ಬರದ ಮಧ್ಯೆ ಕರ್ನಾಟಕಕ್ಕೆ ಬರಸಿಡಿಲು: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ – Kannada News | CWMA directs to Karnataka release Cauvery water to Tamil Nadu 15 days Daily 3 500 cusecs

ನವದೆಹಲಿ, (ಜುಲೈ 28): ಕರ್ನಾಟಕದಲ್ಲಿ ಮುಂಗಾರು ಮಳೆ (Rain) ಕೈ ಕೊಟ್ಟಿದ್ದು, ಬರದ ಭೀತಿ ಆವರಿಸಿದೆ. ರೈತರು ಬೆಳೆದ ಬೆಳೆಗೆ ನೀರಿಲ್ಲದೇ ಆಕಾಶದತ್ತ ನೋಡುತ್ತಾ ಕುಳಿತ್ತಿದ್ದಾರೆ. ಇನ್ನೊಂದೆಡೆ ರಾಜ್ಯದ ಜಲಾಶಯಗಳು ಸಹ ಖಾಲಿಯಾಗಿವೆ. ಇಂಥಹ ಪರಿಸ್ಥಿತಿಯಲ್ಲೂ ಸಹ ಕಾವೇರಿ (Cauvery Water) ನೀರನ್ನು ತಮಿಳುನಾಡಿಗೆ (Tamilnadu) ಬಿಡುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಮಹತ್ವದ ಸೂಚನೆ ನೀಡಿದೆ. ಹೌದು….ಇಂದು (ಜುಲೈ 28) ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water Regulation Committee – CWRC) ಮುಂದಿನ 15 ದಿನಗಳ ಕಾಲ ನಿರಂತರವಾಗಿ ದಿನಕ್ಕೆ 3,500 ಕ್ಯೂಸೆಕ್ ಕಾವೇರಿ ನೀರನ್ನು (Cusecs Water) ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಸೂಚಿಸಿದೆ.

ವರ್ಚ್ಯುವಲ್ ಮೂಲಕ ಕರ್ನಾಟಕ, ತಮಿಳುನಾಡು (TamilNadu), ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಆದೇಶ ಮಾಡಿದೆ. ಪ್ರತಿ ದಿನ 3,500 ಕ್ಯೂಸೆಕ್‌ನಂತೆ 15 ದಿನಗಳಲ್ಲಿ ಒಟ್ಟು 4 ಟಿಎಂಸಿ ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಹೇಳಿದೆ. ಆದ್ರೆ ಇದಕ್ಕೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ ಎಂದ ಕೇಂದ್ರ ಜಲಶಕ್ತಿ ಸಚಿವಾಲಯ

ಕರ್ನಾಟಕದ ವಾದ ತಿರಸ್ಕೃತ

ಜುಲೈನಲ್ಲಿ ಕೆಲವೆಡೆ ಮಾತ್ರ ಸ್ವಲ್ಪ ಮಳೆಯಾಗಿದೆ ಮತ್ತು ಅಣೆಕಟ್ಟುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಮತ್ತೊಂದೆಡೆ, ಮುಂಗಾರು ಮತ್ತೆ ಚುರುಕಾಗುವ ಮುನ್ಸೂಚನೆ ಕೂಡ ಇಲ್ಲದಿರುವುದು ತಮಿಳುನಾಡಿಗೆ ನೀರು ಹರಿಸುವುದು ಕಷ್ಟಸಾದ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಸ್ತುತ ಸಂಗ್ರಹವಾಗಿರುವ ನೀರನ್ನು ಕುಡಿಯುವ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು ಎಂದು ಕರ್ನಾಟಕ ವಾದಿಸಿದ್ದು, ನಮ್ಮ ಅಣೆಕಟ್ಟುಗಳಲ್ಲಿ ಹೆಚ್ಚಿನ ನೀರು ಸಂಗ್ರಹವಿಲ್ಲ. ಈಗ ಲಭ್ಯವಿರುವ ನೀರು ಕುಡಿಯುವುದಕ್ಕಷ್ಟೇ ಸೀಮಿತವಾಗಿದೆ ಎಂದಿತ್ತು.

ರಾಜ್ಯವು ಹಿಂದೆಂದೂ ನೋಡಿರದ ಮಳೆಯ ಕೊರತೆಯನ್ನು ಎದುರಿಸುತ್ತಿದೆ ಎಂದು ಕರ್ನಾಟಕ ಬಲವಾದ ಮಂಡಿಸಿದೆ. ರಾಜ್ಯದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದರೂ ಸಹ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದಿನ 15 ದಿನಗಳ ಕಾಲ ನಿತ್ಯ 3500 ಕ್ಯೂಸೆಕ್​ ನೀರು ಬಿಡಲು ಆದೇಶ ನೀಡಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಜಲಾಶಯಗಳು ಬರಿದಾಗಿದ್ದರೂ, ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಶಿಫಾರಸು ಮಾಡಿದೆ. ಕರ್ನಾಟಕದ ವಾದವನ್ನು ಪರಿಗಣಿಸದ ಈ ಆದೇಶದಿಂದಾಗಿ ರಾಜ್ಯದ ರೈತರು ಹಾಗೂ ಬೆಂಗಳೂರು ಸೇರಿದಂತೆ ಹಲವು ನಗರಗಳ ಜನರಲ್ಲಿ ಆತಂಕ ಮೂಡಿಸಿದೆ.

ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನೀರಾವರಿ ಸಚಿವ ರಾಮಲಿಂಗಾರೆಡ್ಡಿ,   ಇಂದು ಕಾವೇರಿ ನೀರು ನಿರ್ವಹಣಾ ಸಮಿತಿ ಇತ್ತು. ಸಭೆಯಲ್ಲಿ 3500 ಕ್ಯೂಸೆಕ್ ನೀರು 15 ದಿನ ಬಿಡುವಂತೆ ಹೇಳಿದ್ದಾರೆ. 4 ಟಿಎಂಸಿ ನೀರು ನಮಗೆ ಬೇಕಾಗುತ್ತೆ. ಹೀಗಿರುವಾಗ, ನಾವು CWMAಗೆ ಅಪೀಲು ಹಾಕಬಹುದು. ಇದರ ಬಗ್ಗೆ ಖುದ್ದಾಗಿ ಸಿಎಂ ಜತೆ ಮಾತಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಂಡ್ಯ: ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ, ಅಧ್ಯಕ್ಷರ ವಿರುದ್ಧ ಆಕ್ರೋಶ! – Kannada News | Mandya: High Drama at KR Pete Congress Meeting as Workers Demand District President’s Ouster

ಮಂಡ್ಯ, ಜುಲೈ 28: ಕೆ.ಆರ್.ಪೇಟೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ನ ‘ಸಂಘಟನಾ ಸೃಜನ ಅಭಿಯಾನ’ ಸಭೆಯಲ್ಲಿ ಭಾರಿ ಹೈಡ್ರಾಮಾ ನಡೆದಿದೆ. ತಾಲೂಕಿನಲ್ಲಿ ಸ್ಪಂದಿಸುವ ನಾಯಕರೇ ಇಲ್ಲ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್ ಜೆಡಿಎಸ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶಗೊಂಡ ಕಾರ್ಯಕರ್ತರು ನಾಯಕರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.

ಎಐಸಿಸಿ ವೀಕ್ಷಕ ಸೈಮನ್ ಅಲೆಕ್ಸ್ ಹಾಗೂ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಸಮ್ಮುಖದಲ್ಲೇ ಜಿಲ್ಲಾಧ್ಯಕ್ಷರನ್ನು ಬದಲಾಯಿಸುವಂತೆ ಪಟ್ಟು ಹಿಡಿದರು. ಹೊಸ ಅಧ್ಯಕ್ಷರ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸಲು ಬಂದಿರುವುದಾಗಿ ನಾಯಕರು ಸಮಜಾಯಿಷಿ ನೀಡಿದರೂ ತಣ್ಣಗಾಗದ ಕಾರ್ಯಕರ್ತರ ಕೋಪದಿಂದಾಗಿ ಇಡೀ ಸಭೆಯು ಗಲಾಟೆ ಮತ್ತು ವಾಗ್ವಾದದಲ್ಲೇ ಅಂತ್ಯಗೊಂಡಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಧಾರವಾಡದ ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ – Kannada News | Power Supply Disruption Halts Trains for Over Four Hours at Alnavar Railway Station

ಧಾರವಾಡ, ಜುಲೈ 28: ವಿದ್ಯುತ್ ಪೂರೈಕೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಧಾರವಾಡ ಜಿಲ್ಲೆಯ ಅಳ್ನಾವರ ರೈಲು ನಿಲ್ದಾಣದಲ್ಲಿ ನಾಲ್ಕು ಗಂಟೆಗೂ ಅಧಿಕ ಕಾಲ ಹಲವು ರೈಲುಗಳು ನಿಂತ ಪರಿಣಾಮ ಪ್ರಯಾಣಿಕರು ಪರದಾಡುವಂತಾಯಿತು. ಲೋಂಡಾ ಭಾಗದಲ್ಲಿ ಉಂಟಾದ ವಿದ್ಯುತ್ ಪೂರೈಕೆ ಸಮಸ್ಯೆಯಿಂದ ಬೆಂಗಳೂರು–ಬೆಳಗಾವಿ ಎಕ್ಸ್‌ಪ್ರೆಸ್ ಹಾಗೂ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ಸೇರಿದಂತೆ ಕೆಲವು ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಪರಿಣಾಮವಾಗಿ ರೈಲುಗಳನ್ನು ಅಳ್ನಾವರ ರೈಲು ನಿಲ್ದಾಣದಲ್ಲೇ ನಿಲ್ಲಿಸಲಾಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

World Records: ಕ್ಯಾಲ್ಕುಲೇಟರ್‌ಗಿಂತಲೂ ಫಾಸ್ಟ್; 2 ಶತಕೋಟಿ ವರ್ಷಗಳ ಕ್ಯಾಲೆಂಡರ್ ಲೆಕ್ಕ ಹೇಳಿ ವಿಶ್ವ ದಾಖಲೆ ಬರೆದ 12ರ ಪೋರ! – Kannada News | 12 Year Old Prodigy Sachin Calculates Dates Up to 2 Billion Years, Enters World Records

1 ರಿಂದ 2 ಶತಕೋಟಿ (Billion) ವರ್ಷಗಳ ನಡುವಿನ ಯಾವುದೇ ದಿನಾಂಕವನ್ನು ನೀಡಿದರೂ, ಕೆಲವೇ ಸೆಕೆಂಡುಗಳಲ್ಲಿ ಅದು ಯಾವ ವಾರ ಎಂದು ತಟ್ಟನೆ ಹೇಳುವ ಅಸಾಧಾರಣ ಪ್ರತಿಭೆಯೊಂದನ್ನು ಆಂಧ್ರಪ್ರದೇಶದ 12 ವರ್ಷದ ಬಾಲಕ ಪ್ರದರ್ಶಿಸಿದ್ದಾನೆ. ಸಚಿನ್ ಎಂಬ ಈ ಬಾಲಕ, ತನ್ನ ಅದ್ಭುತ ಗಣಿತ ಕೌಶಲ್ಯದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಪ್ರತಿಷ್ಠಿತ ‘ಇನ್ಫ್ಲುಯೆನ್ಸರ್ ಬುಕ್ ಆಫ್ ರೆಕಾರ್ಡ್ಸ್’ (Influencer Book of Records) ಸಾಲಿಗೆ ಸೇರ್ಪಡೆಯಾಗಿದ್ದಾನೆ.

ಸುಡೋಕು ಒಗಟಿನಿಂದ ಜಾಗತಿಕ ವೇದಿಕೆಯವರೆಗೆ:

ಸಚಿನ್ ಅವರ ತಂದೆ ಸತ್ಯಪ್ರಸಾದ್ ಅವರಿಗೂ ಕ್ಯಾಲೆಂಡರ್ ಲೆಕ್ಕಾಚಾರಗಳು ಮತ್ತು ಅಂಕಿ-ಅಂಶಗಳಲ್ಲಿ ಅಪಾರ ಆಸಕ್ತಿಯಿತ್ತು. ತಂದೆಯ ಪ್ರೇರಣೆಯಿಂದ ಚಿಕ್ಕಂದಿನಿಂದಲೇ ಸಂಖ್ಯೆಗಳ ಜೊತೆ ಆಟವಾಡಲು ಶುರುಮಾಡಿದ ಸಚಿನ್, ಕ್ರಮೇಣ ಗಣಿತದ ರಹಸ್ಯಗಳನ್ನು ಕರಗತ ಮಾಡಿಕೊಂಡಿದ್ದನು.

ಬಾಲಕನ ಅಸಾಧಾರಣ ಪ್ರತಿಭೆ:

ಬಾಲಕನ ಅಸಾಧಾರಣ ಪ್ರತಿಭೆ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಮಾನವ ಕ್ಯಾಲ್ಕುಲೇಟರ್‌ನಂತೆ ಕೇವಲ ಸೆಕೆಂಡುಗಳಲ್ಲಿ ಕಠಿಣ ಗಣಿತದ ಲೆಕ್ಕಾಚಾರಗಳನ್ನು ಮನಸ್ಸಿನಲ್ಲೇ ಬಿಡಿಸುವ ಸಾಮರ್ಥ್ಯ ಹೊಂದಿರುವ ಈ ಬಾಲಕ, 1 ರಿಂದ 2 ಬಿಲಿಯನ್ ವರ್ಷಗಳ ಹಿಂದಿನ ಹಾಗೂ ಮುಂದಿನ ಯಾವುದೇ ದಿನಾಂಕವನ್ನು ನೀಡಿದರೂ ಕ್ಷಣಾರ್ಧದಲ್ಲಿ ಅದರ ವಾರದ ದಿನವನ್ನು ನಿಖರವಾಗಿ ಹೇಳಬಲ್ಲನು. ಇದಲ್ಲದೆ, ಕಣ್ಣು ಮುಚ್ಚಿ ತೆರೆಯುವಷ್ಟರಲ್ಲೇ ಕಠಿಣ ರೂಬಿಕ್ಸ್ ಕ್ಯೂಬ್ ಅನ್ನು ಬಿಡಿಸುವ ಅದ್ಭುತ ಕೌಶಲ್ಯವೂ ಅವನಿಗಿದೆ. ಬಾಲ್ಯದಿಂದಲೇ ಸುಡೋಕು ಒಗಟುಗಳನ್ನು ನಿರಂತರವಾಗಿ ಬಿಡಿಸುವುದು ಮತ್ತು ತಂದೆಯೊಂದಿಗೆ ಸಂಖ್ಯಾ ಸಿದ್ಧಾಂತಗಳ ಕುರಿತು ಚರ್ಚಿಸುವ ಮೂಲಕ ತನ್ನ ಮಾನಸಿಕ ಸಾಮರ್ಥ್ಯ ಹಾಗೂ ಬುದ್ಧಿಮತ್ತೆಯನ್ನು ಇನ್ನಷ್ಟು ಹರಿತಗೊಳಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಐತಿಹಾಸಿಕ ಸಾಧನೆ:

ಇತ್ತೀಚೆಗೆ ಜೂನ್ ತಿಂಗಳಿನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಚಿನ್, ಕಠಿಣ ಕ್ಯಾಲೆಂಡರ್ ಪ್ರಶ್ನೆಗಳಿಗೆ ತಟ್ಟನೆ ಉತ್ತರಿಸಿ ಅಲ್ಲಿದ್ದ ತೀರ್ಪುಗಾರರನ್ನೇ ಬೆರಗುಗೊಳಿಸಿದ್ದನು. ಈ ಅಪರೂಪದ ಸಾಧನೆಯನ್ನು ಅಧಿಕೃತವಾಗಿ ಗುರುತಿಸಿದ ‘ಇನ್ಫ್ಲುಯೆನ್ಸರ್ ಬುಕ್ ಆಫ್ ರೆಕಾರ್ಡ್ಸ್’ ಸಂಸ್ಥೆಯು ಬಾಲಕನಿಗೆ ಪ್ರಮಾಣಪತ್ರ ನೀಡಿ ಗೌರವಿಸಿದೆ. ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಸಚಿನ್, ಭವಿಷ್ಯದಲ್ಲಿ ಗಣಿತ ಕ್ಷೇತ್ರದಲ್ಲಿ ಇನ್ನಷ್ಟು ದೊಡ್ಡ ಎತ್ತರಕ್ಕೆ ಬೆಳೆಯಲಿದ್ದಾನೆ ಎಂದು ಕುಟುಂಬಸ್ಥರು ಹಾಗೂ ಶಿಕ್ಷಕರು ಹಾರೈಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಯಾದರೂ ಪರ ಪುರುಷನ ಜೊತೆ ಅನೈತಿಕ ಸಂಬಂಧ: ಪತಿಯಿಂದಲೇ ಪತ್ನಿಯ ಭೀಕರ ಕೊಲೆ – Kannada News | Bagalkot Shocker: Husband Held After 23 Year Old Wife Found Dead

ಬಾಗಲಕೋಟೆ, ಜುಲೈ 28: ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಹಿನ್ನೆಲೆಯಲ್ಲಿ 23 ವರ್ಷದ ಪತ್ನಿಯನ್ನು ಪತಿ ನೇಣು ಬಿಗಿದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗಲಗಲಿ ಗ್ರಾಮದಲ್ಲಿ ನಡೆದಿದೆ. ಮೃತೆಯನ್ನು ಭಾಗ್ಯಶ್ರೀ ಜಿಗಲೂರು ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ಪ್ರವೀಣ ಜಿಗಲೂರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಪ್ರವೀಣ ಮೊದಲು ಮರದ ತುಂಡಿನಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ, ಬಳಿಕ ಮನೆಯಲ್ಲಿ ನೇಣು ಬಿಗಿದಿದ್ದಾನೆ ಎನ್ನಲಾಗಿದೆ.

ದಂಪತಿಯ ನಡುವೆ ಕಳೆದ ಕೆಲವು ತಿಂಗಳಿಂದ ಆಗಾಗ ಜಗಳವಾಗುತ್ತಿತ್ತು. ಇದರಿಂದ ಸುಮಾರು ಎರಡು ತಿಂಗಳ ಹಿಂದೆ ಭಾಗ್ಯಶ್ರೀ ಪತಿಯ ಮನೆಯಿಂದ ಹೊರಬಂದು ತನ್ನ ತಂದೆ-ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದರು. ಬಳಿಕ ಇನ್ನು ಮುಂದೆ ಶಾಂತಿಯುತವಾಗಿ ಬದುಕೋಣ ಎಂದು ಮನವೊಲಿಸಿ ಪ್ರವೀಣ ಪತ್ನಿಯನ್ನು ಮರಳಿ ಮನೆಗೆ ಕರೆತಂದಿದ್ದ. ಆದರೆ ಮನೆಗೆ ಬಂದ ಅದೇ ದಿನ ಈ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಿಲಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಐಷಾರಾಮಿ ಕಾರುಗಳ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ: ನಾಲ್ವರು ಆರೋಪಿಗಳ ಬಂಧನ!

ಘಟನೆ ಬಗ್ಗೆ ಬಾಗಲಕೋಟೆ ಎಸ್ಪಿ ಸಿದ್ದಾರ್ಥ್​​ ಗೋಯಲ್​​ ಪ್ರತಿಕ್ರಿಯಿಸಿದ್ದು, ಮೃತ ಭಾಗ್ಯಶ್ರೀ ಮೈಮೇಲೆ ರಾಡ್​​ನಿಂದ ಹೊಡೆದ ಗುರುತುಗಳು ಕಂಡುಬಂದಿವೆ. ಆಕೆ ಕಿರುಕುಳಕ್ಕೆ ನೇಣು ಹಾಕಿಕೊಂಡಿರಬಹುದು ಅಥವಾ ಹಲ್ಲೆ ಮಾಡಿ ಪತಿ ಪ್ರವೀಣ ನೇಣು ಹಾಕಿರಬಹುದು. ಪ್ರಾಥಮಿಕ ತನಿಖೆ ಪ್ರಕಾರ ಭಾಗ್ಯಶ್ರೀಗೆ ಅನೈತಿಕ ಸಂಬಂಧ ಇರುವುದು ಬಹುತೇಕ ಖಚಿತವಾಗಿದೆ. ಆಕೆಯ ತವರು ಮನೆ ಮಹಾಲಿಂಗಪುರದ ವ್ಯಕ್ತಿಯ ಜೊತೆಗೆ ಸಂಪರ್ಕ ಹೊಂದಿದ್ದಾಳೆ. ಆ ವ್ಯಕ್ತಿಯ ಜೊತೆಗಿನ ಆಕೆಯ ಅಶ್ಲೀಲ ವಿಡಿಯೋಗಳು ಪ್ರವೀಣ್​​ ಮೊಬೈಲ್​ನಲ್ಲಿ ಸಿಕ್ಕಿವೆ. ಅವನ್ನು ಆತ ತನ್ನ ಕೆಲ ಸ್ನೇಹಿತರಿಗೆ ಶೇರ್​​ ಮಾಡಿದ್ದಾನೆ. ದಂಪತಿಗೆ 6 ವರ್ಷಗಳ ಹಿಂದೆ ವಿವಾಹವಾಗಿದ್ದು, ಪತ್ನಿಯ ಅನೈತಿಕ ಸಂಬಂಧದ ವಿಚಾರ 2 ವರ್ಷಗಳ ಹಿಂದೆ ಪತಿಗೆ ಗೊತ್ತಾಗಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ಕಲಹಗಳೂ ನಡೆಯುತ್ತಿದ್ದವು. ಘಟನೆ ವೇಳೆ ಮನೆಯಲ್ಲಿ ದಂಪತಿ ಮಾತ್ರ ಇದ್ದರು. ಸ್ಥಳದಲ್ಲಿ ಬಿಯರ್​​ ಬಾಟಲಿಗಳು ದೊರೆತಿದ್ದು, ಆರೋಪಿ ಮದ್ಯ ಸೇವಿಸಿದ್ದ ಸಾಧ್ಯತೆಯೂ ಇದೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:21 pm, Tue, 28 July 26

Source link

18 ಪಂದ್ಯಗಳಿಂದ 104 ವಿಕೆಟ್​ಗಳು: ಆದರೂ ಟೀಮ್ ಇಂಡಿಯಾದಲ್ಲಿಲ್ಲ ಸ್ಥಾನ! – Kannada News | Auqib Nabi wasn’t picked for India’s Squad For Sri Lanka Tests

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ 15 ಸದಸ್ಯರುಗಳ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ಹದಿನೈದು ಸದಸ್ಯರುಗಳ ಪಟ್ಟಿಯಲ್ಲಿ ಜಮ್ಮು-ಕಾಶ್ಮೀರದ ವೇಗಿ ಆಖಿಬ್ ನಬಿ ಹೆಸರು ಕಾಣಿಸಿಕೊಂಡಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಸತತ ಅದ್ಭುತ ಪ್ರದರ್ಶನ ನೀಡಿದರೂ ನಬಿ ಅವರಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗದಿರುವುದು ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಕಳೆದ ಎರಡು ರಣಜಿ ಸೀಸನ್​ಗಳಲ್ಲಿ ಆಖಿಬ್ ನಬಿ ಪಡೆದಿರುವ ವಿಕೆಟ್​ಗಳ ಸಂಖ್ಯೆ.

‘ಬಾರಾಮುಲ್ಲಾ ಎಕ್ಸ್‌ಪ್ರೆಸ್’:

ದೇಶೀಯ ಕ್ರಿಕೆಟ್​ನಲ್ಲಿ ಬಾರಾಮುಲ್ಲಾ ಎಕ್ಸ್​ಪ್ರೆಸ್ ಎಂದೇ ಖ್ಯಾತಿ ಪಡೆದಿರುವ ಆಖಿಬ್ ನಬಿ ಯಾವುದೇ ಪ್ರಮುಖ ಕ್ರಿಕೆಟ್ ಸೌಲಭ್ಯಗಳಿಲ್ಲದ ಜಮ್ಮು-ಕಾಶ್ಮೀರದ ಬಾರಾಮುಲ್ಲಾದಿಂದ ಬಂದ ಬೌಲರ್​. ತನ್ನ ಊರಿನಲ್ಲಿ ಅಂತಹ ಅತ್ಯಾಧುನಿಕ ಸೌಲಭ್ಯಗಳು ಇಲ್ಲದಿದ್ದರೂ ಆಖಿಬ್ ನಬಿ ದೇಶಿ ಕ್ರಿಕೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.

  • ಐತಿಹಾಸಿಕ ರಣಜಿ ಟ್ರೋಫಿ ಸಾಧನೆ: 2025-26ರ ರಣಜಿ ಟ್ರೋಫಿ ಸೀಸನ್‌ನಲ್ಲಿ ಆಖಿಬ್ ನಬಿ ಕೇವಲ 12.65 ರ ಸರಾಸರಿಯಲ್ಲಿ 60 ವಿಕೆಟ್‌ಗಳನ್ನು ಕಬಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
  • ಜಮ್ಮು ಮತ್ತು ಕಾಶ್ಮೀರಕ್ಕೆ ಮೊದಲ ಕಿರೀಟ: ಆಖಿಬ್ ನಬಿ ಅವರ ಮಾರಕ ಬೌಲಿಂಗ್ ನೆರವಿನಿಂದಲೇ ಜಮ್ಮು ಮತ್ತು ಕಾಶ್ಮೀರ ತಂಡ ಇತಿಹಾಸದಲ್ಲೇ ಮೊದಲ ಬಾರಿಗೆ ರಣಜಿ ಟ್ರೋಫಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಕ್ವಾರ್ಟರ್ ಫೈನಲ್‌ನಲ್ಲಿ ಮಧ್ಯಪ್ರದೇಶ ವಿರುದ್ಧ 110 ರನ್‌ಗಳಿಗೆ 12 ವಿಕೆಟ್ ಹಾಗೂ ಕರ್ನಾಟಕ ವಿರುದ್ಧದ ಫೈನಲ್‌ನಲ್ಲಿ 54 ರನ್‌ಗಳಿಗೆ 5 ವಿಕೆಟ್ ಪಡೆದು ಪಂದ್ಯದ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು.
  • ಐತಿಹಾಸಿಕ 60 ವಿಕೆಟ್‌ಗಳು: 2025-26ರ ರಣಜಿ ಸೀಸನ್‌ನಲ್ಲಿ ಬರೋಬ್ಬರಿ 60 ವಿಕೆಟ್ ಪಡೆದು, ರಣಜಿ ಇತಿಹಾಸದಲ್ಲೇ ಒಂದೇ ಸೀಸನ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ 3ನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಬರೋಬ್ಬರಿ 104 ವಿಕೆಟ್​ಗಳು!

ಆಖಿಬ್ ನಬಿ ಕಳೆದ ಎರಡು ರಣಜಿ ಸೀಸನ್​ಗಳಿಂದ ಪಡೆದಿರುವ ಒಟ್ಟು ವಿಕೆಟ್​ಗಳ ಸಂಖ್ಯೆ ಬರೋಬ್ಬರಿ 104.

  • 2024-25 ರ ರಣಜಿ ಸೀಸನ್​ನಲ್ಲಿ 9 ಪಂದ್ಯಗಳಿಂದ 44 ವಿಕೆಟ್ ಕಬಳಿಸಿದ್ದರು.
  • 2025-26ರ ರಣಜಿ ಸೀಸನ್​ನಲ್ಲಿ 9 ಮ್ಯಾಚ್​ಗಳಿಂದ ಬರೋಬ್ಬರಿ 60 ವಿಕೆಟ್ ಪಡೆದಿದ್ದಾರೆ.

ಕೇವಲ ಬೌಲಿಂಗ್ ಮಾತ್ರವಲ್ಲದೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಹೈದರಾಬಾದ್ ವಿರುದ್ಧ ಕೇವಲ 82 ಎಸೆತಗಳಲ್ಲಿ ಅಜೇಯ 114 ರನ್ ಸಿಡಿಸಿ ತಾವೊಬ್ಬ ಅತ್ಯುತ್ತಮ ಆಲ್‌ರೌಂಡರ್ ಎಂಬುದನ್ನು ಸಹ ಸಾಬೀತುಪಡಿಸಿದ್ದಾರೆ.

ಇದರ ಜೊತೆಗೆ ಶ್ರೀಲಂಕಾ ‘ಎ’ ವಿರುದ್ಧದ ಅನ್‌ಅಫಿಶಿಯಲ್ ಟೆಸ್ಟ್ ಪಂದ್ಯದಲ್ಲಿ ಇಂಡಿಯಾ ‘ಎ’ ಪರ ಪದಾರ್ಪಣೆ ಮಾಡಿದ ಆಖಿಬ್ ನಬಿ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ (4/58) ಪಡೆದು ಎಲ್ಲರ ಗಮನ ಸೆಳೆದಿದ್ದರು.

ಮಾಜಿ ಕ್ರಿಕೆಟಿಗರು ಫಿದಾ:

ದೇಶೀಯ ಕ್ರಿಕೆಟ್ ಅಂಗಳದಲ್ಲಿ ಆಖಿಬ್ ನಬಿ ಅವರ ಪ್ರಚಂಡ ಪ್ರದರ್ಶನವನ್ನು ಗಮನಿಸಿದ್ದ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಮಾಜಿ ಮುಖ್ಯ ಆಯ್ಕೆಗಾರ ದಿಲೀಪ್ ವೆಂಗ್‌ಸರ್ಕರ್ ಹಾಗೂ ಸಂಜಯ್ ಮಂಜ್ರೇಕರ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು, ಜಮ್ಮು-ಕಾಶ್ಮೀರದ ಈ ವೇಗಿಗೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲೇಬೇಕು ಎಂದು ಬಲವಾಗಿ ಒತ್ತಾಯಿಸಿದ್ದರು.

ಇದಾಗ್ಯೂ 18 ಪಂದ್ಯಗಳಲ್ಲಿ ಬರೋಬ್ಬರಿ 104 ವಿಕೆಟ್ ಪಡೆದಿರುವ ಆಖಿಬ್ ನಬಿ ಅವರನ್ನು ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡದಿರುವುದು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ 33 ವರ್ಷದ ಆಲ್​ರೌಂಡರ್ ಎಂಟ್ರಿ!

ಭಾರತ ಟೆಸ್ಟ್ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸರಂಶ್ ಜೈನ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್.

Source link

ದರ್ಶನ್ ಪ್ರಕರಣ: ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದ ಆರೋಪಿಗಳಿಗೆ ಜಾಮೀನು – Kannada News | Renuka Swamy case: accused who threatened witness got bail

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿರುವಾಗಲೇ, ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಬೆಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಆ ಮೂವರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಯೊಂದಕ್ಕೆ ಬೆದರಿಕೆ ಹಾಕಿದ ಆರೋಪದ ಮೇಲೆ ಸುಹಾಸ್, ವೈಭವ್ ಮತ್ತು ಪುನೀತ್ ಎಂಬುವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಈ ಮೂವರು ಆರೋಪಿಗಳಿಗೆ 59ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಬಂಧಿತರಾಗಿದ್ದ ಸುಹಾಸ್, ವೇಣು ಮತ್ತು ಪುನೀತ್‌ ಅವರುಗಳು ದರ್ಶನ್ ಅಭಿಮಾನಿಗಳಾಗಿದ್ದು, ಮೂವರು ಮೂಲತಃ ತುಮಕೂರಿನವರು. ಪುನೀತ್ ʻಡಿ-ಕಮ್ಯುನಿಟಿʼ ಫೇಸ್‌ಬುಕ್‌ ಪೇಜ್‌ನ ಅಡ್ಮಿನ್ ಸಹ ಆಗಿದ್ದ. ಆರೋಪಿಗಳ ಬಂಧಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಗಳ ಮೊಬೈಲ್ ವಶಕ್ಕೆ ಪಡೆದು ಫಾರೆನ್ಸಿಕ್ ಲ್ಯಾಬ್​​ಗೆ ಕಳಿಸಿದ್ದರು. ಈ ಮೂವರ ಹಿಂದೆ ಪ್ರಭಾವಿಗಳು ಇದ್ದಾರೆಂಬ ಗುಮಾನಿಯನ್ನು ಸಹ ವ್ಯಕ್ತಪಡಿಸಲಾಗಿತ್ತು. ಆದರೆ ಈಗ ಆರೋಪಿಗಳು ಜಾಮೀನು ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಆರೋಪಿ ಪವನ್ ವಕೀಲರಿಗೆ ದಂಡ

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾಗಿರುವ ಸಂದೀಪ್ ಎನ್ನುವರಿಗೆ ಈ ಮೂವರು ಬೆದರಿಕೆ ಹಾಕಿದ್ದರು ಹಾಗೂ ಸುಳ್ಳು ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಸಂದೀಪ್ ಅವರು ನ್ಯಾಯಾಲಯದಲ್ಲಿ ಹೇಳಿಕೆ ನೀಡುವಾಗ ತಮಗೆ ಬೆದರಿಕೆ ಹಾಕಿರುವ ಬಗ್ಗೆ ನ್ಯಾಯಾಧೀಶರ ಮುಂದೆ ನುಡಿದಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವರ ವಿಚಾರಣೆ ಚಾಲ್ತಿಯಲ್ಲಿದೆ. ಸುಪ್ರೀಂ ಕೋರ್ಟ್, ಒಂದು ವರ್ಷದ ಗಡುವನ್ನು ಕೆಳಹಂತದ ನ್ಯಾಯಾಲಯಕ್ಕೆ ನೀಡಿದ್ದು, ವರ್ಷದ ಒಳಗಾಗಿ ನಿಯಮಿತ ಸಂಖ್ಯೆಯ ಸಾಕ್ಷಿಗಳ ವಿಚಾರಣೆ ನಡೆಯದೇ ಹೋದಲ್ಲಿ ದರ್ಶನ್, ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈಗ ನ್ಯಾಯಾಲಯವು ತ್ವರಿತವಾಗಿ ಸಾಕ್ಷಿಗಳ ವಿಚಾರಣೆಯನ್ನು ನಡೆಸುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

20 ವರ್ಷಗಳ ಕಾಯುವಿಕೆಗೆ ಅಂತ್ಯ: ಚಿನ್ನದ ಪದಕಕ್ಕೆ ಮುತ್ತಿಟ್ಟ ಶರ್ಮಿಳಾ ಧಂಕರ್ – Kannada News | Sharmila Dhankar Scripts History With India’s First Ever CWG Para Athletics Gold

ಭಾರತದ ಹೆಮ್ಮೆಯ ಪ್ಯಾರಾ ಅಥ್ಲೀಟ್ ಶರ್ಮಿಳಾ ಧಂಕರ್ ಅವರು ಸ್ಕಾಟ್‌ಲ್ಯಾಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿ ಹೊಸ ಇತಿಹಾಸ ಬರೆದಿದ್ದಾರೆ. ಮಹಿಳೆಯರ ಶಾಟ್‌ಪುಟ್ ಎಫ್‌57 ವಿಭಾಗದಲ್ಲಿ ಅಪ್ರತಿಮ ಪ್ರದರ್ಶನ ನೀಡಿದ 40 ವರ್ಷದ ಶರ್ಮಿಳಾ, ಭಾರತದ ಪರ ಕಾಮನ್‌ವೆಲ್ತ್ ಇತಿಹಾಸದಲ್ಲೇ ಮೊದಲ ಪ್ಯಾರಾ ಅಥ್ಲೆಟಿಕ್ಸ್ ಚಿನ್ನದ ಪದಕ ಗೆದ್ದ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

ಸೋಮವಾರ ರಾತ್ರಿ ನಡೆದ ರೋಮಾಂಚಕ ಫೈನಲ್ ಪಂದ್ಯದಲ್ಲಿ ಶರ್ಮಿಳಾ  9.81 ಮೀಟರ್ ದೂರಕ್ಕೆ ಗುಂಡು ಎಸೆಯುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡರು. ಈ ಅಗ್ರಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಕೊರೊಳೊಡ್ಡಿದ್ದಾರೆ.

ಡಬಲ್ ಧಮಾಕಾ:

ಇದೇ ಸ್ಪರ್ಧೆಯಲ್ಲಿ ಕನ್ನಡತಿ ಕೆ. ಶಿಲ್ಪಾ ಕಂಚಿನ ಪದಕಕ್ಕೆ ಭಾಜನರಾಗಿದ್ದಾರೆ. ಅಂದರೆ ಒಂದೆಡೆ ಶರ್ಮಿಳಾ ಧಂಕರ್ ಚಿನ್ನದ ಪದಕವನ್ನು ಗೆದ್ದರೆ, ಮತ್ತೊಂದೆಡೆ ಶಿಲ್ಪಾ 7.26 ಮೀಟರ್ ದೂರ ಎಸೆದು ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.

ಪಂದ್ಯದ ನಂತರ ನಡೆದ ತಾಂತ್ರಿಕ ಪರಿಶೀಲನೆಯಲ್ಲಿ ನೈಜೀರಿಯಾದ ಯುಚೇರಿಯಾ ಐಯಾಜಿ ಅವರ ಎಸೆತ ಅಸಿಂಧುಗೊಂಡ ಕಾರಣ, ನಾಲ್ಕನೇ ಸ್ಥಾನದಲ್ಲಿದ್ದ ಶಿಲ್ಪಾ ಅವರಿಗೆ ಕಂಚಿನ ಪದಕ ಒಲಿಯಿತು. ಇದರಿಂದಾಗಿ ಶಾಟ್​ ಪುಟ್​ ಪೋಡಿಯಂನಲ್ಲಿ ಇಬ್ಬರು ಭಾರತೀಯರು ಒಟ್ಟಿಗೆ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದರು.

20 ವರ್ಷಗಳ ಕಾಯುವಿಕೆಗೆ ಅಂತ್ಯ:

ಕಾಮನ್‌ವೆಲ್ತ್ ಗೇಮ್ಸ್ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತ ಪದಕ ಗೆದ್ದು ಬರೋಬ್ಬರಿ 20 ವರ್ಷಗಳೇ ಕಳೆದಿವೆ. ಕೊನೆಯದಾಗಿ 2006 ರಲ್ಲಿ ರಂಜಿತ್ ಕುಮಾರ್ ಜಯಶೀಲನ್ (ಡಿಸ್ಕಸ್ ಥ್ರೋ) ಕಂಚು ಗೆದ್ದಿದ್ದರು. ಈಗ ಶರ್ಮಿಳಾ ಆ ಬರವನ್ನು ನೀಗಿಸಿರುವುದಲ್ಲದೆ, ನೇರವಾಗಿ ಚಿನ್ನದ ಪದಕಕ್ಕೇ ಮುತ್ತಿಕ್ಕಿ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಅಂಗವೈಕಲ್ಯ ಮೆಟ್ಟಿ ನಿಂತ ಸಾಧಕಿ!

ಎಫ್‌57 (F57) ವಿಭಾಗವು ಕಾಲುಗಳ ದೌರ್ಬಲ್ಯ ಅಥವಾ ಮಾಂಸಖಂಡಗಳ ಶಕ್ತಿ ಕಡಿಮೆ ಇರುವ ಕ್ರೀಡಾಪಟುಗಳಿಗಾಗಿ ಮೀಸಲಾಗಿದೆ. ತಮಗೆ ಕೇವಲ ಎರಡು ವರ್ಷ ವಯಸ್ಸಾಗಿದ್ದಾಗ ಪೋಲಿಯೋ ಪೀಡಿತರಾಗಿ ಎಡಗಾಲಿನ ಸ್ವಾಧೀನ ಕಳೆದುಕೊಂಡ ಶರ್ಮಿಳಾ ಅವರ ಕ್ರೀಡಾ ಪಯಣ ಸುಲಭದ್ದಾಗಿರಲಿಲ್ಲ. ಆರ್ಥಿಕ ಸಂಕಷ್ಟ ಮತ್ತು ಕಠಿಣ ಸವಾಲುಗಳ ನಡುವೆಯೂ ಛಲ ಬಿಡದ ಅವರು, ಜಾಗತಿಕ ವೇದಿಕೆಯಲ್ಲಿ ಇಂದು ಭಾರತದ ಧ್ವಜವನ್ನು ಎತ್ತಿ ಹಿಡಿದಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ಕಾಡಿದ ‘ಕ್ಯಾಚ್’ ಕಂಟಕ!

8ನೇ ಸ್ಥಾನದಲ್ಲಿ ಭಾರತ:

ಶರ್ಮಿಳಾ ಅವರ ಈ ಐತಿಹಾಸಿಕ ಚಿನ್ನದ ಪದಕದ ನೆರವಿನಿಂದ ಭಾರತವು ಗ್ಲ್ಯಾಸ್ಗೋ ಕ್ರೀಡಾಕೂಟದ 5ನೇ ದಿನದ ಮುಕ್ತಾಯಕ್ಕೆ ಒಟ್ಟು 10 ಪದಕಗಳನ್ನು (2 ಚಿನ್ನ, 5 ಬೆಳ್ಳಿ, 3 ಕಂಚು) ತನ್ನದಾಗಿಸಿಕೊಂಡು, ಒಟ್ಟಾರೆ ಪದಕಗಳ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಅಲಂಕರಿಸಿದೆ.

ಭಾರತ ಗೆದ್ದಿರುವ ಪದಕಗಳ ಪಟ್ಟಿ ಇಲ್ಲಿದೆ (5ನೇ ದಿನದವರೆಗೆ):

ಕ್ರಮ ಸಂಖ್ಯೆ ಕ್ರೀಡಾಪಟುವಿನ ಹೆಸರು ಕ್ರೀಡೆ / ವಿಭಾಗ ಪದಕ
1 ಮೀರಾಬಾಯಿ ಚಾನು ಮಹಿಳೆಯರ 48 ಕೆಜಿ ವೇಟ್‌ಲಿಫ್ಟಿಂಗ್ 🥇 ಚಿನ್ನ
2 ಶರ್ಮಿಳಾ ಧಂಕರ್ ಮಹಿಳೆಯರ ಶಾಟ್‌ಪುಟ್ F57 ಪ್ಯಾರಾ ಅಥ್ಲೆಟಿಕ್ಸ್ 🥇 ಚಿನ್ನ
3 ರಿಷಿಕಾಂತ ಸಿಂಗ್  ಪುರುಷರ 60 ಕೆಜಿ ವೇಟ್‌ಲಿಫ್ಟಿಂಗ್ 🥈 ಬೆಳ್ಳಿ
4 ಮುತ್ತುಪಾಂಡಿ ರಾಜ ಪುರುಷರ 65 ಕೆಜಿ ವೇಟ್‌ಲಿಫ್ಟಿಂಗ್ 🥈 ಬೆಳ್ಳಿ
5 ಜ್ಞಾನೇಶ್ವರಿ ಯಾದವ್ ಮಹಿಳೆಯರ 53 ಕೆಜಿ ವೇಟ್‌ಲಿಫ್ಟಿಂಗ್ 🥈 ಬೆಳ್ಳಿ
6 ವಲ್ಲೂರಿ ಅಜಯ್ ಬಾಬು ಪುರುಷರ 79 ಕೆಜಿ ವೇಟ್‌ಲಿಫ್ಟಿಂಗ್ 🥈 ಬೆಳ್ಳಿ
7 ಸರ್ವೇಶ್ ಕುಶಾರೆ ಪುರುಷರ ಹೈಜಂಪ್ (ಅಥ್ಲೆಟಿಕ್ಸ್) 🥈 ಬೆಳ್ಳಿ
8 ಝಂಡು ಕುಮಾರ್ ಪುರುಷರ ಹೆವಿವೈಟ್ ಪ್ಯಾರಾ ಪವರ್‌ಲಿಫ್ಟಿಂಗ್ 🥉 ಕಂಚು
9 ಬಿಂದ್ಯಾರಾಣಿ ದೇವಿ ಮಹಿಳೆಯರ 58 ಕೆಜಿ ವೇಟ್‌ಲಿಫ್ಟಿಂಗ್ 🥉 ಕಂಚು
10 ಶಿಲ್ಪಾ ಕೆ. ಶೈಲಾ ಮಹಿಳೆಯರ ಶಾಟ್‌ಪುಟ್ F57 ಪ್ಯಾರಾ ಅಥ್ಲೆಟಿಕ್ಸ್ 🥉 ಕಂಚು

Published On – 12:53 pm, Tue, 28 July 26

Source link

ಐಷಾರಾಮಿ ಕಾರುಗಳ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂ. ವಂಚನೆ: ನಾಲ್ವರು ಆರೋಪಿಗಳ ಬಂಧನ! – Kannada News | Bengaluru: Adugodi Police Arrest 4 for Luxury Car Loan Fraud, Rs 1.74 Cr Cars Seized

ಆರೋಪಿಗಳೊಂದಿಗೆ ಆಡುಗೋಡಿ ಪೊಲೀಸರು

ಬೆಂಗಳೂರು, ಜುಲೈ 28: ಐಷಾರಾಮಿ ಕಾರುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರಣಿ ವಂಚನೆ ಎಸಗುತ್ತಿದ್ದ ಭಾರಿ ಜಾಲವನ್ನು ಆಡುಗೋಡಿ ಠಾಣೆ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಖತರ್ನಾಕ್ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 1.74 ಕೋಟಿ ರೂಪಾಯಿ ಮೌಲ್ಯದ 7 ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಭಾಕರ್, ಪ್ರಶಾಂತ್, ವೇಣುಗೌಡ ಹಾಗೂ ಭಾಗೇಶ್ ಬಂಧಿತ ಆರೋಪಿಗಳು. ಇವರಿಂದ 2 ಫಾರ್ಚೂನರ್, 1 ವೋಲ್ವೋ, 1 ಇನ್ನೋವಾ, ಫೋರ್ಡ್ ಹಾಗೂ ಸ್ವಿಫ್ಟ್ ಸೇರಿದಂತೆ ಒಟ್ಟು 7 ಕಾರುಗಳನ್ನು ಜಪ್ತಿ ಮಾಡಲಾಗಿದೆ.

ವಂಚನೆಯ ಜಾಲ ಹೇಗಿತ್ತು?

ಬಂಧಿತ ಆರೋಪಿಗಳು ಕಾರು ಬ್ರೋಕರ್ ಕೆಲಸದ ನೆಪದಲ್ಲಿ ವಂಚನೆಗೆ ಇಳಿಯುತ್ತಿದ್ದರು. 40 ರಿಂದ 50 ಲಕ್ಷ ರೂಪಾಯಿ ಮೌಲ್ಯದ ಕಾರುಗಳನ್ನು ಅಡವಿಟ್ಟು 4-5 ಲಕ್ಷ ರೂಪಾಯಿ ಸಾಲ ಪಡೆಯುವ ಆಟೋಮೊಬೈಲ್ ಮಾಲೀಕರನ್ನು ಈ ಜಾಲ ಟಾರ್ಗೆಟ್ ಮಾಡುತ್ತಿತ್ತು. ಮಾಲೀಕರು ಕಾರು ಅಡಮಾನವಿಟ್ಟ ತಕ್ಷಣ, ಆ ಕಾರುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು ಅಥವಾ ಒರಿಜಿನಲ್ ಆರ್‌ಸಿ (RC) ಕಾರ್ಡ್ ಟ್ಯಾಂಪರ್ ಮಾಡಿ ಹೆಸರು ಬದಲಾಯಿಸುತ್ತಿದ್ದರು.

ಬಳಿಕ, ಹೆಸರು ಬದಲಾಯಿಸಿದ ನಕಲಿ ದಾಖಲೆಗಳೊಂದಿಗೆ ಮತ್ತೊಬ್ಬ ಡೀಲರ್ ಬಳಿ ಹೋಗಿ, 4-5 ಲಕ್ಷಕ್ಕೆ ಅಡಮಾನವಿದ್ದ ಕಾರನ್ನು 20 ರಿಂದ 25 ಲಕ್ಷ ರೂಪಾಯಿಗೆ ಮತ್ತೆ ಅಡ ಇಡುತ್ತಿದ್ದರು. ಬಂದ ಹಣದಲ್ಲಿ ಮೂಲ ಮಾಲೀಕರಿಗೆ 4-5 ಲಕ್ಷ ನೀಡಿ ಕಾರು ಬಿಡಿಸಿಕೊಂಡು, ಅದನ್ನು ಮತ್ತೆ ಬೇರೊಬ್ಬರಿಗೆ ಅಡಮಾನವಿಡುತ್ತಿದ್ದರು. ಹೀಗೆ ಸರಣಿಯಾಗಿ ಹಲವರಿಗೆ ಅಡಮಾನವಿಟ್ಟು ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದರು.

ಪೊಲೀಸರಿಗೆ ಸವಾಲಾದ ‘ಮೂಲ ಮಾಲೀಕರು’

ಆರೋಪಿಗಳು ಸೃಷ್ಟಿಸಿದ್ದ ನಕಲಿ ದಾಖಲೆಗಳು ಮತ್ತು ಸರಣಿ ಅಡಮಾನ ಪ್ರಕ್ರಿಯೆಯಿಂದಾಗಿ, ಜಪ್ತಿಯಾಗಿರುವ ಕಾರುಗಳ ನಿಜವಾದ ಮೂಲ ಮಾಲೀಕರು ಯಾರು ಎಂಬುದನ್ನು ಪತ್ತೆಹಚ್ಚುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ತಮ್ಮ ಕಾರನ್ನು ಪಡೆದು ವಾಪಸ್ ನೀಡದೆ ವಂಚಿಸಲಾಗಿದೆ ಎಂದು ಸಾರ್ವಜನಿಕರು ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಆಡುಗೋಡಿ ಪೊಲೀಸರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಸದ್ಯ ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ, ತನಿಖೆ CIDಗೆ ವರ್ಗಾವಣೆ ಮಾಡಿ ಆದೇಶ – Kannada News | KPSC Veterinary Recruitment Scam: Karnataka Government Transfers Probe to CID

ಬೆಂಗಳೂರು, ಜುಲೈ 28: ಕೆಪಿಎಸ್ಸಿ ಪಶುವೈದ್ಯರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಈಗ ಸಿಐಡಿ ವಹಿಸಿಕೊಂಡಿದೆ. ಪಶುವೈದ್ಯರ ನೇಮಕಾತಿಯಲ್ಲಿ ಸುಮಾರು 60% ಹುದ್ದೆಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಶಂಕೆ ವ್ಯಕ್ತವಾಗಿದೆ. ಅಲ್ಲದೆ, ಪ್ರತಿ ಹುದ್ದೆಗೆ 80 ಲಕ್ಷ ರೂಪಾಯಿ ಲಂಚ ನಿಗದಿಯಾಗಿತ್ತು ಎನ್ನುವ ಆರೋಪದ ಆಡಿಯೋ ಸಹ ವೈರಲ್ ಆಗಿತ್ತು. ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಈ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದ್ದರು.

ಈ ಅಕ್ರಮ ನೇಮಕಾತಿ ಸಂಬಂಧ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಇವುಗಳಲ್ಲಿ ಒಂದು ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದರೆ, ಉಳಿದ ಎರಡು ಪ್ರಕರಣಗಳನ್ನು ಹೆಚ್ಚಿನ ಮತ್ತು ಸಮಗ್ರ ತನಿಖೆಗಾಗಿ ಸಿಐಡಿಗೆ ಹಸ್ತಾಂತರಿಸಲಾಗಿದೆ. ಡಿಜಿಐಜಿಪಿ ಆದೇಶದಂತೆ ಈ ವರ್ಗಾವಣೆ ನಡೆದಿದ್ದು, ಸಿಐಡಿ ತಂಡವು ಮುಂದಿನ ತನಿಖೆಯನ್ನು ನಡೆಸಲಿದೆ. ಈ ಪ್ರಕರಣವು ರಾಜ್ಯದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರದ ಆರೋಪಗಳಿಗೆ ಎಡೆಮಾಡಿಕೊಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version