ಹರೀಶ್ ರಾಜ್​ಗೆ ರೊಮ್ಯಾಂಟಿಕ್ ಸ್ಟಾರ್ ಬಿರುದು; ಹೊಸ ಸಿನಿಮಾ ಕುರಿತು ಮಾತು – Kannada News | Harish Raj accept Romantic Star Title, Bhagyalaxmi Serial Impact

ಸಿನಿಮಾ ಹಾಗೂ ಕಿರುತೆರೆ ನಟ ಹರೀಶ್ ರಾಜ್ ಅವರಿಗೆ ಇತ್ತೀಚೆಗೆ ರೊಮ್ಯಾಂಟಿಕ್ ಸ್ಟಾರ್ ಎಂಬ ಹೊಸ ಬಿರುದು ಲಭಿಸಿದೆ. ನಟಿ ಅಭಿನಯ ಅವರು ಈ ಟೈಟಲ್ ಅನ್ನು ನೀಡಿದ್ದು, ಹರೀಶ್ ರಾಜ್ ಅವರು ಈ ಬಿರುದನ್ನು ಸ್ವೀಕರಿಸಿದ್ದಾರೆ.

ಭಾಗ್ಯಲಕ್ಷ್ಮಿ ಧಾರಾವಾಹಿಯ ಆದಿಶ್ವರ್ ಕಾಮತ್ ಪಾತ್ರದ ಮೂಲಕ ಹರೀಶ್ ರಾಜ್ ಅವರು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಈ ಪಾತ್ರದಲ್ಲಿ ನೇರ ರೊಮ್ಯಾನ್ಸ್ ಇಲ್ಲದಿದ್ದರೂ, ಅವರ ಮತ್ತು ಸಹ-ನಟಿಯ ನಡುವಿನ ಪ್ರಬುದ್ಧ ಪ್ರೇಮಕಥೆ ವೀಕ್ಷಕರಿಗೆ ಅರ್ಥವಾಗಿತ್ತು. ‘40 ವರ್ಷಗಳ ನಂತರದ ಪ್ರೀತಿಯು ಕೇವಲ ದೈಹಿಕ ಆಕರ್ಷಣೆಗಿಂತ ಹೆಚ್ಚಾಗಿ ವ್ಯಕ್ತಿತ್ವ ಮತ್ತು ಭಾವನಾತ್ಮಕ ಬಾಂಧವ್ಯಕ್ಕೆ ಮಹತ್ವ ನೀಡುತ್ತದೆ’ ಎಂದು ಅವರು ಪ್ರತಿಪಾದಿಸಿದರು.

ಹರೀಶ್ ರಾಜ್ ಅವರು ಎಲ್ಲ ರೀತಿಯ ಪ್ರೇಕ್ಷಕರಿಗೂ ಪರಿಚಿತರಾಗಿದ್ದಾರೆ. ಈ ಮೊದಲು ಹದಿಹರೆಯದ ಹುಡುಗಿಯರ ಮೆಚ್ಚುಗೆ ಗಳಿಸಿದ್ದ ಅವರು, ಈಗ ಭಾಗ್ಯಲಕ್ಷ್ಮಿ ಧಾರಾವಾಹಿಯ ನಂತರ ಎಲ್ಲಾ ವಯೋಮಾನದವರಿಗೂ ಅಚ್ಚುಮೆಚ್ಚಿನ ನಟನಾಗಿದ್ದಾರೆ. ಇದು ಅವರ ನಟನಾ ಸಾಮರ್ಥ್ಯಕ್ಕೆ ಸಂದ ದೊಡ್ಡ ಗೌರವವಾಗಿದೆ. ಈಗ ಹರೀಶ್ ರಾಜ್ ಅವರು ‘ಲವ್ ಕಾಕ್ಟೈಲ್’ ಎಂಬ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ISRO Recruitment 2026: ಇಸ್ರೋದಲ್ಲಿ ಬಂಪರ್ ನೇಮಕಾತಿ; ಅರ್ಹತೆ, ವೇತನ ಮತ್ತು ಅರ್ಜಿ ವಿವರ ಇಲ್ಲಿದೆ – Kannada News | Isro recruitment 2026 apply online for 244 assistant udc and stenographer posts check eligibility and salary details

ಇಸ್ರೋದಲ್ಲಿ ಬಂಪರ್ ನೇಮಕಾತಿ
Image Credit source: Getty Images

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿರುವ ವಿವಿಧ ಕೇಂದ್ರಗಳು ಮತ್ತು ಸ್ವಾಯತ್ತ ಸಂಸ್ಥೆಗಳಲ್ಲಿ ಖಾಲಿ ಇರುವ ಪೇ ಮ್ಯಾಟ್ರಿಕ್ಸ್ ಲೆವೆಲ್-4 ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ದೇಶದ ಪ್ರಮುಖ ಬಾಹ್ಯಾಕಾಶ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಹಾಗೂ ಗೌರವಾನ್ವಿತ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಜುಲೈ 27 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ.

ಖಾಲಿ ಹುದ್ದೆಗಳ ವಿವರ ಮತ್ತು ಹಂಚಿಕೆ:

ಈ ನೇಮಕಾತಿ ಅಭಿಯಾನದ ಮೂಲಕ ದೇಶಾದ್ಯಂತ ಒಟ್ಟು 244 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

  • ಸಹಾಯಕರು (Assistants): 130 ಹುದ್ದೆಗಳು
  • ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ (JPA): 81 ಹುದ್ದೆಗಳು
  • ಅಪ್ಪರ್ ಡಿವಿಷನ್ ಕ್ಲರ್ಕ್ (UDC): 22 ಹುದ್ದೆಗಳು
  • ಸ್ಟೆನೋಗ್ರಾಫರ್ (Stenographers): 10 ಹುದ್ದೆಗಳು
  • ಇತರ ಜೂನಿಯರ್ ಪರ್ಸನಲ್ ಅಸಿಸ್ಟೆಂಟ್: 1 ಹುದ್ದೆ

ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಅಗತ್ಯತೆಗಳು:

ನೇಮಕಾತಿಯ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ:

ಅಸಿಸ್ಟೆಂಟ್ ಮತ್ತು ಅಪ್ಪರ್ ಡಿವಿಷನ್ ಕ್ಲರ್ಕ್ (UDC):

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಕನಿಷ್ಠ ಶೇ. 60 ಅಂಕಗಳೊಂದಿಗೆ ಪದವಿ (Graduation) ಪೂರ್ಣಗೊಳಿಸಿರಬೇಕು. ಇದರೊಂದಿಗೆ ಕಂಪ್ಯೂಟರ್ ಬಳಕೆಯ ಮೂಲಭೂತ ಜ್ಞಾನ ಇರುವುದು ಕಡ್ಡಾಯವಾಗಿದೆ.

ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ ಮತ್ತು ಸ್ಟೆನೋಗ್ರಾಫರ್:

ಈ ಹುದ್ದೆಗಳಿಗೆ ಅಭ್ಯರ್ಥಿಗಳು ವಾಣಿಜ್ಯ ಅಥವಾ ಸೆಕ್ರೆಟೇರಿಯಲ್ ಅಭ್ಯಾಸದಲ್ಲಿ ಪದವಿ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಜೊತೆಗೆ ಸ್ಟೆನೋ-ಟೈಪಿಸ್ಟ್ ಅಥವಾ ಸ್ಟೆನೋಗ್ರಾಫರ್ ಆಗಿ ಕನಿಷ್ಠ 1 ವರ್ಷದ ವೃತ್ತಿ ಅನುಭವ ಇರಬೇಕು ಹಾಗೂ ಇಂಗ್ಲಿಷ್ ಸ್ಟೆನೋಗ್ರಫಿ ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ವಯೋಮಿತಿ ಮತ್ತು ವಯೋಸಡಿಲಿಕೆಯ ವಿವರಗಳು:

ಅಭ್ಯರ್ಥಿಗಳ ವಯಸ್ಸನ್ನು ಆಗಸ್ಟ್ 16, 2026 ಕ್ಕೆ ಅನ್ವಯವಾಗುವಂತೆ ಲೆಕ್ಕಹಾಕಲಾಗುತ್ತದೆ:

  • ಸಾಮಾನ್ಯ ವರ್ಗದ ಅಭ್ಯರ್ಥಿಗಳು: ಗರಿಷ್ಠ ವಯೋಮಿತಿ 28 ವರ್ಷಗಳು.
  • OBC ಅಭ್ಯರ್ಥಿಗಳು: ನಿಯಮಗಳ ಪ್ರಕಾರ 31 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.
  • SC / ST ಅಭ್ಯರ್ಥಿಗಳು: 33 ವರ್ಷಗಳವರೆಗೆ ವಯೋಸಡಿಲಿಕೆಯ ಸೌಲಭ್ಯ ಲಭ್ಯವಿದೆ.

ಇದನ್ನೂ ಓದಿ: ಇಸ್ರೋದಲ್ಲಿ 460 ಅಪ್ರೆಂಟಿಸ್ ಹುದ್ದೆಗಳ ಭರ್ತಿ; ಲಿಖಿತ ಪರೀಕ್ಷೆಯಿಲ್ಲದೆ ನೇರ ಆಯ್ಕೆ!

ವೇತನ ಶ್ರೇಣಿ ಮತ್ತು ಅರ್ಜಿ ಶುಲ್ಕ:

ಮಾಸಿಕ ವೇತನ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಪೇ ಮ್ಯಾಟ್ರಿಕ್ಸ್ ಲೆವೆಲ್-4 ಅಡಿಯಲ್ಲಿ ಇತರ ಭತ್ಯೆಗಳೊಂದಿಗೆ ತಿಂಗಳಿಗೆ ರೂ. 25,500 ಆರಂಭಿಕ ಮೂಲ ವೇತನ ಸಿಗಲಿದೆ.

ಅರ್ಜಿ ಶುಲ್ಕ:

ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ರೂ. ಆಗಿರುತ್ತದೆ. ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ದಿವ್ಯಾಂಗರು (PwBD), ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ. ಅರ್ಹ ಅಭ್ಯರ್ಥಿಗಳು ಇಸ್ರೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಗದಿತ ಕೊನೆಯ ದಿನಾಂಕವಾದ ಆಗಸ್ಟ್ 16, 2026 ರೊಳಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಟೀಮ್ ಇಂಡಿಯಾಗೆ ಹೊಸ ಫೀಲ್ಡಿಂಗ್ ಕೋಚ್ ನೇಮಕ! – Kannada News | Subhadeep Ghosh Replaces T Dilip as Team India’s Fielding Coach

ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಫೀಲ್ಡಿಂಗ್ ಕೋಚ್ ಆಗಿ ಸುಭದೀಪ್ ಘೋಷ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಫೀಲ್ಡಿಂಗ್ ಕೋಚ್ ಆಗಿದ್ದ ಟಿ. ದಿಲೀಪ್ ಅವರ ಒಪ್ಪಂದವನ್ನು ನವೀಕರಿಸದಿರಲು ಬಿಸಿಸಿಐ ನಿರ್ಧರಿಸಿದ ಬೆನ್ನಲ್ಲೇ, ಅವರ ಸ್ಥಾನಕ್ಕೆ ಸುಭದೀಪ್ ಅವರನ್ನು ಕ್ಷೇತ್ರರಕ್ಷಣಾ ತರಬೇತುದಾರರನ್ನಾಗಿ ನೇಮಿಸಿದೆ.

ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಡಿ ಹೊಸ ಕೋಚಿಂಗ್ ಸಿಬ್ಬಂದಿ ಭಾರತ ತಂಡವನ್ನು ಮುನ್ನಡೆಸಲಿದ್ದು, ಮುಂಬರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಸುಭದೀಪ್ ಘೋಷ್ ಅವರ ಪಾಲಿಗೆ ಮೊದಲ ಪ್ರಮುಖ ಸವಾಲಾಗಲಿದೆ.

ದೇಶಿ ಕ್ರಿಕೆಟ್‌ನ ಚುರುಕಿನ ಫೀಲ್ಡರ್!

ಕ್ರಿಕೆಟ್ ವಲಯದಲ್ಲಿ ‘ಜಾಯ್’ ಎಂದೇ ಜನಪ್ರಿಯರಾಗಿರುವ ಸುಭದೀಪ್ ಘೋಷ್ ಅವರು ನವೆಂಬರ್ 13, 1968 ರಂದು ಅಸ್ಸಾಂನ ದಿಗ್ಬೋಯ್‌ನಲ್ಲಿ ಜನಿಸಿದರು.

ದೇಶಿ ಕ್ರಿಕೆಟ್‌ನಲ್ಲಿ ಅಸ್ಸಾಂ ಮತ್ತು ರೈಲ್ವೇಸ್ ತಂಡಗಳನ್ನು ಪ್ರತಿನಿಧಿಸಿದ್ದ ಸುಭದೀಪ್ ಘೋಷ್ , ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಆಫ್ ಸ್ಪಿನ್ನರ್ ಆಗಿ ಕಣಕ್ಕಿಳಿದಿದ್ದರು. 1994-95 ರ ಅವಧಿಯಲ್ಲಿ ಪದಾರ್ಪಣೆ ಮಾಡಿ 2004 ರವರೆಗೆ ದೇಶೀಯ ಕ್ರಿಕೆಟ್​ನಲ್ಲಿ ಸಕ್ರಿಯರಾಗಿದ್ದರು. ಇದೇ ವೇಳೆ ಅವರು ತಮ್ಮ ಚುರುಕಿನ ಫೀಲ್ಡಿಂಗ್​ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ತಮ್ಮ ವೃತ್ತಿಜೀವನದಲ್ಲಿ 17 ಪ್ರಥಮ ದರ್ಜೆ ಪಂದ್ಯಗಳು (316 ರನ್) ಮತ್ತು 17 ಲಿಸ್ಟ್-ಎ ಪಂದ್ಯಗಳನ್ನು (307 ರನ್) ಆಡಿದ್ದಾರೆ. ರನ್ ಗಳಿಕೆಗಿಂತ ಹೆಚ್ಚಾಗಿ ಮೈದಾನದಲ್ಲಿ ಅತ್ಯಂತ ಚುರುಕಾದ ಹಾಗೂ ಅದ್ಭುತ ಫೀಲ್ಡರ್ ಆಗಿ ಅವರು ದೇಶಿ ಕ್ರಿಕೆಟ್‌ನಲ್ಲಿ ಹೆಸರು ಮಾಡಿದ್ದರು.

ಕೋಚಿಂಗ್ ಅನುಭವ:

ದೇಶೀಯ ನಿವೃತ್ತರಾದ ಬಳಿಕ ಸುಭದೀಪ್ ಅವರು ಬಿಸಿಸಿಐನ ತರಬೇತಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಅವರ ಕೋಚಿಂಗ್ ಹಾದಿಯ ಪ್ರಮುಖ ಮೈಲಿಗಲ್ಲುಗಳು ಇಲ್ಲಿವೆ.

ಎನ್‌ಸಿಎ ಮತ್ತು ಯುವ ತಂಡಗಳ ತರಬೇತಿ: ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದ ಅವಧಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA – ಪ್ರಸ್ತುತ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್) ಸೇರಿದ ಘೋಷ್, ಕಳೆದ 6-7 ವರ್ಷಗಳಿಂದ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2024 ರ ಅಂಡರ್-19 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆದ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಇವರೇ ಜವಾಬ್ದಾರಿ ನಿಭಾಯಿಸಿದ್ದರು. ಜೊತೆಗೆ ಇಂಡಿಯಾ-ಎ ತಂಡಗಳೊಂದಿಗೂ ಕೆಲಸ ಮಾಡಿದ್ದಾರೆ.

ಮಹಿಳಾ ತಂಡ ಮತ್ತು ಏಷ್ಯನ್ ಗೇಮ್ಸ್: 2021 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತೀಯ ಹಿರಿಯ ಮಹಿಳಾ ಕ್ರಿಕೆಟ್ ತಂಡದ ಫೀಲ್ಡಿಂಗ್ ವಿಭಾಗವನ್ನು ಮುನ್ನಡೆಸಿದ್ದರು. ಅಷ್ಟೇ ಅಲ್ಲದೆ, 2023 ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಪುರುಷರ ತಂಡದ ಕೋಚಿಂಗ್ ಸಿಬ್ಬಂದಿಯಾಗಿಯೂ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಝಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಭಾರತೀಯ ಯುವ ತಂಡಕ್ಕೂ ಇವರೇ ಫೀಲ್ಡಿಂಗ್ ತರಬೇತುದಾರರಾಗಿದ್ದರು.

ಐಪಿಎಲ್ ಅನುಭವ: ಐಪಿಎಲ್‌ನಲ್ಲೂ ಕೆಲಸ ಮಾಡಿರುವ ಅನುಭವ ಹೊಂದಿರುವ ಸುಭದೀಪ್, 2014 ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡ ಚಾಂಪಿಯನ್ ಆದಾಗ ಆ ತಂಡದ ಕೋಚಿಂಗ್ ಸಿಬ್ಬಂದಿಯಲ್ಲಿದ್ದರು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ವೈಭವ್​ನ ಅವಮಾನಿಸುವ ಉದ್ದೇಶವಿರಲಿಲ್ಲ: ಅಶ್ವಿನ್ ಸ್ಪಷ್ಟನೆ

ಒಟ್ಟಾರೆಯಾಗಿ ಹೇಳುವುದಾದರೆ, ಟೀಮ್ ಇಂಡಿಯಾದ ಫೀಲ್ಡಿಂಗ್ ಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಈಗ ಸುಭದೀಪ್ ಘೋಷ್ ಹೆಗಲಿಗೇರಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗಿನ ಹಳೆಯ ಒಡನಾಟ ಮತ್ತು ದೇಶಿ ಕ್ರಿಕೆಟ್‌ನಲ್ಲಿನ ಅವರ ಅಪಾರ ಕೋಚಿಂಗ್ ಅನುಭವವು ಭಾರತ ತಂಡಕ್ಕೆ ಹೊಸ ಚೈತನ್ಯ ನೀಡಲಿದೆಯೇ ಎಂಬುದನ್ನು ಮುಂಬರುವ ಶ್ರೀಲಂಕಾ ಸರಣಿಯಲ್ಲಿ ಕಾದು ನೋಡಬೇಕಿದೆ.

Source link

ಕಾವೇರಿ ನೀರು ಹಂಚಿಕೆ ವಿವಾದ: ರೈತರ ಪ್ರತಿಭಟನೆ ತೀವ್ರ, ಸಚಿವ ರಾಮಲಿಂಗಾ ರೆಡ್ಡಿ ತುರ್ತು ಸಭೆ – Kannada News | Cauvery Water Dispute: Karnataka Minister Ramalinga Reddy Calls Emergency Meeting Amid Farmers’ Protest

ಬೆಂಗಳೂರು, ಜುಲೈ 29: ಕಾವೇರಿ ನೀರು ಹಂಚಿಕೆ ವಿವಾದ ತೀವ್ರಗೊಂಡಿದ್ದು, ರೈತರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅವರು ತುರ್ತು ಸಭೆ ಕರೆದಿದ್ದಾರೆ. ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಲಿರುವ ಸಚಿವರು, ಕಾವೇರಿ ವಿಚಾರದಲ್ಲಿ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕಾವೇರಿ ಕಾನೂನು ಹೋರಾಟದ ಸಂಬಂಧ ದೆಹಲಿಯಲ್ಲಿ ವಕೀಲರೊಂದಿಗೆ ಸಭೆ ನಡೆಸಲಿದ್ದಾರೆ. ಹಿರಿಯ ನ್ಯಾಯವಾದಿ ಮೋಹನ್ ಕಾತರಕಿ ಸೇರಿದಂತೆ ತಜ್ಞರೊಂದಿಗೆ ಅವರು ಮಾತುಕತೆ ನಡೆಸುವ ಸಾಧ್ಯತೆ ಇದೆ.

ಸದ್ಯ, ಸರ್ಕಾರ ಕಾವೇರಿ ವಿವಾದದ ಕುರಿತು ಸರಿಯಾಗಿ ವಾದ ಮಂಡಿಸುತ್ತಿಲ್ಲ ಎಂಬ ಆರೋಪ ವಿರೋಧ ಪಕ್ಷದ ಶಾಸಕರಿಂದ, ದರ್ಶನ್ ಪುಟ್ಟಣಯ್ಯ ಅವರಂತಹ ಮುಖಂಡರಿಂದ ಕೇಳಿಬಂದಿದೆ. ವಾಸ್ತವ ಸ್ಥಿತಿಯನ್ನು ಆಯೋಗ ಅಥವಾ ಮಂಡಳಿಗೆ ಸಮರ್ಥವಾಗಿ ತೆರೆದಿಡಬೇಕು ಎಂದು ಈ ನಾಯಕರು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಸಭೆ ಮಹತ್ವ ಪಡೆದುಕೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಜೆಪಿ ಪ್ರತಿಭಟನೆ ವೇಳೆ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್, ಎಕ್ಸ್​ ಖಾತೆಗಳಿಗೆ ದೆಹಲಿ ಪೊಲೀಸರಿಂದ ನೋಟಿಸ್ – Kannada News | Delhi Police Issue Notices Over Alleged Offensive Social Media Posts During Protest

ನವದೆಹಲಿ, ಜುಲೈ 29: ದೆಹಲಿಯ ಜಂತರ್​ ಮಂತರ್ ಮತ್ತು ಇತರೆಡೆ ನಡೆದ ಸಿಜೆಪಿ ವಿದ್ಯಾರ್ಥಿ ಪ್ರತಿಭಟನೆ ಹಾಗೂ ಸಂಸದ್ ಚಲೋ ಮೆರವಣಿಗೆಯ ಹಿಂಸಾಚಾರದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ನಿಂದನೀಯ, ಆಕ್ಷೇಪಾರ್ಹ ಪೋಸ್ಟ್​ಗಳನ್ನು ಹಂಚಿಕೊಂಡಿದ್ದಕ್ಕಾಗಿ ದೆಹಲಿ ಪೊಲೀಸರು ಹಲವು ಸಾಮಾಜಿಕ ಖಾತೆಗಳಿಗೆ ನೋಟಿಸ್ ನೀಡಿದ್ದಾರೆ. ಕೆಲವು ಪ್ರಮುಖ ಸುದ್ದಿ ಪೋರ್ಟಲ್‌ಗಳ ಖಾತೆಗಳು ಹಾಗೂ ನಿಂದನೀಯ ಭಾಷೆ ಬಳಸಿದ ಬಳಕೆದಾರರ ವಿವರಗಳನ್ನು ಒದಗಿಸುವಂತೆ ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣ ‘ಎಕ್ಸ್’ಗೆ ಸೂಚನೆ ನೀಡಿದ್ದಾರೆ.

ಜುಲೈ 20 ರ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಪ್ರಧಾನಿಯವರ ವಿರುದ್ಧ ಬಳಸಲಾದ ಅಸಭ್ಯ ಕಾಮೆಂಟ್‌ಗಳು, ವೀಡಿಯೊಗಳು ಮತ್ತು ನಿಂದನೀಯ ಪೋಸ್ಟ್‌ಗಳನ್ನು ತಕ್ಷಣವೇ ಡಿಲೀಟ್ ಮಾಡುವಂತೆ ವಿವಿಧ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ದೆಹಲಿ ಸೈಬರ್ ಕ್ರೈಮ್ ವಿಭಾಗ ನಿರ್ದೇಶನ ನೀಡಿದೆ. ಕಾನೂನು ಉಲ್ಲಂಘನೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಪೋಸ್ಟ್‌ಗಳನ್ನು ಪತ್ತೆಹಚ್ಚಲು ದೆಹಲಿ ಪೊಲೀಸರ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ತಂಡವು ದಿನಪೂರ್ತಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಸ್ಕ್ಯಾನ್ ಮಾಡುತ್ತಿದೆ.

ಪ್ರತಿಭಟನೆಯ ಹೆಸರಿನಲ್ಲಿ ಸುಳ್ಳು ಸುದ್ದಿ, ವದಂತಿ ಹಾಗೂ ಭಾರಿ ಪ್ರಮಾಣದ ‘ಡೀಪ್‌ಫೇಕ್’ವೀಡಿಯೊಗಳನ್ನು ಹರಿಬಿಡುತ್ತಿದ್ದ, ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದೆ ಎನ್ನಲಾದ 400ಕ್ಕೂ ಹೆಚ್ಚು ‘ಎಕ್ಸ್’ ಖಾತೆಗಳನ್ನು ದೆಹಲಿ ಪೊಲೀಸರು ಈಗಾಗಲೇ ಗುರುತಿಸಿದ್ದಾರೆ. ಸಾಮಾಜಿಕ ಮಾಧ್ಯಮ ಮಧ್ಯವರ್ತಿ ನಿಯಮಗಳು ಹಾಗೂ ಬಿಎನ್‌ಎಸ್ ಅಡಿಯಲ್ಲಿ ದೆಹಲಿ ಪೊಲೀಸರ ಸೈಬರ್ ವಿಭಾಗವು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಸಮಾಜಿಕ ಶಾಂತಿ ಕೆಡಿಸುವ ಹಾಗೂ ಪ್ರಚೋದನಕಾರಿ ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಎದುರಾಗಲಿದೆ ಎಂದು ಎಚ್ಚರಿಸಿದೆ.

ಮತ್ತಷ್ಟು ಓದಿ: ಇನ್​​ಸ್ಟಾಗ್ರಾಂನಲ್ಲಿ ಪ್ರಧಾನಿ ಮೋದಿ ಹೊಸ ದಾಖಲೆ, 105 ಮಿಲಿಯನ್‌ ತಲುಪಿದ ಫಾಲೋವರ್ಸ್ ಸಂಖ್ಯೆ

ವಿದ್ಯಾರ್ಥಿ ಪ್ರತಿಭಟನೆಗಳ ಹಿಂದೆ ಕೆಲ ವಿದೇಶಿ ಹಾಗೂ ಸಮಾಜವಿರೋಧಿ ಶಕ್ತಿಗಳು ಸಾಮಾಜಿಕ ಜಾಲತಾಣಗಳನ್ನು ಬಳಸಿ ನಕಲಿ ವೀಡಿಯೊಗಳು ಮತ್ತು ನಿರೂಪಣೆಗಳನ್ನು ಸೃಷ್ಟಿಸಿ ಗಲಭೆ ಎಬ್ಬಿಸಲು ಯತ್ನಿಸುತ್ತಿವೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ಸೈಬರ್ ತನಿಖೆ ತೀವ್ರಗೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಮ್ ಚರಣ್ ಆಸ್ಪತ್ರೆ ಫೋಟೋ ವೈರಲ್; 8 ವಾರ ವಿಶ್ರಾಂತಿ ಕಡ್ಡಾಯ – Kannada News | Ram Charan Successfully Undergoes Wrist Surgery in Coimbatore photo viral Advised Eight Weeks of Rest

ಟಾಲಿವುಡ್‌ನ ಖ್ಯಾತ ನಟ ರಾಮ್ ಚರಣ್  (Ram Charan) ಬಲಗೈ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಭಾನುವಾರ ಯಶಸ್ವಿಯಾಗಿದೆ. ತಮಿಳುನಾಡಿನ ಕೊಯಮತ್ತೂರಿನ ಗಂಗಾ ಆಸ್ಪತ್ರೆಯಲ್ಲಿ ಈ ಆಪರೇಷನ್ ನಡೆದಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ತಂದೆ ಚಿರಂಜೀವಿ, ತಾಯಿ ಸುರೇಖಾ ಮತ್ತು ಪತ್ನಿ ಉಪಾಸನಾ ಕೊನಿಡೇಲ ಅವರು ನಟನ ಜೊತೆಯಲ್ಲಿದ್ದಾರೆ. ರಾಮ್ ಚರಣ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಹೀಗಿರುವಾಗಲೇ ಅವರ ಆಸ್ಪತ್ರೆ ಫೋಟೋ ವೈರಲ್ ಆಗಿದೆ.

ಮಿಯಾಮಿ ವೈದ್ಯರ ತಂಡದಿಂದ ಚಿಕಿತ್ಸೆ

ರಾಮ್ ಚರಣ್ ಅವರಿಗೆ ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಖ್ಯಾತ ವೈದ್ಯ ಡಾ. ಎಸ್. ರಾಜಶೇಖರನ್ ನೇತೃತ್ವದಲ್ಲಿ ಸರ್ಜರಿ ನಡೆಸಲಾಯಿತು. ಇದಕ್ಕಾಗಿ ಮಿಯಾಮಿಯಿಂದ ಅಂತರರಾಷ್ಟ್ರೀಯ ಪ್ರಸಿದ್ಧ ಕೈ ಮತ್ತು ಮಣಿಕಟ್ಟು ತಜ್ಞ ಡಾ. ಅಲೆಜಾಂಡ್ರೋ ಬಾಡಿಯಾ ಅವರನ್ನು ಕರೆಸಲಾಗಿತ್ತು. ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ಆಸ್ಪತ್ರೆ ಮಂಡಳಿ ತಿಳಿಸಿದೆ. ಚಿಕಿತ್ಸೆಯ ಫಲಿತಾಂಶದ ಬಗ್ಗೆ ವೈದ್ಯರ ತಂಡ ತೃಪ್ತಿ ವ್ಯಕ್ತಪಡಿಸಿದೆ. ಸದ್ಯ ರಾಮ್ ಚರಣ್ ಅವರಿಗೆ ಎಂಟು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಅಲ್ಲಿಯವರೆಗೆ ಅವರು ಯಾವುದೇ ಶೂಟಿಂಗ್‌ನಲ್ಲಿ ಭಾಗವಹಿಸುವಂತಿಲ್ಲ.

ನೋವಿನಲ್ಲೇ ಶೂಟಿಂಗ್ ಮುಗಿಸಿದ್ದ ಚರಣ್

ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣದ ವೇಳೆ ಈ ಗಾಯವಾಗಿತ್ತು. ಕುಸ್ತಿ ದೃಶ್ಯದ ಶೂಟಿಂಗ್ ಸಮಯದಲ್ಲಿ ಚರಣ್ ಮಣಿಕಟ್ಟು ಜಖಂಗೊಂಡಿತ್ತು. ಆದರೂ ಅವರು ಶೂಟಿಂಗ್ ನಿಲ್ಲಿಸದೆ ನೋವಿನಲ್ಲೇ ನಟಿಸಿದ್ದರು. ಚಿತ್ರದ ಪ್ರಚಾರದ ಕೆಲಸಗಳನ್ನೂ ಮುಗಿಸಿಕೊಟ್ಟಿದ್ದರು. ನಟನ ಈ ವೃತ್ತಿಪರತೆಗೆ ‘ಪೆದ್ದಿ’ ನಿರ್ಮಾಣ ಸಂಸ್ಥೆ ವೃದ್ಧಿ ಸಿನಿಮಾಸ್ ಧನ್ಯವಾದ ತಿಳಿಸಿದೆ. ಚಿತ್ರರಂಗದ ಹಲವರು ರಾಮ್ ಚರಣ್ ಅವರ ಬದ್ಧತೆಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ‘ರಾಮ್ ಚರಣ್ ಹೊಸ ತಲೆಮಾರಿನ ಮೆಗಾಸ್ಟಾರ್’; ತಮ್ಮ ಬಿರುದನ್ನು ಮಗನಿಗೆ ಕೊಟ್ಟ ಚಿರಂಜೀವಿ

ಸಿನಿಮಾ ರಿಲೀಸ್ ಬಳಿಕ ಆಪರೇಷನ್

ಈ ವರ್ಷದ ಆರಂಭದಲ್ಲೂ ‘ಪೆದ್ದಿ’ ಸೆಟ್‌ನಲ್ಲಿ ಚರಣ್ ಅವರ ಹಣೆಗೆ ಗಂಭೀರ ಗಾಯವಾಗಿತ್ತು. ಆಗ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯಲ್ಲಿ ಸರ್ಜರಿ ಮಾಡಲಾಗಿತ್ತು. ಆ ಸಮಯದಲ್ಲಿಯೇ ಮಣಿಕಟ್ಟಿಗೂ ಸರ್ಜರಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದರು. ಆದರೆ ರಾಮ್ ಚರಣ್ ಸಿನಿಮಾ ಬಿಡುಗಡೆಯಾಗುವವರೆಗೆ ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದರು. ಜೂನ್ 4 ರಂದು 350 ಕೋಟಿ ಬಜೆಟ್‌ನ ‘ಪೆದ್ದಿ’ ಸಿನಿಮಾ ಅದ್ಧೂರಿಯಾಗಿ ತೆರೆಕಂಡಿತ್ತು. ಚಿತ್ರದಲ್ಲಿ ಶಿವರಾಜ್‌ಕುಮಾರ್, ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗುಣಮುಖರಾದ ಬಳಿಕ ಚರಣ್ ನಿರ್ದೇಶಕ ಸುಕುಮಾರ್ ಅವರ ‘RC17’ ಚಿತ್ರದ ಕೆಲಸ ಆರಂಭಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬ: ಎಂಜಿನಿಯರಿಂಗ್ ಪ್ರವೇಶದ ಅಂತಿಮ ಗಡುವು ವಿಸ್ತರಣೆಗೆ KEA ಮನವಿ – Kannada News | KEA Urges AICTE to Extend Engineering Admission Deadline Amid Lag in Medical Seat Counselling

ಎಂಜಿನಿಯರಿಂಗ್ ಪ್ರವೇಶದ ಅಂತಿಮ ಗಡುವು ವಿಸ್ತರಣೆಗೆ KEA ಮನವಿ

ಬೆಂಗಳೂರು, ಜುಲೈ 29: ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆ, ಎಂಜಿನಿಯರಿಂಗ್ ಪ್ರವೇಶದ ಅಂತಿಮ ಗಡುವನ್ನು ವಿಸ್ತರಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE)ಗೆ ಮನವಿ ಮಾಡಿದೆ. ಇದೇ ಬೇಡಿಕೆಯನ್ನು COMEDK ಕೂಡ AICTEಗೆ ಸಲ್ಲಿಸಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ವೈದ್ಯಕೀಯ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ತಡವಾಗಿ ಪ್ರಕಟಿಸಿರುವುದು ಹಾಗೂ ರಾಜ್ಯ ಸರ್ಕಾರದಿಂದ ವೈದ್ಯಕೀಯ ಸೀಟುಗಳ ಮ್ಯಾಟ್ರಿಕ್ಸ್ ತಡವಾಗಿ ಲಭ್ಯವಾಗಿರುವುದರಿಂದ ವೈದ್ಯಕೀಯ ಕೌನ್ಸೆಲಿಂಗ್ ವಿಳಂಬವಾದ ಕಾರಣ ಈ ಮನವಿ ಮಾಡಲಾಗಿದೆ.

ಹಿಂದಿರುಗಿಸಲಾಗುವ ಸೀಟ್​​ಗಳ ಬಗ್ಗೆ ಮಾಹಿತಿ ಕಷ್ಟ

AICTE ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ಎಂಜಿನಿಯರಿಂಗ್ ಪ್ರವೇಶ ಪ್ರಕ್ರಿಯೆಯನ್ನು ಆಗಸ್ಟ್ 14ರೊಳಗೆ ಪೂರ್ಣಗೊಳಿಸಬೇಕು. ಆದರೆ, ಪ್ರಥಮ ವರ್ಷದ ತರಗತಿಗಳು ಆಗಸ್ಟ್ 1ರಿಂದಲೇ ಆರಂಭವಾಗಬೇಕಾಗಿದೆ. ಇದೀಗ ನೀಟ್ ಮರುಪರೀಕ್ಷೆಯ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ, ಮೊದಲ ಸುತ್ತಿನ ವೈದ್ಯಕೀಯ ಸೀಟು ಹಂಚಿಕೆ ಪೂರ್ಣಗೊಳ್ಳುವವರೆಗೆ ಎಂಜಿನಿಯರಿಂಗ್ ಸೀಟುಗಳನ್ನು ಕಾಯ್ದಿರಿಸಿರುವ ವಿದ್ಯಾರ್ಥಿಗಳು ಎಷ್ಟು ಸೀಟುಗಳನ್ನು ಹಿಂದಿರುಗಿಸುತ್ತಾರೆ ಎಂಬುದು KEAಗೆ ತಿಳಿಯುವುದಿಲ್ಲ. ಕೆಲವರು ಮೊದಲು ಎಂಜಿನಿಯರಿಂಗ್ ಸೀಟು ಪಡೆದು ಬಳಿಕ ವೈದ್ಯಕೀಯ ಪ್ರವೇಶ ದೊರೆತರೆ ಆ ಸೀಟುಗಳನ್ನು ಹಿಂತಿರುಗಿಸುತ್ತಾರೆ. ಮೊದಲ ಸುತ್ತಿನ ವೈದ್ಯಕೀಯ ಕೌನ್ಸೆಲಿಂಗ್ ನಂತರ ಹಿಂದಿರುಗುವ ಆ ಸೀಟುಗಳನ್ನು ಮತ್ತೆ ಎಂಜಿನಿಯರಿಂಗ್ ಸೀಟುಗಳ ಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು KEA ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಹಾರ, ಯುಪಿಗಿಂತ ಕರ್ನಾಟಕದಲ್ಲೇ ಹೆಚ್ಚು ಶಾಲೆ ತೊರೆಯುತ್ತಿರುವ ಹೆಣ್ಣುಮಕ್ಕಳು!

ಎಲ್ಲ ಸುತ್ತಿನ ಕೌನ್ಸೆಲಿಂಗ್ ಅಸಾಧ್ಯ

ಉತ್ತಮ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಬಯಸುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಯಾವುದೇ ಅನಾನುಕೂಲವಾಗದಂತೆ ನೋಡಿಕೊಳ್ಳಲು ಎಂಜಿನಿಯರಿಂಗ್ ಪ್ರವೇಶದ ಅಂತಿಮ ದಿನಾಂಕವನ್ನು ವಿಸ್ತರಿಸುವಂತೆ KEA ಮನವಿ ಮಾಡಿದೆ. KEA ಅಧಿಕಾರಿಗಳ ಪ್ರಕಾರ, ರಾಜ್ಯ ಸರ್ಕಾರದಿಂದ ಸೀಟು ಮ್ಯಾಟ್ರಿಕ್ಸ್ ತಡವಾಗಿ ಬಂದ ಕಾರಣ ಕೌನ್ಸೆಲಿಂಗ್ ಪ್ರಕ್ರಿಯೆಯೇ ವಿಳಂಬವಾಗಿದೆ. ಹೀಗಾಗಿ AICTE ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಎಲ್ಲ ಸುತ್ತಿನ ಕೌನ್ಸೆಲಿಂಗ್ ಪೂರ್ಣಗೊಳಿಸುವುದು ಅಸಾಧ್ಯವಾಗಿದೆ.

ಇದೇ ವೇಳೆ, ಎಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರು ಕೂಡ AICTE ನಿಗದಿಪಡಿಸಿರುವ ಗಡುವಿನ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಈ ವೇಳಾಪಟ್ಟಿ ಸುಪ್ರೀಂ ಕೋರ್ಟ್ ಆದೇಶದಂತೆ ಇರಬಹುದು. ಆದರೆ ಹಲವು ರಾಜ್ಯಗಳು ಇನ್ನೂ ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿವೆ. ಅಂತಹ ಸಂದರ್ಭದಲ್ಲಿ ತರಗತಿ 12ರ ಫಲಿತಾಂಶ ಪ್ರಕಟಿಸಲು ಯಾವುದೇ ಏಕರೂಪದ ಗಡುವನ್ನು ನಿಯಂತ್ರಣ ಸಂಸ್ಥೆಗಳು ನಿಗದಿಪಡಿಸದಿದ್ದರೆ ಈ ಪ್ರವೇಶ ವೇಳಾಪಟ್ಟಿಯ ಪ್ರಯೋಜನವೇನು? ಎಂದು ಬೆಂಗಳೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರೊಬ್ಬರು ಅಭಿಪ್ರಾಯಪಟ್ಟಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಇಳಿ ವಯಸ್ಸಿನ ಅಜ್ಜನೊಂದಿಗೆ ಊರು ಸುತ್ತಿ ಖುಷಿ ಪಟ್ಟ ಮೊಮ್ಮಗ – Kannada News | Grandson took his 100 year old grandfather out, video goes viral

ಅಜ್ಜ ಅಜ್ಜಿಯಂದಿರ (grandparents) ಪ್ರೀತಿಗೆ ಬೆಲೆ ಕಟ್ಟೋಕೆ ಆಗಲ್ಲ. ಮಕ್ಕಳಿದ್ದಾಗ ತಮಗೆ ಬೇಕಾದದ್ದು ಕೊಡಿಸಿದ್ದ ಈ ಹಿರಿಜೀವಗಳನ್ನು ವಯಸ್ಸಾದ ಕಾಲಘಟ್ಟದಲ್ಲಿ ನೋಡಿಕೊಳ್ಳುವುದು ಕರ್ತವ್ಯ. ಈ ಕೆಲಸವನ್ನು ಮೊಮ್ಮಗನು ಚಾಚು ತಪ್ಪದೇ ಮಾಡಿದ್ದಾನೆ. ಹೌದು, 100ರ ಹರೆಯದ ಅಜ್ಜನನ್ನು ತನ್ನ ಕಾರಿನಲ್ಲಿ ಹೊರಗಡೆ ಕರೆದುಕೊಂಡು ಹೋಗಿದ್ದಾನೆ. ಊರು ಸುತ್ತಿಸಿ ಅಜ್ಜನಿಗೆ ತಿಂಡಿ ಕೊಡಿಸಿದ್ದು ಅವರೊಂದಿಗೆ ಅಮೂಲ್ಯ ಸಮಯ ಕಳೆದಿದ್ದಾನೆ. ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ಅಜ್ಜ ಅಜ್ಜಿಯನ್ನು ನೆನಪಿಸಿಕೊಂಡಿದ್ದಾರೆ.

ನಯನ್ ಸೂರ್ಯ (Nayan surya) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಯುವಕನೊಬ್ಬ ತನ್ನ 100ರ ಹರೆಯದ ಅಜ್ಜನನ್ನು ಊರು ಸುತ್ತಿಸಲು ಕರೆದುಕೊಂಡು ಹೋಗಿದ್ದಾನೆ. ಇಲ್ಲಿ ನೀವು ತನ್ನ ಮೊಮ್ಮಕ್ಕಳ ಜತೆಗೆ ಕಾರಿನಲ್ಲಿ ತೆರಳುತ್ತಿರುವ ಅಜ್ಜನನ್ನು ಕಾಣಬಹುದು. ಇದೇ ವೇಳೆ ಹೋಟೆಲ್‌ಗೆ ಕರೆದುಕೊಂಡು ಹೋಗಿ ಚಹಾ ಹಾಗೂ ತಿಂಡಿಯನ್ನು ಕೊಡಿಸಿರುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮನೆಗೆ ಮರಳುತ್ತಿದ್ದಂತೆ ಅಜ್ಜಿಯನ್ನು ಕಂಡು ಕುಣಿದು ಕುಪ್ಪಳಿಸಿದ ಯುವಕ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಅಜ್ಜ ಅಜ್ಜಿಯೊಂದಿಗೆ ಅಮೂಲ್ಯ ಸಮಯ ಕಳೆಯುವ ನೀವೇ ಪುಣ್ಯವಂತರು ಎಂದಿದ್ದಾರೆ. ಮತ್ತೊಬ್ಬರು, ಹಿರಿಜೀವಕ್ಕೆ ಎಷ್ಟು ಖುಷಿಯಾಗಿರಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ವಿಡಿಯೋ ನೋಡಿ ಖುಷಿ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ‘ಬ್ಲಾಕ್ ಪ್ಯಾಂಥರ್’ ಹುಡುಕಿದ ಮಾರ್ವೆಲ್, ಯಾರು ಈ ಡೇವಿಡ್? – Kannada News | Who is David Jonsson? Marvel’s Next Black Panther After Chadwick Boseman

‘ಐರನ್ ಮ್ಯಾನ್’, ‘ಸೂಪರ್ ಮ್ಯಾನ್’, ‘ಸ್ಪೈಡರ್ ಮ್ಯಾನ್’, ‘ಥಾರ್’, ‘ಬ್ಲಾಕ್ ವಿಡೊ’, ‘ಡಾಕ್ಟರ್ ಸ್ಟ್ರೇಂಜ್’ ರೀತಿ ‘ಬ್ಲಾಕ್ ಪ್ಯಾಂಥರ್’ ಸಹ ಬಲು ಜನಪ್ರಿಯ ಸೂಪರ್ ಹೀರೋ. ಮಾರ್ವೆಲ್​​ನ (Marvel) ಈ ಸೂಪರ್ ಹೀರೋ, ‘ಅವೇಂಜರ್ಸ್’ ತಂಡದಲ್ಲಿಯೂ ಇದ್ದಾನೆ. ‘ಬ್ಲಾಕ್ ಪ್ಯಾಂಥರ್’ ಮೊದಲು ಬಿಡುಗಡೆ ಆದಾಗ ಚಾಡ್ವಿಕ್ ಬೋಸ್ಮನ್, ‘ಬ್ಲಾಕ್ ಪ್ಯಾಂಥರ್’ ಆಗಿ ನಟಿಸಿದ್ದರು. ಅವರ ಪಾತ್ರ ಭಾರಿ ದೊಡ್ಡ ಹಿಟ್ ಆಯ್ತು. ‘ಬ್ಲಾಕ್ ಪ್ಯಾಂಥರ್’ಗೆ ಜನಪ್ರಿಯತೆ ತಂದುಕೊಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿತ್ತು. ಆದರೆ 2020ರಲ್ಲಿ ಅವರು ಕ್ಯಾನ್ಸರ್​​ನಿಂದಾಗಿ ನಿಧನ ಹೊಂದಿದರು. ಈಗ ಅವರ ನಿಧನದ ಆರು ವರ್ಷಗಳ ಬಳಿಕ ಮಾರ್ವೆಲ್ ಹೊಸ ‘ಬ್ಲಾಕ್ ಪ್ಯಾಂಥರ್’ ಅನ್ನು ಹುಡುಕಿದೆ.

ಬ್ರಿಟಿಷ್ ನಟ ಡೇವಿಡ್ ಜಾನ್ಸನ್ ಇನ್ನು ಮುಂದಿನ ಸಿನಿಮಾಗಳಲ್ಲಿ ‘ಬ್ಲಾಕ್ ಪ್ಯಾಂಥರ್’ ಆಗಿ ನಟಿಸಲಿದ್ದಾರೆ. ಸ್ಯಾನ್ ಡಿಯಾಗೋ ಕಾಮಿಕ್ ಕಾನ್‌ನಲ್ಲಿ ಹೊಸ ಬ್ಲ್ಯಾಕ್ ಪ್ಯಾಂಥರ್ ಆಗಿ ಡೇವಿನ್ ಜಾನ್ಸನ್ ಅವರನ್ನು ಪರಿಚಯಿಸಲಾಯ್ತು. ಈ ಪಾತ್ರವು ಅವರ ವೃತ್ತಿಜೀವನದ ಇದುವರೆಗಿನ ಅತ್ಯುನ್ನತ ಮೈಲಿಗಲ್ಲು ಎಂದು ಗುರುತಿಸಲ್ಪಟ್ಟಿದೆ. ಜೊನ್ಸನ್ ಅವರು ಈ ಹಿಂದೆ ಟೆಲಿವಿಷನ್, ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ತಮ್ಮ ನಟನೆ ಮಾಡಿದ್ದಾರೆ. ಆದರೆ ಬ್ಲಾಕ್ ಪ್ಯಾಂಥರ್ ಅವರ ಈ ವರೆಗಿನ ಅತ್ಯುತ್ತಮ ಅವಕಾಶ.

ಇಂಗ್ಲೆಂಡ್‌ನ ಲಂಡನ್‌ನಲ್ಲಿ ಜನಿಸಿದ ಜೊನ್ಸನ್, ಆರಂಭದಲ್ಲೇ ನಟನೆಯಲ್ಲಿ ಒಲವು ಬೆಳೆಸಿಕೊಂಡರು ಮತ್ತು ವಿಶ್ವದ ಅತ್ಯಂತ ಪ್ರತಿಷ್ಠಿತ ನಾಟಕ ಶಾಲೆಗಳಲ್ಲಿ ಒಂದಾದ ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್‌ನಲ್ಲಿ (RADA) ಅಧ್ಯಯನ ಮಾಡಿದರು. ಈ ಸಂಸ್ಥೆಯು ಆಂಥೋನಿ ಹಾಪ್ಕಿನ್ಸ್, ಟಾಮ್ ಹಿಡ್ಲ್‌ಸ್ಟನ್, ಸಿಂಥಿಯಾ ಎರಿವೋ, ಕೆನ್ನೆತ್ ಬ್ರಾನಾಗ್, ರಾಲ್ಫ್ ಫೈನ್ಸ್ ಮುಂತಾದ ಹಲವಾರು ಹೆಸರಾಂತ ಬ್ರಿಟಿಷ್ ನಟರನ್ನು ಚಿತ್ರರಂಗಕ್ಕೆ ನೀಡಿದೆ. ಅದೇ ಸಂಸ್ಥೆಯಲ್ಲಿ ನಟನೆ ಕಲಿತ ಡೇವಿಡ್ ಜಾನ್ಸನ್, ಟಿವಿ ಮತ್ತು ರಂಗಭೂಮಿಯಲ್ಲಿ ನಟನೆ ಮೂಲಕ ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ:ವಿಶ್ವದ ಟಾಪ್ ಸಿನಿಮಾ ನಿರ್ದೇಶಕನಿಗೆ ಭಾರತದ ಈ ನಿರ್ದೇಶಕ ಅಚ್ಚು-ಮೆಚ್ಚು

‘ಇಂಡಸ್ಟ್ರಿ’ ನಾಟಕದಲ್ಲಿ ಗಸ್ ಸ್ಯಾಕಿ ಪಾತ್ರವನ್ನು ನಿರ್ವಹಿಸುವ ಮೂಲಕ ಜೊನ್ಸನ್ ಮೊದಲು ಗಮನ ಸೆಳೆದರು. 2023ರ ಪ್ರಣಯ ಹಾಸ್ಯ ಚಿತ್ರ ‘ರೈ ಲೇನ್’ ಮೂಲಕ ಅವರು ತಮ್ಮ ಖ್ಯಾತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದರು. ನಂತರ ಈ ನಟ ‘ಏಲಿಯನ್: ರೋಮುಲಸ್’ ಚಿತ್ರದಲ್ಲಿ ಕಾಣಿಸಿಕೊಂಡರು. ಈಗ ಹಲವು ಹಂತದ ಆಡಿಷನ್, ಪರೀಕ್ಷೆಗಳನ್ನು ದಾಟಿ ಪ್ರತಿಷ್ಠಿತ ‘ಬ್ಲಾಕ್ ಪ್ಯಾಂಥರ್’ ಪಾತ್ರ ತಮ್ಮದಾಗಿಸಿಕೊಂಡಿದ್ದಾರೆ.

ಚಾಡ್ವಿಕ್ ಬೋಸ್​​ಮನ್ ನಿಧನದ ಬಳಿಕ 2022 ರಲ್ಲಿ ಒಂದು ‘ಬ್ಲಾಕ್ ಪ್ಯಾಂಥರ್’ ಸಿನಿಮಾ ಬಂದಿತಾದರೂ ಸಿನಿಮಾನಲ್ಲಿ ಬ್ಲಾಕ್ ಪ್ಯಾಂಥರ್​ನ ತಂಗಿ ಅಣ್ಣನ ಜವಾಬ್ದಾರಿ ನಿರ್ವಹಿಸುವ ಕತೆ ಹೇಳಲಾಗಿತ್ತು. ಈಗ ಕೊನೆಗೂ ಹೊಸ ಬ್ಲಾಕ್ ಪ್ಯಾಂಥರ್ ಅನ್ನು ಮಾರ್ವೆಲ್ ಹುಡುಕಿದ್ದು, ಹೊಸ ನಟನೊಟ್ಟಿಗೆ, ಹೊಸ ‘ಬ್ಲಾಕ್ ಪ್ಯಾಂಥರ್’ ಸಿನಿಮಾ 2029ಕ್ಕೆ ಬಿಡುಗಡೆ ಆಗಲಿದೆಯಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:30 am, Wed, 29 July 26

Source link

ನೈಸ್ ರಸ್ತೆ ಭೂಸ್ವಾಧೀನ ಪ್ರಕರಣ: ನೂರಾರು ರೈತರಿಗೆ ಹೈಕೋರ್ಟ್ ಬಿಗ್ ರಿಲೀಫ್, ನೈಸ್ ಮೇಲ್ಮನವಿ ವಜಾ – Kannada News | Karnataka High Court Dismisses NICE Appeal in Land Acquisition Case, Major Relief for Hundreds of Farmers

ನೈಸ್‌ಗೆ ಹೈಕೋರ್ಟ್ ಶಾಕ್Image Credit source: tv9

ಬೆಂಗಳೂರು, ಜುಲೈ 29: ನೈಸ್ ರಸ್ತೆ (NICE Road) ಯೋಜನೆಗಾಗಿ ಕೆಐಎಡಿಬಿಯಿಂದ ನಡೆದ ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನೂರಾರು ರೈತರಿಗೆ ಕರ್ನಾಟಕ ಹೈಕೋರ್ಟ್ (Karnataka High Court) ಬುಧವಾರ ಮಹತ್ವದ ರಿಲೀಫ್ ನೀಡಿದೆ. ಭೂಸ್ವಾಧೀನ ರದ್ದು ಪ್ರಶ್ನಿಸಿ ನೈಸ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ನ್ಯಾಯಮೂರ್ತಿ ಡಿಕೆ ಸಿಂಗ್ ಹಾಗೂ ನ್ಯಾಯಮೂರ್ತಿ ಟಿಎಂ ನದಾಫ್ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಪ್ರಕರಣದಲ್ಲಿ ರೈತರ ಪರ ಹಿರಿಯ ವಕೀಲ ಹೆಚ್‌.ಎನ್. ಶಶಿಧರ್ ವಾದ ಮಂಡಿಸಿದ್ದರು.

ಉನ್ನತ ಮಟ್ಟದ ತನಿಖೆ ಅಗತ್ಯ ಎಂದ ಹೈಕೋರ್ಟ್

ವಿಚಾರಣೆ ವೇಳೆ, ನೈಸ್ ರಸ್ತೆ ಯೋಜನೆಗೆ ಸಂಬಂಧಿಸಿದ ಹಲವು ಗಂಭೀರ ಅಂಶಗಳ ಬಗ್ಗೆ ಹೈಕೋರ್ಟ್ ಪ್ರಸ್ತಾಪಿಸಿದೆ. ನೈಸ್ ರಸ್ತೆ ನಿರ್ಮಾಣದ ವೇಳೆ ಕೆರೆಗಳು ಹಾಗೂ ಜಮೀನುಗಳನ್ನು ಅತಿಕ್ರಮಿಸಿರುವ ಆರೋಪಗಳಿದ್ದು, ಈ ಎಲ್ಲ ವಿಷಯಗಳ ಕುರಿತು ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂದು ಪೀಠ ಹೇಳಿದೆ.

ರೈತರಿಗೆ ಪರಿಹಾರ ನೀಡದ ಬಗ್ಗೆ ಉಲ್ಲೇಖ

ರಸ್ತೆ ಬಳಕೆದಾರರಿಂದ ದೊಡ್ಡ ಪ್ರಮಾಣದಲ್ಲಿ ಟೋಲ್ ಶುಲ್ಕ ಸಂಗ್ರಹಿಸಲಾಗಿದ್ದರೂ, ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರ ನೀಡದೆ ಭೂಮಿ ವಶಕ್ಕೆ ಪಡೆಯಲಾಗಿದೆ ಎಂಬ ಆರೋಪಗಳನ್ನೂ ನ್ಯಾಯಾಲಯ ಉಲ್ಲೇಖಿಸಿದೆ.

ಇದೇ ವೇಳೆ, ನೈಸ್ ಸಂಸ್ಥೆಯ ಅಕ್ರಮಗಳ ಬಗ್ಗೆ ಸರ್ಕಾರವೂ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಹೈಕೋರ್ಟ್, ಈ ಸಂಪೂರ್ಣ ಪ್ರಕ್ರಿಯೆ ಕುರಿತು ಸ್ವತಂತ್ರ ತನಿಖೆ ಹಾಗೂ ಫೊರೆನ್ಸಿಕ್ ಆಡಿಟ್ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಬೆಂಗಳೂರು ಸವಾರರಿಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ನೈಸ್ ರಸ್ತೆ, ಇ-ಸಿಟಿ ಫ್ಲೈಓವರ್ ಟೋಲ್ ದರ ಭಾರಿ ಏರಿಕೆ

ಈ ಹಿನ್ನೆಲೆಯಲ್ಲಿ, ಭೂಸ್ವಾಧೀನ ರದ್ದು ಪ್ರಶ್ನಿಸಿ ನೈಸ್ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠ ವಜಾಗೊಳಿಸಿದ್ದು, ಪ್ರಕರಣದಲ್ಲಿ ರೈತರ ಪರ ಮಹತ್ವದ ಬೆಳವಣಿಗೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version