Guru Purnima 2026: ಗುರು ಪೂರ್ಣಿಮೆಯಂದು ಗುರುವಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಗಳಿವು – Kannada News | Guru purnima 2026 significance rituals and best gift ideas for your guru

ದೇಶಾದ್ಯಂತ ಗುರು ಪೂರ್ಣಿಮೆ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಪವಿತ್ರ ದಿನವನ್ನು ‘ವ್ಯಾಸ ಪೌರ್ಣಮಿ’ ಎಂದೂ ಕರೆಯಲಾಗುತ್ತದೆ. ಏಕೆಂದರೆ ಮಹರ್ಷಿ ವೇದವ್ಯಾಸರ ಜನ್ಮ ದಿನಾಚರಣೆಯನ್ನು ಆಷಾಢ ಮಾಸದ ಈ ಪೂರ್ಣಿಮೆಯಂದೇ ಆಚರಿಸಲಾಗುತ್ತದೆ.

ಸನಾತನ ಧರ್ಮದಲ್ಲಿ ಗುರುವಿಗೆ ದೇವರಿಗಿಂತಲೂ ಉನ್ನತ ಹಾಗೂ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ. ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಿ, ಜ್ಞಾನದ ಬೆಳಕಿನತ್ತ ಶಿಷ್ಯನನ್ನು ಮುನ್ನಡೆಸುವ ದಿವ್ಯ ಚೇತನವೇ ಗುರು. ಹೀಗಾಗಿ, ಗುರು ಪೂರ್ಣಿಮೆಯ ದಿನದಂದು ಶಿಷ್ಯರು ತಮ್ಮ ಗುರುಗಳನ್ನು ಪೂಜಿಸಿ, ಆಶೀರ್ವಾದ ಪಡೆಯಲು ಗುರುದಕ್ಷಿಣೆ ಅಥವಾ ವಿಶೇಷ ಉಡುಗೊರೆಗಳನ್ನು ನೀಡುವ ಸಂಪ್ರದಾಯವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಗುರುವಿಗೆ ನೀಡಿ ಆಶೀರ್ವಾದ ಪಡೆಯಬಹುದಾದ ಶುಭಕರ ಉಡುಗೊರೆಗಳು ಇಲ್ಲಿವೆ.

ಗುರು ಪೂರ್ಣಿಮೆಯಂದು ನೀಡಬಹುದಾದ ಶ್ರೇಷ್ಠ ಉಡುಗೊರೆಗಳು:

ಹೊಸ ವಸ್ತ್ರಗಳನ್ನು ಅರ್ಪಿಸುವುದು:

ಗುರು ಪೂರ್ಣಿಮೆಯಂದು ನಿಮ್ಮ ಗುರುಗಳಿಗೆ ಹೊಸ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ. ನಿಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಧೋತಿ-ಕುರ್ತಾ, ಕುರ್ತಾ-ಪೈಜಾಮ, ಸೀರೆ ಅಥವಾ ಅವರಿಗೆ ಉಪಯುಕ್ತವಾಗುವ ವಸ್ತ್ರಗಳನ್ನು ನೀಡಬಹುದು. ನಿಮ್ಮ ಗುರುಗಳು ಯಾವುದೇ ನಿರ್ದಿಷ್ಟ ಶೈಲಿಯ ಉಡುಪನ್ನು ಧರಿಸುತ್ತಿದ್ದರೆ, ಅವರ ಇಷ್ಟಕ್ಕೆ ತಕ್ಕಂತೆ ಆಯ್ಕೆ ಮಾಡುವುದು ಹೆಚ್ಚು ಸೂಕ್ತ.

ಆಧ್ಯಾತ್ಮಿಕ ಹಾಗೂ ಜ್ಞಾನದ ಗ್ರಂಥಗಳು:

ಗುರು ಎಂದರೆ ಸ್ವತಃ ಜ್ಞಾನದ ಸಂಕೇತ. ಅದಕ್ಕಾಗಿಯೇ ಶ್ರೇಷ್ಠ ಪುಸ್ತಕಗಳು ಅಥವಾ ಆಧ್ಯಾತ್ಮಿಕ ಗ್ರಂಥಗಳನ್ನು ನೀಡುವುದು ಅತ್ಯಂತ ಅಮೂಲ್ಯವಾದ ಗೌರವವಾಗಿದೆ. ಶ್ರೀಮದ್ ಭಗವದ್ಗೀತೆ, ಉಪನಿಷತ್ತುಗಳು, ರಾಮಚರಿತಮಾನಸ ಮುಂತಾದ ಪವಿತ್ರ ಗ್ರಂಥಗಳ ಜೊತೆಗೆ, ನಿಮ್ಮ ಗುರುವಿನ ಆಸಕ್ತಿಗೆ ಸಂಬಂಧಿಸಿದ ಇತರ ಅತ್ಯುತ್ತಮ ಪುಸ್ತಕಗಳನ್ನೂ ಉಡುಗೊರೆಯಾಗಿ ನೀಡಬಹುದು.

ಹಳದಿ ಬಣ್ಣದ ಮಂಗಳಕರ ವಸ್ತುಗಳು:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹಳದಿ ಬಣ್ಣವು ‘ಬೃಹಸ್ಪತಿ’ ಅಂದರೆ ಗುರು ಗ್ರಹದ ಸಂಕೇತವಾಗಿದೆ. ಆದ್ದರಿಂದ, ಗುರು ಪೂರ್ಣಿಮೆಯ ದಿನದಂದು ಗುರುಗಳಿಗೆ ಹಳದಿ ಬಣ್ಣದ ವಸ್ತ್ರಗಳು, ಬಾಳೆಹಣ್ಣು, ಕಡಲೆಬೇಳೆಯಿಂದ ಮಾಡಿದ ಸಿಹಿತಿಂಡಿಗಳು ಅಥವಾ ಇತರ ಹಳದಿ ಬಣ್ಣದ ಉಪಯುಕ್ತ ವಸ್ತುಗಳನ್ನು ಅರ್ಪಿಸುವುದರಿಂದ ಜೀವನದಲ್ಲಿ ಮಂಗಳಕರ ಫಲಿತಾಂಶಗಳು ದೊರೆಯುತ್ತವೆ.

ಇದನ್ನೂ ಓದಿ: ಇಂದು ಗುರು ಪೂರ್ಣಿಮೆಯ ವಿಶೇಷ ದಿನ, ಏನಿದರ ವಿಶೇಷತೆ?

ಪೆನ್ ಮತ್ತು ಡೈರಿಯಂತಹ ಜ್ಞಾನ ಸಾಧನಗಳು:

ನಿಮ್ಮ ಗುರುಗಳು ಶಿಕ್ಷಣ ಕ್ಷೇತ್ರದಲ್ಲಿ ಇದ್ದರೆ ಅಥವಾ ಬರವಣಿಗೆ, ಅಧ್ಯಯನದಲ್ಲಿ ಆಸಕ್ತಿ ಹೊಂದಿದ್ದರೆ, ಅವರಿಗೆ ಉತ್ತಮ ಗುಣಮಟ್ಟದ ಪೆನ್, ಸುಂದರವಾದ ಡೈರಿ ಅಥವಾ ನೋಟ್‌ಬುಕ್ ಅನ್ನು ನೀಡಬಹುದು. ಇದು ಅವರು ಸಮಾಜಕ್ಕೆ ನೀಡುತ್ತಿರುವ ಜ್ಞಾನಸೇವೆಗೆ ನೀಡುವ ಪವಿತ್ರ ಗೌರವದ ಸಂಕೇತವಾಗಿರುತ್ತದೆ.

ಗೌರವ ಮತ್ತು ನಮ್ರತೆ:

ಎಲ್ಲಾ ಭೌತಿಕ ದಾನಗಳಿಗಿಂತ ಶ್ರೇಷ್ಠವಾದದ್ದು ಗುರುವಿಗೆ ತೋರುವ ನಿಜವಾದ ಗೌರವ, ಕೃತಜ್ಞತೆ ಮತ್ತು ನಮ್ರತೆ. ಗುರು ಪೂರ್ಣಿಮೆಯ ನಿಜವಾದ ಸಾರವೆಂದರೆ ಗುರುಗಳ ಪಾದಕಮಲಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುವುದು. ಅವರು ಬೋಧಿಸಿದ ಉತ್ತಮ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ನೀಡಬಹುದಾದ ಅತ್ಯುತ್ತಮ ಹಾಗೂ ನೈಜ ಗುರುದಕ್ಷಿಣೆಯಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಲೋಕಸಭೆಯಲ್ಲಿ ‘ಜೆನ್ ಝಿ’ ಟ್ರೆಂಡ್: ಸಂಸತ್ತಿನಲ್ಲಿ ಸದ್ದು ಮಾಡಿದ ಬಾನ್ಸುರಿ ಸ್ವರಾಜ್ ಹಾಗೂ ಬಿಜೆಪಿ ನಾಯಕರ ಆಧುನಿಕ ಪದಪುಂಜಗಳು – Kannada News | Gen Z Slang Echoes in Lok Sabha as BJP MPs Add a Modern Twist to Parliament Debate

ನವದೆಹಲಿ, ಜುಲೈ 29: ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ನೀಟ್(NEET) ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ 2026 ಕುರಿತು ಚರ್ಚೆಯ ವೇಳೆ, ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ಅವರು ಜೆನ್​ ಝಿ ಶೈಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸಿ ಇಡೀ ಗಮನ ಸೆಳೆದಿದ್ದಾರೆ. ವಿರೋಧ ಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದ ಅವರು, ಭಾಷಣದ ಮಧ್ಯೆ ಜೆನ್-ಝಿ ಭಾಷೆಯಲ್ಲಿ ಹೇಳುವುದಾದರೆ, ಈ ಸೂಕ್ತ ಕಾನೂನು ಪರಿಹಾರವನ್ನು ತರುವ ಮೂಲಕ ಮೋದಿಯವರು ಅದನ್ನು ಸರಿಯಾಗಿ ಗ್ರಹಿಸಿದ್ದಾರೆ.

ಜೆನ್-ಝಿ ಯುವಕರು ಯಾರಾದರೂ ಒಂದು ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ಅದಕ್ಕೆ ನಿಖರ ಪರಿಹಾರ ಕಂಡುಕೊಂಡಾಗ ‘ಕ್ಲಾಕ್ಡ್ ಇಟ್‘ (Clocked It) ಎಂಬ ಪದವನ್ನು ಪ್ರಶಂಸೆಯಾಗಿ ಬಳಸುತ್ತಾರೆ. ಸಂಘಟಿತ ಪರೀಕ್ಷಾ ಮಾಫಿಯಾ ಮತ್ತು ವಂಚನೆ ಪ್ರಕರಣಗಳಲ್ಲಿ ಸಕಾಲಿಕ ತನಿಖೆ, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳ ಮೂಲಕ ತ್ವರಿತ ವಿಚಾರಣೆ ಹಾಗೂ ಕಠಿಣ ಶಿಕ್ಷೆಯನ್ನು ಖಚಿತಪಡಿಸಲು ಈ ನೂತನ ಮಸೂದೆ ಹಾದಿ ಮಾಡಿಕೊಡಲಿದೆ ಎಂದಿದ್ದಾರೆ.ನೀಟ್ ಪತ್ರಿಕೆ ಸೋರಿಕೆ ವಿವಾದವು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿ, ಇತ್ತೀಚೆಗೆ ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸರ್ಕಾರ ಈ ಕಠಿಣ ಕಾನೂನು ತಿದ್ದುಪಡಿಗೆ ಮುಂದಾಗಿದೆ.

ಡಿಲುಲು
ಅರ್ಥ: ದೊಡ್ಡ ಭ್ರಮೆಯಲ್ಲಿ ಜೀವಿಸುವುದು ಅಥವಾ ವಾಸ್ತವಕ್ಕೆ ದೂರವಾದ ಆಲೋಚನೆ ಮಾಡುವುದು, ಸನ್ನಿವೇಶ: ಯುವಜನರೆಲ್ಲಾ ತಮ್ಮ ಪರವಾಗಿದ್ದಾರೆ ಎಂದು ವಿಪಕ್ಷಗಳು ಅಂದುಕೊಂಡಿದ್ದರೆ, ಅದಕ್ಕಿಂತ ದೊಡ್ಡ ‘ಡಿಲುಲು’ ಅಥವಾ ಭ್ರಮೆ ಬೇರೊಂದಿಲ್ಲ ಎಂದು ಎನ್‌ಡಿಎ ಸಂಸದರು ಲೇವಡಿ ಮಾಡಿದ್ದಾರೆ.

ಮತ್ತಷ್ಟು ಓದಿ: ನಿಟ್ಟುಸಿರು ಬಿಟ್ಟ ನೀಟ್ ಪ್ರತಿಭಟನಾಕಾರರು: ಬಿಹಾರದ ಬೆನ್ನಲ್ಲೇ ಪ್ರಕರಣ ಹಿಂಪಡೆಯಲು ಅಸ್ಸಾಂ ಸರ್ಕಾರ ನಿರ್ಧಾರ

ಫೋಮೊ (FOMO – Fear Of Missing Out)

ಅರ್ಥ: ಪ್ರಮುಖ ಘಟನೆ ಅಥವಾ ಅವಕಾಶದಿಂದ ತಮಗೆ ಪ್ರಾಮುಖ್ಯತೆ ಸಿಗದೇ ಹೋಗಬಹುದು ಎಂಬ ಭಯ.

ಸನ್ನಿವೇಶ: “ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಾಗ, ತಮಗೆ ಎಲ್ಲಿ ಪ್ರಾಮುಖ್ಯತೆ ಸಿಗುವುದಿಲ್ಲವೋ ಎಂಬ ಭಯದಿಂದ (FOMO) ವಿಪಕ್ಷಗಳು ದಿಢೀರನೆ ಪ್ರತಿಭಟನೆ ತಲುಪಿದವು” ಎಂದು ಸಂಸದ ಶ್ರೀಕಾಂತ್ ಶಿಂಧೆ ಹೇಳಿದರು.

ಎಮ್‌ಐಎ (MIA – Missing In Action)
ಅರ್ಥ: ಪ್ರಮುಖ ಸಮಯದಲ್ಲಿ ನಾಪತ್ತೆಯಾಗುವುದು ಅಥವಾ ನಿಷ್ಕ್ರಿಯವಾಗಿರುವುದು.

ಸನ್ನಿವೇಶ: ವಿದ್ಯಾರ್ಥಿಗಳು 37 ದಿನಗಳಿಂದ ಬಿಸಿಲಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ ವಿಪಕ್ಷ ನಾಯಕರು ಕಣ್ಮರೆಯಾಗಿದ್ದರು (MIA) ಎಂದು ವಾಗ್ದಾಳಿ ನಡೆಸಲಾಯಿತು.

ಸುಷ್ಮಾ ಸ್ವರಾಜ್ ಶೈಲಿಯ ನೆನಪು
ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ತಮ್ಮ ತಾಯಿ ಸುಷ್ಮಾ ಸ್ವರಾಜ್ ಅವರಂತೆ ಕಾವ್ಯಾತ್ಮಕವಾಗಿ ಮಾತನಾಡಿದರು. ವಿಪಕ್ಷಗಳ ನಿಲುವನ್ನು ಟೀಕಿಸಲು ಕವಿ ದುಷ್ಯಂತ್ ಕುಮಾರ್ ಅವರ ಸಾಲೊಂದನ್ನು ಹೇಳಿದ್ದಾರೆ. ಯುವ ರಾಜಕೀಯ ಕ್ರಾಂತಿ: ಯುವಕರನ್ನು ತಲುಪಲು ರಾಜಕಾರಣಿಗಳು ಇನ್‌ಸ್ಟಾಗ್ರಾಂ ಹಾಗೂ ‘ಜೆನ್ ಝಿ’ ಶೈಲಿಯ ಪದಗಳನ್ನು ಬಳಸುತ್ತಿದ್ದಾರೆ.
ಹೊಸ ತಿದ್ದುಪಡಿ ಮಸೂದೆ: ಈ ನೂತನ ಕಾಯ್ದೆಯು ಪರೀಕ್ಷಾ ಮಾಫಿಯಾಗೆ ತಡೆಹಾಕಲು ನಂದನ್ ನಿಲೇಕಣಿ ನೇತೃತ್ವದಲ್ಲಿ ತಾಂತ್ರಿಕ ಕಾರ್ಯಪಡೆ ಹಾಗೂ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಮದುವೆಯಾದ ನಾಲ್ಕೇ ತಿಂಗಳಿಗೆ ಬಾದ್‌ಶಾ ದಾಂಪತ್ಯದಲ್ಲಿ ಬಿರುಕು; ಎರಡನೇ ಪತ್ನಿಯಿಂದಲೂ ದೂರ? – Kannada News | Rapper Badshah and Isha Rikhi Headed for Divorce Four Months After Marriage

ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಹಾಗೂ ಬ್ರೇಕಪ್‌ಗಳ ಸರಣಿ ತೀರಾ ಹೆಚ್ಚಾಗುತ್ತಿದೆ. ವರ್ಷಗಟ್ಟಲೆ ಸಂಸಾರ ನಡೆಸಿದ ಸ್ಟಾರ್ ಜೋಡಿಗಳು ಮಾತ್ರವಲ್ಲದೆ, ಮದುವೆಯಾಗಿ ಕೆಲವೇ ತಿಂಗಳು ಕಳೆದ ದಂಪತಿಗಳು ಕೂಡ ಬೇರ್ಪಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡುತ್ತಿದ್ದಾರೆ. ಇದೀಗ ಈ ಸಾಲಿಗೆ ಬಾಲಿವುಡ್‌ನ ಖ್ಯಾತ ರ‍್ಯಾಪರ್ ಹಾಗೂ ಜನಪ್ರಿಯ ಗಾಯಕ ಬಾದ್‌ಶಾ (Badsghah) ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. ಮದುವೆಯಾದ ಕೇವಲ ನಾಲ್ಕೇ ತಿಂಗಳಿಗೆ ಬಾದ್‌ಶಾ ಮತ್ತು ಅವರ ಎರಡನೇ ಪತ್ನಿ ಇಶಾ ರಿಖಿ ನಡುವೆ ಗಂಭೀರ ಭಿನ್ನಾಭಿಪ್ರಾಯಗಳು ಮೂಡಿದ್ದು, ಶೀಘ್ರದಲ್ಲೇ ಈ ಜೋಡಿ ವಿಚ್ಛೇದನ ಪಡೆಯಲಿದೆ ಎಂಬ ವರದಿಗಳು ಸಿನಿಮಾ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ.

ಮೊದಲ ಪತ್ನಿಗೂ ಡಿವೋರ್ಸ್ ನೀಡಿದ್ದ ಗಾಯಕ

ಹಿಂದಿ ಚಿತ್ರರಂಗದಲ್ಲಿ ಸಾಲು ಸಾಲು ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಬಾದ್‌ಶಾ, ಕೇವಲ ಗಾಯಕರಾಗಿ ಮಾತ್ರವಲ್ಲದೆ ಹಲವು ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇದು ಬಾದ್‌ಶಾ ಅವರ ಎರಡನೇ ಮದುವೆಯಾಗಿದೆ.

ಈ ಹಿಂದೆ ಅವರು ಜಾಸ್ಮಿನ್ ಮಸಿಹ್ ಎಂಬುವವರನ್ನು ವಿವಾಹವಾಗಿದ್ದರು. ಆದರೆ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ 2020 ರಲ್ಲಿ ಅವರಿಂದ ಅಧಿಕೃತವಾಗಿ ವಿಚ್ಛೇದನ ಪಡೆದು ಬೇರ್ಪಟ್ಟಿದ್ದರು. ಇದಾದ ಬಳಿಕ ಇಶಾ ರಿಖಿ ಅವರೊಂದಿಗೆ ಪ್ರೀತಿಯಲ್ಲಿದ್ದ ಬಾದ್‌ಶಾ, ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಅತ್ಯಂತ ಸರಳವಾಗಿ ಎರಡನೇ ವಿವಾಹವಾಗಿದ್ದರು.

ಪೋಸ್ಟ್ ಹಾಕಿದ ಇಶಾ!

‘ಕಣ್ಣಿಗೆ ಕಾಣಿಸುವಂತಹ ಯಾವುದೇ ಗಾಯದ ಗುರುತುಗಳನ್ನು ಬಿಡದ ಕೆಲವು ಹೋರಾಟಗಳಿರುತ್ತವೆ. ದೀರ್ಘಕಾಲದವರೆಗೆ ನಾನು ಭಯದಿಂದಾಗಿ ಮೌನವಾಗಿದ್ದೆ. ನನ್ನ ಪತಿಗೆ ಇದೆ ಎಂದು ನಾನು ನಂಬಿದ್ದ ಪ್ರಭಾವ, ಅಧಿಕಾರ ಕಂಡು ನಾನು ಧೃತಿಗೆಟ್ಟಿದ್ದೆ, ಹಾಗೂ ಸುಮ್ಮನಿರುವುದೇ ಎಲ್ಲಕ್ಕಿಂತ ಸುರಕ್ಷಿತವಾದ ಮಾರ್ಗ ಎಂದು ನನ್ನ ಮನಸ್ಸಿಗೆ ನಾನೇ ಒಪ್ಪಿಸಿಕೊಂಡಿದ್ದೆ’ ಎಂದಿದ್ದಾರೆ ಇಶಾ.

ಇದನ್ನೂ ಓದಿ: ‘ಹೌದು, ನಾನು ಬಾದ್‌ಶಾ ಪತ್ನಿ’: ಕೊನೆಗೂ ಮದುವೆ ವದಂತಿಗೆ ತೆರೆ ಎಳೆದ ನಟಿ ಇಶಾ ರಿಖಿ

‘ಮೌನ ಎನ್ನುವುದು ಎಂದಿಗೂ ಒಪ್ಪಿಗೆಯಾಗಿರಲಿಲ್ಲ. ಅದು ಕೇವಲ ಬದುಕಿ ಉಳಿಯುವ ಪ್ರಯತ್ನವಾಗಿತ್ತು. ಇಂದು, ನಾನು ಭಯದ ಬದಲು ಧೈರ್ಯವನ್ನು ಆರಿಸಿಕೊಳ್ಳುತ್ತಿದ್ದೇನೆ. ಸಂಪೂರ್ಣ ಕಥೆಯನ್ನು ಹೇಳಲು ನಾನು ಇನ್ನೂ ಸಿದ್ಧಳಾಗಿಲ್ಲದಿರಬಹುದು, ಆದರೆ ಎಲ್ಲವೂ ಸರಿಯಾಗಿದೆ ಎಂದು ನಟಿಸುವುದನ್ನು ನಿಲ್ಲಿಸಲು ಕೊನೆಗೂ ನಾನು ಸಿದ್ಧಳಾಗಿದ್ದೇನೆ’ ಎಂದು ಅವರು ಬರೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಾಹುಲ್ ಗಾಂಧಿ ಡ್ರಗ್ಸ್​ ಅಡಿಕ್ಟ್ ಎಂದಿದ್ದ ಉಡುಪಿ ಬಿಜೆಪಿ ಶಾಸಕ ಯಶ​ಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲು – Kannada News | FIR Filed Against Udupi MLA Yashpal Suvarna Over Rahul Gandhi Remarks in Protest Meeting

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪೊಲೀಸರಿಗೆ ದೂರು. ಒಳಚಿತ್ರದಲ್ಲಿ ಯಶಪಾಲ್ ಸುವರ್ಣImage Credit source: tv9

ಉಡುಪಿ, ಜುಲೈ 29: ಬಿಜೆಪಿ (BJP) ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ನಾಯಕ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಕುರಿತು ಅವಹೇಳನಕಾರಿ ಹಾಗೂ ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪದಡಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ದೂರಿನ ಪ್ರಕಾರ, ಜುಲೈ 28ರಂದು ಉಡುಪಿಯ ಜೋಡುಕಟ್ಟೆ ಸಮೀಪ ನಡೆದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಯಶಪಾಲ್ ಸುವರ್ಣ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಅವಹೇಳನಕಾರಿ ಪದಗಳನ್ನು ಬಳಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಭಾಷಣದಲ್ಲಿ ಬಾಬ್ರಿ ಮಸೀದಿ ಧ್ವಂಸದ ವಿಚಾರವನ್ನು ಪ್ರಸ್ತಾಪಿಸಿ ದ್ವೇಷವನ್ನು ಪ್ರಚೋದಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನೀಟ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ

ಅದೇ ಭಾಷಣದಲ್ಲಿ ನೀಟ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಬಗ್ಗೆ ಅವಾಚ್ಯ ಪದಗಳನ್ನು ಬಳಸಿದ್ದಾರೆ ಹಾಗೂ ವಿವಿಧ ಸಮುದಾಯಗಳ ನಡುವೆ ದ್ವೇಷ ಮತ್ತು ಉದ್ವಿಗ್ನತೆ ಉಂಟುಮಾಡುವ ರೀತಿಯ ಭಾಷಣ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಇದು ಸರ್ಕಾರಕ್ಕೆ ವಿದ್ಯಾರ್ಥಿಗಳು, ವಿಪಕ್ಷದ ಎಚ್ಚರಿಕೆ; ಪ್ರತಿಭಟನೆ ಅಂತ್ಯ ಬಳಿಕ ರಾಹುಲ್ ಗಾಂಧಿ ಪ್ರತಿಕ್ರಿಯೆ

ಎಫ್‌ಐಆರ್ ಪ್ರಕಾರ, ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 57, 192, 196(2), 352, 353(2) ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು ಫ್ಲೈಓವರ್‌ಗಳ ಕೆಳಗೆ ಬರಲಿದೆ ಹೈಟೆಕ್ ಫುಡ್ ಕೋರ್ಟ್, ಗಿಗ್ ಹಬ್: ಬಿಎಸ್‌ಎಂಐಎಲ್‌ ಮಾಸ್ಟರ್ ಪ್ಲಾನ್ – Kannada News | BSMILE Transforms Bengaluru ORR: Smart Bus Stops, Gig Hubs and Flyover Spaces

ಬೆಂಗಳೂರು, ಜು.29: ಸಿಲಿಕಾನ್ ಸಿಟಿಯ ಅತ್ಯಂತ ಜನನಿಬಿಡ ಹೆದ್ದಾರಿಯಾದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಕೆಆರ್‌ ಪುರಂವರೆಗಿನ ಔಟರ್ ರಿಂಗ್ ರೋಡ್ (ORR) ಅಭಿವೃದ್ಧಿಪಡಿಸಲು ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (BSMILE) ಮಾಸ್ಟರ್ ಪ್ಲಾನ್ ರೂಪಿಸಿದೆ. ಸುಮಾರು 450 ಕೋಟಿ ರೂ. ವೆಚ್ಚದಲ್ಲಿ 17.1 ಕಿ.ಮೀ. ವರೆಗೆ ಒಟ್ಟು 6 ಪ್ರಮುಖ ಜಂಕ್ಷನ್‌ಗಳನ್ನು ಮರುಅಭಿವೃದ್ಧಿಪಡಿಸಲಾಗುತ್ತಿದ್ದು, ವಿದೇಶಿ ಮಾದರಿಯ ಸ್ಮಾರ್ಟ್ ಸೌಲಭ್ಯಗಳನ್ನು ಸಾರ್ವಜನಿಕರು ಹಾಗೂ ಪ್ರಯಾಣಿಕರಿಗೆ ಒದಗಿಸಲು ಯೋಜನೆ ಸಿದ್ಧವಾಗಿದೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಇದರಲ್ಲಿ 10 ಸ್ಮಾರ್ಟ್ ಬಸ್ ಸ್ಟಾಪ್‌ಗಳನ್ನು ನೀಡಲಾಗುತ್ತದೆ. ಈ ಮಾರ್ಗದಲ್ಲಿರುವ 10 ಬಸ್ ತಾಣಗಳನ್ನು ಸುಸಜ್ಜಿತ ಸ್ಮಾರ್ಟ್ ಬಸ್ ಶೆಲ್ಟರ್‌ಗಳಾಗಿ ಪರಿವರ್ತಿಸಲಾಗುತ್ತದೆ. ಬಸ್ ಆಗಮನದ ಡಿಜಿಟಲ್ ಮಾಹಿತಿ ಪರದೆಗಳು , ಸಿಸಿಟಿವಿ ಕ್ಯಾಮೆರಾಗಳು, ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಈ ಸ್ಟಾಪ್‌ಗಳಲ್ಲಿ ಅಳವಡಿಸಲಾಗುತ್ತದೆ. ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲು ಪ್ರತ್ಯೇಕ ಬಸ್ ಲೇನ್, ಅಗಲವಾದ ಕಾಲುದಾರಿ ಹಾಗೂ ಸಾಧ್ಯವಿರುವ ಕಡೆಗಳಲ್ಲಿ ಸೈಕಲ್ ಪಥಗಳನ್ನು ನಿರ್ಮಿಸಲಾಗುತ್ತದೆ.

ಇತ್ತೀಚೆಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ವಿವಿಧ ಹಿತಾಶಕ್ತಿಗಳೊಂದಿಗೆ ನಡೆಸಿದ ಸಭೆಯಲ್ಲಿ, ಮೇಲ್ಸೇತುವೆಗಳ (Flyovers) ಕೆಳಗಿರುವ ಖಾಲಿ ಜಾಗಗಳನ್ನು ಉಪಯುಕ್ತ ಸಾರ್ವಜನಿಕ ಸ್ಥಳಗಳಾಗಿ ಪರಿವರ್ತಿಸುವುದಾಗಿ ಭರವಸೆ ನೀಡಿದ್ದರು. ಗಿಗ್ ಕಾರ್ಮಿಕರು (ಡೆಲಿವರಿ ಬಾಯ್ಸ್, ರೈಡರ್ಸ್) ಹಾಗೂ ಪ್ರವಾಸಿಗರಿಗಾಗಿ ನೆರಳಿನ ಆಸನ ವ್ಯವಸ್ಥೆ, ಚಾರ್ಜಿಂಗ್ ಲಾಕರ್‌ಗಳು, ವೈಫೈ (Wi-Fi) ಮತ್ತು ಮೈಕ್ರೋ-ಮೊಬಿಲಿಟಿ ಡಾಕ್‌ಗಳನ್ನು ಒಳಗೊಂಡ ‘ಗಿಗ್ ಹಬ್’ ನಿರ್ಮಿಸಲಾಗುತ್ತದೆ.

ಸೋಲಾರ್ ಪವರ್ ಆಧಾರಿತ ಚಾರ್ಜಿಂಗ್ ಹಾಗೂ ಡಿಜಿಟಲ್ ಕ್ಯೂ ಸಿಸ್ಟಮ್ ಹೊಂದಿದ ಸುಸಜ್ಜಿತ ಆಟೋ ರಿಕ್ಷಾ ತಾಣಗಳನ್ನು ಯೋಜಿಸಲಾಗಿದೆ. ಮೇಲ್ಸೇತುವೆಗಳ ಕೆಳಗಿನ ಜಾಗವನ್ನು ಮನರಂಜನಾ ಸೌಲಭ್ಯಗಳು, ಫುಡ್ ಕೋರ್ಟ್‌ಗಳು ಹಾಗೂ ಸಣ್ಣ ಮಾರುಕಟ್ಟೆ ಪ್ರದೇಶಗಳನ್ನಾಗಿ ಬಳಸಲಾಗುತ್ತದೆ. ಈ ಯೋಜನೆಯ ಕಲ್ಪನೆ ಮತ್ತು ವಿನ್ಯಾಸಗಳನ್ನು ಹಾಂಗ್ ಕಾಂಗ್, ಮೆಲ್ಬೋರ್ನ್ ಹಾಗೂ ಕೆನಡಾದ ಪ್ರಮುಖ ನಗರಗಳಲ್ಲಿರುವ ಮೂಲಸೌಕರ್ಯ ಮಾದರಿಗಳಿಂದ ಸ್ಪೂರ್ತಿ ಪಡೆದು ಸಿದ್ಧಪಡಿಸಲಾಗಿದೆ.

ಇದನ್ನೂ ಓದಿ: ಸುರಕ್ಷಿತ ಬೆಂಗಳೂರಿಗೆ ಬಿಟಿಪಿ ಹೊಸ ಹೆಜ್ಜೆ: ಅನಾಥ ವಾಹನಗಳ ಬಗ್ಗೆ ದೂರು ನೀಡಲು ಈ ಆಪ್ ಬಳಸಿ

ಅಧಿಕಾರಿಗಳ ಅಂದಾಜಿನ ಪ್ರಕಾರ ಈ ಔಟರ್ ರಿಂಗ್ ರೋಡ್ ಕरिडोरದಲ್ಲಿರುವ ಆಫೀಸ್‌ಗಳಲ್ಲಿ ಸುಮಾರು 6.42 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ 3.38 ಲಕ್ಷ ವಾಹನಗಳು ಸಂಚರಿಸುತ್ತವೆ. ಈ ಕಾಯಕಲ್ಪದಿಂದ ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರ ಸಾಧ್ಯವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವೇದಿಕೆ ಮೇಲೆ ಮಾಸ್ ಡೈಲಾಗ್ ಹೊಡೆದು ಮಗನಿಗೆ ಎಚ್ಚರಿಕೆ ಕೊಟ್ಟ ಧನುಷ್ – Kannada News | If You Are Bad, I Am Your Dad Actor Dhanush Mass Dialogue to Son Linga Goes Viral

ಕಾಲಿವುಡ್ ಸೂಪರ್ ಸ್ಟಾರ್ ಧನುಷ್ (Dhanush) ತಮ್ಮ ಮಗ ಲಿಂಗನಿಗೆ ವೇದಿಕೆ ಮೇಲೆಯೇ ಪ್ರೀತಿಯಿಂದ ಎಚ್ಚರಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡ್ ಸೃಷ್ಟಿಸಿದೆ. ಇತ್ತೀಚೆಗೆ ನಡೆದ ರಕ್ತದಾನ ಶಿಬಿರದಲ್ಲಿ ಭಾಗಿ ಆಗಿದ್ದ ಧನುಷ್ ತಮ್ಮ ಸಿನಿಮಾದ ಸೂಪರ್ ಹಿಟ್ ಡೈಲಾಗ್ ಅನ್ನೇ ಮಗನಿಗೆ ಹೇಳುವ ಮೂಲಕ ನೆರೆದಿದ್ದವರಲ್ಲಿ ನಗೆಯ ಅಲೆ ಎಬ್ಬಿಸಿದ್ದಾರೆ. ಪ್ರಸ್ತುತ ಈ ಫನ್ನಿ ವಿಡಿಯೋ ಇಂಟರ್‌ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಮಗನ ಮುಖ ನೋಡಿ ‘ಮಾರಿ’ ಡೈಲಾಗ್ ಹೊಡೆದ ಧನುಷ್

ಕಾರ್ಯಕ್ರಮದಲ್ಲಿ ಮೈಕ್ ಹಿಡಿದು ಮಾತನಾಡುತ್ತಿದ್ದ ನಟ ಧನುಷ್, ಅಲ್ಲಿಯೇ ನಿಂತಿದ್ದ ತಮ್ಮ ಮಗನನ್ನು ಉದ್ದೇಶಿಸಿ ‘ಎಲ್ಲಿದ್ದೀಯಾ ಲಿಂಗಾ? ಲಿಂಗಾ ಬೇಬಿ…’ ಎಂದು ಕರೆದಿದ್ದಾರೆ. ಮಗ ಮುಗುಳ್ನಗುತ್ತಿರೋದನ್ನು ನೋಡಿದ ಧನುಷ್, ತಮ್ಮದೇ ನಟನೆಯ ಬ್ಲಾಕ್‌ಬಸ್ಟರ್ ‘ಮಾರಿ 2’ ಚಿತ್ರದ ಫೇಮಸ್ ಇಂಗ್ಲಿಷ್ ಡೈಲಾಗ್ ಹೇಳಿದ್ದಾರೆ, ‘ಇಫ್ ಯು ಆರ್ ಬ್ಯಾಡ್, ಐ ಆ್ಯಮ್ ಯುವರ್ ಡ್ಯಾಡ್’ ಎಂದು ಖಡಕ್ ಆಗಿ ಹೇಳಿದ್ದಾರೆ. ತಂದೆಯ ಈ ಆಶು ಮಾತುಗಳನ್ನು ಕೇಳಿ ಮಗ ಲಿಂಗಾ ಹಾಗೂ ಪಕ್ಕದಲ್ಲೇ ಕುಳಿತಿದ್ದ ಕುಟುಂಬದವರು ಜೋರಾಗಿ ನಗಲು ಪ್ರಾರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಧನುಷ್ ಅವರ ಈ ಮಾಸ್ ಮತ್ತು ಫನ್ನಿ ಅವತಾರಕ್ಕೆ ನೆರೆದಿದ್ದ ಅಭಿಮಾನಿಗಳು ಚಪ್ಪಾಳೆ ಹಾಗೂ ಶಿಳ್ಳೆಗಳ ಮೂಲಕ ಜೈಕಾರ ಹಾಕಿದ್ದಾರೆ. ತಂದೆ-ಮಗನ ನಡುವಿನ ಈ ಸುಂದರ ಹಾಗೂ ತಮಾಷೆಯ ಕ್ಷಣವನ್ನು ಅಭಿಮಾನಿಗಳು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಸದ್ಯ ಇದು ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ಖಾತೆಗಳಲ್ಲಿ ಸಖತ್ ಶೇರ್ ಆಗುತ್ತಿದೆ. ಸಿನಿಮಾಗಳಲ್ಲಿ ಸದಾ ಬ್ಯುಸಿಯಾಗಿರುವ ಧನುಷ್, ತಮ್ಮ ಮಕ್ಕಳೊಂದಿಗೆ ಇಂತಹ ಮಜಾವಾದ ಸಮಯ ಕಳೆಯುವುದನ್ನು ಕಂಡು ಫ್ಯಾನ್ಸ್ ಕೂಡ ಮನಸೋತಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್ ಹಾದಿಯಲ್ಲಿ ಧನುಷ್; ರಾಜಕೀಯ ಪ್ರವೇಶದ ಸುಳಿವು ನೀಡಿದ ನಟ

ಡಿವೋರ್ಸ್ ಪಡೆದ ಧನುಷ್

ಧನುಷ್ ಹಾಗೂ ರಜನಿಕಾಂತ್ ಮಗಳು ಐಶ್ವರ್ಯಾ ವಿವಾಹ ಆಗಿ ಹಲವು ವರ್ಷ ಸಂಸಾರ ನಡೆಸಿದ್ದರು. ಆದರೆ, ಇತ್ತೀಚೆಗೆ ಇವರು ವಿಚ್ಛೇದನ ಪಡೆದಿದ್ದಾರೆ. ಇಬ್ಬರ ಸಂಬಂಧ ಕೊನೆಯಾಗಿದೆ. ಮಕ್ಕಳನ್ನು ಸಾಕೋ ಜವಾಬ್ದಾರಿ ಇಬ್ಬರಿಗೂ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Hindu Rituals: ಪೂಜೆಯಲ್ಲಿ ಬಳಸಿದ ಹೂವುಗಳನ್ನು ಏನು ಮಾಡಬೇಕು? ಈ ತಪ್ಪು ಎಂದಿಗೂ ಮಾಡಬೇಡಿ! – Kannada News | Hindu Pooja Flowers Disposal: Sacred Ways and Mistakes to Avoid

ಹಿಂದೂ ಸಂಪ್ರದಾಯದಲ್ಲಿ ದೇವರಿಗೆ ಅರ್ಪಿಸುವ ಹೂವುಗಳಿಗೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಪೂಜೆಯ ಸಮಯದಲ್ಲಿ ಈ ಹೂವುಗಳು ದೈವಿಕ ಚೈತನ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತವೆ. ಆದರೆ ಪೂಜೆ ಮುಗಿದ ನಂತರ, ಒಣಗಿದ ಈ ಹೂವುಗಳನ್ನು (ನಿರ್ಮಾಲ್ಯ) ಹೇಗೆ ವಿಲೇವಾರಿ ಮಾಡಬೇಕು ಹಾಗೂ ಯಾವ ತಪ್ಪುಗಳನ್ನು ಮಾಡಬಾರದು ಎಂಬುದರ ಕುರಿತು ಶಾಸ್ತ್ರಗಳಲ್ಲಿ ಸ್ಪಷ್ಟ ನಿಯಮಗಳಿವೆ.

ಒಣಗಿದ ಹೂವುಗಳ ವಿಷಯದಲ್ಲಿ ಎಂದಿಗೂ ಮಾಡಬಾರದ 3 ತಪ್ಪುಗಳು:

ಕಸದ ಬುಟ್ಟಿಗೆ ಎಸೆಯುವುದು ಗಂಭೀರ ತಪ್ಪು:

ಪೂಜಿಸಿದ ಹೂವುಗಳನ್ನು ಯಾವುದೇ ಕಾರಣಕ್ಕೂ ಮನೆಯ ಸಾಮಾನ್ಯ ಕಸದ ಡಬ್ಬಿಗೆ ಎಸೆಯಬಾರದು. ದೇವರಿಗೆ ಅರ್ಪಿಸಿದ ವಸ್ತುವು ತನ್ನ ಪವಿತ್ರತೆಯನ್ನು ಕಳೆದುಕೊಳ್ಳುವುದಿಲ್ಲ. ಹೀಗಾಗಿ ಅದನ್ನು ಕಸದ ಜೊತೆ ಸೇರಿಸುವುದು ದೇವರಿಗೆ ಹಾಗೂ ದೈವಿಕ ಶಕ್ತಿಗೆ ಮಾಡುವ ದೊಡ್ಡ ಅಪಮಾನವೆಂದು ಪರಿಗಣಿಸಲಾಗುತ್ತದೆ.

ರಸ್ತೆ ಅಥವಾ ಪಾದಚಾರಿ ಮಾರ್ಗದಲ್ಲಿ ಎಸೆಯಬೇಡಿ:

ಹಳೆಯ ಪೂಜಾ ಹೂವುಗಳನ್ನು ಮನೆಯ ಹೊರಗಿನ ರಸ್ತೆಯಲ್ಲಾಗಲಿ ಅಥವಾ ಜನರು ಓಡಾಡುವ ಪಾದಚಾರಿ ಮಾರ್ಗಗಳಲ್ಲಾಗಲಿ ಚೆಲ್ಲಬಾರದು. ಇತರರ ಕಾಲುಗಳು ಆ ಪವಿತ್ರ ಹೂವುಗಳಿಗೆ ತಗುಲಿದರೆ ಮನೆಯಲ್ಲಿ ಗಂಭೀರ ವಾಸ್ತು ದೋಷಗಳು ಉಂಟಾಗುತ್ತವೆ ಹಾಗೂ ತಿಳಿದೋ ತಿಳಿಯದೆಯೋ ನಮಗೆ ಪಾಪ ಸುತ್ತಿಕೊಳ್ಳುತ್ತದೆ.

ಪೂಜಾ ಕೊಠಡಿಯಲ್ಲಿ ದಿನಗಟ್ಟಲೆ ಇಟ್ಟುಕೊಳ್ಳುವುದು:

ಒಣಗಿದ ಅಥವಾ ಬಾಡಿಹೋದ ಹೂವುಗಳನ್ನು ಪೂಜಾ ಕೊಠಡಿಯಲ್ಲೇ ದಿನಗಟ್ಟಲೆ ಬಿಡುವುದು ಒಳ್ಳೆಯದಲ್ಲ. ಬಾಡಿದ ಹೂವುಗಳು ನಕಾರಾತ್ಮಕ ಶಕ್ತಿಯನ್ನು (Negative Energy) ಆಕರ್ಷಿಸುತ್ತವೆ. ಇದು ಮನೆಯ ವಾತಾವರಣದ ಪ್ರಶಾಂತತೆಯನ್ನು ಕೆಡಿಸಿ, ಸಕಾರಾತ್ಮಕ ಶಕ್ತಿಯ ಹರಿವನ್ನು ತಡೆಯುತ್ತದೆ.

ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ

ಪೂಜಾ ಹೂವುಗಳನ್ನು ಸರಿಯಾಗಿ ವಿಲೇವಾರಿ ಮಾಡುವ 4 ಪವಿತ್ರ ಮಾರ್ಗಗಳು:

ಗಿಡಗಳಿಗೆ ನೈಸರ್ಗಿಕ ಗೊಬ್ಬರವಾಗಿ ಪರಿವರ್ತಿಸಿ:

ಪೂಜೆಯ ಹೂವುಗಳನ್ನು ವಿಲೇವಾರಿ ಮಾಡಲು ಇದು ಅತ್ಯುತ್ತಮ ಮತ್ತು ಸಂಪೂರ್ಣ ಪರಿಸರಸ್ನೇಹಿ ಮಾರ್ಗವಾಗಿದೆ. ಹೂವುಗಳನ್ನು ನಿಮ್ಮ ಮನೆಯ ತೋಟದ ಮಣ್ಣಿಗೆ ಅಥವಾ ಗಿಡಗಳ ಕುಂಡಗಳಿಗೆ ಹಾಕಿ. ಕಾಲಕ್ರಮೇಣ ಅವು ಮಣ್ಣಿನಲ್ಲಿ ವಿಲೀನಗೊಂಡು ಉತ್ತಮ ನೈಸರ್ಗಿಕ ಗೊಬ್ಬರವಾಗುತ್ತವೆ. ಇದು ಗಿಡಗಳು ಚೆನ್ನಾಗಿ ಬೆಳೆಯಲು ನೆರವಾಗುವುದಲ್ಲದೆ, ಹೂವಿನ ಶುದ್ಧತೆಯನ್ನೂ ಕಾಪಾಡುತ್ತದೆ.

ಪವಿತ್ರ ಜಲದಲ್ಲಿ ವಿಸರ್ಜನೆ ಮಾಡಿ:

ಸಾಧ್ಯವಿದ್ದಲ್ಲಿ, ಒಣಗಿದ ಪೂಜಾ ಹೂವುಗಳನ್ನು ಹತ್ತಿರದ ನದಿ, ಸರೋವರ ಅಥವಾ ಹರಿಯುವ ನೀರಿನಲ್ಲಿ ವಿಸರ್ಜಿಸಬಹುದು. ಹೀಗೆ ಮಾಡುವಾಗ ಹೂವುಗಳ ಜೊತೆಗಿರುವ ಪ್ಲಾಸ್ಟಿಕ್ ಚೀಲಗಳು ಅಥವಾ ಇತರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನೀರಿಗೆ ಎಸೆಯದಂತೆ ಎಚ್ಚರಿಕೆ ವಹಿಸಿ. ನೀರಿನ ಮೂಲಗಳನ್ನು ಸ್ವಚ್ಛವಾಗಿಡುವುದು ಸಹ ಧರ್ಮದ ಭಾಗವಾಗಿದೆ.

ಮನೆಯಲ್ಲೇ ಸುಗಂಧಿತ ಧೂಪದ್ರವ್ಯ ತಯಾರಿಸಿ:

ಗುಲಾಬಿ, ಚೆಂಡು ಹೂವು (ಮಾರಿಗೋಲ್ಡ್) ಮುಂತಾದ ಹೂವಿನ ದಳಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿ ಮಾಡಿಕೊಳ್ಳಿ. ಈ ಪುಡಿಗೆ ಸ್ವಲ್ಪ ಸಾಂಬ್ರಾಣಿ, ಹಸುವಿನ ತುಪ್ಪ ಮತ್ತು ಕರ್ಪೂರವನ್ನು ಬೆರೆಸಿ ಮನೆಯಲ್ಲಿ ಧೂಪವಾಗಿ ಬೆಳಗಿಸಿ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗಿ, ಇಡೀ ಮನೆ ಆಹ್ಲಾದಕರ ಸುವಾಸನೆಯಿಂದ ಕಂಗೊಳಿಸುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:37 am, Wed, 29 July 26

Source link

ವೈಭವ್​ನ ಅವಮಾನಿಸುವ ಉದ್ದೇಶವಿರಲಿಲ್ಲ: ಅಶ್ವಿನ್ ಸ್ಪಷ್ಟನೆ – Kannada News | No Intent To Humiliate Vaibhav Sooryavanshi: Ashwin Clarifies His Stance

ಭಾರತ ತಂಡದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಇತ್ತೀಚೆಗೆ 15 ವರ್ಷದ ಬ್ಯಾಟಿಂಗ್ ಸನ್ಸೇಷನ್ ವೈಭವ್ ಸೂರ್ಯವಂಶಿ ಕುರಿತು ಆಡಿದ್ದ ಮಾತುಗಳು ಭಾರೀ ಚರ್ಚೆಗೆ ಕಾರಣವಾಗಿದ್ದವು. ತಂಡದಲ್ಲಿ ಸ್ಥಾನ ಸಿಗದಿದ್ದರೆ ವೈಭವ್ “ಹಿರಿಯ ಆಟಗಾರರಿಗೆ ಡ್ರಿಂಕ್ಸ್ ನೀಡಲಿ” ಎಂದು ಅಶ್ವಿನ್ ಹೇಳಿದ್ದರು. ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಅವಮಾನಿಸುವ ಉದ್ದೇಶವಾಗಿರಲಿಲ್ಲ!

ನಾನು ಹೇಳಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. “ವೈಭವ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಸಮಯ ಕಳೆಯಬಹುದು, ಹಿರಿಯರಿಗೆ ಪಾನೀಯಗಳನ್ನು ನೀಡಬಹುದು ಅಥವಾ ಹೊರಗೆ ಕುಳಿತುಕೊಳ್ಳಬಹುದು” ಎಂದು ನಾನು ಹೇಳಿದ್ದೆ. ಇದರ ಹೊರತಾಗಿ ಆತನನ್ನು ಕೀಳಾಗಿ ಕಾಣಲು ಖಂಡಿತ ಅಲ್ಲ.

ಒಬ್ಬ 15 ವರ್ಷದ ಯುವ ಆಟಗಾರ ಅಂತರರಾಷ್ಟ್ರೀಯ ಪಂದ್ಯಗಳನ್ನು ಹೊರಗಿನಿಂದ ಸೂಕ್ಷ್ಮವಾಗಿ ಗಮನಿಸುವುದರಿಂದ ಸಿಗುವ ಅನುಭವ ಅಪಾರ. ಇದು ಆತನ ಕ್ರಿಕೆಟ್ ಬದುಕಿನ ದೊಡ್ಡ ಕಲಿಕೆಯ ಹಂತ. ಹೀಗಾಗಿ ನಾನು ವೈಭವ್​ಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಚಾನ್ಸ್ ಸಿಗದಿದ್ದರೆ ಹಿರಿಯ ಆಟಗಾರರಿಗೆ ಡ್ರಿಂಕ್ಸ್ ನೀಡಲಿ ಎಂದಿದ್ದೆ. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅಶ್ವಿನ್ ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ಆತನನ್ನು ತಂಡದಿಂದ ಕೈಬಿಡುವ ಅಥವಾ ಆಯ್ಕೆ ಮಾಡುವ ಬಗ್ಗೆ ಸದಾ ಚರ್ಚಿಸಬೇಡಿ. ಆತನಿಗೆ ತನ್ನದೇ ಆದ ಹಾದಿಯಲ್ಲಿ ಬೆಳೆಯಲು ಬಿಡಿ. ಭವಿಷ್ಯದಲ್ಲಿ ಆತ ಅದ್ಭುತ ಆಟಗಾರನಾಗಲಿದ್ದಾನೆ ಎಂದು ಅಶ್ವಿನ್ ಕ್ರಿಕೆಟ್ ಪ್ರೇಮಿಗಳಲ್ಲಿ ವಿನಂತಿಸಿದ್ದಾರೆ.

ಟೀಕಾಕಾರರಿಗೆ ತಕ್ಕ ತಿರುಗೇಟು:

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ವೇಗಿ ಜೊಫ್ರಾ ಆರ್ಚರ್ ಎಸೆದ ಶಾರ್ಟ್ ಪಿಚ್ ಎಸೆತಗಳಿಗೆ ವೈಭವ್ ಸೂರ್ಯವಂಶಿ ಔಟಾಗಿದ್ದನ್ನು ಕೆಲವರು ಟೀಕಿಸಿದ್ದರು. ಇದಕ್ಕೆ ಅಶ್ವಿನ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

“ನಿಮ್ಮ ಪ್ರಕಾರ ಶಾರ್ಟ್ ಬಾಲ್ ಎದುರಿಸುವಲ್ಲಿ ಜಗತ್ತಿನ ಅತ್ಯುತ್ತಮ ಬ್ಯಾಟ್ಸ್‌ಮನ್ ಯಾರು? ರಿಕ್ಕಿ ಪಾಂಟಿಂಗ್ ತಾನೇ? ಹಾಗಾದರೆ ಪಾಂಟಿಂಗ್ ಎಂದಿಗೂ ಶಾರ್ಟ್ ಬಾಲ್‌ಗೆ ಔಟಾಗಿಯೇ ಇಲ್ಲವೇ? ಅವರೂ ಸಹ ಔಟಾಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರತಿಯೊಬ್ಬರಿಗೂ ಶಕ್ತಿ ಮತ್ತು ದೌರ್ಬಲ್ಯಗಳಿರುತ್ತವೆ” ಎಂದು ವೈಭವ್​ನ ಟೀಕಿಸಿದವರಿಗೆ ಅಶ್ವಿನ್ ತಿರುಗೇಟು ನೀಡಿದ್ದಾರೆ.

15 ವರ್ಷದ ಹುಡುಗ ಇಂಗ್ಲೆಂಡ್‌ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಜೊಫ್ರಾ ಆರ್ಚರ್‌ನಂತಹ ವಿಶ್ವದರ್ಜೆಯ ವೇಗಿಯನ್ನು ಹಿಂದೆ ಎಷ್ಟು ಬಾರಿ ಎದುರಿಸಿದ್ದಾರೆ? ಇದು ಆತನಿಗೆ ಮೊದಲ ಅನುಭವ. ಕೇವಲ ಒಂದೆರಡು ಪಂದ್ಯಗಳ ವೈಫಲ್ಯಕ್ಕೆ ಆತನ ವೃತ್ತಿಜೀವನವೇ ಮುಗಿಯಿತು ಎಂದು ಭವಿಷ್ಯ ನುಡಿಯುವುದು ಮೂರ್ಖತನ.

ಐಪಿಎಲ್‌ನಲ್ಲಿ ವೈಭವ್ ಅದ್ಭುತವಾಗಿ ಪ್ರದರ್ಶನ ನೀಡಿದ್ದರಿಂದ ಜನರ ನಿರೀಕ್ಷೆಗಳು ಗಗನಕ್ಕೇರಿವೆ. ಹೀಗಾಗಿ ಪ್ರತಿ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಅವರಂತೆ ಸ್ಥಿರವಾಗಿ ರನ್ ಗಳಿಸಬೇಕು ಎಂದು ನಿರೀಕ್ಷಿಸುವುದು ತಪ್ಪು. ಕ್ರಿಕೆಟ್‌ನಲ್ಲಿ ಏರಿಳಿತಗಳು ಸಹಜ ಎಂಬುದನ್ನು ಅಭಿಮಾನಿಗಳು ಅರಿಯಬೇಕು ಎಂದು ಅಶ್ವಿನ್ ಕ್ರಿಕೆಟ್ ಫ್ಯಾನ್ಸ್​ಗೆ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ್ ತಂಡದ WTC ಫೈನಲ್ ಕನಸು ನುಚ್ಚು ನೂರು!

ಒಟ್ಟಾರೆಯಾಗಿ ಹೇಳುವುದಾದರೆ, ಆರ್ ಅಶ್ವಿನ್ ಅವರ ಈ ಸ್ಪಷ್ಟನೆಯು ಯುವ ಆಟಗಾರರ ಮೇಲಿರುವ ಅತಿಯಾದ ಸಾಮಾಜಿಕ ಮಾಧ್ಯಮಗಳ ಒತ್ತಡವನ್ನು ಕಡಿಮೆ ಮಾಡುವ ಒಂದು ಪ್ರಾಮಾಣಿಕ ಪ್ರಯತ್ನವಾಗಿದೆ. ಹದಿಹರೆಯದ ಪ್ರತಿಭೆಗಳನ್ನು ಕೇವಲ ಒಂದೆರಡು ಪಂದ್ಯಗಳ ವೈಫಲ್ಯದ ಆಧಾರದ ಮೇಲೆ ನಿರ್ಣಯಿಸಬಾರದು ಮತ್ತು ಬೆಂಚ್ ಕಾಯಿಸುವುದು ಕೂಡ ಕ್ರಿಕೆಟ್‌ನ ಅತ್ಯೂಲ್ಯ ಕಲಿಕೆಯ ಭಾಗ ಎಂಬುದನ್ನು ಅಶ್ವಿನ್ ನೆನಪಿಸಿದ್ದಾರೆ.

Source link

ಬೆಂಗಳೂರಿನ ಐಪಿಎಸ್ ಲೇಔಟ್ ವಿಲ್ಲಾದಲ್ಲಿ ಭರ್ಜರಿ ರೇವ್ ಪಾರ್ಟಿ: ಸಿಸಿಬಿ ದಾಳಿ, ಮೂವರ ಬಂಧನ! – Kannada News | Bengaluru: CCB Raids Rave Party at HSR Layout Villa, 3 Arrested

ಬೆಂಗಳೂರು, ಜುಲೈ 29: ನಗರದ ಎಚ್‌ಎಸ್‌ಆರ್ ಲೇಔಟ್‌ನ 6ನೇ ಸೆಕ್ಟರ್‌ನಲ್ಲಿರುವ ಪ್ರತಿಷ್ಠಿತ ಐಪಿಎಸ್ ಲೇಔಟ್‌ನ ‘ಸಿ-9’ ಸರ್ವಿಸ್ ವಿಲ್ಲಾದಲ್ಲಿ ಇಡೀ ರಾತ್ರಿ ನಡೆಯುತ್ತಿದ್ದ ಭರ್ಜರಿ ರೇವ್ ಪಾರ್ಟಿ (Rave Party) ಮೇಲೆ ಸಿಸಿಬಿಯ ಮಹಿಳಾ ಘಟಕದ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಿಢೀರ್ ದಾಳಿ ನಡೆಸಿದ್ದಾರೆ.

ಆ್ಯಪ್ ಮೂಲಕ ಯುವಕ-ಯುವತಿಯರಿಗೆ ಆಹ್ವಾನ

ಪೊಲೀಸರ ರೇಡ್ ಬೆದರಿಕೆಯಿಂದ ಪಾರಾಗಲು ಐಪಿಎಸ್ ಲೇಔಟ್ ಸುರಕ್ಷಿತ ಎಂದು ಭಾವಿಸಿದ್ದ ಆಯೋಜಕರು, ‘ಅಮಿಗೋಸ್’ ಆ್ಯಪ್ ಮೂಲಕ ಯುವಕ-ಯುವತಿಯರನ್ನು ಆಹ್ವಾನಿಸಿದ್ದರು. ಪಾರ್ಟಿಗೆ ಪ್ರವೇಶಿಸಲು ಯುವಕರಿಂದ 1,099 ರೂ. ಹಾಗೂ ಯುವತಿಯರಿಂದ 499 ರೂ. ಪ್ರವೇಶ ಶುಲ್ಕವನ್ನು ವಸೂಲಿ ಮಾಡಲಾಗಿತ್ತು. ದಿನಕ್ಕೆ 20,000 ರೂ. ಬಾಡಿಗೆಗೆ ‘ರೆವ್ ಕೀ ಹಾಸ್ಪಿಟಾಲಿಟಿ’ ವಿಲ್ಲಾ ಬುಕ್ ಮಾಡಿ, ಇಡೀ ರಾತ್ರಿ ಮದ್ಯ, ನಿಷೇಧಿತ ಹುಕ್ಕಾ ಹಾಗೂ ಇ-ಸಿಗರೇಟ್‌ಗಳೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಪೊಲೀಸರ ದಾಳಿ

ಖಚಿತ ಸುಳಿವು ಲಭಿಸುತ್ತಿದ್ದಂತೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ರೇವ್ ಪಾರ್ಟಿಯಲ್ಲಿದ್ದ ಮಹಿಳೆಯರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸ್ಥಳದಲ್ಲಿದ್ದ ನಿಷೇಧಿತ ಹುಕ್ಕಾ, ಇ-ಸಿಗರೇಟ್ ಹಾಗೂ ಅಪಾರ ಪ್ರಮಾಣದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪಾರ್ಟಿ ಆಯೋಜಿಸಿದ್ದ ದೀಕ್ಷಿತ್, ವೇದಾಂತ್ ಪಂಡಿತ್ ಮತ್ತು ಶಂಕರ್ ಎಂಬ ಮೂವರು ಆರೋಪಿಗಳನ್ನು ಸಿಸಿಬಿ ಅರೆಸ್ಟ್ ಮಾಡಿದೆ. ಜೊತೆಗೆ ನಿಯಮ ಉಲ್ಲಂಘಿಸಿ ವಿಲ್ಲಾ ನೀಡಿದ್ದ ಮನೆ ಮಾಲೀಕರ ವಿರುದ್ಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Guru Purnima Wishes 2026: ಬದುಕನ್ನು ಬೆಳಗಿದ ಗುರುಗಳಿಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಅರ್ಥಪೂರ್ಣ ಸಂದೇಶ – Kannada News | Guru Purnima Wishes 2026: Here is a list of meaningful wishes for Guru Purnima

ಗುರು ಪೂರ್ಣಿಮೆಯ ಶುಭಾಶಯಗಳುImage Credit source: vecteezy

ಗುರು ಪೂರ್ಣಿಮೆಯ (Guru Purnima) ಪವಿತ್ರ ಹಬ್ಬವು ನಮ್ಮ ಜೀವನದಲ್ಲಿ ನಮಗೆ ಸರಿಯಾದ ಮಾರ್ಗವನ್ನು ತೋರಿದ ಮತ್ತು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ದ ಎಲ್ಲಾ ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಒಂದು ವಿಶೇಷ ಅವಕಾಶವನ್ನು ಒದಗಿಸುತ್ತದೆ. ಈ ದಿನವು ವಿದ್ಯೆ ನೀಡಿದ ಗುರುಗಳನ್ನು ಗೌರವಿಸಲು ಮಾತ್ರವಲ್ಲದೆ, ತಂದೆ ತಾಯಿ, ಹಿರಿಯರು ಸೇರಿದಂತೆ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಬದುಕಿನ ಪಾಠ ಕಲಿಸಿದ, ಜೀವನಕ್ಕೆ ದಾರಿ ದೀಪವಾಗಿ ನಿಂತ ಪ್ರತಿಯೊಬ್ಬರನ್ನು ಗೌರವಿಸಲು ಒಂದು ಅವಕಾಶವನ್ನು ಒದಗಿಸುತ್ತದೆ. ಈ ಶುಭದಿನದಂದು  ನಿಮ್ಮ ಜೀವನಕ್ಕೆ ದಾರಿದೀಪವಾಗಿ ನಿಂತ ಗುರುಗಳಿಗೆ ಈ ಅರ್ಥಪೂರ್ಣ ಸಂದೇಶಗಳನ್ನು ತಿಳಿಸುವ ಮೂಲಕ ಧನ್ಯವಾದಗಳನ್ನು ತಿಳಿಸಿ.

ಗುರು ಪೂರ್ಣಿಮೆಯ ಶುಭ ಸಂದೇಶಗಳು:

  • ವಿದ್ಯೆ, ಬುದ್ಧಿ ಹೇಳಿಕೊಟ್ಟು, ಅಜ್ಞಾನವನ್ನು ಕಳೆದು ಸುಜ್ಞಾನದ ಕಡೆಗೆ ದಾರಿ ತೋರಿದ ಗುರುಗಳಿಗೆ ಕೋಟಿ ಕೋಟಿ ನಮಸ್ಕಾರಗಳು.
  • ಗುರಿ ಮುಟ್ಟಲು ದಾರಿ ತೋರಿದ, ನಿಸ್ವಾರ್ಥ ಮನೋಭಾವದಿಂದ ದಾರಿದೀಪವಾದ ನನ್ನ ಗುರುಗಳಿಗೆ ಗುರು ಪೂರ್ಣಿಮೆಯ ಶುಭಾಶಯಗಳು.
  • ಜ್ಞಾನದ ದೀಪವನ್ನು ಬೆಳಗಿಸಿದ ನನ್ನ ಗುರುಗಳಿಗೆ ವಂದನೆಗಳು. ನಿಮ್ಮ ಆಶೀರ್ವಾದದಿಂದ ನಾನು ಇಡುವ ಪ್ರತಿಯೊಂದು ಹೆಜ್ಜೆಗೂ ಯಶಸ್ಸು ಸಿಗಲಿ.
    ಈ ಗುರು ಪೂರ್ಣಿಮೆ ಸಂತೋಷವನ್ನು ತರಲಿ. ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
  • ನಾನು ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ ಮತ್ತು ತಿಳಿದಿದ್ದೇನೆ, ನಿಮ್ಮನ್ನು ನನ್ನ ಗುರು ಎಂದು ಪರಿಗಣಿಸಿದ್ದೇನೆ, ನಿಮಗೆ ಗುರು ಪೂರ್ಣಿಮೆಯ ಶುಭಾಶಯಗಳು.
  • ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ದಾಸರ ವಾಕ್ಯದಂತೆ ನನ್ನ ಬದುಕನ್ನು ಬೆಳಗಿದ ಗುರುಗಳಿಗೆ ಗುರು ಪೂರ್ಣಿಮೆಯ ಶುಭಾಶಯಗಳು.
  • ನನ್ನ ಜೀವನವನ್ನು ರೂಪಿಸಿದ, ಸರಿಯಾದ ಮಾರ್ಗದರ್ಶನವನ್ನು ನೀಡಿ ನನ್ನ ಜೀವನವನ್ನು ಬೆಳಗಿದ ನಿಮಗೆ ಗುರು ಪೂರ್ಣಿಮೆಯ ಶುಭಾಶಯಗಳು.
  • ನನ್ನ ಸಾಧನೆಯ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತ ನಿಮಗೆ ಗುರುಪೂರ್ಣಿಮೆಯ ಶುಭಾಶಯಗಳು.
  • ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಕಲಿಸಿದ ನನ್ನ ಪೂಜ್ಯ ಗುರುಗಳಿಗೆ ಕೋಟಿ ಕೋಟಿ ನಮನಗಳು.
  • ಗುರು ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ: ಅಂದರೆ ಗುರುವೇ ಬ್ರಹ್ಮ, ಗುರುವೇ ವಿಷ್ಣು ಮತ್ತು ಗುರುವೇ ಶಿವ, ಗುರುವೇ ಪರಮ ಬ್ರಹ್ಮ, ದೇವರ ಸ್ಥಾನದಲ್ಲಿರುವ ನನ್ನ ಗುರುಗಳಿಗೆ ಕೋಟಿ ಕೋಟಿ ನಮನಗಳು.
  • ಗುರುವಿನ ಪ್ರೀತಿ ಜ್ಞಾನದ ಸಾಗರ, ಅವರಿಲ್ಲದೆ ಜೀವನ ಅಪೂರ್ಣ. ಬದುಕಿನ ಪಾಠ ಕಲಿಸಿದ ನನ್ನೆಲ್ಲಾ ಗುರುಗಳಿಗೂ ಗುರು ಪೂರ್ಣಿಮೆಯ ಶುಭಾಶಯಗಳು.
  • ಜ್ಞಾನ, ಉತ್ತಮ ನಡವಳಿಕೆ ಮತ್ತು ಮೌಲ್ಯಗಳನ್ನು ಕಲಿಸಿಕೊಟ್ಟ ನಿಮಗೆ ಗುರು ಪೂರ್ಣಿಮೆಯ ಶುಭಾಶಯಗಳು.
  • ಜ್ಞಾನದ ಬೆಳಕು ಯಾವಾಗಲೂ ಉರಿಯಲಿ, ಗುರುಗಳ ಆಶೀರ್ವಾದ ನಿಮ್ಮ ಜೀವನದಲ್ಲಿ ನಿರಂತರವಾಗಿ ಬೆಳೆಯಲಿ. ನಿಮ್ಮ ಪ್ರತಿಯೊಂದು ಕನಸು ನನಸಾಗಲಿ. ಗುರು ಪೂರ್ಣಿಮೆಯ ಶುಭಾಶಯಗಳು.
  • ಗುರುರ್ಬ್ರಹ್ಮ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರಃ.
    ಗುರು: ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ. ಗುರು ಪೂರ್ಣಿಮೆಯ ಶುಭಾಶಯಗಳು.
  • ಗುರುಗಳು ನಮಗೆ ಕೇವಲ ಪುಸ್ತಕದ ಜ್ಞಾನವನ್ನು ಕಲಿಸುವುದಿಲ್ಲ, ಬದಲಿಗೆ ಜೀವನ ಪಾಥಗಳನ್ನು ಸಹ ಕಲಿಸುತ್ತಾರೆ. ಜೀವನಕ್ಕೆ ದಾರಿ ತೋರಿದ ಗುರುಗಳಿಗೆ ನಮನಗಳು.
  • ನೀವು ಕೇವಲ ಪಾಠಗಳನ್ನು ಕಲಿಸಲಿಲ್ಲ, ಬದಲಾಗಿ, ಅದು ಜೀವನವನ್ನು ರೂಪಿಸುವ ಕಲೆಯನ್ನು ಕಲಿಸಿದ್ದೀರಿ, ನನ್ನೆಲ್ಲಾ ಸಾಧನೆಗಳಿಗೂ ನೀವೇ ಮೂಲ ಕಾರಣಕರ್ತರು. ನಿಮಗೆ ಗುರು ಪೂರ್ಣಿಮೆಯ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version