗಮನದ ಸಾಧ್ಯತೆ ಇದೆ. ಸೋದರ ಸಂಬಂಧಿಗಳೊಂದಿಗೆ ಇದ್ದ ಹಣಕಾಸಿನ ವಿಚಾರದ ಮುನಿಸು ದೂರವಾಗಲಿದೆ. ರಕ್ತದೊತ್ತಡ ಅಥವಾ ಮಧುಮೇಹ ಇರುವವರು ಆಹಾರ ಪದ್ಧತಿಯಲ್ಲಿ ಶಿಸ್ತು ಪಾಲಿಸಬೇಕು. ಸಾರ್ವಜನಿಕ ಕೆಲಸಗಳಲ್ಲಿ ತೊಡಗಿರುವವರಿಗೆ ದೊಡ್ಡ ಮಟ್ಟದ ಜವಾಬ್ದಾರಿಗಳು ಸಿಗಲಿವೆ. ನಿಮ್ಮ ದೃಢ ನಿರ್ಧಾರಗಳು ವ್ಯವಹಾರದಲ್ಲಿ ಅಭಿವೃದ್ಧಿಗೆ ದಾರಿ ಮಾಡಿಕೊಡಲಿವೆ. ಲೇವಾದೇವಿ ವ್ಯವಹಾರದಲ್ಲಿ ಇರುವವರಿಗೆ ದೊಡ್ಡ ಒಪ್ಪಂದಗಳು ಕೈಗೂಡಲಿವೆ. ಪ್ರೀತಿಯಲ್ಲಿ ಇರುವವರಿಗೆ ಉಡುಗೊರೆಗಳಿಗಾಗಿ ಖರ್ಚು ಆಗಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 14ರ ದಿನಭವಿಷ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಅಂದುಕೊಂಡಿದ್ದ ಕೆಲಸಗಳು ನಿಮ್ಮ ಪರವಾಗಿಯೇ ಇರಲಿದೆ. ಭೂಮಿ ವ್ಯವಹಾರಗಳಲ್ಲಿ ಲಾಭದ ಮುನ್ಸೂಚನೆ ಇದೆ. ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಒತ್ತು ನೀಡಿ. ದೂರದ ಊರಿನಿಂದ ಅತಿಥಿಗಳು ಬರುವವರಿದ್ದು, ಮನೆಯಲ್ಲಿ ಚಟುವಟಿಕೆಗಳು ಹೆಚ್ಚಾಗಲಿವೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲಿಗೇರಲಿದೆ, ಸವಾಲುಗಳನ್ನು ಸ್ವೀಕರಿಸಲು ಸಜ್ಜಾಗಿರಿ. ಮಕ್ಕಳ ನಡವಳಿಕೆಯಲ್ಲಿ ಸುಧಾರಣೆ ಕಂಡುಬರಲಿದ್ದು, ಇದು ಪೋಷಕರಿಗೆ ಸಮಾಧಾನ ತರಲಿದೆ. ವಾಹನಗಳ ನಿರ್ವಹಣೆಗೆ ಹಣ ವ್ಯಯವಾಗಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಸಮಯ ಪ್ರಜ್ಞೆ ಮತ್ತು ಚತುರತೆಯಿಂದ ನೀವು ಕಠಿಣ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ. ಹಣಕಾಸಿನ ಹರಿವು ನಿರಂತರವಾಗಿದ್ದರೂ ಐಷಾರಾಮಿ ಖರ್ಚುಗಳ ಮೇಲೆ ಹಿಡಿತವಿರಲಿ. ವ್ಯಾಪಾರದಲ್ಲಿ ಪಾಲುದಾರರೊಂದಿಗೆ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದ್ದು, ನಿಮ್ಮ ಸಲಹೆಗಳನ್ನು ಆಡಳಿತ ಮಂಡಳಿಯು ಗಂಭೀರವಾಗಿ ಪರಿಗಣಿಸಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ. ಪ್ರೀತಿಪಾತ್ರರ ಜೊತೆ ಹೊರಗೆ ಸುತ್ತಾಡುವ ಯೋಗ ಇದೆ. ಹೊಸ ಭಾಷೆ- ಕೌಶಲ ಕಲಿಯಲು ಆರಂಭಿಸುವಿರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ವ್ಯಾಪಾರಿಗಳಿಗೆ ಲಾಭದಾಯಕ ದಿನವಾಗಿರಲಿದೆ. ಕುಟುಂಬದ ಸದಸ್ಯರ ಮಧ್ಯೆ ಪ್ರೀತಿ ಮತ್ತು ಸಾಮರಸ್ಯ ವೃದ್ಧಿಯಾಗಲಿದೆ. ಮನೆಯ ನವೀಕರಣದ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವಿರಿ. ಆರ್ಥಿಕವಾಗಿ ಸಣ್ಣ ಮಟ್ಟದ ಉಳಿತಾಯ ಯೋಜನೆಗಳಿಗೆ ಹಣ ಹೂಡಿಕೆ ಮಾಡಲು ಸೂಕ್ತ ಸಮಯ. ಸಾರ್ವಜನಿಕವಾಗಿ ನಿಮ್ಮ ವರ್ಚಸ್ಸು ಹೆಚ್ಚಾಗಲಿದ್ದು, ನೂತನ ಗೆಳೆಯರ ಸಂಪರ್ಕ ಸಿಗಲಿದೆ. ಮಕ್ಕಳ ಕ್ರೀಡಾ ಸಾಧನೆಯು ಹರ್ಷ ತರಲಿದೆ. ಸುತ್ತಮುತ್ತಲಿನವರ ಕಷ್ಟಗಳಿಗೆ ಸ್ಪಂದಿಸುವ ನಿಮ್ಮ ಗುಣಕ್ಕೆ ಮೆಚ್ಚುಗೆ ಸಿಗಲಿದೆ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಈ ಜನ್ಮಸಂಖ್ಯೆಯವರಿಗೆ ಆದಾಯದ ಹೊಸ ಮೂಲ ಸೃಷ್ಟಿಯಾಗಲಿವೆ – Kannada News | Numerology Prediction: Birth Numbers 1, 2, 3 Horoscope for January 14

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮ ದಕ್ಷತೆ, ಕಾರ್ಯಕ್ಷಮತೆಗೆ ಹೊಸ ರೂಪ ಸಿಗಲಿದೆ. ವೃತ್ತಿ ಕ್ಷೇತ್ರದಲ್ಲಿ ಗುರಿ ತಲುಪಲು ಸುಲಭವಾದ ಹಾದಿ ಗೋಚರಿಸಲಿದೆ. ಸ್ವಂತ ಉದ್ಯೋಗದವವರಿಗೆ ಹೊಸ ಗ್ರಾಹಕರಿಂದ ದೊಡ್ಡ ಮೊತ್ತದ ಆರ್ಡರ್‌ಗಳು ಬರುವ ಸಾಧ್ಯತೆ ಇದೆ. ಆರ್ಥಿಕವಾಗಿ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ನೀವು ಪ್ರವಾಸಕ್ಕೆ ಸಿದ್ಧತೆ ನಡೆಸುತ್ತಿದ್ದರೆ ಅದಕ್ಕೆ ಪೂರಕ ಸನ್ನಿವೇಶಗಳು ಒದಗಿ ಬರಲಿವೆ. ಸಾಮಾಜಿಕವಾಗಿ ನಿಮ್ಮ ವ್ಯಕ್ತಿತ್ವಕ್ಕೆ ವಿಶೇಷ ಗೌರವ ಲಭಿಸಲಿದ್ದು, ಪ್ರಮುಖ ವ್ಯಕ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಗಬಹುದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮ್ಮ ಕಲ್ಪನಾ ಶಕ್ತಿಯು ಉನ್ನತ ಮಟ್ಟದಲ್ಲಿ ಇರಲಿದ್ದು, ಕಲಾತ್ಮಕ ವೃತ್ತಿಯಲ್ಲಿರುವವರಿಗೆಲಾಭದಾಯಕ ಸಮಯ. ಹಣಕಾಸಿನ ವಿಚಾರದಲ್ಲಿ ಇಂದು ತರಾತುರಿಯ ನಿರ್ಧಾರ ಬೇಡ, ಹೂಡಿಕೆ ಮಾಡುವ ಮೊದಲು ನಂಬಿಕಸ್ತರಿಂದ ಸಲಹೆ ಪಡೆಯಿರಿ. ಕಚೇರಿಯಲ್ಲಿ ಸಹೋದ್ಯೋಗಿಗಳ ನಡುವೆ ಉಂಟಾಗಿದ್ದ ಸಣ್ಣಪುಟ್ಟ ಸಂಘರ್ಷಗಳು ನಿಮ್ಮ ಮಧ್ಯಸ್ಥಿಕೆಯಿಂದ ಬಗೆಹರಿಯಲಿವೆ. ಮನೆಗೆ ಅಗತ್ಯವಿರುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲು ಇಂದು ಮನಸ್ಸು ಮಾಡುವಿರಿ. ಹಳೆಯ ಗೆಳೆಯರ ಭೇಟಿಯಿಂದ ಮನಸ್ಸಿಗೆ ಮುದ ಸಿಗಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ವೈಯಕ್ತಿಕ ಮತ್ತು ವೃತ್ತಿ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವಿರಿ. ಆರ್ಥಿಕವಾಗಿ ಸ್ಥಿರತೆ ಇರಲಿದ್ದು, ದೀರ್ಘಕಾಲದ ಸಾಲದ ಸುಳಿಯಿಂದ ಹೊರಬರಲು ದಾರಿ ಸುಗಮವಾಗಲಿದೆ. ನೀರಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಸಕಾರಾತ್ಮಕ ಫಲಿತಾಂಶ ದೊರೆಯುವ ಸಾಧ್ಯತೆ ಇದೆ. ನಿಮ್ಮ ಮಾರ್ಗದರ್ಶನದಿಂದ ಇತರರ ಬದುಕಿನಲ್ಲಿ ಬದಲಾವಣೆ ತರುವ ಅವಕಾಶ ದೊರೆಯಲಿದೆ. ಮನೆಯಲ್ಲಿ ಸಡಗರದ ವಾತಾವರಣವಿರಲಿದ್ದು, ಶುಭ ಸಮಾರಂಭಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಿರಿ.

ಲೇಖನ- ಸ್ವಾತಿ ಎನ್.ಕೆ.

Source link

ಭಾರತೀಯ ಸೇನಾ ಮುಖ್ಯಸ್ಥರ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಪ್ರತ್ಯಕ್ಷ! – Kannada News | Drones sighted along LoC in Jammu and Kashmir again hours after Army Chief warning to Pakistan

ನವದೆಹಲಿ, ಜನವರಿ 13: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಶತ್ರು ರಾಷ್ಟ್ರ ಪಾಕಿಸ್ತಾನದ ಡ್ರೋನ್‌ಗಳು (Drone) ಮತ್ತೆ ಕಾಣಿಸಿಕೊಂಡಿವೆ. ರಾಜೌರಿ ಸೆಕ್ಟರ್‌ನ ನಿಯಂತ್ರಣ ರೇಖೆಯ ಉದ್ದಕ್ಕೂ ಇಂದು ರಾತ್ರಿ ಅನುಮಾನಾಸ್ಪದ ಡ್ರೋನ್‌ಗಳು ಕಂಡುಬಂದ ನಂತರ ಭದ್ರತಾ ಪಡೆಗಳನ್ನು ಎಚ್ಚರಿಸಲಾಯಿತು. ಕೇವಲ 48 ಗಂಟೆಗಳಲ್ಲಿ ಎರಡನೇ ಬಾರಿಗೆ ಡ್ರೋನ್‌ಗಳು ಪತ್ತೆಯಾದ ನಂತರ ಭಾರತೀಯ ಸೇನೆಯು ಬಲವಾಗಿ ಅದಕ್ಕೆ ಪ್ರತಿದಾಳಿ ನಡೆಸಿತು. ಇದರಿಂದ ಗಡಿಯಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸಲಾಗಿದೆ. ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಗಡಿಯಾಚೆಗಿನ ಪ್ರಚೋದನೆಗಳು ಮತ್ತು ಕದನ ವಿರಾಮ ಉಲ್ಲಂಘನೆಗಳ ವಿರುದ್ಧ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳ ನಂತರ ಮತ್ತೆ ಡ್ರೋನ್​ಗಳು ಪ್ರತ್ಯಕ್ಷವಾಗಿವೆ.

ಮೂಲಗಳ ಪ್ರಕಾರ, ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ನಿಯೋಜಿಸಲಾದ ಭಾರತೀಯ ಸೇನಾ ಸಿಬ್ಬಂದಿ ಡ್ರೋನ್ ಚಟುವಟಿಕೆ ಪತ್ತೆಯಾದ ತಕ್ಷಣ ಶಂಕಿತ ಡ್ರೋನ್‌ಗಳನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದರು. ಡ್ರೋನ್‌ಗಳನ್ನು ಗಡಿಯಾಚೆಯಿಂದ ಕಳುಹಿಸಲಾಗಿದೆ ಎಂದು ಶಂಕಿಸಲಾಗಿದೆ. ಬಹುಶಃ ಕಣ್ಗಾವಲು ಅಥವಾ ಇತರ ಅನುಮಾನಾಸ್ಪದ ಉದ್ದೇಶಗಳಿಗಾಗಿ ಪಾಕಿಸ್ತಾನದಿಂದ ಭಾರತದೊಳಗೆ ಕಳುಹಿಸಿರುವ ಸಾಧ್ಯತೆಯಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಡ್ರೋನ್ ಚಟುವಟಿಕೆಗಳ ಬಗ್ಗೆ ಭಾರತೀಯ ಸೇನೆಯಿಂದ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ

ಈ ಘಟನೆಯ ನಂತರ ಜಮ್ಮು ಕಾಶ್ಮೀರದ ಗಡಿಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಲಾಗಿದೆ. ಸೇನೆ ಮತ್ತು ಇತರ ಭದ್ರತಾ ಸಂಸ್ಥೆಗಳು ಕಾಶ್ಮೀರದಾದ್ಯಂತ ಕಣ್ಗಾವಲು ತೀವ್ರಗೊಳಿಸಿವೆ ಮತ್ತು ಶೋಧ ಕಾರ್ಯಾಚರಣೆಗಳನ್ನು ಚುರುಕುಗೊಳಿಸಿವೆ.

ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆಯ ಉದ್ದಕ್ಕೂ ಡ್ರೋನ್‌ಗಳ ಉಪಸ್ಥಿತಿಯ ಬಗ್ಗೆ ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಲಾಗಿದೆ. ರಾಜೌರಿ ಜಿಲ್ಲೆಯ ಕೇರಿ ಸೆಕ್ಟರ್ ಮತ್ತು ದೂಂಗಾ ಗಲಿ ಪ್ರದೇಶಗಳಲ್ಲಿ ಮಧ್ಯರಾತ್ರಿಯಲ್ಲಿ ಅನುಮಾನಾಸ್ಪದ ಡ್ರೋನ್‌ಗಳು ಹಾರುತ್ತಿರುವುದರಿಂದ ಶತ್ರು ದೇಶದಿಂದ ಬಂದ ಈ ಡ್ರೋನ್‌ಗಳು ಶಸ್ತ್ರಾಸ್ತ್ರಗಳು ಅಥವಾ ಮಾದಕವಸ್ತುಗಳನ್ನು ಸಾಗಿಸುತ್ತಿರಬಹುದು ಎಂಬ ಅನುಮಾನದ ಮೇಲೆ ಸೇನೆಗೆ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Shaksgam Valley: ಭಾರತ-ಚೀನಾ ನಡುವಿನ ಹೊಸ ಸಂಘರ್ಷಕ್ಕೆ ಕಾರಣವಾದ ಶಕ್ಸ್‌ಗಮ್ ಕಣಿವೆ ಎಲ್ಲಿದೆ? ಏನಿದು ವಿವಾದ?

ಕಳೆದ 48 ಗಂಟೆಗಳಲ್ಲಿ ರಾಜೌರಿ ವಲಯದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಡ್ರೋನ್ ಚಟುವಟಿಕೆಯಲ್ಲಿನ ಹೆಚ್ಚಳವು ಭದ್ರತಾ ಪಡೆಗಳಲ್ಲಿ ಕಳವಳವನ್ನು ಮೂಡಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ನಂತರ ಇಷ್ಟು ಕಡಿಮೆ ಅವಧಿಯಲ್ಲಿ ಡ್ರೋನ್‌ಗಳು ಪತ್ತೆಯಾಗಿರುವುದು ಇದೇ ಮೊದಲು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಾನು ಕಳಪೆ ಆಗಬೇಕು: ಬಿಗ್​ ಬಾಸ್ ಮನೆಯಲ್ಲಿ ಕಾವ್ಯಾ ಶೈವ ವಿಚಿತ್ರ ಆಸೆ – Kannada News | Kavya Shaiva wants to experience Jail in Bigg Boss Kannada Season 12

‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ (BBK 12 Finale) ಜನವರಿ 17 ಮತ್ತು 18ರಂದು ನಡೆಯಲಿದೆ. ಈ ಫಿನಾಲೆ ವಾರದಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಅದಕ್ಕೂ ಮುನ್ನ ಎಲ್ಲ ಸ್ಪರ್ಧಿಗಳಿಗೆ ಕೆಲವು ವಿಶೇಷ ಸಲವತ್ತುಗಳನ್ನು ನೀಡಲಾಗಿದೆ. ಈಗ ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಶೈವ (Kavya Shaiva), ಧ್ರುವಂತ್, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಧನುಷ್ ಮತ್ತು ಗಿಲ್ಲಿ ನಟ (Gilli Nata) ಅವರು ಇದ್ದಾರೆ. ಇವರೆಲ್ಲರ ಒಂದು ಆಸೆಯನ್ನು ಈಡೇರಿಸುವುದಾಗಿ ಬಿಗ್ ಬಾಸ್ ಹೇಳಿದ್ದಾರೆ. ಕಾವ್ಯಾ ಶೈವ ಅವರು ಒಂದು ವಿಚಿತ್ರ ಆಸೆಯನ್ನು ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ನೀಡಿರುವ ಅವಕಾಶದ ಅನುಸಾರ ಸ್ಪರ್ಧಿಗಳು ತಲಾ 3 ಆಸೆಗಳನ್ನು ಹೇಳಬೇಕು. ಅದರಲ್ಲಿ ಸಾಧ್ಯವಾದ ಆಸೆಯನ್ನು ಬಿಗ್ ಬಾಸ್ ಈಡೇರಿಸುತ್ತಾರೆ. ಆಗ ಕಾವ್ಯಾ ಅವರು ತಮ್ಮ ಮೂರು ಆಸೆಗಳನ್ನು ಕ್ಯಾಮೆರಾ ಹೇಳಿಕೊಂಡರು. ‘ನನ್ನ ತಮ್ಮ ಮತ್ತೆ ಬಿಗ್ ಬಾಸ್ ಮನೆಗೆ ಬರಬೇಕು. ಬಿಗ್ ಬಾಸ್ ಮನೆಯಲ್ಲಿ ನಾನು ಒಂದು ಸಿನಿಮಾ ನೋಡಬೇಕು. ನಾನು ಕಳಪೆ ಆಗಿ ಜೈಲಿಗೆ ಹೋಗಬೇಕು’ ಎಂದು 3 ಆಸೆಗಳನ್ನು ಕಾವ್ಯಾ ತಿಳಿಸಿದರು.

ಮೊದಲ ಎರಡು ಆಸೆಗಳು ಚೆನ್ನಾಗಿಯೇ ಇವೆ. ಆದರೆ ಮೂರನೇ ಆಸೆ ಸ್ವಲ್ಪ ಸ್ವಲ್ಪ ವಿಚಿತ್ರವಾಗಿದೆ. ಯಾಕೆಂದರೆ, ಬಿಗ್ ಬಾಸ್ ಮನೆಯಲ್ಲಿ ಯಾರೂ ಕೂಡ ಕಳಪೆ ಪಡೆದು ಜೈಲಿಗೆ ಹೋಗಬೇಕು ಅಂತ ಬಯಸಲ್ಲ. ಕಳಪೆ ಪಟ್ಟದಿಂದ ತಪ್ಪಿಸಿಕೊಳ್ಳಬೇಕು ಎಂದೇ ಬಯಸುತ್ತಾರೆ. ಆದರೆ ಕಾವ್ಯಾ ಅವರು ತಾವು ಕೊನೇ ದಿನಗಳಲ್ಲಿ ಕಳಪೆ ಆಗಬೇಕು ಎಂದು ಆಸೆಪಟ್ಟಿದ್ದಾರೆ.

ಕಾವ್ಯಾ ಅವರ ಈ ಆಸೆಗೂ ಕಾರಣ ಇದೆ. ಬಿಗ್ ಬಾಸ್ ಮನೆಯಲ್ಲಿ ಅವರು ಎಲ್ಲ ಅನುಭವವನ್ನೂ ಪಡೆದುಕೊಂಡಿದ್ದಾರೆ. ಉತ್ತಮ ಪಡೆದಿದ್ದಾರೆ, ಕ್ಯಾಪ್ಟನ್ ಆಗಿದ್ದಾರೆ. ಆದರೆ ಜೈಲಿನ ಅನುಭವ ಹೇಗೆ ಇರುತ್ತದೆ ಎಂಬುದು ಅವರಿಗೆ ತಿಳಿದಿಲ್ಲ. ಅದರ ಅನುಭವವನ್ನೂ ಕೂಡ ಪಡೆಯಬೇಕು ಎಂಬುದು ಅವರ ಆಸೆ. ಹಾಗಾಗಿ ಅವರು ಬಿಗ್ ಬಾಸ್ ಎದುರು ಆಸೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ: ವಿಡಿಯೋ

ಮಗನ ಜೊತೆ ಸ್ವಿಮಿಂಗ್ ಪೂಲ್​ನಲ್ಲಿ ಆಟ ಆಡಬೇಕು, ಬಿಗ್ ಬಾಸ್ ಟಿವಿಯಲ್ಲಿ ಸಿನಿಮಾ ನೋಡಬೇಕು, ಮನೆಯವರ ಜೊತೆ ಇಷ್ಟದ ಅಡುಗೆ ಮಾಡಿಕೊಂಡು ತಿನ್ನಬೇಕು ಎಂದು ಮ್ಯೂಟೆಂಟ್ ರಘು ಅವರು ಆಸೆ ಹೇಳಿಕೊಂಡಿದ್ದಾರೆ. ನಲ್ಲಿ ಮೂಳೆ ತಿಂದು ಮಲಗಬೇಕು, ಟಿವಿಯಲ್ಲಿ ಸಿನಿಮಾ ನೋಡಬೇಕು ಎಂದು ಗಿಲ್ಲಿ ನಟ ಅವರು ಆಸೆಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಯಾಗರಾಜ್ ಮಾಘ ಮೇಳದ ಶಿಬಿರದಲ್ಲಿ ಬೆಂಕಿ ಅವಘಡ; 15 ಡೇರೆಗಳು ಸುಟ್ಟು ಭಸ್ಮ – Kannada News | Fire accident in Prayagraj Magh Mela 15 Tents Gutted

ಪ್ರಯಾಗರಾಜ್, ಜನವರಿ 13: ಉತ್ತರ ಪ್ರದೇಶದ ಪ್ರಯಾಗರಾಜ್ ಮಾಘ ಮೇಳದ ನಾರಾಯಣ ಧಾಮ ಶಿಬಿರದಲ್ಲಿ ಭಾರಿ ಬೆಂಕಿ (Fire Accident) ಕಾಣಿಸಿಕೊಂಡಿದ್ದು, 15 ಡೇರೆಗಳು ಮತ್ತು ಸುಮಾರು 20 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಇದು ಯಾತ್ರಿಕರಲ್ಲಿ ಆತಂಕ ಮೂಡಿಸಿದೆ. 3 ಕಿಲೋಮೀಟರ್ ದೂರದಲ್ಲಿ ಜ್ವಾಲೆಗಳು ಗೋಚರಿಸುತ್ತಿದ್ದವು. ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಿದರು. ಎಲ್ಲಾ ಭಕ್ತರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಪ್ರಾಥಮಿಕ ತನಿಖೆಯಲ್ಲಿ ಬೆಂಕಿಗೆ ಕಾರಣ ಶಾರ್ಟ್ ಸರ್ಕ್ಯೂಟ್ ಎಂದು ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೊಲೀಸರ ವಿರುದ್ಧದ ಲಾಕಪ್ ಡೆತ್ ಕೇಸಿಗೆ ಟ್ವಿಸ್ಟ್: ದರ್ಶನ್ ಕೊಲೆ ರಹಸ್ಯ ಬಯಲು – Kannada News | Bengaluru Custodial Death Case: CID Find out Darshan Death reasons

ಬೆಂಗಳೂರು, (ಜನವರಿ 13): ಕಳೆದ ನವೆಂಬರ್ ನಲ್ಲಿ ಬೆಂಗಳೂರು ಪೊಲೀಸರಿಗೆ (Bengaluru Police) ದೊಡ್ಡ ಅಘಾತ ಎದುರಾಗಿತ್ತು.. ಮೂರು ದಿನ ಅಕ್ರಮವಾಗಿ ಪೊಲೀಸರ ಕಸ್ಟಡಿಯಲ್ಲಿದ್ದ ದರ್ಶನ್ ಎಂಬ 22 ವರ್ಷದ ಯುವಕ ನಂತರ ರಿಹ್ಯಾಬ್ ಸೆಂಟರ್ ಸೇರಿದ ಮೂರೇ ದಿನಕ್ಕೆ ಪ್ರಾಣ ಬಿಟ್ಟಿದ್ದ. ಮಗನ ಈ ಸಾವಿಗೆ ಪೊಲೀಸರ ಹೊಡೆತಗಳೇ ಕಾರಣ ಎಂದು ಪೋಷಕರು ಆರೋಪಿಸಿದ್ದರು. ಇದರಿಂದ ವಿವೇಕ ನಗರ ಪೊಲೀಸರ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು. ಲಾಕ್ ಅಪ್ ಡೆತ್ ಸ್ವರೂಪದ ಈ ಕೇಸ್ ನಂತರ ಸಿಐಡಿಗೆ ವರ್ಗಾವಣೆ ಆಗಿತ್ತು. ಸದ್ಯ ಸಿಐಡಿ ತನಿಖೆಯಲ್ಲಿ ಇಡೀ ಪ್ರರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ದರ್ಶನ್ ಕೊಲೆಗೆ ಪೊಲೀಸರು ಕಾರಣರಲ್ಲ ಎಂದು ಸಿಐಡಿ ತನಿಖೆಯಲ್ಲಿ ಗೊತ್ತಾಗಿದೆ.

ದರ್ಶನ್ ಸಾವಿಗೆ ಪೊಲೀಸ್ರು ಕಾರಣರಲ್ಲ

ಹೌದು… ವಿವೇಕನಗರ ಪೊಲೀಸರಿಂದ ದರ್ಶನ್ ಕಸ್ಟೋಡಿಯಲ್ ಡೆತ್ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಲಾಕಪ್ ಡೆತ್ ಆರೋಪ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದು, ಇದೀಗ ಸಿಐಡಿ ತನಿಖೆ ಮಾಡಿ ದರ್ಶನ್ ಸಾವಿಗೆ ಕಾರಣ ಯಾರು ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಸಿಐಡಿ ತನಿಖೆಯಲ್ಲಿ ದರ್ಶನ್ ಸಾವಿಗೆ ಕಾರಣ ಪೊಲೀಸರಲ್ಲ. ಬದಲಾಗಿ ಆತ ದಾಖಲಾಗಿದ್ದ ರಿಹ್ಯಾಬ್ ಸೆಂಟರ್ ಕೆಲಸಗಾರರು ಎನ್ನುವುದು ಬಯಲಿಗೆ ಬಂದಿದ್ದು, ಈ ಸಂಬಂಧ ಸಿಐಡಿ ಅಧಿಕಾರಿಗಳು 8 ಜನರನ್ನು ಬಂಧಿಸಿದ್ದಾರೆ. ನವೀನ್, ಅಖಿಲ್, ನಾರಾಯಣ @ನಾಣಿ, ಹಿತೇಶ್ ಕುಮಾರ್, ಮಂಜು, ಸಾಹಿಲ್ ಅಹಮದ್, ನವೀನ್ ಕುಮಾರ್, ರವಿ ಎನ್ನುವರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದರ್ಶನ್ ಸಾವು: ಪೊಲೀಸರಿಂದಲೇ ಕೊಲೆ ಆರೋಪ, ಪ್ರಕರಣ ಸಿಐಡಿ ಹೆಗಲಿಗೆ

ರಿಹ್ಯಾಬ್ ಹುಡುಗರಿಂದ ದರ್ಶನ್ ಕೊಲೆ

ಮೊದಲೇ ಕುಡಿತದ ದಾಸನಾಗಿದ್ದ ದರ್ಶನ್ ನನ್ನು ವಿವೇಕನಗರ ಪೊಲೀಸರು ಯಾವುದೇ ಕೇಸ್ ದಾಖಲಿಸಿದೆ ಮೂರು ದಿನ ಅಕ್ರಮವಾಗಿ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದರು. ಬಳಿಕ ಅಡಕಮಾರನಹಳ್ಳಿಯ ಯುನಿಟಿ ಫೌಂಡೇಶನ್ ಎಂಬ ರಿಹ್ಯಾಬ್ ಸೆಂಟರ್ ಗೆ ಸೇರಿಸಲಾಗಿತ್ತು.ಆದರೆ ದರ್ಶನ್ ಕಂಟ್ರೋಲ್ ಮಾಡೋದಕ್ಕೆ ರಿಹ್ಯಾಬ್ ಹುಡುಗರು ಆತನ ಮೇಲೆ ಎರಡ್ಮೂರು ದಿನ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬಳಿಕ ರಿಹ್ಯಾಬ್ ಸೆಂಟರ್ ನಲ್ಲಿ ಲೋ ಬಿಪಿಯಾಗಿ ದರ್ಶನ್ ಸಾವನ್ನಪ್ಪಿದ್ದ. ಸದ್ಯ ಸಿಐಡಿ ತನಿಖೆಯಲ್ಲಿ ರಿಹ್ಯಾಬ್ ಸೆಂಟರ್ ನ ಇನ್ಚಾರ್ಜ್ ಅಖಿಲ್ ಸೇರಿದಂತೆ 8 ಜನರನ್ನ ಬಂಧಿಸಿ ಜೈಲಿಗಟ್ಟಲಾಗಿದೆ.

ಪೊಲೀಸರ ವಿರುದ್ಧ ಕೊಲೆ ಕೇಸ್

ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ದರ್ಶನ್ ಎಂಬ ಯುವಕನನ್ನು ಪೊಲೀಸರು 2025ರ ನವೆಂಬರ್ 15ರಂದು ಸ್ಟೇಷನ್‌ಗೆ ಕರೆತಂದಿದ್ದರು. ಈ ವೇಳೆ ಯಾವುದೇ ಕೇಸ್ ಮಾಡದೆ, ಎರಡು ದಿನ ಕಸ್ಟಡಿಯಲ್ಲಿಟ್ಟು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ. ಇದಾದ ಬಳಿಕ ಆತನನ್ನು ಬಿಟ್ಟು ಕಳಿಸಿದ್ದು, ಮಾದನಾಯಕನಹಳ್ಳಿ ಬಳಿ ಯುನಿಟಿ ರಿಹ್ಯಾಬಿಲೇಷನ್ ಸೆಂಟರ್‌ನಲ್ಲಿ (ಪುನರ್ವಸತಿ ಕೇಂದ್ರದಲ್ಲಿ) ಸೇರಿಸಲಾಗಿತ್ತು. ಆ ವೇಳೆ ದರ್ಶನ್ ಸಾವನ್ನಪ್ಪಿದ್ದು, ಮರಣೋತ್ತರ ಪರೀಕ್ಷೆ ವೇಳೆ ಹಲ್ಲೆ ನಡೆಸಿರೋದು ಬೆಳಕಿಗೆ ಬಂದಿತ್ತು. ಈ ನಿಟ್ಟಿನಲ್ಲಿ ದರ್ಶನ್ ಪೋಷಕರು ಪೊಲೀಸರ ವಿರುದ್ಧವೇ ಲಾಕಪ್ ಡೆತ್ ಆರೋಪ ಮಾಡಿದ್ದರು. ಸಂಬಂಧ ವಿವೇಕನಗರ ಇನ್​​ಸ್ಪೆಕ್ಟರ್ ಶಿವಕುಮಾರ್ ಸೇರಿ ನಾಲ್ವರ ಮೇಲೆ FIR ದಾಖಲಾಗಿತ್ತು. ಇದೀಗ ಸಿಐಡಿ ತನಿಖೆಯಿಂದ ಅಸಲಿ ಸತ್ಯ ಬಯಲಿಗೆ ಬಂದಿದ್ದು, ವಿವೇಕನಗರ ಪೊಲೀಸರು ನಿಟ್ಟುಸಿರುಬಿಟ್ಟಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, Tv9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪುದುಚೆರಿಯ ಕಾಲೇಜುಗಳಲ್ಲಿ ಇಂದೇ ಸಂಕ್ರಾಂತಿ ಸಂಭ್ರಮ; ಹಾಡು, ನೃತ್ಯದ ವಿಡಿಯೋ ಇಲ್ಲಿದೆ – Kannada News | Pongal Festival celebrated in Puducherry Colleges watch video

ಪುದುಚೆರಿ, ಜನವರಿ 13: ಪುದುಚೇರಿಯ ವಿವಿಧ ಕಾಲೇಜುಗಳಲ್ಲಿ ಇಂದೇ ಪೊಂಗಲ್ (Pongal) ಹಬ್ಬವನ್ನು ಆಚರಿಸಲಾಯಿತು. ಮದರ್ ತೆರೇಸಾ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಹಿಂದೂ ಹಬ್ಬದಲ್ಲಿ ಭಾಗವಹಿಸಿ ಎಂಜಾಯ್ ಮಾಡಿದರು. ರಂಗೋಲಿ ಬಿಡಿಸಿ, ಡ್ಯಾನ್ಸ್ ಮಾಡಿ, ಕಬ್ಬು ತಿಂದು ಕುಣಿದು ಕುಪ್ಪಳಿಸಿದರು. ಸಚಿವ ಪಿ.ಆರ್.ಎನ್. ತಿರುಮುರುಗನ್ ಈ ಉತ್ಸವದಲ್ಲಿ ಭಾಗವಹಿಸಿದ್ದರು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಾರ್ಟಿನ್’ ವಿಮರ್ಶೆ ವಿವಾದ: ಮತ್ತೆ ಕ್ಷಮೆ ಕೇಳಿದ ‘ಅಮೃತಾಂಜನ್’ ಸುಧಾಕರ್ – Kannada News | Amrutanjan Kannada movie actor Sudhakar Gowda talks about Martin Review controversy

ಯೂಟ್ಯೂಬ್ ಕಿರುಚಿತ್ರಗಳ ಮೂಲಕ ಫೇಮಸ್ ಆದ ಸುಧಾಕರ್ ಗೌಡ (Sudhakar Gowda) ಅಲಿಯಾಸ್ ಸ್ಟ್ರಾಂಗ್ ಸುಧಾಕರ ಅವರು ‘ಅಮೃತ ಅಂಜನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಜನವರಿ 30ರಂದು ಬಿಡುಗಡೆ ಆಗಲಿದೆ. ಸೋಶಿಯಲ್ ಮೀಡಿಯಾದಲ್ಲಿ ಸುಧಾಕರ್ ಅವರು ಬಹಳ ಆ್ಯಕ್ಟೀವ್ ಆಗಿದ್ದಾರೆ. ಈ ಮೊದಲು ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಬಿಡುಗಡೆ ಆದಾಗ ಸುಧಾಕರ್ ಅವರು ವಿಮರ್ಶೆ (Martin Review) ಮಾಡಿದ್ದು ವಿವಾದಕ್ಕೆ ಕಾರಣ ಆಗಿತ್ತು. ಆ ಘಟನೆಗೆ ಸಂಬಂಧಿಸಿದಂತೆ ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ, ತಾವು ನಟಿಸಿರುವ ‘ಅಮೃತ ಅಂಜನ್’ (Amrutanjan) ಸಿನಿಮಾಗೆ ಧ್ರುವ ಸರ್ಜಾ ಅವರಿಂದಲೇ ಬೆಂಬಲ ಸಿಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

‘ನಾನು ಈಗ ಚಿತ್ರರಂಗಕ್ಕೆ ಬಂದವನಲ್ಲ. 2016ರಲ್ಲಿ ಎಸ್. ನಾರಾಯಣ್ ನಿರ್ದೇಶನದ ಮನಸು ಮಲ್ಲಿಗೆ ಸಿನಿಮಾದಲ್ಲಿ ಸ್ನೇಹಿತನ ಪಾತ್ರ ಮಾಡಿದ್ದೆ. ಇಡೀ ಸಿನಿಮಾದಲ್ಲಿ ಆ ಪಾತ್ರ ಇತ್ತು. 10 ವರ್ಷಗಳಿಂದಲೂ ಚಿತ್ರರಂಗದಲ್ಲಿ ಇದ್ದೇನೆ. ಆದರೆ ಜನರಿಗೆ ಗೊತ್ತಾಗಿದ್ದು ನಮ್ಮ ಶಾರ್ಟ್ ಫಿಲ್ಮ್ ಮತ್ತು ರೀಲ್ಸ್ ಮೂಲಕ. ಅಂದು ನಾನು ಅನಿಸಿದ್ದನ್ನು ಹೇಳಿದ್ದೆ. ನಾನು ಹೇಳಿದ ರೀತಿ ತಪ್ಪು ಇರಬಹುದು ಅಥವಾ ನಾನು ಹೇಳಿದ್ದೇ ತಪ್ಪು ಇರಬಹುದು. ನನಗೆ ಗೊತ್ತಿಲ್ಲ. ಅಂದು ಕ್ಷಮೆ ಕೇಳಿದ್ದೆ, ಇಂದು ಕೂಡ ಕ್ಷಮೆ ಕೇಳುತ್ತೇನೆ’ ಎಂದು ಸುಧಾಕರ್ ಅವರು ಹೇಳಿದ್ದಾರೆ.

‘ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ. ಅದನ್ನು ಯಾರೂ ಕೂಡ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಅದೇ ಕೊನೇ ಸಿನಿಮಾ. ಆ ಬಳಿಕ ನಾನು ಯಾವುದೇ ಸಿನಿಮಾಗೆ ವಿಮರ್ಶೆಯನ್ನೇ ಮಾಡಿಲ್ಲ’ ಎಂದು ಸುಧಾಕರ್ ಹೇಳಿದ್ದಾರೆ. ‘ನಮ್ಮ ಸಿನಿಮಾದ ನಿರ್ದೇಶಕರು ಧ್ರುವ ಸರ್ಜಾ ಅವರಿಗೆ ಆಪ್ತರಾಗಿದ್ದಾರೆ. ಅವರ ಕೆಲಸವನ್ನು ಧ್ರುವ ಸರ್ಜಾ ಅವರು ಹೊಗಳಿದ್ದರು. ನಮ್ಮ ಸಿನಿಮಾದ ಶೂಟಿಂಗ್ ಬಗ್ಗೆಯೂ ಅವರಿಗೆ ಮಾಹಿತಿ ಇತ್ತು. ಈಗ ಚರ್ಚೆ ನಡೆಯುತ್ತಿದೆ. ಈಗ ಧ್ರುವ ಸರ್ಜಾ ಅವರು ಬಂದರೆ ನಮಗೆ ಸಹಾಯ ಆಗುತ್ತದೆ. ಅವರು ಈ ವಿಡಿಯೋ ನೋಡುತ್ತಿದ್ದರೆ ನಾನು ಕೂಡ ಮನವಿ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ ಸುಧಾಕರ್.

‘ನಮ್ಮದು ಕಾಮಿಡಿ ಸಿನಿಮಾ. ಅದರ ಜೊತೆಗೆ ಅಮ್ಮ-ಅಪ್ಪನ ಸೆಂಟಿಮೆಂಟ್ ಹಾಗೂ ಒಂದು ಚಿಕ್ಕ ಲವ್ ಸ್ಟೋರಿ ಕೂಡ ಇದೆ. ಏನೋ ಹೊಸದಾಗಿ ಮಾಡಿದ್ದೇವೆ ಅನ್ನೋ ಥರ ಏನಿಲ್ಲ. ಸಿನಿಮಾ ನೋಡುವವರು ಒಂದು ಗಂಟೆ ಬಿದ್ದು ಬಿದ್ದು ನಗುವ ರೀತಿ ಸಿನಿಮಾ ಇರುತ್ತದೆ. ಜನರಿಗೆ ಬೇಕಿರುವುದೇ ಮನರಂಜನೆ. ನಾವು ಕಾಮಿಡಿ ಆಯ್ಕೆ ಮಾಡಿಕೊಂಡು ಜನರನ್ನು ನಗಿಸುತ್ತೇನೆ’ ಎಂದು ಸುಧಾಕರ್ ಹೇಳಿದ್ದಾರೆ.

ಇದನ್ನೂ ಓದಿ: ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು

‘ನಮ್ಮ ಟ್ರೇಲರ್ ಬಿಡುಗಡೆ ಆದ್ಮೇಲೆ ಸಿನಿಮಾಗೆ ಹೈಪ್ ಸಿಗುತ್ತದೆ. ಟ್ರೇಲರ್ ನೋಡಿದರೆ ಈ ಹುಡುಗರು ಏನೋ ಮಾಡಿದ್ದಾರೆ ಎಂಬುದು ಜನರಿಗೆ ತಿಳಿಯುತ್ತದೆ. ಟ್ರೇಲರ್ ರೀಚ್ ಆದರೆ ಖಂಡಿತವಾಗಿಯೂ ಜನರು ಚಿತ್ರಮಂದಿರಕ್ಕೆ ಬಂದು ನಮ್ಮ ಸಿನಿಮಾ ನೋಡುತ್ತಾರೆ. ಪ್ರೇಕ್ಷಕರಿಗೆ ನಾವು ನಿರಾಸೆ ಮಾಡಲ್ಲ’ ಎಂದು ಸುಧಾಕರ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕನಸಲ್ಲಿ ಕಾಡಿದ 3 ಮಹಿಳೆಯರು; ಭಯದಿಂದ ಪ್ರಾಣವನ್ನೇ ಕಳೆದುಕೊಂಡ ಯುವಕ – Kannada News | 25 Year Old dies by Suicide after fear of Dreams in Madhya Pradesh

ನವದೆಹಲಿ, ಜನವರಿ 13: ವಿಜ್ಞಾನವು ಎಷ್ಟೇ ಪ್ರಗತಿ ಸಾಧಿಸುತ್ತಿದ್ದರೂ ಮುಗ್ಧ ಜನರು ಮಾಟ- ಮಂತ್ರಗಳೆಂಬ ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದಾರೆ. ದೀರ್ಘಕಾಲ ನಿದ್ರಿಸಲು ಸಾಧ್ಯವಾಗದ ಮತ್ತು ಕನಸಿನಲ್ಲಿ ಬರುವ ದುಃಸ್ವಪ್ನಗಳ ಭಯವನ್ನು ಸಹಿಸಲಾಗದ ಯುವಕ ತನ್ನ ಜೀವನವನ್ನು ಮಾನಸಿಕ ಯಾತನೆಯಿಂದ (Depression) ಕೊನೆಗೊಳಿಸಿದ್ದಾರೆ. ಮೂವರು ಮಹಿಳೆಯರ ರೂಪದಲ್ಲಿ ಅವರನ್ನು ಕಾಡುತ್ತಿದ್ದ ಆ ದುಃಸ್ವಪ್ನಗಳು ಅವರನ್ನು ಸಾವಿನ ಮಡಿಲಿಗೆ ತಳ್ಳಿದ್ದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಆಧುನಿಕ ಯುಗದಲ್ಲೂ ಮೂಢನಂಬಿಕೆಗಳು ಅಮಾಯಕರ ಜೀವಗಳನ್ನು ಬಲಿ ಪಡೆಯುತ್ತಿವೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ 25 ವರ್ಷದ ಯುವಕನಿಗೆ ದುಃಸ್ವಪ್ನಗಳು ಬೀಳುತ್ತಿತ್ತು. ಭಯದಿಂದ ಸರಿಯಾದ ಚಿಕಿತ್ಸೆ ಸಿಗದೆ ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಚಲನ ಮೂಡಿಸಿದೆ. ಮೃತರನ್ನು ರಾಮದಾಸ್ ಎಂದು ಗುರುತಿಸಲಾಗಿದೆ. ರಾಮದಾಸ್ ಕೆಲವು ಸಮಯದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು.

ಇದನ್ನೂ ಓದಿ: ಬೇಲಿಯೇ ಎದ್ದು ಹೊಲ ಮೇಯ್ದಂತೆ; ಮಹಿಳೆ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಲೈಂಗಿಕ ದೌರ್ಜನ್ಯ

ಅವರು ತಮ್ಮ ಕನಸಿನಲ್ಲಿ ನಿರಂತರವಾಗಿ ಮೂವರು ಮಹಿಳೆಯರನ್ನು ನೋಡುತ್ತಿದ್ದರು. ಆ ಮೂವರು ಕನಸಿನಲ್ಲಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಭ್ರಮೆಯನ್ನು ಹೊಂದಿದ್ದರು. ಆ ದುಃಸ್ವಪ್ನಗಳಿಂದಾಗಿ ಅವರು ತೀವ್ರ ಪ್ಯಾನಿಕ್ ಅಟ್ಯಾಕ್‌ಗಳಿಗೆ ಒಳಗಾಗಿದ್ದರು ಮತ್ತು ಮಾನಸಿಕವಾಗಿ ಖಿನ್ನತೆಗೆ ಒಳಗಾದರು.

ರಾಮದಾಸ್ ಅವರ ಸ್ಥಿತಿಯನ್ನು ನೋಡಿದ ಕುಟುಂಬದ ಸದಸ್ಯರಿಗೆ ಇದು ಮಾನಸಿಕ ಸಮಸ್ಯೆ ಎಂದು ಗುರುತಿಸಲು ಸಾಧ್ಯವಾಗಲಿಲ್ಲ. ತಮ್ಮ ಮಗನ ಮೇಲೆ ಯಾರೋ ಮಾಟ-ಮಂತ್ರ ಮಾಡಿದ್ದಾರೆ ಎಂದು ಅವರು ಅನುಮಾನಿಸಿದರು. ರಾಮದಾಸ್ ಅವರ ಸಹೋದರಿ ವಾಸಿಸುತ್ತಿದ್ದ ಅಂಬಾಪತ್ ಹಳ್ಳಿಯಲ್ಲಿರುವ ಮಾಂತ್ರಿಕನ ಬಳಿಗೆ ಅವರನ್ನು ಕರೆದೊಯ್ದರು. ಆ ಮಾಂತ್ರಿಕ ರಾಮದಾಸ್ ಅವರಿಗೆ ಮಾಟಮಂತ್ರ ಮಾಡಿದರು. ಆರಂಭದಲ್ಲಿ, ರಾಮದಾಸ್ 3 ತಿಂಗಳ ಕಾಲ ಚೆನ್ನಾಗಿದ್ದಂತೆ ತೋರುತ್ತಿತ್ತು. ಆದರೆ, ದುಃಸ್ವಪ್ನಗಳು ಮತ್ತೆ ಪ್ರಾರಂಭವಾದವು.

ಇದನ್ನೂ ಓದಿ: Crime News: ತಾಯಿ, ಹೆಂಡತಿಯನ್ನು ಕೊಂದು ಮಾಂಸ ಬಗೆದು ತಿಂದ ಕಿರಾತಕ!

ಮತ್ತೆ 3 ಮಹಿಳೆಯರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಭಯದಿಂದ ರಾಮದಾಸ್ ತೀವ್ರವಾಗಿ ವಿಚಲಿತರಾಗಿದ್ದರು. ಈ ಸಮಸ್ಯೆಯಿಂದ ಹೊರಬರಲು ಸಾಧ್ಯವಿಲ್ಲ ಎಂದು ಭಾವಿಸಿ, ಕಳೆದ ಗುರುವಾರ ರಾತ್ರಿ ಮನೆಯ ಬಳಿಯ ಕಾಡಿಗೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಸರಿಯಾದ ಸಮಯಕ್ಕೆ ಮನಶಾಸ್ತ್ರಜ್ಞರ ಬಳಿ ಚಿಕಿತ್ಸೆ ಕೊಡಿಸಿದ್ದರೆ ಅವರು ಬದುಕುಳಿಯುವ ಸಾಧ್ಯತೆ ಇರುತ್ತಿತ್ತು. ಆದರೆ, ಮಾನಸಿಕ ಆರೋಗ್ಯವನ್ನು ಬಹಳ ನಿರ್ಲಕ್ಷ್ಯ ಮಾಡುತ್ತಿರುವ ಈಗಿನ ಕಾಲದಲ್ಲಿ ಈ ರೀತಿಯ ಆತ್ಮಹತ್ಯೆಯ ಘಟನೆಗಳು ಹೆಚ್ಚುತ್ತಲೇ ಇವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version